ಸೋಮವಾರ, ಆಗಸ್ಟ್ 3, 2015

ಆತ್ಮಹತ್ಯೆ ತಪ್ಪಿಸಿದ ವಲಸೆ

ಈಚೆಗೆ ಬೆಂಗಳೂರಿನಿಂದ ಬರುವಾಗ ಕಲಬುರ್ಗಿ ಕಡೆ ಹೋಗುವ ಬಸ್ಸಿನ ತುಂಬ ರಾಯಚೂರು, ದೇವದುರ್ಗ ಭಾಗದ ರೈತರು ಕುಳಿತಿದ್ದರು. ಬಸ್ಸಿನಲ್ಲಿ ಸೀರೆಯ ಜೋಕಾಲಿ ಕಟ್ಟಿ ಕಂದಮ್ಮಗಳನ್ನು ಮಲಗಿಸಿದ್ದರು. ನೀರಿನ ಕೊಡ, ಚಾಪೆ ಮೊದಲಾದ ದಿನಬಳಕೆಯ ಸಾಮಾನುಗಳನ್ನು ಬಸ್ಸಿನೊಳಗೆ ಜಾಗ ಸಿಕ್ಕಲ್ಲೆಲ್ಲ ಒತ್ತರಿಸಿಟ್ಟರು. ಹೀಗೆ ನೋಡು ನೋಡುತ್ತಲೇ ಬಸ್ಸಿನೊಳಗೊಂದು ಉತ್ತರ ಕರ್ನಾಟಕ ಸೃಷ್ಟಿಯಾದಂತೆನಿಸಿತು. ಈ ಬಸ್ಸು ಚಲಿಸುತ್ತಿದ್ದರೆ ಬೆಂಗಳೂರಿನೊಳಗೊಂದು ಪುಟ್ಟ ಪುಟ್ಟ ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕ ಚಲಿಸಿದಂತಹ ಅನುಭವವಾಯಿತು.  ಹಾಗೆನೋಡಿದರೆ ಕಲಬುರ್ಗಿ, ಬೀದರ್, ಸಿಂಧನೂರು, ವಿಜಯಪುರ, ಗದಗ, ಬಾಗಲಕೋಟೆ ಕಡೆಗಳಿಗೆ ಬರುವ ಎಲ್ಲಾ ಸರ್ಕಾರಿ ಬಸ್ಸುಗಳು ಹೀಗೆ ಉತ್ತರ ಕರ್ನಾಟಕದ ಚಹರೆಯನ್ನು ಪಡೆದುಕೊಳ್ಳುತ್ತವೆ. ಈ ಬಸ್ಸುಗಳು ವಲಸಿಗರಿಂದಲೇ ತುಂಬುತ್ತವೆ. ವಲಸೆ ನಿಂತರೆ ಈ ಭಾಗಕ್ಕೆ ಬರುವ ಬಸ್ಸುಗಳೆಲ್ಲಾ ಜನರಿಲ್ಲದೆ ಸ್ಥಗಿತಗೊಂಡರೂ ಅಚ್ಚರಿಯಿಲ್ಲ.
ನನ್ನ ಜತೆಗೆ ಕುಳಿತ ಲಿಂಗಣ್ಣ ಎಂಬುವರೊಂದಿಗೆ ಮಾತನಾಡುತ್ತಾ ಅಚಾನಕ್ಕಾಗಿ ರೈತರ ಆತ್ಮಹತ್ಯೆ ವಿಷಯ ಪ್ರಸ್ತಾಪಿಸಿದೆ. ಆಗ ಲಿಂಗಣ್ಣ ‘ಅಲ್ರಿ ಸರಾ ಸಾಲ ಆದ್ರ, ಆ ಸಾಲನ ಹೊಲದಾಗ ದುಡುದು ತೀರ್ಸಾಕ ಆಗಲ್ಲ ಅಂದ್ರ ಬೇರೆ ಕಡೀಗೋಗೀ ದುಡುದು ಸಾಲ ತೀರ್ಸಾಕ್ರಿ, ಅದು ಬಿಟ್ಟು ನೇಣು ಬಿಕ್ಕಂಡ್ರ ಸಮಸ್ಯೆ ಬಗೆ ಹರಿಯಿತ್ತೇನ್ರಿ’ ಅಂದರು. ಮುಂದುವರಿದು ‘ನನ್ನ ತಗಳ್ರಿ, ಬೆಳಿ ಕೈಕೊಟ್ಟು ಐವತ್ತು ಸಾವ್ರ ಸಾಲ ಆಗಿತ್ತು. ನನ್ನ ಇಬ್ರು ಮಕ್ಕಳು ನಾನು ಸೇರಿ ಬೆಂಗಳೂರಿಗೆ ಬಂದು ಗೋಂಡಿ ಕೆಲಸ ಮಾಡಿ ಸಾಲ ತೀರಿಸಿದ್ವಿ. ಈ ವರ್ಷ ಬೀಜ ಗೊಬ್ಬರ ನೆಗದಿ ತಂದು ಬಿತ್ತೇವ್ರಿ. ಈ ಬಾರಿ ಮಳಿ ಬಂದು ಬೆಳೆ ಛೊಲೋ ಆದ್ರ ಲಾಟರಿ ರಿ, ಬೆಳೆ ಆಗಿಲ್ಲ ಅಂದ್ರ ಮತ್ತೆ ಬೆಂಗಳೂರಿಗೆ ದುಡಿಯಾಕ ಹೋಗಾದರೀ’ ಎಂದು ಹೇಳಿದರು.
ಈ ಮಾತುಗಳು ಉತ್ತರ ಕರ್ನಾಟಕದ ಅನೇಕ ರೈತರು ಆತ್ಮಹತ್ಯೆಯಿಂದ ಪಾರಾಗಿರುವ ವಾಸ್ತವವನ್ನು ತೋರುವಂತಿತ್ತು. ನಾವು ಆತ್ಮಹತ್ಯೆಗೆ ಕಾರಣ ಹುಡುಕುವ ದಾರಿಯಲ್ಲಿ ಯಾವ ಭಾಗದಲ್ಲಿ ಹೆಚ್ಚು ಆತ್ಮಹತ್ಯೆಗಳು ನಡೆದಿಲ್ಲ, ಅದು ಯಾಕಾಗಿ ಎಂದು ಹುಡುಕ ಹೊರಟರೆ ಕಾಣಬಹುದಾದ ವಾಸ್ತವವನ್ನು ಲಿಂಗಣ್ಣ ಅವರ ಮಾತುಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದವು.
ಸಾಮಾನ್ಯವಾಗಿ ಬಯಲು ಸೀಮೆಯ ರೈತರು ಸಾಲ ಮಾಡುವುದು ಬಿತ್ತುವ ಬೀಜ, ಗೊಬ್ಬರ, ಕ್ರಿಮಿನಾಶಕ ಮತ್ತು ಗಳೇವು ಬಾಡಿಗೆ, ಬಿತ್ತಾಟದ ಆಳುಗಳಿಗೆ ಕೊಡುವ ನಗದು ಕೂಲಿಗಾಗಿ. ಈ ಸಾಲವನ್ನು ಸಾಮಾನ್ಯವಾಗಿ ಕೃಷಿ ಮಾರುಕಟ್ಟೆಯ ಖಾಸಗಿ ಬೀಜ–ಗೊಬ್ಬರದ ಅಂಗಡಿಗಳಲ್ಲಿ ತರುತ್ತಾರೆ. ಇಲ್ಲಿನ ಬಡ್ಡಿಯ ಪ್ರಮಾಣ ಸಾಮಾನ್ಯವಾಗಿ ಬ್ಯಾಂಕುಗಳಿಗಿಂತ ಹೆಚ್ಚಿರುತ್ತದೆ. ಹೀಗಾಗಿ ಬೆಳೆದ ಬೆಳೆಯನ್ನು ಕಡ್ಡಾಯವಾಗಿ ಸಾಲ ತಂದ ಅಂಗಡಿಗಳಲ್ಲಿ ಮಾರಾಟ ಮಾಡಬೇಕು. ಅಲ್ಲಿ ಬೆಲೆ ಸ್ವಲ್ಪ ಕಡಿಮೆಯಾದರೂ ಮಾರುವ ಒತ್ತಡ ನಿರ್ಮಾಣವಾಗುತ್ತದೆ. ಎಷ್ಟೋ ರೈತರು ಸಾಲವನ್ನು ತೀರಿಸಿ ಪೈಸೆಯೂ ಇಲ್ಲದೆ ಮನೆಗೆ ಮರಳುವುದಿದೆ.
ಕೈಯಲ್ಲಿ ಹಣವಿರುವ ರೈತರು ಬಿತ್ತನೆ ಬೀಜ, ಗೊಬ್ಬರ, ಆಳು, ಗಳೇವು ಬಾಡಿಗೆಗೆ ನಗದು ಹಣ ನೀಡುತ್ತಾರೆ. ಆಗ ಅವರು ಬೆಳೆದ ಬೆಳೆಯನ್ನು ಕೃಷಿ ಮಾರುಕಟ್ಟೆಯ ಯಾವುದೇ ಅಂಗಡಿಯಲ್ಲಿ ಮಾರಾಟ ಮಾಡಬಹುದು. ಬೆಳೆಗೆ ಹೆಚ್ಚು ಬೆಲೆ ಬರುವತನಕ ಕಾಯ್ದಿರಿಸುವ ಸ್ವಾತಂತ್ರ್ಯವೂ ಇರುತ್ತದೆ. ಆಗ ಬೆಳೆಯ ಖರ್ಚಿನ ಭಾಗವಾದರೂ ಕೊನೆಗೆ ಒಟ್ಟಾಗಿ ರೈತರ ಕೈಸೇರುವ ಸಾಧ್ಯತೆ ಇದೆ. ವಲಸೆ ಹೋಗುವ ಉತ್ತರ ಕರ್ನಾಟಕದ ಬಹುಪಾಲು ಕೃಷಿ ಕೂಲಿಕಾರರು ಬಿತ್ತಾಟಕ್ಕೆ ಮಾಡುವ ಸಾಲದ ಪ್ರಮಾಣದಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಇದರಿಂದಾಗಿ ವಲಸೆ ಕೂಲಿಕಾರರು ಬೆಳೆ ಬಂದರೂ, ಬರದಿದ್ದರೂ ಬದುಕಿನ ಕನಿಷ್ಠ ಅಗತ್ಯಗಳನ್ನು ವಲಸೆಯಿಂದ ಪೂರೈಸಿಕೊಳ್ಳುತ್ತಾರೆ.
ಉತ್ತರ ಕರ್ನಾಟಕದ ಬಹುಪಾಲು ರೈತಕೂಲಿಗಳ ಜೀವನ ವಿಧಾನವೂ ಅವರ ವಲಸೆಗೆ ಸಹಕರಿಸುತ್ತದೆ. ಕಾರಣ ಅತ್ಯಲ್ಪ ಜೀವನಾವಶ್ಯಕಗಳಲ್ಲಿ ಬದುಕುವವರೇ ಹೆಚ್ಚು. ಬೆಂಗಳೂರು, ಮುಂಬೈ ಮುಂತಾದ ಕಡೆಗಳಲ್ಲಿ ಕಟ್ಟಡ ಕೆಲಸದಂತಹ ಶ್ರಮದಾಯಕ ಕೆಲಸಕ್ಕೆ ಹೋಗುತ್ತಾರೆ.
ಅಂತೆಯೇ ಆಯಾ ಕಟ್ಟಡದ ಬುಡದಲ್ಲಿಯೇ ಸಣ್ಣ ಟೆಂಟ್ ಹಾಕಿ ಜೀವನ ನಡೆಸುತ್ತಾರೆ. ಈ ಟೆಂಟುಗಳ ಜೀವನಕ್ಕೂ ತಮ್ಮ ಊರಿನ ಮನೆಯ ಪರಿಸರಕ್ಕೂ
ಹೆಚ್ಚು ವ್ಯತ್ಯಾಸವಿರುವುದಿಲ್ಲ. ಹಾಗಾಗಿ ತಾವಿರುವ ಕಡೆಯೇ ಉತ್ತರ ಕರ್ನಾಟಕವನ್ನೋ ಹೈದರಾಬಾದ್ ಕರ್ನಾಟಕದ ಪರಿಸರವನ್ನೋ ನಿರ್ಮಿಸುತ್ತಾರೆ. ಹಾಗಾಗಿ ನಗರದಲ್ಲಿದ್ದೂ ನಗರಿಗರಾಗದೆ ಬದುಕುತ್ತಾರೆ.
ಇದು ನಗರದಲ್ಲಿ ದುಡಿದ ಹಣವನ್ನು ಕೂಡಿಡಲು ಸಹಕಾರಿಯಾಗುತ್ತದೆ. ನಿರಂತರವಾಗಿ ಈ ಭಾಗದ ಜನರು ವಲಸೆಯಲ್ಲಿರುವ ಕಾರಣ ಇದರ ಲಯವೂ ಇವರಿಗೆ ಸಿಕ್ಕಂತಿದೆ.
ನೀರಾವರಿ ಜಮೀನಿನಲ್ಲಿ ಬೆಳೆ ಬೆಳೆಯುವ ರೈತರ ಜೀವನ ವಿಧಾನ ತೀರಾ ಕೆಳಮಟ್ಟದ್ದಾಗಿರುವುದಿಲ್ಲ. ಅದು ಮಧ್ಯಮವರ್ಗದ ಜೀವನ ವಿಧಾನಕ್ಕೆ ಸಮೀಪವಿರುತ್ತದೆ.  ಕೆಲವೊಮ್ಮೆ ಇವರ ಜೀವನ ನಿರ್ವಹಣೆಯ ಖರ್ಚು, ಹೊಲದ ಆದಾಯಕ್ಕಿಂತ ಹೆಚ್ಚಿರುತ್ತದೆ.
ಸಹಜವಾಗಿ ಹೊಲಕ್ಕೆ ಮಾಡುವ ಸಾಲದ ಪ್ರಮಾಣವೂ ಹೆಚ್ಚು. ಈ ಸಾಲದಲ್ಲಿ ಮನೆ ಖರ್ಚಿಗೆ ಬಳಸುವ ಪ್ರಮಾಣ ಕೂಡಾ ಅಧಿಕವಾಗಿರುತ್ತದೆ.
ಇವರು ಹೊಲದ ಸಾಲವನ್ನು ಅದರ ದುಡಿಮೆಯಿಂದಲೆ ಮರಳಿಸಬೇಕಾಗುತ್ತದೆ. ಹಾಗಾಗಿ ಬೆಳೆ ಬರದಿದ್ದರೆ, ಬಂದ ಬೆಳೆಗೆ ಬೆಲೆ ಸಿಗದಿದ್ದರೆ ಇದ್ದಕ್ಕಿದ್ದಂತೆ ಸಾಲದ ಪ್ರಮಾಣ ಹೆಚ್ಚುತ್ತದೆ. ಈ ಹೆಚ್ಚಳ ಆ ರೈತರನ್ನು ಆತ್ಮಹತ್ಯೆಯೆಡೆಗೆ ಒಯ್ಯುವ ಸಾಧ್ಯತೆಯೂ ಇದೆ. ಮಂಡ್ಯ, ಹಾಸನ, ಬೆಳಗಾವಿ ಭಾಗದ ರೈತರ ಆತ್ಮಹತ್ಯೆಗಳ ಹಿಂದಣ ಹಲವು ಕಾರಣಗಳಲ್ಲಿ ಇದೂ ಒಂದು.
ಉತ್ತರ ಕರ್ನಾಟಕದ ರೈತಕೂಲಿಗಳು ಹೊಲಕ್ಕೆ ಮಾಡಿದ ಸಾಲವನ್ನು ವಲಸೆಯ ದುಡಿಮೆಯಿಂದ ತೀರಿಸುವ ಮಾದರಿ ನೀರಾವರಿ ರೈತರಿಗೆ ಅನ್ವಯವಾಗುವುದಿಲ್ಲ. ವಲಸೆ ಹೋಗಿ ಹೆಚ್ಚು ಶ್ರಮದಾಯಕ ಕೆಲಸ ಮಾಡಿ ಬಯಲಲ್ಲಿ ಜೀವಿಸಲು ಇವರ ಸ್ಥಾನಮಾನ ಮತ್ತು ಜೀವನ ವಿಧಾನ ಸಹಕರಿಸುವುದಿಲ್ಲ. ಹಾಗಾಗಿ ನೀರಾವರಿ ಭಾಗದ ರೈತರು ಹೊಲದ ಸಾಲವನ್ನು ಕೃಷಿಯೇತರ ಕೆಲಸಗಳಿಂದ ತೀರಿಸುವ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ.
ಉತ್ತರ ಕರ್ನಾಟಕದ ರೈತಕೂಲಿಗಳ ವಲಸೆಯನ್ನು ತಪ್ಪಿಸಲು ಅನ್ಯ ಉತ್ಪಾದನಾ ಮಾರ್ಗಗಳು ತಮ್ಮ ಹಳ್ಳಿಗಳಲ್ಲೆ ಸಿಗುವಂತಾಗಬೇಕಿದೆ. ಇಂತಹ ಪರ್ಯಾಯ ಗಳನ್ನು ರೂಪಿಸಲು ಸರ್ಕಾರ ಕೆಲವು ದೂರದೃಷ್ಟಿಯ ಯೋಜನೆಗಳನ್ನು ರೂಪಿಸಬೇಕಿದೆ.

ಕಾಮೆಂಟ್‌ಗಳಿಲ್ಲ: