ಶನಿವಾರ, ಜೂನ್ 14, 2014

ಪ್ರತಿರೋಧದ ಗುಣ ಕಳೆದುಕೊಂಡರೆ ದಾವಣಗೆರೆ ಜನ?






ಸೌಜನ್ಯ:ವಿಜಯ ಕರ್ನಾಟಕ

ಮೂರು ದಶಕಗಳ ಹಿಂದೆ ದಾವಣಗೆರೆ ರಾಜ್ಯದ ಕಮ್ಯೂನಿಸ್ಟ್ ಮತ್ತು ದಲಿತ ಚಳವಳಿಯ ಪ್ರಮುಖ ಕೇಂದ್ರವಾಗಿತ್ತು. ರಾಜ್ಯದ ಸಾಮಾಜಿಕ ವ್ಯವಸ್ಥೆಯಲ್ಲಿ ಸಂಚಲನ ಸೃಷ್ಟಿಸಿದ್ದ ದಲಿತ ಚಳವಳಿಯ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪನವರ ತವರೂರು ಹನಗವಾಡಿ ಇರುವುದು ದಾವಣಗೆರೆಯಲ್ಲೇ. ಗೋಕಾಕ್ ಚಳವಳಿಯಲ್ಲೂ ದಾವಣಗೆರೆ ಜನ ಪ್ರಮುಖ ಪಾತ್ರ ವಹಿಸಿದ್ದರು. ಇಂತಹ ಪ್ರತಿರೋಧದ ಗುಣ ದಾವಣಗೆರೆಯ ಜನರಲ್ಲಿ ರಕ್ತದಲ್ಲಿ ಹಾಸುಹೊಕ್ಕಾಗಿತ್ತು. ಆದರೂ ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ಜನ ಸಮಾಜದಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ಸಂವೇದನೆ ಕಳೆದುಕೊಂಡಿದ್ದಾರೆಯೇ ಎಂಬ ಅನುಮಾನಗಳು ಮೂಡುತ್ತೆ. ಇತ್ತೀಚೆಗೆ ಜಿಲ್ಲೆಯಲ್ಲಿ ಸಂಭವಿಸಿದ, ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಗಳು ಮತ್ತೆ ಮತ್ತೆ ಇಂತಹ ಪ್ರಶ್ನೆ ಕೇಳುವಂತೆ ಮಾಡಿದೆ.

ಎರಡು ತಿಂಗಳ ಹಿಂದೆ ದಾವಣಗೆರೆ ತಾಲೂಕಿನ ಕಾಟಿಹಳ್ಳಿಯಲ್ಲಿ ಮಾರಿಕಾಂಬ ಜಾತ್ರೆ ನಡೆಯಿತು. ಆ ಸಂದರ್ಭದಲ್ಲಿ ಮಾರಿಯಮ್ಮ ಎಂಬ ದಲಿತ ಮಹಿಳೆಯನ್ನು ಸಿಡಿ ಏರಿಸಲಾಯಿತು. ಈ ಅನಾಗರಿಕ ಆಚರಣೆ ಸಂದರ್ಭದಲ್ಲಿ ಆ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರು, ಪಿಎಸ್‌ಎಸ್ ಎಲ್ಲರೂ ಇದ್ದರು. ಸಾವಿರಾರು ಮಂದಿ ಭಕ್ತಾದಿಗಳು ನೆರೆದಿದ್ದರು. ಆದರೂ ಇಡೀ ಸಮಾಜ ತಲೆ ತಗ್ಗಿಸುವಂತಹ ಅಹಿತಕರ ಘಟನೆ ನಡೆದೇ ಹೋಯಿತು. ಇದನ್ನು ತಡೆಯಲು ಹೋದ ದೇವದಾಸಿ ವಿಮೋಚನಾ ಸಂಘದ ಸದಸ್ಯರು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಪೊಲೀಸರು ಮತ್ತು ಜಿಪಂ ಸದಸ್ಯರೇ ದಿಕ್ಕುತಪ್ಪಿಸಿದ್ದರು.

ಮಾಯಕೊಂಡ ಸಮೀಪದ ಹುಚ್ಚವನಹಳ್ಳಿಯಲ್ಲಿ ದೇವದಾಸಿ ಮಹಿಳೆಯೊಬ್ಬರನ್ನು ಸಿಡಿ ಏರಿಸಲು ಊರಿನ ಹಿರಿಯರು ಸಿದ್ಧತೆ ನಡೆಸಿದ್ದರು. ಆದರೆ ಕೆಲವು ಸಂಘಟನೆಗಳು ಮತ್ತು ಅಧಿಕಾರಿಗಳ ಮಧ್ಯಪ್ರವೇಶದಿಂದ ಘಟನೆ ನಡೆಯಲಿಲ್ಲ. ಇದಾದ ಕೆಲವು ದಿನಗಳ ನಂತರ ಊರಿನ ಹಿರಿಯರೊಬ್ಬರು ಸಿಡಿ ಏರಿಸಲು ಆಯ್ಕೆ ಮಾಡಿದ್ದ ದೇವದಾಸಿ ಮಹಿಳೆಯನ್ನು ನಿಂದಿಸಿ, ಹಲ್ಲೆ ನಡೆಸಿದ್ದರು. ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿಗಳಿಗೇ ದೂರು ನೀಡಿದರೂ ಯಾವುದೇ ಕ್ರಮ ಜರುಗಿಸಲಿಲ್ಲ. ಬದಲಿಗೆ ಪ್ರಕರಣವನ್ನೇ ತಿರುಚಲಾಯಿತು.
ನಾಗರಿಕ ಸಮಾಜದ ಅಂತಃಕರಣ ಕಲುಕುವಂತಹ ಮತ್ತೊಂದು ಪ್ರಕರಣ ಹರಪನಹಳ್ಳಿ ತಾಲೂಕಿನ ಕುಂಚೂರು ಗ್ರಾಮದಲ್ಲಿ ಘಟಿಸಿತು. ಗ್ರಾಮದ ಅಪ್ರಾಪ್ತ ವಯಸ್ಸಿನ ದಲಿತ ಬಾಲಕಿಯನ್ನು ದೇವದಾಸಿ ಪದ್ಧತಿಗೆ ಬಿಡಲಾಯಿತು. ಈ ಕುರಿತು ಜಿಲ್ಲಾಡಳಿತಕ್ಕೆ ಮೊದಲೇ ಮಾಹಿತಿ ಇತ್ತು. ಆದರೂ ಕೃತ್ಯ ತಡೆಯಲಿಲ್ಲ. ಕೆಲವು ಮಹಿಳಾ ಸಂಘಟನೆಗಳು ಇದರ ವಿರುದ್ಧ ಕ್ರಮ ಜರುಗಿಸಲು ಒತ್ತಾಯಿಸಿ ಹಲವಾಗಲು ಪೊಲೀಸ್ ಠಾಣೆಗೆ ದೂರು ನೀಡಿದರು. ಪ್ರಕರಣವನ್ನು ಪಿಎಸ್‌ಐ ಗಂಭೀರವಾಗಿ ಪರಿಗಣಿಸದೆ ಸಮಾಜ ಕಲ್ಯಾಣ ಇಲಾಖೆಗೆ ರೆಫರ್ ಮಾಡಿ ಬರಬೇಕಾದ ಸೌಲಭ್ಯ ಕೊಡಿಸುತ್ತೇನೆಂದು ಬೇಜವಾಬ್ದಾರಿಯಾಗಿ ನಡೆದುಕೊಂಡಿದ್ದರು. ಇದೊಂದು ನಿಷೇಧಿತ ಪದ್ಧತಿ, ಅದಕ್ಕೆ ಕಾರಣರಾದವರನ್ನು ಬಂಧಿಸಿ ವಿಚಾರಣೆಗೊಳಿಪಡಿಸುವ ಬದಲು ಪ್ರಕರಣವನ್ನೇ ತಿರುಚಿದರು. ಗ್ರಾಮಕ್ಕೆ ಭೇಟಿ ನೀಡಿದ್ದ ಮಾದಾರ ಚನ್ನಯ್ಯ ಸ್ವಾಮಿಗಳೊಂದಿಗೆ ಅಸಭ್ಯತೆಯಿಂದ ವರ್ತಿಸಿದ್ದರು. ನಂತರ ಸಮಾಜ ಕಲ್ಯಾಣ ಸಚಿವರು ಭೇಟಿ ನೀಡಿ ತನಿಖೆ ನಡೆಸುವುದಾಗಿ ಹೇಳಿದ್ದಷ್ಟೆ ನಡೆಯಿತು.

ಜಿಲ್ಲೆಯ ಸಚಿವರಾಗಲಿ, ಯಾವೊಬ್ಬ ಶಾಸಕರಾಗಲಿ ಈ ಕುರಿತು ಚಕಾರ ಎತ್ತಲಿಲ್ಲ. ಜಿಲ್ಲಾಧಿಕಾರಿಗಳು ಅದೇ ಸಮುದಾಯಕ್ಕೆ ಸೇರಿದವರಾದರೂ ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂಬ ಕನಿಷ್ಟ ಚಿಂತನೆಯೂ ಅವರಲ್ಲಿ ಕಾಣಲಿಲ್ಲ.ದಿನೆ ದಿನೇ ಬೆಳೆಯುತ್ತಿರುವ ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆಯೂ ಇಲ್ಲಿನ ಜನ, ರಾಜಕಾರಣಿಗಳು ಜಡ್ಡುಗಟ್ಟಿದ್ದಾರೆಯೇ ಎಂಬ ಭಾವನೆ ಮೂಡುತ್ತದೆ.

ವಿದ್ಯಾನಗರಿ ಎಂದೆಲ್ಲಾ ಕರೆಸಿಕೊಳ್ಳುವ ಈ ನಗರ ಆಸ್ತಮಾ ರೋಗದ ಕೇಂದ್ರ ಸ್ಥಾನವಾಗಿದೆ. ನಗರದಲ್ಲಿನ ಪಿಬಿ ರಸ್ತೆ ಮಧ್ಯ ಕರ್ನಾಟಕದ ಕಪ್ಪುಚುಕ್ಕೆಯಾಗಿದೆ. ಈ ರಸ್ತೆಯಲ್ಲಿನ ದೂಳಿನಲ್ಲಿರುವ ಕಣಗಳು ಸಾಮಾನ್ಯವಾಗಿ ಇರುವುದಕ್ಕಿಂತಲೂ ಹಲವು ಪಟ್ಟು ಹೆಚ್ಚಾಗಿದೆ. ಇದಿಷ್ಟೇ ಅಲ್ಲ ರಸ್ತೆ ವಿಸ್ತರಣೆ ಕುರಿತಂತೆ ಸುಪ್ರೀಂ ಕೋರ್ಟ್ ನಿರ್ದೇಶನ ಇದ್ದರೂ ವಿಸ್ತರಿಸುವ ಧೈರ್ಯ ಯಾರೂ ತೋರಿಲ್ಲ. ಇದಕ್ಕೆ ಕಾರಣವೇನೆಂದು ಇಡೀ ಜಿಲ್ಲೆಯ ಜನತೆಗೆ ಗೊತ್ತು. ಆದರೆ ಪ್ರತಿರೋಧಿಸುವ ಸಂದರ್ಭ ಎದುರಾದರೆ ಯಾರೂ ಕಾಣುವುದಿಲ್ಲ.

ಕರ್ನಾಟಕದ ಮ್ಯಾಂಚೆಸ್ಟರ್ ಎಂಬ ಹೆಗ್ಗಳಿಕೆಯನ್ನು ಮತ್ತೆ ಗಳಿಸಿಕೊಡುವ ಉದ್ದೇಶದಿಂದ ದಾವಣಗೆರೆಗೆ ಜವಳಿ ಪಾರ್ಕ್ ಮಂಜೂರಾಗಿತ್ತು. ಇದಕ್ಕಾಗಿ ರೈತರು ಮತ್ತು ಬಡವರಿಂದ 142 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಯಿತು. ಭೂಮಿ ಕಳೆದುಕೊಂಡ ರೈತರು, ನಿವೇಶನ ಕಳೆದುಕೊಂಡ ಬಡವರಿಗೆ ಇನ್ನೂ ನ್ಯಾಯಬದ್ಧ ಪರಿಹಾರ ಸಿಗದೆ ಹಪಹಪಿಸುತ್ತಿದ್ದಾರೆ. ಆದರೆ ಜವಳಿ ಪಾರ್ಕ್ ರಾತ್ರೋರಾತ್ರಿ ಶಿವಮೊಗ್ಗಕ್ಕೆ ಶಿಫ್ಟ್ ಆಯಿತು. ಸ್ವಾಧೀನ ಮಾಡಿಕೊಂಡ ಭೂಮಿಯಲ್ಲಿ ಜಿಲ್ಲೆಯ ಪ್ರಭಾವಿ ರಾಜಕಾರಣಿಯೊಬ್ಬರಿಗೆ ಸೇರಿದ ಶಿಕ್ಷಣ ಸಂಸ್ಥೆ ತಲೆ ಎತ್ತಿದೆ. ನೂರಾರು ಬಡವರ ಗೋರಿಗಳ ಮೇಲೆ ನಿಂತಿರುವ ಈ ಕಟ್ಟಡ ಅಟ್ಟಹಾಸದ ನಗೆ ಬೀರುತ್ತಿದೆ.

ರಾಜ್ಯದಲ್ಲೇ ಅತಿಹೆಚ್ಚು ಮೆಕ್ಕೆಜೋಳ ಉತ್ಪಾದನೆಯಾಗುವುದು ಇಲ್ಲೆ. ಇಲ್ಲಿ ಸಂಸ್ಕರಣ ಘಟಕ ಸ್ಥಾಪನೆಗೆ ಅಗತ್ಯವಾದ ಎಲ್ಲ ಕಚ್ಚಾ ಸಂಪನ್ಮೂಲಗಳು ಹೇರಳವಾಗಿ ಸಿಗುತ್ತದೆ. ಉದ್ಯೋಗ ಅವಕಾಶಗಳು ಸೃಷ್ಟಿಯಾಗುವು ದರೊಂದಿಗೆ ರೈತರಿಗೂ ಉತ್ತಮ ದರ ಸಿಗಲಿದೆ. ಮಾಯಕೊಂಡದ ರೈಲ್ವೆ ನಿಲ್ದಾಣದ ಸನಿಹದಲ್ಲೇ ಸಂಸ್ಕರಣ ಘಟಕ ಸ್ಥಾಪಿಸಬಹುದಾಗಿತ್ತು. ಆದರೆ ಈ ಘಟಕ ಹಾವೇರಿ ಜಿಲ್ಲೆಯ ಪಾಲಾಯಿತು. ಜಿಲ್ಲೆ ಇಷ್ಟೆಲ್ಲ ಕಳೆದುಕೊಂಡರೂ ಜನಪ್ರತಿನಿಧಿಗಳು ಮತ್ತು ಮುಖಂಡರು, ಸಂಘಟನೆಗಳ ನಾಯಕರು ನಿರ್ಲಿಪ್ತರಾಗಿದ್ದಾರೆ. ಈ ಅನ್ಯಾಯದ ವಿರುದ್ಧ ಗಂಭೀರ ಹೋರಾಟಗಳಾಗಲಿ, ಪ್ರತಿರೋಧಗಳಾಗಲಿ ನಡೆಯಲೇ ಇಲ್ಲ.

ಈ ಕುರಿತು ಕೆಲವು ಪ್ರಜ್ಞಾವಂತರನ್ನು ಕೇಳಿದರೆ ಯಥಾ ರಾಜ ತಥಾ ಪ್ರಜೆ ಎಂದು ಹತಾಶೆಯ ಉತ್ತರ ನೀಡುತ್ತಾರೆ. ಜಿಲ್ಲೆಯ ಜನರಲ್ಲಿ ಸ್ವತಂತ್ರ ಚಿಂತನೆಗಳು ಕಾಣದಾಗಿವೆ. ಜಿಲ್ಲೆಯಲ್ಲಿನ ಆಗುಹೋಗುಗಳು ರಾಜಕೀಯವನ್ನೇ ಉದ್ಯಮ ಮಾಡಿಕೊಂಡಿರುವ ಎರಡುಕುಟುಂಬಗಳ ನಡುವೆ ಗಿರಕಿ ಹೊಡೆಯುತ್ತಿದೆ. ಅದರಾಚೆಗೆ ಚಿಂತಿಸುವ ಧೈರ್ಯ, ಸಾಮರ್ಥ್ಯ ಯಾರಲ್ಲೂ ಕಾಣದಂತಾಗಿದೆ.

ಜಿಲ್ಲೆಯ ಪ್ರಭಾವಿ ರಾಜಕಾರಣಿಯೊಬ್ಬರು ರಾಷ್ಟ್ರೀಯ ಪಕ್ಷವೊಂದಕ್ಕೆ ಶಾಶ್ವತ ಖಜಾಂಚಿ. ಈ ಹಿಂದಿನ ಸರಕಾರದಲ್ಲಿ ಜಿಲ್ಲೆಯ ಎಲ್ಲ ಶಾಸಕರು ಕ್ಯಾಬಿನೆಟ್ ದರ್ಜೆಯ ಹುದ್ದೆಗಳಲ್ಲಿ ಇದ್ದರು. ಕೃಷಿ ಸಚಿವ, ಕಂದಾಯ ಸಚಿವ, ಅಬಕಾರಿ ಸಚಿವ, ರಸ್ತೆ ಅಭಿವೃದ್ಧಿ ನಿಮದ ಅಧ್ಯಕ್ಷರು, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷರು, ವಿಧಾನ ಪರಿಷತ್‌ನ ಮುಖ್ಯ ಸಚೇತಕರು.

ಆದರೆ ನ್ಯಾಯಬದ್ಧವಾಗಿ ಜಿಲ್ಲೆಗೆ ದಕ್ಕಿದ್ದು ಮಾತ್ರ ಶೂನ್ಯ. ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯಿಂದ ವಿಮುಖರಾದಾಗ ಸಂಘಟನೆಗಳು ಎಚ್ಚರಿಸುವ ಕೆಲಸ ಮಾಡಬೇಕಾಗಿದೆ. ತಮ್ಮ ಸಂವೇದನೆಗಳನ್ನು ಚುರುಕುಗೊಳಿಸಿ ಜಿಲ್ಲೆಯ ಅಭಿವೃದ್ಧಿಯತ್ತ ಚಿಂತನೆ ನಡೆಸುವ ಅಗತ್ಯವಿದೆ. ಹಾಗೆಯೇ ಕಳೆದುಕೊಂಡಿರುವ ಮ್ಯಾಂಚೆಸ್ಟರ್ ಮತ್ತು ಹೋರಾಟಗಳ ಕೇಂದ್ರ ಎಂಬ ಖ್ಯಾತಿಯನ್ನು ಮರಳಿ ಪಡೆಯಬೇಕಾಗಿದೆ.

ಕಾಮೆಂಟ್‌ಗಳಿಲ್ಲ: