ಮಂಗಳವಾರ, ಸೆಪ್ಟೆಂಬರ್ 26, 2017

ರೋಹಿಂಗ್ಯಾ ಮುಸ್ಲಿಮರು:ಮಾನವೀಯತೆಗಾಗಿ ಆಕ್ರಂದನ


    ಅನುಶಿವಸುಂದರ್
Image result for rohingya


ಇಸ್ಲಾಮ್ಭೀತಿ ಅಥವಾ ಸಂಪನ್ಮೂಲ ಕೊರತೆಗಳನ್ನು ಮುಂದುಮಾಡಿ ರೋಹಿಂಗ್ಯ ಬಿಕ್ಕಟ್ಟಿನ ಬಗೆಗಿನ ನಿಷ್ಖ್ರಿಯತೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ.

ಜಗತ್ತಿನ ಬಹುಪಾಲು ಕಡೆಗಳಲ್ಲಿ ಇಸ್ಲಾಮನ್ನು ಒಂದು ಭಯೋತ್ಪಾದಕ ಧರ್ಮವೆಂದು ಭಾವಿಸುತ್ತಾರೆ ಎಂದು ಹೇಳುವುದು ಈಗ ಒಂದು ಕ್ಲೀಷೆಯೇ ಆಗಿಬಿಟ್ಟಿದೆ. ಮತ್ತೊಂದು ಕಡೆ ಬುದ್ಧ ಧರ್ಮವು ಶಾಂತಿಯುತವಾದ, ವೈಚಾರಿಕ ಮತ್ತು ವೈಜ್ನಾನಿಕ ಧರ್ಮವಾಗಿದ್ದು ಆಧುನಿಕ ಜೀವನ ಪದ್ಧತಿಗೆ ಹೊಂದಾಣಿಕೆಯಾಗುವಂಥ ಧರ್ಮವೆಂದು ಪ್ರತಿಪಾದಿಸಲಾಗುತ್ತಿದೆ. ಆದರೆ ಮಯನ್ಮಾರ್ ದೇಶದಲ್ಲಿ ಮಿಲಿಟರಿ ಆಡಳಿತದ ಸಕ್ರಿಯ ಬೆಂಬಲದೊಂದಿಗೆ ದೇಶದ ಬುದ್ಧಧರ್ಮೀಯ ಉಗ್ರವಾದಿಗಳು ಪ್ರಧಾನವಾಗಿ ಇಸ್ಲಾಮ್ ಧರ್ಮವನ್ನು ಅನುಸರಿಸುವ ರೋಹಿಂಗ್ಯಾ ಜನಾಂಗೀಯ ಅಲ್ಪಸಂಖ್ಯಾತರ ಮೇಲೆ ಬರ್ಬರ ಹಿಂಸಾಚಾರವನ್ನು ನಡೆಸುತ್ತಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ದಕ್ಷಿಣ ಮತ್ತು ಆಗ್ನೇಯ ಏಶಿಯಾ ದೇಶಗಳಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸೆಗಳ ಇತಿಹಾಸದ ಭಾಗವಾಗಿದ್ದು ಬುದ್ಧ ಧರ್ಮದ ಬಗ್ಗೆ ಕಟ್ಟಿಕೊಂಡಿರುವ ಕಥನಕ್ಕೆ ಮತ್ತೊಂದು ತಡೆಯೊಡ್ಡುತ್ತಿದೆ. ಆದರೂ ಅತ್ಯಂತ ಗಂಭೀರ ಮಾನವೀಯ ಬಿಕ್ಕಟ್ಟಿಗೆ ಭಾರತವನ್ನು ಒಳಗೊಂಡಂತೆ ಜಾಗತಿಕ ಸಮುದಾಯ ತೋರುತ್ತಿರುವ ಪ್ರತಿಕ್ರಿಯೆ ಅತ್ಯಂತ ಸಂವೇದನಾ ರಹಿತವಾಗಿದ್ದು  ಕಲ್ಪಿತ ಇಸ್ಲಾಮ್ಭೀತಿಯಿಂದ (ಇಸ್ಲಾಮೋಫೋಬಿಯ) ಕೂಡಿದೆ.

ರೋಹಿಂಗ್ಯಾ ಮುಸ್ಲಿಮರ ಮೇಲೆ ಹಾಲೀ ಹಿಂಸಾಚಾರಗಳು ಪ್ರಾರಂಭವಾಗಿದ್ದು  ಅರಕ್ಕಾನ್ ರೋಹಿಂಗ್ಯಾ ವಿಮೋಚನಾ ಸೇನೆಯು ೨೦೧೭ರ ಆಗಸ್ಟ್ ೨೫ರಂದು ಮಯಾನ್ಮಾರಿನ ರಖೈನ್ ಪ್ರಾಂತ್ಯದ ಪೊಲೀಸ್ ಮತ್ತು ಸೇನಾ ನೆಲೆಗಳ ಮೇಲೆ ದಾಳಿ ಮಾಡಿದ ನಂತರದಲ್ಲಿ. ಇದು ತುರ್ತು ಮಿಲಿಟರಿ ದಾಳಿಗೂ ಮತ್ತು ಮತ್ತೊಂದು ಸುತ್ತಿನ ಜನಾಂಗೀಯ ಹಿಂಸಾಚಾರಗಳಿಗೂ, ಕೊಲೆಗಳಿಗೂ ಮತ್ತು ಸಾವಿರಾರು ಅಮಾಯಕ ರೋಹಿಂಗ್ಯಾ ಮುಸ್ಲಿಮರು ಮನೆ-ಮಠ ಕಳೆದುಕೊಂಡು ನಿರಾಶ್ರಿತರಾಗಲೂ ಕಾರಣವಾಯಿತು. ಒಂದು ವರದಿಯ ಪ್ರಕಾರ ೯೦,೦೦೦ ಕ್ಕೂ ಹೆಚ್ಚು ರೋಹಿಂಗ್ಯಾ ನಿರಾಶ್ರಿತರು ಬಾಂಗ್ಲಾದೇಶಕ್ಕೆ ವಲಸೆ ಹೋಗಿದ್ದಾರೆ ಹಾಗೂ ಇನ್ನೂ ೨೦,೦೦೦ಕ್ಕೂ ಹೆಚ್ಚು ನಿರಾಶ್ರಿತರು ಮಯಾನ್ಮಾರ್-ಬಾಂಗ್ಲಾದೇಶದ ಗಡಿಯನ್ನು ದಾಟಲು ಕಾಯುತ್ತಿದ್ದಾರೆ. ಮಯಾನ್ಮಾರ್ ಸರ್ಕಾರವು ರೋಹಿಂಗ್ಯಾ ಸಂತ್ರಸ್ತರಿಗೆ ವಿಶ್ವಸಂಸ್ಥೆಯ ಅಂಗಸಂಸ್ಥೆಗಳ ನೆರವು ದೊರೆಯದಂತೆ ತಡೆಹಿಡಿದಿದೆ; ಜೊತೆಗೆ ಮಾಧ್ಯಮಗಳೂ ಸಹ ಇದರ ಬಗ್ಗೆ ಯಾವುದೇ ವರದಿ ನೀಡದಂತೆ ನಿಷೇಧ ಹೇರಿದೆ. ಹೀಗಾಗಿ ಜಗತ್ತು ಮತ್ತೊಂದು ಸರ್ಕಾರಿ ಪ್ರಾಯೋಜಿತ ಹತ್ಯಾಕಾಂಡಕ್ಕೆ ಸಾಕ್ಷಿಯಾಗಲಿದೆ ಎಂಬುದರಲ್ಲಿ ಎಳ್ಳಷ್ಟೂ ಅನುಮಾನ ಉಳಿದಿಲ್ಲ. ಇಷ್ಟಾದರೂ ನೆರೆಹೊರೆಯ ದೇಶಗಳು ರೋಹಿಂಗ್ಯಾ ನಿರಾಶ್ರಿತರಿಗೆ ಆಶ್ರಯ ಕೊಡಲು ಸಮ್ಮತಿಸುತ್ತಿಲ್ಲ. ಭಾರತ ಸರ್ಕಾರವಂತೂ ರೋಹಿಂಗ್ಯಾ ಮುಸ್ಲಿಮರು ಭಾರತದ ಅಂತರಿಕ ಭದ್ರತೆಗೆ ಒಂದು ಸಂಭವನೀಯ ಆಪತ್ತು ಎಂದು ಹೇಳಿಬಿಟ್ಟಿದೆ.

ಮಯಾನ್ಮಾರ್ನಲ್ಲಿ ೧೯೬೨ರಲ್ಲಿ ಕ್ಷಿಪ್ರಕ್ರಾಂತಿ ನಡೆದು ಮಿಲಿಟರಿ ಆಡಳಿತ ಜಾರಿಗೆ ಬಂದಾಗಿನಿಂದಲೂ ರೋಹಿಂಗ್ಯಾ ಸಮುದಾಯದಿಂದ  ನಾಗರಿಕತ್ವದ ಹಕ್ಕನ್ನೇ ಕಿತ್ತುಕೊಳ್ಳಲಾಗಿದೆ. ಮತ್ತು ಸಮುದಾಯಕ್ಕೆ ಮೂಲಭೂತ ಆರೋಗ್ಯ ಸೇವೆ, ಉದ್ಯೋಗ ಹಾಗೂ ಶಿಕ್ಷಣಗಳನ್ನೂ ಕೂಡಾ ನೀಡದೇ ದಮನಿಸಲಾಗುತ್ತಿದೆ. ಆದರೆ ೨೦೧೧ರ ನಂತರದಲ್ಲಿ ಮಯನ್ಮಾರ್ ದೇಶವು ತಥಾಕಥಿತ ಪ್ರಜಾಪ್ರಭುತ್ವ ವ್ಯವಸ್ಥೆಯೆಡೆಗೆ ಹೊರಳಿಕೊಳ್ಳುತ್ತಿದ್ದಂತೆ ಹಿಂಸಾಚಾರದ ಪ್ರಮಾಣ ಮತ್ತು ತೀವ್ರತೆಗಳೆರಡು ಹೆಚ್ಚಾಗತೊಡಗಿದವು. ತಮ್ಮ ಹಿಂಸಾಚಾರಕ್ಕೆ ಜನಬೆಂಬಲವನ್ನೂ ಪಡೆದುಕೊಳ್ಳುವ ಸಲುವಾಗಿ ಮಿಲಿಟರಿ ಆಡಳಿತವು ತನ್ನನ್ನು ತಾನು ಬುದ್ಧ ಧರ್ಮದ ರಕ್ಷಕನೆಂಬಂತೆ ತೋರಿಸಿಕೊಳ್ಳುತ್ತಾ ಬುದ್ಧಧರ್ಮೀಯ ತೀವ್ರಗಾಮಿಗಳನ್ನು ರೋಹಿಂಗ್ಯಾ ಮುಸ್ಲಿಮರ ಮೇಲೆ ಹರಿಬಿಟ್ಟರು.

ವಾಸ್ತವವಾಗಿ ಹಾಲೀ ಹಿಂಸಾಚಾರಗಳು ೨೦೧೬ರ ಅಕ್ಟೋಬರ್ನಲ್ಲಿ ಭುಗಿಲೆದ್ದ ಹಿಂಸಾಚಾರಗಳ ಮುಂದುವರಿಕೆಯೇ ಆಗಿದೆ. ಹಿಂಸಾಚಾರಗಳ ಬಗ್ಗೆ ಸತ್ಯಶೋಧನೆ ನಡೆಸಿದ ವಿಶ್ವಸಂಸ್ಥೆಯ ತಂಡವೊಂದು ೨೦೧೭ರ ಫೆಬ್ರವರಿಯಲ್ಲಿ ತನ್ನ ವರದಿ ನೀಡಿದ್ದು ಭದ್ರತಾ ಪಡೆಗಳು ರೋಹಿಂಗ್ಯಾ ಸಮುದಾಯದ ಮೇಲೆ ನಡೆಸಿರುವ  ಹಿಂಸಾಚಾರಗಳು ಮಾನವೀಯತೆಯ ಮೇಲೆ ಎಸಗಿರುವ ಅಪರಾಧವೆಂದೂ, ಹಾಗೂ ಅದರ ಹಿಂದೆ  ಜನಾಂಗೀಯ  ನಿರ್ಮೂಲನೆಯ ಉದ್ದೇಶಗಳು ಇದ್ದಿರಬಹುದೆಂದೂ ಅಭಿಪ್ರಾಯಪಟ್ಟಿದೆ. ಮಯಾನ್ಮಾರ್ ಸರ್ಕಾರವು ವಿಶ್ವಸಂಸ್ಥೆಯ ವರದಿಯನ್ನು ತಿರಸ್ಕರಿಸಿದೆ. ೨೦೧೭ರ ಮೇ ತಿಂಗಳಲ್ಲಿ ವಿಶ್ವಸಂಸ್ಥೆಯು ಮತ್ತೊಂದು ಸತ್ಯಶೋಧನಾ ತಂಡವನ್ನು ಕಳಿಸುವ ಪ್ರಸ್ತಾಪವನ್ನು ಮುಂದಿಟ್ಟಾಗ ಮಯನ್ಮಾರ್ ಸರ್ಕಾರವು ವಿಶ್ವಸಂಸ್ಥೆಯ ಸತ್ಯಶೋಧನಾ ತಂಡದ ಯಾವೊಬ್ಬ ಸದಸ್ಯರಿಗೂ ವೀಸಾ ಕೊಡುವುದಿಲ್ಲವೆಂದು ಘೋಷಿಸಿತು.

ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ನೊಬೆಲ್  ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸ್ಯೂ ಕಿ ಯವರಂತೂ ವಿಶ್ವಸಂಸ್ಥೆಯ ಮಧ್ಯಪ್ರವೇಶದಿಂದ ಸಮುದಾಯಗಳ ನಡುವಿನ ವೈಷಮ್ಯಗಳು ಮತ್ತಷ್ಟು ಹೆಚ್ಚುತ್ತವೆಂದು ಪ್ರತಿಪಾದಿಸಿದರು. ಅಷ್ಟೇ ಅಲ್ಲ. ಆಗಸ್ಟ್ ತಿಂಗಳಿಂದ ನಡೆಯುತ್ತಿರುವ ಮಾರಣಹೋಮದ ಬಗ್ಗೆ ಕಿವುಡಾಗಿದ್ದ ಅವರು ಇದೀಗ ತಮ್ಮ ಮೌನವನ್ನು ಮುರಿದಿದ್ದು ಜನಾಂಗೀಯ ಹಿಂಸಾಚಾರಗಳ ಬಗೆಗಿನ ಎಲ್ಲಾ ವರದಿಗಳನ್ನೂ ಸಾರಾಸಗಟಾಗಿ ನಿರಾಕರಿಸಿದ್ದಾರೆ. ಮತ್ತು ಬಗೆಯ ತಪ್ಪುಕಲ್ಪನೆಯಿಂದ ಕೂಡಿರುವ ವರದಿಗಳು ಭಯೋತ್ಪಾದಕರ ಆಸಕ್ತಿಗಳಿಗೆ ಸಹಕರಿಸಿ ಸಮುದಾಯಗಳ ನಡುವೆ ಮತ್ತಷ್ಟು ದ್ವೇಷ ಹುಟ್ಟುಹಾಕುತ್ತದೆಂದು ಹೇಳಿದ್ದಾರೆ.

ಬಿಕ್ಕಟ್ಟಿನ ಬಗ್ಗೆ ಭಾರತ ಸರ್ಕಾರದ ಪ್ರತಿಸ್ಪಂದನೆಯಂತೂ ಅತ್ಯಂತ ಲಜ್ಜೆಗೇಡಿತನದಿಂದ ಕೂಡಿದೆ. ಭಾರತದ ವಿವಿಧ ಭಾಗಗಳಲ್ಲಿ ಅಂದಾಜು ೪೦,೦೦೦ ರೋಹಿಂಗ್ಯಾ ಮುಸ್ಲಿಮರು ಅಕ್ರಮವಾಗಿ ವಾಸಿಸುತ್ತಿದ್ದು ಅವರನ್ನೆಲ್ಲಾ ಮಯಾನ್ಮಾರಿಗೆ ವಾಪಸ್ ಕಳಿಸುವ ಯೋಜನೆ ರೂಪಿಸುತ್ತಿದೆಯೆಂದು ಭಾರತ ಸರ್ಕಾರ ಹೇಳಿಕೊಂಡಿದೆ. ಸರ್ಕಾರದ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾ ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಕಿರಣ್ ರಿಜಿಜು ಅವರು ವಿಶ್ವಸಂಸ್ಥೆಯ ನಿರಾಶ್ರಿತರ ಹಕ್ಕುಗಳ ಕುರಿತಾದ ಒಪ್ಪಂದಕ್ಕೆ ಭಾರತವು ಸಹಿ ಹಾಕಿಲ್ಲವಾದ್ದರಿಂದ ರೋಹಿಂಗ್ಯಾ ನಿರಾಶ್ರಿತರ ಬಗೆಗಿನ ವಿಶ್ವಸಂಸ್ಥೆಯ ಅಭಿಪ್ರಾಯಗಳಿಗೆ ಭಾರತವು ಬದ್ಧವಾಗಿರಬೇಕಾದ ಅಗತ್ಯವೇನೂ ಇಲ್ಲವೆಂದು ಪ್ರತಿಪಾದಿಸಿದ್ದಾರೆ. ಆದರೆ ಹಲವಾರು ಸಂದರ್ಭಗಳಲ್ಲಿ ಭಾರತದ ಹಲವು ಉಚ್ಚ್ಯ ನ್ಯಾಯಾಲಯಗಳು ಮತ್ತು ಸುಪ್ರೀಂ ಕೋರ್ಟು ಸಹ  ನಿರಾಶ್ರಿತರಿಗೆ ಅವರ ಮಾತೃದೇಶದಲ್ಲಿ ಜೀವಾಪಾಯವಿದ್ದಲ್ಲಿ ವಾಪಸ್ ಅವರ ದೇಶಗಳಿಗೆ ಕಳಿಸಬಾರದೆಂಬ ತತ್ವವನ್ನು ಎತ್ತಿಹಿಡಿದಿದೆ. ಇದು ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಜಾರಿಯಲ್ಲಿರುವ ಮತ್ತು ಜಾಗತಿಕ ಸಮುದಾಯ ಒಪ್ಪಿಕೊಂಡಿರುವ ಒಂದು ಮಾನವೀಯ ನೀತಿಸೂತ್ರವಾಗಿದ್ದು ಭಾರತವೂ ಕೂಡಾ ಅದನ್ನು ನಿರಾಕರಿಸಲಾಗುವುದಿಲ್ಲ. ರೋಹಿಂಗ್ಯಾ ನಿರಾಶ್ರಿತರನ್ನು ವಾಪಸ್ ಕಳಿಸುವ ಸರ್ಕಾರದ ಯೋಜನೆಯ ವಿರುದ್ಧದ ದಾವೆಯೊಂದು ಸುಪ್ರೀಂ ಕೋರ್ಟಿನಲ್ಲಿ ದಾಖಲಾಗಿದ್ದು ವಿಚಾರಣೆಯ ಹಂತದಲ್ಲಿದೆ.

ಇದಕ್ಕಿಂತ ಹೆಚ್ಚಿನ ಆತಂಕಕಾರಿ ಸಂಗತಿಯೆಂದರೆ ಹಾಲೀ ಕೇಂದ್ರ ಸರ್ಕಾರವು ೧೯೫೫ರ ನಾಗರಿಕ ಹಕ್ಕು ಕಾಯ್ದೆಗೆ ತಿದ್ದುಪಡಿಯೊಂದನ್ನು ತರಲು ಹೊರಟಿದ್ದು ಮುಸ್ಲೀಮ್ ನಿರಾಶ್ರಿತರ ಬಗ್ಗೆ ತಾರತಮ್ಯ ತೋರುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಅದರ ಮೂಲಕ ಇಸ್ಲಾಮ್ಭೀತಿಯ ನೀತಿಯನ್ನು ಸಂಸ್ಥಿಕರಿಸುವ ಪ್ರಯತ್ನಕ್ಕೆ ಮುಂದಾಗಿದೆ. ಪ್ರಸ್ತಾಪವು ನೈತಿಕವಾಗಿ ಅಸಮರ್ಥನೀಯವಾಗಿರುವುದು ಮಾತ್ರವಲ್ಲದೆ, ಎಲ್ಲರಿಗೂ ಸಮಾನತೆಯ ಹಕ್ಕನ್ನು ಖಾತ್ರಿ ಮಾಡುವ ಸಂವಿಧಾನದ ೧೪ ನೇ ಕಲಮಿನ ಆಶಯಗಳಿಗೂ ವಿರುದ್ಧವಾಗಿದೆ.

ಸಂಪನ್ಮೂಲದ ಕೊರತೆಯ ಹೆಸರಿನಲ್ಲಿ ಅಥವಾ ನಿರಾಶ್ರಿತರ ಹೆಸರಿನಲ್ಲಿ ಭಯೋತ್ಪಾದಕರು ದೇಶದೊಳಗೆ ನುಸುಳಿಬಿಡಬಹುದೆಂಬ ಕಪೋಲ ಕಲ್ಪಿತ ಊಹೆಗಳನ್ನು ಮುಂದೊಡ್ಡಿ ನಮ್ಮ ಕಣ್ಣೆದುರಿಗೇ ನಡೆಯುತ್ತಿರುವ ಜನಾಂಗೀಯ ಮಾರಣಹೋಮಕ್ಕೆ ಮೌನಸಾಕ್ಷಿಗಳಾಗಿ ಉಳಿಯಬಾರದೆಂಬ ಹಕ್ಕೊತ್ತಾಯವನ್ನು ಮುಂದಿಟ್ಟು ತೀವ್ರ ಹೋರಾಟಗಳನ್ನು ಮಾಡದೆ ಹಾಲಿ ಬಿಕ್ಕಟ್ಟಿಗೆ ಪರಿಹಾರ ಮಾರ್ಗಗಳು ಸಿಗುವುದಿಲ್ಲ. ಸಾವು ಮತ್ತು ದಮನಗಳಿಂದ ಬಚಾವಾಗಲು ಹತಾಷರಾಗಿ ಹರಿದು ಬರುತ್ತಿರುವ ನಿರಾಶ್ರಿತರಿಗೆ ಆಶ್ರಯವನ್ನು ನೀಡುವುದು ಮೊಟ್ಟಮೊದಲ ಆದ್ಯತೆಯಾಗಬೇಕು. ಹಾಗೂ ಅದಕ್ಕೆ ನಿರಾಶ್ರಿತರ ಧರ್ಮ, ಪಂಥ, ವರ್ಣ ಅಥವಾ ಜನಾಂಗ ಯಾವುದೆಂಬುದು ಎಂದಿಗೂ ಪೂರ್ವಶರತ್ತಾಗಬಾರದು. ಸಾಧ್ಯವಾದರೆ ನಿರಾಶ್ರಿತರಿಗೆ  ಅವರ ದೇಶದಲ್ಲೇ ಪುನರ್ವಸತಿ ಕಲ್ಪಿಸಲು ಅಥವಾ ಅವರ ದೇಶದಲ್ಲಿ ಪರಿಸ್ಥಿತಿ ಇನ್ನೂ ತಹಬದಿಗೆ ಬರದಿದ್ದಲ್ಲಿ ಅವರು ಆಶ್ರಯ ಕೋರಿ ಬಂದ ದೇಶಗಳಲ್ಲಿ ಪುನರ್ವಸತಿ ಕಲ್ಪಿಸಲು ಬೇಕಾದ ಸಂಪನ್ಮೂಲಗಳನ್ನು ಜಾಗತಿಕ ಮಟ್ಟದಲ್ಲಿ ಕ್ರೂಢೀಕರಿಸಬೇಕು. ಹಾಗೆ ಮಾಡದೆ ನಿರಾಶ್ರಿತರನ್ನು ಯಾವ ಕಾರಣಕ್ಕೂ ಮತ್ತೆ ಸಾವಿನ ದವಡೆಗೆ ತಳ್ಳಬಾರದು.

ಕೃಪೆ: Economic and Political Weekly, Sep 9, 2017. Vol. 52. No. 36.
                        















ಕಾಮೆಂಟ್‌ಗಳಿಲ್ಲ: