ಚಿತ್ರಕಲೆ, ಗೊಂಬೆ ತಯಾರಿಕೆ, ಪುರಾಣದ ಕತೆಗಳನ್ನು ಒಳಗೊಂಡ ತೊಗಲುಗೊಂಬೆಯಾಟ ವಿಶಿಷ್ಟ ಜಾನಪದ ಕಲೆ. ಕಲೆ ಮತ್ತು ವಿಜ್ಞಾನ ಮೇಳೈಸಿರುವ ಪ್ರಯೋಗವಿದು. ಈಗ ಈ ಕಲೆ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯದಲ್ಲಿದೆ. ಕಲೆ ಮತ್ತು ಕಲಾವಿದರಿಗೆ ಅಸ್ಮಿತೆಯ ಪ್ರಶ್ನೆ ಎದುರಾಗಿದೆ. ಈ ಕಲೆಯೊಟ್ಟಿಗೆ, ಐದು ತಲೆಮಾರುಗಳಿಂದ ತಮ್ಮ ಬದುಕನ್ನು ಬೆಸೆದುಕೊಂಡಿರುವ ಕಲಾವಿದ ಅಪ್ಪಾಜಿ ಮತ್ತು ತೊಗಲುಬೊಂಬೆ ಕಲೆಯ ವೈಶಿಷ್ಟ್ಯ ಬಿಂಬಿಸುವ ಲೇಖನ.
-----
- ಕುಮಾರ್ ಎಸ್.
ಸೌಜನ್ಯ: ವಿಜಯ ಕರ್ನಾಟಕ
ಅಪ್ಪಾಜಿ ಅವರು ನೆಲಕ್ಕೆ ಕೂತು ಎರಡು ಅಡಿ ಉದ್ದ, ಮೂರೂವರೆ ಅಡಿ ಅಗಲದ ಬಿದಿರಿನ ಪೆಟ್ಟಿಗೆ ಬಿಚ್ಚಿದರು. ಅಲ್ಲಿಯವರೆಗೆ ಇದ್ದ ವಾತಾವರಣ ಇದ್ದಕ್ಕಿದ್ದಂತೆ ಹೊಸ ಕಳೆಯನ್ನು ಪಡೆದುಕೊಂಡುಬಿಟ್ಟಿತ್ತು. ಪೆಟ್ಟಿಯೊಳಗಿನಿಂದ ಒಂದೊಂದೇ ಪಾತ್ರ ರೆಕ್ಕೆ ಬಿಚ್ಚಿ ಹಾರಿ ಹೊರಬರಲಾರಂಭಿಸಿದ್ದವು! ಮಹಾಭಾರತದ ಕರ್ಣ, ಅರ್ಜುನ, ದುರ್ಯೋಧನ, ಕೃಷ್ಣ, ದ್ರೌಪದಿ, ಭೀಮ; ರಾಮಾಯಣದ ರಾಮ, ಲಕ್ಷ್ಮಣ ಹನುಮಂತ, ಹತ್ತು ತಲೆಯ ರಾವಣ, ಸೀತೆ... ಒಬ್ಬರೇ ಇಬ್ಬರೇ..
ಕಥೆಗಳಲ್ಲಿ ಕೇಳಿದ, ದೃಶ್ಯಗಳಲ್ಲಿ ನೋಡಿದ, ನನ್ನ ಕಲ್ಪನೆಯಲ್ಲಿ ಅರಳಿದ ಪುರಾಣದ ಪಾತ್ರಗಳು ಅಪ್ಪಾಜಿಯ ಅಣತಿಯಂತೆ ಪ್ರತ್ಯಕ್ಷವಾಗುತ್ತಲೇ ಇದ್ದವು. ಅಲ್ಲಿ ಯಾರೇ ಇದ್ದರೂ ಕಣ್ಣರಳಿಸಿ ನಿಲ್ಲಲೇಬೇಕು. ಆ ಕ್ಷಣದ ಅನುಭವವೇ ಅದ್ಭುತವಾಗಿತ್ತು. ನೀಲಿ, ಹಳದಿ, ಕೆಂಪು ಬಣ್ಣಗಳಲ್ಲಿ ನಳನಳಿಸುತ್ತಿದ್ದ ಒಂದೊಂದು ಪಾತ್ರವೂ ಹಾಳೆಯಂತಿದ್ದರೂ ನಕ್ಕು ಕರೆವಷ್ಟು ಜೀವಂತಿಕೆಯಿಂದ ಕೂಡಿದ್ದವು. ನೋಡುಗನ ಕಲ್ಪನೆಯನ್ನು ಹಿಗ್ಗಿಸುವಷ್ಟು ಆಕರ್ಷಕವಾಗಿದ್ದವು.
ಆ ಪಾತ್ರಗಳನ್ನು ನೋಡುತ್ತಾ, ಬೆಂಗಳೂರಿನಿಂದ 100 ಕಿ.ಮೀ ದೂರದ 300 ಮನೆಗಳ ಪುಟ್ಟ ಗ್ರಾಮ ಬಿಳಗುಂದಕ್ಕೆ ಬಂದಿದ್ದು ಸಾರ್ಥಕ ಎನಿಸಿತು. ಆಡಂಬರದ ಬದುಕಿನ ಮಹಾನಗರಕ್ಕೆ ಹೋಲಿಸಿದರೆ ಅಪ್ಪಾಜಿ ಅವರ ಪುಟ್ಟ ಮನೆ ಬಣ ಬಣ ಅನ್ನಿಸುತ್ತದೆ. ಆದರೆ ಇಲ್ಲಿ ಪಾತ್ರಗಳು ಮಾತನಾಡಲಾರಂಭಿಸಿದರೆ ಜಗತ್ತು ಮರೆತು ಹೋಗುತ್ತದೆ. ಏಕೆಂದರೆ ಇಲ್ಲಿ ಬಿಚ್ಚಿಕೊಳ್ಳುವುದು ತೊಗಲುಗೊಂಬೆಗಳ ಅದ್ಭುತ ಲೋಕ. ನಮ್ಮ ಜನ, ನಮ್ಮ ನೆಲದ ಪರಂಪರೆ, ಬದುಕನ್ನು ಒಟ್ಟಾಗಿಸಿಕೊಂಡ ಕಲೆ ತೊಗಲು ಗೊಂಬೆಯಾಟ. ತೋಲುಬೊಮ್ಮಲಾಟ (ಆಂಧ್ರ), ತೋಲ ಪಾವೈಕೊತ್ತು (ತಮಿಳುನಾಡು), ತೋಲು ಪಾವಕೋಟ್ಟು (ಕೇರಳ), ರಾವಣಛಾಯಾ (ಒರಿಸ್ಸಾ) ಎಂಬ ಭಿನ್ನ ಹೆಸರುಗಳಿವೆ ಈ ಕಲೆಗೆ. ಕೇವಲ ಭಾರತದಲ್ಲೇ ಅಷ್ಟೇ ಅಲ್ಲ, ಆಗ್ನೇಯ ಏಷ್ಯಾ, ಚೀನಾ, ಟರ್ಕಿ, ಗ್ರೀಸ್‌ಗಳಿಗೂ ಹಬ್ಬಿ ಹೊಸ ರೂಪ ಪಡೆದುಕೊಂಡಿದೆ.
ಕಲಾಪೋಷಕ ನಂಜುಂಡರಾವ್ ಈ ಕಲೆಯ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡವರು. 'ನಮ್ಮ ಪುರಾಣಗಳಲ್ಲಿ ದುಷ್ಟತೆಯ ವಿರುದ್ಧ ಶಿಷ್ಟ ಶಕ್ತಿಗಳು ಜಯಗಳಿಸುವುದನ್ನು ನಾವು ಕಾಣುತ್ತೇವೆ. ದೇವದಾನವರು, ಮಹಿಮಾಪುರುಷರು ಮತ್ತು ಯಾವುದೇ ಪುಟ್ಟ ಪಾತ್ರಗಳು ಈ ಸಂದರ್ಭಗಳಲ್ಲಿ ತಮ್ಮ ವೈಯಕ್ತಿಕತೆಯನ್ನು ಪ್ರತಿಯೊಬ್ಬರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಸಿಕೊಳ್ಳುತ್ತೇವೆ. ಅದಕ್ಕಾಗಿಯೇ ಶಬರಿ; ಕುಚೇಲ; ರಾಮನ ಪುಟ್ಟ ಸ್ನೇಹಿತ ಅಳಿಲು ಮತ್ತು ಇನ್ನಿತರ ಪಾತ್ರಗಳು ಪರಿಕಲ್ಪನೆಗಳು ಇದರಿಂದ ಹೊರತಾಗುವುದಿಲ್ಲ. ಅದರಂತೆ ರಾವಣನಂಥ, ದುರ್ಯೋಧನನಂಥ ಮತ್ತು ಕೀಚಕನಂಥ ಪಾತ್ರಗಳು ದೌರ್ಜನ್ಯವನ್ನು ಪ್ರತಿನಿಧಿಸುವುದರ ಜೊತೆಯಲ್ಲೇ ತಮ್ಮಲ್ಲಿರುವ ಮಾನವತಾವಾದದ ಮುಖ್ಯ ಗುಣಗಳನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಪ್ರಕಟಿಸುತ್ತಾರೆ. ಈ ರೀತಿ ನಡೆನುಡಿಗಳು ನಡೆಯುವುದರಿಂದ ಜನತೆಯ ಗೌರವಾದರಗಳನ್ನು ಈ ವ್ಯಕ್ತಿಗಳು ಪಡೆಯುತ್ತಾರೆ. ತೊಗಲುಗೊಂಬೆಯಾಟದ ಬಹುತೇಕ ಕಥಾಪ್ರಸಂಗಗಳು ಈ ರೀತಿಯ ಘಟನಾವಳಿಗಳನ್ನು ಯಥೇಚ್ಛವಾಗಿ ಬಳಸಿಕೊಂಡಿರುವುದರಿಂದ ನಮ್ಮ ಜನಪದ ಸಂಸ್ಕೃತಿಗೆ ವಿಶೇಷ ಮೆರಗುಕೊಟ್ಟಿದೆ' ಎಂದು (ತೊಗಲುಗೊಂಬೆ ಆಟ ಕೃತಿಯಲ್ಲಿ) ಹೇಳಿದ್ದಕ್ಕೂ, ಕಲಾವಿದ ಅಪ್ಪಾಜಿಯವರ ಮನೆಯಲ್ಲಿ ಆಗುತ್ತಿದ್ದ ಅನುಭವಕ್ಕೂ ಯಾವುದೇ ವ್ಯತ್ಯಾಸವಿರಲಿಲ್ಲ.
ಗೊಂಬೆಯಾಟದ ಭೀಷ್ಮ ಹೊಂಬಯ್ಯ
ಅಪ್ಪಾಜಿ ಈ ಕಲೆಯನ್ನೇ ನಂಬಿ ಬದುಕುತ್ತಿರುವ ನಾಲ್ಕನೆ ತಲೆಮಾರಿನ ಕಲಾವಿದ. ಇವರ ವಂಶದಲ್ಲಿ ಮೊದಲು ತೊಗಲುಗೊಂಬೆ ಆಡಿಸಿದವರು ಹನುಮಂತಯ್ಯನವರು. ಅಪ್ಪಾಜಿಯವರ ಮುತ್ತಾತ. ಆ ಕಾಲದಲ್ಲಿ ತೊಗಲುಗೊಂಬೆಯಾಟಕ್ಕೆ ಬೇಕಾದ ಸಲಕರಣೆಗಳನ್ನು, ತಬಲಾ, ಹಾರ್ಮೋನಿಯಂ ಇತ್ಯಾದಿಗಳನ್ನು ಕತ್ತೆ, ಕುದುರೆಗಳ ಮೇಲೆ ಹೇರಿಕೊಂಡು ಊರೂರು ಅಲೆಯುತ್ತಿದ್ದರು. ರಾಮಾಯಣದ ಹೈರಾವಣ, ಮೈರಾವಣ, ಮಹಾಭಾರತದ ಬಬ್ರುವಾಹನ, ವೀರ ಅಭಿಮನ್ಯು, ಸುಧಾಮ, ಶಿವಜಲಂದ್ರ, ದೇವಿಮಹಾತ್ಮೆ, ಶನಿಮಹಾತ್ಮೆಗಳನ್ನು ಪ್ರದರ್ಶಿಸುತ್ತಿದ್ದರು.
ಈ ಪರಂಪರೆಯನ್ನು ಮುಂದುವರೆಸಿದ ಇವರ ಪುತ್ರ ಹೊಂಬಯ್ಯ, ಈ ಕಲೆಯನ್ನು ಹೆಚ್ಚು ಜನಪ್ರಿಯಗೊಳಿಸಿದವರು. ಇದೇ ಕಾರಣಕ್ಕೆ 'ತೊಗಲು ಗೊಂಬೆಯಾಟದ ಭೀಷ್ಮ' ಎಂಬ ಬಿರುದು ಇವರಿಗೆ ಸಂದಿತು. ತೊಗಲು ಗೊಂಬೆಯಾಟದ ಅಧ್ಯಯನಕ್ಕೆ ಬಂದಿದ್ದ ಅಮೆರಿಕದ ಪ್ರೊ. ಮೆಲ್ ಹೆಲಸ್ಟನ್ ಅವರ ಪ್ರಯತ್ನದಿಂದಾಗಿ 1980ರಲ್ಲಿ ಅಮೆರಿಕದಲ್ಲಿ ನಡೆದ ಜಾಗತಿಕ ಗೊಂಬೆ ಆಟದ ಮೇಳದಲ್ಲಿ ಹೊಂಬಯ್ಯ ಭಾಗವಹಿಸಿದರು. ನಂತರದ ದಿನಗಳಲ್ಲಿ ಬೋಸ್ಟನ್, ಹೂಸ್ಟನ್ ಸೇರಿದಂತೆ ಬೇರೆ ಬೇರ ಭಾಗಗಳಲ್ಲಿ ಹೊಂಬಯ್ಯ ಭಾರತದ ಕಲೆಯನ್ನು ಪ್ರದರ್ಶಿಸಿ ಬಂದರು.
ಈ ಕತೆಯನ್ನು ಹೇಳುವಾಗ ಅಪ್ಪಾಜಿ 'ಗೊಂಬೆರಾಮರು' ಎಂದು ತಮ್ಮನ್ನು ಕರೆದುಕೊಳ್ಳುತ್ತಿದ್ದರು. ಗೊಂಬೆ ಆಡಿಸುವವರಿಗೆ 'ಕಿಳ್ಳೆಕ್ಯಾತರು' ಎಂಬ ಹೆಸರಿದೆ. ಆದರೆ ಈ ಗೊಂಬೆಗಳಿಗೂ ರಾಮನಿಗೂ ಏನು ಸಂಬಂಧ ಎಂಬ ನನ್ನ ಕುತೂಹಲಕ್ಕೆ ಅವರೇ ವಿವರಣೆ ನೀಡಿದರು. ಶ್ರೀರಾಮ ಸಾಯುವ ಮುನ್ನ ತನ್ನ ಪ್ರೀತಿಯ ಭಕ್ತರಿಗೆ ಒಂದು ಚಿತ್ರಪಟ ಕೊಟ್ಟು ಇದರಿಂದ ಜೀವಿಸಿರೆಂದು ಹೇಳಿದನಂತೆ. ಅಂದಿನಿಂದ ಗುಹನ ವಂಶಕ್ಕೆ ಸೇರಿದ ಆ ಭಕ್ತರು 'ಗೊಂಬೆರಾಮ' ಆಟ ನಡೆಸುತ್ತಾ ಬಂದರಂತೆ. ಗೊಂಬೆರಾಮರು ಈಗಲೂ ತಮ್ಮ ಮೊದಲ ಮಗನಿಗೆ 'ರಾಮ' ಎಂಬ ಹೆಸರನ್ನು ಇಡುತ್ತಾರೆ ಎಂಬ ಸಂಗತಿಗಳನ್ನು ಅಪ್ಪಾಜಿ ತಿಳಿಸಿದರು. ಅಪ್ಪಾಜಿ ಇವೆಲ್ಲವನ್ನು ತಮ್ಮ ನೆನಪಿನ ಶಕ್ತಿಯಿಂದಲೇ ಹೇಳುತ್ತಿದ್ದರು. ಅವರು ಅಕ್ಷರ ಕಲಿತವರಲ್ಲ. ಆದರೆ ತಾತನಿಂದ, ತಂದೆಯಿಂದ ಬಂದ ಕಲೆಯ ಪೂರ್ವೇತೀಹಾಸವೆಲ್ಲಾ ಅವರ ಮನಸ್ಸಿನಲ್ಲೇ ಇತ್ತು. ಪೆಟ್ಟಿಗೆಯಿಂದ ಎದ್ದು ಬಂದಪಾತ್ರಗಳಂತೆ, ಅವರ ಮನದಾಳದಿಂದ ನೆನಪಿನಂತೆ ಇತಿಹಾಸ ಹೊರಬರುತ್ತಿತ್ತು.
ಅಲೆಮಾರಿ ಕಲೆ
ಈ ಕಲಾವಿದರು ಮೂಲತಃ ಅಲೆಮಾರಿಗಳು. ಒಂದೂರಿನಿಂದ ಇನ್ನೊಂದೂರಿಗೆ ಸಾಗುತ್ತಾ ತಮ್ಮ ಕಲೆಯನ್ನು ಪ್ರದರ್ಶಿಸುತ್ತಲೇ ಇರುತ್ತಾರೆ. ಇತ್ತೀಚೆಗೆ ಈ ಕಲೆಯನ್ನೇ ನಂಬಿ ಬದುಕುವುದು ಕಷ್ಟವಾಗಿ ಒಂದೆಡೆ ನೆಲೆ ಕಂಡುಕೊಂಡಿದ್ದಾರೆ. ಅಪ್ಪಾಜಿಯವರ ತಾತ ಹೊಂಬಯ್ಯ ತಮ್ಮ ಜೀವಿತಾವಧಿಯಲ್ಲಿ ಹೀಗೆ ಹತ್ತಾರು ರಾಜ್ಯಗಳನ್ನು, ನೂರಾರು ಊರುಗಳನ್ನು ಸುತ್ತಿದವರು. 'ಅವರ ಕಲೆಯನ್ನು ಗುರುತಿಸಿ ಸರಕಾರ ಅಜ್ಜನಿಗೆ ಭೂಮಿಕೊಟ್ಟಿತ್ತು. ಆದರೆ ಕೃಷಿ ಮಾಡಿ ಗೊತ್ತಿರದ, ಅದಕ್ಕೆ ಸಮಯವೂ ಇಲ್ಲದ ಕಾರಣ ಭೂಮಿ ಹಾಳು ಬಿತ್ತು. ಜನ ಅದನ್ನು ಆಕ್ರಮಿಸಿಕೊಂಡು ಬಿಟ್ಟರು. ನಾವು ತ್ಯಾಪೇನಹಳ್ಳಿಯನ್ನು ಬಿಟ್ಟು ಬಿಳಗುಂದಕ್ಕೆ ಬಂದು ನೆಲೆಸಿದವು. ಇಲ್ಲೇ ನಮ್ಮಜ್ಜ ತೀರಿಕೊಂಡರು' ಎಂದು ನೆನಪಿಸಿಕೊಂಡರು ಅಪ್ಪಾಜಿ.
ಹೊಂಬಯ್ಯನವರ ಸಾವಿನ ನಂತರ ಅವರ ಪುತ್ರ ಸಂಜೀವಯ್ಯ ತಮ್ಮ ಸೋದರರೊಂದಿಗೆ ತೊಗಲು ಗೊಂಬೆಯಾಟವನ್ನು ನಿರಂತರವಾಗಿ ನಡೆಸಿಕೊಂಡು ಬಂದರು. ವಾಸ್ತವದಲ್ಲಿ ಇದು ಕುಟುಂಬದ ಕಲೆ. ಗಂಡ, ಹೆಂಡತಿ, ಮಕ್ಕಳು, ಸೋದರರೇ ಇಲ್ಲಿ, ಸಂಗೀತಗಾರ, ಸೂತ್ರಧಾರ, ಭಾಗವತನ ಪಾತ್ರಗಳನ್ನು ನಿರ್ವಹಿಸುತ್ತಾರೆ. ಹೀಗೆ ಸಂಜೀವಯ್ಯನವರು ತಮ್ಮ ಸೋದರರೊಂದಿಗೆ ಗೊಂಬೆ ಆಟ ನಡೆಸಿಕೊಂಡು ಬರುತ್ತಿದ್ದರು. ಅಪ್ಪಾಜಿಯವರು 15ನೇ ವಯಸ್ಸಿಗೆ ತೊಗಲು ಗೊಂಬೆಯಾಟದಲ್ಲಿ ತೊಡಗಿಕೊಂಡು ತಂದೆ ಸಂಜೀವಯ್ಯನವರಿಂದಲೂ ಒಂದಿಷ್ಟು ಕಲಿತರು. 20ನೇ ವಯಸ್ಸಿಗೆ ತಂಡವನ್ನು ನೇತೃತ್ವವನ್ನೂ ವಹಿಸಿಕೊಂಡರು. ಕಳೆದೆರಡು ದಶಕಗಳಲ್ಲಿ ತಮ್ಮ ನಾಲ್ಕು ಮಂದಿ ಸೋದರರೊಂದಿಗೆ ಊರೂರುಗಳಲ್ಲಿ ಪ್ರದರ್ಶನ ನಡೆಸುತ್ತಿದ್ದಾರೆ.
ಗೊಂಬೆ ತಯಾರಿ
ಅಪ್ಪಾಜಿ ತಮ್ಮ ಪೂರ್ವಿಕರ ಬಗ್ಗೆ, ಕಲೆಯ ಬಗ್ಗೆ ಹೇಳುತ್ತಾ ಗೊಂಬೆಗಳನ್ನು ತೋರಿಸುವಾಗ, ಅದರ ಮೇಲೆ ದಿನಾಂಕಗಳನ್ನು ನಮೂದಿಸಿದ್ದನ್ನು ನೋಡಿದೆ. ಅವೆಲ್ಲವೂ 50-60ರ ದಶಕದಲ್ಲಿ ಸಿದ್ಧ ಮಾಡಿದವು. ಇಷ್ಟು ಕಾಲ ಇರುವ ಗೊಂಬೆಗಳನ್ನು ಹೇಗೆ ಸಿದ್ಧ ಮಾಡುತ್ತಾರೆ ಎಂಬುದು ನನ್ನ ಕುತೂಹಲವಾಗಿತ್ತು. ಅಪ್ಪಾಜಿ ಈ ಬಗ್ಗೆ ಮಾಹಿತಿ ಕೊಟ್ಟರು.
ಸಾಮಾನ್ಯವಾಗಿ ಜಿಂಕೆ, ಆಡು, ಕತ್ತೆ, ಎಮ್ಮೆಯ ಚರ್ಮದಿಂದ ಗೊಂಬೆಗಳನ್ನು ತಯಾರಿಸುತ್ತಾರೆ. ದೇವರ ಗೊಂಬೆಗಳನ್ನು ಜಿಂಕೆಯ ಚರ್ಮದಲ್ಲೇ ತಯಾರಿಸಬೇಕೆಂಬ ನಿಯಮವೂ ಇದೆ. ಸ್ವತಃ ಕಲಾವಿದರೆ ಗೊಂಬೆಗಳನ್ನು ತಯಾರಿಸಿಕೊಳ್ಳುತ್ತಾರೆ. ಮೊದಲು ಚರ್ಮವನ್ನು ಬಿಸಿ ನೀರಿನಲ್ಲಿ ಅದ್ದಿ ಬ್ರಷ್ ಅಥವಾ ಚಾಕುವಿನಿಂದ ಕೆರೆದು ನಯಗೊಳಿಸುತ್ತಾರೆ. ನಂತರ ಕಲ್ಲಿನ ಮೇಲೆ ಒಣಗಿಸಿ, ಉಳಿದ ಕೂದಲುಗಳನ್ನು ಕೀಳುತ್ತಾರೆ. ನಂತರ ಒಳಭಾಗದಲ್ಲಿ ಮಾಂಸದ ಅಂಶ ಉಳಿದಿದ್ದರೆ ತಣ್ಣೀರಿನಿಂದ ತೊಳೆದು ಸ್ವಚ್ಛ ಮಾಡುತ್ತಾರೆ. ಪಾರದರ್ಶಕವಾಗುವಂತೆ ಹದ ಮಾಡುತ್ತಾರೆ.
ಚರ್ಮವನ್ನು ಹದ ಮಾಡುವುದಕ್ಕೆ ಇನ್ನೊಂದು ಪದ್ಧತಿಯೂ ಇದೆಯಂತೆ. ಚರ್ಮದ ಮೇಲೆ ಬಿಸಿ ನೀರು ಚಿಮುಕಿಸಿ, ಅದನ್ನು ಸುತ್ತಿ ಭಾರವಾದ ವಸ್ತುವಿನ ಕೆಳಗೆ ಇಡುತ್ತಾರೆ. ಮೂರು ದಿನಗಳ ಬಳಿಕ ಬಿಡಿಸಿದರೆ, ಅದರಲ್ಲಿರುವ ರೋಮಗಳೆಲ್ಲ ಉದುರಿರುತ್ತವೆ. ಹೀಗೆ ನಯಗೊಳಿಸಿದ ಚರ್ಮವನ್ನು ನೆರಳಿನಲ್ಲಿ ಒಣಗಿಸಲಾಗುತ್ತದೆ. ತೆಳ್ಳಗೆ ಪಾರದರ್ಶಕವಾದ ಮೇಲೆ ಚೂಪಾದ ಲೋಹದ ಸಲಕರಣೆಯಿಂದ ಚಿತ್ರ ಬರೆಯಲಾಗುತ್ತದೆ. ಇನ್ನು ಗೊಂಬೆಗಳಿಗೆ ಬೇಕಾದ ಬಣ್ಣಗಳನ್ನೂ ಕಲಾವಿದರೆ ತಯಾರಿಸಿಕೊಳ್ಳುತ್ತಾರೆ. ಕೆಂಪು, ಕಪ್ಪು, ನೀಲಿ, ಸಿಂಧೂರ, ಪಚ್ಚೆ ನೀಲಿ ಮುಖ್ಯವಾಗಿ ಬಳಕೆಯಾಗುವ ಬಣ್ಣಗಳು.
ಟಿವಿ, ಸಿನಿಮಾಗಳ ಭರಾಟೆ
ನಮ್ಮ ಕಾಲದ ಮನರಂಜನೆಗೆ ಇರುವ ಮಾಧ್ಯಮಗಳು ಅದೆಷ್ಟು! ಆದರೆ ಅಪ್ಪಾಜಿ ಅವುಗಳನ್ನೂ ಗುರುತಿಸದಷ್ಟೂ ಮುಗ್ದರು. ಟಿ.ವಿ. ವಿಸಿಆರ್ ಬಂದ ಮೇಲೆ ಹಳ್ಳಿಗಳಲ್ಲೂ ಗೊಂಬೆಯಾಟ ಪ್ರದರ್ಶನಕ್ಕೆ ಕರೆಯೋದು ಕಡಿಮೆ ಆಯಿತು ಎನ್ನುತ್ತಾರೆ!
ಒಂದು ಕಾಲದಲ್ಲಿ ತೊಗಲುಗೊಂಬೆ ಆಟ ಆಡಿಸಿದರೆ ಮಳೆ ಬರುತ್ತದೆ; ದನಕರುಗಳಿಗೆ ಬರುವ ರೋಗ ನಿವಾರಣೆಯಾಗುತ್ತದೆ. ಊರಿಗೆ ಕೇಡು ಬರುವುದಿಲ್ಲ ಎಂಬ ನಂಬಿಕೆಗಳಿದ್ದವು. ಕೆಲವರು ಪುತ್ರ ಸಂತಾನಾಪೇಕ್ಷಯಿಂದ, ಒಳ್ಳೆಯ ಬೆಳೆ ಪ್ರಾಪ್ತಿಗಾಗಿ ತೊಗಲುಗೊಂಬೆಯಾಟ ಆಡಿಸಿದರೆ ಇನ್ನು ಕೆಲವರು ಮದುವೆ ಮತ್ತಿತರ ಧಾರ್ಮಿಕ ಸಂದರ್ಭಗಳಲ್ಲಿ, ಸುಗ್ಗಿ ಮುಗಿದ ಮೇಲೆ ಮನರಂಜನೆಗಾಗಿ ಗೊಂಬೆಯಾಟ ಏರ್ಪಡಿಸುತ್ತಿದ್ದರು. ಅಷ್ಟೇ ಅಲ್ಲ, ಯಾರಾದರೂ ತೀರಿಕೊಂಡರೆ ಅವರ ಉತ್ತರ ಕ್ರಿಯೆಯ ಭಾಗವಾಗಿ ಗೊಂಬೆಯಾಟ ನಡೆಯುತ್ತಿತ್ತು. ಈಗ ಅಹ್ವಾನಗಳೂ ಬರುವುದಿಲ್ಲ. ಇತ್ತೀಚೆಗೆ ಮಾಯಸಂದ್ರದ ಪಕ್ಕ ರಾಮಸಾಗರದಲ್ಲಿ ಒಂದು ಪ್ರದರ್ಶನ ನೀಡಿದ್ದು ಬಿಟ್ಟರೆ ಅಪ್ಪಾಜಿಯವರಿಗೆ ಮತ್ತೆಲ್ಲಿಂದಲೂ ಆಹ್ವಾನಗಳಿಲ್ಲ.
ಹಾಗಂತ ಅವಕಾಶಗಳೇ ಇರುವುದಿಲ್ಲವೆಂದಲ್ಲ. 'ಶ್ರಾವಣ ಮಾಸ, ಶಿವರಾತ್ರಿ, ಗೌರಿ ಗಣೇಶ ಹಬ್ಬಗಳ ಸಂದರ್ಭದಲ್ಲಿ ಒಂದು ರಾತ್ರಿ ನಿದ್ರೆ ಮಾಡಲು ಆಗುವುದಿಲ್ಲ. ಅಷ್ಟು ಕೆಲಸ ಇರುತ್ತದೆ' ಎಂದು ಅಪ್ಪಾಜಿ ಬೀಗುತ್ತಾರೆ. ಆದರೆ ವಾಸ್ತವದ ಅರಿವೂ ಅವರಿಗಿದೆ. ಬದಲಾಗಿರುವ ಸಮಾಜದಲ್ಲಿ ಜೀವನಕ್ಕೆ ಅನ್ಯಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಗೊಂಬೆಯಾಟ ಇಲ್ಲದಾಗ, ಮಕ್ಕಳಿಗೆ ನಾಟಕ ಕಲಿಸಿಕೊಡುವುದು, ಅವರಿಂದಲೇ ನಾಟಕ ಪ್ರದರ್ಶನ ಮಾಡಿ ಒಂದಿಷ್ಟು ಸಂಪಾದಿಸಿಕೊಳ್ಳುತ್ತಾರೆ. ಶನೀಶ್ವರ ಕಥೆ ಓದಿಸುವಾಗ ನಾನು ಹಾರ್ಮೋನಿಯಮ್ ನುಡಿಸಲು ಹೋಗುತ್ತಾರೆ. ಒಂದು ರಾತ್ರಿಗೆ ಒಂದು ಸಾವಿರ ರೂ. ಸಿಗುತ್ತದೆ. ತಬಲಾ, ಹಾರ್ಮೋನಿಯಮ್ ಜೊತೆಗೆ ಹೋದರೆ, 2000 ರೂ. ಸಿಗುತ್ತದೆ. ''ಹಬ್ಬ ಹರಿದಿನಗಳಲ್ಲಿ ನಾಟಕ ಪ್ರದರ್ಶನಕ್ಕೆ ಕರೆಯುತ್ತಾರೆ. ನಾಟಕದ ಮೇಷ್ಟ್ರಾಗಿ ಹೋಗಿ, ಮೂರು ತಿಂಗಳ ನಾಟಕ ಕಲಿಸಿ, ಕುರುಕ್ಷೇತ್ರವೋ, ವೀರ ಅಭಿಮನ್ಯುವನ್ನೋ ಪ್ರದರ್ಶನ ಮಾಡ್ತೀವಿ. ಅದಕ್ಕೆ 30-40 ಸಾವಿರ ರೂ. ಕೊಡ್ತಾರೆ. ಜೀವನಕ್ಕೆ ರಾಗಿಯನ್ನು ಮಾತಾಡಿಕೊಂಡಿರ‌್ತೀವಿ'' ಎಂದು ತಮ್ಮ ಬದುಕಿನ ಸಂಘರ್ಷವನ್ನು ಬಿಚ್ಚಿಟ್ಟರು.
ಎಲ್ಲಿಂದಲೋ ಬಂದವರು..
ಅಪ್ಪಾಜಿ ನಮ್ಮ ಮಾತಿನ ನಡುವೆ ತಮ್ಮ ಪತ್ನಿಯೊಂದಿಗೆ ಬೇರೊಂದು ಭಾಷೆಯಲ್ಲಿ ಮಾತನಾಡುತ್ತಿದ್ದರು. ಅದು ಅರೆ ಮರಾಠಿ. ಇದು ಅವರ ಇತಿಹಾಸವನ್ನು ಬಿಚ್ಚಿಡುವ ಇನ್ನೊಂದು ಎಳೆ. ತೊಗಲುಗೊಂಬೆಯಾಟ, ಮಹಾರಾಷ್ಟ್ರದಿಂದ ವಲಸೆ ಬಂದ ಕಲೆ ಎಂಬ ಐತಿಹ್ಯವಿದೆ. ಅದರ ಹಿಂದೊಂದು ಪ್ರೇಮ ಕಥೆಯೂ ಇದೆ. ಕಾಳಾಚಾರಿ ಎಂಬ ಅಕ್ಕಸಾಲಿಗನು ರೈತ ಕುಟುಂಬದ ಹೆಣ್ಣನ್ನು ಪ್ರೇಮಿಸಿದ್ದನಂತೆ. ಆತನಿಂದ ಆಕೆಗೆ ಏಳು ಮಕ್ಕಳು ಆಗಿದ್ದರಂತೆ. ಗುಟ್ಟಾಗಿದ್ದ ಈ ಸಂಬಂಧ ಬಯಲಾದಾಗ ಆಕೆಯ ತಂದೆ ತಾಯಿಯರು ಏಳೂ ಮಕ್ಕಳೊಂದಿಗೆ ಆಕೆಯನ್ನೂ ಹೊರಹಾಕಿದರಂತೆ. ಕಾಳಾಚಾರಿ ಮಕ್ಕಳಿಗೆ ಗೊಂಬೆ ಕಲೆಯನ್ನು ಕಲಿಸಿ ಗೊಂಬೆ ಆಡಿಸುತ್ತಾ ಬದುಕು ನಡೆಸಿದನಂತೆ. ಏಳು ಮಕ್ಕಳ ಪೈಕಿ ಕೆಲವರು ಮಹಾರಾಷ್ಟ್ರ ಬಿಟ್ಟು ಕರ್ನಾಟಕ, ಆಂಧ್ರಪ್ರದೇಶಕ್ಕೆ ಬಂದರು ಎನ್ನಲಾಗುತ್ತದೆ. ತೊಗಲುಗೊಂಬೆಯ ಹುಟ್ಟಿನ ಜೊತೆಗೆ, ಅದರ ಭಾಷೆ, ವಿವಿಧ ಭಾಗಗಳಿಗೆ ಹರಡಿದ ಇತಿಹಾಸವನ್ನು ಈ ಪ್ರಸಂಗ ಬಿಚ್ಚಿಡುತ್ತದೆ. ಹಾಗಾಗಿ ಅಪ್ಪಾಜಿ ಅವರ ಮೂಲಭಾಷೆಯಲ್ಲೇ ಇಂದಿಗೂ ಮಾತನಾಡುತ್ತಿದ್ದರು.
ಎಲ್ಲಿಂದಲೋ ಬಂದು ಕರ್ನಾಟಕದಲ್ಲಿ ಈ ವಿಶಿಷ್ಟ ಕಲೆಯನ್ನು ಬೆಳೆಸಿದವರು ಈಗ ಎಲ್ಲೋ ಕಳೆದು ಹೋಗುತ್ತಿದ್ದಾರೆ. ನಾಲ್ಕು ದಶಕಗಳ ಹಿಂದೆ ಕರ್ನಾಟಕದಲ್ಲಿ ಇವರ ಸಂಖ್ಯೆ 14921 ಇತ್ತೆಂದು ಜನಗಣತಿ ಹೇಳುತ್ತದೆ. ಎರಡು ದಶಕಗಳ ಹಿಂದೆ ಸಕ್ರಿಯರಾಗಿದ್ದ ತೊಗಲುಗೊಂಬೆ ಕಲಾವಿದರ ಸಂಖ್ಯೆ 180ರ ಆಸುಪಾಸು. ಈಗ ಆ ಸಂಖ್ಯೆ 100ಕ್ಕಿಂತ ಕಡಿಮೆ ಎನ್ನುವುದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ, ಸ್ವತಃ ತೊಗಲು ಗೊಂಬೆ ಕಲಾವಿದರೂ ಆದ ಬೆಳಗಲ್ ವೀರಣ್ಣ ಅವರ ಅಭಿಪ್ರಾಯ.
'ತುಂಗಾಭದ್ರಾ ನದಿಗೆ ಅಣೆಕಟ್ಟು ಕಟ್ಟಿ ಸುತ್ತಲಿನ ಜಮೀನಿಗೆ ನೀರು ದೊರೆತಾಗ ಕೆಲವು ಕಲಾವಿದರು ತಮ್ಮ ಗೊಂಬೆಗಳನ್ನು ನದಿಗೆ ಚೆಲ್ಲಿ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದರು' ಎಂದು ಸಂಶೋಧನಾ ಲೇಖನವೊಂದು ಉಲ್ಲೇಖಿಸುತ್ತದೆ. ಅಪ್ಪಾಜಿಯವರ ಸಹೋದರರು ಕೂಡ ಗೊಂಬೆಯಾಟ ಇಲ್ಲದ ದಿನಗಳಲ್ಲಿ ಬೆಂಗಳೂರು ಮತ್ತಿತರೆಡೆಗಳಲ್ಲಿ ಬೇರೆ ವೃತ್ತಿಗಳನ್ನು ನಿರ್ವಹಿಸಿ ತಮ್ಮ ಜೀವನ ನಡೆಸುತ್ತಿದ್ದಾರೆ. ಅನೇಕ ಕಲಾವಿದರು ಹೊಟ್ಟೆಪಾಡಿಗಾಗಿ ಕೂಲಿ, ವ್ಯವಸಾಯ, ಮೇಕೆ ಕಾಯುವುದು ಇತ್ಯಾದಿ ಮಾಡುತ್ತಿದ್ದಾರೆ.
ವಿಶಿಷ್ಟ ಖಜಾನೆ
ಆರಂಭದಲ್ಲಿ ಹೇಳಿದಂತೆ ಎಲ್ಲ ತೊಗಲು ಗೊಂಬೆಯಾಟದ ಕಲಾವಿದರ ಮನೆಯಲ್ಲೊಂದು ಬಿದಿರ ಪೆಟ್ಟಿಗೆ ಇರುತ್ತದೆ. ಅದರಲ್ಲೇ ಅವರು ಪ್ರದರ್ಶಿಸುವ ಆಟದ ಪಾತ್ರಗಳಿರುತ್ತವೆ. ಒಬ್ಬೊಬ್ಬ ಕಲಾವಿದನ ಮನೆಯಲ್ಲೂ ಸುಮಾರು 200 ವರ್ಷಗಳಷ್ಟು ಹಳೆಯದಾದ ಇಂಥ ಅಪೂರ್ವ ಕಲಾ ಖಜಾನೆಯೊಂದು ಇರುತ್ತದೆ ಎಂದರೆ ಅಚ್ಚರಿಪಡಬೇಕಿಲ್ಲ. ಅಪ್ಪಾಜಿಯವರ ಬಳಿ ಇರುವ ಗೊಂಬೆಗಳೆಲ್ಲಾ ಅವರ ತಾತ ಮುತ್ತಾತ ಸಿದ್ಧ ಮಾಡಿದಂಥವು ಸುಮಾರು ನೂರು ವರ್ಷಗಳಷ್ಟು ಹಳೆಯ ಗೊಂಬೆಗಳು! ಆಗಾಗ ಅವುಗಳಿಗೆ ಬಣ್ಣದ ಸ್ಪರ್ಶ ನೀಡಿ ಉಳಿಸಿಕೊಂಡು ಬಂದಿರುವ ಈ ಗೊಂಬೆಗಳು ಪುರಾಣದ ಪಾತ್ರಗಳ ಕಥೆಯೊಂದಿಗೆ, ಅವುಗಳೊಂದಿಗೆ ಬದುಕನ್ನ ಬೆಸೆದುಕೊಂಡ ಕಲಾವಿದರ ಕಥೆಯನ್ನೂ ಹೇಳುತ್ತವೆ.
ಒಂದೆಡೆ ವೀಕ್ಷಕರಿಗೆ ಪರಿಚಿತವಾದ ಪುರಾಣಪಾತ್ರಗಳಿದ್ದರೂ, ಸೂತ್ರಧಾರ ಈ ಪಾತ್ರಗಳ ಹಿನ್ನೆಲೆಯಲ್ಲಿ ನೆಲೆಸಿರುವ ಅವರವರ ವೈಶಿಷ್ಟವನ್ನು, ಪ್ರಾಮುಖ್ಯತೆಯನ್ನು ಗಾದೆಗಳು, ಒಗಟುಗಳ ಮೂಲಕ ಪರಿಚಯಿಸಿ, ಸಂದರ್ಭಕ್ಕನುಗುಣವಾಗಿ ದೃಶ್ಯಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿ, ಹಾಡು, ನೃತ್ಯ, ವಾದ್ಯ ಮಾತು ಮತ್ತು ತೊಗಲುಗೊಂಬೆಗಳು ಇಷ್ಟನ್ನು ಒಂದೇ ಕ್ಷಣದಲ್ಲಿ ನೋಡುವವರಿಗೆ ತಲುಪುವಂತೆ ಮಾಡುವ ಕಲೆ ತೊಗಲುಗೊಂಬೆಯಾಟ. ಜನಸಾಮಾನ್ಯರ ಜೀವನದ ಸಮಗ್ರ ಕಲ್ಪನೆಯ ಪರಿಧಿಯೊಳಗೆ ಪ್ರವೇಶಿಸಿ ಆತನ ಆತ್ಮ ವಿಮರ್ಶೆಯೊಂದಿಗೆಯೇ, ಹೊಸ ಮೌಲ್ಯಗಳನ್ನು ಪೋಣಿಸುತ್ತಾ ಈ ಆಟಕ್ಕೊಂದು ಸೈದ್ಧಾಂತಿಕ ನೆಲೆಯೊಂದು ರೂಪುಗೊಂಡಿತ್ತು. ಆಧುನಿಕತೆ ಎಲ್ಲ ರೀತಿಯ ಬದುಕುಗಳನ್ನು ನುಂಗಿದಂತೆ, ಅದರೊಂದಿಗೆ ಹುಟ್ಟಿದ ಸೃಜನಶೀಲತೆಯನ್ನು ನುಂಗುತ್ತಿದೆ. ತೊಗಲುಗೊಂಬೆಯಾಟ ಅಂಥವುಗಳಲ್ಲಿ ಒಂದು.
ಮಹಾನಗರಗಳ ದೊಡ್ಡ ಹಾಲ್‌ಗಳಲ್ಲಿ ನಿಂತು ಅದೇ ಸವಕಲು ಜೋಕ್‌ಗಳನ್ನು ಹೇಳುತ್ತಾ, ಜೇಬು ತುಂಬಿಸಿಕೊಳ್ಳುವ ಹಾಸ್ಯ ಕಲಾವಿದರನ್ನು ನೋಡಿದಾಗ, ಅಪ್ಪಾಜಿಯಂಥ ಕಲೆಗಾಗಿ ಬದುಕ ಮುಡಿಪಿಟ್ಟವರ ಬಗ್ಗೆ ಅಯ್ಯೋ ಅನ್ನಿಸುತ್ತದೆ. ಬದುಕಿನ ಎಲ್ಲ ಹೊಡೆದಾಟಗಳ ನಡುವೆಯೂ ತಾವು ನಂಬಿ, ಬೆಸೆದುಕೊಂಡ ಕಲೆಯನ್ನು ಉಳಿಸುವುದಕ್ಕಾಗಿ ಅವರ ಹೋರಾಡುವ ರೀತಿ ನೋಡಿದಾಗ ಅಭಿಮಾನ ಉಕ್ಕುತ್ತದೆ.
ಕಾಲಕ್ಕೆ ಹೊಂದಿಕೊಂಡಂತೆ ಮಾರ್ಪಾಡುಗಳನ್ನು ಮಾಡಿಕೊಂಡು ಕಲೆಯನ್ನು ಉಳಿಸಬೇಕೆಂಬ ಅಭಿಪ್ರಾಯಗಳು ಸಾಮಾನ್ಯವಾಗಿ ಬರುತ್ತವೆ. ಗೊಂಬೆಯಾಟದ ಮೂಲಕ ಹೊಸ ಕಾಲದ ಕಥೆ ಹೇಳುವ ಪ್ರಯತ್ನ ಮಾಡುವುದು ಕಲೆಯ ಪುನರುಜ್ಜೀವನದ ನಿಟ್ಟಿನಲ್ಲಿ ನಡೆಯುವ ಒಳ್ಳೆಯ ಪ್ರಯತ್ನವೇನೊ ನಿಜ. ಆದರೆ ಹೀಗೆ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುವ ಜಾನಪದ ಕಲೆಗಳು ಕಳೆದು ಹೋದದ್ದೆ ಹೆಚ್ಚು. ತಂತ್ರಜ್ಞಾನವನ್ನು ಬಳಸಿಕೊಂಡು ತೊಗಲುಗೊಂಬೆಗೆ ಜೀವ ತುಂಬುವ ಪ್ರಯತ್ನಗಳಾಗುವ ನಿಟ್ಟಿನ ಚಿಂತನೆಗಳು ಸದ್ಯದ ಅಗತ್ಯ.
**
ಐದನೇ ತಲೆಮಾರು
ಈ ಹುಡುಗನ ಹೆಸರು ಶಶಿಕುಮಾರ್. ವಯಸ್ಸು 12. ಕಲಾವಿದ ಅಪ್ಪಾಜಿಯವರ ಮಗ. ತೊಗಲುಗೊಂಬೆಯಾಟವನ್ನು ಮುನ್ನಡೆಸಲಿರುವ ಐದನೆ ತಲೆಮಾರಿನ ಕುಡಿ. ಮಗ ತನ್ನಂತೆ ಆಗಬಾರದು ಎಂದು ವಿದ್ಯಾಭ್ಯಾಸವನ್ನು ಕೊಡಿಸಿದ್ದಾರೆ ಅಪ್ಪಾಜಿ. ಶಶಿಕುಮಾರ್ 6ನೇ ತರಗತಿ ಓದುತ್ತಿದ್ದಾನೆ. ಜೊತೆಗೆ ತಂದೆಯೊಂದಿಗೆ ತೊಗಲುಗೊಂಬೆಯಾಟವನ್ನು ಅಭ್ಯಾಸ ಮಾಡುತ್ತಿದ್ದಾನೆ. ತನ್ನ ಪುಟ್ಟ ಬೆರಳುಗಳಲ್ಲಿ ತಬಲ ನುಡಿಸುವುದನ್ನು ಕಲಿತಿದ್ದಾನೆ. ಹರಿಕಥಾ ಪ್ರಸಂಗಗಳನ್ನು ನಡೆಸಿಕೊಡುತ್ತಾನೆ ಕೂಡ. ತನ್ನ ಮಗನ ಶಕ್ತಿಯ ಅಪ್ಪಾಜಿಗೆ ಅಪಾರ ನಂಬಿಕೆ. ಆದರೂ, 'ನನ್ನ ಮಗ ಈ ಕಲೆಯನ್ನೇ ನಂಬಿಕೊಂಡು ಬದುಕುಬೇಕೆಂದೇನು ಇಲ್ಲ. ಓದಿ ವಿದ್ಯಾವಂತನಾಗಲಿ. ಆದರೆ ವಂಶಪಾರಂಪರ್ಯವಾಗಿ ನಡೆಸಿಕೊಂಡು ಬಂದಿರುವ ಕಲೆಯ ಬಗ್ಗೆ ಅವನಿಗೆ ಗೊತ್ತಿರಬೇಕು. ತಾನು ಯಾರೆಂದು ಕೇಳಿದಾಗ ಹೆಮ್ಮೆಯಿಂದ ಈ ಕಲೆಯ ಬಗ್ಗೆ ಮಾತನಾಡುವಂತಾಗಬೇಕು ಅಷ್ಟೆ' ಎಂದು ಆಸೆ ಪಡುವ ಅಪ್ಪಾಜಿ ತೊಗಲುಗೊಂಬೆಯಾಟವನ್ನು ಕಲಿಸುತ್ತಿದ್ದಾರೆ. ಕಲೆ ನಮ್ಮನ್ನು ರಕ್ಷಿಸಿದೆ ನಾವು ಕಲೆಯನ್ನು ರಕ್ಷಿಸಬೇಕಿದೆ ಎನ್ನುತ್ತಾರೆ. ಅಪ್ಪಾಜಿ ಅವರ ಮನದಿಂಗಿತ ಅರಿತವನಂತೆ ಪುಟ್ಟ ಶಶಿಕುಮಾರ್ ಕೂಡ ಕಲಿಯುವುದರಲ್ಲಿ ಆಸಕ್ತಿ ಹೊಂದಿದ್ದಾನೆ.
**
ಗೌರವ
ಸಮಾಜದಲ್ಲಿ ಚರ್ಮದ ಕೆಲಸ ಮಾಡುವವರಿಗೆ ಹಲವು ಸ್ಥಳಗಳಲ್ಲಿ ಪ್ರವೇಶದ ಅವಕಾಶವೇ ಇರುವುದಿಲ್ಲ. ದೇವಸ್ಥಾನ ಪ್ರವೇಶ ನಿಷಿದ್ಧ. ಆದರೆ ತೊಗಲುಗೊಂಬೆ ಕಲಾವಿದರಿಗೆ ವಿನಾಯಿತಿ. ದೇವರ ಪ್ರತಿನಿಧಿಗಳೆಂದೇ ಭಾವಿಸುವ ಗ್ರಾಮ ಸಮಾಜ ಅವರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡುತ್ತದೆ. ಬಹುಮಾನವಾಗಿ ಹೊಲಗಳನ್ನು ನೀಡಿ ಸತ್ಕರಿಸುತ್ತದೆ. ಅಷ್ಟೇ ಅಲ್ಲ ಇವರನ್ನು ಗೂಢಚಾರಿಕೆಗೂ ಬಳಸಿದ್ದ ಉದಾಹರಣೆಗಳು ಇತಿಹಾಸದಲ್ಲಿ ಉಲ್ಲೇಖವಾಗಿವೆ. ಶಿವಾಜಿ, 12ನೇ ಶತಮಾನದ ಸಿಲೋನಿ ರಾಜ ಗಜಬಾಹು ತೊಗಲುಗೊಂಬೆ ಆಟಗಾರರನ್ನು ಗೂಢಚಾರರನ್ನಾಗಿ ನೇಮಿಸಿಕೊಂಡಿದ್ದರಂತೆ.
**
ಕಿಳ್ಳೆಕ್ಯಾತ - ಬಂಗಾರಕ್ಕ
ಕಿಳ್ಳೆಕ್ಯಾತ ಮತ್ತು ಬಂಗಾರಕ್ಕನಿಲ್ಲದೇ ತೊಗಲು ಗೊಂಬೆಯಾಟವೇ ಇಲ್ಲ. ಕಪ್ಪು ಅಥವಾ ಕೆಂಪು ಬಣ್ಣದ ಡೊಳ್ಳು ಹೊಟ್ಟೆಯ, ಬೋಳು ತಲೆಯ, ಪುಳ್ಳ ಜುಟ್ಟಿನ, ದಪ್ಪ ತುಟಿಯ ವಕ್ರ ವ್ಯಕ್ತಿ ಕಿಳ್ಳೆಕ್ಯಾತ. ಈತನ ಹೆಂಡತಿಯೇ ಬಂಗಾರಕ್ಕ. ಇವರಿಬ್ಬರ ನಡುವೆ ನಡೆಯುವ ಹಾಸ್ಯ, ಶೃಂಗಾರದ ಸಂಭಾಷಣೆಯೇ ಗೊಂಬೆಯಾಟದ ರಂಜನೆಯ ಅಂಶ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ