ಶುಕ್ರವಾರ, ಜುಲೈ 14, 2017

ಸೆರೆಮನೆಯೊಳಗಿನ ಸ್ವಾತಂತ್ರ್ಯದ ಕುರಿತು


  ಅನುಶಿವಸುಂದರ್
jail freedom ಗೆ ಚಿತ್ರದ ಫಲಿತಾಂಶ


ಸೆರೆಮನೆಗಳಲ್ಲಿ ಮಹಿಳಾ  ಖೈದಿಗಳು ಪಿತೃಪ್ರಧಾನ ವ್ಯವಸ್ಥೆಯ ಹೀನಾಯ ದುರಾಗ್ರಹಗಳಿಗೆ ತುತ್ತಾಗುತ್ತಿದ್ದಾರೆ

ಕಳೆದ ಜೂನ್ ೨೪ರಂದು ಮುಂಬೈನ ಬೈಕಲ ಸೆರೆಮನೆಯಲ್ಲಿ ಸಂಭವಿಸಿದ ೩೮ ವರ್ಷದ ಮಹಿಳಾ ಖೈದಿಯೊಬ್ಬಳ ಸಾವು ಭಾರತದ ಸೆರೆಮನೆಗಳ ದಾರುಣ ಪರಿಸ್ಥಿತಿಯನ್ನು ಅದರಲ್ಲೂ ವಿಶೇಷವಾಗಿ ಮಹಿಳಾ ಖೈದಿಗಳು ಮತ್ತು ಆರೋಪಿಗಳು ಎದುರಿಸುವ ಲಿಂಗಾಧಾರಿತ ಕ್ರೌರ್ಯಗಳನ್ನು ಬಯಲಿಗೆ ತಂದಿದೆ. ಸಿಬ್ಬಂದಿಯ ಕೊರತೆ ಇದ್ದಿದ್ದರಿಂದ ಸೆರೆಮನೆಯಲ್ಲಿ ಮಂಜುಳಾ ಶೆಟ್ಟೆ ಎಂಬ ಖೈದಿಗೆ ಉಸ್ತುವಾರಿ ಜವಾಬ್ದಾರಿಯನ್ನು ನೀಡಲಾಗಿತ್ತು. ಅದರ ಭಾಗವಾಗಿಯೇ ಆಕೆ ಅಂದು ತನ್ನ ಬ್ಯಾರಕ್ಕಿನ ಖೈದಿಗಳಿಗೆ ಸರಿಯಾದ ಪ್ರಮಾಣದಲ್ಲಿ ಮೊಟ್ಟೆ ಮತ್ತು ಬ್ರೆಡ್ಗಳು ಸರಬರಾಜು ಮಾಡಿಲ್ಲವೆಂದು ಕರ್ತವ್ಯದ ಮೇಲಿದ್ದ ಮಹಿಳಾ ಜೈಲು ಅಧಿಕಾರಿಗೆ ದೂರಿದ್ದಾಳೆ. ಆದರೆ ಇದೇ ಕಾರಣಕ್ಕೆ ಆಕೆಯನ್ನು ಸೆರೆಮನೆಯಲ್ಲೇ ಹೊಡೆದು ಕೊಂದುಹಾಕಲಾಯಿತು. ಸರ್ಕಾರವೇ ನಡೆಸುವ ಜೆಜೆ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯ ವರದಿಯು ಶೆಟ್ಟೆಯ ಸಾವು ದೇಹಕ್ಕೆ ಆದ ಗಾಯಗಳಿಂದ ಸಂಭವಿಸಿದೆಯೆಂದೂ ಮತ್ತು ದೇಹದ ತುಂಬಾ ರಕ್ತ ಕಪ್ಪುಗಟ್ಟಿದ್ದ ಗಾಯದ ಕಲೆಗಳು ಕಂಡುಬಂದವೆಂದೂ ಸ್ಪಷ್ಟವಾಗಿ ಹೇಳಿದೆ. ಪೊಲೀಸರು ದಾಖಲಿಸಿರುವ ಮೊದಲ ಮಾಹಿತಿ ವರದಿ (ಫಸ್ಟ್ ಇನ್ಫರ್ಮೇಷನ್ ರಿಪೋರ್ಟ್- ಎಫ್..ಆರ್) ಯಲ್ಲಿ ಘಟನೆಯನ್ನು ಕಣ್ಣಾರೆ ಕಂಡ ಖೈದಿಯೊಬ್ಬರ ಹೇಳಿಕೆಯೂ ನಮೂದಾಗಿದೆ. ಅದರ ಪ್ರಕಾರ ಸೆರೆಮನೆ ಸಿಬ್ಬಂದಿಯು ಶೆಟ್ಟೆಯವರನ್ನು ಕೇವಲ ಹೊಡೆದು ಬಡಿದು ಹಿಂಸೆ ಕೊಟ್ಟಿರುವುದು ಮಾತ್ರವಲ್ಲದೆ ಮೂವರು ಮಹಿಳಾ ಪೊಲೀಸರು ಆಕೆಯ ಮೇಲೆ ಲೈಂಗಿಕ ಹಿಂಸೆಯನ್ನು ಕೂಡಾ ಎಸಗಿದ್ದಾರೆ. ಹಿಂಸಾಚಾರವನ್ನು ಎಸಗಿದ ಆರು ಸಿಬ್ಬಂದಿಗಳನ್ನು ಗುರುತಿಸಲಾಗಿದ್ದರೂ ಈವರೆಗೆ ಯಾರನ್ನೂ ಬಂಧಿಸಿಲಾಗಿಲ್ಲ.

ಜೈಲುಪಾಲಾದ ಮಹಿಳೆಯರು ಸಮಾಜದಿಂದ ಮಾತ್ರವಲ್ಲದೆ ತಮ್ಮದೆ ಕುಟುಂಬಗಳ ಮತ್ತು ಜೈಲು ಸಿಬ್ಬಂದಿಯ ಪುರುಷ ಪ್ರಧಾನ ಮತ್ತು ಪಿತೃ ಸ್ವಾಮ್ಯ ತಿಳವಳಿಕೆಗಳ ದುರಾಗ್ರಹಗಳಿಗೆ ತುತ್ತಾಗುತ್ತಾರೆ. ಭಾರತದ ಕುಟುಂಬಗಳು ಜೈಲಿನಲ್ಲಿರುವ ಮಹಿಳಾ ಆರೋಪಿ ಅಥವಾ ಖೈದಿಗಳ ಬಗ್ಗೆ ಪುರುಷg ಬಗ್ಗೆ ತೋರುವುದಕ್ಕಿಂತೆ ಹೆಚ್ಚಿನ ಅಸಹನೆಯನ್ನೂ ಮತ್ತು ನಿರ್ದಯತೆಯನ್ನೂ ತೋರುತ್ತವೆ ಎಂದು ಅಧ್ಯಯನಗಳು ತಿಳಿಸುತ್ತವೆಇದರ ಪರಿಣಾಮವಾಗಿ ಅವರ ಆಪ್ತರು ಮತ್ತು ಕುಟುಂಬ ವರ್ಗದವರು ಅವರನ್ನು ಭೇಟಿ ಮಾಡಲು ಜೈಲಿಗೆ ಬರುವುದೂ ಸಹ  ತುಂಬಾ ಕಡಿಮೆ. ಮಾತ್ರವಲ್ಲ ರೀತಿ ಸೆರೆವಾಸಕ್ಕೊಳಗಾಗುವವರು ಹೆಚ್ಚಿನ ಮಟ್ಟಿಗೆ ಬಡವರ್ಗದವರೇ ಆಗಿರುತ್ತಾರೆ ಕುಟುಂಬಗಳ ಆದಾಯವೇ ಸೀಮಿತವಾಗಿರುತ್ತವಾದ್ದರಿಂದ ಅದರ ಒಂದು ಪಾಲನ್ನು ಅವರು ಕಾನೂನು ಕ್ರಮಗಳಿಗೆ ವೆಚ್ಚ ಮಾಡುವುದು ಸಹ ಅಪರೂವವೇ ಆಗಿರುತ್ತದೆ. ಇದರ ಪರಿಣಾಮವಾಗಿ ಮಹಿಳಾ ಖೈದಿಗಳು ತಾವು ಎದುರಿಸುತ್ತಿರುವ ಕಿರುಕುಳವನ್ನು ಹೊರಜಗತ್ತಿನ ಗಮನಕ್ಕೆ ತರಲಾಗದೆ ಮತ್ತಷ್ಟು ಅಸಹಾಯಕರಾಗಿ ಮತ್ತು ಅನಾಥರಾಗಿ ಜೈಲು ಸಿಬ್ಬಂದಿಯ ಮರ್ಜಿಯಲ್ಲೇ ಬದುಕಬೇಕಾಗುತ್ತದೆ
jail freedom ಗೆ ಚಿತ್ರದ ಫಲಿತಾಂಶ

ಭಾರತದ ಬಹುಪಾಲು ಜೈಲುಗಳು ಅವುಗಳ ಸಾಮರ್ಥ್ಯಕ್ಕಿಂತ ಅಧಿಕಪಟ್ಟು ಜನರಿಂದ ತುಂಬಿ ತುಳುಕುತ್ತಿರುವುದೂ, ನೈರ್ಮಲ್ಯದ ಪರಿಸ್ಥಿತಿ ಅತ್ಯಂತ ಕನಿಷ್ಠ ಮಟ್ಟದಲ್ಲಿರುವುದೂ, ಮತ್ತು ಕೊಡುವ ಆಹಾರವು ಮನುಷ್ಯಮಾತ್ರರು ತಿನ್ನಲಾಗದಂತ ಗುಣಮಟ್ಟದಲ್ಲಿರುವುದು ಸರ್ವೇ ಸಾಮಾನ್ಯಆದರೆ ಅದರೊಳಗೂ ಮಹಿಳಾ ಖೈದಿಗಳ ಪರಿಸ್ಥಿತಿ ಇನ್ನೂ ಶೋಚನೀಯ. ೨೦೧೪ರ ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ- ಎನ್.ಸಿ.ಆರ್.ಬಿ(ರಾಷ್ಟ್ರೀಯ ಅಪರಾಧ ದಾಖಲೆ ಕೇಂದ್ರ) ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಒಟ್ಟಾರೆಯಾಗಿ ೧೬.೯೫೧ ಮಹಿಳಾ ಖೈದಿಗಳಿದ್ದಾರೆ. ಅವರಲ್ಲಿ ೧೧,೦೦೦ ಕ್ಕೂ ಹೆಚ್ಚು ಮಹಿಳೆಯರು ವಿಚಾರಣಾಧೀನ ಖೈದಿಗಳಾಗಿದ್ದಾರೆ. ಹಾಗೂ ದೇಶದಲ್ಲಿರುವ ೧೩೯೪ ಜೈಲುಗಳಲ್ಲಿ ೨೦ ಜೈಲುಗಳು ಮಾತ್ರ ಮಹಿಳೆಯರಿಗೆ ಮಾತ್ರ ಮೀಸಲಾಗಿರುವ ಜೈಲುಗಳಾಗಿವೆ. ಬಹುಪಾಲು ಮಹಿಳೆಯರು ೧೮-೫೦ ವರ್ಷಗಳ ವಯೋಮಾನದವರಾಗಿದ್ದಾರೆ.

ವಾಸ್ತವವಾಗಿ ಜೈಲು ಸುಧಾರಣೆಗಳ ಬಗ್ಗೆ ಹಲವಾರು ಸಮಿತಿಗಳು ಅಧಿಕೃತ ವರದಿ ನೀಡಿವೆ. ಆದರೆ ಅವುಗಳೆಲ್ಲವು ಪ್ರಮುಖವಾಗಿ ಪುರುಷ ಖೈದಿಗಳೇ ಬಗ್ಗೆ ಗಮನಹರಿಸಿವೆ. ಮಹಿಳಾ ಖೈದಿಗಳ ವಿಶೇಷ ಅಗತ್ಯಗಳ ಬಗ್ಗೆ ಕೊಡಬೇಕಿದ್ದಷ್ಟು ಗಮನವನ್ನು ಯಾವುವೂ ಕೊಟ್ಟಿಲ್ಲ. ಉದಾಹರಣೆಗೆ ಮಹಿಳಾ ಖೈದಿಗಳು ಋತುಮತಿಯಾದಾಗ ಅವರಿಗೆ ಕೆಲವು ಮೂಲಭೂತ ಸವಲತ್ತುಗಳನ್ನು ನೀಡಲೇ ಬೇಕು. ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೂ ಕೆಲವು ನಿರ್ದಿಷ್ಟ ಅಗತ್ಯಗಳಿರುತ್ತವೆ. ಅವುಗಳನ್ನು ಸಾಮಾನ್ಯವಾಗಿ ಪರಿಗಣಿಸುವುದೇ ಇಲ್ಲ. ಮಹಿಳಾ ಖೈದಿಗಳು ಖಾಯಿಲೆ ಬಿದ್ದಾಗ ಔಷಧಿಗಳಿಗಾಗಿ ಸಾಮಾನ್ಯವಾಗಿ ತಮ್ಮ ಆಪ್ತಮಿತ್ರರನ್ನು ಅಥವಾ ಸಂಬಂಧಿಗಳನ್ನು ಅವಲಂಬಿಸುತ್ತಾರೆ. ಬಹಳಷ್ಟು ಮಹಿಳಾ ಖೈದಿಗಳು ತಮ್ಮ ಮಕ್ಕಳಿಗೆ ಆರು ವರ್ಷವಾಗುವ ತನಕ ತಮ್ಮ ಬಳಿಯೇ ಇರಿಸಿಕೊಂಡಿರುತ್ತಾರೆ. ಆದರೆ ಅವರಿಗೆ ದೊರಕುವ ಕಳಪೆ ಪೌಷ್ಟಿಕಾಂಶಗಳು ಮತ್ತು ಶಿಕ್ಷಣವು ಪರಿಸ್ಥಿತಿಯನ್ನು ಮತ್ತಷ್ಟು ಹೀನಾಯಗೊಳಿಸುತ್ತದೆ.

ಪುರುಷ ಮತ್ತು ಮಹಿಳಾ ಖೈದಿಗಳಿಬ್ಬರು ಇರುವ ಸಾಮಾನ್ಯ ಕಾರಾಗೃಹಗಳಲ್ಲಿ ಸಾಮಾನ್ಯವಾಗಿ ಮಹಿಳೆಯೆರನ್ನು ಪ್ರತ್ಯೇಕವಾದ ಬ್ಯಾರಕ್ಕುಗಳುಗೆ ಮತ್ತು ಕೋಣೆಗಳಿಗೆ ದೂಡಲಾಗುತ್ತದೆ. ಮತ್ತು ಅಲ್ಲಿ ಅವರಿಗೆ ಇತರ ಪುರುಷ ಖೈದಿಗಳಿಗೆ ದೊರೆಯುವಂಥ ಗ್ರಂಥಾಲಯ ಮತ್ತಿತರ ಸೌಲಭ್ಯಗಳು ದೊರಕುವುದಿಲ್ಲ. ಎನ್.ಸಿ.ಆರ್.ಬಿ ವರದಿಯ ಪ್ರಕಾರ ಭಾರತದ ಜೈಲುಗಲ್ಲಿ ಮಹಿಳಾ ಖೈದಿಗಳ ಕಾಲುಭಾಗದಷ್ಟೂ ಮಹಿಳಾ ಸಿಬ್ಬಂದಿಗಳಿಲ್ಲ. ಮಹಿಳಾ ಖೈದಿಗಳ ಸ್ಥಿಗತಿಗಳನ್ನು ಅಧ್ಯಯನ ಮಾಡಲು ಭಾರತ ಸರ್ಕಾರವು ನೇಮಿಸಿದ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಸಮಿತಿಯು ೧೯೯೮ರಲ್ಲಿ ಕೊಟ್ಟ ವರದಿಯು ಮಹಿಳಾ ಮತ್ತು ಬಾಲ ಅಪರಾಧಿಗಳನ್ನು ನಿರ್ವಹಿಸುವಲ್ಲಿ ಮಹಿಳಾ ಪೊಲೀಸರಿಗೆ ವಿಶೇಷ ಪಾತ್ರ ಇರುವುದರಿಂದ ಪೊಲೀಸ್ ಪಡೆಯಲ್ಲಿ ಹೆಚ್ಚೆಚ್ಚು ಮಹಿಳೆಯರನ್ನು ಭರ್ತಿ ಮಾಡಿಕೊಳ್ಳಬೇಕೆಂಬ ಶಿಫಾರಸ್ಸನ್ನು ಮಾಡಿತ್ತು.

ವಿಪರ್ಯಾಸವೆಂದರೆ ಕೊಲ್ಲಲ್ಪಟ್ಟ ಶೆಟ್ಟೆಯವರು ಬಂಧಿಯಾಗಿದ್ದದ್ದು ಮಹಿಳಾ ಕಾರಾಗೃಹದಲ್ಲಿ ಮತ್ತು ಆಕೆಯ ಸಾವಿಗೆ ಕಾರಣವಾದ ಆರೋಪ ಹೊತ್ತಿರುವವರು ಮಹಿಳಾ ಸಿಬ್ಬಂದಿಗಳೇ. ಸ್ಪಷ್ಟವಾಗಿ ಕಾಣುವಂತೆ ಜೈಲು ಮತ್ತು ಪೊಲೀಸು ಸಿಬ್ಬಂದಿಗಳ ಲಿಂಗ ಯಾವುದು ಎನ್ನುವುದಕ್ಕಿಂತ ಅವರಿಗೆ ಕೊಡುವ ತರಬೇತಿ ಮತ್ತು ಶಿಕ್ಷಣ ಎಂಥದ್ದು ಎನ್ನುವುದೇ ಮುಖ್ಯವಾದ ವಿಷಯವಾಗಿದೆ. ಅಷ್ಟೇ ಮುಖ್ಯವಾಗಿ ಜೈಲು ಅಧಿಕಾರಿಗಳು ತೆಗೆದುಕೊಳ್ಳುವ ಕ್ರಮಗಳಿಗೆ ಅವರನ್ನು ಉತ್ತರದಾಯಿಗಳನ್ನಾಗಿ ಮಾಡುವ ವ್ಯವಸ್ಥೆ ಮತ್ತು ಪ್ರಕ್ರಿಯೆಗಳೂ ಪ್ರಮುಖವಾಗುತ್ತವೆ. ಮಹಾರಾಷ್ಟ್ರದಲ್ಲಿ ಎರಡು ಮಹಿಳಾ ಮೀಸಲು ಕಾರಾಗೃಹಗಳು ಮತ್ತು ದೇಶದಲ್ಲೇ ಪ್ರಪ್ರಥಮವಾದ ಮಹಿಳಾ ಬಯಲು ಬಂದೀಖಾನೆಯೂ ಸಹಅಸ್ಥಿತ್ವದಲ್ಲಿವೆ ಎಂಬುದನ್ನು ಗಮನಕ್ಕೆ ತೆಗೆದುಕೊಂಡಾಗ ಮೇಲೆ ಹೇಳಲಾದ ಅಂಶವು ಹೇಗೆ ಎಲ್ಲಕ್ಕಿಂತ ಪ್ರಮುಖವಾಗುತ್ತದೆ ಎಂಬುದು ಅರ್ಥವಾಗುತ್ತದೆ. ಮಹಾರಾಷ್ಟ್ರಕ್ಕೆ ಪ್ರಗತಿಪರ ರಾಜ್ಯವೆಂಬ ಹೆಗ್ಗಳಿಕೆಯಿದೆ. ಆದರೂ ಕಳೆದ ಮಾರ್ಚ್ ೨೧ರಂದು ಗೃಹ ಖಾತೆಯ ರಾಜ್ಯ ಮಂತ್ರಿ ಕಿರೆಣ್ ರಿಜಿಜು ಲೋಕಸಭೆಗೆ ತಿಳಿಸಿದಂತೆ ಇತರ ರಾಜ್ಯಗಳಿಗೆ ಹೋಲಿಸಿದಲ್ಲಿ ಮಹಾರಾಷ್ಟ್ರದಲ್ಲಿ ಪೊಲೀಸರ ಬಂಧನದಲ್ಲಿದ್ದಾಗ ಸಂಭವಿಸುವ ಸಾವುಗಳ ಸಂಖ್ಯೆ ತುಸು ಹೆಚ್ಚು. ಇದಕ್ಕೆ ಮುಖ್ಯ ಕಾರಣ ಮಾಡಿದ ತಪ್ಪಿಗೆ ಉತ್ತರದಾಯಿಗಳನ್ನಾಗಿ ಮಾಡುವ ವಾತಾವರಣವಿಲ್ಲದಿರುವುದು.

 ಒಟ್ಟಾರೆಯಾಗಿ ನೋಡಿದರೆ ಸರ್ಕಾರಕ್ಕೆ  ಜೈಲುಗಳ ಸುಧಾರಣೆಯ ವಿಷಯವು ಅದರಲ್ಲೂ ಮಹಿಳಾ ಖೈದಿಗಳಿಗೆ ಸಂಬಂಧಪಟ್ಟ ವಿಷಯಗಳ ಸುಧಾರಣೆಯ ವಿಷಯವು ಎಂದೂ ಆದ್ಯತೆಯ ವಿಷಯವಾಗಿಯೇ ಇಲ್ಲ. ಸಾಮಾನ್ಯವಾಗಿ ಯಾವಾಗಲು ಜೈಲುಗಳಲ್ಲಿ ಸಿಬ್ಬಂದಿಗಳ ಕೊರತೆ ಇದ್ದೇ ಇರುತ್ತದೆ. ಹಾಗೂ ಜೈಲು ಸುಧಾರಣೆಗೆಂದು ನೇಮಕವಾಗುವ ಪ್ರಭಾರಿ ಅಧಿಕಾರಿಗಳ ಸಂಖ್ಯೆಯೂ ಸದಾ ಕಡಿಮೆಯೇ ಇರುತ್ತದೆ. ಕುಂದುಕೊರತೆಗಳ ನಿವಾರಣೆಗೆ ಸಲಹೆ ಸಹಕಾರ ನೀಡಲೆಂದೇ ರಚಿಸಲಾಗಿರುವ (ಸರ್ಕಾರೇತರ ಸಂಸ್ಥೆಗಳು ಸದಸ್ಯರಾಗಿರುವ) ವೀಕ್ಷಕ ಸಮಿತಿಗಳ ಸಭೆಯೂ ನಡೆಯುವುದಿಲ್ಲ. ಏಕೆಂದರೆ ಸಭೆಯನ್ನು ಆಯೋಜಿಸದಿದ್ದರೆ ಶಿಸ್ತಿನ ಕ್ರಮಗಳಿಗೆ ಗುರಿಯಾಗುತ್ತೇವೆಂಬ ಭಯವಿಲ್ಲ. ಇಷ್ಟಾಗಿಯೂ ಸಮಸ್ಯೆಗಳು ಉದ್ಭವಿಸಿದಾಗ ಜೈಲು ಸಿಬ್ಬಂದಿಗಳ ಮತ್ತು ಪೊಲೀಸರ ವಿರುದ್ಧ ಗಂಂಭೀರವಾದ ವಿಚಾರಣೆಗಳು ನಡೆಯುವುದು ಬಹಳ ಕಡಿಮೆ.

ಶೆಟ್ಟೆಯವರ ನಿರ್ದಯ ಕೊಲೆಯ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಲೇ ಬೇಕು. ಇದಕ್ಕೆ ಕಾರಣರಾದ ಕಾನೂನು ಪಾಲಕರನ್ನು ಮಾಧ್ಯಮಗಳು, ನಾಗರಿಕ ಸಮಾಜ ಮತ್ತು ನ್ಯಾಯಾಂಗ ಉತ್ತರದಾಯಿಗಳನ್ನಾಗಿ ಮಾಡಲೇ ಬೇಕು. ತಮ್ಮ ನ್ಯಾಯಾದೇಶವೊಂದರಲ್ಲಿ (ಸುನಿಲ್ ಬಾತ್ರ ವರ್ಸಸ್ ಡೆಲ್ಲಿ ಅದ್ಮಿನಿಸ್ಟ್ರೇಷನ್, ೧೯೭೮) ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರು ಪ್ರತಿಪಾದಿಸಿದಂತೆಸೆರೆಮನೆಯೊಳಗಿನ ಸ್ವಾತಂತ್ರ್ಯವೆಂಬುದು ನಮ್ಮ ಸಂವಿಧಾನದ ಒಂದು ಗುಣವಿಶೇಷವಾಗಿದೆ...ಯುದ್ಧದ ಎಲ್ಲಾ ಆಗುಹೋಗುಗಳ ತೀರ್ಮಾನವನ್ನು ಹೇಗೆ ಸೇನಾಧಿಕಾರಿಗಳಿಗೆ ಮಾತ್ರ ಬಿಟ್ಟುಕೊಡಲು ಸಾಧ್ಯವಿಲ್ಲವೋ ಹಾಗೆ ಖೈದಿಗಳ ಹಕ್ಕುಗಳ ವಿಷಯವನ್ನೂ ಸಂಪೂರ್ಣವಾಗಿ ಜೈಲು ಅಧಿಕಾರಿಗಳಿಗೇ ಬಿಟ್ಟುಕೊಡಲಾಗುವುದಿಲ್ಲ.

  ಕೃಪೆ: Economic and Political Wekkly                                
June 24, 2017. Vol. 52. No. 25 & 26
                                                                                               



ಕಾಮೆಂಟ್‌ಗಳಿಲ್ಲ: