ಬುಧವಾರ, ಮೇ 6, 2015

ಗ್ರಾಮೀಣ ಅಂಗಡಿಯಲ್ಲಿ ದೇಸಿ ಹಬ್ಬ-ಹೆಚ್.ಅನಿತಾ

ಕೃಪೆ: ಪ್ರಜಾವಾಣಿ


ಗ್ರಾಮೀಣ ಸೊಗಡಿನೊಂದಿಗೆ ತಳುಕು ಹಾಕಿಕೊಂಡಿರುವ ಹಬ್ಬಗಳಲ್ಲಿ ಮಕರ ಸಂಕ್ರಾಂತಿಯೂ ಒಂದು. ಅಂದು ಗ್ರಾಮೀಣ ಪ್ರದೇಶದವರು, ಅದರಲ್ಲೂ ರೈತರು ತಾವು ಬೆಳೆದ ಬೆಳೆಯನ್ನು ಮನೆ ತುಂಬಿಸಿಕೊಂಡು ಪೂಜೆ ಸಲ್ಲಿಸುತ್ತಾರೆ. ಹೋರಿಗಳಿಗೆ ವಿಶೇಷ ಅಲಂಕಾರ ಮಾಡಿ ಬೆಂಕಿ ಹಾಯಿಸಿ ಸಂಭ್ರಮಿಸುತ್ತಾರೆ. ಹೆಣ್ಣುಮಕ್ಕಳು ಅಪ್ಪಟ ದೇಸಿ ಉಡುಗೆ ತೊಟ್ಟು ಎಳ್ಳು–ಬೆಲ್ಲ ಬೀರುವ ಮೂಲಕ ಬಾಂಧವ್ಯ ಗಟ್ಟಿಗೊಳ್ಳಲು ಮುನ್ನುಡಿ ಹಾಡುತ್ತಾರೆ.
ನಗರ ಪ್ರದೇಶಗಳಲ್ಲಿನ ಹೆಣ್ಣುಮಕ್ಕಳು ಅಪ್ಪಟ ದೇಸಿ ಉಡುಗೆ ತೊಟ್ಟು ಹಬ್ಬ ಆಚರಿಸಲು ಅನುವು ಮಾಡಿಕೊಡಲು ಜಯನಗರದಲ್ಲಿರುವ ‘ಗ್ರಾಮೀಣ ಅಂಗಡಿ’ಯು ‘ಬಾ ತಂಗಿ ಎಳ್ಳು ಬೆಲ್ಲ ಬೀರೋಣ, ಜರತಾರಿ ಸೀರೆ ಜರತಾರಿ ಕುಪ್ಪಸ ತೊಟ್ಟು ಬಾ’ ಎಂಬ ಘೋಷವಾಕ್ಯದೊಂದಿಗೆ ಕೈಮಗ್ಗ ಮತ್ತು ಖಾದಿ ಗ್ರಾಮೋದ್ಯೋಗ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಿದೆ.
ಗದಗ, ಬೆಟಗೇರಿ, ಕೊಪ್ಪಳ, ಭಾಗ್ಯನಗರದ ಕೈಮಗ್ಗದ ಅಪ್ಪಟ ಹತ್ತಿ ಸೀರೆಗಳು, ಸಾವಯವ ಬಣ್ಣಗಳಿಂದ ತಯಾರಿಸಲಾಗಿರುವ ಸೀರೆಗಳು, ಇಂದಿರಾಗಾಂಧಿ ಸೀರೆ, ಕೊಪ್ಪಳದ ಹತ್ತಿ ಮತ್ತು ರೇಷ್ಮೆ ಮಿಶ್ರಿತ ಸೀರೆಗಳು, ಮಂಗಳಗಿರಿ ಹತ್ತಿ ಸೀರೆಗಳು, ಹತ್ತಿ ಮತ್ತು ರೇಷ್ಮೆ ಮಿಶ್ರಿತ ಕಸೂತಿ ಕಲೆಯಿಂದ ಕಂಗೊಳಿಸುವ ಸೀರೆಗಳು, ಜೂಟ್‌ ಸೀರೆಗಳು, ಇಳಕಲ್‌ ಸೀರೆಗಳು, ಬಾಳೆಯ ನಾರನ್ನು ಬಳಸಿ ಸೀರೆಯ ದಿಂಡು ರಚಿಸಲಾಗಿರುವ ಮಟ್ಕ ಹತ್ತಿ ಸೀರೆಗಳು, ಉಡುಪಿ ಕೈಮಗ್ಗ ಸೊಸೈಟಿಯ ಸೀರೆಗಳು, ಖಾದಿ ವೇಯ್ಸ್ಟ್ ಕೋಟ್‌, ಕಾಟನ್‌ ಸ್ಕರ್ಟ್‌, ಖಾದಿ ಕುರ್ತಾಗಳು, ಷರ್ಟ್‌ಗಳು, ಪೈಜಾಮಗಳು, ಟವೆಲ್‌ಗಳು, ರವಿಕೆ ಪೀಸುಗಳು, ಬೆಡ್‌ಶೀಟ್‌ಗಳು , ಮಕ್ಕಳ ರೇಷ್ಮೆಯ ಉಡುಪುಗಳು, ಯುವತಿಯರ ಸಿದ್ಧ ಉಡುಪುಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿವೆ.
‘ಗ್ರಾಮೀಣ ಕರಕುಶಲಕರ್ಮಿಗಳ ಬದುಕಿಗೆ ಆಸರೆಯಾಗಿ, ಸ್ಥಳೀಯ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು, ಪಾರಂಪರಿಕವಾದ ದೇಸಿ ವಸ್ತುಗಳನ್ನು ತಯಾರಿಸಲು ಹಾಗೂ ಅವುಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ಕರಕುಶಲಕರ್ಮಿಗಳೇ ಕಟ್ಟಿಕೊಂಡಿರುವ ಸಂಸ್ಥೆ ‘ಗ್ರಾಮೀಣ ಅಂಗಡಿ’. ಈ ಮೂಲಕ ಕರಕುಶಲಕರ್ಮಿಗಳು ತಯಾರಿಸಿದ ಜನತೆಯ ದೈನಂದಿನ ಉಪಯುಕ್ತ ಉತ್ಪನ್ನಗಳನ್ನು ದಲ್ಲಾಳಿಗಳ ಮಧ್ಯಸ್ಥಿಕೆ ಇಲ್ಲದೆ ನೈಜ ಬೆಲೆಗೆ ನೇರವಾಗಿ ಒದಗಿಸುವ ಕೆಲಸವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಈ ಬಾರಿ ಸಂಕ್ರಾಂತಿ ಪ್ರಯುಕ್ತ ವಿಶೇಷ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಿದ್ದು, ಪ್ರತಿ ಉತ್ಪನ್ನದ ಮೇಲೆ ಶೇಕಡಾ 10ರಿಂದ 30 ರಿಯಾಯಿತಿ ಇರಲಿದೆ’ ಎನ್ನುತ್ತಾರೆ ‘ಗ್ರಾಮೀಣ ಅಂಗಡಿ’ಯ ಬಿ.ರಾಜಶೇಖರಮೂರ್ತಿ.
‘‘ಕಳೆದ ವರ್ಷ ‘ಕರ್ನಾಟಕ ಕರಕುಶಲ ಕಲೆ ಉಳಿಸಿ–ಕರ್ನಾಟಕ ಸೀರೆಗಳನ್ನು ಖರೀದಿಸಿ’ ಎಂಬ ಘೋಷವಾಕ್ಯದೊಂದಿಗೆ ಗ್ರಾಮೀಣ ಸೀರೆಯುಟ್ಟು ಎಳ್ಳು ಬೆಲ್ಲ ಬೀರೋಣ ಬನ್ನಿ ಎಂದು ಜನತೆಗೆ ಕರೆ ನೀಡಿದ್ದೆವು. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಂಸ್ಥೆಗೆ ಭೇಟಿ ನೀಡಿದ ಪ್ರತಿ ಗ್ರಾಹಕರಿಗೂ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಸ್ನೇಹ–ಬಾಂಧವ್ಯಕ್ಕೆ ಪ್ರತೀಕವಾಗಿ ಉಚಿತವಾಗಿ ಎಳ್ಳು ಬೆಲ್ಲ ವಿತರಿಸಿದ್ದೆವು. ಅಂತೆಯೇ ಈ ಬಾರಿಯೂ ಜನವರಿ 15ರವರೆಗೆ ನಡೆಯಲಿರುವ ಮಾರಾಟ ಮೇಳದಲ್ಲಿ ಉತ್ಪನ್ನಗಳನ್ನು ಖರೀದಿಸುವವರಿಗೆ ಎಳ್ಳು–ಬೆಲ್ಲ ವಿತರಿಸಲು ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗ್ರಾಮೀಣ ಉತ್ಪನ್ನಗಳನ್ನು ಖರೀದಿಸುವ ಮೂಲಕ ಗ್ರಾಮೀಣ ಕರಕುಶಲ ಕರ್ಮಿಗಳಿಗೆ ಉತ್ತೇಜನ ನೀಡಬೇಕು’’ ಎಂಬ ಗ್ರಾಹಕರನ್ನು ಕರೆಯುತ್ತಾರೆ ಅವರು.
ಕೈಮಗ್ಗ ಮತ್ತು ಖಾದಿ ಗ್ರಾಮೋದ್ಯೋಗ ವಸ್ತುಗಳ ಜೊತೆಗೆ ಕರಕುಶಲ ವಸ್ತುಗಳು, ಆಯುರ್ವೇದ ವಸ್ತುಗಳು, ಮಲೆನಾಡಿನ ಉಪ್ಪಿನಕಾಯಿಗಳು, ಮನೆಯಲ್ಲಿಯೇ ತಯಾರಿಸಿದ ಹಪ್ಪಳಗಳು ಇನ್ನಿತರ ಆರೋಗ್ಯಕರ ಆಹಾರಪದಾರ್ಥಗಳು ಪ್ರದರ್ಶನದಲ್ಲಿ ಸಿಗಲಿವೆ. ಹೆಚ್ಚಿನ ಮಾಹಿತಿಗೆ: ದೂರವಾಣಿ: 080–22441835, ಮೊಬೈಲ್‌: 9731105526.
 

ಕಾಮೆಂಟ್‌ಗಳಿಲ್ಲ: