ಬುಧವಾರ, ಜುಲೈ 16, 2014

ಲಂಕೇಶ್ ಮತ್ತು ಡಿ.ಆರ್ ಎಂಬ ಸುಡುಬೆಳಕಿನ ಕಾವು


-ಅರುಣ್ ಜೋಳದಕೂಡ್ಲಿಗಿ
inti-namaskaragalu-cover

 ಕನ್ನಡ ಸಾಂಸ್ಕೃತಿಕ ಲೋಕಕ್ಕೆ ‘ಇಂತಿ ನಮಸ್ಕಾರಗಳು’ ಎಂಬ ವಿಶಿಷ್ಟ ಕೃತಿಯೊಂದು ಪ್ರವೇಶಿಸಿದೆ. ಈ ಕೃತಿಯನ್ನು ಓದುತ್ತಾ ಹೋದಂತೆ, ಲಂಕೇಶ್ ಡಿ.ಆರ್ ಎಂಬ ಸುಡುಬೆಳಕಿನ ಕಾವು ತಾಕುತ್ತದೆ. ಚುರ್‌ಗುಟ್ಟಿಸಿ ಬೆಚ್ಚಗಾಗಿಸುತ್ತದೆ. ನಮ್ಮೊಳಗನ್ನು ಎಚ್ಚರಿಸುತ್ತದೆ. ಮನದಲ್ಲಿ ಓದುತ್ತಿದ್ದಂತೆ, ಎಲ್ಲರಿಗೂ ಕೇಳುವಂತೆ ಅಥವಾ ನಾವೇ ಕೇಳಿಸಿಕೊಂಡು ಸುಖಿಸುವ ಹಾಗೆ ದೊಡ್ಡಧ್ವನಿಯಲ್ಲಿ ಓದುವಂತೆ ಕೃತಿ ಕೆಣಕುತ್ತದೆ. ಆಗ ನಟರಾಜ್ ಹುಳಿಯಾರ್ ಏರಿಳಿವಿನ ಧ್ವನಿಯಲ್ಲಿ ವಿಶಿಷ್ಟ ಮ್ಯಾನರಿಸಮ್ ಬಳಸಿ ಓದುಗರ ಕೇಳುಗರಂತೆ ಭಾವಿಸಿ ಮಾತನಾಡುತ್ತಾರೆ. ಮುದ್ರಿತ ಕೃತಿಯೊಂದು ಆಡಿಯೋ ಬುಕ್‌ನ ಅನುಭವವನ್ನು ತಾಕಿಸುತ್ತದೆ.

 ಕನ್ನಡ ಸಾಹಿತ್ಯ ಲೋಕದಲ್ಲಿ ಲಂಕೇಶ್ ಎನ್ನುವ ಹೆಸರೇ ರೋಮಾಂಚನಗೊಳಿಸುವಂತದ್ದು. ಕನ್ನಡದ ಮನಸ್ಸನ್ನು ತಿದ್ದಿದ, ಸಾಂಸ್ಕೃತಿಕ ಲೋಕದ ಗ್ರಹಿಕೆಗಳನ್ನು ಮೊನಚಾಗಿಸಿದ ಪಿ.ಲಂಕೇಶ್ ಸೂಜಿಗಲ್ಲಿನಂತ ವ್ಯಕ್ತಿತ್ವದವರು. ಅಂತೆಯೇ ಪ್ರಖರ ಬುದ್ದಿಮತ್ತೆಯ ಕಾರಣಕ್ಕೆ ಬೌದ್ಧಿಕ ವಲಯದಲ್ಲಿ ಡಿ.ಆರ್ ಎಂದರೆ ಭಯದ ಅಲೆಗಳನ್ನು ಎಬ್ಬಿಸಬಲ್ಲವರಾಗಿದ್ದವರು. ರಾಷ್ಟ್ರೀಯ ಅಂತರಾಷ್ಟ್ರೀಯ ಬೌದ್ಧಿಕ ವಲಯವನ್ನು ಪ್ರವೇಶಿಸಿದ್ದರು. ಈ ಇಬ್ಬರನ್ನು ಮುಖಾಮುಖಿ ಮಾಡುವ ಮೂಲಕ ಕಿಡಿಗಳನ್ನು ಹೊತ್ತಿಸಿ ಅದರ ಬೆಳಕಲ್ಲಿ ವಿಶ್ವಾತ್ಮಕ ಸಾಹಿತ್ಯ ಮತ್ತು ಸಾಂಸ್ಕೃತಿಯ ಎಳೆಗಳನ್ನು ಹುಡುಕಲೆತ್ನಿಸಿದ ಪ್ರಯತ್ನವೇ ‘ಇಂತಿ ನಮಸ್ಕಾರಗಳು’ ಕೃತಿ.
lankesh
 ಲಂಕೇಶ್ ಸೃಜನಶೀಲ ಬರಹಕ್ಕೆ ಹೊಸಬಗೆಯ ಜೀವಂತಿಕೆ ಕೊಟ್ಟರೆ, ಡಿ.ಆರ್ ಕನ್ನಡದ ಬೌದ್ಧಿಕ ಚಿಂತನೆಯನ್ನು ಬಹು ಎತ್ತರಕ್ಕೆ ಹೊಯ್ದವರು. ಈ ಇಬ್ಬರ ಒಳಹೊಕ್ಕವರಂತೆ ಹುಳಿಯಾರ್ ಸೃಜನಶೀಲತೆ ಮತ್ತು ಬೌದ್ಧಿಕತೆಯ ನಾಡಿ ಹಿಡಿಯಲು ಪ್ರಯತ್ನಿಸಿದಂತಿದೆ. ಈ ಇಬ್ಬರು ಗುರುಗಳ ಸಾಮಿಪ್ಯ ಮತ್ತು ಒಡನಾಟದ ಕಾರಣಕ್ಕೆ ನಮಗೆ ಕಾಣದ ಲಂಕೇಶ್ ಮತ್ತು ಡಿ.ಆರ್ ಹುಳಿಯಾರರಿಗೆ ಕಂಡಿದ್ದಾರೆ. ಹಾಗಾಗಿ ಈ ಇಬ್ಬರ ಸಾಹಿತ್ಯಿಕ, ಸಾಂಸ್ಕೃತಿಕ ಚಹರೆಗಳ ಜತೆ ದಿನಬದುಕಿನ ಪಯಣದ ಮಜಲುಗಳೂ ಸೇರಿ ಹೊಸದೊಂದು ನಿರೂಪಣೆ ಇಲ್ಲಿ ಸಾಧ್ಯವಾಗಿದೆ. ಇದನ್ನು ಹುಳಿಯಾರರೇ ಹೇಳುವಂತೆ ಆಧುನಿಕೋತ್ತರ ಸಾಂಸ್ಕೃತಿಕ ಕಾದಂಬರಿ ಎಂದರೂ ಆಗುತ್ತೆ.

 ಕನ್ನಡದ ಸಂದರ್ಭಕ್ಕೆ ಇದೊಂದು ವಿಶಿಷ್ಟ ಕೃತಿ. ಲಂಕೇಶ್ ಡಿ,ಆರ್ ನಾಗರಾಜ್ ಬಗ್ಗೆ ಬರೆಯುತ್ತಾ ಇಡೀ ಕನ್ನಡ ಸಾಂಸ್ಕೃತಿಕ ಲೋಕದ ಚಹರೆಗಳನ್ನು ವಿಶಿಷ್ಟ ಒಳನೋಟಗಳ ಮೂಲಕ ಹುಳಿಯಾರ್ ಕಾಣಿಸುತ್ತಾರೆ. ವಿಶ್ವದ ಸಾಂಸ್ಕೃತಿಕ ಚಿಂತನೆಯ ಪ್ರಖರ ಎಳೆಗಳನ್ನು ಹಿಡಿದು ಈ ಇಬ್ಬರೂ ಲೇಖಕರ ತಿಳಿವನ್ನು ಒರೆಗಚ್ಚಿದ್ದಾರೆ. ಹಾಗಾಗಿ ಕನ್ನಡ ನೆಲದ ಈ ಇಬ್ಬರು ಲೇಖಕರು ಯಾವ ಯಾವ ನೆಲೆಗಳಿಂದ ಜ್ಞಾನವನ್ನು ಪಡೆದರು, ಬರಹವನ್ನು ಜೀವಂತಗೊಳಿಸಿಕೊಳ್ಳಲು ಎಲ್ಲೆಲ್ಲಿಂದ ಸ್ಪೂರ್ತಿಯನ್ನು ಪಡೆದರು ಎನ್ನುವುದನ್ನು ಗಮನಿಸಿದರೆ ಅಚ್ಚರಿಯಾಗುತ್ತದೆ.
nataraj-huliyar

 ಲಂಕೇಶರ ವಿಮರ್ಶೆ ಬಗ್ಗೆ ಬರೆಯುತ್ತಾ ಹುಳಿಯಾರರು ಪಶ್ಚಿಮದ ಶ್ರೇಷ್ಠ ವಿಮರ್ಶಕನೆಂದು ಗುರುತಿಸುವ ಸ್ಯಾಮುಯಲ್ ಜಾನ್ಸ್‌ನ್ ಪ್ರಭಾವಗಳನ್ನು ಗುರುತಿಸುತ್ತಾರೆ. ಜಾನ್ಸ್‌ನ್ ಲೇಖಕರ ಜೀವನ ವಿವರಗಳನ್ನು ಅವರ ಕೃತಿಗಳ ಓದಿಗೆ ಬಳಸಿ ಪ್ರಖರ ನೈತಿಕತೆಯಲ್ಲಿ ವಿಮರ್ಶೆಯನ್ನು ರೂಪಿಸಿದಾತ. ಹುಳಿಯಾರರ ‘ಇಂತಿ ನಮಸ್ಕಾರಗಳು’  ಕಥಾನಕವನ್ನು ಓದುತ್ತಾ ಹೋದಂತೆ, ಜಾನ್ಸ್‌ನ್ ವಿಮರ್ಶಾ ಮಾದರಿಯ ನಿಯೋ ಕ್ರಿಟಿಸಿಜಮ್ ಎನ್ನುವಂತಿದೆ. ಹಾಗೆ ನೋಡಿದರೆ ಸ್ವತಃ ಹುಳಿಯಾರರು ಕೂಡ ಸ್ಯಾಮುಯಲ್ ಜಾನ್ಸ್‌ನ್ ಪ್ರಭಾವದಿಂದ ಪೂರ್ಣ ಪ್ರಮಾಣದಲ್ಲಿ ಬಿಡಿಸಿಕೊಂಡಂತೆ ಕಾಣುವುದಿಲ್ಲ. 

 ಕೆಲವೆಡೆ ಲಂಕೇಶ್ ಮತ್ತು ಡಿ.ಆರ್ ಬಗೆಗಿನ ಮಾತುಗಳು ಬಲೂನಿನಂತೆ ಹುಬ್ಬುತ್ತಿವೆ ಎನ್ನುವುದು ಅನುಭವಕ್ಕೆ ತಾಕಿದ ಕ್ಷಣವೇ ಮುಂದಿನ ಸಾಲಲ್ಲಿ ಈ ಬಲೂನುಗಳಿಗೆ ಸೂಜಿ ಚುಚ್ಚಿ ಒಡೆಯುವ ಕೆಲಸವನ್ನು ಹುಳಿಯಾರ್ ಮಾಡಿದ್ದಾರೆ. ಹಾಗಾಗಿ ಅಲ್ಲಲ್ಲಿ ಉಳಿದು ಹಾರಬಹುದಾಗಿದ್ದ ಬಣ್ಣ ಬಣ್ಣದ ಬಲೂನುಗಳು ಹೊಡೆದು ಜೋತುಬಿದ್ದು ವಿಷಾದದ ಮುಖವೊತ್ತು ಓದುಗರನ್ನು ಎದುರಾಗುತ್ತವೆ. ಹೀಗೆ ಬಲೂನು ಉಬ್ಬಿಸಿ ಸೂಜಿಚುಚ್ಚಿ ಮಜನೋಡುವ ಈ ಗುಣ ಒಟ್ಟಾರೆ ಹುಳಿಯಾರರ ಮಾತು ಮತ್ತು ಬರಹದ ಲಕ್ಷಣವೂ ಹೌದು.

 ಈ ಕೃತಿಯ ಶೀರ್ಷಿಕೆಯಲ್ಲಿ ಮೇಲು ನೋಟಕ್ಕೆ ಲಂಕೇಶ್ ಮತ್ತು ಡಿ.ಆರ್ ಕುರಿತ ಸೃಜನಶೀಲ ಕಥಾನಕ ಎಂದಿದೆ. ಈ ಕೃತಿಯನ್ನು ಓದಿ ಮುಗಿಸಿದಾಗ ಈ ಇಬ್ಬರನ್ನು ಹೊರತುಪಡಿಸಿದಂತೆ ಕನ್ನಡ ವಿಮರ್ಶೆಯ ಮತ್ತೊಬ್ಬರ ವ್ಯಕ್ತಿತ್ವ ಮತ್ತು ಚಿಂತನೆಯ ಎಳೆಗಳು ವಿಶಿಷ್ಟವಾಗಿ ಅನಾವರಣಗೊಳ್ಳುತ್ತದೆ. ಅವರು ಲಂಕೇಶ್ ಡಿ.ಆರ್ ಕನ್ನಡಕ್ಕೆ ದಕ್ಕಿದ, ಮತ್ತು ಕನ್ನಡದ ಕಸುವನ್ನು ಹೆಚ್ಚಿಸಿದ್ದನ್ನು ತೀಕ್ಷ್ಣವಾಗಿ ಕಟ್ಟಿಕೊಡುತ್ತಾರೆ. ಈ ಇಬ್ಬರ ಮನುಷ್ಯಸಹಜ ಕೀಳಿರಿಮೆಯನ್ನು, ಅಸೂಹೆಯನ್ನು, ಪ್ರೀತಿ ಜೀವನೋತ್ಸಾಹವನ್ನು, ತಹತಹವನ್ನು ವಿವರಿಸುತ್ತಲೇ ಅವರನ್ನು ಬೆಸೆಯುವ ಬೇರ್ಪಡುವ ಸಂಗತಿಗಳನ್ನು ಸಮತೋಲನದಲ್ಲಿ ತೋರಿಸುತ್ತಾರೆ. ಈ ಇಬ್ಬರ ಒಡನಾಟದಲ್ಲಿಯೇ ತನ್ನ ತಿಳಿವನ್ನು ಸದಾ ಮೊನಚುಗೊಳಿಸಿಕೊಳ್ಳುತ್ತಲೇ, ಇವರನ್ನು ಅರಿಯಲು ಅಪಾರ ಓದಿಗೆ ತೆರೆದುಕೊಳ್ಳುತ್ತಾರೆ. ಈ ಅರಿವಿನ ಪಯಣದಲ್ಲಿ ತಾವೂಬ್ಬ ಕನ್ನಡದ ಸೂಕ್ಷ್ಮಜ್ಞ, ನಿಷ್ಠುರ ವಿಮರ್ಶಕರಾಗಿ ರೂಪುಗೊಳ್ಳುತ್ತಾರೆ. ಅವರು ಮತ್ಯಾರು ಅಲ್ಲ ಈ ಕೃತಿಯ ಲೇಖಕರು.

 ಲಂಕೇಶ್ ಮತ್ತು ಡಿ.ಆರ್ ಮೂಲಕ ಪರೀಕ್ಷಿಸುವ ಕನ್ನಡದ ಸಾಂಸ್ಕೃತಿಕ ಸಾಹಿತ್ಯಿಕ ಲೋಕವು ಹುಳಿಯಾರರ ಆಯ್ಕೆಯ ಓದಿನ ಮಿತಿಯಲ್ಲಿದೆ. ಕನ್ನಡದ ಓದಿಗಿಂತ ಕನ್ನಡೇತರ ಓದಿನ ವ್ಯಾಪ್ತಿ ಹೆಚ್ಚಿರುವಂತೆ ಕಾಣುವುದರಿಂದ, ಕನ್ನಡ ಸಾಹಿತ್ಯದ ಓದಿನ ಚೌಕಟ್ಟಿನಲ್ಲಿ ವಿವರಿಸುವ ಭಾಗಗಳಿಗಿಂತ, ವಿಶ್ವ ಸಾಹಿತ್ಯದ ನೆಲೆಯಲ್ಲಿ ವಿಶ್ಲೇಷಿಸುವ ಭಾಗಗಳು ಹೆಚ್ಚು ಆಳವಾಗಿವೆ ಅನ್ನಿಸುತ್ತದೆ. ಹಾಗಾಗಿ ಹುಳಿಯಾರರ ಕನ್ನಡ ಸಂದರ್ಭದ ವಿಶ್ಲೇಷಣೆಯ ಮಿತಿಯಲ್ಲೆ ಲಂಕೇಶ್ ಮತ್ತು ಡಿ.ಆರ್ ಅವರನ್ನು ಪರಿಭಾವಿಸುವ ಅಗತ್ಯವಿಲ್ಲ. ಅದರಾಚೆಯೂ ಹೊರಚಾಚಲು ಸಾಧ್ಯವಿದೆ. ಅಚ್ಚರಿಯೆಂದರೆ ಇಂತಹ ಹೊರಚಾಚುವಿಕೆಯ ದಾರಿಗಳನ್ನೂ ಹುಳಿಯಾರರೆ ಸೂಕ್ಷ್ಮವಾಗಿ ಕಾಣಿಸುತ್ತಾರೆ. ಶಂಬಾ ಅವರ ಸಾಂಸ್ಕೃತಿಕ ಅಧ್ಯಯನದ ಕಣ್ಣೋಟದಿಂದ ವಿಶ್ಲೇಷಿಸಲು ತೊಡಗಿದರೆ ಡಿ.ಆರ್ ಅವರ ಅಧ್ಯಯನಗಳಿಗೆ ಮತ್ತೊಂದು ನೆಲೆ ಒದಗುತ್ತದೆ.
nataraj-huliyar

 ಈ ಕೃತಿಯಿಂದಾಗಿ ಕಟುವಿಮರ್ಶೆ ವಾಗ್ವಾದಗಳಿಲ್ಲದೆ, ಕುಟುಕು ವ್ಯಂಗದ ಮೊನಚಿಲ್ಲದೆ, ಪ್ರಖರ ವೈಚಾರಿಕ ಒಳನೋಟಗಳಿಲ್ಲದೆ ಜಡಗೊಂಡಿರುವ ಕನ್ನಡ ವಿಮರ್ಶೆಯ ಸಧ್ಯದ ಸ್ಥಿತಿ ಅರಿವಿಗೆ ಬರುತ್ತದೆ. ಭಿನ್ನಾಭಿಪ್ರಾಯಗಳನ್ನು ಸಹಜವಾಗಿ ಸ್ವೀಕರಿಸುವ ಮನಸ್ಥಿತಿಯಿರದ ಬಹುಪಾಲು ಸಾಹಿತಿಗಳಿರುವ ಪ್ರಸ್ತುತ ಕಾಲಘಟ್ಟದಲ್ಲಿ ಈ ಕೃತಿ ಲೇಖಕರಲ್ಲಿ ಆತ್ಮವಿಮರ್ಶೆಯನ್ನು ಹುಟ್ಟಿಸಬೇಕಾಗಿದೆ. ಹೊಗಳಿಕೆಯಲ್ಲಿಯೆ ಸುಖಿಸುವ ಭಟ್ಟಂಗಿಗಳನ್ನು ಸಲಹಿಕೊಂಡಿರುವ ಸಧ್ಯದ ಬಹುಪಾಲು ಸಾಹಿತಿಗಳ ವಲಯವು ತಮ್ಮ ನಡೆಯನ್ನು ಪರೀಕ್ಷಿಸಿಕೊಳ್ಳಲು ಈ ಕೃತಿ ಒತ್ತಾಯಿಸುತ್ತದೆ.  

 ಚೂರುಪಾರು ಬರೆದು, ಮಹಾನ್ ಸಾಧನೆಗೈದೆವೆಂದು ತಮ್ಮ ಬಗೆಗಿನ ವಿಮರ್ಶೆಗಳನ್ನು ಬರೆಯಿಸಿಕೊಳ್ಳುವ, ಸೆಮಿನಾರುಗಳನ್ನು ಆಯೋಜಿಸಿಕೊಳ್ಳುವ ಮತ್ತು ಅಹಮ್ಮಿನಿಂದ ಪೇಸ್‌ಬುಕ್ಕಿನ ಲೈಕು ಕಾಮೆಂಟುಗಳಲ್ಲಿ ಹೀರೋಯಿಸಮ್ ಅನುಭವಿಸುವ ಕೆಲವು ಯುವ ಬರಹಗಾರ/ರ್ತಿಯರಂತೂ ಖಡ್ಡಾಯವಾಗಿ ಈ ಕೃತಿಯನ್ನು ಓದಬೇಕು. ಈ ಅರ್ಥದಲ್ಲಿ ‘ಇಂತಿ ನಮಸ್ಕಾರಗಳು’ ಕೃತಿ ರೂಪದಲ್ಲಿ ನಟರಾಜ್ ಹುಳಿಯಾರ್ ಈ ಕಾಲದ ಸಾಹಿತ್ಯ ವಲಯಕ್ಕೆ ಹರಡಿಕೊಂಡಿರುವ ಸಾಂಕ್ರಾಮಿಕ ರೋಗಕ್ಕೆ ಮುಲಾಮು ಹುಡುಕಿದಂತೆ ಬಾಸವಾಗುತ್ತಿದೆ.
inti-namaskaragalu

ಇಂತಿ ನಮಸ್ಕಾರಗಳು
ಪಿ.ಲಂಕೇಶ್ ಹಾಗೂ ಡಿ.ಆರ್.ನಾಗರಾಜ್
ಕುರಿತ ಸೃಜನಶೀಲ ಕಥಾನಕ
ನಟರಾಜ ಹುಳಿಯಾರ್
ಪು:೨೩೬, ೧೮೦/-,೨೦೧೪
ಪಲ್ಲವ ಪ್ರಕಾಶನ, ಚನ್ನಪಟ್ಟಣ.
ಸಂಪರ್ಕ: ೯೪೮೦೩೫೩೫೦೭


ಮುಂಬೈ ನಡೆಗೆ,ಕರ್ನಾಟಕ ಜಾನಪದ ಅಕಾಡೆಮಿ ನಡಿಗೆ..

ಮುಂಬೈನಲ್ಲಿ ಕರ್ನಾಟಕ ಜನಪದ ಕಲೆಗಳ ಝಲಖ್ ತೋರಲು ಸಿದ್ಧತೆ ನಡೆದಿದೆ.

ಮಂಗಳವಾರ, ಜುಲೈ 15, 2014

ಕೊರಗ ಸಮುದಾಯದ ಚಿತ್ರಗಳು ಭಾಗ-3


Koragerna Alipu Oripu
23 hours ago · Edited





ಕೊರಗರ ಶ್ರೀಮಂತಿಕೆ!

ವೈವಾಹಿಕ ಸಂಬಂಧಗಳು ಬಂದಾಗ, ಯಾವುದೇ ಮುಂದುವರಿಯುತ್ತಿರುವ ಅಥವಾ ಮುಂದುವರಿದಿರುವ ಜನಾಂಗಗಳು - 'ವರದಕ್ಷಿಣೆ'ಯ (ತುಳುವಿನಲ್ಲಿ 'ಬದಿ' ಎನ್ನುತ್ತಾರೆ.) ವಿಚಾರವನ್ನು ತಮ್ಮ ಹಮ್ಮು ಬಿಮ್ಮಗೆ ಸರಿಯಾಗಿಯೇ ಪ್ರತಿಪಾದಿಸುತ್ತದೆ, ಅದನ್ನು ತಮ್ಮ ಗತ್ತು ಗೈರತ್ತಿನ ಸಂಕೇತವಾಗಿ ತೋರ್ಪಡಿಸುತ್ತದೆ. ಆದರೆ, ಸಂಬಂಧದಲ್ಲಿ ಅತೀ ಶ್ರೀಮಂತಿಕೆಯನ್ನೇ ಮೇಲೈಸಿಕೊಂಡಿರುವ, ಸಾಮಾಜಿಕವಾಗಿ ಅತೀ ಹಿಂದುಳಿದಿರುವ - ಈ ಕೊರಗ ಸಮುದಾಯ ವೈವಾಹಿಕ ವಿಚಾರದಲ್ಲಿಯೂ, 'ಬದಿ'ಯನ್ನು ಬದಿಗಿರಿಸಿ ತನ್ನ ಹಿರಿಮೆಯನ್ನು ಇತರ ಶ್ರೀಮಂತ ಸಮುದಾಯ ನಾಚುವಂತೆ ಮೆರೆಯುತ್ತಿದೆ. (ಕೊರಗ ಸಮುದಾಯದಲ್ಲಿ ವರದಕ್ಷಿಣೆಯ ಪ್ರಸ್ತಾಪವೇ ಬರುವುದಿಲ್ಲ!) ಆಶ್ಚರ್ಯವಾದರೂ ನಿಜ!
- ಹೃದಯ

ಅಂದು ಪರಾವಲಂಬಿ ಕುಡುಕ, ಇಂದು ಸ್ವಾವಲಂಬಿ ಕೃಷಿಕ!

ಕಂಠಪೂರ್ತಿ ಕುಡಿದು ತೂರಾಡುತ್ತಾ, ಇಹ ಪರದ ಪರಿವೆಯೇ ಇಲ್ಲದಂತ್ತಿದ್ದ, ಊರಿಗೆಲ್ಲ 'ಗೇಲಿಯ ವಸ್ತು'ವಾಗಿದ್ದ - ಒಬ್ಬ ಅನಕ್ಷರಸ್ಥ ಕೊರಗ ಬಂಧು, ಬರೀ ಒಂದೇ ಒಂದು ದಿನದ ಆಂದೋಲನದ ಮೂಲಕ ಬದುಕನ್ನು ಸ್ವಯಂಪರಿವರ್ತಿಸಿಕೊಂಡು ಆದರ್ಶ ಕೃಷಿಕನಾಗಿ ಬಾಳುತ್ತಿರುವ ಸ್ವಾಭಿಮಾನಿ/ ಸ್ವಾವಲಂಬಿ ಕೊರಗ ಬಂಧುವೊಬ್ಬರ ಯಶಸ್ವಿ ಜೀವನ ಚಿತ್ರಣವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ...

ಪಿತ್ರಾರ್ಜಿತವಾಗಿ ಸಿಕ್ಕ ಬರೇ 64 ಸೆಂಟ್ಸ್ ಜಾಗದಲ್ಲಿ 110 ಮಲ್ಲಿಗೆ ಗಿಡ, 150 ಕರಿಮೆಣಸು ಬಳ್ಳಿ, 43 ಫಲಭರಿತ ತೆಂಗಿನ ಮರ, ಅಡಿಕೆ, ಬಾಳೆ, ಪಪ್ಪಾಯಿ, ಅನನಾಸು, ಕಾಫಿಗಿಡ, ನೆಲಕಡಲೆ, ಚುಕ್ಕು, ಮಾವು... ಅಬ್ಬಬ್ಬಾ... ಜಮೀನು ತುಂಬಾ ಹಸಿರು ಹಸಿರಾಗಿರುವ ಮರ -ಗಿಡ - ಬಳ್ಳಿ - ತೋಟಗಾರಿಕಾ ಬೆಳೆಗಳು...
ತೋಟಕ್ಕೆ ನೀರು ಹಾಯಿಸಿಕೊಳ್ಳಲು ಎರಡು ಬಾವಿಗಳು, ಎರಡು ಪಂಪ್ ಸೆಟ್ಗಳಿವೆ. ಮನೆ ಅಡುಗೆಗೆ ಗೋಬರ್ ಗ್ಯಾಸ್ ಬಳಸುತ್ತಿದ್ದಾರೆ. ಜೆರ್ಸಿ ಮತ್ತು ದೇಸಿ ತಳಿಯ ದನಗಳಿದ್ದು, ಹತ್ತಿರದ ಡೈರಿಗೆ ದಿನಂಪ್ರತಿ 7 ಲೀಟರ್ ಹಾಲು ಸರಬರಾಜು ಮಾಡುತ್ತಿದ್ದಾರೆ.

ಜಮೀನಿನಲ್ಲಿಯೇ ದುಡಿದು ಬಂದ ಹಣವನ್ನು ಮನೆ ಖರ್ಚಿಗೆ ಬಳಸಿ ಉಳಿದ ಒಂದಿಷ್ಟು ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದಾರೆ. ನಾಲ್ಕು ಎಲೈಸಿ ಪಾಲಿಸಿಗಳಿಗೆ ತಿಂಗಳು ತಿಂಗಳು ಹಣ ಪೊರೈಸುತ್ತಿದ್ದಾರೆ. ಪತ್ನಿ ಮಕ್ಕಳಿಗೆ ಚಿನ್ನ ಮಾಡಿಸಿದ್ದಾರೆ. ಹೊಸ ಮನೆ ನಿರ್ಮಿಸಿದ್ದಾರೆ. ಬರೇ ಮಲ್ಲಿಗೆ ಕೃಷಿಯಿಂದಲೇ ವಾರ್ಷಿಕ 70,000/- ಆದಾಯ ಗಳಿಸುತ್ತಿದ್ದಾರೆ! ಇದೆಲ್ಲ ಸಾಧ್ಯವಾಗಿದ್ದು ಬರೇ ಇಪ್ಪತ್ತು ವರ್ಷದ ತನ್ನ ಪರಿವರ್ತಿತ ಬದುಕಿನಲ್ಲಿ!


ಇಪ್ಪತ್ತು ವರ್ಷಗಳ ಕೆಳಗೆ ಕುಡಿತವನ್ನೇ ಬದುಕಾಗಿಸಿಕೊಂಡಿದ್ದ, ಹೆಂಡತಿ ಮಕ್ಕಳಿಗೆ ಹೊಡೆಯುತ್ತಿದ್ದ, ಎಲ್ಲರಿಂದಲೂ ತಿರಸ್ಕ್ರತ ಭಾವನೆಗೆ ಒಳಗಾಗಿದ್ದ ಒಬ್ಬ ಆದಿವಾಸಿ ಕೊರಗ ಬಂಧುವಿನ ಬಾಳಿನಲ್ಲಿ ಬದಲಾವಣೆಗೆ ಕಾರಣವಾದದ್ದು - ಸಾಕ್ಷರತಾ ಆಂದೋಲನ.
'ಅರ್ಧ ಆಯಸ್ಸು ಮುಗಿದ ಮೇಲೆ ಇನ್ಯಾಕೆ ಅಕ್ಷರದ ನೆಂಟಸ್ಥಿಕೆ..?' ಎಂದು ಮೊದಮೊದಲು ಸಾಕ್ಷರತಾ ಆಂದೋಲನದ ಪ್ರೇರಕಿಯರಿಗೆ ಸಾಬೂಬು ನೀಡಿ ಜಾರಿಕೊಳ್ಳುತ್ತಿದ್ದಾತನಿಗೆ ಕಾರ್ಯಕರ್ತೆಯರ ಮತ್ತು ಹೆಂಡತಿಯ ನಿರಂತರ ಒತ್ತಡಕ್ಕೆ ಮಣಿದು ಕೊನೆಗೂ ಅರೆಮನಸಿನಲ್ಲಿ ಆಸಕ್ತಿ ನೀಡಿದರು. 1994ರಲ್ಲಿ ಮಂಗಳೂರು ನಗರದಲ್ಲಿ ಜರಗಿದ ನವಸಾಕ್ಷರರ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡ ಆ ಕೊರಗ ಬಂಧು, ಆ ಒಂದು ದಿನದ ಕ್ರಾಂತಿ ಚಳುವಳಿ, ಬದುಕಿನ ದಿಕ್ಕನ್ನೇ ಬದಲಿಸುವ ಕ್ರಾಂತಿಗೆ ನಾಂದಿಯಾಯಿತು. 'ಶಿಕ್ಷಣವೇ ಶಕ್ತಿ', 'ಕೂಡಿ ಕಲಿಯೋಣ ಒಂದಾಗಿ ಬಾಳೋಣ', 'ಹೆಂಡ ಸಾರಾಯಿ ಸಹವಾಸ ಹೆಂಡತಿ ಮಕ್ಕಳು ಉಪವಾಸ' ಎಂಬ ಕ್ರಾಂತಿ ಘೋಷಣೆಗಳು ಅವರಿಗೆ ಕುಡುಕನಾಗಿದ್ದರೂ ನವ ಹುರುಪನ್ನು ತಂದಿತು. ಮನೆಗೆ ವಾಪಾಸಾದ ಮೇಲೂ ಆ ಕ್ರಾಂತಿ ಘೋಷಣೆಗಳೇ ಮನಸ್ಸನ್ನು ಕಾಡಲು ಆರಂಭಿಸಿತು. ಅದೇ ಕೊನೆ, ಮತ್ತೆಂದೂ ಅವರು ಕುಡಿತಕ್ಕೆ ದಾಸರಾಗಲೇ ಇಲ್ಲ! ಅಲ್ಲಿಂದಲೇ ಆದರ್ಶದ ಬದುಕು ಆರಂಭವಾದದ್ದು, ಅವತ್ತಿಂದಲೇ ಕೃಷಿಕರಾದದ್ದು! ಅವರೇ, ನಮ್ಮ ಆದಿವಾಸಿ ಕೊರಗ ಜನಾಂಗದ - ಮುಂಗುಲಿ ಕೊರಗ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಜೋಡುಕಟ್ಟೆಯಲ್ಲಿ ಬರಡು ಭೂಮಿಯನ್ನು ಹಸಿರಾಗಿಸಿ, ಬರಡು ಬದುಕನ್ನು ಹಸನಾಗಿಸಿ, ಕೊರಗ ಜನಾಂಗಕ್ಕೆ ಆದರ್ಶಪ್ರಾಯವಾದವರು! ಕುಡಿತ ಎಂಬ ಮಾರಿಯಿಂದ ಬೇರ್ಪಟ್ಟು ಕೃಷಿಕ ಎಂಬ ಅಲಂಕಾರಿತ ಪಟ್ಟದಲ್ಲಿ ಶೋಭಿಸುತ್ತಿರುವ ಮುಂಗುಲಿಯವರಿಗೆ ಪ್ರೀತಿಯ ಅಭಿನಂಧನೆಗಳು.
- ಹೃದಯ
ಕೊರಗ ಸಮುದಾಯದಲ್ಲಿ ಮಹಿಳಾ ಹಿತರಕ್ಷಣೆ

-ಸುನೀತಾ ಬಂಗೇರ, ಬೆಳುವಾಯಿ
ಬದಲಾದ ಕಾಲಘಟ್ಟದಲ್ಲಿ, ಕೊರಗ ಮಹಿಳೆ ‘ಹಿಂದಿನ’ವರಿಗಿಂತ - ಈಗ ಹೆಚ್ಚು ಅದೃಷ್ಟಶಾಲಿ ಎನ್ನಬಹುದು. ಹಿಂದಿನಿಂದಲೂ ಕೊರಗ ಮಹಿಳೆಯ ಕುರಿತಾಗಿ, ಸಮಾಜದಲ್ಲಿರುವ - ಗೌರವಯುತವಾದ ಮಾತೃ ಭಾವನೆ ಮತ್ತು ಏಕತೆಯ ಪರಿಕಲ್ಪನೆ ಇತರ ಎಲ್ಲಾ ಆದಿವಾಸಿ (ಗಿರಿಜನ) ಮತ್ತು ಪ್ರಭಾವಶಾಲಿ ಸಮುದಾಯಕ್ಕಿಂತಲೂ ಕೊರಗ ಸಮುದಾಯದವರಲ್ಲಿ ಹೆಚ್ಚು ಪ್ರಗತಿಪರವಾಗಿದೆ. ಆದಿಕಾಲದ ಕೊರಗ ಮಹಿಳೆಯರು ತಮ್ಮ ದೇಹವನ್ನು ಸೊಪ್ಪು ಮತ್ತು ಅಲಂಕೃತ ಮಣಿಸರಗಳಿಂದ ಮುಚ್ಚಿಕೊಳ್ಳುತ್ತಿದ್ದರು. ಈಗ ಎಲ್ಲವೂ ಅನುಕೂಲಕರವಾಗಿ ಮಾರ್ಪಾಟಾಗಿದೆ. ಹಾಗಾಗಿಯೇ ಕೊರಗ ಮಹಿಳೆಯರು ‘ಹಿಂದಿನವರಿಗಿಂತ’ ಹೆಚ್ಚು ಅದೃಷ್ಠಶಾಲಿ ಎಂದಿರುವುದು.


ಕೊರಗ ಸಮುದಾಯವನ್ನು ಹೊರತು ಪದಿಸಿದರೆ ಒಟ್ಟು ಸಮಾಜದಲ್ಲಿ - ಮಹಿಳೆಯರ ಕುರಿತಾಗಿ ‘ತಾರತಮ್ಯ’ ಕಂಡು ಬರುತ್ತದೆ. ಮುಖ್ಯವಾಗಿ- ಹೆಣ್ಣು ಭ್ರೂಣ ಹತ್ಯೆ... ಶ್ರೀಮಂತ ಕುಟುಂಬಗಳು ತಮ್ಮ ಆಸ್ತಿ ಪಾಸ್ತಿ ಪರರ ಪಾಲಾಗಬಹುದೆಂಬ ಭೀತಿಯಲ್ಲಿ ಮತ್ತು ಗಂಡು ಮಗುವಾದರೆ ಆಸ್ತಿ ತಮ್ಮಲ್ಲೇ ಉಳಿಯಬಹುದೆಂಬ ದುರಾಲೋಚನೆಯಿಂದಾಗಿ- ಹೆಣ್ಣು ಭ್ರೂಣ ಹತ್ಯೆಗೆ ಮುಂದಾಗುತ್ತಾರೆ ಎಂಬುದು ವಾಸ್ತವವಾದರೆ, ಕೊರಗ ಸಮುದಾಯದಲ್ಲಿ ಇಂತಹ ಪ್ರಕರಣಗಳೇ ಕಂಡು ಬಂದಿಲ್ಲ. ಇದು ಕೊರಗರ ಹೃದಯ ಶ್ರಿಮಂತಿಕೆ. ಇದಕ್ಕೆ ಕೊರಗ ಸಮುದಾಯದ ಆಧರಣೀಯ ದೈವ ‘ಅಪ್ಪ- ಬೈಕಾಡ್ತಿ ’(ಕೊರಗ ಸಮುದಾಯದ ಕುಲದೈವ - ಕೊರಗ ತನಿಯನ ತಾಯಿ)ಯ ಭಯ - ಭಕ್ತಿ ಕಾರಣವಾಗಿರಬಹುದು.

ಇಂದಿನ ಔದ್ಯೋಗಿಕ ರಂಗ, ಸಂಘಟನೆ, ಶಿಕ್ಷಣ, ಆಧುನಿಕತೆ, ಸಮಾಜದ ಬದಲಾದ ದೃಷ್ಟಿಕೋನಗಳು ಹೆಚ್ಚು ಪ್ರಗತಿಪರವಾಗಿದೆ. ಒಟ್ಟು ಸಮಾಜ ಕೊರಗ ಸಮುದಾಯದಲ್ಲಿ ಮಹಿಳಾ ಹಿತಚಿಂತನೆಯ ದೃಷ್ಟಿಕೋನವನ್ನು ಅನುಸರಿಸಿದರೆ, ಎಲ್ಲಾ ಸಮುದಾಯದ ಮಹಿಳೆಯರೂ ಸುರಕ್ಷಿತರಾಗಬಹುದು.

ಸೋಮವಾರ, ಜುಲೈ 14, 2014

ಜಾನಪದದಲ್ಲೇ ಉಗಮಿಸಿರುವ ಫೆಮಿನಿಸಂ!


-ಸಂಯುಕ್ತ ಪುಲಿಗಲ್
ಸೌಜನ್ಯ: ಅವಧಿ
ಪುಸ್ತಕದ ಅಂಗಡಿಗೆ ನುಗ್ಗಿ ಇರುವ ಪುಸ್ತಕಗಳನ್ನು ನೋಡುತ್ತಾ, ಬರುವ ಪುಸ್ತಕಗಳಿಗೆ ಕಾಯುತ್ತಾ ಇರುವುದು ಒಂಥರಾ ಮಜವಾದ ಹಾಬೀ! ಹೀಗೆ ಒಮ್ಮೆ ಗಾಂಧೀ ಬಜಾರಿನ ಪುಸ್ತಕ ಮಳಿಗೆಯೊಂದರಲ್ಲಿ ನುಗ್ಗಿದ ನನಗೆ ಅಚಾನಕ್ ಆಗಿ ಕಂಡದ್ದು, ಜೀನಹಳ್ಳಿ ಸಿದ್ಧಲಿಂಗಪ್ಪನವರು ಬರೆದ “ಸ್ತ್ರೀವಾದಿ ಜನಪದ ಕಥೆಗಳು” ಎಂಬ ಅಮೋಘವಾದ ಪುಸ್ತಕ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಬಹುಮಾನಿತ ಕೃತಿಯಾದ ಈ ಪುಸ್ತಕ ಸುಮಾರು ಹದಿನೇಳು ಜನಪದೀಯ ಕಥೆಗಳನ್ನು ಹೊಂದಿದೆ. ಎಲ್ಲಾ ಕಥೆಗಳೂ ಜಾನಪದ ಸಂಸ್ಕೃತಿಯಷ್ಟೇ ಅಲ್ಲದೆ ಭಾಷೆಯ ಸೊಗಡನ್ನೂ ಮೈದುಂಬಿಕೊಂಡಿರುವುದು ಈ ಪುಸ್ತಕದ ಬಿಸಿರೊಟ್ಟಿಗಿರುವ ತುಪ್ಪ. ಈ ಪುಸ್ತಕ ಓದಿದಾಗ ಅರಿವಿಗೆ ನಾಟಿದ ಕೆಲಕಥೆಗಳು ಅದರಿಂದ ನನಗನಿಸಿದ ಒಂದಷ್ಟು ವಿಚಾರಗಳು ನಿಮ್ಮ ಮುಂದೆ.
ಜನಪದ ಸಾಹಿತ್ಯ ನಮ್ಮ ಚರಿತ್ರೆಯನ್ನು, ನಮ್ಮ ಪೂರ್ವಜರ ಸಂಸ್ಕೃತಿ ಕಥಾನಕವನ್ನೂ ಬಿಂಬಿಸುತ್ತದೆ. ಹಾಗೆಂದ ಮಾತ್ರಕ್ಕೆ ಜನಪದ ಎಂದರೆ ಒಂದು ಹಿಸ್ಟರಿಯಾಗಲೀ, ಪ್ರಾಚೀನ ಆಂಟೀಕ್ ವಸ್ತು ವಿಷಯವಂತೂ ಅಲ್ಲ. ಯಾವುದು ಅತ್ಯಂತ ಸಹಜವೋ, ಯಾವುದು ಜನಜನಿತವೋ ಅದು ಜನಪದ. ಜನರ ಸಂಸ್ಕೃತಿಗೆ, ನೈಜತೆಗೆ ಹತ್ತಿರವಾದದ್ದೆಲ್ಲವೂ ಜನಪದವೇ. ಇಂತಹ ಜನಪದ ಸಾಹಿತ್ಯ ಪ್ರತಿ ಪ್ರದೇಶದ, ಸಂಸ್ಕೃತಿಯ ಮತ್ತು ಜನಾಂಗದ ಯಾವ ಸ್ನೋ, ಪೌಡರ್ ಹಚ್ಚಿರದ ಒಂದು ಹಸಿ ಘಮಲನ್ನು ಹೊಂದಿರುತ್ತದೆ. ಅದೇ ನೈಸರ್ಗಿಕ ಆಕರ್ಷಣೆ ಆ ಪುಸ್ತಕದ ಜಾನಪದ ಕಥೆಗಳಲ್ಲಿ ಅಡಗಿವೆ. ಅದರಲ್ಲಿ ಕಂಡು ಬರುವ ಪ್ರತಿಯೊಂದು ಕಥೆಯೂ, ಕಥೆಯಾಗಿ ಕಾಣದೆ ಒಂದು ನೈಜ ಉಸಿರಿನ ಹಾಡಾಗಿ ಬಿತ್ತರಗೊಂಡಿವೆ. ಪ್ರತಿ ಕಥೆಯಲ್ಲೂ ಕಂಡು ಬರುವ ನೋವು-ದುಗುಡಗಳು, ಶೋಷಣೆ-ಮೋಸಗಳು, ಅವಮಾನ-ಬಿಗುಮಾನಗಳು ನಮ್ಮ ದಿನನಿತ್ಯದ ಜೀವನಕ್ಕೆ ಒಂದು ಕನ್ನಡಿ ಹಿಡಿದಂತಿವೆ. ಈ ಪುಸ್ತಕದಲ್ಲಿ ನನಗೆ ಮೆಚ್ಚುಗೆಯಾದ ಕೆಲ ಕಥೆಗಳನ್ನು ನೋಡೋಣ.
ಕಥೆ ಕೇಳೆ ಗುಬಲಾಡಿ: ಒಂದೂರಿನಲ್ಲಿ ಗಂಡ ಹೆಂಡಿರಿಬ್ಬರು. ಅವರಿಗೆ ಸಿಹಿ ಮಾಡಿ ತಿನ್ನುವ ಚಪಲವಾಗುತ್ತದೆ. ಗಂಡನಿಗೆ ಬೇಕಾದ ಪದಾರ್ಥಗಳನ್ನು ತರಲು ಹೆಂಡತಿ ಹೇಳಿದಾಗ, ತಂದುಕೊಟ್ಟು ಗಂಡ ಹೊಲಕ್ಕೆ ಹೋಗುತ್ತಾನೆ. ಆತ ಮರಳುವಷ್ಟರಲ್ಲಿ ಬೇಕಾದ ಸಿಹಿ ತಿಂಡಿಯೆಲ್ಲಾ ಮಾಡಿಟ್ಟು ಕಾಯುತ್ತಾಳೆ. ಕೊನೆಗೂ ಆತ ಬಂದ. ಬಂದು ನಿಲ್ಲುತ್ತಲೇ ಹೆಂಡತಿ ಕಾಲು ತೊಳೆಯಲು ನೀರು ಕೊಟ್ಟಿಲ್ಲ ಎಂದು ಒಂದು ದೊಡ್ಡ ಕೋಲಿನಿಂದ ಆಕೆಯನ್ನು ಹೊಡೆಯುತ್ತಾನೆ. ಅಳುತ್ತಾ ಕೂತ ಹೆಣ್ಣು ಮಗಳನ್ನು ಲೆಕ್ಕಿಸದೆ ಆತ ಹೋಗಿ ತಿಂದುಂಡು ಮಲಗುತ್ತಾನೆ. ಅವನು ತಿಂದು ಮಿಕ್ಕಿದ ಕೊಂಚ ತಿಂಡಿ ನೆಲದ ಮೇಲೆ ಬಿದ್ದಿರುತ್ತದೆ. ಅದನ್ನು ಆಕೆ ತಿಂದು ತಾನೂ ಹೋಗಿ ಮಲಗುತ್ತಾಳೆ. ಬೆಳಗ್ಗೆಯಾಗುವಷ್ಟರಲ್ಲಿ ಅವರ ಜಗಳ ರಾಜಿಯಾಗಿ, ಹೆಂಡತಿ ಗಂಡನಿಗೆ ಒಂದು ಕಥೆ ಹೇಳಲು ಕೇಳುತ್ತಾಳೆ. ಆಗ ಗಂಡ ಹೇಳುವ ಕಥೆ ಹೀಗಿದೆ:
“ಕತ್ತಲ ಮನೆಗೆ ಕಾಲಾಡಿ
ನೆಲ್ಲಿ ಮ್ಯಾಲೆ ಕೈಯಾಡಿ
ಮುಸುರೆ ಬಾನೆಗೆ ಗರಬಾಡಿ
ಕಥೆ ಕೇಳೇ ಗುಬಲಾಡಿ”
ಹಾವಿನ ಕಥೆ: ಒಂದು ಮನೆಯಲ್ಲಿ ಅತ್ತೆ ಸೊಸೆಯಂದಿರು. ನಾಲ್ಕು ಜನ ಸೊಸೆಯಂದಿರಿಗೂ ಬಸುರಿ ಬಯಕೆಗಳು. ಆದರೆ ಮಾಡಿಸಿ ತಿನ್ನಲು ಹೆದರಿಕೆ. ಪ್ರತಿ ದಿನ ಸಂತೆಗೆ ಹೋಗುತ್ತಿದ್ದ ಗಂಡಂದಿರನ್ನು “ಇಂದು ಅತ್ತೆಯನ್ನು ಕಳಿಸಿ” ಎಂದು ಹೇಳಿ, ಅತ್ತೆಗೆ ತಿಳಿಸುತ್ತಾರೆ. ಎಂದೂ ಇರದ ಮಕ್ಕಳು ಇಂದೇಕೆ ನನ್ನನ್ನು ಸಾಗಹಾಕುತ್ತಿದ್ದಾರೆ ಎಂಬುದನ್ನು ತಿಳಿಯಲು, ಅತ್ತೆ ಸಂತೆಗೆ ಹೋಗುವಂತೆ ನಾಟಕ ಮಾಡಿ, ಅಟ್ಟ ಹತ್ತಿ ಕೂರುತ್ತಾಳೆ. ಅತ್ತೆ ಹೊರಟಳೆಂದು ಬಗೆದ ಸೊಸೆಯಂದಿರು ತಮಗೆ ಬೇಕಾದ ಸಿಹಿ ತಿಂಡಿ ಮಾಡಲು ಪ್ರಾರಂಭಿಸುತ್ತಾರೆ. ಇನ್ನೇನು ಮುಗಿಯಬೇಕು ಎನ್ನುವಷ್ಟರಲ್ಲಿ ಅತ್ತೆ ಬಂದು ಬಿಡುತ್ತಾಳೆ. ಒಬ್ಬೊಬ್ಬರು ಒಂದೊಂದು ಜಾಗದಲ್ಲಿ ತಿಂಡಿ ಬಚ್ಚಿಟ್ಟು ಬಿಡುತ್ತಾರೆ. ಎಲ್ಲವನ್ನೂ ಕದ್ದು ಕಂಡಿದ್ದ ಅತ್ತೆ, ಸುಮ್ಮನೆ ಒಳಗೆ ಬಂದಾಗ, “ಅತ್ತೆ ಸಂತೆಗೆ ಹೋಗಲಿಲ್ಲವಾ” ಎಂದು ಸೊಸೆ ಕೇಳಿದಾಗ, ಆಕೆ, “ಹೊರಟಿದ್ದೆ ಆದರೆ ದಾರಿಯಲ್ಲಿ ಒಂದು ಹಾವು ಅಡ್ಡ ಬಂತೆಂದೂ, ಆ ಹಾವನ್ನು ಸೊಸೆಯಂದಿರು ಮಾಡಿದ್ದ ಸಿಹಿ ತಿಂಡಿಗಳಿಗೆ ಹೋಲಿಸುತ್ತಾ, ಅವುಗಳ ಹೆಸರನ್ನು ಹೇಳುತ್ತಾ, ಅವು ಬಚ್ಚಿಟ್ಟಿದ್ದ ಜಾಗ ವಿವರಿಸುತ್ತಾಳೆ. ಆಗ ಸೊಸೆಯಂದಿರು ಅತ್ತೆಯ ಕ್ಷಮೆ ಕೇಳುತ್ತಾರೆ.
ಚಾಪಿ ಕಡಿಲೋ ಬಾನಿ ಒಡಿಲೋ: ಒಂದೂರಲ್ಲಿ ಒಬ್ಬ ಗಂಡ-ಹೆಂಡತಿ. ಆ ಹೆಂಡತಿ ಗಂಡನಿಗೆ ತಿಳಿಯದೆ ಹಾದರ ಮಾಡುತ್ತಿರುತ್ತಾಳೆ. ಅದನ್ನು ತಿಳಿದ ಗಂಡ “ನಾವು ಬೇರೆ ಊರಿಗೆ ಹೋಗೋಣ” ಎಂದು ಬೇರೆ ಊರಿಗೆ ಕರೆದೊಯ್ಯುತ್ತಾನೆ. ನಂತರ ಆ ಹೊಸ ಊರಿನ ಗೌಡ, ಈತನ ಹೆಂಡತಿಯನ್ನು ಕಂಡು “ನನ್ನೊಟ್ಟಿಗೆ ಒಂದು ದಿನ ಇರು” ಎಂದು ಕೇಳುತ್ತಾನೆ. ಅದಕ್ಕೆ ಹೆಂಡತಿ “ಒಂದಷ್ಟು ಕಲ್ಲುಗಳನ್ನು ವ್ಯಾಪಾರ ಮಾಡಿಕೊಂಡು ಬಾ” ಎಂದು ಗಂಡನನ್ನು ಸಾಗಹಾಕುತ್ತಾಳೆ. ದಡ್ಡ ಗಂಡ ಹೋಗಿ ವ್ಯಾಪಾರ ಮಾಡುವ ಸಮಯದಲ್ಲಿ ಗೌಡ ಆತನ ಮನೆ ಹೊಕ್ಕುತ್ತಾನೆ. ಕಲ್ಲನ್ನು ಯಾರು ಕೊಳ್ಳುತ್ತಾರೆ ಎಂದು ನಿಧಾನವಾಗಿ ಅರಿವಾದ ಗಂಡ ಮನೆಗೆ ಮರಳಿದಾಗ ಅಲ್ಲಿ ಗೌಡ ಕಾಣಿಸುತ್ತಾನೆ. ಅವನ ಹೆಂಡತಿ, ಗೌಡನನ್ನು ಚಾಪೆಯೊಳಗೆ ಬಚ್ಚಿಟ್ಟದ್ದನ್ನೂ ನೋಡುತ್ತಾನೆ. ತಕ್ಷಣ, “ನಾನು ಚಾಪೆ ವ್ಯಾಪಾರ ಮಾಡಿಕೊಂಡು ಬರ್ತೀನಿ” ಅಂತ ಚಾಪೆ ಒಯ್ಯುತ್ತಾನೆ. ಅದರೊಳಗೆ ಇರುವ ಗೌಡ ಹಾಗೆ ಇರುತ್ತಾನೆ. ದಾರೀಲಿ ಒಬ್ಬ ಅಗಸ ಕಾಣುತ್ತಾನೆ, ಅವನದೂ ಇದೇ ಕಥೆ. ಆತನ ಹೆಂಡತಿ ತನ್ನ “ಮಿಂಡ”ನನ್ನು ಒಂದು ಬಾನಿಯೊಳಗೆ ಬಚ್ಚಿಟ್ಟಿರುತ್ತಾಳೆ. ಕೊನೆಗೆ ಆ ಇಬ್ಬರು ಗಂಡಂದಿರೂ, ಒಬ್ಬರು ಚಾಪೆ ಕಡಿದು, ಮತ್ತೊಬ್ಬರು ಬಾನಿ ಒಡೆದು, ಒಳಗಿರುವ ಗಂಡಸರನ್ನು ಸಾಯಿಸಿ ತಾವು ನಿಶ್ಚಿಂತರಾಗುತ್ತಾರೆ.
ಇಲಿಯೇ, ಇಲಿಯೇ ಇರ್ತಾವ್ ಸೂಳೆ: ಒಬ್ಬ ಗಂಡನಿಗೆ ನಾಲ್ಕು ಜನ ಹೆಂಡತಿಯರು. ಆದರೂ ಆತನಿಗೆ ಇಲಿಯವ್ವ ಅನ್ನುವ ಒಬ್ಬಳು “ಸೂಳೆ” ಇರುತ್ತಾಳೆ. ಒಂದು ಹಬ್ಬ ಬರುತ್ತದೆ. ಆಗ ಇಲಿಯವ್ವ ಅವನಿಗೆ ಹಬ್ಬಕ್ಕೆ ಏನಾದರೂ ಪದಾರ್ಥಗಳನ್ನು ತರಲು ಹೇಳುತ್ತಾಳೆ. ಆಗ, ಹೊರಟ ಅವನು, ತನ್ನ ಹೆಂಡತಿಯರು ಕೂಡಿಸಿದ ಪಂಚಾಯಿತಿಗೆ ಬಂದು ಸಿಕ್ಕಿ ಹಾಕಿಕೊಂಡು ಬಿಡುತ್ತಾನೆ. ಕೊನೆಗೆ ಹೆಂಡತಿಯರ ಪರವಾಗಿ ಆದ ತೀರ್ಪು. ಗಂಡನನ್ನು ಇಲಿಯವ್ವನ ಬಿಟ್ಟು ಅವರೊಟ್ಟಿಗೆ ಇರುವಂತೆ ಮಾಡುತ್ತದೆ. ಆದರೆ ಅವನಿಗೆ, ಇಲಿಯವ್ವನನ್ನು ತರಾಟೆಗೆ ತೆಗೆದುಕೊಳ್ಳಬೇಕು ಎಂಬ ಮನಸ್ಸು. ಇಲಿಯವ್ವನ ಬಗ್ಗೆ ತಮ್ಮ ಗಂಡನಿಗೆ ಸಿಟ್ಟು ಇರುವುದನ್ನು ಕಂಡ ಆ ನಾಲ್ಕು ಜನ ಹೆಂಡತಿಯರಿಗೆ ಅತ್ಯಂತ ಸಂತೋಷ. ತಾವೂ ಎಲ್ಲರೂ ಸೇರಿ ಆಕೆಯನ್ನು ಚೆನ್ನಾಗಿ ಬೈದು, ಗಂಡನಿಗೆ ಸಾಂತ್ವನ ಹೇಳುತ್ತಾರೆ. ಎಲ್ಲರೂ ಸೇರಿ ಇಲಿಯವ್ವನನ್ನು ಮನೆಗೆ ಕರೆದು, “ಗ್ರಹಚಾರ ಬಿಡಿಸಬೇಕು” ಎಂದು ಪ್ಲಾನ್ ಮಾಡುತ್ತಾರೆ. ಆಗ ಎಲ್ಲರ ಬೈಗುಳಕ್ಕೆ ಒಳಗಾದ ಇಲಿಯವ್ವನನ್ನು ಕಂಡು ಆತ ನಗುತ್ತಾ “ಇನ್ನೊಮ್ಮೆ ನನ್ನನ್ನು ಬೈಯ್ಯಲಾರೆ” ಎನ್ನುತ್ತಾನೆ. ಈ ಮಾತನ್ನು ಕೇಳಿದ ಹೆಂಡತಿಯರು, ತಮ್ಮ ಗಂಡ ಆಕೆಯನ್ನು ಬಿಟ್ಟು ಬಿಡುತ್ತಾನೆ ಎಂಬುದನ್ನು ಮನಗಂಡು ತಕ್ಷಣವೇ ಆಕೆಯ ಕಥೆಯನ್ನು ಮುಗಿಸುತ್ತಾರೆ.
(ವಿ. ಸೂ: ನಾನಿಲ್ಲಿ ಹೇಳಲಾಗಿರುವ ಕಥೆಗಳು ತುಂಬಾ ಸ್ಥೂಲವಾಗಿದ್ದೂ, ಮೂಲರೂಪವನ್ನು, ಅದರ ಸವಿಯನ್ನು ಕಳೆದುಕೊಂಡಿದೆ. ನನ್ನ ಮುಂದಿನ ವಿಚಾರಮಂಡನೆಗಾಗಿ ಮಾತ್ರ ನಾನು ಇವನ್ನು ಉಲ್ಲೇಖಿಸಿದ್ದೇನೆ. ಇದರ ಪೂರ್ಣ ಸವಿಯನ್ನು ರುಚಿಸಲು, ಪುಸ್ತಕ ಓದಬೇಕು.)
ಈ ಮೇಲೆ ಕಂಡ ನಾಲ್ಕು ಕಥೆಗಳನ್ನು ಗಮನಿಸಿ, ನಾಲಕ್ಕೂ ವಿವಿಧ ರೂಪದ ದೃಶ್ಯಾವಳಿಗಳನ್ನು ನಮ್ಮ ಮುಂದೆ ಕಟ್ಟಿಕೊಡುತ್ತದೆ. “ಕಥೆ ಕೇಳೆ ಗುಬಲಾಡಿ” ಕಥೆಯಲ್ಲಿ ಒಬ್ಬ ಹೆಣ್ಣು ತನ್ನ ಗಂಡನಿಗಾಗಿ ವಿಧೇಯಳಾಗಿ ಇರಬೇಕು, ಇಲ್ಲದಿದ್ದರೆ ಆಕೆಯ ಗತಿ ಏನಾಗಬಹುದು ಎಂಬ ಅಂಶವನ್ನು ಪ್ರಸ್ತುತಪಡಿಸುತ್ತದೆ. ಒಂದು ಚೂರು ಗಂಡನ ಮಾತು ಕೇಳದೆ ಹೋದಲ್ಲಿ ಎಷ್ಟು ಅವಿಧೇಯಳಾಗಿ, ಗಂಡನ ನಗೆಪಾಟಲಿಗೆ ಈಡಾಗುತ್ತಾಳೆ ಎಂಬುದನ್ನು ನಾವು ಕಾಣಬಹುದು.
“ಹಾವಿನ ಕಥೆ”ಯಲ್ಲಿ ಅತ್ತೆ-ಸೊಸೆಯರ ಸಂಬಂಧವನ್ನು ತೋರಿಸಲಾಗಿದೆ. ಸೊಸೆಯಂದಿರು ತಮ್ಮ ಅತ್ತೆಗೆ ಎಷ್ಟು ಹೆದರುತ್ತಿದ್ದರು. ತಾವು ತಿನ್ನಲಿಕ್ಕೂ ಕದ್ದು ಮುಚ್ಚಿ ಮಾಡುವಷ್ಟು, ಅದರಲ್ಲೂ ಸಿಕ್ಕಿ ಹೋದರೆ, ಅಪರಾಧೀ ಮನೋಭಾವನೆ ಕಾಡುವಷ್ಟು ಪರಾವಲಂಭೀ ಬದುಕಿನ ಚಿತ್ರಣ. ಇದಕ್ಕೆ ಬಹು ಹತ್ತಿರವಾದ ನಿಜ ಘಟನೆಯನ್ನು ನಮ್ಮ ಸಂಬಂಧಿಕರೊಬ್ಬರೇ ಅನುಭವಿಸಿದ್ದು, ಅವರ ಬಾಯಲ್ಲೇ ಈ ಮಾತನ್ನು ಕೇಳಿದ್ದು, ಕಥೆ ಓದಿದಾಕ್ಷಣ ನೆನಪಿಗೆ ಬಂದಿತ್ತು. ಸುಮಾರು ಐವತ್ತು-ಅರವತ್ತು ವರ್ಷಗಳ ಹಿಂದಿನ ಮಾತು. ನನ್ನ ನೆಂಟರು ಹೊಸದಾಗಿ ಮದುವೆಯಾಗಿ ಹಳ್ಳಿ ಮನೆ ಸೇರಿದ್ದರು. ಅವರ ಅತ್ತೆಗೆ ಅಪಾರ ಹೆದರುತ್ತಿದ್ದ ಇಬ್ಬರು ಸೊಸೆಯಂದಿರೂ, ಅತ್ತೆ ಇಲ್ಲದಿದ್ದಾಗ ಪಾಯಸ ಮಾಡಿಕೊಂಡು ತಿನ್ನುವ ಆಸೆಯಾಗಿ, ಪಾಯಸ ಮಾಡುತ್ತಾರೆ. ಇನ್ನೇನು ತಿನ್ನಬೇಕು ಅನ್ನುವಷ್ಟರಲ್ಲಿ ಅತ್ತೆ ಬರುವ ಸದ್ದು ಕೇಳಿಬರುತ್ತದೆ. ಆಗ ಆ ಸೊಸೆಯಾರಿಬ್ಬರೂ ಆ ಬಿಸಿ ಬಿಸಿ ಪಾಯಸವನ್ನು ಬಚ್ಚಲಿಗೆ ಬೇಗ ಹೊಯ್ದು ಸ್ಥಳವನ್ನು ಶುದ್ಧ ಮಾಡುತ್ತಾರೆ. ಇದು ಜರುಗಿದ ಸತ್ಯ ಘಟನೆ. ಒಬ್ಬ ಹೆಣ್ಣಿನ ಜೀವನ ಎಷ್ಟೆಲ್ಲಾ ದುಸ್ತರವಾಗಿತ್ತು ಎಂಬುದರ ದುರಂತ ಒಳನೋಟಗಳನ್ನು ಈ ಕಥೆ ಬಹಿರಂಗಗೊಳಿಸುತ್ತದೆ.
“ಚಾಪಿ ಕಡಿಲೋ, ಬಾನಿ ಒಡಿಲೋ” ಒಂದು ವ್ಯಭಿಚಾರೀ ಹೆಂಗಸರ ಕಥೆ. ಇಲ್ಲಿ ಒಬ್ಬ ಗಂಡು ತನ್ನ ಹೆಣ್ಣಿನ ಶೀಲಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾನೆ ಎಂಬ ಮಾರ್ಮಿಕ ಸತ್ಯ ಅಡಗಿದೆ. ಒಬ್ಬ ಹೆಣ್ಣು ತನಗೆ ಮೋಸ ಮಾಡುತ್ತಿದ್ದಾಳೆ ಎಂದು ತಿಳಿದ ತಕ್ಷಣ ಆ ಗಂಡು, ಹೆಣ್ಣಿಗೆ ಏನೂ ಮಾಡದೆ, ಆ ಪರ ಪುರುಷನ ಕೊಲೆಯನ್ನೇ ಮಾಡಿಬಿಡುತ್ತಾನೆ. ಇಲ್ಲಿ ಗಂಡು ಮಾಡಿದ ಕೊಲೆ, ಕೊಲೆ ಎಂದು ಪರಿಗಣಿಸಲ್ಪಡದೆ, ತನ್ನ ಹೆಣ್ಣನ್ನು ಕಾಪಾಡಿಕೊಂಡ ವೀರ ಎಂಬ ಇಮೇಜರಿ ಕಾಣಸಿಗುತ್ತದೆ. ನಾವು ಈ ಕಥೆಯ ಮೂಲಕ ಒಂದು ಸಂಬಂಧದ ಆಯಾಮಗಳನ್ನೂ, ಅದನ್ನು ಗಂಡು ಹೆಣ್ಣು ವೀಕ್ಷಿಸುವ, ಪರಿಗಣಿಸಲ್ಪಡುವ ನೆಲೆಗಟ್ಟುಗಳನ್ನೂ ಕಾಣಬಹುದು.
“ಇಲಿಯೇ ಇಲಿಯೇ ಇರ್ತಾವ್ ಸೂಳೆ” ಹಿಂದಿನ ಕಾಲದ ಸೂಳೆಗಾರಿಕೆ ಅಥವಾ ಪ್ರಾಸ್ಟಿಟ್ಯೂಶನ್ ಕುರಿತಾದ ಕಥಾ ಹಂದರ. ಈ ಕಥೆಯಲ್ಲಿ ನಾಲ್ಕು ಜನ ಹೆಂಡತಿಯರನ್ನು ಮದುವೆಯಾದ ಗಂಡು ಸಾಲದೆಂಬಂತೆ ಒಬ್ಬ ಸೂಳೆಯ ಸಹವಾಸ ಮಾಡಿರುತ್ತಾನೆ. ಆದರೂ ಆತನ ವ್ಯಕ್ತಿತ್ವ ಎಲ್ಲೂ ಹಳಸಾಗಿಸಿಲ್ಲ. ತಾನು, ತನ್ನ ಹೆಂಡತಿಯರು ಮತ್ತು ಊರಿನವರು ಎಲ್ಲರೂ ಸೇರಿ ಬೈಯುವುದು, ತೆಗಳುವುದು ಆ ಸೂಳೆಯನ್ನೇ ಹೊರತು, ಈ ಮಹಾಪುರುಷನನ್ನಲ್ಲ. ಹಿಂದಿನ ಕಾಲದ ಸೂಳೆಯನ್ನು ಇಟ್ಟುಕೊಂಡರೆ ಹೆಚ್ಚುಗಾರಿಕೆ ತೋರಿಸುವ ಕೆಲವು ವಾಡಿಕೆ, ನಂಬಿಕೆಗಳನ್ನು ಈ ಕಥೆ ಪ್ರತಿಬಿಂಬಿಸುತ್ತದೆ.
ಹೀಗೆ ಒಟ್ಟಾರೆ, ಎಲ್ಲಾ ಕಥೆಗಳೂ, ನಮ್ಮ ಕಳೆದು ಹೋದ ಕಾಲಘಟ್ಟಗಳ ಒಂದು ಪಳೆಯುಳಿಕೆಯಾಗಿ ನಮ್ಮ ಮುಂದೆ ನಿಲ್ಲುತ್ತದೆ. ಇವೆಲ್ಲ ಕಥೆಗಳನ್ನೂ ಕಟ್ಟಿರುವುದು ಹೆಂಗಸರು ಎಂಬುದು ಗಮನಿಸಬೇಕಾದ ಅಂಶ. ಈ ಎಲ್ಲಾ ಕಥೆಗಳಲ್ಲೂ ಸ್ತ್ರೀಯನ್ನು ಕೆಳಮಟ್ಟದಲ್ಲೇ ತೋರಿಸಲಾಗಿದೆ, ಆಕೆಯ ಶೋಷಣೆಯನ್ನೇ ವೈಭವೀಕರಿಸಲಾಗಿದೆ. ಇಲ್ಲಿ ಸ್ತ್ರೀವಾದ ಎಲ್ಲಿಂದ ಬರಬೇಕು ಎಂಬುದು ಈ ಲೇಖನ ಓದಿದಾಗ ಮೂಡಬಹುದಾದ ಪ್ರಶ್ನೆ. ಆದರೆ ನಾವಿಲ್ಲಿ ಗಮನಿಸಬೇಕಾದ್ದು, ಹೆಂಗಳೆಯರೇ, ತಮ್ಮ ವಿರಾಮದಲ್ಲಿ ಕೂತು, ಹೆಣೆದ ಈ ಹಲವು ಬಗೆಯ ಕ್ರಿಯೇಟಿವ್ ಕಥೆಗಳು, ತಮಗೆ ಆದ ಎಲ್ಲಾ ಶೋಷಣೆಗಳ, ನೋವುಗಳ, ದುಃಖಗಳ ಉಳಿಕೆಗಳಾಗಿ, ಅಂಶಗಳಾಗಿ ಕಾಣಸಿಗುತ್ತವೆ. ವಾಸ್ತವವಾಗಿ ಎಲ್ಲೂ ಉಸಿರೆತ್ತಲಾಗದ ಪರಿಸ್ಥಿತಿಯಲ್ಲಿದ್ದ ಅಂದಿನ ಕಾಲದ ಮಹಿಳೆ, ತನ್ನೆಲ್ಲಾ ವಿಷಾದಗಳನ್ನೂ, ವಿರೋಧಗಳನ್ನೂ ಹೀಗೆ ಕಥೆಗಳ ಮೂಲಕ ನಮ್ಮ ಮುಂದೆ ಇಡಲು ಪ್ರಯತ್ನಿಸಿದ್ದಾಳೆ. ಇದು ಫೆಮಿನಿಸಂನ ಮೊದಲ ಹೆಜ್ಜೆ ಎಂದೇ ಹೇಳಬಹುದು.

ಭಾನುವಾರ, ಜುಲೈ 13, 2014

ಕೊರಗ ಸಮುದಾಯದ ಚಿತ್ರಗಳು ಭಾಗ-2


ಕೊರಗರು ಸೂರ್ಯವಂಶಸ್ಥರೇ ಅಲ್ಲ.
ಕೊರಗ ಆದಿವಾಸಿ ಸಮುದಾಯದ ಕುರಿತಾಗಿ ಹಲವಾರು ಇತಿಹಾಸಕಾರರು ಅಭ್ಯಸಿಸಿ ಸಂಶೋಧನಾ ಕೃತಿಗಳನ್ನು ಹೊರತಂದಿದರಾದರೂ, ಕೆಲವೇ ಕೆಲವೊಂದು ಕಲ್ಪಿತ ವಿಚಾರಗಳನೊಳಗೊಂಡೇ ತಮ್ಮ ಅಧ್ಯಯನಗಳನ್ನು ಪೂರ್ಣಗೊಳಿಸಿದ್ದಾರೆ. ಈ ಕಲ್ಪಿತ ವಿಚಾರಗಳಲ್ಲಿ ಬಹು ದೊಡ್ಡ ಪ್ರಮಾದವೇ - 'ಕೊರಗರು ಸೂರ್ಯವಂಶ'ಸ್ಥರೆಂದಿರುವುದು. ಈ ಕಲ್ಪಿತ ಮಾಹಿತಿಯನ್ನು ಕೆಲವೊಂದು ಲೇಖಕರು ಅನುಮೋದಿಸಿದ್ದಾರೆ ಎಂಬುದೇ ದುರಂತ.
ಸೂರ್ಯವಂಶ - ಕವಿರತ್ನ ಕಾಳಿದಾಸನ ಮಹಾಕಾವ್ಯದಲ್ಲಿ ಕಂಡುಬರುವ ಪ್ರಾಚೀನ ದೇವಸಂತತಿಯ ವಂಶ. ಸೂರ್ಯವಂಶ ಎಂಬುದು ಕ್ಷತ್ರಿಯ ಕುಲದ ವಂಶ. ಶ್ರೀ ಮನ್ನಾರಾಯಣ ಮಗನಾದ ಬ್ರಹ್ಮನ ಅಂಗದಿಂದ ಹುಟ್ಟಿದನೇ ಮರೀಚ ಬ್ರಹ್ಮ. ಈತನ ಮಗ ಕಶ್ಯಪ ಬ್ರಹ್ಮ. ಈತನ ಮಗ ವಿವಸ್ವಂತ ಸೂರ್ಯ. ಈತನ ಪುತ್ರ ವೈವಸ್ವಂತ ಮನು. (ಈತನಿಂದಲೇ ಮಾನವ ಸಂತತಿ ಹುಟ್ಟಿತು ಎಂಬುದು ಮಹಾಕಾವ್ಯಗಳ ವರ್ಣನೆ) ಮನುವಿನ ಮಕ್ಕಳು ವೇನ, ಧೃಷ್ಣು, ನರಿಷ್ಯಂತ, ನಾಭಿ, ಇಕ್ಷಾಕು, ಕಾರೂಷ, ಶರ್ಯಾ, ಇಳಾ (ಮಗಳು; ಈಕೆಯ ಗಂಡ ಚಂದ್ರ. ಈತನಿಂದ ಚಂದ್ರವಂಶ ಪ್ರಾರಂಭವಾಗುತ್ತದೆ)
ಇಕ್ಷಾಕು ಮನುವಿನ ಮಗ - ಕ್ಷಾತ್ರ. ಸೂರ್ಯವಂಶ ಪ್ರವರ್ತಕ ಇಕ್ಷಾಕು ಅಯೋಧ್ಯೆಯ ಮೊದಲ ಅರಸ. ನಂತರ - ಕುಕ್ಷಿ, ವಿಕುಕ್ಷಿ, ಬಾಣ, ಅನರಣ್ಯ, ಪೃಥ, ತ್ರಿಶಂಕು, ಧುಂಧುಮಾರ, ಯುವನಾಶ್ವ, ಮಾಂಧಿರ, ಸುಸಂಧಿ, ಧವಸಂಧಿ ಪ್ರಸೇನಜಿತ್, ಭರತ, ಅಸಿತ, ಸಗರ, ಅಸಮಂಜ, ಅಂಶುಮಂತ, ದಿಲೀಪ, ಭಗೀರಥ, ಕಾಕುತ್ಸ್ಥ, ರಘ. ಇಲ್ಲಿಗೆ ಸೂರ್ಯವಂಶ ಕೊನೆಗೊಂಡು ರಘುವಂಶ ಪ್ರರಂಭವಾಗುತ್ತದೆ. ಇದಿಷ್ಟು ಸೂರ್ಯವಂಶದ ವಂಶಾವಳಿ.
ಈ ಸೂರ್ಯವಂಶ ಕ್ಷತ್ರಿಯರಾದ್ದರಿಂದ ಇವರ ವಂಶಾವಳಿ ಮಗನಿಂದ ಮಗನಿಗೆ ಹಸ್ತಾಂತರವಾಗುತ್ತಾ ಬಂದಿದೆ. ಈ ವಂಶ ಪುರುಷ ಪ್ರಧಾನ ವಂಶವಾದರಿಂದಾಗಿ, ಇಲ್ಲಿ ಮಹಿಳೆಗೆ ಯಾವುದೇ ರೀತಿಯ ಗೌರವ ಸ್ಥಾನಮಾನಗಳಿಲ್ಲ ಎಂಬುದು ಗಮನಿಸಬೇಕಾದ ವಿಚಾರ. ಮತ್ತು ತಂದೆಯಿಂದ ಮಗನಿಗೆ ಅಧಿಕಾರ ಹಸ್ತಾಂತರವಾಗುತ್ತಾ ಬಂದಿದೆ.
ಇನ್ನು ಕೊರಗರ ಸಮುದಾಯ ಕ್ಷತ್ರೀಯ ಕುಲದವರೂ ಅಲ್ಲ. ಧರ್ಮಯುದ್ಧವನ್ನು ಮಾಡಿದವರೂ ಅಲ್ಲ. ಬದಲಾಗಿ ಈ ಸಮಾಜದಲ್ಲಿ, ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ - ಪಂಚಂಮರಿಗಿಂತಲೂ ಕಡೆಯಾಗಿ ಬದುಕು ಸವೆಸಿದವರು. ಕೊರಗ ಸಮುದಾಯದಲ್ಲಿ ಮಹಿಳೆಯೇ ಪ್ರಧಾನ. ಆಕೆಯ ಮಾತೇ ಅಂತಿಮ. ಹಾಗಾಗಿ ತಮ್ಮ ಕುಲದೈವ - ಕೊರಗ ತನಿಯ (ಕೊರಗಜ್ಜ)ನನ್ನು ನಂಬಿ ಆರಾಧಿಸುವಾಗ, ಅಲ್ಲಿ ಕೊರಗ ತನಿಯನ ತಾಯಿ 'ಅಪ್ಪೆ ಬೈಕಾಡ್ತಿ'ಗೂ ಸ್ಥಾನ ನೀಡುತ್ತಾರೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಕೊರಗರಲ್ಲಿ ವಂಶಾವಳಿಗಳು ತಾಯಿಯಿಂದ ಮಗಳಿಗೆ ಬದಲಾಗುತ್ತದೆ. ತಂದೆಯಿಂದ ಮಗನಿಗಲ್ಲ. ಕೊರಗರು ಸೂರ್ಯೋಪಾಸಕರು ಹೌದು. ಸೂರ್ಯವಂಶಸ್ಥರಲ್ಲ. ಬೆಳಕ ನೀಡುವ ದೇವರ ಜೊತೆಗೆ ಪ್ರಕೃತಿಯನ್ನೂ ದೇವರೆಂದು ನಂಬಿಕೊಂಡು ಬಂದವರು ಕೊರಗರು. ಸೂರ್ಯನನ್ನು ಆರಾಧಿಸಿದವರೆಲ್ಲ ಸೂರ್ಯವಂಶಸ್ಥರಾಗಲು ಸಾಧ್ಯವಿಲ್ಲ. ಕೊರಗರನ್ನು ಸೂರ್ಯವಂಶಸ್ಥರೆಂದಿರುವುದು ಇತಿಹಾಸಕಾರರ ತಪ್ಪು ಗೃಹಿಕೆ ಮತ್ತು ಇತಿಹಾಸಕಾರರ ಈ ಗೃಹಿಕೆಯನ್ನು ಯಾವೊಬ್ಬ ಕೊರಗ ಬಂಧುವೂ ಗಣನೆಗೆ ತೆಗೆದುಕೊಂಡಿಲ್ಲ!
- ಹೃದಯ


ಇತರ ಸಮುದಾಯದ ಜಾನಪದ ಕುಣಿತಗಳಲ್ಲಿ ಕೊರಗರ ಉಪಸ್ಥಿತಿ! ಏನಿದರ ಒಳಮರ್ಮ?

ಜಾನಪದ ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಸಂಪ್ರದಾಯ ಬದ್ಧ ಕೊಡುಗೆಗಳನ್ನು ನೀಡುತ್ತಾ ಬಂದಿರುವುದೇ ತಳಮಟ್ಟದ ಸಮುದಾಯಗಳು. ಇವರು ತಮ್ಮ ಪಾಡ್ದಾನ, ಕುಣಿತ ಮತ್ತು ವೇಷಭೂಷಣಗಳಿಂದ ಜನಪದ ಕುಣಿತಗಳ ಸಿರಿವಂತಿಕೆಯನ್ನು ಈಗಲೂ ಉಳಿಸಿಕೊಂಡು ಬಂದಿದ್ದಾರೆ. ಈ ಸಾಂಸ್ಕೃತಿಕ ವೈಭವದ ಹುಟ್ಟಿಗೆ ಕಾರಣವೇ, ಅನಕ್ಷರಸ್ಥತನ. ತೀರಾ ಹಿಂದುಳಿದ ಸಮುದಾಯಗಳ ಇಂಥಹ ಜನಮನ ಸೂರೆಗೊಂಡ ಜಾನಪದ ಸೊಗಡಿನಲ್ಲಿ ಕೊರಗ ಅಸ್ತಿತ್ವ ಹೇಗಿತ್ತು? ಎಂಬುದಕ್ಕೆ ಇಲ್ಲಿದೆ ನಿದರ್ಶನ.

ಬಾಲೆ ಸಾಂತು : ತುಳುನಾಡಿನ ಮರಾಠಿ ನಾಯ್ಕರ ಆಚರಣಾತ್ಮಕ ಕುಣಿತಗಳಲ್ಲಿ ‘ಬಾಲೆ ಸಾಂತು’ ಕೂಡಾ ಒಂದು. ಬಂಟ್ವಾಳ, ಎಣ್ಮಕಜೆ, ಕೋಡಂದೂರು ಮುಂತಾದ ಪ್ರದೇಶಗಳಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿತ್ತಾದರೂ, ಇತ್ತೀಚೆಗೆ ಇದು ಎಲ್ಲೂ ಕಂಡು ಬಂದಿಲ್ಲ. ಈ ಒಂದು ಆಚರಣೆಯಲ್ಲಿ - ಪ್ರತ್ಯಕ್ಷವಾಗಿಯಲ್ಲದಿದ್ದರೂ, ಕೊರಗ ಜನಾಂಗದ ಉಪಸ್ಥಿತಿ ಇತ್ತು ಎಂದು ಡಾ.ಸ.ಚಿ. ರಮೇಶ್ ರವರ ‘ಕರ್ನಾಟಕದ ಜಾನಪದ ಆಚರಣೆಗಳು’ ಎನ್ನುವ ಪುಸ್ತಕದಿಂದ ತಿಳಿದು ಬರುತ್ತದೆ.

ಬಾಲೆ ಸಾಂತು ಕಲಾ ತಂಡದಲ್ಲಿ ಹನ್ನೊಂದು ಮಂದಿ ವೇಷಧಾರಿಗಳಿರುತ್ತಾರೆ. ಸನ್ಯಾಸಿ, ಅರ್ಚಕ(ಪೂಜೆ ಭಟ್ಟ), ಗುರಿಕಾರ, ಪೂಜಾರಿ( ದೈವ ನರ್ತಕ), ಕೊರಗ ಮತ್ತು ಕೊರಪೊಳು (ಕೊರಗ ಮಹಿಳೆ) ಸಾಹೇಬ ಮತ್ತು ಮಂಗ ಕುಣಿಸುವವ ಇತ್ಯಾದಿ. ಈ ವೇಷಧಾರಿಗಳು ಕಾಸರಕದ ಮರದಡಿ ಕಲ್ಲೊಂದನ್ನು ಪ್ರತಿಷ್ಠಾಪಿಸಿ ಶಾರದಾಂಬೆಯನ್ನು ಸ್ಮರಿಸುತ್ತಾರೆ. ನಂತರ ಮನೆ - ಮನೆಗಳಿಗೆ ತೆರಳಿ, ಮರಾಠಿ ಭಾಷೆಯ ಹಾಡು ಹಾಡುತ್ತಾ... ‘ಶೃಂಗೇರಿಚೆ ಶಿಷ್ಯರಮಿ ಬಾಲ್ಚಾಲ್ಯೊ ಬಾಲೆ ಸಾಂತು, ಕಾಟ್ಮರೊ ಜೋಗಿರಮಿ ಬಾಲ್ ಬಾಲ್ಯೊ ಬಾಲೆ ಸಾಂತು’ ಎಂದು ಗುರಿಕಾರ ಹಾಡುತ್ತಿದ್ದಂತೆ - ಇತರ ಕಲಾವಿದರು ‘ಬಾಲ್ ಬಾಲೋ ಬಾಲ್ ಸಾಂತು’ ಎಂದು ಸೊಲ್ಲನ್ನು ಹಾಡುತ್ತಾ ಕುಣಿಯುತ್ತಾರೆ. ಬಾಲೆ ಸಾಂತು ಆಚರಣೆಯಿಂದ ಊರಿನ ಅನಿಷ್ಟ ದೂರವಾಗುತ್ತದೆ ಎಂದು ನಂಬುತ್ತಾರೆ. ಇದನ್ನು ಮರಾಠಿ ನಾಯ್ಕ ಸಮುದಾಯದವರು ಮಾತ್ರ ಪ್ರಸ್ತುತಪಡಿಸುತ್ತಾರೆ. ಕೊರಗರಲ್ಲ, ಕೊರಗರ ನೃತ್ಯ ಪ್ರಕಾರವೂ ಇದಲ್ಲ.

ಚೆನ್ನು ಕುಣಿತ : ಈ ಜನಪದ ನೃತ್ಯ ಪ್ರಕಾರವನ್ನು ‘ಕೋಪಾಲ’ (ನಲಿಕೆ) ಜನಾಂಗದವರು ಮಾತ್ರ ಆಚರಿಸಿಕೊಂಡು ಬರುತ್ತಾರೆ. ಬೆಳ್ತಂಗಡಿ ಪ್ರಾಂತ್ಯದಲ್ಲಿ ಈ ವೇಷ ಹೆಚ್ಚಾಗಿ ಕಂಡು ಬರುತ್ತದೆ. ಕೋಪಾಲ ಜನಾಂಗದ ಸಾಂಸ್ಕೃತಿಕ ಮೂಲ ಸ್ತ್ರೀ - ‘ಚೆನ್ನು’ ವಿನ ಕುರಿತಾಗಿ ಆರಾಧಿಸಿ ನಲಿವ ನೃತ್ಯ ಪ್ರಕಾರವಿದು. ಈ ಚೆನ್ನು ವೇಷದ ಜೊತೆಯಲ್ಲಿ 'ಕೊರಗ' ಎಂಬ ಪಾತ್ರಧಾರಿ ವೇಷವೂ ಇರುವುದು ವಿಶೇಷ! ಆದರೆ, ಈ ನೃತ್ಯ ಪ್ರಕಾರವೂ ಕೊರಗರದ್ದಲ್ಲ.

ಕಂಗೀಲು ಕುಣಿತ : ಇದು ಕರಾವಳಿ ಕರ್ನಾಟಕದಲ್ಲಿ ಆಚರಣೆಯಲ್ಲಿರುವ ಆರಾಧನಾ ಪದ್ಧತಿಯ ಪೂಜಾ ಕುಣಿತ. ಮಾಯಿ ತಿಂಗಳ ಹುಣ್ಣಿಮೆಯ ಬೆಳದಿಂಗಳಲ್ಲಿ , ಮೂರು ದಿನ ರಾತ್ರಿ ಮತ್ತು ಮೂರು ದಿನ ಹಗಲು - ಗೊಡ್ಡ ಜನಾಂಗದವರಿಂದ ನಡೆಸಿಕೊಂಡು ಬರುವ ವಿಶಿಷ್ಟ ಕುಣಿತ. ಪುರುಷ ಪ್ರಧಾನವಾದ ಈ ಕುಣಿತದಲ್ಲಿ - ಪಾತ್ರಧಾರಿಗಳು ತಮ್ಮ ಉಡುಪು ಮತ್ತು ಶಿರಸ್ತ್ರಾನವಾಗಿ ತೆಂಗಿನ ಸಿರಿಯನ್ನು ಕಟ್ಟಿಕೊಂಡು ಡೋಲು - ಚೆಂಡೆಯ ನಾದಕ್ಕೆ ತಕ್ಕುದಾಗಿ ಕುಣಿಯುತ್ತಾರೆ. ಇದರಲ್ಲಿ ‘ನಾಗಿ’ ಎನ್ನುವ ‘ಕೊರಗ ವೇಷ’ವೂ ಇರುತ್ತದೆ. ಈತನ ಸುತ್ತ ಇತರ ವೇಷಧಾರಿಗಳು ಕುಣಿಯುತ್ತಾರೆ. ಈ 'ನಾಗಿ (ಕೊರಗ)ವೇಷ' ಮನೆಯ ಹಿಂಬಾಗದಲ್ಲಿ ಹೋಗಿ ದಾನ ಪಡೆಯುವುದು ಮತ್ತು ಭಕ್ತಾದಿಗಳಿಗೆ ತನ್ನ ಹಣೆಯಲ್ಲಿನ ಕಪ್ಪು ಮಸಿ (ಕರಿಗಂಧ -- ಕೊರಗ ತನಿಯನ ಆರಾಧಕರು ಹಾಕುವುದು ಕೂಡಾ ಕರಿಗಂಧವನ್ನೇ!) ಯನ್ನು ಭಕ್ತಾಧಿಗಳ ಹಣೆಗೆ ಸೋಕಿಸುವುದು (ಸ್ಪರ್ಶಿಸುವುದಿಲ್ಲ!) ಕಂಗೀಲು ಆರಾಧನಾ ಪದ್ಧತಿಯ ವಿಶೇಷ! ಇದು ತೀರಾ ಹಿಂದುಳಿದ 'ಗೊಡ್ಡ ಸಮಾಜ'ದ ಜಾನಪದ ಕುಣಿತ, ಬದಲಿಗೆ ಕೊರಗರದಲ್ಲ.

ಇಲ್ಲಿ ಗಂಭೀರವಾದ ಪ್ರಶ್ನೆ ಎಂದರೆ, ಈ ಎಲ್ಲಾ ಜನಪದ ಪ್ರಕಾರಗಳ ಕುಣಿತಗಳಲ್ಲಿ ‘ಕೊರಗ’ರ ಮಧ್ಯಸ್ತಿಕೆ ಹೇಗೆ ಬಂದಿರಬಹುದು? ಏನು ಕಾರಣವಿರಬಹುದು? ಏನಿದರ ಒಳಮರ್ಮ? ಇತರ ತಳಮಟ್ಟದ ಸಮುದಾಯಗಳಿಗೂ, ಆದಿವಾಸಿ ಪಂಗಡದ ‘ಕೊರಗ’ ಜನರಿಗೂ ಏನಾದರೂ ‘ಸಾಂಸ್ಕೃತಿಕ - ಸಂಬಂಧ’ವಿರಬಹುದೇ? ಕೊರಗರ ವೇಷಗಳನ್ನು ಹಾಕುವುದು ಮತ್ತು ಸಾರ್ವಜನಿಕವಾಗಿ ಪ್ರದರ್ಶಿಸುವುದು ‘ಅಜಲು ನಿಷೇಧ ಕಾಯಿದೆ’ಯ ಉಲ್ಲಂಘನೆಯಾಗುತ್ತದೆ. ಹೀಗಿರುವಾಗ ಕೊರಗರ ಪಾತ್ರಗಳನ್ನು ಹೊಂದಿರುವ - ಚೆನ್ನು ಕುಣಿತ, ಬಾಲೆ ಸಾಂತು ಮತ್ತು ಕಂಗೀಲು ನೃತ್ಯಗಳು - ಕಾಯಿದೆಯನ್ನು ಉಲ್ಲಂಘಿಸಿದಂತಾಗುವುದಿಲ್ಲವೇ? ಕೋಲ ನೃತ್ಯಗಳನ್ನು ಸಾರ್ವಜನಿಕ ರಂಗಸ್ಥಳದಲ್ಲಿ ಪ್ರದರ್ಶಿಸುವಂತಿಲ್ಲ. ಆದರೆ - ಇದೇ ರಂಗಕರ್ಮಿಗಳು (ದೈವನರ್ತಕರು) ಜಾನಪದ ನೃತ್ಯದ ಹೆಸರಿನಲ್ಲಿ ‘ ಕೊರಗ ವೇಷ’ವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಅಪರಾಧವಾಗುವುದಿಲ್ಲವೇ? ಕೊರಗ ಅಭಿವೃದ್ಧಿ ಸಂಘಟನೆಗಳು ಮತ್ತು ಜಾನಪದ ವಿಶ್ಲೇಷಕರು ಏನೆನ್ನುತ್ತಾರೆ.
- ಹೃದಯ

ಬದುಕೆಂಬ ರಥದ ಸ್ವ- ಸಾರಥಿಗಳು...

ಕೊರಗರು ಮೂಲತಃ ಸ್ವಉದ್ಯೋಗಿಗಳು! ಕಾಡಿನಲ್ಲಿ ಹೇರಳವಾಗಿ ದೊರಕುತ್ತಿದ್ದ ಬಿದಿರು - ಬಿಳಲುಗಳಿಂದ, ಬುಟ್ಟಿ ಮತ್ತಿತ್ತರ ಪರಿಕರಗಳನ್ನು ಮಾಡಿ, ಇತರರಿಗೆ ಮಾರಿ ಜೀವನ ಸಾಗಿಸುತ್ತದ್ದವರು. ಜೇನು ಮತ್ತು ವನಸ್ಪತಿಗಳು -ಆಹಾರದ ಮತ್ತು ಸ್ವಉದ್ಯೋಗದ ಮೂಲಗಳಾಗಿದ್ದವು. ಕಾಡಿನೊಳಗಿನ ಸ್ವಚ್ಛಂದ ಬದುಕು - ಜೀವನದ ಪಾಠವನ್ನು ಮತ್ತು ಸ್ವಉದ್ಯೋಗದ ನೆಲೆಯನ್ನು ಒದಗಿಸಿತ್ತು. ಕಾಡೆಂದರೆ ಬದುಕು, ಕಾಡೆಂದರೆ ನಾವು ಮತ್ತು ನಾವು ಕಾಡಿನ ಮಕ್ಕಳು ಎನ್ನುವುದೇ ಜೀವನದ ಸಿದ್ದಾಂತವಾಗಿತ್ತು.

ಕಾಲಚಕ್ರದ ಬದುಕಿನಲ್ಲಿ, ಬದಲಾವಣೆಯೆಂಬ ಗತಿಚಕ್ರವು ತಮಗರಿವಿಲ್ಲದಂತೆ ಪಥವನ್ನು ಬದಲಿಸಿದಾಗ, ಕೊರಗರು ಅನುಭೋಗದ ವಸ್ತುವಾಗಿಬಿಟ್ಟರು. ಅಜಲು ಪದ್ಧತಿಯೆಂಬ ದಾಸ್ಯದ ವ್ಯವಸ್ಥೆಯ ಸ್ಥಿತಿಗತಿಯೊಂದು ಕೊರಗರ ಸ್ವವಲಂಬನೆಯ ಬದುಕಿನ ಮೂಲ ಸೆಲೆಯನ್ನು ಕಸಿದುಬಿಟ್ಟತು. ಕೊರಗರು ಊರವರ ಚಾಕರಿಯನ್ನು ಕಡ್ಡಾಯವಾಗಿ ಮಾಡಬೇಕಾಯಿತು. ತಮ್ಮ ಸ್ವಉದ್ಯೋಗದ ಪರಿಕರಗಳಾದ ಬುಟ್ಟಿ ಮತ್ತಿತರ ವಸ್ತುಗಳನ್ನು, ಊರ ದನಿಗಳಿಗೆ ಉಚಿತವಾಗಿ ನೀಡಲೇಬೇಕಿತ್ತು. ಏಕೆಂದರೆ, ಅದು ಸೇವೆಯ ರೂಪದ ಊಳಿಗಮಾನ್ಯ ಎಂಬ ಕ್ರೂರ ವ್ಯವಸ್ಥೆಯಾಗಿತ್ತು. ಉಚಿತವಾಗಿ ಬುಟ್ಟಿ ಮತ್ತು ಕಾಡುಡ್ಪತ್ತಿಗಳನ್ನು ಕೊಡಬೇಕಾಗಿ ಬಂದಾಗ, ಹೊಟ್ಟೆಯ ಹಸಿವನ್ನು ನೀಗಿಸಲು - ಎಂಜಲನ್ನ ತಿನ್ನಬೇಕಾಗಿ ಬಂತು. ಕೊರಗರ ಸ್ವಉದ್ಯೋಗ ಕಣ್ಮರೆಯಾಗುತ್ತಾ, ದಾಸ್ಯದ ಬೇಗುದಿಯಲ್ಲಿ ಸಿಲುಕಬೇಕಾಯಿತು.


ಬದುಕು ನಿಂತ ನೀರಲ್ಲ! ಬದಲಾವಣೆಗಳಿಂದ ಕೂಡಿದ ಹರಿವ ನೀರಿನಂತೆ, ಸದಾ ತನ್ನ ಚಲನವಲನಗಳನ್ನು ಬದಲಿಸುತ್ತಾ, ವಿಸ್ತರಿಸುತ್ತಿರುತ್ತದೆ. ಕೊರಗರ 'ಬದಲಾವಣೆಯ ಹಿನ್ನಲೆ'ಯ ಸ್ವರೂಪವನ್ನು ಸಂಕ್ಷಿಪ್ತವಾಗಿ ವಿವರಿಸುವುದಾದರೆ..., ಪರಿವರ್ತನೆಯ ತಂಗಾಳಿ ಹಿತಾನುಭವದಂತೆ ಮೂಡತೊಡಗಿತು. ಸಂಘಟನೆ, ಶಿಕ್ಷಣ ಮತ್ತು ಕಲಿತುಕೊಂಡ ಬದುಕಿನ ಪಾಠ - ಹಲವಾರು ಬದಲಾವಣೆಯ ಬಿರುಗಾಳಿಯನ್ನೇ ಎಬ್ಬಿಸಿತು. ಕೊರಗ ಬಂಧುಗಳು ಸಂಘಟನೆಯಿಂದಾಗಿ, ಸದಾ ಸಮುದಾಯದ ಹಿತಚಿಂತನೆಯನ್ನೇ ಮಾಡಲಾರಂಭಿಸಿದರು. ಸರಕಾರದೊಂದಿಗೆ ತಮ್ಮ ಹಕ್ಕುಗಳಿಗಾಗಿ ಮತ್ತು ಸ್ವಚ್ಛಂದ ಬದುಕಿಗಾಗಿ ಸೌಮ್ಯಸಂಘರ್ಷಕ್ಕಿಳಿದರು. 'ಅವಮಾನವೀಯ ಅಜಲು' ನಿಷೇದದಿಂದಗಿ ನಿಜವಾದ 'ಬದುಕಿನ ಸ್ವತಂತ್ರ್ಯ'ದ ಸವಿಯನ್ನು ಪಡೆದರು. ಆಶಾಜೀವಿಗಳಾಗಿ ಮತ್ತೆ ಸ್ವಉದ್ಯೋಗದ ಕನಸನ್ನು ಕಾಣಲಾರಂಭಿಸಿದರು.

ಕನಸು ಜೀವನದ ಪಥವನ್ನೇ ಬದಲಿಸುತ್ತದಂತೆ! ಹಿತಚಿಂತಕರ ಮಾತು, ಕೊರಗರ ಬದುಕಿನಲ್ಲಿಯೂ ಹಲವಾರು ಸ್ವಉದ್ಯೋಗಿ ಆಕಾಂಕ್ಷಿಗಳನ್ನು ಸೃಷ್ಠಿಸಿತು. ಕೊರಗರು ಪರರ ಸೇವೆ ಮಾಡುವವರಲ್ಲ, ಕೊರಗರೆಂದರೆ ಕೈಲಾಗದವರಲ್ಲ ಎಂಬುದನ್ನು ಸಾಧಿಸಲು ಮುಂದಾದರು. ಆ ಸಾಹಸಿಗರ ಸಾಲಿನಲ್ಲಿಂದು - ೨೦೦ಕ್ಕೂ ಹೆಚ್ಚು ರಿಕ್ಷಾ ಚಾಲಕರು ಮತ್ತು ಮಾಲಕರಿದ್ದಾರೆ. ಸ್ವಂತ ಲಾರಿ ಮತ್ತು ಕಾರುಗಳನ್ನು ಓಡಿಸುವವರಿದ್ದಾರೆ. ಟೈಲರ್ ಗಳಿದ್ದಾರೆ, ಡೋಬಿ ಅಂಗಡಿ ಮಾಲಕರಿದ್ದಾರೆ, ಮಲ್ಲಿಗೆ ಕೃಷಿಕರಿದ್ದಾರೆ, ಎಕರೆಗಟ್ಟಲೆ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಮಾಡಿ ವಾರ್ಷಿಕ ಲಕ್ಷಾಂತರ ರೂಪಾಯಿ ಆದಾಯಗಳಿಸುವ - 'ಪ್ರಗತಿಪರ ಕೃಷಿಕ' ಎಂದು ಬಿರುದನ್ನು ಪಡೆದವರೂ ಇದ್ದಾರೆ. ಅವರೆಲ್ಲರೂ - ತಾವು ಕೊರಗರು, 'ಕೊರಗುವುದು ನಮ್ಮ ಬದುಕಲ್ಲ' ಎನ್ನುವ ಸಂದೇಶವನ್ನು ಧನಿಕ ಮತ್ತು ಶೃಮಿಕ ವರ್ಗಕ್ಕೆ ಸಾರಿದವರು! ಬದುಕೆಂಬ ರಥದ ಸ್ವಸಾರಥಿಗಳಿವರು. ಕನಸು ಮತ್ತು ಕನಸು ನನಸು ಮಾಡುವ ಮನಸು - ಇವೆರಡರ ಫಲವೇ ಇದು! ಕನಸು ಸಾಕಾರಗೊಳಿಸಿದ ಆ ಸಧಕರಿಗಿದೋ ನನ್ನದೊಂದು ಪ್ರೀತಿಪೂರ್ವಕ ಅಕ್ಷರ ನಮನಗಳು...
- ಹೃದಯ
 —
ಕೊರಗರಲ್ಲಿ ಒಳ ಪಂಗಡಗಳು ಇದ್ದವೆಂದು ಬರೆದ ಇತಿಹಾಸಕಾರರು!
ಹುಭಾಶಿಕ ಎಂಬ 'ಕಾಡಿ ಕೂಜೆ' (ಕಾಡಿನ ಮಗ)ನ ಹತ್ಯೆ ಮಾಡಿದ ಪಾಲೆಗಾರರ ಈ ಸಮಾಜ - ಕೊರಗರಿಗೆ ಕೆಲವೊಂದು ಘೋರ ಕಟ್ಟುಪಾಡುಗಳನ್ನು, ವಿಧಿ ನಿಷೇದಗಳನ್ನು ಜಾರಿಗೊಳಿಸಿತ್ತು. ಸ್ಪರ್ಶ ವರ್ಣಗಳ ಅರಿವೇ ಇಲ್ಲದ ಕೊರಗರನ್ನು ಅಸ್ಪ್ರಶ್ಯರ ಸಾಲಿಗೆ ಸೇರಿಸಲಾಗಿತ್ತು.

ಅಸ್ಪ್ರಶ್ಯತೆ ತಾರತಮ್ಯದ ಪಿಡುಗಿಗೆ ಅಂಟಿಕೊಂಡ ಕೊರಗ ಸಮುದಾಯವು ಅಕ್ಷರ ಕಲಿಯುವಂತಿರಲಿಲ್ಲ. ದೇವಸ್ಥಾನಗಳಿಗೆ ಪ್ರವೇಶಿಸುವುದನ್ನು, ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವುದನ್ನು ಮತ್ತು ಕಾಡಿನಿಂದ ಊರಿಗೆ ಬಂದಾಗ ಉಗುಳುವುದನ್ನೂ ನಿಷೇಧಿಸಲಾಗಿತ್ತು!! ಹೀಗಾಗಿ, ಕೊರಗರು ಕಾಡಿನಿಂದ ಊರಿಗೆ ಬಂದಾಗ ಎಂಜಲು ಉಗುಳಲು ತಮ್ಮ ಸೊಂಟಕ್ಕೆ ಬಿದಿರಿನ ಬೊಂಬನ್ನು (ತುಳುವಿನಲ್ಲಿ 'ಅಂಡೆ' ಎನ್ನುತ್ತಾರೆ) ಕಟ್ಟಕೊಳ್ಳುತ್ತಿದ್ದರು. ಇದಕ್ಕೆ ಇವರನ್ನು ಊರಿನ ಇತರ ಜನವರ್ಗದವರು 'ಅಂಡೆ ಕೊರಗರು', ಎಂಜಲು ಉಗುಳಲು ತೆಂಗಿನ ಕಾಯಿಯ ಒಣ 'ಗೆರಟೆ' (ತುಳುವಿನಲ್ಲಿ 'ತಿಪ್ಪಿ' ಎನ್ನತ್ತಾರೆ) ಕಟ್ಟಿಕೊಂಡ ಕೊರಗರನ್ನು 'ತಿಪ್ಪಿ ಕೊರಗರು' ಎಂದು ಕರೆದರು.

ಕಾಡಿನಿಂದ ಊರಿಗೆ ಬಂದು ಅಜಲು ಸೇವೆ ಮಾಡುತ್ತಿದ್ದ ಕೊರಗರಿಗೆ ಸೊಪ್ಪಿನ ಬದಲು ಮಾನ ಮುಚ್ಚಿಕೊಳ್ಳಲು ಊರಿನವರು ಹೆಣಕ್ಕೆ ಹಾಕಿದ ಬಟ್ಟೆಯನ್ನೋ, ಹರಕಲು ಬಟ್ಟೆಯನ್ನೋ ಕೊಡುತ್ತಿದ್ದರು. ಹೀಗೆ ಬಟ್ಟೆ ತೊಟ್ಟುಕೊಂಡ ಕೊರಗರನ್ನು ಊರಿನ ಇತರ ಜನವರ್ಗದವರು 'ಕುಂಟು ಕೊರಗರು' ಎಂದು ಕರೆದರು (ಕುಂಟು ತುಳು ಪದ; ಬಟ್ಟೆ ಎಂದರ್ಥ). ಕಾಡಿನಲ್ಲಿಯೇ ಇದ್ದು ತನ್ನ ಕೆಲಸವನ್ನು ನಿರ್ವಹಿಸಿಕೊಂಡು, ಬರೇ ಸೊಪ್ಪು ಅಥವಾ ಪ್ರಾಣಿಗಳ ಚರ್ಮವನ್ನು ಸುತ್ತಿ ಬದುಕುತ್ತಿದ್ದವರು 'ಸೊಪ್ಪು ಕೊರಗರು' ಎಂದು ಕರೆಯಲ್ಪಟ್ಟರು. ಕಿವಿಗೆ ವಂಟಿ ಚುಚ್ಚಿಸಿಕೊಂಡ ಕೊರಗರನ್ನು ತುಳುವರು 'ವಂಟಿ ಕೊರಗರು' ಎಂದು ಕರೆಯಲಾರಂಭಿಸಿದರು. ಕೊರಗರನ್ನು 'ಅಂಡೆ, ಕುಂಟು, ತಿಪ್ಪಿ, ಸೊಪ್ಪು, ವಂಟಿ' ಎಂದು ಗುರುತಿಸಿ ಕರೆದದ್ದು ಇತರ ಜನ ವರ್ಗದವರೇ ಹೊರತು, ಸ್ವತಃ ಕೊರಗರಲ್ಲ! ಸಮಾನತೆ ಬಯಸುತ್ತಿದ್ದ ಕೊರಗರು ತಮ್ಮನ್ನು ತಾವು ಈ ರೀತಿ ಎಂದೂ ಗುರುತಿಸಿದ್ದಿಲ್ಲ ಮತ್ತು ಪ್ರತ್ಯೇಕ ಪಂಗಡಗಳನ್ನ ಕಟ್ಟಿಕೊಂಡವರೇ ಅಲ್ಲ. ಇದು ಸಮಾಜದ ವಿಭಾಜಕ ದೃಷ್ಠಿಯಿಂದಾಗಿ ಉಂಟಾದ ಗೊಂದಲ! ದುರಾದೃಷ್ಟವಶಾತ್, ಎಲ್ಲಾ ಇತಿಹಾಸಕಾರರು, ಸಂಶೋಧಕರು, ಚಿಂತಕರು ಮತ್ತು ಬರಹಗಾರರು - ನೈಜತೆಯನ್ನು ವಿಮರ್ಶಿಸದೆ ಕೊರಗರಲ್ಲಿ ಒಳಪಂಗಡಗಳು ಇದ್ದವೆಂದು, ಹಾಗೆಯೇ ಬರೆದುಬಿಟ್ಟಿದ್ದಾರೆ!
- ಹೃದಯ

ಬುಧವಾರ, ಜುಲೈ 9, 2014

ಸಾಹಿತ್ಯ ಅಕಾಡೆಮಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಂದ ಅರ್ಜಿ ಅಹ್ವಾನಿಸುತ್ತಿದೆ

krupe: avadhi

2014-15ನೇ ಸಾಲಿಗೆ ವಿಶೇಷ ಘಟಕ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಂದ ಫೆಲೋಶಿಪ್ಗೆ ಅರ್ಜಿ ಆಹ್ವಾನ
ಕರ್ನಾಟಕ ಸಾಹಿತ್ಯ ಅಕಾಡೆಮಿಯು 2014-15ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆಯಡಿಯಲ್ಲಿ 8 ಜನರಿಗೆ ತಲಾ ರೂ. 1.00 ಲಕ್ಷದಂತೆ ಫೆಲೋಶಿಪ್ ನೀಡಲು ಉದ್ದೇಶಿಸಿದೆ. ಫೆಲೋಶಿಪ್ಗೆ ಈ ಕೆಳಕಂಡ ಅರ್ಹತೆಯುಳ್ಳವರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಮಾತ್ರ ಅರ್ಜಿ ಹಾಕತಕ್ಕದ್ದು (ಸಂಬಂಧಪಟ್ಟ ಜಾತಿಪ್ರಮಾಣದ ದೃಢೀಕೃತ ಪ್ರತಿಯನ್ನು ಲಗತ್ತಿಸಿರಬೇಕು).
ಯಾವುದೇ ಪದವಿ ಪಡೆದವರು ಅರ್ಜಿ ಹಾಕಬಹುದು (ಪ್ರಮಾಣಪತ್ರದ ದೃಢೀಕೃತ ಪ್ರತಿ ಲಗತ್ತಿಸಬೇಕು) ನಿಗದಿತ ಅರ್ಜಿಯನ್ನು ಸ್ವವಿಳಾಸವಿರುವ ಅಂಚೆ ಲಕೋಟೆ ಇಟ್ಟು ಅಕಾಡೆಮಿಯಿಂದ ಪಡೆಯಬಹುದು.
ನಿರ್ದಿಷ್ಟ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರು , ಪದವಿ ಪಡೆಯದಿದ್ದರೂ ಅರ್ಜಿ ಹಾಕಬಹುದು. 20-50 ವಯೋಮಾನದ ಒಳಗಿನವರು ಅರ್ಜಿ ಹಾಕಬಹುದು (ಸಂಬಂಧಿಸಿದ ಎಸ್.ಎಸ್.ಎಲ್.ಸಿ. ದೃಢೀಕೃತ ಅಂಕಪಟ್ಟಿಯನ್ನು ಲಗತ್ತಿಸಿರಬೇಕು)
ಈ ಕೆಳಕಂಡ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು ಸಾರಲೇಖವನ್ನು  4-5 ಪುಟಗಳವರೆಗೆ ಸಿದ್ಧಪಡಿಸಿ 2014 ಆಗಸ್ಟ್ 15ರೊಳಗೆ ಅಕಾಡೆಮಿಗೆ ಸಲ್ಲಿಸಬೇಕು. ಆಯ್ಕೆಯಾದಲ್ಲಿ ವಿಷಯದ ಬದಲಾವಣೆಯನ್ನು ಮಾಡುವ ಹಕ್ಕು ಅಕಾಡೆಮಿಗೆ ಇರುತ್ತದೆ. ಪಿಎಚ್.ಡಿ. ಅಥವಾ ಎಂ.ಫಿಲ್ ಗೆ ಸಲ್ಲಿಸಿದ ಸಂಶೋಧನಾ ವಿಷಯವಾಗಿರಬಾರದು.
ವಿಷಯಗಳು:
ಕುಲದರ್ಶನ ಸಂಕಥನಗಳ ಅಧ್ಯಯನ.
ದಲಿತ ಸಾಹಿತ್ಯದಲ್ಲಿ ಭಾಷಾಭಿವ್ಯಕ್ತಿ – ಸಾಂಸ್ಕೃತಿಕ ಅನನ್ಯತೆಯ ಸಾಧ್ಯತೆಗಳು.
ದಲಿತರ ಸಾಂಸ್ಕೃತಿಕ ಚರಿತ್ರೆಯ ಹಿನ್ನೋಟಗಳ ಅಧ್ಯಯನ.
ದಲಿತರ ಸಾಂಸ್ಕೃತಿಕ ಕಥನಗಳ ಅಧ್ಯಯನ.
ದಲಿತ ಮಹಿಳಾ ಚಳುವಳಿಯ ಅಧ್ಯಯನ.
ತಳಸ್ತರ ವಚನಕಾರ್ತಿಯರ ವಚನಗಳ ಅಧ್ಯಯನ.
ಗಣಿಗಾರಿಕೆ ಪ್ರದೇಶಗಳ ಜನಪದೀಯ ಅಧ್ಯಯನ.
ಕರ್ನಾಟಕದ ಕುಶಲಕರ್ಮಿಗಳು.
ಸ್ಥಳೀಯ ಕುಲಕಸಬುಗಳು ಮತ್ತು ಜನಬದುಕು.
ಅರ್ಜಿಯನ್ನು ಸಾರಲೇಖದೊಂದಿಗೆ ಸಲ್ಲಿಸಲು ಕೊನೆಯ ದಿನಾಂಕ: 2014 ಆಗಸ್ಟ್ 15
ಹೆಚ್ಚಿನ ವಿವರಗಳಿಗಾಗಿ ಅಕಾಡೆಮಿಯನ್ನು ಸಂಪರ್ಕಿಸಬಹುದಾಗಿದೆ. (080-22211730/ 22106460)
***
2014-15ನೇ ಸಾಲಿಗೆ ಗಿರಿಜನ ಉಪಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಫೆಲೋಶಿಪ್ಗೆ ಅರ್ಜಿ ಆಹ್ವಾನ
ಕರ್ನಾಟಕ ಸಾಹಿತ್ಯ ಅಕಾಡೆಮಿಯು 2014-15ನೇ ಸಾಲಿನಲ್ಲಿ ಗಿರಿಜನ ಉಪಯೋಜನೆಯಡಿಯಲ್ಲಿ 4 ಜನರಿಗೆ ತಲಾ ರೂ. 1.00 ಲಕ್ಷದಂತೆ ಫೆಲೋಶಿಪ್ ನೀಡಲು ಉದ್ದೇಶಿಸಿದೆ.
ಫೆಲೋಶಿಪ್ಗೆ ಈ ಕೆಳಕಂಡ ಅರ್ಹತೆಯುಳ್ಳವರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಮಾತ್ರ ಅರ್ಜಿ ಹಾಕತಕ್ಕದ್ದು (ಸಂಬಂಧಪಟ್ಟ ಜಾತಿಪ್ರಮಾಣದ ದೃಢೀಕೃತ ಪ್ರತಿಯನ್ನು ಲಗತ್ತಿಸಿರಬೇಕು)
ಯಾವುದೇ ಪದವಿ ಪಡೆದವರು ಅರ್ಜಿ ಹಾಕಬಹುದು (ಪ್ರಮಾಣಪತ್ರದ ದೃಢೀಕೃತ ಪ್ರತಿ ಲಗತ್ತಿಸಬೇಕು)
ನಿಗದಿತ ಅರ್ಜಿಯನ್ನು ಸ್ವವಿಳಾಸವಿರುವ ಅಂಚೆ ಲಕೋಟೆ ಇಟ್ಟು ಅಕಾಡೆಮಿಯಿಂದ ಪಡೆಯಬಹುದು. ನಿರ್ದಿಷ್ಟ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರು , ಪದವಿ ಪಡೆಯದಿದ್ದರೂ ಅರ್ಜಿಹಾಕಬಹುದು.
20-50 ವಯೋಮಾನದ ಒಳಗಿನವರು ಅರ್ಜಿ ಹಾಕಬಹುದು (ಸಂಬಂಧಿಸಿದ ಎಸ್.ಎಸ್.ಎಲ್.ಸಿ. ದೃಢೀಕೃತ ಅಂಕಪಟ್ಟಿಯನ್ನು ಲಗತ್ತಿಸಿರಬೇಕು)
ಈ ಕೆಳಕಂಡ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು ಸಾರಲೇಖವನ್ನು  4-5 ಪುಟಗಳವರೆಗೆ ಸಿದ್ಧಪಡಿಸಿ 2014 ಆಗಸ್ಟ್ 15ರೊಳಗೆ ಅಕಾಡೆಮಿಗೆ ಸಲ್ಲಿಸಬೇಕು.
ಆಯ್ಕೆಯಾದಲ್ಲಿ ವಿಷಯದ ಬದಲಾವಣೆಯನ್ನು ಮಾಡುವ ಹಕ್ಕು ಅಕಾಡೆಮಿಗೆ ಇರುತ್ತದೆ. ಪಿಎಚ್.ಡಿ. ಅಥವಾ ಎಂ.ಫಿಲ್ ಗೆ ಸಲ್ಲಿಸಿದ ಸಂಶೋಧನಾ ವಿಷಯವಾಗಿರಬಾರದು.
ವಿಷಯಗಳು:
ಗಿರಿಜನರ ವೈದ್ಯಪದ್ಧತಿಗಳು.
ಗಿರಿಜನರ ಆಚರಣೆಗಳ ಸಾಂಸ್ಕೃತಿಕ ನೆಲೆ.
ಗಿರಿಜನರ ಪರಿಸರದ ವೈವಿಧ್ಯತೆ – ಸಾಂಸ್ಕೃತಿಕ ಅಧ್ಯಯನ.
ಪ್ರಾಣಿಗಳ ವರ್ತನೆಯ ಅಧ್ಯಯನ – ಗಿರಿಜನರ ಸಾಂಸ್ಕೃತಿಕ ನೆಲೆಗಳಲ್ಲಿ.
ಕುವೆಂಪು ಅವರ ಸಾಹಿತ್ಯ ಮತ್ತು ಗಿರಿಜನ ಸಂಸ್ಕೃತಿ ವೈವಿಧ್ಯ.
ಗಿರಿಜನ ಮಹಿಳೆಯರ ಸಾಂಸ್ಕೃತಿಕ ಕಥನಗಳ ಅಧ್ಯಯನ.   ಅರ್ಜಿಯನ್ನು ಸಾರಲೇಖದೊಂದಿಗೆ ಸಲ್ಲಿಸಲು ಕೊನೆಯ ದಿನಾಂಕ: 2014 ಆಗಸ್ಟ್ 15
ಹೆಚ್ಚಿನ ವಿವರಗಳಿಗಾಗಿ ಅಕಾಡೆಮಿಯನ್ನು ಸಂಪರ್ಕಿಸಬಹುದಾಗಿದೆ. (080-22211730/ 22106460)
***
2014-15ನೇ ಸಾಲಿಗೆ ಫೆಲೋಶಿಪ್ ನೀಡಲು ಅರ್ಜಿ ಆಹ್ವಾನ
ಕರ್ನಾಟಕ ಸಾಹಿತ್ಯ ಅಕಾಡೆಮಿಯು 2014-15ನೇ ಸಾಲಿನಲ್ಲಿ 5 ಜನರಿಗೆ ತಲಾ ರೂ. 1.00 ಲಕ್ಷದಂತೆ ಫೆಲೋಶಿಪ್ ನೀಡಲು ಉದ್ದೇಶಿಸಿದೆ.
ಫೆಲೋಶಿಪ್ಗೆ ಈ ಕೆಳಕಂಡ ಅರ್ಹತೆಯುಳ್ಳವರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಯಾವುದೇ ಪದವಿ ಪಡೆದವರು ಅರ್ಜಿ ಹಾಕಬಹುದು (ಪ್ರಮಾಣಪತ್ರದ ದೃಢೀಕೃತ ಪ್ರತಿ ಲಗತ್ತಿಸಬೇಕು)
ನಿಗದಿತ ಅರ್ಜಿಯನ್ನು ಸ್ವವಿಳಾಸವಿರುವ ಅಂಚೆ ಲಕೋಟೆ ಇಟ್ಟು ಅಕಾಡೆಮಿಯಿಂದ ಪಡೆಯಬಹುದು.
ನಿರ್ಸಿಷ್ಟ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರು , ಪದವಿ ಪಡೆಯದಿದ್ದರೂ ಅರ್ಜಿ ಹಾಕಬಹುದು.
20-50 ವಯೋಮಾನದ ಒಳಗಿನವರು ಅರ್ಜಿ ಹಾಕಬಹುದು (ಸಂಬಂಧಿಸಿದ ಎಸ್.ಎಸ್.ಎಲ್.ಸಿ. ದೃಢೀಕೃತ ಅಂಕಪಟ್ಟಿಯನ್ನು ಲಗತ್ತಿಸಿರಬೇಕು)
ಈ ಕೆಳಕಂಡ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು ಸಾರಲೇಖವನ್ನು 4-5 ಪುಟಗಳವರೆಗೆ ಸಿದ್ಧಪಡಿಸಿ 2014 ಆಗಸ್ಟ್ 15ರೊಳಗೆ ಅಕಾಡೆಮಿಗೆ ಸಲ್ಲಿಸಬೇಕು.
ಆಯ್ಕೆಯಾದಲ್ಲಿ ವಿಷಯದ ಬದಲಾವಣೆಯನ್ನು ಮಾಡುವ ಹಕ್ಕು ಅಕಾಡೆಮಿಗೆ ಇರುತ್ತದೆ. ಪಿಎಚ್.ಡಿ. ಅಥವಾ ಎಂ.ಫಿಲ್ ಗೆ ಸಲ್ಲಿಸಿದ ಸಂಶೋಧನಾ ವಿಷಯವಾಗಿರಬಾರದು.
ವಿಷಯಗಳು:
ಕನ್ನಡದಲ್ಲಿ ವೈದ್ಯ ಸಾಹಿತ್ಯ, ವಿಜ್ಞಾನ ಸಾಹಿತ್ಯ- ಸಮಸ್ಯೆಗಳು ಹಾಗೂ ಸವಾಲುಗಳು.
ಶಿಕ್ಷಣ ಮಾಧ್ಯಮವಾಗಿ ಕನ್ನಡ – ಸಮಸ್ಯೆಗಳು, ಸವಾಲುಗಳು ಹಾಗೂ ಪರಿಹಾರೋಪಾಯಗಳು.
ಕನ್ನಡ ಸಾಹಿತ್ಯದಲ್ಲಿ ಜಾಗತೀಕರಣದ ಸ್ವರೂಪ ಜ್ಞಾನಯುಗದ ಒಳಮರ್ಮಗಳು ಮತ್ತು ಕನ್ನಡ ಸಮುದಾಯಗಳ ಮೇಲಿನ ಪ್ರಭಾವಗಳು.
ಸ್ಥಳೀಯ ಜ್ಞಾನೋತ್ಪಾದನೆಯ ಹೊಸ ಮಾರ್ಗಗಳು ಮತ್ತು ಕಾವ್ಯಮೀಮಾಂಸೆ-ಒಂದು ಅನ್ವೇಷಣೆ.
ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯ ಸಾಮಾಜಿಕ ಸಂಸ್ಕೃತಿಯ ಅಧ್ಯಯನ.
ಸ್ಲಮ್ಗಳಲ್ಲಿ ಬದುಕುವ ಮಹಿಳೆಯರ ಅಧ್ಯಯನ.
ಕರ್ನಾಟಕದಲ್ಲಿ ಸಮುದಾಯನಿಷ್ಠ ಆರೋಗ್ಯ ಪ್ರಯೋಗಗಳು.
ಸ್ಥಳೀಯ ಬೇಸಾಯ ಪರಂಪರೆಗಳ ಅಧ್ಯಯನ.
ಸ್ಥಳೀಯ ಪಶುಸಂಗೋಪನೆ ವಿಧಾನಗಳ ಅಧ್ಯಯನ.
ಮುಸ್ಲಿಂ ಸಮುದಾಯದೊಳಗಿನ ಜನಪದೀಯ ನಂಬಿಕೆಗಳು.
ನವ ಅಧ್ಯಾತ್ಮಿಕತೆಯ ಸಾಂಸ್ಕೃತಿಕ ಅಧ್ಯಯನ.
ಕನ್ನಡ ಇ-ಪತ್ರಿಕೆಗಳ ಅಧ್ಯಯನ.
ಕರ್ನಾಟಕದಲ್ಲಿ ಕ್ರೈಸ್ತ ಸಮುದಾಯದ ಮಹಿಳೆಯರ ಆಚರಣೆಗಳು.
ಅರ್ಜಿಯನ್ನು ಸಾರಲೇಖದೊಂದಿಗೆ ಸಲ್ಲಿಸಲು ಕೊನೆಯ ದಿನಾಂಕ: 2014 ಆಗಸ್ಟ್ 15 ಹೆಚ್ಚಿನ ವಿವರಗಳಿಗಾಗಿ ಅಕಾಡೆಮಿಯನ್ನು ಸಂಪರ್ಕಿಸಬಹುದಾಗಿದೆ. (080-22211730/ 22106460)

1

ನಗರ ಸ್ವಚ್ಛಗೊಳಿಸಿದ ಕೊರಗರ ಬದುಕು ಸ್ವಚ್ಛವಾಗಿಲ್ಲ




ಮಂಗಳೂರು ಮಹಾನಗರ ಸ್ವಚ್ಛತೆಯಲ್ಲಿ ರಾಜ್ಯದಲ್ಲಿಯೇ ದ್ವಿತೀಯ ಸ್ಥಾನ ಅಲಂಕರಿಸಿದೆ. ಆದರೆ, ಈ ನಗರವನ್ನು ಸ್ವಚ್ಛಪಡಿಸುವ, ಸುಂದರವಾಗಿ ನಳನಳಿಸುವಂತೆ ಮಾಡುವ ಕಸುರಿನ ಹಿಂದಿನ ಬಳಲಿದ ಕೊರಗರ ಬದುಕು ಮಾತ್ರ ರೋಗಗ್ರಸ್ಥವಾಗಿದೆ.
ಕರ್ನಾಟಕ ರಾಜ್ಯದ ನಗರ, ಪಟ್ಟಣ ಹಾಗು ಸ್ಥಳೀಯ ಸರಕಾರಿ ಸಂಸ್ಥೆಗಳಲ್ಲಿ ಒಟ್ಟು ನಾಲ್ಕು ಲಕ್ಷಕ್ಕೂ ಹೆಚ್ಚು ಪೌರ ಕಾರ್ಮಿಕರು ಖಾಯಂ ಹಾಗೂ ಗುತ್ತಿಗೆ ಆಧಾರದಲ್ಲಿ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಿನಾ ಬೆಳಗಾದರೆ ಇವರ ಕಸುಬು ರಸ್ತೆ ಗುಡಿಸುವುದು, ತೊಟ್ಟಿಯಿಂದ ಕಸ ವಿಲೇವಾರಿ ಮಾಡುವುದು, ಕಸವನ್ನು ವಾಹನಕ್ಕೆ ಹೇರುವುದು, ಚರಂಡಿಗಿಳಿದು ಸ್ವಚ್ಛ ಮಾಡುವುದು, ಸಾರ್ವಜನಿಕ ಶೌಚಾಲಯ ಸ್ವಚ್ಛಗೊಳಿಸುವುದು, ಸತ್ತ ನಾಯಿ - ದನ ಮುಂತಾದ ಪ್ರಾಣಿಗಳ ಕಳೇಬರವನ್ನು ಎತ್ತುವುದು, ಮ್ಯಾನ್ಹೋಲ್ಗಳ ಒಳಗಿಳಿದು ಈಜಾಡಿ ಸ್ವಚ್ಚಗೊಳಿಸುವುದು, ಸೊಳ್ಳೆ ನಿವಾರಕ ರಾಸಾಯನಿಕ ಔಷದಿ ಸಿಂಪಡಿಸುವುದು... ಇತ್ಯಾದಿ.
ಪೌರಕಾರ್ಮಿಕರಲ್ಲಿ ಶೇಕಡ 98ರಷ್ಟು ಜನ ಸಂವಿಧಾನದ 341ನೇ ವಿಧಿಯಡಿ ನಮೂದಿಸಲ್ಪಟ್ಟ ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿದವರು. ದ.ಕ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಕೆಲಸ ನಿರ್ವಹಿಸುವ ಶೇಕಡ 78ರಷ್ಟು ಜನ ಆದಿವಾಸಿ ಕೊರಗ ಬುಡಕಟ್ಟು ಪಂಗಡಕ್ಕೆ ಸೇರಿದವರು.
ಈ ಆಧುನಿಕ ಯುಗದಲ್ಲಿಯೂ ಕೊಚ್ಛೆ ಗುಂಡಿಯನ್ನು ಮನುಷ್ಯರೇ ಇಳಿದು ಸ್ವಚ್ಛ ಮಾಡುತ್ತಾರೆ. ಹೀಗೆ ಶೌಚಗುಂಡಿಗಿಳಿದು ಸ್ವಚ್ಛ ಮಾಡುವಾಗ ಅದರೊಳಗಿನ ವಿಷಾನಿಲ ಸೇವಿಸಿ ಸಾಯುವುದು ಕೂಡ ಅಪರೂಪವೇನಲ್ಲ! 2011ರ ನವಂಬರ್ 8ರಂದು ಕಿನ್ನಿಗೋಳಿ ಎಂಬಲ್ಲಿ ಕಿಟ್ಟ ಕೊರಗ ಎಂಬ ಪೌರಕಾರ್ಮಿಕ ಶೌಚಗುಂಡಿಯೊಳಗೇ ಸಾವಿಗೀಡಾಗಿದ್ದ. ಇದು ಸುದ್ದಿಯಾದ ಸಾವು. ಇನ್ನು ಹೀಗೆ ಸಾವಿಗೀಡಾಗಿ ಸುದ್ದಿಯಾಗವರೆಷ್ಟೋ?!
ಕೊಳಚೆಯಲ್ಲಿಯೇ ತಮ್ಮ ಆಯುಷ್ಯವನ್ನು ಕಳೆಯುವ ಪೌರ ಕಾರ್ಮಿಕರು - ಕಣ್ಣಿನ ತೊಂದರೆಗಳು, ಚರ್ಮದ ವ್ಯಾಧಿಗಳು, ಶ್ವಾಸಕೋಶದ ಸೋಂಕು, ರಕ್ತ ಸಂಬಂಧಿ ಕಾಯಿಲೆಗಳು, ಕ್ಷಯ, ಮಲೇರಿಯಾ, ಕ್ಯಾಸ್ಸರ್ ಮುಂತಾದ ಗಂಭೀರ ರೋಗಗಳಿಂದ ಅಸುನೀಗುವುದು ಸಾಮಾನ್ಯ.
ಒಳಚರಂಡಿ ಸ್ವಚ್ಛ ಮಾಡುವಾಗ ಕಬ್ಬಿಣ ಸೀಸ ಮತ್ತಿತರ ರಾಸಾಯನಿಕ ಧಾತುಗಳು ದೇಹದೊಳಕ್ಕೆ ಚುಚ್ಚಿ, ಗಾಯ ನಂಜಾಗಿ ಗ್ಯಾಂಗ್ರೀನ್ ಬರುವ ಸಾಧ್ಯತೆಯೇ ಹೆಚ್ಚು. ಈ ನರಕಯಾತನೆಯಿಂದ ಮಾನಸಿಕ ನೆಮ್ಮದಿ ಪಡೆಯಲು ಅಮಲು ಪದಾರ್ಥದಂತಹ ದುಶ್ಚಟಕ್ಕೆ ಬಲಿ ಬಿದ್ದು ತಮ್ಮ ಜೀವನದ ಕರ್ಮಯಾತ್ರೆಯನ್ನು ಅರ್ಧಕ್ಕೆ ಮುಗಿಸಿ ಬಿಡುತ್ತಾರೆ. ಇವರಿಗೆ ಬದುಕುವ ಹಕ್ಕಾಗಲಿ, ಕಾರ್ಮಿಕರ ಹಕ್ಕಾಗಲೀ ಯಾವುದೂ ಇರುವುದಿಲ್ಲ.
ನಗರ ಸ್ವಚ್ಛತೆಗಾಗಿ ಇಷ್ಟೆಲ್ಲಾ ಕಷ್ಟಕೋಟಲೆಗಳನ್ನು ಅನುಭವಿಸಿದರೂ ಅವರ ಸೇವಾ ಸ್ಥಿತಿಗತಿಗಳು ಹೀನಾಯವಾಗಿಯೇ ಇದೆ. ಇವರ ಅಭಿವೃದ್ಧಿಗೆ ಸೂಕ್ತ ಯೋಜನೆಗಳನ್ನು ಜಾರಿಗೊಳಿಸಲು ಆಳುವ ಸರಕಾರಗಳು ಮುಂದಾಗಿಲ್ಲ. ಇವರಿಗೆ ಕೈಗವಸು, ಮುಖಗವಸು, ಬೂಟು, ಸಾಬೂನು ಮತ್ತಿತರ ನೈರ್ಮಲ್ಯಕ್ಕೆ ಬೇಕಾಗ ಸಾಮಾಗ್ರಿಗಳನ್ನು ಒದಗಿಸಲಾಗುತ್ತಿಲ್ಲ. ಹೀಗಾಗಿ ಕಾರ್ಮಿಕ ಕುಟುಂಬಗಳು ಸ್ವಚ್ಛತೆಯಿಲ್ಲದೆ ಬದುಕು ಸಾಗಿಸುತ್ತಾ ನರಕದ ಕೂಪದಲ್ಲಿ ದಿನದೂಡುತ್ತಿವೆ. ಸಾಮಾನ್ಯ ಭವಿಷ್ಯನಿಧಿ, ಇಎಸ್ಐ, ಆರೋಗ್ಯ ವಿಮೆ ಎಲ್ಲವೂ ಇವರಿಗೆ ಮರೀಚಿಕೆ. ಪೌರ ಕಾರ್ಮಿಕರ ಸಮಗ್ರ ಅಭಿವೃದ್ದಿಗಾಗಿ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದ್ದ 'ಐಪಿಡಿ ಸಾಲಪ್ಪ ವರದಿ' ದಶಕಗಳಿಂದಲೂ ಧೂಳುತ್ತಿನ್ನುತ್ತಿದೆ.
ತಮ್ಮ ಬದುಕು ಬವಣೆ ವೃತ್ತಿ ಜೊತೆಗೆ ಸರಕಾರದ ದಿವ್ಯ ನಿರ್ಲಕ್ಷ್ಯಕ್ಕೊಳಗಾಗ ಇವರಿಗೆ ಆರೋಗ್ಯಯುತ ಬದುಕು ಮತ್ತು ಮೂಲಭೂತ ಹಕ್ಕುಗಳಿಗಾಗಿ ಸಂಘಟನೆಗಳು ಹೋರಾಡಬೇಕಿದೆ. ನಗರ ಪಟ್ಟಣಗಳನ್ನು ಸ್ವಚ್ಛಗೊಳಿಸುವ ಕಾರ್ಮಿಕರ ಬದಕನ್ನು ಸ್ವಚ್ಛಗೊಳಿಸಬೇಕಿದೆ.
- ಹೃದಯ