ಭಾನುವಾರ, ಆಗಸ್ಟ್ 9, 2015

`ಅನಿಕೇತನ’ ಎಂಬ ಇ-ಮ್ಯಾಗಜಿನ್ : ಬರಹಗಾರರಲ್ಲಿ ಒಂದು ಮನವಿ



ಪ್ರಿಯ ಬರೆಹಗಾರ ಬಂಧುಗಳೇ,
ಎಲ್ಲೆಡೆ ಪ್ರಚಾರದಲ್ಲಿರುವಂತೆ ಇಂದಿನದು ’ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ’ದ ಯುಗ. ಆದರೆ ಈ ಯುಗದಲ್ಲಿ ಮಾಹಿತಿಯ ಭಾರ ಮತ್ತು ಸಂವಹನದ ವೇಗ, ಒತ್ತಡ-ಹೇರಿಕೆ, ಕುತಂತ್ರಗಳ ನಡುವೆ ನೈಜವಾದ ಸಂಗತಿಗಳು ಮರೆಗೆ ಸರಿಯುತ್ತವೆ. ಸುಳ್ಳು ಸಂಗತಿಗಳೇ ಠೇಂಕಾರದಿಂದ ಮೆರೆದು ಅಬ್ಬರದ ಸಂವಹನವು ಪೂರೈಕೆ ಮಾಡುವ ಮಾಹಿತಿ ಎಷ್ಟು ಸಾಚಾ ಎಂಬುದನ್ನು ಪರಿಶೀಲಿಸದೆಯೇ ನಂಬುವ ಕಾಲ ಇಂದಿನದು. ಸಮಾಜದಲ್ಲಿ ಚರ್ಚೆಯಾಗಲೇಬೇಕಾದ ಹತ್ತಾರು ನೂರಾರು ಸಂಗತಿಗಳು ಚರ್ಚೆಯಾಗದೆಯೇ ಜನರ ಅರಿವಿನಿಂದ ದೂರ ಸರಿಯುತ್ತವೆ.

ಇಂತಹ ಸನ್ನಿವೇಶದಲ್ಲಿ ಮಾಹಿತಿಯೇ ಇಲ್ಲದೆ ಜನರು ಮುಕ್ತ ಮನಸ್ಸಿನಿಂದ ಇರುವಂತೆಯೂ ಇಲ್ಲ. ಸುಳ್ಳು ಮಾಹಿತಿಗಳನ್ನೇ ನಿಜವೆಂದು ನಂಬಿ ಮೊಂಡುವಾದ ಮಾಡುವುದಿದೆ ಮತ್ತು ಕೇವಲ ಮಾಹಿತಿಯೇ ಅರಿವಿಂತೆ ಇಲ್ಲಿ ಫೋಜುಕೊಡುತ್ತದೆ. ಅದರಲ್ಲಿಯೂ ಅಭಿವೃದ್ಧಿ ಮತ್ತು ರಾಜಕೀಯ ಪಕ್ಷಗಳ ಸಾಧನೆ ಕುರಿತ ಚರ್ಚೆ ಕೇವಲ ಅಂಕಿಅಂಶಗಳ ಮಾಂತ್ರಿಕ ಆಟವಾಗಿರುತ್ತದೆ. ವಾಸ್ತವದಲ್ಲಿ ನಿಜವಾಗಿಯೂ ಯಾವುದೇ ಅಭಿವೃದ್ಧಿ ಯೋಜನೆಗಳ ಅಗತ್ಯವೇನು? ಯೋಜನೆಗಳ ಲಾಭ ನೈಜ ಪಲಾನುಭವಿಗಳಿಗೆ ಮುಟ್ಟಿರುತ್ತದೆಯೇ? ಇಂತಹ ಅಭಿವೃದ್ಧಿ ಯೋಜನೆಗಳ ಹೆಸರಿಲ್ಲಿ ರಾಜಕೀಯ ಪಕ್ಷಗಳು ಜನರಿಗೆ ವಂಚಿಸಿದ್ದೆಷ್ಟು? ಇತ್ಯಾದಿ ಚರ್ಚೆಗಳು ನಮ್ಮಲ್ಲಿ ನಡೆಯುವುದು ಕಡಿಮೆ.

ಹಾಗೆಯೇ ಆಡಳಿತ, ಕೋಮುವಾದ, ಜಾಗತೀಕರಣದ ಪರಿಣಾಮಗಳು, ಕೃಷಿ ಸಮಸ್ಯೆ, ಶಿಕ್ಷಣ ಸಮಸ್ಯೆಗಳು; ದಲಿತ, ಮಹಿಳೆ, ಕಾರ್ಮಿಕ, ರೈತಾಪಿ ಇತ್ಯಾದಿ ಸಮುದಾಯಗಳ ಸಮಸ್ಯೆಗಳು ಕೂಡ ಹೆಚ್ಚು ಚರ್ಚೆಯಾಗುವುದಿಲ್ಲ. ಕನ್ನಡದ ದಿನಪತ್ರಿಕೆಗಳೂ ಕೂಡ ಎಷ್ಟೋ ಸಂಗತಿಗಳನ್ನು ಪ್ರಚಾರಕ್ಕೆ ತರದೆ ಮರೆಮಾಚುತಿವೆ. ಅವುಗಳಿಗೆ ಎಷ್ಟೋ ಸಂಗತಿಗಳು ತಮ್ಮ ಆದ್ಯತೆಯ ವಿಚಾರಗಳೇ ಆಗಿರುವುದಿಲ್ಲ. ಇದರಿಂದ ಸಮಾಜವನ್ನು ಸಂವೇದನಾಶೀಲಗೊಳಿಸುವ ಕೆಲಸ ಹಿಂದೆ ಬೀಳುತ್ತದೆ.

ಹಾಗಾಗಿ ಇಂತಹ ಸಂದರ್ಭದಲ್ಲಿ ಸಮಾಜವನ್ನು ಹೆಚ್ಚು ಸಂವೇದನಾಶೀಲಗೊಳಿಸುವ ಕೆಲಸ ಮಾಡಬೇಕಾದುದು ಪ್ರಜ್ಞಾವಂತ ನಾಗರಿಕ ಸಮಾಜದ್ದೇ ಆಗಿರುತ್ತದೆ. ಅದು ತನ್ನ ಹೊಣೆಗಾರಿಕೆಯನ್ನು ನಿಭಾಯಿಸಬೇಕಿರುತ್ತದೆ. ಇಲ್ಲವಾದರೆ ಸಂವೇದನಾ ಶೂನ್ಯತೆ ಪ್ರಜಾಪ್ರಭುತ್ವವನ್ನು ಬಲಿ ತೆಗೆದುಕೊಳ್ಳುತ್ತದೆ. ಅದರ ಚಹರೆಗಳು ಈಗಾಗಲೇ ದಟ್ಟವಾಗಿ ನಮ್ಮ ದೇಶದಲ್ಲಿ ಕಾಣಿಸಿಕೊಂಡಿವೆ. ಅಂತಾರಾಷ್ಟ್ರೀಯ ವ್ಯಾಪಾರ ಬಿರುಸಾಗಿ ನಡೆದು ಸರಕು ಸಂಸ್ಕೃತಿ ವ್ಯಾಪಕವಾಗಿರುವ ಸಂದರ್ಭದಲ್ಲಿ ಸಾಮಾಜಿಕ ಸಂವೇದನಾಶೀಲತೆಗಿಂತ ಅನುಭೋಗಿ ಐಷಾರಾಮದ ಜೀವನದ ಕಡೆಗೆ ಸಮಾಜದ ತುಡಿತ ಇರುವುದು ಕಾಣುತ್ತದೆ. ಇದು ಸಾಮಾಜಿಕ ವಿಮುಖತೆಯನ್ನು ಸ್ವಾರ್ಥವನ್ನು ಜನರಲ್ಲಿ ಬೆಳೆಸುತ್ತದೆ. ಇಂತಹ ವಿಮುಖತೆಯಿಂದ ಜನರನ್ನು ಹೊರಗೆ ತರುವ ಕೆಲಸವಾಗಬೇಕಿರುವುದು ಇಂದಿನ ತುರ‍್ತಾಗಿದೆ. ಧಾರ್ಮಿಕ ಮೌಢ್ಯ ಸಮಾಜವನ್ನು ಬಲಿತೆಗೆದುಕೊಳ್ಳುವಂತೆ, ಸಂವೇದನಾಶೂನ್ಯತೆ ಮತ್ತು ಸಾಮಾಜಿಕ ವಿಮುಖತೆಯೂ ಪ್ರಜಾಪ್ರಭುತ್ವವನ್ನು ಬಲಿತೆಗೆದುಕೊಳ್ಳಬಹುದು.


ಇದನ್ನು ಅರಿತ ಕೆಲವು ಸಮಾನ ಮನಸ್ಕ ಗೆಳೆಯರ ಗುಂಪು ’ಅನಿಕೇತನ’ ಎಂಬ ಇ-ಮ್ಯಾಗಜಿನ್(ವೆಬ್ ಪೋರ್ಟಲ್) ಅನ್ನು ಆರಂಭಿಸಲು ಮುಂದಾಗಿದೆ. ಯಾಕೆಂದರೆ ಇಂದು ಕಂಪ್ಯೂಟರ್ ಮತ್ತೂ ಮೊಬೈಲ್ ಫೋನುಗಳ ಬಳಕೆದಾರರು ಹೆಚ್ಚಾಗಿದ್ದಾರೆ. ಇದು ಒಂದು ವರ್ಗವಾಗಿ ಮಾರುಕಟ್ಟೆ ಮತ್ತು ಪ್ರಜಾಪ್ರಭುತ್ವದಲ್ಲಿ ಸಾಮಾಜಿಕ ಅಭಿಪ್ರಾಯವನ್ನು ರೂಪಿಸುವಲ್ಲಿ ಪ್ರತಿನಿಧಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಅವರು ತಮ್ಮ ಅಭಿಪ್ರಾಯ ರೂಪಣೆಗೆ ಹೊಸ ಮಾಧ್ಯಮಗಳನ್ನು ಮುಖ್ಯ ಸಾಧನಗಳನ್ನಾಗಿ ಬಳಸುತ್ತಿದ್ದಾರೆ. ಇಂತಹ ಜನರಿಗೆ ಸೂಕ್ತ ಅರಿವನ್ನು, ವಿಚಾರವನ್ನು, ಮಾಹಿತಿಯನ್ನು ನೀಡುವ ಮೂಲಕ ಸಂವೇದನಾಶೀಲರನ್ನಾಗಿ ಮಾಡಬೇಕಾದ ಅಗತ್ಯವಿದೆ. ಬದಲಾದ ಕಾಲಘಟ್ಟದಲ್ಲಿ ಬದಲಾವಣೆಯ ನಾಡಿಮಿಡಿತವನ್ನು ತಿಳಿಸಬೇಕಾಗಿದೆ. ಹಾಗಾಗಿ ಇಂತಹ ಅಗತ್ಯವನ್ನು ಅರಿತು ’ಅನಿಕೇತನ’ ಎಂಬ ವೆಬ್ ಪೋರ್ಟಲ್ ಅನ್ನು ಆರಂಭಿಸಲು ಉದ್ದೇಶಿಸಲಾಗಿದೆ.

ಮುಖ್ಯವಾಗಿ ಇದು ಲಾಭರಹಿತವಾದ ಉದ್ದೇಶವುಳ್ಳ ಒಂದು ಪ್ರಯತ್ನ. ಆಸಕ್ತ ಮತ್ತು ಸಂಬಂಧಪಟ್ಟ ವಿಷಯ ತಜ್ಞರಿಂದ ಲೇಖನಗಳನ್ನು ಬರೆಸಿ ನಿಯಮಿತವಾಗಿ ಪ್ರಕಟಿಸುವುದು ಇದರ ಉದ್ದೇಶ. ರಾಜಕೀಯ, ಆಡಳಿತ, ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ, ನಾಟಕ, ಆರೋಗ್ಯ, ಶಿಕ್ಷಣ, ಆರ್ಥಿಕತೆ, ಸಾಮಾಜಿಕ ಚಳವಳಿಗಳು, ಪರಿಸರ, ಕೃಷಿ, ಚಲನಚಿತ್ರ, ಕ್ರೀಡೆ, ವಿಜ್ಞಾನ, ಅಧ್ಯಾತ್ಮ, ಜಾನಪದ, ಇತಿಹಾಸ, ವ್ಯಂಗ್ಯಚಿತ್ರ, ಪೋಟೋಗ್ರಫಿ, ಮಾಧ್ಯಮಗಳು, ಪ್ರವಾಸ ಇತ್ಯಾದಿ ವಿಷಯಗಳನ್ನು ಕೇಂದ್ರೀಕರಿಸಿ ಉತ್ತಮ ಪ್ರಜಾತಾಂತ್ರಿಕ ಸಾಮಾಜಿಕ ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಜನಪರ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಈ ಮ್ಯಾಗಜಿನ್ ಆರಂಭಿಸಲು ಉದ್ದೇಶಿಸಲಾಗಿದೆ.

ಆಸಕ್ತರು ಈ ಪ್ರಕ್ರಿಯೆಯಲ್ಲಿ ಬರೆಯುವ, ಓದುವ, ಪರಸ್ಪರ ಚರ್ಚಿಸುವ ಮೂಲಕ ತಾವೂ ಪಾಲ್ಗೊಳ್ಳಬೇಕು ಎಂಬುದು ನಮ್ಮ ಅಪೇಕ್ಷೆ. ಆ ಮೂಲಕ ಹೊಸತನದ ಹೊಸ ಮೌಲ್ಯಗಳ ಹುಡುಕಾಟದಲ್ಲಿ ತಾವೂ ಜೊತೆಗೂಡಬೇಕು. ಇಲ್ಲಿ ಬರೆಯುವ ಬರೆಹಗಾರರಿಗೆ ಯಾವುದೇ ರೀತಿಯ ಗೌರವ ಸಂಭಾವನೆ ಇರುವುದಿಲ್ಲ. ಇದು ಯಾವುದೇ ಸರ್ಕಾರದ, ಇಲ್ಲವೆ ಖಾಸಗಿ ಸ್ವಯಂ ಸೇವಾ ಸಂಸ್ಥೆಯೂ ನಡೆಸುವ ಚಟುವಟಿಕೆ ಇದಲ್ಲ. ಆಸಕ್ತ ಗೆಳೆಯರು ಸ್ವಯಂ ಪ್ರೇರಿತರಾಗಿ ನಡೆಸುವ ಒಂದು ಸಾಮೂಹಿಕ ಪ್ರಯತ್ನ. ಇಂತಹ ಸಂಘಟಿತ ಸಾಮೂಹಿಕ ಪ್ರಯತ್ನದ ಜೊತೆ ತಾವು ಕೈಜೋಡಿಸಿ ಎಂಬುದು ನಮ್ಮ ಮನವಿ. ಮುಖ್ಯವಾಗಿ ಈ ಪತ್ರದಲ್ಲಿ ನಮೂದಿಸಿರುವ ಕ್ಷೇತ್ರವಾರು ವಿಷಯಗಳಷ್ಟೇ ಅಲ್ಲದೆ ತಮ್ಮದೇ ಆಸಕ್ತಿಯ ವಿಷಯಗಳಿಗೆ ಸಂಬಂಧಿಸಿದ ವಿಶೇಷ ಬರೆಹಗಳನ್ನು ಕಳುಹಿಸಬೇಕೆಂದು ಹಾಗೂ ನಾವು ಬಯಸಿದಾಗ ಅಗತ್ಯವಿರುವ ಬರೆಹಗಳನ್ನು ನೀಡಬೇಕೆಂದು ಈ ಮೂಲಕ ತಮ್ಮಲ್ಲಿ ಕಳಕಳಿಯಿಂದ ಪ್ರೀತಿಯಿಂದ ಒತ್ತಾಯಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತೇವೆ. ಸೂಕ್ತ ಬರೆಹಗಳು ಕಾಲಕಾಲಕ್ಕೆ ಬರದೇ ಇಂತಹ ಎಷ್ಟೋ ಪ್ರಯತ್ನಗಳು ವಿಫಲಗೊಂಡಿರುವುದೂ ಇದೆ. ಇದನ್ನು ಮನಗಂಡು ಬರೆಹಗಾರರೆಲ್ಲರೂ ತಮ್ಮ ಉತ್ತಮ ಬರೆಹಗಳನ್ನು ನಮಗೆ ಕಳುಹಿಸಿಕೊಡಬೇಕೆಂದು ಕೇಳಿಕೊಳ್ಳುತ್ತೇವೆ. 

ಧನ್ಯವಾದಗಳೊಂದಿಗೆ. 

ನಿಮ್ಮ ನಂಬುಗೆಯ
ರಂಗನಾಥ ಕಂಟನಕುಂಟೆ
ಸಂಪಾದಕ ಮಂಡಳಿಯ ಪರವಾಗಿ 
ಸೆಲ್ : 9591001646

ಕಾಮೆಂಟ್‌ಗಳಿಲ್ಲ: