ಬುಧವಾರ, ಜುಲೈ 15, 2015

ರೈತರ ಸಾವಿನ ಕೊಯ್ಲು ಮತ್ತು ಸ್ಫೂರ್ತಿಯ ಕಥನ



ಸುದೇಶ ದೊಡ್ಡಪಾಳ್ಯ

ಸೌಜನ್ಯ: ಪ್ರಜಾವಾಣಿ



‘ನರಳುವದನಿ’ ವಿಶ್ವಾಮಿತ್ರನನ್ನು ಬಹುದಿನಗಳಿಂದಲೂ ಹಿಂಬಾಲಿಸುತ್ತಿರುತ್ತದೆ. ವಿಶ್ವಾಮಿತ್ರ ಅದರ ಮೂಲವನ್ನು ಅರಿಯುವ ಪ್ರಯತ್ನ ಮಾಡಿದರೂ ಫಲಕಾರಿಯಾಗುವುದಿಲ್ಲ. 
ವಿಶ್ವಾಮಿತ್ರನನ್ನು ಪರಶುರಾಮ ಭೇಟಿಯಾಗುತ್ತಾನೆ. ಆತನನ್ನು ವಿಶ್ವಾಮಿತ್ರ, ‘ನಿನಗೊಂದು ನರಳುವದನಿ ಕೇಳಿಸಿತೆ?’ ಎಂದು ವಿಚಾರಿಸುತ್ತಾನೆ. ‘ಹೌದು’ ಎನ್ನುತ್ತಾನೆ ಪರಶುರಾಮ. ಇಷ್ಟರಲ್ಲಿ ಇವರಿಗೆ ನಾರದ ಸಿಗುತ್ತಾನೆ. ಆತನ ಬಳಿ ‘ನರಳುವದನಿ’ ಕುರಿತು ಪ್ರಸ್ತಾಪಿಸುತ್ತಾರೆ. ಅದು ಭೂಲೋಕದಿಂದ ಬರುತ್ತಿದೆ ಎಂದು ತಿಳಿಸುತ್ತಾನೆ. ವಿಶ್ವಾಮಿತ್ರ ಮತ್ತು ಪರಶುರಾಮ ಅತ್ತ ಕಡೆ ಸಾಗುತ್ತಾರೆ.
ಕುವೆಂಪು ಅವರ ‘ಧನ್ವಂತರಿ ಚಿಕಿತ್ಸೆ’ ಎಂಬ ಈ ಕಥೆಯನ್ನು ಸದ್ಯಕ್ಕೆ ಇಲ್ಲಿಗೆ ನಿಲ್ಲಿಸುತ್ತೇನೆ.
ಈಗ ಕಲಬುರ್ಗಿ ಸಮೀಪದ ಅಷ್ಟಗಿ ಗ್ರಾಮದ ಮಹದೇವಪ್ಪ ಅಲಿಯಾಸ್‌ ಬೋರ್‌ವೆಲ್‌ ಮಹದೇವಪ್ಪನವರ  ಕಥೆ ಹೇಳುತ್ತೇನೆ.ಇವರ ಬಳಿ 5 ಎಕರೆ ಜಮೀನಿದೆ. ಮಳೆ ನಂಬಿ ಬೇಸಾಯ ಮಾಡುವುದು ಕಷ್ಟವೆನಿಸಿತು. ಎಂಟು ವರ್ಷಗಳ ಹಿಂದೆ ಬೋರ್‌ವೆಲ್‌ ಹಾಕಿಸಿದರು. ಅದರಲ್ಲಿ ನೀರು ಉಕ್ಕಲಿಲ್ಲ. ಇನ್ನೊಂದು ಕೊರೆಸಿದರು. ಬರೀ ಧೂಳು ಬಂತು. ಮಹದೇವಪ್ಪ ಜೂಜಿಗೆ ಕುಳಿತವರಂತೆ ಇದು ನೀರು ಕೊಡಬಹುದು, ಅದು ಕೊಡಬಹುದು ಎನ್ನುವ ಆಸೆಯಿಂದ ಹದಿನೇಳು ಕೊಳವೆಬಾವಿಗಳನ್ನು ಕೊರೆಸಿದರು! ಅಷ್ಟೂ ವಿಫಲವಾದವು! ಕಾಕತಾಳೀಯ ಎನ್ನುವಂತೆ ಮಹದೇವಪ್ಪನವರ ಒಂದು ಕಿಡ್ನಿ ಕೂಡ ವಿಫಲವಾಯಿತು. ಅತ್ತ ಹೊಲದಲ್ಲಿ ಕೊಳವೆಬಾವಿಗಳು, ಇತ್ತ ಮಗನ ಕಿಡ್ನಿ ವಿಫಲವಾದದ್ದು ತಾಯಿಯನ್ನು ಚಿಂತೆಗೀಡು ಮಾಡಿತು. ಮಗನನ್ನು ಉಳಿಸಿಕೊಳ್ಳಲು ತಾಯಿಯೇ ಕಿಡ್ನಿ ಕೊಟ್ಟಳು.
ಹೊಲದಲ್ಲಿ ಬೆಳೆಯ ಬದಲು ಸಾಲ ಸಮೃದ್ಧವಾಗಿ ಬೆಳೆಯಿತು. ಇನ್ನು ಮಹದೇವಪ್ಪನವರ ಕಥೆ ಮುಗಿಯಿತು ಎಂದುಕೊಂಡವರೇ ಹೆಚ್ಚು. ಇಷ್ಟರಲ್ಲಿ ಕೊನೆ ಯತ್ನ ಎನ್ನುವಂತೆ ಹದಿನೆಂಟನೆ ಕೊಳವೆಬಾವಿ ಕೊರೆಸಿ ಅದೃಷ್ಟ ಪರೀಕ್ಷೆಗೆ ನಿಂತರು ಮಹದೇವಪ್ಪ. ಕಾಯಂ ಆಗಿ ಕೊಳವೆಬಾವಿ ಕೊರೆಯುವ ವ್ಯಕ್ತಿಗೆ ಬುಲಾವ್‌ ಹೋಯಿತು. ಅವರು ಮಹದೇವಪ್ಪನವರ ಕಷ್ಟ ಮತ್ತು ಕೃಷಿ ಮೇಲಿನ ಹಂಬಲವನ್ನು ಕಂಡವರು ‘ಇದೇ ಕೊನೆ. ಇನ್ನು ಮುಂದೆ ನಿಮ್ಮ ಹೊಲದಲ್ಲಿ ಬಾವಿ ಕೊರೆಯಲು ಬರುವುದಿಲ್ಲ. ಈಗ ನಾವೇ ನಿಮಗೆ ಉಚಿತವಾಗಿ ಬಾವಿ ಕೊರೆಯುತ್ತೇವೆ’ ಎಂದು ಸದಾಶಯದಿಂದಲೇ ಹೇಳಿದರು. ಅದರಲ್ಲಿ ನೀರು ಉಕ್ಕಿತು. ಹೋದ ಜೀವ ಮರಳಿ ಬಂದಂತಾಯಿತು. ತಾಯಿ, ಮಗ ಕಾಲದ ಪರಿವೇ ಇಲ್ಲದೆ ಹೊಲದಲ್ಲಿ ದುಡಿದರು. ಹೊಲ ಹಸಿರು ಹೊದ್ದಿತು. ಅಮ್ಮ, ಮಗನ ಕಣ್ಣಗಳು ತುಂಬಿ ಬಂದವು.
ಇತ್ತೀಚಿಗೆ ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆಗಳು ವರದಿಯಾಗುತ್ತಿವೆ. ಇದರಿಂದ ಮನಸ್ಸು ಕಸಿವಿಸಿ, ತಳಮಳಗೊಳ್ಳುತ್ತದೆ. ಹೀಗಾಗಿ ನನಗೆ ಈ ಯಶೋಗಾಥೆ ನೆನಪಿಗಾಗಿ ಸ್ವಲ್ಪ ಸಮಾಧಾನವಾಯಿತು.
ರೈತರ ಪಾಲಿಗೆ ಬೆಳೆ ಕೇವಲ ಬೆಳೆಯಲ್ಲ; ಅದು ಆತ ಮತ್ತು ಕುಟುಂಬದವರ ಕನಸು!
ಮಗಳ ಮದುವೆ, ಮಗನ ಓದು, ಮಡದಿಯ ಕಾಯಿಲೆ, ಮನೆ ದುರಸ್ತಿ ...ಹೀಗೆ ಹತ್ತಾರು ಕನಸುಗಳನ್ನು ಬೆವರ ಹನಿಗಳನ್ನು ಒಟ್ಟುಗೂಡಿಸಿ ಬೆಳೆದಿರುತ್ತಾರೆ. ಅತಿವೃಷ್ಟಿ, ಅನಾವೃಷ್ಟಿ ಇಲ್ಲವೇ ಬೆಲೆ ಕುಸಿತದ ಕಾರಣದಿಂದ ಕನಸುಗಳು ಕಮರಿಹೋಗುತ್ತವೆ. ಕೈ ಖಾಲಿಯಾಗುತ್ತದೆ. ಸಾಲ ಎದೆಯುದ್ದ ಬೆಳೆಯುತ್ತದೆ.
‘ನಿಜಕ್ಕೂ ರೈತರಿಗೆ ಕೃಷಿ ಮತ್ತು ಸಾಲ ಜೀವ ಕಳೆದುಕೊಳ್ಳುವಷ್ಟು ದುಬಾರಿಯಾಗಿಯೇ?’ ರೈತ ಮುಖಂಡರೊಬ್ಬರನ್ನು ಕೇಳಿದೆ.  ‘ರೈತರ ಸಾಲದ ಹೊರೆ ಹೆಚ್ಚಲು ಸಾಂಪ್ರದಾಯಿಕ ಕೃಷಿ ಪದ್ಧತಿ, ಅವೈಜ್ಞಾನಿಕ ಬೆಲೆ ನೀತಿ, ಅಶಿಸ್ತು, ಅದ್ಧೂರಿ ಮದುವೆ ಹಾಗೂ ಹಬ್ಬ, ಜಾತ್ರೆಗಳು, ದುಶ್ಚಟಗಳ ಖರ್ಚೂ ಸೇರಿಕೊಂಡಿವೆ. ಎಷ್ಟೋ ರೈತರು ತಂದೆ, ತಾಯಿಯ ತಿಥಿ ಮಾಡಲು ಸಾಲ ಮಾಡುತ್ತಿರುವುದು ಸುಳ್ಳಲ್ಲ’ ಎಂದು ಹೇಳಿದರು.
ನನ್ನ ಪ್ರಕಾರ ದಿವಂಗತ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರು ಈ ದೇಶ ಕಂಡ ದಾರ್ಶನಿಕ ರೈತ ನಾಯಕ. ಅವರು ಗ್ಯಾಟ್‌ ಒಪ್ಪಂದ ಸಂದರ್ಭದಲ್ಲಿ ತುಂಬಾ ಸ್ಪಷ್ಟವಾಗಿ ಹೀಗೆ ಹೇಳಿದ್ದರು: ‘ರೈತರು ಸಾಲು, ಸಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುವ ದಿನಗಳು ದೂರವಿಲ್ಲ’.
‘ರೈತರ ಸರಣಿ ಆತ್ಮಹತ್ಯೆ ದೇಶದ ಆಹಾರ ಭದ್ರತೆಗೆ ಪೆಟ್ಟು ಬೀಳುವ ಮುನ್ಸೂಚನೆ. ಇದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಣಿಸಬೇಕು. ರೈತರ ಉತ್ಪನ್ನಗಳಿಗೆ ಬೆಲೆ ನೀತಿ ರೂಪಿಸಬೇಕು. ಇಲ್ಲದೇ ಹೋದರೆ ರೈತರು ಭರವಸೆ ಕಳೆದುಕೊಳ್ಳುತ್ತಾರೆ’ ಎಂದು ಸರ್ವೋದಯ ಕರ್ನಾಟಕ ಪಕ್ಷದ ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಹೇಳುತ್ತಾರೆ.

ಇದೇ ವಿಚಾರವನ್ನು ಕರ್ನಾಟಕ ರಾಜ್ಯ ರೈತಸಂಘ ಆರಂಭದಿಂದಲೂ ಬಲವಾಗಿ ಪ್ರತಿಪಾದಿಸುತ್ತಲೇ ಬರುತ್ತಿದೆ.
ಇಲ್ಲಿ ರೈತರ ಆತ್ಮಹತ್ಯೆ ಕುರಿತು ವಿರೋಧ ಪಕ್ಷದವರು ಹಾಗೂ ಆಡಳಿತ ಪಕ್ಷದವರು ಆಡುತ್ತಿರುವ ಮಾತುಗಳನ್ನು ಗಮನಿಸಿ. ಇವರು ತಮ್ಮ ತಮ್ಮ ‘ನೆಲೆ’ಯಲ್ಲಿ ನಿಂತು ಅದಕ್ಕೆ ಅನುಗುಣವಾದ ಮಾತುಗಳನ್ನೆ ಆಡುತ್ತಿದ್ದಾರೆ. ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಆದರೆ, ಆಡಳಿತ ಮತ್ತು ವಿರೋಧ ಪಕ್ಷದವರು ವಿವೇಚನೆಯಿಂದ ವರ್ತಿಸುವುದು ಮೌಲ್ಯಯುತ ರಾಜಕಾರಣ ಮತ್ತು ರೈತರ ದೃಷ್ಟಿಯಿಂದ ಒಳ್ಳೆಯದು.
ಏಕೆಂದರೆ ಇದು ಆರೋಪ ಮತ್ತು ಸಮರ್ಥನೆ ಕಾಲವಲ್ಲ. ಇಬ್ಬರೂ ರಾಜಕೀಯ ಬಿಟ್ಟು ರೈತರ ಆತ್ಮಹತ್ಯೆಗೆ ಇರುವ ನಿಜವಾದ ಕಾರಣಗಳ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ಇಲ್ಲಿ ಸರ್ಕಾರ,  ವಿರೋಧ ಪಕ್ಷಗಳು, ರೈತ ಸಂಘಟನೆಗಳು, ಕೃಷಿ ತಜ್ಞರು ಜೊತೆಯಾಗಿ ಕುಳಿತು ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಬೇಕು.
ಮತ್ತೆ ‘ಧನ್ವಂತರಿ ಕಥೆ’ಯನ್ನು ಮುಂದುವರೆಸುತ್ತೇನೆ.
ಆ ಋಷಿಗಳಿಬ್ಬರೂ ಭೂಲೋಕದಲ್ಲಿ ‘ನರಳುವದನಿ’ಯನ್ನು ಹುಡುಕುತ್ತಾ ಕಣಿವೆಯಲ್ಲಿರುವ ಜೋಪಡಿಗೆ ಬರುತ್ತಾರೆ. ಅಲ್ಲಿ ರೈತನೊಬ್ಬ ಎದೆಯನ್ನು ಎರಡೂ ಕೈಗಳಿಂದ ಒತ್ತಿಕೊಳ್ಳುತ್ತಾ ಘೋರವಾಗಿ ನರಳುತ್ತಿರುತ್ತಾನೆ. ಮುದ್ದೆ ಮುದ್ದೆಯಾಗಿ ನೆತ್ತರು ಅವನ ಬಾಯಿಯಿಂದ ಬರುತ್ತಿರುತ್ತದೆ. ಕಾಯಿಲೆ ಗುಣಪಡಿಸಲು ಎಲ್ಲ ಪ್ರಯತ್ನ ಮಾಡಿದ ಸೋತ ಋಷಿಗಳು ‘ಧನ್ವಂತರಿ’ಯನ್ನು ಕರೆಸುತ್ತಾರೆ. ಎಲ್ಲ ತಪಾಸಣೆ ಮಾಡಿ ಸೋತ ಧನ್ವಂತರಿ ‘ದಿವ್ಯಯಂತ್ರ’ದ ಮುಖಾಂತರ ನೋಡುತ್ತಾನೆ. ರೈತನ ಎದೆಯ ಮೇಲೆ ರಾಜ್ಯ ಭಾರ ಬಿದ್ದಿದೆ! ಇದನ್ನು ತೆಗೆದು ಹಾಕಿದರೆ ರೈತನ ಕಾಯಿಲೆ ಸರಿ ಹೋಗುತ್ತದೆ ಎನ್ನುತ್ತಾನೆ. ವಿಶ್ವಾಮಿತ್ರನ ಆಜ್ಞೆಯಂತೆ ಕ್ರಾಂತಿಭೂತಗಳು ರೈತನ ಎದೆ ಭಾರವನ್ನು ನೆಲಕ್ಕೆ ಉರುಳಿಸುತ್ತವೆ. ರೈತನ ‘ನರಳುವಿಕೆ’ ಕ್ರಮೇಣ ಕಡಿಮೆಯಾಗಿ ಕಾಯಿಲೆ ವಾಸಿ ಆಗುತ್ತದೆ.
ಈಗಲೂ ರೈತರ ಸ್ಥಿತಿ ಕುವೆಂಪು ಸೃಷ್ಟಿಸಿದ ‘ರೈತ’ನ ಸ್ಥಿತಿಗಿಂತ ಭಿನ್ನವಾಗಿಲ್ಲ. ಆದರೆ, ಆತನ ‘ನರಳುವದನಿ’ ಯಾರಿಗೂ ಕೇಳಿಸುತ್ತಿಲ್ಲ. ರೈತರ ದನಿಯಾಗಿದ್ದ ರೈತಸಂಘ ಸ್ವಾರ್ಥ ಮತ್ತು ನಾಯಕತ್ವಕ್ಕಾಗಿ ಹಲವು ಹೋಳುಗಳಾಗಿ ನಿಶಕ್ತಗೊಂಡಿದೆ.
ರೈತ ಸಂಘಟನೆಗಳು, ವಿರೋಧ ಪಕ್ಷಗಳು ವಿಶ್ವಾಮಿತ್ರ ಮತ್ತು ಪರಶುರಾಮನಂತೆ ನಮ್ಮ ನಡುವೆ ಕಾಣಿಸಿಕೊಳ್ಳಬೇಕು. ಸರ್ಕಾರವೆಂಬ ‘ಧನ್ವಂತರಿ’ಯನ್ನು ಕರೆಸಿ ರೈತರ ಎದೆ ಮೇಲೆ ಇರುವ ಬಂಡೆಯಂಥ ಭಾರವನ್ನು ಇಳಿಸುವ ಚಿಕಿತ್ಸೆ ಕೊಡಿಸಬೇಕಿದೆ. ಇಲ್ಲದೇ ಹೋದರೆ ರೈತರ ಆರ್ತನಾದ ಸೂಕ್ಷ್ಮ ಕಿವಿ ಇರುವವರಿಗೆ ಮಾತ್ರ ಕೇಳಿಸುತ್ತದೆ. ಹೃದಯವಂತರ ಕಣ್ಣಲ್ಲಿ ಹನಿ ನೀರು ಜಿನುಗಿಸುತ್ತದೆ. ಉಳಿದವರಿಗೆ ದಿನ ಸಾಯುವವರಿಗೆ ಅಳುವವರು ಯಾರು ಎಂದೆನಿಸಬಹುದು.
ಈ ನಡುವೆಯೂ ಬೋರ್‌ವೆಲ್‌ ಮಹದೇವಪ್ಪನವರ ಈ ಮಾತು ನನಗೆ ಹಿಡಿಸಿತು: ‘ನನಗೆ ಈಗಲೂ ಒಂಬತ್ತು ಲಕ್ಷ ಸಾಲವಿದೆ. ನಾನು ಸಾಲಕ್ಕೆ ಅಂಜಿದ್ದರೆ ಇಷ್ಟರಲ್ಲಿ ಸತ್ತು ವರ್ಷಗಳೇ ಆಗುತ್ತಿದ್ದವು. ಇದ್ದು ಗೆದ್ದು ತೋರಿಸಬೇಕು. ಇಲ್ಲದೇ ಹೋದರೆ ಜನರು ನಮ್ಮನ್ನು ಹೇಡಿಗಳು ಎಂದು ಕರೆಯುತ್ತಾರೆ. ಅವರಿಗೆ ಅಂಥ ಅವಕಾಶವನ್ನೇ ಕೊಡಬಾರದು’.
ದುರ್ಬಲ ಗಳಿಗೆಯಲ್ಲಿ ಆತ್ಮಹತ್ಯೆ ಬಗ್ಗೆ ಯೋಚಿಸುವ ರೈತರು ನಮ್ಮ ನಡುವೆಯೇ ಇರುವ ಬೋರ್‌ವೆಲ್‌ ಮಹದೇವಪ್ಪನಂಥ ದಿಟ್ಟರನ್ನು ನೆನಪು ಮಾಡಿಕೊಳ್ಳುವುದು ಒಳ್ಳೆಯದು.

ಮಂಗಳವಾರ, ಜುಲೈ 14, 2015

ಅನ್ನದ ಋಣ ಅಭಿಯಾನ

ರೈತರ ಆತ್ಮಹತ್ಯೆ ನಿಲ್ಲಬೇಕು, ಕೃಷಿ ಬಿಕ್ಕಟ್ಟಿನಿಂದ ಈ ದೇಶ ಪಾರಾಗಬೇಕು ಎಂದು ನೀವು ಬಯಸುತ್ತೀರಾ? ಅದಕ್ಕಾಗಿ ನೀವೇನಾದರೂ ಮಾಡಲು ಸಿದ್ಧರಿದ್ದೀರಾ? ಮುಂದಿನ ಒಂದು ತಿಂಗಳಲ್ಲಿ ಕನಿಷ್ಠ ಕೆಲವು ಗಂಟೆಗಳು ಅದಕ್ಕೆ ನೀಡಲು ಸಿದ್ಧರಿದ್ದೀರಾ? ಹಾಗಾದರೆ, 

ಅನ್ನದ ಋಣ ಅಭಿಯಾನ ಸೇರಲು ಸಂಪರ್ಕಿಸಿ. 
ರವಿಕುಮಾರ್ - 7353770205
ಚೈತ್ರ - 8884512891


ಕೃಷಿ ಬಿಕ್ಕಟ್ಟಿಗೆ ಅಸಲೀ ಕಾರಣ ಗುರುತಿಸಿ, ಅಸಲೀ ಪರಿಹಾರ ಕೇಳಬೇಕಿದೆ
ಆತ್ಮಹತ್ಯೆಗಳನ್ನು 'ತುರ್ತುಸ್ಥಿತಿ' ಎಂಬಂತೆ ಪರಿಗಣಿಸಿ ತೀವ್ರ ರೂಪದ ಕ್ರಮಗಳನ್ನು ಕೈಗೊಳ್ಳಲು ಆಗ್ರಹಿಸಿ
    
ಜುಲೈ 21ರಿಂದ ಮಂಡ್ಯ ಜಿಲ್ಲೆಯ 750 ಹಳ್ಳಿಗಳಲ್ಲಿ 'ರೈತ ಸಂಘರ್ಷ ಜಾಥಾ': 150 ಕಾರ್ಯಕರ್ತರು ಭಾಗಿ


ಆಂದೋಲನದ ಜೊತೆ ಕೈ ಜೋಡಿಸಲು ಕೋರಿ 'ಅನ್ನದ ಋಣ' ಅಭಿಯಾನ

ನಾಡಿನ ಸಾಹಿತಿ - ಕಲಾವಿದರು, ಜನಪರ ಸಂಘಟನೆಗಳ ಪ್ರತಿನಿಧಿಗಳು, 

ವಿವಿಧ ವೃತ್ತಿನಿರತರು ಭಾಗವಹಿಸಲು ಮನವಿ

ಆಗಸ್ಟ್ 3ರಂದು ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ದಿಗ್ಬಂಧನ


ರಾಜ್ಯದಲ್ಲಿ ಪ್ರತಿನಿತ್ಯ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಾಗಿದೆ. ಈ ವರ್ಷ ಇದು ಕಬ್ಬು ಬೆಳೆಗಾರರನ್ನು ಬಾಧಿಸುತ್ತಿದೆ. ಸರ್ಕಾರಗಳು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ನೋಡಿದರೆ, ಇದೂ ಮತ್ತೊಂದು ಸರಣಿ ಆತ್ಯಹತ್ಯೆ ಎಂಬಂತೆ ಭಾವಿಸಿದಂತಿದೆ. ರಾಜ್ಯ ಸರ್ಕಾರದ ಕೆಲವು ಮಂತ್ರಿಗಳು ಬೇಜವಾಬ್ದಾರಿತನದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೇಂದ್ರ ಸರ್ಕಾರ ತನಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ತೆಪ್ಪಗಿದೆ. ಈ ಸರ್ಕಾರಗಳ ನೀತಿಗಳೇ ಸದ್ಯದ ಬಿಕ್ಕಟ್ಟಿಗೆ ಕಾರಣ ಎಂಬುದನ್ನು ಮರೆಮಾಚಿ, ಈ ವರ್ಷದ 'ಅತೀ ಕಬ್ಬು ಉತ್ಪಾದನೆ'ಯೇ ಕಾರಣ ಎಂಬಂತೆ ಬಿಂಬಿಸಲಾಗುತ್ತಿದೆ. 1995ರಲ್ಲಿ ಡಬ್ಲ್ಯುಟಿಓ ಒಪ್ಪಂದಕ್ಕೆ ಸಹಿ ಹಾಕಿದ ನಂತರವೇ 'ಸಾಮೂಹಿಕ ಆತ್ಯಹತ್ಯೆ' ಎಂಬ ವಿದ್ಯಮಾನ ಆರಂಭವಾಯಿತು ಎಂಬುದನ್ನು ಯಾರೂ ಮಾತಾಡುತ್ತಿಲ್ಲ.

ಅದೇನೇ ಇರಲಿ, ಈ ಸದ್ಯ 'ನೈಸರ್ಗಿಕ ವಿಕೋಪ' ಬಂದಾಗ ಯಾವ ರೀತಿ ಪ್ರತಿಕ್ರಿಯಿಸಬೇಕೋ ಆ ರೀತಿಯಲ್ಲಿ ಕಾರ್ಯಪ್ರವೃತ್ತರಾಗುವ ಅಗತ್ಯವಿತ್ತು. ಅದನ್ನೂ ಮಾಡುತ್ತಿಲ್ಲ. ಕಾಟಾಚಾರದ ಮಾತುಗಳು ಮತ್ತು ಕಾಟಾಚಾರದ ಕ್ರಮಗಳು ಮಾತ್ರ ನಡೆಯುತ್ತಿವೆ. ಈ ಪ್ರಮಾಣದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಲಜ್ಜೆಗೆಟ್ಟ ನಡವಳಿಕೆ ತೋರುತ್ತಿದ್ದರೆ, ವಿರೋಧ ಪಕ್ಷಗಳು ಬೆಂದ ಮನೆಯಲ್ಲಿ ಗಳ ಹಿರಿಯುವುದನ್ನು ಬಿಟ್ಟು ಪರಿಣಾಮಕಾರಿ ಕ್ರಮಗಳಿಗೇನೂ ಆಗ್ರಹಿಸುತ್ತಿಲ್ಲ. ಏಕೆಂದರೆ, ಅವರುಗಳು ಅಧಿಕಾರದಲ್ಲಿದ್ದಾಗಲೂ ಮಾಡಿದ್ದು ಅದೇ ಆಗಿದೆ.
ಹಾಗಾದರೆ ಸಮಾಜದ ಇನ್ನಿತರ ವಿಭಾಗಗಳಿಗೆ ಇದರಲ್ಲಿ ಯಾವ ಜವಾಬ್ದಾರಿಯೂ ಇಲ್ಲವೇ? ಅನ್ನದ ಋಣ ಇದ್ದೇ ಇದೆ. ಕೃಷಿ ಬಿಕ್ಕಟ್ಟಿನ ಹೊರೆಯನ್ನು ಸಂಪೂರ್ಣ ಹೊತ್ತುಕೊಂಡಿರುವ ರೈತರ ಆರ್ಥಿಕ ಸಂಕಷ್ಟಗಳನ್ನು ಬಗೆಹರಿಸಲು ಸಾಧ್ಯವಿರದಿದ್ದರೂ, ಅಸಲೀ ಕಾರಣಗಳನ್ನು ಪತ್ತೆ ಹಚ್ಚಲು ಜೊತೆಯಾಗಬೇಕಿದೆ; ಅದಕ್ಕೆ ಪರಿಹಾರ ಹುಡುಕಲು ಕೈ ಜೋಡಿಸಬೇಕಿದೆ; ಪರಿಹಾರವನ್ನು ಆಗ್ರಹಿಸಲು ಹೆಗಲಿಗೆ ಹೆಗಲು ಕೊಟ್ಟು ಹೋರಾಟಕ್ಕೆ ನಿಲ್ಲಬೇಕಿದೆ.

ಅದಕ್ಕಾಗಿ ಕರ್ನಾಟಕ ಜನಶಕ್ತಿಯು ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಮಂಡ್ಯ ಜಿಲ್ಲೆಯ 750 ಹಳ್ಳಿಗಳಲ್ಲಿ 'ರೈತ ಸಂಘರ್ಷ ಜಾಥಾ'ವನ್ನು ಹಮ್ಮಿಕೊಳ್ಳಲಿದ್ದೇವೆ. 150 ಜನ ಕಾರ್ಯಕರ್ತರು 15 ತಂಡಗಳಲ್ಲಿ ಎಲ್ಲಾ ತಾಲ್ಲೂಕುಗಳಲ್ಲೂ ಆಗಸ್ಟ್ 2ರವರೆಗೆ ಜಾಥಾ ನಡೆಸಿ, ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ. ಜುಲೈ 21ರ ರೈತ ಹುತಾತ್ಮ ದಿನದಂದು ಈ ಜಾಥಾ ಆರಂಭವಾಗಲಿದೆ. 'ಕೃಷಿ ಬಿಕ್ಕಟ್ಟಿಗೆ ರೈತರು ಕಾರಣರಲ್ಲ: ಸಕರ್ಾರಗಳು ಕಾರಣ. ಆತ್ಯಹತ್ಯೆಯಲ್ಲ ಆತ್ಮಸ್ಥೈರ್ಯದ ಹೋರಾಟ ನಮ್ಮ ಹಾದಿ, ಬನ್ನಿ ಜೊತೆಗೂಡಿ' ಎಂಬ ಘೋಷಣೆಯೊಂದಿಗೆ ಈ ಹಳ್ಳಿಗಳನ್ನು ಕಾರ್ಯಕರ್ತರು ತಲುಪಲಿದ್ದಾರೆ.

ನಾಡಿನ ಎಲ್ಲಾ ಪ್ರಜ್ಞಾವಂತರು, ಸಾಹಿತಿ-ಕಲಾವಿದರು, ಸಂಘಟನೆಗಳ ಪ್ರತಿನಿಧಿಗಳು, ವೈದ್ಯರು, ವಕೀಲರು, ಶಿಕ್ಷಕರು ಹಾಗೂ ಇನ್ನಿತರ ವೃತ್ತಿನಿರತರು ಈ ಜಾಥಾದಲ್ಲಿ ಪಾಲ್ಗೊಳ್ಳಲು ನಾವು ಮನವಿ ಮಾಡುತ್ತೇವೆ. ಅಂತಿಮವಾಗಿ ಆಗಸ್ಟ್ 3ರಂದು ಜಿಲ್ಲಾಧಿಕಾರಿ ಕಚೇರಿ ದಿಗ್ಬಂಧನ ಕಾರ್ಯಕ್ರಮ ಇರುತ್ತದೆ.

ಇದು ಒಂದು ಸಂಘಟನೆಯ ಕಾರ್ಯಕ್ರಮವಲ್ಲ. ಯಾವುದೇ ರಾಜಕೀಯ ಪಕ್ಷದ, ನಿರ್ದಿಷ್ಟ ಜಾತಿಗೆ ಸೀಮಿತವಾದ ಚಳವಳಿಯಲ್ಲ. ಮಾಧ್ಯಮದವರೂ ಸೇರಿದಂತೆ ನಾಡಿನ ಎಲ್ಲಾ ಮಾನವೀಯ ಜನರು ಜೊತೆಗೂಡಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ.

ಬುಧವಾರ, ಜುಲೈ 8, 2015

`ಮೌಖಿಕ ನಿರೂಪಣೆಗಳು ಮತ್ತು ಮೌಖಿಕ ಚರಿತ್ರೆ' ರಾಷ್ಟ್ರೀಯ ಸೆಮಿನಾರ್

ಭಾರತೀಯ ಜಾನಪದ ಸಂಶೋಧಕರ ತಂಡ, ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್, ಸೆಂಟ್ರಲ್ ಸಾಹಿತ್ಯ ಅಕಾಡೆಮಿ, ಸ್ಕೂಲ್ ಆಫ್ ಫೋಕ್ ಲೋರ್ ಸ್ಟಡೀಸ್, ಕಲಿಕಟ್, ಕನ್ನಡ ವಿಶ್ವವಿದ್ಯಾಲಯದ ಸಹಯೋಗದಲ್ಲಿ ` ಮೌಖಿಕ ನಿರೂಪಣೆಗಳು ಮತ್ತು ಮೌಖಿಕ ಚರಿತ್ರೆ' ಎಂಬ ರಾಷ್ಟ್ರೀಯ ಸೆಮಿನಾರ್ ಆಯೋಜಿಸಲಾಗಿದೆ. ಜುಲೈ 28,29 ರಂದು ಬೆಂಗಳೂರಿನ ಮುದ್ದಶ್ರೀ ದಿಬ್ಬ, ಕೆರೆಮೇಗಳ ದೊಡ್ಡಿ, ಕೈಲಂಚ ಹೋಬಳಿ, ರಾಮನಗರ ಜಿಲ್ಲೆ. ನಲ್ಲಿ ಸೆಮಿನಾರ್ ನಡೆಯಲಿದೆ. ಆಸಕ್ತರು ಗಮನಿಸಿ.

















ಶುಕ್ರವಾರ, ಜುಲೈ 3, 2015

ಕಂಸಾಳೆ-ಕೈಸಾಳೆ ; ಜಾನಪದ ಸಂಸ್ಕೃತಿ ಅನಾವರಣ

- ಹುಣಸೆವಾಡಿ ಶ್ರೀಕಾಂತ್
ಕರ್ನಾಟಕ ಜಾನಪದ ವೈವಿಧ್ಯತೆಗೆ ಹೆಸರಾದ ರಾಜ್ಯ. ಇಲ್ಲಿನ ಜನಪದ ಕಲೆಗೆ ಮಾರುಹೋಗದವರಿಲ್ಲ. ಜಾನಪದ ವೈವಿಧ್ಯತೆಯನ್ನು ಬೆಳ್ಳಿತೆರೆಯ ಮೇಲೆ ಅನಾವರಣಗೊಳಿಸಲು ಹಲವು ನಿರ್ದೇಶಕರು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ, ವಿಶಾಲ ವ್ಯಾಪ್ತಿಯಿರುವ ಜನಪದವನ್ನು ಕಟ್ಟಿಕೊಡುವುದು ಅಷ್ಟು ಸುಲಭದ ಕೆಲಸವಲ್ಲ. ಹಲವು ಜನಪದ ಚಿತ್ರಗಳನ್ನು ಕಟ್ಟಿಕೊಟ್ಟಿರುವ ಯಶಸ್ವಿ ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ಇದೀಗ ಕಂಸಾಳೆ-ಕೈಸಾಳೆ ಚಿತ್ರದ ಮೂಲಕ ಜನಪದ ಸೊಗಡನ್ನು ಬೆಳ್ಳಿತೆರೆಯ ಮೇಲೆ ತರುತ್ತಿದ್ದಾರೆ.

ಚಿನ್ನಾರಿಮುತ್ತ ನಿರ್ದೇಶಿಸಿ 19 ವರ್ಷಗಳ ನಂತರ ನಿರ್ದೇಶಕ ನಾಗಾಭರಣ ಕಂಸಾಳೆ-ಕೈಸಾಳೆ ಎನ್ನುವ ಮಕ್ಕಳ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಅನೇಕ ಜನಪದ ಪ್ರಾಕಾರಗಳನ್ನು ಮತ್ತು ಅವುಗಳ ಕಲಿಕಾ ವಿಧಾನಗಳನ್ನು ಚಿತ್ರದಲ್ಲಿ ಬಳಸಿಕೊಳ್ಳುವುದರ ಜತೆಗೆ ಜೀವನಶೈಲಿ, ಜೀವನಪ್ರೀತಿಯನ್ನು ಸಾರಲು ಹೊರಟಿದ್ದಾರೆ ಭರಣ. ನಗರದ ಜಂಜಡದ ಬದುಕಿನಲ್ಲಿ ಮಕ್ಕಳಿಗೆ ಜನಪದ ಕಲೆಯ ಅರಿವೇ ಇರುವುದಿಲ್ಲ ಅಂತಹುದರಲ್ಲಿ ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ಹೋದ ಒಬ್ಬ ನಾಲ್ಕನೇ ತರಗತಿ ಓದುವ ಹುಡುಗ ಉದ್ದೇಶ ಪೂರ್ವಕವಾಗಿಯೇ ತಪ್ಪಿಸಿಕೊಳ್ಳುತ್ತಾನೆ. ಅಲ್ಲಿ ಕಂಸಾಳೆ ತಂಡವೊಂದರ ಜತೆಯಾಗಿ ಆ ಕಲೆಯನ್ನು ರೂಢಿಸಿಕೊಳ್ಳುತ್ತಾನೆ. ಆ ಕಂಸಾಳೆ ತಂಡದಲ್ಲಿ ಒಬ್ಬನಾಗಿ ಆತ ಬೇರೊಂದು ಪ್ರಪಂಚವನ್ನು ನೋಡುತ್ತಾನೆ. ಈ ರೀತಿ ಸಾಗುತ್ತದೆ ಚಿತ್ರದ ಕಥೆ….

 

ಅಪ್ಪು-ಪಪ್ಪು ಚಿತ್ರದ ಮೂಲಕ ಗಮನಸೆಳೆದ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ  ಪುತ್ರ ಸ್ನೇಹಿತ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಉಳಿದಂತೆ ನಾಟ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ ಶ್ರೀಧರ್ ಹಾಗೂ ಪುಟಾಣಿ ಮಕ್ಕಳ ತಂಡ ಚಿತ್ರದಲ್ಲಿ ಕಾಣಿಸಿಕೊಂಡಿದೆ. ಕೆ. ಕಲ್ಯಾಣ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೆಲವು ಗೀತೆಗಳನ್ನು ಅವರೇ ಬರೆದಿದ್ದಾರೆ. ಇನ್ನು ಕೆಲವು ಗೀತೆಗಳನ್ನು ಮಾದೇಶ್ವರ ಪುಸ್ತಕದಿಂದ ಆಯ್ದುಕೊಂಡಿದ್ದಾರಂತೆ.





ಮೊನ್ನೆ ಈ ಚಿತ್ರದ ಹಾಡುಗಳ ಧ್ವನಿಮುದ್ರಿಕೆ ಸಮಾರಂಭ ನಡೆಯಿತು. ಸಾಮಾನ್ಯವಾಗಿ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ದೊಡ್ಡವರ ಪಾರುಪತ್ಯ ಇರುತ್ತದೆ. ಆದರೆ ಇದು ಮಕ್ಕಳ ಚಿತ್ರವೇ ಆಗಿರುವುದರಿಂದ ಅಲ್ಲಿ ಎಲ್ಲಾ ಉಸ್ತುವಾರಿಯನ್ನು ಮಕ್ಕಳೇ ನೋಡಿಕೊಳ್ಳುತ್ತಿರುವುದು ವಿಭಿನ್ನವಾಗಿತ್ತು. ಚಿತ್ರದಲ್ಲಿ ಅಭಿನಯಿಸಿರುವ ಮಕ್ಕಳೆಲ್ಲ ತಮಗೆ ತೋಚಿದ ರೀತಿ ತಮ್ಮ ಅನುಭವವನ್ನು ಹೇಳಿಕೊಂಡರು.


ಲಹರಿ ಸಂಸ್ಥೆ ಚಿತ್ರದ ಆಡಿಯೋಗಳನ್ನು ಮಾರುಕಟ್ಟೆಗೆ ತಂದಿದೆ. ಬೇಸಿಗೆ ರಜೆಯಲ್ಲಿ ಚಿತ್ರವನ್ನು ತೆರೆಕಾಣಿಸುವ ಆಲೋಚನೆಯಲ್ಲಿರುವ ನಿರ್ದೇಶಕ ನಾಗಾಭರಣ ಅವರು ಚಿತ್ರದ ಕುರಿತಂತೆ ಹೇಳಿದಿಷ್ಟು. ಇಂದು ಶಿಕ್ಷಣ ಯಾಂತ್ರೀಕೃತವಾಗಿದೆ. ಮಕ್ಕಳು ಓದುವುದನ್ನು ಬಿಟ್ಟು, ಬೇರೆ ಆಟ-ಪಾಠ ಕಲೆ ಇವುಗಳ ಬಗ್ಗೆ ಯೋಚಿಸುವುದಕ್ಕೂ ಆಗುತ್ತಿಲ್ಲ. ಅಂತಹ ಮಕ್ಕಳಿಗೆ ಜನಪದ ಕಲೆಯ ಬಗ್ಗೆ ಆಸಕ್ತಿ ಮತ್ತು ಗುರುಶಿಷ್ಯರ ಸಂಬಂಧ ನಮ್ಮ ಕಲಾಲೋಕದ ಅನಾವರಣ ಮತ್ತಿತರ ವಿಷಯಗಳನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ ಎಂದರು. ಮೈಸೂರಿನ ಮಹೇಶ್ ಅವರು ಈ ಚಿತ್ರದ ನಿರ್ಮಾಪಕರು. ಚಿತ್ರ ನಿರ್ಮಾಣ ಮಾಡುವ ತಮ್ಮ ಕನಸು ಈ ಚಿತ್ರದ ಮೂಲಕ ನನಸು ಮಾಡಿಕೊಂಡಿದ್ದಾರೆ ಅವರು.

ಭಸ್ಮಾಸುರರನ್ನು ಸೃಷ್ಟಿಸುವುದು ಸುಲಭ ನಿಯಂತ್ರಿಸುವುದು ಕಷ್ಟ




-ದಿನೇಶ್ ಅಮಿನಮಟ್ಟು
ಘಟನೆ-1

ನಾನಿನ್ನೂ ಆರನೇ ತರಗತಿ ವಿದ್ಯಾರ್ಥಿ, ಉಡುಪಿ ತಾಲ್ಲೂಕಿನ ಹೆಜಮಾಡಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ.ಮುಂಬೈ ನೆಲದಿಂದ ನನ್ನನ್ನು ಕಿತ್ತು ತಂದು ಅಲ್ಲಿ ನೆಟ್ಟಿದ್ದರು. ಇನ್ನೂ ಬೇರು ಬಿಟ್ಟಿರಲಿಲ್ಲ, ಹೊಂದಿಕೊಳ್ಳಲು ಹೆಣಗಾಡುತ್ತಿದ್ದ ಕಾಲ.ಮುಂಬೈನಿಂದ ಬಂದವ ಎನ್ನುವ ಕಾರಣಕ್ಕೆ ನನ್ನ ಸಹಪಾಠಿಗಳ ಒಂದು ಗುಂಪು ನನ್ನನ್ನು ಗೋಳಾಡಿಸುತ್ತಿತ್ತು. ಅವರ ಪ್ರಮುಖ ಅಸ್ತ್ರವೆಂದರೆ ಅಶ್ಲೀಲ ಬೈಗುಳು. ಕುಂಡದ ಹೂವಿನಂತೆ ಬೆಳೆದಿದ್ದ ನಾನು ಅಲ್ಲಿಯ ವರೆಗೆ ಅಂತಹ ಬೈಗುಳಗಳನ್ನೇ ಕೇಳಿರಲಿಲ್ಲ. 


ಯಾರಿಗೂ ಹೇಳಿಕೊಳ್ಳಲಾಗದೆ ಖಿನ್ನತೆಗೊಳಗಾಗಿದ್ದ ನಾನು ಬಿಡುಗಡೆಯ ದಾರಿ ಎಂಬಂತೆ ವಾಪಸು ಕೊಡಲು ನಿರ್ಧರಿಸಿದೆ. ಅವರು ಹೇಳುತ್ತಿರುವ ಬೈಗುಳಗಳನ್ನೆಲ್ಲ ನೋಟ್ ಬುಕ್ ನಲ್ಲಿ ಬರೆದುಕೊಳ್ಳತೊಡಗಿದೆ. (ಹಳ್ಳಿ ಹುಡುಗರ ಬೈಗುಳು ಬಹಳ ಕ್ರಿಯೇಟಿವ್ ಆಗಿರುತ್ತೆ. ಅವುಗಳನ್ನೆಲ್ಲ ಇಲ್ಲಿ ಬರೆಯಲಾರೆ). ಆ ನೋಟ್ಸ್ ಇಟ್ಟುಕೊಂಡು ಹೊಸ ಬೈಗುಳಗಳನ್ನು ನಾನೇ ಸೃಷ್ಟಿ ಮಾಡತೊಡಗಿದೆ.(ಬಹುಷ: ನನ್ನ ಬರವಣಿಗೆಯ ಹವ್ಯಾಸ ಅಲ್ಲಿಂದಲೇ ಪ್ರಾರಂಭವಾಗಿರಬಹುದೇನೋ). 

ಸಂಪೂರ್ಣ ಸನ್ನದ್ಧನಾದ ನಂತರ ಧೈರ್ಯ ತಂದುಕೊಂಡು ನನಗೆ ಬೈದವರನ್ನು ಕೆಣಕಿ ಕೆಣಕಿ ನಾನೇ ಬೈಯ್ಯತೊಡಗಿದೆ. ಬೈಯ್ಯುತಾ ಹೋದಂತೆ ನನ್ನ ಬೈಗುಳ ಶಬ್ದಕೋಶ ಯಾವ ಪರಿಯಲ್ಲಿ ಬೆಳೆಯಿತೆಂದರೆ ಶಾಲೆಯಲ್ಲಿ ಅತ್ಯಂತ ಕೆಟ್ಟದಾಗಿ ಬೈಯ್ಯುವವರು ಯಾರೆಂದರೆ ಎಲ್ಲರೂ ನನ್ನ ಕಡೆ ತೋರಿಸುತ್ತಿದ್ದರು. ಪ್ರೈಮರಿ ಶಾಲೆ ಬಿಡುವ ಹೊತ್ತಿಗೆ ಆ ಹವ್ಯಾಸವನ್ನು ಬಿಟ್ಟುಬಿಟ್ಟೆ. ಅಷ್ಟರಲ್ಲಿ ನನಗೆ ಬೈಯ್ಯುತ್ತಿದ್ದವರೆಲ್ಲ ನನ್ನ ಗೆಳೆಯರಾಗಿಬಿಟ್ಟಿದ್ದರು.

ಘಟನೆ-2

ವಿವೇಕಾನಂದರ ಕುರಿತ ನನ್ನ ವಿವಾದಾತ್ಮಕ ಅಂಕಣ ಪ್ರಕಟವಾಗಿದ್ದ ಕಾಲ. ಅದು ಪ್ರಕಟವಾದ ದಿನದ ಬೆಳಿಗ್ಗೆ ಎಂಟರಿಂದ ಹೆಚ್ಚು ಕಡಿಮೆ ಮೂರು ದಿನಗಳ ಕಾಲ ನನ್ನ ಮೊಬೈಲ್ ರಿಂಗ್ ಆಗುವುದು ನಿಂತಿರಲಿಲ್ಲ. ಆಫ್ ಮಾಡಿಟ್ಟ ಮೊಬೈಲ್ ಅನ್ನು ರಾತ್ರಿ ಹನ್ನೆರಡು ಗಂಟೆಗೆ ಆನ್ ಮಾಡಿದರೂ ಯಾರಾದರೊಬ್ಬ ಕಾಲ್ ಮಾಡಿ ಬೈಯ್ಯುವವ. ಅಕ್ಕ, ಅಣ್ಣ, ಅಪ್ಪ, ಅಮ್ಮ, ಹೆಂಡತಿ,ಮಗಳು ಎಲ್ಲರನ್ನೂ ಸೇರಿಸಿ ಅಶ್ಲೀಲವಾಗಿ ಬೈಯ್ಯುತ್ತಿದ್ದರು.ಸಹಿಸಿಕೊಳ್ಳಲಿಕ್ಕಾಗದಂತಹ ಬೈಗುಳು. ಬೈಯ್ಯುತ್ತಿದ್ದವರೆಲ್ಲರೂ ಸಂಸ್ಕೃತಿ ಪ್ರಚಾರಕರು. ರೆಗ್ಯುಲರ್ ಆಗಿ ಈ ರೀತಿ ಕಾಲ್ ಮಾಡುತ್ತಿದ್ದ ಕೆಲವರ ನಂಬರ್ ಗಳನ್ನು ‘ಲೋಪರ್-1, -2 ಎಂದೆಲ್ಲ ಸೇವ್ ಮಾಡಿಟ್ಟುಕೊಂಡಿದ್ದೆ. ಅವರಲ್ಲಿ ಒಬ್ಬ ಹುಬ್ಬಳ್ಳಿಯ ಹುಡುಗ. ಬಾಲ್ಯದ ನನ್ನ ಗೆಳೆಯರ ನೆನೆಪಾಗುವ ರೀತಿಯಲ್ಲಿ ಬೈಯ್ಯುತ್ತಿದ್ದ. 

ನಾನು ಅಸಹಾಯಕ. ತಿರುಗಿ ಬೈಯ್ಯಬೇಕೆಂದರೂ ಎಲ್ಲಿ ಕೂತು ಬೈಯ್ಯಲಿ? ಮನೆಯಲ್ಲಿ ಆ ರೀತಿ ಬೈಯ್ಯುತ್ತಾ ಕೂತರೆ ನನ್ನ ಹೆಂಡತಿ ಮತ್ತು ಮಗಳು ‘ಇವರೂ ಹೀಗೇನಾ? ಎಂದು ನನ್ನನ್ನೇ ಸಂಶಯಿಸುತ್ತಿದ್ದರೋ ಏನೋ? ಆಫೀಸಿಗೆ ಹೋಗುವಾಗ ಬಸ್ ನಲ್ಲಿ ಬೈದರೆ ಸಹಪ್ರಯಾಣಿಕರೆಲ್ಲ ಹುಚ್ಚರೆಂದು ಅಂದುಕೊಳ್ಳುತ್ತಿದ್ದರೇನೋ? ಆಫೀಸಿನಲ್ಲಿಯೂ ಇಂತಹ ಕೆಲಸ ಮಾಡುವಂತಿರಲಿಲ್ಲ. ಬೈಯ್ಯುವುದನ್ನು ಏರು ದನಿಯಲ್ಲಿಯೇ ಮಾಡಬೇಕೇ ಹೊರತು ಪಿಸುಗುಟ್ಟುವಂತಿಲ್ಲ. ಬೈಯ್ಯುವುದು ಕೂಡಾ ನಮ್ಮಂತಹವರಿಗೆ ಕಷ್ಟ ಎನ್ನುವುದು ನನಗೆ ಆಗಲೇ ಗೊತ್ತಾಗಿದ್ದು.

ಕೊನೆಗೂ ಆ ಹುಡುಗನ ಕಾಟ ತಾಳಲಾರದೆ ಬೆಳಿಗ್ಗೆ ಆರು ಗಂಟೆಗೆ ವಾಕಿಂಗ್ ಹೊರಡುವವ ನಾಲ್ಕು ಗಂಟೆಗೆ ಹೊರಟೆ. ಅದಕ್ಕಿಂತ ಮೊದಲು ತುಳು,ಕನ್ನಡ,ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ಏನೆಲ್ಲಾ ಬೈಯ್ಯಬಹುದು ಮತ್ತು ಹೇಗೆಲ್ಲಾ ಬೈಯ್ಯಬಹುದೆಂದು ನಾನು ಮನನ ಮಾಡಿಕೊಂಡು ತಯರಾಗಿದ್ದೆ. ಆ ದಿನ ನಾನು ವಾಕ್ ಮಾಡುವ ಮೈದಾನದಲ್ಲಿ ಯಾರಿನ್ನೂ ಬಂದಿರಲಿಲ್ಲ. ಮೈದಾನದ ಮಧ್ಯೆನಿಂತು ಹುಬ್ಬಳ್ಳಿಯ ‘ಲೋಫರ್ -1’ಗೆ ಪೋನ್ ಮಾಡಿದೆ. ಆತ ಪೋನ್ ಎತ್ತಿಕೊಂಡ ಕೂಡಲೇ ಆತನಿಗೆ ಮಾತನಾಡಲಿಕ್ಕೆ ಅವಕಾಶವೂ ಕೊಡದ ಹಾಗೆ ಎಲ್ಲ ಕೆಟ್ಟ,ಅಶ್ಲೀಲ ಪದಗಳನ್ನು ಉಗಿದುಬಿಟ್ಟೆ. ಅವನು ಸ್ವಲ್ಪ ಹೊತ್ತು ಪೋನ್ ಕಟ್ ಮಾಡಿ ಆನ್ ಮಾಡುವುದು ಮತ್ತೆ ನಾನು ಪೋನ್ ಮಾಡುವುದು ಸುಮಾರು ಒಂದು ಗಂಟೆ ಕಾಲ ನಡೆಯಿತು. ಅವನು ಹೆದರಿ ಮನೆಯಿಂದ ಹೊರಗೆ ಬಂದು ಬೈಕ್ ಸ್ಟಾರ್ಟ್ ಮಾಡಿ ಹೊರಟ.( ಆ ಶಬ್ದ ನನಗೆ ಕೇಳಿಸುತ್ತಿತ್ತು) ಯಾರದೋ ಮನೆಮುಂದೆ ಬೈಕ್ ನಿಲ್ಲಿಸಿ ಅವರೊಡನೆ ಮಾತನಾಡಿ ಪೋನ್ ಆಫ್ ಮಾಡಿದ. ಅದರ ನಂತರ ಆತ ನನಗೆ ಬೈದು ಪೋನ್ ಮಾಡಿಲ್ಲ. ಅಷ್ಟೊಂದು ಬೈದ ನಂತರ ನಾನೂ ನಿರಾಳವಾಗಿ ಬಿಟ್ಟೆ. ಆದರೆ ಯಾವುದಕ್ಕೋ ಕಲ್ಲೆಸೆಯಬಾರದು ಅಂತಾರಲ್ಲ, ಅಂತಹದ್ದನ್ನು ನಾನು ಯಾಕೆ ಮಾಡಿದೆ ಎಂದು ನನ್ನ ಬಗ್ಗೆಯೇ ಅಸಹ್ಯವೆನಿಸಿತು.


ನರೇಂದ್ರ ಮೋದಿಯವರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಒಂದಕ್ಷರ ಯಾರೇ ಬರೆದರೂ ಹೆಣ್ಣು-ಗಂಡು, ಹಿರಿಯರು-ಕಿರಿಯರು ಯಾವುದನ್ನೂ ಲೆಕ್ಕಿಸದೆ ಅವರ ಭಕ್ತರ ಗುಂಪು ಅಶ್ಲೀಲವಾಗಿ ಬೈಯ್ಯುವುದು,ನಿಂದಿಸುವುದು,ಚಾರಿತ್ರ್ಯಹರಣ ಮಾಡುತ್ತಿರುವುದನ್ನು ನೋಡಿದಾಗ ಈ ಎರಡು ಘಟನೆಗಳು ನೆನಪಾಯಿತು. ಈ ಬೈಗುಳ ವೀರರೆಲ್ಲರೂ ವಿದ್ಯಾವಂತರು. ಇವರು ಭಿನ್ನಾಭಿಪ್ರಾಯಗಳನ್ನು ಸೈದ್ಧಾಂತಿಕವಾಗಿ ಚರ್ಚಿಸಲು ಬರುವುದಿಲ್ಲ. ಬರೀ ಬೈಗುಳು. ತಮಗೊಲ್ಲದವರನ್ನು ಚುಚ್ಚಿ ಸಂತೋಷ ಪಡುವ ವಿಕೃತಾನಂದರು. ಇತ್ತೀಚೆಗೆ ಯಾರಾದರೂ ಬೈದರೆ ಈತ ಮೋದಿ ಅಭಿಮಾನಿ ಇರಬಹುದೇನೋ ಎಂದು ಸಂಶಯ ಪಡುವಷ್ಟು ಮೋದಿ ಭಕ್ತರ ಹಾವಳಿ ಆವರಿಸಿಕೊಂಡುಬಿಟ್ಟಿದೆ. ಇಂತಹವರನ್ನು ಕಾನೂನಿನ ಮೂಲಕವೇ ಸರಿಪಡಿಸಬಹುದೇನೋ ಎಂಬ ಸಣ್ಣ ಆಸೆಯಿಂದ ನಾನು ಪೊಲೀಸರಿಗೆ ದೂರು ನೀಡಿದರೆ ‘ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ’ ಎಂದು ಗುಲ್ಲೆಬ್ಬಿಸಲಾಯಿತು. ಸ್ವತ: ನರೇಂದ್ರ ಮೋದಿಯವರು ಮಾತ್ರವಲ್ಲ, ಸಂಸದ ಪ್ರತಾಪ ಸಿಂಹ ಕೂಡಾ ತಮ್ಮ ವಿರುದ್ದ ಬರೆದವರ ವಿರುದ್ಧ ಸೆಕ್ಷನ್ 66 ಎ ಬಳಸಿಕೊಂಡು ದೂರು ನೀಡಿದ್ದನ್ನು ಅವರು ಮರೆತೇ ಬಿಟ್ಟಿದ್ದರು.

ಆದರೆ ಈ ರೀತಿ ಬರೆಯುವ ಮೂಲಕ ಜಗತ್ತಿನ ಮುಂದೆ ತಾವು ಬೆತ್ತಲಾಗುತ್ತಿದ್ದೇವೆ ಎನ್ನುವ ಅರಿವು ಈ ಮೋದಿ ಭಕ್ತರಿಗಿಲ್ಲ. ಇತ್ತೀಚೆಗೆ ಇವರಲ್ಲಿ ಕೆಲವರನ್ನು ನಾನು ಬ್ಲಾಕ್ ಮಾಡಿದ್ದೇನೆ. ಇನ್ನು ಕೆಲವರನ್ನು ಉಳಿಸಿಕೊಂಡಿದ್ದೇನೆ. ಮೋದಿಯವರಿಗೆ ಎಂತೆಂತಹ ಅಭಿಮಾನಿಗಳಿದ್ದಾರೆನ್ನುವುದು ಜಗತ್ತಿಗೆ ಗೊತ್ತಾಗಲಿ. ಇವರನ್ನೆಲ್ಲ ಬಳಸಿಕೊಂಡು ಅಧಿಕಾರಕ್ಕೆ ಬಂದ ನರೇಂದ್ರಮೋದಿಯವರು ಈಗ ಸೋಷಿಯಲ್ ಮೀಡಿಯಾದಲ್ಲಿರುವ ತನ್ನ ಅಭಿಮಾನಿಗಳಿಗೆ ಸಂಯಮದಿಂದ ವರ್ತಿಸುವಂತೆ ಮನವಿ ಮಾಡಿದ್ದನ್ನು ಓದಿ ಇದನ್ನು ಬರೆಯಬೇಕೆನಿಸಿತು. ತಮ್ಮ ಆರಾಧ್ಯ ದೈವದ ಮಾತಿಗೆ ಭಕ್ತರು ಹೇಗೆ ಪ್ರತಿಕ್ರಿಯಿಸುತ್ತಾರೆನ್ನುವುದನ್ನು ಕಾದು ನೋಡಬೇಕು. ಭಸ್ಮಾಸುರರನ್ನು ಸೃಷ್ಟಿಸುವುದು ಸುಲಭ ನಿಯಂತ್ರಿಸುವುದು ಕಷ್ಟ.

ಬುಧವಾರ, ಜುಲೈ 1, 2015

ಅನ್ನಭಾಗ್ಯದ ಭಾವನಾತ್ಮಕ ವಿರೋಧ, ಬೆಂಬಲಗಳಾಚೆ


-ಅರುಣ್ ಜೋಳದಕೂಡ್ಲಿಗಿ


   ಅನ್ನಭಾಗ್ಯವನ್ನು ವಿರೋಧಿಸುವವರು ಮತ್ತು ಬೆಂಬಲಿಸುವವರು ಭಾವನಾತ್ಮಕವಾಗಿದ್ದಾರೆ. ಕೆಲವು ಜನಪ್ರಿಯ ನುಡಿಗಟ್ಟುಗಳನ್ನು ಅವಿಮರ್ಶಾತ್ಮವಾಗಿ ಬಳಸುತ್ತಿದ್ದಾರೆ. ಆದರೆ ಯೋಜನೆಯ ಆಶಯ, ಯೋಜನೆಯ ಫಲಾನುಭವಿಗಳ ಅರ್ಹತೆ, ಯೋಜನೆಗೆ ಒಳಗಾಗುವ ಕುಟುಂಬ ಮತ್ತು ಜನರ ಸಂಖ್ಯೆಯನ್ನು ಸೂಕ್ಷ್ಮವಾಗಿ ಗಮನಿಸದರೆ ಈ ಯೋಜನೆಯ ವಿರೋಧ ಮತ್ತು ಬೆಂಬಲದ ವಾಸ್ತವ ಸಂಗತಿಗಳು ಕಾಣುತ್ತವೆ.

  ಕೇಂದ್ರ ಸರ್ಕಾರವು ಅತ್ಯಂತ ಕಡು ಬಡವರಿಗಾಗಿ ಜಾರಿಗೆ ತಂದ ಅಂತ್ಯೋದಯ ಅನ್ನ ಯೋಜನೆ ರಾಜ್ಯದಲ್ಲಿ ಆಗಸ್ಟ್ ೨೦೦೨ ರಿಂದ ಜಾರಿಯಲ್ಲಿದೆ. ಬಡತನ ರೇಖೆಯಲ್ಲಿ ಅತ್ಯಂತ ಕೆಳಗಿನ ಸ್ತರದ ಕುಟುಂಬಗಳಾದ ಭೂ ರಹಿತ ಕೃಷಿ ಕಾರ್ಮಿಕರು, ವಿಧವೆಯು  ಮುಖ್ಯಸ್ಥರಾಗಿರುವ ಕುಟುಂಬಗಳು, ಯುವುದೇ ನಿರ್ದಿಷ್ಠ ವರಮಾನವಿಲ್ಲದ ಹೆಚ್.ಐ.ವಿ. ಪೀಡಿತರು/ಬಾಧಿತರು ಇರುವ ಕುಟುಂಬಗಳು, ಯಾವುದೇ ನಿಗದಿತ ವರಮಾನವಿಲ್ಲದ ವೃದ್ಧರು ಮುಖ್ಯಸ್ಥರಾಗಿರುವ ಕುಟುಂಬಗಳು ಈ ಯೋಜನೆಯ ವ್ಯಾಪ್ತಿಗೆ ಸೇರ್ಪಡೆಯಾಗಿರುತ್ತಾರೆ. ಇಂತಹ ಫಲಾನುಭವಿಗಳನ್ನು ಗ್ರಾಮ ಪಂಚಾಯ್ತಿಯವರು ಗ್ರಾಮ ಸಭೆಯಲ್ಲಿ ಗುರುತಿಸಿ ಶಿಫಾರಸ್ಸು ಮಾಡಿರುತ್ತಾರೆ. ಈ ಯೋಜನೆಯಡಿ ಈವರೆಗೆ ಕರ್ನಾಟಕದಲ್ಲಿ ೧೦,೩೪,೮೧೨ ಕುಟುಂಬಗಳನ್ನು ಗುರುತಿಸಲಾಗಿದ್ದು ಆ ಕುಟುಂಬಗಳಿಗೆ ಅನ್ನಭಾಗ್ಯದ ಸೌಲಭ್ಯವಿದೆ.

 ಕರ್ನಾಟಕದಲ್ಲಿ ಜನವರಿ ೨೦೧೫ ರ ವಿತರಣೆಯಂತೆ ಅಂತ್ಯೋದಯ ಅನ್ನ ಯೋಜನೆಯ ಕಾರ್ಡ ಉಳ್ಳವರ ಸಂಖ್ಯೆ ೧೦೧೭೦೩೪ ರಷ್ಟಿದ್ದಾರೆ, ಬಿಪಿಎಲ್ ಕಾರ್ಡದಾರರು ೯೩೨೫೪೯೮ ರಷ್ಟಿದ್ದಾರೆ. ಎಪಿಲ್ ಕಾರ್ಡದಾರರನ್ನೂ ಒಳಗೊಂಡಂತೆ ಒಂದು ಕೋಟಿ ೨೩ ಲಕ್ಷದಷ್ಟಿದ್ದಾರೆ. ೨೦೧೧ ರ ಜನಗಣತಿಯ ಪ್ರಕಾರ ಕರ್ನಾಟಕದ ಈಗಿನ ಒಟ್ಟು ಜನಸಂಖ್ಯೆ ೬,೧೦,೯೫,೨೯೭ ರಷ್ಟಿದೆ. ಜನರನ್ನು ಸರಕಾರ ಸೋಮಾರಿಗಳನ್ನಾಗಿಸುತ್ತಿದೆ ಎನ್ನುವ ಚರ್ಚೆಯನ್ನು ಸೂಕ್ಷ್ಮವಾಗಿ ಗಮನಸಿದರೆ ಕರ್ನಾಟಕದ ಎಲ್ಲಾ ಜನರಿಗೆ ಅನ್ನಭಾಗ್ಯದ ವಿತರಣೆಯಾಗುತ್ತಿದೆ ಎಂಬಲ್ಲಿಗೆ ಲಗತ್ತಾಗುತ್ತಿದೆ. ವಾಸ್ತವವೆಂದರೆ ಅನ್ನಭಾಗ್ಯದ ಚರ್ಚೆ ಕರ್ನಾಟಕದ ಒಂದು ಕೋಟಿ ೨೩ ಲಕ್ಷಜನರಿಗೆ ಅನ್ವಯವಾಗುವ ಚೌಕಟ್ಟಿನಲ್ಲಿ ನಡೆಯಬೇಕಾಗಿದೆ. ಈ ಜನರನ್ನು ಸೋಮಾರಿಗಳು ಎಂದರೆ, ೪ ಕೋಟಿ ೭೭ ಲಕ್ಷದಷ್ಟು ಜನರು ತುಂಬಾ ಕಷ್ಟಪಟ್ಟು ದುಡಿಯುವವರಾ? ಅಥವಾ ಈ ಸಂಖ್ಯೆಯಲ್ಲಿ ಸೋಮಾರಿಗಳು ಇಲ್ಲವೇ? ಎನ್ನುವ ಪ್ರಶ್ನೆಗಳು ಹುಟ್ಟುತ್ತವೆ.

  ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ೨೦೧೩ (ಓಈSಂ) ಮತ್ತು ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗಳು ಸಂಯೋಜಿತವಾಗಿ ರಾಜ್ಯದಲ್ಲಿ ಜಾರಿಯಲ್ಲಿವೆ. ಈ ಯೋಜನೆಗೆ ಅರ್ಹತೆ ಪಡೆಯುವ ಫಲಾನುಭವಿಗಳು ಸಾಮಾನ್ಯವಾಗಿ ನಿರ್ದಿಷ್ಠ ವರಮಾನವಿಲ್ಲದ ನಿರ್ಗತಿಕರು, ಭೂರಹಿತ ಕೂಲಿ ಕಾರ್ಮಿಕರು. ಇವರಿಗೆ ನಿರ್ದಿಷ್ಠ ಕೆಲಸವಿಲ್ಲದ ಕಾರಣ ಈ ಯೋಜನೆ ಜಾರಿಯಾಗಿದೆ. ಆದರೆ ಈ ಯೋಜನೆಯ ಆಶಯವನ್ನು ಸರಿಯಾಗಿ ಗ್ರಹಿಸದ ಎಸ್.ಎಲ್.ಭೈರಪ್ಪ, ಕುಂವಿ, ದೇಜಗೌ, ಅವರು ಯಾವ ಕಾರಣಕ್ಕಾಗಿ ಯೋಜನೆ ಆರಂಭವಾಗಿದೆಯೋ, ಅದೇ ಕಾರಣವನ್ನು ಮುಂದು ಮಾಡಿ ವಿರೋಧಿಸುತ್ತಿದ್ದಾರೆ. ಇವರು ನಿರ್ದಿಷ್ಠ ಕೆಲಸವಿಲ್ಲದ ಜನರನ್ನು ಕುರಿತು ‘ಸೋಮಾರಿಗಳು’ ಎಷ್ಟು ಅಮಾನವೀಯ ಎಂಬುದನ್ನು ಗಮನಿಸಿ.

  ಅಷ್ಟಕ್ಕೂ ‘ಸೋಮಾರಿಗಳು’ ಎಂದರೆ ಯಾರು? ಐದು ವರ್ಷ ಪೂರೈಸಿದ ಎಂ.ಪಿ, ಎಂಎಲ್‌ಎ, ಗಳು ತಾವು ಗೆದ್ದ ಕ್ಷೇತ್ರಕ್ಕೆ ಬಿಡಿಗಾಸಿನ ಕೆಲಸ ಮಾಡದಿದ್ದರೂ ಅವರನ್ನು ‘ಸೋಮಾರಿಗಳು’ ಎಂದು ಕರೆಯುವುದಿಲ್ಲ. ಭಕ್ತಾದಿಗಳಿಂದ ಕಾಣಿಕೆ ಸ್ವೀಕರಿಸಿ ಕೋಟಿಗಟ್ಟಲೆ ಗುಡ್ಡೆ ಹಾಕಿಕೊಂಡ ಮಠಗಳನ್ನು ಒಳಗೊಂಡಂತೆ ಎಲ್ಲಾ ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರನ್ನು ನಾವೆಂದೂ ಸೋಮಾರಿಗಳೆಂದು ಜರಿಯಲಿಲ್ಲ. ಖೊಟ್ಟಿ ಹಾಜರಿ ಹಾಕಿ ಕೆಲಸವನ್ನೆ ಮಾಡದೆ ಸಂಬಳ ಪಡೆವ ಲಕ್ಷಾಂತರ ಸರಕಾರಿ ನೌಕರರಿದ್ದಾರೆ ಅವರ‍್ಯಾರು ಸೋಮಾರಿಗಳಲ್ಲ. ಒಂದು ಕೆಲಸಕ್ಕೆ ಸಾಕಷ್ಟು ಸಂಬಳವನ್ನು (ಫಲವನ್ನು) ಪಡೆದೂ ಆ ಕೆಲಸಕ್ಕೆ ವಿಮುಖರಾಗಿರುವವರನ್ನು (ಉದಾ: ಯುಜಿಸಿ ವೇತನ ಪಡೆದು ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಪಾಠಮಾಡದ ಅಧ್ಯಾಪಕರು) ಸೋಮಾರಿಗಳೆಂದು ಕರೆಯಲಾರೆವು. ಬಂಡವಾಳ ಶಾಹಿಗಳಿಗೆ ಬಿಟ್ಟಿ ನೀರು, ಭೂಮಿ, ವಿದ್ಯುತ್ ಕೊಟ್ಟು ಅವರನ್ನು ಉತ್ಪಾದನೆಗೆ ಆಹ್ವಾನಿಸಿದರೆ ಅವರನ್ನು ಸೋಮಾರಿಗಳನ್ನಾಗಿ ಮಾಡಿದಂತಲ್ಲವೆ ಎಂದು ನಾವೆಂದೂ ಕೇಳಲಿಲ್ಲ. ಆದರೆ ಬಡತನದ ರೇಖೆಯ ಕೆಳಗೆ ಜೀವಿಸುವ ಜನರಿಗೆ ಮಾತ್ರ ‘ಸೋಮಾರಿ’ ಪಟ್ಟ ಕಟ್ಟುತ್ತಿದ್ದೇವೆ.

 ಒಬ್ಬ ಕೂಲಿ ಮಾಡುವ ಗ್ರಾಮೀಣ ರೈತ/ಮಹಿಳೆ, ನಗರದ ದಿನಗೂಲಿ ಕಾರ್ಮಿಕರ ಜೀವನ ಅವರ ದಿನದಿನದ ದುಡಿಮೆಯನ್ನು ಆಶ್ರಯಿಸಿರುತ್ತದೆ. ಒಂದು ದಿನ ಕೂಲಿ ತಪ್ಪಿದರೂ ಕುಟುಂಬ ಏರುಪೇರಾಗುತ್ತದೆ. ಹಾಗಾಗಿ ಕುಟುಂಬದ ಸಮತೋಲನ ಕಾಪಾಡಲು ಆಕೆ/ಆತ ದಿನದಿನದ ಕೂಲಿಯನ್ನು ತಪ್ಪಿಸುವಂತಿಲ್ಲ. ಈ ಮಧ್ಯೆ ತಿಂಗಳಲ್ಲಿ ಒಂದೆರಡು ದಿನ ಬಿಡುವಾಗಿರಲು ಅನ್ನಭಾಗ್ಯದ ವಿತರಣೆ ನೆರವಾಗಬಹುದು.  ಇನ್ನು ಮಳೆಯನ್ನೆ ನಂಬಿ ಬಿತ್ತುವ ರೈತ/ಮಹಿಳೆ ಮಳೆ ಬರದಿದ್ದರೆ ಏನು ಮಾಡಬೇಕು? ಸಾಲ ಮಾಡಿ ಬಿತ್ತಿದ ಹೊಲ ಬಂಜೆಯಾದರೆ ಯಾವ ಕೆಲಸ ಮಾಡಬೇಕು? ತಾನು ಕೆಲಸ ಮಾಡಬೇಕಾದ ಹೊಲವೇ ರೈತರನ್ನು ಹೊರದಬ್ಬುವ ಸನ್ನಿವೇಷ ನಿರ್ಮಾಣವಾಗಿರುವಾಗ ಆತ/ಆಕೆ ಮತ್ಯಾವ ಕೆಲಸ ಮಾಡಬೇಕು? ಹೀಗೆ ಜನರು ತಾತ್ಕಾಲಿಕವಾಗಿ ಕೆಲಸವಿಲ್ಲದೆ ಕಂಗಾಲಾದಾಗ ಅನ್ನಭಾಗ್ಯ ಅಂತಹ ಅಸಹಾಯಕ ಜನರಿಗೆ ನೆರವಾಗಿದೆ. ಇದು ಎಲ್ಲರಿಗೂ ತಿಳಿಯಬಹುದಾದ ತೀರಾ ಸಾಮಾನ್ಯ ಸಂಗತಿ. ಇದರ ಅರಿವಿಲ್ಲದ ಅರಿವುಗೇಡಿಗಳು ಮಾತ್ರ ಈ ಯೋಜನೆ ಜನರನ್ನು ಸೋಮಾರಿಗಳನ್ನಾಗಿಸಿದೆ ಎಂದು ಹೇಳಿಕೆ ಕೊಡುತ್ತಿದ್ದಾರೆ.

  ಕೂಲಿಗಾಗಿ ಬೇಕಾಬಿಟ್ಟಿ ದುಡಿಸಿಕೊಳ್ಳುವವರಿಗೆ ತೀರಾ ಕಡಿಮೆ ಕೂಲಿಗೆ ಆಳುಗಳು ಬೇಕು. ದುಡಿದೇ ತಿನ್ನಬೇಕಾದ ಲಕ್ಷಾಂತರ ಬಡವರು ‘ಊಟ’ಕ್ಕಾಗಿಯಾದರೂ ಕಡಿಮೆ ಕೂಲಿಗೂ ದುಡಿವ ಅನಿವಾರ್ಯಕ್ಕೆ ಕಟ್ಟುಬೀಳುತ್ತಿದ್ದರು. ಅಂತಹ ಅನಿವಾರ್ಯತೆ ಬಡತನದ ರೇಖೆಯ ಕೆಳಗಿರುವ ಜನರಿಗೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಕಾರಣ ಅನ್ನಭಾಗ್ಯ ಯೋಜನೆ. ಹೀಗೆ ಅನಿವಾರ್ಯಕ್ಕೆ ಕಡಿಮೆ ಕೂಲಿಗೆ ಹೋಗದ ಇವರನ್ನು ಕೂಲಿಗೆ ಕರೆವ ಯಜಮಾನರು ‘ಸೋಮಾರಿ’ಗಳೆಂದು ಕರೆಯುತ್ತಾರೆ. ಪ್ರಗತಿಪರ ಎಂದು ಗುರುತಿಸಿಕೊಂಡ ಸ್ವಾಮೀಜಿಯೊಬ್ಬರು ಅನ್ನಭಾಗ್ಯ ಜನರನ್ನು ಸೋಮಾರಿಗಳನ್ನಾಗಿಸಿದೆ ಎಂದು ಟೀಕಿಸಿದ್ದರು. ಇವರ ಜತೆ ಸಾಹಿತಿಯೊಬ್ಬರು ವಾಗ್ವಾದಕ್ಕೆ ಬಿದ್ದು ಜಟಾಪಟಿ ನಡೆದಿತ್ತು. ಆಗ ನನಗೆ ಅನ್ನಿಸಿದ್ದು ತಮ್ಮ ಮಠದ ಉಚಿತ ದಾಸೋಹಕ್ಕೆ ಜನರು ಹೋಗದೆ ಇರುವ ಸಿಟ್ಟಿಗೆ ಈ ಸ್ವಾಮೀಜಿ ಈ ಹೇಳಿಕೆ ನೀಡಿರಬಹುದಾ ಎಂದು.
  ಗ್ರಾಮೀಣ ಭಾಗದಲ್ಲಿ ಜನರಿಗೆ ಉದ್ಯೋಗ ಕಲ್ಪಿಸಲು ಮಹಾತ್ಮಗಾಂದಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ರೂಪಿಸಿದೆ. ಈ ಯೋಜನೆಗೆ ಕೋಟ್ಯಾಂತರ ರೂಗಳು ಖರ್ಚಾಗಿರುವ, ಲಕ್ಷಾಂತರ ಜನರಿಗೆ ಉದ್ಯೋಗ ಕೊಟ್ಟಿರುವ ಖೊಟ್ಟಿ ಲೆಕ್ಕ ಸಿಗುತ್ತದೆ. ವಾಸ್ತವವಾಗಿ ಈ ಯೋಜನೆ ಎಷ್ಟು ಜನರಿಗೆ ಉದ್ಯೋಗ ನೀಡಿದೆ ಎಂದು ಗ್ರಾಮೀಣ ಭಾಗದಲ್ಲಿ ಸುತ್ತಾಡಿ ಜನರಿಂದ ಮಾಹಿತಿ ಪಡೆದರೆ ವ್ಯಾಪಕ ಬ್ರಷ್ಟಾಚಾರದ ವಾಸನೆ ದಟ್ಟವಾಗಿ ಮೂಗಿಗೆ ಅಡರುತ್ತದೆ. ಬಹುಶ: ಈ ಯೋಜನೆಯ ದುರ್ಬಳಕೆಯು ಜನರಿಗೆ ಉದ್ಯೋಗ ವಂಚಿಸಿದೆ. ನಿಜಕ್ಕೂ ಜನರಿಗೆ ಉದ್ಯೋಗ ಒದಗಿಸಬಲ್ಲ ಇಂತಹ ಯೋಜನೆಗಳ ಸಮರ್ಪಕ ಬಳಕೆಯ ಬಗ್ಗೆ ಸಮಾಜ ವಿಜ್ಞಾನಿಗಳು, ಸಾಹಿತಿಗಳು ಮಾತನಾಡಬೇಕಿದೆ. 

 ‘ಮೀನು ಹಿಡಿಯುವುದನ್ನು ಕಲಿಸಬೇಕು, ಮೀನು ಹಿಡಿದು ಕೊಡಬಾರದು’ ಎಂಬ ಚೀನಿ ಗಾದೆಯೊಂದಿದೆ. ಮೀನು ಹಿಡಿಯುವುದನ್ನು ಕಲಿಸಿದರೆ ಹಸಿದವರು ಹಸಿವಾದಗಲೆಲ್ಲಾ ತಾನೇ ಮೀನು ಹಿಡಿದು ತಿನ್ನಬಹುದು. ಹಿಡಿದ ಮೀನು ಕೊಟ್ಟರೆ, ಹಸಿವಾದಾಗ ಮೀನು ಹಿಡಿಯುವವರಿಗೆ ಕಾಯಬೇಕಾಗುತ್ತದೆ ಎನ್ನುವುದು ಇದರ ಸರಳ ಸತ್ಯ. ಅಂದರೆ ದುಡಿದು ತನ್ನ ಹಸಿವನ್ನು ತಾನೇ ನೀಗಿಸಿಕೊಳ್ಳುವ ವಾತಾವರಣ ನಿರ್ಮಿಸಬೇಕೇ ವಿನಹ, ಹಸಿವನ್ನು ನೀಗಿಸುವ ಸಿದ್ದ ಪರಿಕರಗಳನ್ನು ಕೊಡಬಾರದು ಎನ್ನುವಲ್ಲಿಗೆ ಈ ಮಾತು ಲಗತ್ತಾಗುತ್ತದೆ. ಇದನ್ನು ಕೆಲವರು ಅನ್ನಭಾಗ್ಯಕ್ಕೂ ಅನ್ವಯಿಸಿ ಮಾತನಾಡುವುದನ್ನು ಕೇಳಿದ್ದೇನೆ.

  ಇದನ್ನು ಇನ್ನೊಂದು ಮಗ್ಗಲಿನಿಂದ ನೋಡೋಣ, ಮೀನಿರುವ ಸ್ಥಳ (ಕೆರೆ,ನದಿ,ಹಳ್ಳ ಇತ್ಯಾದಿ) ನೀರಿಲ್ಲದೆ ಒಣಗಿದ್ದರೆ, ನೀರಿದ್ದೂ ಮೀನಿಲ್ಲದಿದ್ದರೆ ? ಈ ಮೇಲಿನ ಮಾತು ಅನ್ವಯವಾಗುವುದಿಲ್ಲ. ಈ ಮಾತು ಅನ್ವಯವಾಗಲು ಮೊದಲು ಬತ್ತಿದ ಕೆರೆ ನದಿಗೆ ನೀರು ತುಂಬುವಂತೆ ವ್ಯವಸ್ಥೆ ಮಾಡಬೇಕು, ನೀರು ತುಂಬಿದ ಮೇಲೆ ಮೀನು ಬಿಡಬೇಕು, ಆ ಮೀನು ಇನ್ನೊಬ್ಬರ ಹಸಿವು ನೀಗಿಸುವಷ್ಟು ದೊಡ್ಡವನ್ನಾಗಿ ಸಾಕಬೇಕಾಗುತ್ತದೆ. 

ಬತ್ತಿದ ಕೆರೆ/ನದಿ/ಹಳ್ಳಕ್ಕೆ ನೀರು ತುಂಬುವ ಕೆಲಸ ಆಗುವವರೆಗೂ, ನೀರು ತುಂಬಿದ ನಂತರ ಮೀನು ಸಾಕುವ ವರೆಗೂ ಈ ಸ್ಥಳವನ್ನೇ ನಂಬಿರುವ ಜನರ ಹಸಿವೆಗೆ ಪರ್ಯಾಯವನ್ನು ಕೊಡಬೇಕಲ್ಲವೆ? ಈ ಕೆಲಸವನ್ನು ಜನಪರವಾದ ಆಳುವ ಪ್ರಭುತ್ವ ಮಾಡಬೇಕಾಗುತ್ತದೆ. ಹೀಗೆ ಪರ್ಯಾಯ ಒದಗಿಸುವ ಸಂದರ್ಭದಲ್ಲೇ ‘ಮೀನು ಹಿಡಿಯುವುದನ್ನು ಕಲಿಸಬೇಕೇ ಹೊರತು, ಮೀನು ಹಿಡಿದು ಕೊಡಬಾರದು’ ಎಂಬ ಮಾತನ್ನು ಹೇಳಿದರೆ ಹೇಗೆ ಹಾಸ್ಯಾಸ್ಪದವಾಗುತ್ತದೆ ಎಂಬುದನ್ನು ಗಮನಿಸಿ. ಅನ್ನಭಾಗ್ಯದ ಬಗೆಗಿನ ಟೀಕೆಗೂ ಈ ಕಥೆ ಅನ್ವಯವಾಗುತ್ತದೆ ಎಂದು ವಿಶೇಷವಾಗಿ ಹೇಳಬೇಕಿಲ್ಲ.




ಪುಸ್ತಕದ ರಾಮಯ್ಯ, ಬುಕ್ಕಿನ ಬುಡೇನ್ ಸಾಬರು

ಸೌಜನ್ಯ:ಪ್ರಜಾವಾಣಿ
ಗ್ರಾಮವೊಂದರ ಬಳಿಯ ಬನ್ನಿಮರದ ಕೆಳಗೆ ವಿಸ್ತಾರವಾಗಿಯೇ ಕಟ್ಟಲಾದ ಜಗಲಿ. ಅದರ ಮೇಲೆ ಸತಿಕಲ್ಲು. ಕಟ್ಟೆಯ ಕೆಳಗೆ ವೀರಗಲ್ಲು. ಅಂದರೆ ಕೆಳಗೆ ನಿಲ್ಲಿಸಿದ ವೀರನ ಹೆಂಡತಿಯೇ ಕಟ್ಟೆಯ ಮೇಲಿದ್ದವಳಿರಬೇಕು. ಆಕೆ ಆ ಜಾಗದಲ್ಲಿ ಸತಿ ಹೋಗಿದ್ದುದರಿಂದ ಅವಳ ನೆನಪಿನಲ್ಲಿ ಜಗಲಿ ಮತ್ತು ಬನ್ನಿ ಮರವಿದ್ದಿತು. ಈ ಸ್ಮಾರಕದಿಂದ ಐವತ್ತು ಗಜ ದೂರಕ್ಕೆ ಮತ್ತೊಂದು ಸತಿಕಲ್ಲು ನೆರಳಿಲ್ಲದೆ ಅನಾಥವಾಗಿದ್ದಿತು. ವಿಚಾರಿಸಿದಲ್ಲಿ ಆ ಸುತ್ತಿನ ದಾರಿ ಹೋಕರು ಅವಳೂ ಕಟ್ಟೆಯ ಕೆಳಗಿನ ವೀರನ ಹೆಂಡತಿಯೇ ಎಂದರು! ಮೊದಲ ಹೆಂಡಿರೊಡನೆ ಕೆಂಡಕೊಂಡವಾಗಬೇಕಿದ್ದವಳು ಹಿಂದಿನ ರಾತ್ರಿಯೇ ತಪ್ಪಿಸಿಕೊಂಡು ಹೋಗಿಬಿಟ್ಟಳು. ಅದರಿಂದ ಅವಳ ಕಲ್ಲನ್ನು ದೂರದಲ್ಲಿ ಬಿಸಿಲಲ್ಲಿ ನಿಲ್ಲಿಸಲಾಗಿದೆ ಎಂದು ತಿಳಿಸಿದರು. ಬೆಳಗೆರೆ ಕೃಷ್ಣಶಾಸ್ತ್ರಿಗಳು ಇದನ್ನು ಕೇಳಿ ‘ಭೇಷ್ ಇಲ್ಲಿ ಬೆಂಕಿಗೆ ಬಿದ್ದವಳಿಗಿಂತ ಎಲ್ಲಿಯಾದರೂ, ಹೇಗಾದರೂ ಬದುಕಲೇಬೇಕು ಎಂಬ ಛಲದಿಂದ ಊರನ್ನೇ ತೊರೆದು ಹೋದಳಲ್ಲಾ ಅವಳೇ ಗಟ್ಟಿಗಿತ್ತಿ’ ಎಂದರು.
ಮುಂದಿನ ಗ್ರಾಮದಲ್ಲಿ ಇದೇ ಕೆಂಡಕೊಂಡವಾದವರ ಕಥನ ಕೇಳಿಸಿಕೊಳ್ಳಲು ಮೂಡು ದಿಕ್ಕಿನ ಹಾದಿಯಲ್ಲಿರಲು, ಅತ್ತ ಕಡೆಯಿಂದ ಅದೇ ಬಂಡಿ ದಾರಿಯಲ್ಲಿ ಇಬ್ಬರು ಗ್ರಾಮಸ್ಥರು ಎದುರಾದರು. ಒಬ್ಬರ ಬಲ ಹೆಗಲಲ್ಲಿ ಜೋಳಿಗೆಯಂಥ ಬ್ಯಾಗು ನೇತಾಡುತ್ತಿದ್ದರೆ, ಇನ್ನೊಬ್ಬರ ಜೇಬಿನಲ್ಲಿ ನೋಟ್‌ಬುಕ್ಕೊಂದು ಸೇರಿಕೊಂಡಿದ್ದಂತೆ ಹೊರಕ್ಕೇ ಕಾಣಿಸುತ್ತಿತ್ತು. ಕೃಷ್ಣಶಾಸ್ತ್ರಿಗಳು ಹೆಗಲಲ್ಲಿ ಚೀಲ ನೇತಾಡುತ್ತಿದ್ದವರನ್ನು ಪುಸ್ತಕದ ರಾಮಯ್ಯನವರೆಂದೂ, ಜುಬ್ಬಾದಲ್ಲಿ ನೋಟ್‌ಬುಕ್ ತೂರಿಸಿಕೊಂಡಿದ್ದವರನ್ನು ಬುಡೇನ್‌ಸಾಬರೆಂದೂ ಪರಿಚಯಿಸಿದರು.
ಗ್ರಾಮಗಳ ಮೇಲೆ ರಾಮಯ್ಯನವರದೂ, ಬುಡೇನ್ ಸಾಬರದೂ ಒಂದೇ ಕಾಯಕ. ಗಮಕ ವಾಚನ ಮತ್ತು ಭಜನೆ. ರಾಮಯ್ಯನವರ ಜೋಳಿಗೆಯಲ್ಲಿದ್ದುದು ‘ಕರ್ಣಾಟ ಭಾರತ ಕಥಾ ಮಂಜರಿ’, ‘ಹರಿಶ್ಚಂದ್ರ ಕಾವ್ಯ’, ‘ಜೈಮಿನಿ ಭಾರತ’ ಇತ್ಯಾದಿ. ಬುಡೇನ್ ಸಾಬರ ಜೇಬಿನಲ್ಲಿದ್ದುದು ಇನ್ನೂರು ಪುಟದ ನೋಟ್ ಪುಸ್ತಕ. ಅಂಗಡಿಯಲ್ಲಿ ಕೊಂಡ ನೋಟ್‌ಬುಕ್ಕಿಗೆ ಅವರೇ ಕೈಯ್ಯಾರೆ ತತ್ವಪದಗಳನ್ನು ಪ್ರತಿ ಮಾಡಿಕೊಂಡು ಭಜನೆಯ ಮೇಳಗಳಲ್ಲಿ ಹಾಡುತ್ತಿದ್ದುದರಿಂದ ಅವರು ಬುಕ್ಕಿನ ಬುಡೇನ್ ಸಾಬರಾಗಿದ್ದರು. ಹಾಗೆ ನೋಡಿದರೆ ರಾಮಯ್ಯನವರ ಬ್ಯಾಗಿನಲ್ಲಿ ಇದ್ದುದೂ ಪ್ರಿಂಟೆಡ್ ಬುಕ್ಕೇ. ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರರಿಂದ ಸಂಪಾದಿತವಾಗಿ, ಕೆಂಗಲ್ ಹನುಮಂತಯ್ಯನವರ ಕಾಲದಲ್ಲಿ ಪ್ರಕಟವಾದದ್ದು. ಆದರೆ ಅದು ರಾಮಯ್ಯನವರ ಲೆಕ್ಕದಲ್ಲಿ ಪುಸ್ತಕವೇ ಆಗಿ, ಬುಡೇನ್ ಸಾಬರದು ಏನೂ ಪ್ರಿಂಟ್ ಆಗದ ರೂಲಿನ ನೋಟ್-ಬುಕ್ ಆಗಿದ್ದಿತು.
ಕೃಷ್ಣಶಾಸ್ತ್ರಿಗಳು ಇಬ್ಬರನ್ನೂ ಯಾವ ಗ್ರಾಮದ ಹಾದಿಯಿಂದ ಬರುತ್ತಿರುವುದು ಎನ್ನುವಲ್ಲಿ, ರಾಮಯ್ಯನವರು ಬಿಟ್ಟು ಬಂದ ಗ್ರಾಮದ ಹೆಸರು ಹೇಳಿ, ‘ಅದೇ ಇನ್ನೇನು ಯುಗಾದಿ ಬಂತಲ್ಲ, ಮಳೆ ಕರೆಯುವುದಕ್ಕೋಸ್ಕರ ವಿರಾಟ ಪರ್ವವನ್ನೂ ಸಾಬರಿಂದ ತತ್ವಪದವನ್ನೂ ಹಾಡಿಸಿದರು’ ಎಂದು ಹೇಳಿದರು. ಕೃಷ್ಣಶಾಸ್ತ್ರಿಗಳು ಪುಸ್ತಕದ ರಾಮಯ್ಯ ನವರನ್ನು ಕೆಣಕಲೆಂದೇ ‘ಮಂತ್ರಕ್ಕೆ ಮಾವಿನ ಕಾಯಿ ಉದುರುವುದುಂಟೇ? ನಿಮ್ಮ ಓದಿಗೆ, ಸಾಬರ ಪದಕ್ಕೆ ಮುಗಿಲು ಕಣ್ಣು ಬಿಟ್ಟು ಕರುಣೆ ತೋರುವುದುಂಟೇ’ ಎಂದರು. ರಾಮಯ್ಯನವರು ಶಾಸ್ತ್ರಿಗಳ ಕೆಣಕಾಟಕ್ಕೆ ಉತ್ತರ ವಿಲ್ಲದವರಂತೆ ‘ನೀವು ಹೇಳುವುದು ಸರಿ. ತೊಗಲಿನ ಮಾನವನೇನು ಬಲ್ಲ, ಮುಗಿಲ ಮಳೆಯ ನಿಜವ’ ಎಂಬ ಕಾವ್ಯಮಯ ಗಾದೆಯ ಮಾತಾಡಿದರು. ಬುಡೇನ್ ಸಾಬರು ‘ಅದು ಹಂಗಲ್ಲ ಬಿಡಿ, ಮಳೆರಾಯ ಬರದಿದ್ದರೆ ರೈತಾಪಿಗಳ ಕಷ್ಟ ಏನು ಅಂತ ಗೊತ್ತಲ್ಲ. ಆ ಬೇಗೆ ತಡೆಯಲು ಪಾಂಡವರ ಅಜ್ಞಾತವಾಸ ಸಂಕಟದ ಮಳೆಯ ಹನಿಯೇ ಸಮಾಧಾನ’ ಎಂದರು.
ಹೀಗೆನ್ನುವಲ್ಲಿ ಮಳೆ ಬರಲಿ, ಬಿಡಲಿ ಜನ ವಿರಾಟ ಪರ್ವ ಓದುವುದರಲ್ಲಿ ಒಂದು ಮರ್ಮವಿದೆ ಎನಿಸಿತು. ರಾಮಯ್ಯನವರು ಭಾರತ ಕಥನವನ್ನು ಗಮಕರೂಪದಲ್ಲಿ ಸುಶ್ರಾವ್ಯವಾಗಿ ವಾಚನ ಮಾಡುವವರಲ್ಲದೆ ಅದಕ್ಕೆ ವ್ಯಾಖ್ಯಾನ ಮಾಡುವುದರ ಅರಿವನ್ನೂ ಅದೇ ಗ್ರಾಮ ಸುತ್ತಿನ ಪೂರ್ವಿಕರಿಂದ ಕಲಿತುಕೊಂಡಿದ್ದರು. ಅವರೊಂದಿಗೆ ನಿರಂತರವಾಗಿ ಓಡಾಡುತ್ತಿದ್ದ ಬುಡೇನ್ ಸಾಬರು ಅಷ್ಟುಹೊತ್ತಿಗೆ ‘ಅದೇ ವಿರಾಟ ಪರ್ವದ ಕಡೆಕಡೇಲೆ ಅಲ್ಲವೆ ಭಾರತದ ಸಂತಾನ ಬೀಜ ಇರುವುದು’ ಎಂದು ನಮ್ಮ ತಲೆಯಲ್ಲಿ ಭಾರತ ಕಥನ ಸ್ವಾರಸ್ಯದ ಬೀಜ ನೆಟ್ಟರು. ರಾಮಯ್ಯನವರು ‘ಭಾರತ ಕಥನದಲ್ಲಿ ಕಡೆಯ ಲಗ್ನವಾಗುವುದು ವಿರಾಟಪರ್ವದಲ್ಲಿ. ಅಲ್ಲಿ ಉತ್ತರೆಗೂ, ಅಭಿಮನ್ಯುವಿಗೂ ಮದುವೆಯಾಗಿ ಪರೀಕ್ಷಿತ್ ರಾಜ ಹುಟ್ಟಿ ಅವನ ಪುತ್ರ ಜನಮೇಜಯನೇ ತಾನೇ ತನ್ನ ತಾತ ಮುತ್ತಾತಂದಿರ ಕಥೆಯನ್ನೆಲ್ಲ ಕೇಳುವುದು. ಆ ಸಂತಾನ ಸಾಯುವುದಿಲ್ಲವಲ್ಲ’ ಎಂದರು.
ನಮ್ಮ ಅನೇಕಾನೇಕ ಕಥನಗಳು ಯುದ್ಧವನ್ನೂ, ರಕ್ತಪಾತವನ್ನೂ, ಸಾವನ್ನೂ ಹೇಳಿದರೆ ರಾಮಯ್ಯನವರೂ, ಬುಡೇನ್ ಸಾಬರೂ ಹಿಂಸೆಯ ನಡುವೆಯೂ ಹೆಣ್ಣು ಗಂಡಿನ ಲಗ್ನ ಸಂಗತಿಯನ್ನೂ, ಸಂತಾನ ಬೀಜ ಮುಂದುವರಿಯುವುದನ್ನೂ ಹುಡುಕುವಂತಿದ್ದರು. ಕೃಷ್ಣಶಾಸ್ತ್ರಿಗಳು ‘ನಿಮ್ಮ ಮಾತು ಸತ್ಯ’ ಎಂದರು. ರಾಮಯ್ಯನವರು ಕೊಂಚ ಉತ್ಸಾಹ ತಾಳಿದವರಂತೆ ‘ಅದಷ್ಟೇ ಆಗಿದ್ದರೆ ನಾವು ಯಾಕೆ ಅದನ್ನ ಓದಾನ, ಪಾಂಡವರು ನಮ್ಮಂಗೆ ದನಾ ಕಾದದ್ದು, ಆಮೇಲೆ ನಡು ಬಗ್ಗಿಸಿ ಕಾಯಕ ಮಾಡಿದ್ದು ಅಲ್ಲೇ ಅಲ್ಲವೇ’ ಎಂದರು. ರಾಮಯ್ಯನವರು, ಅಜ್ಞಾತವಾಸದಲ್ಲಿ ಶ್ರಮಜೀವಿಗಳಾಗಿದ್ದ ಪಾಂಡವರನ್ನು ತಮ್ಮೊಡನೆ ಸಮೀಕರಿಸಿಕೊಳ್ಳುತ್ತಿದ್ದಾರೆಂದೆನಿಸಿತು. ಅಷ್ಟರಲ್ಲಿ ರಾಮಯ್ಯನವರು ‘ಮತ್ತೆ ಆ ಥರದಲ್ಲಿ ಪಾಂಡವರು ವಿರಾಟರಾಯನ ಅರಮನೆಗೆ ಕವಡೆ, ಸೌಟು, ಕೋಲು ಹಿಡಕೊಂಡು ಬಂದರಲ್ಲಾ ಅವರ ಕೈಯ್ಯಾಗಿನ ಆಯುಧಗಳೆಲ್ಲ ಏನಾದವು ಅಂತಗೊತ್ತಲ್ಲ’ ಎಂದರು. ಲಕ್ಷ್ಮೀಶನ ಜೈಮಿನಿ ಭಾರತ, ತೊರವೆ ನರಹರಿ, ಕುಮಾರವ್ಯಾಸನನ್ನು ಸಾಕಷ್ಟು ಚೆನ್ನಾಗಿಯೇ ಓದಿಕೊಂಡಿದ್ದ ಕೃಷ್ಣಶಾಸ್ತ್ರಿಗಳು ಬೇಕೆಂತಲೇ ‘ಪಾಂಡವರ ಕೈಯ್ಯಲ್ಲಿದ್ದ ಆಯುಧಗಳು ಎಲ್ಲಿ ಹೋದವು ಅಂತ ನಿಮ್ಮ ಬಾಯಿಂದಲೇ ಬರಲಿ’ ಎಂಬ ಪ್ರಶ್ನೆ ಹಾಕುವಲ್ಲಿ, ನಿಂತಲ್ಲಿಯೇ ಆರಂಭವಾದ ವಿಚಾರ ಸಂಕಿರಣಕ್ಕೆ ಕಾವು ಹತ್ತತೊಡಗಿತು.
ರಾಮಯ್ಯನವರು ಭೀಮನ ಗದೆ, ಅರ್ಜುನನ ಗಾಂಡೀವ, ಪಾಶುಪತಾಸ್ತ್ರ ಇವೆಲ್ಲ ಬನ್ನಿ ಮರದ ಮೇಲೆ ಹೆಣವಾಗಿ ಮುದುರಿ ಕೂತದ್ದು ವಿರಾಟ ಪರ್ವದ ಮತ್ತೊಂದು ಬೀಜ ಸಂಗತಿಯೆಂದರು. ಲೋಕದ ನರಮಾನವರನ್ನೇ ಒಬ್ಬರಿಗೊಬ್ಬರು ಆಗದವರಂತೆ ಮಾಡಿ ಹೋರಾಟವಿಕ್ಕಿಸಿ, ಹೆಣವನ್ನಾಗಿಸಿಬಿಡುವ ಆಯುಧವೇ ಸತ್ತು ಮುಳ್ಳು ಹಿಡಿದ ಬನ್ನಿ ಮರದಲ್ಲಿ ಶವಗಂಟಾಗಿ ಬಿದ್ದಿತಲ್ಲ ಅದು ತಾನೇ ಲೋಕಕ್ಕೆ ಬೇಕಾದದ್ದು. ಅಂಥ ಆಯುಧಗಳನ್ನು ಗಂಟು ಕಟ್ಟಿ, ಒಬ್ಬೊಬ್ಬರೂ ಒಂದೊಂದು ಕಾಯಕ ಮಾಡಿ ನಮ್ಮಂತೆ ಗ್ರಾಮಸ್ಥರಾದರಲ್ಲ ಅದೇ ಮುಖ್ಯವಾದದ್ದು. ಅಂದು ರಾಮಯ್ಯನವರು ವಿರಾಟ ಪರ್ವದ ಒಳ ಮರ್ಮವನ್ನೂ ಹಳ್ಳಿಯವರು ಆ ಭಾಗವನ್ನು ಯಾಕೆ ಓದುತ್ತಾರೆಂದೂ ಬಿಡಿಸತೊಡಗಿದರು. ಬುಡೇನ್ ಸಾಬರು ಆಯುಧಗಳು ಹೆಣವಾದ ಕಥೆಯಿಂದಲೇ ಅದನ್ನು ನಮ್ಮ ಗ್ರಾಮಸ್ಥರು ಓದುತ್ತಾರೆಂದಲ್ಲ, ಅದಕ್ಕಿಂತ ಬಲವಾಗಿ ‘ಕಂಡವರ ಹೆಂಡಿರ ಮೇಲೆ ಕಣ್ಣು ಮಡುಗುವವರು ಉಡುಗಿ ಬಿದ್ದ ಕಥೆಯೂ ಅಲ್ಲೇ ಸೇರಿಕೊಂಡೈತಲ್ಲ’ ಎಂದು ವಿರಾಟ ಪರ್ವದ ಓದಿನ ಪ್ರಾಮುಖ್ಯತೆಗೆ ಇನ್ನೊಂದು ಕಥನ ಭಾಗವನ್ನು ಸೇರಿಸಿದರು. ತತ್ವ ಪದಗಳ ವಾಕ್ಯ ಮಾದರಿಯಲ್ಲೇ ಬುಡೇನ್ ಸಾಬರು ಕೊಂಚ ಲಯ ಬದ್ಧವಾಗಿಯೇ ಮಾತಾಡುತ್ತಿದ್ದರು. ರಾಮಯ್ಯನವರು ಇದ್ದಕ್ಕಿದ್ದಂತೆಯೇ ನೈತಿಕ ಸಂಗತಿಯ ನೆಲೆಗಟ್ಟಿನಲ್ಲಿ ನಿಂತು ಬಿಟ್ಟವರಂತೆ ‘ಹೌದು, ಆ ಹೆಣ್ಣು ಮಗಳು ಅರ್ಧರಾತ್ರಿ ಹೊತ್ತಲ್ಲಿ ಇವನು ಘನ ಗಂಡಸು ಅಂತ ಬಂದು ಕಾಲಿಡಿದುಕೊಂಡರೆ, ಈ ನರಗುರಿ ಆಡಿದ ಮಾತನ್ನು ನೀವು ಕೇಳಿಸಿಕೊಂಡಿದ್ದೀರಲ್ಲ’ ಎಂದು ತಾವು ಭೀಮ ದ್ರೌಪದಿಯರ ಸಂಭಾಷಣೆಯನ್ನು ಅದಾಗಲೇ ಗುಟ್ಟಾಗಿ ಕೇಳಿಸಿಕೊಂಡವರಂತೆ ಮಾತಾಡಿದರು. ನೀವು ಏನಾದರೂ ಹೇಳಿ, ಕೆಂಡಕೊಂಡವಾಗದೇ ಓಡಿಹೋದಳಲ್ಲ ಆ ಹೆಂಗಸೇ ಸೈ ಎಂದು ನಾವು ಅದಾಗ ತಾನೇ ನೋಡಿ ಬಂದ ಸತಿ ಜಗುಲಿಯ ಕಡೆಗೆ ಕೈ ಮಾಡಿ ತೋರಿಸಿದರು. ಗಂಡಸರು ಸೇರಿಕೊಂಡು ಹೆಣ್ಣು ಹೆಂಗಸನ್ನು ಬೆಂಕಿಗೆ ತಳ್ಳುವವರಂತೆ, ಈ ಭೀಮನು ರಾತ್ರಿಯ ಕತ್ತಲಲ್ಲಿ ‘ಕಾಪಾಡು’ ಅಂತ ಬಂದವಳನ್ನು ‘ಬೇಕಾದರೆ ಬೆಂಕಿಗೆ ಬೀಳು. ನಾನು ನಿನ್ನ ಸೂಳು ಪಾಳೆಯವ ಬಿಟ್ಟವನು’ ಅನ್ನುತ್ತಾನಲ್ಲ, ಹೆಣ್ಣು ಮಕ್ಕಳನ್ನು ಉದ್ಧಾರ ಮಾಡುವ ಮಾತೇ ಇದು ಎಂದು ಆಕ್ಷೇಪಣೆಯ ದನಿ ಎತ್ತಿ ಆ ಭಾಗದ ಪದ್ಯಗಳನ್ನು ಪುಸ್ತಕ ನೋಡದೆಯೇ ವಾಚನ ಮಾಡಿದರು. ತಾವು ಹಾಡಿದ ಪದ್ಯಗಳ ರಾಗದ ಸ್ವಾರಸ್ಯಕ್ಕೆ ನಾವು ತಲೆದೂಗಲಾಗಿ ಭೀಮನ ಮೇಲಿನ ಆಕ್ಷೇಪಣೆಯನ್ನು ಮರೆತು, ಅಯುಧವನ್ನು ಮರದ ಮೇಲೆ ಮಡಗಿದ ಭೀಮ, ಕೀಚಕನನ್ನು ಸುರಗಿ ಹಿಡಿದು ಕೊಲ್ಲಲು ಹೋದ ಎಂದು ಕೆಲವು ಅರ್ಥದಾರಿಗಳು ಹೇಳುವುದುಂಟು, ಅದು ಹಂಗಲ್ಲವೆಂದರು. ಆ ವಾಕ್ಯವನ್ನು ‘ಮೆರೆವ ಗಂಡುಡುಗೆಯನು ರಚಿಸಿದ. ಸೆರಗಿನೊಯ್ಯಾರದಲಿ ಸುರಗಿಯ ತಿರುಹುತಿರುಳೊಬ್ಬನೇ ನಿಜಾಲಯವ ಹೊರವಂಟ’ ಎನ್ನುವಲ್ಲಿ ಸುರಗಿ ಎಂದರೆ ಕತ್ತಿ ಹಿಡಿದು ಬಂದ ಎನ್ನುವುದುಂಟು. ಹಾಗೆಂದರೆ ಕತ್ತಿ ಎಂಬುದು ನಿಜ. ಆದರೆ ಹೆಣ್ಣು ರೂಪದ ಭೀಮ ಕೀಚಕನ ಭೇಟಿಗೆ ಹೋಗುವಲ್ಲಿ ಕತ್ತಿ ಹಿಡಿಯುವುದುಂಟೇ? ಅಷ್ಟೇ ಅಲ್ಲ ಅವರು ಆಯುಧಗಳನ್ನೆಲ್ಲ ಷಂಡಗೊಳಿಸಿದ್ದರಲ್ಲ. ಅಜ್ಞಾತದಲ್ಲಿ ಕತ್ತಿ ಹಿಡಿಯುವಂತಿಲ್ಲ. ಇಷ್ಟರ ಮೇಲೆ ಹೆಣ್ಣು ವೇಷ ಬೇರೆ. ಹೀಗಾಗಿ ಸುರಗಿ ಎಂಬುದೊಂದು ಹೂವು. ಪ್ರಣಯದ ನಾಟಕಕ್ಕೆ ಹೂವು ಹಿಡಿದು ಹೋಗುತ್ತಿದ್ದಾನೆಂದು ರಾಮಯ್ಯನವರು ಇನ್ನಿತರ ಅರ್ಥದಾರಿಗಳ ವ್ಯಾಖ್ಯಾನಕ್ಕೆ ಒಂದು ಪಾಠಾಂತರವನ್ನೂ ಸೂಚಿಸಿದರು.
ರಾಮಯ್ಯನವರು ವಾಕ್ಯವನ್ನೋ ಒಂದು ಪದ್ಯವನ್ನೋ ನಿಂತಲ್ಲೇ ಹಾಡಿ ತೋರಿಸುವಲ್ಲಿ ದೂರ ದೂರದಲ್ಲಿ ಹೊಲದ ಗೆಯ್ಮೆಯಲ್ಲಿದ್ದವರಿಗೆಲ್ಲ ಅವರ ಗಾಯನ ಆ ಬೆಳ್ಳಂಬೆಳಗ್ಗೆಯೇ ತೇಲಿ ತೇಲಿ ಕೇಳಿಸತೊಡಗಿತು. ಪುಸ್ತಕದ ರಾಮಯ್ಯನವರು ಶಾಲಾ ಮಾಸ್ತರರಾಗಿದ್ದುದರಿಂದ ಅವರ ಪದ್ಯದ ಓದು, ಪದಗಳ ಉಚ್ಚಾರ, ಅದಾದ ಮೇಲೆ ಮಾತನಾಡತೊಡಗಿದರೆ ಪ್ರತಿಮಾತು, ವಾಕ್ಯದ ಸ್ಪಷ್ಟತೆ ಕಿವಿಗೆ ಆಪ್ಯಾಯಮಾನವೆನಿಸುತ್ತಿತ್ತು. ಈ ನಿವೃತ್ತ ಮಾಸ್ತರರು ಮಕ್ಕಳಿಗೆ ಕನ್ನಡವನ್ನು ಅದೆಷ್ಟು ಚೆನ್ನಾಗಿ ಬೋಧಿಸಿರಬಹುದು. ಕನ್ನಡದ ಚಂದವೆಂದರೆ ಇದೇ ಅನ್ನಿಸುವಂತಿತ್ತು. ಪರಸ್ತ್ರೀಗೆ ಅಳುಪಿದವನನ್ನು ಭೀಮನು ಸಂಹಾರ ಮಾಡಿದ ಮೇಲೆ ಇದೇ ಸಂಗತಿಗೆ ಆನುಷಂಗಿಕವಾಗಿ, ಅರ್ಜುನ ಕಂಡ ಹೆಂಗಸರನ್ನೆಲ್ಲ ಲಗ್ನವಾಗುತ್ತಿದ್ದನಲ್ಲ, ಹಾಗಿದ್ದವನು ಇದೇ ವಿರಾಟ ಪರ್ವದಲ್ಲಿ ಪಾಠ ಕಲಿಸಿದ ಉತ್ತರೆಯನ್ನು ತಾನು ಲಗ್ನವಾಗಲು ಒಲ್ಲೆ, ಮಗ ಅಭಿಮನ್ಯುವಿಗೆ ಕೊಡಮಾಡಿ ಅಂದನಲ್ಲ ಅದು ನೋಡಿ ಪುರುಷಾಧಿಕ್ಯ, ಕಂಡ ಹೆಣ್ಣು ಮಕ್ಕಳನ್ನು ಲಗ್ನವಾದದ್ದಲ್ಲ ಗಂಡಸುತನ ಎಂದರು. ಭೀಮ, ಅರ್ಜುನರ ಪ್ರಸಂಗದ ಹಿನ್ನೆಲೆಯಲ್ಲಿ ರಾಮಯ್ಯನವರು ಗಂಡಸುತನ ಎಂಬುದಕ್ಕೆ, ಅದು ಹೆಣ್ಣು ಮಕ್ಕಳ ರಕ್ಷಣೆಯಲ್ಲಿ ಅಡಗಿದೆ ಎಂಬಂತೆ ವ್ಯಾಖ್ಯಾನ ನೀಡಿದರು. ಇಷ್ಟರಲ್ಲಿ ಬುಡೇನ್ ಸಾಬರು ತಮ್ಮ ದೊಗಳೆ ಜುಬ್ಬಾದ ಮೊಳದುದ್ದ ಜೇಬಿನಿಂದ ನೋಟು ಬುಕ್ಕನ್ನು ತೆಗೆದು ಈ ರಾಮಯ್ಯನವರು ಇಲ್ಲಿಯತನಕ ಏನೇನು ಹೇಳಿದರೋ ಅದರ ಸಾರಾಂಶವೆಲ್ಲ ಇಲ್ಲಿ ಉಂಟು ನೋಡಿ ಎಂದರು. ಆ ನೋಟು ಬುಕ್ಕಿನ ತುಂಬ ನೂರಾರು ತತ್ವ ಪದಗಳು ಅವರೇ  ಕಾಪಿ ಮಾಡಿದವಾಗಿದ್ದವು. ಷರೀಫ್ ಸಾಹೇಬರ ಪದಗಳೊಂದಿಗೆ ಪುರಂದರ ದಾಸರ, ಕನಕದಾಸರ ಕೀರ್ತನೆಗಳೂ ಇದ್ದವು. ಈ ಕೀರ್ತನೆಗಳೊಂದಿಗೆ ಅಕ್ಕಮಹಾದೇವಿಯ ವಚನಗಳೂ ತತ್ವಪದರೂಪ ಪಡೆದು ಅಡಕವಾಗಿದ್ದವು. ಮಹಾಭಾರತ, ರಾಮಾಯಣದ ಸಾರವೇ ತತ್ವಪದಗಳು ಎಂಬ ಮಾತಿನ ಜಾಡನ್ನೇ ಹಿಡಿದು ನಮ್ಮ ಬಯಲಾಟಗಳೂ ಅದೇ ಮಹಾಕಾವ್ಯಗಳ ಭಾಗ ಭಾಗಗಳ ಆಟವಲ್ಲವೇ ಎಂದ ಬುಡೇನ್ ಸಾಬರು ತಾವು ನಾಟಕಗಳ ಹಾಡುಗಾರಿಕೆಯಲ್ಲಿ ಭಾಗವಹಿಸುವುದಾಗಿ ಹೇಳಿದರು.
ಜನಪದ ಸಮೂಹಕ್ಕೆ ಸಾಹಿತ್ಯ ಕಲೆ ಎಂದರೆ ಅದು ಶ್ರವ್ಯ ಮತ್ತು ದೃಶ್ಯವೇ. ದೃಶ್ಯ, ಶ್ರವ್ಯ ರಂಜನೆಯು ಜರುಗುತ್ತಿದ್ದುದು ಹಗಲು ಕಾಯಕದ ನಂತರ ರಾತ್ರಿಯಲ್ಲಿ. ಗ್ರಾಮೀಣ ಓದು, ಬಯಲಾಟ ಯಾವ ಪದವಿಗೂ ಸಂಬಂಧಿಸಿದ್ದಲ್ಲ. ಗ್ರಾಮಸ್ಥರ ಬದುಕಿಗೆ ಮತ್ತು ನೈತಿಕತೆಗೆ ಸಂಬಂಧಿಸಿದ್ದು. ಥಟ್ಟನೆ ಏನೋ ನೆನಪಿಸಿಕೊಂಡವರಂತೆ ರಾಮಯ್ಯನವರು ‘ಅಲಲೇ ಹೊತ್ತು ಏರುತ್ತಿದೆ. ಮಕ್ಕಳು ಮೊಮ್ಮಕ್ಕಳು ಸ್ಕೂಲಿಗೋಗಬೇಕು. ದನಕರು ಆಚೆ ಬಿಡಬೇಕು’ ಎಂದರು. ಕೃಷ್ಣಶಾಸ್ತ್ರಿಗಳು ಮಕ್ಕಳು ಮೊಮ್ಮಕ್ಕಳು ಎಷ್ಟು ಜನ ಎಂದರು. ರಾಮಯ್ಯನವರು ತಮ್ಮ ಕುಟುಂಬದ ಸದಸ್ಯರನ್ನೆಲ್ಲಾ ನೆನೆಯುತ್ತಾ, ‘ದನಕರುಗಳನ್ನೂ ಸೇರಿಸಿ ಹೇಳಲೋ, ಬಿಟ್ಟು ಹೇಳಲೋ ಎಂದು ನಗುತ್ತ ಬುಡೇನ್ ಸಾಬರೊಡನೆ ಮೂಡು ದಿಕ್ಕಿಗೆ ಬಿರ ಬಿರನೆ ನಡೆದರು.