ಮಂಗಳವಾರ, ಜುಲೈ 26, 2011

ಹೂವಿನ ಹಡಗಲಿಯಲ್ಲಿ ಸವಾಲ್ ಜವಾಬ್

ಪ್ರೊ.ರಹಮತ್ ತರೀಕೆರೆ




(ಪ್ರೊ.ರಹಮತ್ ತರೀಕೆರೆ ಅವರು ಜಾನಪದ ಅಧ್ಯಯನವನ್ನು ಸಾಂಸ್ಕೃತಿಕ ಅಧ್ಯಯನದ ವ್ಯಾಪ್ತಿಯಲ್ಲಿ ವಿಸ್ತರಿಸುತ್ತಿರುವವರಲ್ಲಿ ಪ್ರಮುಖರು. ಅವರ ಸವಾಲ್ ಜವಾಬ್ ಕುರಿತ ಈ ಬರಹ ಜನಪದ ಕಾವ್ಯ ಮೀಮಾಂಸೆಯನ್ನು ಜನಸಮುದಾಯದ ನೆಲೆಯಲ್ಲಿ ಹುಡುಕಲು ಪ್ರಯತ್ನಿಸಿದೆ. ವಿವಿಧ ಧರ್ಮ ಪಂಥದ ಜನ ಹೇಗೆ ಜನಪದ ಕಲಾಪ್ರಕಾರವೊಂದರಲ್ಲಿ ತಮ್ಮ ಗಡಿರೇಖೆಗಳನ್ನು ಮುರಿದು ಕೂಡಿ ಬಾಳುತ್ತಾರೆ ಎನ್ನುವುದನ್ನು ಈ ಬರಹ ಶೋಧಿಸಿದೆ. ಇದು ಪ್ರಜಾವಾಣಿಯ ಮೆ 15 2011 ರ ಸಾಪ್ತಾಹಿಕ ಪುರವಣಿಯ ನಡೆದಷ್ಟೂ ನಾಡು ಅಂಕಣದಲ್ಲಿ ಪ್ರಕಟವಾಗಿತ್ತು. –ಅರುಣ್)



ಬಳ್ಳಾರಿ ಜಿಲ್ಲೆಯ ಹಡಗಲಿಯಲ್ಲಿ ನಡೆಯುವ ರಾಜಾಬಾಗ್ ಸವಾರನ ಉರುಸು ಖ್ಯಾತವಾಗಿದೆ. ಈ ಸೀಮೆಯ ಜನಪ್ರಿಯ ಸಂತರಲ್ಲಿ ಒಬ್ಬನಾದ ರಾಜಾಬಾಗ್ ಸವಾರನು ಸೂಫಿ ಸಂತನೊ ಮಹಾನುಭಾವ ಪಂಥದ ಯೋಗಿಯೊ ಇನ್ನೂ ಅಸ್ಪಷ್ಟ. ಈತ ತಿರುಗಾಡುವಾಗ ಕೂತಿದ್ದ ಜಾಗಗಳು ತೋರುಗದ್ದಿಗೆಗಳಾಗಿದ್ದು, ಅಲ್ಲಿ ಉರುಸು ನಡೆಯುತ್ತದೆ. ಮುಖ್ಯ ದರ್ಗಾ ನವಲಗುಂದ ತಾಲೂಕು ಯಮನೂರಿನಲ್ಲಿದ್ದರೆ, ಹಡಗಲಿಯದು ಅದರ ಶಾಖೆ. ಜನರ ನಂಬಿಕೆ ಪ್ರಕಾರ, ಬಾಗಸವಾರನದು ಅತಿಮಾನುಷ ವ್ಯಕ್ತಿತ್ವ. ಈತ ಚೇಳಿನ ಕಡಿವಾಣ ಹಾಕಿದ ಹುಲಿಸವಾರಿ ಮಾಡುತ್ತ, ಹಾವಿನ ಚಾಟಿ ಹಿಡಿದು ಸಂಚರಿಸುತ್ತಿದ್ದವನು. ಪ್ರಾಣಾಂತಿಕ ಮೃಗಜಂತುಗಳನ್ನು ಹತ್ಯಾರ ಮಾಡಿಕೊಂಡಿರುವ ಈ ಸಂತನ ಉರುಸುಗಳು ಮಾತ್ರ, ಜನರನ್ನು ಜಾತಿಮತಗಳ ನಂಜಿನ ವರ್ತುಲದಾಚೆ ತಂದು ಮಿಲನಿಸುವಂತಹವು.

‘ಬಾಗ್‌ಸವಾರ್’ ಪದದಲ್ಲೇ ಮಿಲನದ ಚಿಹ್ನೆಯಿದೆ. ಸಂಸ್ಕೃತದ ವ್ಯಾಘ್ರವು ಬಾಗ್ ಆಗಿ, ಅದಕ್ಕೆ ಸವಾರನೆಂಬ ಫಾರಸಿ ಶಬ್ದ ಕೂಡಿದೆ.

ಈ ಉರುಸಿನ ವಿಶೇಷತೆಯೆಂದರೆ ಇಲ್ಲಿ ಏರ್ಪಡುವ ‘ಸವಾಲ್ ಜವಾಬ್’ ಹಾಡಿಕೆ. ಇದೊಂದು ಜಿದ್ದಾಜಿದ್ದಿ ಹಾಡಿಕೆ. ಇದು ಉತ್ತರ ಕರ್ನಾಟಕದ ಅನೇಕ ಊರುಗಳಲ್ಲಿ ಜರುಗುತ್ತದೆ. ಆದರೆ ಹಡಗಲಿಯ ವೈಭವವೇ ಬೇರೆ. ಇಲ್ಲಿ ಮೂವತ್ತರಷ್ಟು ಶಾಹಿರರು ಮತ್ತು ಗಾಯಕರು ನೆರೆಯುವರು. ನಮ್ಮ ಎರಡು ಜನಪದ ಹಾಡು ಸಂಪ್ರದಾಯಗಳಲ್ಲಿ, ಗಾಯಕರು ಎದುರಾಳಿಗಳಾಗಿ ನಿಂತು, ಪರಸ್ಪರ ಸವಾಲು ಹಾಕುತ್ತ ವಾಗ್ವಾದ ಮಾಡುವ ವಿನ್ಯಾಸವಿದೆ. ಅವೆಂದರೆ- ಹರದೇಶಿ ನಾಗೇಶಿ ಹಾಗೂ ಸವಾಲ್-ಜವಾಬ್. ಮೊದಲನೆಯದರಲ್ಲಿ ಗಂಡ್ಹೆಚ್ಚೊ ಹೆಣ್ಹೆಚ್ಚೊ ಎಂಬ ವಾಗ್ವಾದವಿದ್ದರೆ, ಎರಡನೆಯದರಲ್ಲಿ ಒಬ್ಬರು ಇಟ್ಟ ಸಮಸ್ಯೆಯನ್ನು ಮತ್ತೊಬ್ಬರು ಬಿಡಿಸುವ ಕ್ರಮವಿದೆ.

ಎರಡೂ ಕಡೆ, ತಂತಮ್ಮ ಪಕ್ಷವನ್ನು ಸಮರ್ಥಿಸಿಕೊಳ್ಳುತ್ತ ಎದುರಾಳಿಗಳ ಮೇಲೆ ಆಕ್ರಮಣ ಮಾಡುವ ಕದನಗುಣವಿದೆ. ಇದೊಂದು ಅಣಕು ಕದನ. ಕೆಲವೊಮ್ಮೆ ಇದು ಖರೇ ಕದನವೂ ಆಗಿರುವುದುಂಟು. ಎದುರಾಳಿಯಿಟ್ಟ ತೊಡಕನ್ನು ಬಿಡಿಸಲು ಸೋತವರು, ಹಾಡಿಕೆ ತ್ಯಜಿಸಿ, ಜೀವಮಾನವಿಡೀ ಗೆದ್ದವರಿಗೆ ಜೀತ ಮಾಡಿದ ನಿದರ್ಶನಗಳಿವೆ. ಇಂಥದೊಂದು ಪ್ರಕರಣದ ಮೇಲೆ ಮಧುರಚೆನ್ನರು ‘ರಮ್ಯಜೀವನ’ ಎಂಬ ಅಪೂರ್ವ ಲೇಖನ ಬರೆದಿದ್ದಾರೆ. ಅದರಲ್ಲಿ ಹಲಸಂಗಿಯ ಪ್ರತಿಭಾವಂತ ಗಾಯಕ ಖಾಜಾಸಾಬನು ಹದರಿಯ ಬಡೇಸಾಬನನ್ನು ಸೋಲಿಸಿದ ಪ್ರಕರಣವಿದೆ.


ಸೋತ ಬಡೇಸಾಬನು ಹಾಡಿಕೆಬಿಟ್ಟು, ಖಾಜಾಸಾಬನನ್ನು ಗುರುವೆಂದು ಧ್ಯಾನಿಸುತ್ತ, ದಾರುಣ ಸ್ಥಿತಿಯಲ್ಲಿ ಪ್ರಾಣಬಿಡುತ್ತಾನೆ. ಬ್ಯಾಡಗಿ ತಾಲೂಕಿನ ಕದರಮಂಡಲಗಿಯಲ್ಲಿ ನಾನು ಭೇಟಿಯಾದ ಪ್ರಸಿದ್ಧ ಗಾಯಕ ಅಲ್ಲಾಬಕ್ಷ ಅವರೂ, ಚಿಕ್ಕಪ್ರಾಯದಲ್ಲೇ ಹಿರಿಯ ಗಾಯಕನೊಬ್ಬನನ್ನು ಸೋಲಿಸಿದವರು. ಸೋತ ಆ ಗಾಯಕ ಸಾಯುವ ತನಕ ಹಾಡಲಿಲ್ಲವೆಂದು, ಅವರು ಜಯದ ಹುಮ್ಮಸ್ಸು ಮತ್ತು ವಿಷಾದ ಬೆರೆತ ದನಿಯಲ್ಲಿ ಹೇಳಿದರು. ಜನಪದ ಕಾವ್ಯಪ್ರಪಂಚ ಇಂತಹ ನೂರಾರು ಕದನ ಕೋಲಾಹಲಗಳಿಂದ ತುಂಬಿದೆ.

ನಾನು ಹಡಗಲಿಗೆ ಹೋದಾಗ ಮುಸ್ಸಂಜೆ ಕಳೆದು, ಉರುಸಿನ ಗದ್ದಲವೆಲ್ಲ ಮುಗಿಯುತ್ತಿತ್ತು. ಜನರು ಊಟಮುಗಿಸಿ ಚಾಪೆ ಚೀಲ ಪಾಣಿಗಳಾಗಿ, ದರ್ಗಾ ಮುಂದಣ ಬಯಲಲ್ಲಿ ಜಾಗ ಹಿಡಿಯುತ್ತಿದ್ದರು. ಬಯಲ ತುದಿಗೆ, ಹಲಗೆ ಹಾಸಿದ ಅಟ್ಟ ಕಟ್ಟಿ, ನಡುವೆ ಮೈಕನ್ನಿಟ್ಟು ಅದರ ಸೊಂಟಕ್ಕೊಂದು ಮಲ್ಲಿಗೆಹಾರ ಹಾಕಲಾಗಿತ್ತು.

ಗಾಯಕರೆಲ್ಲ ಚಹಾ ಕುಡಿದು, ಚುಟ್ಟ ಸೇದಿ, ಹಾಡಿಕೆಗೆ ತಯಾರಾಗುತ್ತಿದ್ದರು. ಉರುಸು ಕಮಿಟಿಗೆ ಸೇರಿದ ಆಜಾನುಬಾಹುಗಳಾದ ಇಬ್ಬರು ಹಿರಿಯರು, ಟಗರುಕೊಂಬಿನಂತೆ ನುಲಿದ ಮೀಸೆಯನ್ನು ತೀಡುತ್ತ, ಅಟ್ಟದ ಬಳಿ ಕುಳಿತಿದ್ದರು. ಅವರು ಹಡಗಲಿಯ ಮಾಜಿ ಪೈಲ್ವಾನರಂತೆ. ಏನಾದರೂ ದಾಂಧಲೆಯಾದರೆ ಪೋಲಿಸರ ನೆರವಿಲ್ಲದೆ ಸ್ವತಃ ನಿಭಾಯಿಸುವಂತಿದ್ದರು.

ರಾತ್ರಿ 11 ಹೊಡೆಯಿತು. 25ರಿಂದ 80ರ ತನಕ ವಯೋಮಾನವಿದ್ದ ಗಾಯಕರೆಲ್ಲ ಅಟ್ಟವನ್ನೇರಿ ಕುಳಿತರು. ಹಡಗಲಿಯ ಆಸುಪಾಸಿನ ಊರುಗಳಿಂದ ಬಂದಿದ್ದ ಅವರು, ಸಣ್ಣ ರೈತರು ಇಲ್ಲವೇ ಸಣ್ಣವ್ಯಾಪಾರ, ದರ್ಜಿ, ಬಡಗಿ, ಗೌಂಡಿ ಕೆಲಸ ಮಾಡಿಕೊಂಡಿದ್ದವರು. ಅವರಲ್ಲಿ ನಾನು ಹಿಂದೆ ಭೇಟಿಯಾಗಿದ್ದ ಸತ್ತೂರ ಇಮಾಂಸಾಬ್, ಕವಲೂರ ಗೌಸ್‌ಸಾಬ್, ಮುಂಡರಗಿಯ ಜಿಂದೀಪೀರಾ ಮೊದಲಾದ ಶಾಹಿರರೂ ಇದ್ದರು. ಹಾಡುಕಟ್ಟುವ ಶಾಹಿರರೇ ಬಂದಿದ್ದ ಕಾರಣ, ಮೇಳಕ್ಕೊಂದು ಖದರು ಬಂದಿತ್ತು.

ಹಾಡಿಕೆ ಶುರುವಾಯಿತು. ವ್ಯವಸ್ಥಾಪಕರು ಒಬ್ಬೊಬ್ಬ ಗಾಯಕನ ಹೆಸರನ್ನು ಹಿಡಿದು ಕರೆದಂತೆ, ಗಾಯಕರೆದ್ದು ತಮ್ಮ ಮೇಳದ ಜತೆ ಹಾಡಲಾರಂಭಿಸಿದರು. ಮುಶಾಯಿರ, ಹಿಂದೂಸ್ತಾನಿ ಸಂಗೀತ ಹಾಗೂ ಖವ್ವಾಲಿಗಳಲ್ಲಿ ಇರುವಂತೆ, ಇಲ್ಲೂ ರಸಿಕರು ನಡುವೆಯೇ ಕಲಾವಿದರನ್ನು ಉತ್ತೇಜಿಸುವ ಪ್ರತಿಕ್ರಿಯೆ ಕೊಡುತ್ತಿದ್ದರು. ಸರಿಯಾಗಿ ಹಾಡದಿದ್ದರೆ ‘ಏ ಸಾಕು ಮಾಡಪ್ಪೋ ಯಪ್ಪಾ ನಿಂದು’ ಎಂದು ತಡೆಯುತ್ತಿದ್ದರು.

ಕವಲೂರ ಗೌಸ್‌ಸಾಬ್ ಬಂದಾಗ ಕೇಕೆ ಸಿಳ್ಳು ಕೇಳಿಬಂದವು. ಗೌಸ್‌ಸಾಬರು ಕವಲೂರಿನ ಪ್ರಖ್ಯಾತ ಶಾಹಿರ ಕುಟುಂಬಕ್ಕೆ ಸೇರಿದ ಆರನೆಯ ತಲೆಮಾರಿನ ಕವಿ. ಅವರ ಹಾಡಿಕೆಯಲ್ಲಿ, ಎಲ್ಲಮ್ಮನಾಟದಲ್ಲಿ ಇರುವಂತೆ ಆಂಗಿಕ ಅಭಿನಯ ಬಹಳ.

ಹೋದ ವರ್ಷ ಕೊಟ್ಟೂರಿನ ಮೊಹರಮ್ಮಿನಲ್ಲಿ ಒಬ್ಬ ಮುದುಕಿ, ಗೌಸ್‌ಸಾಬರು ಹಾಡುವಾಗ ‘ಇವನೊಬ್ಬ ಬಂದ ತಿಕ್ಕ. ಯೇ! ಯಾಕ್ಹಂಗ ನುಲೀತಿಯೋ? ನೆಟ್ಟಗ ನಿಂತು ಹಾಡೊ’ ಎಂದು ಕುಟುಕಿದ್ದಳು. ಆಗ ಕವಲೂರ ಶಾಹಿರನು ತನ್ನ ಹಾಡಲ್ಲೇ ಆಕೆಗೆ ಝಾಡಿಸಿ ಪ್ರತ್ಯುತ್ತರ ನೀಡಿದ್ದರು. ಆದರೆ ಇಲ್ಲಿ ಅಂಥ ಚಕಮಕಿಯೇನೂ ಸಂಭವಿಸಲಿಲ್ಲ. ನಂತರ ಒಬ್ಬ ಹಣ್ಣಾದ ಗಾಯಕ, ಸಾಥಿಯಿಲ್ಲದೆ, ನಡುಗುವ ದನಿಯಲ್ಲಿ ಬಹಳ ಹೊತ್ತು ರಿವಾಯತ್ ಹಾಡಿದ. ಆಗೊಬ್ಬ ಶ್ರೋತೃ ಎದ್ದುನಿಂತು ‘ಏ ಮುದ್ಯಾತ, ಸವಾಲ್ ಜವಾಬಿದ್ದರೆ ಹಾಡು, ಅಲಾವಿ ಪದ ಬ್ಯಾಡ? ಎಂದು ಅಪ್ಪಣೆ ಮಾಡಿದ. ಕೆಲವು ಕೇಳುಗರು ತಮ್ಮ ಪ್ರಿಯ ಗಾಯಕರಿಗೆ ಅವಕಾಶ ಕೊಡಬೇಕು ಎಂದು ಅರಚುತ್ತಿದ್ದರು.


ಮೌಖಿಕ ಕಾವ್ಯ ಸಂಪ್ರದಾಯದಲ್ಲಿ ನಿಜವಾದ ಧಣಿಗಳೆಂದರೆ ಕೇಳುಗರೇ ಇರಬೇಕು. ಅದಕ್ಕೆಂದೇ ಜನಪದ ಗಾಯಕರು ಹಾಡಿನ ಮೊದಲ ಭಾಗದಲ್ಲೇ ದೈವಕ್ಕೆ ಕಡ್ಡಾಯವಾಗಿ ಗೌರವ ಸಲ್ಲಿಸುತ್ತಾರೆ. ಇಲ್ಲಿ ‘ದೈವ’ ಎಂದರೆ ಕೇಳುಗರು; ಊರಿನ ಸಮಸ್ತರು. ದೈವಸ್ಥರ ಮುಂದೆ ತಾನು ಅಲ್ಪಬುದ್ಧಿಯವನೆಂದೂ ಎಳಸು ಬಾಲಕನೆಂದೂ, ತಾನು ತಪ್ಪಿದರೆ ಉದಾರ ಮನಸ್ಸಿನಿಂದ ತಿದ್ದಬೇಕೆಂದೂ ಅವರು ವಿನಂತಿಸುತ್ತಾರೆ. ಜಗತ್ತಿನ ಕಾವ್ಯಪರಂಪರೆಯಲ್ಲಿ ಸಹೃದಯರಿಗೆ ಸಲ್ಲಿಕೆಯಾದ ಆತ್ಯಂತಿಕ ಮನ್ನಣೆಯಿರಬೇಕು ಇದು.

ಹಡಗಲಿಯಲ್ಲಿ ಕೇಳುಗರು, ಬೀಡಿಸೇದಿ ಗಗನಕ್ಕೆ ಹೊಗೆ ಬಿಡುತ್ತ, ಚಹ ಕುಡಿಯುತ್ತ, ಬೇಸರ ಬಂದಾಗ ಅಲ್ಲೇ ಚಾಪೆಯ ಮೇಲೆ ಅಡ್ಡಾಗುತ್ತ, ಒಳ್ಳೇ ಗಾಯಕ ಬಂದಾಗ ಎದ್ದು ಕೂರುತ್ತ, ಬಹುರೂಪಿಗಳಾಗಿದ್ದರು. ಕೆಲವರು ಗಾಯಕರಿಗೆ ಚಹಾ ಮಿರ್ಚಿ ಒಗ್ಗಾಣಿ ಬೀಡಿ ಇತ್ಯಾದಿ ಸೇವೆಯನ್ನೂ ಸಲ್ಲಿಸುತ್ತಿದ್ದರು. ಹಾಡು ಹಿಡಿಸಿದರೆ, ಧಿಗ್ಗನೆದ್ದು ಜೇಬಿನಿಂದ ಹತ್ತರ ನೋಟು ತೆಗೆದು ಗಾಯಕನಿಗೆ ಆಹೇರಿ ಮಾಡುತ್ತಿದ್ದರು. ಅವರಿತ್ತ ನೋಟನ್ನು ಗಾಯಕರು ಕಣ್ಣಿಗೊತ್ತಿಕೊಂಡು ಇಟ್ಟುಕೊಳ್ಳುತ್ತಿದ್ದರು. ಹಾಡಿನ ನಡುವೆಯೇ ಆಹೇರಿ ಬಂದರೆ, ‘ಹೊಳಲಿನ ವೀರಯ್ಯನವರು ಹತ್ತ ರೂಪಾಯಿ ಆಹೇರಾ ಮಾಡ್ಯಾರಲ್ಲಾ’ ಎಂಬ ಸಾಲನ್ನು, ಹಾಡಿನ ಕೊನೆಪ್ರಾಸ ಛಂದಸ್ಸು ಕೆಡದಂತೆ ಸೇರಿಸಿ, ಹಾಡಿಬಿಡುತ್ತಿದ್ದರು; ಕೆಲವರು ‘ಸೋಗಿಯ ಕೊಟ್ರಪ್ಪನವರು ನಮ್ಮ ಅಲ್ಪಕಲೆಯನ್ನು ಕಂಡು ಹತ್ತ ರೂಪಾಯಿ ಕೊಟ್ಟಿರುತ್ತಾರೆ. ಅದು ಹತ್ತ ರೂಪಾಯಲ್ಲ, ಹತ್ತ ಸಾವಿರ ಅಂದುಕೊಂಡು ಅವರಿಗೆ ನನ್ನ ಸಲಾಮು ಮಾಡುತ್ತೇನೆ’ ಎಂದು ಕೃತಜ್ಞತೆ ಸಲ್ಲಿಸುತ್ತಿದ್ದರು. ಕೆಲವರು ಪಿನ್ನಿನಲ್ಲಿ ನೋಟನ್ನು ಸಿಕ್ಕಿಸಿಕೊಂಡು ತಂದು, ಗಾಯಕರ ಅಂಗಿಯ ಮೇಲೆ, ರಾಷ್ಟ್ರಪತಿಗಳು ಪದ್ಮಭೂಷಣದ ಪದಕವನ್ನು ಸಿಕ್ಕಿಸುವಂತೆ ಸಿಕ್ಕಿಸುತ್ತಿದ್ದರು. ಗಾಯಕರೊ, ಅದನ್ನು ಸೈನ್ಯದ ಜನರಲ್‌ಗಳು ಎದೆಮೇಲೆ ಪದಕಗಳನ್ನು ಧರಿಸುವಂತೆ ಧರಿಸಿ ಮೆರೆಸುತ್ತ, ಹಾಡುತ್ತಿದ್ದರು.

ಕೆಲವು ರಸಿಕರು ತಮ್ಮ ಬೆರಳಲ್ಲಿದ್ದ ಉಂಗುರವನ್ನೇ ಕಳಚಿ ಆಹೇರಿ ಮಾಡಿರುವ, ತೋಡೆ ಮಾಡಿಸಿ ತೊಡಿಸಿರುವ, ಹೊಲ ಬರೆದುಕೊಟ್ಟಿರುವ ನಿದರ್ಶನಗಳಿವೆ. ರೋಣ ತಾಲೂಕಿನ ಪ್ರಸಿದ್ಧ ಶಾಹಿರರಾಗಿದ್ದ ಮೆಣಸಿಗಿಯ ರುದ್ರಗೌಡರಿಗೆ ಅಭಿಮಾನಿಯೊಬ್ಬರು, ಚಿನ್ನದ ಮೆಡಲನ್ನೇ ಆಹೇರಿ ಮಾಡಿದ್ದರು. ‘ಅಬ್ದುಲ್ ಹಕ್ ಸಾಹೇಬರ ನೋಡಿ ಮಿಗಿಲಾ, ಭದ್ರ ಮೊಹರ ಮಾಡಿಸಿಕೊಟ್ಟಾರಾ, ತಮ್ಮ ಹೆಸರ ಹಾಕಿಸಿ ಮಿಡಲಾ’ ಎಂದು ಅದನ್ನು ಉಲ್ಲೇಖಿಸುತ್ತ ರುದ್ರಗೌಡರು ಹಾಡುತ್ತಿದ್ದರು.

ನಾನು ಖದರಮಂಡಲಗಿ ಅಲ್ಲಾಬಕ್ಷರನ್ನು ಕಂಡಾಗ, ಅವರು ತಮಗೆ ಆಹೇರಿಯಾಗಿ ಬಂದ ವಸ್ತುಗಳನ್ನೆಲ್ಲ ತೋರಿಸಿದರು. ಕಷ್ಟಕಾಲದಲ್ಲಿ ಮಾರಿದ್ದರಿಂದ ಬೆಳ್ಳಿತೋಡೆಯಿರಲಿಲ್ಲ. ಆದರೆ ನೀರಿನ ಹಂಡೆ ಇನ್ನೂಇತ್ತು.

ಹಡಗಲಿಗೆ ಬಂದಿದ್ದ ಕವಿಗಳು, ಉರುಸುಗಳಲ್ಲಿ ಮಾತ್ರವಲ್ಲದೆ, ಮೊಹರಮ್ಮಿನ ಖತಲರಾತ್ರಿಯಲ್ಲೂ ಸವಾಲ್ ಜವಾಬ್ ಮೇಳಗಳಲ್ಲೂ ಹೋಗಿ ಹಾಡುವವರು. ಹಡಗಲಿಗೆ ಬಂದಿದ್ದ ಹ್ಯಾರಡದ ಚಮನ್‌ಸಾಹೇಬರು, ಯುವಮೇಳಗಳಲ್ಲೂ ರೇಡಿಯೊ ಟೀವಿಗಳಲ್ಲೂ ಹೋಗಿ ಹಾಡಿದವರು. ಅದರೂ ಸಾಮಾನ್ಯವಾಗಿ ಈ ಗಾಯಕರು ತಾವು ಹಾಡಿಕೆಗಾಗಿ ತಿರುಗುವ ಒಂದು ವಲಯವನ್ನು, ಹುಲಿಗಳು ತಮ್ಮ ಬೇಟೆಗೊಂದು ಸೀಮೆ ನಿರ್ಮಿಸಿಕೊಂಡಂತೆ, ನಿರ್ಮಿಸಿಕೊಂಡಿರುತ್ತಾರೆ. ಒಂದು ವಲಯದವರು ಇನ್ನೊಂದು ವಲಯದ ಎಲ್ಲೆಯನ್ನು ಮೀರುವುದಿಲ್ಲ. ಕರ್ನಾಟಕದಲ್ಲಿ ಇಂತಹ 10-15 ವಲಯಗಳಿದ್ದು, ಪ್ರತಿವಲಯವೂ ಪ್ರಸಿದ್ಧ ಹಾಡುಗಾರರನ್ನು ಸೃಷ್ಟಿಸಿದೆ. ಸೇಡಂ ಚಿತಾಪುರ ವಲಯದಲ್ಲಿ ಅರ್ಜುನಪ್ಪ ದಂಡೋತಿ ಎಂಬ ದೊಡ್ಡ ಗಾಯಕ ಆಗಿಹೋದರು. ಈಗ ಬದಾಮಿ ಭಾಗದಲ್ಲಿ ಕೆರೂರು ನದಾಫಸಾಹೇಬರು ಖ್ಯಾತರಾಗಿದ್ದಾರೆ.

ಜನಪದ ಕವಿಗಳನ್ನು ಕುರಿತು ಕನ್ನಡದ ಮೊದಲ ಕೃತಿಕಾರ, ಕವಿರಾಜಮಾರ್ಗಕಾರನು, ‘ಕುರಿತೋದದೆಯುಂ ಕಾವ್ಯಪ್ರಯೋಗ ಮತಿಗಳ್’ ಎಂದು ಕೊಂಡಾಡಿರುವನಷ್ಟೆ. ಆದರೆ ಈ ವ್ಯಾಖ್ಯಾನ ಈ ಶಾಹಿರರಿಗೆ ಅನ್ವಯಿಸುವುದಿಲ್ಲ. ಕಾರಣ, ಈ ಶಾಹಿರರು ಸನ್ನಿವೇಶಕ್ಕೆ ತಕ್ಕಂತೆ ನಿಂತಲ್ಲೇ ಪದಕಟ್ಟಿ ಹಾಡಬಲ್ಲ ಆಶುಕವಿಗಳಾದರೂ, ಇವರಿಗೆ ಪುರಾಣ ಗ್ರಂಥಗಳ ಓದಿನ ಹಿನ್ನೆಲೆಯಿದೆ. ತಾವು ರಚಿಸಿದ ಪದವನ್ನು ಬರೆದಿಡುವ ಅಕ್ಷರ ಸಂಸ್ಕೃತಿಯೂ ಇದೆ. ಹಡಗಲಿಯಲ್ಲಿ ಬಹುತೇಕ ಶಾಹಿರರು ನೋಟುಬುಕ್ಕನ್ನು ಹಿಡಿದೇ ಹಾಡಿದರು. ಸಾಮಾನ್ಯವಾಗಿ ಈ ಶಾಹಿರರು ತಾವು ರಚಿಸಿದ್ದನ್ನು, ಶಿಷ್ಯರಿಗಲ್ಲದೆ ಉಳಿದವರಿಗೆ ತೋರಿಸುವುದಿಲ್ಲ. ಪದಗಳನ್ನು ತಮಗೆ ಮಾತ್ರ ಅರ್ಥವಾಗುವಂತೆ ಮೋಡಿಯಲ್ಲಿ ಬರೆದುಕೊಂಡಿರುವುದೂ ಉಂಟು. ಇದರ ಉದ್ದೇಶ, ತಾವು ಒಡ್ಡುವ ಸವಾಲು ಎದುರಾಳಿಗೆ ತಿಳಿಯದಂತೆ ರಹಸ್ಯ ಕಾಪಾಡಿಕೊಳ್ಳುವುದು. ಹಡಗಲಿಯಲ್ಲಿ ಒಡ್ಡಲಾದ ಕೆಲವು ಸವಾಲುಗಳು ಹೀಗಿದ್ದವು: ಮೆಹಬೂಬ ಶರಣರಿಗೆ ವಿದ್ಯೆ ಕಲಿಸಿದ ಗುರುವಿನ ಹೆಸರೇನು? ಪೈಗಂಬರರ ನಿಕಾ ಓದಿಸಿದ ಮೌಲವಿಯ ಹೆಸರೇನು? ಅಶೋಕವನದಲ್ಲಿ ಯಾವ ಮರದ ಕೆಳಗೆ ಸೀತೆ ಕುಳಿತಿದ್ದಳು? ರಾಮನಿಗೆ ನದಿ ದಾಟಿಸಿದ ಅಂಬಿಗನ ಹೆಸರು ಏನು?

ಸವಾಲ್ ಜವಾಬ್ ಹಾಡಿಕೆಯಲ್ಲಿ ಶಾಹಿರರು ಮತ್ತು ಗಾಯಕರ ನಡುವೆ ಒಂದು ಸಣ್ಣಭೇದವಿದೆ. ವಸ್ತಾದಿ (ಉಸ್ತಾದ್) ಎಂದು ಕರೆಯಲಾಗುವ ಶಾಹಿರರಿಗೆ ಗುರುವಿನ ಸ್ಥಾನಮಾನ. ಇವರು ಪದಕಟ್ಟಿ, ಅದಕ್ಕೆ ಧಾಟಿ ಕೂಡಿಸಿ, ಶಿಷ್ಯರಿಗೆ ಕಲಿಸುವರು. ಶಿಷ್ಯರು ಗುರುವಿನ ಹಿಂದೆ ಹಿಮ್ಮೇಳದಲ್ಲಿ ಹಾಡಿಕೊಂಡು ತಿರುಗುತ್ತ, ಎಷ್ಟೋ ವರ್ಷಗಳ ಬಳಿಕ, ಸ್ವತಂತ್ರ ಹಾಡಿಕೆ ಶುರುಮಾಡುವರು. ಹಡಗಲಿಯಲ್ಲಿ ಸತ್ತೂರು ಇಮಾಂಸಾಹೇಬರು, ಕಾನಳ್ಳಿ ಮುಸ್ತಫಾ ಮೊದಲಾದ ಶಿಷ್ಯರ ಜತೆ, ತುಂಡುದೊರೆಗಳು ಸೈನ್ಯವನ್ನು ಬೆನ್ನಹಿಂದೆ ಕಟ್ಟಿಕೊಂಡು ರಣರಂಗದಲ್ಲಿ ತಿರುಗುವಂತೆ ತಿರುಗುತ್ತಿದ್ದರು.

ಸವಾಲ್ ಜವಾಬ್ ಪದಗಳ ರೋಚಕ ಭಾಗವೆಂದರೆ, ಹಾಡುಗಾರರು ಎದುರಾಳಿಯನ್ನು ನಿಂದಿಸುವುದು; ಎದುರಾಳಿಯ ಹಾಡು ಕರ್ಣಕಠೋರ ಆಗಿದೆಯೆಂದೂ, ಅದರಲ್ಲಿ ಸ್ವಂತಿಕೆಯಿಲ್ಲವೆಂದೂ, ಆತ ಗುರುವಿನಿಂದ ಶಾಸ್ತ್ರೋಕ್ತವಾಗಿ ಕಲಿತಿಲ್ಲವೆಂದೂ ಟೀಕೆಗಳಿರುತ್ತವೆ. ಕೆಲವೊಮ್ಮೆ ಈ ಟೀಕೆಗಳು ಬೈಗುಳದ ಮಟ್ಟಕ್ಕೂ ಇಳಿಯುವುದುಂಟು. ಬಯಲಾಟ-ಯಕ್ಷಗಾನಗಳಲ್ಲಿ ವೀರರು ಯುದ್ಧಕ್ಕೆ ಮೊದಲು ತಂತಮ್ಮ ಬಡಾಯಿ ಕೊಚ್ಚಿಕೊಳ್ಳುವುದನ್ನು ನೆನಪಿಸುವ ಈ ವಾಕ್ಸಮರವು, ಹಾಡಿಕೆಯನ್ನು ನಾಟಕೀಯಗೊಳಿಸುತ್ತದೆ; ಬಹುಶಃ ಕೇಳುಗರು ನಿದ್ದೆಗೆ ಜಾರದಂತೆ ಎಚ್ಚರದಲ್ಲೂ ಇಡುತ್ತದೆ. ಪ್ರಾಚೀನ ಕವಿಗಳಲ್ಲೂ ಸ್ವಕವಿ ಪ್ರಶಂಸೆ ಮತ್ತು ಕುಕವಿ ನಿಂದೆಯ ಪದ್ಧತಿಯಿದೆಯಷ್ಟೆ. ಪ್ರಾಚೀನರೇಕೆ, ಆಧುನಿಕ ಕವಿಯಾದ ಅಡಿಗರು ಕೆ.ಎಸ್.ನರಸಿಂಹಸ್ವಾಮಿ ಅವರನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆದರೆನ್ನಲಾಗುವ ‘ಪುಷ್ಟಪಕವಿಯ ಪರಾಕು’ ಪದ್ಯದಲ್ಲಿರುವ ಟೀಕೆಗಳು ಏನು ಕಡಿಮೆ ಕಹಿಯಾಗಿವೆಯೇ? ಉರುಸುಗಳಲ್ಲಿ ಜಿದ್ದಾಜಿದ್ದಿ ಖವಾಲಿ ಏರ್ಪಡಿಸುವ ಸಂಘಟಕರು, ಮುದ್ದಾಮಾಗಿ ಪರಸ್ಪರ ಸೆಣಸುವ ತಂಡಗಳನ್ನೇ ಕರೆಯಿಸುವುದುಂಟು. ಅದರಂತೆ ಹಡಗಲಿಗೂ ಪರಸ್ಪರ ಹುರುಡಿಸುವ ಮೇಳಗಳು ಬಂದಿದ್ದವು. ಕೆಲವರಂತೂ ‘ಸವಾಲು ಕೇಳಿದರೆ ಜವಾಬು ಇಲ್ಲ ಕಡೀತಾನರಿ ಹಲ್ಲಾ, ಹ್ಞಾಂ! ತುಂಬಿದ ಕೊಡಾ ತುಳಕುವುದಿಲ್ಲಾ’ ಎಂದು ಎದುರಾಳಿ ನಿಂದೆಯಿಂದಲೇ ಹಾಡನ್ನು ಶುರುಮಾಡುತ್ತಿದ್ದರು. ದನಿಗೆ ವ್ಯಂಗ್ಯವನ್ನು ಬೆರೆಸಿ, ಎದುರಾಳಿಯತ್ತ ಕೈತೋರಿಸಿ ಗೇಲಿ ಮಾಡುತ್ತ ಅವರು ಹಾಡುತ್ತಿದ್ದರು. ಚಮಕಿ ಕೆಲಸ ಮಾಡಿದ ಮಿರುಗುವ ಸಾಲ್ಟಿನ್ ಅಂಗಿತೊಟ್ಟು, ಶೋಕಿಲಾಲನಂತೆ ಕಂಗೊಳಿಸುತ್ತಿದ್ದ ಕವಲೂರ ಗೌಸಸಾಹೇಬರಂತೂ, ಎದುರಾಳಿಗಳನ್ನು ಬಗೆಬಗೆಯಲ್ಲಿ ಚುಚ್ಚಿ ರಂಜಿಸುತ್ತಿದ್ದರು. ಈ ಗಾಯಕರು ಸಾಮಾನ್ಯವಾಗಿ ಬಯಲಾಟದ ನಟರೂ ಆಗಿರುವುದರಿಂದ ಅವರಲ್ಲಿ ಸಹಜವಾಗಿ ಅಭಿನಯವಿದೆ. ಇದಕ್ಕೆ ಹೋಲಿಸಿದರೆ, ಹರದೇಶಿ-ನಾಗೇಶಿ ಹಾಡಿಕೆಯಲ್ಲಿ ಪುರುಷವಾದ-ಸ್ತ್ರೀವಾದಗಳ ಮುಖಾಮುಖಿ ಇದ್ದು, ಅಲ್ಲಿ ಸಂಘರ್ಷ ಇನ್ನೂ ತೀಕ್ಷ್ಣವಾಗಿರುತ್ತದೆ; ಭಾಷೆ ಮತ್ತು ಆಂಗಿಕ ಅಭಿನಯಗಳು ಒರಟಾಗಿದ್ದು ‘ಲೈಂಗಿಕ’ ಆಯಾಮ ಪಡೆದಿರುತ್ತವೆ.

ಹಡಗಲಿಯಲ್ಲಿ ರಾತ್ರಿಯೆಲ್ಲ ತುಂಗಭದ್ರೆಯ ಹರಿವಿನಂತೆ ಹಾಡಿನ ಹೊಳೆ ಹರಿಯಿತು. ಕೆಲವರು ಇಂಪಾಗಿ ಹಾಡಿದರು; ಕೆಲವರು ದೊಡ್ಡದನಿಯಲ್ಲಿ ನೀರಸವಾಗಿ ಹಾಡಿದರು. ಪ್ರತಿಯೊಬ್ಬರಿಗೂ ಬಹುಶಃ ಆ ರಾತ್ರಿ ತಲಾ ಎರಡೆರಡು ಸಲ ಛಾನ್ಸ್ ಸಿಕ್ಕಿರಬೇಕು ಅಷ್ಟೆ. ಅಷ್ಟರಲಿ ಮೂಡಣದಲ್ಲಿ ಬೆಳಕಿನ ಚಿಹ್ನೆ ಕಾಣಲಾರಂಭಿಸಿದವು. ಇದು ಹಾಡಿಕೆ ಮುಗಿಸುವ ಸೂಚನೆ. ಮೊದಲ ನಮಾಜಿನ ಕರೆ ಕೂಗುವ ಮುನ್ನ ಕಾರ್ಯಕ್ರಮ ಮುಗಿಯಲೇಬೇಕು. ಚದುರಿಹೋಗಿದ್ದ ಗಾಯಕರೆಲ್ಲ ಮಂಚದ ಮೇಲೆ ನೆರೆದರು.

ರಾತ್ರಿಯೆಲ್ಲ ನಡೆದ ಕದನ ಮರೆತವರಂತೆ ಒಟ್ಟಿಗೆ ನಿಂತು ಏಕಸ್ವರದಲ್ಲಿ ಸಲಾಂಪದ ಹಾಡಿದರು. ಅಲ್ಲೇ ಪಕ್ಕದಲ್ಲಿ ಫೋಟೊ ತೆಗೆಯುತ್ತ ನಿಂತಿದ್ದ ನನ್ನನ್ನು, ಒಬ್ಬ ಗಾಯಕ ಸನ್ನೆಯಿಂದ ಕರೆದು, ಕೈನೀಡಿ ಅಟ್ಟದ ಮೇಲೆ ಎಳೆದುಕೊಂಡನು. ಮತ್ತೊಬ್ಬ ಗಾಯಕ ತನ್ನ ಕೊರಳಲ್ಲಿದ್ದ ಹಾರವನ್ನು ತೆಗೆದು ನನಗೆ ಹಾಕಿದನು. ಮಂಗಳ ಹಾಡಿದ ಮೇಲೆ ಗಾಯಕರೆಲ್ಲ ಅಪ್ಪಿಗೆ ಮಾಡಿ, ಹೋಟೆಲಿಗೆ ಹೋಗಿ ಚಹ ಕುಡಿದು, ತಂತಮ್ಮ ಊರುಗಳಿಗೆ ಚದುರಿಹೋದರು.

18 ವರ್ಷಗಳ ಹಿಂದೆ ಹಡಗಲಿಗೆ ಉರುಸಿಗೆ ನಾನು ಬಂದಿದ್ದೆ. ಆಗಿದ್ದ ಎಷ್ಟೋ ಗಾಯಕರು ಈಗಿರಲಿಲ್ಲ. ಮದಿಸಿದ ಸಲಗದಂತೆ ತಮ್ಮ ಅಭಿಮಾನಿಗಳ ಗುಂಪು ಕಟ್ಟಿಕೊಂಡು ಅಡ್ಡಾಡುತ್ತಿದ್ದ ಅದ್ಭುತ ಗಾಯಕ, ಇಟಗಿ ಕಾಸಿಂಸಾಹೇಬರು ತೀರಿಕೊಂಡಿದ್ದರು; ವಯಸ್ಸಾದ ಕಾರಣದಿಂದ ಹೊಳಲಿನ ಶಾಹಿರ್ ಫಕ್ರುದ್ದೀನ್ ಸಾಹೇಬರು ಬಂದಿರಲಿಲ್ಲ. ಆದರೇನಂತೆ, ಹರೆಯದ ಅನೇಕ ತರುಣರು ಹೊಸದಾಗಿ ಪದ ಕಲಿತು ಬಂದಿದ್ದರು. ಹೊಳೆ ತನ್ನ ಹರಿವು ನಿಲ್ಲಿಸಿಲ್ಲ ಅನಿಸಿತು.

ಆದರೆ ಅದರ ಹರಿವಿಗೆ ಅಲ್ಲಲ್ಲಿ ತಡೆಗಳು ಉಂಟಾಗುತ್ತಿವೆ ಎಂದು- ಒಬ್ಬ ಗಾಯಕ ತನ್ನ ಅಳಲನ್ನು ತೋಡಿಕೊಂಡ ಬಳಿಕ- ಅನಿಸಿತು. ಬಯಲಾಟದ ಕಲಾವಿದನೂ ಆಗಿದ್ದ ಆತ ಮದ್ದಲೆ ಬಾರಿಸುವುದರಲ್ಲಿ ನುರಿತವ. ಅವನ ಮಗ, ಉರುಸು ಮತ್ತು ಮೊಹರಂ ನಿಷೇಧಿಸುವ ಇಸ್ಲಾಮಿಕ್ ಪಂಥಕ್ಕೆ ಸೇರಿದವನಂತೆ; ಅವನು ‘ಅಪ್ಪಾ, ಬೇಕಾದರೆ ಸವಾಲ್ ಜವಾಬ್ ಹಾಡು; ಬಯಲಾಟ ಬೇಡ’ ಎಂದು ತಾಕೀತು ಮಾಡಿರುವನಂತೆ.
ಇದೇನು ಸೋಜಿಗವಲ್ಲ. ಉರುಸು- ಮೊಹರಂಗಳನ್ನು ಮನ್ನಿಸದ ಧಾರ್ಮಿಕ ಮೂಲಭೂತವಾದವು ಊರೂರುಗಳಲ್ಲಿ ಶುರುವಾಗಿದೆ. ಇದನ್ನೆಲ್ಲ ನೋಡುವಾಗ ಹುಲಿಸವಾರಿ ಮಾಡಿರುವುದು ರಾಜಾಬಾಗ್ ಸವಾರನಲ್ಲ; ಅವನ ಉರುಸಿನಲ್ಲಿ ಹಾಡುತ್ತಿರುವ ಈ ಗಾಯಕರು ಅನಿಸಿತು. ಪ್ರಶ್ನೆಯೆಂದರೆ, ಈ ಹಾಡು/ಕಾವ್ಯ ಸಂಪ್ರದಾಯವು, ತಾನೇರಿರುವ ಹುಲಿಯನ್ನು ತನ್ನ ಕಸುವಿನಿಂದ ಪಳಗಿಸುತ್ತದೆಯೊ ಅಥವಾ ಹುಲಿಯೇ ಇದನ್ನು ಕೆಳಕ್ಕೆ ಕೆಡವಿ ತಿಂದುಹಾಕುತ್ತದೆಯೊ?

ಈ ಸವಾಲಿಗೆ ಕಾಲವೇ ಜವಾಬು ಕೊಡಬೇಕು.

1 ಕಾಮೆಂಟ್‌:

Manik Bhure ಹೇಳಿದರು...

Dr. Rahamat Tarikere avara hudukatad baduku. aa badukininda lokakke yenadaru heli koduv tavak.
ee prayatnakke yashassu sigali
-Manik bhure