ಭಾನುವಾರ, ಸೆಪ್ಟೆಂಬರ್ 4, 2011

ಧಾನ್ಯಗಳನ್ನು ಸಂಗ್ರಹಿಸುವ ಜನಪದರ ಓಡೆ(ವಡೇವು)

(ಧಾನ್ಯಗಳನ್ನು ಸಂಗ್ರಹಿಸುವ ಹಿಂದಿನ ಕಾಲದ ಓಡೆ(ವಡೇವು) ಕೂಡ್ಲಿಗಿ ತಾಲೂಕಿನ ಕುದುರೆಡವು ಗ್ರಾಮದಲ್ಲಿದೆ)

-ಸಿದ್ಧರಾಮ ಹಿರೇಮಠ.


ಹಿಂದಿನ ಕಾಲದ್ಲಲಿ ಗ್ರಾಮಗಳಲ್ಲಿ ಧಾನ್ಯಗಳನ್ನು ಸಂಗ್ರಹಿಸುವ ಗೋದಾಮುಗಳಿರಲಿಲ್ಲ. ಗ್ರಾಮಸ್ಥರು ತಾವೇ ತಮ್ಮ ಅನುಕೂಲಕ್ಕೆ ಹಲವಾರು ವಿಧಾನಗಳನ್ನು ಕಂಡುಕೊಂಡಿದ್ದರು. ಅವುಗಳಲ್ಲಿ ಧಾನ್ಯಗಳನ್ನು ಹೆಚ್ಚಿನ ರೀತಿಯಲ್ಲಿ ಸಂಗ್ರಹಿಸಲು ನೆಲದಡಿಯ ಹಗೇವು ಹಾಗೂ ಮನೆಗಳಲ್ಲಿ ಸಂಗ್ರಹಿಸಲು ವಡೇವುಗಳನ್ನು ರೂಪಿಸಿದ್ದರು. ಮೂಲರೂಪದಲ್ಲಿ ಓಡೆ ಗ್ರಾಮಸ್ಥರ ಬಾಯಲ್ಲಿ ವಡೇವು ಎಂದು ರೂಪಾಂತರಗೊಂಡಿದೆ. ಇಂತಹ ವಡೇವುಗಳು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುದುರೆಡವು ಗ್ರಾಮದ ಹಳೆಯ ಮಣ್ಣಿನ ಮನೆಗಳಲ್ಲಿ ಈಗಲೂ ಇವೆ.

ಓಡೆ ಅಥವಾ ವಡೇವು ಎಂದರೆ ಧಾನ್ಯಗಳನ್ನು ಸಂಗ್ರಹಿಸುವ ದೊಡ್ಡ ಮಣ್ಣಿನ ಸಾಧನ ಅಥವಾ ಮಡಕೆ ಎನ್ನಬಹುದು. ಇವುಗಳಿಗೆ ಶತಮಾನದ ಇತಿಹಾಸವಿದೆ. ಆಗಿನ ಸಂದರ್ಭದಲ್ಲಿ ಧಾನ್ಯವನ್ನು ಸಂಗ್ರಹಿಸಲು ಮನೆಗಳಲ್ಲಿ ಚೀಲಗಳಾಗಲಿ, ಈಗಿನ ರೀತಿಯಲ್ಲಿ ದೊಡ್ಡ ಪಾತ್ರೆಗಳಾಗಲಿ ಇರಲಿಲ್ಲ. ಎಲ್ಲವೂ ಮಣ್ಣಿನ ಸಾಧನಗಳೇ ಆಗಿದ್ದವು. ಹೀಗಾಗಿ ಗ್ರಾಮೀಣ ಜನತೆ ಮನೆಯಲ್ಲಿ ತಮಗೆ ಬೇಕಾದ ಧಾನ್ಯವನ್ನು ಸಂಗ್ರಹಿಸಲು ಓಡೆಗಳನ್ನಿರಿಸಿಕೊಂಡಿದ್ದರು. ವಿಶೇಷವೆಂದರೆ ಓಡೆಗಳನ್ನು ಹೊರಗಿರಿಸುವುದಿಲ್ಲ. ಅವುಗಳನ್ನು ಮನೆ ಕಟ್ಟುವಾಗ ಗೋಡೆಗಳಲ್ಲಿಯೇ ಸೇರಿಸಿ ಕಟ್ಟಿರುತ್ತಾರೆ.

(ಗೋಡೆಯಲ್ಲಿಯೇ ಓಡೆಗಳನ್ನು ಸೇರಿಸಿ ಈ ರೀತಿಯಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತದೆ)

ಸುಮಾರು ೫ ಅಡಿಗಳಷ್ಟು ಎತ್ತರವಿರುವ ಓಡೆಗಳನ್ನು ಮಣ್ಣಿನ ಮನೆಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಅವುಗಳಲ್ಲಿಯೇ ಹುಗಿದು ಸೇರಿಸಿಯೇ ಮನೆ ಕಟ್ಟುತ್ತಿದ್ದರು. ಧಾನ್ಯವನ್ನು ಬೇಕಾದಾಗ ಅದರಿಂದ ತೆಗೆದುಕೊಳ್ಳುತ್ತಿದ್ದರು. ಇದು ಒಂದು ರೀತಿಯಲ್ಲಿ ಸುರಕ್ಷಿತ ವಿಧಾನ. ಮತ್ತೊಂದು ವಿಶೇಷವೆಂದರೆ ಹಿಂದಿನ ಕಾಲದಲ್ಲಿ ಶತ್ರುಗಳಿಂದ, ಕಳ್ಳರಿಂದ ಹಣ ಅಥವಾ ಚಿನ್ನದ ಆಭರಣಗಳನ್ನು ರಕ್ಷಿಸಲೂ ಸಹ ಓಡೆಗಳನ್ನು ಉಪಯೋಗಿಸಿಕೊಳ್ಳುತ್ತಿದ್ದರು. ಸಾಕಷ್ಟು ಹಣ, ಆಭರಣಗಳನ್ನು ಓಡೆಗಳಲ್ಲಿನ ಧಾನ್ಯಗಳಲ್ಲಿ ತುಂಬಿ ಮನೆಗಳನ್ನು ನಿರ್ಮಿಸಿಬಿಟ್ಟಲ್ಲಿ ಎಂತಹ ಕಳ್ಳನಿಗೂ ಒಡವೆಗಳು ಸಿಗುತ್ತಿರಲಿಲ್ಲ. ಆದರೆ ಅದು ದೊಡ್ಡ ಮನೆಗಳಲ್ಲಿ ಅನುಸರಿಸುತ್ತಿದ್ದ ವಿಧಾನವಾದರೆ, ಗ್ರಾಮಗಳಲ್ಲಿ ಕಡುಬಡತನಗಳ ಮನೆಯಲ್ಲಿ ಕೇವಲ ಧಾನ್ಯವನ್ನು ಸಂಗ್ರಹಿಸಲು ಮಾತ್ರ ಇಂತಹ ಸಾಧನಗಳನ್ನು ಬಳಸುತ್ತಿದ್ದರು.

(ಮಣ್ಣಿನ ಹಳೆಯ ಮನೆಯ ಗೋಡೆಗಳು ಕುಸಿದಿರುವುದರಿಂದ ಈಗ ಓಡೆಗಳನ್ನು ಬದಿಗೆ ಸರಿಸಿ ಖಾಲಿಯಾಗಿರಿಸಲಾಗಿದೆ)

ತಾಲೂಕಿನ ಕುದುರೆಡವು ಗ್ರಾಮದ ಮನೆಗಳಲ್ಲಿ ಧಾನ್ಯವನ್ನು ಸಂಗ್ರಹಿಸುವ ಓಡೆಗಳು ಇಂದಿಗೂ ಇವೆ. ಇವು ಅತ್ಯಂತ ಹಳೆಯ ಮಣ್ಣಿನ ಮನೆಗಳಾದ್ದರಿಂದ ಓಡೆಗಳು ಹಾಗೆಯೇ ಸುರಕ್ಷಿತವಾಗಿವೆ. ಆದರೆ ಗ್ರಾಮದ ಜನತೆ ಕೇವಲ ಕೂಲಿ ಕೆಲಸ ಮಾಡುವವರಾದ್ದರಿಂದ ಈಗ ಅಂತಹ ಓಡೆಗಳಲ್ಲಿ ತುಂಬಲು ಧಾನ್ಯವೂ ಸಿಗದ ಕಡುಬಡತನವಿದೆ. ಕೆಲವರ ಮನೆಗಳು ಶಿಥಿಲಗೊಂಡು ಬಿದ್ದಿದ್ದು, ಗೋಡೆಯಲ್ಲಿನ ಓಡೆಗಳನ್ನು ಪ್ರತ್ಯೇಕವಾಗಿಟ್ಟು ಖಾಲಿ ಇಟ್ಟಿದ್ದಾರೆ. ‘ಮನ್ಯಾಗ ಉಣ್ಣಾಕ ಏನು ಇಲ್ಲರಿ, ಅದರಾಗ ಏನಂತ ಕಾಳುಕಡಿ ಇಡಕಾಗ್ತದ’ ಎಂದು ಪ್ರಶ್ನಿಸುತ್ತಾರೆ ಗ್ರಾಮದ ಹಂಪಮ್ಮ, ಸಕ್ರಮ್ಮ. ಇಂದಿಗೂ ಹೊಳಪು ಕಳೆದುಕೊಳ್ಳದ ಸುಂದರವಾಗಿ ರೂಪಿಸಿರುವ ಮಣ್ಣಿನ ಓಡೆಗಳು ನಮ್ಮ ಗ್ರಾಮೀಣ ಬದುಕಿನ ಕೈಗನ್ನಡಿಗಳಾಗಿ ಮಿಂಚುತ್ತಿವೆ. ಜಾನಪದ ಸಂಗ್ರಹಾಲಯಗಳಲ್ಲಿ ಸಂಗ್ರಹಿಸಬಹುದಾದ ಮಾದರಿಗಳಾಗಿವೆ.


1 ಕಾಮೆಂಟ್‌:

ಅನಾಮಧೇಯ ಹೇಳಿದರು...

ತುಮಕೂರು ಹತ್ತಿರದ ಹಳ್ಳಿ ನಮ್ಮೂರು. ಅಲ್ಲಿ ಇದ್ದ ವಾಡೆಗಳು ಈ ಬರಹ ನೋಡಿ ನೆನಪಾದವು.ಈಗಲೂ ಹಳೆ ಮನೆಗಳಲ್ಲಿ ಸಿಗುತ್ತವೆ. ಆದರೆ ಅದರಲ್ಲಿ ತುಂಬುವಷ್ಟು ಬೆಳೆ ಇಲ್ಲ.ಇದು ಈ ಕಾಲದ ವಾಸ್ತವ. ಹಿರೇಮಠರು ಇದನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು.
-ಶ್ರೀನಿವಾಸ, ತುಮಕೂರು.