ಮಂಗಳವಾರ, ಮೇ 2, 2017

ಸಂಘಟನೆಯಲ್ಲಿ ಬಲವಿದೆ




 ಅನು: ಶಿವಸುಂದರ್

Mumbai’s sanitation workers ಗೆ ಚಿತ್ರದ ಫಲಿತಾಂಶ

ಮುಂಬೈನ ಪೌರಕಾರ್ಮಿಕರ ಕಾನೂನಾತ್ಮಕ ದಿಗ್ವಿಜಯ ಸಂಘಟನಾ ಶಕ್ತಿಯ ಬಲವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಸುಮಾರು ಹತ್ತು ವರ್ಷಗಳಿಂದ ನಡೆದ ಸುದೀರ್ಘ ಕಾನೂನು ಸಮರದಲ್ಲಿ ಮುಂಬೈನ ಪೌರಕಾರ್ಮಿಕರಿಗೆ ಕೊನೆಗೂ ಜಯ ಸಿಕ್ಕಿದೆ. ಮೊದಲು ಕೈಗಾರಿಕಾ ನ್ಯಾಯಮಂಡಳಿಯಿಂದ ಮುಂಬೈ ಉಚ್ಚ ನ್ಯಾಯಾಲಯಕ್ಕೆ ಮತ್ತೆ ಅಲ್ಲಿಂದ ಅಂತಿಮವಾಗಿ ಸುಪ್ರಿಂ ಕೋರ್ಟಿನವರೆಗೆ ನಡೆದ ಈ ಕಾನೂನು ಸಮರದಲ್ಲಿ ಜಯಶೀಲರಾದ ಮುಂಬೈನ ೨೭೦೦ ಪೌರಕಾರ್ಮಿಕರು ಈಗ ಮುಂಬೈನ  ಬೃಹನ್ನಗರ ಪಾಲಿಕೆಯ (ಬಿಎಂಸಿ) ಖಾಯಂ ನೌಕರರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಮೂರೂ ಹಂತದ ನ್ಯಾಯಾಲಯಗಳಲ್ಲೂ ಈ ನೌಕರರ ಪರವಾಗಿಯೇ ಆದೇಶ ಬಂದಿತ್ತು. ಬಿಎಂಸಿ ಯೇ ಮೂರೂ ಬಾರಿಯೂ ಮೇಲಿನ ಕೋರ್ಟುಗಳಿಗೆ ಪ್ರಕರಣವನ್ನು ತೆಗೆದುಕೊಂಡುಹೋಗಿ ಮೂರು ಬಾರಿಯೂ ಸೋಲನ್ನಪ್ಪಿತು. ಒಂದೆಡೆ ಇದು ಪೌರ ಕಾರ್ಮಿಕರಿಗೆ ಮತ್ತು ಅವರನ್ನು ಸಂಘಟಿಸಿದ ಕಚ್ರಾ ವಾಹತೂಕ್ ಶ್ರಮಿಕ್ ಸಂW (ಕೆವಿಎಸ್ಎಸ್)ಕ್ಕೆ ದಕ್ಕಿದ ಅತ್ಯದ್ಭುತ ದಿಗ್ವ್ವಿಜಯವಾಗಿದ್ದರೆ ಮತ್ತೊಂದೆಡೆ ಸಂಘಟಿತರಾಗುವ ಮತ್ತು ಒಟ್ಟಾಗಿ ಹೋರಾಡುವ ಚೈತನ್ಯದ ಶಕ್ತಿಯ ರುಜುವಾತೂ ಆಗಿದೆ. ಅಷ್ಟು ಮಾತ್ರವಲ್ಲ. ಭಾರತದಲ್ಲಿ ಕಾರ್ಮಿಕ ಹೋರಾಟ ದುರ್ಬಲಗೊಳ್ಳುತ್ತಿರುವಾಗ ಮತ್ತು ಇನ್ನೂ ಅವು ಚೇತರಿಸಿಕೊಳ್ಳುವುದಿಲ್ಲವೆಂದೂ ಕಾರ್ಮಿಕ ವಿರೋಧಿ ಶಕ್ತಿಗಳು ದೊಡ್ಡ ಗಂಟಲಲ್ಲಿ ಅರಚುತ್ತಿರುವ ಸಂದರ್ಭದಲ್ಲಿ, ಒಂದು ಕಾರ್ಮಿಕ ಸಂಘಟನೆಯು ಹೇಗೆ ತನ್ನ ಹೋರಾಟದ ಮಾರ್ಗೋಪಾಯಗಳನ್ನು ಮುಂದಾಲೋಚನೆಯಿಂದ ರೂಪಿಸುವ ಮೂಲಕ ಮತ್ತು ತನ್ನ ಹೋರಾಟಕ್ಕೆ ನಾಗರೀಕ ಸಮಾಜದ ಬೆಂಬಲ ಮತ್ತು ಸಹಕಾರಗಳನ್ನೂ ರೂಢಿಸಿಕೊಳ್ಳುವ ಮೂಲಕ ಹೋರಾಟವನ್ನು ಗೆಲ್ಲಬಹುದೆಂಬುದನ್ನೂ ತೋರಿಸಿಕೊಟ್ಟಿದೆ. ಹಾಗಿದ್ದರೂ ಕಾನೂನು ಜಯವೊಂದರಿಂದಲೇ ಕಾರ್ಮಿಕರ ಹೋರಾಟಕ್ಕೆ ಅಂತಿಮ ಜಯ ಸಿಕ್ಕಿತೆಂದು ಅಂದುಕೊಳ್ಳುವಂತಿಲ್ಲ.

ಸಾಮಾನ್ಯವಾಗಿ ಪೌರ ಕಾರ್ಮಿಕರು ಸಮಾಜದ ಅತ್ಯಂತ ಕೆಳಸ್ಥರದ ಜಾತಿಗಳಿಗೆ ಸೇರಿದವರಾಗಿರುತ್ತಾರೆ.  ಕಸವನ್ನು ಸಂಗ್ರಹಿಸಿ ಅದನ್ನು ಸಾಗಾಟ ಮಾಡುವುದರಿಂದ ಈ ಅದೃಶ್ಯ ಕಾರ್ಮಿಕರು ಹಲವಾರು ಚರ್ಮ ಸಂಬಂಧೀ ಮತ್ತು ಉಸಿರಾಟದ ಖಾಯಿಲೆಗಳಿಗೆ ತುತ್ತಾಗುತ್ತಾರೆ. ಒಳಚರಂಡಿ ಕಾರ್ಮಿಕರಂತೆ ಈ ಪೌರ ಕಾರ್ಮಿಕರೂ ಸಹ ಮುಂಬೈನಂಥ ಬಹುವೇಗವಾಗಿ ಬೆಳೆಯುತ್ತಿರುವ ನಗರಗಳ ನಿತ್ಯ ಜೀವನಕ್ಕೆ ಅತ್ಯಗತ್ಯವೇ ಆದ ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಆದರೆ ಇಂಥಾ ಕೆಲಸಗಳಿಂದಾಗಿಯೇ ಸಮಾಜವು ಅವರನ್ನು ಮನುಷ್ಯರೆಂದು ಗುರುತಿಸುವುದಿಲ್ಲ.  ಮಾತ್ರವಲ್ಲ, ಸಮಾಜಕ್ಕಾಗಿ ಅವರು ಮಾಡುವ ಕೆಲಸಗಳಿಗಾಗಿಯೂ ಅವರನ್ನು ಗುರುತಿಸುವುದಿಲ್ಲ. ತಾವು ಮಾಡುವ ಕೆಲಸ ಮತ್ತು ವಾಸ ಮಾಡುವ ಸ್ಥಳಗಳ ಗಲೀಜುಗಳು ತನ್ನ ಇಂದ್ರಿಯಗಳ ಅನುಭವಕ್ಕೆ ಬರದಂತಿರಲು ಬಹಳಷ್ಟು ಜನ ಕುಡಿತಕ್ಕೆ ದಾಸರಾಗಿ ಸಂವೇದನೆಗಳನ್ನು ಕೊಂದುಕೊಂಡಿರುತ್ತಾರೆ. ಆದರೂ ಇಂಥಾ ಕೆಲಸಗಳಲ್ಲಿ ತೊಡಗಿಕೊಂಡಿರುವ ಪುರುಷರು ಮತ್ತು ಮಹಿಳೆಯರಿಗೆ ಇತರ ಸಂಘಟಿತ ಸರ್ಕಾರಿ ಮತ್ತು ಸ್ಥಳೀಯ ಸಂಸ್ಥೆಗಳ ಉದ್ಯೋಗಿಗಳಿಗೆ ಲಭ್ಯವಾಗುವಂಥ ಕೆಲಸದ ಭದ್ರತೆ, ಖಾಯಿಲೆ ರಜೆ, ಕೆಲಸ ಮಾಡುವಾಗ ಸತ್ತರೆ ಅವರ ಕುಟುಂಬದವರಿಗೆ ಕನಿಷ್ಟ ಪರಿಹಾರದಂಥ ಯಾವುದೇ ಸಂಕ್ಷೇಮ ಯೋಜನೆಗಳ ಲಾಭ ದೊರಕುವುದಿಲ್ಲ. ಆದರೆ ಕೆವಿಎಸ್ಎಸ್ ಮತ್ತು ಚಿಂದಿ ಮತ್ತು ತ್ಯಾಜ್ಯ ವಸ್ತ್ತು ಆಯುವವರ ಸಂಘಗಳಂಥ ಸಂಸ್ಥೆಗಳು ಈ ಅದ್ರೃಶ್ಯತೆ ಮತ್ತು ಮೌನವನ್ನು ಮುರಿದು ಗುತ್ತಿಗೆ ಪೌರ ಕಾರ್ಮಿಕರ ಹಕ್ಕೊತ್ತಾಯಗಳನ್ನು ಸಾರ್ವಜನಿಕರ ಮತ್ತು ಆಡಳಿತ ವರ್ಗದ ಗಮನಕ್ಕೆ ತರಲು ಹೋರಾಡುತ್ತಿದ್ದಾರೆ. ಹಾಗೂ ಕನಿಷ್ಠ ಕೂಲಿ ಮತ್ತು ಇನ್ನಿತರ ಸೌಲಭ್ಯಗಳನ್ನು ಗಳಿಸಿಕೊಳ್ಳುವಲ್ಲಿ ಈ ಹೋರಾಟಗಳು ಒಂದಷ್ಟು ಯಶಸ್ಸನ್ನೂ ಕಂಡಿವೆ.
Mumbai’s sanitation workers ಗೆ ಚಿತ್ರದ ಫಲಿತಾಂಶ

ಈ ಕಾನೂನು ಹೋರಾಟದ ಪ್ರಕ್ರಿಯೆಯಲ್ಲಿ ಬಿಎಂಸಿ ಯು ಈ ಕೆಲಸಗಾರರನ್ನು ಗುತ್ತಿಗೆದಾರರು ನೇಮಕ ಮಾಡಿಕೊಂಡಿರುವುದರಿಂದ ತಾನು ಅವರ ಮುಖ್ಯ ಉದ್ಯೋUದಾತನಲ್ಲವೆಂದು(ಪ್ರಿನ್ಸಿಪಲ್ ಎಂಪ್ಲಾಯರ್) ವಾದಿಸಿತು. ಈಗಾಗಲೇ ಹೈದರಾಬಾದ್ ಪದ್ಧತಿ ಎಂದು ಪ್ರಖ್ಯಾತವಾಗಿರುವ ಪದ್ಧತಿಯಡಿ ಪ್ರತಿ ವಾರ್ದನ್ನು ಹಲವಾರು ಘಟಕಗಳನ್ನಾಗಿ ವಿಭಜಿಸಿ ಪ್ರತಿ ಘಟಕಗಳನ್ನು ಗುಡಿಸುವ, ಶುಭ್ರಗೊಳಿಸುವ, ಮತ್ತು ತ್ಯಾಜ್ಯ ವಸ್ತುಗಳನ್ನು ಸಾಗಾಟ ಮಾಡುವ ಕೆಲಸಕ್ಕೆ ಸರ್ಕಾರೇತರ ಸಂಸ್ಥೆಗಳಿಂದ ಮತ್ತು ಸಹಕಾರಿ ಸಂಸ್ಥೆಗಳಿಂದ ಪ್ರತ್ಯೇಕವಾಗಿ ಗುತ್ತಿಗೆ ತೆಂಡರುಗಳನ್ನು ಕರೆಯಲಾಗುತ್ತದೆ. ಹಿಗಾಗಿ ಬಿಎಂಸಿ ಯು ತನಗೂ ಈ ಕೆಲಸಗಾರರಿಗೂ ನಡುವೆ ಉದ್ಯೋಗದಾತ ಮತ್ತು ಉದ್ಯೋಗಿ ಸಂಬಂಧಗಳಿಲ್ಲವೆಂದು ವಾದಿಸಿತು. ಆದರೆ ಈ ಗುತ್ತಿಗೆದಾರರಿಗೆ ಯಾವುದೇ ಪ್ರತ್ಯೇಕ ಕೌಶಲ್ಯವಾಗಲೀ, ಸಾಮರ್ಥ್ಯವಾಗಲೀ ಇಲ್ಲದಿರುವುದರಿಂದ ತಮ್ಮ ಸಂಬಳವನ್ನು ಬಿಎಂಸಿಯೇ ಪಾವತಿಸುತ್ತಿದೆಯೆಂದು ಕೆವಿಎಸ್ಎಸ್ ವಾದಿಸಿತು. ಅಷ್ಟು ಮಾತ್ರವಲ್ಲದೆ ಪರಿಸರ ರಕ್ಷಣಾ ಕಾಯಿದೆಯ ಕಾನುನುಗಳ ಪ್ರಕಾರ  ಪ್ರಕಾರ ಚರಂಡಿಗಳನ್ನು ಶುಭ್ರ ಮಾಡುವ, ಘನತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡುವ ಕಡ್ಡಾಯ ಕರ್ತವ್ಯಗಳು ನಗರ ಪಾಲಿಕೆಗಳದ್ದೇ ಆಗಿರುತ್ತದೆ ಎಂದೂ ಸಹ ಅದು ಎತ್ತಿತೋರಿಸಿತು. ಅಲ್ಲದೆ ಗುತ್ತಿಗೆದಾರನ ಎಲ್ಲಾ ಚಟುವಟಿಕೆಗಳನ್ನು ಬಿಎಂಸಿಯೇ ನಿಯಂತ್ರಿಸುವುದನ್ನೂ ಸಹ ಕೆವಿಎಸ್ಎಸ್ ತೋರಿಸಿತು:ನೇಮಕಾತಿಗಳು ಸ್ಥಳೀಯ ವಾರ್ಡ್ ಕಛೇರಿಯಲ್ಲಿ ನಡೆಯುತ್ತದೆ. ಮತ್ತು ಕೆಲಸಗಳ ಹಂಚಿಕೆ ಮತ್ತು ಉಸ್ತುವಾರಿಯನ್ನೂ ಸಹ ಬಿಎಂಸಿಯೇ ಮಾಡುತ್ತದೆ.

ಬಿಎಂಸಿಯ ವಿರುದ್ಧ ಮೇಲಿನ ಮೂರೂ ಹಂತದ ಕೋರ್ಟು ಹೋರಾಟಗಳು ಕೆವಿಎಸ್ಎಸ್ ಎದುರಿಸಿದ ಸವಾಲುಗಳ ಒಂದು ಭಾಗವಷ್ಟೆ. ಅಸಂಘಟಿತ ಕ್ಷೇತ್ರಗಳ ಕಾರ್ಮಿಕರನ್ನು ಸಂಘಟಿಸುವುದೇ ಪ್ರಾಯಶಃ ಕಾರ್ಮಿಕ ಹೋರಾಟಗಳಲ್ಲಿ ಅತ್ಯಂತ ಕಷ್ಟದ ಸವಾಲು. ಅವರ ಕೆಲಸದ ಅಭದ್ರತೆ ಮತ್ತು ಬದುಕಿನ ದುರ್ಭರ ಸ್ಥಿತಿಗತಿಗಳು ಅವರನ್ನು ಕಾರ್ಮಿಕ ಸಂಘಟನೆಗೆ ಸೇರಲು ಹೆದರುವಂತೆ ಮಾಡುತ್ತದೆ. ಒಂದು ವೇಳೆ ಸೇರಿಕೊಂಡರೂ ಅವರ ಬದುಕಿನ ಸ್ಥಿತಿಗತಿಗಳು ಬಲವಾದ ಶತೃವಿನ ವಿರುದ್ಧ ದೀರ್ಘಕಾಲ ಸೆಣಸದಂತೆ ಮಾಡುತ್ತದೆ. ದೆಲ್ಲದರ ನಡುವೆಯೂ ಈ ಕಾರ್ಮಿಕರ ಐಕ್ಯತೆ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಂಡು ಬಂದ ಹಿರಿಮೆ ಕೆವಿಎಸ್ಎಸ್ ಗೆ ಸೇರಬೇಕು. ಅಲ್ಲದೆ ವಿದ್ಯಾರ್ಥಿಗಳ, ಪತ್ರಕರ್ತರ, ಆರೋಗ್ಯ ಮತ್ತು ಕಾನುನು ಕಾರ್ಯಕರ್ತರ, ಚಿತ್ರ ನಿರ್ಮಾಪಕರ ಮತ್ತಿತರ ಸಮಾಜದ ಇತರ ವರ್ಗಗನ್ನು ಹಲವು ವಿಧಗಳಲ್ಲಿ ತಲುಪಿ ಈ ಹೋರಾಟಕ್ಕೆ ಅವರ ಬೆಂಬಲ ಮತ್ತು ಸಹಕಾರವನ್ನು ಪಡೆದುಕೊಳ್ಳುವಲ್ಲಿ ಸಹ ಅದು ಯಶಸ್ವಿಯಾಯಿತು. ಈ ಸಂಘಟನೆಯು ತನ್ನ ಬ್ಲಾಗಿನ ಮೂಲಕ ವಿದ್ಯಮಾನಗಳ ಬಗ್ಗೆ ತನ್ನ ನಿಲುವುಗಳನ್ನು ಮತ್ತು ಸಮಾಜದೊಡನೆ ಜೀವಂತ ಸಂಬಂಧವನ್ನು ಕಾಯ್ದುಕೊಂಡು ಬಂದಿದೆ.

ಒಂದೆಡೆ ಸ್ವಚ್ಚ ಭಾರತ ಅಭಿಯಾನದ ಬಗ್ಗೆ ಅಬ್ಬರದ ಪ್ರಚಾರ ಮಾಡುತ್ತಲೇ ಮತ್ತೊಂದೆಡೆ ವಾಸ್ತವದಲ್ಲಿ ನಗರಗಳನ್ನು ಸ್ವಚ್ಚವಾಗಿಡುವ ಕಾರ್ಮಿಕರ ಬಗ್ಗೆ ಯಾವುದೇ ಸಂವೇದನೆಗಳನ್ನು ತೋರದ ಸರ್ಕಾರದ ಮತ್ತು ಸ್ಥಳೀಯ ಸಂಸ್ಥೆಗಳ ಆಷಾಢಭೂತಿತನವನ್ನು ಕೆವಿಎಸ್ಎಸ್ ನ ಈ ಕಾನೂನು ವಿಜಯವು ಬಯಲುಗೊಳಿಸಿದೆ. ತನ್ನ ವೆಬ್ ಸೈಟಿನಲ್ಲಿ ಕೆವಿಎಸ್ಎಸ್ ಸಂಘಟನೆಯು ಕಸಪೊರಕೆಯನ್ನು ಹಿಡಿದುಕೊಂಡು ಮಾಧ್ಯಮಗಳಿಗೆ ಫೋಸು ಕೊಡುತ್ತಾ ಸ್ವಚ್ಚ ಭಾರತದ ನಾಟಕವಾಡುವ ಮಂತ್ರಿ ಮಹೋದಯರುಗಳನ್ನು ಮತ್ತು ಇತರ ತಾರಾಮಣಿಗಳನ್ನು ಬಯಲುಗೊಳಿಸಿದೆ. ಅವರು ಅವರ ನೆರಳನ್ನು ಗುಡಿಸುತ್ತಾರೆ ಆದರೆ ನಾವು ದೇಶವನ್ನು ಸ್ವಚ್ಚವಾಗಿಡುತ್ತೇವೆ ಎಂಬ ತಲೆಬರಹದ ಮೂಲಕ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತನ್ನ ಇತ್ತೀಚಿನ ಒಂದು ಆದೇಶದಲ್ಲಿ ಸುಪ್ರೀಂ ಕೋರ್ಟು ಒಂದು ವರ್ಗದ ಜನರ ಶುಭ್ರತೆಯನ್ನು ಮತ್ತೊಂದು ವರ್ಗದವರನ್ನು ಗುಲಾಮಗಿರಿಗೆ ಹಚ್ಚುವ ಮೂಲಕ ಸಾಧಿಸಲು ಸಾಧ್ಯವಿಲ್ಲವೆಂದು ಸರಿಯಾಗಿಯೇ ಗುರುತಿಸಿದೆ. ಈ ಸಂದೇಶವನ್ನು ಸರ್ಕಾರ ಮತ್ತು ನಾಗರೀಕ ಸಮಾಜ ಅರ್ಥಮಾಡಿಕೊಳ್ಳಬೇಕಿದೆ.

ಕೃಪೆ: Economic and Political Weekly
    April 22, 2017. Vol. 52. No. 16


















ಕಾಮೆಂಟ್‌ಗಳಿಲ್ಲ: