ಮಂಗಳವಾರ, ಜುಲೈ 14, 2020

ವಿಚಾರ ಸಾಹಿತ್ಯದಿಂದ ಯುದ್ಧಗಳನ್ನೇ ತಪ್ಪಿಸಬಹುದು


ಸಂದರ್ಶನ: ಅರುಣ್ ಜೋಳದಕೂಡ್ಲಿಗಿ.


 ತೆಲುಗು ಸಾಹಿತ್ಯದ ಪ್ರಖರ ವೈಚಾರಿಕತೆಯನ್ನು ಅನುವಾದಗಳ ಮೂಲಕ ಕನ್ನಡಕ್ಕೆ ಕಸಿಮಾಡಿದವರು ಬಸಪ್ಪಾಚಾರಿ ಸುಜ್ಞಾನಮೂರ್ತಿ. 2003 ರಲ್ಲಿ ಅನುವಾದಿಸಿದ ಮಹಾಶ್ವೇತಾದೇವಿ ಅವರ `ಯಾರದೀ ಕಾಡು’ ಮೊದಲುಗೊಂಡು ಈತನಕ ಹದಿನೇಳು ವರ್ಷದಲ್ಲಿ 55 ಪುಸ್ತಕಗಳನ್ನು ತೆಲುಗಿನಿಂದ ಕನ್ನಡಕ್ಕೆ ತಂದಿದ್ದಾರೆ. ಈ ಮೂಲಕ ತೆಲುಗು ಸಾಹಿತ್ಯವನ್ನು ನೋಡುವ ಕನ್ನಡಿಗರ ಕಣ್ಣೋಟವನ್ನೇ ಬದಲಿಸಿದ್ದಾರೆ. `ಯಾರದೀ ಕಾಡು’ ಕೃತಿಗೆ 2003 ರಲ್ಲಿಯೂ, ಆಂದ್ರದ ಚಾರಿತ್ರಿಕ ರೈತ ಹೋರಾಟದ ಕಥನ `ತೆಲಂಗಾಣ ಹೋರಾಟ’ ಕೃತಿಗೆ 2013 ರಲ್ಲಿಯೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಗಳು ಸಂದಿವೆ. ಅನುವಾದಗಳ ಮೂಲಕ ಆಯಾ ಹೊತ್ತಿನ ಗಾಯಗಳಿಗೆ ಔಷಧಿ ಹುಡುಕಿದ ಬಿ.ಸುಜ್ಞಾನಮೂರ್ತಿ ಅವರನ್ನು ಗುರುತಿಸಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು 2016ನೇ ಸಾಲಿನ ಗೌರವ ಪ್ರಶಸ್ತಿಯನ್ನು ನೀಡಿತು. ಪುಸ್ತಕವನ್ನು ಅಂದಗೊಳಿಸುವ ವಿನ್ಯಾಸಕಾರರಾಗಿಯೂ, ತಂತ್ರಜ್ಞರಾಗಿಯೂ ಇವರು ಪರಿಚಿತರು. ಬಿ. ಸುಜ್ಞಾನಮೂರ್ತಿ ಅವರಿಗೆ ಇದೇ ಜುಲೈ 6 ಕ್ಕೆ 60 ವರ್ಷ ತುಂಬುತ್ತದೆ. ಜುಲೈ 30 ಕ್ಕೆ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ಸಹಾಯಕ ನಿರ್ದೇಶಕ ವೃತ್ತಿಯಿಂದ ನಿವೃತ್ತರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಅನುವಾದದ ಪಯಣದ ಬಗ್ಗೆ ಕೆಲವು ಮಾತುಗಳನ್ನು ಆಡಿದ್ದಾರೆ.

ಸರ್, ನಮಸ್ತೆ, ನಿಮ್ಮ ಬಾಲ್ಯದ ನೆನಪುಗಳಿಗೆ ಮರಳಬಹುದೇ?

 ನಮ್ಮೂರಿಗೆ ತಮಿಳುನಾಡಿನ ಗಡಿ ಕೇವಲ 8 ಕಿ.ಮೀ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಮುತ್ತಾನಲ್ಲೂರು ನಮ್ಮೂರು. ಮುತ್ತಿನಂಥ ನೆಲ್ಲು ಬೆಳೆಯುತ್ತಾರೆಂದು ಮುತ್ತಾನಲ್ಲೂರು ಎಂಬ ಹೆಸರು ಬಂದಿದೆಯಂತೆ. ನಮ್ಮದು ತ್ರಿಭಾಷಿಕ ಪರಿಸರವಾದರೂ ತೆಲುಗು ಮನೆಮಾತಿನ ಜನರೇ ಹೆಚ್ಚು. ಕೆಲವರು ನನ್ನ ಅನುವಾದ ಕಂಡು ‘ನಿಮ್ಮ ಮದರ್ ಟಂಗ್ ತೆಲುಗೇ’ ಎನ್ನುತ್ತಾರೆ, ಆಗ ನಾನು ಇಲ್ಲ ನನ್ನ ‘ಅದರ್ ಟಂಗ್ ತೆಲುಗು’ ಎನ್ನುವೆ. ನನ್ನ ಹೆತ್ತಭಾಷೆ ಕನ್ನಡ ಹೊತ್ತಭಾಷೆ ತೆಲುಗು. ತಮಿಳು ಚೆನ್ನಾಗಿ ಅರ್ಥ ಅಗುತ್ತೆ.

ಸರ್, ನೀವು ಅನುವಾದಕ್ಕೆ ಪ್ರವೇಶ ಪಡೆದದ್ದು..

 ಬಾಲ್ಯದಲ್ಲಿ ನಾನು ದ್ವಿಭಾಷಿಕ ಪರಿಸರದಲ್ಲಿದ್ದಿದ್ರಿಂದ ಅನಾಯಾಸವಾಗಿ ತೆಲುಗು ಮಾತಾಡಲು ಕಲಿತೆ. ತೆಲುಗು ಸಿನೆಮಾಗಳನ್ನು ನೋಡುತ್ತಾ ತೆಲುಗು ಭಾಷಿಕ ಪರಿಸರದಲ್ಲಿ ಬೆಳೆದೆ. ಕನ್ನಡ ಎಂ.ಎ ನಂತರ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ದ್ವಿಭಾಷಿಕ ನಿಘಂಟು ರೂಪಿಸುವ ಯೋಜನೆಯಲ್ಲಿ ಕೆಲಸ ಸಿಕ್ತು. ಆ ಸಂದರ್ಭದಲ್ಲಿ ತೆಲುಗು ಓದಲು ಕಲಿತು ತೆಲುಗು ಸಾಹಿತ್ಯದ ಮುಖ್ಯ ಕೃತಿಗಳನ್ನು ಓದಿಕೊಂಡೆ. ಆಗ ಅಲ್ಲಿ ಪ್ರಾಧ್ಯಾಪಕರಾಗಿದ್ದ ಆರ್ವಿಯಸ್ ಸುಂದರಂ ಅವರು ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಲು ಪ್ರೇರೇಪಿಸಿದರು.

ವೈಚಾರಿಕ ಸಾಹಿತ್ಯವನ್ನೇ ಹೆಚ್ಚಾಗಿ ಅನುವಾದಕ್ಕೆ ಆಯ್ಕೆ ಮಾಡಿಕೊಂಡದ್ದೇಕೆ ?

 ವಿಚಾರ ಸಾಹಿತ್ಯ ನಮ್ಮ ಬದುಕನ್ನು ಸುಲಭವಾಗಿಸುತ್ತೆ, ಸುಖವಾಗಿಸುತ್ತೆ, ಮತ್ತು ಹಸನಾಗಿಸುತ್ತೆ ಎಂದು ಇಂದಿಗೂ ನಂಬಿದ್ದೇನೆ. ಸರಿಯಾದ ವಿಚಾರಗಳಿಂದ ಯುದ್ಧಗಳನ್ನೇ ತಪ್ಪಿಸಬಹುದೆಂದು ತೆಲುಗಿನ ಪ್ರಖ್ಯಾತ ಚಿಂತಕ ವಿ.ಆರ್.ನಾರ್ಲ ಹೇಳಿರುವುದು ಸತ್ಯವೆನಿಸುತ್ತಿದೆ. ದೇವರು ಧರ್ಮ ಜಾತಿ ಕಂದಾಚಾರ ಸಂಪ್ರದಾಯ ಮೂಢನಂಬಿಕೆ ಇವು ನನ್ನೊಳಗೆ ಇದುವರೆಗೂ ಬರದಂತೆ ವಿಚಾರ ಸಾಹಿತ್ಯ ನನ್ನನ್ನು ರೂಪಿಸಿದೆ. ಯಾವಾಗಲೂ ಸೃಜನಶೀಲಕ್ಕೆ ಅನುವಾದಕರು ಹೆಚ್ಚು, ಸೃಜನಶೀಲವಲ್ಲದವುಗಳನ್ನೂ, ಅದರಲ್ಲೂ ವಿಚಾರ ಸಾಹಿತ್ಯವನ್ನು ಅನುವಾದಿಸುವವರು ಕಡಿಮೆ. ಆದ್ದರಿಂದ ನಾನು ಹೆಚ್ಚಾಗಿ ವೈಚಾರಿಕ ಬರಹಗಳನ್ನು ಅನುವಾದಿಸಿದೆ. ನನಗೆ ತಿಳಿದಂತೆ ತೆಲುಗಿನಲ್ಲಿರುವಷ್ಟು ವೈಚಾರಿಕ ಪ್ರಖರ ಚಿಂತಕರು ಕನ್ನಡದಲ್ಲಿಲ್ಲ. ವಿ.ಆರ್.ನಾರ್ಲ, ಗೋರಾ, ಕೆ.ಬಾಲಗೋಪಾಲ, ಕಂಚ ಐಲಯ್ಯ, ಕತ್ತಿ ಪದ್ಮಾರಾವ್ ತರಹದವರು ನಮ್ಮಲ್ಲಿಲ್ಲ. ಹಾಗೆನೆ ಡಿ.ಆರ್.ನಾಗರಾಜ್, ಕೆ.ವಿ. ನಾರಾಯಣ ತರಹದ ವಿಮರ್ಶಕರು ತೆಲುಗಿನಲ್ಲಿಲ್ಲ.

ಕನ್ನಡ-ತೆಲುಗು ಭಾಷಾಂತರದಲ್ಲಾದ ಮುಖ್ಯ ಪಲ್ಲಟಗಳೇನು?

ತೆಲುಗಿನ ಜನಪ್ರಿಯ ಸಾಹಿತ್ಯ ಕನ್ನಡಕ್ಕೆ ಹೆಚ್ಚು ಅನುವಾದಗೊಂಡಿದೆ. ಉಳಿದಂತೆ ಕತೆ, ಕಾವ್ಯ ಬಂದಿವೆ. ತೆಲುಗಿನ ವೈಚಾರಿಕ ಕೃತಿಗಳು ಕನ್ನಡಕ್ಕೆ ಬಂದದ್ದು ವಿರಳ. ತೆಲುಗು ಸಾಹಿತ್ಯದಲ್ಲಿ ವಿಮರ್ಶೆ ಕಡಿಮೆ, ಸೃಜನಶೀಲ ಸಾಹಿತ್ಯವೆ ಹೆಚ್ಚು. ಜಗತ್ತಿನ ಅತ್ಯುತ್ತಮ ಕೃತಿಗಳನ್ನು ಬಹುಬೇಗ ಅನುವಾದಿಸಿಕೊಳ್ಳುತ್ತಾರೆ. ಹಾಗಾಗಿ ಅಲ್ಲಿ ವೈವಿಧ್ಯಮಯ ಸಾಹಿತ್ಯ ರೂಪುಗೊಂಡಿದೆ. ಈ ಕಾರಣಕ್ಕೇ ಇರಬೇಕು ಕನ್ನಡದ ಕೆಲವು ಅತ್ಯುತ್ತಮ ಕೃತಿಗಳು ತೆಲುಗಿಗೆ ಹೋಗಿದ್ದರೂ, ಅಲ್ಲಿ ಚರ್ಚೆ ಆಗಲಿಲ್ಲ. ತೆಲುಗಿನ ಕ್ಲಾಸಿಕ್ ಕೃತಿಗಳು, ಶ್ರೇಷ್ಠ ಕಾದಂಬರಿಕಾರರ ಕಾದಂಬರಿಗಳು ಕನ್ನಡಕ್ಕೆ ಇನ್ನೂ ಬಂದಿಲ್ಲ.

ನಿಮ್ಮ ಮಹಾತ್ವಾಕಾಂಕ್ಷೆಯ `ತೆಲಂಗಾಣ ಹೋರಾಟ’ ಕೃತಿ ಅನುವಾದದ ಒತ್ತಾಸೆಗಳೇನು?

 ತೆಲಂಗಾಣ ರೈತ ಹೋರಾಟ 1946 ರಿಂದ 1951ರವರೆಗೆ ಆಂಧ್ರಪ್ರದೇಶದಲ್ಲಿ ಘಟಿಸಿದ ಚಾರಿತ್ರಿಕ ಆಂದೋಲನ. ಬ್ರಿಟಿಷ್ ಸಾಮ್ರಾಜ್ಯಶಾಹಿ, ನಿಜಾಮನ ಫ್ಯೂಡಲ್ ಆಳ್ವಿಕೆ ಮತ್ತು ಜೀವವಿರೋಧಿ ಭೂಮಾಲೀಕರ ವಿರುದ್ಧ ರೈತರು ನಡೆಸಿದ ಮಹಾವಿಪ್ಲವ. ಸರ್ವಾಧಿಕಾರ ಎನ್ನುವ ಪರ್ವತವನ್ನು ಛಿದ್ರಗೊಳಿಸಿದ ಸಾಮಾನ್ಯ ಜನರ ಆತ್ಮಬಲ ಇದು. ತೆಲಂಗಾಣ ಹೋರಾಟ ಜಗತ್ತಿನ ಎರಡನೆ ಅತಿದೊಡ್ಡ ರೈತ ಹೋರಾಟ. ಗೆಳೆಯ ಡಾ. ಬಿ.ಎಂ.ಪುಟ್ಟಯ್ಯ ನನಗೆ ಈ ಕೃತಿಯನ್ನು ಅನುವಾದಿಸಲು ಪ್ರೇರೇಪಿಸಿದರು. ಕನ್ನಡಿಗರಿಗೆ ಈ ಕೃತಿಯ ಅಗತ್ಯವಿದೆ ಎಂದು ಅನುವಾದಿಸಿದೆ.

ಸರ್, ನಿವೃತ್ತಿ ನಂತರದ ಯೋಜನೆಗಳು..

 ಪುಸ್ತಕ ಪ್ರಕಟವಾಗುವ ಹೊತ್ತಿಗೆ, ಹಲವು ಹೊಸ ಪುಟ ವಿನ್ಯಾಸಗಳು ಬಂದಿರುತ್ತವೆ ಎನ್ನುವ ಭಯದಲ್ಲಿ `ಪುಟವಿನ್ಯಾಸ’ ಕುರಿತ ಪುಸ್ತಕವನ್ನು ಈ ತನಕ ಬರೆಯಲಾಗಿಲ್ಲ. ಹಾಗಾಗಿ ಸರಳ ಸುಂದರ ಪುಟ ವಿನ್ಯಾಸದ ಬಗ್ಗೆ ಪುಸ್ತಕ ಬರೆಯುವೆ. ತೆಲುಗಿನ ಶ್ರೇಷ್ಠ ಕಾದಂಬರಿಗಳಾದ ಬುಚ್ಚಿಬಾಬು ಅವರ ‘ಚಿವರಕು ಮಿಗಿಲೇದಿ’(ಕೊನೆಗೆ ಉಳಿಯೋದು) ನವೀನ್ ಅವರ `ಅಂಪಶಯ್ಯ’ (ಶರಶಯ್ಯೆ) ಕಾದಂಬರಿಗಳನ್ನು ಅನುವಾದಿಸುವ ಯೋಜನೆ ಇದೆ. 

ಫೋಟೋ: ಶಿವಶಂಕರ್ ಬಣಗಾರ.



ಕಾಮೆಂಟ್‌ಗಳಿಲ್ಲ: