ಸೋಮವಾರ, ಫೆಬ್ರವರಿ 19, 2018

ಅನಿವಾಸಿ ಭಾರತೀಯರ ಮಡದಿಯರ ಪಾಡುಗಳು


      ಅನುಶಿವಸುಂದರ್ 
Image result for Non-resident Indian wives

ಅನಿವಾಸಿ ಭಾರತೀಯರ ಮಡದಿಯರನ್ನು ಕೌಟುಂಬಿಕ ದಮನದಿಂದ ರಕ್ಷಿಸಲು ಆಯಾ ದೇಶಗಳ ಮತ್ತು ಭಾರತದ ಸರ್ಕಾರಗಳು ಮುಂದಾಗಬೇಕು.

ಅನಿವಾಸಿ ಭಾರತೀಯ ಮಹಿಳೆಯರು ತಮ್ಮ ಕುಟುಂಬಗಳಿಂದ ತುಂಬಾ ದೂರದಲ್ಲಿ ಅಪರಿಚಿತವಾದ ಮತ್ತು ಪರಕೀಯವಾದ ಪರಿಸರದಲ್ಲಿ  ಬದುಕುತ್ತಾ ಕೌಟುಂಬಿಕ ಚಿತ್ರಹಿಂಸೆಯನ್ನು ಅನುಭವಿಸುತ್ತಿರುವ ಪ್ರಕರಣಗಳು ಭಾರತಕ್ಕೆ ಹೊಸದೇನಲ್ಲ. ಆದರೆ ಕಳೆದ ಕೆಲವು ವರ್ಷಗಳಲ್ಲಿ ವಿಷಯವು ತೀರಾ ತುರ್ತು ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಭಾರತದ ವಿವಿಧ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯುಳ್ಳವರು ವಿದೇಶಕ್ಕೆ ವಲಸೆಹೋಗುತ್ತಿರುವುದು ಹೆಚ್ಚಾದಂತೆ ಇಂಥಾ ನೊಂದ ಮಹಿಳೆಯರ ಸಂಖ್ಯೆಯೂ ದೊಡ್ಡ ರೀತಿಯಲ್ಲಿ ಹೆಚ್ಚಾಗುತ್ತಿದೆ. ಭಾರತದ ವಿದೇಶಾಂಗ ವ್ಯವಹಾರ ಇಲಾಖೆಯು ನೀಡಿದ ಅಂಕಿಅಂಶಗಳ ಪ್ರಕಾರ ಅನಿವಾಸಿ ಭಾರತೀಯ ಮಡದಿಯೊಬ್ಬಳು ಸರಾಸರಿ ಪ್ರತಿ ಎಂಟು ಗಂಟೆಗೊಮ್ಮೆ (ಅಂದರೆ ದಿನಕ್ಕೆ ಮೂರು ಬಾರಿ) ತಾನು ಅನುಭವಿಸುತ್ತಿರುವ ಕೌಟುಂಬಿಕ ಚಿತ್ರಹಿಂಸೆಯಿಂದ ಪಾರು ಮಾಡುವಂತೆ ತನ್ನ ಕುಟುಂಬಕ್ಕೆ ಕರೆಮಾಡುತ್ತಾಳೆ. ವಿದೇಶಾಂಗ ಇಲಾಖೆಗೇ ೨೦೧೫ರ ಜನವರಿ ಮತ್ತು ೨೦೧೭ರ ನವಂಬರ್ ನಡುವೆ ಇಂಥಾ ೩೩೨೮ ಕರೆಗಳು ಬಂದಿವೆ. ಆದರೆ ಇದಕ್ಕೆ ಸರ್ಕಾರಿ ಕಚೇರಿಗಳ ಅಥವಾ ಕುಟುಂಬದವರ ಸಹಾಯವನ್ನು ಪಡೆಯದವರ ಅಥವಾ ಕುಟುಂಬದಿಂದ ಅಥವಾ ಬೇರೆ ಇನ್ಯಾವುದಾದರೂ ಮೂಲದ ಸಹಾಯ ಪಡೆದವರ ಸಂಖ್ಯೆಯನ್ನೂ ಸೇರಿಸಿದರೆ ಸಂತ್ರಸ್ತರ ಸಂಖ್ಯೆ ಹಲವು ಪಟ್ಟು ಹೆಚ್ಚಾಗಬಹುದು.

ಅನಿವಾಸಿ ವಧುಗಳೆಂದು ಕರೆಯಲ್ಪಡುವವರು ವಿವಿಧ ಹಿನ್ನೆಲೆಯುಳ್ಳವರಾಗಿರುತ್ತಾರಾದರೂ, ಇಂಥಾ ದೂರುಗಳನ್ನು ಹೆಚ್ಚಾಗಿ ಪಂಜಾಬ್, ಆಂಧ್ರ, ತೆಲಂಗಾಣ ಮತ್ತು ಗುಜರಾತ್ಗಳಲ್ಲಿ ದಾಖಲಾಗಿವೆ ಎಂಬುದನ್ನು ಅಧಿಕೃತ ಅಧ್ಯಯನಗಳು ಹಾಗೂ ಇನ್ನಿತರ ಮೂಲಗಳು ತಿಳಿಸುತ್ತವೆ. ಮೇಲಿನ ಪ್ರತಿಯೊಂದು ರಾಜ್ಯದಲ್ಲೂ ಮೋಸಹೋದ ಅಥವಾ ಹಿಂಸೆಗೊಳಗಾದ ಮಹಿಳೆಯರು ದಾಖಲಿಸಿರುವ ದಂಡಿ ದೂರುಗಳು ಫೈಸಲಾಗದೆ ಬಿದ್ದಿವೆ. ಮದುವೆಯಾದ ನಂತರ (ಭಾರತದಲ್ಲಿ ಅಥವಾ ವಿದೇಶದಲ್ಲಿ) ತೊರೆದುಹೋಗಿರುವುದು, ಇನ್ನೋರ್ವ ಹೆಂಡತಿಯನ್ನು ಹೊಂದಿರುವುದು (ಅಂದರೆ ಹೊರದೇಶದಲ್ಲಿ ಈಗಾಗಲೇ ಒಬ್ಬಳು ಹೆಂಡತಿಯಿರುವುದನ್ನು ಮರೆಮಾಚಿ ಮದುವೆಯಾಗಿರುವುದು), ಗಂಡಿನ ಉದ್ಯೋಗ ಮತ್ತು ಆದಾಯದ ಬಗ್ಗೆ ತಪ್ಪು ಮಾಹಿತಿ ಕೊಟ್ಟು ಮದುವೆ ಮಾಡಿಕೊಂಡಿರುವುದು, ವರದಕ್ಷಿಣೆ ಕಿರುಕುಳ, ತಪ್ಪು ದಾಖಲೆಗಳನ್ನು ಸೃಷ್ಟಿ ಮಾಡಿ ಹೆಂಡತಿಯ ಗೈರುಹಾಜರಿಯಲ್ಲೇ ವಿಚ್ಚೇದನ ಪಡೆದುಕೊಂಡಿರುವಂಥ ದೂರುಗಳು ಪ್ರಧಾನವಾಗಿ ದಾಖಲಾಗಿವೆ. ಇಂಥಾ ಪ್ರಕರಣಗಳು ಅನಿವಾಸಿ ಭಾರತೀಯರು ಹೆಚ್ಚಾಗಿ ನೆಲೆಸಿರುವ ಇಂಗ್ಲೆಂಡ್, ಅಮೆರಿಕ ಮತ್ತು ಪಶ್ಚಿಮ ಏಷಿಯಾ ದೇಶಗಳಲ್ಲಿ ಸಂಭವಿಸುತ್ತಿವೆ. ಸಂತ್ರಸ್ತ ಮಹಿಳೆಯರಲ್ಲಿ ಅರೆಶಿಕ್ಷಿತರಿಂದ ಹಿಡಿದು ಇಂಜನಿಯರ್ ಮತ್ತು ಕಂಪ್ಯೂಟರ್ ಪದವೀಧರೆಯರೂ ಇದ್ದಾರೆ. ಅಮೆರಿಕದಿಂದ ದಾಖಲಾಗಿರುವ ಬಹುಪಾಲು ಪ್ರಕರಣಗಳಲ್ಲಿ ಸಂತ್ರಸ್ತ ಮಡದಿಯರು ಎಚ್- ವೀಸಾ ಹೊಂದಿದ್ದು ಎಚ್- ವೀಸಾ ಹೊಂದಿರುವ ತಮ್ಮ ಗಂಡಂದಿರ ಮೇಲೆ ಆರ್ಥಿಕವಾಗಿ ಅವಲಂಬಿತರಾಗಿದ್ದಾರೆ. ೨೦೧೫ರಲ್ಲಿ ಒಬಾಮಾ ಸರ್ಕಾರ ಎಚ್- ವೀಸಾ ಹೊಂದಿರುವವರಿಗೂ ಕೆಲಸಕ್ಕೆ ಅರ್ಜಿ ಹಾಕಲು ಅನುಮತಿ ಕೊಡುವವರೆಗೆ ಎಚ್- ವೀಸಾ ಹೊಂದಿರುವ ಮಹಿಳೆಯರಿಗೆ ಅಮೆರಿಕದಲ್ಲಿ ಕೆಲಸ ಸಿಗುತ್ತಿರಲಿಲ್ಲ. ಆದರೆ ಇಂದು ಅಮೆರಿಕದಲ್ಲಿರುವ ರಾಜಕೀಯ ವಾತಾವರಣವನ್ನು ನೋಡಿದರೆ ಭಾರತೀಯ ಮಹಿಳೆಯರಿಗೆ ಕೆಲಸ ಸಿಗುವುದು ಅಷ್ಟು ಸುಲಭವಾಗಿಯೇನೂ ಇಲ್ಲ.
Image result for Non-resident Indian wives

ಸಮಸ್ಯೆಯಲ್ಲಿ ಇತರ ಎಲ್ಲಾ ಸಾಮಾಜಿಕ-ಆರ್ಥಿಕ ಮತ್ತು ಸಾಂಸ್ಕೃತಿಕ ಸಂಕೀರ್ಣತೆಗಳನ್ನು ಒಳಗಿಟ್ಟುಕೊಂಡಿರುವ ಎರಡು ಪ್ರಮುಖ ಅಂಶಗಳಿವೆ. ಮೊದಲನೆಯದು ಭಾರತೀಯ ತಂದೆ-ತಾಯಿಗಳು ವಯಸ್ಕಳಾದರೂ ಅವಿವಾಹಿತಳಾದ ಮಗಳು ಮನೆಯಲ್ಲಿದ್ದರೆ ಕಳಂಕವೆಂದಲ್ಲದಿದ್ದರೂ, ಸಾಮಾಜಿಕ ಮುಜುಗರಕ್ಕೆ ಕಾರಣ ಎಂದು ಭಾವಿಸುತ್ತಾ ತಮ್ಮ ಮಗಳು ಎಷ್ಟೇ ಉನ್ನತ ಶಿಕ್ಷಣವನ್ನು ಪಡೆದಿದ್ದರೂ, ಆರ್ಥಿಕವಾಗಿ  ಸ್ವತಂತ್ರಳಾಗಿರಬಲ್ಲ ಎಷ್ಟೇ ಸಾಧ್ಯತೆಯಿದ್ದರೂ, ಮದುವೆ ಮಾಡಿಮುಗಿಸುವ ಆತಂಕದಲ್ಲಿರುತ್ತಾರೆ. ಎರಡೆನೆಯದಾಗಿ ಮದುವೆಯ ಮೂಲಕವೋ ಅಥವಾ ವಲಸೆಯ ಮೂಲಕವೋ ಹೊರದೇಶಗಳಲ್ಲಿ ಒಳ್ಳೆಯ ಬದುಕನ್ನು ಕಂಡುಕೊಳ್ಳುವ ಗೀಳು. ಬಹುಪಾಲು ಭಾರತೀಯ ಮಹಿಳೆಯರಿಗೆ ಮದುವೆಯ ಮೂಲಕ ಹೊರದೇಶಗಳಿಗೆ ವಲಸೆ ಹೋಗುವುದೇ ಉತ್ತಮ ಮಾರ್ಗವೆಂಬ ಭಾವನೆಯಿರುವುದರಿಂದ ಅವರ ತಂದೆ-ತಾಯಿಗಳು ಅನಿವಾಸಿ ಗಂಡನ ತಲಾಷಿನಲ್ಲಿರುತ್ತಾರೆ. ಇದರ ಜೊತೆಗೆ ಇನ್ನೂ ಕೆಲವು ಸಾಮಾಜಿಕ ಸಾಂಸ್ಕೃತಿಕ ಸ್ವರೂಪದ ಅಂಶಗಳೂ ಇವನ್ನು ಪ್ರಭಾವಿಸುತ್ತವೆ. ಅದರಲ್ಲಿ ಮುಖ್ಯವಾದದ್ದು ಗಂಡಿನ ಕಡೆಯವರಿಗೆ ಕೋಪ ಬರಬಹುದೆಂಬ ಭಯದಿಂದ ಅನಿವಾಸಿ ವರನ ಹಿನ್ನೆಲೆಯನ್ನು ಆಳವಾಗಿ ಪರಿಶೀಲಿಸುವುದಕ್ಕೆ ಹೆಣ್ಣಿನ ಕಡೆಯವರು ಹಿಂಜರಿಯುತ್ತಾರೆ. ಇದರ ಜೊತೆಗೆ ವರ್ಗ ಮತ್ತು ಸಮುದಾಯಗಳ ಬೇಧ-ಭಾವಿಲ್ಲದಂತೆ ಇಡೀ ಭಾರತೀಯ ಸಮಾಜದಲ್ಲಿ ಹೆಂಡತಿ ಇರುವುದೇ ಪ್ರಧಾನವಾಗಿ ಮನೆಯನ್ನು ನಡೆಸಲು ಮತ್ತು ಗಂಡನ ಕುಟುಂಬದವರ ಯೋಗಕ್ಷೇಮ ನೋಡಿಕೊಳ್ಳಲು ಎಂಬ ಭಾವನೆಯು ಬೇರುಬಿಟ್ಟಿರುವುದೂ ಸಹ ಎರಡನೇ ಪ್ರಮುಖ ಅಂಶವಾಗಿದೆ. ಗಂಡಿನ ಕಡೆಯವರು ಹೇಳುವ ಎರಡನೇ ಅಂಶವು ತಮ್ಮ ಮಗಳನ್ನು ಮದುವೆ ಮಾಡಿಕೊಳ್ಳಲು ಅವರಿಗಿರುವ ಸಹಜ ಸಮ್ಮತ ಕಾರಣವೆಂದು ಹೆಣ್ಣಿನ ಕುಟುಂಬದವರು ಸಹ ಒಪ್ಪಿಕೊಳ್ಳುತ್ತಾರೆ. ಆದರೆ ಮನೆಗೆಲಸ ಮಾಡುವುದು ಮತ್ತು ಹಿರಿಯರ ಯೋಗಕ್ಷೇಮ ನೋಡಿಕೊಳ್ಳುವ ಕೆಲಸ ತುಂಬಾ ದುಬಾರಿಯಾಗಿರುವ ವಿದೇಶದಲ್ಲಿ ತಾನು ಅವೆರಡೂ ಚಾಕರಿಯನ್ನು ಅಗ್ಗದ ದರದಲ್ಲಿ ಮಾಡುತ್ತಿರುವ ಕೆಲಸದವಳೇ ಹೊರತು ಗಂಡನ ಜೀವನ ಸಂಗಾತಿಯಲ್ಲವೆಂಬುದು ನಿಧಾನವಾಗಿ ಅರ್ಥವಾಗುತ್ತಿರುವ ಅಸಂಖ್ಯಾತ ಪ್ರಕರಣಗಳು ಸಂಭವಿಸುತ್ತಿವೆ.

ಭಾರತೀಯರ ಕಲ್ಪನೆಯಲ್ಲಿ ಅನಿವಾಸಿ ಭಾರತೀಯರಿಗೆ ಅಸಾಧಾರಣವಾದ ಸ್ಥಾಮಾನವಿದೆ. ಅವರು ಕಳಿಸುವ ಹಣದಿಂದ ಭಾರತದ ಆರ್ಥಿಕತೆ ಮಾತ್ರವಲ್ಲದ್ಸೆ ಅವರ ಕುಟುಂಬಗಳ ಪರಿಸ್ಥಿತಿಯೂ ಸುಧಾರಿಸುತ್ತದೆ. ಅಲ್ಲದೆ ದಿನೇದಿನೇ ಅವರ ಸಂಖೆಯೂ ಹೆಚ್ಚಾಗುತ್ತಿದೆ (ಹೆಚ್ಚೂ ಕಡಿಮೆ .೫೬ ಕೋಟಿ ಭಾರತೀಯರು ಹೊರ ದೇಶಗಳಲ್ಲಿ ನೆಲಸಿದ್ದಾರೆ). ಹಾಲಿ ಎನ್ಡಿಎ ಸರ್ಕಾರವು ಅನಿವಾಸಿ ಭಾರತೀಯರ ಹಣ ಮತ್ತು ಪ್ರಭಾವವನ್ನು ಬಹಳ ಕ್ರಿಯಾಶೀಲವಾಗಿ ದುಡಿಸಿಕೊಳ್ಳುತ್ತಿದೆ.

ಭಾರತ ಸರ್ಕಾರವು ಇಂಥಾ ವಿಷಯಗಳನ್ನು ಪರಿಹರಿಸಲು ತನಗೆ ದೂರು ಬರುವ ತನಕ ಕಾಯದೆ ತಾನೇ ಮುಂದಾಗಿ ಕ್ರಿಯಾಶೀಲವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ (ಇಂಥಾ ದೂರುಗಳನ್ನು ನಿಭಾಯಿಸಲೆಂದೇ ಪಂಜಾಬ್ ಸರ್ಕಾರವು ಪ್ರತ್ಯೇಕ ಪೂಲೀಸ್ ಠಾಣೆಗಳನ್ನು ಸ್ಥಾಪಿಸಿದೆ). ಆದರೆ ಇಂಥಾ ಪ್ರಕರಣಗಳಲ್ಲಿ ಆರೋಪಿಯನ್ನು ಭಾರತಕ್ಕೆ ಕರೆತಂದು ವಿಚಾರಣೆಯನ್ನು ಎದುರಿಸುವಂತೆ ಮಾಡಲು ಪೊಲೀಸ್ ಮತ್ತು ಕಾನೂನು ಪಾಲಕ ವ್ಯವಸ್ಥೆಗೆ ತುಂಬಾ ಕಷ್ಟವಾಗುತ್ತಿದೆ. ವಿಷಯದ ಬಗ್ಗೆ ಅಧ್ಯಯನ ಮಾಡಲು ಹಾಲಿ ಸರ್ಕಾರವು ನೇಮಿಸಿದ ಪರಿಣಿತರ ಸಮಿತಿಯು ಕೆಲವು ಶಿಫಾರಸ್ಸುಗಳನ್ನು ಮಾಡಿದೆ. ತಾವು ತ್ಯಜಿಸಿರುವ ಹೆಂಡತಿಯನ್ನು ಕಾಡಿಪೀಡಿಸುವ ಅನಿವಾಸಿ ಗಂಡಸಿನ ಪಾಸ್ಪೋರ್ಟನ್ನು ರದ್ದು ಮಾಡುವುದು, ತಪ್ಪಿತಸ್ತರನ್ನು ತಮ್ಮ ದೇಶಕ್ಕೆ ಹಸ್ತಾಂತರ ಮಾಡುವ ಒಪ್ಪಂದಗಳಲ್ಲಿ ಕೌಟುಂಬಿಕ ಹಿಂಸೆಯನ್ನೂ ಸೇರಿಸುವುದು, ಸಂತ್ರಸ್ತ ಮಹಿಳೆಗೆ ಆಯಾ ಭಾರತೀಯ ರಾಯಭಾರ ಕಚೇರಿಯಿಂದ ಹೆಚ್ಚಿನ ಹಣಕಾಸು ನೆರವನ್ನು ಒದಗಿಸಬೇಕೆಂಬ ಶಿಫಾರಸ್ಸುಗಳು ಅವುಗಳಲ್ಲಿ ಕೆಲವು. ಇದರ ಜೊತೆಗೆ ಕುರಿತು ಒಂದು ಕೇಂದ್ರೀಯ ಕಾನೂನೊಂದು ಜಾರಿಗೆ ಬರುವ ತನಕ ಎಲ್ಲಾ ರಾಜ್ಯ ಸರ್ಕಾರಗಳು ಅನಿವಾಸಿ ಭಾರತೀಯರ ಮದುವೆಯನ್ನು ಒಳಗೊಂಡಂತೆ ಎಲಾ ಮದುವೆಗಳನ್ನು ದಾಖಲಾತಿ ಮಾಡುವುದು (ರಿಜಿಸ್ಟ್ರೇಷನ್) ಮತ್ತು ಮದುವೆ ರಿಜಿಸ್ಟ್ರೇಷನ್ ಆರ್ಜಿಯಲ್ಲಿ ಗಂಡಿಗೆ ಸಂಬಂಧಪಟ್ಟಂತ ಎಲ್ಲಾ ಕಾನೂನು ವಿವರಗಳನ್ನು ಭರ್ತಿ ಮಾಡುವ ಪ್ರಸ್ತಾಪವನ್ನೂ ಹಾಗೂ ಇಂಥಾ ದೂರುಗಳನ್ನು ನಿರ್ವಹಿಸಲು ಒಂದು ರಾಷ್ಟ್ರೀಯ ಮಟ್ಟದ ವ್ಯವಸ್ಥೆಯನ್ನು ಸ್ಥಾಪಿಸುವ ಸಲಹೆಯನ್ನೂ ಸಮಿತಿಯು ಮಾಡಿದೆ.

ವಿದ್ಯಮಾನವನ್ನು ಮೇಲೆ ಸೂಚಿಸಲಾದ ಆಂಶಗಳನ್ನು ಹೊರತು ಪಡಿಸಿ ಪ್ರತ್ಯೇಕವಾಗಿ ನೋಡಲು ಬರುವುದಿಲ್ಲ. ಸರ್ಕಾರ ಮತ್ತು ಸಂಬಂಧಪಟ್ಟ ಎಲ್ಲಾ ಇಲಾಖೆ ಹಾಗೂ ಸಂಸ್ಥೆಗಳು ಇದನ್ನು ಬಗೆಹರಿಸಲು ಬೇಕಾದಂಥ ಬಹುಮುಖೀ ತಂತ್ರೋಪಾಯಗಳನ್ನು ಸಿದ್ಧಪಡಿಸಿಸಬೇಕು. ಇದು ಭಾರತೀಯ ಮಹಿಳೆಯರು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆಯ ಪರಿಣಾಮವೇ ಆಗಿದೆ. ಇದರಿಂದಾಗಿ ಮಹಿಳೆಯರು ಘನತೆಯಿಂದಲೂ ಬದುಕಲಾಗುತ್ತಿಲ್ಲ ಹಾಗೂ ಸಮಾಜಕ್ಕೆ ಕೊಡಬಹುದಾದ ಕೊಡುಗೆಯನ್ನೂ ನೀಡಲಾಗುತಿಲ್ಲ.

 ಕೃಪೆ: Economic and Political Weekly, Feb 10,  2018. Vol. 53. No.6                                                    (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )
               









ಕಾಮೆಂಟ್‌ಗಳಿಲ್ಲ: