ಭಾನುವಾರ, ಜುಲೈ 10, 2016

ಕಾನೂರು ಹೆಗ್ಗಡತಿ ಕಾದಂಬರಿಯಿಂದ: ಆತ್ಮಹತ್ಯೆ ಬಗ್ಗೆ ಕುವೆಂಪು ಚಿಂತನೆ

ಕಾನೂರು ಹೆಗ್ಗಡಿತಿ: ಆತ್ಮಹತ್ಯೆ

ಕೆಲವರಿರುತ್ತಾರೆ, ಅವರಿಗೆ ಜಗತ್ತನ್ನು ತಮ್ಮ ಅಭಿಲಾಷೆಯ ಅಗ್ನಿಯಲ್ಲಿ ಕರಗಿಸಿ, ಇಚ್ಛೆಯ ಎರಕದಲ್ಲಿ ಹೊಯ್ದು, ತಮ್ಮ ಇಷ್ಟದ ಜೀವನ ಮೂರ್ತಿಯನ್ನು ನಿರ್ಮಿಸಿಕೊಳ್ಳಬೇಕೆಂಬ ಉತ್ಕಟಾಕಾಂಕ್ಷೆ, ಅವರು ಪ್ರಪಂಚವನ್ನು ಅನುಸರಿಸುವುದಕ್ಕಿಂತಲೂ ಹೆಚ್ಚಾಗಿ ಪ್ರಪಂಚವೇ ತಮ್ಮ ಮನೋರಥಗಳಂತೆ ನಡೆದುಕೊಳ್ಳಬೇಕೆಂದು ಬಯಸುತ್ತಾರೆ. ಆ ಬಯಕೆ ಕೈಗೂಡದಿದ್ದರೆ ನಿಷ್ಠುರ ಪ್ರಪಂಚದಿಂದ ಹೇಗಾದರೂ ಪಾರಾಗಲು ಪ್ರಯತ್ನಿಸುತ್ತಾರೆ. ಆ ಪ್ರಯತ್ನ ಅನೇಕ ರೂಪಗಳನ್ನು ತಾಳಬಹುದು. ಕಲೆಯ ಸುರುಚಿರ ಕೃತಿಗಳಿಂದ ಹಿಡಿದು ಹಗಲುಗನಸು, ಅರೆಮರುಳು, ಹುಚ್ಚು, ಮೂರ್ಛೆ, ವೈರಾಗ್ಯ, ಆತ್ಮಹತ್ಯೆ – ಇತ್ಯಾದಿಗಳವರೆಗೂ ಆ ಪ್ರಯತ್ನದ ವ್ಯಾಪನೆಯಿದೆ. ಕಲೆ ಮತ್ತು ವೈರಾಗ್ಯಗಳಿಂದ ಲೋಕಸಂಗ್ರಹವಾಗಬಹುದು. ಅಂತೂ ಈ ಪ್ರಪಂಚದಲ್ಲಿ ಆದರ್ಶಪ್ರಪಂಚವನ್ನು ಹುಡುಕುವವರಿಗೆ ಲೋಕ, ಕಟ್ಟಕಡೆಗೆ ಗೌರವ ತೋರಿದರೂ, ಮೊದಮೊದಲು ಅವರನ್ನು ನಿಷ್ಠುರವಾಗಿ ಪೀಡಿಸುತ್ತದೆ. ಆದ್ದರಿಂದ ಆದರ್ಶದ ಹೂವಿನ ಹಾಸಗೆಗೆ ಹೋಗಲೆಳಸುವವರು ಮುಳ್ಳಿನ ಬೇಲಿಯನ್ನು ದಾಟಲು ಸಿದ್ದರಾಗಿರಬೇಕು. ಹಾಗೆ ಸಿದ್ದರಾದವರಿಗೆಲ್ಲ ಹೂವಿನ ಹಾಸಗೆ ಲಭಿಸಿಯೆ ಲಭಿಸುತ್ತದೆ ಎಂಬುದೂ ನಿಶ್ಚಯವಲ್ಲ. ಎಷ್ಟೋ ಸಾಹಸಿಗಳು ದಾರಿಯಲ್ಲಿಯೇ ಮಡಿಯಬೇಕಾಗುತ್ತದೆ. ಅಂತಹ ಕನಸು ಕಟ್ಟುವ ಸಾಹಸಿಗಳ ಗುಂಪಿಗೆ ಸೇರಿದರು, ಸೀತೆ ಮತ್ತು ಹೂವಯ್ಯ.
ಮತ್ತೆ ಕೆಲವರಿರುತ್ತಾರೆ, ಅವರಿಗೂ ಆಶೆಗಳೂ ಇಚ್ಛೆಗಳೂ ಉತ್ಕಟವಾಗಿಯೆ ಇರುತ್ತವೆ. ಆದರೆ ಅವರ ಆಕಾಂಕ್ಷೆ ವಾಸ್ತವ ಜಗತ್ತಿಗೆ ಡಿಕ್ಕಿ ಹೊಡೆದು, ತಲೆಬಾಗಿಸಿಕೊಂಡು ರಕ್ತಪಾತಮಾಡಿಸಿಕೊಳ್ಳುವುದಿಲ್ಲ. ಅದು ಕಠಿಣ ಜಗತ್ತು ಎಲ್ಲಿ ಬಾಗಿದರೆ ಅಲ್ಲಿ ಬಾಗಿ, ಎಲ್ಲಿ ತಲೆಯೆತ್ತಿದರೆ ಅಲ್ಲಿ ತಲೆಯೆತ್ತಿ, ಎಲ್ಲಿ ಇಕ್ಕಟ್ಟಾದರೆ ಅಲ್ಲಿ ಸಣ್ಣದಾಗಿ ನುಸುಳಿ, ತನ್ನ ಆಶೆ ಮತ್ತು ಇಚ್ಛೆಗಳನ್ನು ಪ್ರಪಂಚಕ್ಕೆ ಹೊಂದಿಸಿಕೊಂಡು ಬಾಳುತ್ತದೆ. ಅಂಥವರಿಗೆ ಕನಸುಕಟ್ಟುವ ಸಾಹಸಿಗಳಿಗೆ ಬಂದೊದಗುವ ಅತ್ಯುತ್ಕಟವಾದ ಹೃದಯಯಾತನೆ ಒದಗುವುದಿಲ್ಲ ; ಅವರಿಗೆ ಆದರ್ಶ ಸಿದ್ದಿಯಿಂದುಂಟಾಗುವಂತೆ ನಿರುಪಮವಾದ ಮಹತ್ತಾದ ದಿವ್ಯಾನಂದವೂ ದೊರೆಯುವುದಿಲ್ಲ. ಆದರೆ ಒಟ್ಟಿನಲ್ಲಿ ಸ್ವಪ್ನಸಾಹಸಿಗಳಿಗಿರುವ ಘನತೆಯಿರದಿದ್ದರೂ ಐಹಿಕ ಜೀವನ ದೃಷ್ಟಿಯಲ್ಲಿ ಹೆಚ್ಚು ನೆಮ್ಮದಿಯಾಗಿರುತ್ತಾರೆ.

ಕಾಮೆಂಟ್‌ಗಳಿಲ್ಲ: