ಶನಿವಾರ, ಆಗಸ್ಟ್ 20, 2016

ರೈತ ಚಳವಳಿಗೆ ಹೊಸ ಜೀವ ಬರಲಿದೆಯೆ?





-ನಟರಾಜ ಹುಳಿಯಾರ

ಸೌಜನ್ಯ:ಪ್ರಜಾವಾಣಿ

ಕರ್ನಾಟಕದ ರೈತ ಚಳವಳಿಯ ಎತ್ತರದ ದಿನಗಳಲ್ಲಿ ‘ಪ್ರಜಾವಾಣಿ’ಯ ವರದಿಗಾರರಾಗಿದ್ದ ಕೆ. ಪುಟ್ಟಸ್ವಾಮಿ ಕನಕಪುರದಲ್ಲಿ ರೈತ ಚಳವಳಿಯಲ್ಲಿ ಭಾಗಿಯಾಗಿದ್ದ ರೈತರನ್ನು ಕುರಿತು ಬರೆಯುತ್ತಾರೆ: ‘ರಾಜಕಾರಣಿಗಳನ್ನು, ಅಧಿಕಾರಿಗಳನ್ನು, ವಿಶೇಷವಾಗಿ ಪೊಲೀಸರು, ಸಹಕಾರಿ ಇಲಾಖೆಯ ಸಿಬ್ಬಂದಿಯನ್ನು ಕಂಡರೆ ಹೆದರಬಾರದೆಂಬ ಮನೋಭಾವನೆ ಅವರಲ್ಲಿ ಮೂಡಿತ್ತು.

ಜೈಲಿಗೆ ಹೋಗಿಬಂದದ್ದು ಅವರ ಆತ್ಮಸ್ಥೈರ್ಯಕ್ಕೆ ಕುಂದುಂಟು ಮಾಡಿರಲಿಲ್ಲ. ಬದಲಿಗೆ, ಅದನ್ನು ಹೇಳಿಕೊಳ್ಳುವುದು ಅವರಿಗೆ ಹೆಮ್ಮೆಯ ವಿಷಯವಾಗಿತ್ತು. ಅನ್ಯಾಯ ಪ್ರತಿಭಟಿಸಿ ಸೆರೆಮನೆಗೆ ಹೋಗುವಾಗ ಸಜ್ಜೆ ಮನೆಗೆ ಹೋಗುವಂತೆ ಕಾತರ, ಉತ್ಸಾಹದಿಂದ ಹೋಗಬೇಕೆಂಬ ಗಾಂಧೀಜಿಯ ಮಾತುಗಳು ಅವರಿಗೆ ಮನನವಾಗಿದ್ದವು’.

ಮೊನ್ನೆ, ಭಾನುವಾರ ಮಹಾದಾಯಿ ಹೋರಾಟದಲ್ಲಿ ಬಂಧನಕ್ಕೊಳಗಾಗಿ, ಜೈಲಿನಿಂದ ಬಿಡುಗಡೆಗೊಂಡ ರೈತರು ಹಸಿರು ಟವಲ್ಲುಗಳನ್ನು ಬೀಸುತ್ತಿದ್ದ ಫೋಟೊಗಳನ್ನು ನೋಡಿದಾಗ ಈ ಮಾತುಗಳು ನೆನಪಾದವು. ಆದರೆ ಒಂದು ವ್ಯತ್ಯಾಸವಿತ್ತು.

ಮೊನ್ನೆ ಜೈಲಿನಿಂದ ಬಿಡುಗಡೆಯಾದ ಕಾರ್ಯಕರ್ತರನ್ನು ಸ್ವಾಗತಿಸಿದವರು ಜೆಡಿಎಸ್ ನಾಯಕರು. ಹಿಂದೊಮ್ಮೆ ಗುಂಡೂರಾವ್ ನೇತೃತ್ವದ ಸರ್ಕಾರದ ವಿರುದ್ಧ ರೈತ ಚಳವಳಿ ಸೃಷ್ಟಿಸಿದ ಆಡಳಿತವಿರೋಧಿ ಅಲೆಯಿಂದಲೂ ಅಧಿಕಾರಕ್ಕೆ ಬಂದ ಜನತಾಪಕ್ಷದ ನಾಯಕರುಗಳು ಮುಂದೆ ರೈತ ಚಳವಳಿಯನ್ನೇ ಮುರಿಯಲೆತ್ನಿಸಿದ್ದು ಈಗ ಇತಿಹಾಸದ ಭಾಗವಾಗಿದೆ.

ಇದೀಗ ಮತ್ತೆ ಜೆಡಿಎಸ್ ರೈತರನ್ನು ಹುಡುಕಿಕೊಂಡು ಹೊರಟಿರುವುದು ಕುತೂಹಲಕರ. ಅದೇನೇ ಇರಲಿ, ಎಂಬತ್ತರ ದಶಕದಲ್ಲಿ ಗುಂಡೂರಾವ್ ನೇತೃತ್ವದ ಸರ್ಕಾರ ಮಾಡಿದ ತಪ್ಪನ್ನೇ ಮೊನ್ನೆ ಮಾಡಿದ್ದ ಕಾಂಗ್ರೆಸ್ ಸರ್ಕಾರ, ಕೊನೆಗೂ ರೈತರನ್ನು ಬಿಡುಗಡೆ ಮಾಡಿ ಇನ್ನಷ್ಟು ಅಪಾಯದಿಂದ ತಪ್ಪಿಸಿಕೊಳ್ಳಲೆತ್ನಿಸಿದೆ.

ಮೊನ್ನೆ ರೈತರನ್ನು ಭೇಟಿ ಮಾಡಲು ಹೋಗಿದ್ದ ದಿನೇಶ್ ಗುಂಡೂರಾವ್ ಹಾಗೂ ಎಚ್.ಕೆ.ಪಾಟೀಲರಿಗೆ ರೈತ ಮಹಿಳೆಯೊಬ್ಬರು ‘ಅವತ್ತು ಸಿಕ್ಕಿದ್ದರೆ ನಿಮಗೇ ಬಡೀತಿದ್ವಿ’ ಎಂದು ರೇಗಿದಾಗ, ಈ ಕಾಲದ ರೈತ ಚಳವಳಿಯ ಝಳ ಅವರಿಗೂ ಸರ್ಕಾರಕ್ಕೂ ಸರಿಯಾಗಿ ತಾಗಿರಬಹುದು.

ಮಹಾದಾಯಿ ರೈತ ಸ್ಫೋಟದ ಬೆನ್ನಹಿಂದೆಯೇ ಕಳೆದ ವಾರ ತಿಪಟೂರಿನಿಂದ ಹಿರಿಯ ರೈತರು ಹಾಗೂ ಹೊಸ ತಲೆಮಾರಿನ ರೈತರು ರಾಜ್ಯ ರೈತಸಂಘದ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ನಾಯಕತ್ವದಲ್ಲಿ ಕಾಲ್ನಡಿಗೆಯಲ್ಲಿ ಬೆಂಗಳೂರಿನತ್ತ ಹೊರಟಿದ್ದರು.

ಅವರು ಕೊಬ್ಬರಿಗೆ ಕ್ವಿಂಟಾಲಿಗೆ ₹ 15000  ಹಾಗೂ ಅಡಿಕೆಗೆ ₹ 45000 ಬೆಂಬಲ ಬೆಲೆ ಕೇಳುತ್ತಿದ್ದರು. ಜೊತೆಗೆ, ಆನ್‌ಲೈನ್ ಟ್ರೇಡಿಂಗನ್ನು ಕರಾರುವಾಕ್ಕಾಗಿ ಜಾರಿಗೆ ತರಬೇಕೆಂದು ಒತ್ತಾಯಿಸುತ್ತಿದ್ದರು.

ಎರಡು ವರ್ಷಗಳ ಕೆಳಗೆ ಕರ್ನಾಟಕ ಸರ್ಕಾರ ಆನ್‌ಲೈನ್ ಟ್ರೇಡಿಂಗ್ ಶುರು ಮಾಡಿದಾಗ ದಲ್ಲಾಳಿಗಳ ಮೋಸಕ್ಕೆ ಕಡಿವಾಣ ಬೀಳತೊಡಗಿತ್ತು. ಆನ್‌ಲೈನ್ ಟ್ರೇಡಿಂಗಿನಲ್ಲಿ ಒಂದು ಮಟ್ಟದ ಪಾರದರ್ಶಕ ವ್ಯವಸ್ಥೆಯಿದೆ. ರೈತರ ಉತ್ಪನ್ನಗಳಿಗೆ ಇದು ಸ್ಪರ್ಧಾತ್ಮಕ ಬೆಲೆಯನ್ನು ತಂದುಕೊಡಬಲ್ಲದು. ವ್ಯಾಪಾರಿಗಳ ಬಡ್ಡಿದಂಧೆಯಿಂದ ರೈತರನ್ನು ಪಾರುಮಾಡಬಲ್ಲದು.

ಕಳೆದ ಬಜೆಟ್ ಮಂಡಿಸಿದಾಗ ಮುಖ್ಯಮಂತ್ರಿಗಳು ಆನ್‌ಲೈನ್ ಟ್ರೇಡಿಂಗ್ ತಮ್ಮ ಸರ್ಕಾರದ ಮಹತ್ವದ ಪ್ರಯೋಗವೆಂಬಂತೆ ಬಣ್ಣಿಸಿದ್ದರು. ಇಡೀ ದೇಶದಲ್ಲೇ ಇದು ಮೊದಲ ಬಾರಿಗೆ ಕರ್ನಾಟಕದ ತಿಪಟೂರು, ಅರಸೀಕೆರೆ, ಚಾಮರಾಜನಗರಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬಂದಿತ್ತು.

ಕೇಂದ್ರ ಸರ್ಕಾರ ಈ ಪ್ರಯೋಗವನ್ನು ಅಧ್ಯಯನ ಮಾಡಲು ಅಧಿಕಾರಿಗಳ ತಂಡವನ್ನು ಕರ್ನಾಟಕಕ್ಕೆ ಕಳಿಸಿತ್ತು. ತಿಪಟೂರಿನಲ್ಲಿ ಒಬ್ಬ ರೈತಪರ ಕಾಳಜಿಯ ಎಪಿಎಂಸಿ ಅಧಿಕಾರಿ ನ್ಯಾಮಗೌಡ ಈ ಪ್ರಯೋಗವನ್ನು ದಕ್ಷವಾಗಿ ಜಾರಿ ಮಾಡಲೆತ್ನಿಸಿದ್ದರು.

ಆದರೆ ಇ-ಟ್ರೇಡಿಂಗ್ ಜೊತೆಗೆ ಇ-ಬ್ಯಾಂಕಿಂಗ್ ಇಲ್ಲದೆ ರೈತರ ಖಾತೆಗೆ ಹಣ ವ್ಯಾಪಾರಿಗಳಿಂದ ನೇರವಾಗಿ ಪಾವತಿಯಾಗುತ್ತಿಲ್ಲ. ವ್ಯಾಪಾರಿಗಳ ಬಡ್ಡಿ ಕುಣಿಕೆಯಿಂದ ರೈತರು ಪಾರಾಗಲು ಆಗುತ್ತಿಲ್ಲ. ಆನ್‌ಲೈನ್ ಟ್ರೇಡಿಂಗ್ ಪೂರ್ಣವಾಗಿ ಜಾರಿಯಾಗದಂತೆ ನೋಡಿಕೊಳ್ಳಲೆತ್ನಿಸುತ್ತಿರುವ ಮಧ್ಯವರ್ತಿಗಳ ಗುಂಪು ರೈತರಿಗೆ ನ್ಯಾಯಬೆಲೆ ಸಿಗುವಲ್ಲಿ ಅಡ್ಡಿಯಾಗಿ ನಿಂತಿದೆ.

ಕಳೆದ ವರ್ಷ ಭೇಟಿಯಾದ ರೈತನಿಯೋಗಕ್ಕೆ ‘ಯಾವ ಕಾರಣಕ್ಕೂ ಆನ್‌ಲೈನ್ ಟ್ರೇಡಿಂಗ್ ಕೈ ಬಿಡುವುದಿಲ್ಲ’ ಎಂದು ಮುಖ್ಯಮಂತ್ರಿಗಳು ಹೇಳಿದ್ದರೂ ಅದು ಎಲ್ಲ ಕಡೆ ದಕ್ಷವಾಗಿ ಜಾರಿಗೆ ಬರುವಂತೆ ಕಾಣುತ್ತಿಲ್ಲ. ಈ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಕಳ್ಳಮೌನಕ್ಕೆ ಶರಣಾದಂತಿದೆ.

ರೈತ ಚಳವಳಿ ಶುರುವಾದಾಗಿನಿಂದಲೂ ರೈತರು ತಾವು ಬೆಳೆದ ಬೆಳೆಗೆ ತಕ್ಕ ಬೆಲೆಗಾಗಿ ಒತ್ತಾಯಿಸುತ್ತಲೇ ಇದ್ದಾರೆ. ಕಳೆದ ವರ್ಷ ರೈತಪರ ಚಿಂತಕ ದೇವಿಂದರ್ ಶರ್ಮ ಗೋಧಿ ಬೆಲೆಯ ಸುತ್ತ ಕೊಟ್ಟಿರುವ ಅಂಕಿಅಂಶಗಳನ್ನು ಗಮನಿಸಿದರೂ ಸಾಕು, ರೈತರಿಗೆ ಆಗುತ್ತಿರುವ ಅನ್ಯಾಯದ ಪ್ರಮಾಣ ಅರ್ಥವಾಗುತ್ತದೆ:‘1970ರಲ್ಲಿ ಒಂದು ಕ್ವಿಂಟಲ್ ಗೋಧಿಗೆ ರೈತರಿಗೆ 76 ರೂಪಾಯಿ ಸಿಗುತ್ತಿದ್ದರೆ, 2015ರಲ್ಲಿ ಕ್ವಿಂಟಲ್‌ಗೆ 1450 ರೂಪಾಯಿ. ಅಂದರೆ, 19 ಪಟ್ಟು ಹೆಚ್ಚಳ.

ಆದರೆ ಇದೇ ಅವಧಿಯಲ್ಲಿ ಕೇಂದ್ರ ಸರ್ಕಾರಿ ನೌಕರರ ಸಂಬಳ 120 ಪಟ್ಟು, ಶಾಲಾಕಾಲೇಜುಗಳ ಶುಲ್ಕ 280ರಿಂದ 320 ಪಟ್ಟು ಹೆಚ್ಚಾಗಿದೆ. ಗೋಧಿ ಬೆಳೆಗಾರರ ಕುಟುಂಬದ ತಿಂಗಳ ಆದಾಯ 1800 ರೂಪಾಯಿ. ಕೇಂದ್ರ ಸರ್ಕಾರಿ ನೌಕರರ ಸಂಬಳದಂತೆ ಗೋಧಿ ಬೆಳೆದ ರೈತರಿಗೆ ಸರಿಯಾದ ಬೆಲೆ ಸಿಕ್ಕಿದ್ದರೆ ಕ್ವಿಂಟಲ್‌ಗೆ ಕೊನೆಯಪಕ್ಷ 7650 ರೂಪಾಯಿ ಇರಬೇಕಾಗಿತ್ತು’ (‘ನೆಲದ ಸತ್ಯ’, ಕನ್ನಡಕ್ಕೆ: ಕೆ.ಎನ್. ನಾಗೇಶ್).

ಈ ಲೆಕ್ಕಾಚಾರವನ್ನು ತೆಂಗು, ಜೋಳ, ರಾಗಿ ಹೀಗೆ ಎಲ್ಲ ಬೆಳೆಗಳಿಗೂ ಅನ್ವಯಿಸಿದರೆ, ರೈತರು ಬೆಳೆದದ್ದನ್ನು ಉಣ್ಣುವವರಿಗೆಲ್ಲ ರೈತರ ಬೇಡಿಕೆಗಳ ಬಗ್ಗೆ ಕೊನೆಯಪಕ್ಷ ಸಹಾನುಭೂತಿಯಾದರೂ ಮೂಡಬಲ್ಲದು.

ಮೊನ್ನೆ ತೆಂಗು, ಅಡಿಕೆಗೆ ಬೆಂಬಲ ಬೆಲೆಗಾಗಿ ಒತ್ತಾಯಿಸಿ ತಿಪಟೂರಿನಿಂದ ಆರಂಭವಾಗಿದ್ದ ರೈತರ ಕಾಲ್ನಡಿಗೆ ಜಾಥಾವನ್ನು ಸರ್ಕಾರ  ನಿಜಕ್ಕೂ ಗಂಭೀರವಾಗಿ ತೆಗೆದುಕೊಳ್ಳಬೇಕು. ಯಾಕೆಂದರೆ ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕದಲ್ಲಿ 1000ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಯ ಸರಣಿಗೆ ತಡೆಯೊಡ್ಡಿ, ರೈತರು ಕೊಂಚ ಆತ್ಮವಿಶ್ವಾಸದಿಂದ ಯೋಚಿಸುವಂತೆ ಮಾಡುವ ಪ್ರಯತ್ನವೆಂಬಂತೆಯೂ ರೈತ ಚಳವಳಿಯನ್ನು, ರೈತಜಾಥಾಗಳನ್ನು ನೋಡಬೇಕು. ಮೊನ್ನೆ ಬೆಂಗಳೂರಿನತ್ತ ನಡೆದುಬರುತ್ತಿದ್ದ ರೈತರನ್ನು ಹಾದಿಮಧ್ಯೆಯೇ ಭೇಟಿಯಾದ ಇಬ್ಬರು ಮಂತ್ರಿಗಳು ಹಾಗೂ ಆನಂತರ ರಾಜಧಾನಿಯಲ್ಲಿ ಮುಖ್ಯಮಂತ್ರಿಗಳು ದೆಹಲಿಗೆ ಸರ್ವಪಕ್ಷ ನಿಯೋಗ ಒಯ್ಯುತ್ತೇವೆಂದೂ, ಕೇಂದ್ರ ಸರ್ಕಾರ ಘೋಷಿಸಿದಷ್ಟು ಬೆಂಬಲ ಬೆಲೆಯನ್ನು ಖಂಡಿತಾ ಕೊಡುತ್ತೇವೆಂದೂ ಮಾತು ಕೊಟ್ಟಿದ್ದಾರೆ.

ಈ ಭರವಸೆಯನ್ನು ನಂಬಿ ರೈತರು ಜಾಥಾವನ್ನು ಹಿಂತೆಗೆದುಕೊಂಡಿದ್ದಾರೆ. ಮೊನ್ನೆ ಕಾಂಗ್ರೆಸ್ ಸದಸ್ಯರು ಸಂಸತ್ ಭವನದ ಎದುರು ಈ ಬಗ್ಗೆ ಒತ್ತಾಯಿಸಿದ್ದಾರೆ. ಸಂಸದ ಮುದ್ದಹನುಮೇಗೌಡರು ಈ ಪ್ರಶ್ನೆಗಳನ್ನು ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಆದರೆ ಇದೆಲ್ಲ ರಾಜಕೀಯ ಪಕ್ಷಗಳ ಹಾಗೂ ಸರ್ಕಾರಗಳ ಯಾಂತ್ರಿಕ ಕಸರತ್ತಾಗಿಯಷ್ಟೆ ಕೊನೆಗೊಂಡರೆ, ಹೊಸ ತಲೆಮಾರಿನ ರೈತರ ಸಿಟ್ಟು ಯಾವ ಕಡೆಗೆ ತಿರುಗುತ್ತದೋ ಹೇಳುವುದು ಕಷ್ಟ.

ಮೊನ್ನೆ ನರಗುಂದ, ನವಲಗುಂದದಲ್ಲಿ ರೈತರ ಸಿಟ್ಟು ಸ್ಫೋಟಗೊಂಡದ್ದು ಹಾಗೆಯೇ. ಆಗ ನಮ್ಮ ಪೊಲೀಸರು ನಡೆದುಕೊಂಡ ರೀತಿ ಬರ್ಬರವಾಗಿತ್ತು. ಬ್ರಿಟಿಷರ ಕಾಲದಲ್ಲಿ ಬಿಳಿಯರ ಸೇವೆ ಮಾಡುತ್ತಾ, ನಾಡಿನ ಸ್ವಾತಂತ್ರ್ಯ ಹೋರಾಟಗಾರರನ್ನೇ ಹಿಂಸಿಸಿದ ಮನಸ್ಥಿತಿಯಿಂದ ನಮ್ಮ ಪೊಲೀಸರು ಇವತ್ತಿಗೂ ಹೊರಬಂದಂತಿಲ್ಲ. ಈ ಪೊಲೀಸರಲ್ಲಿ ಬಹುತೇಕರು ಹಳ್ಳಿಯಿಂದ ಬಂದವರು; ರೈತರ ಮಕ್ಕಳು.

ಅವರೇ ರೈತರನ್ನು ಶತ್ರುಗಳಂತೆ ಕಾಣುತ್ತಾರೆನ್ನುವುದು ನಿಜಕ್ಕೂ ಕ್ರೂರವ್ಯಂಗ್ಯ. ಹಾಗೆಯೇ ಮೊನ್ನೆಯ ಪ್ರತಿಭಟನೆಯನ್ನೇ ನೋಡಿ: ಮಹಾದಾಯಿ ನೀರು ನಾಡಿನ ಅನೇಕ ಭಾಗಗಳಿಗೆ ಬೇಕು ತಾನೆ? ಆದರೆ ಈ ನೀರಿಗಾಗಿ ಹೋರಾಟ ನಡೆಸಿ ರೈತರು ಮಾತ್ರ ಜೈಲಿಗೆ ಹೋಗುತ್ತಾರೆ. ರೈತರು ಬೆಳೆದದ್ದಕ್ಕೆ ಅರ್ಧ ಬೆಲೆಯನ್ನೂ ಕೊಡದ ಅನಾಗರಿಕ ಸಮಾಜ ತನಗೆ ಬೇಕಾದ ಸೌಲಭ್ಯಗಳಿಗಾಗಿ ರೈತರು ಕಾಲಾಳುಗಳಂತೆ ಹೋರಾಡಬೇಕೆಂದು ಬಯಸುತ್ತದೆ; ಅವರ ಹೋರಾಟಕ್ಕೆ ಬೆಂಬಲ ಕೊಡಲು ಮಾತ್ರ ಹಿಂಜರಿಯುತ್ತದೆ.

ರೈತ ಹೋರಾಟದ ದೌರ್ಬಲ್ಯಗಳ ಬಗ್ಗೆ ಇನ್ನಿತರ ಸಂಘಟನೆಗಳ ನಾಯಕರು, ವಿಶ್ಲೇಷಕರು ಶರಾ ಬರೆಯುತ್ತಲೇ ಇರುತ್ತಾರೆ; ಆದರೆ ರೈತರ ಮೇಲೆ ಹಲ್ಲೆ ನಡೆದಾಗ ಮೌನವಾಗುತ್ತಾರೆ. ಮೊನ್ನೆ ತಾನೇ ರೈತನಾಯಕ ಕುರುಬೂರು ಶಾಂತಕುಮಾರ್ ರೈತರ ಮೇಲೆ ನಡೆಯುತ್ತಿರುವ ಹಿಂಸೆಗಳ ಬಗ್ಗೆ ಸಾಹಿತಿಗಳ ಮೌನ ಕುರಿತು ಸಿಟ್ಟಿನಿಂದ ಮಾತಾಡಿರುವುದರಲ್ಲಿ ಅರ್ಥವಿದೆ.

ಯಾಕೆಂದರೆ, ‘ಸಾಂಸ್ಕೃತಿಕ’ ಎನ್ನಲಾಗುವ ವಿಚಾರಗಳಿಗೆ ಬೇಗ ಪ್ರತಿಕ್ರಿಯಿಸುವ ಲೇಖಕವರ್ಗ ರೈತಹೋರಾಟಗಳ ಬಗ್ಗೆ ಮೌನ ತಾಳುತ್ತದೆ. ಅಂದರೆ, ಲೇಖಕರು ತಮ್ಮ ವರ್ಗಹಿತಗಳನ್ನು ಕುರಿತೇ ಯೋಚಿಸುತ್ತಿರುತ್ತಾರೆ ಎಂದು ಇದರ ಅರ್ಥ. ಕೊನೆಯ ಪಕ್ಷ ರೈತರಿಗೆ ಬೇಕಾದ ಬರಹ, ಪುಸ್ತಕ, ಚಿಂತನೆ ಇವುಗಳ ಬಗ್ಗೆ ತಾನು ಮಾಡಬಹುದಾದ ಸಣ್ಣಪುಟ್ಟ ಕೆಲಸಗಳನ್ನೂ ಈ ವರ್ಗ ಮಾಡುತ್ತಿಲ್ಲ.

ಈಚೆಗೆ ಕನ್ನಡಕ್ಕೆ ಬಂದಿರುವ ರೈತಪರ ಚಿಂತಕ ದೇವಿಂದರ್ ಶರ್ಮ ಥರದವರ ಪುಸ್ತಕಗಳಲ್ಲಿರುವ ವಿಚಾರಗಳನ್ನು ರೈತರಿಗೆ ಮುಟ್ಟಿಸಬೇಕೆಂಬ ಕರ್ತವ್ಯಪ್ರಜ್ಞೆ ಕೂಡ ನಮ್ಮ ಗ್ರಾಮಾಂತರ ಲೇಖಕರಲ್ಲಿ ಕಾಣುತ್ತಿಲ್ಲ. ಇದೆಲ್ಲದರ ನಡುವೆ, ಹೊಸ ಮಾಧ್ಯಮಗಳನ್ನು ಬಳಸಬಲ್ಲ ತಲೆಮಾರೊಂದು ರೈತರಿಗಾಗಿ ತನ್ನ ಕೈಲಾದ್ದನ್ನು ಮಾಡಲು ತಿಪಟೂರಿನಂಥ  ಪುಟ್ಟ ಊರಿನಲ್ಲಿ ಕೆಲಸ ಶುರು ಮಾಡಿರುವುದು ಎಲ್ಲ ಕಾಲದಲ್ಲೂ ಕಾಳಜಿಯ ತರುಣರು ಸೃಷ್ಟಿಯಾಗುವುದರ ಬಗ್ಗೆ ಹೊಸ ಆಸೆ ಹುಟ್ಟಿಸುತ್ತದೆ.

ಕಾರ್ಲ್ ಮಾರ್ಕ್ಸ್ ಹೇಳಿದ ಪ್ರಖ್ಯಾತ ಮಾತೊಂದಿದೆ: ‘ನಮ್ಮ ಹಳೆಯ ಗೆಳೆಯ, ನಮ್ಮ ಹಳೆಯ ಮೋಲ್‌ಗೆ (ನೆಲ ಕೊರೆಯುವ ಹೆಗ್ಗಣಕ್ಕೆ) ಒಳಗೊಳಗೇ, ನೆಲದಡಿಯಲ್ಲೇ ಚೆನ್ನಾಗಿ ಕೆಲಸ ಮಾಡುವುದು, ಇದ್ದಕ್ಕಿದ್ದಂತೆ ಮೇಲೆದ್ದು ಚಿಮ್ಮಿ ಬರುವುದು ಗೊತ್ತಿದೆ’. ರೈತರು ‘ಅಂಡರ್ ಗ್ರೌಂಡ್’ ಆಗಿ ಕೆಲಸ ಮಾಡುವ ಗೆರಿಲ್ಲಾ ಹೋರಾಟಗಾರರಲ್ಲದಿರಬಹುದು. ಆದರೆ ಅವರ ಒಳಗಿನ ಸಿಟ್ಟು ಹೊರಚೆಲ್ಲಿದಾಗ ರಾಜ್ಯಗಳಳಿದಿವೆ, ರಾಜ್ಯಗಳುರುಳಿವೆ ಎಂಬುದು ರಾಜಕಾರಣಿಗಳಿಗೆ ಗೊತ್ತಿರಲಿ.

ಅದರ ಜೊತೆಗೇ, ತಮ್ಮ ಹೋರಾಟದ ಫಲವಾಗಿ ಒಂದು ಪಕ್ಷ ಹೋಗಿ ಇನ್ನೊಂದು ಪಕ್ಷ ಅಧಿಕಾರಕ್ಕೆ ಬರುತ್ತದೆಯೇ ಹೊರತು, ತಮ್ಮ ಸ್ಥಿತಿ ಮಾತ್ರ ಹಾಗೇ ಉಳಿಯುತ್ತದಲ್ಲ; ಹಾಗಾದರೆ ತಮ್ಮ ಹೋರಾಟಕ್ಕೆ, ಚಿಂತನೆಗಳಿಗೆ, ಕೃಷಿಗೆ ಯಾವಬಗೆಯ ದೀರ್ಘಕಾಲದ ಯೋಜನೆಗಳನ್ನು ತಯಾರಿಸಬೇಕು ಎಂಬ ಬಗ್ಗೆ ರೈತರು, ರೈತ ನಾಯಕರು, ರೈತಪರ ಚಿಂತಕರು ಒಟ್ಟಾಗಿ ಕೂತು ಆಳವಾಗಿ ಯೋಚಿಸಬೇಕಾದ ಕಾಲ ಇದು.

ಕೊನೆ ಟಿಪ್ಪಣಿ: ಚಳವಳಿ ಮತ್ತು ನಕಲಿ ಟವಲ್ಲುಗಳು!
ನಕಲಿಗಳೇ ಅಸಲಿಯಂತೆ ಆಡುವ ಈ ಕಾಲದಲ್ಲಿ ರೈತ ಚಳವಳಿಗಳ ಸಂಘಟಕರು ಗಮನಿಸಬೇಕಾದ ಅಂಶವೊಂದಿದೆ: ರಾಜಕೀಯ ಪಕ್ಷಗಳು ಇದ್ದಕ್ಕಿದ್ದಂತೆ ಹೊಸ ಹಸಿರು ಶಾಲು ಹೊದಿಸಿ, ರೈತ ಮೆರವಣಿಗೆಗಳಿಗೆ ದಿಢೀರ್ ರೈತರನ್ನು ಛೂ ಬಿಡಬಲ್ಲವು. ಕಳೆದ ವರ್ಷ ದೊಡ್ಡಬಳ್ಳಾಪುರದ ದಾರಿಯಲ್ಲಿ ಎರಡು ಗಂಟೆಗಳ ಕಾಲ ರಸ್ತೆ ತಡೆ ನಡೆಯಿತು.

ರಸ್ತೆ ತೆರವಾದ ನಂತರ, ನಾನು ನೋಡನೋಡುತ್ತಿರುವಂತೆಯೇ, ಒಂದು ಗುಂಪಿನ ‘ರೈತರು’ ಸೀದಾ ಬಿಜೆಪಿಯ ವ್ಯಾನ್ ಹತ್ತಿ ಹೊರಟರು. ವಿಧಾನಸಭೆಯ ಅಧಿವೇಶನ ನಡೆಯುತ್ತಿರುವಾಗ ರೈತರ ರಸ್ತೆ ತಡೆಯ ಅಸ್ತ್ರ ಆ ಪಕ್ಷಕ್ಕೆ ಬೇಕಾಗಿತ್ತು. ಅದಕ್ಕೇ ಅದು ಏಕಾಏಕಿ ಕೇಸರಿ ತೊಡೆದು ಹಸಿರಾಗಿತ್ತು!

ಇನ್ನೊಂದು ಘಟನೆ: ಕಳೆದ ತಿಂಗಳು ತಿಪಟೂರಿನಲ್ಲಿ ನಡೆದ ಭಾರಿ ರೈತ ಸಮಾವೇಶದ ದಿನ ಎಲ್ಲವೂ ಶಾಂತಿಯುತವಾಗಿ ನಡೆದಿತ್ತು. ಆದರೆ ಸಂಜೆ ಹತ್ತು ಜನ ಹುಡುಗರು ಬೈಕಿನಲ್ಲಿ ಬಂದು ಪೆಟ್ರೋಲ್ ಬಂಕ್ ಒಂದರ ಬಳಿ ಕಲ್ಲೆಸೆದು ಹೋದರು. ಅವರಲ್ಲಿ ಯಾರೂ ಸಮಾವೇಶಕ್ಕೆ ಬಂದವರಾಗಿರಲಿಲ್ಲ. ಅಂದ ಮೇಲೆ, ಅವರು ಬೇರೆ ಯಾವುದೋ ಪಕ್ಷಗಳ, ಗುಂಪುಗಳ ಗುಪ್ತ ಏಜೆಂಟರಾಗಿರಲೇಬೇಕು. ಸಂಘಟನೆಗಳು ಇಂಥ ನುಸುಳುಕೋರರ ವಿರುದ್ಧ ಎಚ್ಚರವಾಗಿರಬೇಕಾಗುತ್ತದೆ.

ಕಾಮೆಂಟ್‌ಗಳಿಲ್ಲ: