ಬುಧವಾರ, ಅಕ್ಟೋಬರ್ 4, 2017

ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ಹೋರಾಟ: ಬಂಧನಗಳನ್ನು ಕಿತ್ತೊಗೆಯುತ್ತಾ..

ಅನು: ಶಿವಸುಂದರ್
Image result for banaras hindu university women protest

ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ಹೋರಾಟವು ಮಹಿಳಾ ಹಕ್ಕುಗಳಿಗಾಗಿ ವಿಸ್ತೃತ ವಾಗಿ ನಡೆಯುತ್ತಿರುವ ಹೋರಾಟಗಳ ಪ್ರತಿಧ್ವನಿಯೇ ಆಗಿದೆ.

ಭಾರತದ ಯುವತಿಯರು ಉನ್ನತ ವ್ಯಾಸಂಗವೆಂಬುದು ಮದುವೆಮಾಡಿಕೊಳ್ಳಲು ಬೇಕಾದ ಅರ್ಹತೆಯೆಂದು ಭಾವಿಸುತ್ತಿದ್ದ ಕಾಲ ಮುಗಿಯಿತೆಂದು ಕಾಣುತ್ತಿದೆ. ವಿಶ್ವವಿದ್ಯಾಲಂiಗಳ ಯುವತಿಯರು ಬೀದಿಗಿಳಿದು, ತಾವೇ ತಮ್ಮ ಕೈಯಾರೆ ಬರೆದ ಭಿತ್ತಿಪತ್ರಗಳನ್ನು ಹಿಡಿದುಕೊಂಡು ತಮ್ಮ ಹಕ್ಕುಗಳಿಗಾಗಿ ಘೋಷಣೆಗಳನ್ನು ಕೂಗುತ್ತಿರುವುದನ್ನು ಗಮನಿಸಿದರೆ ಉನ್ನತ ಶಿಕ್ಷಣವು ಅವರಿಗೆ ಪ್ರಶ್ನೆಗಳನ್ನು ಕೇಳುವಂತೆ ಪ್ರೇರೇಪಿಸುತ್ತ್ತಿರುವುದು ಕಂಡುಬರುತ್ತದೆ. ಹಾಗೆ ನೋಡಿದಲ್ಲಿ, ಶಿಕ್ಷಣವು ಸಾರಾಂಶದಲ್ಲಿ ಮಾಡಬೇಕಿರುವುದು ಸಹ ಇದನ್ನೇ. ಆದರೆ ರೀತಿ ಪ್ರಶ್ನೆಗಳನ್ನು ಕೇಳಿದ ಸಲುವಾಗಿಯೇ ಅವರನ್ನು ಅವಹೇಳನ ಮಾಡಲಾಗುತ್ತಿದೆ, ಅಪಹಾಸ್ಯಕ್ಕೆ ಗುರಿಮಾಡಲಾಗುತ್ತಿದೆ ಮಾತ್ರವಲ್ಲ, ಪೊಲೀಸರು ಹೊಡೆದು ಬಡಿದು ಅವರು ಹೋರಾಟವನ್ನು ಹಿಮ್ಮೆಟ್ಟಿಸುತ್ತಿದ್ದಾರೆ. ೧೦೧ ವರ್ಷಗಳಷ್ತು ಇತಿಹಾಸವಿರುವ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ (ಬಿಎಚ್ಯು) ಇತ್ತೀಚಿಗೆ ನಡೆದಿರುವ ಬೆಳವಣಿಗೆಗಳು ಕಣ್ಣಿದ್ದೂ ಕುರುಡಂತಿರುವವರನ್ನು ಬಿಟ್ಟರೆ ಮಿಕ್ಕಿನ್ಯಾರಿಗೂ ಆಶ್ಚರ್ಯ ಹುಟ್ಟಿಸಬೇಕಿಲ್ಲ. ಅಂಥಾ  ಕುರುಡರ ಸಾಲಿಗೆ ೧೦,೦೦೦ ದಷ್ಟು ವಿದ್ಯಾರ್ಥಿನಿಯರನ್ನು ಹೊಂದಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಗಿರೀಶ್ ಚಂದ್ರ ತ್ರಿಪಾಠಿಯವರೂ ಸೇರುತ್ತಾರೆ. ಅವರ ಪ್ರಕಾರ ವಿದ್ಯಾರ್ಥಿನಿಯರ ಪ್ರತಿಭಟನೆಗಳಿಗೆ ಕಾರಣವಾಗಿರುವವರು ಮೋದಿ ಮತ್ತು ಉತ್ತರಪ್ರದೇಶದ ಹಾಲಿ ಬಿಜೆಪಿ ಸರ್ಕಾರಗಳನ್ನು ವಿರೋಧಿಸುವ ಬಾಹ್ಯ ಶಕ್ತಿಗಳು. ಹಲವು ಪತ್ರಿಕಾ ಸಂದರ್ಶನಗಳಲ್ಲಿ ಅವರು ಹೇಗೆ ಮುಗ್ಧ ಮತ್ತು ಅಪ್ರಬುದ್ಧ ಮನಸ್ಸುಗಳನ್ನು ಸುಳ್ಳುಗಳನ್ನು ಸತ್ಯದಂತೆ ಬಿಂಬಿಸಲು ಯತ್ನಿಸುವ ಬಾಹ್ಯ ಶಕ್ತಿಗಳು ಪ್ರಭಾವಿಸುತ್ತಿದ್ದಾರೆಂದು ದೂರಿದ್ದಾರೆ. ತ್ರಿಪಾಠಿಯವರು ಸುಳ್ಳು ಎಂದು ಸೂಚಿಸುತ್ತಿರುವುದು ಸೆಪ್ಟೆಂಬರ್ ೨೧ ರಂದು ವಿಶ್ವವಿದ್ಯಾಲಯದ ಕ್ಯಾಂಪಸ್ಸಿನೊಳಗಡೆ ವಿದ್ಯಾರ್ಥಿನಿಯೊಬ್ಬಳು ಅನುಭವಿಸಿದ ಲೈಂಗಿಕ ಕಿರುಕುಳದ ಘಟನೆಯನ್ನು. ವಿಶ್ವವಿದ್ಯಾಲಯದ ಆಡಳಿತ ಮತ್ತು ಭದ್ರತಾ ಸಿಬ್ಬಂದಿಗಳು ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದರ ಬದಲು ದೂರು ನೀಡಿದವರನೇ ದೂಷಿಸಲಾರಂಭಿಸಿದರು. ಅಷ್ಟು ರಾತ್ರಿಯಲ್ಲಿ ಹೊರಿಗಿದ್ದಿದ್ದೇಕೆ ಎಂದು ಕಿರುಕುಳಕ್ಕೆ ಗುರಿಯಾದವರನ್ನೇ ತರಾಟೆಗೆ ತೆಗೆದುಕೊಂಡುಬಿಟ್ಟರು. ಹೀಗೆ ಎಂದಿನಂತೆ ಕಿರುಕುಳಕ್ಕೆ  ತುತ್ತಾದವರನ್ನೇ ದೂಷಿಸುವ ಮೂಲಕ ಮತ್ತು ಪ್ರತಿಭಟೆನೆಗೆ ಕಾರಣವಾದ ಘಟನೆಯನ್ನೇ ನಿರಾಕರಿಸುವ ಮೂಲಕ ತ್ರಿಪಾಠಿಯವರು ಮತ್ತು ವಿಶ್ವವಿದ್ಯಾಲಯದ ಆಡಳಿತ ವರ್ಗ ತಮ್ಮಲ್ಲಿ ಆಳವಾಗಿ ಬೇರುಬಿಟ್ಟಿರುವ ಮಹಿಳಾ ವಿರೋಧಿ ಮನೋವೃತ್ತಿಯನ್ನೂ ತೋರಿಸಿಕೊಂಡಿದ್ದಾರೆವಿಶ್ವವಿದ್ಯಾಲಯದ ಯುವತಿಯರ ಸ್ವಾಯತ್ತ ವ್ಯಕ್ತಿತ್ವವನ್ನೇ ನಿರಾಕರಿಸುತ್ತಾ ಅವರನ್ನು ಹೊರಗಿನ ಪ್ರಭಾವಗಳಿಗೆ ತಕ್ಕಂತೆ ಕುಣಿಯುವ ಕೀಲುಗೊಂಬೆಗಳೆಂದು ಪರಿಗಣಿಸುವ ಪುರುಷ ಪ್ರಧಾನ ಧೋರಣೆಯನ್ನೂ ಸಹ ಬಯಲುಮಾಡಿಕೊಂಡಿದ್ದಾರೆ.

ಬಿಎಚ್ಯು ವಿದ್ಯಾರ್ಥಿನಿಯರನ್ನು ಯಾರೂ ಪ್ರತಿಭಟನೆಗೆ ಪ್ರಚೋದಿಸಿರಲಿಲ್ಲ. ಆಡಳಿತವರ್ಗದ ಬಗೆಯ ಧೋರಣೆಯೇ ವಿದ್ಯಾರ್ಥಿನಿಯರನ್ನು ಇನ್ನೂ ತೀವ್ರವಾಗಿ ಪ್ರತಿಭಟನೆಗೆ ಇಳಿಯುವಂತೆ ಪ್ರಚೋದಿಸಿತು. ಏಕೆಂದರೆ ಕ್ಯಾಂಪಸ್ಸಿನಲ್ಲಿ ಲೈಂಗಿಕ ಕಿರುಕುಳದ ಘಟನೆ ಪದೇ ಪದೇ ನಡೆಯುತ್ತಲೇ ಇತ್ತು. ಮತ್ತು ಇತರ ಹತ್ತು ಹಲವು ಸಂದರ್ಭಗಳಲ್ಲಿ ಸಲ್ಲಿಸಲಾದ ಇಂಥಾ ದೂರುಗಳ ಬಗ್ಗೆ ಆಡಳಿತ ವರ್ಗ  ಪುರುಷ ಪ್ರಧಾನ ಧೋರಣೆಯ ಪ್ರತಿಕ್ರಿಯೆಯನ್ನೇ ನೀಡುತ್ತಾ ಬಂದಿತ್ತು. ದೇಶದ ಹಲವಾರು ಶೈಕ್ಷಣಿಕ ಕೇಂದ್ರಗಳಲ್ಲಿ ವಿದ್ಯಾರ್ಥಿನಿಯರು ಹೆಚ್ಚೂಕಡಿಮೆ ಇದೇರೀತಿಯ ಆಗ್ರಹಗಳನ್ನು ಮುಂದಿಡುತ್ತಿದ್ದಾರೆ. ೨೦೧೫ರಲ್ಲಿ ದೆಹಲಿಯಲ್ಲಿ ಪಿಂಜರಾ ಥೋಡ್ ಚಳವಳಿ (ಪಂಜರಗಳನ್ನು ಮುರಿಯೋಣ) ರೂಪುಗೊಂಡ ನಂತರದಲ್ಲಿ ಕೋಲ್ಕತ್ತಾ, ಅಲಿಘರ್, ಮುಂಬೈ, ಕಾಸರಗೋಡ್, ರಾಯ್ಪುರ್, ಜಮ್ಮು ಹಾಗೂ ಮತ್ತಿತರ ಕಡೆಗಳಲ್ಲಿ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ತಮ್ಮ ಬಗ್ಗೆ ವಿಶ್ವವಿದ್ಯಾಲಯದ ಆಡಳಿತ ವರ್ಗ ತೋರುತ್ತಿರುವ ಧೋರಣೆಗಳನ್ನು ಪ್ರಶ್ನಿಸಿದ್ದಾರೆ. ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ಕೊಡಮಾಡಲಾಗಿರುವ ಹಕ್ಕುಗಳಲ್ಲಿನ ತಾರತಮ್ಯಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ವಿದ್ಯಾರ್ಥಿಗಳು ತಡರಾತ್ರಿಯಲ್ಲಿಯೂ ವಿದ್ಯಾರ್ಥಿ ನಿಲಯಗಳಿಗೆ ಮರಳಬಹುದು; ಆದರೆ ವಿದ್ಯಾರ್ಥಿನಿಯರನ್ನು ಮಾತ್ರ ಹೊತ್ತು ಮುಳುಗುವ ಮುನ್ನವೇ ಹಾಸ್ಟೆಲ್ಗಳಲ್ಲಿ ಅಕ್ಷರಶಃ ಕೂಡಿಹಾಕಲಾಗುತ್ತದೆ, ಅದರಲ್ಲೂ ಬನಾರಸ್ ವಿಶ್ವವಿದ್ಯಾಲಯದ ಒಂದು ಹಾಸ್ಟೆಲ್ನಲ್ಲಂತೂ ಸಂಜೆ ಗಂಟೆಗೆ ವಿದ್ಯಾರ್ಥಿನಿಯರನ್ನು ಹಾಸ್ಟೆಲ್ನಲ್ಲಿ ಬಂಧಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಇಂಟರ್ನೆಟ್ ಸೌಲಭ್ಯವನ್ನು ಸುಲಭವಾಗಿ ದೊರಕಿಸಲಾಗಿದ್ದರೆ ವಿದ್ಯಾರ್ಥಿನಿಯರು ಅದನ್ನು ಹೊರಾಡಿ ಗಳಿಸಿಕೊಳ್ಳಬೇಕಾಯಿತು. ಎಲ್ಲಿಯತನಕ ತಾರತಮವಿದೆಯೆಂದರೆ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಕೊಡು ಅನುದಿನದ ಊಟ-ತಿಂಡಿಗಳಲ್ಲೂ ತಾರತಮ್ಯ ಮುಂದುವರೆದಿದೆ.

ಸೆಪ್ಟೆಂಬರ್ ೨೧-೨೩ರ ವರೆಗೆ ಬಿಎಚ್ಯು ಕ್ಯಾಂಪಸ್ಸಿನಲ್ಲಿ ನಡೆದ ವಿದ್ಯಮಾನಗಳು ಅನಿರೀಕ್ಷಿತವಾದದ್ದೇನಲ್ಲ; ಅದು ನಮ್ಮ  ಹಲವಾರು ವಿಶ್ವವಿದ್ಯಾಲಯಗಳಲ್ಲಿ ಕೆಲವು ಕಾಲದಿಂದ ಕುದಿಯುತ್ತಿದ್ದ ಅಸಮಾಧಾನಗಳ ಪ್ರತಿಬಿಂಬವಾಗಿದೆ. ಪ್ರತಿಭಟನೆಗಳು ವಿಶ್ವವಿದ್ಯಾಲಯಗಳ ಆಡಳಿತವನ್ನು ಹೇಗೆ ನಿರ್ವಹಿಸಬೇಕೆಂಬ ಅತ್ಯಂತ ಗಂಭೀರ ಪ್ರಶ್ನೆಗಳನ್ನು ಹುಟ್ಟಿಹಾಕಿವೆ. ವಿಶ್ವವಿದ್ಯಾಲಯಗಳನ್ನು ಉಪಾಧ್ಯಾಯರು ನಿಯಮಗಳನ್ನು ರೂಪಿಸಿ ವಿದ್ಯಾರ್ಥಿಗಳನ್ನು ಅವನ್ನು ಚಾಚೂತಪ್ಪದಂತೆ ಅನುಸರಿಸುವ ಶಾಲೆಗಳಂತೆ ನಡೆಸಬೇಕೋ ಅಥವಾ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಬ್ಬರೂ ಪರಸ್ಪರ ಗೌರವದಿಂದ ಒಟ್ಟಾಗಿ ಕೆಲಸಮಾಡುತ್ತಾ ಕಲಿಕೆಯ ಕ್ಷಿತಿಜಗಳನ್ನು ವಿಸ್ತರಿಸುವಂಥಾ ಕಲಿಕಾ ಕೇಂದ್ರಗಳನ್ನಾಗಿ ರೂಪಿಸಬೇಕೋ? ಆದರೆ ಎಲ್ಲಿಯತನಕ ಮ್ಮ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿನಿಯರನ್ನು ಶೈಶವೀಕರಿಸಿ ಅಪ್ರಬುದ್ಧ ಬಾಲಕಿಯರಂತೆ ಕಾಣುತ್ತಾ ಅವರನ್ನು ಹೊತ್ತುಮುಳುಗುವ ಮುನ್ನ ಕೂಡಿಹಾಕುವುದು ಅವರ ಒಳ್ಳೆಯದಕ್ಕೆ ಮತ್ತು ಅವರ ರಕ್ಷಣೆಗೆ ಎಂದು ವಾದಿಸುತ್ತಿರುತ್ತೇವೆಯೋ ಅಲ್ಲಿಯವರೆಗೆ ವಿಶ್ವವಿದ್ಯಾಲಯಗಳ ಬಗ್ಗೆ ಮೇಲಿನ ಗುರಿಗಳನ್ನು ಈಡೇರಿಸಲು ಸಾಧ್ಯವಿಲ್ಲ. ಇದಕ್ಕೆ ತದ್ವಿರುದ್ಧವಾಗಿ ವಿದ್ಯಾರ್ಥಿನಿಯರು ತಮಗೆ ಬಗೆಯ ರಕ್ಷಣೆಯ ಅಗತ್ಯವಿಲ್ಲವೆಂದೂ ತಮಗೆ ಬೇಕಿರುವುದು ಸಮಗೌರವ ಮತ್ತು ಸಮಾನತೆಯೆಂದು ಪ್ರತಿಪಾದಿಸುತ್ತಿದ್ದಾರೆ. ಹಾಗೂ ಮಹಿಳೆಯರನ್ನೂ ಒಳಗೊಂಡಂತೆ ಕ್ಯಾಂಪಸ್ಸಿನಲ್ಲಿರುವ ಪ್ರತಿಯೊಬ್ಬರಿಗೂ ರಕ್ಷಣೆ ಸಿಗಬೇಕೆಂದೂ, ಕೇವಲ ಲಿಂಗದ ಕಾರಣಕ್ಕೆ ಸೌಲಭ್ಯಗಳ ಅವಕಾಶದಲ್ಲಿ ತಾರತಮ್ಯವಾಗದೆ ಎಲ್ಲರಿಗೂ ಸಮಾನವಾದ ಸೌಲಭ್ಯಗಳ ಅವಕಾಶವಿರಬೇಕೆಂದೂ ಆಗ್ರಹಿಸುತ್ತಿದ್ದಾರೆ.

ಮಹಿಳೆಯರ ಸುರಕ್ಷೆ ಎಂಬುದೇ ಅವರನ್ನು ಬಡಿಯುವ ಅಥವಾ ಬಂಧನದಲ್ಲಿಡುವ ಆಯುಧವಾಗಿಬಿಡಬಾರದು. ಮಹಿಳೆಯರ ಪಾಲಿಗೆ ಅತ್ಯಂತ ಅಸುರಕ್ಷಿತ ನಗರವೆಂದೇ ಕುಖ್ಯಾತವಾಗಿರುವ ದೆಹಲಿ ನಗರದಲ್ಲಿರುವ, ಮಧ್ಯೆ ಸಾಕಷ್ಟು ಅವಹೇಳನಕ್ಕೆ ಒಳಗಾಗಿರುವ  ಜವಾಹರ್ಲಾಲ್ ನೆಹ್ರೂ ವಿಶ್ವವಿದ್ಯಾಲಯವು (ಜೆಎನ್ಯು) ಘನತೆ ಮತ್ತು ಸ್ವಾಯತ್ತತೆಗಳು ಹೇಗೆ ಸುರಕ್ಷತೆ ಮತ್ತು ವಿದ್ವತ್ತಿಗೆ ಪೂರಕವಾದ ವಾತಾವರಣವನ್ನು ಸೃಷ್ತಿಮಾಡಬಲ್ಲದು ಎಂಬುದನ್ನು ಸಾಬೀತುಪಡಿಸಿದೆದೇಶದ ಇತರ ವಿಶ್ವವಿದ್ಯಾಲಯಗಳಲ್ಲೂ ಜೆಎನ್ಯು ಮಾದರಿಯನು ಪುನರಾವರ್ತಿಸುವುದು ಕಷ್ಟವೇ ಆಗಿದ್ದರೂ ಮಹಿಳೆಯರ ಸುರಕ್ಷತೆಯ ಬಗ್ಗೆ ಇರುವ ಕಾಲಬಾಹಿರ ಪರಿಕಲ್ಪನೆಗಳನ್ನು ತೊರೆದು ವಿದ್ಯಾರ್ಥಿನಿಯರ ಜೊತೆ ಸಮಾಲೋಚನೆ ಮಾಡುವಂಥ ಪದ್ಧತಿಗಳನ್ನು ಜಾರಿಮಾಡಬೇಕು.

ಮಹಿಳಾ ಸುರಕ್ಷೆಯ ಹೆಸರಲ್ಲಿ ಕರ್ಫ್ಯೂ ಸಮಯವು ನಿಗದಿಯಾಗುತ್ತದೆ; ಹೆಸರಿನಲ್ಲೇ ಗ್ರಂಥಾಲಯ ಪ್ರವೇಶ ಮತ್ತು ಇತರ ಸೌಲಭ್ಯಗಳು ನಿರಾಕರಿಸಲ್ಪಡುತ್ತವೆ; ಮತ್ತು ಹೆಸರಿನಲ್ಲೇ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ನಡುವೆ ಮಾಡುವ ಲಿಂಗ ತಾರತಮ್ಯವನ್ನು ಸಮರ್ಥಿಸಿಕೊಳ್ಳಲಾಗುತ್ತದೆ. ಜಾಗತೀಕರಣಗೊಂಡ ವಿಶ್ವದಲ್ಲಿ ಯುವಜನತೆಗೆ ಮಾಹಿತಿಗಳು ಲಭ್ಯವಾದಾಗ, ತಮ್ಮ ಹಕ್ಕುಗಳ ಬಗ್ಗೆ ಪ್ರಜ್ನಾವಂತಿಕೆ ಬೆಳೆದಾಗ ಇಂಥ ಪ್ರತಿಗಾಮಿ ಧೋರಣೆಗಳನ್ನು ಅವರು ಬಿಲ್ಕುಲ್ ಸಹಿಸುವುದಿಲ್ಲ. ಬಿಎಚ್ಯುನ ಉಪಕುಲಪತಿಗಳು ವಿಶ್ವವಿದ್ಯಾಲಯವು ರಾಜಕೀಯ ಮಾಡುವ ಜಾಗವಲ್ಲ ಎಂದು ಹೇಳಿದ್ದಾರೆ. ಇದು ಇಂದು ನಮ್ಮ ವಿಶ್ವವಿದ್ಯಾಲಯದಲ್ಲಿರುವ  ಯುವ ಜನಾಂಗ ಯಾವ ರೀತಿ ಯೋಚಿಸುತ್ತಿದೆ ಎಂಬುದರ ಬಗ್ಗೆ ಆಡಳಿತ ವರ್ಗಕ್ಕೆ ಯಾವುದೇ ಬಗೆಯ ಅರಿವಿಲ್ಲದಿರುವುದನ್ನೇ ತೋರಿಸುತ್ತಿದೆ. ವಾಸ್ತವವಾಗಿ ವಿಶ್ವವಿದ್ಯಾಲಯಗಳು ಸಾಂಪ್ರದಾಯಿಕ ಮತ್ತು ಹೊಸ ರಾಜಕೀಯಗಳ ಪ್ರಯೋಗಶಾಲೆಗಳೇ ಆಗಿವೆ. ಜ್ನಾನವನ್ನು ಅರಸುವ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳುವ ಹಕ್ಕನ್ನು ಮತ್ತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕನ್ನು ನಿರಾಕರಿಸುವುದೆಂದರೆ ಒಂದು ಇಡೀ ಜನಾಂಗವನ್ನು ಕೇವಲ ಹೇಳಿಕೊಟ್ಟಿದ್ದನ್ನು ಉರುಹಚ್ಚಿ ಕಂಠಪಾಠ ಮಾಡಿಕೊಳ್ಳುವಂತೆ ಬಲವಂತ ಮಾಡಿದಂತೇ ಆಗುತ್ತದೆ. ಹಾಗೆಯೇ ತಾವು ಬಯಸುತ್ತಿರುವ ನವ ಭಾರತಕ್ಕೆ ಬೇಕಿರುವ ರೋಬೋಟ್-ಯಂತ್ರಮಾನವರನ್ನು- ವಿಶ್ವವಿದ್ಯಾಲಯಗಳು ತಯಾರಿಸಿದರೆ ಸಾಕೆನ್ನುವ ಕೆಲವು ಪ್ರಭೃತಿಗಳು ಇದ್ದಾರೆ. ಆದರೆ ಬಗೆಯ ಹಗಲುಗನಸು ಕಾಣುತ್ತಿರುವವರಿಗೆ ಒಂದು ಸಂಗತಿ ಅರ್ಥವಾಗುತ್ತಿಲ್ಲ. ಅದೇನೆಂದರೆ ಬದಲಾವಣೆಯ ಬಂಡಿ ಈಗಾಗಲೇ ನಿಲ್ದಾಣದಿಂದ ಹೊರಟಿದ್ದು ಇನ್ನೆಂದೂ ಹಳೆ ನಿಲ್ದಾಣಕ್ಕೆ ಮರಳುವುದಿಲ್ಲ. ಬಿಎಚ್ಯುನ ವಿದ್ಯಾರ್ಥಿನಿಯರು ಅದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಖಂಡಿತ ಇದಕ್ಕೆ ನಾವು ಸಂಭ್ರಮ ಪಡಲೇಬೇಕು.

           ಕೃಪೆ: Economic and Political Weekly, Sep 30, 2017. Vol. 52. No. 39

                                                                                                


ಕಾಮೆಂಟ್‌ಗಳಿಲ್ಲ: