ಶನಿವಾರ, ಮಾರ್ಚ್ 17, 2018

ಎನ್‌ಕೌಂಟರ್ ಸಾವುಗಳು: ಪ್ರಭುತ್ವವೇ ಧೂರ್ತನಾದರೆ..?

         ಅನುಶಿವಸುಂದರ್ 
Image result for encounter
ಉತ್ತರಪ್ರದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಎನ್ಕೌಂಟರ್ ಸಾವುಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲೇಬೇಕು.

ಅಪರಾಧಿಗಳನ್ನು ನಿರ್ಮೂಲನೆ ಮಾಡಲು ಇರುವ ಅತ್ಯುತ್ತಮ ಮಾರ್ಗವೆಂದರೆ ಅಪರಾಧಿಗಳನ್ನೇ ನಿರ್ಮೂಲನೆ ಮಾಡುವುದು. ಉತ್ತರಪ್ರದೇಶವನ್ನು ಆರ್ಥಿಕ ಹೂಡಿಕೆಗೆ ಸುರಕ್ಷಿತವಾದ ಪ್ರದೇಶವನ್ನಾಗಿ ಮಾಡಲು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಅನುಸರಿಸುತ್ತಿರುವ ಮಾರ್ಗ ಇದೆ ಎಂದು ಕಾಣುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು, ೧೮ ಜನ ಕೇಂದ್ರ ಕ್ಯಾಬಿನೆಟ್ ಮಂತ್ರಿಗಳು ಮತ್ತು ಪ್ರಮುಖ ಕೈಗಾರಿಕೋದ್ಯಮಿಗಳು ಭಾಗವಹಿಸಿದ್ದ ಉತ್ತರಪ್ರದೇಶದ ಹೂಡಿಕಾ ಸಮಾವೇಶಕ್ಕೆ ಮುಂಚಿನ ೧೦ ದಿನಗಳಲ್ಲಿ ಪೊಲೀಸರು ಮತ್ತು ತಥಾಕಥಿತ ಕ್ರಿಮಿನಲ್ಗಳ ನಡುವೆ ನಾಲ್ಕು ಎನ್ಕೌಂಟರ್ಗಳು ನಡೆದವು. ಇದನ್ನೂ ಸೇರಿಸಿದರೆ ಯೋಗಿ ಆದಿತ್ಯನಾಥರ ನೇತೃತ್ವದಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ೨೦೧೭ರ ಮಾರ್ಚ ಮತ್ತು ೨೦೧೮ರ ಜನವರಿಯ ನಡುವೆ ೯೨೧ ಎನ್ಕೌಂಟರ್ಗಳು ನಡೆದಿವೆ ಮತ್ತು ಇವುಗಳಲ್ಲಿ ೩೩ ಜನರು ಸಾವನ್ನಪ್ಪಿದ್ದಾರೆ. ಅಪಾರ ಸಂಖ್ಯೆಯ ಕೊಲೆಗಳನ್ನು ಗಮನಕ್ಕೆ ತೆಗೆದುಕೊಂಡ ರಾಷ್ಟ್ರೀಯ ಮಾನವ ಹಕ್ಕುಗಳ ಅಯೋಗವು ತಾನೇ ಸ್ವಯಂ ಪ್ರೇರಿತವಾಗಿ ಉತ್ತರಪ್ರದೇಶ ಸರ್ಕಾರಕ್ಕೆ ಕಳೆದ ನವಂಬರ್ನಲ್ಲಿ ನೋಟೀಸನ್ನು ನೀಡಿದೆ. ಆದರೆ ಉತ್ತರಪ್ರದೇಶ ಸರ್ಕಾರ ಈವರೆಗೆ ಅದಕ್ಕೆ ಉತ್ತರಿಸುವ ಗೋಜಿಗೂ ಹೋಗಿಲ್ಲ.
ಈಗ ಉತ್ತರಪ್ರದೇಶದಲ್ಲಿ ನಡೆಯುತ್ತಿರುವುದು ಹಿಂದೆ ಎಲ್ಲೂ ನಡೆದೇ ಇಲ್ಲ ಅಂತೇನಲ್ಲ. ಇಂಥ ಎನ್ಕೌಂಟರ್ ಕೊಲೆಗಳಿಗೆ ಮಹಾರಾಷ್ಟ್ರವೇ ನೇತಾರ. ಅಲ್ಲಿ ಕ್ರಿಮಿನಲ್ ಗ್ಯಾಂಗ್ಗಳನ್ನು ನಿರ್ಮೂಲನೆ ಮಾಡುವ ಹೆಸರಿನಲ್ಲಿ ೧೯೮೨-೨೦೦೩ರ ನಡುವೆ ಅಪರಾಧದ ಆರೋಪ ಹೊತ್ತಿದ್ದ ೧೨೦೦ ಜನರನ್ನು ಕೊಲ್ಲಲಾಗಿದೆ. ಅತಿಹೆಚ್ಚು ಎನ್ಕೌಂಟರ್ ಕೊಲೆಗಳನ್ನು ಮಾಡಿದ ಪೋಲಿಸ್ ಅಧಿಕಾರಿಯನ್ನು ಎನ್ಕೌಂಟರ್ ಸ್ಪೆಷಲಿಸ್ಟ್ ಎಂದು ಹಾಡಿಹೊಗಳಲಾಗುತ್ತಿತ್ತಲ್ಲದೆ ಅಂಥವರ ಬಗ್ಗೆ ಸಿನಿಮಾಗಳನ್ನು ಮಾಡಲಾಯಿತು

ಅಪರಾಧಿಯೆಂದು ಅನುಮಾನಿಸಲ್ಪಟ್ಟ ವ್ಯಕ್ತಿಗೂ ನ್ಯಾಯಬದ್ಧ ವಿಚಾರಣೆಯ ಹಕ್ಕಿರುತ್ತದೆಂದೂ, ಯಾವ ವ್ಯಕ್ತಿಯನ್ನು ಕಾನೂನಿನ ಸಮ್ಮತಿಯಿಲ್ಲದೆ ಕೊಲ್ಲಲಾಗದೆಂದೂ ಕೆಲವು ಮಾನವ ಹಕ್ಕು ಸಂಘಟನೆಗಳು ಯಾವಾಗ ಎನ್ಕೌಂಟರ್ಗಳನ್ನು ಪ್ರಶ್ನಿಸಲು ಪ್ರಾರಂಭಿಸಿದರೋ ಆಗ ಮಾತ್ರ ಕೆಲವು ಅಧಿಕಾರಿಗಳಿಗೆ ತಮ್ಮ ಕಾರ್ಯಾಚರಣೆಯ ಬಗ್ಗೆ ಉತ್ತರಿಸಲೇಬೇಕಾದ ಅನಿವಾರ್ಯತೆ ಉಂಟಾಯಿತು. ಕೆಲವರಿಗೆ ಶಿಕ್ಷೆಯಾಯಿತಾದರೂ ಬಹಳಷ್ಟು ಜನ ಬಚಾವಾದರು. ವಾಸ್ತವವಾಗಿ ಪ್ರದೀಪ್ ಶರ್ಮಾ ಎಂಬ ಎನ್ಕೌಂಟರ್ ಪರಿಣಿತ ಅಧಿಕಾರಿಯೊಬ್ಬ ೨೦೦೯ರಲ್ಲಿ ಅಮಾನತ್ತಿಗೊಳಗಾದರೂ ೨೦೧೩ರಲ್ಲಿ ಎಲ್ಲಾ ಆರೋಪಗಳಿಂದ ಮುಕ್ತನಾದ. ಆತನ ಪ್ರಕಾರ ಕ್ರಿಮಿನಲ್ಗಳು ಕೊಚ್ಚೆನೀರಿನಂತೆ. ಮತ್ತು ತಾನು ಪರಿಶುದ್ಧ ನೀರಿನಂತೆ. ಈತ ವೈಯಕ್ತಿಕವಾಗಿ ೧೦೪ ಎನ್ಕೌಂಟರ್ ಕೊಲೆಗಳಿಗೆ ಕಾರಣಕರ್ತನೂ ಆಗಿದ್ದಾನೆ.

ಉತ್ತರಪ್ರದೇಶದ ಪೊಲೀಸರ ಕಾರ್ಯಾಚರಣೆಗಳಿಗೆ ರಾಜ್ಯದ ಮುಖ್ಯಮಂತ್ರಿಯ ಬಹಿರಂಗ ಬೆಂಬಲವಿದೆ. ಇನ್ನು ಮುಂದೆ ಉತ್ತರಪ್ರದೇಶದ ಪೊಲೀಸರು ಗುಂಡಿಗೆ ಗುಂಡಿನಿಂದಲೇ ಉತ್ತರ ಕೊಡುತ್ತಾರೆ. ಹಿಂದಿನ ಸರ್ಕಾರಗಳಂತಲ್ಲದೆ ನಮ್ಮ ಸರ್ಕಾರವು ಸಮಸ್ಯೆಯನ್ನು ಬಗೆಹರಿಸಲು ಯಾವ ಪದ್ಧತಿಯು ಸಮರ್ಪಕವಾದದ್ದೋ ಅದನ್ನು ಅನುಸರಿಸಲು ಪೊಲೀಸರಿಗೆ ಸಂಪೂರ್ಣ ಅಧಿಕಾರವನ್ನು ಕೊಟ್ಟಿದ್ನ್ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ರಾಜ್ಯದ ಅಲ್ಪಸಂಖ್ಯಾತ ಸಮುದಾಯಗಳು ಹಾಗೂ ನಿರ್ಲಕ್ಷ್ಯಕ್ಕೊಳಗಾದ ಸಮುದಾಯಗಳ ಬಗ್ಗೆ ಸಂವೇದನಾಶೂನ್ಯರೆಂದು ಹೆಸರು ಪಡೆದಿರುವ ಅಲ್ಲಿನ ಪೊಲೀಸ್ ಪಡೆಗೆ ರೀತಿ ಸಂಪೂರ್ಣ ಹಸಿರು ನಿಶಾನೆ  ದೊರೆತೆರುವುದು ನಿಜಕ್ಕೂ ಆತಂಕಕಾರಿಯಾಗಿದೆ. ಒಬ್ಬ ಮನುಷ್ಯನನ್ನು ಕೊಂದುಹಾಕಿದ ಮೇಲೆ ಆತನು ಅಪರಾಧಿಯೆಂದು ಹೇಗೆ ಸಾಬೀತು ಮಾಡಲು ಸಾಧ್ಯ? ಪೂರ್ವ ನಿರ್ಧಾರಿತವಾಗಿಯೇ ಒಬ್ಬನನ್ನು ಅಪರಾಧಿಯೆಂದು ತೀರ್ಮಾನಿಸಿ ಕೊಲೆ ಮಾಡಿಬಿಡುವ ಪದ್ಧತಿ ದೇಶದ ಕಾನೂನು ಹಾಗೂ ನ್ಯಾಯ ವ್ಯವಸ್ಥೆಯನ್ನೇ ಲೇವಡಿ ಮಾಡುವಂತಿದೆ. ಒಬ್ಬ ವ್ಯಕ್ತಿಯು ಅಪರಾಧಿಯಾಗಿದ್ದರೂ, ಆಗಿರದಿದ್ದರೂ ಇದು ವ್ಯಕ್ತಿಯೊಬ್ಬನ ಹಕ್ಕಿನ ಮೂಲಭೂತ ಉಲ್ಲಂಘನೆಯೇ ಆಗಿದೆ. ಒಂದು ನಾಗರಿಕ ಸಮಾಜದಲ್ಲಿ ಇಂಥ ಕೃತ್ಯಗಳಿಗೆ ಕಿಂಚಿತ್ತೂ ಸಮರ್ಥನೆಯಿರುವುದಿಲ್ಲ.

ಹೀಗೆ ಅಪರಾಧಿಗಳನ್ನು ಅಕ್ಷರಶಃ ನಿರ್ಮೂಲನೆ ಮಾಡುವುದರ ಜೊತೆಜೊತೆಗೆ ಉತ್ತರಪ್ರದೇಶ ಸರ್ಕಾರವು ಮಹಾರಾಷ್ಟ್ರದ ಅನುಭವಗಳಿಂದ ಮತ್ತೊಂದು ಕ್ರಮವನ್ನು ಆಮದು ಮಾಡಿಕೊಂಡಿದೆ. ೧೯೯೯ರಲ್ಲಿ ಮಹಾರಾಷ್ಟ್ರದಲ್ಲಿ ಜಾರಿಯಾದ ( ಕೋಕಾ) ಕಾಯಿದೆಯನ್ನೇ ಹೋಲುವ ಉತ್ತರ ಪ್ರದೇಶ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆಯನ್ನು (ಉಪ್ರ ಕೋಕಾ)ಉತ್ತರಪ್ರದೇಶ ಶಾಸನಸಭೆಯು ಚರ್ಚೆಯನ್ನೇ ಮಾಡದೆ ೨೦೧೭ರ ಡಿಸೆಂಬರ್ನಲ್ಲಿ ಅನುಮೋದಿಸಿತು. ಮಹತ್ವದ ವಿಷಯವೇನೆಂದರೆ ೨೦೦೮ರಲ್ಲಿ ಆಗಿನ ಮುಖ್ಯಮಂತ್ರಿ ಮಾಯಾವತಿಯವರ ಬಹುಜನ ಸಮಾಜ ಪಕ್ಷದ ನೇತೃತ್ವದ ಸರ್ಕಾರವೂ ಸಹ ಇದೇ ಬಗೆಯ ಶಾಸನವೊಂದನ್ನು ಜಾರಿ ಮಾಡಲು ಪ್ರಯತ್ನಿಸಿದಾಗ ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಅದನ್ನು ತಿರಸ್ಕರಿಸಿದ್ದರು. ಆದರೆ ಹಾಲಿ ರಾಷ್ಟ್ರಪತಿಗಳು ಬಾರಿ ಅದಕ್ಕೆ ಅನುಮತಿ ಕೊಡುವ ಸಾಧ್ಯತೆ ಹೆಚ್ಚಾಗಿದೆ.

ಬಗೆಯ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆಗಳ ಸಮಸ್ಯೆಯೇನೆಂದರೆ (ಉಪ್ರಕೋಕಾ, ಮಕೋಕಾ) ಅಂತರ್ಗತವಾಗಿರುವ ಕರಾಳ ಸ್ವರೂಪದಿಂದಾಗಿ ಕಾಯಿದೆಯ ಕಾನೂನಿನ ದುರುಪಯೋಗಕ್ಕೆ ಸಾಕಷ್ಟು ಅವಕಾಶಗಳನ್ನು ತೆರೆದಿಡುತ್ತದೆ. ಹಲವಾರು ಹಿರಿಯ ಪೊಲೀಸ್ ಅಧಿಕಾರಿಗಳು ಹಲವಾರು ಬಾರಿ ಹೇಳಿರುವಂತೆ ಅಪರಾಧಗಳನ್ನು ಮತ್ತು ಅಪರಾಧಿಗಳನ್ನು ನಿಯಂತ್ರಿಸಲು ಪೊಲೀಸರ ಬಳಿ ಸಾಕಷ್ಟು ಅಧಿಕಾರವಿಲ್ಲವಂತೇನಲ್ಲ. ಈಗಾಗಲೇ ಇರುವ ಕಾನೂನುಗಳಲ್ಲೇ ಅಂತ ಕಠಿಣ ಕ್ರಮಗಳ ಅವಕಾಶವಿದ್ದು, ಕೇಂದ್ರದ ಕಾನೂನುಬಾಹಿರ ಚಟುವಟಿಕೆಗಳ ನಿಷೇಧ ಕಾಯಿದೆ-೧೯೬೭ (ಅನ್ಲಾಫುಲ್ ಆಕ್ಟಿವಿಟೀಸ್ ಪ್ರಿವೆನ್ಷನ್ ಆಕ್ಟ್-ಯುಎಪಿಎ)ಯು ಪೊಲೀಸರ ಅಧಿಕಾರದ ವ್ಯಾಪ್ತಿಯನ್ನು ಇನ್ನಷ್ಟು ಹಿಗ್ಗಿಸುತ್ತದೆ. ಆದರೆ ಇರುವ ಅಧಿಕಾರಗಳನ್ನು ಬಳಸಿಕೊಳ್ಳುವ ಬದಲಿಗೆ ಅಪರಾಧ ಮತ್ತು ಭಯೋತ್ಪಾದನೆಯನ್ನು ನಿಗ್ರಹಿಸುವ ಹೆಸರಿನಲ್ಲಿ ರಾಜ್ಯಗಳು ತಮಗೆ ಇನ್ನಷ್ಟು ಅಧಿಕಾರವನ್ನು ಕೊಡುವಂಥ ಪ್ರತ್ಯೇಕ ಕಾಯಿದೆಗಳನ್ನು ಜಾರಿ ಮಾಡಲು ಯತ್ನಿಸುತ್ತಿರುತ್ತವೆ. ಬಹಳಷ್ಟು ಸಾರಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಸಮರ್ಥರಾದವರನ್ನು ಬಂಧಿಸಲು ಇಂಥಾ ಕಾನೂನುಗಳು  ಬಳಕೆಯಾಗುತ್ತಿರುತ್ತವೆ

ಇತ್ತೀಚಿನ ದಿನಗಳಲ್ಲಿ ಉತ್ತರಪ್ರದೇಶದಲ್ಲಿ ಮಾಡಲಾಗುತ್ತಿರುವ ಎನ್ಕೌಂಟರ್ ಕೊಲೆಗಳ ಬಗ್ಗೆ ಮಾಧ್ಯಮದಲ್ಲಿ ಬರುತ್ತಿರುವ ವರದಿಗಳು ಎನ್ಕೌಂಟರ್ ಕೊಲೆಯಾಗುತ್ತಿರುವ ರೀತಿಗಳ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಕೊಲೆಯಾದ ಕುಟುಂಬದವರು ಹೇಳುವಂತೆ ವ್ಯಕ್ತಿಗಳನ್ನು ಪೊಲೀಸರು ಮನೆಯಿಂದ ಎಳೆದೊಯ್ದಿರುತ್ತಾರೆ. ಆದರೆ ನಂತರದಲ್ಲಿ ಅವರು ಎನ್ಕೌಂಟರ್ನಲ್ಲಿ ಕೊಲೆಯಾzರೆಂಬ ಸುದ್ದಿ ಪತ್ರಿಕೆಗಳಲ್ಲಿ ಬರುತ್ತದೆ. ಆದರೆ ರಾಜ್ಯ ಸರ್ಕಾರವು ಮಾತ್ರ ಆತಂಕಗಳನ್ನು ಕಿಂಚಿತ್ತೂ ಪರಿಗಣನೆಗೆ ತೆಗೆದುಕೊಂಡಿಲ್ಲ. ಬದಲಿಗೆ ಎನ್ಕೌಂಟರ್ ಕೊಲೆಗಳು ರಾಜ್ಯದ ಕ್ರಿಮಿನಲ್ ಲೋP ಮೇರ್ಸರ್ಕಾರವು ಗಳಿಸಿದ ಜಯವೆಂಬಂತೆ ಬಣ್ಣಿಸುತ್ತಿದೆ. ಆದರೆ ವಾಸ್ತವದಲ್ಲಿ ಉತ್ತರಪ್ರದೇಶದ ಕ್ರಿಮಿನಲ್ ಗ್ಯಾಂಗುಗಳ ಬೇರುಗಳು ರಾಜ್ಯದ ರಾಜಕೀಯದಲ್ಲೇ ಇದೆ

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಎನ್ಕೌಂಟರ್ ಕೊಲೆಗಳ ಬಗ್ಗೆ ಉತ್ತರಪ್ರದೇಶ ಸರ್ಕಾರವನ್ನು ಉತ್ತರದಾಯಿಯನ್ನಾಗಿ ಮಾಡುವ ಕ್ರಮಗಳನ್ನು ಮುಂದುವರೆಸುವುದು ತುಂಬಾ ಮುಖ್ಯ. ಒಂದು ವೇಳೆ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದರೆ ಅದನು ಅವರು ಸಂಶಯಾತೀತವಾಗಿ ಸಾಬೀತುಮಾಡಬೇಕು. ಹಾಗಿಲ್ಲದೆ ಎನ್ಕೌಂಟರ್ ಕೊಲೆಯಾದ ಕೆಲವು ವ್ಯಕ್ತಿಗಳ ಮರಣೋತ್ತರ ಪರೀಕ್ಷೆಗಳ ವರದಿಗಳು ತೋರಿಸುವಂತೆ ತೀರಾ ಹತ್ತಿರದಿಂದ ಗುಂಡು ಹೊಡೆದು ವ್ಯಕ್ತಿಯ ಕೊಲೆಯಾಗಿದ್ದಲ್ಲಿ ಕಾನೂನನ್ನು ಪಾಲಿಸಲು ನೇಮಕವಾದವರೆ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದು ಭಾವಿಸಲು ಅದು ಸಾಕಷ್ಟು ಕಾರಣಗಳನ್ನು ಒದಗಿಸುತ್ತದೆ. ಅಪರಾಧಿಗಳನ್ನು ಮಟ್ಟ ಹಾಕುವ ಹೆಸರಿನಲ್ಲಿ ಪ್ರಭುತ್ವವೇ ಧೂರ್ತನಾಗಿ ವರ್ತಿಸತೊಡಗಿದಾಗ ಅಮಾಯಕರ ಜೀವನಗಳು ಹೆಚ್ಚೆಚ್ಚು ಅಪಾಯಕ್ಕೆ ಈಡಾಗುತ್ತವೆ


 ಕೃಪೆ: Economic and Political WeeklyFeb 24,  2018. Vol. 53. No.8
  (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )























ಕಾಮೆಂಟ್‌ಗಳಿಲ್ಲ: