ಶುಕ್ರವಾರ, ಆಗಸ್ಟ್ 18, 2017

ಚುನಾವಣಾ ಮೈತ್ರಿಕೂಟದ ಪಾಠಗಳು


  ಅನುಶಿವಸುಂದರ್

ಮಹಾಮೈತ್ರಿಕೂಟವನ್ನು (ಮಹಾಘಟ್ಬಂಧನ್) ತೊರೆಯುವ ಮೂಲಕ ನಿತೀಶ್ ಕುಮಾರ್ ಅವರು ಮೈತ್ರಿ ರಾಜಕಾರಣದ ಹುಳುಕುಗಳನ್ನು ಬಯಲುಗೊಳಿಸಿದ್ದಾರೆ.
bjp and jdu alliance ಗೆ ಚಿತ್ರದ ಫಲಿತಾಂಶ

 ರಾಜಕೀಯವೆಂಬುದು ಪರಸ್ಪರ ಸಂಬಂಧವಿಲ್ಲದ ಶಕ್ತಿಗಳನ್ನು ಒಟ್ಟಿಗೆ ತಂದು ಅಸಂಗತ ನಾಟಕಕ್ಕೆ ದಾರಿಮಾಡಿಕೊಡುತ್ತದೆ. ಜನತಾದಳ (ಯುನೈಟೆಡ್), ರಾಷ್ಟ್ರೀಯ ಜನತಾ ದಳ ಮತ್ತು ಕಾಂಗ್ರೆಸ್ ಪಕ್ಷಗಳು ಒಟ್ಟು ಸೇರಿ ರಚಿಸಿಕೊಂಡ ಮಹಾಘಟ್ಬಂಧನ್ (ಮಹಾ ಮೈತ್ರಿಕೂಟ) ವು ಒಂದು ಅತ್ಯಂತ ವಿವೇಕಯುತ ರಾಜಕೀಯ ನಡೆಯೆಂದೂ, ಆದರೆ ಅಷ್ಟೇ ಮಟ್ಟಿಗೆ ಒಂದು ವಿನಾಶಕಾರಿ ಹೆಜ್ಜೆಯೆಂದೂ ಏಕಕಾಲದಲ್ಲಿ ಕಂಡುಬಂದಿತ್ತು. ಮೈತ್ರಿಕೂಟದ ಅಂಗಪಕ್ಷಗಳಲ್ಲಿ ಸಮಾನವಾಗಿದ್ದ ಸಮಾಜವಾದಿ ಹಿನ್ನೆಲೆ, ಜಾತ್ಯತೀತತೆಯ ಪರಂಪರೆ ಮತ್ತು ಗ್ರಾಮೀಣಾಭಿವೃದ್ಧಿ ಪರ ನಿಲುವುಗಳ ಹಿನ್ನೆಲೆಯಿಂದ ನೋಡಿದರೆ ಒಕ್ಕೂಟ ತರ್ಕಬದ್ಧವಾಗಿಯೇ ಇತ್ತು. ಎಲ್ಲಕ್ಕಿಂತ ಮಿಗಿಲಾಗಿ, ಅಡೆತಡೆಯೇ ಇಲ್ಲದಂತೆ ಆವರಿಸಿಕೊಳ್ಳುತ್ತಿದ್ದ ಮೋದಿ ಅಲೆಯನ್ನು ಹಿಮ್ಮೆಟ್ಟಿಸಲು ಮತ್ತು ಛಿದ್ರಗೊಂಡು, ನಿಸ್ತೇಜಗೊಂಡಿದ್ದ ವಿರೋಧಪಕ್ಷಗಳಲ್ಲಿ ಚೈತನ್ಯ ತುಂಬಲು ೨೦೧೫ರಲ್ಲಿ ರಚಿತವಾದ ಮೈತ್ರಿಕೂಟ ಅನಿವಾರ್ಯವಾದ ಮತ್ತು ಸಹಜವಾದ ರಾಜಕೀಯ ಮುಂದೊಡಗೇ ಆಗಿತ್ತು. ಆದರೆ ಅದೇ ವೇಳೆಯಲ್ಲಿ, ಮೈತ್ರಿಕೂಟದ ಅಂಗಪಕ್ಷಗಳ ಭಿನ್ನಭಿನ್ನವಾದ ಮತ್ತು ಕೆಲವೊಮ್ಮೆ ತದ್ವಿರುದ್ಧವಾಗಿರುವ ಪಕ್ಷ ಇಮೇಜುಗಳು, ರಾಜಕೀಯ ಪರಿಭಾಷೆಗಳು ಮತ್ತು ಮತಬ್ಯಾಂಕುಗಳ ದೃಷ್ಟಿಯಲ್ಲಿ ನೋಡಿದರೆ ಮೈತ್ರಿಯು ಯಾವ  ರಾಜಕೀಯ ತರ್ಕಕ್ಕೂ ಒಳಪಡದ ಒಂದು ಸೋಜಿಗವೂ ಆಗಿತ್ತು. ಹಾಗೆ ನೋಡಿದರೆ ಬಿಹಾರದ ಮುಖ್ಯಮಂತ್ರಿಯಾದ ನಿತೀಶ್ ಕುಮಾರ್ ಅವರ ರಾಜಕೀಯ ಮುನ್ನೆಡೆ ಮತ್ತು ಜನಪ್ರಿಯತೆಯ ತಳಹದಿ ರೂಪುಗೊಂಡಿದ್ದೇ ಲಲ್ಲೂಪ್ರಸಾದ್ ಯಾದವ್ ಅವರ ದುರಾಡಳಿತ ಮತ್ತು ಭ್ರಷ್ಟಾಚಾರಗಳ ಪ್ರತಿರೋಧದಲ್ಲಿ. ಹೀಗಾಗಿ ಮೈತ್ರಿಕೂಟವು ಸಹಜವಾಗಿಯೇ ಮತದಾರರಲ್ಲಿ ಮತ್ತು ರಾಜಕೀಯ ವಿಶ್ಲೇಷಕರಲ್ಲಿ ಗೊಂದಲವನ್ನೇ ಹುಟ್ಟುಹಾಕಿತ್ತು

ಹಾಗಿದ್ದರೂ, ಕುಮಾರ್ ಮತ್ತು ಯಾದವ್ ಅವರು ಪರಸ್ಪರ ಅರಿತು ಬೆರೆತು ಸಾಗುತ್ತಿರುವ  ಅಭಿಪ್ರಾಯವನ್ನು ಮೂಡಿಸಿದ್ದರು. ಮತ್ತು ಒಕ್ಕೂಟವು ಬಿಹಾರವನ್ನು ಹಿಂದುಳಿದಿರುವಿಕೆಯಿಂದ ಮುಕ್ತಗೊಳಿಸುವ ಮತ್ತು ೧೯೯೦ರ ದಕದಲ್ಲಿ ನಡೆದಂತೆ ಬಿಹಾರದಲ್ಲಿ ಕೋಮುವಾದಿಶಕ್ತಿಗಳನ್ನು ಮಟ್ಟಹಾಕುವಂx ಶಕ್ತಿಗಳ ಐತಿಹಾಸಿಕ ಸಮ್ಮಿಲನವೆಂಬ ಭರವಸೆಯನ್ನೂ ಹುಟ್ಟುಹಾಕಿದ್ದರು. ಮೈತ್ರಿಕೂಟದ ಒತ್ತು ಸಾಮಾಜಿಕ ನ್ಯಾಯದ ಜೊತೆಗೂಡಿದ ಅಭಿವೃದ್ಧಿ ಮೇಲೆ ಇದ್ದಂತೆ ಕಂಡುಬಂದಿತ್ತು. ಯಾದವ್ ಅವರ ರಾಜಕೀಯ ಮುತ್ಸದ್ಧಿತನ, ಮತದಾರ ತಳಹದಿ ಮತ್ತು ನಿತೀಶ್ ಅವರ ದೂರದೃಷ್ಟಿ ಹಾಗೂ ಯಶಸ್ವೀ ಆಡಳಿತದ ಹಿನ್ನೆಲೆಗಳು ಒಟ್ಟಾಗಿ ಜನರಲ್ಲಿ ಬಿಹಾರದ ಭವಿಷ್ಯದ ಬಗ್ಗೆ ಹೊಸ ಭರವಸೆ ಮತ್ತು ಹುರುಪನ್ನು ಹುಟ್ಟುಹಾಕಿತು. ಟೀಕಾಕಾರರು ಯಾದವ್ ಆಳ್ವಿಕೆಯಲ್ಲಿ ಬಿಹಾರ ಅನುಭವಿಸಿದ ಗೂಂಡಾರಾಜ್ಯದ ಬಗ್ಗೆ ಗಳಹುತ್ತಿದ್ದರೂ, ಮತದಾರರು ಮಾತ್ರ ವಿಚಲಿತರಾಗಲಿಲ್ಲ. ೨೦೧೫ರ ಚುನಾವಣೆಯಲ್ಲಿ ಬಿಜೆಪಿ ಅನುಸರಿಸಿದ ಅತ್ಯಂತ ಒಡೆದು ಆಳುವ ಮತ್ತು ನಕಾರಾತ್ಮಕ ಪ್ರಚಾರದಿಂದ ಬೇಸತ್ತ ಮತದಾರರು ಮೈತ್ರಿಕೂಟದ ಭಾಷೆ ಮತ್ತು ಭರವಸೆಗಳ ಬಗ್ಗೆ ಒಲವು ತೋರಿದರು. ಆದರೆ ಬಿಹಾರದ ಜನತೆ ಮಹಾ ಮೈತ್ರಿಕೂಟಕ್ಕೆ ನೀಡಿದ ಐತಿಹಾಸಿಕ ಜನಾದೇಶವು ೨೦ ತಿಂಗಳಲ್ಲಿ ವ್ಯರ್ಥವಾಗಿಬಿಟ್ಟಿತು. ದಿಢೀರನೆ ನಡೆದ ನಾಟಕೀಯ ಬೆಳವಣಿಗೆಗಳಲ್ಲಿ ಯಾದವ್ ಮತ್ತವರ ಕುಟುಂಬದ ಸುತ್ತಾ ಸುತ್ತಿಕೊಂಡ ಭ್ರಷ್ಟಾಚಾರದ ಆರೋಪಗಳು ಅಂತಿಮಘಟ್ಟವನ್ನು ತಲುಪಿ ಮಹಾ ಮೈತ್ರಿಕೂಟವನ್ನು ಬಲಿತೆಗೆದುಕೊಂಡಿತು. ನಿತೀಶ್ ಕುಮಾರ್ ಅವರು ಇದೀಗ ಎನ್ಡಿಎ ಮೈತಿಕೂಟಕ್ಕೆ ಹಿಂದಿರುಗಿದ್ದಾರೆ. ಇದು ಭಾರತದಲ್ಲಿ ಒಂದೇ ರಾಜಕೀಯ ಪಕ್ಷದಲ್ಲಿ ಹೆಚ್ಚೆಚ್ಚು ಅಧಿಕಾರವು ಕೇಂದ್ರೀಕರಣಗೊಳ್ಳುವ ಅಪಾಯವನ್ನು ಹೆಚ್ಚು ಮಾಡಿದೆ.

ಯಾದವ್ ಅವರ ಭ್ರಷ್ಟಾಚಾರದ ಪರಂಪರೆಯಿಂದ ಸ್ಪಷ್ಟ ಅಂತರ ಕಾಪಾಡಿಕೊಂಡಿರುವ ನಿತೀಶ್ ಕುಮಾರ್ ಅವರು ಮತ್ತೊಂದು ರೀತಿಯಲ್ಲಿ ಇನ್ನೂ ದೊಡ್ಡ ರಾಜಕಿಯ ಸಂಧಿಗ್ಧತೆಯನ್ನು ಬರಮಾಡಿಕೊಂಡಿದ್ದಾರೆ. ಹಿಂದೆ ಅವರು  ಎನ್ಡಿಎ ಮೈತ್ರಿಕೂಟದ ಭಾಗವಾಗಿದ್ದಾಗ (೨೦೦೫-೧೪) ಬಿಜೆಪಿಯು ಮೈತ್ರಿಕೂಟದಲ್ಲಿ ಒಂದು ಅಧೀನ ಮತ್ತು ಕಿರಿಯ ಪಾಲುದಾರನಾಗಿತ್ತು. ಆದರೆ ಇಂದಿನ ಮೋದಿ-ಶಾ ಕೂಟದ ನೇತೃತ್ವದ ಬಿಜೆಪಿಯು ಅಂದಿಗಿಂತ ಭಿನ್ನವಾಗಿದೆ. ಈಗ ಬಿಜೆಪಿಯು ಕಿರಿಯ ಪಾಲುದಾರನಾಗಿದ್ದರೂ, ಹಿರಿಯ ಪಾಲುದಾರನಾಗಿದ್ದರೂ ಮೈತ್ರಿಕೂಟದೊಳಗೆ ಆಕ್ರಮಣಶೀಲವಾದ ಪಾಲುದಾರನಾಗಿಯೇ ವರ್ತಿಸುತ್ತದೆ. (ಉದಾಹರಣೆಗೆ ಜಮ್ಮು ಮತ್ತು ಕಾಶ್ಮೀರ ಹಾಗೂ ಮಹಾರಾಷ್ಟ್ರ). ರಾಜಕೀಯ ಗೆಲುವುಗಳಿಂದಾಗಿ ಇನ್ನೂ ಹೆಚ್ಚು ಕಸುವು ಪಡೆದುಕೊಂಡಿರುವ ಬಿಜೆಪಿ ಪಕ್ಷ ಮತ್ತದರ ಹವು ಸಾಂಸ್ಕೃತಿಕ ಘಟಕಗಳು ಮತ್ತಷ್ಟು ಮೂಲಭೂತವಾದಿಗಳಾಗುತ್ತಿವೆ.

ಬಿಹಾರದ ಬೆಳವಣಿಗೆಗಳು ಭಾರತದ ರಾಜಕೀಯದಲ್ಲಿ ಮೈತ್ರಿಕೂಟಗಳ ಕೂಡು ಘಟಕಗಳ ಬಗ್ಗೆ  ಮತ್ತದರ ತಾಳಿಕೆ-ಬಾಳಿಕೆಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಸಾಮಾನ್ಯ ಜ್ನಾನದ ಪ್ರಕಾರ ಮೈತ್ರಿಕೂಟ ರಾಜಕಾರಣವು ಪ್ರಧಾನವಾಗಿ ಅಗತ್ಯವಾದ ಸಂಖ್ಯೆಗಳನ್ನು ಒಟ್ಟುಮಾಡಿಕೊಳ್ಳಲು ನಡೆಯುವ ಅವಕಾಶವಾದವಷ್ಟೇ. ಆದರೆ ಭಾರತದ ರಾಜಕೀಯದಲ್ಲಿ ಬಿಜೆಪಿಯ ಮುನ್ನಡೆಯು ಕಳೆದೆರಡು ವರ್ಷಗಳಲ್ಲಿ ಮೈತ್ರಿಕೂಟ ರಾಜಕೀಯದ ಗುಣಸ್ವಭಾವಗಳನ್ನೇ ಬದಲಿಸಿಬಿಟ್ಟಿದೆ

ಅದೊಂದು ಕಾಲವಿತ್ತು. ಪರಸ್ಪರ ಸಂಬಂಧವಿಲ್ಲದ ಭಿನ್ನ ಭಿನ್ನ ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳು ಕೇವಲ ಅಧಿಕಾರ ಪಡೆಯಲು ಒಂದಾಗುತ್ತಿದ್ದರು. ಮತ್ತು ಸ್ಪಷ್ಟ ಜನಾದೇಶವಿಲ್ಲದ ಸಂದರ್ಭದ ದುರುಪಯೋಗ ಮಾಡಿಕೊಳ್ಳುತ್ತಾ ತಮ್ಮ ವ್ಯಕ್ತಿಗತ ಸೌಕರ್ಯ ಅಥವಾ ಸೀಮಿತವಾದ ಅಜೆಂಡಾಗಳಿಗೆ ಆಳುವ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು. ಈಗ ಕಾ ಹೋಗಿ ಆಯಿತು. ಸರ್ಕಾರಗಳ ಅಸ್ಥಿರತೆ ಮತ್ತು ಆಡಳಿತ ನೀತಿಗಳಲ್ಲಿ ಪದೇ ಪದೇ ಆಗುತ್ತಾ ಬಂದ ಬದಲಾವಣೆಗಳನ್ನು ಕಂಡು ಬೇಸತ್ತ ಮತದಾರರೂ ಸಹ ಇತ್ತೀಚಿನ ದಿನಗಳಲ್ಲಿ ಸುಸ್ಥಿರ ಸರ್ಕಾರ ಮತ್ತು ಬಲಶಾಲಿ ನಾಯಕನೆಡೆಗೆ  ಒಲವು ತೋರಲು ಪ್ರಾರಂಭಿಸಿದ್ದಾರೆ. ದಿನೇದಿನೇ ಪ್ರಾದೇಶಿಕ ಪಕ್ಷಗಳು ಶಕ್ತಿಯನ್ನು ಕಳೆದುಕೊಳ್ಳುತ್ತಿರುವುದರಲ್ಲೂ ಮತ್ತು  ರಾಷ್ಟ್ರೀಯ ಪಕ್ಷಗಳ ಬಲವರ್ಧನೆಗೊಳ್ಳುತ್ತಿರುವುದರಲ್ಲೂ ವಿದ್ಯಮಾನ ಪ್ರತಿಫಲಿತವಾಗಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಆರೋಪಗಳೇ ಬಿಜೆಪಿ ನೇತೃತ್ವದ ಎನ್ಡಿಎಗೆ ದಾರಿ ಮಾಡಿಕೊಟ್ಟಿತು. ಆದರೆ ಜನರಲ್ಲಿ ಬದಲಾಗುತ್ತಿದ್ದ ಮನೋಭಾವದ ಸಂಪೂರ್ಣ ಲಾಭ ಮಾಡಿಕೊಂಡಿದ್ದು ಮಾತ್ರ ಬಿಜೆಪಿಯೇ. ನಂತರದ ಚುನಾವಣೆಗಳಲ್ಲಿ ಅದು  ಎನ್ಡಿಎತರದ ಒಕ್ಕೂಟದ ಅಗತ್ಯವೇ ಬೀಳದ ರೀತಿಯಲ್ಲಿ ಒಂದು ಪಕ್ಷವಾಗಿಯೇ ಬಹುಮತವನ್ನು ಪಡೆದುಕೊಂಡಿತು. ಆದರೂ ಕೇಂದ್ರ ಮತ್ತು ರಾಜ್ಯಗಳಲ್ಲಿ ಮೈತ್ರಿಕೂಟಗಳನ್ನು ಉಳಿಸಿಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡಿತು.

ಇಂದು ಬಿಜೆಪಿಯು ತಾನು ಪಡೆದ ಸ್ಥಾನಗಳ ಆಧಾರದ ಮೇಲೆ ಹಿರಿಯ ಪಾಲುದಾರನಾಗಿಯೋ ಕಿರಿಯ ಪಾಲುದಾರನಾಗಿಯೋ ಒಟ್ಟಿನಲ್ಲಿ ಎಲ್ಲಾ ಕಡೆ ಮೈತ್ರಿಕೂಟಗಳನ್ನು ಮಾಡಿಕೊಳ್ಳುತ್ತಿದೆ. ನಂತರ ತಂತ್ರೋಪಾಯಗಳ ಮೂಲಕ ಕೂಟದ ಹಿರಿಯ ಪಾಲುದಾರನನ್ನು ಅಧಿಕಾರದಿಂದ ಕೆಳಗಿಳಿಸಿ ಅಧಿಕಾರವನ್ನು ವಶಪಡಿಸಿಕೊಳ್ಳುತ್ತಿದೆ (ಉದಾಹರಣೆಗೆ ಗೋವಾ, ಮಣಿಪುರ, ಅರುಣಾಚಲ ಪ್ರದೇಶ ಮತ್ತು ಈಗ ಬಿಹಾರ). ಯಾವ ಮಾರ್ಗದಿಂದಲಾದರೂ ಸರಿಯೇ ಒಟ್ಟಿನಲ್ಲಿ ಎಷ್ಟು ರಾಜ್ಯಗಳಲ್ಲಿ ಸಾಧ್ಯವೋ ಅಷ್ಟು ರಾಜ್ಯಗಳಲ್ಲಿ ಅಧಿಕಾರವನ್ನು ಹಿಡಿದುಕೊಳ್ಳುವುದು ಅದರ ಉದ್ದೇಶವೆಂಬಂತೆ ಕಂಡುಬರುತ್ತಿದೆ. ಅದರ ಭಾಗವಾಗಿ ಈಗಾಗಲೇ ೨೯ ರಾಜ್ಯಗಳಲ್ಲಿ ೧೭ ರಾಜ್ಯಗಳು ಅದರ ಬುಟ್ಟಿಯಲ್ಲಿ ಬಂದುಬಿದ್ದಿವೆ. ವಾಸ್ತವವಾಗಿ ತನ್ನ ನೀತಿಗಳಿಗೆ ಎದುರಾಗಬಹುದಾದ ವಿರೋಧವನ್ನು ಸಾಧ್ಯವಾದಷ್ಟು ತಣ್ಣಗಾಗಿಸಿ, ದೇಶದ ಒಕ್ಕೂಟ ರಚನೆಯನ್ನೇ ದುರ್ಬಲಗೊಳಿಸುತ್ತಾ ನಿಧಾನವಾಗಿ ಆದರೆ ಖಚಿತವಾಗಿ ತನ್ನ ದೂರಗಾಮಿ ಉದ್ದೇಶವಾದ ರಾಜಕೀಯ ಮತ್ತು ಸಾಂಸ್ಕೃತಿಕ ಏಕರೂಪಿಕರಣವನ್ನು ಸಾಧಿಸುವ ತಂತ್ರೋಪಾಯವಾಗಿ ಬಿಜೆಪಿಯು ಮೈತ್ರಿಕೂಟದ ರಾಜಕಾರಣವನ್ನು ಬಳಸಿಕೊಳ್ಳುತ್ತಿದೆ. ಭಾರತದಲ್ಲಿ ಒಂದು ರಾಜಕಿಯ ಪಕ್ಷವು ತನ್ನ ಸಂಪೂರ್ಣ ರಾಜಕೀಯ- ಸಾಂಸ್ಕೃತಿಕ ಯಾಜಮಾನ್ಯವನ್ನು ಸಾಧಿಸಲು ಇಷ್ಟೊಂದು ರಾಜಕೀತ ತಂತ್ರಗಾರಿಕೆ ಮತ್ತು ಬದ್ಧತೆಯನ್ನು ಹಿಂದೆಂದೂ ತೋರಿರಲಿಲ್ಲ.

ಇದರಿಂದ ವಿರೋಧಪಕ್ಷಗಳು ಕಲಿಂiಬೇಕಾದ ಪಾಠಗಳು ಹಿಂದೆಂದಿಗಿಂತಲೂ ಸ್ಪಷ್ಟವಾಗಿವೆ. ತನ್ನ ತಂತ್ರಗಾರಿಕೆ ಮತ್ತು ರಾಜಕೀಯ ಅವಕಾಶವಾದಗಳ ನಡುವೆಯೂ ಬಿಜೆಪಿಯು ಒಂದು ದೊಡ್ಡ ಸೈದ್ಧಾಂತಿಕ ಸವಾಲನ್ನು ಒಡ್ಡುತ್ತಿದೆ. ಇದು ಪುಕ್ಕಲರು ಅಥವಾ ಅವಕಾಶವಾದಿಗಳು ಮಾಡಬಹುದಾದ ಹೋರಾಟವಲ್ಲ. ಬಿಜೆಪಿಯು ಬಳಸಿ ಬೆಳಸಲು ಬಯಸುತ್ತಿರುವ ರಾಜಕೀಯ ಆಲೋಚನೆಯನ್ನು ಮುರಿಯಲು ಸೈದ್ಧಾಂತಿಕ ಸ್ಪಷ್ಟತೆ, ಬದ್ಧತೆ ಮತ್ತು ಬಂಡೆಯಂತ ಅಚಲತೆಗಳು ಬೇಕಾಗುತ್ತದೆ. ನಿತೀಶ್ ಕುಮಾರ್ಗೆ ಯಾವ ಗುಣಗಳು ಇರಲಿಲ್ಲ. ಮತ್ತೊಂದು ಸಾರ್ವತ್ರಿಕ ಚುನಾವಣೆಗೆ ಕೇವಲ ಇನ್ನೆರಡು ವರ್ಷಗಳು ಮಾತ್ರ ಇರುವ ಹೊತ್ತಿನಲ್ಲೂ ವಿರೋಧ ಪಕ್ಷಗಳಲ್ಲಿ ಮಾತ್ರ ಸಂದರ್ಭವನ್ನು ಎದುರುಗೊಳ್ಳಲು ಬೇಕಾದ ಹುಮ್ಮಸ್ಸಾಗಲೀ, ದೂರದೃಷ್ಟಿಯಾಗಲೀ ಕಾಣುತ್ತಿಲ್ಲ.
 ಕೃಪೆ: : Economic and Political Weekly, Aug 5, 2017. Vol. 52. No.31
                                                                                              


















               

ಕಾಮೆಂಟ್‌ಗಳಿಲ್ಲ: