ಹೊಸ ತಲೆಮಾರಿನ ಭೂ ಹೋರಾಟಕ್ಕೆ ಯಶಸ್ವಿ ಮುನ್ನುಡಿ
ದೇವರಾಜ್ ಜನ್ಮ ಶತಮಾನೋತ್ಸವದ ದಿನವಾದ ಆಗಸ್ಟ ೨೦ ಹೊಸ ತಲೆಮಾರಿನ ಭೂ ಹೋರಾಟದ ಹುಟ್ಟಿಗೆ ಸಾಕ್ಷಿಯಾಯಿತು. ರಾಜ್ಯದ ಬಹುತೇಕ ಜಿಲ್ಲೆಗಳಿಂದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೆಂಗಳೂರಿಗೆ ಬಂದಿಳಿದ ಹಳ್ಳಿ ಮತ್ತು ಪಟ್ಟಣದ ಬಡಜನರು ಸಹಸ್ರಾರು ಸಂಖ್ಯೆಯಲ್ಲಿ ಧೃಡಚಿತ್ತದ ಹೋರಾಟವನ್ನು ಆರಂಭಿಸಿದರು.
ಸಾವಿರಾರು ಸಂಖ್ಯೆಯಲ್ಲಿ ರೈಲ್ವೆ ನಿಲ್ದಾಣದೆದುರು ಅಣಿನೆರೆದಿದ್ದ ಜನರ ರ್ಯಾಲಿಯನ್ನುದ್ದೇಶಿಸಿ. ನೂರ್ ಶ್ರೀಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತ್ಯಾಂತ ಶಿಸ್ತಿನ, ಶಾಂತವಾದ ಆದರೆ ಅಷ್ಟೇ ಧೃಡ ಚಿತ್ತದ ಹೋರಾಟ ಇಂದು ನಡೆಯಲಿದೆ. ನಾವು ಯಾವ ರೀತಿಯ ತೊಂದರೆಯನ್ನೂ ಮಾಡುವುದಿಲ್ಲ ಆದರೆ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸುವ ಖಚಿತ ಮಾರ್ಗಸೂಚಿಯನ್ನು ಮುಂದಿಡದೆ ಹಿಂದಿರುಗುವುದೂ ಇಲ್ಲ. ನೀವು ಎಲ್ಲಿ ತಡಿಯುತ್ತೀರೋ ಅಲ್ಲೇ ಮಧ್ಯ ರಾತ್ರಿಯಾದರೂ ಸರಿ, ನಾಳೆ ನಾಡಿದ್ದಾದರೂ ಸರಿ ಕೂರುತ್ತೇವೆ ಎಂದು ಸಮಿತಿಯ ಪ್ರಸ್ತಾಪವನ್ನು ಜನರ ಮುಂದಿಟ್ಟು ಅದಕ್ಕೆ ಜನರಿಂದ ಒಕ್ಕೊರಲಿನ ಅನುಮೋದನೆಯನ್ನು ಪಡೆಯಲಾಯಿತು. ನಂತರ ರಾಜ್ಯದ ವಿವಿಧ ಪ್ರದೇಶಗಳಿಗೆ ಸೇರಿದ ಸಂತ್ರಸ್ತರ ಪ್ರತಿನಿಧಿಗಳು ಸಾಲಾಗಿ ನಿಂತು "ಘನತೆಯಿಂದ ಬದುಕುವಷ್ಟು ಭೂಮಿ - ಗೌರವದಿಂದ ಬಾಳುವಂಥ ವಸತಿ ನಮ್ಮ ಸಂವಿಧಾನಬದ್ಧ ಹಕ್ಕು" ಎಂಬ ಭ್ಯಾನರ್ ಅನ್ನು ಬಿಚ್ಚುವುದರ ಮೂಲಕ ಹೋರಾಟಕ್ಕೆ ಚಾಲನೆ ನೀಡಿದರು. "ಬೇಕೇಬೇಕು ಭೂಮಿ ಬೇಕು - ಬೇಕೇಬೇಕು ವಸತಿ ಬೇಕು" ಎಂಬ ಘೋಷಣೆಗಳು ಘರ್ಜನೆಗಳಂತೆ ಮೊಳಗಿದವು.
ನೂರಾರು ಬಾವುಟ ಮತ್ತು ಪ್ಲಕಾರ್ಡುಗಳನ್ನು ಹಿಡಿದು ಬಹಳ ವ್ಯವಸ್ಥಿತ ರೀತಿಯಲ್ಲಿ ಮೆರವಣಿಗೆ ವಿಧಾನಸೌಧ ಕಡೆಗೆ ಹೆಜ್ಜೆಹಾಕತೊಡಗಿತು. ಮೆರವಣಿಗೆ ಆನಂದ್ ರಾವ್ ವೃತ್ತವನ್ನು ದಾಟಿ ಫ್ರೀಡಂ ಪಾರ್ಕಿನ ಬಳಿ ಬಂದ ಕೂಡಲೆ ನಿರೀಕ್ಷಿಸಿದಂತೆ ಬ್ಲಾಕೇಡ್ ನಿರ್ಮಿಸಿ ಪೋಲೀಸರು ಅದನ್ನು ತಡೆದರು. ಮುಖ್ಯ ರಸ್ತೆಯನ್ನು ಬಿಟ್ಟು ಫ್ರೀಡಂ ಪಾರ್ಕಿನಲ್ಲಿ ಅಥವ ಅದರ ಪಕ್ಕದ ಅಡ್ಡ ರಸ್ತೆಯಲ್ಲಿ ಕೂರಲು ಒತ್ತಾಯಿಸತೊಡಗಿದರು. ನಾವು ವಿಧಾನ ಸೌಧದ ಬಳಿ ಇರುವ ದೇವರಾಜು ಅರಸು ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಲು ಹೊರಟವರು ಅಲ್ಲಿಯ ತನಕ ಬಿಡಿ ಅಥವ ಸರ್ಕಾರದ.ಪ್ರತಿನಿಧಿಗಳು ಬಂದು ಸಮಸ್ಯೆಯ ಇತ್ಯಾರ್ಥಕ್ಕೆ ಸಮಂಜಸ ಉತ್ತರ ಕೊಡಲಿ ಎಂದು ಪಟ್ಟು ಹಿಡಿದು ಮುಖ್ಯಬೀದಿಯಲ್ಲೇ ಕೂರಲಾಯಿತು. ಪ್ರತಿಭಟನಾಕಾರರನ್ನುದ್ದೇಶಿಸಿ ಸ್ವತಂತ್ರ ಹೋರಾಟದ ಚೇತನ ದೊರೆಸ್ವಾಮಿಯವರು, ಎಸ್.ಆರ್.ಹಿರೇಮಠರು, ರವಿಕೃಷ್ಣರೆಡ್ಡಿ, ದೊಡ್ಡಿಪಾಳ್ಯ ನರಸಿಂಹ ಮೂರ್ತೀ ಮುಂತಾದವರು ಬಹಳ ಚೈತನ್ಯಭರಿತ ಮಾತುಗಳನ್ನಾಡಿದರು. ಮಧ್ಯಾಹ್ನ ೨ ಗಂಟೆ ಹೊತ್ತಿಗೆ ಕಾಗೋಡು ತಿಮ್ಮಪ್ಪನವರು ಸ್ಥಳಕ್ಕೆ ಆಗನಿಸಿದರು.ಆರ್.ಮಾನಸಯ್ಯ ಬಹಳ ಸವಿಸ್ತಾರವಾಗಿ ಸಮಿತಿಯ
೧೦ ಹಕ್ಕೋತ್ತಾಯಗಳನ್ನು ಮಾನ್ಯ ಮಂತ್ರಿಗಳಿಗೆ ವಿವರಿಸಿದರು. ಅದರ ಸಾರಾಂಶ ಹೀಗಿದೆ:
೧. ಘನತೆಯಿಂದ ಬದುಕುವಷ್ಟು ಭೂಮಿ-ಗೌರವದಿಂದ ಬಾಳುವಂಥ ವಸತಿ ಎಂಬುದು ಈ ಸಂದರ್ಭದ ಸರ್ಕಾರದ ಧ್ಯೇಯ ಘೋಷಣೆಯಾಗಬೇಕು.
೨. ಈ ಘೋಷಣೆಯನ್ನು ೨ ವರ್ಷದೊಳಗೆ ಅನುಷ್ಠಾನಕ್ಕಿಳಿಸುವ ಗುರಿಯೊಂದಿಗೆ ಮುಖ್ಯಮಂತ್ರಿ ಮತ್ತು ಕಂದಾಯ ಮಂತ್ರಿಗಳ ನೇತೃತ್ವದಲ್ಲಿ ಹೈಪವರ್ ಕಮಿಟಿಯನ್ನು ರಚಿಸಬೇಕು. ಈ ಸಮಿತಿಯು ಜನಚಳವಳಿಗಳ ಪ್ರತಿನಿಧಿಗಳನ್ನು ಸಹ ಒಳಗೊಂಡಿರಬೇಕು.
೩. ಈ ಸಮಿತಿಯು ಕರ್ನಾಟಕದ ಎಲ್ಲಾ ರೀತಿಯ ಭೂಮಿಯ ಕುರಿತು ಸಮಗ್ರ ಲ್ಯಾಂಡ್ ಆಡಿಟಿಂಗ್ ನಡೆಸಬೇಕು. ಒಟ್ಟು ಲಭ್ಯವಿರುವ ಭೂಮಿ, ಬಲಾಢ್ಯರ ಒಡೆತನ ಮತ್ತು ಕಬಳಿಕೆ, ಬಲಹೀನ ಒಡೆತನಗಳು ಮತ್ತು ಆಸ್ತಿಹೀನರ ಖಚಿತ ಚಿತ್ರಣವನ್ನು ಜನತೆಯ ಮುಂದಿಡಬೇಕು.
೪. ಅಲ್ಲದೆ ಜನಸಾಮಾನ್ಯರ ಹಿತವನ್ನು ಆದ್ಯತೆ ಮಾಡಿಕೊಂಡಿರುವಂಥ ಭೂ ಬಳಕೆ ನೀತಿಯನ್ನು ಜಾರಿಗೆ ತರಬೇಕು. ಬಡವರಿಗೆ ಮನೆ, ಉಳುಮೆ ಮಾಡಿ ಬದುಕುವವರಿಗೆ ಭೂಮಿ, ಗ್ರಾಮೀಣ ಸಣ್ಣ ಕೈಗಾರಿಕೆ, ಸಾಮುದಾಯಿಕ ಅಗತ್ಯ, ಪರಿಸರ ಸಮತೋಲನ ಭೂ ಬಳಕೆ ನೀತಿಯ ಆದ್ಯತೆಗಳಾಗಿರಬೇಕು.
೫. ಮೇಲೆ ಉಲ್ಲೇಖಿತ ಹೈಪವರ್ ಕಮಿಟಿಯ ಮೇಲ್ವಿಚಾರಣೆಯಲ್ಲಿ ಭೂನ್ಯಾಯ ಮಂಡಳಿಗಳನ್ನು ಪುನರ್ರಚಿಸಬೇಕು. ಅದರಲ್ಲೂ ಚಳವಳಿಗಳ ಪ್ರಾತಿನಿಧ್ಯ ಇರಬೇಕು.
೬. ಯಾವುದೇ ಕಾರಣಕ್ಕೂ ಸಣ್ಣ ರೈತರನ್ನು ಹಾಗೂ ಬಡವರನ್ನು ಅವರ ನೆಲ ಮತ್ತು ನೆಲೆಯಿಂದ ಒಕ್ಕಲೆಬ್ಬಿಸುವುದಿಲ್ಲ ಎಂದು ಸರ್ಕಾರ ಘೋಷಿಸಬೇಕು.
೭. ೫ ಎಕರೆ ಒಳಗಿನ ಬಗರ್ ಹುಕುಂ ರೈತರಿಗೆ ಕಡ್ಡಾಯವಾಗಿ ತಕ್ಷಣವೇ ಭೂಮಿಯನ್ನು ಮಂಜೂರು ಮಾಡಬೇಕು. ದಾಖಲೆ ಪತ್ರಗಳ ಸಬೂಬು ನೀಡಿ ಅವರನ್ನು ಹಕ್ಕುವಂಚಿತರನ್ನಾಗಿ ಮಾಡಬಾರದು. ಅರ್ಜಿ ಹಾಕದವರಿಗೆ ಅರ್ಜಿ ಹಾಕಲು ಮತ್ತೆ ಆರು ತಿಂಗಳ ಕಾಲಾವಕಾಶ ನೀಡಬೇಕು. ಅದೇ ಸಂದರ್ಭದಲ್ಲಿ ೩೦ ಎಕರೆಗಿಂತ ಹೆಚ್ಚಿನ ಒತ್ತುವರಿ ಮಾಡಿರುವವರ ಭೂಮಿಯನ್ನು ನಿರ್ದಾಕ್ಷಿಣ್ಯವಾಗಿ ವಶಪಡಿಸಿಕೊಳ್ಳಬೇಕು. ಅದನ್ನು ಬಡವರಿಗೆ ಹಂಚಲಿಕ್ಕೆ ಮತ್ತು ಅರಣ್ಯ ಅಭಿವೃದ್ಧಿಗೆ ಬಳಸಬೇಕು.
೮. ಯಾವ ರೀತಿಯ ಭೂಮಿಯೂ ಇಲ್ಲದ, ಆದರೆ ಸ್ವಯಂ ಕೃಷಿ ಮಾಡಿ ಬದುಕಲು ಬಯಸುವ ಭೂಹೀನ ಕೃಷಿ ಕೂಲಿ ಕುಟುಂಬಗಳಿಗೆ ಘನತೆಯಿಂದ ಬದುಕುವಷ್ಟು ಭೂಮಿಯನ್ನು ನೀಡುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು. ಈ ಹಂಚಿಕೆಯಲ್ಲಿ ಸಮಾಜದ ’ಅಂತ್ಯಜ’ ಸಮುದಾಯಗಳಾದ ಅಸ್ಪಶ್ಯ, ಆದಿವಾಸಿ, ಅಲೆಮಾರಿ, ಅತಿ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಜನರಿಗೆ ಆದ್ಯತೆ ಇರಬೇಕು.
೯. ನಗರ ಮತ್ತು ಗ್ರಾಮಗಳ ಪ್ರತಿ ಕುಟುಂಬವೂ ಸ್ವಂತದ ನಿವೇಶನ ಸಹಿತ ಮನೆ ಹೊಂದುವ ಹಕ್ಕನ್ನು ಸರ್ಕಾರ ಮಾನ್ಯಗೊಳಿಸಬೇಕು.
೧೦. ಬಲಾಢ್ಯರು ಕಾನೂನುಬಾಹಿರವಾಗಿ ಕಬಳಿಸಿರುವ ಲಕ್ಷಾಂತರ ಎಕರೆ ಭೂಮಿಯನ್ನು ಈ ಕೂಡಲೇ ಮರುವಶಪಡಿಸಿಕೊಳ್ಳಬೇಕು. ಅಭಿವೃದ್ಧಿಯ ಮುಸುಕಿನಲ್ಲಿ ಕಾರ್ಪೊರೇಟ್, ರಿಯಲ್ ಎಸ್ಟೇಟ್ ಭೂ ಮಾಫಿಯಾಗಳು ಕಬಳಿಸಿರುವ ಭೂಮಿಯನ್ನು ಸರ್ಕಾರ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕು. ಭೂ ಮಿತಿ ಕಾಯ್ದೆಯನ್ನು ಇಂದಿನ ಅಗತ್ಯಕ್ಕನುಸಾರ ಮರುಪರಿಷ್ಕರಿಸಬೇಕು. ಭೂಮಿತಿಯನ್ನು ಇಳಿಸಬೇಕು. ಇದರಿಂದ ದೊರಕುವ ಹೆಚ್ಚುವರಿ ಭೂಮಿಯನ್ನು ಕ್ರೋಢೀಕರಿಸಿ ಬಡವರಿಗೆ ಹಂಚುವ ದಿಟ್ಟ ತೀರ್ಮಾನವನ್ನು ಸರ್ಕಾರ ತೆಗೆದುಕೊಳ್ಳಬೇಕು.
ಹಕ್ಕೊತ್ತಾಯಗಳನ್ನು ತಾಳ್ಮೆಯೊಂದಿಗೆ ಆಲೀಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಫನವರು ಭೂಮಿ ಸಮಸ್ಯೆಯನ್ನು ಕೈಗೆತ್ತಿಕೊಂಡು ಜನರನ್ನು ಜಾಗೃತಗೊಳಿಸಿ ಸಂಘಟಿಸುತ್ತಿರುವುದಕ್ಕಾಗಿ ಸಂಘಟಕರುಗಳಿಗೆ ಅಭಿನಂದನೆ ತಿಳಿಸಿದರು. ಸಮಿತಿ ಮುಂದಿಟ್ಟ ಒಂದೊಂದು ಹಕ್ಕೊತ್ತಾಯಕ್ಕೂ ಪ್ರತಿಕ್ರಿಯಿಸಿ ಮಾತನಾಡಿದರು. ಕಾಳಜಿ, ಜವಬ್ದಾರಿ, ದರ್ಪ ಮತ್ತು ಕೊಂಚ ಲೇವಡಿ ಮಿಶ್ರಿತ ಶೈಲಿಯ ಅವರ ಮಾತಿಗೆ ಸಭೆಯಲ್ಲಿ ಮಿಶ್ರ ಸಂವೇದನೆ ಇತ್ತು.ಅವರ ಮಾತಿನ ರೀತಿ ಮತ್ತು ನೀತಿಯಲ್ಲಿ ಅಕ್ಷೇಪಾರ್ಹ ವಿಚಾರಗಳಿದ್ದವಾದರೂ ಅವರು ಸಾರಾಂಶದಲ್ಲಿ ಸ್ಪಷ್ಟ ಮಾತುಗಳಲ್ಲಿ ನಮ್ಮೆಲ್ಲಾ ಹಕ್ಕೊತ್ತಾಯಗಳು ಸರಿಯಾಗಿವೆ ಎಂದು ಒಪ್ಪಿಕೊಂಡರು ಹಾಗೂ ಕೂಡಲೇ ಮುಖ್ಯಮಂತ್ರಿಗಳ ಜೊತೆ ಸಮಾಲೋಚಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಹಾಗೂ ಸಮಿತಿಯನ್ನು ಮಾತುಕತೆಗೆ ಬರಮಾಡಿಕೊಳ್ಳಾಗುವುದು ಎಂಬುದನ್ನು ತಿಳಿಸಿದರು. ಭೂಮಿಯ ಸಕ್ರಮಕ್ಕೆ ಅರ್ಜಿ ಹಾಕುವ ಕಾಲಾವಧಿಯನ್ನು ವಿಸ್ತರಿಸುತ್ತೇವೆ. ಸಂಘಟನೆಗಳು ಜನರಲ್ಲಿ ಜಾಗೃತಿ ಮೂಡಿಸಿ ಅದನ್ನು ಉಪಯೋಗಿಸಿಕೊಳ್ಳುವಂತೆ ಜನರನ್ನು ಸಜ್ಜುಗೊಳಿಸಬೇಕು ಎಂದರು. ರಾಜ್ಯದಲ್ಲಿ ಒಂದು ಬಡ ಕುಟುಂಬವನ್ನೂ ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಹಾಗೇನಾದರೂ ಯಾರಾದರೂ ತೊಂದರೆ ಕೊಟ್ಟರೆ ನನ್ನ ಬಳಿ ಬನ್ನಿ ಎಂದರು.
ಮಂತ್ರಿಗಳ ಈ ಮುಕ್ತ ಬೆಂಬಲಕ್ಕಾಗಿ ಸಮಿತಿ ಅವರನ್ನು ಅಭಿನಂದಿಸಿತು, ಆದರೆ ಕಾಗೋಡು ತಿಮ್ಮಪ್ಪನವರ ಕಮಿಟ್ಮೆಂಟ್ ಕ್ಯಾಬಿನೆಟ್ ಕಮಿಟ್ಮೆಂಟಾಗಿ ಹೊರಬರಬೇಕು ಎಂದು ಒತ್ತಿ ಹೇಳಿ ಅವರನ್ನು ಬೀಳ್ಕೊಡಲಾಯಿತು.
ದೇವರಾಜ್ ಜನ್ಮಶತಮಾನೋತ್ಸವಕ್ಕೆ ಸರ್ಕಾರ ಯಾವ ಗೌರವವನ್ನೂ ತೋರಲಿಲ್ಲ ಗಾಂಧಿ ಜಯಂತಿಗಾದರೂ ತೋರುತ್ತದಾ ನೋಡೋಣ.ಅಕ್ಟೋಬರ್ ೨ ರ ಹೊತ್ತಿಗಾದರೂ ಸರ್ಕಾರ ನಿರ್ಧಿಷ್ಟ ದಿಟ್ಟ ಹೆಜ್ಜೆಗಳ ಜೊತೆ ಜನರ ಭೂಮಿ ಮತ್ತು ವಸತಿಯ ಸಮಸ್ಯೆಗಳನ್ನು ಬಗೆಹರಿಸಲು ಮುಂದೆ ಬರದಿದ್ದರೆ ಆ ಇಡೀ ತಿಂಗಳನ್ನು ಹೋರಾಟದ ತಿಂಗಳನ್ನಾಗಿ ಪರಿವರ್ತಿಸುವ, ಅದುವರೆತನಕ ಸಂಘಟನೆಯನ್ನು ವಿಸ್ತರಿಸುತ್ತಾ ಹೊಸ ಹಂತದ ಹೋರಾಟಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುವ ತೀರ್ಮಾನದ ಜೊತೆ ಪ್ರತಿಭಟನಾ ಸಭೆ ಯಶಸ್ವಿಯಾಗಿ ಮುಕ್ತಾಯವಾಯಿತು.
ಹೋರಾಟದಲ್ಲಿ ಹೆಜ್ಜೆ ಹಾಕಿದ ಮತ್ತು ದೂರದಿಂದಲೇ ಅದರ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಹೋರಾಟದ ಅಭಿನಂದನೆಗಳು ಹಾಗೂ ಧನ್ಯವಾದಗಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ