ಮಂಗಳೂರು ಮಹಾನಗರ ಸ್ವಚ್ಛತೆಯಲ್ಲಿ ರಾಜ್ಯದಲ್ಲಿಯೇ ದ್ವಿತೀಯ ಸ್ಥಾನ ಅಲಂಕರಿಸಿದೆ. ಆದರೆ, ಈ ನಗರವನ್ನು ಸ್ವಚ್ಛಪಡಿಸುವ, ಸುಂದರವಾಗಿ ನಳನಳಿಸುವಂತೆ ಮಾಡುವ ಕಸುರಿನ ಹಿಂದಿನ ಬಳಲಿದ ಕೊರಗರ ಬದುಕು ಮಾತ್ರ ರೋಗಗ್ರಸ್ಥವಾಗಿದೆ.
ಕರ್ನಾಟಕ ರಾಜ್ಯದ ನಗರ, ಪಟ್ಟಣ ಹಾಗು ಸ್ಥಳೀಯ ಸರಕಾರಿ ಸಂಸ್ಥೆಗಳಲ್ಲಿ ಒಟ್ಟು ನಾಲ್ಕು ಲಕ್ಷಕ್ಕೂ ಹೆಚ್ಚು ಪೌರ ಕಾರ್ಮಿಕರು ಖಾಯಂ ಹಾಗೂ ಗುತ್ತಿಗೆ ಆಧಾರದಲ್ಲಿ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಿನಾ ಬೆಳಗಾದರೆ ಇವರ ಕಸುಬು ರಸ್ತೆ ಗುಡಿಸುವುದು, ತೊಟ್ಟಿಯಿಂದ ಕಸ ವಿಲೇವಾರಿ ಮಾಡುವುದು, ಕಸವನ್ನು ವಾಹನಕ್ಕೆ ಹೇರುವುದು, ಚರಂಡಿಗಿಳಿದು ಸ್ವಚ್ಛ ಮಾಡುವುದು, ಸಾರ್ವಜನಿಕ ಶೌಚಾಲಯ ಸ್ವಚ್ಛಗೊಳಿಸುವುದು, ಸತ್ತ ನಾಯಿ - ದನ ಮುಂತಾದ ಪ್ರಾಣಿಗಳ ಕಳೇಬರವನ್ನು ಎತ್ತುವುದು, ಮ್ಯಾನ್ಹೋಲ್ಗಳ ಒಳಗಿಳಿದು ಈಜಾಡಿ ಸ್ವಚ್ಚಗೊಳಿಸುವುದು, ಸೊಳ್ಳೆ ನಿವಾರಕ ರಾಸಾಯನಿಕ ಔಷದಿ ಸಿಂಪಡಿಸುವುದು... ಇತ್ಯಾದಿ.
ಪೌರಕಾರ್ಮಿಕರಲ್ಲಿ ಶೇಕಡ 98ರಷ್ಟು ಜನ ಸಂವಿಧಾನದ 341ನೇ ವಿಧಿಯಡಿ ನಮೂದಿಸಲ್ಪಟ್ಟ ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿದವರು. ದ.ಕ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಕೆಲಸ ನಿರ್ವಹಿಸುವ ಶೇಕಡ 78ರಷ್ಟು ಜನ ಆದಿವಾಸಿ ಕೊರಗ ಬುಡಕಟ್ಟು ಪಂಗಡಕ್ಕೆ ಸೇರಿದವರು.
ಈ ಆಧುನಿಕ ಯುಗದಲ್ಲಿಯೂ ಕೊಚ್ಛೆ ಗುಂಡಿಯನ್ನು ಮನುಷ್ಯರೇ ಇಳಿದು ಸ್ವಚ್ಛ ಮಾಡುತ್ತಾರೆ. ಹೀಗೆ ಶೌಚಗುಂಡಿಗಿಳಿದು ಸ್ವಚ್ಛ ಮಾಡುವಾಗ ಅದರೊಳಗಿನ ವಿಷಾನಿಲ ಸೇವಿಸಿ ಸಾಯುವುದು ಕೂಡ ಅಪರೂಪವೇನಲ್ಲ! 2011ರ ನವಂಬರ್ 8ರಂದು ಕಿನ್ನಿಗೋಳಿ ಎಂಬಲ್ಲಿ ಕಿಟ್ಟ ಕೊರಗ ಎಂಬ ಪೌರಕಾರ್ಮಿಕ ಶೌಚಗುಂಡಿಯೊಳಗೇ ಸಾವಿಗೀಡಾಗಿದ್ದ. ಇದು ಸುದ್ದಿಯಾದ ಸಾವು. ಇನ್ನು ಹೀಗೆ ಸಾವಿಗೀಡಾಗಿ ಸುದ್ದಿಯಾಗವರೆಷ್ಟೋ?!
ಕೊಳಚೆಯಲ್ಲಿಯೇ ತಮ್ಮ ಆಯುಷ್ಯವನ್ನು ಕಳೆಯುವ ಪೌರ ಕಾರ್ಮಿಕರು - ಕಣ್ಣಿನ ತೊಂದರೆಗಳು, ಚರ್ಮದ ವ್ಯಾಧಿಗಳು, ಶ್ವಾಸಕೋಶದ ಸೋಂಕು, ರಕ್ತ ಸಂಬಂಧಿ ಕಾಯಿಲೆಗಳು, ಕ್ಷಯ, ಮಲೇರಿಯಾ, ಕ್ಯಾಸ್ಸರ್ ಮುಂತಾದ ಗಂಭೀರ ರೋಗಗಳಿಂದ ಅಸುನೀಗುವುದು ಸಾಮಾನ್ಯ.
ಒಳಚರಂಡಿ ಸ್ವಚ್ಛ ಮಾಡುವಾಗ ಕಬ್ಬಿಣ ಸೀಸ ಮತ್ತಿತರ ರಾಸಾಯನಿಕ ಧಾತುಗಳು ದೇಹದೊಳಕ್ಕೆ ಚುಚ್ಚಿ, ಗಾಯ ನಂಜಾಗಿ ಗ್ಯಾಂಗ್ರೀನ್ ಬರುವ ಸಾಧ್ಯತೆಯೇ ಹೆಚ್ಚು. ಈ ನರಕಯಾತನೆಯಿಂದ ಮಾನಸಿಕ ನೆಮ್ಮದಿ ಪಡೆಯಲು ಅಮಲು ಪದಾರ್ಥದಂತಹ ದುಶ್ಚಟಕ್ಕೆ ಬಲಿ ಬಿದ್ದು ತಮ್ಮ ಜೀವನದ ಕರ್ಮಯಾತ್ರೆಯನ್ನು ಅರ್ಧಕ್ಕೆ ಮುಗಿಸಿ ಬಿಡುತ್ತಾರೆ. ಇವರಿಗೆ ಬದುಕುವ ಹಕ್ಕಾಗಲಿ, ಕಾರ್ಮಿಕರ ಹಕ್ಕಾಗಲೀ ಯಾವುದೂ ಇರುವುದಿಲ್ಲ.
ನಗರ ಸ್ವಚ್ಛತೆಗಾಗಿ ಇಷ್ಟೆಲ್ಲಾ ಕಷ್ಟಕೋಟಲೆಗಳನ್ನು ಅನುಭವಿಸಿದರೂ ಅವರ ಸೇವಾ ಸ್ಥಿತಿಗತಿಗಳು ಹೀನಾಯವಾಗಿಯೇ ಇದೆ. ಇವರ ಅಭಿವೃದ್ಧಿಗೆ ಸೂಕ್ತ ಯೋಜನೆಗಳನ್ನು ಜಾರಿಗೊಳಿಸಲು ಆಳುವ ಸರಕಾರಗಳು ಮುಂದಾಗಿಲ್ಲ. ಇವರಿಗೆ ಕೈಗವಸು, ಮುಖಗವಸು, ಬೂಟು, ಸಾಬೂನು ಮತ್ತಿತರ ನೈರ್ಮಲ್ಯಕ್ಕೆ ಬೇಕಾಗ ಸಾಮಾಗ್ರಿಗಳನ್ನು ಒದಗಿಸಲಾಗುತ್ತಿಲ್ಲ. ಹೀಗಾಗಿ ಕಾರ್ಮಿಕ ಕುಟುಂಬಗಳು ಸ್ವಚ್ಛತೆಯಿಲ್ಲದೆ ಬದುಕು ಸಾಗಿಸುತ್ತಾ ನರಕದ ಕೂಪದಲ್ಲಿ ದಿನದೂಡುತ್ತಿವೆ. ಸಾಮಾನ್ಯ ಭವಿಷ್ಯನಿಧಿ, ಇಎಸ್ಐ, ಆರೋಗ್ಯ ವಿಮೆ ಎಲ್ಲವೂ ಇವರಿಗೆ ಮರೀಚಿಕೆ. ಪೌರ ಕಾರ್ಮಿಕರ ಸಮಗ್ರ ಅಭಿವೃದ್ದಿಗಾಗಿ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದ್ದ 'ಐಪಿಡಿ ಸಾಲಪ್ಪ ವರದಿ' ದಶಕಗಳಿಂದಲೂ ಧೂಳುತ್ತಿನ್ನುತ್ತಿದೆ.
ತಮ್ಮ ಬದುಕು ಬವಣೆ ವೃತ್ತಿ ಜೊತೆಗೆ ಸರಕಾರದ ದಿವ್ಯ ನಿರ್ಲಕ್ಷ್ಯಕ್ಕೊಳಗಾಗ ಇವರಿಗೆ ಆರೋಗ್ಯಯುತ ಬದುಕು ಮತ್ತು ಮೂಲಭೂತ ಹಕ್ಕುಗಳಿಗಾಗಿ ಸಂಘಟನೆಗಳು ಹೋರಾಡಬೇಕಿದೆ. ನಗರ ಪಟ್ಟಣಗಳನ್ನು ಸ್ವಚ್ಛಗೊಳಿಸುವ ಕಾರ್ಮಿಕರ ಬದಕನ್ನು ಸ್ವಚ್ಛಗೊಳಿಸಬೇಕಿದೆ.
- ಹೃದಯ
- ಹೃದಯ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ