ಶುಕ್ರವಾರ, ಮಾರ್ಚ್ 16, 2018

ಪ್ರಜಾಸತ್ತೆಯ ಕಾವಲುಗಾರರನ್ನು ಸಬಲೀಕರಿಸುವುದು ಹೇಗೆ?             ಅನುಶಿವಸುಂದರ್ 
ಭ್ರಷ್ಟಾಚಾರದ ವಿರುದ್ಧ ನಿಜವಾದ ಹೋರಾಟ ಮಾಡುತ್ತಿರುವವರು ಅಂಥಾ ಮಾಹಿತಿಗಳನ್ನು ಬಯಲುಮಾಡುತ್ತಿರುವವರೇ (ವಿಷಲ್ಬ್ಲೋಯರ್) ಆಗಿದ್ದಾರೆ.

Image result for whistle-blower

ಒಟ್ಟಾರೆಯಾಗಿ ಬ್ಯಾಂಕುಗಳಿಗೆ ೧೧,೪೦೦ ಕೋಟಿ ರೂ.ಗಳಷ್ಟು ದೊಡ್ಡ ಮೊತ್ತದ ಹಣವನ್ನು ಮೋಸ ಮಾಡಿದ್ದಾರೆ ಎಂಬ ಆರೋಪ ಹೊತ್ತಿರುವ ವಜ್ರಾಭರಣ ವ್ಯಾಪಾರಿ ನೀರವ ಮೋದಿ ಮತ್ತವರ ಸಂಗಡಿಗರ ಪ್ರಕರಣದಲ್ಲಿ ಇದನ್ನು ಬಯಲಿಗೆ ತಂದ ವಿಷಲ್ಬ್ಲೋಯರ್ ಪಾತ್ರ ಹೆಚ್ಚು ಗಮನಕ್ಕೆ ಬಾರದೆ ಹೋಗಿಬಿಟ್ಟಿದೆ. ನೀರವ ಮೋದಿಯ ವ್ಯವಹಾರ-ಪಾಲುದಾರನಾದ ಮತ್ತು ಗೀತಾಂಜಲಿ ಜೆಮ್ಸ್ ಎಂಬ ಕಂಪನಿಯ ಮಾಲೀಕನೂ ಆದ ಮೆಹುಲ್ ಚೋಸ್ಕಿಯೆಂಬುವರ ವ್ಯವಹಾರಗಳಲ್ಲಿ ತುಂಬಾ ಗಂಭೀರವಾದ ಲೋಪಗಳಿರುವ ಬಗ್ಗೆ ಬೆಂಗಳೂರು ಮೂಲದ ಹರಿಪ್ರಸಾದ್ ಎಂಬುವರು ೨೦೧೬ರಲ್ಲೇ ಕಂಪನಿಗಳ ರಿಜಿಸ್ಟ್ರಾರ್ ಅವರ ಕಚೇರಿಗೆ ದೂರು ನೀಡಿದ್ದರು. ಹಾಗಿದ್ದರೂ ಕಂಪನಿಯ ಮೇಲೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಅಷ್ಟು ಮಾತ್ರವಲ್ಲ. ತಾವೂ ಮುಂಚೆಯೇ ಕೊಟ್ಟ ಎಚ್ಚರಿಕೆಯ ಬಗ್ಗೆ ಹರಿಪ್ರಸಾದ್ ಅವರು ಮಾಧ್ಯಮದವರಿಗೆ ತಿಳಿಸಿದ ನಂತರದಲ್ಲಿ ಮಾತ್ರವೇ ಚೋಕ್ಸಿ ಅವರ ಹೆಸರು ಬಯಲಿಗೆ ಬಂತು.

ಅಧಿಕಾರಿಗಳು ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂಬುದು ಈಗ ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ೨೦೦೩ರಲ್ಲಿ ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಯೋಜನೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಬಯಲುಪಡಿಸಿದ್ದಕ್ಕೆ ಸತ್ಯೇಂದ್ರ ದುಬೆ ಎಂಬ ಯುವ ಇಂಜನಿಯರ್ ಕೊಲೆಯಾದಾಗಿನಿಂದ ರೀತಿ ಭ್ರಷ್ಟಾಚಾರವನ್ನು ಬಯಲುಮಾಡುವವರ (ವಿಷಲ್ಬ್ಲೋಯರ್) ಪರಿಸ್ಥಿತಿ ಮಾತ್ರ ತುಂಬಾ ಅಪಾಯದಲ್ಲೇ ಇದ್ದಿದೆ. ದುಬೆಯಂಥ ಕೆಲವರು ಕೊಲೆಯಾದರೆ ಇನ್ನಿತರರು ಹಿಂಸಾಚಾರಕ್ಕೆ ಮತ್ತು ಬೆದರಿಕೆ ಕರೆಗಳಿಗೆ ಗುರಿಯಾದರು ಅಥವಾ ಇನ್ನೂ ಕೆಲವರು ಭ್ರಷ್ಟಾಚಾರದ ಬಗ್ಗೆ ನೀಡಿದ ಮುನ್ನೆಚ್ಚರಿಕಾ ಮಾಹಿತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಯಿತು. ಇಂಥಾ ಘಟನೆಗಳು ಆಗಾಗ ಮಾಧ್ಯಮದ ಮತ್ತು ಜನರ ಗಮನವನ್ನು ಸೆಳೆದು ನಂತರ ಮರೆಯಾಗುತ್ತಿವೆ.

ಭ್ರಷ್ಟಾಚಾರವನ್ನು ಬಯಲುಗೊಳಿಸುವವರ (ವಿಷಲ್ಬ್ಲೋಯರ್ಸ್) ರಕ್ಷಣಾ ಕಾಯಿದೆಯೊಂದು ೨೦೧೪ರಲ್ಲೇ ಲೋಕಸಭೆಯ ಅನುಮೋದನೆಯನ್ನು ಪಡೆದರೂ ಈವರೆಗೂ ಅದು ಬಳಕೆಯಾಗುತ್ತಿಲ್ಲ. ೨೦೧೫ರಲ್ಲಿ ನರೇಂದ್ರಮೋದಿ ಸರ್ಕಾರವು ಮಸೂದೆಯಲ್ಲಿ ಮಹತ್ವದ ಅಂಶಗಳನ್ನು ಕೈಬಿಟ್ಟು ದುರ್ಬಲಗೊಳಿಸಿದ ಮಸೂದೆಯೊಂದನ್ನು ಮಂಡಿಸಿತು. ತನ್ನ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಬದ್ಧವಾಗಿದೆಯೆಂಬುದನ್ನು ಹಲವಾರು ಬಾರಿ ಘೊಷಿಸಿದ್ದ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ವಿಷಲ್ಬ್ಲೋಯರ್ಗಳ ಪಾತ್ರವನ್ನು ಪರಿಗಣಿಸಿದ್ದ ಸರ್ಕಾರವು ವಿಷಲ್ಬ್ಲೋಯರ್ ಮಸೂದೆಯನ್ನು ಮಾತ್ರ ದುರ್ಬಲಗೊಳಿಸಿದ್ದು ಹೇಗೆಂಬುದು ಆಶ್ಚರ್ಯಕರವಾಗಿದೆ! ತಮ್ಮ ಸರ್ಕಾರವು ವಿಷಲ್ಬ್ಲೋಯರ್ಗಳು ಕೊಟ್ಟ ಮಾಹಿತಿಗಳನ್ನು ಆಧರಿಸಿ ಕಪ್ಪುಹಣವನ್ನು ನಿಯಂತ್ರಿಸುವುದಾಗಿ ಹಣಕಾಸು ಇಲಾಖೆಯ ರಾಜ್ಯಮಂತ್ರಿ ಜಯಂತ್ ಸಿನ್ಹಾ ಅವರು ರಾಜ್ಯಸಭೆಗೂ ತಿಳಿಸಿದ್ದರು.

ಆದರೆ ವಿಷಲ್ಬ್ಲೋಯರ್ಸ್ಗಳ ಮಹತ್ವವನ್ನು ಪರಿಗಣಿಸಿದ್ದೇವೆ ಎಂದು ಸರ್ಕಾರವು ಎಷ್ಟೇ ಕೊಚ್ಚಿಕೊಂಡರೂ ತಿದ್ದುಪಡಿಯಾದ ಕಾನೂನು ವಿಷಲ್ಬ್ಲೋಯರ್ಸ್ಗಳಿಗೆ ಅಧಿಕೃತ ರಹಸ್ಯ ಕಾಯಿದೆ (ಅಫಿಷಿಯಲ್ ಸೀಕ್ರೆಟ್ಸ್ ಆಕ್ಟ್)ಯಿಂದ ರಕ್ಷಣೆ ಕೊಡುವುದಿಲ್ಲ. ಮಾರ್ಪಾಡಾದ ಕಾಯಿದೆಯ ಪ್ರಕಾರ ದೇಶದ ಸಾರ್ವಭೌಮತೆ, ಸಮಗ್ರತೆ, ಭದ್ರತೆ ಮಾತು ಆರ್ಥಿಕ ಆಸಕ್ತಿಗಳಿಗೆ ಹಾನಿಯುಂಟುಮಾಡುವ ಮಾಹಿತಿಗಳನ್ನು ಪರಿಶೋಧಿಸಲಾಗುವುದಿಲ್ಲ ಮತ್ತು ಅಂಥ ಸಂಗತಿಗಳನ್ನು ಮಾಹಿತಿ ಹಕ್ಕುಗಳ ಕಾಯಿದೆಯಡಿ ಪಡೆದುಕೊಂಡಿದ್ದ ಹೊರತೂ ಬಹಿರಂಗಪಡಿಸಲಾಗುವುದಿಲ್ಲ. ಇದರಲ್ಲಿ ಬೌದ್ಧಿಕ ಆಸ್ತಿ ಹಕ್ಕು ಮತ್ತು ವಾಣಿಜ್ಯ ರಹಸ್ಯಗಳೂ ಸಹ ಸೇರಿಕೊಳ್ಳುತ್ತವೆ. ಅಧಿಕೃತ ರಹಸ್ಯ ಕಾಯಿದೆಯ ರೀತಿ ಮಾಹಿತಿ ಹಕ್ಕು ಕಾಯಿದೆಯೂ (ಆರ್ಟಿಐ) ಸಹ ಯಾವುದೇ ವ್ಯಕ್ತಿಯ ಪ್ರಾಣಕ್ಕೆ ಹಾನಿಯಾಗುವಂಥ ಮಾಹಿತಿಗಳು, ಸಂಪುಟ ಸಭೆಯ ಕೆಲವು ಚರ್ಚೆಗಳು, ಹಾಗೂ ಸಂಸತ್ತಿನ ಮತ್ತು ಶಾಸಕಾಂಗದ ಹಕ್ಕುಚ್ಯುತಿ ಮಡಬಹುದಾದ ಯಾವುದೇ ಮಾಹಿತಿಗಳನ್ನು  ನ್ಯಾಯಾಲಯವೂ  ಸಹ ಬಹಿರಂಗಗೊಳಿಸದಂತೆ ನಿಷೇಧಿಸುತ್ತದೆ.

ವಿಷಲ್ಬ್ಲೋಯರ್ಸ್ ಇನ್ ಯೂರೋಪ್: ಲೀಗಲ್ ಪ್ರೊಟೆಕ್ಷನ್ ಫಾರ್ ವಿಷಲ್ಬ್ಲೋಯರ್ಸ್ ಇನ್ ಇಯು (ಯೂರೋಪಿನ ವಿಷಲ್ಬ್ಲೋಯರ್ಸ್: ಐರೋಪ್ಯ ಒಕ್ಕೂಟದಲ್ಲಿ ವಿಷಲ್ಬ್ಲೋಯರ್ಸ್ಗಳಿಗಿರುವ ಕಾನೂನು ರಕ್ಷಣೆಗಳು) ಎಂಬ ವರದಿಯಲ್ಲಿ ಹೇಳುವಂತೆ ವಿಷಲ್ಬ್ಲೋಯರ್ಸ್ ಗಳಿಗೆ ಬಲವಾದ ರಕ್ಷಣೆ ಕೊಡುವ ವ್ಯವಸ್ಥೆ ಮತ್ತು ಅವರಿಗೆ ರಕ್ಷಣೆ ಕೊಡಬಹುದಾದ ಲೋಪರಹಿತ ಕಾನೂನುಗಳಿಲ್ಲದಿರುವುದು ಎಲ್ಲಾ ನಾಗರಿಕರಿಗೂ, ಆರ್ಥಿಕತೆಗೂ ಮತ್ತು ಪರಿಸರಕ್ಕೆ ಹಾನಿಯನ್ನುಂಟುಮಾಡುತ್ತದೆ. ಅಂಥ ಒಂದು ಬಲಿಷ್ಟ ಕಾನೂನು ಇಲ್ಲದೇ ಹೋದರೆ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಮೌಲಿಕ ಪಾಲುದಾರರಾಗಬಹುದಾದಜನತೆಯನ್ನು ಯೂರೋಪು ಕಳೆದುಕೊಳ್ಳುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಭಾರತದ ಬಗ್ಗೆ ಹೇಳುವುದಾದರೆ ಸಾರ್ವಜನಿಕ ಕ್ಷೇತ್ರದಲ್ಲಾಗಲೀ ಅಥವಾ ಖಾಸಗಿ ಕಾರ್ಪೊರೇಟ್ ಕ್ಷೇತ್ರದಲ್ಲಾಗಲೀ ನಡೆಯುತ್ತಿರುವ ಭ್ರಷ್ಟಾಚಾರವನ್ನು ಬಯಲಿಗೆ ತಂದದ್ದು ಈಬಗೆಯ ವಿಷಲ್ಬ್ಲೋಯರ್ಗಳು ಮತ್ತು ಆರ್ಟಿಐ ಕಾರ್ಯಕರ್ತರು. ಹಲವಾರು ಅಧಿಕಾರಿಗಳು ಮತ್ತು ಪೊಲೀಸ್ ಆಧಿಕಾರಿಗಳು ತಮ್ಮ ಜೀವ ಮತ್ತು ಉದ್ಯೋಗವನ್ನು ಲೆಕ್ಕಿಸದೆ ಬಚ್ಚಿಡಲಾಗಿದ್ದ ಮಾಹಿತಿಗಳನ್ನು ಹೊರಗೆಡವಿದ್ದಾರೆ. ಗುಜರಾತಿನ ಪೊಲೀಸ್ ಅಧಿಕಾರಿ ಸಂಜೀವ್ ಭಟ್ ಮತ್ತು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಪ್ ಮೆಡಿಕಲ್ ಸೈನ್ಸಸ್ನಲ್ಲಿ ಹಾಗೂ ಹರ್ಯಾಣದಲ್ಲಿ ಹುದ್ದೆ ಭರ್ತಿಗಳನ್ನು ಮಾಡುವಾಗ ನಡೆಯಲಾಗಿದ್ದ ಹಲವಾರು ಅಕ್ರಮಗಳನ್ನು ಬಯಲಿಗೆಳೆದ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸಂಜೀವ್ ಚತುರ್ವೇದಿ- ಬಗೆಯ ಅಧಿಕಾರಿಗಳುಕಾರ್ಪೊರೇಟ್ ಜಗತ್ತಿನಲ್ಲಿ ಹಲವಾರು ಪ್ರಮುಖ ಕಂಪನಿಗಳು ವಿಷಲ್ಬ್ಲೋಯರ್ಗಳನ್ನು ರಕ್ಷಿಸುವ ನೀತಿಗಳನ್ನು ರಚಿಸಿಕೊಂಡಿದ್ದಾರೆ. ಆದರೆ ನೀತಿಗಳೆಲ್ಲಾ ಕೇವಲ ಕಾಗದ ಮೇಲೆ ಮಾತ್ರವಿದೆಯೋ ಅಥವಾ ನಿಜಕ್ಕೂ ಜಾರಿಯಲ್ಲಿವೆಯೇ ಎಂಬುದು ಬೇರೆಯದೇ ಆದ ವಿಷಯ. ಒಂದು ವೇಳೆ ಅಂಥಾ ನೀತಿಯೊಂದು ಅಸ್ಥಿತ್ವದಲ್ಲಿದ್ದರೂ ಅವನ್ನು ಅನುಷ್ಠಾನಕ್ಕೇನೂ ತರುವುದಿಲ್ಲ ಎಂಬುದಕ್ಕೆ ಇತ್ತೀಚಿಗೆ ಒಂದು ವಿಮಾನ ಸೇವಾ ಕಂಪನಿಯ ಸಿಬ್ಬಂದಿಯೊಬ್ಬರು ತಮ್ಮ ಸಹಸಿಬ್ಬಂದಿಗಳು ಪ್ರಯಾಣಿಕರೊಬ್ಬರ ಮೇಲೆ ಮಾಡುತ್ತಿದ್ದ ಹಲ್ಲೆಯ ವಿಡಿಯೋ ಚಿತ್ರಣವನ್ನು ಬಹಿರಂಗಗೊಳಿಸಿದ ಉದಾಹರಣೆಯೇ ಸಾಕು.

ಇನ್ನು ಮಾಹಿತಿ ಹಕ್ಕಿನ ಕಾಯಿದೆಯ ಬಗ್ಗೆ ಹೇಳುವುದಾದರೆ ೨೦೧೭ರ ಕರಡು ನೀತಿ ನಿಯಮಗಳು ಕೇಂದ್ರೀಯ ಮಾಹಿತಿ ಅಯೋಗದ ಮುಂದೆ ಅರ್ಜಿ ಹಾಕಿದ ಅರ್ಜಿದಾರರು ನಿಧನಹೊಂದಿದರೆ ಅದರ ಬಗೆಗಿನ ವಿಚಾರಣೆಯು ಸ್ಥಗಿತಗೊಳ್ಳಬೇಕೆಂಬ ಪ್ರಸ್ತಾಪವನ್ನು ಹೊಂದಿದೆ. ಇದೊಂದು ಅಪಾಯಕಾರಿ ನಿಯಮವೆಂದು ಕಾರ್ಯಕರ್ತರು ಬಲವಾಗಿ ಆಕ್ಷೇಪಿಸಿದ್ದಾರೆ. ಈಗಾಗಲೇ ದೇಶಾದ್ಯಂತ ೬೫ಕ್ಕೂ ಹೆಚ್ಚು ಆರ್ಟಿಐ ಕಾರ್ಯಕರ್ತರ ಕೊಲೆಯಾಗಿರುವುದಲ್ಲದೆ ಹಲವಾರು ಹಿಂಸಾಚಾರಕ್ಕೆ ಮತ್ತು ಬೆದರಿಕೆಗಳಿಗೆ ತುತ್ತಾಗಿದ್ದಾರೆ.

ಇದರ ಜೊತೆಗೆ ನಮ್ಮ ನ್ಯಾಯದಾನ ಪದ್ಧತಿಯಲ್ಲಿ ಸಾಕ್ಷಿಗಳನ್ನು ರಕ್ಷಿಸುವ ಯೋಜನೆಗಳೇ ಇಲ್ಲ. ಭಾರತೀಯ ಕಾನೂನು ಅಯೋಗ ಮತ್ತು ಪೊಲೀಸ್ ಅಯೋಗದ ಹಲವಾರು ವರದಿಗಳು ಮತ್ತು ಅಪರಾಧ ಪ್ರಕರಣಗಳಲ್ಲಿನ ನ್ಯಾಯ ವಿತರಣಾ ವ್ಯವಸ್ಥೆಯ ಸುಧಾರಣೆಗಳ ಬಗ್ಗೆ ರಚಿಸಲಾಗಿದ್ದ ನ್ಯಾಯಮೂರ್ತಿ ಮಳಿಮಠ್ ಸಮಿತಿಯ ವರದಿಯೂ ಸಹ ಅಂಥ ಒಂದು ಸಾಕ್ಷಿ ರಕ್ಷಣಾ ಕಾರ್ಯಕ್ರಮ ಜಾರಿಗೆ ಬರಬೇಕೆಂದು ಶಿಫಾರಸ್ಸು ಮಾಡಿದೆ. ಪ್ರಕರಣಗಳು ವಿಚಾರಣೆಯ ಹಂತಕ್ಕೆ ಬಂದಾಗ ಸಾಕ್ಷಿದಾರರು ಉಲ್ಟಾ ಹೊಡೆಯುವುದು ಸರ್ವೇಸಾಮಾನ್ಯವಾಗಿಬಿಟ್ಟಿದೆ. ಇದು ಮಧ್ಯಪ್ರದೇಶದ ವ್ಯಾಪಂ ಪ್ರಕರಣದಲ್ಲಿ, ಗುಜರಾತಿನ ಬೆಸ್ಟ್ ಬೇಕರಿ ಪ್ರಕರಣದಲ್ಲಿ, ನವದೆಹಲಿಯ ಜೆಸ್ಸಿಕಾ ಲಾಲ್ ಪ್ರಕರಣದಲ್ಲಿ ಮತ್ತು ಇತ್ತೀಚೆಗೆ ಮುಂಬೈ ನ್ಯಾಯಾಲಯದಲ್ಲಿ ನಡೆಯುತ್ತಿರುವ ಸೊಹ್ರಾಬುದ್ದೀನ್ ಶೇಕ್ ಎನ್ಕೌಂಟರ್ ಪ್ರಕರಣದ ವಿಚಾರಣಾ ಸಂದರ್ಭದಲ್ಲಿ ಸಂಭವಿಸಿದೆ.

ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಬಗ್ಗೆ ಮತ್ತು ಭ್ರಷ್ಟಾಚಾರಿಗಳ ಬಗ್ಗೆ ಮಾಹಿತಿ ಕೊಡುವವರನ್ನು ರಕ್ಷಿಸುವ ಬಗ್ಗೆ ಸರ್ಕಾರವು ನಿಜಕ್ಕೂ ಗಂಭೀರವಾಗಿದ್ದಲ್ಲಿ ಮೇಲೆ ಹೇಳಿದ ಮೂರೂ ವಿಷಯಗಳನ್ನೂ-ವಿಷಲ್ಬ್ಲೋಯರ್ಗಳನ್ನು ರಕ್ಷಿಸುವುದು, ನ್ಯಾಯಾಲಯದ ಪ್ರಕರಣಗಳಲ್ಲಿ ಸಾಕ್ಷಿಗಳನ್ನು ರಕ್ಷಿಸುವುದು  ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರನ್ನು ರಕ್ಷಿಸುವುದು-ಸೂಕ್ತವಾಗಿ ನಿಭಾಯಿಸಬೇಕಿದೆ. ಖಾಸಗಿ ಕಾರ್ಪೊರೇಟ್ ಸಂಸ್ಥೆಗಳ ಉದ್ಯೋಗಿಗಳು, ಸರ್ಕಾರಿ ಸೇವಕರು ಮತ್ತು ಆತ್ಮಸಾಕ್ಷಿಯಿಂದ ಪ್ರೇರಿತರಾದ ಅಥವಾ ನೊಂದಿರುವ ನಾಗರಿಕರು ಪ್ರಜಾಸತ್ತೆಯ ನಿಜವಾದ ಕಾವಲುಗಾರರಾಗಿ ಕಾರ್ಯನಿರ್ವಹಿಸಬಲ್ಲರು. ಭ್ರಷ್ಟಾಚಾರ ಮತ್ತು ಅನ್ಯಾಯದ ವಿರುದ್ಧ ಹೋರಾಟ ನಡೆಸಬೇಕೆಂಬ ಆಶಯವಿರುವ ಸರ್ಕಾರವೊಂದು ಇಂಥಾ ಸಾರ್ವಜನಿಕ ಹೀರೋಗಳನ್ನು ರಕ್ಷಿಸಿಕೊಳ್ಳಲೇಬೇಕು.

 ಕೃಪೆ: Economic and Political Weekly Feb 24,  2018. Vol. 53. No.8
  (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )

                                                                                               
.


ಕಾಮೆಂಟ್‌ಗಳಿಲ್ಲ: