ಬುಧವಾರ, ನವೆಂಬರ್ 16, 2011

ಹೆಣ್ಣಿನ ಶೋಷಣೆ ವೈಭವೀಕರಿಸುವ ಅಗತ್ಯ ಇದೆಯೇ?

November 15, 2011 ರ ಪ್ರಜಾವಾಣಿ ಸಂಗತದಲ್ಲಿ ಪ್ರಕಟವಾದ ಬರಹ

ರೋಹಿಣಿ ಎಚ್.ಎಸ್.`ಕೆರೆಗೆ ಹಾರ` ಒಂದು ಜನಪ್ರಿಯ ಜನಪದ ಕಥನಗೀತೆ. ಕಲ್ಲನಕೇರಿ ಮಲ್ಲನಗೌಡ ಕಟ್ಟಿಸಿದ ಕೆರೆಗೆ ನೀರು ಬರುವುದಿಲ್ಲ. ಜ್ಯೋತಿಷಿಗಳು ಹಿರಿಯ ಸೊಸೆಯನ್ನು ಕೆರೆಗೆ ಬಲಿ ಕೊಡಬೇಕು ಎಂದಾಗ `ಹಿರಿತನಕ್ಕೆ ಯಾರಿಲ್ಲ` ಎಂದುಕೊಂಡು, ಕಿರಿಯ ಸೊಸೆಯನ್ನು ಬಲಿಕೊಡಲು ಮುಂದಾಗುತ್ತದೆ ಕುಟುಂಬ.

ಅದನ್ನು ತಿಳಿದು ನೊಂದುಕೊಳ್ಳುವ ಕಿರಿ ಸೊಸೆ ಭಾಗೀರಥಿ ದಂಡಿಗೆ ಹೋದ ಪತಿ ಮಾದೇವರಾಯನನ್ನು ನೆನೆದು ಕಣ್ಣೀರು ಇಡುತ್ತಾಳೆ. `ಇಟ್ಟಂಗೆ ಇರಬೇಕು` ಎಂಬ ಗೆಳತಿಯ ಮಾತಿಗೆ ತಲೆದೂಗಿ ಕೆರೆಗೆ ಹಾರ (ಆಹಾರ) ವಾಗಲು ಮಾನಸಿಕವಾಗಿ ಸಿದ್ಧವಾಗುತ್ತಾಳೆ.

ದಂಡಿನಿಂದ ಮನೆಗೆ ಹಿಂತಿರುಗಿದ ಮಾದೇವರಾಯ ವಿಷಯ ತಿಳಿದು ಅದೇ ಕೆರೆಯಲ್ಲಿ ಬಿದ್ದು ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಈ ಘಟನೆಯನ್ನು ವೈಭವೀಕರಿಸುವಂತೆ `ಕೆರೆಗೆ ಹಾರ` ಜನಪದ ಕಥನಗೀತೆ ಇದೆ.

ಮಲ್ಲನಗೌಡ `ಊರ ಕೆರೆಗೆ ನೀರು ಬರಲಿ` ಎಂದು ತನ್ನ ಸೊಸೆಯನ್ನೇ ಬಲಿಕೊಟ್ಟಿದ್ದು ಮತ್ತು ಭಾಗೀರಥಿ ತನ್ನ ಬದುಕನ್ನು ಲೆಕ್ಕಿಸದೇ ಊರ ಕೆರೆಗೆ ನೀರು ಬರಲಿ ಎಂದು ಕೆರೆಗೆ ಹಾರವಾಗಿ ಊರವರ ಕಣ್ಣಲ್ಲಿ ದೊಡ್ಡವಳು ಎನಿಸಿಕೊಂಡಿದ್ದು ಈ ಕಥನದಿಂದ ಹೊಮ್ಮುವ ಸಾರಾಂಶ.

ಕೆಲವು ವರ್ಷಗಳ ಹಿಂದೆ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಪಠ್ಯದಲ್ಲಿ ಈ ಕಥನಗೀತೆ ಇತ್ತು. ಇದೀಗ ಮೈಸೂರು ವಿಶ್ವವಿದ್ಯಾಲಯದ ಎರಡನೇ ಪದವಿ ತರಗತಿಗಳಿಗೆ ಇದು ಪಠ್ಯವಾಗಿದೆ. ಅದಕ್ಕೆ ಬರೆದಿರುವ ಟಿಪ್ಪಣಿಯಲ್ಲಿ `ಇದು ಭಾಗೀರಥಿಯ ತ್ಯಾಗ, ಬಲಿದಾನದ ಕತೆ` ಮತ್ತು `ಭಾಗೀರಥಿಯ ಪತಿ ಮಾದೇವರಾಯನ ಪತ್ನಿ ಮೇಲಿನ ಪ್ರೀತಿ ಬಿಂಬಿಸುವ ಕತೆ` ಎಂದು ಬಣ್ಣಿಸಲಾಗಿದೆ.

ಅದರಲ್ಲಿ ಎಲ್ಲಿಯೂ ಭಾಗೀರಥಿ ಕೆರೆಗೆ ಬಿದ್ದು ಹಾರವಾದ ತಕ್ಷಣ ನೀರು ಬರುವುದು ಮೂಢನಂಬಿಕೆ ಎಂಬುದರ ಬಗ್ಗೆ ಸೊಲ್ಲಿಲ್ಲ. ಕೆರೆಯಲ್ಲಿ ನೀರು ಬರಲಿಲ್ಲ ಎಂದು ಹೆಣ್ಣನ್ನು ಬಲಿಕೊಡುವ ಸಂಪ್ರದಾಯದ ಬಗ್ಗೆ ವಿರೋಧವಿಲ್ಲ.

ಈ ಜನಪದ ಕಥನಗೀತೆಯನ್ನು ಪಠ್ಯವಾಗಿ ಅಳವಡಿಸಿರುವುದು ತಪ್ಪಲ್ಲ. ಆದರೆ ತ್ಯಾಗ, ಬಲಿದಾನ ಎಂಬ ಪದಗಳನ್ನು ಬಳಸಿರುವುದು ಸರಿಯೇ? ಅದಕ್ಕೆ ಬದಲು ಒಂದು ಘಟನೆಯನ್ನು ಆಧಾರವಾಗಿಟ್ಟುಕೊಂಡು ಪದಕ್ಕೆ ಪದ ಜೋಡಿಸಿ ಎಷ್ಟು ಚೆಂದದ ಕಥನವನ್ನು ಜನಪದರು ಕಟ್ಟಿದ್ದಾರೆ ಎಂದು ಟಿಪ್ಪಣಿಯನ್ನು ಬರೆದಿದ್ದರೆ ಅದು ತಪ್ಪಾಗುತ್ತಿರಲಿಲ್ಲ.

ಈ ಘಟನೆ ತ್ಯಾಗ, ಬಲಿದಾನದ ಹೆಸರಲ್ಲಿ ನಡೆದಿರುವ ಹೆಣ್ಣಿನ ಶೋಷಣೆ ಎಂಬುದು ನೇರವಾಗಿಯೇ ಗೋಚರವಾಗುವ ಸತ್ಯ. ತ್ಯಾಗವನ್ನು ವೈಭವೀಕರಿಸಿ ಕೆರೆಗೆ ಹಾರ ನೀಡುವುದನ್ನು ಸಮರ್ಥಿಸಿಕೊಂಡಿರುವಂತೆ ಇರುವ ಈ ಟಿಪ್ಪಣಿ ವಿದ್ಯಾರ್ಥಿಗಳಲ್ಲಿ, ಹಿಂದೆ ಕೆರೆಗೆ ಆಹಾರವಾದ ತಕ್ಷಣ ನೀರು ಬರುವಂಥ ಪವಾಡಗಳು ನಡೆಯುತ್ತಿದ್ದವು ಮತ್ತು ಭಾಗೀರಥಿಯಂಥ ತ್ಯಾಗ ಜೀವಿಗಳ ಬದುಕು ಅನುಕರಣೀಯ ಎಂಬ ಭಾವ ಹುಟ್ಟಿಸಬಹುದು. ವಿದ್ಯಾರ್ಥಿಗಳಿಗೆ ಈಗ ಇಂಥವನ್ನು ಬೋಧಿಸಬೇಕೇ?

ಭಾಗೀರಥಿ ಕೆರೆಗೆ (ಕಾಲು ಜಾರಿ?) ಬಿದ್ದ ತಕ್ಷಣ ನೀರು ಬರಲು ಸಾಧ್ಯವೇ? ಕಾಕತಾಳೀಯವಾಗಿ ಅಂದು ನೀರು ಬಂದಿರಬಹುದು ಅಥವಾ ಆ ಘಟನೆ ನಡೆದ ನಂತರ ನಿಧಾನವಾಗಿ ಕೆರೆ ತುಂಬಿರಬಹುದು.

ಮಲ್ಲನಗೌಡ ಜಮೀನ್ದಾರನಾದ ಕಾರಣ ಅವನ ಸುತ್ತ ಇದ್ದ ಭಟ್ಟಂಗಿಗಳು (ಅವರಲ್ಲೊಬ್ಬ ಕೇಡಿಗ ಬುದ್ಧಿಯ ಕವಿ ಇದ್ದನೆಂದುಕೊಳ್ಳಬಹುದು) ಈ ಕಥನದ ಹುಟ್ಟಿಗೆ ಕಾರಣವಾಗಿರಬಹುದು. ಅದರಿಂದ ಭಾಗೀರಥಿಯ ಸಾವನ್ನು ಸಮರ್ಥಿಸಿಕೊಂಡಿರಬಹುದು.

ಇದಲ್ಲದೆ, ಹಿರಿಯ ಸೊಸೆಯನ್ನು ಜ್ಯೋತಿಷಿಗಳು ಆಹಾರವಾಗಿ ಕೊಡಿ ಎಂದು ಮೊದಲು ಸಲಹೆ ಇತ್ತಾಗ ಕುಟುಂಬ ಹಿಂಜರಿಯುತ್ತದೆ. ಯಾಕೆ? ಆಕೆ ಶ್ರೀಮಂತರ ಮನೆಯ ಹೆಣ್ಣುಮಗಳಿರಬಹುದೇನೋ? ಭಾಗೀರಥಿಯ ಪತಿ, `ಹೆಂಡತಿ ಸತ್ತಳು` ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದು ಹೇಳಲಾಗಿದ್ದರೂ, ಅದರ ಹಿಂದೆ ಸೋದರರ ಆಸ್ತಿ ಕಲಹದಂಥ ವಿಚಾರಗಳು ಇದ್ದು ಅವನನ್ನು ದಾಯಾದಿಗಳು ಅದೇ ಕೆರೆಗೆ ತಳ್ಳಿದ್ದರೂ ಇರಬಹುದು.

ಜಮೀನ್ದಾರರ ಮನೆಯ ವಿಚಾರವಾದ ಕಾರಣ ಅದು ಬೇರೆ ರೀತಿಯ ತಿರುವು ಪಡೆದುಕೊಂಡಿರುವ ಸಾಧ್ಯತೆ ಇರುತ್ತದೆ. ಈ ಜನಪದ ಕಥನ ಹುಟ್ಟಲು ಇಂಥ ಹಲವು ಕಾರಣಗಳಿರಬಹುದು. ಹಾಡು ಕಟ್ಟಿದ ಜನಪದರ ಪ್ರತಿಭೆಯನ್ನು ಹೊಗಳುವುದು ಸರಿ. ಆದರೆ, ಘಟನೆಯ ಸಮರ್ಥನೆ ತಪ್ಪು.

ಈ ಸುಂದರ ಜನಪದ ಕಥನಗೀತೆಯ ಲಾಲಿತ್ಯದ ವರ್ಣನೆ ಬೇಕು. ಆದರೆ ಅದರ ಆಶಯದ, ಮೌಢ್ಯ ಪ್ರತಿಪಾದನೆಯ ವಿಚಾರ ಮಾಡದೆಯೇ ವಿದ್ಯಾರ್ಥಿಗಳಿಗೆ ಪಠ್ಯವಾಗಿ ನೀಡಿ ಸೂಕ್ತ ಟಿಪ್ಪಣಿ ಒದಗಿಸದೇ ಇರುವುದು ಬೇಜವಾಬ್ದಾರಿಯುತ ನಡವಳಿಕೆ ಅನಿಸುತ್ತದೆ.

ಇಂಥ ಮೂಢನಂಬಿಕೆಯನ್ನು ವೈಭವಿಸಿ ಸಿನಿಮಾ ಮಾಡುವ ಮಂದಿಯೂ ಹೆಣ್ಣಿನ ಮೇಲಿನ ದೌರ್ಜನ್ಯದ ಹುನ್ನಾರವನ್ನು ಮರೆ ಮಾಚುತ್ತಿದ್ದಾರೆ (ಭಾಗೀರಥಿಯ ಸ್ಥಾನದಲ್ಲಿ ತಮ್ಮ ಸ್ವಂತ ಮಗಳಿದ್ದಳೆಂದು ಕಲ್ಪಿಸಿಕೊಂಡರೆ ಹಾಗೆ ವೈಭವೀಕರಿಸಬಲ್ಲರೇ?).

ಅದು ಅವರಿಗೆ ಅಮರ ಪ್ರೇಮದ ಕಥೆಯಾಗಿ ಬಿಂಬಿತವಾಗುತ್ತದೆ. ಕೆರೆಗೆ ಬಲಿ ಕೊಟ್ಟರೆ ನೀರು ಬರುತ್ತದೆ ಎಂಬ ಮೂಢವಾದವನ್ನು ಇವರು ಈಗಲೂ ಒಪ್ಪುತ್ತಾರೆ ಎಂದರೆ ಇವರ ಬೌದ್ಧಿಕ ಮಟ್ಟ ಎಂಥದ್ದಿರಬೇಕು? ಕೆಲವು ವರ್ಷಗಳ ಹಿಂದೆ ಎಸ್. ಮಹೇಂದರ್ ನಿರ್ದೇಶನದ `ಗೌಡ್ರು` ಸಿನಿಮಾದಲ್ಲಿ ಕೂಡ ಗೌಡನ ಹೆಂಡತಿ ಕೆರೆಗೆ ಹಾರವಾಗುವ ಘಟನೆ ಇದೆ.

ನಂತರ ಎಸ್.ಮಹೇಂದರ್ ತಾವೇ `ಕೆರೆಗೆ ಹಾರ` ಹೆಸರನ್ನು ನೋಂದಾಯಿಸಿ ಸಿನಿಮಾ ಮಾಡಬೇಕೆಂದು ಹಂಬಲಿಸಿದ್ದರು. ಅದು ಈಡೇರಲಿಲ್ಲ. ಇಂಥ ಮೂಢನಂಬಿಕೆಗಳ ಕತೆಯನ್ನು ಮಹಿಳೆಯರ ತ್ಯಾಗದ ಹೆಸರಿನಲ್ಲಿ ವೈಭವಿಸಿ ಹೇಳುವ ಅಗತ್ಯ ಇಂದು ಇದೆಯೇ?

2 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಕಥೆಯ ಮೇಲೋಂದು ಕಥೆ, ಚೆನ್ನಾಗಿದೆ ನಿಮ್ಮ ಊಹೆ, ಇದರಿಂದ ತಿಳಿಯುತ್ತದೆ ನೀವು ಕಥೆಗಳನ್ನು ತಪ್ಪಾಗಿ ಅರ್ಥಮಾಡಿಕೊಂಡಿದ್ದೀರಿ ಎಂದು. ನೀವು ಅಂದು ಕೊಂಡ ಹಾಗೆ ಕಥೆಗಳು ಸಮಾಜದ ನಿಜವಾದ ಚಿತ್ರಣಗಳಲ್ಲ, ಅವೆಲ್ಲವೂ ಕಥೆಗಳಷ್ಟೆ, ಅದಕ್ಕಾಗಿಯೂ ಅವುಗಳನ್ನು ಹೇಗೆ ಬೇಕಾದರೂ ಅರ್ಥೈಸುವ ಸಾಹಕ್ಕೆ ಹೋಗಬಹುದು, ನಿಮಗೆ ಶೋಷಣೆಯಂತೆ ಕಂಡರೆ ಮತ್ತೊಬ್ಬರಿಗೆ ಹಾಗೆಯೇ ಕಾಣಬೇಕೆಂದಿಲ್ಲ. ಹಾಗೂ ಕೆರೆಯಲ್ಲಿ ನೀರು ಬಂತೆ, ದಾಯಾದಿ ಕಲಹ ವಿತ್ತೆ ಎಂಬುದೆಲ್ಲಾ ಅವಾಸ್ತವಿಕ. ಅದಕ್ಕೂ ಭಾಗೀರಥಿ ಕತೆಗೂ ಸಂಬಂಧವೇ ಇಲ್ಲ. ಇಲ್ಲದ್ದನ್ನೂ ಕಲ್ಪನೆ ಮಾಡಿ ಕಥೆಯ ಸ್ವರೂಪವನ್ನೂ ಹಾಳುಮಾಡಬೇಡಿ ಎಂಬುದು ನನ್ನ ಭಿನ್ನಹ

ಆಧುನಿಕ ಸ್ತ್ರೀವಾದದ ಚಿಂತನೆಗಳು ನಮ್ಮ ತಲೆಹೊಕ್ಕು ಈ ರೀತಿಯಾದ ತಪ್ಪಾದ ಗ್ರಹಿಕೆಯನ್ನು ಕಟ್ಟಿಕೊಡುತ್ತವೆ. ಸ್ತ್ರೀವಾದಕ್ಕೆ ಶೋಷಣೆ ಎಂಬ ಪರಿಕಲ್ಪನೆ ಬಿಟ್ಟು ಸಂಗತಿಗಳನ್ನು ವಿವರಿಸುವುದು ಅಸಾಧ್ಯವೆಂದೆನಿಸುತ್ತದೆ.

ಶಾಂತಿ ನಾಯಕ ಹೇಳಿದರು...

ಮಾನ್ಯ
ಅನಾಮಧೇಯರೆ.
ಭಾಗೀರತಿಯ ಕತೆ ಅದು ಹುಟ್ಟಿದ ಕಾಲದ ಸಾಮಾಜಿಕ ನಂಬಿಕೆ. ಆಚರಣೆಗಳನ್ನು ತಿಳಿಸುವ ಜನಪದ ಕತೆ. ಇದು ಹಾಡಿನ ರೂಪದಲ್ಲಿ ನಮ್ಮ ನಾಡಿನಲ್ಲಿ ಪ್ರಚಲಿತದಲ್ಲಿದೆ. ಇದರಲ್ಲಿಯ ನರಬಲಿಯನ್ನು ಒಪ್ಪಿಕೊಳ್ಳುವದು ಜಾಣತನವಲ್ಲ. ಬಲಿ ಕೊಟ್ಟ ಕಾರಣದಿಂದ ಕೆರೆಗೆ ನೀರು ಬಂತು ಎಂಬ ಮೌಢ್ಯವನ್ನು ಮಕ್ಕಳಲ್ಲಿ ಬಿತ್ತುವದು ಸರಿಯಲ್ಲ. ಪಾಠದ ಕೊನೆಯಲ್ಲಿ ಈ ಕತೆಯಲ್ಲಿನ ಅಪಮೌಲ್ಯಗೊಂಡ ಅಗಿನ ಸಾಮಾಜಿಕ ಆಚರಣೆಯಲ್ಲಿನ ದೋಷಗಳನ್ನು ಮಕ್ಕಳಿಗೆ ತಿಳಿಸಿ ಹೇಳಬೇಕು. ಅಥವಾ ಪಾಠದಲ್ಲಿಯೇ ಈ ಅಂಶವನ್ನು ಬರೆಯ ಬೇಕು.- ಶಾಂತಿನಾಯಕ