ಶನಿವಾರ, ಮಾರ್ಚ್ 17, 2018

ಕಾರ್ಮಿಕ ಸಂಘಟನೆಗಳ ಮೇಲೆ ಹೆಚ್ಚುತ್ತಿರುವ ನಿರ್ಬಂಧ


  ಅನುಶಿವಸುಂದರ್ 
Image result for factory workers strike
ಭಾರತೀಯ ಕಾರ್ಮಿಕ ಸಮ್ಮೇಳನವನ್ನು (ಐಎಲ್ಸಿ) ಅನಿರ್ದಿಷ್ಟವಾಗಿ ಮುಂದೂಡುವ ಮೂಲಕ ಸರ್ಕಾರವು ಕಾರ್ಮಿಕರ ಸಮಸ್ಯೆಗಳತ್ತ  ಗಮನಹರಿಸಲೂ ನಿರಾಕರಿಸುತ್ತಿದೆ.

ಭಾರತ ಸರ್ಕಾರವು ಇದೇ ಫೆಬ್ರವರಿ ೨೬-೨೭ರಂದು ನಡೆಯಬೇಕಿದ್ದ ೪೭ನೇ ಭಾರತೀಯ ಕಾರ್ಮಿಕ ಸಮ್ಮೇಳನವನ್ನು ಯಾವ ಕಾರಣವನ್ನೂ ನೀಡದೆ, ಅತ್ಯಂತ ತುರ್ತಾಗಿ ಅನಿರ್ದಿಷ್ಟ ಕಾಲ ಮುಂದೂಡಿದೆ. ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳ ಪ್ರಕಾರ ಅರೆಸ್ಸೆಸ್ ಅಂಗ ಸಂಸ್ಥೆಯಾದ ಭಾರತೀಯ ಮಜ್ದೂರ್ ಸಂಘ್ (ಬಿಎಂಎಸ್) ಸಮ್ಮೇಳನವನ್ನು ಬಹಿಷ್ಕರಿಸುವುದಾಗಿ ಹಾಕಿದ್ದ ಬೆದರಿಕೆ ಮತ್ತು ಒಂದೊಮ್ಮೆ ಹಾಗಾದಲ್ಲಿ ಸರ್ಕಾರವು ಎದುರಿಸಬೇಕಾಗಿ ಬರುವ ಮುಜುಗರವನ್ನು ತಪ್ಪಿಸಿಕೊಳ್ಳಲೆಂದೇ ಸಮ್ಮೇಳನವನ್ನು ಮುಂದೂಡಲಾಗಿದೆ. ಆದರೆ ಬಿಎಂಎಸ್ ಅನ್ನು ಹೊರತುಪಡಿಸಿ ಇನ್ನುಳಿದ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಸಮ್ಮೇಳನದಲ್ಲಿ ಭಾಗವಹಿಸಲು ಪೂರ್ವ ಶರತ್ತೆಂದು ಮುಂದಿಟ್ಟಿರುವ  ಪ್ರಮುಖ ಎರಡು ಆಗ್ರಹಗಳ ಬಗ್ಗೆ ಹೆಚ್ಚು ಗಮನ ಹರಿಯುತ್ತಿಲ್ಲ. ಕಾಂಗ್ರೆಸ್ ಪಕ್ಷದ ಕಾರ್ಮಿಕ ಸಂಘಟನೆಯಾದ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಐಎನ್ಟಿಯುಸಿ-ಇಂಟಕ್) ಅನ್ನೂ ಸಹ ಸಮ್ಮೇಳನಕ್ಕೆ  ಆಹ್ವಾನಿಸಬೇಕೆಂಬುದೂ ಮತ್ತು ಎಲ್ಲಾ ಕ್ಷೇತ್ರಗಳಿಗೂ ಅನ್ವಯವಾಗುವಂತೆ ರೂಪಿಸಲಾಗಿರುವ ನಿಗದಿತ ಅವಧಿಯ ಉದ್ಯೋಗ (ಫಿಕ್ಸೆಡ್ ಟರ್ಮ್ ಎಂಪ್ಲಾಯ್ಮೆಂಟ್) ಕರಡು ನಿಯಮಗಳು ಗುತ್ತಿಗೆ ಉದ್ಯೋಗ (ಕಾಂಟ್ರಕ್ಚುಲೈಸೇಷನ್) ಪದ್ಧತಿಯನ್ನು ಪ್ರೋತ್ಸಾಹಿಸುತ್ತದೆಯಾದ್ದರಿಂದ ಅದನ್ನು ಕೈಬಿಡಬೇಕೆಂಬುದೂ ಅವರ ಆಗ್ರಹವಾಗಿದೆ. ಎಲ್ಲಾ ಕಾರ್ಮಿಕ ಸಂಘಟನೆಗಳು ಒಟ್ಟುಸೇರಿ ಕೇಂದ್ರದ ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ಮಾರ್ಚ್ ೧೫ಕ್ಕೆ ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿವೆ. ಆದರೆ ಅದರಲ್ಲಿ ಬಿಎಂಎಸ್ ಭಾಗವಹಿಸುತ್ತಿಲ್ಲ.

ಸಮ್ಮೇಳನವು ೨೦೧೫ರ ನಂತರ ಭರ್ತಿ ಎರಡು ವರ್ಷಗಳಾದ ನಂತರ ನಡೆಯಬೇಕಿತ್ತು. ಮತ್ತು ಅದು ಕಾರ್ಮಿಕ ವರ್ಗವು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿರುವುದು ವಿಶೇಷವಾಗಿ ಗಮನಾರ್ಹವಾದ ಸಂಗತಿಯಾಗಿದೆ. ಉದಾಹರಣೆಗೆ ಫಿಕ್ಸೆಡ್ ಟರ್ಮ್ ಎಂಪ್ಲಾಯ್ಮೆಂಟ್ ಪದ್ಧತಿಯು ಈವರೆಗೆ ಸಿದ್ಧ ಉಡುಪು ಕ್ಷೇತ್ರದಲ್ಲಿ  ಮಾತ್ರ ಜಾರಿಯಲ್ಲಿತ್ತು. ಅದರ ಪ್ರಕಾರ ನಿರ್ದಿಷ್ಟ ಕೆಲಸಕ್ಕೆ ಮತ್ತು ನಿರ್ದಿಷ್ಟ ಪ್ರಾಜೆಕ್ಟಿಗೆ ಒಳಪಟ್ಟು ಗುತ್ತಿಗೆ ಆಧಾರದಲ್ಲಿ ನಿಯೋಜನೆ ಮಾಡಿಕೊಳ್ಳಬಹುದಿತ್ತು. ಈಗ ಪದ್ಧತಿಯು ಎಲ್ಲಾ ಕ್ಷೇತ್ರಗಳಿಗೂ ವಿಸ್ತರಿಸಲಿದೆ. ಒಂದೆಡೆ  ಕೇಂದ್ರದ ಹಣಕಾಸು ಇಲಾಖೆಯು ಇದನ್ನು ಸಲೀಸಾಗಿ ಉದ್ಯಮವನ್ನು ನಡೆಸಲು ಅನುಕೂಲಕಾರಿಯಾದ ಕ್ರಮ ಎಂದು ಬಣ್ಣಿಸುತ್ತಿದ್ದರೆ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ನೀತಿಯಿಂದ ಬಹು ದೊಡ್ಡ ಸಂಖ್ಯೆಯ ಕಾರ್ಮಿಕರು ಗುತ್ತಿಗೆ ಕಾರ್ಮಿಕರಾಗಿಬಿಡುತ್ತಾರೆಂಬ ಅತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಹಲವು ರಾಜ್ಯ ಸರ್ಕಾರಗಳು ಕಾರ್ಮಿಕರ ಉದ್ಯೋಗ ಭದ್ರತೆಯನ್ನು ದುರ್ಬಲಗೊಳಿಸುವಂಥಾ ಹಲವಾರು ತಿದ್ದುಪಡಿಗಳನ್ನು ಕಾರ್ಮಿಕ ಕಾನುನುಗಳಿಗೆ ಮಾಡಿದ್ದಾರೆ. ಇದರ ಜೊತೆಗೆ ೨೦೧೭ರ ಮಧ್ಯಭಾಗದಲ್ಲಿ ವೇತನ ಸಂಹಿತೆ ಮಸೂದೆ-೨೦೧೭ಅನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ರಾಷ್ಟ್ರಮಟ್ಟದಲ್ಲಿ ಶಾಸನಾತ್ಮಕವಾದ ಕನಿಷ್ಟ ಕೂಲಿಯನ್ನು ಖಾತರಿಗೊಳಿಸುವುದು ಅದರ ಘೋಷಿತ ಉದ್ದೇಶವಾದರೂ ಆಯಾ ರಾಜ್ಯಗಳು ಪ್ರತ್ಯೇಕವಾಗಿ ತಮ್ಮ ತಮ್ಮ ಕನಿಷ್ಟಕೂಲಿದರವನ್ನು ನಿಗದಿಗೊಳಿಸುವ ಅವಕಾಶವನ್ನು ಬಿಟ್ಟುಕೊಟ್ಟಿದೆ. ಅಷ್ಟು ಮಾತ್ರವಲ್ಲ ಕನಿಷ್ಟ ಕೂಲಿದರವನ್ನು ನಿಗದಿಗೊಳಿಸುವಲ್ಲಿ ಹಿಂದಿನ ಎರಡು ಕಾರ್ಮಿಕ ಸಮ್ಮೇಳನಗಳು ನಿಗದಿಗೊಳಿಸಿದ್ದ ಮಾನದಂಡಗಳನ್ನೂ ಸಹ ಮಸೂದೆಯು ಅಳವಡಿಸಿಕೊಂಡಿಲ್ಲ. ಕುತೂಹಲಕಾರಿ ಸಂಗತಿಯೆಂದರೆ ಕೆಲವು ಉದ್ದಿಮೆ ಸಂಸ್ಥೆಗಳೂ ಸಹ ಮಸೂದೆಯ ಬಗ್ಗೆ ಅಪಸ್ವರಗಳನ್ನು ಎತ್ತಿವೆ. ಇಷ್ಟೆಲ್ಲಾ ಕಾರ್ಮಿಕ ಪ್ರತಿರೋಧಗಳ ನಡುವೆಯೂ ಕೇಂದ್ರ ಸಂಪುಟವು ಮಸೂದೆಗೆ ಸಮ್ಮತಿಯನ್ನು ನೀಡಿದೆ. ಮಿಕ್ಕಂತೆ, ೨೦೧೮-೧೯ರ ಬಜೆಟ್ಟಿನಲ್ಲಿ ಕಾರ್ಮಿಕ ವರ್ಗಕ್ಕೆ ಏನನ್ನೂ ನಿಡದಿರುವ ಬಗ್ಗೆ, ಕಾರ್ಪೊರೇಟ್ ಕುಳಗಳು ಮಾಡುತ್ತಿರುವ ತೆರಿಗೆಗಳ್ಳತನದ ಕುರಿತು ಮೌನವಾಗಿರುವ ಬಗ್ಗೆ, ಉದ್ಯೋಗಗಳನ್ನು ಸೃಷ್ಟಿ ಮಾಡುವ ಬಗ್ಗೆ ಯಾವ ಕ್ರಮಗಳನ್ನೂ ತೆಗೆದುಕೊಳ್ಳದಿರುವ ಬಗ್ಗೆ ಕೇಂದ್ರೀಯ ಸಮಾಜ ಕಲ್ಯಾಣ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ವೇತನ ಮತ್ತು ಕೆಲಸದ ಪರಿಸ್ಥಿತಿಗಳ ಬಗ್ಗೆ ಏನನ್ನೂ ಹೇಳದಿರುವ ಬಗ್ಗೆ ಬಿಎಂಎಸ್ಸನ್ನೂ ಒಳಗೊಂಡಂತೆ ಎಲ್ಲಾ ಕೇಂದ್ರೀಯ ಸಂಘಟನೆಗಳೂ ತೀವ್ರವಾದ ವಿಮರ್ಶೆಗಳನ್ನು ಮಾಡಿವೆ.

ಬಿಎಂಎಸ್ ಸಂಘಟನೆಯು ನರೇಂದ್ರ ಮೋದಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಬಹಿರಂಗವಾಗಿ ವಿಮರ್ಶಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಉಂಟುಮಾಡಿದರೂ, ಯಾವುದೇ ಗಂಭೀರ ಮತ್ತು ಕೀಲಕವಾದ ಪ್ರತಿಭಟನೆಗಳಲ್ಲಿ ಇತರ ಕಾರ್ಮಿಕ ಸಂಘಟನೆಗಳ ಜೊತೆಗೆ ಕೈಗೂಡಿಸುವುದನ್ನು ಅದು ಸ್ಪಷ್ಟವಾಗಿ ನಿರಾಕರಿಸಿದೆ. ೨೦೧೫ರ ಸೆಪ್ಟೆಂಬರ್ನಲ್ಲಿ ಮತ್ತು ೨೦೧೭ರ ನವಂಬರ್ನಲ್ಲಿ ಕೇಂದ್ರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ನಡೆದ ರಾಷ್ಟ್ರಮಟ್ಟದ ಪ್ರತಿರೋಧಗಳಲ್ಲಿ ಅದು ಇತರ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಜೊತೆ ಕೈಗೂಡಿಸಲಿಲ್ಲ. ಈಗ ಮತ್ತೊಮ್ಮೆ ಅದು ಮಾರ್ಚ್ ೧೫ರಂದು ಇತರ ಕಾರ್ಮಿಕ ಸಂಘಟನೆಗಳು ಕೊಟ್ಟಿರುವ ಸಾರ್ವತ್ರಿಕ ಮುಷ್ಕರದಲ್ಲಿ ಭಾಗವಹಿಸುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದೆ. ಒಂದು ವೆಬ್ಸೈಟಿನಲ್ಲಿ ಪ್ರಕಟವಾಗಿರುವಂತೆ ಬಿಎಂಎಸ್ಗೆ  ರಾಜಕೀಯ ಮಾಡುವುದರಲ್ಲಿ ನಂಬಿಕೆ ಇಲ್ಲದಿರುವುದು ಮತ್ತು ಕೇವಲ ಕಾರ್ಮಿಕರ ಕಲ್ಯಾಣಕ್ಕೆ ಕೆಲಸ ಮಾಡುವುದೇ ಅದರ ಧ್ಯೇಯವಾಗಿರುವುದು ಇದಕ್ಕೆ ಕಾರಣವಂತೆ. ರಾಜಕೀಯ ಹೋರಾಟಗಳನ್ನು ಬಿಟ್ಟು ಅದು ಹೇಗೆ ತನ್ನ ಗುರಿಯತ್ತ ನಡೆಯಲಿರುವುದೋ ಕಾದು ನೋಡಬೇಕು. ಕಾಂಗ್ರೆಸ್ ಕಾರ್ಮಿಕ ಸಂಘಟನೆಯಾದ ಇಂಟಕ್ ಅನ್ನು  ಕರೆಯದಿರಲು ಇಂಟಕ್ ಒಳಗೆ ನಡೆದಿರುವ ನಾಯಕತ್ವ ಸಂಬಂಧೀ ವಿವಾದವೇ ಕಾರಣವೆಂದು ಸರ್ಕಾರವು ಹೇಳಿದೆ. ವಿವಾದವು ಈಗ ದೆಹಲಿ ಹೈಕೋರ್ಟಿನ ಮುಂದಿದೆ. ಆದರೆ ಬಿಎಂಎಸ್ಸನ್ನು ಹೊರತುಪಡಿಸಿ ಮಿಕ್ಕೆಲ್ಲಾ ಕಾರ್ಮಿಕ ಸಂಘಟನೆಗಳು ಇಂಟಕ್ ಅನ್ನು ಕರೆಯಬೇಕೆಂದು ಒಕ್ಕೊರಲಿನ ಆಗ್ರಹಿಸಿವೆ. ಆದರೂ ಸರ್ಕಾರ ಮಣಿದಿಲ್ಲ.

ಮೊಟ್ಟಮೊದಲ ಭಾರತೀಯ ಕಾರ್ಮಿಕರ ಸಮ್ಮೇಳನವು ೧೯೪೨ರಲ್ಲಿ ನಡೆಯಿತು. ಸಂದರ್ಭದಲ್ಲಿ ಕಾರ್ಮಿಕರನ್ನು ಮತ್ತು ಮಾಲೀಕರನ್ನೂ ಒಂದೇ ವೇದಿಕೆಗೆ ತಂದು ವಿಶ್ವಯುದ್ಧ ಸಂಬಂಧೀ ತಯಾರಿಗಳಲ್ಲಿ ಒಳಗೊಳ್ಳಲು ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಈಗಲೂ ಇಂಥಾ ಸಮ್ಮೇಳನದ ಔಚಿತ್ಯವೇನು ಎಂಬ ಬಗ್ಗೆ ಕೆಲವು ಕಾರ್ಮಿಕ ನಾಯಕರಲ್ಲಿ ಪ್ರಶ್ನೆಗಳಿದ್ದರೂ ವಾಸ್ತವವೇನೆಂದರೆ ಇದು ಕಾರ್ಮಿಕರ ಪ್ರತಿನಿಧಿಗಳು, ಉದ್ದಿಮೆಗಳ ಪ್ರತಿನಿಧಿಗಳು ಮತ್ತು ಕೇಂದ್ರ  ಹಾಗೂ ರಾಜ್ಯ ಸರ್ಕಾರದ ಪ್ರತಿನಿಧಿಗಳು ಒಟ್ಟುಗೂಡಿ ವಿಷಯಗಳನ್ನು ಚರ್ಚಿಸಲು ಇರುವ ಏಕೈಕ ತ್ರಿಪಕ್ಷೀಯ ವೇದಿಕೆಯಾಗಿದೆ. ಪದ್ಧತಿಯ ಪ್ರಕಾರ ಅಧಿಕಾರ ರೂಢ ಪ್ರಧಾನ ಮಂತ್ರಿಯೇ ಸಮ್ಮೇಳನವನ್ನು ಉದ್ಘಾಟಿಸುತ್ತಾರೆ. ಮತ್ತು ಕ್ಷೇತ್ರವು ಎದುರಿಸುತ್ತಿರುವ ವರ್ತಮಾನದ ಗಂಭೀರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಕಾರ್ಮಿಕರ ಹಾಗೂ ಉದ್ದಿಮೆಗಳ ಪ್ರತಿನಿಧಿಗಳಿಬ್ಬರೂ ವೇದಿಕೆಯನ್ನು ಬಳಸಿಕೊಳ್ಳುತ್ತಾರೆ. ಮುಂದೂಡಲ್ಪಟ್ಟ ಹಾಲೀ ಕಾರ್ಮಿಕ ಸಮ್ಮೇಳನದಲ್ಲಿ ಉದ್ಯೋಗ ಸೃಷ್ಟಿಯ ಕುರಿತಾದ ಗಂಭೀರವಾದ ವಿಷಯಗಳನ್ನು, ಕಾರ್ಮಿಕ ಕಾನೂನುಗಳ ಸುಧಾರಣೆಯೆಂದು ಸರ್ಕಾರವು ಬಣ್ಣಿಸುವ ಕಾರ್ಮಿಕ ಕಾನೂನುಗಳ ತಿದ್ದುಪಡಿಗಳನ್ನು ಮತ್ತು ಎಲ್ಲಾ ಕಾರ್ಮಿಕರನ್ನೂ ಸಾರ್ವತ್ರಿಕ ಸಾಮಾಜಿಕ ಭದ್ರತಾ ಯೋಜನೆಗಳಡಿ ತರುವಂಥ ವಿಷಯಗಳನ್ನೂ ವಿಷಯ ಸೂಚಿಯಲ್ಲಿ ಸೇರಿಸಲಾಗಿತ್ತು. ಇವಲ್ಲದೆ ನಿರಂತರ ಸ್ವರೂಪದ ಕೆಲಸಗಳಲ್ಲಿ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸುವಂಥಾ ಮತ್ತು ಸಾರ್ವಜನಿಕ ಕಂಪನಿಗಳಿಂದ ಬಂಡವಾಳವನ್ನು ಹಿಂತೆಗೆದುಕೊಳ್ಳುವಂಥಾ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ವಿಷಯಗಳೂ ಸಹ ಕಾರ್ಯಸೂಚಿಯಲ್ಲಿದ್ದವು. ಬಿಎಂಎಸ್ ಸಂಘಟನೆಯು ಸಮ್ಮೇಳನವನ್ನು ಬಹಿಷ್ಕರಿಸಿರುವುದನ್ನು ನೆಪವಾಗಿಟ್ಟುಕೊಂಡು ಸರ್ಕಾರವು ಕಾರ್ಮಿಕ ಸಮ್ಮೇಳನವನ್ನು ಮುಂದೂಡಿದೆ. ಆದರೆ ಎಲ್ಲಾ ಕಾರ್ಮಿಕ ಸಂಘಟನೆಗಳೂ ಸಮ್ಮೇಳನವನ್ನು ಬಹಿಷ್ಕರಿಸಿದರೆ ಉಂಟಾಗಬಹುದಿದ್ದ ಮುಜುಗುರವನ್ನು ತಪ್ಪಿಸಿಕೊಳ್ಳಲು ಇದನು ಒಂದು ನೆಪವಾಗಿ ಬಳಸಿಕೊಂಡಿರುವ ಸಾಧ್ಯತೆಯನ್ನೂ ತಳ್ಳಿಹಾಕಲಾಗುವುದಿಲ್ಲ. ಅಲ್ಲದೆ ಸಂಸತ್ತಿನಲ್ಲಿ ಕಾರ್ಮಿಕ ತಿದ್ದುಪಡಿ ಕಾನೂನುಗಳಿಗೆ ಅನುಮೋದನೆ ದಕ್ಕಿಸಿಕೊಳ್ಳುವ ಮುನ್ನ ಎದುರಿಸಬೇಕಾದ ಪ್ರಶ್ನೆಗಳನ್ನು ತಪ್ಪಿಸಿಕೊಳ್ಳಲೂ ಸರ್ಕಾರವು ಪಲಾಯನ ಕ್ರಮವನ್ನು ಅನುಸರಿಸಿರುವ ಸಾಧ್ಯತೆ ಇದೆ. ಅಸಲೀ ಕಾರಣಗಳೇನೇ ಇದ್ದರೂ ಸರ್ಕಾರಕ್ಕೆ ಕಾರ್ಮಿಕ ಸಂಘಟನೆಗಳ ಬಗ್ಗೆ ಮತ್ತು ಅದರ ನಾಯಕರ ಬಗ್ಗೆ ಯಾವುದೇ ಗೌರವವಿಲ್ಲವೆಂಬುದನ್ನು ಕ್ರಮವು ಸಾಬೀತುಪಡಿಸಿದೆ.

ಉದ್ಯೋಗವಿಲ್ಲದ ಅಭಿವೃದ್ಧಿ, ನಿರಾಶಾದಾಯಕ ಉದ್ಯೋಗ ವಾತಾವರಣ ಮತ್ತು ಕಾರ್ಮಿಕ ಸಂಘಟನೆಗಳೇ ಇಲ್ಲದ ಅನೌಪಚಾರಿಕ ಕ್ಷೇತ್ರದಲ್ಲಿ ಉದ್ಯೋಗಗಳು ಹೆಚ್ಚು ಸೃಷ್ಟಿಯಾಗುತ್ತಿರುವ ಕಾರಣಗಳಿಂದ ಭಾರತೀಯ ಕಾರ್ಮಿಕ ಸಂಘಟನೆಗಳು ಸದಸ್ಯತ್ವದ ಬಿಕ್ಕಟ್ಟನ್ನು ಎದುರಿಸುತ್ತಿವೆ. ಮತ್ತೊಂದೆಡೆ ಸರ್ಕಾರವು ಸದನದ ಒಳಗಾಗಲೀ ಅಥವಾ ಹೊರಗಾಗಲೀ ಕಾರ್ಮಿಕ ನೀತಿಗಳ ಬಗ್ಗೆ ಚರ್ಚೆಯನ್ನೇ ಮಾಡದಿರುವ ಹಠಮಾರಿತನವನ್ನು ತೋರುತ್ತಿದೆ. ಎಲ್ಲಾ ಕಾರಣಗಳಿಂದ ಕಾರ್ಮಿಕ ಸಂಘಟನೆಗಳಿಗೆ ಮತ್ತೊಮ್ಮೆ ಜನರ ಬಳಿಗೆ ಹೋಗಿ ಕಾರ್ಮಿಕ ಸಂಘಟನೆಗೆಳ ಮೂಲಕ ಸಾಮೂಹಿಕ ನೆಲೆಯಲ್ಲಿ ಹಕ್ಕಿಗಾಗಿ ಹೋರಾಡಬೇಕಿರುವ ಅಗತ್ಯವನ್ನು ಒತ್ತಿ ಹೇಳುವುದನ್ನು ಬಿಟ್ಟು ಬೇರೆ ಗತ್ಯಂತರವಿಲ್ಲ.

  ಕೃಪೆ: Economic and Political Weekly,Mar 3,  2018. Vol. 53. No.9
     (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )
ಕಾಮೆಂಟ್‌ಗಳಿಲ್ಲ: