ಸೋಮವಾರ, ಮೇ 4, 2015

ಕರ್ನಾಟಕ ಜಾನಪದ ದಿನಾಚರಣೆಗೊಂದು ದಿನ

-ಎ.ವಿ.ನಾವಡ
ಕನ್ನಡ ಜಾನಪದವನ್ನು ಕುರಿತಂತೆ ಮೊದಲ ತೇದಿಯ ಪ್ರಸ್ತಾಪ ಯಾರಿಂದ, ಯಾವಾಗ ಆಯಿತು ಎನ್ನುವುದು ಕುತೂಹಲದ ಸಂಗತಿ. 1846 ಆಗಸ್ಟ್‌ 22ರ ಇಂಗ್ಲೆಂಡಿನ ‘ದಿ ಅಥೀನಿಯಂ’ ಪತ್ರಿಕೆಯಲ್ಲಿ ಡಬ್ಲ್ಯು.ಜೆ. ಥಾಂಸ್‌ನು ‘ಅಂಬ್ರೋಸ್‌ ಮೆರ್ಟನ್‌’ ಎಂಬ ಮರೆಹೆಸರಲ್ಲಿ ಬರೆದ ಪತ್ರಲೇಖನ ಪ್ರಕಟವಾಯಿತು. ಪರಂಪರಾಗತವಾಗಿ ಬಂದ ನಂಬಿಕೆ, ನಡಾವಳಿ, ಆಚರಣೆ, ಲಾವಣಿ, ಗಾದೆ, ಒಗಟು ಮುಂತಾದವುಗಳನ್ನು ಗಮನಿಸಿ ಆಗಲೇ ಬಳಕೆಯಲ್ಲಿದ್ದ ‘ಪಾಪುಲರ್‌ ಆಂಟಿಕ್ವಿಟೀಸ್‌’ ಎನ್ನುವ ಪದದ ಬದಲಿಗೆ ‘ಫೋಕ್‌ಲೋರ್‌’ ಎನ್ನುವ ಟ್ಯುಟಾನಿಕ್ ಮೂಲದ ಪದವನ್ನು ಬಳಸಬಹುದೆಂದು ಸೂಚಿಸಿದ. ಆದರೆ ಜಾನಪದದ ಅಧ್ಯಯನ ಪಾಶ್ಚಾತ್ಯ, ಪೌರಾತ್ಯ ದೇಶಗಳಲ್ಲಿ ಇದಕ್ಕೆ ಮುನ್ನವೇ ರೂಪುಗೊಂಡಿತ್ತು.
ಭಾರತದ ‘ಪಂಚತಂತ್ರ’, ‘ಕಥಾ ಸರಿತ್ಸಾಗರ’ಗಳನ್ನು ಜಾನಪದವೆಂದು ಪರಿಗಣಿಸಿದರೆ ಅದರ ಅಧ್ಯಯನ ಇನ್ನೂ ಹಿಂದಕ್ಕೆ ಹೋಗುತ್ತದೆ. 1812ರ ಹೊತ್ತಿಗೆ ಜರ್ಮನಿಯಲ್ಲಿ ಗ್ರಿಮ್‌ ಸಹೋದರರು ಜನಪದ ಕತೆಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದರು.
ಇಂಗ್ಲಿಷ್‌ನ ಫೋಕ್‌ಲೋರ್‌ಗೆ ಸಂವಾದಿಯಾಗಿ ಜರ್ಮನಿಯಲ್ಲಿ volkskunde (ಫೋಕ್‌್ಸಕುಂದೆ) ಎನ್ನುವ ಪರಿಭಾಷೆ ಆಗಲೇ ಬಳಕೆಗೆ ಬಂದಿತ್ತು. ಕನ್ನಡದಲ್ಲಿ ಡಾ. ಹಾ.ಮಾ. ನಾಯಕರು ಮೈಸೂರು ವಿಶ್ವವಿದ್ಯಾನಿಲಯ ಸುವರ್ಣಮಹೋತ್ಸವದ ಸಂದರ್ಭದ ವಿಚಾರಗೋಷ್ಠಿಯೊಂದರಲ್ಲಿ (1966) ಮಾತನಾಡುತ್ತಾ ಇಂಗ್ಲಿಷ್‌ನ ‘ಫೋಕ್‌ಲೋರ್‌’ಗೆ ಕನ್ನಡದಲ್ಲಿ ‘ಜಾನಪದ’ ಎನ್ನುವ ಪದವನ್ನು ಬಳಸಬಹುದು ಎಂದು ಹೇಳಿದರು. ಇಂಗ್ಲೆಂಡಿನ ‘ಅಥೀನಿಯಂ’ ಪತ್ರಿಕೆಯಲ್ಲಿ ಪ್ರಕಟವಾದ ಫೋಕ್‌ಲೋರ್‌ ಪದವನ್ನೇ ಈ ಜ್ಞಾನಶಿಸ್ತನ್ನು ಪ್ರತಿನಿಧಿಸುವ ಸೂಕ್ತ ‘ಆದಿಮ ಪದರೂಪ’ ಎಂದು ಭಾವಿಸಿಕೊಂಡು ಆ ಪದ ಟಂಕಿತವಾದ ದಿನವನ್ನು (ಆಗಸ್‌್ಟ 22) ಈಚಿನ ವರ್ಷಗಳಲ್ಲಿ ‘ವಿಶ್ವ ಜಾನಪದ ದಿನ’ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಆಚರಿಸಿಕೊಂಡು ಬರುತ್ತಿದೆ. ಆದರೆ ವಾಸ್ತವವಾಗಿ ಇಂಗ್ಲೆಂಡಿನಲ್ಲಿ ಬಳಕೆಯಲ್ಲಿದ್ದ ‘ಪಾಪುಲರ್‌ ಆಂಟಿಕ್ವಿಟಿ’ ಎನ್ನುವ ಪದಕ್ಕೆ ಫೋಕ್‌ಲೋರ್‌ ಎಂಬ ಪದವನ್ನು ಮರುನಾಮಕರಣ ಮಾಡಿದುದಷ್ಟೇ ಆತನ ಸಾಧನೆ.
ಇಂಗ್ಲಿಷ್‌ ಭಾಷೆಗೆ ಸಮೀಪಸ್ಥರಾದ ನಾವು ಫೋಕ್‌ಲೋರ್‌ ಪದದಿಂದಲೇ ಜಾನಪದ ಎನ್ನುವ ಪದವನ್ನು ಟಂಕಿಸಿಕೊಂಡೆವು. ಆದರೆ 18ನೆಯ ಶತಮಾನದ ಕೊನೆಯ ಹೊತ್ತಿಗಾಗಲೇ ಜರ್ಮನ್‌ ಭಾಷೆಯಲ್ಲಿ volkskunde ಎನ್ನುವ ಪದ ಬಳಕೆಯಲ್ಲಿತ್ತು (ಅದರ ಅರ್ಥ ಲೋಕಜ್ಞಾನ ಎಂದೇ ಆಗಿದೆ). ಅದನ್ನು ನಮ್ಮವರು ಗಮನಿಸಲಿಲ್ಲ.
ಇನ್ನೊಂದು ವಿಚಾರ: ಥಾಂಸ್‌ ವಿಲಿಯಂ ‘ಫೋಕ್‌ಲೋರ್‌’ ಎನ್ನುವ ಇಂಗ್ಲಿಷ್‌ ಪದವನ್ನು ಬಳಸುವ ಕೆಲವು ತಿಂಗಳ ಹಿಂದೆಯೇ ಅಂದರೆ ಮೇ 1846ರಲ್ಲಿ ಆಗ ನೀಲಗಿರಿಯಲ್ಲಿ ವಾಸವಿದ್ದ ಜರ್ಮನ್‌ ಮಿಶನರಿಯೂ, ಕನ್ನಡ, ಸಂಸ್ಕೃತ ಭಾಷಾ ಪರಿಣತನೂ ಆಗಿದ್ದ ಗಾಟ್‌ಫ್ರೈಡ್‌ ವೈಗಲ್‌ ಬರೆದ ‘ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಕುರಿತು’ (ಜರ್ಮನ್‌ ಭಾಷೆಯಲ್ಲಿ) ಎನ್ನುವ ಸುದೀರ್ಘ ಲೇಖನದ 24ನೆಯ ಕಂಡಿಕೆಯಲ್ಲಿ ಕನ್ನಡ ಜನಪದ ಸಾಹಿತ್ಯವನ್ನು ಕುರಿತು ಕೆಲವೊಂದು ಮಹತ್ವದ ಮಾತುಗಳನ್ನು ಬರೆಯುತ್ತಾನೆ. ಜರ್ಮನ್‌ ಭಾಷೆಯ ಈ ಲೇಖನ ಪ್ರಕಟವಾದುದು ಜರ್ಮನಿಯ ಪ್ರಾಚ್ಯ ವಿಷಯಕ ವಿದ್ವತ್‌ ಪತ್ರಿಕೆ ‘ZDMG’ಯ 1848ರ ಸಂಚಿಕೆಯಲ್ಲಿ.
ಈ ಮುನ್ನ ಕರ್ನಾಟಕದಲ್ಲಿ ಜಾನ್‌ಲೇಡನ್‌ (1803) ಶ್ರೀರಂಗಪಟ್ಟಣದ ಪತನವನ್ನು ಕುರಿತಂತೆ ಒಂದು ಲಾವಣಿ ಹಾಗೂ ಅಬ್ಬೆ ಡುಬಾಯಿ ಬರೆದ ‘Hindu customs, Manners, and Ceremonies’ ಎಂಬ ಗ್ರಂಥದಲ್ಲಿ (1815) ಕನ್ನಡಿಗರ ಜೀವನ ವಿಧಾನ, ನಂಬಿಕೆ, ಆಚರಣೆಗಳ ವಿವರವನ್ನು ಬಿಟ್ಟರೆ ನಮ್ಮ ಸಾಂಸ್ಕೃತಿಕ ಬದುಕಿನ ಸಂಗ್ರಹ, ದಾಖಲಾತಿ, ಅಧ್ಯಯನ ನಡೆದೇ ಇಲ್ಲ. ಮಂಗಳೂರಿಗೆ ಜರ್ಮನಿಯಿಂದ ಬಂದಿಳಿದ ವೈಗಲ್‌ ಮುಂದೆ ಧಾರವಾಡ, ಉದಕಮಂಡಲಗಳಲ್ಲಿದ್ದು ಮಿಷನರಿ ಚಟುವಟಿಕೆಗಳ ಜತೆಗೆ ಕನ್ನಡ, ಸಂಸ್ಕೃತ ಭಾಷಾ ಕೈಂಕರ್ಯವನ್ನು ಕೈಗೊಂಡ. ಆತ ಬರೆದ ‘ಕನ್ನಡ ಭಾಷೆ ಹಾಗೂ ಸಾಹಿತ್ಯವನ್ನು ಕುರಿತು’ ಲೇಖನವೇ ಕನ್ನಡದ ಮೊತ್ತ ಮೊದಲ ಸಾಹಿತ್ಯ ಚರಿತ್ರೆಯ ಅಧಿಕೃತ ದಾಖಲೆ (1846). ಕನ್ನಡ ಭಾಷೆ ಹಾಗೂ ಸಾಹಿತ್ಯವನ್ನು ಕುರಿತು ವಿಶ್ಲೇಷಿಸುವ ಸಂದರ್ಭದಲ್ಲಿ ನೆಲಸಿದ ನೆಲದ ಜಾನಪದ ಅವನ ಗಮನ ಸೆಳೆದಿತ್ತು. ಕನ್ನಡ ಜಾನಪದವನ್ನು ಕುರಿತ ತನ್ನ ನಿಲುಮೆಯನ್ನು ಹೀಗೆ ಪ್ರಕಟಪಡಿಸಿದ್ದಾನೆ.
‘ಲಿಖಿತ ಸಾಹಿತ್ಯಕ್ಕೆ ಭಿನ್ನವಾಗಿ ಕನ್ನಡದಲ್ಲಿ ಇನ್ನೊಂದು ಬಗೆಯ ಸಾಹಿತ್ಯವಿದೆ. ಅದು ವಾಸ್ತವವಾಗಿ ಹೆಚ್ಚು ಮಹತ್ವದ್ದೂ ಎಲ್ಲ ದೃಷ್ಟಿಯಿಂದ ಹೆಚ್ಚು ಸ್ವೋಪಜ್ಞವೂ ಆಗಿದೆ. ಮೌಖಿಕ ಜಾನಪದ (oral folklore) ಎಂದು ಕರೆಯಬಹುದಾದ ಈ ಬಗೆಯ ಸಾಹಿತ್ಯ ಹೆಚ್ಚು ಸಂಪನ್ನವೂ ತನ್ನ ಆಂತರಿಕ ಸೊಗಸಿನಿಂದ ಲಿಖಿತ ಸಾಹಿತ್ಯಕ್ಕೆ ಸರಿಮಿಗಿಲೂ ಆಗಿದೆ. ಆದರೆ ಈ ಬಗೆಯ ಸಾಹಿತ್ಯವನ್ನು ಸಂಗ್ರಹಿಸುವುದು ಹೆಚ್ಚು ಶ್ರಮಸಾಧ್ಯವಾದುದು. ಏಕೆಂದರೆ ಅದು ಕೌಟುಂಬಿಕ ವಾತಾವರಣದಲ್ಲಿ ಹುಟ್ಟಿ ವ್ಯಕ್ತಿಗತ ನೆಲೆಯಲ್ಲಿ ಪುನರ್‌ ಸೃಷ್ಟಿಗೊಳ್ಳುತ್ತಾ ಹೋಗುತ್ತದೆ. ಈ ಬಗೆಯ ಹೆಚ್ಚಿನ ರಚನೆಗಳು ಭಾರತೀಯ ಪುರಾಣ, ಕಾವ್ಯಗಳ ಹಿನ್ನೆಲೆಯಲ್ಲಿ ರಚಿತವಾದಂತಿವೆ.
ಇನ್ನು ಕೆಲವುಗಳ ಆಕರಗಳನ್ನು ಹೇಳಲಾಗುತ್ತಿಲ್ಲ. ಈ ಹಾಡುಗಳನ್ನು/ ಕತೆಗಳನ್ನು ಹೇಳುವವರು ಬಹುತೇಕ ಮಹಿಳೆಯರು. ಹೀಗಾಗಿ ಗಂಡಸರು ಇವುಗಳ ಬಗೆಗೆ ಸದಭಿಪ್ರಾಯವನ್ನು ತೋರ್ಪಡಿಸದೆ ಒಂದು ಬಗೆಯ ತಾತ್ಸಾರವನ್ನು ತಾಳಿದಂತಿದೆ. ಇಲ್ಲಿನ ದೊಡ್ಡ ಸಂಖ್ಯೆಯ ಕಿನ್ನರ ಕತೆಗಳು ಜಗತ್ತಿನ ಯಾವುದೇ ಭಾಷೆಯ ಜನಪದ ಕತೆಗಳ ಹೆಗಲೆತ್ತರಕ್ಕೆ ನಿಲ್ಲಬಲ್ಲವು ಎನ್ನುವುದರಲ್ಲಿ ಸಂದೇಹವಿಲ್ಲ. ಈ ಬಗೆಯ ಕತೆಗಳನ್ನು ಇಲ್ಲಿನವರು ‘ಅಜ್ಜಿಕತೆ’ ಎಂದು ಕರೆಯುತ್ತಾರೆ’ (on the canarese language and literature, 1848,  257–284 ZDMG).
ಇಲ್ಲಿ ಆತ ಕನ್ನಡ ಜಾನಪದವನ್ನು ಕುರಿತಂತೆ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಗಮನಾರ್ಹವಾದವು. ಬಹುಶಃ ಮಂಗಳೂರು, ಧಾರವಾಡ ಪ್ರದೇಶಗಳಲ್ಲಿ ನೆಲಸಿದ್ದಾಗ ಆತ ಕಿವಿಯಲ್ಲಿ ಕೇಳಿಸಿಕೊಂಡ, ಕಣ್ಣಲ್ಲಿ ತುಂಬಿಕೊಂಡ ಮೌಖಿಕ ಜಾನಪದ (ಅವನದೇ ಪದ)ವನ್ನು ಕುರಿತಂತೆ ‘ಈ ಬಗೆಯ ಸಾಹಿತ್ಯ ಹೆಚ್ಚು ಸಂಪನ್ನವೂ ಆಂತರಿಕ ಸೊಗಸಿನಿಂದ ಕೂಡಿದ್ದು ಲಿಖಿತ ಸಾಹಿತ್ಯಕ್ಕೆ ಸರಿ ಮಿಗಿಲಾಗಿದೆ’ ಎಂದಿರುವುದು ಹೊಸ ಕಾಲದ ಆಲೋಚನೆಯೇ ಆಗಿದೆ. ಜಾನಪದದ ಹುಟ್ಟು ಹಾಗೂ ಪ್ರಸರಣವನ್ನು ಕುರಿತು ಅವನಾಡಿದ ‘ಪುನರ್‌ಸೃಷ್ಟಿ’ ಎನ್ನುವ ಮಾತು ಅತ್ಯಂತ ಮಹತ್ವದ್ದು.
ಕನ್ನಡ ಜಾನಪದ ಏಕೆ ತಾತ್ಸಾರಕ್ಕೊಳಗಾಗಿದೆ ಎನ್ನುವುದಕ್ಕೆ ‘ಅದು ಮಹಿಳೆಯರಿಂದ ಕಟ್ಟಲ್ಪಟ್ಟುದು’ ಎನ್ನುವಲ್ಲಿ ಪುರುಷ ಧೋರಣೆಯನ್ನು ಬಯಲು ಮಾಡಿದೆ. ‘ಕನ್ನಡ ಜನಪದ ಕತೆಗಳು ಜಗತ್ತಿನ ಯಾವುದೇ ಭಾಷೆಯ ಕತೆಗಳ ಹೆಗಲೆತ್ತರಕ್ಕೆ ನಿಲ್ಲಬಲ್ಲುದು’ ಎನ್ನುವ ಮಾತು ಉದಾರ ಪ್ರಶಂಸೆ ಎಂದು ತಿಳಿಯಬೇಕಾಗಿಲ್ಲ. ಸಾಮಾನ್ಯವಾಗಿ ನಮ್ಮ ಜಾನಪದ ಅಧ್ಯಯನದ ಇತ್ತೀಚಿನ ದಿನಗಳಲ್ಲಿ– ನಾವು ನಮ್ಮ ಸಾಂಸ್ಕೃತಿಕ ಪ್ರಕಾರ (ಎತ್ಗಿಕ್ ಜಾನ್ರಾ)ಗಳಾದ ಲಾವಣಿ, ಕತೆ, ಅಜ್ಜಿಕತೆ, ಹಾಡು, ಪದ, ಅಜ್ಜಿಮದ್ದು, ಗಾದೆ, ಒಗಟು, ಒಡಪು, ಎದುರುಕತೆ ಮುಂತಾದವುಗಳಿಗೆ ಪ್ರತಿಯಾಗಿ ಕಥನಕವನ, ಜನಪದ ಕಥೆ, ಜನಪದ ಮಹಾಕಾವ್ಯ, ಜನಪದ ಕಾವ್ಯ ಖಂಡ, ಜನಪದ ವೈದ್ಯ ಮುಂತಾದ ವಿಶ್ಲೇಷಣಾತ್ಮಕ ಪ್ರಕಾರ (ಎನಲೆಟಿಕಲ್‌ ಜಾನ್ರಾ)ಗಳ ಮೂಲಕ ಗುರುತಿಸುವ, ಬಳಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಆದರೆ ನೂರ ಎಪ್ಪತ್ತು ವರ್ಷಗಳ ಹಿಂದೆಯೇ ವೈಗಲ್‌ ಆ ಕಾಲದಲ್ಲಿ ಜನಬಳಕೆಯಲ್ಲಿದ್ದ ‘ಅಜ್ಜಿಕತೆ’ ಪದವನ್ನೇ ಬಳಸಿರುವುದು ಅವನಿಗಿದ್ದ ದೇಸೀ ಕಣ್ಣಿನ ಫಲವಿರಬೇಕು.
ನಮ್ಮ ಜ್ಞಾನ ಪರಂಪರೆ ವಿಶ್ವಾತ್ಮಕ ನೆಲೆಯನ್ನು ತಲಪಿರುವ ಹಿನ್ನೆಲೆಯಲ್ಲಿ ಇಂಗ್ಲಿಷ್‌ ಜ್ಞಾನ ಪರಂಪರೆ ಮಾತ್ರ ಪ್ರಮಾಣಭೂತ ಆದುದೆಂದು ಪರಿಭಾವಿಸುವ, ಆ ಮೂಲಕವೇ ಕನ್ನಡವನ್ನು ಕಟ್ಟುವ ನಮ್ಮ ಮನೋಧರ್ಮ ಎಷ್ಟರಮಟ್ಟಿಗೆ ಸರಿ? ಈ ಹಿನ್ನೆಲೆಯಲ್ಲಿ ಕರ್ನಾಟಕ ಜಾನಪದ ದಿನಾಚರಣೆಯ ದಿನ ಬದಲಾಗಬೇಕಾಗಿದೆ.
ಕನ್ನಡ ಸಾಹಿತ್ಯವನ್ನು ಕುರಿತಂತೆ ವೈಗಲ್‌ನ ಲೇಖನವೇ (ಬರೆದದ್ದು 1846, ಅಚ್ಚಾದದ್ದು 1848) ಕನ್ನಡ ಜಾನಪದದ ಪ್ರಾಚೀನ ತೇದಿಯುಳ್ಳ ಪ್ರಸ್ತಾಪ ಎನ್ನಬಹುದು.

ಕಾಮೆಂಟ್‌ಗಳಿಲ್ಲ: