ಮಂಗಳವಾರ, ಮೇ 13, 2014

ಜಾತಿಯ ಪೊರೆ ಕಳಚಿ ಶಾಂತಿಯ ಸಸಿ ನೆಟ್ಟೆವು…

ಟಿ ಎಸ್ ಗೊರವ
krupe:avadhi
ಎಂದಿಗಿಂತ ನಿತ್ಯವೂ ಜಾತಿಯ ಗಾಳಿ ರಭಸಗೊಳ್ಳುತ್ತಿರುವುದರ ಬಗ್ಗೆ ನಾವು ಗೆಳೆಯರೆಲ್ಲ ಬಹಳ ಸಲ ಮಾತಾಡಿಕೊಳ್ಳುತ್ತಿದ್ದೆವು. ತಳಮಳಗೊಂಡು ನೊಂದುಕೊಳ್ಳುತ್ತಿದ್ದೆವು. ಕ್ರೋಧಗೊಂಡು ಹಿಡಿಶಾಪ ಹಾಕುತ್ತಿದ್ದೆವು. ಜಾತಿ ತಣ್ಣಗೆ ಕೊರೆಯುವ ಅಲಗು ಎಂದು ಬೆಚ್ಚಿ ಬೀಳುತ್ತಿದ್ದೆವು. ನನ್ನ ಬಾಲ್ಯಕಾಲದಲ್ಲಿ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ನಮ್ಮೂರು ರಾಜೂರ ಜಾತ್ರೆ ಎಂದರೆ ಎಷ್ಟೊಂದು ಸಂಭ್ರಮಗೊಳ್ಳುತ್ತಿದ್ದೆವು. ಅಲ್ಲಿ ಟೆಂಟು ಹಾಕುತ್ತಿದ್ದ ಜೋಗ್ಯಾರ ಅಂಗಡಿಯಲ್ಲಿ ಬಣ್ಣದ ಬಲೂನು, ಪೀಪಿ, ಪ್ಲಾಸ್ಟೀಕಿನ ಲಾರಿ ಖರೀದಿ ಮಾಡಿ ಆಟವಾಡಲು ತವಕಗೊಳ್ಳುತ್ತಿದ್ದೆವು. ನಾನು ಓದಲು, ನೌಕರಿ ಮಾಡಲು ಊರು ಬಿಟ್ಟು ಹತ್ತಿರ ಹತ್ತಿರವೆಂದರೂ ಹತ್ತು ವರ್ಷವಾಯಿತು. ಈಗ ಊರು ಜಾತಿಯ ಗಲೀಜಿನಲ್ಲಿ ತನ್ನ ಮೈ ಹೊರಳಾಡಿಸಿ ಗಬ್ಬೆದ್ದು ಹೋಗಿದೆ. ಊರ ಮಂದಿ ಎಲ್ಲಾ ಒಂದಾಗಿ ಸಂಭ್ರಮದಿಂದ ಪಾಲ್ಗೊಳ್ಳುತ್ತಿದ್ದ ಶರಣಬಸಪ್ಪನ ಜಾತ್ರೆಗೆ ಈಗ ಲಿಂಗಾಯತರು ವಾರಸುದಾರರು. ಇದಕ್ಕೆ ಬಂಡೆದ್ದು ಕುರುಬರು ಬೀರಬಲ್ಲನ ಪುರಾಣ ಹಚ್ಚಿ ಅವರೂ ಪ್ರತ್ಯೇಕ ಬೀರಬಲ್ಲನ ಜಾತ್ರೆ ಮಾಡುತ್ತಿದ್ದಾರೆ. ಸಕಲಜಾತಿಯ ಜನ ಒಂದಾಗಿ ಆಚರಿಸುತ್ತಿದ್ದ ಮೋಹರಂ ಈಗ ಮುಸ್ಲೀಂರಿಗಷ್ಟೇ ಸೀಮಿತ. ಇದನ್ನೆಲ್ಲ ಕಂಡು ಮನಸ್ಸು ಕಲ್ಲವಿಲಗೊಂಡಿದೆ.
ನನಗೆ ಊರ ತುಂಬಾ ಗೆಳೆಯರು. ಗೆಳೆತನಕ್ಕೆ ಜಾತಿಯ ಹಂಗಿರಲಿಲ್ಲ. ಲಿಂಗಾಯತರು, ಮುಸ್ಲೀಂರು, ಕುರುಬರು, ತಳವಾರ, ಸುಣಗಾರ, ಗೌಡರು, ಶೆಟ್ಟರು ಎಲ್ಲ ಜಾತಿಯೊಳಗೂ ಮಾಮ, ಕಾಕಾ, ದೊಡ್ಡಪ್ಪ, ಅಣ್ಣ ಎಲ್ಲರೆಲ್ಲರೂ ಇದ್ದರು. ಸರ್ವಜನಾಂಗದ ಶಾಂತಿಯ ತೋಟದಂತಿತ್ತು ನಮ್ಮೂರು. ಬೇರೆ ಊರಿನವರು ಯಾರಾದರೂ ನಮ್ಮನ್ನು ನೋಡಿದರೆ ಎಲ್ಲ ಒಂದೇ ಮನೆಯವರು ಎಂದು ಭಾವಿಸಬೇಕು. ಹಾಗಿತ್ತು ನಮ್ಮೂರು. ಇಂತಹ ನೆಮ್ಮದಿಯ ಊರಿಗೆ ಏನಾಗಿದೆ ಈಗ ? ಮೊಸರೊಳಗೆ ಕಲ್ಲೆಸೆದು ಮೋಜು ನೋಡುತಿರುವವರು ಯಾರು? ಎಂದೆಲ್ಲ ನಾವು ಕೆಲವರು ಗೆಳೆಯರು ಸೇರಿದಾಗ ಕಳವಳಗೊಳ್ಳುವುದು ನಡದೇ ಇತ್ತು. ಇದಕ್ಕೆಲ್ಲ ಅಯಾ ಜಾತಿಯೊಳಗಿನ ಕೆಲವರು ತಮ್ಮ ವೈಯಕ್ತಿಕ ಬೇಳೆ ಬೇಯಿಸಿಕೊಳ್ಳಲು ಆಯಾ ಸಮುದಾಯದ ಮುಗ್ಧ ಮಂದಿಯ ತಲೆಯೊಳಗೆ ಜಾತಿಯ ಕೀಟ ಬಿಟ್ಟಿದ್ದು, ರಾಜಕೀಯ ಪುಂಡರ ಮೇಲಾಟ ಹೀಗೆ ಒಂದಕ್ಕೊಂದು ಸೇರಿ ಕಲಸುಮೇಲಾಗಿ ಊರ ನೆಮ್ಮದಿಗೆ ಕೊಳ್ಳಿ ಇಟ್ಟದ್ದು ಆಕಾಶದಷ್ಟೇ ಸತ್ಯ.
ಹೀಗೆ ಊರು ದಿನದಿಂದ ದಿನಕ್ಕೆ ಜಾತಿಯ ತೇಪೆ ಅಂಗಿ ತೊಟ್ಟು ಅಂದಗೆಡುತ್ತಿರುವುದು ನನ್ನಂತವರೊಳಗೆ ಅಸಮಾಧಾನದ ಅಸಂಖ್ಯಾತ ಮೊಟ್ಟೆ ಇಡತೊಡಗಿತ್ತು. ನನ್ನಂತವರು ಅದ್ಯಾವ ಜಾತಿಗೂ ಸೇರದೆ ಅಂತರ್ಪಿಶಾಚಿ ತರಹ ಆಗಿದ್ದೆವು. ಆದರೆ, ಮೊನ್ನೆ ಊರಿಗೆ ಹೋದಾಗ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಹಿರಿಯ ಗೆಳೆಯ ಕಾಲಕಾಲೇಶ್ವರ ಹಾದಿಮನಿ ಹಾದಿಯಲಿ ಎದುರು ಸಿಕ್ಕು ತಮ್ಮ ಮನೆಯಲ್ಲಿ ಬಸವ, ಬುದ್ಧ, ಅಂಬೇಡ್ಕರ್ ಜಯಂತಿ ಆಚರಿಸಿ ದಲಿತರನ್ನು ಮನೆಗೆ ಹೋಗಿಸಿಕೊಳ್ಳುವುದಾಗಿ ಹೇಳಿ ಬೆಚ್ಚಿಸಿದರು. ಅಪ್ಪಟ ಸಾಂಪ್ರದಾಯಿಕ ಹಳ್ಳಿಯೊಳಗೆ, ಅದೂ ಸಂಪ್ರದಾಯಸ್ಥ ಲಿಂಗಾಯತರ ಮನೆಯಲ್ಲಿ ಮಾದಿಗರನ್ನು ಸೇರಿಸಿಕೊಳ್ಳುವುದೆಂದರೆ ಆಗದ ಹೋಗದ ಮಾತು. ಬಹಳ ಮಂದಿ ಪ್ರಗತಿಪರರು ಅನಿಸಿಕೊಂಡವರಿಗೆ ಇವೆಲ್ಲಾ ಮಾತಾಡಲು, ಜಾತ್ಯತೀತೆಯ ಬಗ್ಗೆ ಮೇಜು ಕುಟ್ಟಿ ಭಾಷಣ ಮಾಡಲಷ್ಟೇ ಸೊಗಸು. ತಮ್ಮ ಮನೆಯ ಹೊಸಿಲಾಚೆ ಪ್ರಗತಿಪರರು. ಒಳಗೆ ಮಾತ್ರ ಅದೇ ಸನಾತನ ತುಪ್ಪದ ದಿವಿಗೆ ಉರಿಯುತ್ತದೆ.
ನನಗೆ ಹಿಗ್ಗೆನಿಸಿತು. ನನ್ನ ಊರಿನ ಮಟ್ಟಿಗೆ ಇದೊಂದು ದೊಡ್ಡ ಕ್ರಾಂತಿಯೇ ಸರಿ. ಗುಡಿಯಾಚೆ, ಮನೆ ಹೊಸಿಲಾಚೆ ನಿಲ್ಲುವವರನ್ನು, ಚಹಾದಂಗಡಿಯಲ್ಲಿ ಅವರಿಗೆಂದೇ ಮೀಸಲಿಟ್ಟ ಲೋಟದಲ್ಲಿ ಚಹಾ ಕುಡಿಯುವವರನ್ನು, ಎದುರಿಗೆ ಸಿಕ್ಕಾಗ ಅಷ್ಟು ದೂರ ನಿಂತು ಆರಾಮ ಸಾವಕಾರ ಎನ್ನುವವರನ್ನು ಮನೆಯೊಳಗೆ ಹೋಗಿಸಿಕೊಂಡು ನಮ್ಮವರೇ ಆಗಿಸಿಕೊಳ್ಳುವುದೆಂದರೆ ನಿಜಕ್ಕೂ ಕ್ರಾಂತಿ.
ಕಾಲಕಾಲೇಶ್ವರ ಅವರ ಮನೆಯೊಳಗೆ ಎಲ್ಲರಿಗೂ ಹೇಳಿ ಅವರ ಅಪ್ಪನ ಸಣ್ಣ ವಿರೋಧವನ್ನೂ ಲೆಕ್ಕಿಸದೆ ದಲಿತ ಗೆಳೆಯರನ್ನು ಮನೆಯೊಳಗೆ ಹೋಗಿಸಿಕೊಳ್ಳುವ ಸಕಲ ಸಿದ್ಧತೆ ಮಾಡಿದರು. ಇಳಿಸಂಜೆ ಹೊತ್ತು. ಅವರ ಮನೆ ಎದುರಿಗಿನ ಹನಮಂತ ದೇವರ ಗುಡಿಯ ಹತ್ತ್ತಿರದ ತೆಂಗಿನ ಮರದಲ್ಲಿ ಹಕ್ಕಿಗಳ ಸಂತಸದ ಕಲರವ ಕೇಳೆತೊಡಗಿತ್ತು. ಗಜೇಂದ್ರಗಡದಿಂದ ಗಣಿತ ಶಿಕ್ಷಕರು, ವಿಚಾರವಾದಿಗಳು ಅದ ಬಿ.ಎ.ಕೆಂಚರೆಡ್ಡಿ ಸರ್, ಗೆಳೆಯ ಎಫ್.ಡಿ.ಕಟ್ಟಿಮನಿ, ಕಾಲಕಾಲೇಶ್ವರ ಅವರ ಅಣ್ಣಂದಿರ ಮಕ್ಕಳು, ಅತ್ತಿಗೆಯರು ಹೀಗೆ ಹತ್ತಾರು ಜನ ಜಮೆಯಾದೆವು.
ನಿಜಕ್ಕೂ ಅಲ್ಲಿ ಮೇಲ್ನೋಟಕ್ಕೆ ಸಂಭ್ರಮ ಎದ್ದು ಕಾಣುತಿದ್ದರೂ ಎಲ್ಲರ ಆಳದೊಳಗೆ ಏನಾಗುವುದೋ ಎಂಬ ಕಳವಳ ಸುಳಿದಿರುಗತೊಡಗಿತ್ತು. ಕಾಲಕಾಲೇಶ್ವರರಂತೂ ಹುಂಬು ಧೈರ್ಯ ತಳೆದು ಆದದ್ದಾಗಲಿ ಎಂದು ಕ್ರಾಂತಿಗೆ ಮುನ್ನುಡಿ ಬರೆದು ಬಿಟ್ಟಿದ್ದರು. ನಾವೆಲ್ಲ ಗೆಳೆಯರು, ಅವರ ಮನೆಯ ಹೆಣ್ಣುಮಕ್ಕಳು ಜಮೆಯಾಗಿ ಬುದ್ಧ, ಬಸವ, ಅಂಬೇಡ್ಕರ್ ಜಯಂತಿಯಾಚರಣೆಗೆ ಸಿದ್ಧತೆಗೊಳ್ಳುತ್ತಿರುವಾಗಲೇ ಆ ಮನೆಯ ಹಿರಿಯ, ಕಾಲಕಾಲೇಶ್ವರ ಅವರ ಅಪ್ಪ ಅಂದಾನಪ್ಪನವರು ಒಳಬಂದರು. ಕಾಲಕಾಲೇಶ್ವರರ ಮಾತಿಗೆ ಬೇಡವೂ ಅನ್ನದೆ ಒಪ್ಪಿಕೊಳ್ಳಲೂ ಆಗದೆ ಅರೆಮನಸ್ಸಿನಿಂದ ತಲೆಯಾಡಿಸಿದ್ದರು. ಹೀಗೆ ತಲೆಯಾಡಿಸಿದ್ದು ಒಪ್ಪಿಗೆಯೋ ಬೇಡವೆಂಬ ವಿರೋಧವೋ ಒಂದೂ ತಿಳಿಯದೆ ಅವರ ಹಾಜರಿ ಅದೇನೇನಾಗಬಹುದು ಎಂಬುದನ್ನು ಕಲ್ಪಿಸಿಕೊಳ್ಳಲೂ ಆಗದೇ ಮನಸ್ಸುಗಳು ಹಗ್ಗಜಗ್ಗಾಟದಲ್ಲಿ ತೊಡಗಿದವು. ಅವರು ನಮ್ಮನ್ನೆಲ್ಲ ಕಂಡು ಏನೂ ಅನ್ನಲಾಗದೆ ನಗು ಮೊಗದಿಂದಲೇ ನನಗೆ ಏನು ಪತ್ರಕರ್ತರು ಯಾವಾಗ ಬಂದ್ರೀ. ಆರಾಮ..’ ಎಂದು ಕುಶಲೋಪರಿ ವಿಚಾರಿಸಿದಾಗ ಮನಸ್ಸು ಹೂ ಹಗುರವಾಗಿತ್ತು.
ಹೀಗಿರುವಾಗಲೇ ಹತ್ತಾರು ಜನ ದಲಿತರು ಬಂದರು. ಅದರಲ್ಲಿ ಒಂದಿಬ್ಬರು ದಲಿತ ಹುಡುಗಿಯರು ಇದ್ದರು. ಅವರು ಒಳಗೆ ಬರಬೇಕೋ ಬೇಡವೋ ಎಂದು ಗೊಂದಲದಲ್ಲಿ ಇರುವಾಗಲೇ ನಾವೆಲ್ಲ ಅಕ್ಕರೆಯಿಂದ ಅವರನ್ನು ಬರಮಾಡಿಕೊಂಡೆವು. ಅಲ್ಲಿದ್ದ ಹೆಣ್ಣುಮಕ್ಕಳಂತೂ ತಮ್ಮದೆ ಅಣ್ಣ ತಮ್ಮಂದಿರಂತೆ ಅವರ ಮೇಲೆ ಪ್ರೀತಿ ತೋರಿದ್ದು ನನ್ನನ್ನು ಭಾವುಕಗೊಳಿಸಿತು. ಕಣ್ಣೊಳಗೆ ಸಂತಸದ ನೀರು ತೆಳ್ಳಗಾಡಿತು. ನಡುಮನೆಯಲ್ಲಿ ಇಟ್ಟಿದ್ದ ಬಸವ, ಅಂಬೇಡ್ಕರ್, ಬುದ್ಧನ ಫೋಟೊಗಳಿಗೆ ಎಲ್ಲರೂ ಹೂ ಹಾಕಿದೆವು. ಕಾಲಕಾಲೇಶ್ವರ, ಬಿ.ಎ.ಕೆಂಚರೆಡ್ಡಿ ಸರ್, ನಾನು, ಎಫ್.ಡಿ.ಕಟ್ಟಿಮನಿ ಹೀಗೆ ಒಬ್ಬೊಬ್ಬರಾಗಿ ಬುದ್ಧ, ಬಸವ, ಅಂಬೇಡ್ಕರ್ರಂತಹ ದಾರ್ಶನಿಕರ ಸಂಗತಿಗಳ ಜೊತೆಗೆ ತಳಕು ಹಾಕಿದ ವಿಚಾರಗಳನ್ನು ಹೇಳುತ್ತಲೇ ನಮ್ಮೆಲ್ಲರ ಮನೆಯೊಳಗೆ ನಮ್ಮದೇ ಒಡಹುಟ್ಟಿದವರಂತಿರುವ ದಲಿತರನ್ನು ನಮ್ಮ ನಮ್ಮ ಮನೆಯೊಳಗೆ ಸೇರಿಸಿಕೊಂಡು ಅಂತಃಕರಣ ಮೆರೆಯುವ ಮಾತಾಡಿದೆವು.
ಕಾಲಕಾಲೇಶ್ವರರ ಅಣ್ಣಂದಿರ ಮಕ್ಕಳಾದ, ಇನ್ನೂ ಎಸ್ಸೆಸ್ಸೆಲ್ಸಿ, ಪಿಯುಸಿ ಓದುತ್ತಿರುವ ಜ್ಯೋತಿ, ಅಶ್ವಿನಿ, ಕವಿತಾ ಹಾಗೂ ವೀಣಾ ಹಳ್ಳದ, ಅನಿತಾ ಹಾದಿಮನಿ ಇವರ್ಯಾರೂ ಕಾರ್ಲಮಾರ್ಕ್ಸ್, ಲೆನಿನ್, ಚೆಗೆವಾರ ಅವರನ್ನು ಓದಿಕೊಂಡವರಲ್ಲ. ಆದರೆ, ಅವರು ಜಾತಿಯ ಪೊರೆ ಕಳಚಿಕೊಂಡು ರವಿ ಹಲಗಿ, ಲೋಹಿತ, ಈರಪ್ಪ ಮಾದರ ಹೀಗೆ ಮೊದಲಾದ ದಲಿತ ಗೆಳೆಯರನ್ನು ಉದ್ದೇಶಿಸಿ ನೀವು ನಮ್ಮ ಅಣ್ಣಂದಿರು ಎಂದು ಅಕ್ಕರೆಯ ಮಾತುಗಳ ಮಳೆ ಸುರಿಸಿದರು. ಮನೆಯ ಹಿರಿಯ ಅಂದಾನಪ್ಪನವರು ಮಕ್ಕಳ, ಮೊಮ್ಮಕ್ಕಳ, ಸೊಸೆಯಂದಿರ ಹಾಗೂ ನಮ್ಮೆಲ್ಲ ಮಾತುಗಳನ್ನು ಕೇಳಿ ದಲಿತ ಗೆಳೆಯರಿಗೆ ಪ್ರೀತಿಯ ಮಾತಾಡಿದರು. ದಲಿತ ಗೆಳೆಯರಂತೂ ನಂಬಲಸಾಧ್ಯವಾದ ಕನಸು ಕಂಡವರಂತೆ ಭಾವುಕಗೊಂಡಿದ್ದರು. ನಾವೆಲ್ಲ ಒಂದೇ ಮನೆಯಲ್ಲಿ ಹುಟ್ಟಿ ಬೆಳೆದವರಂತೆ ಅವಲಕ್ಕಿ ತಿಂದು, ಚಾ ಕುಡಿದು ಮುಂದಿನ ದಿನಗಳಲ್ಲಿ ಎಲ್ಲರ ಮನೆಯೊಳಗೂ ದಲಿತರನ್ನು ಸೇರಿಸುವ ಕನಸಿನೊಂದಿಗೆ ಒಬ್ಬರಿಗೊಬ್ಬರು ಪ್ರೀತಿಯಿಂದ ಬೀಳ್ಕೊಟ್ಟೆವು. ಬಸವ, ಅಂಬೇಡ್ಕರ್, ಬುದ್ಧ, ಗಾಂಧಿ, ಲಂಕೇಶ, ಕುವೆಂಪು… ಮೊದಲಾದವೆರೆಲ್ಲ ಇದ್ದಿದ್ದರೆ ಅದೆಷ್ಟು ಖುಷಿಯಾಗುತ್ತಿದ್ದರೋ. ಮನಸು ಒಡೆಯುವ ಮಂದಿಗೆ ಧಿಕ್ಕಾರವಿರಲಿ. ನಮ್ಮೂರಲ್ಲಂತೂ ಕ್ರಾಂತಿಯ ಗಿಡ ನೆಟ್ಟಿದ್ದೇವೆ. ಇನ್ನೇನಿದ್ದರೂ ಅದಕ್ಕೆ ನಿತ್ಯ ನೀರು ಹಾಕಿ ಬೆಳೆಸುವುದೊಂದೇ ಬಾಕಿ. ನೀವೂ ಗಿಡ ನೆಡಿ. ನಿತ್ಯ ನೀರು ಹಾಕಿ. ಈ ಜೀವ ಮುಗಿಯುವುದರೊಳಗೆ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಕುಳಿತು ಬೆಳದಿಂಗಳ ಊಟ ಮಾಡೋಣ.

ಕಾಮೆಂಟ್‌ಗಳಿಲ್ಲ: