ಭಾನುವಾರ, ಮೇ 7, 2017

ನಮ್ಮ ತಪ್ಪಿನ ಶಿಲುಬೆಗಳನ್ನು ಕಾಶ್ಮೀರಿಗಳು ಹೊರುತ್ತಿದ್ದಾರೆ..




ಅನುಶಿವಸುಂದರ್
ಸಂಬಂಧಿತ ಚಿತ್ರ

ಸತ್ಯಗಳು ಬಯಲಾಗುತ್ತವೆಂಬ ಹೆದರಿಕೆಯಿಂದಲೇ ಸರ್ಕಾರವು ಕಾಶ್ಮೀರದಲ್ಲಿ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಿದೆ.

ಹಿಂದೆ ಕಾಶ್ಮೀರದಲ್ಲಿ ತಪ್ಪುಸುದ್ದಿಗಳು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಕೆಲವು ಬಾರಿ ಸುದ್ದಿಗಳ ಸಾರವನ್ನು ಮತ್ತು ಕೆಲವೊಮ್ಮೆ ಕೆಲವು ಸುದ್ದಿತಾಣಗಳನ್ನೇ ನಿಷೇಧಿಸಿರುವುದುಂಟು. ಆದರೆ ಈಗ ಹೇರಲಾಗಿರುವ ನಿಷೇಧ ಹಿಂದಿನ ನಿಷೇಧಗಳ ತರದ್ದಲ್ಲಕಾಶ್ಮೀರಿ ಹೋರಾಟಗಾರರು ಪರಸ್ಪರ ಸಂಪರ್ಕವಿಟ್ಟುಕೊಂಡು ಸಂಘಟಿತರಾಗಬಾರದೆಂಬುದೂ ಮತ್ತು ಹಲವು ಮಾನವ ಹಕ್ಕು ಉಲ್ಲಂಘನೆಗಳನ್ನು ಬಟಾಬಯಲು ಮಾಡುವ ಪ್ರತಿಭಟನೆಗಳ ವಿಡಿಯೋಗಳನ್ನು ವಿನಿಮಯ ಮಾಡಿಕೊಳ್ಳುವುದನ್ನು ತಡೆಗಟ್ಟುವುದೇ ಬಾರಿ ಸಾಮಾಜಿಕ ಮಾಧ್ಯಮಗಳ ಮೇಲೆ ಒಂದು ತಿಂಗಳ ಕಾಲ ವಿಧಿಸಿರುವ ನಿಷೇಧದ ಉದ್ದೇಶವಾಗಿದೆಯೆಂಬುದು ಸ್ಪಷ್ಟ.

ಹಾಗೆ ನೋಡಿದರೆ ಕಾಶ್ಮೀರದ ಒಂದು ಇಡೀ ಪೀಳಿಗೆಯೇ ಸರ್ಕಾರದ  ಪಶ್ಚಾತ್ತಾಪ ರಹಿತ ಹಿಂಸೆ ಮತ್ತು ಸೆನ್ಸಾರ್ಶಿಪ್ಗಳ ಜೊತೆಜೊತೆಗೆ ಬೆಳೆದಿದ್ದಾರೆ. ಹಾಗಿದ್ದರೂ ಭಾರತದ ಪ್ರಭುತ್ವವನ್ನು ಕಾಶ್ಮೀರಿಗಳು ಹೇಗೆ ಪರಿಭಾವಿಸುತ್ತಾರೆ ಎಂಬುದಕ್ಕೆ ನಿದರ್ಶನಗಳಂತಿರುವ ಕಥನಗಳು ಹರಡುವುದನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವ ಮಟ್ಟಕ್ಕೆ ಇಳಿಯಬಲ್ಲವೆಂಬುದಕ್ಕೆ ಬೆಳವಣಿಗೆಯು ಮತ್ತೊಂದು ಪುರಾವೆಯನ್ನು ಒದಗಿಸಿದೆ. ಕಾಶ್ಮೀರದಲ್ಲಿರುವ ಅತ್ಯಧಿಕ ಪ್ರಮಾಣದ ಸೈನಿಕ ಗಸ್ತಿನ ಜೊತೆಜೊತೆಗೆ ಇದೂ ಸಹ ಸೇರಿಕೊಂಡಿದೆ. ಏಕೆಂದರೆ ಇದು ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವ ಮತ್ತು ತಪ್ಪು ಸುದ್ದಿ ಹರಡುವಿಕೆಯ ನಿಷೇಧವೆಂಬ ಭಾಷೆಯಲ್ಲಿ ನೇಯ್ದಿದ್ದರೂ ಸಾರಾಂಶದಲ್ಲಿ ಕಾಶ್ಮೀರಿಗಳ ವಾಕ್ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಆದೇಶವೇ ಆಗಿದೆ. ಆದೇಶವನ್ನು ಸತ್ಯಾಸತ್ಯತೆಯನ್ನು ಪರಿಶೀಲಿಸದ, ಆಕ್ಷೇಪಾರ್ಹ ಮತ್ತು ಪ್ರಚೋದನಾತ್ಮಕ ಸುದ್ದಿಸಾರಗಳಿಂದ ಕಾಶ್ಮೀರಿಗಳನ್ನು ಬಚಾವು ಮಾಡುವ ಉದ್ದೇಶದಿಂದಲೇ ತರಲಾಗಿದೆಯೆಂದು ಹೇಳಲಾಗಿದೆ. ಆದರೆ ಕಲ್ಲು ತೂರುವ ಹೋರಾಟಗಳು ಮತ್ತು ಪ್ರತಿಭಟನೆಯ ದೃಶ್ಯಾವಳಿಗಳು ಸರ್ಕಾರದ ವಿರೋಧಿಯಾದದ್ದೇ ವಿನಃ ಸಮಾಜದ ವಿರೋಧಿಯೂ ಅಲ್ಲ , ಅಥವಾ  ಸಾರ್ವಜನಿಕ ವಿರೋಧಿಯೂ ಅಲ್ಲವೆಂಬುದನ್ನು ಸರ್ಕಾರವು ಮರೆಮಾಚುತ್ತಿದೆ.

ಮೇಲಾಗಿ ಸರ್ಕಾರವು ಕಾಶ್ಮೀರದ ಯಾವ ಸತ್ಯಾಸತ್ಯತೆಯನ್ನು ಪರಿಶೀಲಿಸದ  ಸುದ್ದಿಗಳನ್ನು ಉದ್ದೇಶಿಸಿ ಕ್ರಮವನ್ನು ತೆಗೆದುಕೊಂಡಿದೆ? ಏಪ್ರಿಲ್ ೯ರಂದು ನಡೆದ ಲೋಕಸಭಾ ಉಪಚುನಾವಣೆಯ ವೇಳೆಯಲ್ಲಿ ನೂರಾರು ವಿಡಿಯೋಗಳು ವೈರಲ್ ಆದವು. ಅದರಲ್ಲಿನ ಚಿತ್ರಗಳು ಸ್ಪಷ್ಟವಾಗಿರುತ್ತಿರಲಿಲ್ಲ, ಸ್ಥಿರವಾಗಿರುತ್ತಿರಲಿಲ್ಲ. ಮತ್ತು ಅದರಲ್ಲಿ ಗುಂಡುಗಳು ಸದ್ದುಗಳು ಮತ್ತು  ಜನರ ಆಕ್ರಂದನಗಳ ಸದ್ದುಗಳೂ ಕೇಳುತ್ತಿದ್ದವು. ಇವು  ಕಾಶ್ಮೀರಿಗಳ ಮತ್ತು ಅಲ್ಲಿ ನಿಯೋಜಿಸಲಾದ ಸೈನಿಕರ ನಡುವಿನಒಡನಾಟಗಳುಹೇಗಿರುತ್ತದೆಂಬುದರ ಚಿತ್ರಣವನ್ನು ನಮಗೆ ಕೊಡುತ್ತವೆ. ಇದರಲ್ಲಿ ಒಂದು ತನ್ನ ಮೃತ ಸಹೋದರನ ದೇಹವನ್ನು ಕೊಂಡೊಯ್ಯುತ್ತಿದ್ದ ಆಂಬುಲೆನ್ಸ್ ವಾಹನವನ್ನು ಪೊಲೀಸರು ತಡೆಗಟ್ಟಿದಾಗ  ೧೭ ವರ್ಷದ ತರುಣನೊಬ್ಬ ಫೇಸ್ಬುಕ್ ಲೈವ್ ಮೂಲಕ ಹೊರಜಗತ್ತಿಗೆ ನೇರವಾಗಿ ಬಿತ್ತರಿಸಿದ ಚಿತ್ರಗಳಾಗಿದ್ದವು. ಮತ್ತೊಂದು ದೃಶ್ಯಾವಳಿ, ಮಿಲಿಟೆಂಟ್ಗಳ ಜೊತೆ ಗುಂಡಿನ ಚಕಮಕಿಯಲ್ಲಿ ತೊಡಗಿದ್ದ ಭದ್ರತಾ ಪಡೆಗಳ ಮೇಲೆ ಕಲ್ಲು ತೂರುತ್ತಾ ಗುಂಡಿನ ಪೆಟ್ಟಿಗೆ ಗುರಿಯಾದ ಯುವಕನೊಬ್ಬ ತೆಗೆದ ದ್ರೂಶ್ಯಗಳ ನೇರಪ್ರಸಾರವಾಗಿತ್ತು. ಭಾರತದ ಭದ್ರತಾ ಪಡೆಗಳ ಸಹನೆ ಮತ್ತು ನಿಗ್ರಹದ ಪೊಳ್ಳುತನವನ್ನು ಬಯಲಿಗೊಳಿಸಲು ಕಾಶ್ಮೀರದ ಯುವ ಸಮುದಾಯ ವಿಡಿಯೋವನ್ನು ವಿಸ್ತೃತವಾಗಿ ಬಳಸಿದರುಮತ್ತೊಂದೆಡೆ ಭಾರತದ ಜನತೆಯ ಮನಸ್ಸಿನಲ್ಲಿ ಕ್ರಾಲ್ಪೋರಾದಲ್ಲಿ ಕಾಶ್ಮೀರಿ ಯುವಕನೊಬ್ಬ ಸಿಆರ್ಪಿಎಫ್ ಯೋಧನೊಬ್ಬನನ್ನು ಕೆಣಕುತ್ತಿದ್ದ ವಿಡಿಯೋ ದೃಶ್ಯ ಮಾತ್ರ ಉಳಿದುಕೊಂಡಿತು. ಸಾಮಾಜಿಕ ಮಾಧ್ಯಮಗಳಲ್ಲಿ ಸರ್ವರಿಗೂ ಸಮಾನ ಅವಕಾಶಗಳಿವೆಯೆಂದು ಹೇಳಲಾಗುತ್ತಿದ್ದರೂ ಅಲ್ಲಿಯೂ ಸಹ ದೇಹಬಲದ ರೀತಿಯಲ್ಲಿ ಸಂಖ್ಯೆಗಳ ಮೇಲಾಟವೇ ಮೇಲುಗೈ ಪಡೆಯುತ್ತದೆ. ಹಲವಾರು ಬಾರಿ ಅಂಥಾ ಖಾತೆಗಳನ್ನು ಸರ್ಕಾರದ ಐಟಿ ಕೋಶಗಳು (ಸೆಲ್) ದುಡ್ಡು ಕೊಟ್ಟು ನಡೆಸುತ್ತವೆ. ಆದರೂ ಸಿಆರ್ಪಿಎಫ್ ಇನ್ಸ್ಪೆಕ್ಟರ್ ತನಿಖೆಯಲ್ಲಿ ವಿಡಿಯೊ ಅಧಿಕೃತವಾದದ್ದು ಎಂದು ತಿಳಿದು ಬಂದಿತು ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡರು. ಆದರೆ ಸೈನಿಕರು ನಡೆಸಿರುವ ಅತ್ಯಾಚಾರಗಳ ಇತರ ದೃಶ್ಯಾವಳಿಗಳ ಅಧಿಕೃತತೆಯ ಬಗ್ಗೆ ಏಕೆ ಇಂಥಾ ತನಿಖೆಗಳನ್ನು ನಡೆಸುವುದಿಲ್ಲ?

ಕೆಲವು ವಿಶ್ಲೇಷಕರು ಗುರುತಿಸಿರುವಂತೆ ಸಿಆರ್ಪಿಎಫ್ ಯೋಧರ ಬಗ್ಗೆ ಇರುವ ವಿಡಿಯೋ ದೃಶ್ಯಾವಳಿಗಳಲ್ಲಿ ಕನಿಷ್ಟ ನಾಲಕ್ಕು ಜನರು ಯೋಧರಿಗೆ ಹಾನಿ ಮಾಡಬೇಡಿ ಎಂದು ಹೇಳುತ್ತಿರುವ ಧ್ವನಿಗಳಿವೆ. ಒಂದು ಚಲನ ಚಿತ್ರದ ದೃಶ್ಯಾವಳಿಗಳನ್ನು ಚಿತ್ರಿಸಿದಾಗ ಎಲ್ಲಾ ಪದರಗಳೂ ದಾಖಲಾಗುತ್ತವೆ. ಆದರೆ ವಿಡಿಯೋಗಳನ್ನು ಹೆಚ್ಚೆಚ್ಚು ಹಂಚಿಕೊಳ್ಳುತ್ತಾ ಹೋದಂತೆ ಪದರುಗಳು ಇಲ್ಲವಾಗುತ್ತಾ ಹೋಗುತ್ತವೆ.

ಒಂದೋ ಇಂಥಾ ದೃಶ್ಯಾವಳಿಗಳ ಸತ್ಯಾಸತ್ಯೆಗಳ ಇಡಿಯಾದ ಪರಿಶೀಲನೆ ಸಾಧ್ಯ ಅಥವಾ ಯಾವ ಪರಿಶೀಲನೆಯೂ  ಸಾಧ್ಯವಿಲ್ಲವೆಂಬ ನಂಬಿಕೆ ಚಾಲ್ತಿಯಲ್ಲಿದೆ. ಆದರೆ ವಾಸ್ತವ ಹಾಗೇನೂ ಇಲ್ಲ. ಜಗತ್ತಿನೆ ಹಲವಾರು ಕಡೆಗಳಲ್ಲಿ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ನೇರ ಪ್ರಸಾರ ಮಾಡುವ ಮಾರ್ಗಗಳನ್ನು ಅನುಸರಿಸುತ್ತಾರೆ. ವಾಟ್ಸಪ್ ವಿಡಿಯೋಗಳು ನೀಡುವ ತತ್ಕ್ಷಣದ ಅಧಿಕೃತತೆಯನ್ನು ಜನ ಸತ್ಯದ ಪುರಾವೆಯೆಂದು ಭಾವಿಸುತ್ತಾರೆ. ಇಂಥಾ ವಿಡಿಯೋಗಳನ್ನು ಹಂಚಿಕೊಳ್ಳಲು ವ್ಯಕ್ತವಾಗುವ ಪ್ರೇರಣೆಯೊಂದೇ. ಮುಖ್ಯವಾಹಿನಿ ಮಾಧ್ಯಮಗಳು ನಿಜವೆಂದು ಬಿತ್ತರಿಸುವ ಸತ್ಯಗಳನ್ನು ಬುಡಮೇಲು ಮಾಡುತ್ತೇವೆಂಬ ಕಥನ. ರಾಜಕೀಯ ಭಿತ್ತಿಯ ಯಾವ ಕಡೆಗೆ ಸೇರಿದವರಾಗಿದ್ದರೂ, ಅವರ ಪ್ರಕಾರ ಮುಖ್ಯವಾಹಿನಿ ಎಂಬುದರ ಅರ್ಥ ಏನೇ ಆಗಿದ್ದರೂ ದೃಶ್ಯಾವಳಿಗಳ ಹಂಚಿಕೆಯ ಹಿಂದಿನ ಕಥನ ಮಾತ್ರ ಇದೇ ಆಗಿರುತ್ತದೆಆದರೆ ಅದರ ಅಧಿಕೃತತೆಯ ದಿರಿಸಿನಿಂದಾಗಿಯೇ ಅವನ್ನು ಮತ್ತಷ್ಟು ಪ್ರಚಾರಗಳಿಗಾಗಿ ಬಳಸಿಕೊಳ್ಳುವ ಸಾಧ್ಯತೆಗಳು ಇಲ್ಲದಿಲ್ಲ

ಆದರೆ ಸರ್ಕಾರವೊಂದು ವದಂತಿಗಳನ್ನು ಹಬ್ಬಿಸುವ ವಾಟ್ಸಪ್ ಬಳಕೆದಾರನಂತೆ ವರ್ತಿಸುತ್ತಾ ತನ್ನ ಸೈದ್ಧಾಂತಿಕ ನಿಲುವುಗಳಿಗೆ ಸರಿಹೊಂದುವ ದೃಶ್ಯಗಳ ಸತ್ಯಾಸತ್ಯತೆಗಳನ್ನು ಮಾತ್ರ ಪರಿಶೀಲಿಸುತ್ತಾ ಉಳಿದವುಗಳ ಬಗ್ಗೆ ಜಾಣ ಕುರುಡನ್ನು ಪ್ರದರ್ಶಿಸಲು ಸಾಧ್ಯವಿಲ್ಲ. ಸುಳ್ಳುಸುದ್ದಿಗಳನ್ನು ಹರಡುವುದನ್ನು ತಡೆಗಟ್ಟುವುದರ ಬಗ್ಗೆ ಗಂಭೀರವಾಗಿರುವ ಸರ್ಕಾರವೊಂದು, ಸುಳ್ಳು ಸುದ್ದಿಗಳನ್ನು ನಿಗ್ರಹಿಸಲು ಐರೋಪ್ಯ ಒಕ್ಕೂಟವು ಮಾಡುತ್ತಿರುವಂತೆ, ದೃಶ್ಯಾವಳಿಗಳ ಸಂದರ್ಭವನ್ನು ಮತ್ತು ಅದರಲ್ಲಿ ಅಡಕವಾಗಿರುವ ಪದರಗಳನ್ನು ಗುರುತಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಲು ಮುಂದಾಗುತ್ತದೆ. ಕಾಶ್ಮೀರಿ ಪ್ರತಿಭಟನೆಗಳ ಬಗ್ಗೆ ವೈರಲ್ ಆಗಿರುವ ವಿಡಿಯೋದಲ್ಲಿ ಸುಳ್ಳು ಸುದ್ದಿಯಿದೆಯೆಂದು ಸರ್ಕಾರವು ಅನುಮಾನಿಸುತ್ತಿದ್ದರೆ ವಿಡಿಯೋದಲ್ಲಿ ತಪ್ಪಾಗಿ ತೋರಿಸಲ್ಪಟ್ಟಿರುವ ಸಂಗತಿಗಳು ಯಾವುವು- ದೃಶ್ಯಾವಳಿಗಳನ್ನು ತಿದ್ದಲಾಗಿದೆಯೇ, ಅಥವಾ ಅವು ಬೇರೆ ಪ್ರದೇಶದ ದೃಶ್ಯಗಳೆ ಅಥವಾ ಹಳೆಯ ದೃಶ್ಯಗಳೇ ಎಂಬಿತ್ಯಾದಿಗಳ ಬಗ್ಗೆ ಜನರಿಗೆ ಹೇಳಬೇಕಾಗುತ್ತದೆ.

ಹಲವಾರು ಸಾರಿ ಮುಖ್ಯವಾಹಿನಿ ಪ್ರಕಾಶನ ಸಂಸ್ಥೆಗಳು ಸಹ ವೈರಲ್ ಆದ ವಿಡಿಯೋಗಳ ಸತ್ಯಾಸತ್ಯತೆಗಳನ್ನು ಪರಿಶೀಲಿಸಲು ಸಾಧ್ಯವಾಗುವುದಿಲ್ಲ. ಆದರೆ ಅದು ಘಟನೆ ಸಂಭವಿಸಿದ ಜಾಗ ದುರ್ಗಮವಾಗಿರುವ ಕಾರಣದಿಂದಲೋ, ಅಥವಾ ಅವುಗಳ ಸತ್ಯಾಸತ್ಯೆಯನ್ನು ಒರೆಹಚ್ಚಲು ಬೇಕಾದ ವ್ಯವಸ್ಥೆ ಇಲ್ಲದಿದ್ದುದರಿಂದಲೋ ಸಂಭವಿಸುವುದಿಲ್ಲ. ಬದಲಿಗೆ ಸತ್ಯಾಸತ್ಯತೆಗಳನ್ನು ಒರೆಹಚ್ಚಿ ನೋಡಲು ಇರುವ ತಾಳ್ಮೆಯ ಕೊರತೆ ಮತ್ತು ಉತ್ತರದಾಯಿತ್ವದ ಕೊರತೆಗಳೇ ಬಹಳಷ್ಟು ಬಾರಿ ಇದಕ್ಕೆ ಕಾರಣವಾಗಿರುತ್ತವೆ. ಆದರೆ ಇಂಥಾ ಸುಳ್ಳು ಸುದ್ದಿಯನ್ನು ಪತೆಹಚ್ಚುವುದರಲ್ಲಿ ತೊಡಗಿಕೊಂಡಿರುವ ಸ್ವತಂತ್ರ ಪತ್ತೆದಾರಿಗಳು ಬಹಳಷ್ಟು ಪೊಳ್ಳು ಫೋಟೋಗಳನ್ನು ಕೇವಲ ರಿವರ್ಸ್ ಇಮೇಜ್ ಸರ್ಚ್ (ಹಿಮ್ಮುಗ ಚಿತ್ರ ಪರೀಕ್ಷೆ)ಯಿಂದಲೇ ಪತ್ತೆ ಹಚ್ಚಬಹುದೆಂದು ತೋರಿಸಿಕೊಟ್ಟಿದ್ದಾರೆ. ಬಹಳಷ್ಟು ಪಾಶ್ಚಿಮಾತ್ಯ ದೇಶಗಳು ಇಂಥಾ ಪರೀಕ್ಷಾ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ. ಒಂದು ಸಂದೇಶವನ್ನು ಹಂಚಿಕೊಳ್ಳುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿಕೊಳ್ಳಬೇಕೆಂಬ ಸಂಸ್ಕೃತಿಯು ಹರಡಬೇಕೆಂದರೆ ಮೊದಲು ಸರ್ಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕಾಗುತ್ತದೆ. ಆದರೆ ಇದು ಅಸಂಭವ. ಉದಾಹರಣೆಗೆ ಭಾರತೀಯ ಜನತಾ ಪಕ್ಷದ ಸದಸ್ಯನಾದ ಸಂಗೀತ್ ಸೋಮ್ ಅವರು ೨೦೧೩ರಲ್ಲಿ ಮುಝಫ್ಫರ್ನಗರದ ಗಲಭೆಗೆ ಮೂಲ ಕಾರಣವಾದ ಸುಳ್ಳು ವಿಡಿಯೋ ಒಂದನ್ನು ಸತ್ಯಾಸತ್ಯತೆಯನ್ನು ಪರಿಶೀಲಿಸದೆ ತನ್ನ ಫೇಸ್ಬುಕ್ ಪೇಜಿನಲ್ಲಿ ಹಂಚಿಕೊಂಡ ಆರೋಪವನ್ನು ಎದುರಿಸುತ್ತಿದ್ದಾರೆ.
ಸರ್ಕಾರದ ಐಟಿ ಸೆಲ್ ಮತ್ತು ಕೆಲವು ಮುಖ್ಯ ಅಧಿಕಾರಿಗಳು ಉತ್ತರದಾಯಿತ್ವವಿಲ್ಲದ ಪ್ರಚಾರ ಮತ್ತು ಅಧಿಕೃತ ಮೌನಗಳ ಮೂಲಕ ಸುಳ್ಳು ಸುದ್ದಿಗಳ ಪ್ರಚಾರಕ್ಕೆ ಇಂಬುಗೊಟ್ಟಿದ್ದಾರೆ. ಆದರೆ ಅವರು ಸಾಮಾಜಿಕ ಮಾಧ್ಯಮಗಳ ಅಸ್ಥಿರ (ಫಜ್ಜಿ) ಸ್ವರೂಪವನ್ನು ಮುಂದುಮಾಡಿ ತಮ್ಮ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದು ಆಗಕೂಡದು. ಸರ್ಕಾರವು ಮಾಡಿರುವ ಅಧಿಕಾರದ ದುರುಪಯೋಗವನ್ನು ಸಾಬೀತು ಮಾಡುವ ದೃಶ್ಯಾವಳಿಗಳನ್ನು ಹೊಂದಿರುವ ವಿಡಿಯೋಗಳನ್ನು ಕಾಶ್ಮೀರಿಗಳು ದೇಶದ ಮುಂದಿಟ್ಟಿದ್ದಾರೆ. ಆದರೆ ಸರ್ಕಾರವು ಅವುಗಳ ಸತ್ಯಾಸತ್ಯತೆಗೆಳನ್ನು ನಿಖರವಾಗಿ ಪತ್ತೆಹಚ್ಚಲು ಅಸಾಧ್ಯವೆಂಬ ಕಥನವನ್ನು ಮುಂದಿಡುವುದರ ಮೂಲಕ ತನಗೆ ಸತ್ಯವನ್ನು ಅರಿತುಕೊಳ್ಳಲು ಯಾವ ಆಸಕ್ತಿಯಿಲ್ಲವೆಂದು ಮತ್ತೊಮ್ಮೆ ರುಜುವಾತು ಮಾಡಿದೆ.
  
ಕೃಪೆ: Economic and Political Weekly
        May  6, 2017. Vol. 52. No. 18.

                                                                                                                              



















                

ಕಾಮೆಂಟ್‌ಗಳಿಲ್ಲ: