ಸೋಮವಾರ, ಜುಲೈ 11, 2016

ಆತ್ಮಹತ್ಯೆ ಮತ್ತು ಅನೈತಿಕ ರಾಜಕಾರಣ

-ಹಾರೋಹಳ್ಳಿ ರವೀಂದ್ರ

ಕರ್ನಾಟಕದ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಬಹುಮತದೊಂದಿಗೆ 2008ರಲ್ಲಿ ಅಧಿಕಾರ ಹಿಡಿದುಕೊಂಡ ಮೇಲೆ. ಸಂಘಪರಿವಾರ ಚಿಗುರಿಕೊಂಡು ಇತರ ಧರ್ಮೀಯರ ವಿರುದ್ಧ ಗುಂಡಾವರ್ತನೆಗೆ ಇಳಿಯಬಹುದೆಂಬ ಆತಂಕ ಆ ಸಂದರ್ಭದಲ್ಲಿ ನಿಜವೇ ಆಗಿಹೋಯಿತು. ಮತಾಂತರಕ್ಕೆ ಪ್ರಚೋದನೆ ನೀಡುತ್ತಿರುವ ಆರೋಪದ ಮೇಲೆ ದಕ್ಷಿಣ ಕನ್ನಡ, ಉಡುಪಿ, ಮಂಗಳೂರು ಜಿಲ್ಲೆಗಳ ಹಲವು ಕಡೆ ಚರ್ಚ್ಗಳ ಮೇಲೆ ದಾಳಿ ನಡೆಸುವ ಮೂಲಕ ರಾಜ್ಯದಲ್ಲಿ ಧಾರ್ಮಿಕ ಸಂಘರ್ಷ ಬೀಜ ಭಿತ್ತಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದನಂತರ ತಮ್ಮನ್ನು ಕೇಳುವವರು ಯಾರು ಇಲ್ಲ, ತಾವು ಏನು ಮಾಡಿದರು ನಡೆಯುತ್ತದೆ ಎಂಬ ಅಹಂಕಾರದ ಧೋರಣೆ ಸಂಘಪರಿವಾರದಲ್ಲಿ ಬೆಳೆದು ನಿಂತಿತ್ತು. 

ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ರೈತರ ಮೇಲೆ ಗೋಲಿಬಾರ್ ಪ್ರಕರಣ ಜತೆಗೆ ಸರ್ಕಾರ ಆಸ್ತಿಯನ್ನು ಗೋಕರ್ಣ ಮಠಕ್ಕೆ ಕೊಡುವುದರ ಮೂಲಕ ಸ್ವಾಮೀಜಿ ಮಠಗಳಿಗೆ ಭೇಟಿ ನೀಡಿ ಅದರ ಅಭಿವೃದ್ಧಿಗೆ ಕ್ರಮಿಸುತ್ತಿರುವ ಯಡಿಯೂರಪ್ಪ ಚುನಾವಣಾ ಪ್ರಣಾಳಿಕೆಯಲ್ಲಿ ಜನತೆಗೆ ನೀಡಿದ ಪ್ರಮುಖ ಭರವಸೆಯನ್ನು ಈಡೇರಿಸದೆ, ಯಾವಾಗಲೂ ಮುಂದುವರಿದ ಜಾತಿಗಳ ಬಗ್ಗೆಯೇ ಯೋಚಿಸಿದ ಯಡಿಯೂರಪ್ಪನವರು ದಲಿತರ ಹಾಗೂ ಅಲ್ಪಸಂಖ್ಯಾತರ ಬಗ್ಗೆ ಚಿಂತಿಸಲು ಕಿಂಚಿತ್ತು ಬಿಡುವೇ ಸಿಗಲಿಲ್ಲ.

ಬಿಜೆಪಿಯು ಅಧಿಕಾರಕ್ಕೆ ಬಂದ ಮೇಲೆ ಕೈಗೆತ್ತಿಕೊಂಡ ಮೊದಲ ಕೆಲಸವೆಂದರೆ ಕ್ರೈಸ್ತ ಚಚಗಳ ಧಾಳಿ ಮತಾಂತರ ನಡೆಯುತ್ತಿದೆ ಎಂದು ಆಪಾದಿಸಿ ಕರಾವಳಿ ಭಾಗದಲ್ಲಿ ಹಾಗೂ ಬೆಂಗಳೂರು ಭಾಗದಲ್ಲಿ ಚರ್ಚ್ಗಳ ಮೇಲೆ ದಾಳಿ ಮಾಡುತ್ತ ಬಂದರು. ಸಂಘಪರಿವಾರದವರು ಈ ಕೆಲಸ ಮಾಡುವುದಕ್ಕೆ ಸರ್ಕಾರದ ಗೃಹ ಇಲಾಖೆ, ಅಧಿಕಾರಿಗಳು, ಪೊಲೀಸ್ ಇಲಾಖೆ ಸೇರಿದಂತೆ ಬಳಸಿಕೊಂಡಿದ್ದರು ಎಂಬುದಕ್ಕೆ ಯಾವುದೇ ಸಂದೇಹವಿಲ್ಲ. ಅದರಲ್ಲು ಪ್ರಮುಖವಗಿ ಇದು ಆತ್ಮಹತ್ಯೆ ಮಾಡಿಕೊಂಡಿರುವ ಮಂಗಳೂರು ಡಿವೈಎಸ್ಪಿ ಗಣಪತಿ ಪ್ರಮುಖರಾಗಿದ್ದರು. ಮೂಲತಹ ಕಾವಿ ಪ್ರದೇಶದಿಂದ ಬಂದ ಈತ ಖಾಕಿಯೊಳಗಡೆ  ಮತೀಯ ರಾಜಕಾರಣ ಮಾಡುವಲ್ಲಿ ನಿಸ್ಸೀಮ ಎಂದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. 

ಹಿಂದುತ್ವದ ಉಮೇದಿನಲ್ಲಿ ಕೆಳವರ್ಗ ಹಾಗೂ ಕೆಳಜಾತಿಯವರು, ದಲಿತರು ಲಕ್ಷಾಂತರ ಯುವಕರುಗಳಿದ್ದಾರೆ. ಆ ಸಾಲಿಗೆ ಭಜರಂಗಿ ಮಹೇಂದ್ರನು ಒಬ್ಬ, ಭಜರಂಗಿ ಮಹೇಂದ್ರಕುಮಾರ್ ತನ್ನ ಪುಂಡಾಟಿಕೆಯಿಂದ ಮೊದಲು ಗಮನ ಸೆಳೆದದ್ದು ಚಿಕ್ಕಮಗಳೂರು ಕೊಪ್ಪದಲ್ಲಿ, ಆ ಕ್ವಾಲಿಫಿಕೇಷನ್ನಿಂದಲೆ ಆತ ಭಜರಂಗದಳದ ಸಂಪರ್ಕಕ್ಕೆ ಬಂದ. ಮಲೆನಾಡು ಭಾಗದ ಹಳ್ಳಿ ಹಳ್ಳಿಗಳಲ್ಲಿ ಗಂಧದ ಕಳ್ಳರು, ನಾಡಕಳ್ಳರು, ಪುಂಡ ಹುಡುಗರ ಗುಂಪು ಕಟ್ಟಿಕೊಂಡು, ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರ ಮೇಲೆ ದಾಳಿ ನಡೆಸುತ್ತಾ ಲೀಡರ್ಆಗಿ ಬೆಳೆದ. ಚಿಕ್ಕಮಗಳೂರು ಜಿಲ್ಲೆ ಭಜರಂಗದಳದ ಸಂಚಾಲಕನಾಗಿ ಚಿಕ್ಕಮಗಳೂರಿನ ದತ್ತ ಅಭಿಯಾನದ ದಾಂಧಲೆಗಳಲ್ಲಿ ಬಜರಂಗದಳವನ್ನು ಹಳ್ಳಿ - ಹಳ್ಳಿ ಮಟ್ಟಕ್ಕೆ ಕೊಂಡೊಯ್ದು ಪುಂಡರ ಜಾಲ ನಿರ್ಮಿಸುವಲ್ಲಿ ಪ್ರಧಾನಪಾತ್ರವಹಿಸಿ, ಜಿಲ್ಲೆಯಲ್ಲಿ ಸಂಘಪರಿವಾರದ ಚಟುವಟಿಕೆಗೆ ಜೀವ ತುಂಬಿದ್ದೆ ಮಹೇಂದ್ರ ಕುಮಾರ್, ನಂತರ ರಾಜ್ಯ ಸಂಚಾಲಕನಾಗಿ ರಾಜ್ಯ ಮಟ್ಟದಲ್ಲಿ ಕಾಣಿಸಿಕೊಂಡ. ಒಂದು ಕಡೆ ಪುಂಡಾಟಿಕೆಯಿಂದ ಕೋಮುವಾದ ಮಾಡುತ್ತ ಮಹೇಂದ್ರ ಕುಮಾರ್ ಹೀರೋ ಆದರೆ, ಮತ್ತೊಂದು ಕಡೆ ಪೊಲೀಸ್ ಇಲಾಖೆಯಲ್ಲೆ ಇದ್ದು ಗಣಪತಿ ಹೀರೊ ಆಗಿದ್ದ. ಇವರಿಬ್ಬರ ಶಕ್ತಿಯಿಂದಲೇ ಕರಾವಳಿ ಕೋಮುವಾದಕ್ಕೆ ತುತ್ತಾಗಿದ್ದು.

2004ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು, ಉಡುಪಿ, ದ.ಕನ್ನಡ ಜಿಲ್ಲೆಗಳಲ್ಲಿ ಬಿಜೆಪಿಗೆಲ್ಲಲ್ಲು ಈತನ ಪುಂಡಾಟಿಕೆಯು ಕಾರಣವಾಯಿತು. ಅನಂತರ 2008ರಲ್ಲಿ ಬಿಜೆಪಿ ಸಂಪೂರ್ಣವಾಗಿ ಅಧಿಕಾರ ಹಿಡಿದ ನಂತರ ಮಹೇಂದ್ರ ಕುಮಾರನಿಗೆ ಸಂಘಪರಿವಾರದಿಂದ ಸೂಚನೆ ಬಂದಿತು. ಆ ಸೂಚನೆ ಏನೆಂದರೆ? ಚರ್ಚ್ ಗಳ ಮೇಲೆ ದಾಳಿ ಮಾಡುವುದು. ಭಾನುವಾರ ಒಂದೇ ದಿನ ಒಂದೇ ಸಮಯದಲ್ಲಿ ದಾಳಿಯಾಗಬೇಕೆಂದು ನಿಯೋಜಿಸಿದವನೇ ಮಹೇಂದ್ರಕುಮಾರ್, ಇದಕ್ಕೆ ಸಾತ್ ನೀಡಿದವರು ಅಂದಿನ ಗೃಹಮಂತ್ರಿ ವಿ.ಎಸ್.ಆಚಾರ್ಯರು ಹಾಗೂ ಹಣದ ವ್ಯವಸ್ಥೆ ಮಾಡಿಕೊಟ್ಟವರು ಅಲ್ಲಿನ ವರ್ತಕರು ಹಾಗೂ ಪೊಲೀಸ್ ಇಲಾಖೆಯಲ್ಲಿ ಕದ್ರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದ ಎಂ.ಕೆ.ಗಣಪತಿ. ಇವರ ಮಾಸ್ಟರ್ ಪ್ಲಾನ್ಗಳಿಂದಲೇ ಕರಾವಳಿ ಕ್ರೈಸ್ತರು ಚರ್ಚ್ ದಾಳಿಗಳಿಂದ ತತ್ತರಿಸಿದ್ದು. 

1. ಮಂಗಳೂರಿನ ಎಡೊರೇಷನ್ ಮೊನಾಸ್ಟರಿ ಮೇಲಣ ದಾಳಿ
2. ಮಂಗಳೂರಿನ ಮಿಲಾಗ್ರಿಸ್ ಚರ್ಚ್ ಸುತ್ತಮುತ್ತ ದಾಳಿ
3. ಮಂಗಳೂರಿನ ಕುಲಶೇಖರ ಹೋಲಿ ಕ್ರಾಸ್ ಚರ್ಚ್ ಮೇಲೆ ದಾಳಿ
4. ಮಂಗಳೂರಿನ ಪೆರ್ಮನ್ನೂರಿನ ಸಂತ ಸೆಬಾಸ್ಟಿಯನ್ ಚರ್ಚ್ ನಲ್ಲಿ ದಾಳಿ
5. ಮಂಗಳೂರಿನ ವಾಮಂಜೂರು ಚರ್ಚ್ ಮೇಲೆ ದಾಳಿ
6. ಮಂಗಳೂರಿನ ಬಜ್ಪೆ ಚರ್ಚ್ ಮೇಲೆ ದಾಳಿ
7. ಮಂಗಳೂರಿನ ಪೆರ್ಮುದೆ ಚರ್ಚ್ ಮೇಲೆ ದಾಳಿ
8. ಮಂಗಳೂರಿನ ಬೊಂದೆಲ್ ಚರ್ಚ್ ಗುಡ್ಡಕ್ಕೆ ದಾಳಿ
9. ಉಜಿರೆಯ ಸಂತ ಜಾರ್ಜ್ ಕ್ಯಾಥೋಲಿಕ್ ಚರ್ಚ್ ಮೇಲೆ ದಾಳಿ

2008 ರಲ್ಲಿ ಭಾಜಪ ಅಧಿಕಾರಕ್ಕೆ ಬಂದ ಮೇಲೆ ಕರಾವಳಿ ಭಾಗದಲ್ಲಿ ಅಲ್ಪಸಂಖ್ಯಾತರು ಉಸಿರನ್ನು ಬಿಗಿಹಿಡಿದು ಬದುಕುವಂತಾಗಿತ್ತು. ಅಂತಹ ಸಂಧಿಗ್ಧ ಸ್ಥಿತಿ ಅಲ್ಲಿ ಬಂದೋದಗಿತು. ಹಿಂದೂಮತೀಯವಾದಿಗಳ ಸಂಘಟಕರು ಕರಾವಳಿಯಲ್ಲಿರುವ ಚಚರ್್ಗಳನ್ನು ದಾಳಿ ಮಾಡಲು ಸಂಚು ಹಾಕಿದ್ದರು. ಅದರಲ್ಲಿ ಪ್ರಮುಖವಾಗಿ ಮೇಲೆ ಹೆಸರಿಸಿದ 9 ಚರ್ಚ್ ಗಳನ್ನು ದಾಳಿ ಮಾಡಲಾಯಿತು. ಅದರ ಒಟ್ಟು ನೇತೃತ್ವ ಭಜರಂಗಿ ಮಹೇಂದ್ರ ಕುಮಾರ್ ವಹಿಸಿದ್ದ. ಅದರ ಬೆನ್ನುಲುಬಾಗಿ ಡಾ.ವಿ.ಎಸ್.ಆಚಾರ್ಯರು ಇದ್ದರು. ಜತೆಗೆ ಕದ್ರಿ ಪೊಲೀಸ್ ಠಾಣೆಯ ಎಂ.ಕೆ.ಗಣಪತಿಯೂ ಇದ್ದರು. ಕರಾವಳಿಯಲ್ಲಿ ಚರ್ಚ್ ಗಳನ್ನು ದಾಳಿ ಮಾಡಲು ಬೇಕಾಗುವ ಸಾಮಾಗ್ರಿಗಳು ಮತ್ತು ಪುಂಡಾಟಿಕೆಗೆ ಹುಡುಗರು ಮತ್ತು ಒಳಗಿರವ ನನ್ಗಳನ್ನು ದಾಳಿ ಮಾಡಲು ಹರಳುಗಲ್ಲುಗಳನ್ನು ಪೂರೈಸಿದ್ದೆ ಪೊಲೀಸರು. ಅದರಲ್ಲು ಪ್ರಮುಖವಾಗಿ ಕದ್ರಿ ಠಾಣೆ ವ್ಯಾಪ್ತಿಗೆ ಬರುವ ಕುಲಶೇಖರ ಹೋಲಿಕ್ರಾಸ್ ಚರ್ಚ್ ದಾಳಿಗೆ ಕುಮ್ಮಕ್ಕು ನೀಡಿದ್ದೆ ಇಂದು ಆತ್ಮಹತ್ಯೆ ಮಾಡಿಕೊಂಡಿರುವ ಡಿವೈಎಸ್ಪಿ ಕೆ.ಗಣಪತಿ. 

ಮಂಗಳೂರಿನ ಕದ್ರಿ ಪೊಲಿಸ್ ಠಾಣೆಯಲ್ಲಿ ಅಂದು ಇನ್ಸ್ಪೆಕ್ಟರ್ ಆಗಿದ್ದರು. ಆದರೆ ಇಂದು ಮಂಗಳೂರಿನ ಐಜಿ ಕಛೇರಿಯಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ.ಕೆ.ಗಣಪತಿ ಅವರು ಮಡಿಕೇರಿಯ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಆತ್ಮಹತ್ಯೆಗೆ ವೈಯಕ್ತಿಕ ಕಾರಣಗಳಿರಬಹುದು? ಅಥವಾ ಇನ್ಯಾವುದೋ ಕಾರಣಗಳಿರಬಹುದು? ಆದರೂ ಕೂಡ ಕೆಲವು ಬಿಜೆಪಿ ನಾಯಕರು ದಾಳವಾಗಿ ಬಳಸಿಕೊಂಡು ಆತ್ಮಹತ್ಯೆಯ ಅನೈತಿಕ ರಾಜಕಾರಣ ಮಾಡುತ್ತಿರುವುದು ಯಾವ ಸಂದೇಶ ನೀಡಲಿಕ್ಕೆ? ಸಾಮಾಜಿಕ ಜಾಲತಾಣದಲ್ಲಿ ಗಣಪತಿ ಅವರನ್ನು ಒಬ್ಬ ಪೊಲೀಸ್ ಇಲಾಖೆಯ ಹಿರೋ. ಸಮಾಜದ ದೃಷ್ಟಿಯಲ್ಲಿ ಆತ ಒಬ್ಬ ಸುಧಾರಕ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ವಾಸ್ತವವಾಗಿ ಈತನು ಕೂಡ ಒಬ್ಬ ಆರೋಪಿ. ಇವರನ್ನು ಮೂರು ಸಲ ಅಮಾನತ್ತು ಮಾಡಲಾಗಿತ್ತು. ಅದರ ವಿವಿರಗಳನ್ನು ತಿಳಿಯುವ ಅಗತ್ಯವಿದೆ. 2010 ರಲ್ಲಿ ಯಶವಂತಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದಾಗ ನಕಲಿ ಎನ್ಕೌಂಟರ್ ಮಾಡಿ ಅಮಾನತ್ತುಗೊಂಡಿದ್ದರು. ಮಡಿವಾಳ ಠಾಣೆಯಲ್ಲಿದ್ದಾಗ ಇಲಾಖೇಯ ರಿವಾಲ್ವಾರನ್ನ ದುರ್ಬಳಕೆ ಮಾಡಿಕೊಂಡಿದ್ದರು. ರಾಜಗೋಪಾಲ ನಗರದಲ್ಲಿದ್ದಾಗ ಕರ್ತವ್ಯ ಲೋಪದಲ್ಲಿ ಅಮಾನತ್ತಾಗಿದ್ದರು. ಅದಲ್ಲದೆ ಮನೆಗಳವು ಆರೋಪಿಯಿಂದ ವಶಪಡಿಸಿಕೊಳ್ಳುತ್ತಿದ್ದ ಹಣ ಅಥವಾ ಇನ್ನಿತರ ವಸ್ತುಗಳನ್ನು ವಂಚಿಸುತ್ತಿದ್ದರು ಎಂಬ ಆರೋಪವು ಕೂಡ ಇವರ ಮೇಲಿದೆ. ಇಂತಹ ವ್ಯಕ್ತಿಯನ್ನು ಯಾವ ಮಾನದಂಡದ ಮೇಲೆ ದಕ್ಷ ಅಧಿಕಾರಿ ಪ್ರಾಮಾಣಿಕ ವ್ಯಕ್ತಿ ಎನ್ನುತ್ತೀರಿ? ಈತನ ಆತ್ಮಹತ್ಯೆಯನ್ನು ಇಟ್ಟುಕೊಂಡು ಸಿಬಿಐ ಗೆ ವಹಿಸಿ ಎಂದು ಬಿಜೆಪಿ ಪಟ್ಟು ಹಿಡಿದಿದೆ. ರಾಜ್ಯದ ಎಲ್ಲಾ ಕಡೆ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಇವರದೇ ಸರ್ಕಾರವಿದ್ದಾಗ ಕರಾವಳಿಯಲ್ಲಿ ನಡೆದ ಚರ್ಚ್ ದಾಳಿಗೆ ಇದೇ ಬಿಜೆಪಿ ಸರ್ಕಾರ ಯಾವ ನ್ಯಾಯ ದೊರಕಿಸಿ ಕೊಟ್ಟಿದೆ? ಆದರೆ ಇಂದು ಇದೇ ಗಣಪತಿ ಆತ್ಮಹತ್ಯೆಯ ಮುಂದೆ ಅನೈತಿಕ ರಾಜಕಾರಣ ಮಾಡುತ್ತಿರುವುದು ಸರ್ಕಾರವನ್ನು ದುರ್ಬಲ ಮಾಡುವುದಕ್ಕೆ ವಿನಃ ಮತ್ತೇನು ಇದರೊಳಗಿಲ್ಲ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ವಿಷಾದವಿದೆ. ಆದರೆ ಅದನ್ನು ಬಂಡವಾಳ ಮಾಡಿಕೊಳ್ಳುವ ಅಗತ್ಯವಿಲ್ಲ. ಹಾಗೆಯೆ ಸತ್ಯಾಸತ್ಯತೆಗಳನ್ನು ಅರಿಯದೇ ದೈವೀಕರಿಸುವುದು ಕೂಡ ಅನವಶ್ಯಕ.


ಆದಿವಾಸಿಗಳ ಅಭಿವೃದ್ಧಿ ಪ್ರಶ್ನೆಗಳು.


-ಡಾ.ಎ,ಎಸ್. ಪ್ರಭಾಕರ್


1. ಆಧುನಿಕತೆ, ಆಧುನಿಕ ಶಿಕ್ಷಣ, ಮುಖ್ಯವಾಹಿನಿ, ಇವು ನಾವು ಕೇಳಿ ಪಡೆದ ಸವಲತ್ತುಗಳಲ್ಲ. ಇವು ಬಂಡಾವಾಳಶಾಹಿ ಉತ್ಪಾದನೆಯ ಭಾಗವಾಗಿ ನಮಗೆ ದೊರಕಿದ ಉಪ ಉತ್ಪನ್ನಗಳು ಮಾತ್ರ.

2. ಮಾರುಕಟ್ಟೆ ಆಧಾರಿತ ಮಿಶ್ರ ಆರ್ಥಿಕತೆಯ ಭಾಗವಾಗಿ ನಮ್ಮ ದೇಶದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಜನಕಲ್ಯಾಣದ ನೈಜ ಆಶಯಗಳು ನಮ್ಮ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿಲ್ಲ. ನಮ್ಮಲ್ಲಿ ಸ್ಪಷ್ಟ 'ಅಭಿವೃದ್ಧಿ ನೀತಿ' ಇನ್ನೂ ರೂಪಗೊಳ್ಳಬೇಕಿದೆ.

3. ಜೊತೆಗೆ 'ಅಭಿವೃದ್ಧಿ' ಎಂಬುದನ್ನು 'ನಮ್ಮ' ಆಡಳಿತ ಅಖಂಡವಾಗಿ ಪರಿಭಾವಿಸುತ್ತದೆ. ಆದರೆ ನಮ್ಮ ಸಮಾಜ ಅಖಂಡವಾಗಿಲ್ಲ. ಬಹುರೂಪಿಯಾಗಿದೆ. ಶೋಷಿತ ಸಮುದಾಯಗಳ ವಸ್ತುನಿಷ್ಟ ಕಲ್ಯಾಣಕ್ಕೆ ಇಂದಿಗೂ ಇಂಡಿಯಾದಲ್ಲಿ 'ಅಭಿವೃದ್ಧಿ ನೀತಿ' ರೂಪುಗೊಂಡಿಲ್ಲ.

4. ಇನ್ನು ಸಂಸ್ಕೃತಿ ಪರಂಪರೆಗಳು ಉಳಿಯಬೇಕು. ಸ್ಥಳೀಯ ಕೌಶಲಗಳು ಆಯಾ ಸಮುದಾಯಗಳ ಲೌಕಿಕದ ಬದುಕನ್ನ ಹಸನು ಮಾಡಬೇಕು ಎಂಬ ಆಶಯಗಳು ಮಧುರವಾಗಿ ಕೇಳುತ್ತವೆ. ಸಂಸ್ಕೃತಿ ಮತ್ತು ಪರಂಪರೆಗಳು ಆಯಾ ಸಮುದಾಯಗಳ ತಲಾಂತರದ ದುಡಿಮೆಯ ಫಲವಾಗಿ ಅಸ್ತಿತ್ವದಲ್ಲಿರುತ್ತವೆ. ಒಂದು ಅರ್ಥದಲ್ಲಿ, ಸಂಸ್ಕೃತಿ ಮತ್ತು ಪರಂಪರೆಗಳು ಸಮುದಾಯಗಳ ಬದುಕಿನ ಮೇಲ್ಪದರಗಳು ಮಾತ್ರ. ಕೆನೆಯನ್ನೇ ಹಾಲೆಂದು ಭ್ರಮಿಸಿದಂತೆ, ಮೇಲ್ಪದರನ್ನೇ ಕೇಂದ್ರವೆಂದು ಭಾವಿಸಿಕೊಂಡು ಬರಲಾಗಿದೆ. ಕೇಂದ್ರ ಬದಲಾದಂತೆ ಮೇಲ್ಪದರು ಬದಲಾಗುತ್ತದೆ. ಸಂಸ್ಕೃತಿ ಮತ್ತು ಪರಂಪರೆಗಳು ಆಯಾ ಸಮುದಾಯಗಳ ಲೌಕಿಕದ ಬದುಕು ಬದಲಾದಂತೆ ಬದಲಾಗುತ್ತಲೇ ಇರುತ್ತವೆ. ಸಂಸ್ಕೃತಿ ಮತ್ತು ಪರಂಪರೆಗಳನ್ನು 'ಉಳಿಸಬೇಕೆಂದರೆ' ಕೇಂದ್ರವನ್ನು ಅದರ ಮೂಲ ರೂಪದಲ್ಲಿಯೇ ಉಳಿಸಬೇಕಾಗುತ್ತದೆ.

5. ಆದಿವಾಸಿಗಳು ಮೂಲ ನೆಲೆಗಳಲ್ಲಿ ಉಳಿಯಬೇಕೋ ಅಥವಾ ಕಾಡಿಂದ ಹೊರಬರಬೇಕೋ ಎಂದು ತೀರ್ಮಾನಿಸುವ ಅಧಿಕಾರ 'ಸ್ವತಂತ್ರ, ಸಾರ್ವಭೌಮ' ಭಾರತದ ಸರಕಾರಗಳ ಕೈಯಲ್ಲಿಲ್ಲ. ಪೋಸ್ಕೋ, ವೇದಾಂತ್ ದಂತಹ ಬಹುರಾಷ್ಟ್ರೀಯ ಕಂಪನಿಗಳ ಕೈಯಲ್ಲಿದೆ.

6. ಆದಿವಾಸಿಗಳು ಶಿಕ್ಷಣ ಪಡೆದು ಆಧುನಿಕರಾಗಬೇಕು. ವರ್ತಮಾನದ ವಿರಾಟ್ ಅವಕಾಶಗಳಲ್ಲಿ ಪಾಲು ಪಡೆಯಬೇಕು ಎಂಬುದು ಆಶಯದ ಮಟ್ಟದಲ್ಲಿ ಸರಿಯಾಗಿದೆ. ಆದರೆ ಆಚರಣೆಯಲ್ಲಿ ಇದು ಸಾಧ್ಯವಾ? ಯೋಚಿಸಬೇಕು. ಯಾವ ಡಿಗ್ರಿ? ಯಾವ ಬಗೆಯ ಶಿಕ್ಷಣ? ನಿರ್ಧಾರವಾಗಬೇಕು. 

6. ತಮ್ಮ ಬದುಕಿನ ಸ್ವರೂಪವನ್ನು ನಿರ್ಧರಿಸಿಕೊಳ್ಳುವ ಹಕ್ಕನ್ನು ಆದಿವಾಸಿಗಳಿಗೆ ಬಿಡಬೇಕು. ದೇಶ, ದೇಶದ ಜನ, ಕಾಡು, ನದಿ, ಹಳ್ಳ  ಕಾಡಿನ ಉತ್ಪನ್ನಗಳೆಲ್ಲ 'ಸ್ವತಂತ್ರ ಸಾರ್ವಭೌಮ' ಭಾರತದ ಕೈಯಲ್ಲಿಯೇ ಇವೆ ಎಂದು ನಾವು ಭಾವಿಸಿದರೆ, ಆದಿವಾಸಿಗಳು ಅವರ ಬದುಕನ್ನು ಅವರು ರೂಪಿಸಿಕೊಳ್ಳುತ್ತಾರೆ ಎಂದು ನಂಬಬಹುದು.

7. 'ನಾವು' ಉತ್ತಮ ಸ್ಥಿತಿಯಲ್ಲಿದ್ದೇವೆ. ನಮ್ಮ ಮುಖ್ಯವಾಹಿನಿಯಲ್ಲಿ ಆದಿವಾಸಿಗಳು ಬಂದು ಸೇರಬೇಕು. ಆಗ ಅವರ ಸಬಲೀಕರಣ ಸಾಧ್ಯ. 'ನಾವು' ಯಾವ ಬಗೆಯ ಉತ್ತಮ ಸ್ಥಿತಿಯಲ್ಲಿದ್ದೇವೆ? ತಿಂಗಳಿಗೆ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ, ಮೀಸಲಾತಿಯ ಅವಕಾಶಗಳೇ ಸಂಕುಚಿತಗೊಂಡು ಶೋಷಿತರ ಬದುಕು ನಿತ್ಯ ನರಕವಾಗುತ್ತಿರುವಾಗ 'ನಾವು' ಯಾವ ಬಗೆಯ ಉತ್ತಮ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ? 

8. ಮುಖ್ಯವಾಹಿನಿ ಎಂದರೆ ಏನು? ಆಧುನಿಕತೆ ಎಂದರೇನು? ಯಾವ ಮುಖ್ಯವಾಹಿನಿಯಲ್ಲಿ ರಾಜೇಶನಂತಹ ಆದಿವಾಸಿಗೆ ಬದುಕಲು ಅವಕಾಶಗಳಿವೆ? ಮುಖ್ಯವಾಹಿನಿಯಲ್ಲಿರುವ 'ನಾವು' ಕೇವಲ ಮನುಷ್ಯ ಮಾತ್ರದವರಾಗಿ ಬದುಕುತ್ತಿದ್ದೇವಾ? ಅಥವಾ ಸಾಮ್ರಾಜ್ಯಶಾಹಿ ಮಾರುಕಟ್ಟೆಯ 'ಗ್ರಾಹಕರಾಗಿ' ರೂಪಾಂತರವಾಗಿದ್ದೇವಾ? ಮುಖ್ಯವಾಹಿನಿ ಎಂದರೆ ಏನು?

ಭಾನುವಾರ, ಜುಲೈ 10, 2016

ಕಾನೂರು ಹೆಗ್ಗಡತಿ ಕಾದಂಬರಿಯಿಂದ: ಆತ್ಮಹತ್ಯೆ ಬಗ್ಗೆ ಕುವೆಂಪು ಚಿಂತನೆ

ಕಾನೂರು ಹೆಗ್ಗಡಿತಿ: ಆತ್ಮಹತ್ಯೆ

ಕೆಲವರಿರುತ್ತಾರೆ, ಅವರಿಗೆ ಜಗತ್ತನ್ನು ತಮ್ಮ ಅಭಿಲಾಷೆಯ ಅಗ್ನಿಯಲ್ಲಿ ಕರಗಿಸಿ, ಇಚ್ಛೆಯ ಎರಕದಲ್ಲಿ ಹೊಯ್ದು, ತಮ್ಮ ಇಷ್ಟದ ಜೀವನ ಮೂರ್ತಿಯನ್ನು ನಿರ್ಮಿಸಿಕೊಳ್ಳಬೇಕೆಂಬ ಉತ್ಕಟಾಕಾಂಕ್ಷೆ, ಅವರು ಪ್ರಪಂಚವನ್ನು ಅನುಸರಿಸುವುದಕ್ಕಿಂತಲೂ ಹೆಚ್ಚಾಗಿ ಪ್ರಪಂಚವೇ ತಮ್ಮ ಮನೋರಥಗಳಂತೆ ನಡೆದುಕೊಳ್ಳಬೇಕೆಂದು ಬಯಸುತ್ತಾರೆ. ಆ ಬಯಕೆ ಕೈಗೂಡದಿದ್ದರೆ ನಿಷ್ಠುರ ಪ್ರಪಂಚದಿಂದ ಹೇಗಾದರೂ ಪಾರಾಗಲು ಪ್ರಯತ್ನಿಸುತ್ತಾರೆ. ಆ ಪ್ರಯತ್ನ ಅನೇಕ ರೂಪಗಳನ್ನು ತಾಳಬಹುದು. ಕಲೆಯ ಸುರುಚಿರ ಕೃತಿಗಳಿಂದ ಹಿಡಿದು ಹಗಲುಗನಸು, ಅರೆಮರುಳು, ಹುಚ್ಚು, ಮೂರ್ಛೆ, ವೈರಾಗ್ಯ, ಆತ್ಮಹತ್ಯೆ – ಇತ್ಯಾದಿಗಳವರೆಗೂ ಆ ಪ್ರಯತ್ನದ ವ್ಯಾಪನೆಯಿದೆ. ಕಲೆ ಮತ್ತು ವೈರಾಗ್ಯಗಳಿಂದ ಲೋಕಸಂಗ್ರಹವಾಗಬಹುದು. ಅಂತೂ ಈ ಪ್ರಪಂಚದಲ್ಲಿ ಆದರ್ಶಪ್ರಪಂಚವನ್ನು ಹುಡುಕುವವರಿಗೆ ಲೋಕ, ಕಟ್ಟಕಡೆಗೆ ಗೌರವ ತೋರಿದರೂ, ಮೊದಮೊದಲು ಅವರನ್ನು ನಿಷ್ಠುರವಾಗಿ ಪೀಡಿಸುತ್ತದೆ. ಆದ್ದರಿಂದ ಆದರ್ಶದ ಹೂವಿನ ಹಾಸಗೆಗೆ ಹೋಗಲೆಳಸುವವರು ಮುಳ್ಳಿನ ಬೇಲಿಯನ್ನು ದಾಟಲು ಸಿದ್ದರಾಗಿರಬೇಕು. ಹಾಗೆ ಸಿದ್ದರಾದವರಿಗೆಲ್ಲ ಹೂವಿನ ಹಾಸಗೆ ಲಭಿಸಿಯೆ ಲಭಿಸುತ್ತದೆ ಎಂಬುದೂ ನಿಶ್ಚಯವಲ್ಲ. ಎಷ್ಟೋ ಸಾಹಸಿಗಳು ದಾರಿಯಲ್ಲಿಯೇ ಮಡಿಯಬೇಕಾಗುತ್ತದೆ. ಅಂತಹ ಕನಸು ಕಟ್ಟುವ ಸಾಹಸಿಗಳ ಗುಂಪಿಗೆ ಸೇರಿದರು, ಸೀತೆ ಮತ್ತು ಹೂವಯ್ಯ.
ಮತ್ತೆ ಕೆಲವರಿರುತ್ತಾರೆ, ಅವರಿಗೂ ಆಶೆಗಳೂ ಇಚ್ಛೆಗಳೂ ಉತ್ಕಟವಾಗಿಯೆ ಇರುತ್ತವೆ. ಆದರೆ ಅವರ ಆಕಾಂಕ್ಷೆ ವಾಸ್ತವ ಜಗತ್ತಿಗೆ ಡಿಕ್ಕಿ ಹೊಡೆದು, ತಲೆಬಾಗಿಸಿಕೊಂಡು ರಕ್ತಪಾತಮಾಡಿಸಿಕೊಳ್ಳುವುದಿಲ್ಲ. ಅದು ಕಠಿಣ ಜಗತ್ತು ಎಲ್ಲಿ ಬಾಗಿದರೆ ಅಲ್ಲಿ ಬಾಗಿ, ಎಲ್ಲಿ ತಲೆಯೆತ್ತಿದರೆ ಅಲ್ಲಿ ತಲೆಯೆತ್ತಿ, ಎಲ್ಲಿ ಇಕ್ಕಟ್ಟಾದರೆ ಅಲ್ಲಿ ಸಣ್ಣದಾಗಿ ನುಸುಳಿ, ತನ್ನ ಆಶೆ ಮತ್ತು ಇಚ್ಛೆಗಳನ್ನು ಪ್ರಪಂಚಕ್ಕೆ ಹೊಂದಿಸಿಕೊಂಡು ಬಾಳುತ್ತದೆ. ಅಂಥವರಿಗೆ ಕನಸುಕಟ್ಟುವ ಸಾಹಸಿಗಳಿಗೆ ಬಂದೊದಗುವ ಅತ್ಯುತ್ಕಟವಾದ ಹೃದಯಯಾತನೆ ಒದಗುವುದಿಲ್ಲ ; ಅವರಿಗೆ ಆದರ್ಶ ಸಿದ್ದಿಯಿಂದುಂಟಾಗುವಂತೆ ನಿರುಪಮವಾದ ಮಹತ್ತಾದ ದಿವ್ಯಾನಂದವೂ ದೊರೆಯುವುದಿಲ್ಲ. ಆದರೆ ಒಟ್ಟಿನಲ್ಲಿ ಸ್ವಪ್ನಸಾಹಸಿಗಳಿಗಿರುವ ಘನತೆಯಿರದಿದ್ದರೂ ಐಹಿಕ ಜೀವನ ದೃಷ್ಟಿಯಲ್ಲಿ ಹೆಚ್ಚು ನೆಮ್ಮದಿಯಾಗಿರುತ್ತಾರೆ.

ಆಧುನಿಕ ಜೀವನದಲ್ಲಿ ಜಾನಪದ


ಡಾ. ರಾಜೇಗೌಡ ಹೊಸಹಳ್ಳಿ gidda


ಗೆಡ್ಡೆಗೆಣಸು ತಿನ್ನುವಾಗ ಮನುಷ್ಯ ಸುಖವಾಗಿದ್ದ. ಚಿನ್ನ ಬಗೆಯಲು ಪ್ರಾರಂಭಿಸಿದಾಗ ಬಡವನಾಗುತ್ತಾ ಹೋದ ಎಂಬುದು ಪ್ರಕೃತಿಯೊಳಗಿನ ಬದುಕು ಹಾಗೂ ಆಧುನಿಕ ಬದುಕುಗಳ ಅಂತರ. ಆಧುನಿಕತೆ ಕೇಳುತ್ತಾ ಬರುವುದಿಲ್ಲ. ಪ್ರವಾಹದಂತೆ ಹರಿದು ಬರುತ್ತದೆ. ಅಂದು ರಾಗಿಕಲ್ಲು ಒಂದು ಆಧುನಿಕ ಮಾದರಿ ಯಂತ್ರ. ಇಂದು ಫ್ಲೋರ್‍ಮಿಲ್ ಕೂಡ ನಿಂತು ಹೋಗುತ್ತಿವೆ. ಕಂಪನಿ ಹಿಟ್ಟು ರಾಜ್ಯವಾಳುತ್ತಿದೆ. ಹಲ್ಲಿಗೆ ಚುಚ್ಚುವ ಕಡ್ಡಿ ಕೂಡ ಒಂದು ಯಂತ್ರ; ಹಾಗಾಗಿ ನಾನು ಆಧುನಿಕತೆಯ ವಿರೋಧಿಯಲ್ಲ ಎಂದು ಗಾಂಧೀಜಿ ಹೇಳುತ್ತಾರೆ. ಹಾಗೆ ಹೇಳುವಾಗಲೇ ಆ ಮಾತಿನ ಹಿಂದೆ ನಾಗರೀಕತೆ ಹಾಗೂ ಆಧುನಿಕತೆಯ ಸವಾರಿ ಮೊಸಳೆ ಮೇಲಿನ ಸವಾರಿ ಎಂಬ ಅರಿವು ನಮಗಿರಬೇಕಾಗುತ್ತದೆ. ಸ್ವರಾಜ್ಯ ಬಂತು. ಪರಂಪರೆಯ ಜ್ಞಾನ ಹೋಯಿತು. ನೆಹರು ರಾಜಸಿಂಹಾಸನ ಗಾಂಧಿಯ ಕುಂಡರಿಕೆಯ ಚಾಪೆಯನ್ನು ಸುತ್ತಿ ಆಚೆಗೆ ಬಿಸಾಕಿತು ಎಂಬುದು ಈ ದೇಶಕ್ಕೊದಗಿದ ಆಧುನಿಕತೆ.
nagegowdru

ಬ್ರಿಟಿಷರು ಭಾರತಕ್ಕೆ ಬಂದಾಗ ಶೇ.40 ರಷ್ಟು ಕೈಮಗ್ಗ ರಫ್ತಾಗುತ್ತಿತ್ತು. ಅವರ ವ್ಯಾಪಾರಿ ಬಲ ಹೆಚ್ಚಿದಂತೆಲ್ಲಾ ಸ್ವತಂತ್ರ ನೀಡಿ ಹೊರಟಾಗ ಕೇವಲ ಶೇ.4ಕ್ಕೆ ನಿಂತಿತ್ತು. ಅನಂತರವಂತೂ ತೆಕ್ಕೆ ಹಾಕಿದ್ದ ಗೃಹ ಕೈಗಾರಿಕೆ, ಕೃಷಿಗಾರಿಕೆ ಅಕ್ಷರವೆಂಬ ಆಧುನಿಕ ಹುಸಿ ಮಾಂತ್ರಿಕನೊಡನೆ ಸೇರಿಇಂದು ಗ್ರಾಮಗಳು ಹಾಳುಗೋಡೆಗಳಾಗಿವೆ. ಅಂದು ಸಮುದ್ರದವರೆಗೆ ರೈಲು ಹಳಿಗಳು ಅಡವಿ ಗುಡ್ಡಗೋರಾಂದಗಳನ್ನೆಲ್ಲಾ ಬಾಚಿ ಲಂಡನಿಗೆ ಧಾಟಿಸುವಾಗ ಅತ್ತಲಿಂದ ಇತ್ತ ಬರುತ್ತಿದ್ದ ಗರಿಗರಿ ನುಣುಪು ಬಟ್ಟೆಗಳು ಆಧುನಿಕ ಸಾಮಾನುಗಳು ಏಳು ಲಕ್ಷ ಹಳ್ಳಿಗಳ ಕೋಣೆವರೆಗೂ ಸಾಗಿದವು. ಅದರೊಡನೆ ಪರಂಪರೆಯ ಜ್ಞಾನ ಹೊಗೆ ಹಾಕಿದ ಘಾಟಿಗೆ ಬೆದರಿದಂತೆ ಸ್ಥಗಿತವಾಯಿತು. ಇಂದು ದೇಶವು ಗ್ರಾಮಜ್ಞಾನವನ್ನು ಅಕ್ಷರಕ್ಕೆ ಮಾರಿಕೊಂಡ ಬಗೆಯಾಗಿ ನಿಂತುಬಿಟ್ಟಿತು. ಅಕ್ಷರ ಅದರಲ್ಲೂ ಇಂಗ್ಲೀಷು ಅಕ್ಷರ ನಮ್ಮ ದೇಶದ ಅಭಿವೃದ್ಧಿ ಪಥದಲ್ಲಿ ಪಾತ್ರ ವಹಿಸುವಾಗ ಮಾತೃ ಭಾಷೆಯನ್ನು ದೂರ ಆಚೆಗೆ ಸರಿಸಿತು. ಅದರಿಂದ ಹಳ್ಳಿಮಕ್ಕಳಿಗೂ ಪಶ್ಚಿಮ ಜಗತ್ತು ತೆರೆದುಕೊಂಡದ್ದು ಹೌದು ಅದರೊಡನೆಯೇ ಬಲೆಹಾಕಿದ ಆ ಜಗತ್ತು ಎಲ್ಲರನ್ನು ಎತ್ತಿಹಾಕಿಕೊಂಡಿತು. ಗಾಂಧಿ ನಂಬಿದ ಪರಂಪರೆಯ ಜ್ಞಾನ ಈ ದೇಶಕ್ಕೆ ಬೇಕಾದ ನೆಲಮೂಲ ತಿಳಿವಳಿಕೆಗಳೆಲ್ಲವನ್ನು ಇಂಗ್ಲೀಷಿಗೆ ಮಾರಿಕೊಂಡಿತು.

ಹಸಿರು ಕ್ರಾಂತಿಯಿಂದ ಹಸಿದ ಹೊಟ್ಟೆಗಳಿಗೆ ಅನ್ನ ಹಾಕುವ ವಿಜ್ಞಾನವು ದೇಶಕ್ಕೆ ಕಾಲಿಟ್ಟಾಕ್ಷಣ ಶತಶತಮಾನಗಳ ಹಸಿವು ಇಲ್ಲವಾಯ್ತೆಂದು ದೇಶ ನಂಬಿತು. ಗುಣಾಕಾರದ ಚಲನೆಯ ಜನಸಂಖ್ಯೆಗೆ ಮೂರು ಹೊತ್ತಿನ ಊಟವೇ ಮುಖ್ಯವೆಂಬ ಅಭಿಪ್ರಾಯ ಪ್ರಾರಂಭವಾಯ್ತು. ಬಹು ದೊಡ್ಡ ಕೈಗಾರಿಕೆಗಳು, ದೊಡ್ಡ ನೀರಾವರಿಗಳು ಆಧುನಿಕ ದೇವಾಲಯಗಳಾಗಿ ನೆಹರು ಭಾರತದಲ್ಲಿ ಚಲನೆಗೊಂಡವು. ಜಗದ ಕೈಗಾರಿಕಾ ಕ್ರಾಂತಿಗೆ ದೇಶ ಕೈ ಜೋಡಿಸಿತು. ಕೇವಲ ಐದಾರು ದಶಕಗಳಲ್ಲಿ ಎಲ್ಲವೂ ಎಡವಿ ಬಿದ್ದಿತು. ಅಷ್ಟರಲ್ಲಿ ಪೇಟೆ ನಗರಗಳು ತುಂಬಿ ಹೋದವು. ಹಳ್ಳಿಗಳು ಅಂದಿನ ಹಸಿದ ಹೊಟ್ಟೆಗಳಿಗಿಂತ ಅನಾಥ ಸ್ಥಿತಿ ಮುಟ್ಟಿ ಕೈಗೆ ಕೆಲಸವಿಲ್ಲದೆ ಮೈಗೆ ಕಸುವಿಲ್ಲದೆ ಕೈಗಾರಿಕೆಗಳೋಪಾದಿಯ ದೊಡ್ಡದೊಡ್ಡ ಆಸ್ಪತ್ರೆಗಳಲ್ಲಿ ತಾವು ಹುಡುಕಿದವು. ಪರಂಪರೆಯ ವೈದ್ಯ ಕೈ ಚೆಲ್ಲಿತು. ಹಸಿರು ಕ್ರಾಂತಿಯ ಪೈರು ಪಚ್ಚೆಯ ಹಣ್ಣು ಹಂಪಲಿನೊಳಗಿನಿಂದ ರಸಾಯನಿಕ ರಾಜ್ಯಭಾರ ಪ್ರಾರಂಭವಾಯಿತು. ವಿದೇಶಿ ಔಷಧಿ ಕಂಪೆನಿಗಳು ರೈತನಿಗೂ ರೈತ ಬೆಳೆದ ಬೆಳೆಗಳಿಗೂ ಅಮರಿಕೊಂಡು ಹಳ್ಳಿ ನಗರಗಳನ್ನೆಲ್ಲಾ ಟೊಳ್ಳುಮಾಡಿದವು. ಈಗ ಏನಾಗಬೇಕು, ಹೇಗೆ ಪರಂಪರೆಯ ಜ್ಞಾನಕ್ಕೆ ಹಿಂಚಲಿಸಬೇಕೆಂಬ ಆಲೋಚನೆ ಪ್ರಾರಂಭವಾಗಿದೆ. ಇದೇ ಆಲೋಚನೆ ಆಧುನಿಕ ಜೀವನಕ್ಕೆ ಬೇಕಾಗಿರುವ ಜಾನಪದ ಜ್ಞಾನ.
nrdy
  
 ಜಾನಪದವು ಪುಸ್ತಕಕ್ಕೆ ಇಳಿದಾಗಲೇ ಅಕ್ಷರದೊಳಗೆ ಸ್ಥಗಿತಗೊಂಡಿತು. ಅದರೊಳಗಿನ ದನಿಬನಿ ಹಾಗೂ ಬದುಕಿನ ಅವಿಭಾಜ್ಯ ವಿಧಾನಗಳು ಬದಲಾದ ಸ್ಥಿತಿಗಳಾದವು. 3ನೇ ಶತಮಾನದವರೆಗೆ ಸಂಸ್ಕøತಕ್ಕೆ ಲಿಪಿಯಿರಲಿಲ್ಲ. ಪ್ರಾಕೃತವು ಬರವಣಿಗೆಯಲ್ಲಿತ್ತು. ಅದರೊಳಗೆ ದ್ರಾವಿಡ ಭಾಷೆ ಸಾಂಗತ್ಯದಲ್ಲಿತ್ತು. ಅದಕ್ಕೆ ‘ವಡ್ಡಾರಾಧನೆ’ ಒಂದು ಉದಾಹರಣೆ. ಹಲ್ಮಿಡಿ ಶಾಸನ ಕನ್ನಡಾಕ್ಷರದ ಆದಿ ಎಂದು ಹಿಡಿದರೆ ಅಲ್ಲಿಂದೀಚೆಯ ಚಲನೆ ಪಂಪ-ರನ್ನ-ವಚನಕಾರರ ಕುಮಾರವ್ಯಾಸ ಇಂತಾ ಕಾಲದೊಳಗೆ ಜಾನಪದವು ದೇಶಿ ಮೂಲದಲ್ಲಿ ಮಾರ್ಗವೆಂಬುದನ್ನು ಸೃಷ್ಟಿ ಮಾಡಿಕೊಡುತ್ತಿತ್ತು. ಕಾಲ ಸಾಗಿದೆ. ಕನ್ನಡದಂತಾ ದೇಶೀ ಭಾಷೆಗಳು ಬ್ರಿಟಿಷರನ್ನು ಅರಗಿಸಿಕೊಳ್ಳಲಾಗಲಿಲ್ಲ. ಇದು ಭಾರತದ ಎಲ್ಲಾ ಸ್ಥಳೀಯ ಭಾಷೆಗಳ ಚರಿತ್ರೆ. ಮುಂದೆ ಕನ್ನಡವೂ ಸೇರಿದಂತೆ ಹಲವು ಮಾತೃ ಭಾಷೆಗಳು ಲಿಪಿಯನ್ನು ಕಳೆದುಕೊಳ್ಳುವ ಕಾಲ ಬರಬಹುದೇನೋ ಎಂಬ ಅಂಶ ಈ ಜಗದೀಕರಣದ ಭಯ ಮೂಲದಲ್ಲಿದೆ. ಕುವೆಂಪು ಕಾದಂಬರಿಗಳು ಜನಪದೀಯ ಆಕರಗಳವು. ನಾಗೇಗೌಡರ ಸೃಜನಶೀಲ ಸಾಹಿತ್ಯ ಅಂದಿನ ಸಮಾಜ ಪಲ್ಲಟದ ತಲ್ಲಣಗಳವು.

ಅವರ ‘ಪ್ರವಾಸಿ ಕಂಡ ಇಂಡಿಯಾ’ ಮಾಲೆ ಭಾರತ ಜಾನಪದವನ್ನು ವಿದೇಶೀ ಕಣ್ಣುಗಳ ಮೂಲಕ ನೋಡಿದ ರೀತಿಗಳು. ಅವರ ‘ಭೂಮಿಗೆ ಬಂದ ಗಂಧರ್ವ’ ಕಾದಂಬರಿ ಜನಪದೀಯನೊಬ್ಬ ಶಿಷ್ಟ ಮಾದರಿಯಲ್ಲಿ ಸಾಧನೆಗೈಯಬಹುದೆಂಬ ವಸ್ತುರೂಪಕ. ಅವರ ಕಾಫಿಕತೆ ವಿದೇಶವು ಸ್ವದೇಶವಾದ ಕಥನ. ಒಟ್ಟಿನಲ್ಲಿ ಗೌಡರ ಸೂಟು ಬೂಟು ಟೈ ಹಾಗೂ ಮಿದುಳೊಳಗಿನ ಐ.ಎ.ಎಸ್. ಎಂಬಿವು ಪರಂಪರೆಯ ಗ್ರಾಮವು ಆಧುನಿಕತೆ ಕಡೆ ದಾಟಿ ಪರಂಪರೆಯ ಜ್ಞಾನವನ್ನು ಹೇಗೆ ಕಡೆದು ನಿಲ್ಲಿಸಿ ಮುಂದಿನವರಿಗೆ ಹೇಳಬೇಕೆಂಬುದರ ಪಾಠ. ಇದು ಅಕ್ಷರ ಲೋಕದ ಜನಪದೀಯರು ತಮ್ಮ ಲೋಕಕ್ಕೆ ಮಾಡಬೇಕಾಗಿರುವ ಕಾಯಕದ ಪಾಠ ಕೂಡ ಹೌದು. ಕನ್ನಡವು ಶಾಸ್ತ್ರೀಯ ಭಾಷಾ ಸ್ಥಾನ ಪಡೆವಾಗ ಪಂಪ ಹೇಳಿದ ದೇಶೀ ಅದರೊಳಗೆ ಬೇರು ಸ್ವರೂಪದಲ್ಲಿದೆ ಎಂಬ ಅರಿವು ಇದನ್ನು ಚಿಂತಿಸುವವರಿಗಿರಬೇಕು. ಕನ್ನಡ ಭಾಷೆಯೆಂದರೆ ಅಂದಿನ ಶೇಕಡಾ 10ರಷ್ಟು ಇಲ್ಲದ ಜನರ ಸ್ವತ್ತಲ್ಲ. ಅದು ಅಂದು ಇಂದು ಶೇಕಡಾ 90ರಷ್ಟು ಜನ ಬಾಹುಳ್ಯದ ಜನಪದರ ಸ್ವತ್ತು. ಹಾಗಾಗಿ ಶಾಸ್ತ್ರೀಯ ಭಾಷೆಯ ಆಗು ಹೋಗುಗಳಲ್ಲಿ ಪರಂಪರೆಯ ಜನಪದ ಭಾಷೆ ಜ್ಞಾನಕ್ಕೆ ಪ್ರಥಮ ಸ್ಥಾನ ಬೇಕು.

ಇಂದು ಪರಿಸರದ ಅವನತಿಯು ಮನುಷ್ಯನೇ ಮರದ ಮೇಲೆ ಕುಳಿತು ಬುಡಕಡಿದ ವಿಧಾನ. ಪಶ್ಚಿಮ ಘಟ್ಟದ ಮೇಲಿನ ಅಣೆಗಳ ಭಾರ. ಹಿಮಾಲಯದೊಳಗಿನ ಜನಭಾರ, ಈ ದೇಶದೊಳಗಿನ ಗಿರಿಜನರ ಹಾಗೂ ಅಡವಿ ಕುಲದ ಕೆಣಕುವಿಕೆಗಳೆಲ್ಲವೂ ಇಂದು ಮಳೆ ಮುಗಿಲುಗಳನ್ನೆ ತಲೆಕೆಳಕು ಮಾಡಿವೆ. ಉಗಾಂಡ ಕೀನ್ಯಾ ಭೂಮಧ್ಯ ರೇಖೆ ಅಡಿಯಲ್ಲಿ ಮರಮುಟ್ಟುಗಳನ್ನು ಮುಗಿಲೆತ್ತರಕ್ಕೆ ಬೆಳಸುವ ಮಣ್ಣುಗುಣದ್ದು. ಅಲ್ಲಿ ಬಡತನವಿದೆ ನಿಜ ಆದರೆ ಒಂದೊಂದು ಮರದ ಮೇಲಿನ ಪ್ರಾಣಿ ಮೇಲಿನ ಪ್ರೀತಿ ಇನ್ನೂ ಆ ದೇಶಗಳನ್ನು ಉಳಿಸಿದೆ. ಅಲ್ಲಿನ ರಾಜಕೀಯ ಅಧೋಗತಿಯಲ್ಲೂ ಪರಿಸರ ಪ್ರೀತಿ ಅವರನ್ನು ರಕ್ಷಿಸಿದೆ. ಈ ದೇಶಕ್ಕೆ ಅಲ್ಲಿನ ಮಣ್ಣಿನ ಗುಣಮಟ್ಟ ಮೌಲ್ಯವಿಲ್ಲ ನಿಜ. ಒಮ್ಮೆ ಅಡವಿ ಕಡಿದರೆ ಪುನಃ ಚಿಮ್ಮುವ ನೆಲಮೂಲ ಮುಗಿಲ ಮೂಲವೂ ಇಲ್ಲ. ಹಾಗಾಗಿ ಭಾರತ ಬಹು ಎಚ್ಚರಿಕೆಯಿಂದ ಪರಿಸರ ಸಂಪತ್ತನ್ನುರಕ್ಷಿಸಬೇಕಾಗಿತ್ತು. ಆದರೆ ಅದಾಗಲಿಲ್ಲ. ಇದರ ಪರಿಣಾಮ ಬರವು ಸಾಮ್ರಾಜ್ಯ ಸ್ಥಾಪಿಸುತ್ತಿದೆ.
Dr.Verghese-Kurien

  ಮಳೆಯು ಮುಗಿಲು ಸೇರಿದೆ.ಇದರೊಂದಿಗೆ ಪರಂಪರೆಯ ಜ್ಞಾನ ಪರದೇಶೀ ಮಾಲುಗಳಿಗೆ ಅಡವಾಗಿದೆ. ಅಂಟುವಾಳ ಸೀಗೆ ಹುಚ್ಚೆಳ್ಳು ಇಂತವು ಇಲ್ಲವಾಗುತ್ತಿವೆ. ಹೊಲಗದ್ದೆಗಳಲ್ಲಿ ಕ್ರಿಮಿಕೀಟಗಳೇ ಪೈರುಗಳ ಮೇಲೆ ಇಲ್ಲದಂತೆ ಮಾಡುವ ಮಾನವನು ಹೊಟ್ಟೆ ಒಳಗೆ ವಿದೇಶಿ ರಸಾಯನಗಳನ್ನು ಅಡಗಿಸಿ ಅದನ್ನಿಳಿಸಲು ವಿದೇಶಿ ಕಂಪೆನಿ ವೈದ್ಯಗಳನ್ನು ತನಗೆ ತಾನೇ ಛೂ ಬಿಟ್ಟಿರುವುದು ದುರಂತ. ಇದು ದುರಂತಗಳ ಕಾಲ. ದೇಶ ಒಓಅ ಗಳ ದಾಸ್ಯತೆಗೊಳಗಾಗಿದೆ. ಒಂದು ಕೆ.ಜಿ. ಮರದ ತರಗು 35 ಕೆ.ಜಿ. ನೀರು ಹಿಡಿದಿಡುವುದೆಂಬ ಜ್ಞಾನ ಬರಿದಾಗಿದೆ. ಶೇ.3 ರಷ್ಟಿದ್ದ ಇಂಗಾಲ ಕೇವಲ 0.3 ರಷ್ಟಕ್ಕಿಳಿದಿದೆ. ಉಪ್ಪು ತಾಗಿದರೇ ಜೀವ ಬಿಡುವ ಎರೆಹುಳು; ರಸಾಯನಿಕ ವಸ್ತು ತಾಗಿದರೆ ಜೀವವೈವಿಧ್ಯ ಉಳಿದೀತೆ! ಒಂದು ಹಿಡಿ ಮಣ್ಣಿನೊಳು ಕೋಟಿ ಜೀವಾಣುಗಳಿರುವುದಿಲ್ಲವೆ ಹೀಗೆ ಕೃಷಿ ತಜ್ಞ ನಾರಾಯಣರೆಡ್ಡಿಯವರು ಪಾಠ ಹೇಳುವುದು ರೈತನ ಕಿವಿಗೆ ಮುಟ್ಟಬೇಕು.

ಸಹಜ ಕೃಷಿ ಕೈಬಿಟ್ಟ ರೈತ ನವಣೆ, ಕೊರ್ಲೆ, ಇಂತವು ಮೂಲಕ ಪುನಃ ಪರಂಪರೆಯ ಸಿಂಹಾವಲೋಕನ ಮಾಡಬೇಕು ಎಂದು ಅವರು ಪಾಠ ಹೇಳುತ್ತಾರೆ. ಹೌದು ನಗರದವರು ಭಯ ಬಿದ್ದಿದ್ದಾರೆ. ಸಹಜ ಕೃಷಿ ಅಂಗಡಿಗಳಿಗೆ ಮುತ್ತಿಗೆ ಹಾಕುತ್ತಿದ್ದಾರೆ. ಇದು ಜಾನಪದವು ಹೇಗೆ ಆಧುನಿಕ ಬದುಕಿಗೆ ಅವಶ್ಯಕ ಎಂಬುದನ್ನು ತೋರಿಸುತ್ತದೆ. ಒಂದು ಬಿದಿರು ಹಿಂಡ್ಲಲಿಗೆ ಬೆಂಕಿ ಬಿದ್ದರೆ ಅದು ಸಾಯುವಾಗ ತಕ್ಷಣ ಗರ್ಭತಾಳಿ ನಾಲ್ಕು ಬಿದರಕ್ಕಿ ಉದುರಿಸುವುದು ತಾಯ್ತನದ ನೈಸರ್ಗಿಕ ವಿಧಾನ. ಅದು ಮನುಷ್ಯನಲ್ಲೂ ಇರುತ್ತದೆ. ನಿಜ ಇದನ್ನು ಆಧುನಿಕ ಪ್ರಪಂಚಕ್ಕೆ ಪರಂಪರೆಯ ಜ್ಞಾನವನ್ನು ಧಾಟಿಸುವ ತಾಯ್ತನವಾಗಿ ಕಾಣಬೇಕೆಂಬುದುಒಂದು ವಿಧಾನ. ಮಲೆನಾಡ ಗಿಡ್ಡದನದ ಹಾಲು ತುಪ್ಪದ ಬನಿ, ಹೆಂಟೆಗದ್ದೆಯ ಅಡಿಯಲ್ಲಿ ಮಣ್ಣಿನತೇವ ಗುಣವು ಅಡಗಿಸಿಕೊಳ್ಳುವ ಮಣ್ಣೆಂಬ ತಂತ್ರ ವಿಧಾನ, ಅಡವಿಗುಡ್ಡವು ಮಳೆನೀರು ಬಸಿದು ಹಳ್ಳಕೊಳ್ಳಗಳಿಗೆ ಇಳಿಸುವ ವಿಧಾನ ಈ ಎಲ್ಲವೂ ರೈತ ಪರಿಸರದೊಳಗೆ ಹೊಂದಿ ಬಾಳುವ ರೀತಿ. ಅದನ್ನು ಕಾಪಾಡಿಕೊಳ್ಳುವುದು ಮನುಷ್ಯನಕರ್ತವ್ಯ. ಇದನ್ನು ಪ್ರಾಣಿಪಕ್ಷಿ ಅಡವಿ ಮನುಷ್ಯರೆಲ್ಲ ಒಟ್ಟಿಗೆ ವಾಸ ಮಾಡುವ ‘ಸೋದರ ಸ್ನೇಹ‘ ಸಂಬಂಧವೆಂದು ಕಾಳಿದಾಸ ಹೇಳುತ್ತಾನೆ. ದಿನಾ ಒಂದು ಕೋಟಿ ಮರಣ ಈ ದೇಶದಲ್ಲಿ ಆಗುತ್ತದೆಂದು ಇಟ್ಟುಕೊಂಡರೆ ಪ್ರತಿ ಮರಣಕ್ಕೆ 3 ಕ್ವಿಂಟಾಲ್ ಸೌದೆಯಾದರೂ ಬೇಕಲ್ಲವೆ!

ಈ ಹರಣದ ತಿಳಿವು ಮನುಷ್ಯನಿಗಿರಬೇಕು. ಭೂಮಿಯೊಳಗೆ ಹೂಳುವ ಶವಸಂಸ್ಕಾರ ರೀತಿ ಭೂಮಿ ನೀರು ಹಾಗೂ ಮನುಷ್ಯನನನ್ನು ಬೆಸೆಯುವ ವಿಧಾನವೆಂದು ತಿಳಿಯಬೇಕು. ಈ ಅಪತಿಳಿವಳಿಕೆಯ ವೈದಿಕ ವಿಧಾನವೇ ನೆಲನೀರನ್ನು ಬರಿದು ಮಾಡಿದೆ. ನಮ್ಮ ಜನಪದ ಪರಂಪರೆ ಇದೇ ಬದುಕಿನದು. ಗೇದುಣ್ಣುವವನು ಬದುಕುತ್ತಾನಲ್ಲವೆ!. ಗಾಂಧಿ ಇದನ್ನೆ ಹೇಳುತ್ತಾರೆ. ಮನುಷ್ಯನ ಕೈಕಾಲುಗಳಿಗೆ ಕೆಲಸ ಕೊಡಿ. ಅವನ ಜೀವನ ಅವನು ಸಾಗಿಸುತ್ತಾನೆ. ಹಳ್ಳಿಯಲ್ಲಿನ ಸೋಮವಾರ ಕೆಲಸ ವಾರ ಕೆಲಸ ಮುಯ್ಯಿ ಆಳು ಕೆಲಸ ಇವೆಲ್ಲ ದೇವರ ಕೆಲಸ. ಆಧುನಿಕ ಬದುಕಿಗೆ ಇಂತವು ಮಾದರಿಗಳು. ಈಗಿನ ಸರ್ಕಾರಿ ಮಾದರಿಗಳು ಸೋಮಾರಿತನದ ಹಾಸಿಗೆಗಳು.

ದೇವರು ಎಲ್ಲೂ ಇಲ್ಲ. ಕಾಯಕದಲ್ಲಿದ್ದಾನೆ. ಅವನು ‘ಹೂವಿನಾಗ ಹುದುಗ್ಯಾನ ಮಾಲೆಯಾಗ ಮಲಗ್ಯಾನ ಮೊಗ್ಗಾಗ ಕಣ್ಣತೆರೆದಾನ’ ಎಂಬುದು ಪರಂಪರೆಯ ತಿಳಿವು. ಹೀಗೆ ಪರಂಪರೆ ಜ್ಞಾನ ಎಂಬುದು ತಿಳಿವಿನ ಜ್ಞಾನ. ಅರಿವಿಲ್ಲದ ಆಧುನಿಕತೆ ಎಂಬುದು ಮರೆವಿನ ಧ್ಯಾನ. ಅದು ಅರಿವಿನ ಕಡೆ ಚಲಿಸಬೇಕು. ಇದೇ ರೀತಿ ಅಂದು ನಮ್ಮ ಹಿರಿಯರು ಮದುವೆ ಇಟ್ಟು ವಿಳ್ಳೇಶಾಸ್ತ್ರ ಮಾಡಿ ಮುಗಿಸಿ ಲಗ್ನಪತ್ರಿಕೆ ಬರೆಸಲು ಹೋಗುತ್ತಿದ್ದರು. ಇಂದು ಹೆಸರು ಬಲ ಕೂಡಿದರೆ ಜಾತಕ ಬಂದರೆ ಮಾತ್ರ ಮದುವೆ ಎಂಬ ಅಪ ತಿಳಿವಳಿಕೆ ಆವರಿಸಿಬಿಟ್ಟಿದೆ. ಇದು ಪರಂಪರೆಯ ಜ್ಞಾನವನ್ನು ಹತ್ತಿಕ್ಕುವ ರೀತಿ. ಕುವೆಂಪು ಪ್ರಾರಂಭಿಸಿದ ಮಂತ್ರ ಮಾಂಗಲ್ಯ; ಆಗಿನ ಹಳ್ಳಿಗಳಲ್ಲಿನ ಮನೆಮುಂದಿನ ಸರಳ ಮದುವೆಗಳು ಇವೆಲ್ಲ ಆಡಂಬರಕ್ಕೆ ಧಾಟಿವೆ. ಕಲ್ಯಾಣ ಮಂದಿರಗಳು ಬೆಳೆದಂತೆಲ್ಲಾ ರೈತರ ನೇಣುಹಗ್ಗಗಳು ಉದ್ದವಾಗಿವೆ. ಕುವೆಂಪು ಉದಯವಾಣಿ ಪತ್ರಿಕಾ ಸಂದರ್ಶನವೊಂದರಲ್ಲಿ ಹೇಳಿದ್ದರು ನೀವು ಜನಪದ ಸಾಹಿತ್ಯವನ್ನು ಸಂಗ್ರಹಿಸಿ ಆದರೆ ಅದರಲ್ಲಿರುವ ಮೌಢ್ಯ ಅನಾಚಾರಗಳನ್ನು ಹೇಳದೆ ಇರಬೇಡಿ ಎಂದು. ಇದರರ್ಥ ಜನಪದ ಪರಂಪರೆಯೊಳಗಿನದೆಲ್ಲ ಅದರೊಳಗಿನ ಸಾಹಿತ್ಯ ವಿಸ್ತಾರಗಳೆಲ್ಲ ಜ್ಞಾನಗಳಲ್ಲ. ಅದರಲ್ಲಿ ಈ ದೇಶದ ವರ್ಣಚರಿತ್ರೆ, ವರ್ಗಚರಿತ್ರೆ ಅವಮಾನ ಚರಿತ್ರೆಗಳೆಲ್ಲವೂ ಇವೆ. ಸಮಾನತೆಯ ಕಡೆಯ ನಡಿಗೆಯೇ ಆಧುನಿಕ ಜೀವನದಧ್ಯೇಯ ಆದಾಗಬೇಕು. ಇಂತವು ಅವಶ್ಯಕತೆಗಳಾಗಿ ನಿಲ್ಲಬೇಕು.

Dr.Verghese-Kurienಇಂದು ಹಳ್ಳಿಗಳು ನಗರದ ಬಾಲಗಳಾಗಿವೆ ಎಂಬ ಗಾಂಧಿ ನುಡಿ ಈಗಲೂ ಪ್ರಸ್ತುತ. ಅನಕ್ಷರಸ್ಥರು ಅಂದು ಪರಂಪರೆಯ ಜ್ಞಾನ ಹೊಂದಿದ್ದರು. ಅದರೊಳಗೆ ಮೌಲ್ಯ ಗಳಿಸಿದ್ದರು. ಅಕ್ಷರ ಬಂತು. ಜ್ಞಾನ ಬಂತು. ಅದು ಮನುಷ್ಯ, ಮನುಷ್ಯರನ್ನು ದೂರ ಸರಿಸುವ ಜ್ಞಾನವಾಯಿತು. ನಗರ ಹಳ್ಳಿಗಳನ್ನು ವಿಭಜಿಸಿತು. ದೇಶವನ್ನು ವಿಭಜಿಸಿತು. ಮತಗಳನ್ನು ವಿಭಜಿಸಿತು. ಮನಸ್ಸುಗಳನ್ನು ವಿಭಜಿಸಿತು. ಅಂದು ರೈತ ಹಾಲನ್ನು ಅಮೃತವೆಂದು ಭಾವಿಸಿದ್ದ. ಮಾರುವುದು ಅವಮಾನವೆಂದೇ ತಿಳಿದಿದ್ದ. ಇಂದು ರೈತನೇ ಯೂರಿಯಾ ಬೆರೆಸಿ ಹಾಲು ಮಾರುತ್ತಾನೆ. ಮಾರಿ ಆಲ್ಕೋಹಾಲ್ ಕುಡಿಯುತ್ತಾನೆ. ಗಾಂಧಿ ಹೇಳುವ ಅಂದಿನ ರೈತನಿಗೆ ಮೋಸ ಮಾಡಲೂ ಬರುತ್ತಿರಲಿಲ್ಲ. ಸುಳ್ಳು ಹೇಳಲು ಬರುತ್ತಿರಲಿಲ್ಲ. ಈಗ ಪರಿಸ್ಥಿತಿ ಹಾಗಿಲ್ಲ. ಅದು ಅಕ್ಷರಬಲ್ಲ ಮನಸ್ಸುಗಳು ಈತನಿಗೆ ಕಲಿಸಿದ ವಿದ್ಯೆಯಾಗಿ ಪರಿಣಮಿಸಿದೆ. ಈ ದೇಶದಲ್ಲಿ ಇಂದು ಅನ್ಯಾಯ, ಅಪರಾಧ ಹಾಗೂ ಅವಂತರಗಳಾಗುತ್ತಿದ್ದರೆ ಅವೆಲ್ಲವೂ ಅಕ್ಷರಸ್ಥರು ಕಲಿಸಿರುವ ಪಾಠಗಳು.



ಅವು ಈಗ ಶಾಲೆ ಕಾಲೇಜುಗಳಲ್ಲಿ ಮಾತ್ರ ಉಳಿದಿಲ್ಲ. ಹಳ್ಳಿಗಳ ಮನಸ್ಸುಗಳ ಶಾಲೆಗಳಿಗೆ ದಾಟಿವೆ. ಪರಂಪರೆಯಜ್ಞಾನ ಇಂದು ನಗರದ ಜ್ಞಾನಗಳೊಡನೆ ಸ್ಪಂದಿಸಲಾಗದೆ ಸೋಲು ಒಪ್ಪಿಕೊಂಡಿದೆ. ಪುನಃ ನವಣೆ ಆರ್ಕ ವಾಪಸ್ಸು ಅಂಗಡಿಗಳಿಗೆ ಬಂದಂತೆ ಮಣ್ಣು ಸಹಜ ಕೃಷಿಗೆ ಧಾಟುವ ಕ್ರಿಯಾ ವಿಧಾನವಾಗುತ್ತಿರುವಂತೆ ಪುನಃ ಕಣ್ಣುಬಿಟ್ಟು ಪರಂಪರೆಯನ್ನು ಬಲಪಡಿಸುತ್ತಿರುವಂತೆ ಮನುಷ್ಯನ ಆಹಾರ, ಹಣ್ಣು, ಪಾನೀಯ, ಹಾಲು, ಮಜ್ಜಿಗೆಗಳೆಲ್ಲವನ್ನು ಪುನಃ ಶುದ್ಧೀಕರಿಸಿಕೊಳ್ಳಬೇಕಿದೆ. ಈ ಶುದ್ಧೀಕರಣವೇ ಗೋಳೀಕರಣದೊಳಗಿನ ಗೋಳನ್ನು ಬಿಡಿಸಿಕೊಳ್ಳುವ ವಿಧಾನ. ಇಂದು ಕುರಿಯನ್, ಎಂ.ಎಸ್. ಸ್ವಾಮಿನಾಥನ್. ನಜೀರ ಸಾಬರು ಎಲ್ಲರೂ ಸೋತುಹೋಗಿದ್ದಾರೆ. ನಮ್ಮ ಪರಂಪರೆಯ ಜ್ಞಾನ ನಂಬಿದ ರೈತರು ಮಾತ್ರ ಗೆಲುವಿನತ್ತ ಸಾಗುತ್ತಿದ್ದಾರೆ. ಇದೇ ಆಧುನಿಕ ಜೀವನದಲ್ಲಿ ಜಾನಪದದ ಅವಶ್ಯಕತೆ. ಸ್ವತಂತ್ರ ಬಂದು ಸುಮಾರು ಮುಕ್ಕಾಲು ಶತಮಾನ ಧಾಟುವಾಗ ನೆಲಜಲಕ್ಕೆ ಅದನ್ನು ನಂಬಿದ ಬದುಕಿಗೆ ಬಲವಾದ ಪೆಟ್ಟು ಬಿದ್ದಿದೆ. ಈ ಪೆಟ್ಟುಜಗವು ನಾಗರಿಕತೆಯೆಂಬ ಅಮಲಿನಲ್ಲಿ ಬಿದ್ದು ಹೊರಳಾಡಿದ ಪೆಟ್ಟು. ಅದರಿಂದ ಹೇಗೆ ಬಿಡಿಸಿಕೊಳ್ಳುತ್ತಾ ಪರಂಪರೆಯ ಜ್ಞಾನಕ್ಕೆ ಹೊಂದಿಕೊಳ್ಳಬೇಕೆಂಬುದೇ ಈಗಿನ ಸವಾಲು.

ಬೆಂಕಿಯಲ್ಲಿ ಅರಳಿದ `ಹೂ’ ಗೋದಾವರಿ ಗಂಟಿಚೋರ

-ಅರುಣ್ ಜೋಳದಕೂಡ್ಲಿಗಿ.
godavari gantichor (2)

ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಬೆಂಡವಾಡ ಎಂಬ ಪುಟ್ಟಹಳ್ಳಿಯ ಗೋದಾವರಿ ಗಂಟಿಚೋರ ದೊಡ್ಡ ಹೆಸರೇನಲ್ಲ. ಯಾವ ಹೋರಾಟಗಾರರ ಪಟ್ಟಿಯಲ್ಲಿಯೂ ಅವರ ಹೆಸರು ಸಿಗುವುದಿಲ್ಲ, ಬದಲಾಗಿ ತೀರಾ ಸಾಮಾನ್ಯ ಸಾದಾ ಸೀದಾ ಮಹಿಳೆ. ವಯಸ್ಸು ಮಾಗಿದರೂ, ಗಂಟಿಚೋರ ಸಮುದಾಯವನ್ನು ಅಪರಾಧಿಗಳಂತೆ ಕಾಣುವ ಸಮಾಜದ ಬಗೆಗಿನ ಸಿಟ್ಟು ಅವರನ್ನು ಹೆಚ್ಚು ಕ್ರಿಯಾಶೀಲವಾಗಿಟ್ಟಿದೆ. 65 ವರ್ಷದ ಆಸುಪಾಸಿನ ಗೋದಾವರಿ ಅವರು ನಾಲ್ಕೈದು ವರ್ಷಗಳಿಂದ ತಮ್ಮ ಊರಾದ ಬೆಂಡವಾಡದಲ್ಲಿ ನೆಲೆಸಿ ತನ್ನ ಗಂಟಿಚೋರ ಸಮುದಾಯದಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಬದುಕು ಕಲಿಸಿದ ಪಾಠವೇ ಅವರಲ್ಲಿ ಹೋರಾಟದ ಪ್ರಜ್ಞೆಯನ್ನು ರೂಪಿಸಿದೆ. ನಮ್ಮ ಹಕ್ಕುಗಳನ್ನು ಹೋರಾಟ ಮಾಡಿಯೇ ಪಡೆಯಬೇಕಿದೆ ಎನ್ನುವ ಸತ್ಯವನ್ನು ಅವರು ಅರಿತಿದ್ದಾರೆ. ಈ ಅರಿವನ್ನು ಸಮುದಾಯದ ಮಹಿಳೆಯರಲ್ಲಿ ಯುವ ಜನತೆಯಲ್ಲಿ ಬಿತ್ತಲು ಶ್ರಮಿಸುತ್ತಿದ್ದಾರೆ.

ಗದಗಿನ ಬೆಟಗೇರಿ ಸೆಟ್ಲಮೆಂಟಿನ ಗಂಟಿಚೋರ ಸಮುದಾಯವನ್ನು ಸಂಘಟಿಸುತ್ತಿರುವ ಬಾಲೇ ಹೊಸೂರು ಸುರೇಶ ಮತ್ತು ರಾಮಚಂದ್ರಪ್ಪ ಹಂಸನೂರು ಅವರ ಜತೆ ಮಾತನಾಡುವಾಗ ಆಕಸ್ಮಿಕವಾಗಿ ಗೋದಾವರಿ ಅವರ ಬಗ್ಗೆ ಮಾಹಿತಿ ಸಿಕ್ಕಿತ್ತು. ಅವರ ಮಾತಿನಲ್ಲಿಯೇ ಗೋದಾವರಿ ಅವರ ಸಮುದಾಯದ ಬಗೆಗಿನ ಕಾಳಜಿಯ ಬಗ್ಗೆ ಹೇಳಿದ್ದರು. ಆಗಲೇ ಗೋದಾವರಿ ಅವರನ್ನು ಸಂಪರ್ಕಿಸಿ ಮಾತನಾಡಿಸಬೇಕೆಂಬ ಆಸೆ ಹುಟ್ಟಿಕೊಂಡಿತ್ತು.

ಗೋದಾವರಿ ಹೆಸರ ಜತೆ ಸೇರಿದ `ಗಂಟಿಚೋರ’ ಪದವನ್ನು ಅಂಟಿಸಿಕೊಂಡ ಸಮುದಾಯದ ಬಗ್ಗೆ ಮೊದಲೆ ಸಂಕ್ಷಿಪ್ತವಾಗಿ ಹೇಳಿಬಿಡುತ್ತೇನೆ.

ಮುಂಬೈ ಕರ್ನಾಟಕದ ಗದಗ, ಹುಬ್ಬಳ್ಳಿ, ಬಾಗಲಕೋಟೆ, ಬಿಜಾಪುರ ಭಾಗದಲ್ಲಿ ನೆಲೆಸಿದ ಅಂದಾಜು ಇಪ್ಪತ್ತು ಸಾವಿರದಷ್ಟು ಜನಸಂಖ್ಯೆ ಇರಬಹುದಾದ ಒಂದು ಪುಟ್ಟ ಸಮುದಾಯವೆ `ಗಂಟಿಚೋರ’. ಈ ಸಮುದಾಯದ ಹಿರಿಯರು ಹೇಳಿದಂತೆ, ಬ್ರಿಟೀಶರು ದೇಶದ ಸಂಪತ್ತನ್ನು ಲೂಟಿ ಮಾಡಿ ಸಂಗ್ರಹಿಸಿಟ್ಟ ಸ್ಥಳಗಳಿಂದ ದೇಶೀಯ ಸಂಪತ್ತನ್ನು ಮರು ಲೂಟಿ ಮಾಡಿ ದೇಶಿಯ ಸಂಸ್ಥಾನಿಕರಿಗೆ ಹಂಚಿ ಒಂದಷ್ಟನ್ನು ಪಡೆದು ಜೀವನ ನಿರ್ವಹಣೆ ಮಾಡುವ ಮೂಲಕ ರೂಪಗೊಂಡ ಸಮುದಾಯವಿದು.
ಅಂದು ದೇಶಭಕ್ತಿಯ ಭಾಗವಾಗಿ ಹುಟ್ಟಿಕೊಂಡ ಲೂಟಿಕೋರತನ, ಕ್ರಮೇಣ ಸಮುದಾಯದ ವೃತ್ತಿಯಾಯಿತು. ಹಾಗಾಗಿ ಗಂಟಿಚೋರ್ ಎನ್ನುವ ಹೆಸರೇ ಈ ಸಮುದಾಯಕ್ಕೆ ನಿಂತಿತು. ಈ ಸಮುದಾಯದ ಬಗ್ಗೆ ಶಿಶುನಾಳ ಶರೀಫರು ತಮ್ಮ ತತ್ವಪದಗಳಲ್ಲಿ ಉಲ್ಲೇಖಿಸುತ್ತಾರೆ. `ಬಿದ್ದೀಯಬೇ ಮುದುಕಿ ಬಿದ್ದೀಯಬೇ’ ಎಂಬ ಪದದಲ್ಲಿ `ಬುಟ್ಟಿಯಲಿ ಪತ್ತಲಿಟ್ಟಿ/ಅದನು ಉಟ್ಟ ಹೊತ್ತೊಳು ಜೋಕಿ;/ಕೆಟ್ಟಗಂಟಿ ಚೌಡೇರು ಬಂದು/ಉಟ್ಟುದ್ದನ್ನೆ ಕದ್ದಾರ ಜೋಕಿ/ಬುದ್ದಿಗೇಡಿ ಮುದುಕಿ ನೀ ಬಿದ್ದೀಯಬೆ’ ಎಂದಿದ್ದಾರೆ. `ಕೆಟ್ಟಗಂಟಿ ಚೌಡೇರು’ ಬಗ್ಗೆ ಶರೀಫರು ಮುದುಕಿಗೆ ಎಚ್ಚರಿಸುವ ದಾಟಿಯಲ್ಲಿದೆ. ಇದೀಗ ಶಿಗ್ಗಾಂವ ಸಮೀಪದ ಶಿಶುವಿನಾಳ ಭಾಗದ ಬಾಲೆಹೊಸೂರು ಗ್ರಾಮದಲ್ಲಿ ಗಂಟಿಚೋರ ಸಮುದಾಯದ ನೂರರಷ್ಟು ಮನೆಗಳಿವೆ. ಶರೀಫರು ಉಲ್ಲೇಖಿಸುವ ಹುಲುಗೂರು (ಹುಲುಗುರ ಸಂತಿ) ಕೂಡ ಈ ಊರಿನ ಸಮೀಪವಿದೆ. ಹಾಗಾಗಿ ಶರೀಫರು ಉಲ್ಲೇಖಿಸುವ `ಗಂಟಿ ಚೌಡೇರು’ ಬಾಲೆಹೊಸೂರಿನ ಗಂಟಿಚೋರ ಸಮುದಾಯ.

ಹೀಗಿರುವ ಗಂಟಿಚೋರ ಸಮುದಾಯವನ್ನು ಬ್ರಿಟೀಶ್ ಆಡಳಿತದಲ್ಲಿ ಕ್ರಿಮಿನಲ್ ಟ್ರೈಬ್ಸ್ ಪಟ್ಟಿಗೆ ಸೇರಿಸಿ ಇವರನ್ನು ನಿಯಂತ್ರಿಸಲು `ಸೆಟ್ಲಮೆಂಟ್’ ಎಂಬ ದೊಡ್ಡ ಜೈಲಲ್ಲಿ ಬಂಧಿಸಿದ್ದರು. ಇವರನ್ನು ಹದ್ದಿನ ಕಣ್ಣಿನಲ್ಲಿ ಕಾವಲು ಕಾಯುತ್ತಾ ಚಿತ್ರ ಹಿಂಸೆಗೆ ಒಳಗುಮಾಡಿದ್ದರು. ಪೌಜುದಾರ, ಪೋಲಿಸರಿಂದ ನಿರಂತರ ಹಿಂಸೆಗೆ ಒಳಗಾದ ಈ ಪುಟ್ಟ ಗಂಟಿಚೋರ ಸಮುದಾಯ ಕಾಲಾನಂತರದಲ್ಲಿ ಯಾರೇ ಕಳ್ಳತನ ಮಾಡಿದರೂ ಇವರನ್ನೇ ಹಿಂಸಿಸುತ್ತಿದ್ದ ಪೋಲಿಸರ ದಬ್ಬಾಳಿಕೆಗೆ ನಲುಗಿತು. ದಿನವೂ ಭಯದ ನೆರಳಲ್ಲಿ ಬದುಕು ನೂಕಬೇಕಾಯಿತು. ಇದರಿಂದ ಹೊರಬರಲು ಈ ಸಮುದಾಯ ತನ್ನ ಜಾತಿಯ ಹೆಸರನ್ನೆ ಬದಲಿಸಿಕೊಂಡು ಬೇರೆ ಬೇರೆ ಹೆಸರುಗಳಲ್ಲಿ ಹರಿದು ಹಂಚಿಹೋಗಿದ್ದಾರೆ.
samudaya sangataneya sabhe

ಮರಾಠಿಯ ದಲಿತ ಲೇಖಕ ಲಕ್ಷ್ಮಣ ಗಾಯಕವಾಡರ ಆತ್ಮಕತೆ `ಉಚಲ್ಯಾ’ದಲ್ಲಿ ಈ ಸಮುದಾಯವನ್ನು ಕಣ್ಣಿಗೆ ಕಟ್ಟುವಂತೆ ಉಸಿರು ಬಿಗಿ ಹಿಡಿದು ಓದುವಂತೆ ಚಿತ್ರಿಸಿದ್ದಾರೆ. ಮಹರಾಷ್ಟ್ರದಲ್ಲಿ ಭಾಮ್ಟೆ, ಉಚಲ್ಯಾ ಎಂದು ಕರೆಯುವ ಈ ಸಮುದಾಯವೇ ಕರ್ನಾಟಕದಲ್ಲಿ ಗಂಟಿಚೋರ ಎಂದು ಕರೆಯಲ್ಪಡುತ್ತದೆ. ಮೂಲತಃ ಆಂದ್ರದಿಂದ ವಲಸೆ ಬಂದ ಈ ಸಮುದಾಯ ಸ್ವತಂತ್ರಾ ನಂತರ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿದೆ. ಇಂತಹ ಸಮುದಾಯದಲ್ಲಿ ಶಿಕ್ಷಣ ಪಡೆದು, ಡಿ ದರ್ಜೆಯ ನೌಕರಿ ಗಿಟ್ಟಿಸಿಕೊಂಡ ಮೊದಲ ತಲೆಮಾರಿನ ಮಹಿಳೆ ಗೋದಾವರಿ. ಇದೀಗ ನಿವೃತ್ತಿ ನಂತರ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಜೀವನ ಮುಡಿಪಿಟ್ಟ ಅವರ ಬದುಕೇ ಒಂದು ಹೋರಾಟ.

ಗೋದಾವರಿ ಪುಟ್ಟ ಹುಡುಗಿಯಾಗಿದ್ದಾಗ ಗಂಟಿಚೋರ ಸಮುದಾಯ ದಟ್ಟ ದಾರಿದ್ರ್ಯ ಸ್ಥಿತಿಯಲ್ಲಿತ್ತು. ಈ ದಾರಿದ್ರ್ಯವೇ ಕುಲಕಸಬಾಗಿದ್ದ `ತುಡುಗು’(ಕಳ್ಳತನ) ಮಾಡಲು ಹಚ್ಚುತ್ತಿತ್ತು. ತುಡುಗು ಮಾಡುವ ಇವರ ಚಾಕಚಕ್ಯತೆ ಬೆರಗು ಹುಟ್ಟಿಸುವಂತಿತ್ತು. ತುಡುಗುತನದ ಗೌಪ್ಯತೆ ಕಾಪಾಡಲು ತಮ್ಮದೇ `ತುಡುಗು ಭಾಷೆ’ಯನ್ನೂ ರೂಪಿಸಿಕೊಂಡಿದ್ದರು. ಇದಕ್ಕೆ `ಹನುಮಂತನ’ ದೈವ ಬೆಂಬಲವೂ ಇತ್ತು. ತುಡುಗಿಗೆ ಮುನ್ನ ಹನುಮಂತನ ಅಭಯದ `ಹೂ’ ಬೀಳದೆ ಅವರು ಹೆಜ್ಜೆ ಇಡುತ್ತಿರಲಿಲ್ಲ. ತುಡುಗು ಮಾಡಿ ಸಿಕ್ಕಾಗ ಪೋಲೀಸರ ಹೊಡೆತ ಹಿಂಸೆ ಅವರ ಕುಟುಂಬವನ್ನು ದುಃಖದ ಕಡಲಲ್ಲಿ ತೇಲಿಸುತ್ತಿತ್ತು. ಇಂತಹ ಎಲ್ಲಾ ಸಂಗತಿಗಳನ್ನು ಕಣ್ತುಂಬಿಕೊಳ್ಳುತ್ತಲೇ ಗೋದಾವರಿ ಅವರು ಬೆಂಡವಾದಲ್ಲಿ ತನ್ನ ಬಾಲ್ಯ ಕಳೆದರು. ಮನೆ ಪರಿಸ್ಥಿತಿ ಸಹಕರಿಸದಿದ್ದರೂ 2 ನೇ ತರಗತಿಯವರೆಗೆ ಶಾಲೆಗೆ ಹೋಗುತ್ತಿದ್ದ ಹುಡುಗಿಯನ್ನು ಶಾಲೆ ಬಿಡಿಸಿ ಆಡು ಕುರಿ ಕಾಯಲು ಹಚ್ಚಿದರು. ಆಗ ಗೋದಾವರಿ ಬಿಸಿಲು ಮಳೆ ಚಳಿಯೆನ್ನದೆ ಆಡುಕಾಯುವ ಹುಡುಗಿಯಾಗಿ ಹೊಲ, ಕಾಡುಮೇಡುಗಳನ್ನು ಅಲೆದಳು. ಆದಾಗ್ಯೂ ಓದಬೇಕೆನ್ನುವ ಒಡಲೊಳಗಣ ಕಿಚ್ಚು ನಿಧಾನಕ್ಕೆ ಜಾಗೃತವಾಗತೊಡಗಿತು.

samudaya sangataneya sabheಇಂತಹ ಸಂದರ್ಭದಲ್ಲಿ ಹತ್ತು ವರ್ಷ ತುಂಬುವ ಹೊತ್ತಿಗಾಗಲೆ ಮನೆಯವರು ಮದುವೆಗೆ ತಯಾರಿ ನಡೆಸಿದರು. ಮದುವೆಯಾಗಿ ಮಕ್ಕಳಿದ್ದ ಮಹರಾಷ್ಟ್ರದ ಗಂಡಿನೊಂದಿದೆ ಬಾಲ್ಯ ವಿವಾಹ ನಡೆಯಿತು. ಕಿತ್ತು ತಿನ್ನುವ ಬಡತನದ ನೆರಳಲ್ಲಿ ಈ ಮದುವೆಯನ್ನು ತಿರಸ್ಕರಿಸುವ ಶಕ್ತಿಯಾಗಲಿ ತಿಳುವಳಿಕೆಯಾಗಲಿ ಗೋದಾವರಿಗಿನ್ನೂ ಬಂದಿರಲಿಲ್ಲ. ಅದೇಕೋ ಹೊಂದಾಣಿಕೆಯಾಗದೆ ಗೋದಾವರಿ ಮದುವೆಯಾದವನ ಜತೆ ಬಾಳಲಿಕ್ಕಾಗದೆ ತನ್ನೂರಲ್ಲೇ ಉಳಿದರು. ಈ ಹೊತ್ತಿನಲ್ಲಿ ಕಲಿಯಬೇಕೆನ್ನುವ ತನ್ನೊಳಗಿನ ಹಂಬಲ ಮತ್ತೆ ಚಿಗುರೊಡೆಯಿತು. ಇಂತಹ ಸಂದರ್ಭದಲ್ಲಿ ಗೋದಾವರಿಯ ತಾಯಿಯೆ ಬೆಳಗಾವಿಯ ಅನಾಥ ಹೆಣ್ಣುಮಕ್ಕಳ ರಕ್ಷಣೆಯ ತಾಣವಾಗಿದ್ದ ಸ್ತ್ರೀಸೇವಾ ನಿಕೇತನಕ್ಕೆ ಸೇರಿದರು.

ಹೀಗಿರುವಾಗ ಇಲ್ಲಿ ಆಶ್ರಯ ಪಡೆದ ಹುಡುಗಿಯರನ್ನು ಅವರ ಆಸಕ್ತಿಗನುಸಾರವಾಗಿ ಬೇರೆ ಬೇರೆ ಜಿಲ್ಲಾ ಸ್ತ್ರೀಸೇವಾನಿಕೇತನ ಕೇಂದ್ರಗಳಿಗೆ ವರ್ಗ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಬಳ್ಳಾರಿಯ ಹಾಸ್ಟೆಲ್ ಚೆನ್ನಾಗಿದೆ, ಓದಿಸುತ್ತಾರೆ, ಕಸೂತಿ ಟೈಲರಿಂಗ್ ಕಲಿಸುತ್ತಾರೆ, ವಾರ್ಡನ್ ಒಳ್ಳೆಯವರು ಇತ್ಯಾದಿ ಸಂಗತಿಗಳ ಕೇಳಿ ತಿಳಿದಿದ್ದ ಗೋದಾವರಿ ಬಳ್ಳಾರಿಯನ್ನು ಆಯ್ಕೆ ಮಾಡಿಕೊಂಡು ವರ್ಗವಾದರು. ಬಳ್ಳಾರಿಗೆ ಬಂದಂದ್ದು ಕೂಡ ಗೋದಾವರಿ ಅವರ ಜೀವನದಲ್ಲಿ ಮತ್ತೊಂದು ತಿರುವು. ಕಾರಣ ಬಳ್ಳಾರಿಯ ಸ್ತ್ರೀಸೇವಾ ನಿಕೇತನದಲ್ಲಿಯೇ ಅರ್ಧಕ್ಕೆ ನಿಂತ ಶಿಕ್ಷಣವನ್ನು ಮುಂದುವರೆಸಿದರು. ಇನ್ನು ಏಳನೆ ತರಗತಿ ಮುಗಿಸುವ ಹೊತ್ತಿಗೆ ಡಿ ದರ್ಜೆ ನೌಕರರೊಬ್ಬರ ಅಕಾಲಿಕ ಮರಣದಿಂದ ತೆರವಾದ ಪಿ.ಸಿ.ಡಬ್ಲು ಎನ್ನುವ (ಪ್ಯಾಕಿಂಗ್ ಕ್ಲೀನಿಂಗ್ ವಾಚಿಂಗ್) ಎಂಬ ನೌಕರಿಯೂ ಸಿಕ್ಕಿತು.
lkmana

ಗೋದಾವರಿ ಅವರು ಕೆಲಸ ಮಾಡುತ್ತಿದ್ದ ಸ್ತ್ರೀ ಸೇವಾನಿಕೇತನ ಬುದ್ಧಿಹೀನ ಹುಡುಗಿಯರು, ಗಂಡ ಸತ್ತವರು, ಜೈಲುಗಳಿಂದ ಬಿಡುಗಡೆಗೊಂಡ ತನ್ನವರಿಂದ ತಿರಸ್ಕøತರಾದ ಮಹಿಳೆಯರು, ಮನೆಬಿಟ್ಟು ಪ್ರೀತಿಸಿ ಮದುವೆಯಾಗಿ ಹುಡುಗರಿಂದ ವಂಚಿತರಾದವರು ಹೀಗೆ ಅನಾಥ ಮಹಿಳೆಯರಿಗೆ ಆಶ್ರಯ ತಾಣವಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಸ್ತ್ರೀ ಸೇವಾನಿಕೇತನದಲ್ಲಿ ಇಂತಹ ನೊಂದ ಮಹಿಳೆಯರ ಸಂಗಾತಿಯಾಗಿ ಗೋದಾವರಿ ಅವರು ಕೆಲಸ ಮಾಡಿದರು. ಒಂದು ರೀತಿಯಲ್ಲಿ ಪರಿತ್ಯಕ್ತ ಅನಾಥ ಮಹಿಳೆಯರಿಗೆ ತಾಯಿಯ ಹಾಗೆ ಅವರ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತರು. ಯಾವ ಬಗೆಯ ನಿರ್ಗತಿಕ ಸ್ಥಿತಿಯ ಕಾರಣಕ್ಕೆ ಗೋದಾವರಿ ಬೆಳಗಾವಿಯ ಸ್ತ್ರೀ ಸೇವಾನಿಕೇತನದಲ್ಲಿ ಸೇರಿದ್ದರೋ ಅಂಥಹದ್ದೇ ಅನಾಥ ಮಹಿಳೆಯರ ಪೋಷಣೆಯ ಕೆಲಸಕ್ಕಾಗಿಯೇ ಅವರು ತನ್ನ ಜೀವನವನ್ನು ಮುಡಿಪಾಗಿಟ್ಟರು.

ಗೋದಾವರಿ ಅವರಿಗೆ ಕೆಲಸ ಕೊಟ್ಟು ಆಶ್ರಯ ನೀಡಿದವರು ಆಗಿನ ಸ್ತ್ರೀ ಸೇವಾನಿಕೇತನದ ವಾರ್ಡನ್ ಆಗಿದ್ದ ಕಾವೇರಿ. ಇವರು ಕೊಡಗಿನ ಜನರಲ್ ಕಾರಿಯಪ್ಪ ಅವರ ಸೊಸೆ. ಇವರು ಮಹಿಳೆಯರಲ್ಲಿ ಸದಾ ದೈರ್ಯ ತುಂಬುವ, ಉತ್ಸಾಹ ಹೆಚ್ಚಿಸುವ ಮಾತುಗಳನ್ನು ಆಡುತ್ತಿದ್ದರು. ಅವರು ಮಹಿಳೆಯರ ಒಳಗೆ ಒಂದು ಬಗೆಯ ದೈರ್ಯವನ್ನು ತುಂಬುವ ಮಾತುಗಳನ್ನು ಆಡುತ್ತಿದ್ದರು. ಜಗತ್ತಿನ ಮಹಿಳಾ ಸಾಧಕಿಯರ ಬಗ್ಗೆ ಪರಿಚಯಿಸುತ್ತಿದ್ದರು. ಮಹಿಳೆಯರಿಗಿರುವ ಸಂವಿಧಾನಿಕ ಹಕ್ಕುಗಳ ಬಗ್ಗೆ ಪರಿಚಯಿಸುತ್ತಿದ್ದರು. ಈ ಮಾತುಗಳನ್ನು ಕೇಳುತ್ತಾ ಗೋದಾವರಿ ಒಳಗೊಂದು ಜಾಗೃತ ಮನಸ್ಸು ರೂಪುಗೊಳ್ಳತೊಡಗಿತು. ಈ ಮೂಲಕ ಅಂಬೇಡ್ಕರ್ ಮೊದಲಾದವರ ವಿಚಾರಗಳು ಓದದೆಯೂ ಗೋದಾವರಿ ಅವರ ಒಳಗೆ ವೈಚಾರಿಕತೆಯನ್ನು ರೂಪಿಸತೊಡಗಿತು.
ಕೆಟ್ಟ ಕನಸಿನಂತಿರುವ ಬಾಲ್ಯವಿವಾಹದ ಬಗ್ಗೆ ಗೋದಾವರಿ ಹೆಚ್ಚು ಮಾತನಾಡುವುದಿಲ್ಲ. ಆ ನೆನಪನ್ನು ಅಳಿಸಿಕೊಂಡಂತೆ ಕಾಣುತ್ತದೆ. ಈ ದುಸ್ವಪ್ನದ ಪರಿಣಾಮ ಗೋದಾವರಿ ಬದುಕಿನುದ್ದಕ್ಕೂ ಒಂಟಿಯಾಗಿಯೇ ಉಳಿದರು. ಚಿಕ್ಕಂದಿನಲ್ಲೆ ತಂದೆ ತೀರಿದ್ದರಿಂದ ಮನೆಯ ಜವಾಬ್ದಾರಿ ಗೋದಾವರಿ ಮೇಲೆ ಬಿತ್ತು. ಹಾಗಾಗಿ ತನ್ನ ತಮ್ಮ ತಂಗಿಯರ ಬದುಕು ರೂಪಿಸುವುದರಲ್ಲಿ ತನ್ನ ಆಯಸ್ಸು ಕಳೆದ ಇವರು ಸ್ತ್ರೀಸೇವಾನಿಕೇತನವನ್ನೆ ತನ್ನ ಮನೆಯೆಂದೂ, ಇಲ್ಲಿಗೆ ಬರುವ ಅನಾಥ ಹೆಣ್ಣುಮಕ್ಕಳನ್ನೆ ಮಕ್ಕಳಂತೆಯೇ ಭಾವಿಸಿ ಬದುಕು ಸವೆಸಿದ್ದಾರೆ. ಇಲ್ಲಿ ಬೆಳೆದ ಹೆಣ್ಣುಮಕ್ಕಳು ಓದಿ ಕೆಲಸಕ್ಕೆ ಸೇರಿದಾಗಲೂ, ಅವರು ಮೆಚ್ಚಿದ ಹುಡುಗರನ್ನು ಮದುವೆಯಾದಾಗಲೂ ಗೋದಾವರಿ ತುಂಬಾ ಖುಷಿ ಪಡುತ್ತಿದ್ದರಂತೆ. ಅಂತೆಯೇ ಹುಡುಗರ ಆಯ್ಕೆಯಲ್ಲಿ ಎಚ್ಚರದಿಂದಿರಿ ಎಂಬ ಕಿವಿಮಾತನ್ನೂ ಹೇಳುತ್ತಿದ್ದರಂತೆ. ಒಂದು ರೀತಿಯಲ್ಲಿ ಬದುಕೇ ಇಲ್ಲ ಎನ್ನುವ ಸ್ಥಿತಿಯಲ್ಲಿ ಇಲ್ಲಿಗೆ ಬಂದು ಸೇರುತ್ತಿದ್ದ ಮಹಿಳೆಯರು ರೆಕ್ಕೆ ಬಲಿತ ಹಕ್ಕಿಗಳಂತೆ ಗೂಡಿನಿಂದ ಹೊರ ಹೋಗಿ ಸ್ವಂತ ಜೀವನ ಮಾಡುತ್ತಿದ್ದರು. ಇಂತವರನ್ನು ನೋಡಿದಾಗಲೆಲ್ಲಾ ಗೋದಾವರಿ ಸಂತಸದ ಬುಗ್ಗೆಯಾಗುತ್ತಿದ್ದರಂತೆ.

ಗೋದಾವರಿ ನಿವೃತ್ತಿ ಹೊಂದಿದಾಗ ಬಂದ ಹಣದಲ್ಲಿ ಬೆಂಡವಾಡದಲ್ಲಿ ಹೊಸ ಮನೆಯೊಂದನ್ನು ಕಟ್ಟಿಸುತ್ತಿದ್ದಾರೆ. ಹಣ ಸಾಲದೆ ಮನೆಯ ಕೆಲಸವು ಇನ್ನೂ ಬಾಕಿ ಉಳಿದಿರುವುದರಿಂದ ಮನೆಯ ಕಾಂಪೊಂಡಿನೊಳಗಿನ ಟೆಂಟಿನಲ್ಲಿ ಸದ್ಯಕ್ಕೆ ವಾಸ ಮಾಡುತ್ತಿದ್ದಾರೆ. ಗೋದಾವರಿ ಅವರು ಜೀವನ ಪೂರ್ತಿ ಬಳ್ಳಾರಿಯಲ್ಲಿ ಸೇವೆ ಸಲ್ಲಿಸಿದರು. ಹೌಸಿಂಗ್ ಬೋರ್ಡಿನಲ್ಲಿ ಕಂತುಕಟ್ಟಿ ಸ್ವಂತಕ್ಕೆ ಮಾಡಿಕೊಂಡ ಪುಟ್ಟ ಮನೆಯೂ ಇಲ್ಲಿದೆ. ಹೀಗಿರುವಾಗ ಅವರು ತಾನು ಬೆಳೆದ ತನ್ನ ಹುಟ್ಟೂರಾದ ಬೆಂಡವಾಡಕ್ಕೆ ಮರಳಿ ಬಂದು ನೆಲೆಸಿದ್ದೂ ಕೂಡ ಪ್ರತಿಭಟನೆಯ ಸಂಕೇತವೆ ಎನ್ನುತ್ತಾರೆ.

ನೀವು ಬಳ್ಳಾರಿಯಿಂದ ಹಳ್ಳಿಗೆ ಮರಳಿದ್ಯಾಕೆ ಎಂದರೆ, `ನನ್ನ ತಂದೆಯ ಊರಿನಲ್ಲಿಯೇ ನೆಲೆಯೂರಬೇಕೆಂಬ ಆಸೆ ಒಂದಾದರೆ ನಮ್ಮ ಗಂಟಿಚೋರ ಸಮುದಾಯವನ್ನು ಜಾಗೃತಗೊಳಿಸಬೇಕು. ನಿರಂತರ ಅನ್ಯಾಯಕ್ಕೆ ಒಳಗಾಗುವ ಈ ಸಮುದಾಯದಲ್ಲಿ ಹೋರಾಟದ ಮನೋಭಾವವನ್ನು ಮೂಡಿಸಬೇಕು ಎನ್ನುತ್ತಾರೆ. ಗಂಟಿಚೋರ ಸಮುದಾಯದಲ್ಲೂ ಕೂಡ ಸ್ಥಿತಿವಂತರಿದ್ದಾರೆ ಎನ್ನುವುದು ಬೇರೆ ಮೇಲಿನ ಜಾತಿಗಳವರಿಗೆ ತಿಳಿಯಲಿ ಎಂದೇ ನನ್ನ ನನ್ನ ಹೊಸ ಮನೆಯನ್ನು ಇಲ್ಲಿ ಕಟ್ಟಿಸಿದ್ದು. ಈಗ ನನ್ನ ಮನೆಯೇ ಇಲ್ಲಿನ ಗಂಟಿಚೋರ ಸಮುದಾಯದ ಹೋರಾಟಕ್ಕೆ ಒಂದು ಕೇಂದ್ರವಾಗಿದೆ. ನಮ್ಮ `ಗಂಟಿಚೋರ ಸಮಾಜ ಕ್ಷೇಮಾಭಿವೃದ್ಧಿ ಸೇವಾ ಸಂಘ’ ರೂಪುಗೊಂಡದ್ದು ಈ ಮನೆಯಲ್ಲಿಯೇ ಎನ್ನುತ್ತಾರೆ.

ಹಿಂದೆ ಗಂಟಿಚೋರ ಸಮುದಾಯದವರು ಪಟ್ಟ ಪಡಿಪಾಟಲನ್ನು ಹೇಳುವಾಗ ಗೋದಾವರಿ ಅವರ ಕಣ್ಣು ನೀರಾಗುತ್ತವೆ. ತನ್ನ ಸಮುದಾಯ ಪಟ್ಟಿರಬಹುದಾದ ಪಾಡನ್ನು ಹೇಳುವಾದ ದುಃಖದ ಕಡಲೊಡೆದಂತೆ ಬಿಕ್ಕಳಿಸುತ್ತಾರೆ. ಈಚೆಗೆ ಬಾಲೆಹೊಸೂರಲ್ಲಿ ಸವರ್ಣೀಯರ ಗಲಬೆಯಲ್ಲಿ ಗಂಟಿಚೋರ ಸಮುದಾಯದ ವ್ಯಕ್ತಿಯ ಕೊಲೆಯಾಗಿ ಸಮುದಾಯವನ್ನು ಹಿಂಸೆಗೆ ಒಳಗುಮಾಡಿದ್ದನ್ನು ವಿರೋಧಿಸಿ ಈ ಸಮುದಾಯ ಒಗ್ಗಟ್ಟಾಗಿ ಪ್ರತಿಭಟಿಸಿತು. ಬೆಳಗಾವಿಯ ಅಧಿವೇಶನ ನಡೆಯುವ ಸಂದರ್ಭದಲ್ಲಿ ಈ ಸಮುದಾಯ ಒಟ್ಟಾಗಿ ತನ್ನ ಪ್ರತಿರೋಧವನ್ನು ದಾಖಲಿಸಿತು. ಈ ಸಂದರ್ಭದಲ್ಲಿ ಗೋದಾವರಿ ಅವರು ಸಮುದಾಯದ ಪ್ರತಿನಿಧಿಯಾಗಿ ಗಟ್ಟಿಧ್ವನಿಯಲ್ಲಿ ಪ್ರಭುತ್ವವನ್ನು ಪ್ರಶ್ನಿಸಿದ್ದರು.

`ಗಂಟಿ ಚೌಡೇರ ಜಾತಿ ಒಂದು ಮೂಲೇಲಿ ಸೇರಿಕಂಡಿದೆ, ಯಾರೋ ಒಬ್ರು ಕಳ್ಳತನ ಮಾಡಿದ್ದು ಎಲ್ಲರಿಗೂ ಅಪರಾದ ಅತ್ತೇತಿ. ನಾವು ಸಣ್ಣ ಮಕ್ಕಳಿದ್ದಾಗ ಪೋಲಿಸರು ಬರ್ತಿದ್ದರು, ಅವರ ಟೋಪಿ ನೋಡಿ ಪೋಲಿಸರು ಬಂದ್ರು ಬಂದ್ರು ಅಂತಾ ಮೂಲ್ಯಾಗ ಹೋಗಿ ಹೊಕ್ಕಳ್ತಿದ್ವಿ. ದೊಡ್ಡ ಜಾತ್ಯಾರು ಬೇರೆ ಜಾತ್ಯಾರು ಕಳ್ಳತನ ಮಾಡಿದ್ರೂ ಗಂಟಿ ಚೋಳ್ರೆ ಕಳ್ಳತನ ಮಾಡ್ಯಾರ ಅಂತ ಹಿಡಕಂಡು ಹೋಗ್ತಿದ್ರು. ಹೆಂಗಸರನ್ನು ಸ್ಟೇಷನ್ನಕ್ಕ ತಗಂಡೋಗಿ ಮನಸಾಇಚ್ಚೆ ಹೊಡಿತಿದ್ರು. ಗಂಡಸರನ್ನ ಸ್ಟೇಷನ್ನಕ ಹಾಕಿ ಬಟ್ಟಿಬಿಚ್ಚಿ ಮನಗಂಡ ಹೊಡದು ಹೈರಾಣ ಮಾಡ್ತಿದ್ರು, ಅವರು ಹೊಡ್ತಕ್ಕ ಹೆದರಿ ಕಳ್ಳತನ ಮಾಡದಿದ್ರು ನಾವಾ ಮಾಡೀವಿ ಅಂತ ಒಪ್ಪಿಕೊಂಡು ಬಿಡ್ತಿದ್ರು. ಹಂಗ ಸ್ಟೇಷನ್ನಕ್ಕ ಹೋಗಿ ಬಂದವರು ತಿಂಗಳಗಟ್ಟಲೆ ನೋವು ತಿಂತಿದ್ರು, ಚರ್ಮ ಕೀಳಾಂಗ ಹೊಡೆದಿರ್ತಿದ್ರು’ ಎಂದು ತನ್ನ ಸಮುದಾಯದ ನೋವನ್ನೊಮ್ಮೆ ನೆನಪಿಸಿಕೊಂಡು ಬಿಕ್ಕಳಿಸುತ್ತಾರೆ.
ಮಾತು ಮುಂದುವರೆಸುತ್ತಾ `ಇದನ್ನ ನೋಡಿ ನಮ್ಮ ಸಮುದಾಯದವರು ಹೆದರಿ ಎಲ್ಲೆಲ್ಲೋ ಊರು ಬಿಟ್ಟು ಹೋಗಿ ಜಾತಿನೆ ಬೇರೆ ಬೇರೆ ಹೆಸರಿಟ್ಟುಕೊಳ್ಳುತ್ತಿದ್ರು. ಒಬ್ರು ಕಳ್ಳತನ ಮಾಡಿದ್ರೆ ಇಪ್ಪತ್ತು ಮಂದಿಗ್ಯಾರ ಶಿಕ್ಷೆ ಆಗ್ತಿತ್ತು. ಹಿಂಗಾಗಿ ನಮ್ಮ ಸಮುದಾಯ ಬಾಳ ಹಿಂಸೆಗೆ ಒಳಗಾಗೇತಿ. ಕಳ್ಳತನ ಮಾಡಾ ಜಾತಿ ಆಗಿದ್ರಿಂತ ನಮ್ಮ ಜನರು ಬೇರೆ ಬೇರೆ ಜಾತಿಗಳ ಹೆಸರು ಹೇಳಿಕಂಡು ತಮ್ಮ ಜಾತಿನ ಮರಸುತ್ತಿದ್ರು. ಕುರುಬರ, ವಡ್ಡರ, ನಾಯ್ಕರಾ ಹೀಂಗ ಬೇರೆ ಬೇರೆ ಜಾತಿ ಹೆಸರು ಹೇಳಿಕಂಡು ಬದುಕ್ತಿದ್ರು. ನಮ್ಮ ಜನ ಎಸ್ಸಿ ಲಿಸ್ಟಿಗೆ ಸೇರಿದ್ರೂ ಗೋರಮೆಂಟಿನ ಅನ್ನ ನಮ್ಮವರಿಗೆ ಸಿಗಲಿಲ್ಲ. ಎಸ್ಸಿಗಳಿಗೆ ಸಿಗೋ ಸೌಲಭ್ಯ ಬೇರೆ ಜಾತಿಗಳಿಗೆ ಸಿಗ್ತಾ ಇದೆ. ನಮ್ಮ ಜಾತಿನ ಎಸ್ಸಿಗಳೆ ಅಲ್ಲ ಅಂತಾರ. ಹಂಗಾಗಿ ತಿಳಿದಂತ ನಮ್ಮಂತವರು ಈ ಸಮುದಾಯದ ನ್ಯಾಯಕ್ಕಾಗಿ ಹೋರಾಟ ಮಾಡಬೇಕ್ರಿ. ನಮ್ಮ ಹಕ್ಕುಗಳನ್ನು ಕೇಳದಿದ್ರ ಯಾರೂ ನಮ್ಮನಿಗೆ ಬಂದು ಕೊಡಲ್ಲ ಅಂತ ಗೊತ್ತಾಗೇತಿ. ನಾನು ಜೀವ ಇರೋ ತನಕ ನಮ್ಮ ಸಮುದಾಯಕ್ಕಾಗಿ ಕೆಲಸ ಮಾಡತೀನಿ ಸಾರ್’ ಎಂದು ಸಿಟ್ಟು ಮತ್ತು ಆಕ್ರೋಶದಿಂದ ಮಾತನಾಡುತ್ತಾರೆ.

lkmanaಗೋದಾವರಿ ಅವರೊಳಗೆ ವೈಚಾರಿಕ ಮನೋಭಾವ ಬೆಳೆದಂತೆ ಬಳ್ಳಾರಿಯ ಸೇವಾನಿಕೇತನದ ಹುಡುಗಿಯರಿಗೆ ದೈರ್ಯ ತುಂಬುವ ಭಾಷಣ ಮಾಡುತ್ತಿದ್ದರಂತೆ. ಇದು ಮುಂದುವರಿದು ಬಳ್ಳಾರಿಯ ಕೆಲವು ದಲಿತ ಸಂಘಟನೆಗಳ ಕಾರ್ಯಕ್ರಮಗಳಿಗೂ ಹೋಗುತ್ತಿದ್ದರಂತೆ. ಇವರ ಸೇವೆಯನ್ನು ಗುರುತಿಸಿ 2008 ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬಳ್ಳಾರಿಯ ಜಿಲ್ಲಾ ಪಂಚಾಯಿತಿಯು ಕಿತ್ತೂರುರಾಣಿ ಚೆನ್ನಮ್ಮನ ಹೆಸರಿನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಸ್ವಂತಕ್ಕೆ ಮಕ್ಕಳಿಲ್ಲದ ಬೇಸರ ಎಂದೂ ಕಾಡಲಿಲ್ಲ. ಬಳ್ಳಾರಿಲ್ಲಿರುವಷ್ಟು ದಿನ ಸೇವಾನಿಕೇತನದ ಹುಡುಗಿಯರೇ ನನಗೂ ಮಕ್ಕಳಾಗಿದ್ದರು. ಇದೀಗ ಬೆಂಡವಾಡದ ಗಂಟಿಚೋರ ಸಮುದಾಯವೇ ನನ್ನ ಕುಟುಂಬ ಇದ್ದಹಾಗೆ ಎಂದು ಭಾವಿಸುತ್ತಾರೆ.

ಉತ್ತರ ಭಾರತದ ಗೋದಾವರಿ ನದಿಗೂ ಇವರ ಹೆಸರಿಗೂ ಏನು ನಂಟು ಎಂದು ಕೇಳಿದರೆ `ಅಜ್ಜನ ಹೆಸರು ಗೋದ್ಯಾ ಅಂತಿದ್ದ ನೆನಪಿಗಾಗಿ ಈ ಹೆಸರು ಇಟ್ಟರು ಸಾರ್ ನನ್ನ ಹೆಸರು ಗೋದಾವರಿ ನದಿ ಹೆಸರಿಂದ ಇಟ್ಟದ್ದಲ್ಲ ಎನ್ನುತ್ತಾರೆ. ಅಂತೆಯೇ ಆದಿವಾಸಿಗಳ ಹೋರಾಟವನ್ನು ರೂಪಿಸಿದ ಕಾಮ್ರೇಡ್ ಗೋದಾವರಿ ಪರುಳೇಕರ್ ಅವರು ನೆನಪಾದರು. ಇದೀಗ ಹೂವಿನ ಹಡಗಲಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಗೋದಾವರಿ ಅವರ ಸಹೋದರ ಕಲ್ಲಪ್ಪ ಅವರು `ನಮ್ಮಕ್ಕ ನಮ್ಮ ಜೀವನ ರೂಪಿಸೋದಕ್ಕೆ ತನ್ನನ್ನೇ ಸವೆಸಿದಳು, ಒಂಟಿಯಾಗಿಯೇ ಬದುಕಿದಳು, ನನಗೆ ಗೌರ್ನಮೆಂಟ್ ಕೆಲಸದ ಆರ್ಡರ್ ಬಂದಾಗ ಅಕ್ಕ ಇನ್ನಿಲ್ಲದ ಖುಷಿ ಪಟ್ಟಿದ್ದಳು ಅಂತಹ ಖುಷಿಯನ್ನು ಎಂದೂ ನಾನು ನೋಡಿರಲಿಲ್ಲ’ ಎಂದು ಹೇಳುತ್ತಾ ಬಾಹುಕರಾಗುತ್ತಾರೆ.

ಗಂಟಿಚೋರರಂತಹ ಗುರುತುಗಳೆ ಇಲ್ಲದ ಪುಟ್ಟ ಪುಟ್ಟ ಸಮುದಾಯಗಳು ಇನ್ನೂ ಅಧ್ಯಯನಕ್ಕೂ ಒಳಗಾಗದೆ ಕರ್ನಾಟಕದಲ್ಲಿ ್ಲ ಹರಿದು ಹಂಚಿ ಹೋಗಿವೆ. ಸಿ.ಎಸ್.ದ್ವಾರಕನಾಥ ಅವರು ಹಿಂದುಳಿದ ವರ್ಗಗಳ ಆಯೋಗದ ವರದಿಗಳನ್ನು ಒಟ್ಟಾಗಿಸಿ `ಸಂಕುಲ’ ಎಂಬ ಕೃತಿ ರೂಪದಲ್ಲಿ ಪ್ರಕಟಿಸಿದ್ದಾರೆ. ಈ ವರದಿಗಳನ್ನು ನೋಡಿದರೆ ಇಂತಹ ಗುರುತಿಲ್ಲದ ಸಮುದಾಯಗಳ ಸಂಕಷ್ಟಗಳು ಅರಿವಾಗುತ್ತದೆ. ಇಂತಹ ಸಮುದಾಯಗಳ ಸಮಗ್ರ ಅಧ್ಯಯನಗಳ ಅಗತ್ಯ ಇಂದು ಹೆಚ್ಚಿದೆ. ಇಂತಹ ಗುರುತಿಲ್ಲದ ಸಮುದಾಯ ಗಂಟಿಚೋರ ಸಮುದಾಯವನ್ನು ಜಾಗೃತಗೊಳಿಸುವ ಪಣತೊಟ್ಟ ಗೋದಾವರಿ ಅವರಂತಹವರು ಇಡುವ ಪುಟ್ಟ ಹೆಜ್ಜೆಗಳಿಗೂ ಸಾಂಸ್ಕøತಿಕ ಮಹತ್ವವಿದೆ. ನಾನು ನಿಮ್ಮ ಬಗ್ಗೆ ಬರೆಯುತ್ತೇನೆಂದಾಗ `ರೀ ನನ್ನ ಬಗ್ಗೆನಾ? ಬರಿಬ್ಯಾಡ್ರಿ ನಾ ಏನು ದೊಡ್ಡ ಸಾಧನಿ ಮಾಡೀನಿ’ ಎಂದು ಮುಜುಗರದಿಂದ ಮೌನವಾದರು. ಗೋದಾವರಿ ಅವರ ಹೋರಾಟದ ಹೆಜ್ಜೆಗಳು ಇನ್ನಷ್ಟು ಧೃಢಗೊಳ್ಳುತ್ತಿವೆ. ಗಂಟಿಚೋರ ಸಮುದಾಯ ಹೋರಾಟದ ಹಾದಿಯಲ್ಲಿ ಶೋಷಣೆ ಮುಕ್ತತೆಯೆಡೆ ಸಾಗುತ್ತಾ ತನ್ನ ಹಕ್ಕುಗಳನ್ನು ಗಟ್ಟಿಯಾಗಿ ಕೇಳುವಂತಹ ದಿನಗಳ ಕಡೆ ಸಾಗುತ್ತಿದೆ.

ಶನಿವಾರ, ಜುಲೈ 9, 2016

ಆತ್ಮಹತ್ಯೆ ಯಾವ ಉದ್ದೇಶಗಳನ್ನೂ ಸಾಧಿಸಲಾರದು.

  
ಡಾ.ಎ.ಎಸ್.ಪ್ರಭಾಕರ್.

  ಗಣಪತಿ ಮತ್ತು ಗಣಪತಿಯಂತೆ ಆತ್ಮಹತ್ಯೆ ಮಾಡಿಕೊಂಡ ಕೆಲವು ಸರಕಾರಿ ಅಧಿಕಾರಿಗಳ ಸಾವು ನಿಜಕ್ಕೂ ದುರಾದೃಷ್ಟಕರ. ಯಾರೂ ಈ ಬಗೆಯ ಸಾವಿಗೆ ಶರಣಾಗಬಾರದು. ಯಾರಿಗೂ ಅಕಾಲ ಸಾವು ಸಂಭವಿಸಬಾರದು. ಈ ಕುರಿತು ನನ್ನ ಒಂದೆರಡು ವಿಷಯಗಳನ್ನು ಹಂಚಿಕೊಳ್ಳ ಬಯಸುವೆ.
1. ಆತ್ಮಹತ್ಯೆ ಎಂಬುದು ಒಬ್ಬ ಮನುಷ್ಯನ ಆತ್ಮದ್ವೇಷದ ಉತ್ತುಂಗ ಸ್ಥಿತಿ. ತನ್ನನ್ನ ತಾನೇ ದ್ವೇಷಿಸಿಕೊಳ್ಳುವ ಪರಮಾವಧಿ.
2. ಆತ್ಮಹತ್ಯೆ ಎಂಬುದು ಕೇವಲ ವ್ಯಕ್ತಿಗತ ಹಿಂಸೆ ಮಾತ್ರವಲ್ಲ, ಸಮಾಜದದಲ್ಲಿಯ ಕೇಡುಗಳೂ ಈ ಹಿಂಸೆಯನ್ನು ಪ್ರಚೋದಿಸುತ್ತವೆ.
3. ಒಬ್ಬ ವ್ಯಕ್ತಿಯ ಆತ್ಮಹತ್ಯೆಯ ಹಿಂದೆ ವ್ಯಕ್ತಿಗತ ಸೋಲುಗಳ ಜೊತೆ, ಸಾಮಾಜಿಕ ಅಸಹನೆಗಳೂ ಪ್ರಧಾನ ಪಾತ್ರ ವಹಿಸುತ್ತವೆ.
4. ಹಾಗಾಗಿ ಆತ್ಮಹತ್ಯೆ ಎಂಬುದು ವ್ಯಕ್ತಿಯೊಬ್ಬನ ಕೊನೆಯಲ್ಲ, ನಮ್ಮ ಮೇಲುಕೀಳಿನ ಸಮಾಜದಲ್ಲಿ ಅಂತರ್ಗತವಾದ ಹಿಂಸೆಯ ಅಟ್ಟಹಾಸವೂ ಹೌದು.
5. ಒಬ್ಬ ವ್ಯಕ್ತಿ 'ತನ್ನನ್ನು ತಾನು' ಕೊಂದುಕೊಳ್ಳುವಂತೆ ಮಾಡುವ ಸಮಾಜದಲ್ಲಿ ಅಡಗಿರುವ ಕ್ರೌರ್ಯವನ್ನು ನಾವು ಗುರುತಿಸುವ ಅಗತ್ಯವಿದೆ.
# ಡಿ.ಕೆ.ರವಿ, ಗಣಪತಿ ಇತ್ಯಾದಿ ಅಧಿಕಾರಿಗಳ ಸಾವುಗಳನ್ನು ನಾವು ಹೀಗೆ ನೋಡುವ ಅಗತ್ಯವಿದೆ.
# ಜೊತೆಗೆ ನಮ್ಮಲ್ಲಿ ರೈತರ ಆತ್ಮಹತ್ಯೆಗಳು ಸಾಂಗೋಪಾಂಗವಾಗಿ, ಅತ್ಯಂತ ಸಹಜ ಕ್ರಿಯೆಗಳಂತೆ ನಡೆಯುತ್ತಿವೆ. ಹೆಣ್ಣುಮಕ್ಕಳ ವರದಕ್ಷಿಣೆ ಹತ್ಯೆಗಳು, ಪ್ರೀತಿಸಿ ಮದುವೆಯಾದ ಅಂತರ್ಜಾತಿಯ, ಅಂತರ್ ಧರ್ಮೀಯ ವಿವಾಹಿತರ ಕ್ರೂರ ಹತ್ಯೆಗಳು ನಡೆಯುತ್ತಿವೆ.
# ದಲಿತರ ಮೇಲೆ ಸ್ತ್ರೀಯರ ಮೇಲೆ ಪ್ರತಿ ಸೆಕೆಂಡಿಗೆ ಅದೆಷ್ಟೋ ಹತ್ಯೆಗಳು ಮತ್ತು ದೌರ್ಜನ್ಯಗಳು ನಡೆದು ನಮ್ಮ ಭಾರತ ಮಾತೆಯ ಒಡಲನ್ನು ಸೇರಿ ಅಂತರ್ಧಾನವಾಗುತ್ತವೆ.
# ಒಂದೆಡೆ, ಸೇವಾ ಭದ್ರತೆ, ಅಧಿಕಾರ, ನಿಶ್ಚಿತ ಆದಾಯ, ಸಾಮಾಜಿಕ ಸ್ಥಾನಮಾನಗಳನ್ನ ಹೊಂದಿಯೂ ಯಾವುದೋ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಅಧಿಕಾರಿಗಳ ಆತ್ಮಹತ್ಯೆಗಳಿಗೂ, ಈ ಯಾವ ಸವಲತ್ತುಗಳನ್ನು ಹೊಂದದೇ ಇರುವ ಸಾಮಾನ್ಯರ ಆತ್ಮಹತ್ಯೆಗಳಿಗೂ ವ್ಯತ್ಯಾಸಗಳಿವೆ.
# ಅಧಿಕಾರಿಗಳ ಆತ್ಮಹತ್ಯೆಗಳಿಗೆ ವ್ಯಾಪಕ ಪ್ರಚಾರ, ಟಿವಿ ಪ್ಯಾನಲ್ ಗಳ ಅಬ್ಬರದ ಚರ್ಚೆಗಳು, ರಸ್ತೆ ತಡೆಗಳು, ಜಾತಿ, ಧರ್ಮದ ಲೆಕ್ಕಾಚಾರಗಳು, ರಾಜಕೀಯ ಕೆಸರೆರಚಾಟಗಳು ಹೇರಳವಾಗಿ ನಡೆಯುತ್ತವೆ.
# ಇದೇ ಬಗೆಯ ಕೋಲಾಹಲಗಳು ಸಾಮಾನ್ಯರ ಹತ್ಯೆ ಮತ್ತು ಅವರ ಮೇಲೆ ದೌರ್ಜನ್ಯ ನಡೆದಾಗ ಸಂಭವಿಸುವುದಿಲ್ಲ.
# ಈ ಬಗೆಯ ತಾರತಮ್ಯಗಳು ಸಹಜವಾಗಿಯೇ, ಅನೂಚಾನವಾಗಿ ನಡೆಯುತ್ತಲೇ ಬಂದಿವೆ. ಅಧಿಕಾರಿಯ ಜೀವ ಎಷ್ಟು ಮಹತ್ವದ್ದೋ, ಬದುಕಲು ಅನ್ನ ನೀಡುವ ರೈತನ, ಜೀವವೊಂದನ್ನು ಇಹಲೋಕಕ್ಕೆ ನೀಡುವ ಹೆಣ್ಣಿನ ಜೀವಗಳೂ ಅಷ್ಟೇ ಮಹತ್ವದವು.
# ಆದರೆ ಈ ಸಾವುಗಳನ್ನು ಸಮಾಜ ಮತ್ತು ರಾಜಕಾರಣ ನೋಡುವ ರೀತಿಯಲ್ಲಿಯೇ ತಾರತಮ್ಯಗಳಿವೆ.
@ ಸಾರ್ವಜನಿಕ ಬದುಕಿಗೆ ನೇರ ಮುಖಾಮುಖಿಯಾಗುವ ಸೇವಾ ವಲಯಕ್ಕೆ ಸೇರಿದ ಅಧಿಕಾರಿಗಳು ಜನ ಮತ್ತು ಸರಕಾರದ ನಡುವಿನ ಕೊಂಡಿಗಳಂತೆ ಕೆಲಸ ನಿರ್ವಹಿಸಬೇಕಾಗುತ್ತದೆ. ಒಂದೆಡೆ ಸಮಾಜ, ಇನ್ನೊಂದೆಡೆ ಸರಕಾರ. ಈ ಎರಡೂ 'ಒತ್ತಡ ಗುಂಪುಗಳ' ನಡುವೆ ಕೆಲಸ ಮಾಡುವ ನೌಕರರು ವಿಚಿತ್ರ ಒತ್ತಡಗಳನ್ನು ಸದಾ ಅನುಭವಿಸುತ್ತಿರುತ್ತಾರೆ. ಈ ಒತ್ತಡಗಳನ್ನು ನಿಭಾಯಿಸುವ ಕೌಶಲ್ಯಗಳು ತರಬೇತಿಗಳ ಮೂಲಕ, ಇಲ್ಲವೇ ಸೇವಾನುಭವದ ಮೂಲಕ ಲಭ್ಯವಾಗುತ್ತಿರುತ್ತವೆ.
@ ಆದರೆ ಕೆಲವು ಸಲ ವಿಲಕ್ಷಣ ಒತ್ತಡಗಳು, ದಬಾವಣೆ, ರಾಜಕಾರಣಗಳು ಅಧಿಕಾರಿಗಳನ್ನು ದಿಕ್ಕೆಡಿಸುತ್ತವೆ. ಹಿಂಸಿಸುತ್ತವೆ.
@ ನಮ್ಮ ಸಮಾಜದಲ್ಲಿ ಈ ತರಹದ ಹಿಂಸೆ ಸಹಜ ಆಚರಣೆಯಂತೆ ರೂಢಿಯಲ್ಲಿದೆ.
@ ಸರಕಾರಿ ನೌಕರರೇ ಆಗಲಿ, ಸಾಮಾನ್ಯ ನಾಗರಿಕರೇ ಆಗಲಿ. ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಈ ಕೇಡು ಮತ್ತು ಹಿಂಸೆಗಳನ್ನು ಮೊದಲು ಅರ್ಥ ಮಾಡಿಕೊಳ್ಳುವ ಅಥವಾ ಅರ್ಥೈಸುವ ಪ್ರಯತ್ನಗಳನ್ನು ಮಾಡುವುದೊಳಿತು.
@ ಅಸಮಾನ ಸಮಾಜ, ದಿಕ್ಕೆಟ್ಟ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಸಾಮಾನ್ಯರ ಶತ್ರುಗಳು ಕೆಲವು ಸಲ ಕಣ್ಣಿಗೆ ಗೋಚರಿಸುವಂತಿದ್ದರೆ, ಹಲವು ಸಲ ಶತ್ರುವಿನ ಇರುವಿಕೆ ಗೊತ್ತೇ ಆಗುವುದಿಲ್ಲ. ಈ ಶತ್ರು ಸ್ವರೂಪವನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ.
@ ಇದಕ್ಕಾಗಿ ನಾವು ಬಹುಸಂಖ್ಯಾತ ದುಡಿವ ಸಮುದಾಯಗಳ ವಿಶಾಲ ಸಾಂಘಿಕ ರಾಜಕಾರಣವನ್ನು ರೂಪಿಸುವ ಅಗತ್ಯವಿದೆ. ಈ ಸಾಂಘಿಕ ರಾಜಕಾರಣ ವಿಶಾಲ ಜನಸಮುದಾಯಗಳಿಗೆ ಆತ್ಮಸ್ಥೈರ್ಯ ಮತ್ತು ಆತ್ಮ ಪ್ರತ್ಯಯಗಳನ್ನು ನೀಡಬಲ್ಲದು.
@ ವೈಯಕ್ತಿಕ ಪ್ರಾಮಾಣಿಕತೆ, ದಕ್ಷತೆ, ನೈತಿಕತೆ ಈ ವ್ಯವಸ್ಥೆಯಲ್ಲಿ ಎಷ್ಟು ಅಗತ್ಯವೋ, ಸಾಂಘಿಕ ಹೋರಾಟ ಅಷ್ಟೇ ಅಗತ್ಯ.
@ ಗಣಪತಿ. .... ಸತ್ತು ಹೋಗಿರುವಾಗ ಈ ಭಾಷಣ ಯಾಕೆ ಎಂಬ ಪ್ರಶ್ನೆ ಬರುತ್ತದೆ.
@ ವ್ಯವಸ್ಥೆಯ ಭಾಗವಾಗಿ ಕಾರ್ಯನಿರ್ವಹಿಸುವಾಗ, ವ್ಯವಸ್ಥೆಯೊಳಗಣ ಹಿಂಸೆ ಮತ್ತು ಬಹುಸಂಖ್ಯಾತ ಹತಾಶ ಜನರ ಬದುಕನ್ನ ಅರ್ಥ ಮಾಡಿಕೊಂಡು ಹೋರಾಡುವ ಅಗತ್ಯವಿದೆ.
@ ಏಕೆಂದರೆ ಆತ್ಮಹತ್ಯೆ ಮಾಡಿಕೊಳ್ಳುವ ರೈತನಿಗೆ ಇರದೇ ಇರುವ ಸವಲತ್ತು ಸರಕಾರಿ ನೌಕರನಿಗೆ ಇರುತ್ತದೆ. ವರದಕ್ಷಿಣೆ ಪಿಡುಗಿಗೆ ಸುಟ್ಟು ಕರಕಲಾಗುವ ಅಸಹಾಯಕ ಹೆಣ್ಣಿಗೆ ಇರದ ಆತ್ಮ ವಿಶ್ವಾಸ ಸರಕಾರಿ ನೌಕರರಿಗಿರುತ್ತದೆ.
ಆತ್ಮಹತ್ಯೆ ಯಾವ ಉದ್ದೇಶಗಳನ್ನೂ ಸಾಧಿಸಲಾರದು.

ಕರ್ನಾಟಕದಲ್ಲಿ (2015-16) ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 1407

-ಟಿ.ಕೆ.ದಯಾನಂದ

2015-16ರ ಸಾಲಿನಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 1407, ಅದ್ರಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 817. ಕಳೆದ 2014-15ನೇ ಸಾಲಿನ ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 122, ಸಾಲದ ಬಾಧೆಯಿಂದ ಜೀವ ಕಳೆದುಕೊಂಡ ರೈತರು 95.

ಗಮನಿಸಿ ನೋಡಿ.. ಈ 1529 ಮಂದಿ ರೈತರ ಪರವಾಗಿ ಈ ಡೂಪ್ಲಿಕೇಟ್ ದೇಶಭಕ್ತರು, ಭಾಷಣ ಹೊಡೆಯೋ ಪುಂಗಿದಾಸರು, ಗಢವಗಿರಾಕಿಗಳು ಯಾವತ್ತಾದ್ರೂ ಉಸಿರೆತ್ತಿದ್ದಾರಾ ? ರಾಜ್ಯಸರ್ಕಾರದ ಕತ್ತಿನಪಟ್ಟಿ ಹಿಡಿದು ಈ ಸಾವುಗಳಿಗೆ ನ್ಯಾಯ ಕೇಳಿದ್ದಾರ? ಸತ್ತ ರೈತನ ಮನೆಗೆ ತೆರಳಿ ಅವನ ಜೊತೆ ಒಂದು ದಿನ ಕಳೆದು ಬಂದಿದ್ದಾರ? ಆತ್ಮಹತ್ಯೆ ಮಾಡಿಕೊಂಡ ರೈತರ ಅಧಿಕೃತ ಜಿಲ್ಲಾವಾರು ಪಟ್ಟಿ ಇಲ್ಲಿದೆ. ಅನ್ನದಾತರ ಸಾವುಗಳನ್ನ ತಡೆಯೋಕೆ ಹೋರಾಟ, ಸತ್ಯಾಗ್ರಹ, justice for farmers ಅಂತ ಕ್ಯಾಂಪೇನು ಮಾಡಿದ್ದಾರ ? ಯಾವನಾದ್ರು ದೇಶಭಕ್ತ ರೈತರ ಸಾವಿನ ವಿಷ್ಯಗಳನ್ನ ಕೈಗೆತ್ತಿಕೊಂಡು ರಾಜ್ಯಸರ್ಕಾರದ ಬೆವರು ಇಳಿಸೋ ಅಷ್ಟು ದೇಶಭಕ್ತಿ ಪ್ರದರ್ಶಿಸ್ತಾರ? ಬನ್ರಪ್ಪ ನಿಮ್ಮ ದೇಶಪ್ರೇಮ ಪ್ರೂವ್ ಮಾಡೋಕೆ ಒಂದೊಳ್ಳೆ ಅವಕಾಶ ಇದು.

ದೇಶಭಕ್ತಿ ಅಂದ್ರೆ ಕಂಡವರ ಮನೆ ಮಕ್ಳನ್ನ ದೊಂಬಿಗಳಿಸಿ ಜೈಲಿಗಟ್ಟಿ ಅವರ ಮನೆ ಹಾಳು ಮಾಡೋದಲ್ಲ, "ದೊಡ್ಡಕರುಳು, ಸಣ್ಣಕರುಳು ಕಿತ್ತು ಬರುತ್ತೆ ಕಣ್ರಿ " ಅಂತ ಪುಗ್ಸಟ್ಟೆ ಬಾಷಣ ಬೊಗಳೋದಲ್ಲ, ತಳಬುಡ ಇಲ್ಲದ ತವುಡು ಕುಟ್ಟಿ ಕಾಲಂ ಕಕ್ಕೋದಲ್ಲ, ತಮ್ಮದೇ ಪಕ್ಷದ ಬೂತ್ ವರ್ಕರ್ ಗಳನ್ನ ಕೊಂದು ಹಾಕೋದಲ್ಲ, ಕಿಡ್ನಾಪರ್, ರೌಡಿ ಎಲಿಮೆಂಟು ಭಜರಂಗಿಗಳಿಗೆ ಸಪೋರ್ಟ್ ಮಾಡೋದಲ್ಲ. ದೇಶಪ್ರೇಮ ಅಂದ್ರೆ ರೈತರ ಜೊತೆಗೆ ನಿಲ್ಲೋದು. ಬಂದು ನಿಂತು, ನಿಮ್ಮ ನಿಮ್ಮ ದೇಶಪ್ರೇಮ ಎಷ್ಟರಮಟ್ಟಿಗೆ ಒರಿಜಿನಲ್ಲು ಅಂತ ಪ್ರೂವ್ ಮಾಡ್ರಪ್ಪ.