-ಅರುಣ್ ಜೋಳದಕೂಡ್ಲಿಗಿ
ಕನ್ನಡ ಸಾಂಸ್ಕೃತಿಕ ಲೋಕಕ್ಕೆ ‘ಇಂತಿ ನಮಸ್ಕಾರಗಳು’ ಎಂಬ ವಿಶಿಷ್ಟ ಕೃತಿಯೊಂದು ಪ್ರವೇಶಿಸಿದೆ. ಈ ಕೃತಿಯನ್ನು ಓದುತ್ತಾ ಹೋದಂತೆ, ಲಂಕೇಶ್ ಡಿ.ಆರ್ ಎಂಬ ಸುಡುಬೆಳಕಿನ ಕಾವು ತಾಕುತ್ತದೆ. ಚುರ್‌ಗುಟ್ಟಿಸಿ ಬೆಚ್ಚಗಾಗಿಸುತ್ತದೆ. ನಮ್ಮೊಳಗನ್ನು ಎಚ್ಚರಿಸುತ್ತದೆ. ಮನದಲ್ಲಿ ಓದುತ್ತಿದ್ದಂತೆ, ಎಲ್ಲರಿಗೂ ಕೇಳುವಂತೆ ಅಥವಾ ನಾವೇ ಕೇಳಿಸಿಕೊಂಡು ಸುಖಿಸುವ ಹಾಗೆ ದೊಡ್ಡಧ್ವನಿಯಲ್ಲಿ ಓದುವಂತೆ ಕೃತಿ ಕೆಣಕುತ್ತದೆ. ಆಗ ನಟರಾಜ್ ಹುಳಿಯಾರ್ ಏರಿಳಿವಿನ ಧ್ವನಿಯಲ್ಲಿ ವಿಶಿಷ್ಟ ಮ್ಯಾನರಿಸಮ್ ಬಳಸಿ ಓದುಗರ ಕೇಳುಗರಂತೆ ಭಾವಿಸಿ ಮಾತನಾಡುತ್ತಾರೆ. ಮುದ್ರಿತ ಕೃತಿಯೊಂದು ಆಡಿಯೋ ಬುಕ್‌ನ ಅನುಭವವನ್ನು ತಾಕಿಸುತ್ತದೆ.
ಕನ್ನಡ ಸಾಹಿತ್ಯ ಲೋಕದಲ್ಲಿ ಲಂಕೇಶ್ ಎನ್ನುವ ಹೆಸರೇ ರೋಮಾಂಚನಗೊಳಿಸುವಂತದ್ದು. ಕನ್ನಡದ ಮನಸ್ಸನ್ನು ತಿದ್ದಿದ, ಸಾಂಸ್ಕೃತಿಕ ಲೋಕದ ಗ್ರಹಿಕೆಗಳನ್ನು ಮೊನಚಾಗಿಸಿದ ಪಿ.ಲಂಕೇಶ್ ಸೂಜಿಗಲ್ಲಿನಂತ ವ್ಯಕ್ತಿತ್ವದವರು. ಅಂತೆಯೇ ಪ್ರಖರ ಬುದ್ದಿಮತ್ತೆಯ ಕಾರಣಕ್ಕೆ ಬೌದ್ಧಿಕ ವಲಯದಲ್ಲಿ ಡಿ.ಆರ್ ಎಂದರೆ ಭಯದ ಅಲೆಗಳನ್ನು ಎಬ್ಬಿಸಬಲ್ಲವರಾಗಿದ್ದವರು. ರಾಷ್ಟ್ರೀಯ ಅಂತರಾಷ್ಟ್ರೀಯ ಬೌದ್ಧಿಕ ವಲಯವನ್ನು ಪ್ರವೇಶಿಸಿದ್ದರು. ಈ ಇಬ್ಬರನ್ನು ಮುಖಾಮುಖಿ ಮಾಡುವ ಮೂಲಕ ಕಿಡಿಗಳನ್ನು ಹೊತ್ತಿಸಿ ಅದರ ಬೆಳಕಲ್ಲಿ ವಿಶ್ವಾತ್ಮಕ ಸಾಹಿತ್ಯ ಮತ್ತು ಸಾಂಸ್ಕೃತಿಯ ಎಳೆಗಳನ್ನು ಹುಡುಕಲೆತ್ನಿಸಿದ ಪ್ರಯತ್ನವೇ ‘ಇಂತಿ ನಮಸ್ಕಾರಗಳು’ ಕೃತಿ.
ಲಂಕೇಶ್ ಸೃಜನಶೀಲ ಬರಹಕ್ಕೆ ಹೊಸಬಗೆಯ ಜೀವಂತಿಕೆ ಕೊಟ್ಟರೆ, ಡಿ.ಆರ್ ಕನ್ನಡದ ಬೌದ್ಧಿಕ ಚಿಂತನೆಯನ್ನು ಬಹು ಎತ್ತರಕ್ಕೆ ಹೊಯ್ದವರು. ಈ ಇಬ್ಬರ ಒಳಹೊಕ್ಕವರಂತೆ ಹುಳಿಯಾರ್ ಸೃಜನಶೀಲತೆ ಮತ್ತು ಬೌದ್ಧಿಕತೆಯ ನಾಡಿ ಹಿಡಿಯಲು ಪ್ರಯತ್ನಿಸಿದಂತಿದೆ. ಈ ಇಬ್ಬರು ಗುರುಗಳ ಸಾಮಿಪ್ಯ ಮತ್ತು ಒಡನಾಟದ ಕಾರಣಕ್ಕೆ ನಮಗೆ ಕಾಣದ ಲಂಕೇಶ್ ಮತ್ತು ಡಿ.ಆರ್ ಹುಳಿಯಾರರಿಗೆ ಕಂಡಿದ್ದಾರೆ. ಹಾಗಾಗಿ ಈ ಇಬ್ಬರ ಸಾಹಿತ್ಯಿಕ, ಸಾಂಸ್ಕೃತಿಕ ಚಹರೆಗಳ ಜತೆ ದಿನಬದುಕಿನ ಪಯಣದ ಮಜಲುಗಳೂ ಸೇರಿ ಹೊಸದೊಂದು ನಿರೂಪಣೆ ಇಲ್ಲಿ ಸಾಧ್ಯವಾಗಿದೆ. ಇದನ್ನು ಹುಳಿಯಾರರೇ ಹೇಳುವಂತೆ ಆಧುನಿಕೋತ್ತರ ಸಾಂಸ್ಕೃತಿಕ ಕಾದಂಬರಿ ಎಂದರೂ ಆಗುತ್ತೆ.
ಕನ್ನಡದ ಸಂದರ್ಭಕ್ಕೆ ಇದೊಂದು ವಿಶಿಷ್ಟ ಕೃತಿ. ಲಂಕೇಶ್ ಡಿ,ಆರ್ ನಾಗರಾಜ್ ಬಗ್ಗೆ ಬರೆಯುತ್ತಾ ಇಡೀ ಕನ್ನಡ ಸಾಂಸ್ಕೃತಿಕ ಲೋಕದ ಚಹರೆಗಳನ್ನು ವಿಶಿಷ್ಟ ಒಳನೋಟಗಳ ಮೂಲಕ ಹುಳಿಯಾರ್ ಕಾಣಿಸುತ್ತಾರೆ. ವಿಶ್ವದ ಸಾಂಸ್ಕೃತಿಕ ಚಿಂತನೆಯ ಪ್ರಖರ ಎಳೆಗಳನ್ನು ಹಿಡಿದು ಈ ಇಬ್ಬರೂ ಲೇಖಕರ ತಿಳಿವನ್ನು ಒರೆಗಚ್ಚಿದ್ದಾರೆ. ಹಾಗಾಗಿ ಕನ್ನಡ ನೆಲದ ಈ ಇಬ್ಬರು ಲೇಖಕರು ಯಾವ ಯಾವ ನೆಲೆಗಳಿಂದ ಜ್ಞಾನವನ್ನು ಪಡೆದರು, ಬರಹವನ್ನು ಜೀವಂತಗೊಳಿಸಿಕೊಳ್ಳಲು ಎಲ್ಲೆಲ್ಲಿಂದ ಸ್ಪೂರ್ತಿಯನ್ನು ಪಡೆದರು ಎನ್ನುವುದನ್ನು ಗಮನಿಸಿದರೆ ಅಚ್ಚರಿಯಾಗುತ್ತದೆ.
ಲಂಕೇಶರ ವಿಮರ್ಶೆ ಬಗ್ಗೆ ಬರೆಯುತ್ತಾ ಹುಳಿಯಾರರು ಪಶ್ಚಿಮದ ಶ್ರೇಷ್ಠ ವಿಮರ್ಶಕನೆಂದು ಗುರುತಿಸುವ ಸ್ಯಾಮುಯಲ್ ಜಾನ್ಸ್‌ನ್ ಪ್ರಭಾವಗಳನ್ನು ಗುರುತಿಸುತ್ತಾರೆ. ಜಾನ್ಸ್‌ನ್ ಲೇಖಕರ ಜೀವನ ವಿವರಗಳನ್ನು ಅವರ ಕೃತಿಗಳ ಓದಿಗೆ ಬಳಸಿ ಪ್ರಖರ ನೈತಿಕತೆಯಲ್ಲಿ ವಿಮರ್ಶೆಯನ್ನು ರೂಪಿಸಿದಾತ. ಹುಳಿಯಾರರ ‘ಇಂತಿ ನಮಸ್ಕಾರಗಳು’ ಕಥಾನಕವನ್ನು ಓದುತ್ತಾ ಹೋದಂತೆ, ಜಾನ್ಸ್‌ನ್ ವಿಮರ್ಶಾ ಮಾದರಿಯ ನಿಯೋ ಕ್ರಿಟಿಸಿಜಮ್ ಎನ್ನುವಂತಿದೆ. ಹಾಗೆ ನೋಡಿದರೆ ಸ್ವತಃ ಹುಳಿಯಾರರು ಕೂಡ ಸ್ಯಾಮುಯಲ್ ಜಾನ್ಸ್‌ನ್ ಪ್ರಭಾವದಿಂದ ಪೂರ್ಣ ಪ್ರಮಾಣದಲ್ಲಿ ಬಿಡಿಸಿಕೊಂಡಂತೆ ಕಾಣುವುದಿಲ್ಲ.
ಕೆಲವೆಡೆ ಲಂಕೇಶ್ ಮತ್ತು ಡಿ.ಆರ್ ಬಗೆಗಿನ ಮಾತುಗಳು ಬಲೂನಿನಂತೆ ಹುಬ್ಬುತ್ತಿವೆ ಎನ್ನುವುದು ಅನುಭವಕ್ಕೆ ತಾಕಿದ ಕ್ಷಣವೇ ಮುಂದಿನ ಸಾಲಲ್ಲಿ ಈ ಬಲೂನುಗಳಿಗೆ ಸೂಜಿ ಚುಚ್ಚಿ ಒಡೆಯುವ ಕೆಲಸವನ್ನು ಹುಳಿಯಾರ್ ಮಾಡಿದ್ದಾರೆ. ಹಾಗಾಗಿ ಅಲ್ಲಲ್ಲಿ ಉಳಿದು ಹಾರಬಹುದಾಗಿದ್ದ ಬಣ್ಣ ಬಣ್ಣದ ಬಲೂನುಗಳು ಹೊಡೆದು ಜೋತುಬಿದ್ದು ವಿಷಾದದ ಮುಖವೊತ್ತು ಓದುಗರನ್ನು ಎದುರಾಗುತ್ತವೆ. ಹೀಗೆ ಬಲೂನು ಉಬ್ಬಿಸಿ ಸೂಜಿಚುಚ್ಚಿ ಮಜನೋಡುವ ಈ ಗುಣ ಒಟ್ಟಾರೆ ಹುಳಿಯಾರರ ಮಾತು ಮತ್ತು ಬರಹದ ಲಕ್ಷಣವೂ ಹೌದು.
ಈ ಕೃತಿಯ ಶೀರ್ಷಿಕೆಯಲ್ಲಿ ಮೇಲು ನೋಟಕ್ಕೆ ಲಂಕೇಶ್ ಮತ್ತು ಡಿ.ಆರ್ ಕುರಿತ ಸೃಜನಶೀಲ ಕಥಾನಕ ಎಂದಿದೆ. ಈ ಕೃತಿಯನ್ನು ಓದಿ ಮುಗಿಸಿದಾಗ ಈ ಇಬ್ಬರನ್ನು ಹೊರತುಪಡಿಸಿದಂತೆ ಕನ್ನಡ ವಿಮರ್ಶೆಯ ಮತ್ತೊಬ್ಬರ ವ್ಯಕ್ತಿತ್ವ ಮತ್ತು ಚಿಂತನೆಯ ಎಳೆಗಳು ವಿಶಿಷ್ಟವಾಗಿ ಅನಾವರಣಗೊಳ್ಳುತ್ತದೆ. ಅವರು ಲಂಕೇಶ್ ಡಿ.ಆರ್ ಕನ್ನಡಕ್ಕೆ ದಕ್ಕಿದ, ಮತ್ತು ಕನ್ನಡದ ಕಸುವನ್ನು ಹೆಚ್ಚಿಸಿದ್ದನ್ನು ತೀಕ್ಷ್ಣವಾಗಿ ಕಟ್ಟಿಕೊಡುತ್ತಾರೆ. ಈ ಇಬ್ಬರ ಮನುಷ್ಯಸಹಜ ಕೀಳಿರಿಮೆಯನ್ನು, ಅಸೂಹೆಯನ್ನು, ಪ್ರೀತಿ ಜೀವನೋತ್ಸಾಹವನ್ನು, ತಹತಹವನ್ನು ವಿವರಿಸುತ್ತಲೇ ಅವರನ್ನು ಬೆಸೆಯುವ ಬೇರ್ಪಡುವ ಸಂಗತಿಗಳನ್ನು ಸಮತೋಲನದಲ್ಲಿ ತೋರಿಸುತ್ತಾರೆ. ಈ ಇಬ್ಬರ ಒಡನಾಟದಲ್ಲಿಯೇ ತನ್ನ ತಿಳಿವನ್ನು ಸದಾ ಮೊನಚುಗೊಳಿಸಿಕೊಳ್ಳುತ್ತಲೇ, ಇವರನ್ನು ಅರಿಯಲು ಅಪಾರ ಓದಿಗೆ ತೆರೆದುಕೊಳ್ಳುತ್ತಾರೆ. ಈ ಅರಿವಿನ ಪಯಣದಲ್ಲಿ ತಾವೂಬ್ಬ ಕನ್ನಡದ ಸೂಕ್ಷ್ಮಜ್ಞ, ನಿಷ್ಠುರ ವಿಮರ್ಶಕರಾಗಿ ರೂಪುಗೊಳ್ಳುತ್ತಾರೆ. ಅವರು ಮತ್ಯಾರು ಅಲ್ಲ ಈ ಕೃತಿಯ ಲೇಖಕರು.
ಲಂಕೇಶ್ ಮತ್ತು ಡಿ.ಆರ್ ಮೂಲಕ ಪರೀಕ್ಷಿಸುವ ಕನ್ನಡದ ಸಾಂಸ್ಕೃತಿಕ ಸಾಹಿತ್ಯಿಕ ಲೋಕವು ಹುಳಿಯಾರರ ಆಯ್ಕೆಯ ಓದಿನ ಮಿತಿಯಲ್ಲಿದೆ. ಕನ್ನಡದ ಓದಿಗಿಂತ ಕನ್ನಡೇತರ ಓದಿನ ವ್ಯಾಪ್ತಿ ಹೆಚ್ಚಿರುವಂತೆ ಕಾಣುವುದರಿಂದ, ಕನ್ನಡ ಸಾಹಿತ್ಯದ ಓದಿನ ಚೌಕಟ್ಟಿನಲ್ಲಿ ವಿವರಿಸುವ ಭಾಗಗಳಿಗಿಂತ, ವಿಶ್ವ ಸಾಹಿತ್ಯದ ನೆಲೆಯಲ್ಲಿ ವಿಶ್ಲೇಷಿಸುವ ಭಾಗಗಳು ಹೆಚ್ಚು ಆಳವಾಗಿವೆ ಅನ್ನಿಸುತ್ತದೆ. ಹಾಗಾಗಿ ಹುಳಿಯಾರರ ಕನ್ನಡ ಸಂದರ್ಭದ ವಿಶ್ಲೇಷಣೆಯ ಮಿತಿಯಲ್ಲೆ ಲಂಕೇಶ್ ಮತ್ತು ಡಿ.ಆರ್ ಅವರನ್ನು ಪರಿಭಾವಿಸುವ ಅಗತ್ಯವಿಲ್ಲ. ಅದರಾಚೆಯೂ ಹೊರಚಾಚಲು ಸಾಧ್ಯವಿದೆ. ಅಚ್ಚರಿಯೆಂದರೆ ಇಂತಹ ಹೊರಚಾಚುವಿಕೆಯ ದಾರಿಗಳನ್ನೂ ಹುಳಿಯಾರರೆ ಸೂಕ್ಷ್ಮವಾಗಿ ಕಾಣಿಸುತ್ತಾರೆ. ಶಂಬಾ ಅವರ ಸಾಂಸ್ಕೃತಿಕ ಅಧ್ಯಯನದ ಕಣ್ಣೋಟದಿಂದ ವಿಶ್ಲೇಷಿಸಲು ತೊಡಗಿದರೆ ಡಿ.ಆರ್ ಅವರ ಅಧ್ಯಯನಗಳಿಗೆ ಮತ್ತೊಂದು ನೆಲೆ ಒದಗುತ್ತದೆ.
ಈ ಕೃತಿಯಿಂದಾಗಿ ಕಟುವಿಮರ್ಶೆ ವಾಗ್ವಾದಗಳಿಲ್ಲದೆ, ಕುಟುಕು ವ್ಯಂಗದ ಮೊನಚಿಲ್ಲದೆ, ಪ್ರಖರ ವೈಚಾರಿಕ ಒಳನೋಟಗಳಿಲ್ಲದೆ ಜಡಗೊಂಡಿರುವ ಕನ್ನಡ ವಿಮರ್ಶೆಯ ಸಧ್ಯದ ಸ್ಥಿತಿ ಅರಿವಿಗೆ ಬರುತ್ತದೆ. ಭಿನ್ನಾಭಿಪ್ರಾಯಗಳನ್ನು ಸಹಜವಾಗಿ ಸ್ವೀಕರಿಸುವ ಮನಸ್ಥಿತಿಯಿರದ ಬಹುಪಾಲು ಸಾಹಿತಿಗಳಿರುವ ಪ್ರಸ್ತುತ ಕಾಲಘಟ್ಟದಲ್ಲಿ ಈ ಕೃತಿ ಲೇಖಕರಲ್ಲಿ ಆತ್ಮವಿಮರ್ಶೆಯನ್ನು ಹುಟ್ಟಿಸಬೇಕಾಗಿದೆ. ಹೊಗಳಿಕೆಯಲ್ಲಿಯೆ ಸುಖಿಸುವ ಭಟ್ಟಂಗಿಗಳನ್ನು ಸಲಹಿಕೊಂಡಿರುವ ಸಧ್ಯದ ಬಹುಪಾಲು ಸಾಹಿತಿಗಳ ವಲಯವು ತಮ್ಮ ನಡೆಯನ್ನು ಪರೀಕ್ಷಿಸಿಕೊಳ್ಳಲು ಈ ಕೃತಿ ಒತ್ತಾಯಿಸುತ್ತದೆ.
ಚೂರುಪಾರು ಬರೆದು, ಮಹಾನ್ ಸಾಧನೆಗೈದೆವೆಂದು ತಮ್ಮ ಬಗೆಗಿನ ವಿಮರ್ಶೆಗಳನ್ನು ಬರೆಯಿಸಿಕೊಳ್ಳುವ, ಸೆಮಿನಾರುಗಳನ್ನು ಆಯೋಜಿಸಿಕೊಳ್ಳುವ ಮತ್ತು ಅಹಮ್ಮಿನಿಂದ ಪೇಸ್‌ಬುಕ್ಕಿನ ಲೈಕು ಕಾಮೆಂಟುಗಳಲ್ಲಿ ಹೀರೋಯಿಸಮ್ ಅನುಭವಿಸುವ ಕೆಲವು ಯುವ ಬರಹಗಾರ/ರ್ತಿಯರಂತೂ ಖಡ್ಡಾಯವಾಗಿ ಈ ಕೃತಿಯನ್ನು ಓದಬೇಕು. ಈ ಅರ್ಥದಲ್ಲಿ ‘ಇಂತಿ ನಮಸ್ಕಾರಗಳು’ ಕೃತಿ ರೂಪದಲ್ಲಿ ನಟರಾಜ್ ಹುಳಿಯಾರ್ ಈ ಕಾಲದ ಸಾಹಿತ್ಯ ವಲಯಕ್ಕೆ ಹರಡಿಕೊಂಡಿರುವ ಸಾಂಕ್ರಾಮಿಕ ರೋಗಕ್ಕೆ ಮುಲಾಮು ಹುಡುಕಿದಂತೆ ಬಾಸವಾಗುತ್ತಿದೆ.
ಇಂತಿ ನಮಸ್ಕಾರಗಳು
ಪಿ.ಲಂಕೇಶ್ ಹಾಗೂ ಡಿ.ಆರ್.ನಾಗರಾಜ್
ಕುರಿತ ಸೃಜನಶೀಲ ಕಥಾನಕ
ನಟರಾಜ ಹುಳಿಯಾರ್
ಪು:೨೩೬, ೧೮೦/-,೨೦೧೪
ಪಲ್ಲವ ಪ್ರಕಾಶನ, ಚನ್ನಪಟ್ಟಣ.
ಸಂಪರ್ಕ: ೯೪೮೦೩೫೩೫೦೭
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ