ಶುಕ್ರವಾರ, ಜೂನ್ 27, 2014

ಅರಸನಂತಿದ್ದ ಕೊರಗರ ಮುಖಂಡ



ಕಾಡನ್ನಾಳಿದ ಕೊರಗರ ಅರಸ 'ಕಾಡಿ ಕೂಜೆ'ನ (ಕೊರ್ರೆ ಭಾಷೆಯಲ್ಲಿ 'ಕಾಡಿನ ಮಗ' ಎಂದು ಅರ್ಥ) ಕುರಿತಾಗಿ ಕೊರಗ ಸಮುದಾಯದ ಹಿರಿಯರು ಪೂರ್ಣ ಮಾಹಿತಿಯನ್ನು ಯಾರಲ್ಲಿಯೂ ಯಾವತ್ತೂ ಬಿಟ್ಟುಕೊಡದಿದರಿಂದ ಆತನ ಕುರಿತು ಅಷ್ಟೇನು ಅಧ್ಯಯನ ನಡೆದಿಲ್ಲ. ಈಗಿನವರಿಗೆ ಅಷ್ಟೇನು ಮಾಹಿತಿಯೂ ಇಲ್ಲ. ಆದರೂ ಕೆಲವೊಂದು ಇತಿಹಾಸಕಾರರು ಪ್ರಯತ್ನಪಟ್ಟು ಒಂದಷ್ಟು ಮಾಹಿತಿಯನ್ನು ಕಲೆ ಹಾಕಿ ತಮ್ಮ ಅಧ್ಯಯನ ವರದಿ/ಗ್ರಂಥಗಳಲ್ಲಿ 'ಅಬಶಿಕ' ಅಥವ 'ಹುಭಾಶಿಕ' ಎಂಬ 'ಕೊರಗರ ಅರಸ'ನಿದ್ದ ಎಂದು ಆತನ ಕುರಿತು ಮಾಹಿತಿ ದಾಖಲಿಸಿದ್ದಾರೆ. ಆ ಎಲ್ಲಾ ಇತಿಹಾಸಕಾರರ ಮಾಹಿತಿಯನ್ನು ಬದಿಗಿರಿಸಿ ಮತ್ತು ನನ್ನ ಹಿರಿಯರ ಹೇಳಿಕೆಯ ಆಧರಿಸಿ ಸಂಕ್ಷಿಪ್ತವಾಗಿ ಹೇಳುವುದಾದರೆ...

ಹೌದು! ಕೊರಗರು ಕಾಡಿನ ಮಕ್ಕಳು. ಕಾಡಿನ ಆರಾಧಕರು. ಕಾಡೇ ಸರ್ವಸ್ವ ಎಂದು ನಂಬಿದವರು. ಆ ಕಾಡಿನ ಜನರಿಗೆ ಮುಖಂಡನೊಬ್ಬನಿದ್ದ. ಆ 'ಕಾಡಿನ ಮಗ'ನ ತಂದೆ ತಾಯಿ ಯಾರು ಎಂದೂ ಯಾವ ಕೊರಗ ಬಂಧುವಿಗೆ ಇದುವರೆಗೂ ತಿಳಿದಿಲ್ಲ. ಕಾರಣ ಆಗಿನ ಬದುಕು 'ಕಾಡಿನ ಸಂಸ್ಕೃತಿ'ಯಾದರಿಂದ ದಾಖಲೆಗೆ ಯಾವುದೂ ಸಿಗುತ್ತಿಲ್ಲ. ಆದರೂ ಎಲ್ಲಾ ಕೊರಗ ಬಂಧುಗಳ ಒಪ್ಪಿತ ವಿಚಾರವೇನೆಂದರೆ 'ಆ ಮುಖಂಡನೇ ನಮ್ಮ ಕಾಡಿನ ರಾಜನಾಗಿದ್ದ'

ಆ ರಾಜ ಎಲ್ಲರಂತೆ ಕಿರೀಟವಿಟ್ಟ ಅರಮನೆ ಕಟ್ಟಿದವನಲ್ಲ! ಯುದ್ಧಕ್ಕೆ ಹೊರಟು ರಾಜ್ಯ ಕಾರಭಾರ ಮಾಡಿದವನೂ ಅಲ್ಲ! ಸಾಮ್ರಾಜ್ಯ ಕಟ್ಟಿ ಮೆರೆಯಬೇಕೆಂಬ ಮಹತ್ವಾಕಾಂಕ್ಷೆಯ ಅರಿವೂ ಅವನಿಗಿರಲಿಲ್ಲ. ಯುದ್ಧವೆಂದರೇನು ಎಂದೇ ಗೊತ್ತಿರಲಿಲ್ಲ. ಕಾರಣ, ಆತನಿಗೆ ಕಾಡಿನ ಹೊರತಾದ ಬದುಕು ಏನೆಂದೇ ಗೊತ್ತಿಲ್ಲ. ಆದರೂ ಕಾಡೆಂಬ ಕೋಟೆಯಲ್ಲಿ ತನ್ನ ಕೊರ್ರೆ ಬಂಧುಗಳ ಒಡಗೂಡಿ, ಕಾಡಿನಲ್ಲಿ ಡೋಲು ಬಡಿಯುತ್ತಾ, ಕೊಳಲು ಊದುತ್ತಾ ಬೇಟೆಯಾಡಿ ಮೆರೆದ ಕೊರ್ರೆ (ಕೊರಗ) ಜನರ ಏಕೈಕ ಮುಖಂಡ. ಇಡೀ ಕಾಡು ಮತ್ತು ತನ್ನ ಕೊರ್ರೆ ಜನಗಳ ರಕ್ಷಣೆಯ ಹೊಣೆ ಅವನದೇ ಆಗಿತ್ತು. ಬಿಲ್ಲು ಬಾಣ, ಕತ್ತಿಯಾಕಾರದ ಚೂಪಾದ ಕಲ್ಲುಗಳೇ ಆತನ ಜನರ ಅಸ್ತ್ರಗಳು. ಹಸಿವಾದಾಗ ಬೇಟೆ, ಧಣಿವಾರಿಸಲು ಡೋಲು ಇಂತಿಷ್ಟೇ ಗೊತ್ತು.

ಹೀಗೆ, ಕಾಡಿನಲ್ಲಿನ ಡೋಲಿನ ಧ್ವನಿ ನಾಡಿನ ತುಂಡರಸರ ಕಿವಿಗಪ್ಪಳಿಸಿತು. ಸಾಮ್ರಾಜ್ಯ ವಿಸ್ತೀರ್ಣದ ಆಕಾಂಕ್ಷೆಯೋ ಅಥವ ಕಾಡು ತಮ್ಮ ಸುಪರ್ದಿಗೆ ಸೇರಬೇಕೆಂಬ ಮಹತ್ವಾಕಾಂಕ್ಷೆಯೋ ಏನೋ - ಆ ತುಂಡರಸರು ಕಾಡಿನ ಮೇಲೆ ಕಣ್ಣಿಟ್ಟರು. ಕಾಡಿನ ಆ ಕಟ್ಟಾಳು ಕೊರಗರನ್ನು ತಮ್ಮ ಸೇವೆಗೆ ನಿಯೋಜಿಸಿಕೊಳ್ಳಬೇಕೆಂಬ ಹಂಬಲದಿಂದಲೋ ಏನೋ - ಕಾಡಿನ 'ಕೊರ್ರೆ ಕಟ್ಟಾಳು'ಗಳಿಗೆ ತುಂಡರಸರ ಆಜ್ಙೆ ರವಾನೆಯಾಯಿತು. ಇತರರ ಅಡಿಯಾಳುಗಳಾಗ ಬಯಸದ ಕೊರ್ರೆ ಜನರು, ತಮ್ಮ ಬದುಕನ್ನು ತಮ್ಮ ಮುಖಂಡನೊಂದಿಗೆ ಕಾಡಿನಲ್ಲಿಯೇ ಮುಂದುವರಿಸಿದರು. ಆದರೆ, ಪಟ್ಟು ಬಿಡದ ನಾಡಿನ ತುಂಡರಸರು ಕಾಡಿನ ಕೋಟೆಗೆ ನುಗ್ಗಿಯೇ ಬಿಟ್ಟರು. ಯುದ್ಧವೇನೆಂದೇ ಅರಿಯದ ಮತ್ತು ಸಂಖ್ಯಾಬಲದ ಕೊರತೆ ಹಾಗು ಕಾಡಿನಲ್ಲಿ ಚದುರಿ ಚದುರಿ ಹೋಗಿದ್ದ ಕೊರಗರು - ಗೆಲುವಿನ ಅರಿವೇ ಇಲ್ಲದೆ ಸೋಲೊಪ್ಪಬೇಕಾಯಿತು. ಕೈಗೆ ಸಿಕ್ಕ ಕೊರ್ರೆ ಜನರ ಜೊತೆಗೆ ಆ ಮುಖಂಡನನ್ನೂ ಹತ್ಯೆಗೈಯಲಾಯಿತು. ತಮ್ಮ ಮುಖಂಡನ ಸಾವು ಮತ್ತು ರಕ್ತದ ಭೀಮತ್ಸತೆಯನ್ನು ಕಂಡು ಭಯಭೀತಗೊಂಡ ಕೊರ್ರೆ ಬಂಧುಗಳು ದಟ್ಟಾರಣ್ಯದಲ್ಲಿ ಅವಿತುಕುಳಿತರು. ಇನ್ನುಳಿದವರನ್ನು ನಿಶ್ಯಕ್ತಿಕರಣಗೊಳಿಸಿ, ಜೀತಕ್ಕೆ ನೇಮಿಸಲಾಯಿತು. ಅಂದಿನಿಂದ ಕೊರಗರ ಡೋಲು, ಕೊರಗರ ಬದುಕು, ತುಳುನಾಡಿನ ಪಾಲೆಗಾರರ ಜೀತಕ್ಕೆ ಬಳಕೆಯಾಯಿತು. ಅದನ್ನು ಈಗಲೂ 'ಅಜಲು ಚಾಕರಿ' ಎನ್ನಲಾಗುತ್ತದೆ.

ಈ ದೈಹಿಕ ಮಾನಸಿಕ ಮತ್ತು ಸಾಮಾಜಿಕ ದಬ್ಬಾಳಿಕೆ ಮತ್ತು ತಮ್ಮ ಮುಖಂಡನ ಸಾವಿನಿಂದ ಅಳಿದುಳಿದ ಕೊರಗರು ಕಾಡಿನಲ್ಲಿಯೇ ಅನಾಥರಾದರು. ಅವರಿಗೆ ಈ ನಾಡಿನ ತುಂಡರಸರು ಹಲವಾರು ನಿರ್ಬಂಧಗಳನ್ನು, ನಿಷೇಧಗಳನ್ನು ಜಾರಿಗೊಳಿಸಿರು. ಕೊರಗ ಜನರು ನಾಡಿಗೆ ಬರುವಾಗ ಕೋಲು ಕುಟ್ಟುತ್ತಾ 'ನಾವು ಕೊರಗರು' ಎಂದು ಹೇಳುತ್ತಾ ಬರಬೇಕು. ನಾಡಿನಲ್ಲಿ ಉಗುಳಬಾರದು, ಬಟ್ಟೆ ತೊಡಲೇಬಾರದು, ಸಂಜೆಯಾಗುವ ಮೊದಲು ಕಾಡು ಸೇರಬೇಕು ಎಂಬ ನಿರ್ಬಂಧವಿತ್ತು. ಕತ್ತಲಾದರೆ ಕೊರ್ರು ಎಂದು ಹೇಳುವುದನ್ನೇ ನಿಷೇಧಿಸಲಾಗಿತ್ತು.ಹಾಗಾಗಿ, ಕೊರ್ರುಗಳು ನಾಡಿಗೆ ಬರುವಾಗ - ತಮ್ಮ ಸೊಂಟಕ್ಕೆ ಬಿದಿರಿನ ಬೊಂಬನ್ನು ಅಥವಾ ಕುತ್ತಿಗೆಗೆ ಚಿಪ್ಪನ್ನು ಕಟ್ಟಿಕೊಂಡು ಬರುತ್ತಿದ್ದರು. ಆ ಬೊಂಬಿಗೆ ತಮ್ಮ ಎಂಜಲನ್ನು ಉಗುಳುತ್ತಿದ್ದರು. ಯಾಕೆಂದರೆ ಕೊರಗರ ಎಂಜಲು ಈ ಭೂಮಿಗೆ ಬಿದ್ದರೆ ಅನಿಷ್ಟ ಎಂದು ನಂಬಿದ ಈ ನಾಡಿನ ಜನರನ್ನು ಮತ್ತೊಮ್ಮೆ ಎದುರಿಸಲಾಗದು ಎಂದು ಭಯಕ್ಕೆಬಿದ್ದಿದ್ದರು.

ಅಂದಿನಿಂದ ಕೊರಗರು ತಮ್ಮ ಕುರಿತು ಯಾರು ಏನೇ ಕೇಳಿದರು ಸ್ಪಷ್ಟ ಮಾಹಿತಿಯನ್ನು ನೀಡಲೇ ಇಲ್ಲ. ತಮ್ಮ ಮುಖಂಡನ ದಾರುಣ ಅಂತ್ಯವನ್ನು ಕಂಡು ತೀವ್ರ ಭಯಭೀತಗೊಂಡಿದ್ದರಿಂದ ಮತ್ತು ಆತನ ಹೆಸರೆತ್ತಿದರೆ ನಮ್ಮನ್ನೂ ಕೊಲ್ಲುತ್ತಾರೆಂದು ನಂಬಿದ ಕೊರಗ ಜನರು ಇವತ್ತಿಗೂ ಆ ಹೆಸರನ್ನೆತ್ತಲ್ಲ.

ಕೊರಗರನ್ನು ಸಂದರ್ಶಿಸಿದ ಇತಿಹಾಸಕಾರ ಕೇಳಿದ ಪ್ರಶ್ನೆ 'ನಿಮ್ಮ ರಾಜ ಯಾರು?' ಮೊದಲೇ ಆ ಹೆಸರೆತ್ತಿದರೆ ಕೊಂದು ಬಿಡುತ್ತಾರೆಂಬ ಅನಾದಿ ಕಾಲದ ಭಯ ಮತ್ತು ಅದನ್ನು ಹೇಳಲಾಗದು ಎಂಬ ವಂಶಪಾರಂಪರ್ಯದ ದೃಢ ನಿರ್ಧಾರ ಹಾಗು ತಮ್ಮ ಹಿರಿಯರ ಮಾತಿಗೆ ಕಟಿಬದ್ಧರಾಗಿದ್ದ ಕೊರಗರು ತುಂಬ ವಿಷಾದನೀಯದಿಂದ 'ಅಬ ಚೈಕ', ' ಒಬ ಬುಕ'ಎಂದು ಬಿಟ್ಟರು.. ಅದನ್ನು 'ಅಬಶಿಕ' ಅಥವಾ'ಹುಭಾಶಿಕ' ಎಂದು ಇತಿಹಾಸಕಾರರು ಬರೆದು ಬಿಟ್ಟರು.

ಹೀಗೆ ಹೇಳಲು ಕಾರಣವೇ - 'ಭಯ'. ಹಾಗಾಗಿಯೇ ಆ ಇತಿಹಾಸಕಾರನ ಎಲ್ಲ ಪ್ರಶ್ನೆಗಳಿಗೂ 'ಅದೆಲ್ಲಾ ಯಾಕೆ', 'ಅದನ್ನು ಹೇಳಲಾಗದು', 'ಅದು ನಮ್ಮ ಬದುಕಿನ ಪ್ರಶ್ನೆ' ಎಂದು ಕೊರ್ರೆ ಭಾಷೆಯಲ್ಲಿಯೇ ಉತ್ತರಿಸಿದ್ದಾರೆ. ತಮ್ಮ ಮುಖಂಡನಿದ್ದ 'ಕೊರ್ರೆ ಕೋಟೆ' ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ದಟ್ಟ ಕಾಡಿನಲ್ಲಿದೆಯೆಂಬ ಕನಿಷ್ಟ ಒಂದೇ ಒಂದು ಮಾಹಿತಿಯನ್ನೂ ನೀಡದೆ ಎಲ್ಲಾ ಸತ್ಯವನ್ನು ಬಚ್ಚಿಟ್ಟಿದ್ದಾರೆ. ಸುಳ್ಳನ್ನು ಹೇಳಿಲ್ಲ, ಸತ್ಯವನ್ನು ಬಿಚ್ಚಿಟ್ಟಿಲ್ಲ!
- ಹೃದಯ

(ಆ ಕೊರ್ರೆ ಮುಖಂಡನ ನಂತರ ಇಡೀ ಕೊರಗ ಸಮುದಾಯಕ್ಕೆ ಆತ್ಮಬಲವನ್ನು ತಂದುಕೊಟ್ಟಾತ 'ಕೊರಗ ತನಿಯ'. ಈತನನ್ನು ಹೆಚ್ಚಿನ ಎಲ್ಲಾ ಸಮುದಾಯದವರೂ 'ಕೊರಗಜ್ಜ ದೈವ' ಎಂದು ನಂಬಿಕೊಂಡು ಆರಾಧಿಸಿಕೊಂಡು ಬರುತ್ತಿದ್ದಾರೆ. ಅಲ್ಲದೆ ಜನಪದ ಸಾಹಿತ್ಯ ಎನಿಸಿಕೊಂಡಿರುವ ಪಾಡ್ದನದಲ್ಲಿ ಕೊರಗ ತನಿಯನ ಕುರಿತು ಸಾಕಷ್ಟು ಮಾಹಿತಿಯೂ ಲಭ್ಯವಿದೆ.)

ಕಾಮೆಂಟ್‌ಗಳಿಲ್ಲ: