ಶುಕ್ರವಾರ, ಆಗಸ್ಟ್ 18, 2017

ಕ್ರಾಂತಿಗಳು ಮತ್ತು ಭಾರತದ ನಾಯಕಗಣದ ಶಾಮೀಲುದಾರಿಕೆಗಳು


  ಅನುಶಿವಸುಂದರ್

ಭಾರತದ ನಾಯಕಗಣದ ಶಾಮೀಲುದಾರಿಕೆಯಿಂದಾಗಿಯೇ ಭಾರತದಲ್ಲಿ ಬ್ರಿಟೀಷ್ ರಾಜ್ಯಭಾರ ಸುದೀರ್ಘಕಾಲ ಮುಂದುವರೆಯಿತು.
indian nationalism ಗೆ ಚಿತ್ರದ ಫಲಿತಾಂಶ

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಹಿಂದೂತ್ವವಾದಿ ರಾಷ್ಟ್ರೀಯವಾದಿಗಳು ತಾವೇ ಇಡೀ ರಾಷ್ಟ್ರದ ಜನರ ವಕ್ತಾರರೆಂದು ಹೇಳಿಕೊಳ್ಳುತ್ತಾರೆಹಾಗೂ   ದೇಶದ ಜನ ಏನನ್ನು ತಿಳಿದುಕೊಳ್ಳಬೇಕು  ಮತ್ತು ಯಾವ್ಯಾವ ವಿಷಯಗಳ  ಬಗ್ಗೆ ಮಾತ್ರ ಸಂವೇದನೆಯನ್ನು ಹೊಂದಿರಬೇಕು ಎಂದು ಅವರು ಭಾವಿಸುತ್ತಾರೋ ಅದನ್ನೇ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯವಾದಿಗಳು ಅಧಿಕಾರದಲ್ಲಿದಾಗಲೂ ಮಾಡಿದ್ದು ಇದನ್ನೇಅವರ ಇತಿಹಾಸದ ಪಠ್ಯಗಳು ಮೋಹನ್ದಾಸ್ ಕರಮ್ಚಂದ್ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ದೇಶದ ಜನತೆಯನ್ನು ಸಂಘಟಿಸಿ ಬ್ರಿಟಿಷರನ್ನು ಭಾರತ ಬಿಟ್ಟು ಓಡಿಸಿತು ಎಂದು ಮಕ್ಕಳನ್ನು ನಂಬುವಂತೆ ಮಾಡಿತ್ತು. ಆದರೆ ರಾಷ್ಟ್ರೀಯ ಚಳವಳಿ ನಿಜಕ್ಕೂ ಬ್ರಿಟಿಷರನ್ನು ಭಾರತವನ್ನು ಬಿಟ್ಟು ಹೋಗುವಂತೆ ಮಾಡಿತೇ? ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗುವಂತೆ  ಮಾಡುವ ಒಂದು ಪ್ರಯತ್ನವನ್ನು ೧೯೪೨ರ ಆಗಸ್ಟ್ನಲ್ಲಿ ಮಾಡಲಾಯಿತು. ೭೫ ವರ್ಷಗಳ ನಂತರ, ದೇಶದ ಅತಿ ದೊಡ್ಡ ಇಂಗ್ಲಿಷ್ ದಿನಪತ್ರಿಕೆಯಾದ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು೨೦೧೭ರ ಆಗಸ್ಟ್ ೯ರಂದು ತನ್ನ ಸಂಪಾದಕೀಯ ಪುಟದಲ್ಲಿ ಇದರ ಬಗ್ಗೆ ಲೇಖನ ಬರೆಯುವ ಅವಕಾಶವನ್ನು ಹಿಂದೂತ್ವವಾದಿ ಸಿದ್ಧಾಂತಿಯಾದ ರಾಕೇಶ್ ಸಿನ್ಹಾ ಅವರಿಗೆ ಕೊಟ್ಟಿತ್ತು. ಲೇಖನದಲ್ಲಿ  ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರೆಸ್ಸೆಸ್) ಗಾಂಧೀವಾದಿ ಚಳವಳಿಯಲ್ಲಿ ಭಾಗವಹಿಸುತ್ತಲೇ ಬಂದಿದ್ದರೂ ವಸಾಹತುಶಾಹಿ ಆಳ್ವಿಕೆಯನ್ನು ಸಶಸ್ತ್ರ ಹೋರಾಟದಿಂದ ಕಿತ್ತೊಗೆಯಬೇಕೆಂಬ ಆರೆಸ್ಸೆಸ್ ಅದಮ್ಯ ತುಡಿತವನ್ನೇನೂ ನಿರ್ಮೂಲನೆ ಮಾಡಿರಲಿಲ್ಲ ವೆಂದು ಬರೆದುಕೊಂಡಿದ್ದಾರೆ. ಅದರ ಜೊತೆಗೆ ಎಂದಿನಂತೆ  ಸ್ವಾತಂತ್ರ್ಯ ಹೋರಾಟಕ್ಕೆ ಕಮ್ಯುನಿಸ್ಟರು ಬಗೆದ ದ್ರೋಹದ ಬಗ್ಗೆ ಎರಡು ಸಾಲುಗಳನ್ನು ಸೇರಿಸಿದ್ದಾರೆ

ಸಿನ್ಹಾರಂತವರು ಬರೆಯುವ ಲೇಖನಗಳ ಬಗ್ಗೆ ಏಕೆ ತಲೆಕೆಡಿಸಿಕೊಳ್ಳಬೇಕೆಂದು ಎಂದು ಯಾರಾದರೂ ಕೇಳಬಹುದು. ಆದರೆ ಇಂಥಾ ಬರಹಗಳ ಬಗ್ಗೆ ಪ್ರತಿಕ್ರಿಯಿಸುವುದು ಅಗತ್ಯ. ಏಕೆಂದರೆ ಸಮಷ್ಟಿ ಕಾರ್ಯಚಾರಣೆಯನ್ನು ಪ್ರಭಾವಿಸುವ ಸಾರ್ವಜನಿಕ ಅಭಿಪ್ರಾಯಗಳ ಬಗ್ಗೆ ಹೇಳುವುದಾದರೆ ವ್ಯಕ್ತಿಗಳ ತಾರ್ಕಿಕ ಆಲೋಚನೆಗಳು ಅಧಿಕಾರದ ಪ್ರಭಾವಗಳ ಮುಂದೆ ಮಂಡಿಯೂರಿಬಿಡುತ್ತದೆ. ಅದರಲ್ಲೂ ಭಾರತದ ದೊಡ್ಡ ದೊಡ್ಡ ಬಂಡವಾಳಿಗರ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ಅಧಿಕಾರದ ಚೂರುಗಳನ್ನು ಬಿಸಾಕುತ್ತಾ ಅಭಿಪ್ರಾಯಗಳನ್ನು ಕೊಂಡುಕೊಳ್ಳುತ್ತಿರುವಾಗ ಇಂಥಾ ಬರಹಗಳು ಇನ್ನೂ ಹೆಚ್ಚಿನ ಕಳವಳವನ್ನುಂಟುಮಾಡುತ್ತದೆ. ಹೀಗಾಗಿ ಸತ್ಯದ ಸನಿಹಕ್ಕೆ ಬರಬೇಕೆಂದರೂ ಅಧಿಕಾರಸ್ಥರು ತೋರುವ ಪೂರ್ವಗ್ರಹಗಳ ಬಗ್ಗೆ ಸ್ಪಷ್ಟ ಅರಿವಿರಬೇಕಾಗುವುದು ಪೂರ್ವಶರತ್ತಾಗುತ್ತದೆ.

 ೧೯೪೨ರ ಅಥವಾ ೧೯೪೦ರ ದಶಕದ ಸಂದರ್ಭದ ಬಗ್ಗೆ ಒಂದು ಸ್ಪಷ್ಟ ಐತಿಹಾಸಿಕ ದೃಷ್ಟಿಕೋನವಿಲ್ಲದೆ ಅಂದಿನ ಘಟನೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಆಗುವುದಿಲ್ಲ್ಲ. ಅದು ಎರಡನೇ ವಿಶ್ವಯುದ್ಧ ಕಾಲಘಟ್ಟ. ಎಲ್ಲೆಡೆ ಫ್ಯಾಸಿಸ್ಟ್ ಶಕ್ತಿಗಳು ದೇಶಾನುದೇಶಗಳನ್ನು ಆಕ್ರಮಿಸಿಕೊಳ್ಳುತ್ತಾ ಮುನ್ನುಗ್ಗುತ್ತಿದ್ದ ಕಾಲ. ಭಾರತದ ಮೇಲೆ ಜಪಾನೀಯರ ದಾಳಿ ತೀರಾ ಸನ್ನಿಹಿತಗೊಂಡಿದ್ದ ಸಂದರ್ಭ. ಹೀಗಾಗಿ ನಿರೀಕ್ಷಿತವಾಗಿಯೇ, ಬ್ರಿಟಿಷ ವಸಾಹತುಶಾಹಿಗಳು ೧೯೪೨ರ ಆಗಸ್ಟ್ ರಂದು ಬೆಳಗು ಮೂಡುವ ಮುನ್ನವೇ ಮುನ್ನೆಚ್ಚರಿಕಾ ದಾಳಿಗಳನ್ನು ನಡೆಸಿ ಕಾಂಗ್ರೆಸ್ ನಾಯಕರನ್ನು ಬಂಧಿಸಿದರು. ಮತ್ತು ಮುಂದಿನ ಮೂರು ವರ್ಷಗಳ ಕಾಲ ಅವರನ್ನು ವಿವಿಧ ಜೈಲುಗಳಲ್ಲಿ ಸೆರೆ ಇಟ್ಟರು. ಹೀಗೆ ಕೇವಲ ಮೂರು ವಾರಗಳೊಳಗಾಗಿ ನಗರ ಪ್ರದೇಶದಲ್ಲಿದ್ದ ಪ್ರಧಾನ ಚಳವಳಿಕಾರರನ್ನೆಲ್ಲಾ ಬಂಧಿಸುವ ಮೂಲಕ ಬ್ರಿಟಿಷರು ಚಳವಳಿಯ ಮಗ್ಗಲು ಮುರಿದಿದ್ದರು. ಪರಿಣಾಮವಾಗಿ ಸಮರಶೀಲ ಚಳವಳಿಯು ಹಳ್ಳಿಗಾಡುಗಳಲ್ಲಿ ಮುಂದುವರೆಯಿತು; ರೈಲು ಹಳಿಗಳನ್ನೂಟಲಿಫೋನ್ ತಂತಿಗಳನ್ನು ಕತ್ತರಿಸಿಹಾಕಲಾಯಿತು, ಪೊಲೀಸ್ ಚೌಕಿಗಳ ಮೇಲೆ ದಾಳಿಗಳನ್ನು ನಡೆಸಲಾಯಿತು, ಎಲ್ಲಕ್ಕಿಂತ ವಿಶೇಷವಾಗಿ ಏಕೀಕೃತ ಪ್ರಾಂತ್ಯಗಳಲ್ಲಿ  (ಯುನೈಟೆಡ್ ಪ್ರಾವಿನ್ಸಸ್- ಪ್ರಧಾನವಾಗಿ ಇಂದಿನ ಉತ್ತರಪ್ರದೇಶದ ಭಾಗಗಳುಮತ್ತು ಬಿಹಾರದಲ್ಲಿ ಸರ್ಕಾರಿ ಕಟ್ಟಡಗಳನ್ನು ಸುಟ್ಟುಹಾಕಲಾಯಿತು. ಹೀಗಾಗಿ ಸರ್ಕಾರವು ಸೇನೆಯನ್ನು ನಿಯೋಜಿಸಬೇಕಾಯಿತು. ಬಂಗಾಳದ ಮಿಡ್ನಾಪೂರ್, ಬಾಂಬೆ ಪ್ರಾಂತ್ಯದ ಸತಾರ ಮತ್ತು ಒರಿಸ್ಸಾದ ತಲಚೇರಿಯಂಥ ಕೆಲವು ಪ್ರದೇಶಗಳಲ್ಲಿ ಬಂಡಾಯಗಾರರು ಪರ್ಯಾಯ ಸರ್ಕಾರವನ್ನೇ ರಚಿಸಿದರು. ವಸಾಹತುಶಾಹಿ ಪ್ರತಿರೋಧದ ಭಾಗವಾಗಿ ಬ್ರಿಟಿಷರಲ್ಲಿ ದಿಗಿಲು ಹುಟ್ಟಿಸುವಂಥ ಕ್ರಾಂತಿಕಾರಿ ಭಯೋತ್ಪಾದನೆಯ ಚಟುವಟಿಕೆಗಳು ೧೯೪೪ರವರೆಗೂ ಅಲ್ಲಲ್ಲಿ ಮುಂದುವರೆಯುತ್ತಲೇ ಇದ್ದವು.
೧೯೪೨ರ ವೇಳೆಗೆ ಬ್ರೀಟಿಷ್ ಆಳ್ವಿಕೆಯ ವಿರುದ್ಧ ಜನಸಮೂಹದ ಆಕ್ರೋಶ ಮತ್ತು ಅಸಹನೆಗಳು ತಾರಕಕ್ಕೆ ಮುಟ್ಟಿದ್ದವು. ಹೀಗಾಗಿ ಮಾಡು ಇಲ್ಲವೇ ಮಡಿ ಎಂಬ ಘೋಷಣೆಯು ಜನಸಮೂಹ ಬದ್ಧತೆಯಿಂದಲೇ ಆಚರಣೆಗೆ ತಂದರು. ಆದ್ದರಿಂದಲೇ ಕ್ವಿಟ್ ಇಂಡಿಯಾ (ಭಾರತ ಬಿಟ್ಟು ತೊಲಗಿ) ಚಳವಳಿಯು ಪ್ರಾರಂಭದಿಂದಲೇ ಹಿಂಸಾತ್ಮಕವಾಗಿಯೇ ಇದ್ದಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಕಾಂಗ್ರೆಸ್ ನಾಯಕತ್ವವನ್ನು ಮೊದಲೇ ಬಂಧಿಸಿ ಜನತೆಯಿಂದ  ದೂರಗೊಳಿಸಲಾಗಿತ್ತು. ಹೀಗಾಗಿ ಕಾಂಗ್ರೆಸ್ ಸಂಘಟನೆಗೆ  ಹಿಂಸಾತ್ಮಕ ಚಟುವಟಿಕೆಗಳನ್ನು ಖಂಡಿಸುವ ಅಥವಾ ಮಧ್ಯಪ್ರವೇಶ ಮಾಡಿ ಸಮರಶೀಲ ಹೋರಾಟಗಳನ್ನು ಹತ್ತಿಕ್ಕುವ ಸಾಧ್ಯತೆಯೂ ಇರಲಿಲ್ಲ. ೧೯೪೪ರ ಮೇ ತಿಂಗಳಲ್ಲಿ ಗಾಂಧಿಯವರ ಬಿಡುಗಡೆಯಾಯಿತು. ಆಗ ಅವರು ಕೂಡಲೇ ಭೂಗತ ಚಳವಳಿಯನ್ನು ಖಂಡಿಸಿದ್ದಲ್ಲದೆ ಭೂಗತ ಚಳವಳಿಯ ನಾಯಕರೆಲ್ಲರೂ ಶರಣಾಗಬೇಕೆಂದು ಕರೆಕೊಟ್ಟರು.

ಹಿಂದೆ ಕಾಂಗ್ರೆಸ್ ಎರಡು ಬಾರಿ ಅಖಿಲ ಭಾರತ ವ್ಯಾಪ್ತಿಯ ಸಾಮೂಹಿಕ ಚಳವಳಿಗೆ ಕರೆಕೊಟ್ಟಿತ್ತು. ೧೯೨೧-೨೨ರಲ್ಲಿ ನಡೆದ ಅಸಹಕಾರ ಚಳವಳಿ. ಮತ್ತು ೧೯೩೦-೩೪ರ ನಡುವೆ ಬಿಟ್ಟುಬಿಟ್ಟು ನಡೆದ ನಾಗರಿಕ ಅಸಹಕಾರ ಚಳವಳಿ. ಎರಡೂ ಸಂದರ್ಭಗಳಲ್ಲಿ ಅಹಿಂಸೆಯನ್ನು ಕಾಪಾಡಿಕೊಳ್ಳಲು ಚಳವಳಿಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ನಾಯಕತ್ವವು ಹರಸಾಹಸ ಪಟ್ಟಿತ್ತುಎಲ್ಲರಿಗೂ ತಿಳಿದಿರುವಂತೆ ಚೌರಿಚೌರಾದಲ್ಲಿ ಹಿಂಸೆಯು ಭುಗಿಲೆದ್ದ ಕಾರಣವನ್ನು ಮುಂದೆ ಮಾಡಿ ೧೯೨೦ರ ಅಸಹಕಾರ ಚಳವಳಿಯನ್ನು ಹಿಂತೆಗೆದುಕೊಳ್ಳಲಾಯಿತು; ಮತ್ತು ೧೯೩೦ರ ನಾಗರಿಕ ಅಸಹಕಾರ ಚಳವಳಿಯಲ್ಲಿ ಶಾಂತಿಯುತ ಪ್ರತಿಭಟನೆಯು ಕಡ್ಡಾಯವಾಗಿತ್ತು. ಎಲ್ಲಿಯವರೆಗೆ ಎಂದರೆ ವಸಾಹತುಶಾಹಿಗಳ ಅವಲಂಬಿತ ಮಿತ್ರಶಕ್ತಿಯಾಗಿದ್ದ ಭೂಮಾಲಿಕರ ವಿರುದ್ದ ಗೇಣಿ ನಿರಾಕರಣೆಯಂಥ ಆಂದೋಲನ ಮಾಡುವುದನ್ನೂ ಸಹ ಗಾಂಧಿ ನೇತೃತ್ವದ ಕಾಂಗ್ರೆಸ್ ಸಂಪೂರ್ಣವಾಗಿ ನಿಷೇಧ ಮಾಡಿತ್ತು

ರಾಷ್ಟ್ರೀಯವಾದಿ ಇತಿಹಾಸ ಪಠ್ಯಗಳೇನೇ ಹೇಳಿದರೂ, ವಾಸ್ತವವೇನೆಂದರೆ ಕ್ವಿಟ್ಟ್ ಇಂಡಿಯಾ ಚಳವಳಿಯು ಬ್ರಿಟಿಷರನ್ನು ಭಾರತ ಬಿಟ್ಟು ಓಡಿಸಲಿಲ್ಲ. ಆದರೆ ವೇಳೆಗಾಗಲೇ ಗೋಡೆಯ ಮೇಲಿನ ಬರಹ ಸ್ಪಷ್ಟವಾಗಿ ಕಾಣುವಂಥ ಬೆಳವಣಿಗೆಗಳು ಭಾರತದಲ್ಲಿ ಸಂಭವಿಸುತ್ತಿತ್ತುಕ್ವಿಟ್ ಇಂಡಿಯಾ ಚಳವಳಿ ದಿನಗಳೆದಂತೆ ಪಡೆದುಕೊಳ್ಳುತ್ತಿದ್ದ ಕಸುವು, ಭಾರತವನ್ನು ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಗೊಳಿಸಲು ನಾಜಿ ಜರ್ಮನಿ ಮತ್ತು ಸಾಮ್ರಾಜ್ಯಶಾಹಿ ಜಪಾನಿಯರಿಂದ ಸಹಾಯ ಪಡೆದುಕೊಂಡು ಸುಭಾಷ್ ಚಂದ್ರ ಬೋಸರು ಕಟ್ಟಿದ ಇಂಡಿಯನ್ ನ್ಯಾಷನಲ್ ಆರ್ಮಿಯು - ಐಎನ್ (ಭಾರತೀಯ ರಾಷ್ಟ್ರೀಯ ಸೇನೆ)-  ಹುಟ್ಟುಹಾಕಿದ ಸಮರಶೀಲ ರಾಷ್ಟ್ರೀಯವಾದ, ಯುದ್ಧಾನಂತರ ಪ್ರಮುಖ ನಗರಗಳಲ್ಲಿ ನಡೆದ ಸಾಮೂಹಿಕ ಮುಷ್ಕರಗಳು, ರಾಯಲ್ ಇಂಡಿಯನ್ ನೇವಿ (ಬ್ರಿಟಿಷ್ ಭಾರತದ ನೌಕಾಪಡೆ)ಯಲ್ಲಿನ ಭಾರತೀಯ ಸೈನಿಕರು ಹೂಡಿದ ಬಂಡಾಯ, ಬ್ರಿಟಿಷ್ ಭಾರತೀಯ ಸೇನೆ ಮತ್ತು ಪೊಲೀಸರಲ್ಲಿ ಬ್ರಿಟಿಷರ ಬಗ್ಗೆ ಮಡುಗಟ್ಟುತ್ತಿದ್ದ ಅಸಹನೆ, ಮತ್ತು ಭಾರತೀಯ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ನೇತೃತ್ವದಲ್ಲಿ ತೇಭಾಗ ಮತ್ತು ತೆಲಂಗಾಣದಲ್ಲಿ ನಡೆದ ರೈತ ಬಂಡಾಯಗಳು ಬ್ರಿಟೀಷರ ಆಳ್ವಿಕೆಯು ಕೊನೆಗಾಣುತ್ತಿದೆಯೆಂಬುದನ್ನು ಸಾರಿ ಹೇಳುತ್ತಿತ್ತು.

ಹಿಂದೂತ್ವವಾದಿಗಳ ಪರವಾಗಿ ತಾವೇ ನಿಜವಾದ ಕ್ರಾಂತಿಕಾರಿ ರಾಷ್ಟ್ರೀಯವಾದದ ಹಕ್ಕುದಾರರೆಂಬ ವಾದವನ್ನು ಮಾಡುತ್ತಿರುವ, ಹಾಲೀ ಅಧಿಕಾರದ ಚುಕ್ಕಾಣಿ ಹಿಡಿದಿರುವವರ ಪ್ರತಿಪಾದನೆಯ ತಥ್ಯಾಂಶವೇನು? ಬಿಜೆಪಿಯವರು ಅತ್ಯಂತ ಗೌರವಾದರಗಳಿಂದ ನೆನೆಯುವ ಜನಸಂಘದ ಸಂಸ್ಥಾಪಕ ಶಾಮ ಪ್ರಸಾದ್ ಮುಖರ್ಜಿಯವರು ಕ್ವಿಟ್ ಇಂಡಿಯಾ ಚಳವಳಿ ನಡೆಯುತ್ತಿದ್ದಾಗ ಬಂಗಾಳ ಸರ್ಕಾರದ ಹಣಕಾಸು ಮಂತ್ರಿಗಳಾಗಿದ್ದರು. ಆಗ ಅತ್ಯಂತ ದಮನಕಾರಿ ಪ್ರವೃತ್ತಿ ಹೊಂದಿದ್ದ ಜಾನ್ ಹರ್ಬರ್ಟ್ ಅವರು ಬಂಗಾಳ ಪ್ರಾಂತ್ಯದ ಗವರ್ನರ್ ಆಗಿದ್ದರು. ಅವರು ಕ್ವಿಟ್ ಇಂಡಿಯಾ ಚಳವಳಿಯನ್ನು ಬಲಪ್ರಯೋಗದ ಮೂಲಕ ಹತ್ತಿಕ್ಕಬೇಕೆಂದು ಇಲ್ಲವೇ ರಾಜೀನಾಮೆ ನೀಡಬೇಕೆಂದು ಬಂಗಾಳ ಸರ್ಕಾರಕ್ಕೆ ಕಟ್ಟುನಿಟ್ಟಾಗಿ ತಾಕೀತು ಮಾಡಿದ್ದರು. ಆಗ ರಾಜೀನಾಮೆ ಕೊಡುವ ಬದಲಿಗೆ ಶಾಮಪ್ರಸಾದ್ ಮುಖರ್ಜಿಯವರು ಚಳವಳಿಯನ್ನು ಹೇಗೆ ಸದೆಬಡಿಯಬಹುದೆಂಬ ದಾರಿಗಳನ್ನು ಹುಡುಕುತ್ತಿದ್ದರು. ಮಿಡ್ನಾಪೂರದಲ್ಲಿ ತನ್ನ ಸರ್ಕಾರವು ಜನರ ಮೇಲೆ ಕ್ರೂರ ದಮನ ನಡೆಸುತ್ತಿದ್ದರೂ ಅವರು ಸರ್ಕಾರದಲ್ಲಿ ಹಣಕಾಸು ಮಂತ್ರಿಯಾಗಿ ಉಳಿದುಕೊಂಡರು. ಇನ್ನು ವೀರ ಸಾವರ್ಕರ್ ಎಂದು ಕರೆಯಲ್ಪಡುವ ವಿನಾಯಕ್ ದಾಮೋದರ್ ಸಾವರ್ಕರ್ ಅವರು ಜೈಲಿನಿಂದ ಬಿಡುಗಡೆಯಾಗಲು ಆತ್ಮಗೌರವವನ್ನು ಅಡವಿಟ್ಟು ಬ್ರಿಟಿಷ್ ಸರ್ಕಾರ ವಿಧಿಸಿದ ಎಲ್ಲಾ ಅವಮಾನಕಾರಿ ಶರತ್ತುಗಳನ್ನೂ ಒಪ್ಪಿಕೊಂಡರು. ಆಮೇಲೆ ಬಾಂಬೆ ಪ್ರಾಂತ್ಯದ ಕಾಂಗ್ರೆಸ್ ಸರ್ಕಾರದ ಸಹಾಯ ಪಡೆದು ಎಲ್ಲಾ ಶರತ್ತುಗಳನ್ನು ತೆಗೆಸಿಕೊಂಡರುನಂತರದಲ್ಲಿ ಅವರು ಹಿಂದೂ ಮಹಾ ಸಭಾದ ಅಧ್ಯಕ್ಷರಾದರು. ೧೯೪೨ರ ಸೆಪ್ಟೆಂಬರ್ನಲ್ಲಿ ಅವರು ಮಹಾಸಭಾದಿಂದ ಆಯ್ಕೆಯಾದ ನಗರಪಾಲಿಕೆ, ಶಾಸನಸಭಾ ಸದಸ್ಯರಿಗೂ ಮತ್ತು ಸರ್ಕಾರಿ ನೌಕರರಿಗೂ ಒಂದು ಸುತ್ತೋಲೆಯನ್ನು ಹೊರಡಿಸಿ   ಯಾವ ಕಾರಣಕ್ಕೂ ರಾಜೀನಾಮೆ ಕೊಡದೆ ತಮ್ಮ ತಮ್ಮ ಹುದೆಗಳಲ್ಲಿದ್ದುಕೊಂಡು ಎಂದಿನ ಕೆಲಸಕಾರ್ಯಗಳಲ್ಲಿ ನಿರತರಾಗಿರಬೇಕೆಂದು ಆದೇಶ ಹೊರಡಿಸಿದ್ದರು. ವಿಪರ್ಯಾಸವೆಂದರೆ ಕ್ವಿಟ್ ಇಂಡಿಯಾ ಚಳವಳಿಯಲ್ಲಿ  ತೊಡಗಿಕೊಂಡಿದ್ದ ನಿಜವಾದ ಚಳವಳಿಕಾರರು ಇದಕ್ಕೆ ತದ್ವಿರುದ್ಧವಾದ ಆಗ್ರಹವನ್ನು ಮಾಡುತ್ತಿದ್ದರು.

ಇನ್ನು ಆರೆಸ್ಸೆಸ್ಸ್ ಪಾತ್ರ ಹಾಗೂ ಸಿನ್ಹಾರವರು ಹೇಳುವಂತೆ ಗಾಂಧಿ ಚಳವಳಿಯಲ್ಲಿದ್ದರೂ ವಸಾಹತು ಆಳ್ವಿಕೆಯನ್ನು ಸಶಸ್ತ್ರ ಹೋರಾಟದಿಂದ ಕಿತ್ತೊಗೆಯಬೇಕೆಂಬ ಅದರ ಅದಮ್ಯ ಬಯಕೆಯ ಕುರಿತಾಗಿ ಹೇಳಬೇಕೆಂದರೆಬಾಂಬೆ ಪ್ರಾಂತ್ಯದ ಗೃಹ ಇಲಾಖೆಯು ಅಂದಿನ ವಿದ್ಯಮಾನಗಳ ಬಗ್ಗೆ ರೀತಿಯ ವರದಿಯನ್ನು ಕೊಟ್ಟಿತ್ತುರಾಷ್ಟ್ರೀಯ ಸ್ವಯಂ ಸೇವಕ ಸಂಘವು ಅತ್ಯಂತ ಪ್ರಜ್ನಾಪೂರ್ವಕವಾಗಿ ತನ್ನ ಚಟುವಟಿಕೆಗಳನ್ನು ಕಾನೂನಿನ ಚೌಕಟ್ಟಿನೊಳಗೆ ಇರಿಸಿಕೊಂಡಿರುವುದಲ್ಲದೆ ೧೯೪೨ರ ಆಗಸ್ಟಿನಲ್ಲಿ ಭುಗಿಲೆದ್ದ ಎಲ್ಲಾ ಗಲಭೆಗಳಿಂದಲೂ ದೂರ ಉಳಿದಿದೆ. ಮೇಲಾಗಿ ದಿನಗಳಲ್ಲಿ ಆರೆಸ್ಸೆಸ್ಗಿಂತ ಹಿಂದೂ ಮಹಾಸಭಾವೇ ಮುಂಚೂಣಿಯಲ್ಲಿತ್ತು. ಮತ್ತು ಸಾವರ್ಕರ್ ಮತ್ತು ಆರೆಸ್ಸೆಸ್ ಸರಸಂಘಚಾಲಕರ ನಡುವೆ ವ್ಯಕ್ತಿಗತ ಪ್ರತಿಷ್ಟೆಯ ವೈಮನಸ್ಯಗಳು ಇದ್ದಿದ್ದರಿಂದ ಅವೆರಡು ಒಂದಾಗುವ ಸಾಧ್ಯತೆಗಳು ಇರಲಿಲ್ಲ. ( ಮೇಲಿನ ವಿಷಯಗಳಿಗೆ ಸಂಬಂಧಪಟ್ಟ ಮಾಹಿತಿಗಳನ್ನು .ಜಿ. ನೂರಾನಿ ಅವರು ಬರೆದಿರುವ ದಿ ಸಂಘ್ ಪರಿವಾರ್ ಅಂಡ್ ಬ್ರಿಟಿಷ್ ಎಂಬ ಪುಸ್ತಕದ ೩ನೇ ಅಧ್ಯಾಯದಿಂದ ಪಡೆದುಕೊಳ್ಳಲಾಗಿದೆ.)

ಹಾಗಿದ್ದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಮತ್ತು ಕ್ವಿಟ್ ಇಂಡಿಯಾ ಚಳವಳಿಗೆ ಅದು ಬಗೆದ ದ್ರೋಹದ ಕಥೆ ಏನು? ಸಿಪಿಐ ಪಕ್ಷವು ಕ್ವಿಟ್ ಇಂಡಿಯಾ ಚಳವಳಿಗೆ ತೋರಿದ ವಿರೋಧವು ಅದು ಮಾಡಿದ ಅತಿ ದೊಡ್ಡ ಪ್ರಮಾದ. ಆದರೆ ತಪ್ಪಿನ ಮೂಲ ಇರುವುದು ದಿನಗಳಲ್ಲಿ ನಡೆಯುತ್ತಿದ್ದ ಫ್ಯಾಸಿಸ್ಟ್ ವಿರೋಧಿ ಹೋರಾಟದ, ಕೆಲವು ಅಂತರರಾಷ್ಟ್ರೀಯತೆಯ ತತ್ವಗಳಲ್ಲಿ. ಅದರಲ್ಲೂ ಮುಖ್ಯವಾಗಿ ಫ್ಯಾಸಿಸ್ಟ್ ವಿರೋಧಿ ಐಕ್ಯರಂಗಗಳು (ಪಾಪ್ಯುಲರ್ ಫ್ರಂಟ್) ರೂಪುಗೊಂಡ ನಂತರದಲ್ಲಿ ತತ್ವಗಳನ್ನು ಆಚರಣೆಗೆ ತಂದ ರೀತಿಯಲ್ಲಿಜೊತೆಗೆ ಅಂದಿನ ದಿನಗಳಲ್ಲಿ ಫ್ಯಾಸಿಸ್ಟರ ವಿಜಯವು ಸಂಭವನೀಯವೆಂಬ ಅಭಿಪ್ರಾಯವೇ ಚಾಲ್ತಿಯಲ್ಲಿತ್ತು. ಹಾಗೂ ಜಗತ್ತಿನೆಲ್ಲೆಡೆ ನಾಜಿಗಳ ಭಯಾನಕ  ಫೈನಲ್ ಸಲ್ಯೂಷನ್ನ ಭೀತಿ ವಿಶ್ವದಾದ್ಯಂತ ಆವರಿಸಿಕೊಂಡಿತ್ತು.

(ಹಿಟ್ಲರ್ ಮತ್ತವನ ನಾಜಿ ಪಕ್ಷವುಯೆಹೂದಿಗಳು ಜರ್ಮನಿಯ ಮತ್ತು ಜಗತ್ತಿನ ಶತ್ರುಗಳೆಂಬ ದ್ವೇಷವನ್ನು ಬಿತ್ತುತ್ತಾ ಆರ್ಥಿಕವಾಗಿ ಮತ್ತು ನೈತಿಕವಾಗಿ ಜರ್ಝರಿತವಾಗಿದ್ದ ಜರ್ಮನಿಯಲ್ಲಿ ಅಧಿಕಾರಕ್ಕೆ ಬಂದರು೧೯೩೩ರಲ್ಲಿ ಜರ್ಮನಿಯ ಅಧ್ಯಕ್ಷನಾಗಿ ಹಿಟ್ಲರ್ ಚುನಾಯಿತನಾದ ನಂತರದಲ್ಲಿ ಯೆಹೂದಿ ಸಮಸ್ಯೆಯನ್ನು ಬಗೆಹರಿಸಲು ಯೆಹೂದಿಗಳ ವಹಿವಾಟುಗಳ ಮೇಲೆ ನಿರ್ಭಂಧಗಳನ್ನು ಹೇರುವ, ಅವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ, ಅವರನ್ನು ಸಾಮೂಹಿಕವಾಗಿ ದೂರದ ದ್ವೀಪಗಳಿಗೆ ಸಾಗಿಹಾಕುವಂಥ ಹಲವು ದಮನಕಾರಿ ನೀತಿಗಳನ್ನು ಅನುಸರಿಸುತ್ತಾ ಬಂದಿದ್ದ. ಎರಡನೇ ವಿಶ್ವಯುದ್ಧ ಪ್ರಾರಂಭಿಸಿ ಇಡೀ ಜಗತನ್ನೇ ಗೆಲ್ಲುತ್ತಾ ಹೋದಂತೆ ಹಿಟ್ಲರ್ ಮತ್ತವನ ನಾಜಿ ಪಕ್ಷ  ಯೆಹೂದೀ ಸಮಸ್ಯೆಗೆ ಶಾಶ್ವತ ಮತ್ತು ಅಂತಿಮ ಪರಿಹಾರ (ಫೈನಲ್ ಸಲ್ಯೂಷನ್) ವೊಂದನ್ನು ರೂಪಿಸಿತುಯೂರೋಪಿನೆಲ್ಲೆಡೆ ಹರಡಿಕೊಂಡಿದ್ದ ಯೆಹೂದಿಗಳಲ್ಲೆರನ್ನೂ ಕಾನ್ಸೆನ್ಟ್ರೇಷನ್ ಕ್ಯಾಂಪ್ (ಚಿತ್ರಹಿಂಸಾ ಶಿಬಿರ)ಗಳಲ್ಲಿ ಒಟ್ಟುಗಟ್ಟಿ ನಂತರ ಗ್ಯಾಸ್ ಚೇಂಬರ್ ಇತ್ಯಾದಿಗಳನ್ನು ಬಳಸಿ ಎಲ್ಲಾ ಯೆಹೂದಿಗಳನ್ನು ಕೊಂದುಹಾಕುವುದೇ ಫೈನಲ್ ಸಲ್ಯೂಷನ್ಮುಂದಿಟ್ಟ ಪರಿಹಾರ. ಅದರಂತೆ ೧೯೪೨-೪೫ರ ನಡುವೆ ನಡೆದ ಬರ್ಬರ ನರಮೇಧದಲ್ಲಿ ೬೦ ಲಕ್ಷ ಯೆಹೂದಿಗಳನ್ನು ಕೊಂದುಹಾಕಲಾಯಿತು- ಅನುವಾದಕನ ಟಿಪ್ಪಣಿ)

ಇದರೊಡನೆ ಕೆಲವು ಸರಿಯಾದ ಕಾರಣಗಳಿಂದಾಗಿಯೇ ಸಿಪಿಐ ಪಕ್ಷವು ಕ್ವಿಟ್ ಇಂಡಿಯಾ ಚಳವಳಿ ಪ್ರಾರಂಭಗೊಂಡ ಸಮಯ ಸೂಕ್ತವಾದದ್ದಲ್ಲವೆಂಬ ಅಭಿಪ್ರಾಯಕ್ಕೆ ಬಂದಿತ್ತು. ಆದರೆ ಫ್ಯಾಸಿಸ್ಟ್ ವಿರೋಧಿ ಹೋರಾಟದ ಅಂತತರಾಷ್ಟ್ರೀಯತೆಯ ತತ್ವವನ್ನು ಆಗ ಸಿಪಿಐ ಮಾಡಿದ ರೀತಿಯಲ್ಲೇ ಅನುಷ್ಠಾನಕ್ಕೆ ತರಬೇಕಿರಲಿಲ್ಲ. ಭಾರತದ ವಸಾಹತು ಆಡಳಿತದ ಸಂದರ್ಭದಲ್ಲಿ ಯಾವ ಮಾರ್ಪಾಡುಗಳನ್ನು ಮಾಡಿಕೊಳ್ಳುವ ಮೂಲಕ ಫ್ಯಾಸಿಸ್ಟ್ ವಿರೋಧಿ ಹೋರಾಟ ರಂಗದ ಅಂತರರಾಷ್ಟ್ರೀಯತೆಯ ತತ್ವಗಳನ್ನು ಜಾರಿಗೆ ತರಬಹುದೆಂಬ ಬಗ್ಗೆ ಅದು ಆಲೋಚಿಸಬಹುದಿತ್ತು. ಫ್ಯಾಸಿಸ್ಟ್ ವಿರೋಧಿ ಯುದ್ಧದಲ್ಲಿ ಸೋವಿಯತ್ ಒಕ್ಕೂಟದ ಜೊತೆ ಬ್ರಿಟಿಷರು ಮೈತ್ರಿ ಮಾಡಿಕೊಂಡಿದ್ದರು. ಹೀಗಾಗಿ ಭಯಾನಕವಾದ ದೈತ್ಯ ಫ್ಯಾಸಿಸ್ಟ್ ಶಕ್ತಿಗಳು ಎದುರಾದಾಗ ದೊಡ್ಡ ಶತ್ರುವನ್ನು ಎದುರು ಸಣ್ಣ ಶತ್ರುವನ್ನು ಆಯ್ಕೆಮಾಡಿಕೊಳ್ಳಬೇಕಾದ ಬೇಗುದಿಯಿತ್ತು. ಆದ್ದರಿಂದ ಸಿಪಿಐ ಅನುಸರಿಸಿದ ನೀತಿಯಲ್ಲಿ ಖಂಡಿತಾ ಒಂದು ಅಂತರಿಕ ಸಂಘರ್ಷವಿತ್ತು. ಆದರೆ ಖಂಡಿತಾ ದ್ರೋಹವಿರಲಿಲ್ಲ. ಅಷ್ಟು ಮಾತ್ರವಲ್ಲ. ಕ್ರಾಂತಿಕಾರಿ ಭಯೋತ್ಪಾದಕರನ್ನು ಹೊರತುಪಡಿಸಿದರೆ ಸಿಪಿಐ ಪಕ್ಷವು ಬ್ರಿಟಿಷ ವಸಾಹತುಶಾಹಿಯಿಂದ ಅತ್ಯಂತ ತೀವ್ರ ದಮನಕ್ಕೆ ಗುರಿಯಾದ ಮತ್ತು ನಿಷೇಧಗಳಿಗೆ ಒಳಗಾದ ಪಕ್ಷವೆಂಬುದನ್ನೂ ಸಂದರ್ಭದಲ್ಲಿ ನೆನೆಪಿಸಿಕೊಳ್ಳಬೇಕು.

ನಿಜ ಹೇಳಬೇಕೆಂದರೆ, ಭಾರತದಲ್ಲಿ ಸುದೀರ್ಘ ಕಾಲ ಬ್ರಿಟೀಷ್ ಆಳ್ವಿಕೆ ಮುಂದುವರೆಯಲು ಒಂದು ಪ್ರಧಾನ ಕಾರಣ ಭಾರತದ ನಾಯಕವರ್ಗದ ಶಾಮೀಲುಕೋರತನ- ವಿವಿಧ ಬಣ್ಣದ ರಾಜಕೀಯ ನಾಯಕರು ಕಾಲಕಾಲಕ್ಕೆ ಬ್ರಿಟಿಷ್ ನಿಯಂತ್ರಿತ ವಸಾಹತು ಪ್ರಭುತ್ವಕ್ಕೆ ತೋರಿದ ಬೆಂಬಲ ಮಾತ್ರವಲ್ಲದೆ ಕೆಲವೊಮ್ಮೆ ಅದರಲ್ಲಿ ಕಿರಿಯ ಪಾಲುದಾರರಾಗಿ ಭಾಗವಹಿಸಿದ್ದು; ಅದರ ಜೊತೆಗೆ ಭಾರತದ ದೊಡ್ಡ ಬಂಡವಾಳಶಾಹಿಗಳು, ಭೂಮಾಲಿಕರು, ಸೇನೆ ಹಾಗೂ ಪೋಲಿಸರನ್ನು ಒಳಗೊಂಡಂತೆ ಬ್ರಿಟಿಷ್ ಭಾರತ ಸರ್ಕಾರದಲ್ಲಿ ಉನ್ನತ ಸ್ಥಾನದಲ್ಲಿದ್ದ ಭಾರತೀಯ ಅಧಿಕಾರಿಗಳು, ಮತ್ತು ರಾಜರುಗಳು ಬ್ರಿಟಿಷರೊಂದಿಗೆ ಕೈಗೂಡಿಸಿದ್ದು- ಶಾಮೀಲುದಾರಿಕೆಯ ಕೆಲವು ಬಗೆಗಳು. ರಾಷ್ಟ್ರೀಯವಾದಿ ಇತಿಹಾಸ ಬರವಣಿಗೆಯು ಬ್ರಿಟಿಷರ ದಮನದ ಮೇಲೆ ಕೊಡುವಷ್ಟು ಒತ್ತನ್ನು ಭಾರತದ ನಾಯಕವರ್ಗದ ಶಾಮೀಲುದಾರಿಕೆಯ ಬಗ್ಗೆ  ನೀಡುವುದಿಲ್ಲ. ಇದರ ಜೊತೆಗೆ ೨೦೧೪ರ ಜೂನ್ ೧೧ ರಂದು ಲೋಕಸಭೆಯಲ್ಲಿ ತಾವು ಮಾಡಿದ ಪ್ರಥಮ ಭಾಷಣದಲ್ಲಿ ನರೇಂದ್ರ ಮೋದಿಯವರು: ೧೨೦೦ ವರ್ಷಗಳ ಗುಲಾಮಿ ಮಾನಸಿಕತೆಯು ಭಾರತೀಯರನ್ನು ಕಂಗೆಡೆಸಿದೆ ಎಂದು ಹೇಳಿದ್ದಾರೆ. ಇದು ವಸಾಹತುಶಾಹಿ ಇತಿಹಾಸ ಬರವಣಿಗೆಗೆ ತಕ್ಕಂತೆ ಇದೆ. ಮುಸ್ಲಿಮ್ ನಾಗರಿಕತೆಯ ಅವಧಿಯನ್ನು ನಿರಂಕುಶ ದಮನ ವೆಂದು ಹೀಗೆಳೆಯಲಾಗುತ್ತದೆ. ಆದರೆ ೨೦೦೦ ವರ್ಷಗಳ ಹಿಂದೂ ನಾಗರಿಕತೆಯನ್ನು ಮಾತ್ರ ಸುವರ್ಣ ಯುಗ ವೆಂದು ಬಣ್ಣಿಸಲಾಗುತ್ತದೆ. ಇಂಥಾ ಭಾಷಣದ ಬಗ್ಗೆ ಸಂಸತ್ತಿನಲ್ಲಿ ಪ್ರತಿರೋಧವಿರಲಿ ಒಂದು ಸಣ್ಣ ಗೊಣಗಾಟವೂ ಕೇಳಿಬರಲಿಲ್ಲ. ಕಾಂಗ್ರೆಸ್ ಬ್ರಾಂಡಿನ ಜಾತ್ಯತೀತ ರಾಷ್ಟ್ರೀಯವಾದಕ್ಕೂ ಮತ್ತು ಮುನ್ನುಗ್ಗುತ್ತಲೇ ಇರುವ ಹಿಂದೂತ್ವವಾದಿ ರಾಷ್ಟ್ರೀಯತೆಗೂ ಮಧ್ಯೆ ದೀರ್ಘಕಾಲದಿಂದ ಸಾಗುತ್ತಿರುವ ಯುದ್ಧವು ಇತ್ತೀಚಿನ ದಿನಗಳಲ್ಲಿ ನಿರ್ಣಯಾತ್ಮಕವಾಗಿ ಎರಡನೆಯದರ ಪರವಾಗಿ ವಾಲುತ್ತಿದೆ.

  ಕೃಪೆ: Economic and Political Weekly, Aug 12, 2017. Vol. 52. No. 32
                                                                                                                

ಕಾಮೆಂಟ್‌ಗಳಿಲ್ಲ: