ಶುಕ್ರವಾರ, ಏಪ್ರಿಲ್ 5, 2013

ಜಾನಪದ ಝೇಂಕಾರ: ಲಿಮ್ಕಾ ದಾಖಲೆ

ಎಚ್.ಗಂಗಾಧರಯ್ಯ ಕುರಿಹಳ್ಳಿ ಬೆಂಗಳೂರು

ಕೃಪೆ: ವಿಜಯ ಕರ್ನಾಟಕ, 4.5.2013



ನಗರದಲ್ಲಿ ಮೊಳಗಿದ್ದ ಸಾವಿರ ಜಾನಪದ ಕಲಾವಿದರ ಝೇಂಕಾರ ಲಿಮ್ಕಾ ದಾಖಲೆಗೆ ಪಾತ್ರವಾಗಿದೆ. ದೇಶದ ಯಾವುದೇ ಭಾಷೆಯ ಜಾನಪದ ಸಂಗೀತ ಪ್ರಕಾರದಲ್ಲೂ ಇಂತಹ ಸಾಧನೆಯಾಗಿಲ್ಲ. ಇದೊಂದು ರಾಷ್ಟ್ರೀಯ ದಾಖಲೆಯಾಗಿದ್ದು, ದೇಶಿ ಭಾಷೆಗಳ ಪೈಕಿ ಹೊಸ ಮೈಲುಗಲ್ಲು.

ಸಹಸ್ರ ದೇಸಿ ಹಕ್ಕಿಗಳ ಕಲರವಕ್ಕೆ ವಿದ್ಯಾರ್ಥಿಗಳು, ಹಿಂದು, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯದ 8 ರಿಂದ 80 ವರ್ಷ ವಯೋಮಾನದವರು, ಸ್ತ್ರೀ ಶಕ್ತಿ ಸಂಘಟನೆಗಳು ಹಾಗೂ ಜಾನಪದ ಕಲಾಸಕ್ತರು ದನಿಗೂಡಿಸಿದರು. ಜಾನಪದ ಗಾಯಕ ಬಂಡ್ಲಹಳ್ಳಿ ವಿಜಯಕುಮಾರ್ ಪ್ರಯತ್ನ ಲಿಮ್ಕಾ ದಾಖಲೆಗೆ ಪಾತ್ರವಾಗಿದೆ.

ಶಾಲೆ-ಕಾಲೇಜುಗಳ 25 ರಿಂದ 50 ವಿದ್ಯಾರ್ಥಿಗಳು, 5 ರಿಂದ 10 ಗಾಯಕರು ಜಾನಪದ ಹಾಡು ಹಾಡಿರುವುದನ್ನು ಹೊರತುಪಡಿಸಿದರೆ, ಒಂದು ಸಾವಿರ ಗಾಯಕರಿಂದ ಜಾನಪದ ಹಾಡು ಹಾಡಿಸಿರುವುದು ದೇಶದಲ್ಲೇ ಇದೇ ಮೊದಲು. ರಂಗ ಸಂಸ್ಥಾನ ಸಂಸ್ಥೆ ಐತಿಹಾಸಿಕ ದಾಖಲೆ ನಿರ್ಮಿಸಿದೆ.

2012ರ ಫೆ.7ರಂದು ರವೀಂದ್ರ ಕಲಾಕ್ಷೇತ್ರ ಆವರಣದ ಸಂಸ ಬಯಲು ಮಂದಿರದಲ್ಲಿ ರಂಗ ಸಂಸ್ಥಾನ ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ಇಂಥದ್ದೊಂದು ಅಭೂತಪೂರ್ವ ಕಾರ‌್ಯಕ್ರಮ ನಡೆದಿತ್ತು. 2012ರ ಆಗಸ್ಟ್‌ನಲ್ಲಿ ಲಿಮ್ಕಾ ದಾಖಲೆಗಾಗಿ ವಿವರ ಕಳಿಸಲಾಯಿತು. 4 ತಿಂಗಳು ವಿಚಾರ ವಿನಿಮಯ ಮತ್ತು ಪತ್ರ ವ್ಯವಹಾರದ ಬಳಿಕ 2013ರ ಫೆಬ್ರವರಿಯಲ್ಲಿ ಸಂಸ್ಥೆಗೆ ಲಿಮ್ಕಾ ದಾಖಲೆ ಪ್ರಮಾಣಪತ್ರ ರವಾನಿಸಿದೆ.



ಜಾನಪದ ಮೋಡಿ
ಸಾವಿರ ಜಾನಪದ ಕಲಾವಿದರು ಅಂದು ಮಾದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿ ಗೀತೆಗಳು, ಸೋಬಾನೆಯ ಸೊಲ್ಲುಗಳನ್ನು ಹಾಡಿದ್ದರು. ಶರಣು ಶರಣಯ್ಯ ಗಣನಾಯಕ, ಮಾತನಾಡಣ್ಣಯ್ಯ ಮಾತನಾಡ, ಎಲ್ಲೋ ಜೋಗಪ್ಪ ನಿನ್ನರಮನೆ, ಹಾಡಿರಿ ರಾಗಗಳ ನುಡಿಸಿರಿ ತಾಳಗಳ, ತಂತಿ ಮಾತಾಡುತಾವೊ, ಚೆಲ್ಲಿದರು ಮಲ್ಲಿಗೆಯ, ಕರಿಯ ಕಬ್ಬಿನ ಕೋಲು, ಬನ್ನಿ ಗುರುವೇ ಸಿದ್ದಪ್ಪಾಜಿ, ಬಿಡಿ ಮತ್ತು ಸಂಪ್ರದಾಯ ಗೀತೆಗಳನ್ನು ಹಾಡಿದ್ದರು.ತಮ್ಮ ಪ್ರಯತ್ನ ಲಿಮ್ಕಾ ದಾಖಲೆಗೆ ಪಾತ್ರವಾಗುತ್ತದೆ ಎಂದು ಕಲಾವಿದರು ಅಂದುಕೊಂಡಿರಲಿಲ್ಲ.ಪ್ರಶಸ್ತಿಯ ಗರಿ ಇಡೀ ತಂಡಕ್ಕೆ ಖುಷಿ ನೀಡಿದೆ.
***

600ಕ್ಕೂ ಹೆಚ್ಚು ಹಾಡು
ಮೂಲ ಜಾನಪದ ಗೀತೆಗಳನ್ನು ಕಲಿಸಿ ಜಾನಪದ ಉಳಿಸುವ ಕಾರ್ಯದಲ್ಲಿ ಬಂಡ್ಲಹಳ್ಳಿ ವಿಜಯಕುಮಾರ್ ತೊಡಗಿದ್ದಾರೆ. ಬೆಂಗಳೂರು ಗ್ರಾಮಾಂತರ, ಜಮಖಂಡಿ, ಮುಧೋಳ, ರಾಮದುರ್ಗ, ಕನಕಪುರ, ದೊಡ್ಡಬಳ್ಳಾಪುರ ಮುಂತಾದ ಕಡೆ ಸುತ್ತಾಡಿ 600ಕ್ಕಿಂತ ಹೆಚ್ಚು ಜನಪದ ಗೀತೆಗಳನ್ನು ಸಂಗ್ರಹಿಸಿದ್ದಾರೆ. ಸೋಬಾನೆ, ತತ್ತ್ವ, ಗೀಗಿ ಮತ್ತು ಚೌಡಿಕೆ ಪದ, ಬುಡಕಟ್ಟು ಕಾವ್ಯವನ್ನು ಜನರಿಗೆ ಮುಟ್ಟಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಜಾನಪದ ಗೀತೆಗಳ ಸಂಗ್ರಹ, ಹಾಡುಗಳ ಧ್ವನಿಸುರುಳಿ ಹಾಗೂ ಕೃತಿ ರೂಪದಲ್ಲೂ ಬಿಡುಗಡೆ ಮಾಡಿದ್ದಾರೆ.
***

ದಾಖಲೆ ಖುಷಿ ನೀಡಿದೆ
ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತ ಕ್ಷೇತ್ರದಲ್ಲಿ ಲಿಮ್ಕಾ ದಾಖಲೆಗಳಾಗಿವೆ. ಆದರೆ, ಜಾನಪದ ಗೀತೆಗಳನ್ನು ಹಾಡಿಸುವ ಮೂಲಕ ಲಿಮ್ಕಾ ದಾಖಲೆ ಮಾಡಿರುವುದು ದೇಶದಲ್ಲಿ ಇದೇ ಮೊದಲು. ಹಾಡಿದ ಎಲ್ಲ ಗಾಯಕರಿಗೂ, ಮೂಲ ಗ್ರಾಮೀಣ ಜಾನಪದ ಗಾಯಕರಿಗೆ ಇದರ ಯಶಸ್ಸು ಸಲ್ಲಬೇಕು.
-ಬಂಡ್ಲಹಳ್ಳಿ ವಿಜಯಕುಮಾರ್, ಜಾನಪದ ಗಾಯಕ

ಕಾಮೆಂಟ್‌ಗಳಿಲ್ಲ: