ಬುಧವಾರ, ಅಕ್ಟೋಬರ್ 11, 2017

ಗೌರಿಯನ್ನು ಏಕೆ ಕೊಲ್ಲಲಾಗುವುದಿಲ್ಲ?


  ಅನುಶಿವಸುಂದರ್
Image result for ಗೌರಿಲಂಕೇಶ್
ಮುಕ್ತ ಮಾಧ್ಯಮಕ್ಕಿರುವ ನ್ಯಾಯಸಮ್ಮತ ಪಾತ್ರವನ್ನು ಉದ್ದೇಶಪೂರ್ವಕವಾಗಿ ನಾಶಗೊಳಿಸುತ್ತಿರುವುದರ ವಿರುದ್ಧ ನಾವೆಲ್ಲರೂ ಕೂಡಲೇ ಕಾರ್ಯಪ್ರವೃತ್ತರಾಗಬೇಕಿದೆ.

ಪತ್ರಕರ್ತೆ ಮತ್ತು ಸಂಪಾದಕಿ ಗೌರಿ ಲಂಕೇಶರನ್ನು ಅವರ ಮನೆಯ ಮುಂದೆಯೇ ಹತ್ಯೆ ಮಾಡಿ ಒಂದು ತಿಂಗಳೇ ಕಳೆದಿದ್ದರೂ ಆಕೆ ಇನ್ನೂ ಸಾರ್ವಜನಿಕ ನೆನಪಿನಲ್ಲಿ ಜೀವಂತವಾಗಿದ್ದಾರೆ. ಇದು ದೇಶಾದ್ಯಂತ ಆಕೆಯ ಹತ್ಯೆಯ ವಿರುದ್ಧ ಎಡಬಿಡದೆ ನಡೆಯುತ್ತಿರುವ ಪ್ರತಿಭಟನೆಗಳಿಂದ ಮತ್ತಷ್ಟು ಸ್ಪಷ್ಟವಾಗುತ್ತಿದೆ. ಅಕ್ಟೋಬರ್ ಗಾಂಧೀ ಜಯಂತಿಯಂದು ಮತ್ತು ಅವರ ಹತ್ಯೆಯಾಗಿ ಒಂದು ತಿಂಗಳು ತುಂಬಿದ ಅಕ್ಟೋಬರ್ ರಂದು ಪ್ರಜಾತಂತ್ರದ ಹತ್ಯೆಯನ್ನು ಖಂಡಿಸಿ ಮತ್ತು ಗೌರಿ ಲಂಕೇಶರ ಹಂತಕರನ್ನು ಕೂಡಲೇ ಪತ್ತೆಹಚ್ಚಿ ಬಂಧಿಸಲು ಆಗ್ರಹಿಸಿ ದೇಶಾದ್ಯಂತ ಪತ್ರಕರ್ತರು, ಕಲಾವಿದರು, ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಹಾಗು ಮತ್ತಿತರರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಕೊಲೆಯಾದ ಹಲವಾರು ಪತ್ರಕರ್ತರಲ್ಲಿ ಒಬ್ಬ ಪತ್ರಕರ್ತೆಯ ಸಾವು ಮಾತ್ರ ಏಕೆ ಇಷ್ಟೊಂದು ದೊಡ್ಡ ಪ್ರತಿರೋಧವನು ಹುಟ್ಟಿಸಿದೆ?

ಗೌರಿ ಲಂಕೇಶರಂತೆ ಹಲವಾರು ಪತ್ರಕರ್ತರು ಕೊಲೆಯಾಗಲ್ಪಟ್ಟಿದ್ದಾರೆ. ವಾಸ್ತವವಾಗಿ ಸೆಪ್ಟೆಂಬರ್ ೨೦ರಂದು ಶಂತನು ಭೌಮಿಕ್ ಎಂಬ ಮತ್ತೊಬ್ಬ ಪತ್ರಕರ್ತರನ್ನು ಅಗರ್ತಲಾದಲ್ಲಿ ಇಂಡಿಜೀನಿಯಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಟಿಎಫ್) ಎಂಬ ಸಂಘಟನೆಯ ಪ್ರತಿಭಟನಾ ಪ್ರದರ್ಶನವನ್ನು ವರದಿ ಮಾಡುತ್ತಿದ್ದಾಗ ಇರಿದು ಕೊಲ್ಲಲಾಯಿತು. ವರ್ಷ ಕೊಲ್ಲಲ್ಪಟ್ಟ ಎಲ್ಲಾ ವರದಿಗಾರರನ್ನು ಅವರ ವರದಿಗಾರಿಕೆಗಾಗಿಯೇ ಕೊಲ್ಲಲಾಗಿದೆಯೆಂದು ಹೇಳಲಾಗದಿದ್ದರೂ ವರ್ಷ ಒಟ್ಟು ಎಂಟು ಪತ್ರಕರ್ತರನ್ನು ಕೊಲ್ಲಲಾಗಿದೆ. ಆದರೂ ಗೌರಿ ಲಂಕೇಶರ ಹತ್ಯೆಯಿಂದ ಜನರ ಸಹನೆಯ ಕಟ್ಟೆ ಒಡೆದಂತಾಗಿದೆ. ದೇಶದಲ್ಲಿರುವ ರಾಜಕೀಯ ವಾತಾವರಣದಿಂದ ಉತ್ತೇಜಿತಗೊಂಡಿರುವ ಗುಂಪುಗಳು ನಡೆಸುತ್ತಿರುವ ಗುಂಪುಹತ್ಯೆ, ಹಿಂಸಾತ್ಮಕ ದಾಳಿ ಮತ್ತು ಕೊಲೆಗಳಿಂದ ಕಳವಳಗೊಂಡಿರುವ ಪತ್ರಕರ್ತರನ್ನೂ ಒಳಗೊಂಡಂತೆ ಹಲವಾರು ನಾಗರಿಕ ಸಮಾಜದ ಗುಂಪುಗಳನ್ನು ಹತ್ಯೆಯು ಒಟ್ಟಿಗೆ ತಂದಿವೆ.

ಗೌರಿ ಲಂಕೇಶ್ ಮತ್ತು ಭೌಮಿಕ್ ಅವರ ಹತ್ಯೆಯ ನಂತರ ದೇಶದ ಮುಂದಿರುವ ಪ್ರಧಾನ ವಿಷಯ ಪತ್ರಕರ್ತರ ಸುರಕ್ಷತೆಯದ್ದಲ್ಲ. ಬದಲಿಗೆ ಒಂದು ಪ್ರಜಾತಂತ್ರದಲ್ಲಿ ಸ್ವತಂತ್ರ ಮಾಧ್ಯಮದ ಪಾತ್ರವು ಎದುರಿಸುತ್ತಿರುವ ಬೆದರಿಕೆಯದ್ದು. ತುರ್ತುಪರಿಸ್ಥಿತಿಯ ಸಮಯದಲ್ಲಿ ಇಡೀ ರಾಷ್ಟ್ರಕ್ಕೇ ಗಂಡಾಂತರ ಒದಗಿದೆ ಎಂದು ಭಾವಿಸಿದ್ದ ಇಂದಿರಾಗಾಂಧಿಯವರ ದೃಷ್ಟಿಯಲ್ಲಿ ಮಾಧ್ಯಮಗಳಿಗೆ ಸ್ವತಂತ್ರವಾಗಿ ಕಾರ್ಯಾಚರಣೆ ಮಾಡಲು ಅವಕಾಶಕೊಡಬೇಕೆಂಬ ವಿಷಯ ಯಾವುದೇ ಮಹತ್ವವನ್ನು ಪಡೆದುಕೊಂಡಿರಲಿಲ್ಲ. ಅಸ್ಥಿತ್ವದಲ್ಲಿದ್ದ ಶಾಸನಗಳನ್ನು ಬಳಸಿಕೊಂಡು ಆಕೆ ತುರ್ತುಪರಿಸ್ಥಿತಿಯನ್ನು ಘೋಷಿಸಿ ಪತ್ರಿಕಾ ಸ್ವಾತಂತ್ರ್ಯವನ್ನು ನಿಷೇಧಿಸಿದರು. ಇಂದು ಜನರು ಅಘೋಷಿತ ತುರ್ತುಪರಿಸ್ಥಿತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಈಗ ನೇರವಾಗಿ ಪತ್ರಿಕಾ ಸ್ವಾತಂತ್ರ್ಯವನ್ನು ನಿಷೇಧಿಸಿಲ್ಲ. ಆದರೆ, ಯಾವುದನ್ನು ಭೀತಿಯನ್ನು ಬಿತ್ತುವ ರಾಷ್ಟ್ರೀಯ ಯೋಜನೆ ಎಂದು ಎನ್ಡಿಟಿವಿ-ಇಂಡಿಯಾದ ನಿರೂಪಕ ರವೀಶ್ಕುಮಾರ್ ಅವರು ಬಣ್ಣಿಸಿದ್ದಾರೋ ಅದು ನಿಷೇಧದ ಉದ್ದೇಶಗಳನ್ನು ಈಡೇರಿಸುತ್ತಿದೆ. ಸೆಪ್ಟೆಂಬರ್ ರಿಂದಾಚೆಗೆ ರವೀಶ್ ಕುಮಾರ್ ಅವರನ್ನೂ ಒಳಗೊಂಡಂತೆ ಹಲವು ಸ್ವತಂತ್ರ ಮನೋವೃತ್ತಿಯ ಪತ್ರಕರ್ತರಿಗೆ ಗೌರಿ ಲಂಕೇಶರ ಗತಿಯೇ ಒದಗುತ್ತದೆಂಬ ಬೆದರಿಕೆ ಕರೆಗಳು ಬರುತ್ತಿವೆ. ಬೆದರಿಕೆ ಕರೆಗಳನ್ನು ಮಾಡಿದವರಲ್ಲಿ ಕನಿಷ್ಟ ಒಬ್ಬರನ್ನಂತೂ ಪತ್ತೆ ಹಚ್ಚಲಾಗಿದ್ದು ಆತ ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿಯನ್ನು ಅನುಸರಿಸುವುದಲ್ಲದೆ ಪ್ರಧಾನಿಯೂ ಆತನನ್ನು ಅನುಸರಿಸುತ್ತಾರೆ. ಪ್ರಧಾನಿಗಳು ಮಾತ್ರ  ಆತನನ್ನು ಇನ್ನು ತರಾಟೆಗೂ ತೆಗೆದುಕೊಂಡಿಲ್ಲ ಅಥವಾ ತನ್ನ ಅನುಚರರ ಪಟ್ಟಿಯಿಂದ ತೆಗೆದೂ ಹಾಕಿಲ್ಲ. ಬಗೆಯ ಉದ್ದೇಶಪೂರ್ವಕ ನಿಷ್ಕ್ರಿಯತೆ ಮತ್ತು ಭಿನ್ನಮತ ಹಾಗೂ ವಿಮರ್ಶೆಗಳನ್ನು ದೇಶದ ಮೇಲಿನ ದಾಳಿಗೆ ಸಮೀಕರಿಸುವಂಥ ಕಥನಗಳನ್ನು ಉದ್ದೇಶಪೂರ್ವಕವಾಗಿ ಹರಿಬಿಡುವ ಸರ್ಕಾರದ ಕ್ರಿಯೆಗಳು ಒಂದು ಸಂದೇಶವನ್ನು ಮಾತ್ರ ಅತ್ಯಂತ ಸ್ಪಷ್ಟವಾಗಿ ರವಾನಿಸುತ್ತಿದೆ; ರವೀಶ್ಕುಮಾರ್ ರಂಥ ಪತ್ರಕರ್ತರ ಮೇಲೆ ದಾಳಿ ಮಾಡುವುದು ಅಥವಾ ಒಬ್ಬ ದೇಶದ್ರೋಹಿ ಪತ್ರಕರ್ತರನ್ನು ಕೊಲ್ಲುವುದು ನ್ಯಾಯಸಮ್ಮತವಾದದ್ದು.

ಆದರೆ, ಕೆಲವು ಪತ್ರಕರ್ತರಿಗೆ ಬೆದರಿಕೆ ಕರೆಗಳು ಬಂದ ಮಾತ್ರಕ್ಕೆ ತಮ್ಮ ರಕ್ಷಣೆಗಾಗಿ ಒಂದು ವಿಶೇಷ ಕಾನೂನು ಜಾರಿಯಾಗಬೇಕೆಂದು ಅವರು ಆಗ್ರಹಿಸುವುದು ಸರಿಯೇ? ವರ್ಷದ ಏಪ್ರಿಲ್ ತಿಂಗಳಲ್ಲಿ ಮಹಾರಾಷ್ಟ್ರ ಸರ್ಕಾರವು ಮಹಾರಾಷ್ಟ್ರ ಪತ್ರಕರ್ತರ ಮತ್ತು ಮಾಧ್ಯಮ ಸಂಸ್ಥೆಗಳ (ಹಿಂಸೆ ಮತ್ತು ಆಸ್ತಿ ಹಾನಿ ಅಥವಾ ನಷ್ಟ ಪ್ರತಿಬಂಧಕ) ಕಾಯಿದೆಯನ್ನು ಜಾರಿಗೆ ತಂದಿತು. ಮುಕ್ತ ಮಾಧ್ಯಮಗಳ ಸ್ವಾಯತ್ತತೆಯ ಹಿನ್ನೆಲೆಯಲ್ಲಿ ಅಂಥಾ ಒಂದು ಕಾನೂನು ಹಲವಾರು ವಿಮರ್ಶೆಗಳನ್ನು ಮತ್ತು ಪ್ರಶ್ನೆಗಳನ್ನೂ ಹುಟ್ಟಿಹಾಕುತ್ತದೆ. ಪ್ರಭುತ್ವದ ಜೊತೆ ಹಲವಾರು ಬಾರಿ ಸಂಘರ್ಷದಲ್ಲಿರುವ ಮಾಧ್ಯಮವು ತನ್ನನ್ನು ರೀತಿ ವಿಶೇಷವಾಗಿ ಪರಿಗಣಿಸಬೇಕೆಂದು ಕೇಳುವುದು ತರವೇ? ಮಾಹಿತಿ ಹಕ್ಕುಗಳ ಕಾರ್ಯಕರ್ತರಂಥ ಕಾರ್ಯಕರ್ತರು ಪ್ರಬಲರನ್ನು ಬಯಲು ಮಾಡುವ ಪ್ರಕ್ರಿಯೆಯಲ್ಲಿ ಜೀವಗಳನ್ನೇ ಕಳೆದುಕೊಳ್ಳುತ್ತಿರುವಾಗ ಅದೇ ಉದ್ದೇಶಗಳನ್ನು ಇಟ್ಟುಕೊಂಡಿರುವ ಪತ್ರಕರ್ತರು ಮಾತ್ರ ವಿಶೇಷ ರಕ್ಷಣೆಯನ್ನು ನಿರೀಕ್ಷಿಸುವುದೇಕೆ? ಪತ್ರಕರ್ತರಿಗೆ ಮತ್ತು ಕಾರ್ಯಕರ್ತರಿಗೆ ನಿಜವಾದ ರಕ್ಷಣೆ ದೊರೆಯುವುದು ಅಧಿಕಾರದೆದುರು ಸತ್ಯವನ್ನು ನುಡಿಯುವುದಕ್ಕೆ ಇರುವ ಪಾತ್ರವನ್ನು ಅರ್ಥಮಾಡಿಕೊಂಡಿರುವ ಒಂದು ಸಮಾಜದಿಂದ ಮಾತ್ರ.

ಅದೇ ಸಂದರ್ಭದಲ್ಲಿ ಮುಕ್ತಮಾಧ್ಯಮವು ವಹಿಸಬೇಕಾದ ಟೀಕಾಕಾರನ ಪಾತ್ರಕ್ಕೆ ಇರುವ ಮಾನ್ಯತೆಯು ದಿನೇದಿನೇ ಕುಸಿಯುತ್ತಿರುವ ಬಗ್ಗೆಯು ನಾವಿಂದು ಚರ್ಚಿಸಬೇಕಿದೆ. ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಧಾರೆ ಮಾಧ್ಯಮಗಳೆನ್ನೆಲ್ಲ ನಕಲಿ ಮಾಧ್ಯಮವೆಂದು ದಿನಬೆಳಗಾದರೆ ಬಹಿರಂಗವಾಗಿ ದೂಷಿಸುತ್ತಾ ಅಮಾನ್ಯಗಳಿಸುತ್ತಿದ್ದರೆ ಇಲ್ಲಿ ಅದು  ಅತ್ಯಂತ ನಯವಂಚಕತನದಿಂದ ಸಂಭವಿಸುತ್ತಿದೆ.

ಇವೆಲ್ಲ ೨೦೧೪ರಲ್ಲಿ ಮೋದಿಯು ಅಧಿಕಾರಕ್ಕೆ ಬಂದ ನಂತರದಿಂದ ಪ್ರಾರಂಭಗೊಂಡಿತು. ತಾನು ನೇರವಾಗಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುವುದಿಲ್ಲವೆಂದು ಪ್ರಧಾನಿಗಳು ಸ್ಪಷ್ಟಪಡಿಸಿದ್ದರು. ಅವರು ಈವರೆಗೆ ಒಂದೂ ಪತ್ರಿಕಾಗೋಷ್ಟಿಯನ್ನು ನಡೆಸಿಲ್ಲ. ಬದಲಿಗೆ ತಮ್ಮ ಬಗ್ಗೆ ಸಹಾನುಭೂತಿ ಇರುವ ಮಾಧ್ಯಮ ಸಂಸ್ಥೆಗಳಿಗೆ ಮಾತ್ರ ಪ್ರತ್ಯೇಕ ಸಂದರ್ಶನಗಳನ್ನು ನೀಡಿದ್ದಾರೆ. ಇದರ ಜೊತೆಗೆ ಸಾಕಷ್ಟು ಪ್ರಚಾರ ಮಾಡಿ ನಡೆಸಲಾಗುವ ಬಹಿರಂಗಸಭೆಗಳಲ್ಲಿ ಭಾರತದ ಸಾರ್ವಜನಿಕರ ಜೊತೆ ಅವರು ಬಹಿರಂಗವಾದಸ್ವಗv’ ಸಂಭಾಷಣೆ ನಡೆಸುತ್ತಾರೆ ಅಥವಾ ತಿಂಗಳಿಗೊಮ್ಮೆ ಬಿತ್ತರಗೊಳ್ಳುವ ಮನ್ ಕಿ ಬಾತ್ ಮತ್ತು ಪತ್ರಿಕೆಗಳಿಗೆ ನೀಡುವ ವಿಭಿನ್ನ ಬಗೆಯ ಜಾಹಿರಾತುಗಳ ಮೂಲಕ ತಮ್ಮ ಮತ್ತು ತಮ್ಮ ಸರ್ಕಾರಗಳನ್ನು ವೈಭವೀಕರಿಸಿಕೊಳ್ಳುತ್ತಾರೆ. ಮಾಧ್ಯಮವನ್ನು ನೇರವಾಗಿ ಮುಖಾಮುಖಿ ಮಾಡುವುದಿಲ್ಲವೆಂಬ ಪ್ರಧಾನಿಯವರ ನಿರ್ಧಾರವನ್ನು ಏಕೆ ಯಾವ ಪ್ರಧಾನ ಮಾಧ್ಯಮಸಂಸ್ಥೆಗಳೂ ಪ್ರಶ್ನಿಸಿಲ್ಲ? ಒಂದು ಚುನಾಯಿತ ಸರ್ಕಾರವು ಎಷ್ಟೇ ಟೀಕೆಯಿಂದ ಕೂಡಿದ ಪ್ರಶ್ನೆಗಳಿಗೂ ಉತ್ತರ ನೀಡುವ ಬಾಧ್ಯತೆ ಹೊಂದಿರುವಾಗ ಪ್ರಶ್ನೆಗಳಿಗೆ ಉತ್ತರ ಕೊಡುವುದನ್ನೇ ಒಂದು ಉಪಕಾರವೆಂದು ಏಕೆ ಪರಿಗಣಿಸಲಾಗುತ್ತಿದೆ? ವಾಸ್ತವವಾಗಿ ಅಂಥ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ನೀವು ಪ್ರಜೆಗಳಿಗೆ ಉತ್ತರದಾಯಿಗಳೆಂಬ ಸಂದೇಶವನ್ನು ನೀಡಿದಂತಾಗುತ್ತದೆ. ಅದಕ್ಕೆ ಅವಕಾಶವನ್ನು ನಿರಾಕರಿಸುವ ಮೂಲಕ ಜನರ ಆಲೋಚನೆಗಳ ಬಗ್ಗೆ ನೀವು ಕಿಂಚಿತ್ತೂ ಕಾಳಜಿ ಮಾಡುವುದಿಲ್ಲವಂಬ ಸಂದೇಶವನ್ನಷ್ಟೇ ರವಾನಿಸಿದಂತಾಗುತ್ತದೆ. ಅಂಥ ಧೋರಣೆಯು ಪ್ರಜಾತಂತ್ರಕ್ಕೆ ತದ್ವಿರುದ್ಧವಾದ ಧೋರಣೆಯಾಗಿದೆ.

ತಮ್ಮ ನ್ಯಾಯಸಮ್ಮತ ಪ್ರಶ್ನೆಗಳನ್ನು ಕೇಳಲು ಮಾಧ್ಯಮಗಳಿಗೆ ಅವಕಾಶವನ್ನು ನಿರಾಕರಿಸುವ ಮೂಲಕ ಮಾತ್ರವಲ್ಲದೆ ಇನ್ನೂ ಹಲವು ರೀತಿಗಳಲ್ಲಿ ಮಾಧ್ಯಮ ಸ್ವಾತಂತ್ರ್ಯವನ್ನು ಹರಣಮಾಡಲಾಗುತ್ತಿದೆ. ಕಿರಿಕಿರಿ ಉಂಟುಮಾಡುತ್ತಿದ್ದ ಮಾಧ್ಯಮ ಸಂಸ್ಥೆಗಳನ್ನು ಸರ್ಕಾರಕ್ಕೆ ಸನಿಹವಿರುವ ಉದ್ಯಮಿಗಳ ಮೂಲಕ ಖರೀದಿಸುವುದು ಮತ್ತು ಸರ್ಕಾರದ ಬಗ್ಗೆ ತುಂಬಾ ವಿಮರ್ಶಾತ್ಮಕ ಧೋರಣೆಯುಳ್ಳ ಸಂಪಾದಕರನ್ನು ಹದ್ದುಬಸ್ತಿಗೆ ತರುವುದು ಅಥವಾ ವಜಾ ಮಾಡುವ ಮೂಲಕ ಸಹಾ ಮಾಧ್ಯಮ ಸ್ವಾತಂತ್ರ್ಯವನ್ನು ಹರಣಮಾಡಲಾಗುತ್ತಿದೆ. ಮಾಧ್ಯಮದೊಳಗೆ ವಿಮರ್ಶಾತ್ಮಕ ಅಭಿವ್ಯಕ್ತಿಗೆ ಇದ್ದ ಅವಕಾಶಗಳು ಕಿರಿದಾಗುತ್ತಿದೆ. ಇದರ ಜೊತೆಗೆ, ಕಾರ್ಪೊರೇಟೀಕರಣಗೊಂಡ ಮಾಧ್ಯಮಲೋಕದಲ್ಲಿನ ಕತ್ತುಕೊಯ್ಯುವ ಸ್ಪರ್ಧಾತ್ಮಕ ಸನ್ನಿವೇಶವು ಎಲ್ಲರಿಗೂ ಸಂಬಂಧಪಟ್ಟಂಥ ವಿಶಾಲವಾದ ವಿಷಯಗಳ ಬಗ್ಗೆಯೂ ಪತ್ರಕರ್ತರ ನಡುವೆ ಒಂದು ಸೌಹಾರ್ದತೆ ಮೂಡಲಾಗದಂಥ ಪರಿಸ್ಥಿತಿಯನ್ನು ಸೃಷ್ಟಿಸಿದೆ.

ಇಂದು ಸರ್ಕಾರಗಳಿಗೆ ಮತ್ತು ಖಾಸಗಿ ಕಾರ್ಪೊರೇಟ್ ಸಂಸ್ಥೆಗಳಿಗೆ ಬಗ್ಗದ ಕೆಲವೇ ಪರಿಣಾಮಕಾರೀ ಪತ್ರಕರ್ತರ ಸಂಘಗಳೂ, ಪ್ರೆಸ್ ಕ್ಲಬ್ಗಳೂ ಅಸ್ಥಿತ್ವದಲ್ಲಿದ್ದು ಬೆರಳೆಣಿಕೆಯಷ್ಟು ಸ್ವತಂತ್ರ ಸಂಸ್ಥೆಗಳು ಮಾತ್ರ ಪತ್ರಕರ್ತರನ್ನು ಒಟ್ಟಿಗೆ ತರಲು ಯತ್ನಿಸುತ್ತಿವೆ. ವಾಸ್ತವವು ಹೀಗಿರುವ ಹೊತ್ತಿನಲ್ಲಿ ಗೌರಿ ಲಂಕೇಶರ ಹತ್ಯೆಯು ಪತ್ರಕರ್ತರನ್ನು ದೊಡ್ಡ ಸಂಖ್ಯೆಯಲ್ಲಿ ಹೊರಬಂದು ಪ್ರತಿಭಟಿಸುವಂತೆ ಪ್ರೇರೇಪಿಸಿರುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ. ಆದರೆ ಪ್ರತಿಭಟನೆಗಳು  ಪತ್ರಕರ್ತರಿಗೆ ಸುರಕ್ಷತೆಯನ್ನು ಆಗ್ರಹಿಸುವುದರಾಚೆಗೂ ಬೆಳೆಯಬೇಕಿದೆ. ಪ್ರಭುತ್ವ ಮತ್ತು ಇನ್ನಿತರ ಪ್ರಬಲರನ್ನು ಪ್ರಶ್ನಿಸುವ ಸ್ವತಂತ್ರ ಧ್ವನಿಯಾಗಿರಬೇಕಾದ ಮಾಧ್ಯಮದ ನ್ಯಾಯಸಮ್ಮತ ಪಾತ್ರವನ್ನು ಉದ್ದೇಶಪೂರ್ವಕವಾಗಿ ನಿಗ್ರಹಿಸುತ್ತಿರುವ ಹುನ್ನಾರಗಳ ವಿರುದ್ಧವೂ ಅದು ತನ್ನ ಪ್ರತಿರೋಧವನ್ನು ವಿಸ್ತರಿಸಿಕೊಳ್ಳಬೇಕಿದೆ.

 ಕೃಪೆ: Economic and Political Weekly , Oct 7, 2017. Vol. 52. No. 40
                                                                                        
                                                                                               ಕಾಮೆಂಟ್‌ಗಳಿಲ್ಲ: