ಸೋಮವಾರ, ಜುಲೈ 14, 2014

ಜಾನಪದದಲ್ಲೇ ಉಗಮಿಸಿರುವ ಫೆಮಿನಿಸಂ!


-ಸಂಯುಕ್ತ ಪುಲಿಗಲ್
ಸೌಜನ್ಯ: ಅವಧಿ
ಪುಸ್ತಕದ ಅಂಗಡಿಗೆ ನುಗ್ಗಿ ಇರುವ ಪುಸ್ತಕಗಳನ್ನು ನೋಡುತ್ತಾ, ಬರುವ ಪುಸ್ತಕಗಳಿಗೆ ಕಾಯುತ್ತಾ ಇರುವುದು ಒಂಥರಾ ಮಜವಾದ ಹಾಬೀ! ಹೀಗೆ ಒಮ್ಮೆ ಗಾಂಧೀ ಬಜಾರಿನ ಪುಸ್ತಕ ಮಳಿಗೆಯೊಂದರಲ್ಲಿ ನುಗ್ಗಿದ ನನಗೆ ಅಚಾನಕ್ ಆಗಿ ಕಂಡದ್ದು, ಜೀನಹಳ್ಳಿ ಸಿದ್ಧಲಿಂಗಪ್ಪನವರು ಬರೆದ “ಸ್ತ್ರೀವಾದಿ ಜನಪದ ಕಥೆಗಳು” ಎಂಬ ಅಮೋಘವಾದ ಪುಸ್ತಕ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಬಹುಮಾನಿತ ಕೃತಿಯಾದ ಈ ಪುಸ್ತಕ ಸುಮಾರು ಹದಿನೇಳು ಜನಪದೀಯ ಕಥೆಗಳನ್ನು ಹೊಂದಿದೆ. ಎಲ್ಲಾ ಕಥೆಗಳೂ ಜಾನಪದ ಸಂಸ್ಕೃತಿಯಷ್ಟೇ ಅಲ್ಲದೆ ಭಾಷೆಯ ಸೊಗಡನ್ನೂ ಮೈದುಂಬಿಕೊಂಡಿರುವುದು ಈ ಪುಸ್ತಕದ ಬಿಸಿರೊಟ್ಟಿಗಿರುವ ತುಪ್ಪ. ಈ ಪುಸ್ತಕ ಓದಿದಾಗ ಅರಿವಿಗೆ ನಾಟಿದ ಕೆಲಕಥೆಗಳು ಅದರಿಂದ ನನಗನಿಸಿದ ಒಂದಷ್ಟು ವಿಚಾರಗಳು ನಿಮ್ಮ ಮುಂದೆ.
ಜನಪದ ಸಾಹಿತ್ಯ ನಮ್ಮ ಚರಿತ್ರೆಯನ್ನು, ನಮ್ಮ ಪೂರ್ವಜರ ಸಂಸ್ಕೃತಿ ಕಥಾನಕವನ್ನೂ ಬಿಂಬಿಸುತ್ತದೆ. ಹಾಗೆಂದ ಮಾತ್ರಕ್ಕೆ ಜನಪದ ಎಂದರೆ ಒಂದು ಹಿಸ್ಟರಿಯಾಗಲೀ, ಪ್ರಾಚೀನ ಆಂಟೀಕ್ ವಸ್ತು ವಿಷಯವಂತೂ ಅಲ್ಲ. ಯಾವುದು ಅತ್ಯಂತ ಸಹಜವೋ, ಯಾವುದು ಜನಜನಿತವೋ ಅದು ಜನಪದ. ಜನರ ಸಂಸ್ಕೃತಿಗೆ, ನೈಜತೆಗೆ ಹತ್ತಿರವಾದದ್ದೆಲ್ಲವೂ ಜನಪದವೇ. ಇಂತಹ ಜನಪದ ಸಾಹಿತ್ಯ ಪ್ರತಿ ಪ್ರದೇಶದ, ಸಂಸ್ಕೃತಿಯ ಮತ್ತು ಜನಾಂಗದ ಯಾವ ಸ್ನೋ, ಪೌಡರ್ ಹಚ್ಚಿರದ ಒಂದು ಹಸಿ ಘಮಲನ್ನು ಹೊಂದಿರುತ್ತದೆ. ಅದೇ ನೈಸರ್ಗಿಕ ಆಕರ್ಷಣೆ ಆ ಪುಸ್ತಕದ ಜಾನಪದ ಕಥೆಗಳಲ್ಲಿ ಅಡಗಿವೆ. ಅದರಲ್ಲಿ ಕಂಡು ಬರುವ ಪ್ರತಿಯೊಂದು ಕಥೆಯೂ, ಕಥೆಯಾಗಿ ಕಾಣದೆ ಒಂದು ನೈಜ ಉಸಿರಿನ ಹಾಡಾಗಿ ಬಿತ್ತರಗೊಂಡಿವೆ. ಪ್ರತಿ ಕಥೆಯಲ್ಲೂ ಕಂಡು ಬರುವ ನೋವು-ದುಗುಡಗಳು, ಶೋಷಣೆ-ಮೋಸಗಳು, ಅವಮಾನ-ಬಿಗುಮಾನಗಳು ನಮ್ಮ ದಿನನಿತ್ಯದ ಜೀವನಕ್ಕೆ ಒಂದು ಕನ್ನಡಿ ಹಿಡಿದಂತಿವೆ. ಈ ಪುಸ್ತಕದಲ್ಲಿ ನನಗೆ ಮೆಚ್ಚುಗೆಯಾದ ಕೆಲ ಕಥೆಗಳನ್ನು ನೋಡೋಣ.
ಕಥೆ ಕೇಳೆ ಗುಬಲಾಡಿ: ಒಂದೂರಿನಲ್ಲಿ ಗಂಡ ಹೆಂಡಿರಿಬ್ಬರು. ಅವರಿಗೆ ಸಿಹಿ ಮಾಡಿ ತಿನ್ನುವ ಚಪಲವಾಗುತ್ತದೆ. ಗಂಡನಿಗೆ ಬೇಕಾದ ಪದಾರ್ಥಗಳನ್ನು ತರಲು ಹೆಂಡತಿ ಹೇಳಿದಾಗ, ತಂದುಕೊಟ್ಟು ಗಂಡ ಹೊಲಕ್ಕೆ ಹೋಗುತ್ತಾನೆ. ಆತ ಮರಳುವಷ್ಟರಲ್ಲಿ ಬೇಕಾದ ಸಿಹಿ ತಿಂಡಿಯೆಲ್ಲಾ ಮಾಡಿಟ್ಟು ಕಾಯುತ್ತಾಳೆ. ಕೊನೆಗೂ ಆತ ಬಂದ. ಬಂದು ನಿಲ್ಲುತ್ತಲೇ ಹೆಂಡತಿ ಕಾಲು ತೊಳೆಯಲು ನೀರು ಕೊಟ್ಟಿಲ್ಲ ಎಂದು ಒಂದು ದೊಡ್ಡ ಕೋಲಿನಿಂದ ಆಕೆಯನ್ನು ಹೊಡೆಯುತ್ತಾನೆ. ಅಳುತ್ತಾ ಕೂತ ಹೆಣ್ಣು ಮಗಳನ್ನು ಲೆಕ್ಕಿಸದೆ ಆತ ಹೋಗಿ ತಿಂದುಂಡು ಮಲಗುತ್ತಾನೆ. ಅವನು ತಿಂದು ಮಿಕ್ಕಿದ ಕೊಂಚ ತಿಂಡಿ ನೆಲದ ಮೇಲೆ ಬಿದ್ದಿರುತ್ತದೆ. ಅದನ್ನು ಆಕೆ ತಿಂದು ತಾನೂ ಹೋಗಿ ಮಲಗುತ್ತಾಳೆ. ಬೆಳಗ್ಗೆಯಾಗುವಷ್ಟರಲ್ಲಿ ಅವರ ಜಗಳ ರಾಜಿಯಾಗಿ, ಹೆಂಡತಿ ಗಂಡನಿಗೆ ಒಂದು ಕಥೆ ಹೇಳಲು ಕೇಳುತ್ತಾಳೆ. ಆಗ ಗಂಡ ಹೇಳುವ ಕಥೆ ಹೀಗಿದೆ:
“ಕತ್ತಲ ಮನೆಗೆ ಕಾಲಾಡಿ
ನೆಲ್ಲಿ ಮ್ಯಾಲೆ ಕೈಯಾಡಿ
ಮುಸುರೆ ಬಾನೆಗೆ ಗರಬಾಡಿ
ಕಥೆ ಕೇಳೇ ಗುಬಲಾಡಿ”
ಹಾವಿನ ಕಥೆ: ಒಂದು ಮನೆಯಲ್ಲಿ ಅತ್ತೆ ಸೊಸೆಯಂದಿರು. ನಾಲ್ಕು ಜನ ಸೊಸೆಯಂದಿರಿಗೂ ಬಸುರಿ ಬಯಕೆಗಳು. ಆದರೆ ಮಾಡಿಸಿ ತಿನ್ನಲು ಹೆದರಿಕೆ. ಪ್ರತಿ ದಿನ ಸಂತೆಗೆ ಹೋಗುತ್ತಿದ್ದ ಗಂಡಂದಿರನ್ನು “ಇಂದು ಅತ್ತೆಯನ್ನು ಕಳಿಸಿ” ಎಂದು ಹೇಳಿ, ಅತ್ತೆಗೆ ತಿಳಿಸುತ್ತಾರೆ. ಎಂದೂ ಇರದ ಮಕ್ಕಳು ಇಂದೇಕೆ ನನ್ನನ್ನು ಸಾಗಹಾಕುತ್ತಿದ್ದಾರೆ ಎಂಬುದನ್ನು ತಿಳಿಯಲು, ಅತ್ತೆ ಸಂತೆಗೆ ಹೋಗುವಂತೆ ನಾಟಕ ಮಾಡಿ, ಅಟ್ಟ ಹತ್ತಿ ಕೂರುತ್ತಾಳೆ. ಅತ್ತೆ ಹೊರಟಳೆಂದು ಬಗೆದ ಸೊಸೆಯಂದಿರು ತಮಗೆ ಬೇಕಾದ ಸಿಹಿ ತಿಂಡಿ ಮಾಡಲು ಪ್ರಾರಂಭಿಸುತ್ತಾರೆ. ಇನ್ನೇನು ಮುಗಿಯಬೇಕು ಎನ್ನುವಷ್ಟರಲ್ಲಿ ಅತ್ತೆ ಬಂದು ಬಿಡುತ್ತಾಳೆ. ಒಬ್ಬೊಬ್ಬರು ಒಂದೊಂದು ಜಾಗದಲ್ಲಿ ತಿಂಡಿ ಬಚ್ಚಿಟ್ಟು ಬಿಡುತ್ತಾರೆ. ಎಲ್ಲವನ್ನೂ ಕದ್ದು ಕಂಡಿದ್ದ ಅತ್ತೆ, ಸುಮ್ಮನೆ ಒಳಗೆ ಬಂದಾಗ, “ಅತ್ತೆ ಸಂತೆಗೆ ಹೋಗಲಿಲ್ಲವಾ” ಎಂದು ಸೊಸೆ ಕೇಳಿದಾಗ, ಆಕೆ, “ಹೊರಟಿದ್ದೆ ಆದರೆ ದಾರಿಯಲ್ಲಿ ಒಂದು ಹಾವು ಅಡ್ಡ ಬಂತೆಂದೂ, ಆ ಹಾವನ್ನು ಸೊಸೆಯಂದಿರು ಮಾಡಿದ್ದ ಸಿಹಿ ತಿಂಡಿಗಳಿಗೆ ಹೋಲಿಸುತ್ತಾ, ಅವುಗಳ ಹೆಸರನ್ನು ಹೇಳುತ್ತಾ, ಅವು ಬಚ್ಚಿಟ್ಟಿದ್ದ ಜಾಗ ವಿವರಿಸುತ್ತಾಳೆ. ಆಗ ಸೊಸೆಯಂದಿರು ಅತ್ತೆಯ ಕ್ಷಮೆ ಕೇಳುತ್ತಾರೆ.
ಚಾಪಿ ಕಡಿಲೋ ಬಾನಿ ಒಡಿಲೋ: ಒಂದೂರಲ್ಲಿ ಒಬ್ಬ ಗಂಡ-ಹೆಂಡತಿ. ಆ ಹೆಂಡತಿ ಗಂಡನಿಗೆ ತಿಳಿಯದೆ ಹಾದರ ಮಾಡುತ್ತಿರುತ್ತಾಳೆ. ಅದನ್ನು ತಿಳಿದ ಗಂಡ “ನಾವು ಬೇರೆ ಊರಿಗೆ ಹೋಗೋಣ” ಎಂದು ಬೇರೆ ಊರಿಗೆ ಕರೆದೊಯ್ಯುತ್ತಾನೆ. ನಂತರ ಆ ಹೊಸ ಊರಿನ ಗೌಡ, ಈತನ ಹೆಂಡತಿಯನ್ನು ಕಂಡು “ನನ್ನೊಟ್ಟಿಗೆ ಒಂದು ದಿನ ಇರು” ಎಂದು ಕೇಳುತ್ತಾನೆ. ಅದಕ್ಕೆ ಹೆಂಡತಿ “ಒಂದಷ್ಟು ಕಲ್ಲುಗಳನ್ನು ವ್ಯಾಪಾರ ಮಾಡಿಕೊಂಡು ಬಾ” ಎಂದು ಗಂಡನನ್ನು ಸಾಗಹಾಕುತ್ತಾಳೆ. ದಡ್ಡ ಗಂಡ ಹೋಗಿ ವ್ಯಾಪಾರ ಮಾಡುವ ಸಮಯದಲ್ಲಿ ಗೌಡ ಆತನ ಮನೆ ಹೊಕ್ಕುತ್ತಾನೆ. ಕಲ್ಲನ್ನು ಯಾರು ಕೊಳ್ಳುತ್ತಾರೆ ಎಂದು ನಿಧಾನವಾಗಿ ಅರಿವಾದ ಗಂಡ ಮನೆಗೆ ಮರಳಿದಾಗ ಅಲ್ಲಿ ಗೌಡ ಕಾಣಿಸುತ್ತಾನೆ. ಅವನ ಹೆಂಡತಿ, ಗೌಡನನ್ನು ಚಾಪೆಯೊಳಗೆ ಬಚ್ಚಿಟ್ಟದ್ದನ್ನೂ ನೋಡುತ್ತಾನೆ. ತಕ್ಷಣ, “ನಾನು ಚಾಪೆ ವ್ಯಾಪಾರ ಮಾಡಿಕೊಂಡು ಬರ್ತೀನಿ” ಅಂತ ಚಾಪೆ ಒಯ್ಯುತ್ತಾನೆ. ಅದರೊಳಗೆ ಇರುವ ಗೌಡ ಹಾಗೆ ಇರುತ್ತಾನೆ. ದಾರೀಲಿ ಒಬ್ಬ ಅಗಸ ಕಾಣುತ್ತಾನೆ, ಅವನದೂ ಇದೇ ಕಥೆ. ಆತನ ಹೆಂಡತಿ ತನ್ನ “ಮಿಂಡ”ನನ್ನು ಒಂದು ಬಾನಿಯೊಳಗೆ ಬಚ್ಚಿಟ್ಟಿರುತ್ತಾಳೆ. ಕೊನೆಗೆ ಆ ಇಬ್ಬರು ಗಂಡಂದಿರೂ, ಒಬ್ಬರು ಚಾಪೆ ಕಡಿದು, ಮತ್ತೊಬ್ಬರು ಬಾನಿ ಒಡೆದು, ಒಳಗಿರುವ ಗಂಡಸರನ್ನು ಸಾಯಿಸಿ ತಾವು ನಿಶ್ಚಿಂತರಾಗುತ್ತಾರೆ.
ಇಲಿಯೇ, ಇಲಿಯೇ ಇರ್ತಾವ್ ಸೂಳೆ: ಒಬ್ಬ ಗಂಡನಿಗೆ ನಾಲ್ಕು ಜನ ಹೆಂಡತಿಯರು. ಆದರೂ ಆತನಿಗೆ ಇಲಿಯವ್ವ ಅನ್ನುವ ಒಬ್ಬಳು “ಸೂಳೆ” ಇರುತ್ತಾಳೆ. ಒಂದು ಹಬ್ಬ ಬರುತ್ತದೆ. ಆಗ ಇಲಿಯವ್ವ ಅವನಿಗೆ ಹಬ್ಬಕ್ಕೆ ಏನಾದರೂ ಪದಾರ್ಥಗಳನ್ನು ತರಲು ಹೇಳುತ್ತಾಳೆ. ಆಗ, ಹೊರಟ ಅವನು, ತನ್ನ ಹೆಂಡತಿಯರು ಕೂಡಿಸಿದ ಪಂಚಾಯಿತಿಗೆ ಬಂದು ಸಿಕ್ಕಿ ಹಾಕಿಕೊಂಡು ಬಿಡುತ್ತಾನೆ. ಕೊನೆಗೆ ಹೆಂಡತಿಯರ ಪರವಾಗಿ ಆದ ತೀರ್ಪು. ಗಂಡನನ್ನು ಇಲಿಯವ್ವನ ಬಿಟ್ಟು ಅವರೊಟ್ಟಿಗೆ ಇರುವಂತೆ ಮಾಡುತ್ತದೆ. ಆದರೆ ಅವನಿಗೆ, ಇಲಿಯವ್ವನನ್ನು ತರಾಟೆಗೆ ತೆಗೆದುಕೊಳ್ಳಬೇಕು ಎಂಬ ಮನಸ್ಸು. ಇಲಿಯವ್ವನ ಬಗ್ಗೆ ತಮ್ಮ ಗಂಡನಿಗೆ ಸಿಟ್ಟು ಇರುವುದನ್ನು ಕಂಡ ಆ ನಾಲ್ಕು ಜನ ಹೆಂಡತಿಯರಿಗೆ ಅತ್ಯಂತ ಸಂತೋಷ. ತಾವೂ ಎಲ್ಲರೂ ಸೇರಿ ಆಕೆಯನ್ನು ಚೆನ್ನಾಗಿ ಬೈದು, ಗಂಡನಿಗೆ ಸಾಂತ್ವನ ಹೇಳುತ್ತಾರೆ. ಎಲ್ಲರೂ ಸೇರಿ ಇಲಿಯವ್ವನನ್ನು ಮನೆಗೆ ಕರೆದು, “ಗ್ರಹಚಾರ ಬಿಡಿಸಬೇಕು” ಎಂದು ಪ್ಲಾನ್ ಮಾಡುತ್ತಾರೆ. ಆಗ ಎಲ್ಲರ ಬೈಗುಳಕ್ಕೆ ಒಳಗಾದ ಇಲಿಯವ್ವನನ್ನು ಕಂಡು ಆತ ನಗುತ್ತಾ “ಇನ್ನೊಮ್ಮೆ ನನ್ನನ್ನು ಬೈಯ್ಯಲಾರೆ” ಎನ್ನುತ್ತಾನೆ. ಈ ಮಾತನ್ನು ಕೇಳಿದ ಹೆಂಡತಿಯರು, ತಮ್ಮ ಗಂಡ ಆಕೆಯನ್ನು ಬಿಟ್ಟು ಬಿಡುತ್ತಾನೆ ಎಂಬುದನ್ನು ಮನಗಂಡು ತಕ್ಷಣವೇ ಆಕೆಯ ಕಥೆಯನ್ನು ಮುಗಿಸುತ್ತಾರೆ.
(ವಿ. ಸೂ: ನಾನಿಲ್ಲಿ ಹೇಳಲಾಗಿರುವ ಕಥೆಗಳು ತುಂಬಾ ಸ್ಥೂಲವಾಗಿದ್ದೂ, ಮೂಲರೂಪವನ್ನು, ಅದರ ಸವಿಯನ್ನು ಕಳೆದುಕೊಂಡಿದೆ. ನನ್ನ ಮುಂದಿನ ವಿಚಾರಮಂಡನೆಗಾಗಿ ಮಾತ್ರ ನಾನು ಇವನ್ನು ಉಲ್ಲೇಖಿಸಿದ್ದೇನೆ. ಇದರ ಪೂರ್ಣ ಸವಿಯನ್ನು ರುಚಿಸಲು, ಪುಸ್ತಕ ಓದಬೇಕು.)
ಈ ಮೇಲೆ ಕಂಡ ನಾಲ್ಕು ಕಥೆಗಳನ್ನು ಗಮನಿಸಿ, ನಾಲಕ್ಕೂ ವಿವಿಧ ರೂಪದ ದೃಶ್ಯಾವಳಿಗಳನ್ನು ನಮ್ಮ ಮುಂದೆ ಕಟ್ಟಿಕೊಡುತ್ತದೆ. “ಕಥೆ ಕೇಳೆ ಗುಬಲಾಡಿ” ಕಥೆಯಲ್ಲಿ ಒಬ್ಬ ಹೆಣ್ಣು ತನ್ನ ಗಂಡನಿಗಾಗಿ ವಿಧೇಯಳಾಗಿ ಇರಬೇಕು, ಇಲ್ಲದಿದ್ದರೆ ಆಕೆಯ ಗತಿ ಏನಾಗಬಹುದು ಎಂಬ ಅಂಶವನ್ನು ಪ್ರಸ್ತುತಪಡಿಸುತ್ತದೆ. ಒಂದು ಚೂರು ಗಂಡನ ಮಾತು ಕೇಳದೆ ಹೋದಲ್ಲಿ ಎಷ್ಟು ಅವಿಧೇಯಳಾಗಿ, ಗಂಡನ ನಗೆಪಾಟಲಿಗೆ ಈಡಾಗುತ್ತಾಳೆ ಎಂಬುದನ್ನು ನಾವು ಕಾಣಬಹುದು.
“ಹಾವಿನ ಕಥೆ”ಯಲ್ಲಿ ಅತ್ತೆ-ಸೊಸೆಯರ ಸಂಬಂಧವನ್ನು ತೋರಿಸಲಾಗಿದೆ. ಸೊಸೆಯಂದಿರು ತಮ್ಮ ಅತ್ತೆಗೆ ಎಷ್ಟು ಹೆದರುತ್ತಿದ್ದರು. ತಾವು ತಿನ್ನಲಿಕ್ಕೂ ಕದ್ದು ಮುಚ್ಚಿ ಮಾಡುವಷ್ಟು, ಅದರಲ್ಲೂ ಸಿಕ್ಕಿ ಹೋದರೆ, ಅಪರಾಧೀ ಮನೋಭಾವನೆ ಕಾಡುವಷ್ಟು ಪರಾವಲಂಭೀ ಬದುಕಿನ ಚಿತ್ರಣ. ಇದಕ್ಕೆ ಬಹು ಹತ್ತಿರವಾದ ನಿಜ ಘಟನೆಯನ್ನು ನಮ್ಮ ಸಂಬಂಧಿಕರೊಬ್ಬರೇ ಅನುಭವಿಸಿದ್ದು, ಅವರ ಬಾಯಲ್ಲೇ ಈ ಮಾತನ್ನು ಕೇಳಿದ್ದು, ಕಥೆ ಓದಿದಾಕ್ಷಣ ನೆನಪಿಗೆ ಬಂದಿತ್ತು. ಸುಮಾರು ಐವತ್ತು-ಅರವತ್ತು ವರ್ಷಗಳ ಹಿಂದಿನ ಮಾತು. ನನ್ನ ನೆಂಟರು ಹೊಸದಾಗಿ ಮದುವೆಯಾಗಿ ಹಳ್ಳಿ ಮನೆ ಸೇರಿದ್ದರು. ಅವರ ಅತ್ತೆಗೆ ಅಪಾರ ಹೆದರುತ್ತಿದ್ದ ಇಬ್ಬರು ಸೊಸೆಯಂದಿರೂ, ಅತ್ತೆ ಇಲ್ಲದಿದ್ದಾಗ ಪಾಯಸ ಮಾಡಿಕೊಂಡು ತಿನ್ನುವ ಆಸೆಯಾಗಿ, ಪಾಯಸ ಮಾಡುತ್ತಾರೆ. ಇನ್ನೇನು ತಿನ್ನಬೇಕು ಅನ್ನುವಷ್ಟರಲ್ಲಿ ಅತ್ತೆ ಬರುವ ಸದ್ದು ಕೇಳಿಬರುತ್ತದೆ. ಆಗ ಆ ಸೊಸೆಯಾರಿಬ್ಬರೂ ಆ ಬಿಸಿ ಬಿಸಿ ಪಾಯಸವನ್ನು ಬಚ್ಚಲಿಗೆ ಬೇಗ ಹೊಯ್ದು ಸ್ಥಳವನ್ನು ಶುದ್ಧ ಮಾಡುತ್ತಾರೆ. ಇದು ಜರುಗಿದ ಸತ್ಯ ಘಟನೆ. ಒಬ್ಬ ಹೆಣ್ಣಿನ ಜೀವನ ಎಷ್ಟೆಲ್ಲಾ ದುಸ್ತರವಾಗಿತ್ತು ಎಂಬುದರ ದುರಂತ ಒಳನೋಟಗಳನ್ನು ಈ ಕಥೆ ಬಹಿರಂಗಗೊಳಿಸುತ್ತದೆ.
“ಚಾಪಿ ಕಡಿಲೋ, ಬಾನಿ ಒಡಿಲೋ” ಒಂದು ವ್ಯಭಿಚಾರೀ ಹೆಂಗಸರ ಕಥೆ. ಇಲ್ಲಿ ಒಬ್ಬ ಗಂಡು ತನ್ನ ಹೆಣ್ಣಿನ ಶೀಲಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾನೆ ಎಂಬ ಮಾರ್ಮಿಕ ಸತ್ಯ ಅಡಗಿದೆ. ಒಬ್ಬ ಹೆಣ್ಣು ತನಗೆ ಮೋಸ ಮಾಡುತ್ತಿದ್ದಾಳೆ ಎಂದು ತಿಳಿದ ತಕ್ಷಣ ಆ ಗಂಡು, ಹೆಣ್ಣಿಗೆ ಏನೂ ಮಾಡದೆ, ಆ ಪರ ಪುರುಷನ ಕೊಲೆಯನ್ನೇ ಮಾಡಿಬಿಡುತ್ತಾನೆ. ಇಲ್ಲಿ ಗಂಡು ಮಾಡಿದ ಕೊಲೆ, ಕೊಲೆ ಎಂದು ಪರಿಗಣಿಸಲ್ಪಡದೆ, ತನ್ನ ಹೆಣ್ಣನ್ನು ಕಾಪಾಡಿಕೊಂಡ ವೀರ ಎಂಬ ಇಮೇಜರಿ ಕಾಣಸಿಗುತ್ತದೆ. ನಾವು ಈ ಕಥೆಯ ಮೂಲಕ ಒಂದು ಸಂಬಂಧದ ಆಯಾಮಗಳನ್ನೂ, ಅದನ್ನು ಗಂಡು ಹೆಣ್ಣು ವೀಕ್ಷಿಸುವ, ಪರಿಗಣಿಸಲ್ಪಡುವ ನೆಲೆಗಟ್ಟುಗಳನ್ನೂ ಕಾಣಬಹುದು.
“ಇಲಿಯೇ ಇಲಿಯೇ ಇರ್ತಾವ್ ಸೂಳೆ” ಹಿಂದಿನ ಕಾಲದ ಸೂಳೆಗಾರಿಕೆ ಅಥವಾ ಪ್ರಾಸ್ಟಿಟ್ಯೂಶನ್ ಕುರಿತಾದ ಕಥಾ ಹಂದರ. ಈ ಕಥೆಯಲ್ಲಿ ನಾಲ್ಕು ಜನ ಹೆಂಡತಿಯರನ್ನು ಮದುವೆಯಾದ ಗಂಡು ಸಾಲದೆಂಬಂತೆ ಒಬ್ಬ ಸೂಳೆಯ ಸಹವಾಸ ಮಾಡಿರುತ್ತಾನೆ. ಆದರೂ ಆತನ ವ್ಯಕ್ತಿತ್ವ ಎಲ್ಲೂ ಹಳಸಾಗಿಸಿಲ್ಲ. ತಾನು, ತನ್ನ ಹೆಂಡತಿಯರು ಮತ್ತು ಊರಿನವರು ಎಲ್ಲರೂ ಸೇರಿ ಬೈಯುವುದು, ತೆಗಳುವುದು ಆ ಸೂಳೆಯನ್ನೇ ಹೊರತು, ಈ ಮಹಾಪುರುಷನನ್ನಲ್ಲ. ಹಿಂದಿನ ಕಾಲದ ಸೂಳೆಯನ್ನು ಇಟ್ಟುಕೊಂಡರೆ ಹೆಚ್ಚುಗಾರಿಕೆ ತೋರಿಸುವ ಕೆಲವು ವಾಡಿಕೆ, ನಂಬಿಕೆಗಳನ್ನು ಈ ಕಥೆ ಪ್ರತಿಬಿಂಬಿಸುತ್ತದೆ.
ಹೀಗೆ ಒಟ್ಟಾರೆ, ಎಲ್ಲಾ ಕಥೆಗಳೂ, ನಮ್ಮ ಕಳೆದು ಹೋದ ಕಾಲಘಟ್ಟಗಳ ಒಂದು ಪಳೆಯುಳಿಕೆಯಾಗಿ ನಮ್ಮ ಮುಂದೆ ನಿಲ್ಲುತ್ತದೆ. ಇವೆಲ್ಲ ಕಥೆಗಳನ್ನೂ ಕಟ್ಟಿರುವುದು ಹೆಂಗಸರು ಎಂಬುದು ಗಮನಿಸಬೇಕಾದ ಅಂಶ. ಈ ಎಲ್ಲಾ ಕಥೆಗಳಲ್ಲೂ ಸ್ತ್ರೀಯನ್ನು ಕೆಳಮಟ್ಟದಲ್ಲೇ ತೋರಿಸಲಾಗಿದೆ, ಆಕೆಯ ಶೋಷಣೆಯನ್ನೇ ವೈಭವೀಕರಿಸಲಾಗಿದೆ. ಇಲ್ಲಿ ಸ್ತ್ರೀವಾದ ಎಲ್ಲಿಂದ ಬರಬೇಕು ಎಂಬುದು ಈ ಲೇಖನ ಓದಿದಾಗ ಮೂಡಬಹುದಾದ ಪ್ರಶ್ನೆ. ಆದರೆ ನಾವಿಲ್ಲಿ ಗಮನಿಸಬೇಕಾದ್ದು, ಹೆಂಗಳೆಯರೇ, ತಮ್ಮ ವಿರಾಮದಲ್ಲಿ ಕೂತು, ಹೆಣೆದ ಈ ಹಲವು ಬಗೆಯ ಕ್ರಿಯೇಟಿವ್ ಕಥೆಗಳು, ತಮಗೆ ಆದ ಎಲ್ಲಾ ಶೋಷಣೆಗಳ, ನೋವುಗಳ, ದುಃಖಗಳ ಉಳಿಕೆಗಳಾಗಿ, ಅಂಶಗಳಾಗಿ ಕಾಣಸಿಗುತ್ತವೆ. ವಾಸ್ತವವಾಗಿ ಎಲ್ಲೂ ಉಸಿರೆತ್ತಲಾಗದ ಪರಿಸ್ಥಿತಿಯಲ್ಲಿದ್ದ ಅಂದಿನ ಕಾಲದ ಮಹಿಳೆ, ತನ್ನೆಲ್ಲಾ ವಿಷಾದಗಳನ್ನೂ, ವಿರೋಧಗಳನ್ನೂ ಹೀಗೆ ಕಥೆಗಳ ಮೂಲಕ ನಮ್ಮ ಮುಂದೆ ಇಡಲು ಪ್ರಯತ್ನಿಸಿದ್ದಾಳೆ. ಇದು ಫೆಮಿನಿಸಂನ ಮೊದಲ ಹೆಜ್ಜೆ ಎಂದೇ ಹೇಳಬಹುದು.

ಕಾಮೆಂಟ್‌ಗಳಿಲ್ಲ: