ಮಂಗಳವಾರ, ಜುಲೈ 14, 2020

ರಕ್ತಕಚ್ಚಿದ ತುಟಿಗಳ ಕಥೆ...

ರಕ್ತಕಚ್ಚಿದ ತುಟಿಗಳ ಕಥೆ...Fashion sara pope lips Oil Painting Wall Art Picture Paiting ...


ರಕ್ತ ಕಚ್ಚಿದ ತುಟಿಗಳ ನೋಡಿ
ನೀವು ರೂಢಿಯಂತೆ
ತುಸು ರೊಮ್ಯಾನ್ಸ್ ಹೆಚ್ಚಾಯ್ತೇನೋ
ಅಂದುಕೊಂಡು ಮುಸಿಮುಸಿ
ನಗುತ್ತಿರಬಹುದು..
ನಿಮ್ಮದೇನೂ ತಪ್ಪಿಲ್ಲ ಬಿಡಿ
ನೀವಿನ್ನೂ ತುಟಿಗಳೆಂದರೆ
ಪ್ರೇಮದ ಉತ್ಕಟತೆಯ
ದೀರ್ಘಚುಂಬನದ
ರಾಯಬಾರಿಗಳೆಂದೇ
ಭಾವಿಸಿದ್ದೀರಿ..
*
ಆಳುವ ದೊರೆ ಎಷ್ಟು ಕ್ರೂರಿಯೆಂದರೆ,
ಬಂದುಕುದಾರಿ ಸೈನಿಕರ
ತುಟಿಗಳ ಮೇಲೆ ಕಾವಲಿಟ್ಟಿದ್ದಾನೆ.
ಈ ಬೂಟುದಾರಿಗಳು 
ನಡೆದಾಡಿಯೇ ತುಟಿಗಳು
ರಕ್ತಕಚ್ಚಿವೆ ಎಂದರೆ ನೀವು ನಂಬುವುದಿಲ್ಲ..

*
ದೊರೆಗೆ ದಿಕ್ಕಾರ ಕೂಗುವ ಮಾತುಗಳು
ನಾಲಿಗೆಯ ಮೇಲೆ ತಾಲೀಮು ನಡೆಸಿವೆ..
ಅನ್ನನಾಳದಿಂದ 
ಓಡಿ ಬಂದು ಲೋಕಕೆ ಜಿಗಿದರೆ
ತುಫಾಕಿಯ ಸಿಡಿತರ ವೇಗವನ್ನೂ ಮೀರಿ
ರೆಕ್ಕೆ ಮೂಡಿ ಹಾರಬೇಕು..
ಜನರ ನಾಲಿಗೆಗಳ ಮೇಲೆ
ದಿಕ್ಕಾರದ ಮೊಟ್ಟೆಗಳನ್ನಿಟ್ಟು
ಕಾವು ಕೊಟ್ಟು ಮರಿ ಮಾಡಬೇಕು..
9 Power Quotes for Times of Struggle
*
ತುಟಿಗಳ ಅಂಚಿನಲ್ಲಿ ನಡೆದಾಡುವ
ಕಾವಲುಗಾರರ ಕಣ್ಣು ತಪ್ಪಿಸಿಯೇ
ಈ ಮರಿಗಳಿಗೆ ಹಾರುವುದ ಕಲಿಸಬೇಕು...
ಎಲ್ಲವೂ ಬಾಯಿಯ ಗೂಡಿನಿಂದ
ರಬಸವಾಗಿ ಹಾರತೊಡಗಿದರೆ
ತುಟಿ ಮೇಲಿನ ಕಾವಲುಗಾರರು
ತಪತಪನೆ ಪಾದದ ಕೆಳಗೆ ಬೀಳಬೇಕು...
*
ಇದೀಗ ಅವರು ತುಟಿಗಳ ಗಡಿದಾಟಿ
ನಾಲಿಗೆಯ ಮೇಲೆಯೇ
ನಡೆದಾಡತೊಡಗಿದ್ದಾರೆ..
ಅಡಗಿ ಕೂತ ಮಾತುಗಳನ್ನೆಲ್ಲಾ 
ಕೊರಳ ಪಟ್ಟಿಹಿಡಿದು
ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ..
ಇದು ತಾಳ್ಮೆಯ ಕಟ್ಟಕಡೆಯ ಹಂತ
ಇದೀಗ, ಹಲ್ಲುಗಳ ಕಚ್ಚಿ
ಒಳಬಂದವರನ್ನು ನುಂಗಿ
ಜೀರ್ಣಿಸಿಕೊಳ್ಳದೆ ಬೇರೆ ದಾರಿಯಿಲ್ಲ..

-ಅರುಣ್ ಜೋಳದಕೂಡ್ಲಿಗಿ

ಕಾಮೆಂಟ್‌ಗಳಿಲ್ಲ: