ಗುರುವಾರ, ಸೆಪ್ಟೆಂಬರ್ 29, 2011

ಜ್ಞಾನಪೀಠ ಸಂಭ್ರಮ ಮತ್ತು ಜಾನಪದ ಓದಿದವರ ಸಂಕಟ

ಈ ಬರಹ ಇಂದಿನ (29 ಸೆಪ್ಟಂಬರ್ 2011) ಪ್ರಜಾವಾಣಿ ಸಂಗತದಲ್ಲಿ ಪ್ರಕಟವಾಗಿದೆ. ಮೊದಲನೆಯದಾಗಿ ಈ ಬರಹವನ್ನು ಪ್ರಕಟಿಸಿದ್ದಕ್ಕಾಗಿ ಸಂಪಾದಕರಿಗೆ ಕೃತಜ್ಞತೆಗಳು. ಈ ಬರಹ ಪ್ರಭಾವ ಬೀರಿ ಜಾನಪದ ಎಂ,ಎ ಓದಿದ ವಿದ್ಯಾರ್ಥಿಗಳಿಗೆ ಒಂದು ರೀತಿಯ ಸಹಾಯವಾಗಬಹುದೆನ್ನುವುದು ಕನ್ನಡ ಜಾನಪದ ಬ್ಲಾಗ್ ನ ಆಶಯ. ಬ್ಲಾಗ್ ಓದಿಗಾಗಿ ಈ ಬರಹವನ್ನು ಇಲ್ಲಿ ಪ್ರಕಟಿಸಲಾಗಿದೆ
.

ಕನ್ನಡಕ್ಕೆ ಪ್ರತಿಷ್ಠಿತ ಎಂಟನೇ ಜ್ಞಾನಪೀಠ ಪ್ರಶಸ್ತಿ ಚಂದ್ರಶೇಖರ ಕಂಬಾರರಿಗೆ ಬಂದಿದೆ. ಇದು ಜಾನಪದ ಪ್ರತಿಭೆಗೆ ಸಂದ ಗೌರವವೆಂದು, ಅಲಕ್ಷಿತ ಸಮುದಾಯದ ತಿಳಿವಿಗೆ ಸಿಕ್ಕ ಮರ್ಯಾದೆಯೆಂದು ಚರ್ಚೆಯಾಗುತ್ತಿದೆ. ಇದು ನಿಜ ಕೂಡ. ಕರ್ನಾಟಕದಲ್ಲಿ ಮೊದಲಿನಿಂದಲೂ ಮತ್ತು ಜಾನಪದ ವಿಶ್ವವಿದ್ಯಾಲಯ ಆದಂದಿನಿಂದಲೂ ಜಾನಪದದ ಬಗೆಗಿನ ಸಂಭ್ರಮಾಚರಣೆಯೂ ಸಹಜವಾಗಿದೆ. ಇಂದು ಕರ್ನಾಟಕದ ಯಾವುದೇ ಕ್ಷೇತ್ರದ ಆಲೋಚನೆಗೆ ಜಾನಪದದ ಪ್ರತಿಕ್ರಿಯೆ ಏನಿದೆ ಎಂದು ನೋಡುವ ಹಾಗೆ ಜಾನಪದ ಕ್ಷೇತ್ರ ಪ್ರಭಾವ ಬೀರಿದೆ. ಈ ಎಲ್ಲವುಗಳನ್ನು ನೋಡಿದರೆ ಜಾನಪದದ ಬಗೆಗೆ ಸಂಭ್ರಮ ಪಡಲಿಕ್ಕೆ ಹಲವು ಕಾರಣಗಳಿವೆ.

ಆದರೆ ಜಾನಪದವನ್ನು ಒಂದು ಶಿಸ್ತನ್ನಾಗಿ ಸ್ನಾತಕೋತ್ತರ ಪದವಿ ಪಡೆದ ವಿಧ್ಯಾರ್ಥಿಗಳ ಪಾಲಿಗೆ ಜಾನಪದ ಎನ್ನುವುದು ಸಂಕಟವಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಕರ್ನಾಟಕದಲ್ಲಿ ಮೈಸೂರು ವಿವಿ, ಕರ್ನಾಟಕ ವಿವಿ, ಗುಲ್ಬರ್ಗಾ ವಿವಿಗಳಲ್ಲಿ ಜಾನಪದ ಎಂ.ಎ ತರಗತಿಗಳು ನಡೆಯುತ್ತಿವೆ. ಇಲ್ಲಿ ಜಾನಪದ ಎಂ.ಎ ಮಾಡಿಕೊಂಡು ವಿಧ್ಯಾರ್ಥಿಗಳು ಹೊರಬರುತ್ತಾರೆ. ಅಂತವರು ಹೊರ ಬಂದ ನಂತರ ಹುದ್ದೆ ಹಿಡಿಯುವ ದಾರಿಯೇ ಮಂಕಾದಂತಾಗಿದೆ. ಪಿ.ಯು ಕಾಲೇಜಿಗೆ ಕನ್ನಡಕ್ಕೆ ಜಾನಪದ ಎಂ.ಎ ಮಾಡಿದವರನ್ನು ಅರ್ಹರನ್ನಾಗಿಸುವುದು ಬಿಟ್ಟರೆ, ಪದವಿ ತರಗತಿಗಳಿಗೆ, ವಿಶ್ವವಿದ್ಯಾಲಯಗಳ ಕನ್ನಡ ಅಧ್ಯಾಪಕ ಹುದ್ದೆಗಳಿಗೆ ಜಾನಪದ ಎಂ.ಎ ಮಾಡಿದವರನ್ನು ಅನರ್ಹರನ್ನಾಗಿ ಪರಿಗಣಿಸಲಾಗುತ್ತದೆ.

ಕಾರಣ ಕರ್ನಾಟಕದಲ್ಲಿ ಕನ್ನಡದ ಜತೆ ಜಾನಪದವನ್ನು ಆಂಶಿಕವಾಗಿ ಸೇರಿಸಿ, ಅವೆರಡನ್ನೂ ಸಂಯೋಜಿಸಲಾಗಿದೆ. ಹಾಗಾಗಿ ಕನ್ನಡ ಮತ್ತು ಜಾನಪದ ಇಲ್ಲಿ ಬೇರೆ ಬೇರೆಯಲ್ಲ. ಆದರೆ ಪದವಿ ಕನ್ನಡ ಉಪನ್ಯಾಸಕ ಹುದ್ದೆಗಳಿಗೆ ಕನ್ನಡ ಎಂ.ಎ ಮಾಡಿದವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಾಗುತ್ತಿದೆ. ಕಾರಣ ಯು.ಜಿ.ಸಿ ನಿಯಮದ ಪ್ರಕಾರ ಜಾನಪದ ಮತ್ತು ಕನ್ನಡ ಬೇರೆ ಬೇರೆ ವಿಷಯಗಳು. ಇವುಗಳಿಗೆ ಪ್ರತ್ಯೇಕ ಎನ್.ಇ.ಟಿ ಪರೀಕ್ಷೆಗಳೂ ಇವೆ. ಯುಜಿಸಿ ಪ್ರಕಾರ ಜಾನಪದ ಓದಿದವರು ಕನ್ನಡ ವಿಷಯಕ್ಕೆ ಅಧ್ಯಾಪಕರಾಗಲು ಅನರ್ಹರು. ಆದರೆ ಕರ್ನಾಟಕದಲ್ಲಿ ಜಾನಪದವನ್ನು ಕನ್ನಡದ ಪಠ್ಯಕ್ರಮದಲ್ಲಿ ತೂರಿಸಿ ಅದೊಂದು ಸ್ವತಂತ್ರ ವಿಷಯವಾಗದಂತೆ ಮಾಡಲಾಗಿದೆ. ಹಾಗಾಗಿ ಇಲ್ಲಿನ ಪದವಿ ತರಗತಿಯ ಕನ್ನಡ ಅಧ್ಯಾಪಕರ ಹುದ್ದೆಗೆ ಜಾನಪದ ಎಂ.ಎ ಆದವರನ್ನೂ ಅರ್ಹರನ್ನಾಗಿ ಮಾಡಬೇಕಾಗಿದೆ. ಇಲ್ಲವೆ ಜಾನಪದವನ್ನು ಪ್ರತ್ಯೇಕ ವಿಷಯವಾಗಿ ಪಿ.ಯು ಮತ್ತು ಪದವಿ ತರಗತಿಗಳಿಗೆ ಹೊಸದಾಗಿ ಸೇರಿಸಬೇಕಿದೆ.

ಕನ್ನಡ ಮಾಧ್ಯಮದಲ್ಲಿ ಕರ್ನಾಟಕದ ಜಾನಪದವನ್ನು ಓದಿದವರಿಗೆ, ಇಂಗ್ಲೀಷಿನಲ್ಲಿ ನೆಟ್ ಪರೀಕ್ಷೆ ಬರೆದು ಉತ್ತೀರ್ಣವಾಗುವುದೂ ಕೂಡ ಕಷ್ಟವೆ. ಕಾರಣ ಕರ್ನಾಟಕದ ಜಾನಪದ ಸಂಗತಿಗಳನ್ನು ಓದಿದವರಿಗೆ, ನೆಟ್ ಪರೀಕ್ಷೆಯಲ್ಲಿ ಜಾಗತಿಕ ಜಾನಪದ, ಭಾರತದ ಜಾನಪದದ ಬಗ್ಗೆ ಪ್ರಶ್ನೆ ಕೇಳಲಾಗುತ್ತದೆ. ಇವುಗಳಿಗೆ ಇಂಗ್ಲೀಷಿನಲ್ಲಿಯೇ ಉತ್ತರಿಸಬೇಕಾಗುತ್ತದೆ. ಈ ಪ್ರಶ್ನೆ ಪತ್ರಿಕೆಯ ಎದುರು ಕನ್ನಡ ಜಾನಪದ ಓದಿದ ವಿಧ್ಯಾರ್ಥಿಗಳು ಕಕ್ಕಾಬಿಕ್ಕಿಯಾಗುತ್ತಾರೆ. ಹೀಗಿರುವಾಗ ನೆಟ್ ಪಾಸ್ ಮಾಡುವುದು ಕೂಡ ದೂರದ ಕನಸು. ಬೇರೆ ವಿಷಯಗಳಿಗಿರುವ ಈ ಸಮಸ್ಯೆಯನ್ನು ಆಧರಿಸಿಯೇ ಮೈಸೂರು ವಿಶ್ವವಿದ್ಯಾಲಯ ಸ್ಲೆಟ್ ಪರೀಕ್ಷೆಯನ್ನು ಕೆಲ ತಿಂಗಳುಗಳ ಹಿಂದೆ ಕಾಲ್ ಮಾಡಿತ್ತು. ಜಾನಪದ ಎಂ.ಎ ಮೊದಲು ಆರಂಭಗೊಂಡ ಮೈಸೂರು ವಿವಿಯೇ ಸ್ಲೆಟ್ ಪರೀಕ್ಷೆಯಲ್ಲಿ ಜಾನಪದ ವಿಷಯವನ್ನು ಕೈಬಿಡಲಾಗಿದೆ. ಇದೊಂದು ವಿಪರ್ಯಾಸ.

ಕನ್ನಡ ಎಂ.ಎ ಮಾಡಿದವರು ಅರೆಕಾಲಿಕ ಉಪನ್ಯಾಸಕರಾಗಿಯೂ ತಮ್ಮ ನಿರುದ್ಯೋಗ ಸಮಸ್ಯೆಯನ್ನು ಸ್ವಲ್ಪಮಟ್ಟಿಗೆ ಮುಂದೂಡುತ್ತಿದ್ದಾರೆ. ಆದರೆ ಜಾನಪದ ಎಂ.ಎ ಮಾಡಿದವರಿಗೆ ಹೀಗೆ ಅರೆಕಾಲಿಕ ಉಪನ್ಯಾಸಕರಾಗಿ ದುಡಿಯುವ ಅವಕಾಶಗಳೂ ಇಲ್ಲ. ಈಚೆಗೆ ವಿಜಯನಗರ ಕೃಷ್ಟದೇವರಾಯ ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕ ಕನ್ನಡ ಉಪನ್ಯಾಸಕ ಹುದ್ದೆಗೆ ಅರ್ಜಿ ಹಾಕಿದ ಮಿತ್ರರೊಬ್ಬರನ್ನು ಸಂದರ್ಶನಕ್ಕೂ ಅನರ್ಹಗೊಳಿಸಿತು. ವಿಶ್ವವಿದ್ಯಾಲಯಗಳೂ ಕೂಡ ಜಾನಪದ ಓದಿದವರನ್ನು ಕನ್ನಡ ಅಧ್ಯಾಪಕ ಉದ್ದೆಗೆ ಪರಿಗಣಿಸುತ್ತಿಲ್ಲ. ಈ ಸಮಸ್ಯೆಯನ್ನು ಅರಿತು, ಕನ್ನಡ ವಿಶ್ವವಿದ್ಯಾಲಯದಲ್ಲಿ ಜಾನಪದ ಎಂ.ಎ ಆರಂಭಿಸಿ, ಎರಡು ವರ್ಷದ ನಂತರ ನಿಲ್ಲಿಸಲಾಯಿತು.

ಈ ಸಮಸ್ಯೆ ಇಂದು ನಿನ್ನೆಯದಲ್ಲ. ೧೯೬೬ ರಲ್ಲಿ ಜಾನಪದವನ್ನು ಮೈಸೂರು ವಿವಿಯಲ್ಲಿ ಕನ್ನಡ ಎಂ.ಎ ನಲ್ಲಿ ಒಂದು ವಿಷಯವನ್ನಾಗಿ ಸೇರಿಸಿದರು. ಅದು ಈಗಲೂ ಇದೆ. ಹೀಗೆ ಕನ್ನಡದಲ್ಲಿ ಒಂದು ವಿಷಯವಾಗಿ ಓದುವವರಿಗೆ ಸಮಸ್ಯೆಯಲ್ಲದ್ದು, ಪ್ರತ್ಯೇಕ ಜಾನಪದ ಎಂ.ಎ ಮಾಡಿದವರನ್ನು ಸಮಸ್ಯೆಯಾಗಿ ಕಾಡತೊಡಗಿದೆ. ಇಂತಹ ಸಮಸ್ಯೆಯನ್ನು ಜಾನಪದ ಎಂ.ಎ ಮಾಡಿದ ವಿಧ್ಯಾರ್ಥಿಗಳು ಮೂರು ದಶಕಗಳಿಂದ ಅನುಭವಿಸುತ್ತಲೇ ಬಂದಿದ್ದಾರೆ. ಈ ಸಮಸ್ಯೆ ಕುರಿತು ಕರ್ನಾಟಕದ ಯಾವುದೇ ಜಾನಪದ ವಿದ್ವಾಂಸರು ಮಾತನಾಡದಿರುವುದೊಂದು ವಿಪರ್ಯಾಸ. ಜಾನಪದದ ಕುರಿತು ಸಂಭ್ರಮಿಸುವವರಿಗೆ, ಅದೇ ಜಾನಪದವನ್ನು ಒಂದು ಶಿಸ್ತನ್ನಾಗಿ ಓದಿದವರ ಸಂಕಟ ಅರ್ಥವಾಗದಿರುವುದು ಒಂದು ವ್ಯಂಗ್ಯ. ಜಾನಪದದಲ್ಲಿ ಪಿಹೆಚ್‌ಡಿ ಮಾಡಿದವರಿಗೆ ಜಾನಪದ ಅಕಾಡೆಮಿಯು ಪ್ರತಿ ವರ್ಷ ನೀಡುವ ಸಂಶೋಧನ ಫೆಲೋಶಿಪ್‌ನ್ನೂ ಈ ವರ್ಷ ನಿರಾಕರಿಸಿದೆ. ವಯಕ್ತಿಕವಾಗಿ ನಾನು ಜಾನಪದ ಎಂ.ಎ ಮತ್ತು ಪಿಹೆಚ್.ಡಿ ಮಾಡಿ, ಈ ಸಮಸ್ಯೆಗಳಿಗೆ ಎದುರಾಗಿ ಈ ಮಾತುಗಳನ್ನು ಹೇಳುತ್ತಿದ್ದೇನೆ.

ಜಾನಪದವನ್ನು ಒಂದು ಸಂವೇದನೆಯನ್ನಾಗಿ ಸೃಜನಶೀಲ ಸಾಹಿತ್ಯದಲ್ಲಿ ಶಕ್ತಿಯುತವಾಗಿ ಬಳಸಿಕೊಂಡು ಜ್ಞಾನಪೀಠ ಪ್ರಶಸ್ತಿ ಪಡೆದ ಕಂಬಾರರು ಮತ್ತು ಜಾನಪದ ವಿದ್ವಾಂಸರು, ಸಂಸ್ಕೃತಿ ಚಿಂತಕರು ಈ ಕುರಿತು ಆಲೋಚಿಸಬೇಕಿದೆ. ಜಾನಪದ ವಿಶ್ವವಿದ್ಯಾಲಯ ಇವರುಗಳಿಗೆ, ಹುದ್ದೆಗಳ ಆಯ್ಕೆಯಲ್ಲಿ ಮೊದಲ ಆಧ್ಯತೆಯನ್ನು ಕಡ್ಡಾಯಗೊಳಿಸಬೇಕಿದೆ. ಅಂತೆಯೇ ಇವರ ಪರವಾದ ಹಕ್ಕೊತ್ತಾಯಗಳಿಗೂ ವಿವಿ ದ್ವನಿಯಾಗುವ ಅಗತ್ಯವಿದೆ.

ಕಾಮೆಂಟ್‌ಗಳಿಲ್ಲ: