ಮಂಗಳವಾರ, ಆಗಸ್ಟ್ 29, 2017

ಪ್ರೀತಿಯಿಲ್ಲದ ಪಿತೃಸ್ವಾಮ್ಯ


 ಅನುಶಿವಸುಂದರ್
Image result for feminist judicial activism

ಪಿತೃಸ್ವಾಮ್ಯದ ಬೃಹತ್ ಸಂಕೀರ್ಣವಾದ ಪ್ರಭುತ್ವ, ಸಮಾಜ ಮತ್ತು ಕುಟುಂಬಗಳೆಲ್ಲಾ ಒಟ್ಟುಗೂಡಿ ಹಾದಿಯಾ ಎಂಬ ಮಹಿಳೆಯ ಸ್ವಂತಿಕೆಯನ್ನು ಹಾಗೂ ಘನತೆಯನ್ನೂ ನಿರಾಕರಿಸಿವೆ.

ಭಾರತದ ನ್ಯಾಯಾಂಗವು ಹಿಂದೂ ಬಲಪಂಥೀಯ ರಾಜಕೀಯದೆಡೆಗೆ ಹೆಚ್ಚೆಚ್ಚು ವಾಲುತ್ತಿರುವುದು ಮಹಿಳಾವಾದಿ ನ್ಯಾಯಿಕ ಕ್ರಿಯಾಶೀಲತೆಯ (ಫೆಮಿನಿಸ್ಟ್ ಜುಡಿಷಿಯಲ್ ಆಕ್ಟಿವಿಸಮ್)ಮೇಲೆ ಕಳವಳಕಾರಿ ಪರಿಣಾಮಗಳನ್ನು ಬೀರುತ್ತಿದೆ. ಇದು ಕೇರಳದ ಪ್ರಾಪ್ತ ವಯಸ್ಸಿನ ಯುವತಿಯಾದ ಹಾದಿಯಾಳ ಪ್ರಕರಣದ ಬಗ್ಗೆ  ಸುಪ್ರೀಂ ಕೋರ್ಟು ಕೊಟ್ಟ ಆದೇಶದಲ್ಲಿ ಮತ್ತಷ್ಟು ನಿಚ್ಚಳವಾಗಿ ವ್ಯಕ್ತವಾಗಿದೆ. ಯುವತಿಯು ಶಫೀನ್ ಜಹಾನ್ ಎಂಬ ಪ್ರಾಪ್ತ ವಯಸ್ಸಿನ ಯುವಕನನ್ನು ಪರಸ್ಪರ ಸಮ್ಮತಿಯ ಮೇರೆಗೆ ಮದುವೆಯಾದರೂ ಆಕೆಯನ್ನು ತವರಿನಲ್ಲಿ ಬಂಧಿಸಿಡಲಾಗಿತ್ತು. ಮತ್ತು ಮದುವೆಯನ್ನು ಕೇರಳ ಉಚ್ಚ ನ್ಯಾಯಾಲಯ ಅಸಿಂಧು ಎಂದು ಘೋಷಿಸಿತ್ತು. ಅತ್ಯಂತ ಆಶ್ಚರ್ಯದ ವಿಷಯವೆಂದರೆ, ಸುಪ್ರೀಂ ಕೋರ್ಟು ಪ್ರಕರಣಕ್ಕೆ  ರಾಷ್ಟ್ರೀಯ ತನಿಖಾ ಸಂಸ್ಥೆ (ನ್ಯಾಷನಲ್ ಇನ್ವೆಸ್ಟಿಗೇಟಿಂಗ್ ಏಜೆನ್ಸಿ-ಎನ್ಐಎ)ಯನ್ನು ಎಳೆತಂದಿದೆ. ಹಾದಿಯಾಳ ಮದುವೆಯು ನಿಜಕ್ಕೂ ಪರಸ್ಪರ ಸಮ್ಮತಿಯಿಂದ ನಡೆದಿದೆಯೋ ಅಥವಾ ಇದರ ಹಿಂದೆ ಭಯೋತ್ಪಾದಕ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಸಂಸ್ಥೆಯು ಯುವಜನರನ್ನು ತನ್ನತ್ತ ಸೆಳೆಯಲು ಹೆಣೆದಿರುವ ಸಾಮೂಹಿಕ ಮತಾಂತರದದ ಅಸ್ತ್ರದ ಅರ್ಥಾತ್ ಲವ್ ಜಿಹಾದಿನ ಕುರುಹುಗಳೇನಾದರೂ ಇವೆಯೋ ಎಂದು ತನಿಖೆ ಮಾಡಲು ರಾಷ್ಟ್ರೀಯ ತನಿಖಾ ಸಂಸ್ಥೆಗೆ  ಆದೇಶಿಸಿದೆ. ಇದರಿಂದಾಗಿ ನ್ಯಾಯಾಂಗವು ಸಾಂವಿಧಾನಾತ್ಮಕ ಮೌಲ್ಯಗಳನ್ನೂ ಮತ್ತು ಮಹಿಳಾ ಸ್ವಾತಂತ್ರ್ಯವನ್ನೂ ಎತ್ತಿಹಿಡಿಯುವ ಅಂತಿಮವಾದ ಹಾಗೂ ಬಲವಾದ ಆಸರೆಯೆಂದು ಭಾವಿಸಿದ್ದ ಕಾರ್ಯಕರ್ತರೆಲ್ಲರಿಗೂ ದೊಡ್ಡ ನಿರಾಸೆಯುಂಟಾಗಿದೆ.

ಹಾದಿಯಾ ಹುಟ್ಟಿದ್ದು ಹಿಂದೂ ಕುಟುಂಬವೊಂದರಲ್ಲಿ. ಆಗ ಆಕೆಯ ಹೆಸರು ಅಖಿಲಾ ಅಶೋಕನ್. ಆಕೆ ಫಿಸಿಯೋಥೆರಪಿಯಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವಾಗ ತನ್ನ ಮುಸ್ಲಿಂ ಸ್ನೇಹಿತರೊಂದಿಗಿನ ಒಡನಾಟದಿಂದಾಗಿ ಇಸ್ಲಾಮಿನ ಕಡೆಗೆ ಆಕರ್ಷಿತಳಾದಳು. ತನ್ನ ತಂದೆ-ತಾಯಿಗಳ ಪ್ರತಿರೋಧದ ನಡುವೆಯೂ ಇಸ್ಲಾಮಿಗೆ ಮತಾಂತರಗೊಂಡು ಹಾದಿಯಾ ಎಂಬ ಹೊಸ ಹೆಸರು ಮತ್ತು ಗುರುತಿನೊಂದಿಗೆ ಪ್ರತ್ಯೇಕವಾಗಿ ವಾಸಿಸತೊಡಗಿದ್ದಳು. ಆಗ ಆಕೆಯ ತಂದೆ ಹಾಕಿದ್ದ ಎರಡು ಹೇಬಿಯಸ್ ಕಾರ್ಪಸ್ (ಅಕ್ರಮ ಬಂಧನದಲ್ಲಿದ್ದಾರೆ ಎಂದು ಭಾವಿಸಲಾದ ವ್ಯಕ್ತಿಯನ್ನು ಖುದ್ದಾಗಿ ಹಾಜರು ಪಡಿಸಬೇಕೆಂದು ನ್ಯಾಯಲಯವನ್ನು ಕೋರುವ ಅರ್ಜಿ- ಅನುವಾದಕನ ಟಿಪ್ಪಣಿ) ಅರ್ಜಿಗಳನ್ನು ನ್ಯಾಯಾಲಯಗಳು ತಿರಸ್ಕರಿಸಿದ್ದವು. ಮತ್ತು ತನ್ನ ಬದುಕನ್ನೇ ಬದಲಿಸುವಂಥ ನಿರ್ಧಾರಗಳನ್ನು ತೆಗೆದುಕೊಳ್ಳುವ ಆಕೆಯ ಹಕ್ಕನ್ನು ಅನುಮೋದಿಸಿದ್ದವು. ಆದರೆ ಆಕೆ ಜಹಾನ್ನನ್ನು ಮದುವೆಯಾದ ನಂತರ ಎಲ್ಲವೂ ಬದಲಾಗಿಬಿಟ್ಟಿತು.. ಕೇರಳದ ಉಚ್ಚ ನ್ಯಾಯಾಲಯವು ಮದುವೆಯನ್ನು ಅಸಿಂಧು ಎಂದು ಘೋಷಿಸಿದ್ದಲ್ಲದೆ ಹಾದಿಯಾಳನ್ನು ಆಕೆಯ ಪೋಷಕರ ವಶಕ್ಕೆ ಒಪ್ಪಿಸಿಬಿಟ್ಟಿತು.
Image result for feminist judicial activism

ಷಡ್ಯಂತ್ರದ ದಾವನಲವನ್ನು ಹಬ್ಬಿಸುವ  ಮೂಲಕ ನ್ಯಾಯಾಲಯಗಳು, ಹಾದಿಯಾಳ ಪೋಷಕರು ಮತ್ತು ಬಲಪಂಥೀಯ ಸಮಾಜೋ-ರಾಜಕೀಯ ಸಂಘಟನೆಗಳು ಹಾದಿಯಾಳ ಜೀವಿಸುವ ಮತ್ತು ಬಯಸಿದವರೊಡನೆ ಒಟ್ಟುಗೂಡುವ ಮೂಲಭೂತ ಹಕ್ಕನ್ನೇ ಹರಣಮಾಡಿಬಿಟ್ಟಿವೆ. ನ್ಯಾಯಾಲಯಗಳು  ಮತ್ತು ಆಕೆಯ ಪೋಷಕರು ಪದೇ ಪದೇ ನೀಡುತ್ತಿರುವ ಹೇಳಿಕೆಗಳು ಆಕೆಯು ಸ್ವಂತ ನಿರ್ಧಾರ ತೆಗೆದುಕೊಳ್ಳುವಷ್ಟು ಪ್ರಾಪ್ತ ವಯಸ್ಕಳಾಗಿದ್ದಾಳೆಂಬುದನ್ನೇ ಮರೆಸಿ ಅವಳನ್ನು ಬಲವಂತದ ಶೈಶವತೆಗೆ ದೂಡಿವೆ. ಸ್ವತಂತ್ರ ನಿರ್ಧಾರಗಳನ್ನುಅದರಲ್ಲೂ ತನ್ನ ಮೇಲೆ ಪೋಷಕರ ಅಧಿಕಾರವನ್ನು ನಿರಾಕರಿಸುವಂಥ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಆಕೆಯ ಸಾಮರ್ಥ್ಯವನ್ನೇ ತಿರಸ್ಕರಿಸಿವೆ. ಮಹಿಳೆಯ ಸ್ವಾತಂತ್ರ್ಯವನ್ನು ರಕ್ಷಿಸಬೇಕಾದ ನ್ಯಾಯಾಲಯಗಳು ತಮ್ಮ ಕರ್ತವ್ಯದಲ್ಲಿ ವಿಫಲವಾಗಿದ್ದು ಮಾತ್ರವಲ್ಲದೆ, ಇಚ್ಚೆಯ ವಿರುದ್ಧವಾಗಿ ಪೋಷಕರ ವಶಕ್ಕೆ ಒಪ್ಪಿಸಿ ಆಕೆಯನ್ನು ಬಲವಂತದ ಬಂಧನದ ಶಿಕ್ಷೆಗೂ ಗುರಿಮಾಡಿದೆ. ಆಕೆಯ ಮೇಲೆ ತನ್ನ ಗಂಡನನ್ನು ಸಂಪರ್ಕಿಸದಂತೆ ನಿರ್ಬಂಧ ಹೇರಲಾಗಿದೆ. ಮತ್ತು ಆಕೆ ಅನಿವಾರ್ಯವಾಗಿ ತನ್ನ ವೃತ್ತಿಯನ್ನು ಸಹ ಕೈಬಿಡುವಂತಾಗಿದೆ.

ಹಿಂದಿನ ತಥಾಕಥಿತ ಲವ್ ಜೆಹಾದ್ ಪ್ರಕರಣಗಳಲ್ಲಿ ಪ್ರೇಮವೆಂದರೆ ಆಕರ್ಷಣೆ, ಮುಗ್ಧತೆ ಮತ್ತು ಹುಚ್ಚುಧೈರ್ಯದ ಮನಸ್ಥಿತಿಯೆಂದೇ ಪರಿಗಣಿಸಲಾಗಿತ್ತು. ಆದರೆ ಹಾದಿಯಾಳದು ಅಂಥ ಪ್ರಕರಣವೇನಲ್ಲ. ಆಕೆ ಜಹಾನ್ನನ್ನು ಮೊದಲೇ ಪ್ರೀತಿಸುತ್ತಿರಲಿಲ್ಲ. ಇಸ್ಲಾಮಿಗೆ ಮತಾಂತರಗೊಂಡ ನಂತರ, ಮುಸ್ಲಿಂ ವಿವಾಹ ಸಂಬಂಧಗಳ ಜಾಲತಾಣವೊಂದರಲ್ಲಿ ಹಾದಿಯಾ ತನ್ನ ಹೆಸರನ್ನು ದಾಖಲಿಸಿದ್ದಳು. ಅದರ ಮೂಲಕವೇ ಆಕೆಗೆ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಜಹಾನ್ ಪರಿಚಯವಾಯಿತು. ಮತ್ತು ನಂತರವೇ ಆಕೆ ಆತನನ್ನು ಮದುವೆಯಾಗಬೇಕೆಂದು ನಿರ್ಧರಿಸಿದ್ದಳು.

ವಾಸ್ತವವೇ ಹಲವರನ್ನು ಗೊಂದಲಕ್ಕೀಡುಮಾಡುತ್ತಿದೆ. ಸ್ವಬುದ್ಧಿ ಇರುವ ಯಾವ ಹೆಂಗಸು ಸಮಾಜದ ರೀತಿನೀತಿಗಳಿಗೆ ಭಿನ್ನವಾದ ಇಂಥಾ ಅಪಾಯಕಾರಿ ನಡಿಗೆಗೆ ಮುಂದಾಗುತ್ತಾಳೆ? ಪ್ರಾಯಶಃ ಪ್ರಶ್ನೆಗೆ ನಮ್ಮ ಮುಖಕ್ಕೆ ರಾಚುವಂಥಾ ಉತ್ತರಗಳು ಸಿಗಬಹುದು; ಬದುಕಿನಲ್ಲಿ ಮುನ್ನಡೆಯನ್ನು ಸಾಧಿಸಬಯಸುವ ಮಹಿಳೆಯರು ಭಾರತೀಯ ಕುಟುಂಬ ಮತ್ತು ಸಮಾಜಗಳು ಎಷ್ಟು ಪ್ರೀತಿರಹಿತವಾಗಿವೆಯೆಂಬುದನ್ನು ಅರಿತುಕೊಳ್ಳುತ್ತಿದ್ದಾರೆ ಮತ್ತು ಅವೆಲ್ಲವನ್ನು ತಿರಸ್ಕರಿಸುತ್ತಿದ್ದಾರೆ. ಹಾಗೂ ಅಂಥಾ ಸಮಾಜವು ಎಂದೆಂದಿಗೂ ಒಪ್ಪದಂಥ ಕ್ರಾಂತಿಕಾರಿಯಾದ ಆಯ್ಕೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಸಮಾಜವು ರೂಪುಗೊಂಡಾಗಿನಿಂದಲೂ ಸಮಾಜದ ಸಾಂಪ್ರದಾಯಿಕ ರೀತಿನೀತಿಗಳನ್ನು ಉಲ್ಲಂಘಿಸುವ ಪ್ರಕರಣಗಳು ನಡೆಯುತ್ತಲೇ ಬಂದಿವೆ. ಆದರೆ ಜಾಗತೀಕರಣವು ಅದಕ್ಕೆ ಇನ್ನು ತ್ವರಿತವಾದ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆಯಷ್ಟೆ. ಹೀಗಾಗಿಯೇ ಹೊಸ ಸಂಘರ್ಷಕ್ಕೆ ಲವ್ ಜೆಹಾದ್ ವಿರೋಧಿ ಸೇನೆಗಳೂ, ರೋಮಿಯೋ ವಿರೋಧಿ ದಳಗಳು ಕ್ರಿಯಾಶೀಲವಾಗಿರುವ ಕೇರಳ, . ಬಂಗಾಳ, ಕರ್ನಾಟಕ ಮತ್ತು ಉತ್ತರಪ್ರದೇಶಗಳ ಸಣ್ಣಪುಟ್ಟ ಪಟ್ಟಣಗಳು ಭೂಮಿಕೆಯನ್ನು ಒದಗಿಸುತ್ತಿವೆ. ಎಲ್ಲಾ ವಿವರಣೆಗಳನ್ನು ಒಪ್ಪದವರು ಸುಪ್ರೀಂ ಕೋರ್ಟು ತನಿಖಾ ವರದಿಯನ್ನು ಕೇಳಿದೆಯೇ ಹೊರತು ಹಾದಿಯಾಳ ಮದುವೆಯನ್ನು ಅಸಿಂಧುಗೊಳಿಸಿದ ತೀರ್ಪನ್ನೇನೂ ಎತ್ತಿಹಿಡಿಲ್ಲವೆಂದು ವಾದಿಸಬಹುದು. ಆದೇನೇ ಇದ್ದರೂ ಅಂಥಾ ತನಿಖೆಯು ಹಾದಿಯಾಳ ಗೃಹಬಂಧನದ ಮೇಲೇನೂ ಆಧರಿಸಬೇಕಿರಲಿಲ್ಲ. ಮೂಲಕ ಹಾದಿಯಾಳ ಸ್ವಂತಿಕೆ ಮತ್ತು ಘನತೆ ಎರಡನ್ನೂ ನಿರಾಕರಿಸುವ ಕ್ರಿಯೆಯಲ್ಲಿ ಸುಪ್ರೀಂ ಕೋರ್ಟಿನ ಆದೇಶವು ಭಾಗಿಯಾಗಿದೆ. ಮತ್ತು ಅದರಿಂದಾಗಿಯೇ ಎಲ್ಲೆಡೆ ಆದೇಶವು ಖಂಡನೆಗೆ ಗುರಿಯಾಗಿದೆ.

ಹಾದಿಯಾಳ ಗಂಡ ಜಹಾನ್ ಇಸ್ಲಾಮಿಕ್ ಸ್ಟೇಟ್ ಸಂಸ್ಥೆಯ ಬೆಂಬಲಿಗನಿದ್ದಿರಬಹುದು. ಹಾಗೆಯೇ ಪುರುಷ ಪ್ರಧಾನ ಧೋರಣೆಯುಳ್ಳವನೂ ಆಗಿರಬಹುದು. ಅದೇನೇ ಇರಬಹುದು. ಹಾಗೆ ನೋಡಿದರೆ ಮಹಿಳೆಯರ ಬದುಕು ಸದಾ ವಿವಿಧ ಬಗೆಯ  ಪಿತೃಸ್ವಾಮ್ಯಗಳಿಂದ ಸುತ್ತುವರೆಯಲ್ಪಟ್ಟಿರುತ್ತದೆ. ಅದರ ನಡುವೆಯೇ ಮಹಿಳೆಯು ತನ್ನ  ಆಯ್ಕೆಯನ್ನು ಮಾಡಿಕೊಳ್ಳುತ್ತಾ ತನ್ನ ಅಧಿಕಾರಕ್ಕಾಗಿ ಸದಾ ಮತ್ತು ಸತತ ಅನುಸಂಧಾನವನ್ನು ನಡೆಸುತ್ತಿರುತ್ತಾಳೆ. ಹಾದಿಯಾಳ ಪ್ರಕರಣದಲ್ಲಿ ಅಂಥಾ ಆಯ್ಕೆಗಳನ್ನು ಮಾಡಿಕೊಳ್ಳುವ ಅವಕಾಶವನ್ನಿ ನಿರಾಕರಿಸುವ ಮೂಲಕ ಅಥವಾ ಆಕೆಯ ಆಯ್ಕೆ ಮಾಡುವ ಶಕ್ತಿಯನ್ನು ದುರ್ಬಲಗೊಳಿಸುವ ಮೂಲಕ ಭಾರತದ ಪ್ರಭುತ್ವವು ಇನ್ನಷ್ಟು ಕೆಳಕ್ಕೆ ಜಾರಿದೆ.

ಇದು ಹೇಗೆ ಸಂಭವಿಸಲು ಸಾಧ್ಯವಾಯಿತು?

ಮಹಿಳಾವಾದಿಗಳು ಮತ್ತು ವಕೀಲ ಸಮುದಾಯ ನಿಜಕ್ಕೂ ದಿಗ್ಭ್ರಾಂತಗೊಂಡಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಉನ್ನತ ಹಂತದ ನ್ಯಾಯಾಲಯಗಳು ಮಹಿಳೆಯರ ಮೇಲೆ ನಡೆಯುವ ಸಾಮಾಜಿಕ, ಶಾರೀರಿಕ/ಲೈಂಗಿಕ ಹಿಂಸಾಚಾರಗಳನ್ನು ಶಿಕ್ಷಿಸುವಲ್ಲಿ ಧೀರೋದ್ಧಾತ್ತ ಮೇಲ್ಪಂಕ್ತಿಯನ್ನು ಹಾಕಿಕೊಡುತ್ತಾ ಬಂದಿರುವುದಕ್ಕಾಗಿ ಅತ್ಯಂತ ಮೆಚ್ಚುಗೆಯನ್ನು ಪಡೆದುಕೊಂಡಿದ್ದವು. ವಂಚಿತ ಸಮುದಾಯದ ಹಕ್ಕುಗಳನ್ನು ಪರಿರಕ್ಷಿಸುವ ವಿಷಯದಲ್ಲಿ ನ್ಯಾಯಾಂಗವನ್ನು ದೇಶದ ಸಾಕ್ಷಿಪ್ರಜ್ನೆಯೆಂದು ಪದೇಪದೇ ಬಣ್ಣಿಸಲಾಗುತ್ತಿತ್ತು. ನ್ಯಾಯಾಂಗ ಕ್ರಿಯಾಶಿಲತೆಯ ಹೊಸ ಪರ್ವವೇ ಪ್ರಾರಂಭಗೊಂಡಿದ್ದರಿಂದ ನ್ಯಾಯಾಂಗದ ಸ್ವಾತಂತ್ರ್ಯದ ಮೇಲೆ ಹೆಚ್ಚಿನ ವಿಶ್ವಾಸ ಮತ್ತು ಭರವಸೆಗಳು ಮೂಡಿದ್ದವು.

ಹಾಗೆ ನೋಡಿದರೆ, ಹಾದಿಯಾಳ ಪ್ರಕರಣವು ಮಹಿಳಾವಾದಿಗಳು ನ್ಯಾಯಾಂಗದ ಮೇಲೆ ಅತಿಹೆಚ್ಚು ಅವಲಂಬಿತವಾಗಿದ್ದರ ಪರಿಣಾಮವೂ ಆಗಿರಬಹುದು. ವಯಸ್ಕ ಮಹಿಳೆಯೊಬ್ಬಳು ತಾನು ಆಯ್ಕೆ ಮಾಡಿಕೊಂಡ ವ್ಯಕ್ತಿಯೊಂದಿಗೆ ಮಾಡಿಕೊಂಡ ವಿವಾಹದ  ಹಣೆಬರಹವನ್ನು ಆತನ ಹಿನ್ನೆಲೆಯನ್ನು ತನಿಖೆ ಮಾಡಿದ ನಂತರವೇ ನಿರ್ಧರಿಸುವ ತನ್ನ ಅಧಿಕಾರವು ಪ್ರಭುತ್ವಕ್ಕಿರುವ ರಾಷ್ಟ್ರದ ಪೋಷಕನ ಸ್ಥಾನದಿಂದ ಪ್ರವಹಿಸುತ್ತದೆಂದು ನ್ಯಾಯಾಂಗವು ಹೇಳಿಕೊಂಡಿದೆ. ಇದೂ ಕೂಡ ಮಹಿಳೆಯರ ಹಕ್ಕುಗಳ ರಕ್ಷಣೆಯ ಬಗ್ಗೆ ಮಹಿಳಾವಾದಿ ಕಾರ್ಯಕರ್ತರೂ ಮತ್ತು ಪಂಡಿತರು ನ್ಯಾಯಾಂಗದ ಮೇಲಿಟ್ಟ ಭರವಸೆಗಳ ಪರಿಣಾಮವೇ. ನ್ಯಾಯಾಂಗ ಕ್ರಿಯಾಶೀಲತೆಯು ತಳಮಟ್ಟದ ಹೊರಾಟಗಳಿಗೆ, ಜನಸಮೂಹಗಳ ಸಂಘಟನೆಗಳಿಗೆ ಮತ್ತು ಸಮುದಾಯದೊಳಗೆ ವಿಮರ್ಶಾತ್ಮಕ ಸಂವಾದಗಳನ್ನು ನಡೆಸುವ ಮೂಲಕ ಒಳಗಿನಿಂದಲೇ ಬದಲಾವಣೆ ತರುವ ಪ್ರಯತ್ನಗಳಿಗೆ ಪರ್ಯಾಯವಾಗಲು ಸಾಧ್ಯವಿಲ್ಲ. ಇವೆಲ್ಲವು ಒಂದಕ್ಕೊಂದು ಪೂರಕವಾಗಿ ನಡೆಯುತ್ತಾ ಮಹಿಳೆಗೆ ಹೆಚ್ಚಿನ  ಭದ್ರತೆಯನ್ನು ಒದಗಿಸಬೇಕೇ ವಿನಃ ಆಕೆಯ ಮೇಲೆ ಹೆಚ್ಚೆಚ್ಚು ಬೇಹುಗಾರಿಕೆ ನಡೆಸುವಂತಾಗಬಾರದು

ಕೃಪೆ: Economic And Political Weekly, Aug 26, 2017. Vol. 52. No. 34

                                                                                                              

ಕಾಮೆಂಟ್‌ಗಳಿಲ್ಲ: