ಶನಿವಾರ, ನವೆಂಬರ್ 19, 2011

ಕರ್ನಾಟಕ ಜಾನಪದ ಅಕಾಡೆಮಿ ವೆಬ್‌ಸೈಟ್‌ಗೆ ಚಾಲನೆ



ಕರ್ನಾಟಕ ಜಾನಪದ ಅಕಾಡೆಮಿಗೆ ತನ್ನದೇ ಆದ ವೆಬ್ ಸೈಟ್ ಮಾಡುವುದು ಬಹು ಜನರ ನಿರೀಕ್ಷೆಯಾಗಿತ್ತು. ಅದೀಗ ಸಾದ್ಯವಾಗಿದೆ. ಇದೇ ನವಂಬರ್ 18 ರಂದು ಅಕಾಡೆಮಿಯ ವೆಬ್ ಸೈಟ್ ನ್ನು ಬಿಡುಗಡೆ ಮಾಡಲಾಗಿದೆ.
ಕೆಲವೇ ದಿನಗಳಲ್ಲಿ ಇದು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿದೆ ಎಂದರು. ವೆಬ್‌ಸೈಟ್ ವಿಳಾಸ ಹೀಗಿದೆ: http://karnatakajanapadaacademy.org/



ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜು ಅವರು ಇಲಾಖೆಯ ಆಯುಕ್ತ ಮನು ಬಳಿಗಾರ್, ಅಕಾಡೆಮಿಯ ಅಧ್ಯಕ್ಷ ಗೊ.ರು. ಚನ್ನಬಸಪ್ಪ, ರಿಜಿಸ್ಟ್ರಾರ್ ಬಿ.ಎನ್. ಪರಡ್ಡಿ ಅವರ ಉಪಸ್ಥಿತಿಯಲ್ಲಿ ವೆಬ್‌ಸೈಟ್ ಅನ್ನು ಸಾಂಕೇತಿಕವಾಗಿ ಈಚೆಗೆ ಉದ್ಘಾಟನೆ ಮಾಡಲಾಯಿತು. ವೆಬ್ ಸೈಟ್ ಚಾಲನೆಯು ಗೊ.ರು. ಚನ್ನಬಸಪ್ಪ ಅವರಿಗೆ ಸಲ್ಲಬೇಕಾದ ಗೌರವ. ಕಾರಣ ಇಂಥದ್ದೊಂದು ಬಹುದಿನದ ಕನಸನ್ನು ಅವರು ಈಡೇರಿಸಿದ್ದಾರೆ.ಈಗ ಮಾಡಬೇಕಾದ ಕೆಲಸವೆಂದರೆ ಕಾಲ ಕಾಲಕ್ಕೆ ವೆಬ್ ಸೈಟ್ ನ್ನು ಅಪ್ ಡೇಟ್ ಮಾಡುವುದು, ಮತ್ತು ಸಾದ್ಯವಾದಷ್ಟು ಜಾನಪದದ ಕುರಿತಂತೆ ಸಮಗ್ರ ಮಾಹಿತಿ ಸಿಗುವಂತೆ ಜಾಗರೂಕತೆಯಿಂದ ರೂಪಿಸಬೇಕಾಗಿದೆ.

ಇದನ್ನು ಅಭಿವೃದ್ಧಿಪಡಿಸಲು ಕನ್ನಡ ಗಣಕ ಪರಿಷತ್ತಿನ (ಕಗಪ) ತಂತ್ರಜ್ಞರಿಂದ ನೆರವು ಪಡೆಯಲಾಗಿದೆ. ವೆಬ್‌ಸೈಟ್‌ನ ನಿರ್ವಹಣೆ, ಕಾಲಕಾಲಕ್ಕೆ ಹೊಸ ಮಾಹಿತಿ ನೀಡುವ ಜವಾಬ್ದಾರಿಯನ್ನೂ ಕಗಪ ತಂತ್ರಜ್ಞರೇ ನಿರ್ವಹಿಸಲಿದ್ದಾರೆ. ಆರಂಭಿಕ ಹಂತದಲ್ಲಿ ಒಂದು ಲಕ್ಷ ರೂಪಾಯಿ ಖರ್ಚಾಗಿದೆ, ವೆಬ್‌ಸೈಟ್ ನಿರ್ವಹಣೆಗೆ ಪ್ರತಿ ತಿಂಗಳು 10-15 ಸಾವಿರ ರೂಪಾಯಿ ಖರ್ಚಾಗುವ ಅಂದಾಜು ಇದೆ ಎಂದು ಪರಡ್ಡಿ ತಿಳಿಸಿದ್ದಾರೆ.

ಕನ್ನಡ ಜಾನಪದ ಬ್ಲಾಗ್ ಜಾನಪದ ಅಕಾಡೆಮಿಯ ವೆಬ್ ಸೈಟ್ ನ್ನು ತುಂಬು ಪ್ರೀತಿಯಿಂದ ಅಂತರ್ಜಾಲ ಲೋಕಕ್ಕೆ ಸ್ವಾಗತಿಸುತ್ತದೆ. ನಮ್ಮ ಬ್ಲಾಗ್ ಪಟ್ಟಿಯಲ್ಲಿ ಅಕಾಡೆಮಿ ವೆಬ್ ಸೈಟ್ ಲಿಂಕನ್ನು ಕೊಡಲಾಗಿದೆ, ಅವಶ್ಯವಿದ್ದವರು ಕನ್ನಡ ಜಾನಪದ ಬ್ಲಾಗ್ ಮೂಲಕವೂ ವೆಬ್ ಸೈಟ್ ನ್ನು ಪ್ರವೇಶಿಸಬಹುದು.

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಈ ವೆಬ್ ಸೈಟ್ ನನಗೆ ನನ್ನ ಆಂಡ್ರೋಯಿಡ್ ಫೋನಿನಲ್ಲಿ ತೆರೆಯುವುದಿಲ್ಲ. ಇದು ಅಡೋಬಿ ಫ್ಲಾಶನ್ನು ಬಳಸುತ್ತಿದೆ. ಯುನಿಕೋಡ್ ಬಳಸಿಲ್ಲ. ಆದುದರಿಂದ ನೀವು ಗೂಗಲ್ ಮೂಲಕ ಹುಡುಕಿದರೆ ಇದರಲ್ಲಿರುವ ಮಾಹಿತಿಗಳು ಸಿಗುವುದಿಲ್ಲ. ಜಗತ್ತೆಲ್ಲ ಯುನಿಕೋಡನ್ನು ಬಳಸುತ್ತಿರಬೇಕಾದರೆ ಯಾಕೆ ಈ ಸರಕಾರಿ ಸಂಸ್ಥೆಗಳು ಯುನಿಕೋಡನ್ನು ಬಳಸುತ್ತಿಲ್ಲ? ಯುನಿಕೋಡ್ ಎಂದರೆ ಇವರಿಗೆ ಯಾಕೆ ಅಲರ್ಜಿ? ಅಥವಾ ಕಗಪದವರಿಗೆ ಯುನಿಕೋಡ್ ವೆಬ್ ಸೈಟ್ ಮಾಡಲು ಗೊತ್ತಿಲ್ಲವೇ? ಸರಕಾರ ಈ ರೀತಿ ಜನರ ದುಡ್ಡನ್ನು ಹಾಳು ಮಾಡಬಾರದು.

- ಮಾ. ಶ. ಬೇವಿಕಟ್ಟೆ