ಸೋಮವಾರ, ಮೇ 12, 2014

ಮೈ ಮನಗಳ ಸತ್ಯದ ಸುಳಿಯಲ್ಲಿ

 ಸೌಜನ್ಯ: ಪ್ರಜಾವಾಣಿ
ಗೋವಾ ಪ್ರದೇಶದಲ್ಲಿ ವೇಶ್ಯಾವಾಟಿಕೆಯೊಂದರಲ್ಲಿ ಸಿಕ್ಕ 16-17 ವಯಸ್ಸಿನ ಹುಡುಗಿಯೊಬ್ಬಳನ್ನು ಪತ್ರಕರ್ತೆಯೊಬ್ಬಳು ಪಕ್ಕದಲ್ಲಿ ಕೂರಿಸಿಕೊಂಡು ಮಾತನಾಡುತ್ತಾ ಹೋದಳು. 12ರ ವಯಸ್ಸಿಗೇ ಅಲ್ಲಿಗೆ ಬಂದ ಹುಡುಗಿ ಅವಳು. ದೊಡ್ಡವಳಾದ ಮರುವಾರದಿಂದಲೇ ಅವಳ ಮಾರಾಟ ಆರಂಭವಾಯಿತು. ದಿನಕ್ಕೆ ಕೊನೇಪಕ್ಷ 10-12 ಜನ ಅವಳನ್ನು ಅನುಭವಿಸುತ್ತಾರೆ. ‘ಕಷ್ಟವಾಗೋಲ್ವೆ’ ಅಂದರೆ, ‘ಇಲ್ಲಿರುವ ಎಲ್ಲರದೂ ಅದೇ ಸ್ಥಿತಿ. ಏನು ಮಾಡೋದು’ ಅಂದಳು.

ಪ್ರತಿಯೊಬ್ಬರ ಭೇಟಿಯ ನಂತರವೂ ಮಾಲಕಿ ಅವಳನ್ನು ಪೂರ್ತಿ ಜಡ್ತಿ ಮಾಡಿ ನೋಡುತ್ತಾಳೆ. ಅವರೇನಾದರೂ ಇವಳಿಗೆ ಕೊಸರಿನ ಸಂಭಾವನೆ ಕೊಟ್ಟಿದ್ದಾರೋ ಅಂತ. ಅವರು ಕೊಟ್ಟಿರಬಹುದಾದ ಒಂದೋ ಮೂರೋ ರೂಪಾಯಿಗಳು ಮಾಲಕಿಯ ಸಂಚಿ ಸೇರುತ್ತವೆ. ‘ತಪ್ಪಿಸಿಕೊಂಡು ಹೋಗುವ ಪ್ರಯತ್ನ ಮಾಡಲಿಲ್ಲವೆ ನೀನು’ ಅಂತ ಕೇಳಿದ ಪ್ರಶ್ನೆಗೆ ಹುಡುಗಿ, ‘ಮೊದಮೊದಲು ತುಂಬಾ ಅನಿಸ್ತಿತ್ತು. ಆಮೇಲಾಮೇಲೆ ನಾನು ಇಂಥ ಕೆಲಸ ಮಾಡುವವಳು ಅಂತ ಗೊತ್ತಾದ ಮೇಲೆ ನನ್ನನ್ನು ಯಾರು ಒಪ್ಪಿಕೋತಾರೆ ಅನಿಸಿ ಸುಮ್ಮಗಾದೆ. ಪ್ರತಿ ತಿಂಗಳೂ ಮನೆಗೆ ಒಂದಷ್ಟು ದುಡ್ಡು ಕಳಿಸ್ತೀನಿ. ಏನು ಕೆಲಸ ಅಂದರೆ. ಇಲ್ಲೆಲ್ಲೋ ಮನೆ ಕೆಲಸ ಮಾಡ್ತಿದೀನಿ ಅಂತ ಹೇಳ್ತಾನೇ ಬಂದಿದೀನಿ’ ಅಂದಳು. ನವರಸಗಳಲ್ಲಿ ಒಂದಾದ ಕರುಣಾರಸವನ್ನು ಉದ್ದೀಪಿಸಲಿಕ್ಕೆ ಈ ಪ್ರಸಂಗವನ್ನು ಹೇಳುತ್ತಿರುವುದಲ್ಲ. ಹೆಣ್ಣನ್ನ ಬದಲಾದ ದೃಷ್ಟಿಯಿಂದ ನೋಡುವುದು ಎಂದರೆ ಏನು ಎನ್ನುವ ಪ್ರಶ್ನೆಯನ್ನು ಸ್ತ್ರೀವಾದಿಗಳೂ ಅದನ್ನು ವಿರೋಧಿಸುವವರೂ ಒಟ್ಟಿಗೇ ಎದುರಿಸುತ್ತೇವಲ್ಲ, ಅದಕ್ಕೆ ಇಲ್ಲಿ ಏನಾದರೂ ಸುಳಿವು ಸಿಗಬಹುದೋ ಎಂದು ಹುಡುಕುತ್ತಿದ್ದೇನೆ.

ತೀರಾ ಕ್ಷುದ್ರವಾಗಿ ಕಾಣಿಸುವ, ದಿನನಿತ್ಯದ ನೂರು ಪ್ರಸಂಗಗಳಲ್ಲಿಯೂ ಇದನ್ನು ನಾವು ಎದುರಿಸುತ್ತಲೇ ಇರುತ್ತೇವೆ. ಸುಮ್ಮನೆ ಒಮ್ಮೆ ನಮ್ಮ ಬೈಗುಳಗಳ ಪಟ್ಟಿ ಮಾಡಿ ನೋಡಿ. ನೂರಕ್ಕೆ ತೊಂಬತ್ತೊಂಬತ್ತರಷ್ಟು ಬೈಗುಳಗಳು ಸ್ತ್ರೀಮೂಲದವು. ಭೈರಪ್ಪನವರ ‘ಗೃಹಭಂಗ ’ ಓದಿ, ಇದೇನು ಬೈಗುಳಗಳ ರೆಫರೆನ್ಸ್ ಬುಕ್ ಥರ ಇದೆ ಅಂದುಕೊಂಡದ್ದು ನೆನಪಾಗುತ್ತಿದೆ. ಆಗ ನಾನಿನ್ನೂ ಹೈಸ್ಕೂಲಿನಲ್ಲಿ ಓದುತ್ತಿದ್ದೆ. ನನ್ನ ಗೆಳತಿ ರಿಹಾನ ಹತ್ತಿರ ಇದನ್ನ ಹೇಳಿಕೊಂಡಾಗ ಅವಳು ‘ನಮ್ಮ ಕುರಾನ್‌ನಲ್ಲಿ ಹೇಳ್ತಾರೆ, ನಾವು ಬೇರೆ ಯಾರಿಗಾದರೂ ಬೈದರೆ ಅದು ಅವರನ್ನಲ್ಲ, ಬೈದೋರನ್ನೇ ತಟ್ಟೋದಂತೆ’ ಅಂತ. ಆಗ ಮುಗ್ಧ ಸೇಡಿನ ಸಂತೋಷವಾಗಿದ್ದು ಈಗ, ಪಿತೃ ಸಂಸ್ಕೃತಿಯನ್ನು ಎದುರಿಸುವ ಒಂದು ಕಾರ್ಯ ಮಾದರಿಯಾಗಿಯೇ ಕಾಣಿಸುತ್ತಿದೆ!!

ನಮ್ಮ ಆರಂಭದ ಕಾವ್ಯಗಳಲ್ಲಿ ಅಷ್ಟಾದಶ ವರ್ಣನೆಯ ಸಂಪ್ರದಾಯವೊಂದು ಇತ್ತಲ್ಲ. ಹದಿನೆಂಟು ವರ್ಣನೆಗಳಿದ್ದರೆ ಮಾತ್ರ ಆ ಕಾವ್ಯ ಸಂಪೂರ್ಣ ಎನ್ನುವ ಕಾವ್ಯಚೌಕಟ್ಟಿನಲ್ಲಿ ವೇಶ್ಯಾವಾಟಿಕೆಯ ವರ್ಣನೆಯೂ ಒಂದು. ಯಾಕಿದ್ದೀತು ಇದು? ಸಾಮಾಜಿಕ ವಾಸ್ತವವೊಂದನ್ನು ಕಾವ್ಯ ಸಾದರಪಡಿಸಲಿ ಎನ್ನುವುದೆ? ಹೆಣ್ಣಿನ ದೇಹಸಂಪತ್ತಿನ ಭರಪೂರ ವರ್ಣನೆಗೆ ಹೇಳಿಮಾಡಿಸಿದ ಅವಕಾಶ ಸಿಗುತ್ತದೆ ಎನ್ನುವುದೆ? ತರಗತಿಯಲ್ಲೊಮ್ಮೆ ಪುರುಷವಾಚಕಗಳು ಸ್ತ್ರೀವಾಚಕಗಳ ಬಗ್ಗೆ ಮಾತನಾಡುತ್ತಿದ್ದಾಗ ವಿದ್ಯಾರ್ಥಿನಿಯರಿಗೆ ಪುರುಷವಾಚಕಗಳಿಲ್ಲದ ಸ್ತ್ರೀವಾಚಕಗಳನ್ನು ಪಟ್ಟಿ ಮಾಡಲು ಹೇಳಿದೆ. ಬಹುತೇಕ ವಿದ್ಯಾರ್ಥಿನಿಯರಲ್ಲಿ ಸಾಮಾನ್ಯವಾಗಿ ಇದ್ದ ಎರಡು ಪದಗಳೆಂದರೆ ‘ವೇಶ್ಯೆ’ ಮತ್ತು ‘ಪತಿವ್ರತೆ’. ನಮ್ಮ ವಚನಕಾರ್ತಿ ಸೂಳೆ ಸಂಕವ್ವೆ ಅವಳ ಅಂಕಿತನಾಮವನ್ನು ನಿರ್ಲಜ್ಜೇಶ್ವರ ಅಂತ ಇಟ್ಟುಕೊಂಡಿರುವುದು ಒಂದು ರೂಪಕವಾಗಿಯೇ ಕಾಣಿಸುತ್ತದೆ. ಸಮುದಾಯ ತನ್ನ ಆಸೆ, ಅಧಿಕಾರ ಎಲ್ಲವನ್ನೂ ಬಳಸಿ ಅವಳೊಂದು ‘ಮಧು ಭಾಂಡ’ವೋ ಎನ್ನುವಂತೆ ತನ್ನ ವಸ್ತು ವಿಶೇಷಗಳಲ್ಲಿ ಒಂದಾಗಿಸಿಕೊಳ್ಳುವುದಕ್ಕೆ ವ್ಯವಸ್ಥೆಯೊಂದನ್ನು ಕಟ್ಟಿಕೊಂಡಿರುವುದರ ನಿರ್ಲಜ್ಜೆಯನ್ನು ಈ ಅಂಕಿತ ಅದ್ಭುತವಾಗಿ ಧ್ವನಿಸುತ್ತದೆ.
 (ಇದಕ್ಕೆ ಗಂಡು ಹೆಣ್ಣಿನ ಸಂಬಂಧಗಳ ನಿರ್ಲಜ್ಜೆಯೂ ಸೇರಿದಂತೆ ಇತರ ಅರ್ಥಗಳಿವೆ ಎನ್ನುವುದು ನಿಜವಾದರೂ ಅದರ ಆತ್ಯಂತಿಕ  ಧ್ವನಿಯಾಗಿ ಪಿತೃ ಸಂಸ್ಕೃತಿಯ ನಿರ್ಲಜ್ಜೆಯೇ ಕಾಣಿಸುತ್ತದೆ ಎನ್ನುವುದೂ ಅಷ್ಟೇ ನಿಜ).


ಜಗತ್ತನ್ನು ಎಷ್ಟುಬಾರಿ ಪ್ರದಕ್ಷಿಣೆ ಮಾಡಿದರೂ ಇದೇ ದೃಶ್ಯ, ಇದೇ ಪರಮ ವಾಸ್ತವ. ಈ ದುರ್ಭರ ವಾಸ್ತವದಲ್ಲಿ ಅಪರೂಪಕ್ಕೊಮ್ಮೆ , ಅಪವಾದಕ್ಕೊಮ್ಮೆ ಎನ್ನುವಂತೆ ಅವಳನ್ನು ದೇಹಸತ್ಯದಾಚೆಗಿನ ಭಾವಸತ್ಯದಲ್ಲಿ ಗುರುತಿಸುವ ಪ್ರಯತ್ನಗಳು ನಡೆದಿವೆ. ಶಿವರಾಮ ಕಾರಂತರ ‘ಮೈಮನಗಳ ಸುಳಿಯಲ್ಲಿ’ ಅಂಥ ಅಪರೂಪದ ಪ್ರಯತ್ನ. ಶಿವರಾಮ ಕಾರಂತರ ಬಗೆಗೆ ನಾವು ಗಮನಿಸಲೇ ಬೇಕಾದ ಸಂಗತಿಯೊಂದಿದೆ. ಪ್ರಜ್ಞಾಪೂರ್ವಕವಾಗಿ ಹೆಣ್ಣನ್ನು ಪುರುಷ ಸತ್ಯಗಳ ಜೊತೆಯಿಟ್ಟು ನೋಡುವ, ಆ ಪುರುಷ ಸತ್ಯಗಳು ಹೆಣ್ಣಿನ ಮಟ್ಟಿಗೂ ನಿಜವಾಗಿರುವ ಪ್ರಾಕೃತಿಕ ಸತ್ಯವೊಂದನ್ನು ಕಾರಂತರು ತಮ್ಮ ಹಲವು ಕೃತಿಗಳಲ್ಲಿ ಕಾಣಿಸುತ್ತಾರೆ. ದೇಹವೆಂಬುದು ಪುರುಷನಿಗೆ ಸತ್ಯವಾಗುವ ನಿತ್ಯವಾಗುವ ಬಗೆಯು ಹೆಣ್ಣಿಗೂ ಅಷ್ಟೇ ನಿಜ ಎನ್ನುವುದನ್ನು ಜೈವಿಕ, ವೈಜ್ಞಾನಿಕ ಮತ್ತು ಬೌದ್ಧಿಕ ಎಂದು ಕರೆಯಬಹುದಾದ ಎಲ್ಲ ನೆಲೆಗಳಲ್ಲಿಯೂ ಕಾರಂತರು ನೋಡುವ ಪ್ರಯತ್ನ ಮಾಡುತ್ತಾರೆ.

ಈ ದೃಷ್ಟಿಯಿಂದ ಕಾರಂತರದ್ದು ಸೋದ್ದಿಶ್ಯ ಬರವಣಿಗೆ ಎನ್ನುವುದು  ನಿಜ. ಮೂಲತಃ ಕಾರಂತರು ಲೇಖಕನ ಉತ್ತರದಾಯಿತ್ವವನ್ನು ಒಪ್ಪಿದ ಲೇಖಕರು. ಸಮುದಾಯವನ್ನು ಕುರಿತಂತೆ ಲೇಖಕರಿಗೆ ಸಾಮಾಜಿಕ ಮತ್ತು ನೈತಿಕ ಉತ್ತರದಾಯಿತ್ವ ಇರಬೇಕಲ್ಲವೇ ಎನ್ನುವ ಪ್ರಶ್ನೆಯನ್ನು ಸದಾ ತಮ್ಮೆದುರಿಗೆ ಇರಿಸಿಕೊಂಡ ಲೇಖಕರು ಕಾರಂತರಾದ್ದರಿಂದ ಹೆಣ್ಣಿನ ಪ್ರಶ್ನೆಯನ್ನು ಅವರು ಶ್ರೇಣೀಕೃತ ಸಾಮಾಜಿಕ ವಾಸ್ತವದ ನೆಲೆಯಲ್ಲಿಯೂ ಇಟ್ಟು ನೋಡುವ ಪ್ರಯತ್ನ ಮಾಡುತ್ತಾರೆ. ಆದರೆ ಕೆಲವು ಕೃತಿಗಳಲ್ಲಿ ಈ ಸೋದ್ದಿಶ್ಯತೆಯನ್ನು ಮೀರಿದ ಮಾನವೀಯ ನೆಲೆಯೊಂದು ರೂಪುಗೊಂಡು ಕಾರಂತರು ಉದ್ದೇಶಿಸಿರುವುದಕ್ಕಿಂತಲೂ ವಿಸ್ತಾರವಾದ ನೆಲೆಯೊಂದು ನಿರ್ಮಿತವಾಗುತ್ತದೆ. ‘ಮರಳಿ ಮಣ್ಣಿಗೆ’ , ‘ಕೇವಲ ಮನುಷ್ಯರು’ ಮೊದಲಾದ ಕಾದಂಬರಿಗಳು ಇದಕ್ಕೆ ಅತ್ಯುತ್ತಮ ಉದಾಹರಣೆ. ಕಾರಂತರನ್ನು ಕನ್ನಡದ ಕೆಲವೇ ಸ್ತ್ರೀವಾದಿ ಲೇಖಕರಲ್ಲಿ ಒಬ್ಬರೆಂದು ನಾವು ಹೇಳಲು ಬೇಕಾದ ವಿವರಗಳು, ದೃಷ್ಟಿಕೋನಗಳು ಈ ಕೃತಿಗಳಲ್ಲಿ ನಮಗೆ ಸಿಗುತ್ತವೆ. ಲೈಂಗಿಕತೆಯನ್ನು ಕುರಿತ ಅವರ ಇತರ ಲೇಖನಗಳಲ್ಲಿಯೂ ಈ ಅಂಶವನ್ನು ನಾವು ಕಾಣಬಹುದು.

ಕಾರಂತರ ದೃಷ್ಟಿಕೋನದ ಗಾಂಭೀರ್ಯ ಮಹತ್ವಗಳು ನಮಗೆ ತಿಳಿಯಬೇಕಾದರೆ ಅವರನ್ನು ಪ್ರಗತಿಶೀಲರ ಜೊತೆಯಲ್ಲಿ, ಅ.ನ.ಕೃ ಅವರ ಬರವಣಿಗೆಗಳ ಜೊತೆಯಲ್ಲಿಟ್ಟು ನೋಡಬೇಕು. ವೇಶ್ಯೆಯರನ್ನು ಕುರಿತ ಒಟ್ಟಂದದಲ್ಲಿ ಮಹಿಳೆಯರನ್ನು ಕುರಿತ, ಪ್ರಗತಿಪರ ಎಂದು ಕರೆಯಬಹುದಾದ ದೃಷ್ಟಿಕೋನದಲ್ಲೇ ಅ.ನ.ಕೃ ಬರಹಗಳಿವೆ. ಆದರೆ ಅವುಗಳನ್ನು ಓದುತ್ತಿದ್ದರೆ ಹೆಣ್ಣಿನ ಬಗೆಗಿನ ದೃಷ್ಟಿಕೋನ ಬದಲಾಗುವುದಿರಲಿ, ಹೆಣ್ಣಿಗೇ ಹೆಣ್ಣಿನ ಬಗೆಗೆ ತೀವ್ರವಾದ ಜಿಗುಪ್ಸೆ ಹುಟ್ಟಿಬಿಡುತ್ತದೆ. ಹೆಣ್ಣಿನ ಆತ್ಮವಿಶ್ವಾಸವನ್ನು ಅವು ಅಷ್ಟರಮಟ್ಟಿಗೆ ನಾಶ ಮಾಡಿಬಿಡುತ್ತವೆ. ವಾಸ್ತವದ ವಿವರಗಳು ಎನ್ನುವುದಕ್ಕಿಂತ ಹೆಚ್ಚಾಗಿ ತಮ್ಮ ಉತ್ಪ್ರೇಕ್ಷಿತ  ಮತ್ತು ಅತಿ ನಾಟಕೀಯತೆಯ ಕಾರಣಕ್ಕಾಗಿ ವಿಕಾರಗಳಾಗಿ ಕಾಣಿಸುವ ಸಂದರ್ಭಗಳು ಅಲ್ಲಿ ಹೇರಳವಾಗಿ ಸಿಗುತ್ತವೆ.

ಈ ಅಂಕಣದಲ್ಲಿ ಆರಿಸಿಕೊಳ್ಳುತ್ತಿರುವ ಪಾತ್ರಗಳು ಪಾತ್ರಚಿತ್ರಣದಾಚೆಗೆ ನಮಗೆ ಮುಖ್ಯವಾಗುವುದು ಈ ಕಾರಣಕ್ಕಾಗಿ. ಅವು ವ್ಯಕ್ತಿಗತ ಪಾತ್ರಗಳಾಗುವುದರ ಜೊತೆಗೇ ತಮ್ಮ ಅಸ್ತಿತ್ವ, ವ್ಯಕ್ತಿತ್ವ, ವ್ಯಕ್ತಿಗತ ಬದುಕು ಮತ್ತು ಸಮುದಾಯದ ಬದುಕಿನಲ್ಲಿನ ತನ್ನ ಪಾತ್ರ, ಅದಕ್ಕಿರುವ, ಇರಬೇಕಾದ ಅಧಿಕೃತತೆ, ದಾಂಪತ್ಯವೂ ಸೇರಿದಂತೆ ಹಲವು ಪಾತ್ರಗಳಲ್ಲಿ ತಾನು ಕೊಡುವುದೇನು ಪಡೆಯುವುದೇನು, ಕೊಡುವ ಕರಾರು ಮತ್ತು ಪಡೆಯುವ ಔದಾರ್ಯಗಳಲ್ಲಿನ ವ್ಯತ್ಯಾಸ ಇವುಗಳನ್ನೆಲ್ಲ ಬಿಡಿಸಬರದ ಗೋಜಲುಗಳಲ್ಲಿ, ಕೆಲವೊಮ್ಮೆ ಸ್ಪಷ್ಟತೆಯಲ್ಲಿ, ಕೆಲವೊಮ್ಮೆ ಆತ್ಮಜ್ಞಾನದ ಅಮೂರ್ತತೆಯಲ್ಲಿ ಹೆಣ್ಣು ಪಾತ್ರಗಳು ಪಡೆಯುವುದನ್ನು ಗುರುತಿಸುವ ಪ್ರಯತ್ನ ಇದು. ಹಲವು ಬಾರಿ ಲೇಖಕರ ಆಯ್ಕೆ ಮತ್ತು ಚೌಕಟ್ಟನ್ನು ಮೀರಿ ಬೆಳೆಯುವ ಪಾತ್ರಗಳು ಹೊಸ ಓದನ್ನು ಹೊಸ ಗ್ರಹಿಕೆಯ ಕ್ರಮವನ್ನು ಅಪೇಕ್ಷಿಸುತ್ತವೆ. ಈ ತನಕ ನೋಡಲಾದ ರೂಢಿಗತ ಓದಿನ ಆಚೆಗೆ ಇವು ಬೆಳೆಯುವ, ಕೃತಿಯೊಳಗಿದ್ದೂ ಅದರಾಚೆಗಿನ ಸ್ವಾಯತ್ತ ಭಿತ್ತಿಯಲ್ಲಿ ನಿಲ್ಲುವ ಮೂಲಕವೇ ಸ್ತ್ರೀ ಸಂಕಥನವನ್ನು ಇವು ಗಟ್ಟಿಯಾಗಿಸುವ ನೇಯ್ಗೆಯೊಂದನ್ನು ಉದ್ದೇಶಿಸಿದ ಪ್ರಯತ್ನ ಇದು.

ಕಾರಂತರು ‘ಮೈಮನಗಳ ಸುಳಿಯಲ್ಲಿ’ ಕಾದಂಬರಿಯಲ್ಲಿ ಅವರ ಕೃತಿಗಳ ಮಟ್ಟಿಗೆ ಹೊಸದೆನಿಸುವ ಶೈಲಿಯೊಂದನ್ನು ಬಳಸುತ್ತಾರೆ. ಕಾದಂಬರಿಯ ನಾಯಕಿ ಮಂಜುಳೆ ನಮಗೆ ಅವಳೇ ಬರೆದಿಟ್ಟಿರುವ ಆತ್ಮಕಥಾನಕದ ಮೂಲಕ ಕಾಣಿಸಿಕೊಳ್ಳುತ್ತಾಳೆ. ಈ ಶೈಲಿ ಮತ್ತು ತಂತ್ರ ಮಂಜುಳೆಯ ಮಟ್ಟಿಗೆ ಅಗತ್ಯವೂ ಹೌದು. ‘ತಾನುಂಬ ಊಟವನು’ ಎನ್ನುವ ಅನಿವಾರ್ಯತೆಯಲ್ಲಿ ಮತ್ತು ಅಧಿಕೃತತೆಯಲ್ಲಿ ಮಂಜುಳೆ ಎನ್ನುವ ಬಸರೂರಿನ ವೇಶ್ಯೆ ತನ್ನ ಬದುಕನ್ನು ಒಂದು ಕಡೆಯಿಂದ ಬಿಚ್ಚುತ್ತಾ ಇನ್ನೊಂದು ಕಡೆಯಿಂದ ಕಟ್ಟುತ್ತಾ ಹೋಗುತ್ತಾಳೆ. ಭವಾನಿ ಎನ್ನುವ ತಾಯಿ ಮತ್ತು ಹೆಸರಿರಬೇಕಾದ ಅಗತ್ಯವಿಲ್ಲದೆ ‘ಪಾಳ’ನೆನ್ನುವ ಅನಾಮಿಕತೆಯಲ್ಲಿ ತನ್ನ ಅಸ್ಮಿತೆಯನ್ನು ಯಶಸ್ವಿಯಾಗಿ ಮುಚ್ಚಿಟ್ಟುಕೊಂಡು ತನ್ನ ಸಾಮಾಜಿಕ ಭದ್ರತೆಯನ್ನು ಕಾಪಾಡಿಕೊಳ್ಳಬಲ್ಲ ಸವಲತ್ತಿನ ತಂದೆಯ ಮಗಳು ಮಂಜುಳೆ. ‘ಭವಾನಿ ಯಾವ ಗರತಿಗೂ ಕಡಿಮೆಯಿಲ್ಲದವಳು’ ಎನ್ನುವ ನೆರೆಮನೆಯ ಕಾವೇರಿಯಮ್ಮನ ಮಾತು ಹೊಗಳಿಕೆಯೋ ಬೈಗುಳವೋ ತಿಳಿಯದ ಮುಗ್ಧತೆ ಮುಂದೆ ಇವಳಲ್ಲಿ ಕೊನೆಯಿರದ ದ್ವಂದ್ವವಾಗಿ ಕಾಡುತ್ತದೆ. ‘ಮೈಯನ್ನು ಮಾರಬೇಕು , ಮನಸ್ಸನ್ನಲ್ಲ’ ಎನ್ನುವ ವೃತ್ತಿಧರ್ಮ ಒಂದು ಕಡೆ; ಮೈಯೆ ಬೇರೆ ಮನಸೆ ಬೇರೆ ಎನ್ನುವುದು ಎಲ್ಲ ಹೊತ್ತಿಗೂ ನಿಜವೆ? ಮೈಯನ್ನು ಮೀರಿದ ಮನಸ್ಸು, ಮನಸ್ಸಿನ, ಆತ್ಮದ ಸಂಬಂಧಗಳು, ಮೈ-ಮನಸ್ಸು ಎರಡೂ ಅದ್ವೈತವಾಗುವ ಸಂಬಂಧಗಳು...\

ಗಂಡು ಹೆಣ್ಣಿನ ಸಂಬಂಧದ ಎಲ್ಲಾ ಸಾಧ್ಯತೆಗಳನ್ನೂ ಮಂಜುಳೆ ಶೋಧಿಸುತ್ತಾ ಹೋಗುತ್ತಾಳೆ. ಆತ್ಮಸಾಕ್ಷಿಯ ನೈತಿಕತೆಯನ್ನು ತನ್ನ ಬದುಕಿನ ಮಾನದಂಡವಾಗಿಸಿಕೊಳ್ಳಲು ಮಂಜುಳೆ ನಡೆಸುವ ಪ್ರಯತ್ನಗಳು ಅಸಾಧಾರಣವೆಂದೇ ನಮಗನಿಸುವುದಕ್ಕೆ ಅನೇಕ ಕಾರಣಗಳಿವೆ. ಆತ್ಮವಂಚನೆ ಎನ್ನುವ ಸಂಗತಿಯೇ ಈ ಕ್ಷೇತ್ರದಲ್ಲಿ ಅಸಂಬದ್ಧ ಮತ್ತು ಅನಗತ್ಯ ಎನ್ನುವ ಸ್ಥಾಪಿತ ವಾತಾವರಣ ಮತ್ತು ನಂಬಿಕೆಯ ಲೋಕದಲ್ಲಿ ಮಂಜುಳೆ ಅದಕ್ಕೆ ವಿರುದ್ಧವಾದ ದಿಕ್ಕಿನಿಂದ ತನ್ನ ಬದುಕನ್ನು ‘ರಚಿಸಿಕೊಳ್ಳುವ’ ಪ್ರಯತ್ನ ಮಾಡುತ್ತಾಳೆ. ಇಂಥ ತನ್ನ ಬದುಕನ್ನು ತೆರೆದಿಡುವ ಮೂಲಕ ವೇಶ್ಯೆಯರು ಹಾಯುವ ಬದುಕಿನ ಕೊಂಡಗಳನ್ನು, ಅವರ ಮನೋವ್ಯಾಪಾರಗಳನ್ನು ಮಾತ್ರವಲ್ಲದೆ ಕೊನೆಗೂ ಹೆಣ್ಣಿನ ಹುಡುಕಾಟ ಮತ್ತು ಸತತ ಪ್ರಯತ್ನಗಳು ಯಾವ ದಿಕ್ಕಿನಲ್ಲಿರುತ್ತವೆ ಎನ್ನುವುದನ್ನೂ ಪ್ರಾತಿನಿಧಿಕವಾಗಿ ಧ್ವನಿಸುತ್ತಾಳೆ.

ಮಂಜುಳೆಯ ಬದುಕಿನ ಪ್ರಯಾಣದಲ್ಲಿ ಒಂದು ಪ್ರಕ್ರಿಯೆಯನ್ನೂ ನಾವು ಗಮನಿಸಬಹುದು. ಮಂಜುಳೆ ಮೊದಲು ಒಲಿಯುವುದು ಕಂಡಲೂರ ಪೈಗಳಿಗೆ. ಅದೆಷ್ಟೋ ದಿನಗಳ ಹುಡುಕಾಟ ಮತ್ತು ಕಾಯುವಿಕೆಯಲ್ಲಿ ಇವಳು ಒಪ್ಪಿಕೊಳ್ಳುವ ಪೈಗಳಿಗೆ ದೇಹಸಂಭ್ರಮವೇ ಮುಖ್ಯ. ಇವಳನ್ನು, ಇವಳ ಹಾಡುವಿಕೆಯನ್ನು ಮೆಚ್ಚಿಯೂ ಅವರ ಮೊದಲ ಆದ್ಯತೆ ದೇಹಕ್ಕೆ. ಮಂಜುಳೆಗೆ ಅದು ಕಿತ್ತು ತಿನ್ನುವ ಪರಿಯಂತೆಯೇ ಕಾಣಿಸುತ್ತದೆ. ಅದು ಯಾಕೆ ಈ ಮನುಷ್ಯ ನನ್ನನ್ನು ಹೀಗೆ ಹರಿದು ತಿನ್ನುತ್ತಾರೆ ಎನ್ನುವ ದಿಗಿಲೂ ಅವಳಲ್ಲಿ ಹುಟ್ಟುತ್ತದೆ. ಈ ದಿಗಿಲೇ ಅವಳಲ್ಲಿ ಸಂಬಂಧಗಳನ್ನು ಕುರಿತಂತೆ ಇತರ ಪ್ರಶ್ನೆಗಳ ಕಡೆಗೆ ಚಲಿಸುವಂತೆ ಮಾಡುತ್ತದೆ. ಮಂಜುಳೆಯ ಮನೆಯಲ್ಲಿ ಹಾಕಲು ಅವರು ತಂದುಕೊಡುವ ಚಿತ್ರಗಳಾದರೂ ಅದೇ ಶೃಂಗಾರ ಮೂಲದವು. ಇವರದು ಏಕೋನಿಷ್ಠೆಯಲ್ಲ ಎನ್ನುವ ಅರಿವಿನಲ್ಲಿ, ತನ್ನ ಸ್ವಾರ್ಥಕ್ಕಾಗಿ ಇವಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದಕ್ಕೂ ಈತ ಸಿದ್ಧ ಎನ್ನುವ ಆಘಾತದಲ್ಲಿ ಈ ಸಂಬಂಧ ಕೊನೆಯಾಗುತ್ತದೆ.

ನಂತರ ಅವಳ ಬದುಕಿನಲ್ಲಿ ಪ್ರವೇಶಿಸುವವರು ಸುಬ್ರಾಯ ಉಳ್ಳೂರರು. ಬದುಕು, ವ್ಯಕ್ತಿತ್ವ, ಸಂಬಂಧ ಎಲ್ಲದಕ್ಕೂ ಇರಬಹುದಾದ ಮತ್ತು ಪ್ರಯತ್ನದ ಮೂಲಕ ಸಾಧಿಸಿಕೊಳ್ಳಬಹುದಾದ ಎತ್ತರದ ಕಲ್ಪನೆ ಮಂಜುಳೆಗೆ ಬರುವುದು ಇವರಿಂದ. ಇದನ್ನು ತಾಂತ್ರಿಕವಾಗಿ ಮತ್ತು ತಾತ್ವಿಕವಾಗಿ ಪರಿಪೂರ್ಣಗೊಳಿಸಲೆಂದೋ ಏನೋ ಕಾರಂತರು ಇವರಿಬ್ಬರ ನಡುವ ದೈಹಿಕ ಸಂಬಂಧವೇ ಘಟಿಸದ ವಿನ್ಯಾಸವೊಂದನ್ನು ತಂದಿದ್ದಾರೆ. ಶೃಂಗಾರದ ಆಚೆಗೆ ಗಂಡು ಹೆಣ್ಣಿನ, ವೇಶ್ಯೆ ಮತ್ತು ಗಂಡಿನ ಸಂಬಂಧವೊಂದು ಅರಳಬಹುದಾದ ಸಾಧ್ಯತೆಯನ್ನು ಕಾರಂತರು ಇಲ್ಲಿ ಕಟ್ಟಿಕೊಡುತ್ತಾರೆ. ಈ ಇಡೀ ಪ್ರಕರಣದಲ್ಲಿ ಕಾರಂತರ ಆದರ್ಶಗಳು ಕೆಲಸ ಮಾಡಿವೆ. ಉಳ್ಳೂರರ ಪತ್ನಿ ಮಂಜುಳೆಯನ್ನು ಒಡಹುಟ್ಟಿದವಳೋ ಎಂಬಂತೆ ಒಪ್ಪಿಕೊಳ್ಳುವ ಚಿತ್ರಗಳು ತುಸು ಅಸಹಜವೆನಿಸಿದರೂ ಉಳ್ಳೂರರ ಸಹಜ ಮಾನವ ಪ್ರೀತಿ ಮತ್ತು ಮಾನವ ಘನತೆಯಲ್ಲಿ ಅವರಿಗಿರುವ ನಂಬಿಕೆ ಮತ್ಯಾರನ್ನಲ್ಲದಿದ್ದರೂ ಮನೆಯ ಸದಸ್ಯರ ಮೇಲೆ ದಟ್ಟ ಪ್ರಭಾವ ಬೀರಿರಬಹುದು ಎನ್ನುವ ಸಮಾಧಾನ ಪಟ್ಟುಕೊಳ್ಳಲು ಅವಕಾಶವಿದೆ. ದೇಹದ ನಿತ್ಯ ಬಯಕೆಗಳ ದುರ್ದಮ್ಯತೆಯಲ್ಲಿ ಮಂಜುಳೆ ಅವರಿವರನ್ನು ಕೂಡುತ್ತಾಳೆ. ಅದನ್ನು ಉಳ್ಳೂರರಲ್ಲಿ ಹೇಳಿಕೊಂಡು ನಿರಾಳವೂ ಆಗುತ್ತಾಳೆ.

ಈ ಎಲ್ಲ ಸುದೀರ್ಘ ಪ್ರಯಾಣದಲ್ಲಿ ಮಂಜುಳೆ ತನ್ನನ್ನು ತಾನೇ ಮುಖಾಮುಖಿಯಾಗುತ್ತಾಳೆ. ಸಮಾಜ ತನಗೆ ಕೊಟ್ಟ ಬದುಕಿನ ಕ್ರಮ, ತಾನು ಕಟ್ಟಿಕೊಳ್ಳಲು ನಡೆಸಿದ ಬದುಕಿನ ವಿನ್ಯಾಸ ಇವುಗಳ ಘರ್ಷಣೆಯಲ್ಲಿ ತಾನು, ತನ್ನ ಅಸ್ಮಿತೆ ನಾಶವಾಯಿತೆ ಅಥವಾ ತಾನು ಮಾಡಿಕೊಂಡ ಆಯ್ಕೆಗಳು, ಅವುಗಳ ಸರಿ ತಪ್ಪಿನ ಚರ್ಚೆಯಲ್ಲಿ, ಉಳ್ಳೂರರ ಜೊತೆಗಿನ ಸಖ್ಯದಲ್ಲಿ ತನ್ನ ಬದುಕು ಸಾರ್ಥಕವಾಯಿತೆ ಎನ್ನುವ ಜಿಜ್ಞಾಸೆ ಮಂಜುಳೆಯಲ್ಲಿದೆ. ನಿರ್ದೇಶಿತ ಬದುಕಿನ ಎದುರಿಗೆ ಆಯ್ಕೆಯ ಬದುಕನ್ನು ಕುರಿತು ಚಿಂತಿಸುವ, ಆ ಮೂಲಕವೇ ಬದುಕು ಮತ್ತು ಹೆಣ್ಣು ಎರಡರ ಮಹತ್ವವನ್ನೂ ಮುಕ್ಕಾಗದ ಘನತೆಯಲ್ಲಿ ಮಂಜುಳೆ ಪ್ರತಿನಿಧಿಸುತ್ತಾಳೆ. ಕರುಣೆಯೇ ಸ್ಥಾಯಿಭಾವವಾಗುವ, ಶೃಂಗಾರವೇ ಬದುಕಿನ ದಾರಿಯಾದಲ್ಲಿ ಮಂಜುಳೆ ಹುಟ್ಟಿಸುವ ಆತ್ಮಗೌರವ ಬಲು ದೊಡ್ಡದು.

ಡಿ.ಹೆಚ್. ಲಾರೆನ್ಸ್‌ನ ಕಾದಂಬರಿಯೊಂದನ್ನು (‘ಸನ್ಸ್ ಅಂಡ್ ಲವರ್ಸ್’ ಕಾದಂಬರಿಯೋ ‘ಲೇಡಿ ಚಾಟರ್ಲೀಸ್ ಲವರ್’ ಕಾದಂಬರಿಯೋ ನೆನಪಾಗುತ್ತಿಲ್ಲ) ನಿಷೇಧಿಸಬೇಕು ಎನ್ನುವ ಗಲಾಟೆ ಜೋರಾಗಿ ನಡೆಯುತ್ತಿತ್ತು. ಕಾದಂಬರಿಯನ್ನು ಓದಿದ ಪಾದ್ರಿಯೊಬ್ಬ ‘ಇದೊಂದು ಪವಿತ್ರವಾದ ಕೃತಿ, ಇದನ್ನು ಎಲ್ಲರೂ ಓದಲೇಬೇಕು’ ಅಂದ. ಅದಕ್ಕೆ ಅವನು ಕೊಟ್ಟ ವಿವರಣೆ, ‘ಈ ಕಾದಂಬರಿ ಓದುವ ತನಕ ಗಂಡು ಹೆಣ್ಣಿನ ಸಂಬಂಧ ಇಷ್ಟೊಂದು ಪವಿತ್ರವಾದದ್ದು  ಮುಖ್ಯವಾದದ್ದು ಅಂತ ನನಗೆ ಗೊತ್ತೇ ಇರಲಿಲ್ಲ’ ಎಂದು. ‘ಅದಕ್ಕೊಂದು ದೈವಿಕ ಸ್ವರೂಪವೂ ಇರಬಹುದು ಅನ್ನುವುದು ನನಗೆ ಈಗ ಗೊತ್ತಾಯಿತು’ ಎನ್ನುವ ಮಾತು ಹೆಣ್ಣನ್ನು ಹೊಸ ದೃಷ್ಟಿಕೋನದಿಂದ ನೋಡುವ, ಅರ್ಥ ಮಾಡಿಕೊಳ್ಳುವ ನಿಲುವಿನ ಹುಟ್ಟಿದೆ. ಮಂಜುಳೆಯ ಬಗ್ಗೆ ಬರೆಯಬೇಕು ಅನ್ನುವಾಗ ಯಾಕೋ ಇದು ಥಟ್ಟನೆ ನೆನಪಾಯಿತು.
 

ಕಾಮೆಂಟ್‌ಗಳಿಲ್ಲ: