ರಾಮಚಂದ್ರ ಗುಹಾ
ಸೌಜನ್ಯ: ಪ್ರಜಾವಾಣಿ
ಸೌಜನ್ಯ: ಪ್ರಜಾವಾಣಿ
ಈ ಬಾರಿಯ ಚುನಾವಣಾ ಋತುವಿನಲ್ಲಿ ಬಿ.ಆರ್. ಅಂಬೇಡ್ಕರ್ ಅವರನ್ನು ನಾನು ಸ್ಮರಿಸಿಕೊಳ್ಳುತ್ತಲೇ ಇದ್ದೇನೆ. ದಲಿತ ವಿಮೋಚಕರಾಗಿಯಲ್ಲ ಪ್ರಜಾಪ್ರಭುತ್ವದ ಸಿದ್ಧಾಂತ ರೂಪಿಸಿದ ವ್ಯಕ್ತಿಯಾಗಿ ಅವರನ್ನು ನಾನು ನೆನಪಿಸಿಕೊಳ್ಳುತ್ತಿದ್ದೇನೆ. ೧೯೪೯ರ ನವೆಂಬರ್ 25ರಂದು ಭಾರತದ ಸಾಂವಿಧಾನಿಕ ಸಭೆಯನ್ನುದ್ದೇಶಿಸಿ ಅವರು ಮಾಡಿದ ಮಹತ್ವದ ಭಾಷಣವನ್ನು ನಾನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದೇನೆ, ಓದುತ್ತಿದ್ದೇನೆ. ಆಗ ಅವರು ಮೂರು ಎಚ್ಚರಿಕೆಗಳನ್ನು ನೀಡಿದ್ದರು. ಒಂದು, ಅನಿಯಂತ್ರಿತ ಪ್ರತಿಭಟನೆಗಳಿಗಾಗಿ ಸಾಂವಿಧಾನಿಕ ಮಾದರಿಗಳನ್ನು ಬಿಟ್ಟುಬಿಡುವುದರಲ್ಲಿ ಇರುವ ಅಪಾಯ. ಅದನ್ನು ಅವರು ‘ಅರಾಜಕತೆಯ ವ್ಯಾಕರಣ’ ಎಂದು ಬಣ್ಣಿಸಿದ್ದರು.
ಇನ್ನೊಂದು, ರಾಜಕೀಯ ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ಪ್ರಜಾಪ್ರಭುತ್ವದ ನಡುವೆ ಇರುವ ವ್ಯತ್ಯಾಸವನ್ನು ತಿಳಿಹೇಳಿತ್ತು. ಪ್ರತಿ ನಾಗರಿಕನಿಗೂ ಮತ ಹಾಕುವ ಅವಕಾಶವನ್ನು ಸಂವಿಧಾನ ನೀಡಿದ್ದು, ಅದು ರಾಜಕೀಯ ಸಮಾನತೆಯನ್ನು ಖಾತರಿಪಡಿಸುತ್ತದೆ. ಹಾಗಿದ್ದೂ ಅಂಬೇಡ್ಕರ್ ಈ ಎಚ್ಚರಿಕೆ ನೀಡಿದ್ದರು: ‘ಸಾಮಾಜಿಕ ನೆಲೆಯಲ್ಲಿ ಭಾರತದಲ್ಲಿರುವುದು ಶ್ರೇಣೀಕೃತ ಅಸಮಾನ ವ್ಯವಸ್ಥೆ. ಅಂದರೆ ಕೆಲವರಿಗೆ ಉತ್ಕೃಷ್ಟ ಸ್ಥಾನಮಾನವಾದರೆ ಉಳಿದವರಿಗೆ ಕನಿಷ್ಠ ಸ್ಥಾನಮಾನ. ಆರ್ಥಿಕ ನೆಲೆಯಲ್ಲೂ, ಕೆಲವರು ಅತಿ ಶ್ರೀಮಂತರಾದರೆ ಉಳಿದ ಅನೇಕರು ಕಡು ಬಡತನದಲ್ಲೇ ಬದುಕುತ್ತಾರೆ.’ ರಾಜಕೀಯ ಹಕ್ಕುಗಳು ಹಾಗೂ ಸಾಮಾಜಿಕ ಅಸೌಕರ್ಯಗಳ ನಡುವಿನ ಕಂದಕ ಹೀಗೆಯೇ ಮುಂದುವರಿದರೆ ಮುಂದೆ ಏನಾಗಬಹುದು ಎಂದು ಅಂಬೇಡ್ಕರ್ ಎಚ್ಚರಿಸಿದ್ದುದು ಹೀಗೆ: ‘ಬಹುಶ್ರಮದಿಂದ ರೂಪಿಸಿದ ರಾಜಕೀಯ ಪ್ರಜಾಪ್ರಭುತ್ವದ ಸಂರಚನೆಯನ್ನೇ ಅಸಮಾನತೆಯಿಂದ ಬಳಲುವವರು ಉಡಾಯಿಸಿಬಿಡುತ್ತಾರೆ’.
ಅಂಬೇಡ್ಕರ್ ಕೊಟ್ಟ ಈ ಎರಡು ಎಚ್ಚರಿಕೆಗಳು ಎಂದಿಗೂ ಸಮಂಜಸವಾದುವು. ಆದರೆ ಈಗಿನ ಚುನಾವಣೆಯ ಹಿನ್ನೆಲೆಯಲ್ಲಿ ಅವರು ಕೊಟ್ಟ ಮೂರನೇ ಎಚ್ಚರಿಕೆ ಅತಿ ಮುಖ್ಯವಾದದ್ದು. ಅದನ್ನು ನಾವು ತುರ್ತಾಗಿ ಮನದಟ್ಟು ಮಾಡಿಕೊಳ್ಳಬೇಕಿದೆ. ಯಾವುದೋ ನಿರ್ದಿಷ್ಟ ನಾಯಕನನ್ನು ಟೀಕಾತೀತ ಎಂದು ಭಾವಿಸಿ, ಕುರುಡಾಗಿ ಅವನನ್ನು ಅನುಕರಿಸುವುದು ಸರಿಯಲ್ಲ ಎಂದು ಅವರು ಭಾರತೀಯರಿಗೆ ಆಗಲೇ ಕೊಟ್ಟಿದ್ದ ಎಚ್ಚರಿಕೆ ಅದು.
‘ಶ್ರೇಷ್ಠ ಎಂದು ಭಾವಿಸಿದ ಒಬ್ಬ ವ್ಯಕ್ತಿಯ ಪಾದಗಳ ಮೇಲೆ ತಮ್ಮ ಸ್ವತಂತ್ರ ಹಕ್ಕುಗಳನ್ನು ಪ್ರಜಾಪ್ರಭುತ್ವದಲ್ಲಿನ ನಾಗರಿಕರು ಎಂದೂ ಹಾಕಿಬಿಡಬಾರದು. ಅವನನ್ನು ನಂಬಿ ಹಾಗೆ ಮಾಡುವುದರಿಂದ ಸಾಮಾಜಿಕ ಹಿತವನ್ನೇ ಬುಡಮೇಲು ಮಾಡುವ ಅಧಿಕಾರವನ್ನು ಆ ಶ್ರೇಷ್ಠ ವ್ಯಕ್ತಿಗೆ ನೀಡಿದಂತಾಗುತ್ತದೆ’ ಎಂದು ಉದಾರವಾದಿ ಚಿಂತಕ ಜಾನ್ ಸ್ಟುವರ್ಟ್ ಮಿಲ್ ನೀಡಿದ್ದ ಎಚ್ಚರಿಕೆಯನ್ನು ಅಂಬೇಡ್ಕರ್ ಆಗ ಉಲ್ಲೇಖಿಸಿದ್ದರು.
ದೇಶ ಸೇವೆಗಾಗಿ ಇಡೀ ಬದುಕನ್ನೇ ಮುಡಿಪಾಗಿಟ್ಟ ಮಹನೀಯರಿಗೆ ಕೃತಜ್ಞತೆ ಸಲ್ಲಿಸುವುದು ತಪ್ಪೇನೂ ಅಲ್ಲ ಎಂದು ಭಾವಿಸಿದ್ದ ಅಂಬೇಡ್ಕರ್, ಆ ಕೃತಜ್ಞತೆ ಸಲ್ಲಿಸುವ ರೀತಿಗೆ ಮಿತಿ ಇರಬೇಕು ಎಂದು ಪ್ರತಿಪಾದಿಸಿದ್ದರು. ಐರ್ಲೆಂಡ್‌ನ ದೇಶಭಕ್ತ ಡೇನಿಯೆಲ್ ಒ’ಕಾನೆಲ್ ಹೇಳಿರುವಂತೆ, ‘ಯಾವ ಪುರುಷನೂ ತನ್ನ ಗೌರವ ಬಲಿ ಕೊಟ್ಟು ಕೃತಜ್ಞತೆ ತೋರಿಸಬೇಕಿಲ್ಲ.ಯಾವ ಮಹಿಳೆಯೂ ತನ್ನ ಶೀಲ ಬಲಿಕೊಟ್ಟು ಕೃತಜ್ಞತೆ ತೋರಬೇಕಿಲ್ಲ. ಹಾಗೆಯೇ ತನ್ನ ಸ್ವಾತಂತ್ರ್ಯವನ್ನು ಬಲಿಕೊಟ್ಟು ಯಾವ ರಾಷ್ಟ್ರವೂ ಕೃತಜ್ಞತೆ ತೋರಬೇಕಿಲ್ಲ’.
ನಂತರ ಮುಂದುವರಿದು ಅವರು ಹೀಗೆ ಹೇಳಿದ್ದರು: ‘ಈ ಎಚ್ಚರಿಕೆಯು ಬೇರೆ ದೇಶಗಳಿಗಿಂತ ಭಾರತಕ್ಕೆ ಹೆಚ್ಚು ಅಗತ್ಯ. ಭಾರತದಲ್ಲಿ ಭಕ್ತಿ ಅಥವಾ ವ್ಯಕ್ತಿಪೂಜೆ ರಾಜಕೀಯದಲ್ಲಿ ಅವ್ಯಾಹತವಾಗಿ ನಡೆದಿದೆ. ಬೇರೆ ದೇಶದ ರಾಜಕೀಯಕ್ಕೆ ಹೋಲಿಸಿದರೆ ಭಾರತದಲ್ಲಿ ಇದು ಹೆಚ್ಚು. ಧರ್ಮದ ದೃಷ್ಟಿಯಲ್ಲಿ ಭಕ್ತಿಯು ಆತ್ಮದ ಮುಕ್ತಿ ಮಾರ್ಗ ಆಗಿರಬಹುದು. ಆದರೆ ರಾಜಕೀಯದಲ್ಲಿ ಭಕ್ತಿ ಅಥವಾ ನಾಯಕ ಪೂಜೆ ಅವನತಿಯ ಹಾದಿ ಹಾಗೂ ಕಡೆಗದು ಸರ್ವಾಧಿಕಾರಕ್ಕೆ ಖಚಿತ ಮಾರ್ಗವಾಗುತ್ತದೆ’.
ಆಗ ಅಂಬೇಡ್ಕರ್, ಸಾಮಾನ್ಯವಾದೊಂದು ಎಚ್ಚರಿಕೆಯಾಗಿ ಈ ಮಾತುಗಳನ್ನು ಹೇಳಿದ್ದರು. ಆದರೆ ಆಗ ಅವರ ಮನಸ್ಸಿನಲ್ಲೂ ಇದಕ್ಕೆ ಸಂಬಂಧಿಸಿದಂತೆ ಯಾರಾದರೂ ನಿರ್ದಿಷ್ಟ ವ್ಯಕ್ತಿಗಳೇನಾದರೂ ಇದ್ದಿದ್ದಿರಬಹುದೆ? ಮಹಾತ್ಮ ಗಾಂಧಿಯ ಕುರಿತಂತೆ ದೇಶದ ಜನರ ವಿಪರೀತ ಆರಾಧನಾ ಮನೋಭಾವವನ್ನು ಅಂಬೇಡ್ಕರ್ ಅವರು ವಿಮರ್ಶಾ ದೃಷ್ಟಿಕೋನದಿಂದಲೇ ಕಂಡಿದ್ದರು. ಸ್ವಾತಂತ್ರ್ಯದ ನಂತರ ಜವಾಹರಲಾಲ್ ನೆಹರು ಹಾಗೂ ವಲ್ಲಭಭಾಯ್ ಪಟೇಲ್ ತರಹದವರು ಅಪಾರ ಪ್ರತಿಷ್ಠೆ ಗಳಿಸಿದ್ದನ್ನೂ ಅವರು ಗಮನಿಸಿದ್ದರು. ನೆಹರು, ಪಟೇಲ್ ಹಾಗೂ ಅವರ ಕಾಂಗ್ರೆಸ್ ಪಕ್ಷ ಸುದೀರ್ಘವಾದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಕೊಂಡದ್ದಕ್ಕೂ ಅಂಬೇಡ್ಕರ್ ಸಾಕ್ಷಿಯಾಗಿದ್ದರು. ಸ್ವಾತಂತ್ರ್ಯಕ್ಕಾಗಿ ಅವರುಗಳು ಅನುಭವಿಸಿದ ಜೈಲುವಾಸ ಅವರಿಗೆ ಸಹಜವಾಗಿಯೇ ಅಪಾರ ಜನಮನ್ನಣೆ ಹಾಗೂ ಗೌರವವನ್ನು ತಂದುಕೊಟ್ಟಿತ್ತು. ಇದನ್ನೆಲ್ಲಾ ಅಂಬೇಡ್ಕರ್ ಕಾಣಬಲ್ಲವರಾಗಿದ್ದರೂ ಇದರ ಪರಿಣಾಮಗಳ ಬಗ್ಗೆ ಅವರಿಗೆ ಆತಂಕವಿತ್ತು. ‘ರಾಷ್ಟ್ರಕ್ಕೆ ಸುದೀರ್ಘ ಸೇವೆಯನ್ನು’ ಗಾಂಧಿ, ನೆಹರು ಸಲ್ಲಿಸಿದ್ದಾರೆ ಎಂದ ಮಾತ್ರಕ್ಕೆ ಗಾಂಧಿ, ನೆಹರು ಸಿದ್ಧಾಂತಗಳು ಹಾಗೂ ಕ್ರಿಯೆಗಳು ಟೀಕಾತೀತ ಎಂದು ಅರ್ಥವೇ? ಪ್ರಶ್ನಾತೀತರೆಂದು ಅವರನ್ನು ಭಾವಿಸಿ, ಅವರ ಅನುಯಾಯಿಗಳಾಗಲು ದೇಶಭಕ್ತಿಯ ಅವರ ದಾಖಲೆಯೊಂದೇ ಸಾಕೆ? ಎಂಬ ಪ್ರಶ್ನೆಗಳೂ ಅವರಲ್ಲಿ ಇದ್ದವು.
ಅಂಧ ಆರಾಧನೆಯ ಅಪಾಯಗಳ ಬಗ್ಗೆ ಜವಾಹರಲಾಲ್ ನೆಹರು ಅವರಿಗೆ ಅರಿವಿರಲಿಲ್ಲ ಎಂದೇನಲ್ಲ. ೧೯೩೭ರ ನವೆಂಬರ್‌ನಲ್ಲಿ ‘ಮಾಡರ್ನ್ ರಿವ್ಯೂ ಆಫ್ ಕಲ್ಕತ್ತ’ ನೆಹರು ಅವರ ವ್ಯಕ್ತಿಚಿತ್ರವೊಂದನ್ನು ಪ್ರಕಟಿಸಿತು. ಅದರಲ್ಲಿ, ಇತರರನ್ನು ಕುರಿತಾದ ನೆಹರೂ ಅಸಹನೆ ಹಾಗೂ ದುರ್ಬಲ ಹಾಗೂ ಅದಕ್ಷರ ಕುರಿತಾಗಿ ಅವರಿಗಿರುವ ತಿರಸ್ಕಾರದ ಬಗೆಗೆ ಮಾತುಗಳಿದ್ದವು. ಅತಿ ಗರ್ವಿಯಾಗುತ್ತಿರುವ ನೆಹರು ಮುಂದೆ ಸೀಸರ್ ತರಹ ಆಗಬಹುದು ಎನ್ನುವ ಅನುಮಾನವೂ ಬರಹದಲ್ಲಿ ವ್ಯಕ್ತವಾಗಿತ್ತು. ಆದರೆ, ಆ ಬರಹವನ್ನು ತಾವೇ ‘ಚಾಣಕ್ಯ’ ಎಂಬ ಹೆಸರಿನಲ್ಲಿ ಬರೆದಿದ್ದುದಾಗಿ ಆಮೇಲೆ ನೆಹರು ಸ್ಪಷ್ಟಪಡಿಸಿದ್ದರು.
ತಮ್ಮೊಳಗೆ ಒಬ್ಬ ಸೀಸರ್ ಹುಟ್ಟಬಹುದು ಎಂಬ ಆತಂಕ ತೋಡಿಕೊಂಡು, ನೆಹರು ಆತ್ಮಾವಲೋಕನ ಮಾಡಿಕೊಂಡಿದ್ದರು. ಅವರ ಕಾಲದಲ್ಲಿ ಇದ್ದ ರಾಜಕೀಯ ಧುರೀಣರೂ ಗಮನಾರ್ಹ ವ್ಯಕ್ತಿತ್ವದವರು. ಕಾಂಗ್ರೆಸ್ನಲ್ಲಿಯೇ ಪಟೇಲ್, ರಾಜಾಜಿ, ಬಿ.ಸಿ. ರಾಯ್ ಮತ್ತಿತರರಿಗೆ ನೆಹರು ಮೇಲೆ ಕಕ್ಕುಲತೆ ಇತ್ತೇ ವಿನಾ ಅವರ ಕುರಿತಂತೆ ಗೌರವದ ಭಾವವೇನೂ ಇರಲಿಲ್ಲ. ಹಾಗೆಯೇ, ರಾಮಮನೋಹರ ಲೋಹಿಯಾ, ಎಸ್.ಪಿ. ಮುಖರ್ಜಿ, ಜೆ.ಬಿ. ಕೃಪಲಾನಿ, ಹಾಗೂ ಎ.ಕೆ. ಗೋಪಾಲನ್ ಅಂತಹ ಆತ್ಮಗೌರವ ಹಾಗೂ ಸಾಮರ್ಥ್ಯ ಇದ್ದ ನಾಯಕರು ವಿರೋಧ ಪಕ್ಷದಲ್ಲಿದ್ದರು.
ತಮ್ಮೊಳಗೆ ಒಬ್ಬ ಸೀಸರ್ ಹುಟ್ಟಬಹುದು ಎಂಬ ಆತಂಕ ತೋಡಿಕೊಂಡು, ನೆಹರು ಆತ್ಮಾವಲೋಕನ ಮಾಡಿಕೊಂಡಿದ್ದರು. ಅವರ ಕಾಲದಲ್ಲಿ ಇದ್ದ ರಾಜಕೀಯ ಧುರೀಣರೂ ಗಮನಾರ್ಹ ವ್ಯಕ್ತಿತ್ವದವರು. ಕಾಂಗ್ರೆಸ್ನಲ್ಲಿಯೇ ಪಟೇಲ್, ರಾಜಾಜಿ, ಬಿ.ಸಿ. ರಾಯ್ ಮತ್ತಿತರರಿಗೆ ನೆಹರು ಮೇಲೆ ಕಕ್ಕುಲತೆ ಇತ್ತೇ ವಿನಾ ಅವರ ಕುರಿತಂತೆ ಗೌರವದ ಭಾವವೇನೂ ಇರಲಿಲ್ಲ. ಹಾಗೆಯೇ, ರಾಮಮನೋಹರ ಲೋಹಿಯಾ, ಎಸ್.ಪಿ. ಮುಖರ್ಜಿ, ಜೆ.ಬಿ. ಕೃಪಲಾನಿ, ಹಾಗೂ ಎ.ಕೆ. ಗೋಪಾಲನ್ ಅಂತಹ ಆತ್ಮಗೌರವ ಹಾಗೂ ಸಾಮರ್ಥ್ಯ ಇದ್ದ ನಾಯಕರು ವಿರೋಧ ಪಕ್ಷದಲ್ಲಿದ್ದರು.
ನೆಹರು ರೀತಿ ಆತ್ಮಾವಲೋಕನ ಮಾಡಿಕೊಳ್ಳುವ ವ್ಯಕ್ತಿತ್ವ ಇಂದಿರಾಗಾಂಧಿ ಅವರದ್ದಾಗಿರಲಿಲ್ಲ. ತಮ್ಮನ್ನ ಜನ ಆರಾಧಿಸಬೇಕೆಂಬ ವಿಚಾರದಲ್ಲಿ ಅವರಿಗೆ ಯಾವ ದ್ವಂದ್ವವೂ ಇರಲಿಲ್ಲ. ೧೯೬೯ರಿಂದ ೧೯೭೪ರ ಅವಧಿಯಲ್ಲಿ ದೇಶದ ಚೈತನ್ಯವೇ ತಾವು ಎಂಬಂತೆ ಅವರು ಬಿಂಬಿಸಿಕೊಂಡರು. ರಾಜ ಪ್ರಭುತ್ವವನ್ನು ರದ್ದು ಮಾಡಿದ್ದಕ್ಕಾಗಿ, ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿದ್ದಕ್ಕಾಗಿ, ಪಾಕಿಸ್ತಾನದ ವಿರುದ್ಧ ಮಿಲಿಟರಿ ವಿಜಯದ ಸಂದರ್ಭದಲ್ಲಿ ರಾಷ್ಟ್ರವನ್ನು ಮುನ್ನಡೆಸಿದ್ದಕ್ಕಾಗಿ ಪ್ರಜೆಗಳು ತಮ್ಮನ್ನು ಆರಾಧಿಸಬೇಕೆಂಬುದು ಅವರ ಆಗ್ರಹವಾಗಿತ್ತು. ಅನೇಕರು ಅವರನ್ನು ಆರಾಧಿಸಿದ್ದೂ ನಿಜ. ಆ ಕಾಲದಲ್ಲಿ ಇಂದಿರಾ ಭಕ್ತಿ ಎಷ್ಟಿತ್ತೆಂದರೆ, ಎಂ.ಎಫ್.ಹುಸೇನ್ ತರಹದ ಕಲಾವಿದರು ಅವರನ್ನು ದುರ್ಗಿಯಂತೆ ಚಿತ್ರಿಸಿದರು. ಅಸ್ಸಾಮಿನ ಸಾಕಷ್ಟು ಹೆಸರು ಮಾಡಿದ್ದ ಕವಿ ದೇವಕಾಂತ ಬರುವಾ ಅವರಂತೂ ‘ಇಂಡಿಯಾ ಎಂದರೆ ಇಂದಿರಾ, ಇಂದಿರಾ ಎಂದರೆ ಇಂಡಿಯಾ’ ಎಂಬ ಸಾಲುಗಳನ್ನು ಬರೆದರು. ಅಷ್ಟೊಂದೇನೂ ಜನರ ಗಮನಕ್ಕೆ ಬಂದಿರದ ಈ ಪದ್ಯವನ್ನೂ ಅವರು ರಚಿಸಿದ್ದರು:
‘ಇಂದಿರಾ ತೇರಿ ಸುಬಹ್ ಕಿ ಜೈ,
ತೇರೆ ಶಾಮ್ ಕಿ ಜೈ
ತೇರೆ ಕಾಮ್ ಹಿ ಜೈ,
ತೇರೆ ನಾಮ್ ಕಿ ಜೈ’ .
ತೇರೆ ಶಾಮ್ ಕಿ ಜೈ
ತೇರೆ ಕಾಮ್ ಹಿ ಜೈ,
ತೇರೆ ನಾಮ್ ಕಿ ಜೈ’ .
ಇಂದಿರಾಗಾಂಧಿ ಹಾಗೂ ಅವರ ಭಟ್ಟಂಗಿಗಳ ನಡಾವಳಿಗಳು ರಾಜಕೀಯದಲ್ಲಿನ ಭಕ್ತಿ ಮಾರ್ಗದ ಅಪಾಯಗಳಿಗೆ ಮಾದರಿ. ಅಂಬೇಡ್ಕರ್ ಎಚ್ಚರಿಸಿದಂತೆಯೇ ಅದು ‘ವಿನಾಶ ಹಾಗೂ ಕ್ರಮೇಣ ಸರ್ವಾಧಿಕಾರಕ್ಕೆ’ ಕಾರಣವಾಯಿತು. ತಮ್ಮ ವಿರೋಧಿಗಳನ್ನು ಜೈಲಿಗೆ ಕಳುಹಿಸಿದ ಇಂದಿರಾಗಾಂಧಿ ನಂತರ ದೇಶದಲ್ಲಿ ತುರ್ತುಪರಿಸ್ಥಿತಿ ಹೇರುವ ಮೂಲಕ ಅಂಬೇಡ್ಕರ್ ವ್ಯಕ್ತಪಡಿಸಿದ್ದ ಅನುಮಾನ ನಿಜವಾಗಿಸಿದರು.
ಸ್ವತಂತ್ರ ಭಾರತದಲ್ಲಿ ವ್ಯಕ್ತಿ ಪೂಜೆಯ ಆರಾಧನೆಯಲ್ಲಿ ವಿಜೃಂಭಿಸಿದ ಮೊದಲ ರಾಜಕಾರಣಿ ಇಂದಿರಾಗಾಂಧಿ. ವಿಷಾದನೀಯ ಸಂಗತಿ ಎಂದರೆ ಅವರೇ ಕಡೆಯವರೂ ಆಗಲಿಲ್ಲ. ಅಲ್ಲಿಂದಾಚೆಗಿನ ದಶಕಗಳಲ್ಲಿ ಅನೇಕ ರಾಜಕಾರಣಿಗಳನ್ನು ಭಟ್ಟಂಗಿಗಳು ಪೂರ್ಣ ಆರಾಧಿಸುವುದು ಮುಂದುವರಿದೇ ಇದೆ. ಬಾಳ್ ಠಾಕ್ರೆ, ಎಂ.ಜಿ. ರಾಮಚಂದ್ರನ್, ಎನ್.ಟಿ. ರಾಮರಾವ್ ಇವರೆಲ್ಲರೂ ಬೇರೆ ಬೇರೆ ಕಾಲಘಟ್ಟಗಳಲ್ಲಿ ಅತಿಮಾನವರಂತೆ ಮೆರೆದವರೇ.
ಮೃತ ನಾಯಕರ ಕುರಿತಂತೆ ವ್ಯಕ್ತಿಪೂಜೆಯ ಪರಾಕಾಷ್ಠೆಯನ್ನೂ ನಮ್ಮ ದೇಶದಲ್ಲಿ ಕಂಡಿದ್ದೇವೆ. ಮಹಾರಾಷ್ಟ್ರದ ಜನರಿಗೆ ಶಿವಾಜಿ, ಬಂಗಾಳಿಗಳಿಗೆ ಸುಭಾಶ್ಚಂದ್ರ ಬೋಸ್ ಇಂತಹ ಕುರುಡು ಭಕ್ತಿಯ ಪ್ರತೀಕಗಳು. ಒಂದಾದ ಮೇಲೆ ಒಂದರಂತೆ ಇಂದಿರಾ ಹಾಗೂ ರಾಜೀವ್ ಹೆಸರಿನಲ್ಲಿ ಯೋಜನೆಗಳನ್ನು ರೂಪಿಸುತ್ತಾ ಇದೇ ವ್ಯಕ್ತಿಪೂಜೆಯನ್ನೇ ಸೋನಿಯಾ ಗಾಂಧಿ ಪ್ರೋತ್ಸಾಹಿಸಿದರು. ಅಷ್ಟೇ ಅಲ್ಲ, ಇಂದಿರಾ ಹಾಗೂ ರಾಜೀವ್ ಜನ್ಮದಿನ ಅಥವಾ ಪುಣ್ಯತಿಥಿಗಳಂದು ಸಾರ್ವಜನಿಕರ ಹಣದಲ್ಲಿ ಜಾಹೀರಾತು ಫಲಕಗಳನ್ನು ಹಾಕಲು ಮಂತ್ರಿ ಮಹೋದಯರನ್ನು ಅವರು ಬೆಂಬಲಿಸುತ್ತಾ ಬಂದರು. ಹಾಗೆಯೇ ಅಂಬೇಡ್ಕರ್ ಮರಣಾನಂತರ ಅವರನ್ನು ಪೂಜಿಸುವ ದೊಡ್ಡ ವರ್ಗ ಹುಟ್ಟಿಕೊಂಡಿದ್ದೂ ಒಂದು ವ್ಯಂಗ್ಯ.
ಈಗ ನರೇಂದ್ರ ಮೋದಿ, ಅಂತಹ ವ್ಯಕ್ತಿಪೂಜೆಯ ಆರಾಧನೆಗೆ ಒಳಗಾಗಿರುವುದನ್ನು ನೋಡುತ್ತಿದ್ದೇವೆ. ಇಂದಿರಾ ಹಾಗೂ ಅವರ ನಂತರದ ಕಾಂಗ್ರೆಸ್ ಮತ್ತು ಡಿಎಂಕೆ, ಎಸ್‌ಪಿ, ಶಿವಸೇನೆ ಅಥವಾ ಬಿಜೆಡಿ ರೀತಿಯಂತಹ ಪ್ರಾದೇಶಿಕ ಪಕ್ಷಗಳು ಎಂದೂ ಏಕವ್ಯಕ್ತಿ ನಿಯಂತ್ರಣದಲ್ಲಿ ಇರಲಿಲ್ಲ. ಸಾಮೂಹಿಕ ನಾಯಕತ್ವದ ಬಗ್ಗೆ ಬಿಜೆಪಿ ಯಾವಾಗಲೂ ಹೆಮ್ಮೆ ಪಟ್ಟುಕೊಳ್ಳುತ್ತಿತ್ತು. ಬಿಜೆಪಿ ಪ್ರಾಮುಖ್ಯ ಗಳಿಸಿಕೊಂಡಂತಹ ೧೯೮೯ರಿಂದ ೧೯೯೯ರವರೆಗಿನ ಅವಧಿಯಲ್ಲಿ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಈ ಮೂವರು ನಾಯಕರನ್ನೂ ನಿಯಮಿತವಾಗಿ ಬಿಂಬಿಸಲಾಗುತ್ತಿತ್ತು. ಪಕ್ಷದ ಪ್ರಚಾರದಲ್ಲಿ ಮೂವರಿಗೂ ಆ ಅವಧಿಯಲ್ಲಿ ಸಮಪಾಲಿತ್ತು. ಆಮೇಲೆ ಪ್ರಧಾನಿ ಆದ ನಂತರ ವಾಜಪೇಯಿ ಸ್ಥಾನ ತುಸು ಮೇಲೇರಿತು.ಆದರೆ ಅದು ಸ್ವಲ್ಪ ಮಾತ್ರ. ಮೂವರು ಸಮಾನರಲ್ಲಿ ಅವರು ಮೊದಲನೆಯವರು ಅಷ್ಟೆ.
ಇದೆಲ್ಲಾ ಈಗ ಬದಲಾಗಿದೆ. ಈ ಸಲದ, 2014ರ ಲೋಕಸಭಾ ಚುನಾವಣೆ ವೇಳೆ, ಒಬ್ಬ ವ್ಯಕ್ತಿಯ ಇಚ್ಛೆಗೆ ತನ್ನನ್ನೇ ಬಿಜೆಪಿ ಶರಣಾಗಿಸಿಕೊಂಡಿತು. ಮೊದಲು ಅವರನ್ನು ಪಕ್ಷದ ರಕ್ಷಕ ಹಾಗೂ ನಂತರ ರಾಷ್ಟ್ರದ ರಕ್ಷಕ ಎಂಬಂತೆ ಮೋದಿ ಪರ ಪ್ರಚಾರ ಅಲೆ ಸೃಷ್ಟಿಸಲಾಯಿತು. ಬಿಜೆಪಿಯ ಉಳಿದ ನಾಯಕರು ಕೂಡ ತಮ್ಮ ಆಲೋಚನಾ ಸ್ವಾತಂತ್ರ್ಯ ಹಾಗೂ ವಿಮರ್ಶಾ ಕೌಶಲಗಳನ್ನು ಅವರ ಪಾದಚರಣಗಳ ಮೇಲೆ ಹಾಕಿಬಿಟ್ಟರು. ಪಕ್ಷದ ಕಾರ್ಯಕರ್ತರೂ ಅದನ್ನೇ ಅನುಸರಿಸಿದರು. ಈಗ ಉಳಿದ ನಾವೆಲ್ಲರೂ ಅದನ್ನೇ ಅನುಸರಿಸಬೇಕೆಂದು ಕೇಳುತ್ತಿದ್ದಾರೆ.
ಇತ್ತೀಚೆಗೆ ಒಬ್ಬರು ಪತ್ರಿಕಾ ಸಂಪಾದಕರು ಈ ಬೆಳವಣಿಗೆಯನ್ನು ‘ಬುದ್ಧಿಹೀನವಾದ, ಮೋದಿ ಏಕೇಶ್ವರವಾದ’ ಎಂದು ಬರೆದಿದ್ದರು. ದೇವಕಾಂತ ಬರುವಾ ಹಿಂದೆ ಇಂದಿರಾಗಾಂಧಿಯವರನ್ನು ಹೊಗಳಿದಂತೆ ಈಗ ಮೋದಿಯನ್ನು ಕೊಂಡಾಡುತ್ತಿರುವ ಬರಹಗಾರರು, ಪತ್ರಕರ್ತರ ಸಂಖ್ಯೆಯೂ ದೊಡ್ಡದಿದೆ. ಅಂಥವರು ಸರ್ಕಾರವನ್ನು ಮೋದಿ ಶುಚಿಗೊಳಿಸುತ್ತಾರೆ ಎಂದು ವಾಗ್ದಾನ ಮಾಡುತ್ತಿದ್ದಾರೆ. ವಾರ್ಷಿಕ ಶೇ 10ರಷ್ಟು ಆರ್ಥಿಕ ಪ್ರಗತಿ, ಪಾಕಿಸ್ತಾನ ಹಾಗೂ ಚೀನಾಕ್ಕೆ ತಕ್ಕ ಪಾಠ, ಭಾರತವನ್ನು ಸೂಪರ್‌ಪವರ್ ಮಾಡುವುದು ಮೊದಲಾದ ಆಶ್ವಾಸನೆಗಳೂ ಆ ಬರಹಗಳಲ್ಲಿ ಸೇರಿವೆ. ಅಂತರ್ಜಾಲದಲ್ಲಿ ಮೋದಿ ಅವರನ್ನು ಬೆಂಬಲಿಸುವವರಂತೂ ಸೈಬರ್ ಗೂಂಡಾಗಳಂತೆ ಮೋದಿ ವಿರೋಧಿಗಳನ್ನು ಟೀಕಿಸುತ್ತಿದ್ದಾರೆ. ಈ ಬೆಳವಣಿಗೆಗಳನ್ನು ಕಂಡು ಅಂಬೇಡ್ಕರ್ ಅವರು ಆಘಾತಗೊಂಡಿರುತ್ತಿದ್ದರು. ಬಹುಶಃ ನಮ್ಮದೂ ಅದೇ ಸ್ಥಿತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ