ಮಂಗಳವಾರ, ಆಗಸ್ಟ್ 9, 2016

ಕಿರಣ್ ಬೇಡಿಯವರು ದೇಶದ ಡಿನೋಟಿಫೈಡ್ ಸಮುದಾಯಗಳಿಗೆ ಕ್ಷಮಾಪಣೆ ಯಾಚಿಸಬೇಕು

ಪತ್ರಿಕಾ ಪ್ರಕಟಣೆ

 ಮಾನ್ಯರೇ, 

ಮಾಜಿ ಐಪಿಎಸ್ ಅಧಿಕಾರಿಯೂ, ರಾಜಕೀಯ ಪಕ್ಷವೊಂದರ ಸಕ್ರಿಯ ಕಾರ್ಯಕರ್ತರೂ, ಪಾಂಡಿಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವ ಕಿರಣ್ ಬೇಡಿಯವರು ಇತ್ತೀಚೆಗೆ ವಸಾಹತು ಆಡಳಿತದ ಸಂದರ್ಭದಲ್ಲಿ 'ಅಪರಾಧಿ ಬುಡಕಟ್ಟುಗಳು' ಎಂದು ಪಟ್ಟಿ ಮಾಡಲಾದ ಸಮುದಾಯಗಳನ್ನು ಅಪಮಾನಿಸಿ ನಿಂದಿಸುವ ಒಂದು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಅವರು ಹೀಗೆ ಬರೆದಿದ್ದಾರೆ. 'ಮಾಜಿ ಕ್ರಿಮಿನಲ್ ಟ್ರೈಬ್‌ಗಳು ಅತ್ಯಂತ ಕ್ರೂರಿಗಳೆಂದೇ ಹೆಸರಾಗಿದ್ದಾರೆ. ಅಪರಾಧಗಳನ್ನು ನಡೆಸುವುದರಲ್ಲಿ ಅವರು ನಿಷ್ಣಾತರಾಗಿದ್ದಾರೆ. ಅವರನ್ನು ಹಿಡಿಯುವುದಾಗಲೀ, ಶಿಕ್ಷೆ ನೀಡುವುದಾಗಲೀ ಆಗುತ್ತಿಲ್ಲ'


 ಕಿರಣ್ ಬೇಡಿಯವರ ಈ ಮಾತುಗಳು ಈ ದೇಶದಲ್ಲಿ 'ಕ್ರಿಮಿನಲ್ ಬುಡಕಟ್ಟುಗಳೆಂದು' ಹಣೆಪಟ್ಟಿ ಪಡೆದು, ಬ್ರಿಟಿಷ್ ಮತ್ತು ಭಾರತದ ಸರ್ಕಾರಗಳಿಂದ ಅತ್ಯಂತ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿರುವ ಅಲೆಮಾರಿ ಮತ್ತು ಆದಿವಾಸಿ ಸಮುದಾಯಗಳ ಮನಸ್ಸಿನಲ್ಲಿ ಅತ್ಯಂತ ನೋವನ್ನುಂಟುಮಾಡುವ ಮಾತುಗಳಾಗಿವೆ. ಕನಿಷ್ಠ ನಾಗರೀಕ ಪ್ರಜ್ಞೆ ಇರುವ ಯಾರೂ ಇಂತಹ ಮಾತುಗಳನ್ನು ಉಚ್ಛರಿಸಲಾರರು. ಭಾರತದ ಸಂ"ಧಾನವುಜಾತಿ, ಧರ್ಮ, ಲಿಂಗ ಮತ್ತು ಭಾಷೆಗಳ ಆಧಾರದಲ್ಲಿ ತಾರತಮ್ಯ ಕೂಡದು ಎಂದು ಹೇಳುತ್ತದೆ. ಆದರೆ ಕಿರಣ್ ಬೇಡಿಯವರು ಬುಡಕಟ್ಟುಗಳನ್ನು, ಅಲೆಮಾರಿಗಳನ್ನು ಕ್ರಿಮಿನಲ್‌ಗಳೆಂದು ಕರೆದು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಮಾಜಿ ಪೊಲೀಸ್ ಅಧಿಕಾರಿಯೂ,  ಹಾಲಿ ರಾಜಕಾರಣಿಯೂ ಆಗಿರುವ ಕಿರಣ್ ಬೇಡಿ ಅವರ ಈ ಜಾತಿ ನಿಂದನೆಯ ಮಾತುಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಕಿರಣ್ ಬೇಡಿ ಅವರು ಈ ಕೂಡಲೇ ತಮ್ಮ ಮಾತುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸುತ್ತೇವೆ. ಕಿರಣ್ ಬೇಡಿ ಅವರು ಈ ಕೂಡಲೇ ಡಿನೋಟಿಫೈಡ್ ಸಮುದಾಯಗಳ ಕ್ಷಮೆ ಯಾಚಿಸಿ, ತಾವು ಆಡಿದ ಮಾತುಗಳನ್ನು ಹಿಂಪಡೆಯಬೇಕು. ಸಾಂವಿಧಾನಿಕ ಹುದ್ದೆಯಲ್ಲಿರುವ ಮತ್ತು ಸರಕಾರಿ ನೌಕರರಾಗಿ ಅವರು ಆಡಿರುವ ಮಾತುಗಳು ಎಸ್ ಸಿ, ಎಸ್ ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ ೩ (೧) ಮತ್ತು ಸೆಕ್ಷನ್ ೪(೨)ಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇದಕ್ಕೆ ಐದು ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ವಿಧಿಸಬಹುದಾಗಿದೆ.

ಕಿರಣ್ ಬೇಡಿಯವರು ಮೇಲಿನ ಮಾತುಗಳನ್ನು ಹೇಳಿದ್ದು ಇತ್ತೀಚೆಗೆ ಉತ್ತರಪ್ರದೇಶದ ಬುಲಂದ್ ಶಹರ್‌ನಲ್ಲಿ ನಡೆದ‌ ಸಾಮೂಹಿಕ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ. ಈ ಘಟನೆಯಲ್ಲಿ `ಬವಾರಿಯಾ ಬುಡಕಟ್ಟು ಸಮುದಾಯದ ಪಾತ್ರವಿದೆ' ಎಂದು ಅತ್ಯಂತ ಪೂರ್ವಾಗ್ರಹಪೀಡಿತವಾಗಿ ಉತ್ತರಪ್ರದೇಶದ ಪೊಲೀಸರು ತಿಳಿಸಿದ್ದರು. ಇದನ್ನನುಸರಿಸಿ ಕೆಲ ಮಾಧ್ಯಮಗಳೂ ಸಹ ಇಡೀ ಬವಾರಿಯಾ ಸಮುದಾಯವನ್ನು ರಾಕ್ಷಸೀಕರಿಸುವ ಪ್ರಯತ್ನ ನಡೆಸಿದವು. ಇಲ್ಲಿ ಒಂದು ಪ್ರಶ್ನೆಯನ್ನು ಕೇಳಲಿಚ್ಛಿಸುತ್ತೇವೆ. ಇದೇ ಸಮಯದಲ್ಲಿ ದಲಿತ ದಂಪತಿಗಳನ್ನು ಕೇವಲ ೧೫ ರೂಪಾಯಿ ವಿಚಾರದಲ್ಲಿ ಕೊಲೆ ಮಾಡಿದ ವ್ಯಕ್ತಿಯೊಬ್ಬನ ಹೆಸರಿನಲ್ಲಿ `ಮಿಶ್ರಾ' ಎಂದು ಇತ್ತು. ಹಾಗಂತ ಮಿಶ್ರಾ ಎಂದು ಹೆಸರಿಟ್ಟುಕೊಳ್ಳುವ ಸಮುದಾಯದವರೆಲ್ಲರೂ ಕೊಲೆಗಡುಕರೇ? ಮೇಲೆ ತಿಳಿಸಿದ ಅತ್ಯಾಚಾರ ಪ್ರಕರಣದಲ್ಲಿ ನಿಜವಾದ ಆಪರಾಧಿಗಳು ಯಾರೆಂದು ಇನ್ನೂ ಪತ್ತೆಯಾಗುವುದರೊಳಗಾಗಿ ಬವಾರಿಯಾ ಬುಡಕಟ್ಟು ಸಮುದಾಯವನ್ನು ಗುರಿಪಡಿಸಿರುವುದರಲ್ಲಿ ಜಾತಿವಾದಿ ಮತ್ತು ಜನಾಂಗ ದ್ವೇಷದ ಮನಸ್ಥಿತಿ ಕೆಲಸ ಮಾಡಿದೆ. 'ಕ್ರಿಮಿನಲ್ ಬುಡಕಟ್ಟುಗಳೆಂದು' ಕೆಲವು ಸಮುದಾಯಗಳನ್ನು ಪಟ್ಟಿ ಮಾಡಿದ್ದು ವಸಾಹತು ಆಡಳಿತ. ವಸಾಹತು ಆಡಳಿತ ಈ ಕುರಿತು ೧೮೭೧ರಲ್ಲಿ ಕ್ರಿಮಿನಲ್ ಬುಡಕಟ್ಟು ಕಾಯ್ದೆ ರಚಿಸಿ ಜಾರಿಗೆ ತಂದಿತು. ವಸಾಹತು ಆಡಳಿತದ ಸಂದರ್ಭದಲ್ಲಿ ರೂಪುಗೊಂಡ ಒಂದು ಅಮಾನವೀಯ ಮತ್ತು ಶುದ್ಧ ಸಾಮ್ರಾಜ್ಯಶಾಹಿ ಮನೋಭಾವದ ಕಾಯ್ದೆ ಇದು. ಈ ಕಾಯ್ದೆಯು ಮುಖ್ಯವಾಗಿ ಭಾರತದ ವ್ಯವಸಾಯ ಸಂಬಂಧಗಳನ್ನು ಬೆಸೆಯುತ್ತಿದ್ದ, ಕುಶಲಕರ್ಮಿ, ಅಲೆಮಾರಿ ಮತ್ತು ಆದಿವಾಸಿ ಸಮುದಾಯಗಳನ್ನು ನಿಯಂತ್ರಿಸುವ ಸಲುವಾಗಿ ರೂಪುಗೊಂಡಿತು. ವಸಾಹತು ಆಡಳಿತ ತನ್ನ 'ಕಾನೂನು ಸುವ್ಯವಸ್ಥೆಯ' ಕಾರಣಕ್ಕಾಗಿ ಈ ಕಾಯ್ದೆಯನ್ನು ಜಾರಿಗೆ ತಂದಿತು ಎಂದು ಹೇಳಲಾಗುತ್ತಿದೆಯಾದರೂ ಈ ಕಾಯ್ದೆಯನ್ನು ರೂಪಿಸುವುದರ ಹಿಂದೆ ವಸಾಹತು ಆಡಳಿತಕ್ಕೆ ತನ್ನದೇ ಆದ ರಾಜಕೀಯಾರ್ಥಿಕ ಕಾರಣಗಳೂ ಇದ್ದವು. ವಸಾಹತು ಆಡಳಿತ 'ಕ್ರಿಮಿನಲ್‌ಗಳು' ಎಂದು ಬೇಟೆಯಾಡಿದ್ದು, ವಾಸ್ತವದಲ್ಲಿ ತಮ್ಮ ಕರಾಳ ಆಡಳಿತ ಮತ್ತು ಕಾನೂನುಗಳಿಗೆ ಪ್ರತಿರೋಧ ಒಡ್ಡಿದ್ದ ಆದಿವಾಸಿ, ಅಲೆಮಾರಿ ಸಮುದಾಯಗಳನ್ನು. 

೧೭೭೪ ಮತ್ತು ೧೮೭೧ರ ನಡುವಿನ ಭಾರತದ ಇತಿಹಾಸ ಅತ್ಯಂತ ರಕ್ತಪಾತದಿಂದ ಕೂಡಿದ ಇತಿಹಾಸವಾಗಿದೆ. ಭಾರತದ ಸ್ಥಳೀಯ ರಾಜ್ಯಗಳ ವಿರುದ್ಧ ಈ ಅವದಿಯಲ್ಲಿ ಕಂಪನಿ ಮತ್ತು ವಸಾಹತು ಆಡಳಿತವು ಅತ್ಯಂತ ಕ್ರೂರ ಯುದ್ಧಗಳನ್ನು ಮಾಡಿತು. ಆಂಗ್ಲೋ ಮರಾಠ ಯುದ್ಧ, ಮೈಸೂರು ಯುದ್ಧ, ಹೋಳ್ಕರ ಶರಣಾಗತಿ, ಪೇಶ್ವೇಗಳ ಸೋಲು, ವೆಲ್ಲೂರಿನ ಸಿಪಾಯಿದಂಗೆ, ಮೈಸೂರು ಮತ್ತು ಕೂರ್ಗ್‌ಗಳನ್ನು ವಶಪಡಿಸಿಕೊಂಡದ್ದು, ಸಿಂಧ್, ಸಿಖ್, ಔಧ್ ಪ್ರದೇಶಗಳನ್ನು ಯುದ್ಧಗಳ ಮೂಲಕ ವಶಪಡಿಸಿಕೊಂಡದ್ದು ಮತ್ತು ೧೮೫೭ರಲ್ಲಿ ನಡೆದ ಸಿಪಾಯಿ ದಂಗೆಗಳು ಹಲವು ಸ್ಥಳೀಯ ಸಮುದಾಯಗಳನ್ನು ನೆಲೆ ಇಲ್ಲದಂತೆ ಮಾಡಿದವು. ಈ ಸಮುದಾಯಗಳೇ ಮುಂದೆ ಅಲೆಮಾರಿಗಳಾಗಿ ಪರಿವರ್ತಿತವಾದವು. ಮುಖ್ಯವಾಗಿ ಆಧುನಿಕಪೂರ್ವ ಭಾರತದ ಅನೇಕ ಪಾಳೆಪಟ್ಟುಗಳು ಮತ್ತು ಸ್ಥಳೀಯ ರಾಜರು ಅನಿವಾರ್ಯವಾಗಿ ಕಂಪನಿ ಆಡಳಿತದ ಜೊತೆ ಕೈಜೋಡಿಸಬೇಕಿತ್ತು. ಇಲ್ಲವೆ ಅವರೊಡನೆ ಕಾದಾಡಬೇಕಿತ್ತು. ಈ ಎರಡೂ ಸಂದರ್ಭದಲ್ಲಿ ದೇಶೀಯ ಶ್ರಮಜೀವಿಗಳು ಆರ್ಥಿಕವಾಗಿ ಕುಸಿದು ಹೋದರು. ಕಂಪನಿ ಆಡಳಿತವನ್ನು ಒಪ್ಪಿಕೊಂಡರೆ ಅದರ ಸೈನ್ಯವನ್ನು ಸ್ಥಳೀಯ ರಾಜರು ಸಾಕಬೇಕಿತ್ತು. ಅಕಸ್ಮಾತ್ ಕಂಪನಿ ಆಡಳಿತದ ವಿರುದ್ಧ ತಿರುಗಿ ಬಿದ್ದು ಕಾದಾಡಿದರೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯದಲ್ಲಿ ಇಂಡಿಯಾದ ಎಲ್ಲ ಸ್ಥಳೀಯ ಸಂಸ್ಥಾನಗಳು ಸಿಲುಕಿ ಕೊಂಡವು. ಆದರೆ ಬಹುತೇಕ ಎಲ್ಲ ಸಂಸ್ಥಾನಗಳನ್ನು ಬ್ರಿಟೀಷ್ ಆಡಳಿತ ತನ್ನ ತಂತ್ರಗಳ ಮೂಲಕ ವಶಪಡಿಸಿಕೊಳ್ಳುತ್ತಲೇ ಹೋಯಿತು. ತಿರುಗಿಬಿದ್ದ ಸಮುದಾಯಗಳನ್ನು ಕಾನೂನುಗಳ ಮೂಲಕ ಹತ್ತಿಕ್ಕಲು ಕೆಲವು ನಿಯಮಗಳನ್ನು ರೂಪಿಸಿತು. ಈ ಹಂತದಲ್ಲಿಯೇ Criminal Tribes Act  ಜಾರಿಗೆ ಬಂದಿತು.

೧೮೭೧ರಲ್ಲಿ Criminal Tribes Act ಜಾರಿಗೆ ಬಂದರೂ, ಉತ್ತರ ಭಾರತದಲ್ಲಿ ಕಂಪನಿ ಸರಕಾರವು ೧೭೯೩ರಲ್ಲಿಯೇ ಕೆಲವು ಸಮುದಾಯಗಳನ್ನು ಪಟ್ಟಿ ಮಾಡಿ ಇವು ತಮ್ಮ ಆಡಳಿತಕ್ಕೆ ಅಪಾಯಕಾರಿಗಳೆಂದು ಗುರುತಿಸಿತು. ಆ ಪಟ್ಟಿ ನಮಗೆ ಈಗ ಲಭ್ಯವಿಲ್ಲ. ಆದರೆ ಅತ್ಯಂತ ಶಾಂತವಾಗಿದ್ದ, ಶ್ರಮಜೀವಿಗಳೇ ಬದುಕುತ್ತಿದ್ದ ರೋಹಿಲ್‌ಖಂಡ್‌ನ್ನು ವಶಪಡಿಸಿಕೊಳ್ಳಲು ಬ್ರಿಟೀಷ್‌ರು ೧೭೭೦ರಲ್ಲಿ ಒಂದು ಭೀಕರ ಯುದ್ಧವನ್ನೇ ನಡೆಸಿದರು. ಭಯಂಕರ ರಕ್ತಪಾತ ಮತ್ತು ಸಾವುನೋವುಗಳು ಸಂಭವಿಸಿದವು. ರೋಹಿಲ್‌ಖಂಡ್ ಬ್ರಿಟೀಷ್ ವಶವಾಯಿತು. ಆದರೆ ಅಲ್ಲಿ ಮುಗ್ಧವಾಗಿ ಬದುಕಿ ಬಂದಿದ್ದ ದುಡಿಮೆಗಾರರು ದಿಕ್ಕೆಟ್ಟು ಹೋದರು. ಅಲ್ಲದೆ ಇವರು ಕಂಪನಿ ಆಡಳಿತದ ಮೇಲೆ ಉಗ್ರವಾದ ಸಿಟ್ಟನ್ನು ಬೆಳೆಸಿಕೊಂಡರು. ಬ್ರಿಟೀಷರ ಮೇಲೆ ಸೇಡುತೀರಿಸಿಕೊಳ್ಳಲು ಹವಣಿಸಲಾರಂಬಿಸಿದರು. ಮತ್ತು ಇಲ್ಲಿನ ಬಹುತೇಕ ಶ್ರಮಜೀವಿಗಳು ಮತ್ತು ಆದಿವಾಸಿಗಳು ತಮ್ಮ ನೆಲೆಗಳನ್ನು ಕಳೆದುಕೊಂಡು ಅಲೆಮಾರಿಗಳಾದರು. ಕಂಪನಿ ಆಡಳಿತ ಪ್ರಬಲವಾಗುತ್ತಿದ್ದಂತೆ ಈ ದೇಶದ ಸ್ಥಳೀಯ ರಾಜರು ನಿವೃತ್ತರಾಗಿ ಪಿಂಚಣಿ ಪಡೆಯಲಾರಂಬಿಸಿದರು. ಭೂಮಾಲಿಕರು ರಾಜಿ ಮಾಡಿಕೊಂಡು ತಮ್ಮ ಆಸ್ತಿಗಳನ್ನು ರಕ್ಷಿಸಿಕೊಂಡರು. ಆದರೆ ಎಲ್ಲವನ್ನೂ ಕಳೆದುಕೊಂಡದ್ದು ಶ್ರಮಜೀವಿ ವರ್ಗ ಮಾತ್ರ. ಕಂಪನಿ ಆಡಳಿತದ ವಿರುದ್ಧ ಇವರು ಹೋರಾಡಲೇಬೇಕಾದ ಚಾರಿತ್ರಿಕ ಅನಿವಾರ್ಯತೆ ಏರ್ಪಟ್ಟಿತು. ಮತ್ತು ಈ ಹೋರಾಟ ಸ್ಪಷ್ಟ ರಾಜಕೀಯ ತಳಹದಿಯ ಮೇಲೆ ರೂಪಗೊಂಡಿತ್ತು. ಮನುಷ್ಯನ ಸಹಜ ಹಕ್ಕುಗಳಾದ, ಮಾತನಾಡುವ, ಪ್ರಶ್ನಿಸುವ, ಸ್ವತಃ ತಮ್ಮನ್ನು ತಾವು ಆಳಿಕೊಳ್ಳುವ, ತಮ್ಮ ಆಸ್ತಿ ರಕ್ಷಣೆ ಮಾಡಿಕೊಳ್ಳುವ ಮತ್ತು ತಮ್ಮ ಅನನ್ಯತೆಗಳನ್ನು ಉಳಿಸಿಕೊಳ್ಳುವ ಜನತಾಂತ್ರಿಕ ಆಶಯಗಳಿಂದಲೇ ಈ ಹೋರಾಟಗಳು ರೂಪಗೊಂಡಿದ್ದವು. ಆದರೆ ಅರಾಜಕಗೊಂಡಿದ್ದ ಭಾರತದ ರಾಜಕೀಯ ಸಂದರ್ಭವು ನಿತ್ರಾಣಗೊಂಡಿತ್ತು. ಆದರೆ ಅಲ್ಲಲ್ಲಿ ಜೀವಂತವಿದ್ದ ಸ್ವಾಬಿಮಾನಿ ಸಂಸ್ಥಾನಗಳು ಮಾತ್ರ ಬ್ರಿಟೀಷ್ ಆಡಳಿತದ ವಿರುದ್ಧ ಉಗ್ರವಾಗಿಯೇ ತಿರುಗಿ ಬೀಳುತ್ತಿದ್ದವು. ಯಾವ ಸಮುದಾಯಗಳು ಸ್ಥಳೀಯ ರಾಜರ ಸೈನ್ಯದಲ್ಲಿದ್ದು ಕಂಪನಿ ಆಡಳಿತದ ವಿರುದ್ಧ ಹೋರಾಡುತ್ತಿದ್ದವೋ ಆ ಎಲ್ಲ ಸಮುದಾಯಗಳನ್ನು ಕಂಪನಿ ಸರಕಾರ ಯುದ್ಧಾನಂತರ ಅನೇಕ ಬಗೆಯಲ್ಲಿ ಹಿಂಸಿಸುತ್ತಿತ್ತು. ಉದಾ. ಹೈದರ್ ಆಲಿ ಮತ್ತು ಟಿಪ್ಪುವಿನ ಸೋಲಿನ ನಂತರ ಅವರ ಸೈನ್ಯವನ್ನು ಬ್ರಿಟೀಷರು ಇನ್ನಿಲ್ಲದಂತೆ ನಾಶಮಾಡಿದರು. ಅವರಿಗೆ ಭಾರತದ ಸಮಾಜದ ಕುರಿತು ಸರಿಯಾದ ಕಲ್ಪನೆಯೇ ಇರಲಿಲ್ಲ. ಅಲೆಮಾರಿ ಪಶುಪಾಲಕರು, ವೃತ್ತಿ ಸಂಗೀತಗಾರರು, ಆದಿವಾಸಿಗಳು, ದೊಂಬರಾಟದವರು, ಜಿಪ್ಸಿಗಳು, ಹಾವಾಡಿಸುವವರು, ಅಲೆಮಾರಿ ವೈದ್ಯರು, ಈ ಸಮುದಾಯಗಳನ್ನು ಬ್ರಿಟೀಷ್‌ರು ಅರ್ಥಮಾಡಿಕೊಳ್ಳಲಿಲ್ಲ. ಈ ಸಮುದಾಯಗಳನ್ನು ಅವರು ಸದಾ ಅನುಮಾನಿಸುತ್ತಲೇ ಬಂದರು. ಸಹಜವಾಗಿಯೇ ಈ ಸಮುದಾಯಗಳು 'ಅಪರಾದಿ ಸಮುದಾಯಗಳ ಪಟ್ಟಿಗೆ ಸೇರಿಸಲ್ಪಟ್ಟವು.

೧೮೭೧ರ Criminal Tribes Act  ಕಂಪನಿ ಆಡಳಿತದ ಅದಿಕಾರಿಗಳಿಗೆ ಒಂದು ಅಸ್ತ್ರವಾಗಿ ಪರಿಣಮಿಸಿತು. ಈ ಕಾಯ್ದೆಯು ಅಲೆಮಾರಿ ಸಮುದಾಯಗಳನ್ನು, ಕಾಡಿನ ಅಂಚಿನಲ್ಲಿರುವ ಆದಿವಾಸಿಗಳನ್ನು ನಿಯಂತ್ರಿಸಲು ಮತ್ತು ಈ ಸಮುದಾಯಗಳ ಮೇಲೆ ವಿನಾಕಾರಣ ಕ್ರಮ ತೆಗೆದುಕೊಳ್ಳುವ ಅದಿಕಾರವನ್ನು ಕಂಪನಿ ಆಡಳಿತದ ಅದಿಕಾರಿಗಳಿಗೆ ನೀಡಿತು. ಅಲೆಮಾರಿತ್ವ ಎನ್ನುವುದು ಅಪರಾಧವಾಗಿ ಪರಿಗಣಿತವಾಗಿಬಿಟ್ಟಿತು. ಮೂಲತಃ ಅಲೆಮಾರಿಗಳಾಗಿದ್ದ ಸಮುದಾಯಗಳನ್ನು ನೆಲೆ ನಿಲ್ಲಿಸಲು ಒತ್ತಾಯ ಮಾಡಲಾಯಿತು. ಹಳ್ಳಿಗಳಲ್ಲಿ ಗೌರವಾನ್ವಿತವಾಗಿ ಬದುಕಲು ಇಚ್ಚಿಸುವ ಸಮುದಾಯಗಳಿಗೆ ಲೈಸೆನ್ಸ್ ಕೊಡಲು ನಿರ್ಧರಿಸಲಾುತು. ಯಾರಾದರೂ ಲೈಸೆನ್ಸ್ ಇಲ್ಲದೆ ಅಲೆಮಾರಿಗಳಾಗಿ ತಿರುಗಲಾರಂಬಿಸಿದರೆ ಅವರನ್ನು ತಕ್ಷಣವೇ ಬಂದಿಸಿ ವಿಚಾರಣೆಗೆ ಒಳಪಡಿಸಲಾಗುತ್ತಿತ್ತು. ತಮ್ಮದೇ ನೆಲದಲ್ಲಿ ಸ್ವಚ್ಚಂದವಾಗಿ ಬದುಕುತ್ತಿದ್ದ ಸಮುದಾಯಗಳು ಈ ಹೊಸ ಕಾಯ್ದೆುಂದ ಅನ್ಯರಾಗಿ, ಅಪರಾದಿಗಳಾಗಿ ಬದುಕುವಂತಾುತು. ಜೊತೆಗೆ ತಮ್ಮ ಹಕ್ಕುಗಳ ಕುರಿತು ಈ ಸಮುದಾಯಗಳು ಎಚ್ಚೆತ್ತುಕೊಂಡವು. ಕಾಡಿನ ಅಂಚಿನಲ್ಲಿ ಬದುಕುತ್ತ ಅಲೆಮಾರಿ ವ್ಯಾಪಾರಿಗಳಿಂದ ಮುಖ್ಯವಾಹಿನಿಯ ಜೊತೆಗೆ ವಾಣಿಜ್ಯ ಸಂಬಂಧಗಳನ್ನಿಟ್ಟುಕೊಂಡಿದ್ದ ಆದಿವಾಸಿಗಳೂ ಸಹ ಈ ಕಾಯ್ದೆಯ ಕೆಂಗಣ್ಣಿಗೆ ಗುರಿಯಾದರು. ವಸಾಹತು ಆಡಳಿತಕ್ಕೂ ಮುನ್ನ ಭಾರತದ ಆದಿವಾಸಿಗಳು ತಮ್ಮ ತಮ್ಮ ಪ್ರದೇಶಗಳಲ್ಲಿ ಮುಕ್ತವಾದ ಮತ್ತು ತಮ್ಮದೇ ಆದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಬದುಕನ್ನು ಕಟ್ಟಿಕೊಂಡಿದ್ದರು. ಜೊತೆಗೆ ಆಯಾ ಸಾಮ್ರಾಜ್ಯಗಳ ಗಡಿಗಳನ್ನು ರಕ್ಷಿಸುವ ಹೊಣೆಯನ್ನು ಹೊತ್ತ ಆದಿವಾಸಿಗಳು ಕಾಡಿನಲ್ಲಿದ್ದುಕೊಂಡೇ ತಾವು ವಾಸಿಸುವ ಪ್ರದೇಶದ ರಕ್ಷಣೆ ಮಾಡುತ್ತಿದ್ದರು. ಶಿವಾಜಿಯ ಸೈನ್ಯದಲ್ಲಿ ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದವರು ಆದಿವಾಸಿಗಳು. ಆದರೆ ಕಂಪನಿ ಆಡಳಿತದ ಸಂದರ್ಭದಲ್ಲಿ ಯಾವುದೇ ದೇಶಿ ಸಂಸ್ಥಾನವನ್ನು ಬ್ರಿಟೀಷ್ ಸೈನ್ಯ ವಶಪಡಿಸಿಕೊಳ್ಳಲು ಹೊರಟಾಗ ಮೊದಲು ಈ ಸೈನ್ಯಕ್ಕೆ ಮುಖಾಮುಖಿಯಾಗುತ್ತಿದ್ದುದು ಈ ಅಲೆಮಾರಿ ಮತ್ತು ಆದಿವಾಸಿ ಸಮುದಾಯಗಳು.  ಮುಖ್ಯವಾ"ನಿಯ ಸಮಾಜವು ಅನೇಕ ಅನಿವಾರ್ಯತೆಗಳಿಂದಾಗಿ ಕಂಪನಿ ಆಡಳಿತದ ಜೊತೆಗೆ ರಾಜಿ ಒಪ್ಪಂದಗಳನ್ನು ಮಾಡಿಕೊಂಡರೂ ಈ ಸೇವಕ ವರ್ಗ ಮತ್ತು ಆದಿವಾಸಿಗಳು ಪ್ರತಿ ಹೋರಾಟ ನಡೆಸಲೇಬೇಕಿತ್ತು. ಹೀಗೆ ವಸಾಹತು ಆಡಳಿತದ ವಿರುದ್ಧ ತಿರುಗಿ ಬಿದ್ದ ಆದಿವಾಸಿಗಳನ್ನು ಮತ್ತು ಸೇವಕ ವರ್ಗಕ್ಕೆ ಸೇರಿದ ಸಮುದಾಯಗಳನ್ನು ನಿಯಂತ್ರಿಸಲೆಂದೇ ಈ ಕ್ರಿಮಿನಲ್ ಟ್ರೈಬ್ಸ್ ಆಕ್ಟ್‌ನ್ನು ರೂಪಿಸಲಾಯಿತು ಮತ್ತು ಈ ಕಾಯ್ದೆಯನ್ನು ಮುಂದಿಟ್ಟುಕೊಂಡು ವಸಾಹತು ಸೈನ್ಯವು ಈ ಸಮುದಾಯಗಳನ್ನು ಹಿಂಸಾತ್ಮಕವಾಗಿಯೂ ಹತ್ತಿಕ್ಕಿತು.

 ವಸಾಹತು ಆಡಳಿತದ ಸಂದರ್ಭದಲ್ಲಿ ಈ ಸಮುದಾಯಗಳಿಗೆ ಕನಿಷ್ಠಮಟ್ಟದ ನಾಗರಿಕ ಹಕ್ಕುಗಳನ್ನೂ ನಿರಾಕರಿಸಲಾಗಿತ್ತು. ದುರಂತವೆಂದರೆ ಈ ಪಟ್ಟಿಯಲ್ಲಿದ್ದ ಸಮುದಾಯಗಳನ್ನು ಕಂಪನಿ ಸರಕಾರವು ಜನ್ಮತಃ ಅಪರಾದಿಗಳು (Born criminals) ಎಂದು ಪರಿಗಣಿಸಿಬಿಟ್ಟಿತ್ತು. ಪೊಲೀಸರಿಗೆ ತರಬೇತಿ ಕೊಡುತ್ತಿದ್ದ ಸಂದರ್ಭದಲ್ಲಿ, ಅಲ್ಲಿನ ಪಠ್ಯಕ್ರಮದಲ್ಲಿ, 'ಅಪರಾಧಿ ಬುಡಕಟ್ಟುಗಳನ್ನು' ಗುರುತಿಸುವುದು ಮತ್ತು ಕಾನೂನಿನ ಮೂಲಕ ಅವರನ್ನು ಹೇಗೆ ನಿಯಂತ್ರಿಸುವುದು ಎಂಬ ಕುರಿತು ಪಾಠಗಳನ್ನು ಸೇರಿಸಿತು.

ದುರಂತದ ಸಂಗತಿಯೆಂದರೆ, ಭಾರತಕ್ಕೆ ಅಧಿಕಾರ ಹಸ್ತಾಂತರವಾದ ನಂತರ ೧೯೫೨ರಲ್ಲಿ ಬ್ರಿಟಿಷರ ಕ್ರಿಮಿನಲ್ ಟ್ರೈಬ್ಸ್ ಕಾಯ್ದೆ' ಭಾರತದಲ್ಲಿ ರದ್ದಾದರೂ ಸಹ ಪೊಲೀಸ್ ತರಬೇತಿಯ ಪಠ್ಯಕ್ರಮದಿಂದ `ಅಪರಾಧಿ ಬುಡಕಟ್ಟು ಕಾಯ್ದೆ'ಯ ಪಾಠಗಳು ತೊಲಗಲಿಲ್ಲ. ಅವರನ್ನು ಸ್ವತಂತ್ರ ಭಾರತದ ಸರಕಾರವು `ಪಾರಂಪರಿಕ ಅಪರಾಧಿ ಕಾಯ್ದೆ'ಯ (Habitual offender Act)  ಅಡಿಯಲ್ಲಿ  ಗುರುತಿಸಬೇಕೆಂದು ತಮ್ಮ ಪೊಲೀಸರಿಗೆ ಬೋಧಿಸಲಾಯಿತು. ಈ ಕಾಯ್ದೆ `ವ್ಯಕ್ತಿ ಅಥವಾ ಸಮುದಾಯವೊಂದನ್ನು ಅಪರಾಧಿ ಎಂದು ಗುರುತಿಸಲು ರೂಪುಗೊಂಡಂತೆ ಕಂಡರೂ, ವಸಾಹತೋತ್ತರ ಕಾಲಘಟ್ಟದ ನಂತರ ಭಾರತಕ್ಕೆ ಅಧಿಕಾರ ಹಸ್ತಾಂತರವಾದ ಮೇಲೂ ೧೨೭ ಡಿನೋಟಿಫೈಡ್ ಸಮುದಾಯಗಳ ವ್ಯಕ್ತಿಗಳನ್ನು ಗುರಿಯಾಗಿಟ್ಟುಕೊಂಡಿತು. ಈ ಕಾಯ್ದೆಯು ಅಪರಾಧವನ್ನು ಒಂದು ಕಾುಲೆಯೆಂದೂ, ಅಪರಾಧಿಯನ್ನು ರೋಗಿಯೆಂದೂ ಪರಿಗಣಿಸಿದೆ. 
ಇಲ್ಲಿ ನಮಗೆ ನಿಚ್ಚಳವಾಗುವ ವಿಷಯವೇನೆಂದರೆ ನಾವೀಗ ೭೦ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆಯ ಹೊಸ್ತಿಲಿನಲ್ಲಿ ನಿಂತಿದ್ದರೂ ಸಹ ಬ್ರಿಟಿಷರು ರೂಪಿಸಿದ್ದ ಕರಾಳ ಕಾನೂನುಗಳ ಪ್ರಭಾವದಿಂದ ನಮ್ಮ ಸರ್ಕಾರ, ಪೊಲೀಸ್ ವ್ಯವಸ್ಥೆ ಹೊರಕ್ಕೆ ಬಂದಿಲ್ಲ. ಯಾವ ಹಿಂದುಳಿದ, ಆದಿವಾಸಿ, ಅಲೆಮಾರಿ ಸಮುದಾಯಗಳನ್ನು ಮುಖ್ಯವಾಹಿನಿಯೊಂದಿಗೆ ಕರೆದುಕೊಂಡು ಹೋಗುವ ಮಾತನಾಡುತ್ತಾ, ಅಭಿವೃದ್ಧಿಯಲ್ಲಿ ಒಳಗೊಳ್ಳುವ ಮಾತನಾಡುತ್ತಿದ್ದೇವೆಯೋ ಅದೇ ಸಂದರ್ಭದಲ್ಲಿ ಒಬ್ಬ ಹಿರಿಯ ಮಾಜಿ ಪೊಲೀಸ್ ಅಧಿಕಾರಿಯಿಂದ ಇಂತಹ ಮಾತುಗಳು ಬರುತ್ತಿರುವುದು ವಿಪರ್ಯಾಸ. ಭಾರತದ ಸಂವಿಧಾನವು ಜಾತಿ, ಧರ್ಮ, ಲಿಂಗ, ಭಾಷೆಗಳ ಆಧಾರದಲ್ಲಿ ತಾರತಮ್ಯ ಮಾಡಕೂಡದೆಂದು ಹೇಳುತ್ತದೆ. ಆದರೆ ಇಲ್ಲಿ ಕಿರಣ್ ಬೇಡಿಯವರು ಬುಡಕಟ್ಟುಗಳನ್ನು ಕ್ರಿಮಿನಲ್‌ಗಳು ಎಂದು ಹೇಳುವ ಮೂಲಕ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಕಿರಣ್ ಬೇಡಿಯದು ಕೇವಲ ಕ್ಷುಲ್ಲಕ ರಾಜಕೀಯ ಹೇಳಿಕೆಯಲ್ಲ. ಈ ಹೇಳಿಕೆಯ ಹಿಂದೆ ಜಾತಿವಾದಿ ಮತ್ತು ಅಖಂಡ ಜನಾಂಗ ದ್ವೇಶಿ ನಿಲುವುಗಳಿರುವುದು ಸ್ಪಷ್ಟವಾಗಿಯೇ ಕಾಣಿಸುತ್ತಿದೆ. 

ಅದು ಕಿರಣ್ ಬೇಡಿಯವರೇ ಇರಲಿ, ಉತ್ತರ ಪ್ರದೇಶದ ಪೊಲೀಸರೇ ಇರಲಿ ಯಾರೇ ಇರಲಿ; ಯಾರೋ ಮಾಡಿದ ಅಪರಾಧಕ್ಕೆ ಚಾರಿತ್ರಿಕವಾಗಿ ನೊಂದು, ಬೆಂದು ಈ ನಾಗರಿಕ ಜಗತ್ತಿನೊಂದಿಗೆ ಹೊಂದಿಕೊಂಡು ಹೋಗಲು ಹೆಣಗುತ್ತಿರುವ ತಳಸಮುದಾಯಗಳನ್ನು 'ಕ್ರಿಮಿನಲ್ ಬುಡಕಟ್ಟುಗಳು', 'ಅಪರಾಧಿಗಳು', ಎಂದೆಲ್ಲಾ ಅಪಮಾನಿಸುತ್ತಿರುವುದನ್ನು ಈ ಮೂಲಕ ತೀವ್ರವಾಗಿ ಖಂಡಿಸುತ್ತಿದ್ದೇವೆ. 

ನಮ್ಮ ಬೇಡಿಕೆಗಳು
೧. ಕಿರಣ್ ಬೇಡಿಯವರು ಈ ಕೂಡಲೇ ಇಡೀ ದೇಶದ ಡಿನೋಟಿಫೈಡ್ ಸಮುದಾಯಗಳಿಗೆ ಲಿಖಿತ ರೂಪದಲ್ಲಿ ಕ್ಷಮಾಪಣೆ ಯಾಚಿಸಬೇಕು. ಜೊತೆಗೆ ಇಂಗ್ಲೀಷ್ ಮತ್ತು ಸ್ಥಳೀಯ ಭಾಷೆಯ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಬೇಕು. ತಮ್ಮ ಟ್ವೀಟರ್ ಖಾತೆಯಲ್ಲಿರುವ ಈ ಟ್ವೀಟನ್ನು ಕೂಡಲೇ ತೆಗೆದು ಹಾಕಬೇಕು.
೨. ಕಿರಣ್ ಬೇಡಿಯವರು ಸಂವಿಧಾನ ಮತ್ತು ಕಾನೂನು ಉಲ್ಲಂಘನೆ ಮಾಡಿರುವುದರಿಂದ ಮಾನ್ಯ ರಾಷ್ಟ್ರಪತಿಗಳು ಇವರನ್ನು ಪಾಂಡಿಚೆರಿಯ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ಅವರನ್ನು ವಜಾ ಮಾಡಬೇಕು. 


ಡಾ. ಸಿ ಎಸ್ ದ್ವಾರಕಾನಾಥ್, ಡಾ. ಟಿ ಎನ್ ಚಂದ್ರಕಾಂತ್
ಡಾ. ಎ ಎಸ್ ಪ್ರಭಾಕರ, ಶ್ರೀ ಹರ್ಷಕುಮಾರ್ ಕುಗ್ವೆ,ಅರುಣ್ ಜೋಳದಕೂಡ್ಲಿಗಿ
ಶ್ರೀ ಲೋಹಿತ್ ಮತ್ತು ತಳಸ್ತರದ ವೇದಿಕೆಯ ಸದಸ್ಯರು

ಕಾಮೆಂಟ್‌ಗಳಿಲ್ಲ: