ಬುಧವಾರ, ಡಿಸೆಂಬರ್ 3, 2014

ಕನ್ನಡ: ಮನೆ ಉಳಿಸಿಕೊಂಡೇ ಮಾರು ಗೆಲ್ಲಬೇಕು

-ಹೆಚ್.ಎಸ್.ಶಿವಪ್ರಕಾಶ್

ಸೌಜನ್ಯ-ಪ್ರಜಾವಾಣಿ

ಕನ್ನಡವನ್ನು ಶಿಕ್ಷಣ ಮಾಧ್ಯಮವನ್ನಾಗಿ ಜಾರಿಗೊಳಿಸದ ಹೊರತು ತಾವು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನ­ವನ್ನು  ಒಪ್ಪಿಕೊಳ್ಳುವುದಿಲ್ಲ ಎಂದು ದೇವನೂರ ಮಹಾ­ದೇವ ಅವರು ಘೋಷಿಸಿರುವುದು ಸ್ವಾಗತಾರ್ಹ. ಅವರ ಈ ಕನ್ನಡ ಪರ ನಿಲುವು ಕೇವಲ ಭಾವುಕವಾಗಲಿ, ಹಳಹಳಿಕೆಯದಾಗಲಿ ಆಗಿರದೆ ನೈತಿಕ ಮತ್ತು ಸಾಂಸ್ಕೃತಿಕ ವಿವೇಕದ ಅಭಿವ್ಯಕ್ತಿಯಾಗಿದೆ. ಕನ್ನಡ ರಾಜ್ಯ ಭಾಷೆಯ ಶಿಕ್ಷಣ ಮಾಧ್ಯಮವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವ ದಿಸೆಯಲ್ಲಿ ನಾವು ಆಲೋಚಿ­ಸು­ವಂತೆ, ಪ್ರಯತ್ನಶೀಲರಾಗುವಂತೆ ಮಾಡಿದೆ.
ಆಯಾ ರಾಜ್ಯ ಮತ್ತು ಪ್ರಾದೇಶಿಕ ಭಾಷೆಗಳು ಇಂಗ್ಲಿಷಿನ ಹೇರಿಕೆಯಿಂದ ಕ್ಷೀಣಾವಸ್ಥೆಗೆ ಬರುತ್ತಿರುವ ಇಕ್ಕಟ್ಟಿನ ಸ್ಥಿತಿ
ಕೇವಲ ಕರ್ನಾಟಕ ಅಥವಾ ಭಾರತದ್ದಲ್ಲ. ಗೋಳೀಕರಣದ ಗೆದ್ದೆತ್ತಾದ ಇಂಗ್ಲಿಷಿನ ಬಾಲ ಹಿಡಿದುಕೊಂಡು ಇಡೀ ಜಗತ್ತು ಭವಿಷ್ಯದ ಸ್ವರ್ಗಾರೋಹಣಕ್ಕೆ ಇಂದು ತಯಾರಾಗುತ್ತಿದೆ. ಈ ಗೆದ್ದೆತ್ತು ತನ್ನ ಅಸಹಾಯಕ ಬಾಲಹಿಡುಕರನ್ನು ಸ್ವರ್ಗಕ್ಕೆ ಕೊಂಡೊ­ಯ್ಯುತ್ತದೋ ಅಥವಾ ಸ್ವರ್ಗದ ಬೋರ್ಡು ಹಾಕಿ­ಕೊಂಡಿ­ರುವ ನರಕಕ್ಕೆ ಕೊಂಡೊಯ್ಯುತ್ತದೋ ಗೊತ್ತಿಲ್ಲ. ಆದರೂ ಇಂದಿನ ಇಂಗ್ಲಿಷ್‌ ತೆವಲಿನ ಮೂಲವನ್ನು ರವಷ್ಟು ಕೆದಕಿ ನೋಡೋಣ.
ಇಂಗ್ಲಿಷ್‌ ಮಾಯೆಯ ಮೂಲ ಕಾರಣ ಗೋಳೀಕರಣ ಯುಗದ ಚಾಲಕ ಶಕ್ತಿಯಾದ ಮಾರುಕಟ್ಟೆ.  ಅದರ ಜೊತೆಗೆ ತಳಕು ಹಾಕಿಕೊಂಡಿದೆ ಜಾಗತಿಕ ವಿದ್ವತ್-ಲೋಕದ ಸಂಪರ್ಕ ಭಾಷೆಯಾಗಿ ಬೆಳೆಯುತ್ತಿರುವ ಇಂಗ್ಲಿಷ್. ಭಾಷಾವಾರು ಅಂಕಿ-ಅಂಶಗಳ ವಿಶ್ವಸನೀಯ ಆಧಾರವಾಗಿರುವ ‘ಎಥ್ನಲಾಗ್‌’ನ ೨೦೧೩ರ ಗಣತಿಯ ಪ್ರಕಾರ, ಅತ್ಯಂತ ವ್ಯಾಪಕ ವಿಶ್ವ ಭಾಷೆ­ಗಳಲ್ಲಿ ಮೊದಲನೆಯದು ಚೀನಿ ಭಾಷೆ, ಎರಡನೆಯದು ಸ್ಪ್ಯಾನಿಷ್. ಇಂಗ್ಲಿಷಿಗೆ ಮೂರನೇ ಸ್ಥಾನ. ಆದರೆ ವಿಶ್ವದಾದ್ಯಂತ ಶಿಕ್ಷಣ ಮತ್ತು ಸಂಪರ್ಕ ಭಾಷೆಯಾಗಿ ಇಂಗ್ಲಿಷ್ ಮೊದಲ ಜಾಗ ಗಿಟ್ಟಿಸಿಕೊಂಡಿದೆ.
ಇಷ್ಟಾದರೂ ೨೦೧೪ರ ಬ್ರಿಟಿಷ್ ಕೌನ್ಸಿಲ್‌ನ ವರದಿಯ ಅನುಸಾರ, ಇಂಗ್ಲಿಷನ್ನು ಶಿಕ್ಷಣ ಮತ್ತು ಸಂಪರ್ಕ ಭಾಷೆ­ಯನ್ನಾಗಿ ಮಾಡಲು ಹೊರಟಿರುವ ರಾಷ್ಟ್ರವಾರು ಪ್ರಯ­ತ್ನ­ಗಳು ಏಕಮುಖವಾಗಿಲ್ಲ. ಈ ಬಗ್ಗೆ ಪರ, ವಿರೋಧಿ ಚರ್ಚೆ­ಗಳೂ ವ್ಯಾಪಕವಾಗಿವೆ. ಇಸ್ರೇಲ್, ವೆನಿಜುವೆಲ, ಇಟಲಿ ದೇಶಗಳ ಒಲವು ಇಂಗ್ಲಿಷಿನ ಪರವಾಗಿಲ್ಲ. ಸಾಂಪ್ರದಾಯಿಕ­ವಾಗಿ ಇಂಗ್ಲಿಷ್‌ ಪರವಲ್ಲದ ಫ್ರಾನ್ಸ್, ಜರ್ಮನಿ, ಸ್ವೀಡನ್, ಚೀನಾ, ಜಪಾನ್ ಮೊದಲಾದ ರಾಷ್ಟ್ರಗಳಲ್ಲಿ ಇಂಗ್ಲಿಷ್‌ಪರತೆ ಹೆಚ್ಚುತ್ತಿರುವುದು ನಿಜ. ಆದರೆ ಇಂಗ್ಲಿಷ್‌ನ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿರುವುದು ಖಾಸಗಿ ಸಂಸ್ಥೆಗಳೇ ಹೊರತು ಆಯಾ ಸರ್ಕಾರಗಳಲ್ಲ ಎಂಬ ಮಾಹಿತಿ ನಮಗೆ ಬ್ರಿಟಿಷ್‌ ಕೌನ್ಸಿಲ್ ಆಕರಗಳಲ್ಲಿ ದೊರಕುತ್ತದೆ.
ಇಂಗ್ಲಿಷ್‌ ಶಿಕ್ಷಣ ಮಾಧ್ಯಮದಿಂದ ಕೆಲವು ಅನುಕೂಲಗಳಿವೆ ಎಂಬುದರಲ್ಲಿ ಸ್ವಲ್ಪ ಸತ್ಯವಿದೆ. ಇಂಗ್ಲಿಷ್‌ಪರರ  ಮುಖ್ಯ ಸಮರ್ಥ­ನೆ­ಗಳೇನು? ಜಾಗತಿಕ ಸಂಪರ್ಕ ಭಾಷೆಯಾಗಿ ಶಿಕ್ಷಣ­ದಲ್ಲಿ ಇಂಗ್ಲಿಷನ್ನು ನಿಲ್ಲಿಸಿದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನ, ತಂತ್ರಜ್ಞಾನದ ಮಾಹಿತಿ ಸಂಗ್ರಹ, ವಿನಿಮಯ ಮತ್ತು ಪ್ರಸಾರ ಸುಲಭವಾಗುತ್ತದೆ ಎಂಬುದು ಅವರ ವಾದ. ಈ ಆಕರ್ಷಕ ವಾದ ನಿಜವಾಗಿದ್ದಲ್ಲಿ ಸಮಸ್ತ ಜ್ಞಾನರಾಶಿ ಇಂಗ್ಲಿಷಿ­ನಲ್ಲಿ ಭಟ್ಟಿಯಿಳಿದು, ಇಂಗ್ಲಿಷ್ ತನಗೆ ತಾನೇ ಸಮಸ್ತ ಜ್ಞಾನ­ವಾಗಿ ಮಾರ್ಪಟ್ಟು ಜಗತ್ತಿನ ಇತರ ಭಾಷೆಗಳು ತಮ್ಮ ಉಪಯು­ಕ್ತತೆಯನ್ನು ಕಳೆದುಕೊಳ್ಳುತ್ತವೆ.
ಪ್ರಸಿದ್ಧ ಭೌತಶಾಸ್ತ್ರಜ್ಞ ಸಿ.ಪಿ.ಸ್ನೋ ಹೇಳುವ ಪ್ರಕಾರ ಭೌತಿಕ ವಿಜ್ಞಾನ, ತಂತ್ರಜ್ಞಾನಗಳ ಮಾಧ್ಯಮ ಗಣಿತ. ಅದು ತನಗೆ ತಾನೇ ಒಂದು ಭಾಷೆ. ಅದನ್ನು ಯಾವ ಭಾಷೆಯ ಮೂಲಕ­ವಾದರೂ ಅನುಸಂಧಾನ ಮಾಡಬಹುದು. ಅದಕ್ಕೆ ಬೇಕಾಗಿರು­ವುದು ವೈಜ್ಞಾನಿಕ ತರ್ಕ, ವಿಶ್ಲೇಷಣೆಗಳೇ ಹೊರತು ಇಂಗ್ಲಿಷ್‌ ಭಾಷೆಯಲ್ಲ. ಜ್ಞಾನರಾಶಿ­ಯೆಂದರೆ ಬರೀ ಪಡುವಣದ ವಿಜ್ಞಾನ, ತಂತ್ರ­ಜ್ಞಾನ­ಗಳಲ್ಲ. ಇತರ ವಿಜ್ಞಾನಗಳು ಇಂಗ್ಲಿಷೇತರ ಮತ್ತು ಯುರೋಪೇತರ ಪರಂಪರೆಗಳಲ್ಲಿ ವಿಕಾಸ­ಗೊಂಡಿದ್ದವು. ಉದಾಹರಣೆಗೆ ಭಾರತದ ಆಯು­ರ್ವೇದವಾಗಲಿ, ಚೀನಾದ ಆಕ್ಯುಪಂಕ್ಚರ್ ಚಿಕಿತ್ಸೆ­ಯಾಗಲಿ ವಿಜ್ಞಾನ ಅಲ್ಲವೆಂದು ಹೇಳಲು ಬರುವು­ದಿಲ್ಲ. ಈ ವಿಜ್ಞಾನಗಳ ಚಿಂತನ- ಮಂಥನ ನಡೆ­ದದ್ದು ಕ್ರಮವಾಗಿ ಸಂಸ್ಕೃತ ಮತ್ತು ಚೀನಿ ಭಾಷೆಗಳಲ್ಲಿ.
ಯುರೋಪಿನ ಮಧ್ಯಯುಗದ ಕಗ್ಗತ್ತಲ ಕಾಲದಲ್ಲಿ ಗ್ರೀಕರ ವಿಜ್ಞಾನವನ್ನು ಉಳಿಸಿ ಬೆಳೆಸಿದವರು ಅರೇಬಿಯಾದ ವಿದ್ವಾಂಸರು. ರೆನೆಸಾನ್ಸ್ ತರುವಾಯದ ಯುರೋಪಿನಲ್ಲೂ ವಿಜ್ಞಾನ ಇಂಗ್ಲಿಷೇತರ ಭಾಷೆಗಳಲ್ಲೂ ರೂಪುತಾಳಿತು. ಭೌತ­ಶಾಸ್ತ್ರದಲ್ಲಿ ಯುಗಪ್ರವರ್ತಕ ಮಾರ್ಪಾಟನ್ನು ತಂದ ಐನ್‌­ಸ್ಟೀನ್‌ ಆಗಲಿ, ಮನೋವಿಜ್ಞಾನದ ಬುನಾದಿ ಹಾಕಿದ ಫ್ರಾಯ್ಡ್, ಯೂಂಗರಾಗಲಿ ಚಿಂತಿಸಿದ್ದು ಜರ್ಮನ್ ಭಾಷೆ­ಯಲ್ಲಿ.  ಆದ್ದರಿಂದ ಭೌತಿಕ, ಮನೋವಿಜ್ಞಾನಗಳನ್ನು ಇಂಗ್ಲಿಷಿನ ಜೊತೆ ಸಮೀಕರಿಸಲು ಬರುವುದಿಲ್ಲ. ಇನ್ನು ಇತರ ಮಾನವಿಕ ವಿಜ್ಞಾನಗಳ ಚಿಂತನ -ಮಂಥನ ಇಂಗ್ಲಿಷೇತರ ಭಾಷೆಗಳಲ್ಲಿ ದಂಡಿಯಾಗಿ ನಡೆದಿದೆ. ವಿಜ್ಞಾನೇತರ ಜ್ಞಾನ ಶಾಖೆಗಳಾದ ಸಾಹಿತ್ಯ, ಸಂಸ್ಕೃತಿ, ದರ್ಶನಗಳು ಜಗತ್ತಿನ ಎಲ್ಲ ಭಾಷೆಗಳಲ್ಲೂ ವಿವಿಧ ಪ್ರಮಾಣಗಳಲ್ಲಿ ವಿಕಸಿತವಾಗಿ ಮಾನವ ನಾಗರಿಕ­ತೆ­ಯನ್ನು ರಚಿಸಿವೆ. ಭೌತಿಕ ವಿಜ್ಞಾನಕ್ಕಿಂತ ಸಾಹಿತ್ಯ–- ಸಂಸ್ಕೃತಿ– -ದರ್ಶನಗಳು ಹೆಚ್ಚು ಭಾಷಾ ವಿಶಿಷ್ಟವಾಗಿದ್ದು ಅವುಗಳ ತಿರುಳನ್ನು ಪೂರ್ಣ ಪ್ರಮಾಣದಲ್ಲಿ  ಇಂಗ್ಲಿಷ್ ಮೂಲಕ ಗ್ರಹಿ­ಸು­ವುದು ಸುಲಭವಲ್ಲ. ಆಯಾ ಅರಿವಿನ ಸೀಮೆಗಳ ಪೂರ್ಣ ತಿಳಿವಳಿಕೆಗಾಗಿ ಆಯಾ ಭಾಷೆಗಳಿಗೇ  ಮೊರೆಹೋಗಬೇಕಾಗಿದೆ.
ಇತ್ತೀಚಿನವರೆಗೆ ದೇಶ ಭಾಷೆಗಳ ಶಿಕ್ಷಣ ಮಾಧ್ಯಮಕ್ಕೆ ಒತ್ತು ನೀಡಿದ್ದ, ಇನ್ನೂ ಪ್ರಧಾನವಾಗಿ ಅದೇ ಭಾಷಾ ನೀತಿಯನ್ನು ಮುಂದುವರಿಸುತ್ತಿರುವ ಚೀನಾ, ಜಪಾನ್, ದಕ್ಷಿಣ ಕೊರಿಯಾ ಮುಂತಾದ ಕಡೆ ಇಂಗ್ಲಿಷ್‌ನ ದೇಣಿಗೆಯಿಲ್ಲದೇ ವಿಜ್ಞಾನ– -ತಂತ್ರಜ್ಞಾನ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ.
ಎರಡು ಸಾವಿರ ವರ್ಷಗಳ ಇತಿಹಾಸದಲ್ಲಿ ನಮ್ಮ ಪ್ರಾದೇಶಿಕ ಭಾಷೆಗಳು ಸಂಸ್ಕೃತದೊಂದಿಗೆ ತಮ್ಮ ಸ್ವಂತಿಕೆಯನ್ನು ಬಿಟ್ಟು­ಕೊಡದೆ ಸಂವಾದವನ್ನು ನಡೆಸುತ್ತಾ ಬಂದಿವೆ. ಇಂಗ್ಲಿಷಿನ ಜೊತೆಗೂ ಇದೇ ಥರದ ಸಮಾನ ವಿನಿಮಯ ಸಾಧ್ಯವಾದರೆ ಇಂಗ್ಲಿಷಿಗೂ ಒಳಿತು, ನಮಗೂ ಒಳಿತು. ಆದರೆ ಇಂಗ್ಲಿಷಿನ ಕಡೆಗಿನ ಏಕಮುಖಿ ಚಲನೆಯ ಸಮರ್ಥಕರ ವಾದ  ಇಂಥ ಸಂವಾ­ದದ, ಸಮಾನ ಹಂಚಿಕೆಯ ಪರವಾ­ಗಿಲ್ಲ. ಯಾಕೆಂದರೆ ಇದರ ಚಾರಿತ್ರಿಕ ಭಿತ್ತಿ ಮತ್ತು ಪ್ರೇರಣೆ ಖಾಸಗೀಕರಣದ ಅಸಮಾನ ಹಂಚಿಕೆಯ ಅರ್ಥ ವ್ಯವಸ್ಥೆ. ಈ ದಿಸೆಯಲ್ಲಿ ಬಲವಾದ ಒತ್ತಡ ಬರುತ್ತಿರುವುದು ಲಾಭ­ಕೋರ ಖಾಸಗಿ ಕಂಪೆನಿಗಳಿಂದಲೇ ಹೊರತು ಜನತೆ ಅಥವಾ ಸರ್ಕಾರದ ಕಡೆಯಿಂದಲ್ಲ. ಆದರೆ ಇಂದು ಸರ್ಕಾರಗಳೂ ಜನರೂ  ಖಾಸಗೀಕರಣದ ಪರವಾದ ಬಿರುಸಿನ ಪ್ರಚಾರಕ್ಕೆ ಬೇಸ್ತು ಬೀಳುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಯಾವ ರೀತಿಯ ಶಿಕ್ಷಣ ಭಾಷಾ ನೀತಿ ನಮ್ಮ ಸ್ವಕೀಯ ವಿಕಾಸಕ್ಕೆ ಪ್ರೇರಕವಾಗಬಲ್ಲದು?
ಕುರುಡು ಕನ್ನಡ ವಾದವಾಗಲಿ ಪರಂಗಿ ಮೋಹವಾಗಲಿ ಪರಿಹಾರವಲ್ಲ.  ವಸ್ತುನಿಷ್ಠ ವಿವೇಚನೆ ಅಗತ್ಯ. ವಿಶ್ವದ ಪ್ರಬಲ ಸಂಪರ್ಕ ಭಾಷೆಯಾದ ಇಂಗ್ಲಿಷನ್ನು ನಾವು ಚೆನ್ನಾಗಿ ಕಲಿಯ­ಬೇಕು, ನಿಜ. ಅಷ್ಟೇ ಮುಖ್ಯ ನಮ್ಮ ನಮ್ಮ ಭಾಷೆಗಳಲ್ಲಿ ನಮ್ಮ ಬಗ್ಗೆ, ಜಗತ್ತಿನ ಬಗ್ಗೆ ಚಿಂತಿಸುವುದು. ಬದಲಾದ ಪರಿಸರದಲ್ಲಿ ಪರಪುಟ್ಟರಾಗದೆ ಶತಮಾನಗಳ ಕೊಂಡಗಳನ್ನು ಹಾಯ್ದು ಬಂದು ಇನ್ನೂ ಜೀವಂತವಾಗಿರುವ ಭಾಷೆ ಮತ್ತು ಜ್ಞಾನ ಪರಂಪರೆಯಲ್ಲಿ ಮೌಲಿಕವಾದುದನ್ನು ಮೊದಲು ಮರುಗಳಿಸಿ­ಕೊಂಡು, ಉಳಿಸಿಕೊಂಡು ಇಂದಿನ ನಮ್ಮ ವ್ಯಕ್ತಿಗತ ಮತ್ತು ಸಾಮೂ­ಹಿಕ ಹಿತಗಳಿಗಾಗಿ ಬೆಳೆಸಿಕೊಳ್ಳಬೇಕು. ಇಂದಿನ ಅವಕಾಶಗಳಿಂದ ವಂಚಿತರಾಗದಂತೆ ಇಂಗ್ಲಿಷನ್ನು ಕಲಿಯು­ತ್ತಲೇ, ಎಲ್ಲ ಜ್ಞಾನವನ್ನು ನಮ್ಮ ನಮ್ಮ ಭಾಷೆಗಳ ಮೂಲಕವೇ ಪಡೆದುಕೊಳ್ಳಬೇಕು. ಮನೆಯನ್ನು ಉಳಿಸಿಕೊಂಡೇ ಮಾರನ್ನು ಗೆಲ್ಲಬೇಕು.
ಇತ್ತೀಚೆಗೆ ಸುಪ್ರೀಂಕೋರ್ಟ್, ಶಿಕ್ಷಣ ಮಾಧ್ಯಮ ಯಾವುದಿ­ರ­­ಬೇಕೆಂಬ ವಿಷಯದಲ್ಲಿ ಅಂತಿಮ ತೀರ್ಮಾನ ತಂದೆ -ತಾಯಿಯದ್ದಾಗಿರಬೇಕೆಂದು ತೀರ್ಪು ನೀಡಿದ್ದು ಖಾಸಗಿ ಶಿಕ್ಷಣಾ­ಧಿಪತಿಗಳಿಗೆ ಹೊಸ ಹುಮ್ಮಸ್ಸು ತಂದಿದೆ. ಧರಣಿ ಮಂಡಲ ಮಧ್ಯದ ಕರ್ನಾಟಕದಲ್ಲೇ ಇಂಗ್ಲಿಷ್‌ ಮಾಧ್ಯಮ ಶಾಲೆ ತೆರೆ­ಯಲು ೨೦೦೦ ಅರ್ಜಿಗಳು ಸರ್ಕಾರಕ್ಕೆ ಸಲ್ಲಿಕೆ­ಯಾಗಿವೆ. ಧನೋ­ನ್ಮತ್ತರಾಗಿರುವ ಖಾಸಗಿ ಶಿಕ್ಷಣಾಧಿಪತಿಗಳು ಇನ್ನೂ ಮುಂದುವರಿಯುವ ಮೊದಲು ಸಾರ್ವಜನಿಕರು ಮತ್ತು ಸರ್ಕಾರ ಕನ್ನಡ ಮಾಧ್ಯಮವನ್ನು ಸ್ಥಾಪಿಸುವ ಕ್ರಮಗಳನ್ನು ಕೂಡಲೇ ತೆಗೆದುಕೊಳ್ಳಬೇಕಾಗಿದೆ.   ಕರ್ನಾಟಕ, ಗುಜರಾತ್‌ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರಗಳು ಮರುಪರಿಶೀಲನೆಗೆ ಕಾನೂನಿನ ಮೊರೆ ಹೋಗಿರುವುದು ಸ್ವಾಗತಾರ್ಹ. ಆದರೆ ಅಷ್ಟು ಸಾಲದು. ಹತ್ತನೇ ತರಗತಿವರೆಗಿನ ಶಿಕ್ಷಣ ಮಾಧ್ಯಮ ರಾಜ್ಯ ಭಾಷೆಗಳಾಗಿರಬೇಕೆಂಬ ಕಾಯ್ದೆಯನ್ನು ಸಂಸತ್ತಿನಲ್ಲಿ ತರುವುದೊಂದೇ ಇಂದು ನಮಗಿರುವ ದಾರಿ.
ಕನ್ನಡದಲ್ಲಿ ವಿಜ್ಞಾನಾದಿ ವಿಷಯಗಳನ್ನು ಕಲಿಸತೊಡಗಿದಾಗ ಮಕ್ಕಳೇನೂ ದಡ್ಡರಾಗಿಬಿಡುವುದಿಲ್ಲ ಎಂಬುದು ಹಿಂದೆ ಚಂದ್ರ­ಶೇಖರ ಕಂಬಾರರು ಕನ್ನಡ ವಿಶ್ವವಿದ್ಯಾಲಯದ ಕುಲಪತಿ­ಗಳಾ­ಗಿದ್ದಾಗ ಮಾಡಿಸಿದ ಪ್ರಯೋಗದಿಂದ ಸಾಬೀತಾಗಿತ್ತು. ಪಿಯುಸಿ ಪಠ್ಯಪುಸ್ತಕಗಳನ್ನು ಕನ್ನಡಕ್ಕೆ ಅನುವಾದ ಮಾಡಿಸಿ ವಿದ್ಯಾರ್ಥಿ­ಗಳಿಗೆ ಒದಗಿಸಲಾಯಿತು. ಆಗ ಗ್ರಾಮೀಣ ಪ್ರದೇಶದ ಮಕ್ಕಳು ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾದರು. ಯಾಕೆಂದರೆ ಆ ಸಲ ಅವರು ಇಂಗ್ಲಿಷ್ ಪಾಠಗಳನ್ನು ಉರು­ಹಚ್ಚಿ ಬರೆದಿರಲಿಲ್ಲ. ಕನ್ನಡದಲ್ಲಿ ನೇರವಾಗಿ ಓದಿ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು. ಉತ್ತಮ ಫಲ ದೊರಕಿದ ಮೇಲೂ ಸರ್ಕಾರದ ಸೋಮಾರಿತನದಿಂದ ಈ ಅರ್ಥಪೂರ್ಣ ಪ್ರಯೋಗ ಮುಂದುವರಿಯಲಿಲ್ಲ.
ರಾಜ್ಯದ ಎಲ್ಲ ಮಕ್ಕಳಿಗೆ ಮೊದಲನೇ ತರಗತಿಯಿಂದ ಇಂಗ್ಲಿಷಿನ ಕಲಿಕೆ ಲಭ್ಯವಾಗಿಸಿ ಇತರ ವಿಷಯಗಳನ್ನು ನೇರವಾಗಿ ರಾಜ್ಯ ಭಾಷಾ ಮಾಧ್ಯಮದಲ್ಲಿ ಕಲಿಸುವ  ವ್ಯವಸ್ಥೆಯನ್ನು ಸಾರ್ವತ್ರೀಕರಿಸಿದರೆ  ಇಂಗ್ಲಿಷ್ ಮಾಧ್ಯಮದವರ ಮೇಲರಿಮೆ ಮತ್ತು ಕನ್ನಡ ಮಾಧ್ಯಮದವರ ಕೀಳರಿಮೆ ಕೊನೆಯಾಗಿ, ಶಿಕ್ಷಣ ಕ್ಷೇತ್ರದಲ್ಲಿ ಸಮಾನತೆ, ಸಮಪಾಲು ನೆಲೆಸಲು ಅನುವಾಗು­ತ್ತದೆ. ಕನ್ನಡ ಮಾಧ್ಯಮದಿಂದ ನಮ್ಮ ನಾಡು-–ನುಡಿಗಾಗುವ ನಷ್ಟಕ್ಕಿಂತ ಲಾಭವೇ ಹೆಚ್ಚು. ಕವಿ ಕೆ.ಎಸ್‌.ನ ಹೇಳಿದ ಹಾಗೆ, ‘ಕನ್ನಡ ಮಾಧ್ಯಮವಾಗಲೇಬೇಕು ಕನ್ನಡ ಮಕ್ಕಳಿಗೆ...’

ಅವ್ವನ ನೆನಪುಗಳು..



-ಕಲೀಮ್ ಉಲ್ಲಾ
ಸೌಜನ್ಯ: ಕಾಮನಬಿಲ್ಲು, ಪ್ರಜಾವಾಣಿ
ಮೊನ್ನೆ ಕ್ಲಾಸಿನಲ್ಲಿ ಒಬ್ಬಳು ಹುಡುಗಿ ಅಳುತ್ತಾ ಕೂತಿದ್ದಳು. ನನ್ನ ಪಾಠ ಕೇಳಿ ಆಕೆ ಅಳುತ್ತಿರಬಹುದೆಂದು ಭಾವಿಸಿದೆ. ಆಕೆ ಕಣ್ಣೀರು ಹಾಕುವಷ್ಟು ರಸಪೂರ್ಣವಾಗಿ ನಾನು ಪಾಠ ಕೊಚ್ಚುತ್ತಿದ್ದೇನಲ್ಲಾ ಎಂದು ಹೆಮ್ಮೆಯೂ ಆಯಿತು. ಬಹಳಷ್ಟು ಸಲ ಸಾವಿನ ಪ್ರಸಂಗಗಳ ಪ್ರಸ್ತಾಪ ಬಂದಾಗ ಕೆಲ ಸೂಕ್ಷ್ಮ ಮನಸ್ಸಿನ ಮಕ್ಕಳು ಅತ್ತಿದ್ದುಂಟು. ಜೀವನದಲ್ಲಿ ತಂದೆ, ತಾಯಿ, ಅಣ್ಣ, ತಮ್ಮರನ್ನು ಕಳಕೊಂಡ ಹೆಣ್ಣು ಮಕ್ಕಳು ಹೀಗೆ ಭಾವುಕರಾಗುವುದಿದೆ. ಆಮೇಲೆ ನಾನವರನ್ನು ಕರೆದು ಕಾರಣ ಕೇಳಿ ಸಮಾಧಾನ ಹೇಳಿದ್ದೂ ಇದೆ. ಆದರೆ, ಇಂಥ ವಿಷಯಗಳಿಗೆ ಸೆಂಟಿಮೆಂಟಲ್ಲಾಗಿ ಕಣ್ಣೀರು ಜಡಿದ ಯಾವ ಹುಡುಗರನ್ನೂ ನಾನು ಇಲ್ಲೀ ತನಕ ನೋಡಲು ಸಾಧ್ಯವಾಗಿಲ್ಲ. ಅದೇ ಪ್ರೇಮ ವೈಫಲ್ಯವಾದ ಪ್ರೇಮಿಗಳ ಕಥೆ ಕೆತ್ತಿದಾಗ ಒಂದಿಷ್ಟು ಮೀಸೆ ಮೂಡಿಸಿಕೊಂಡ ಗಂಡು ಹೈಕಳುಗಳು ಲೈಟಾಗಿ ಕಣ್ಣಂಚುಗಳ ಒರೆಸಿಕೊಂಡಿದ್ದಿದೆ.
ಒಂದು ದಿನ ಜಾನಪದ ಪದ್ಯವೊಂದನ್ನು ಪಾಠ ಮಾಡುತ್ತಿದ್ದೆ. ಅಲ್ಲಿ ತಾಯಿ ಮಮತೆ ಕುರಿತಂತೆ ಹೇಳುವುದಿತ್ತು. ಅವ್ವನನ್ನು ಬಾಲ್ಯದಲ್ಲೇ ಕಳೆದುಕೊಂಡ ನಾನೂ ಆ ಕ್ಷಣ ಭಾವುಕನಾಗಿದ್ದೆ. ಆಕೆಯ ಮುಖ ಹೇಗಿತ್ತು ಎನ್ನುವುದೂ ಗೊತ್ತಿಲ್ಲದ ನನ್ನ ಸಂಕಟವನ್ನೂ ಪಾಠದ ಜೊತೆ ಪೋಣಿಸಿಕೊಂಡಿದ್ದೆ. ಕೆಲ ಮಕ್ಕಳು ಕಣ್ಣು ಅರಳಿಸಿ ಕೇಳುತ್ತಿದ್ದರು. ನಿದ್ದೆಗೆ ಜಾರುವ ಸನ್ನಾಹದಲ್ಲಿದ್ದ ಕೆಲವು ಆಕಳಿಕೆ ನಿಲ್ಲಿಸಿ ನೆಟ್ಟಗೆ ಕುಳಿತವು.
‘ನೋಡಿ ಅಪ್ಪ ಅಮ್ಮ ಇದ್ದವರಿಗೆ ಅವರ ಬೆಲೆ ಏನೆಂಬುದು ಅವರು ಬದುಕಿರುವಾಗ ಗೊತ್ತೇ ಆಗುವುದಿಲ್ಲ. ಅವರು ಸತ್ತ ಮೇಲೆ ಅವರ ಪ್ರಾಮುಖ್ಯ ಸಿಡಿಲಿನಂತೆ ಬಡಿಯುತ್ತದೆ. ಅದರಲ್ಲೂ ಅವ್ವನನ್ನು ಬಾಲ್ಯದಲ್ಲೇ ಕಳಕೊಂಡಿರುವವರ ಪಾಡಂತೂ ಹೇಳಬಾರದು. ಅವ್ವ ಅಪ್ಪ ನಿಜ ಹೇಳೋದಂದ್ರೆ ಸತ್ತಿರಲ್ಲ. ನಮ್ಮೊಳಗೇ ಕೂತಿರ್ತಾರೆ. ಅವರನ್ನ ನೋಡಲೇ ಬೇಕು ಅಂದ್ರೆ ನಮ್ಮ ಮಕ್ಕಳಾಗಿ ಮತ್ತೆ ಒಡಮೂಡಿ ಬರ್ತಾರೆ. ಮಗಳು, ಅವ್ವನಂತೆ ಪ್ರೀತಿ ತೋರಬಲ್ಲಳು. ಅವ್ವನ ಪ್ರೀತಿ ಅನ್ನೋದು ಕಾಣದ ಸುವಾಸನೆ ಇದ್ದಂಗೆ. ಉಸಿರಾಟದ ಗಾಳಿ ಇದ್ದಂಗೆ. ಇದಕ್ಕೊಂದು ಲಗತ್ತಾಗಿರೋ ಆಧುನಿಕ ಕಥೆ ಹೇಳ್ತಿನಿ ಕೇಳಿ.
ಅಪ್ಪನ ಸಾವಿನ ನಂತರ ಆ ಹುಡುಗ ತನ್ನ ತಾಯೀನ ಅನಾಥಾಶ್ರಮಕ್ಕೆ ಸೇರಿಸಿದ. ಅಪ್ಪಿತಪ್ಪಿ ಈ ಕಡೆ ಬಂದ್ರೆ ತಾಯೀನ ಕ್ಷಣಕಾಲ ನೋಡಿ ಮಾತಾಡಿಸಿ ಹೋಗ್ತಿದ್ದ. ಅವನಿಗೆ ಕೆಲಸವೋ ಕೆಲಸ.  ಕಂಪ್ಯೂಟರ್, ಮೊಬೈಲು, ಸಿನಿಮಾ, ಶಾಪಿಂಗು, ಕ್ಲಬ್ಬು, ಪಾರ್ಟಿ, ಹೆಂಡತಿ, ಮಕ್ಕಳು, ಫ್ರೆಂಡ್ಸು ಇವರೆಲ್ಲರ ನಡುವೆ ಪಾಪ ಅವನಿಗೆ ಪುರುಸೊತ್ತೇ ಸಿಗುತ್ತಿರಲಿಲ್ಲ.
ಹೀಗಿರುವಾಗ ಒಂದಿನ ಅನಾಥಾಶ್ರಮದಿಂದ ಅವನಿಗೊಂದು ಫೋನು ಬಂತು. ಅಬ್ಬರದ ಗೆಳೆಯರ ಪಾರ್ಟಿಯ ನಡುವೆಯೂ ಅವನು ಫೋನನ್ನು ಎತ್ತಿಕೊಂಡ. ನಿಮ್ಮ ತಾಯಿಯ ಉಸಿರು ಯಾಕೋ ನಿಲ್ಲಂಗೆ ಕಾಣಿಸ್ತಾ ಇದೆ. ಆಕೆ ಕೊನೆ ಕ್ಷಣಗಳನ್ನು ಎಣಿಸ್ತಾ ಬಿದ್ದಿದ್ದಾಳೆ. ಈಗ್ಲೋ ಆಗ್ಲೋ  ಆಕೆ ಮಾತಾಡೋದನ್ನೂ ನಿಲ್ಲಿಸಿ ಬಿಡಬಹುದು. ನೀವು ಅರ್ಜೆಂಟಾಗಿ ಬಂದು ಬಿಡಿ. ಅವಳು ನಿಮಗೇನೋ ಹೇಳಬೇಕೂಂತ ಚಡಪಡಿಸ್ತಾ ಇದ್ದಾಳೆ.  ದಯವಿಟ್ಟು ಬೇಗ ಬನ್ನಿ. ತಡ ಮಾಡಬೇಡಿ.
ಇದನ್ನು ಕೇಳಿದ ಮಗ ಎಲ್ಲಾ ಬಿಟ್ಟು ಓಡೋಡಿ ಬಂದ. ಅರ್ಜೆಂಟಾಗಿ ಬರಲು ಹೇಳಿದೆಯಂತಲ್ಲ ಏನಮ್ಮಾ ವಿಷಯ ಎಂದು ಆರ್ದ್ರತೆಯಿಂದ ಕೇಳಿದ. ತಾಯಿ ತೊದಲುತ್ತಾ ಇಲ್ಲಿನ ರೂಮುಗಳಿಗೆ ಮೊದಲು ಫ್ಯಾನುಗಳನ್ನು ಹಾಕಿಸು. ಇಲ್ಲಿ ಸೆಖೆ ತುಂಬಾ ಜಾಸ್ತಿ. ತಡಕೊಳ್ಳೋಕೆ ಆಗಲ್ಲ. ಹಾಗೆಯೇ ಒಂದು ಹೊಸ ಫ್ರಿಜ್ಜನ್ನು ತಂದಿಡು. ಹಳಸಿದ ಊಟ ಉಣ್ಣಲಾಗದೆ ಅದೆಷ್ಟೋ ರಾತ್ರಿಗಳನ್ನು ನಾನು ಉಪವಾಸದಿಂದ ಮಲಗಿದ್ದೇನೆ. ಇಲ್ಲಿನ ಹಾಸಿಗೆಗಳು ಒರಟು, ತುಂಬಾ ಚುಚ್ಚುತ್ತವೆ. ಮೊದಲು ಇಲ್ಲಿಗೆ ಮೃದುವಾದ ಹಾಸಿಗೆಗಳನ್ನು ತಂದು ಹಾಕಿಸು.
ಮಗ ಕೇಳಿದ, ಅಲ್ಲಮ್ಮ ಇಲ್ಲಿ ಇಷ್ಟು ತೊಂದರೆಗಳಿದ್ದಾವೆ ಎಂದು ಈ ಮೊದಲು ಯಾಕೆ ನನಗೆ ಹೇಳಲಿಲ್ಲ. ಇಲ್ಲಿರುವವರೆಲ್ಲಾ ಇನ್ನು ಕೆಲವೇ ನಿಮಿಷಗಳಲ್ಲಿ ನೀನು ಸತ್ತು ಹೋಗುತ್ತೀಯ ಎಂದು ನಂಬಿ ನಿಂತಿದ್ದಾರೆ. ಅಂಥದ್ದದರಲ್ಲಿ ಇಷ್ಟೆಲ್ಲಾ ಸವಲತ್ತುಗಳನ್ನು ನಾನು ಯಾರಿಗಾಗಿ ಮಾಡಬೇಕಾಗಿದೆ ಹೇಳು. ನೀನೇ ಇರುವುದಿಲ್ಲ ಎಂದಮೇಲೆ ಸುಖಾಸುಮ್ಮನೆ ಇಷ್ಟೊಂದು ಖರ್ಚು ನಾನ್ಯಾಕೆ ಮಾಡಲಿ. ನಿನ್ನ ಮಾತೇ ನನಗೆ ಅರ್ಥವಾಗುತ್ತಿಲ್ಲ ಎಂದನು.
ಆಗ ತಾಯಿ ಮೆಲ್ಲಗೆ ಹೇಳಿದಳು. ನೀನು ಹೇಳುತ್ತಿರುವುದು ಸರಿ. ನಾನು ಸೆಖೆಯನ್ನು, ಹಸಿವನ್ನು, ನೋವನ್ನು, ಒಂಟಿತನವನ್ನು ಸಹಿಸಿಕೊಳ್ಳಬಲ್ಲೆ. ನಾನು ಬಡತನದ ಮನೆಯಿಂದ ಬಂದವಳು. ನಿಮ್ಮಪ್ಪನ ಸಾವಿನ ನಂತರ ಇದೆಲ್ಲಾ  ನನಗೆ ಇನ್ನೂ ಹೆಚ್ಚಾಗಿ ಅಭ್ಯಾಸವಾಗಿ ಹೋಯಿತು. ಆದರೆ ನನಗೆ ಹೆದರಿಕೆ ಇರುವುದು ನಿನ್ನ ಬಗ್ಗೆ ಮಗನೆ. ನೀನಿಲ್ಲಿಗೆ ಮುಂದೆ ಬಂದಾಗ ನಿನಗೆ ತೊಂದರೆಯಾಗಬಾರದಲ್ಲ!. ನಾನೆಷ್ಟಾದರೂ ನಿನ್ನ ತಾಯಿ ತಾನೇ? ಎನ್ನುತ್ತಾ ಪ್ರಾಣ ಬಿಡುತ್ತಾಳೆ. ಈ ಕಥೆ ತಾಯಿಯ ಗಾಢ ಪ್ರೀತಿಗೆ ಒಂದು ಉದಾಹರಣೆಯಲ್ವಾ?’ ಎಂದು ಹೇಳಿ ಸುಮ್ಮನೆ ನಿಂತೆ.
ಕಥೆ ಕೇಳಿದ ವಿದ್ಯಾರ್ಥಿಗಳೆಲ್ಲಾ ಒಂದು ಯೋಚನೆಗೆ ವಾಲಿ ಬಿದ್ದಂತೆ ಕಂಡರು. ನಾನು ಯಾವುದಾದರೂ ಗಂಡು ಪಿಳ್ಳೆ ನನ್ನ ಕರುಳು ಹಿಂಡುವ ಕಥೆಗೆ ಒಂದು ಹನಿ ಕಣ್ಣೀರು ಕೆಡವಬಹುದೆಂದು ಕಾದು ಎಲ್ಲರ ಕಣ್ಣುಗಳನ್ನೂ ಗುರಾಯಿಸಿದೆ. ಅವು ಕೊಂಚ ನೊಂದಂತೆ ಇದ್ದವೇ ಹೊರತು ಕಂಗೆಟ್ಟಿರಲಿಲ್ಲ. ಉದ್ದ, ಅಗಲ, ದಪ್ಪದ ನಿಟ್ಟುಸಿರುಗಳನ್ನು ಮಾತ್ರ ಚೆಲ್ಲಿ ನೆಟ್ಟಗೆ ಕೂತವು.
ಹಾಳಾದ ಗಂಡು ಮಕ್ಕಳಿಗೆ ಹೃದಯವೇ ಇಲ್ಲ ಎಂದು ಬೈದುಕೊಂಡು ಹುಡುಗಿಯರ ಕಡೆ ತಿರುಗಿದೆ. ನನ್ನ ಪುಣ್ಯಕ್ಕೆ ಕಥೆ ನಾಟಿದ ಹುಡುಗಿಯೊಬ್ಬಳು ಮುಸಿಮುಸಿ ಅಳುತ್ತಿದ್ದಳು. ಪರವಾಗಿಲ್ಲ ನನ್ನ ಕಥೆ ಕ್ಲಿಕ್ ಆಗಿದೆ ಎಂದು ಸಮಾಧಾನವಾಯಿತು. ಕಾರಣ ಗೊತ್ತಿದ್ದೂ ಯಾಕೆಂದು ವಿಚಾರಿಸಿದೆ. ‘ನಂಗೆ ತಾಯಿ ಇಲ್ಲ ಸಾರ್. ನೀವು ಹೇಳುವಾಗ ಅವರ ಚಿತ್ರ ನೆನಪಿಗೆ ಬಂದ್ಬಿಟ್ಟಿತು’ ಎಂದಳು. ಈ ಮಾತು ನನ್ನ ಕರುಳಿಗೂ ಚುಚ್ಚಿತು. ನಿನಗೆ ಕಂಪನಿ ಕೊಡಲು ನಾನಿದ್ದೇನೆ. ಹೆದರಬೇಡ. ನಂದೂ ನಿನ್ನ ಥರದ್ದೇ ಕೇಸು ಎಂದು ಧೈರ್ಯ ಹೇಳಿದೆ.
ಇಷ್ಟಾದರೂ ಈ ಕಥೆ ಒಬ್ಬ ಹುಡುಗನಿಗೂ ತಾಗಲಿಲ್ಲವಲ್ಲ. ಯಾವ ಮಗನೂ ಕಣ್ಣೀರು ಹಿಂಡಲಿಲ್ಲವಲ್ಲ. ಈ ವಿಷಯದಲ್ಲಿ ಹುಡುಗಿಯರೇ ವಾಸಿ. ಬೇಗ ಸ್ಪಂದಿಸುತ್ತಾರೆ. ಬೇಗ ಮರುಗುತ್ತಾರೆ. ಈ ಹುಡುಗರು ಕೊರಡುಗಳಿದ್ದಂತೆ ಎಂದು ಮನಸ್ಸಲ್ಲಿ ಶಪಿಸಿಕೊಂಡೆ.
ಪಾಠ ಮುಗಿಸಿ ಬಂದು ಕೂತ ಬಹಳ ಹೊತ್ತಿನ ನಂತರ ನಾಲ್ಕೈದು ಹುಡುಗರು ಬಂದರು. ಅವರ ಕಣ್ಣುಗಳು ನಿಜಕ್ಕೂ ತೇವವಾಗಿದ್ದವು. ಅಲ್ಲಿ ತರಗತಿಯಲ್ಲಿ ಹುಡುಗೀರ ಎದುರು ಫಕ್ಕನೆ ಅಳಲು ಅವಕ್ಕೆ ಕಷ್ಟವಾಗಿತ್ತು. ಹೀಗಾಗಿ ಒಟ್ಟಿಗೆ ಶೌಚಾಲಯಕ್ಕೆ ಹೋಗಿ ಅಲ್ಲಿ ನಿಂತು ಅವರವರ ತಾಯಂದಿರ ನೆನೆದು ಕಣ್ಣೀರು ಹಾಕಿದವು.
ಆಗ ನನಗೆ ತಿಳಿದ ಸತ್ಯ, ದುಃಖ ಎನ್ನುವುದು ಯಾವುದೋ ಕಥೆ ಕೇಳಿದ ತಕ್ಷಣಕ್ಕೆ ಉದುರಬೇಕಾಗಿಲ್ಲ. ಮನದೊಳಗೆ ಸುರಿಯುವ ಕಣ್ಣೀರು ಯಾರಿಗೂ ಕಾಣುವಂಥದ್ದಲ್ಲ. ಮನುಷ್ಯ ಅಳದೆಯೂ ತೀವ್ರವಾದ ದುಃಖವನ್ನು ತನ್ನೊಳಗೆ ಪ್ರಕಟಿಸಬಲ್ಲ. ಆದರೂ ಲೋಕದಲ್ಲಿ ನನ್ನಂಥ ಮೂರ್ಖರು ತಕ್ಷಣಕ್ಕೆ ಸುರಿಯುವ ಕಣ್ಣೀರಿಗೆ ಹೆಚ್ಚು ಬೆಲೆ ಕೊಟ್ಟು ಆದರಿಸುತ್ತಾರೆ. ಕಣ್ಣಿಗೆ ಕಾಣುವಂತೆ ಅಳುವವನೇ ನಿಜವಾದ ದುಃಖಿತ ಎಂದು ಭಾವಿಸುತ್ತಾರೆ.
‘ತಾಯಿ ಕಥೆ ಕೇಳಿ ನಿಮ್ಮ ಅಂತಃಕರಣ ಕರಗಿದ್ದರೆ ಒಳ್ಳೆಯದೇನೆ. ಆದರೆ ನನ್ನ ಬೇಜಾರಿರುವುದು ನೀವು ನಿಮ್ಮ ದುಃಖವನ್ನು ಆ ದರಿದ್ರ ನಾರುವ ಶೌಚಾಲಯದಲ್ಲಿ ಸುರಿಸಿದರಲ್ಲ ಆ ಜಾಗ ಸರಿಯಿಲ್ಲ ಕಂಡ್ರಯ್ಯ’ ಎಂದು ಅವರಿಗೆ ಪರಿಹಾಸ್ಯ ಮಾಡಿದೆ. ಮಿಡಿಯುವ ಮಕ್ಕಳ ನಿಶ್ಕಲ್ಮಶ ಮನಸ್ಸನ್ನು ಬಲು ಹತ್ತಿರದಿಂದ ನೋಡುವ ನನಗೆ ಅವರ ಬಗ್ಗೆ ಬಹಳಷ್ಟು ಸಾರಿ ಹೆಮ್ಮೆ ಎನಿಸುತ್ತದೆ. 
ಮತ್ತೊಂದು ದಿನ ಅಣ್ಣ ತಂಗಿಯ ಪ್ರೀತಿ ವಾತ್ಸಲ್ಯದ ಮೇಲೆ ಭಾಷಣ ಬಿಗಿದೆ. ಅಂಥದ್ದೇ ಕರುಳು ಹಿಂಡುವ ಮತ್ತೊಂದು ಕಥೆ ಹೇಳಿದೆ. ಅಣ್ಣ ತಂಗಿಗೆ ಎಷ್ಟು ಅಗತ್ಯ ಎಂದು ವಿವರಿಸಿದೆ. ನನ್ನ ಅಂದಾಜು ಸರಿಯಿತ್ತು. ಈ ವಿಷಯದಲ್ಲಿ ಅನಾಥಳಾದ ಒಬ್ಬಳು ಹುಡುಗಿ ಅಲ್ಲಿದ್ದಳು. ಅವಳ ಹೃದಯಕ್ಕೆ ನನ್ನ ಮಾತುಗಳು ನಾಟಿ ಕಣ್ಣುಗಳಲ್ಲಿ ಸಣ್ಣ ಮೋಡ ಹೊಗೆಯಾಡತೊಡಗಿತು. ‘ನಿನಗೆ ಅಣ್ಣ ಇಲ್ಲ ಅಲ್ಲವೇ? ಅಣ್ಣನ ಪ್ರೀತಿ, ವಾತ್ಸಲ್ಯ ನೆನಪಾಯಿತಲ್ಲವೇ?’ ಎಂದು ಪೌರಾಣಿಕ ನಾಟಕ ಶೈಲಿಯಲ್ಲಿ ಅವಳನ್ನು ಪ್ರಶ್ನಿಸಿದೆ. ಇಷ್ಟು ಖಚಿತವಾಗಿ ಅಳೋಕೆ ರೆಡಿಯಾಗಿದ್ದಾಳೆಂದರೆ ಅವಳಿಗಿದ್ದ ಒಬ್ಬಣ್ಣನೋ? ಇಲ್ಲಾ ತಮ್ಮನಿದ್ದವನೋ ಈಗ ಸತ್ತಿದ್ದಾನೆ ಎಂಬ ಹುಂಬ ಊಹೆ ನನ್ನದು. ಕರುಣಾಜನಕ ಕಥೆಗಳನ್ನು ಹೇಳಿ ಯಾರ್‍್ಯಾರ ಮನೆಯಲ್ಲಿ ಯಾರ್‍್ಯಾರು ಸತ್ತಿದ್ದಾರೆ? ಯಾರ್‍್ಯಾರು ಯಾರ್‍್ಯಾರನ್ನು ಕಳೆದುಕೊಂಡು ಅನಾಥರಾಗಿದ್ದಾರೆ, ಅವರ ಕಣ್ಣೀರಿನ ಹಿಂದೆ ಯಾರ ಸಾವಿದೆ ಎಂದು ಪತ್ತೆ ಹಚ್ಚುತ್ತಾ ನಿಲ್ಲುವುದು ಎಂಥ ಪರಮ ಮೂರ್ಖತನದ ಕೆಲಸವಲ್ಲವೇ? 
ಸದ್ಯ ಅವಳಣ್ಣ ನನ್ನ ಪ್ರಕಾರ ಸತ್ತಿರಲಿಲ್ಲ. ಮನೆ ಬಿಟ್ಟು ಓಡಿ ಹೋಗಿದ್ದನಷ್ಟೇ. ಮತ್ತೆ ಯಥಾ ಪ್ರಕಾರ ಪ್ರಕಾಂಡ ಮೂರ್ಖ ಪಂಡಿತನಾದ ನಾನು ‘ನಿನ್ನಣ್ಣ ಓಡೋಡಿ ಹೋಗಿದ್ದು ಯಾಕೆ’ ಎಂದು ಪ್ರಶ್ನಿಸಿದೆ. ಅದಕ್ಕವಳು ಅಯ್ಯೋ ಲೋಫರ್ ನನ್ಮಗ ಸಾರ್. ಒಂದು ಹುಡುಗಿ ಹಿಂದೆ ಓಡೋಗಿದ್ದಾನೆ ಎಂದು ರೋಷದಿಂದ ಹೇಳಿದಳು. ಕ್ಷಣದ ಹಿಂದೆ ಆಕೆಗಿದ್ದಿದ್ದು ಅಣ್ಣನಿಗಾಗಿ ಕಣ್ಣೀರು, ಈಗ ಅತ್ತಿಗೆ ಮೇಲಿನ ರೋಷದ ಬಿಸಿನೀರು. ‘ನೀನು ಭಲೇ ಹುಡುಗಿ ಕಣಮ್ಮ. ಮೇಷ್ಟ್ರು ಎದುರಿಗೆ ಹಂಗೆಲ್ಲಾ ಅಶ್ಲೀಲ ಪದಗಳ ಪ್ರಯೋಗ ಮಾಡಬಾರದು.
ಶಾಂತಚಿತ್ತಳಾಗಿ ನಿನ್ನ ದುಃಖದ ಹಿಂದಿರುವ ಕಥೆಯನ್ನು ಹೇಳು ಎಂದೆ. ಮತ್ತೆ ಅವಳ ಬೈಗುಳ ಶುರುವಾದವು. ‘ಆ ಬೇವರ್ಸಿ ಸಿಕ್ರೆ ಬರೀ ಬೈಯ್ಯೋದಲ್ಲ ಸಾರ್. ಪರಕೆ ಜೊತೆ ಚಪ್ಲಿ ಪೂಜೇನೂ ಆಗ್ತಾವೆ. ನನ್ನ ಕ್ಲೋಸ್ ಫ್ರೆಂಡು ಸಾರ್ ಅವಳು. ಮಳ್ಳಿ ಹಂಗೆ ನನ್ನ ಪಕ್ಕಾನೆ ಕೂತಿರೋಳು. ದಿನಾ ನನ್ನ ಜೊತೆಯಾಗೇ ಓಡಾಡ್ತಿದ್ಲು. ಅದ್ಯಾವ ಮಾಯದಲ್ಲಿ ನಮ್ಮಣ್ಣನ್ನ ಬುಟ್ಟಿಗೆ ಹಾಕ್ಕೊಂಡ್ಳೋ ಗೊತ್ತೇ ಆಗಲಿಲ್ಲ ಸಾರ್. ಅವಳು ಸಿಕ್ರೆ ಕೋಳಿ ಕತ್ತು ತಿರುಗಿಸಿದಂಗೆ ತಿರುಗ್ಸಿ ಅವಳ ಕತ್ತು ಮುರೀತೀನಿ ನೋಡ್ತಿರಿ ಸಾರ್’ ಎಂದು ಬುಸುಗುಟ್ಟಿದಳು. ಅಣ್ಣ ಹುಡುಗಿ ಹಿಂದೆ ಓಡಿಹೋದ ಎಂದು ಅಪ್‌ಸೆಟ್ ಆದ ಮೊದಲ ಹುಡುಗಿ ಇವಳೇ ಇರ್ಬೇಕು.
‘ನೀನು ಅವರಿಬ್ಬರು ಓಡಿ ಹೋಗಿದ್ದಕ್ಕೆ ಬೇಜಾರಾಗಿದ್ದಲ್ಲ! ನಿನಗೆ ಹೇಳದೆ, ಸುಳಿವು ಕೊಡದೆ ಹೋದ್ರು ಅನ್ನೋ ಬೇಜಾರ್ ನಿಂದು. ಹೋಗಲಿ ಬಿಡಮ್ಮ ಬಂದೇ ಬರುತ್ತಾರೆ’ ಎಂದು ಅವರ ಪರವಾಗಿ ನಾನೇ ಸಮಾಧಾನ ಹೇಳಿದೆ. ಆಪ್ತ ಗೆಳತಿಯಾದವಳು ಅತ್ತಿಗೆಯಾದಳಲ್ಲ ಎನ್ನುವ ಸಂತೋಷವೂ ಅವಳಿಗಿರಲಿಲ್ಲ. ಐನಾತಿ ತನ್ನ ಗೆಳೆತನ ಉಪಯೋಗಿಸಿಕೊಂಡು ತನ್ನಣ್ಣನನ್ನೇ ಎಗರಿಸಿದಳಲ್ಲ ಎಂಬ ಸಿಟ್ಟು ಆಕೆಗಿದ್ದಂತೆ ಕಂಡಿತು. ‘ಅಣ್ಣ ನನಗೇನೇನೋ ಕೊಡುಸ್ತಾ ಇದ್ದ ಸಾರ್. ಈ ರಂಡೆ ಸಿಕ್ಕ ಮೇಲೆ ಅವನು ನನ್ನ ಕಡೆ ತಿರುಗಿ ನೋಡ್ತಾನೆ ಅಂತಿರಾ ಸಾರ್?’ ಎಂದು ಜಾತಕಶಾಸ್ತ್ರದ ಪ್ರಶ್ನೆಯೊಂದನ್ನು ಎಸೆದಳು. ಇದ್ಯಾಕೋ ನನ್ನ ತಲೆಗೇ ಬರುತ್ತಿದೆ ಅಂತನ್ನಿಸಿತು. ಓಡಿ ಹೋದವನು ಇವರಣ್ಣ ಮತ್ತಿವಳ ಫ್ರೆಂಡ್. ನನಗೂ ಈ ಪರಾರಿಗೂ ಸಂಬಂಧವೇ ಇಲ್ಲ. ಅಂಥದ್ದರಲ್ಲಿ ಆ ಪ್ರೇಮಿಗಳ ಪರವಾಗಿ ನಾನ್ಯಾಕೆ ದಡ್ಡ ಶಿಖಾಮಣಿಯಂತೆ ಭರವಸೆ ಕೊಡುತ್ತಿದ್ದೇನೆ. ಇದು ನಾನು ಮಾಡುತ್ತಿರುವ ಮತ್ತೊಂದು ಮೂರ್ಖತನದ ಕೆಲಸವಲ್ಲವೇ? ಅಂತನ್ನಿಸಿತು.
ಹದಿಹರೆಯದ ಉಡಾಫೆ, ಒರಟುತನ, ಹುಡುಗಾಟಿಕೆಗಳ ಹುಸಿ ಜಾಗದಲ್ಲಿ ನೆನಪು, ಕರುಣೆ, ತಾಳ್ಮೆ, ನಮ್ರತೆಗಳ ಪಸಿ ಮೂಡಲು ದುಃಖದ ಕತೆಗಳಿದ್ದರೆ ಒಳ್ಳೆಯದಲ್ಲವೇ?

ಮಂಗಳವಾರ, ಡಿಸೆಂಬರ್ 2, 2014

ಬೀಜಿಂಗ್ ನಲ್ಲಿ ಮೈಲಾರದೇವ

-ಪುರುಷೋತ್ತಮ ಬಿಳಿಮಲೆ


ಹೂವಿನ ಹಡಗಲಿಯ ಸಮೀಪದ ಮಯಿಲಾರ ದೇವರು, ಮಹಾರಾಷ್ಟ್ರದಲ್ಲಿ ಖಂಡೋಬಾನಾಗಿ ಪ್ರಸಿದ್ಧ. ಈಗ ಬೀಜಿಂಗ್ ಮ್ಯೂಸಿಯಂನಲ್ಲಿ ಆತ ಪ್ರತ್ಯಕ್ಷನಾಗಿದ್ದಾನಂತೆ.ಇವನಿಗೆ ಮೂರು ಜನ ಹೆಂಡಂದಿರು, ಕೊಮಾಲಿ, ಕುರುಬತ್ತೆವ್ವ ಮತ್ತು ಗಂಗವ್ವ. ಗಂಗವ್ವ ತಿರುಪತಿ ತಿಮ್ಮಪ್ಪನ ಮಗಳು. ಕಾಸು ಬಿಡದ ತಿಮ್ಮಪ್ಪನಿಗೆ ಚಿಕ್ಕಾಸೂ ಕೊಡದೆ ಮೋಸದಿಂದ ಗಂಗಿಯನ್ನು ಮದುವೆಯಾದ ಮಯಿಲಾರ ದೇವರ ಕತೆಯ ಸೊಗಸನ್ನು ನಾನು ನನ್ನ ಕೂಡು ಕಟ್ಟು ಪುಸ್ತಕದಲ್ಲಿ ಬರೆದಿದ್ದೇನೆ. ಈಗ ಬೀಜಿಂಗ್ ಗೆ ಯಾಕೆ ಹೋದ? ಹೇಗೆ ಹೋದ? ಯಾರ ಜೊತೆ ಹೋದ? ಎಂದೆಲ್ಲಾ ಯೋಚಿಸಿ ತಲೆ ಕೆಡುತ್ತಿದೆ.

ಗೋಧಾವರಿಯ ತಟದಲ್ಲಿ ಆದಿವಾಸಿಗಳ 'ಕುಂಭಮೇಳ'!

-Koragerna Alipu Oripu
  ನವ ರಾಜ್ಯ - 'ತೆಲಂಗಾಣ'ದ, ವಾರಂಗಲ್ ಜಿಲ್ಲೆಯ ಮೆಡರಮ್ ಗ್ರಾಮದ ದಟ್ಟಾರಣ್ಯದ ಪಕ್ಕದಲ್ಲಿ ಹರಿಯುವ 'ಗೋಧಾವರಿ'ಯ ತಟದಲ್ಲಿ ಸಂಭ್ರಮದಿಂದ ಎರಡು ವರ್ಷಕ್ಕೊಮ್ಮೆ ಆಚರಿಸಲ್ಪಡುವ 'ಸಮ್ಮಕ್ಕ ಸಾರಕ್ಕ ಜಾತ್ರ' (ಜಾತ್ರೆ) 'ಆದಿವಾಸಿಗಳ ಕುಂಭಮೇಳ'ವೆಂದೇ ಪ್ರಸಿದ್ಧಿ ಪಡೆದಿದೆ!
ಫೆಬ್ರವರಿ ತಿಂಗಳ 12 ರಿಂದ 16ರ ಹುಣ್ಣಿಮೆಯ ರಾತ್ರಿವರೆಗೆ, ನಾಲ್ಕು ದಿನಗಳ ಕಾಲ ನಡೆಯುವ ಈ ಜಾತ್ರೆಗೆ ಒರಿಸ್ಸಾ, ಮಧ್ಯಪ್ರದೇಶ, ಸಿಮಾಂಧ್ರ, ಮಹರಾಷ್ಟ್ರ, ಜತ್ತೀಸು ಗಢ ಮತ್ತು ಕರ್ನಾಟಕದಿಂದಲೂ ಲಕ್ಷಾಂತರ ಆಧಿವಾಸಿಗಳು ಪಾಲ್ಗೊಳ್ಳುತ್ತಾರೆ. ಪ್ರಪಂಚದಲ್ಲಿಯೇ ಅತೀ ಹೆಚ್ಚು ಸಂಖ್ಯೆಯಲ್ಲಿ ಆದಿವಾಸಿಗಳು ಸೇರಿ ಸಂಭ್ರವಿಸುವ ಜಾತ್ರೆಯಿದು!
ಪ್ರತಾಪ ರುಧ್ರ ಎಂಬ ರಾಜನ ವಿರುದ್ಧ ಹೋರಾಡಿ ಮಡಿದ ಆದಿವಾಸಿ ಸಮುದಾಯದ 'ಸಮ್ಮಕ್ಕ ಸಾರಕ್ಕ' ಎಂಬ 'ತ್ಯಾಗಮಯಿ ತಾಯಿ ಮಗಳ' ಪ್ರತೀಕವಾಗಿ ದೇವಾಲಯ ನಿರ್ಮಾಣವಾಗಿದೆ. ಆದಿವಾಸಿಗಳು - ಉತ್ತಮ ಜೀವನ ಮತ್ತು ಸಂತಾನಭಿವೃದ್ಧಿಗಾಗಿ ಈ ದೇವತೆಗಳನ್ನು ಆರಾಧಿಸುತ್ತಾರೆ. ಇದೀಗ ರಾಜ್ಯ ಸರಕಾರದ ದತ್ತಿ ಇಲಾಖೆಯ ವತಿಯಿಂದ ಇಲ್ಲಿನ ಜಾತ್ರೆ ನಡೆಯಲ್ಪಡುತ್ತದೆ. ಆದಿವಾಸಿಗಳ ವೈವಿಧ್ಯಮಯ ಡೋಲು ವಾದನ ಮತ್ತು ಕುಣಿತಗಳನ್ನು ಇಲ್ಲಿ ಕಣ್ ತುಂಬಿಸಿಕೊಳ್ಳಬಹುದು.
- ಹೃದಯ

ಆದಿವಾಸಿಗಳ ಬದುಕಿನ ಅನಾವರಣ ತೆರೆದಿಡುವ ಅದ್ಭುತ ಸಂಗ್ರಹಾಲಯಗಳು

-Koragerna Alipu Oripu
   ಭಾರತದಲ್ಲಿ ಒಟ್ಟು 600ಕ್ಕೂ ಹೆಚ್ಚು ಆದಿವಾಸಿ ಬುಡಕಟ್ಟು ಪಂಗಡಗಳಿವೆ. ಪ್ರತಿಯೊಂದೂ ಬುಡಕಟ್ಟು ಪಂಗಡದ ಭಾಷೆ, ಆಚಾರ ವಿಚಾರ, ಸಂಪ್ರದಾಯ, ವೇಷಭೂಷಣ, ಜೀವನ ಪದ್ಧತಿ, ಆಹಾರ ಕ್ರಮ, ಹವ್ಯಾಸ, ಕಲೆ, ಆಭರಣ, ಸಂಸ್ಕೃತಿಕ ಮತ್ತು ಮನೊರಂಜನ ಪರಿಕರಗಳು ಪ್ರತಿಯೊಂದು ಕೂಡಾ ಭಿನ್ನ ವಿಭಿನ್ನ. ಒಂದು ಅದ್ಭುತ ಪ್ರಪಂಚದಂತಿರುವ, ಆದಿವಾಸಿಗಳ ಬದುಕಿನ ಪೂರ್ವ ಜೀವನದ ಪ್ರತಿಯೊಂದು ಪರಿಕರಗಳನ್ನು, ಚಿತ್ರಗಳನ್ನು, ಗತಿಸಿಹೋದ ಅವಶೇಷಗಳನ್ನು ಒಂದೇ ಸ್ಥಳದಲ್ಲಿ ನೋಡುವಂತಾದರೆ?! ಅದು ಹೇಗಿರಬಹುದು? ಒಮ್ಮೆ ಊಹಿಸಿ ನೋಡಿ... ಆಸ್ವಾದಿಸುವುದಾದರೆ, ಅಂಥಹ ಒಂದು ರಮ್ಯ ಲೋಕ, ಒಂದು ಅದ್ಭುತ ಸಂಗ್ರಹಾಲಯ ಭಾರತದ ಏಳು ನಗರಗಳಲ್ಲಿ ಪ್ರಕಾಶಿಸುತ್ತಿದೆ, ಸ್ಥಾಪಿಸಲ್ಪಟ್ಟಿದೆ. ನಮ್ಮ 'ಕೊರಗೆರ್ನ ಅಳಿಪು ಒರಿಪು' ಬಳಗ ಆ ಪ್ರಯುಕ್ತ ನಿಮಗಾಗಿ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದೆ...
1.
PUNE TRIBAL MESEUM
Queen Road,
Pune
Timing : 10.00 am to 5.00 pm
ಇಲ್ಲಿ ಪ್ರತಿಯೊಂದು ಆದಿವಾಸಿ ಪಂಗಡಗಳ ಜೀವನ ಕ್ರಮದ ದಾಖಲೆಗಳು ಮತ್ತು ಚಿತ್ರಣಗಳು, ಹಳೆಯ ಕಪ್ಪು ಬಿಳಿಪಿನ ಚಿತ್ರಗಳು, ಮಣ್ಣಿನಿಂದ ತಯಾರಿಸಿದ ಆಕಾರಗಳನ್ನು ನೋಡಿ ಆನಂದಿಸಬಹುದು. 'ಕೊರ್ರೆ ಕಡ್ಡಾಯಿ' (ಕೊರಗರ ಡೋಲು), ಕಂರ್ಡೆ (ಚೆಂಡೆ), ಕೊರಲ್ (ಕೊಳಲು), ಚಾವಲ (ತಾಳ), ಸೇರಿದಂತೆ ಮುನ್ನೂರಕ್ಕೂ ಹೆಚ್ಚು ಶೈಲಿಯ ಆದಿವಾಸಿ ಡೋಲುಗಳ ಅದ್ಭುತ ಸಂಗ್ರಹವಿದೆ! ಆದಿತ್ಯವಾರವೂ ತೆರೆದಿರುತ್ತದೆ.
2.
TRIBAL MESEUM - Bharatiya Adimjati Sevak Sangh,
Thakkar Bap Smarak Sadan,
Dr. Ambedkar Marg,
Link Road, New Delhi.
Phon : +91 11 23625492
Fax : +91 11 23532003
Timing : 11.00 am to 2.30 pm
ಇಲ್ಲಿ ಪ್ರತೀ ಆದಿವಾಸಿ ಪಂಗಡದ ಕುರಿತಾಗಿ ಪ್ರಕಟಗೊಂಡ ಅಧ್ಯಯನ ವರದಿಗಳನೊಳಗೊಂಡ ಗೃಂಥಾಲಯವೂ ಇದೆ. ಆದಿತ್ಯವಾರವೂ ತೆರೆದಿರುತ್ತದೆ.
3.
STATE TRIBAL MESEUM
Tribal Reserch Institute,
Circular Road,
Chhindwara District,
Madhya Pradesh
Timing : 10.30 am to 5.00 pm
ಆದಿತ್ಯವಾರವೂ ತೆರೆದಿರುತ್ತದೆ.
4.
TRIBAL MUSEUM AHMEDABAD
Tribal Research & Trining Institute,
Gujarat Vidhyapit, Ahmedbad
Timing : 11.00 am to 5.30 pm
Saturday : 11.00 am to 4.30 pm
ಇಲ್ಲಿ ಆದಿವಾಸಿ ಬುಡಕಟ್ಟು ಪಂಗಡಗಳ ಕಿರು ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಆದಿತ್ಯವಾರ ಹಾಗು ಸರಕಾರಿ ರಜಾ ದಿನದಂದು ತೆರೆದಿರುವುದಿಲ್ಲ.
5.
TRIBAL MESEUM BHUBANESWAR,
Backside Of Jagannath Temple,
Koraput, Orissa
Timing : 10.00 am to 5.00 pm
6.
BHARTIYA LOK KALA MESEUM
Udaipur, Rajasthan
Timing : 9.00 am to 5.00 pm
Evening show 6.00 pm to 7.00pm
ಆದಿತ್ಯವಾರವೂ ತೆರೆದಿರುತ್ತದೆ.
7.
TRIBAL MESEUM OOTY
Tribal Reserch Centre,
Muthorai Palada,
Ooty, Tamilnadu
ಆದಿತ್ಯವಾರವೂ ತೆರೆದಿರುತ್ತದೆ.
ಒಮ್ಮೆ ಭೇಟಿ ನೀಡಿ...
- ಹೃದಯ
Like ·  · 

ಎಂಜಲೆಲೆಯ ಮೇಲೆ ಹೊರಳಾಡುವ 'ನಂಬಿಕೆಯ ಬಲಿಪಶುಗಳು'



-Koragerna Alipu Oripu
   ಈ ದೇಶದಲ್ಲಿ ಗುಡಿ - ಗುಂಡಾರ, ಮಂದಿರ - ಮಸೀದಿ, ಚರ್ಚು - ಬಸದಿ, ಸ್ತೂಪ - ಧೂಪ, ದರ್ಗ - ಬನಗಳಿಗೆ ಯಾವ ಕೊರತೆಯೂ ಇಲ್ಲ. ಹೀಗಿದ್ದರೂ ಅವುಗಳ ಸಂಖ್ಯಾಸ್ಪೋಟ ಏರುಗತಿಯಲ್ಲಿದೆ. ಅರ್ಚನೆ, ಆರಾಧನೆ, ಪೂಜೆ, ಯಾಗ, ಯಜ್ಙಾದಿ, ಪುರಸ್ಕಾರಗಳು ನಿರಂತರವಾಗಿ ನಡೆಯುತ್ತಲೇ ಇದೆ. ಇಷ್ಟಾದರೂ ಈ ಸಮಾಜದಲ್ಲಿ ಧರ್ಮ ಎನ್ನುವುದು ಶೋಕಿಗಾಗಿ ಎಂಬಂತಾಗಿದೆ. 'ಅಧರ್ಮವೇ ಧರ್ಮ'ವೆಂಬಂತೆ ತಾಂಡವವಾಡುತ್ತಿದೆ. ಅರಾಜಕತೆ, ಅನೀತಿ, ಅನ್ಯಾಯಗಳು, ಅಕ್ರಮಗಳು ಅಪಾಯಕಾರಿ ಮಟ್ಟವನ್ನು ದಾಟಿ ಹೋಗಿದೆ. ಧರ್ಮ ಸನ್ನಿಧಿಯಲ್ಲಿ ಅಕೃತ್ಯಗಳ ಸರಮಾಲೆಯೇ ಜರಗುತ್ತಿದೆ.
ಉತ್ಕಟ ಸ್ವಾಭಿಮಾನ ಮತ್ತು ಅಚಲ ಇಚ್ಛಾಶಕ್ತಿ ಇಲ್ಲದ ಮುಗ್ಧರನ್ನು ಯಾರೂ ಬೇಕಾದರೂ ತಮ್ಮ ಗುಲಾಮರನ್ನಾಗಿ ಮಾಡುತ್ತಾರೆ! ಭಕ್ತಿಯ ಪರಾಕಾಯ ಸ್ಥಿತಿಗೆ ಆಹುತಿಯಾಗುವವರು ಕೂಡಾ ಮುಗ್ಧರೆ. ನಂಬಿಕೆಗಿಂತಲೂ - ಮೂಢನಂಬಿಕೆ, ಗಾಢನಂಬಿಕೆ, ಕುರುಡುನಂಬಿಕೆ, ಅಚಲನಂಬಿಕೆಗಳು ಹೆಚ್ಚು ಅಪಾಯಕಾರಿ. ಬೆಳಿಗ್ಗೆ ಏಳುವಲ್ಲಿಂದ (ದೇಹದ ಬಲ ಮಗ್ಗುಲಿನಿಂದ ಏಳಬೇಕು!), ರಾತ್ರಿ ಮಲಗುವವರೆಗೂ (ಇಂತಹ ದಿಕ್ಕಿಗೆ ತಲೆ ಹಾಕಿ ಮಲಗಬಾರದು) ಸಂಪ್ರದಾಯಗಳು, ಕಟ್ಟುಪಾಡುಗಳು ಮುಗ್ಧರನ್ನು ತಮಗರಿವಿಲ್ಲದಂತೆ ಕಟ್ಟಿಹಾಕಿವೆ.
ಮೇಲಾಗಿ, ಅನಾಥ ಹೆಣವನ್ನೂ ಸಂಪ್ರದಾಯವಾಗಿ ಶುಚಿಗೊಳಿಸಿ, ಗೌರವಪೂರ್ವಕ ಅಂತ್ಯ ಕ್ರಿಯಾದಿಗಳ ಸಂಪ್ರದಾಯದ ಉತ್ಕಷ್ಟತೆಯನ್ನು ಪಾಲಿಸಿಕೊಂಡು ಬರುತ್ತೇವೆ. ಆದರೆ, ದೇವರ ಸನ್ನಿಧಿಯಲ್ಲಿ ಎಂಜಲೆಲೆಯ ಮೇಲೆ ಹೊರಳಾಡಿ ದೇಹವನ್ನೆಲ್ಲಾ ನಂಬಿಕೆಯ ಹೆಸರಿನಲ್ಲಿ ಮೈಲಿಗೆ ಮಾಡಿಕೊಳ್ಳತ್ತೇವೆ. ಹೆಣಕ್ಕಿಂತಲೂ ಕಡೆಯಾಗುತ್ತೇವೆ. ಜನರನ್ನು ದೇವರ ಹೆಸರಿನಲ್ಲಿ, ನಂಬಿಕೆಯ ಹೆಸರಿನಲ್ಲಿ ಸುಲಭವಾಗಿ ಶೋಷಿಸುವ ವರ್ಗವೇ ಈ ನಾಡಿನಲ್ಲಿದೆ. ನಾವಿರುವುದು ಯಾವ ಕಾಲದಲ್ಲಿ?
ಮನುವಿನ ಸಿದ್ಧಾಂತ - ಮನದಿಂದ ಹೊರಹಾಕದಿದ್ದರೆ, ಮನುಜನಾಗಿ ಏಳುವುದು ಕಷ್ಟ ಸಾಧ್ಯ. ಕಪಟ ಪುರೋಹಿತರು, ಕಾವಿಧಾರಿಗಳು ಮತ್ತು ರಾಜಕೀಯ ಫುಡಾರಿಗಳ ಮುಂದೆ ಕೈ ಮುಗಿದು ನಿಲ್ಲುವ ಮತ್ತು ಕಾಲಿಗೆರಗುವ ಜನ ಸಾಮಾನ್ಯ ಮುಗ್ಧರಲ್ಲಿ ಸ್ವಾಭಿಮಾನದ ಅರಿವು ಮೂಡಿಸದೆ ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕಲು ಸಾಧ್ಯವಿಲ್ಲ. ಹಾಗಿಲ್ಲದಿದ್ದರೆ ಮಾಡುವ ಹೋರಾಟಗಳು ಹೂಡುವ ಚಳುವಳಿಗಳು ಗರ್ಭಪಾತಕ್ಕೀಡಾಗಬಹುದು.
- ಹೃದಯ
Hrudhaya Mangalore.