ಮಂಗಳವಾರ, ಫೆಬ್ರವರಿ 28, 2017

ಗಾಳಿಯಲ್ಲಿರುವ ವಿಷಗಳು

ಅನು: ಶಿವಸುಂದರ್

ಭಾರತದಲ್ಲಿ ವಾಯುಮಾಲಿನ್ಯವು ಲಕ್ಷಾಂತರ ಜನರನ್ನು ಅದರಲ್ಲೂ ಬಡಜನತೆಯನ್ನು ಕೊಲ್ಲುತ್ತಿದೆ ಎಂಬ ಸತ್ಯವನ್ನು ನಿರಾಕರಿಸುವುದೇಕೆ?
air pollution ಗೆ ಚಿತ್ರದ ಫಲಿತಾಂಶ

ಕೇಂದ್ರದ ಪರಿಸರ ಮಂತ್ರಿ ಅನಿಲ ಮಾಧವ್ ದವೆಯವರು ಎಲ್ಲವನ್ನೂ ನಿರಾಕರಿಸುವ ಉಮೇದಿನಲ್ಲಿದ್ದಾರೆ. ಭಾರತದಲ್ಲಿ ವಾಯು ಮಾಲಿನ್ಯವು ಬಹಳ ಗಂಭೀರವಾದ ಸಮಸ್ಯೆಯಾಗಿ ಪರಿಣಮಿಸುತ್ತಿದೆಯೆಂಬುದನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೂ ಆ  ಸತ್ಯವನ್ನು ಹೊರದೇಶವದರು ಹೇಳುವುದನ್ನು ಅವರು ಸಹಿಸುವುದುದಿಲ್ಲ. ಅಮೆರಿಕದ ಬೋಸ್ಟನ್ ನಲ್ಲಿರುವ ಹೆಲ್ತ್ ಎಫೆಕ್ಟ್ಸ್ ಇನ್ಸ್ಟಿಟ್ಯೂಟ್ ಮತ್ತು ಸಿಯಾಟಲ್‍ನಲ್ಲಿರುವ ಇನ್ಸ್ಟಿಟ್ಯೂಷನ್ ಫಾರ್ ಹೆಲ್ಟ್ ಮೆಟ್ರಿಕ್ಸ್ ಮತ್ತು ಎವಾಲ್ಯೂಏಷನ್ ಸಂಸ್ಥೆಗಳು ಜಂಟಿಯಾಗಿ “ಜಾಗತಿಕ ವಾಯು ಸ್ಥಿತಿ-2017” (ಸ್ಟೇಟ್ ಆಫ್ ಗ್ಲೋಬಲ್ ಏರ್-2017) ಎಂಬ ವರದಿಯನ್ನು ಬಿಡುಗಡೆ ಮಾಡಿವೆ. ಅದರ ಪ್ರಕಾರ ಭಾರತದಲ್ಲಿ ವಾಯು ಮಾಲಿನ್ಯದಿಂದ ಸಾಯುತ್ತಿರುವವರ ಸಂಖ್ಯೆ ಚೀನಾಗಿಂತ ತುಂಬಾ ಕಡಿಮೆಯೇನಲ್ಲ. ಈ ವರದಿಗೆ ಮಂತ್ರಿ ದವೆಯವರು ಪ್ರತಿಕ್ರಿಯಿಸುತ್ತಾ,  “ನಾವು ಭಾರತೀಯರು ಭಾರತದ ಹೊರಗಿನ ಸಂಗತಿಗಳಿಂದಲೇ ಹೆಚ್ಚು ಪ್ರಭಾವಕ್ಕೊಳಗಾಗುತ್ತೇವೆ” ಎಂದು ದೂರಿದ್ದಾರೆ. 

ಬದಲಿಗೆ ಇಂಥಾ ವಿಷಯಗಳಲ್ಲಿ ನಾವು ನಮ್ಮದೇ ದೇಶದ ಪರಿಣಿತರ ಮಾತುಗಳನ್ನು ನಂಬಬೇಕೆಂದು ಸಲಹೆ ಮಾಡಿದ್ದಾರೆ. ಅಲ್ಲದೆ ಸ್ವದೇಶಿ ಪರಿಣಿತರ ಮೇಲೆ ತನಗೆ “ಈ ದೇಶದ ಸೈನ್ಯದ ಮೇಲೆ ಇರುವಷ್ಟೇ ನಂಬಿಕೆ ಇದೆ”ಯೆಂದು ಹೇಳಿದ್ದಾರೆ. ಜಾಗತಿಕ ವಾಯುಸ್ಥಿತಿ ವರದಿಗೆ ಮಂತ್ರಿಗಳ ಈ ಅಚ್ಚರಿಗೊಳಿಸುವ ಸ್ವರಕ್ಷಣಾತ್ಮಕ ಪ್ರತಿಕ್ರಿಯೆಗಳನ್ನು ಪಕ್ಕಕ್ಕಿಟ್ಟರೂ ವಿಜ್ನಾನ ಪರಿಣಿತರನ್ನು ಸೈನ್ಯಕ್ಕೆ ಹೋಲಿಸುವ ಅವರ ವಿಚಿತ್ರ ಹೇಳಿಕೆಯಂತೂ ನಿಜಕ್ಕೂ ಗಾಬರಿ ಹುಟ್ಟಿಸುತ್ತದೆ. ವಾಯುಮಾಲಿನ್ಯದಿಂದ ಸಂಭವಿಸುತ್ತಿರುವ ಸಾವುಗಳ ಲೆಕ್ಕಾಚಾರಕ್ಕೆ ಆ ವರದಿಯು ಅನುಸರಿಸಿರುವ ಕ್ರಮಗಳ ಬಗ್ಗೆ ಅಲ್ಪಸ್ವಲ್ಪ ತಕರಾರಿರಲು ಸಾಧ್ಯ. ಆದರೆ ಭಾರತದಲ್ಲಿ ವಾಯು ಮಾಲಿನ್ಯವು ಒಂದು ಗಂಭೀರ ಪರಿಸರ ಸಮಸ್ಯೆ ಎಂಬುದರ ಬಗ್ಗೆಯಾಗಲೀ, ಹೆಚ್ಚುತ್ತಿರುವ ಅನಾರೋಗ್ಯ ಮತ್ತು ಸಾವುಗಳಲ್ಲಿ ವಾಯುಮಾಲಿನ್ಯದ ದೊಡ್ಡ ಪಾಲಿದೆ ಎಂಬ ಸತ್ಯದ ಬಗ್ಗೆಯಾಗಲೇ ಯಾವುದೇ ತಕರಾರು ಯಾರಿಗೂ ಇರಲು ಸಾಧ್ಯವಿಲ್ಲ. 
air pollution ಗೆ ಚಿತ್ರದ ಫಲಿತಾಂಶ

ವಾಯು ಮಾಲಿನ್ಯದ ಬಗ್ಗೆ ಅಧಿಕೃತವಾದ ಅಂಕಿಅಂಶಗಳನ್ನು ಆಧರಿಸಿ ಮತ್ತು ಅತ್ಯಂತ ಸಮಗ್ರವಾದ ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ (ಗ್ಲೋಬಲ್ ಬರ್ಡನ್ ಆಫ್ ಡಿಸೀಸ್-ಜಿಬಿಡಿ- ಜಾಗತಿಕ ಖಾಯಿಲೆಗಳ ಹೊರೆ-ಎಂಬುದು ವಿಶ್ವ ಆರೋಗ್ಯ ಸಂಸ್ಥೆ ಸಿದ್ದಪಡಿಸಿರುವ ಆರೋಗ್ಯ ಮಾಪಕ. ಇದು ಅನಾರೋಗ್ಯದಿಂದ ಮತ್ತು ಅಕಾಲಿಕ ಸಾವುಗಳಿಂದ ಕಳೆದು ಹೋಗುವ ಆಯಸ್ಸಿನ ಪ್ರಮಾಣವನ್ನು ಅಂದಾಜು ಮಾಡುತ್ತದೆ- ಅನುವಾದಕನ ಟಿಪ್ಪಣಿ) ವರದಿಯನ್ನು ಆಧರಿಸಿರುವ ಈ ಜಾಗತಿಕ ವಾಯು ಸ್ಥಿತಿ ವರದಿಯು ವಾಯುಮಾಲಿನ್ಯದಿಂದಾಗಿ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮಗಳನ್ನು ಅಂದಾಜು ಮಾಡಿದೆ. ಇದು ಜಗತ್ತಿನ 195 ದೇಶಗಳ ಆರೋಗ್ಯ ಸಂಬಂಧೀ ದತ್ತಾಂಶಗಳನ್ನೂ ಮತ್ತು ವಿಶ್ಲೇಷಣೆಗಳನ್ನು ಆಧರಿಸಿರುವ ಪ್ರಭಾವಶಾಲೀ ವಾರ್ಷಿಕ ವರದಿಯಾಗಿದೆ. ಇದನ್ನು 1990ರಿಂದ ಪ್ರಾರಂಭಿಸಲಾಗಿದ್ದು ಕಳೆದ 25 ವರ್ಷಗಳಿಂದ ಸತತವಾಗಿ ಹೊರತರಲಾಗುತ್ತಿದೆ. 

ಇದರಿಂದಾಗಿ ನಿರ್ದಿಷ್ಟ ಕಾಲಾವಧಿಯಲ್ಲಿ ವಿವಿಧ ಜನವರ್ಗಗಳ, ವಯೋಮಾನದವರ, ಆರೋಗ್ಯ ಸಂಬಂಧೀ ದತ್ತಾಂಶಗಳನ್ನು ಹೋಲಿಕೆಯ ಅಧ್ಯಯನ ಮಾಡಬಹುದಾಗಿದೆ. ಈ ಬಗೆಯ ಮಾಹಿತಿಗಳು ಮತ್ತು ಅದರ ಜೊತೆಗೆ ದೊರೆಯುವ ವಾಯು ಮಾಲಿನ್ಯದ ಮಟ್ಟದ ಬಗೆಗಿನ ಮಾಹಿತಿಗಳು- ಅದರಲ್ಲೂ  PM2.5   ಎಂದು ಗುರುತಿಸಲಾಗುವ ಘನವಸ್ತು ತ್ಯಾಜ್ಯಕಣಗಳ ಮತ್ತು ಒಜೋನ್ ಗಳ ಕುರಿತು ದತ್ತಾಂಶಗಳು- ವಾಯುಮಾಲಿನ್ಯದ ಹೆಚ್ಚಳದಿಂದ ಸಂಭವಿಸುತ್ತಿರುವ ಸಾವುಗಳ ಲೆಕ್ಕಾಚಾರವನ್ನು ಮಾಡಲು ಮತ್ತು “ವೈಕಲ್ಯ ಪರಿಗಣಿತ ಆಯುಷ್ಯ”ದ (ಡಿಸ್‍ಎಬಿಲಿಟಿ ಅಜ್ದ್ಜೆಸ್ಟೆಡ್ ಲೈಫ್ ಇಯರ್ಸ್- ಡಿ.ಎ.ಎಲ್.ವೈ-“ವೈಕಲ್ಯ ಪರಿಗಣಿತ ಆಯುಷ್ಯ” ಎಂದರೆ ಅನಾರೋಗ್ಯ ಮತ್ತು ಅಕಾಲಿಕ ಸಾವುಗಳಿಂದ ಕಳೆದುಕೊಂಡ ವರ್ಷಗಳನ್ನು ಲೆಕ್ಕಮಾಡುವ ಮಾಪಕ- ಅನುವಾದಕನ ಟಿಪ್ಪಣಿ ) ಸಂಖ್ಯೆಯನ್ನು ಲೆಕ್ಕಾಹಾಕಲೂ ಸಹಕಾರಿಯಾಗಿದೆ. ಇಂಥಾ ಮಾಲಿನ್ಯಗಳಿಗೆ ಅದರಲ್ಲೂ ನಿರ್ದಿಷ್ಟವಾಗಿ PM2.5  ನಂಥಾ ಮಾಲಿನ್ಯಗಳಿಗೆ ಸುದೀರ್ಘಕಾಲ ತುತ್ತಾಗುವುದರಿಂದ ಹೃದಯ ಮತ್ತು ಉಸಿರಾಟ ಸಂಬಂಧೀ ಸಮಸ್ಯೆಗಳು ಉಲ್ಬಣಗೊಳ್ಳುತ್ತದಲ್ಲದೆ ಚಿಕ್ಕಮಕ್ಕಳ ಮತ್ತು ವಯಸ್ಸಾದವರ ಆಯಸ್ಸನ್ನು ಗಣನೀಯವಾಗಿ ಕಡಿತಗೊಳಿಸುತ್ತದೆ. ಒಜೋನ್ ಮಾಲಿನ್ಯಕ್ಕೆ ತುತ್ತಾಗುವುದರಿಂದ ದೀರ್ಘಕಾಲದ ಶ್ವಾಸ ನಿರೋಧೀ ಖಾಯಿಲೆಗಳು ಬರುತ್ತವೆಂಬುದು ಈಗಾಗಲೇ ಸಾಬೀತಾಗಿದೆ. ಈ ಎಲ್ಲಾ ಅಂಶಗಳನ್ನು ಆಧರಿಸಿ 2015ರಲ್ಲಿ ವಾಯು ಮಾಲಿನ್ಯದಿಂದ ಸಂಭವಿಸಿದೆ ಎಂದು ಪರಿಭಾವಿಸಬಹುದಾದ ಒಟ್ಟಾರೆ 42 ಲಕ್ಷ ಸಾವುಗಳಲ್ಲಿ ಶೇ.52ರಷ್ಟು ಭಾರತ ಮತ್ತು ಚೀನಾಗಳಲ್ಲಿ ಸಂಭವಿಸಿದೆ ಎಂಬ ತೀರ್ಮಾನಕ್ಕೆ “ಜಾಗತಿಕ ವಾಯು ಸ್ಥಿತಿ ವರದಿ” ಯು ಬಂದಿದೆ. ಅದೇನೇ ಇದ್ದರೂ ಚೀನಾ ದೇಶವು ವಾಯು ಮಾಲಿನ್ಯದಿಂದ ಸಂಭವಿಸುತ್ತಿರುವ ಸಾವುಗಳ ಸಂಖ್ಯೆ ಹೆಚ್ಚಾಗದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೆ ಭಾರತದಲ್ಲಿ ಮಾತ್ರ ಪ್ರತಿವರ್ಷ ಈ ಸಂಖ್ಯೆ ಏರುತ್ತಲೇ ಇದೆ.  

ಇದಕ್ಕೆ ಕಾರಣ ನಿಗೂಢವಾಗಿಯೇನೂ ಉಳಿದಿಲ್ಲ. ವಾಯುಮಂಡಲವನ್ನು ಕಲುಷಿತಗೊಳಿಸುತ್ತಿರುವ ಮಾಲಿನ್ಯಗಳನ್ನು ನಿಯಂತ್ರಿಸಲು ಬೇಕಾದ ಗಂಭೀರ ಕ್ರಮಗಳನ್ನು ಯಾವ ಸರ್ಕಾರಗಳು ಕೈಗೊಂಡಿಲ್ಲ. ಮೇಲಾಗಿ ನಮ್ಮೆಲ್ಲಾ ಗಮನವು ದೆಹಲಿಯ ಮೇಲೆ ಕೇಂದ್ರೀಕ್ರುತವಾಗಿದ್ದು ಸಣ್ಣಪುಟ್ಟ ನಗರ ಪಟ್ಟಣಗಳು ಎದುರಿಸುತ್ತಿರುವ ಬಿಕ್ಕಟ್ಟನ್ನು ಕಡೆಗಣಿಸಿದ್ದೇವೆ. ವಿಶ್ವ ಆರೋಗ್ಯ ಸಂಸ್ಥೆಯು 2016ರಲ್ಲಿ ಜಗತ್ತಿನ 20 ಅತಿ ಹೆಚ್ಚು ಮಾಲಿನ್ಯಪೂರಿತ ನಗರಗಳನ್ನು ಪಟ್ಟಿಮಾಡಿತ್ತು. ಅದರಲ್ಲಿ 10 ನಗರಗಳು ಭಾರತದಲ್ಲಿತ್ತು. ಅವುಗಳಲ್ಲಿ ಅಲಹಾಬಾದ್, ಕಾನ್ಪುರ್, ಫಿರೋಜಾಬಾದ್ ಮತ್ತು ಲಕ್ನೌ ನ ಪರಿಸ್ಥಿತಿಗಳು ಎಲ್ಲಕ್ಕಿಂತ ಹೀನಾಯವಾಗಿತ್ತು. “ನಮ್ಮದೇ” ಆದ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು 2015ರಲ್ಲಿ ನೀಡಿದ ವರದಿಯ ಪ್ರಕಾರ ವಾರಣಾಸಿಯು ಭಾರತದ ಮೂರು ಅತ್ಯಂತ ಮಾಲಿನ್ಯ ನಗರಿಗಳಲ್ಲಿ ಒಂದಾಗಿದೆ. ಈ ವರದಿಯನ್ನು “ನಮ್ಮ ವಿಜ್ನಾನಿಗಳೇ” ನೀಡಿರುವುದರಿಂದ ಮಂತ್ರಿ ದವೆ ಯವರು ಇದನ್ನು ತಿರಸ್ಕರಿಸಲಾಗುವುದಿಲ್ಲ. 

ದೆಹಲಿಯಂಥ ನಗರಗಳ ಮಾಲಿನ್ಯದ ಮಟ್ಟದ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಏಕೆ ಲಭ್ಯವಾಗುತ್ತದೆಂದರೆ ಅದನ್ನು ಲೆಕ್ಕ ಹಾಕಲು ಬೇಕಾದ ಸೌಕರ್ಯಗಳು ಅಲ್ಲಿವೆ. ವಾರಣಾಸಿಯಲ್ಲಿ ಕೇವಲ ಮೂರು ಮಾಲಿನ್ಯ ಮಾಪಕಗಳಿದ್ದು ಅದರಲ್ಲಿ ಒಂದು ಮಾತ್ರ  PM2.5   ಮಾಲಿನ್ಯವನ್ನು ಲೆಕ್ಕಹಾಕುತ್ತದೆ ಹಾಗೂ ಅಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಏರ್ ಕ್ವಾಲಿಟಿ ಇಂಡೆಕ್ಸ್- ಎಕ್ಯೂಐ)ವನ್ನು ನೀಡಬಲ್ಲ ಒಂದೂ ಮಾಪಕಗಳಿಲ್ಲ. ಆದರೆ ದೆಹಲಿಯಲ್ಲಿ PM2.5   ಮತ್ತು    PM10    ಗಳೆರಡನ್ನೂ ಲೆಕ್ಕಹಾಕಬಲ್ಲ 13 ಮಾಪಕಗಳಿವೆ ಮತ್ತು ದೈನಂದಿನ ವಾಯು ಗುಣಮಟ್ಟ ಸೂಚ್ಯಂಕವೂ ಲಭ್ಯವಾಗುತ್ತದೆ. ನಮ್ಮ ನಗರ ಪಟ್ಟಣಗಳಲ್ಲಿನ ವಾಯುಮಾಲಿನ್ಯದ ಪ್ರಮಾಣವನ್ನು ಸಹ ಲೆಕ್ಕವಿಡಲೂ ನಮಗೆ ಸಾಧ್ಯವಿಲ್ಲದಿರುವಾಗ ಆಯಾ ನಗರವಾಸಿಗಳ ಆರೋಗ್ಯದ ಮೇಲೆ ವಾಯುಮಾಲಿನ್ಯದ ಪರಿಣಾಮವನ್ನು ಹೇಗೆತಾನೆ ಅಂದಾಜು ಮಾಡುತ್ತೇವೆ? ವಾಯುಮಾಲಿನ್ಯದ ಪ್ರಮಾಣವನ್ನು ಅಂದಾಜು ಮಾಡಲು ಬೇಕಾದ ಮೂಲಭೂತ ಸೌಕರ್ಯಗಳ ಕೊರತೆ ಕಣ್ಣಿಗೆ ರಾಚುತ್ತಿರುವಾಗ ಜಾಗತಿಕ ವಾಯುಸ್ಥಿತಿ ವರದಿಯಂಥ ಅಧ್ಯಯನಗಳನ್ನು ಆಧರಿಸದೇ ಬೇರೆ ಮಾರ್ಗವೇನಿದೆ? ಅಥವಾ, ಮಂತ್ರಿಗಳು ಹೇಳುವಂತೆ, ವಾಯುಮಾಲಿನ್ಯಕ್ಕೂ ಮತ್ತು ಜನತೆಯ ಅನಾರೋಗ್ಯ ಹಾಗೂ ಸಾವುಗಳ ಪ್ರಮಾಣಕ್ಕೂ ಇರುವ ಸಂಬಂಧಗಳನ್ನು ಭಾರತೀಯ ಪರಿಣಿತರು ತಮ್ಮದೇ ಅಧ್ಯಯನಗಳಿಂದ ಖುದ್ದು ಕಂಡುಹಿಡಿಯುವವರೆಗೂ ನಾವು ಕಾಯಬೇಕೆ? ಅದೇನೇ ಇರಲಿ ನಮ್ಮ ಗ್ರಾಮೀಣ ಮತ್ತು ನಗರ ಪ್ರದೇಶಗಳಿಂದ ವಿಶ್ವಾಸಾರ್ಹ ಮಾಹಿತಿಗಳನ್ನು ನಾವು ಪಡೆಯುವ ವೇಳೆಗೆ ವಾಸ್ತವ ಚಿತ್ರಣವು ಈ “ವಿದೇಶಿ” ವರದಿಯಲ್ಲಿ ಬಯಲಾಗಿರುವುದಕ್ಕಿಂತ ಭೀಕರವಾಗಿರುತ್ತದೆ. 

ನಾವು ಸುಲಭವಾಗಿ ಮರೆತುಬಿಡುವ ಮತ್ತೊಂದು ಸತ್ಯವೇನೆಂದರೆ ಗಾಳಿಯ ಗುಣಮಟ್ಟ ಹದಗೆಡುವುದರಿಂದ ಅತ್ಯಂತ ಹೆಚ್ಚು ಬಾಧೆಗೊಳಗಾಗುವವರು ಬಡಜನರು. ಶ್ರೀಮಂತರು ದುಬಾರಿ ಗಾಳಿ ಶುದ್ಧಿಕಾರಕಗಳನ್ನು ಕೊಂಡುಕೊಳ್ಳುವ ಮೂಲಕ ಮತ್ತು ಹವಾ ನಿಯಂತ್ರಿತ ಕಾರುಗಳಲ್ಲಿ ಓಡಾಡುವ ಮೂಲಕ ಮಾಲಿನ್ಯದಿಂದ ಬಚಾವಾಗುತ್ತಾರೆ. ಆದರೆ ಬಡಜನರು ನಡೆದಾಡುವಾಗ ಅಥವಾ ಸೈಕಲ್ ಮೇಲೆ ಪ್ರಯಾಣಿಸುವಾಗ ಅಥವಾ ಸಾರ್ವಜನಿಕ ಸಾರಿಗೆಗಳನ್ನು ಬಳಸುವಾಗ ಕೆಟ್ಟ ಗಾಳಿಯನ್ನು ಕುಡಿಯದೇ ವಿಧಿಯಿಲ್ಲ. ಈ ರೀತಿ ಪ್ರತಿನಿತ್ಯ ಅವರು ಸೇವಿಸುವ ದೈನಂದಿನ ವಿಷದ ಕೋಟಾದ ಜೊತೆಜೊತೆಗೆ ಸರಿಯಾದ ವಾತಾನುಕೂಲ ವ್ಯವಸ್ಥೆಯಿಲ್ಲದ ಅವರ ಮನೆಗಳಲ್ಲಿ ಉರುವಲಾಗಿ ಸೀಮೆಎಣ್ಣೆ ಮತ್ತು ಸಗಣಿಯ ಬೆರಣಿಗಳನ್ನು ಬಳಸುವುದರಿಂದ ಉಂಟಾಗುವ ಮಾಲಿನ್ಯಕ್ಕೂ ಗುರಿಯಾಗುತ್ತಾರೆ. ಮಾಹಿತಿಯ ಮೂಲ ಯಾವುದೇ ಆಗಿದ್ದರೂ, ಸಮಸ್ಯೆಯ ಗಂಭೀರತೆಯನ್ನು ಎದುರಿಸಲು ನಿರಾಕರಿಸುವ ಮೂಲಕ ಸರ್ಕಾರವು ಈಗಾಗಲೇ ಅನಾರೋಗ್ಯ ಮತ್ತು ಅಪೌಷ್ಟಿಕತೆಗಳಿಂದ ದುರ್ಬಲವಾಗಿರುವ ಬಡಜನತೆಯನ್ನು ಮತ್ತಷ್ಟು ಅಂಚಿಗೆ ತಳ್ಳುತ್ತಿದೆ. 

Economic and Political Weekly
February 25, 2017. Vol. 52, No. 8

ಕಾಮೆಂಟ್‌ಗಳಿಲ್ಲ: