ಬುಧವಾರ, ಮೇ 7, 2014

ವಾಲ್ಮೀಕಿ ಯಾರು? ಎಂಬ ಪುಸ್ತಕದ ಕಾಗಕ್ಕ ಗುಬ್ಬಕ್ಕನ ಕತೆ




ಪರುಶುರಾಮ ಕಲಾಲ


ಕೆ.ಎಸ್.ನಾರಾಯಣಾಚಾರ್ಯ ಅವರ ವಾಲ್ಮೀಕಿ ಯಾರು? ಪುಸ್ತಕವು ಆದಿಕವಿ ವಾಲ್ಮೀಕಿಯ ಕುಲಮೂಲವನ್ನು ಕೆದಕಿ ಆತ ಬ್ರಾಹ್ಮಣನಾಗಿದ್ದ ಬೇಡನಾಗಿರಲಿಲ್ಲ ಎಂದು ಪುರಾಣದ ಅನೇಕ ಕತೆಗಳನ್ನು ಹೆಕ್ಕಿ ಸಾದಾರ ಪಡೆಸುವ ಪ್ರಯತ್ನ ನಡೆಸಿದ್ದಾರೆ. 

ಇಡೀ ಪುಸ್ತಕವು ಬ್ರಾಹ್ಮಣ್ಯದ ಭಾರವನ್ನು ಹೊತ್ತುಕೊಂಡು ಬ್ರಾಹ್ಮಣರಲ್ಲದ ಹೀನ ಜಾತಿಯವರಿಗೆ ವೇದ, ವೈದಿಕ ಪರಂಪರೆ ಕರಗತವಾಗಲು ಸಾಧ್ಯವೇ ಎಂದು ಪ್ರಶ್ನಿಸುತ್ತಾ ಕೋಗಿಲೆ ಕಾಗೆಗಳೊಂದಿಗೆ ಬೆಳೆದರೆ ಅದು ಕಾಗೆಯಾಗುವುದಿಲ್ಲ ಕೋಗಿಲೆ ಯಾವತ್ತಿಗೂ ಕೋಗಿಲೆ ಎಂದು ಜಾತಿ ಶ್ರೇಷ್ಠತೆಯನ್ನು ಮೆರೆದಿದ್ದಾರೆ. 

ಕೆ.ಎಸ್.ನಾರಾಯಣಾಚಾರ್ಯ ಅವರು ವಾಲ್ಮೀಕಿ ಬ್ರಾಹ್ಮಣ ಎಂದು ಯಾಕೇ ಸಾಧಿಸಬೇಕು? 

ಇದರಿಂದ ಬ್ರಾಹ್ಮಣ ಸಮಾಜಕ್ಕೆ ಬರುವ ಕಿರೀಟ ಏನು?

ಬ್ರಾಹ್ಮಣ್ಯವೇ ಸರ್ವ ಶ್ರೇಷ್ಠ ಎಂದು ಸಾರಿಕೊಳ್ಳಲಿ ಆದರೆ ವಾಲ್ಮೀಕಿ ನಮ್ಮ ಕುಲದ ಗುರು ಎಂದು ಈಗಲೂ ವಾಲ್ಮೀಕಿಯನ್ನು ಸ್ಮರಿಸಿಕೊಳ್ಳುವ ನಾಯಕ, ಬೇಡ ಜನಾಂಗವು ತನ್ನ ಕುಲವನ್ನು ವಾಲ್ಮೀಕಿ ಕುಲ ಎಂದು ಕರೆದುಕೊಳ್ಳುತ್ತದೆ. ವಾಲ್ಮೀಕಿಯನ್ನು ತನ್ನ ಕುಲದ ಸಂಕೇತವನ್ನಾಗಿಸಿಕೊಂಡಿದೆ. ಇದಕ್ಕೆ ಸಂತೋಷ ಪಡುವುದನ್ನು ಬಿಟ್ಟು ನಾರಾಯಣಾಚಾರ್ಯ ಬೇಡ, ನಾಯಕ ಕುಲದ ಸಂಕೇತವಾದ ವಾಲ್ಮೀಕಿಯನ್ನು ಕಿತ್ತಿಕೊಳ್ಳುವುದು ಪ್ಯಾಸಿಸ್ಟ್ ಅಲ್ಲದೇ ಬೇರೇನೂ ಅಲ್ಲ. 

ಅವರು ಈ ಪುಸ್ತಕದಲ್ಲಿ ಬೇಡ ಜನಾಂಗವನ್ನು ಮಾತ್ರ ನಿಂದಿಸಿಲ್ಲ. ರಾಮಾಯಣ ಮಹಾಕಾವ್ಯ ಎನ್ನುವುದನ್ನು ಸಹ ಒಪ್ಪಿಲ್ಲ. ರಾಮಾಯಣ ಬೇರೆ ಬೇರೆ ಪಠ್ಯಗಳನ್ನು ಸಹ ತಿರಸ್ಕರಿಸಿದ್ದಾರೆ. ಅಷ್ಟೇ ಅಲ್ಲ, ಮಹಾತ್ಮ ಗಾಂಧೀಜಿಯೇ ರಾಮಾಯಣವನ್ನು ಓದಿಲ್ಲ ಎಂದಿದ್ದಾರೆ. ಗಾಂಧೀಜಿ ಗುಂಡೇಟಿನಿಂದ ಸಾಯುವಾಗ ಹೇ ರಾಮ್ ಅಂತಾ ಹೇಳಿದ್ದು ಕೂಡಾ ಸುಳ್ಳು ಎಂದು ಸಾಧಿಸಿದ್ದಾರೆ. ಇದಕ್ಕೆ ಉದಾಹರಣೆಯಾಗಿ ವಿಷ್ಣು ಕರ್ಕರೆ ಅನ್ನುವವರು ’ನಾನು ಗಾಂಧೀಜಿ ಸಾಯುವಾಗ ೪ ಅಡಿ ಸಮೀಪದಲ್ಲಿದ್ದೆ. ಅವರು ಪ್ರಾಣ ಬಿಡುವಾಗ ಆಂ ಅಂತಹ ಅಷ್ಟೇ ಹೇಳಿದರು ಎನ್ನುವುದನ್ನು ಉಲ್ಲೇಖಿಸಿ, ನಾನು ’ಇದಾವ ಗಾಂಧಿ?’ ಎನ್ನುವ ಪುಸ್ತಕ ಬರೆದಿದ್ದೀನಿ. ಇದು ಮುದ್ರಣದಲ್ಲಿದೆ. ಅದನ್ನು ಓದಿ ಎಂದು ಹೇಳುತ್ತಾರೆ.

ಬೇಡ ನಾಯಕ ಜನಾಂಗದವರು ಸಂಸ್ಕೃತ ಕಲಿತು ವಾಲ್ಮೀಕಿ ರಾಮಾಯಣದ ಕೆಲವು ಭಾಗವನ್ನಾದರೂ ಓದಲು, ಬಾಯಿಪಾಠ ಮಾಡಲು ಸಂಕಲ್ಪಿಸಬೇಕು. ರಾಷ್ಟ್ರ ಪುರ್ನನಿರ್ಮಾಣಕ್ಕೆ ಖಂಡಿತ ಇದು ಸಾಧಕ, ಪೂರಕ ಎಂದು ಹೇಳುತ್ತಾ ವಾಲ್ಮೀಕಿಯ ಧ್ಯೇಯಾದರ್ಶಗಳು ಇಂದಿಗೂ ಪ್ರಸ್ತುತ ಎಂಬುವವರು ಅದು ಏನೆಂದು ಅರಿಯಬೇಡವೇ? ಪೂರ್ಣವಾಗಿ ವಾಲ್ಮೀಕಿಯನ್ನು ಓದಿ ಮೆಚ್ಚಿ, ಒಪ್ಪಿ, ಅಲ್ಲಿನ ಎಲ್ಲಾ ಸೊಗಸುಗಳಿಗೂ ಮನಸೋತ ರಾಜಕಾರಣಿಗಳು, ಬೇಡ/ನಾಯಕ ಜನಾಂಗವೂ, ಪರಿಶಿಷ್ಟರೂ, ದಲಿತರೂ, ಇಲ್ಲಿ ಅಹಂಕಾರ, ಪ್ರತ್ಯೇಕತಾ ಭಾವ, ವಿಕೃತ ಮನ ಬುದ್ಧಿಗಳನ್ನು ತೊರೆಯುವಂತಾದರೆ ತುಂಬಾ ಚೆನ್ನು. ಎಂದು ಫರ್ಮಾನು ಹೊರಡಿಸಿದ್ದಾರೆ.

 ಇಡೀ ಪುಸ್ತಕ ಇಂತಹ ಅಸಂಗತ ಗೊಂಚಲುಗಳ ಮೂಲಕ ವಾಲ್ಮೀಕಿ ಒಬ್ಬ ಬ್ರಾಹ್ಮಣ ಎಂದು ಅದಕ್ಕೆ ಯಾವ ವೈಜ್ಞಾನಿಕ ಕಾರಣ ಕೊಡದೇ, ಕನಿಷ್ಟ ಪುರಾವೆ ಕೊಡದೆ ಕಾಗಕ್ಕ ಗೂಬಕ್ಕನ ಕತೆ ಹೇಳುವ ಮೂಲಕ ಬೇಡನೊಬ್ಬ ಗಾಯತ್ರಿ ಮಂತ್ರದಂತಹ ರಾಮಾಯಣವನ್ನು ಬರೆಯಲು ಸಾಧ್ಯವೇ ಎಂದು ಪ್ರಶ್ನಿಸುತ್ತಾ ಬ್ರಾಹ್ಮಣ್ಯ ಶ್ರೇಷ್ಠ ಎಂದು ಅದನ್ನು ಎತ್ತಿ ಹಿಡಿಯುವ ಪ್ರಯತ್ನ ಮಾಡುತ್ತಾ ಇತರೆ ಎಲ್ಲಾ ಹಿಂದುಳಿದ ಜಾತಿಗಳನ್ನು ತೆಗಳುತ್ತಿದೆ. ಇದನ್ನು ವಿಕಾರ ಅನ್ನುವುದು ಬಿಟ್ಟು ಬೇರೇನೂ ಹೇಳಲು ಸಾಧ್ಯವಿಲ್ಲ. ಕೆ.ಎಸ್.ನಾರಾಯಣಾಚಾರ್ಯ ಹುತ್ತವ ಬಡಿಯುವ ಕೆಲಸ ಮಾಡುತ್ತಾ ಜಾತಿಯ ಹುತ್ತಕ್ಕೆ ಕೈ ಹಾಕಿದ್ದಾರೆ.

2 ಕಾಮೆಂಟ್‌ಗಳು:

Vinay ಹೇಳಿದರು...

just ignore it,,,

Ragu Kattinakere ಹೇಳಿದರು...

ಶ್ರೀ ಅರುಣರೆ ಸಂಶೋಧಕರು ಎಂದು ಕೊಳ್ಳುವ ನೀವು ಒಂದು ಪುಸ್ತಕವನ್ನು ನಿಷೇಧಿಸುವುದರ ಪರ ನಿಂತಿರುವುದು ವಿಷಾದನೀಯ. ಇದರಲ್ಲಿ ಆಶ್ಚರ್ಯ ಏನೂ ಇಲ್ಲ. ಕಾನೂನು ರೀತ್ಯಾ ನಿಷೇಧ ಆದರೆ ಅದಕ್ಕೆ ಬೇಸರವಿಲ್ಲ. ಸುದ್ದಿಜೀವಿಗಳ ಸುಳಿವಿಗೆ ಸಿಕ್ಕಿ ಸ್ವತಹ ವಾಲ್ಮೀಕಿಯೇ ಹೇಳಿದ ಪ್ರಾಚೇತಸೋಹಮ್ ಬಗ್ಗೆ ವಿವಾದ ಏಕೆ. ಉತ್ತರರಾಮಯಣ ಕೊನೆಗೆ ಸೇರಿಸಿದ್ದು ಎಂದು ವಾದಿಸಲಿ. ಒಟ್ಟಿನಲ್ಲಿ ಇದು ನಮ್ಮ ಕನ್ನಡಿಗರ ದುರವಸ್ತೆ.