ಶುಕ್ರವಾರ, ಜೂನ್ 20, 2014

ಕೊರಗರು ದೇವರಿಗೆ ಹತ್ತಿರ! ಮಡಿವಂತರಿಗೆ ದೂರ!


ಕೊರಗರು ದೇವರಿಗೆ ಹತ್ತಿರ! ಆದರೆ, ಮಡಿವಂತರೆನಿಸಿಕೊಳ್ಳುವವರಿಗೆ ದೂರ!
Koragerna Alipu Oripu's photo.

'ಪರಶುರಾಮ ಸೃಷ್ಠಿ'ಯೆಂದು ಕರೆಸಲ್ಪಡುವ ಈ ತುಳುನಾಡಿನಲ್ಲಿ ದೈವಸ್ಥಾನ ದೇವಸ್ಥಾನಗಳಿಗೇನು ಕೊರತೆಯಿಲ್ಲ. ಕಾಲಿಟ್ಟ ಊರು ಕೇರಿಗಳಲ್ಲಿಯೂ ಒಂದೊಂದು ದೇವಸ್ಥಾನವಿದೆ. ಮನೆ ಮನೆಗಳಲ್ಲೂ ದೈವಸ್ಥಾನವಿದೆ. ಹಾಡಿ ಹಾಡಿಗಳಲ್ಲೂ ನಾಗಬನಗಳಿವೆ. ಪವಿತ್ರ ಮರದಡಿಗಳಲ್ಲೂ ತಾವು ನಂಬುಕೊಂಡು ಬಂದ ಭೂತಗಳಿಗೊಂದು 'ಕಲ್ಲು' ಇದೆ . ಆ ಅರ್ಥದಲ್ಲಿ ಇಡೀ ತುಳುನಾಡೇ ಒಂದು ಪವಿತ್ರ ಕ್ಷೇತ್ರ.
ಈ ಪವಿತ್ರ ತುಳುನಾಡಿನ ಮೂಲನಿವಾಸಿಗಳೇ ಕೊರಗ ಆದಿವಾಸಿಗಳು. ತುಂಬಾ ಮುಗ್ಧರು. ತಮ್ಮದೆ 'ಕೊರ್ರೆ' ಭಾಷೆ, ವೇಷ ಭೂಷಣ, ಆಚಾರ ವಿಚಾರ, ಸಂಸ್ಕೃತಿ, ವೃತ್ತಿ, ಮನೋರಂಜನೆ ಎಲ್ಲವೂ ತುಳುಜನರಿಗಿಂತ ಭಿನ್ನ. ಕಾಡೇ ಬದುಕು. ಕಾಡೇ ಸಾಮ್ರಾಜ್ಯ. ಕಾಡೇ ತಮ್ಮ ಪಾಲಿನ ಪವಿತ್ರ ದೇವರು.

ಈ ಕಾಡನ್ನೇ ದೇವರೆಂದು ಪೂಜಿಸಿಕೊಂಡು ಬರುತ್ತಿದ್ದ ಕೊರಗರಿಗೆ - ತುಳುನಾಡಿನ ಅನೇಕ ದೇವರುಗಳು ತುಂಬಾ ಹತ್ತಿರ! ಹಾಗಂತ, ಈ ತುಳುನಾಡಿನ ಪವಿತ್ರ ಕ್ಷೇತ್ರ ಪುರಾಣಗಳು, ಜನಪದ ಪಾಡ್ದಾನಗಳು ಸಾರಿ ಸಾರಿ ಹೇಳುತ್ತಿದೆ. ಶ್ರೀ ಕ್ಷೇತ್ರ ಅದ್ಯಪಾಡಿ - ಮಹಾಲಿಂಗೇಶ್ವರ ದೇವಸ್ಥಾನ, ಶ್ರೀ ಕ್ಷೇತ್ರ ಕುಡುಪು - ಸುಭ್ರಮಣ್ಯ ದೇವಸ್ಥಾನ, ಶ್ರೀ ಕ್ಷೇತ್ರ ಕಾಂತಾವರ - ಕಾಂತೇಶ್ವರ ದೇವಸ್ಥಾನ, ಶ್ರೀ ಕ್ಷೇತ್ರ ಎಲ್ಲೂರು ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಹೀಗೆ ಹತ್ತು ಹಲವು ಪುಣ್ಯ ಕ್ಷೇತ್ರಗಳ ಉದ್ಭವ ಕತೆಗಳು ಕೊರಗ ಜನಾಂಗದ ಉಪಸ್ಥಿತಿಯೊಂದಿಗೆ ಬೆಸೆದುಕೊಂಡಿದೆ. ಈ ಎಲ್ಲಾ ದೇವರುಗಳು ಕೊರಗರಿಗೆ ಒಲಿದಿದ್ದಾರೆ ಎಂದು ಪೌರಾಣಿಕ ಇತಿಹಾಸ ದಾಖಲಿಸಿದೆ. ಕೊರಗರೆಷ್ಟು ಪುಣ್ಯವಂತರು?

ಇಷ್ಟೆಲ್ಲಾ ಪುಣ್ಯವಂತರು ಎಂದೆನಿಸಿಕೊಂಡರೂ ಕೊರಗರು ಮಾತ್ರ ಆ ಎಲ್ಲಾ ದೇವಸ್ಥಾನಗಳಿಗೂ 'ಅಸ್ಪ್ರಶ್ಯರು'! ಆ ದೇವರ ಅಂಗಣದ ಧೂಳಿಗೂ ನಿಕೃಷ್ಟರು. ಕೊರಗರಿಗೆ ದೇವಸ್ಥಾನ ಪ್ರವೇಶವೆಂಬುದು ಕನಸಿನ ಮಾತೇ ಆಗಿತ್ತು. ತೀರಾ ಇತ್ತೀಚಿನವರೆಗೂ ಅಂದರೆ 'ಅಜಲು ನಿಷೇಧ ಕಾಯಿದೆ' ಜಾರಿಯಾಗುವವರೆಗೂ ಕೊರಗರು ದೇವಸ್ಥಾನದ ಗದ್ದೆಯ ಮೂಲೆಯಲ್ಲೆಲ್ಲೋ ನಿಂತು ಡೋಲು ಬಡಿಯಬೇಕಿತ್ತು. ಕಡ್ಡಾಯವಾಗಿ ಅಜಲು ಚಾಕರಿ ಮಾಡಲೇಬೇಕಿತ್ತು. ತುಳುನಾಡಿನ ಎಲ್ಲಾ ದೇವಸ್ಥಾನಗಳಲ್ಲೂ ಈ ನಿಬಂಧನೆ ಜಾರಿಯಲ್ಲಿತ್ತು. ಕೊರಗರು ತುಳುಜನರ ಪ್ರಕಾರ ಆ ಕಾಣದ ದೇವರಿಗೆ ಮಾತ್ರ ಹತ್ತಿರ! ದೇವಸ್ಥಾನಗಳಿಗಂತೂ ಭಾರೀ ದೂರ!!

ಇನ್ನು ಈ ಪವಿತ್ರ ತುಳುನಾಡಿನಲ್ಲಿ ಎಣು ಮುಗಿಸಲಾರದಷ್ಟೂ ಜಾತಿ ಉಪಜಾತಿಗಳನ್ನು ವಿಂಗಡಿಸಿ - ಅವುಗಳು ಮೇಲಿಂದ ಕೆಳಕ್ಕೆ ಒಬ್ಬರಿಗಿಂತ ಒಬ್ಬರು ಕೀಳೆನ್ನುತ್ತ, ಕೆಳಗಿನಿಂದ ಮೇಲಕ್ಕೆ ಒಬ್ಬರಿಗಿಂತ ಒಬ್ಬರು ಶ್ರೇಷ್ಠರೆನ್ನುತ್ತ, ಒಬ್ಬರಿಗಿಂತ ಒಬ್ಬರು ಮೈಲಿಗೆಯೆಂದು ಮಡಿಯೆಂದು ವಿಂಗಡಿಸಿ, ಜಾತಿ ಆಧಾರದಲ್ಲಿ ತುಳಿಯುತ್ತಾ ಬಲಿಷ್ಟರಾಗತ್ತಾ ಬೆಳೆದು ತುಳುನಾಡಿನಲ್ಲಿ ದೌರ್ಜನ್ಯದ ಪಾಳೇಗಾರಿಕೆಯನ್ನು ಹುಟ್ಟುಹಾಕಿದರು. ಆ ಮಡಿವಂತರ ಕೆಳಗೆ ಕಾಲಕಸದಂತೆ ಇನ್ನಿತರರು ಬದುಕು ಸವೆಸಿದರು. ವರ್ಣಾಶ್ರಮದ ಅರಿವೇ ಇಲ್ಲದೆ, ಕಾಡಿನಲ್ಲಿಯೇ ಬದುಕುತ್ತಿದ್ದ ಕೊರಗರು ನಾಡಿನ ಬಲಿಷ್ಠರ ಬಿಟ್ಟಿ ಚಾಕರಿ/ಬುಟ್ಟಿ ಚಾಕರಿ (ಅದನ್ನು ಅಜಲು ಚಾಕರಿ ಎನ್ನಲಾಗುತ್ತದೆ) ಮಾಡಿಕೊಂಡು ತಮಗರಿವಿಲ್ಲದಂತೆ ವರ್ಣಾಶ್ರಮಕ್ಕೆ ಬಲಿಯಾಗಬೇಕಾಯಿತು. ಕೊರಗರು ಜಾತಿ ವ್ಯವಸ್ಥೆಯ ಕಟ್ಟ ಕಡೆಗೆ ತುಳಿಯಲ್ಪಟ್ಟರು. ಮೇಲ್ವರ್ಗದ ಎಲ್ಲಾ ಬಿಟ್ಟಿ ಚಾಕರಿಗಳಿಗೆ ಈ ಜನಾಂಗವೇ ಜೀವತೆಯ್ದಿದೆ. ಇವತ್ತಿಗೂ ಕೊರಗರಿಗೆ ಹಲವಾರು ರೀತಿಯ ದಿಗ್ಭಂದನೆಗಳು ಈ ತುಳುನಾಡಿನಲ್ಲಿ ಜಾರಿಯಲ್ಲಿದೆ.

ಬದಲಾಗಬಹುದೇ ಈ ಸಮಾಜ? ಇತರರಂತೆಯೇ ಬದುಕುವ ಸ್ವಾತಂತ್ರ್ಯ ಮತ್ತು ನಿರ್ಬಂಧ ಮುಕ್ತ ಜೀವನ ಕೊರಗರದ್ದಾಗುವುದೇ? ಕೊರಗರು ದೇವರಿಗೆ ಹತ್ತಿರ ಎನ್ನುವ ತುಳುಜನರು, ಕೊರಗರನ್ನು ಯಾಕೆ ಸಮಾಜದಿಂದ ದೂರವಿರಿಸಿದ್ದಾರೆ?! ತುಳುಜನರ ಬಿಟ್ಟಿ ಚಾಕರಿ/ಬುಟ್ಟಿ ಚಾಕಿರಿಗೆ ಮಾತ್ರ ಕೊರಗರೇ?!
- ಹೃದಯ
LikeLike ·  · 

ಕಾಮೆಂಟ್‌ಗಳಿಲ್ಲ: