ಮಂಗಳವಾರ, ಸೆಪ್ಟೆಂಬರ್ 2, 2014

ಸಮಾಜಕ್ಕೆ ಯಾರ ಕೊಡುಗೆ ದೊಡ್ಡದು ಸ್ವಾಮಿ?


-ಶಶಿಧರ ಹೆಮ್ಮಾಡಿ
ನಮ್ಮಲ್ಲಿ ಕಳೆದ ಹಲವಾರು ವರ್ಷಗಳಿಂದ ಒಂದು ಚಾಳಿ ಚಾಲ್ತಿಯಲ್ಲಿದೆ. ರಾಜಕಾರಣಿಗಳು ಮತ್ತು ಗಣ್ಯರು ಕೆಲವು ನಿರ್ದಿಷ್ಟ ಜಾತಿಯವರು ಸಂಘಟಿಸಿದ ಸಮಾರಂಭಗಳಿಗೆ ಹೋಗೋದು ಮತ್ತೆ ಅಲ್ಲಿ ಹೋಗಿ ಸಮಾಜಕ್ಕೆ ನಿಮ್ಮ ಜಾತಿಯ/ಧರ್ಮದ ಕೊಡುಗೆ ದೊಡ್ಡದು ಎಂದು ಭಾಷಣ ಮಾಡುವುದು ಮತ್ತೆ ಅಲ್ಲಿ ನೆರೆದಿರುವ ಆಯಾ ಜಾತಿ ಬಾಂಧವರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವುದು. ಮರುದಿನ ಪತ್ರಿಕೆಗಳಲ್ಲಿ 'ಸಮಾಜಕ್ಕೆ ___ ಜಾತಿಯ/ಬಾಂಧವರ ಕೊಡುಗೆ ದೊಡ್ಡದು' ಎಂದು ಸುದ್ದಿ ಬರುವುದು.

ಈ ಜಾತಿ/ಧರ್ಮಗಳ ಕೊಡುಗೆ ದೊಡ್ಡದು ಅಂತ ಒಪ್ಪಿಕೊಳ್ಳೋಣ. ಅದಕ್ಕೆ ನನ್ನ ತಕರಾರು ಏನೂ ಇಲ್ಲ. ಆದರೆ ಸ್ವಾಮಿ, ಮಂಗ್ಳೂರು, ಬೆಂಗ್ಳೂರು ತರಹದ ನಗರಗಳನ್ನ ಕಟ್ಟುತ್ತಿರುವ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರು, ಬಿಹಾರ, ಒರಿಸ್ಸಾ ಮುಂತಾದ ಕಡೆಯ ಶ್ರಮಿಕರು ಈ ನಾಡಿಗೆ ಕೊಡುತ್ತಿರುವ ಕಾಣಿಕೆ-ಕೊಡುಗೆಗಳ ಬಗ್ಗೆ ನೀವು ಎಂದಾದರೂ ಮಾತಾಡಿದ್ದೀರಾ ಸ್ವಾಮಿ? 
 ಅವರ ಬಗ್ಗೆ ಒಂದೆರಡು ಒಳ್ಳೆಯ ಮಾತು ಹೇಳಿದ್ದೀರಾ ಸ್ವಾಮಿ? ಅವರ ಕಠಿಣ ಶ್ರಮ-ಪ್ರಾಮಾಣಿಕತೆ-ದುಡಿಮೆಯನ್ನ, ಅವರ ಕೊಡುಗೆಯನ್ನ ಎಂದಾದರೂ ಕೊಂಡಾಡಿದ್ದೀರಾ ಸ್ವಾಮಿ? ಈ ನಿರ್ಮಾಣ ಕಾರ್ಯಗಳಲ್ಲಿ ತಮ್ಮ ಪ್ರಾಣವನ್ನೂ ಸಹ ಬಲಿಕೊಟ್ಟವರ ಬಲಿದಾನಗಳನ್ನ ಎಂದಾದರೂ ಸ್ಮರಿಸಿದ್ದೀರಾ ಸ್ವಾಮಿ? ಸಮಾಜಕ್ಕೆ ಈ ದಮನಿತ ತಳ ಸಮುದಾಯಗಳ ಕೊಡುಗೆಗೆ ಸಾಟಿ ಯಾವುದಾದರೂ ಇದೆಯೆ ಸ್ವಾಮಿ?

ಹೆಬ್ಬೆಟ್ಟೊತ್ತುವ ಹೊಸ ತಲೆಮಾರು!



-ನಟರಾಜ ಹುಳಿಯಾರ್

ಸೌಜನ್ಯ:ಪ್ರಜಾವಾಣಿ


ಕಳೆದೊಂದು ವಾರದಿಂದ ‘ಹೊಸ ತಲೆ­ಮಾರು’ ಎನ್ನುವುದನ್ನು ವಿವರಿಸಿಕೊಳ್ಳು­ವುದು ಹೇಗೆ ಎಂದು ಮಿತ್ರರನ್ನು ಕೇಳುತ್ತಲೇ ಇದ್ದೆ. ‘ಈಗ ಹದಿನೆಂಟರಿಂದ ಇಪ್ಪತ್ತೈದು ವರ್ಷ­ದೊಳಗೆ ಇರುವವರನ್ನು ಹೊಸ ತಲೆಮಾರು ಎನ್ನಬಹುದು’ ಎಂದು ಒಬ್ಬರು ಹೇಳಿದರು. ಮೊನ್ನೆ ನಡೆದ ಚುನಾವಣೆಯಲ್ಲಿ ಹೊಸ ತಲೆ­ಮಾರು ಚುನಾವಣೆಯ ದಿಕ್ಕನ್ನೇ ಬದಲಿಸಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದರು.
‘ಕನ್ನಡ ಲೇಖಕ, ಲೇಖಕಿಯರ ಹೊಸ ತಲೆ­ಮಾರು ಹೇಗಿದೆ?’ ಎಂದು ಕೇಳಿದರೆ, ‘ಈ ತಲೆ­ಮಾರಿನ ಲೇಖಕ,ಲೇಖಕಿಯರಿಗೆ ಮಹತ್ವಾಕಾಂಕ್ಷೆ­ಯಿಲ್ಲ’ ಎಂದು ಒಬ್ಬರು ಹೇಳುತ್ತಿದ್ದರು. ‘ದೆಹ­ಲಿಯ ಹೊಸ ತಲೆಮಾರು ‘ಆಮ್ ಆದ್ಮಿ’ಯಂಥ ಹೊಸ ಪಕ್ಷವನ್ನು ರೂಪಿಸಿ ಗೆಲ್ಲಿಸಿತು. ಅಂಥ­ದೊಂದು ರಾಜಕೀಯ ಪ್ರಜ್ಞೆ ಕರ್ನಾಟಕದ ಹೊಸ ತಲೆಮಾರಿಗಿಲ್ಲ’ ಎಂದು ಇನ್ನೊಬ್ಬರು ಗೊಣಗುತ್ತಿದ್ದರು. ‘ಈ ಹೊಸಬರು ಫೇಸ್ ಬುಕ್ಕಿ­ನಲ್ಲಿ ಮುಳುಗಿ ನಾರ್ಸಿಸಿಸ್ ಕಾಂಪ್ಲೆಕ್ಸಿನಿಂದ ಬಳ­ಲುತ್ತಿದ್ದಾರೆ’ ಎಂದು ಮತ್ತೊಬ್ಬರು ರೇಗಿದರು. ‘ಈಚೆಗೆ ಮಾಧ್ಯಮ ಸೇರಿರುವ ಪತ್ರಕರ್ತ, ಪತ್ರಕರ್ತೆಯರು ಹೇಗಿದ್ದಾರೆ?’ ಎಂದು ಕೇಳಿದರೆ, ‘ಅವರಿಗೆ ಬದ್ಧತೆ ಕಡಿಮೆ’ ಎಂದು ಹಿರಿಯ ಪತ್ರ­ಕರ್ತರು ಆಕ್ಷೇಪಿಸುತ್ತಿದ್ದರು.  ‘ಯಾಕೆ ಹೀಗಂತೀರಿ? ಕಳೆದ ಕೆಲವು ವರ್ಷಗಳಿಂದ ಅನೇಕ ದುಷ್ಟ ರಾಜಕಾರಣಿಗಳನ್ನು ಮನೆಗೆ ಕಳಿಸಲು ಟೀವಿ ಚಾನಲ್ಲುಗಳ ಹುಡುಗ-- ಹುಡುಗಿಯರೂ ಕಾರಣರಲ್ಲವೆ?’ ಎಂದಾಗ ಅದನ್ನು ಒಪ್ಪುವ­ವರೂ ಇದ್ದರು.
ಮೊನ್ನೆ ಭಾನುವಾರ ಕೊಟ್ಟೂರಿನಲ್ಲಿ ‘ನಾವು ನಮ್ಮಲ್ಲಿ’ ಬಳಗ ಹೊಸ ತಲೆಮಾರನ್ನು ಕುರಿತು ನಡೆಸಿದ ವಿಚಾರ ಸಂಕಿರಣದಲ್ಲಿ ಮೇಲಿನ ಅಭಿ­ಪ್ರಾ­ಯಗಳ ಮರುದನಿಗಳು ಮತ್ತೆಮತ್ತೆ ಸುಳಿ­ಯು­ತ್ತಿದ್ದವು. ಇವೆಲ್ಲದರ ನಡುವೆ  ಗೊಂದಲ­ಗ­ಳಲ್ಲಿ, ಹೊಸ ನಿರೀಕ್ಷೆಯಲ್ಲಿ ಹೊಸ ತಲೆಮಾರಿನ ಲೇಖಕ, ಲೇಖಕಿಯರು ಕೂತಿದ್ದರು. ಇನ್ನೊಂದು ಪರ್ಯಾಯ ಕೊಡುವ ಬದ್ಧತೆ­ಯಿದ್ದರೆ ಎಂಥ ರಾಜಕೀಯ ಬದಲಾವಣೆಯ­ನ್ನಾದರೂ ಹೊಸ ತಲೆ­ಮಾರು ತರಬಹುದು ಎಂದು ಸಾಧಿಸಿ ತೋರಿ­ಸಿದ ಯುವ ರಾಜಕಾರಣಿಗಳಿದ್ದರು. ಅದರ ಜೊತೆಗೇ, ಹೊಸ ತಲೆಮಾರಿನಲ್ಲಿ ಗಟ್ಟಿಯಾದ ನಾಟಕ, ಪದ್ಯ ಬರುತ್ತಿಲ್ಲ ಎನ್ನುವ ಹಿಂದಿನ ಪೀಳಿಗೆಯವರಿದ್ದರು. ಈ ಹೊಸ ತಲೆ­ಮಾರಿಗೆ ಖಚಿತ ವೈಚಾರಿಕ ಚೌಕಟ್ಟುಗಳು ಬೇಕು ಎನ್ನುವ ಮಾರ್ಕ್ಸ್‌ವಾದಿ ನಾಯಕರಿದ್ದರು.

ಈ ಕಾಲದ ಕರ್ನಾಟಕದ ಹೊಸ ಸೂಕ್ಷ್ಮಜ್ಞರ  ಬಿಕ್ಕಟ್ಟು ಹಾಗೂ ಹುಡುಕಾಟಗಳು ಅಲ್ಲಿ ತೇಲಿ ಬರುತ್ತಿದ್ದವು. ಇವತ್ತಿಗೂ ಹೊಸ ತಲೆಮಾರಿನ ಲೇಖಕನಂತೆ ಅಡ್ಡಾಡುವ ನನಗೆ ಇವೆಲ್ಲ ನನ್ನ ಹಿರಿ­ಯರು ನನಗೇ ಹೇಳಿದ ಮಾತುಗಳ  ಮರುದನಿ­ಗಳಂತಿದ್ದವು! ಎಷ್ಟು ತಲೆಮಾರುಗಳು ಕಳೆದರೂ ಆಕ್ಷೇಪಣೆಯ ಭಾಷೆ ಮತ್ತು ಧ್ವನಿ ಬದಲಾಗು­ವುದೇ ಇಲ್ಲ ಅನ್ನಿಸಿತು!  ಆದರೂ ಇಲ್ಲಿನ ಅನೇಕ ಪ್ರತಿಕ್ರಿಯೆಗಳಲ್ಲಿ ನಿಷ್ಠುರ ಸತ್ಯಗಳೂ ಅಪೂರ್ಣ ಗ್ರಹಿಕೆಗಳೂ ಇದ್ದವು. ಹಳೆಯ ತಲೆಮಾರಿನ­ವ­ರಿಗೆ ಹೊಸ ತಲೆಮಾರು ತಮ್ಮಂತೆ ಆಗಬೇಕು ಎಂಬ ನಿರೀಕ್ಷೆಯ ಜೊತೆಗೆ ಅದು ತಮ್ಮಂತೆ ಇಲ್ಲವಲ್ಲ ಎಂಬ ಬೇಗುದಿಯೂ ಇತ್ತು. ‘ನಾವು ನಿಮ್ಮಂತೆ ಇಲ್ಲ; ನಮಗೆ ಬೇರೆಬೇರೆ ಒತ್ತಡಗಳಿವೆ. ನಮ್ಮನ್ನು ನೀವು ಅರ್ಥ ಮಾಡಿಕೊಂಡಿಲ್ಲ’ ಎಂದು ಹೊಸಬರು ದೂರುತ್ತಿದ್ದರು.
ಒಂದಂತೂ ಸ್ಪಷ್ಟವಾಗಿತ್ತು: ಪರಿಚಿತ ಭಾಷೆ­ಗಿಂತ ಭಿನ್ನವಾದ ಇನ್ನೊಂದು ಭಾಷೆಯನ್ನು ಬಳ­ಸುವ ತಲೆಮಾರು ನಮ್ಮ ಕಣ್ಣೆದುರೇ ಸೃಷ್ಟಿಯಾ­ಗುತ್ತಿತ್ತು. ‘1920ನೆಯ ಇಸವಿಯ ಹೊತ್ತಿಗೆ ಮನುಷ್ಯ ಸ್ವಭಾವ ಬದಲಾಯಿತು’  ಎಂದು ಹಿಂದೊಮ್ಮೆ ಪಶ್ಚಿಮದಲ್ಲಿ ನಿಂತು ವರ್ಜೀನಿಯಾ ವುಲ್ಫ್ ಹೇಳಿದ್ದಳು. ವುಲ್ಫ್  ಮಾತಿನ ಹಿನ್ನೆಲೆ­ಯಲ್ಲಿ ನಮ್ಮ ಕಾಲವನ್ನು ನೋಡುತ್ತಿದ್ದರೆ, 1990ರ ನಂತರ ಮನುಷ್ಯ ಸ್ವಭಾವದಲ್ಲಿ ದೊಡ್ಡ ಬದಲಾವಣೆಯುಂಟಾಗಿದೆ ಎನ್ನಿಸತೊಡ­ಗಿತು. ಆದ್ದರಿಂದ ಈ ಕಾಲದ ಬೆಳವಣಿಗೆಗಳನ್ನು ಕೊಂಚ ಬೇರೆಯದೇ ರೀತಿ ಅರಿಯಬೇಕೆನ್ನಿಸ­ತೊಡಗಿತು.
ಹೀಗೆಂದುಕೊಂಡು ನೋಡಲೆತ್ನಿಸಿದರೆ ಈ ಕಾಲದ ಅನೇಕ ವಿಕಾರಗಳ ಜೊತೆಗೇ ಇದೀಗ ಕನ್ನಡದಲ್ಲಿ ಬರವಣಿಗೆಯಲ್ಲಿ ತೊಡಗಿರುವ ಸೂಕ್ಷ್ಮಜ್ಞರಲ್ಲಿ ಕೆಲವು ವಿಶೇಷ ಗುಣಗಳು ಕಾಣತೊಡಗಿದವು: ಕನ್ನಡದಲ್ಲಿ ಸಹಜ ಜಾತ್ಯ­ತೀತ ತಲೆಮಾರೊಂದು ಸೃಷ್ಟಿಯಾದಂತಿತ್ತು. ಸಮಾನತೆಯ ತುಡಿತ; ಕೋಮುವಾದ, ಲಿಂಗ ತಾರತಮ್ಯ, ಅಸ್ಪೃಶ್ಯತೆಗಳ ವಿರುದ್ಧದ ದನಿಗಳು ಇಲ್ಲಿ ಖಚಿತವಾಗಿ ಕಾಣುತ್ತಿದ್ದವು. ಸ್ತ್ರೀವಾದದ ಸತ್ವವನ್ನು ಸಹಜವಾಗಿ ಹೀರಿಕೊಂಡಂತೆ ಆತ್ಮ­ವಿಶ್ವಾಸದಲ್ಲಿರುವ ಹುಡುಗಿಯರಿದ್ದರು. ರಂಗ­ಭೂಮಿಯಲ್ಲಿ ಗಂಭೀರವಾಗಿ ತೊಡಗಿ ಸೂಕ್ಷ್ಮ­ವಾಗಿ ಯೋಚಿಸುವ ನಟನಟಿಯರಿದ್ದರು. ಈ ತಲೆ­ಮಾರು ಕನ್ನಡದಲ್ಲಿ ಕಳೆದ ನೂರು ವರ್ಷ­ಗಳಿಂದ ನಡೆದ ಸಮಾನತೆಯ ಚರ್ಚೆಗಳ ಸಾರ­ವನ್ನು ಮೇಲ್ಪದರದಲ್ಲಾದರೂ ಗ್ರಹಿಸಿ ಒಪ್ಪಿ­ದಂತಿತ್ತು. ಅಂತರ್ಜಾತೀಯ ವಿವಾಹಗಳು ಹಿಂದಿ­ಗಿಂತ ಹೆಚ್ಚತೊಡಗಿರುವ ಸನ್ನಿವೇಶವೂ ನಮ್ಮೆ­ದು­ರಿಗಿತ್ತು.
ಆದರೆ  ಈ ಎಲ್ಲ ಸಮಾನತೆಯ ತತ್ವಗಳನ್ನೂ ತನ್ನ ಕಾಲದಲ್ಲಿ ಆಳವಾಗಿ ಗ್ರಹಿಸಿ ಮರು ವಿವ­ರಿ­ಸುವ ಸವಾಲೂ ಈ ತಲೆಮಾರಿಗಿದೆ. ಅದು ಮಾರ್ಕ್ಸ್, ಗಾಂಧಿ, ಲೋಹಿಯಾ, ಅಂಬೇಡ್ಕರ್ ಎಲ್ಲರನ್ನೂ ತನ್ನ ಕಾಲದಲ್ಲಿ ಮತ್ತೆ ವಿವರಿಸಿಕೊಳ್ಳ­ಬೇಕಾಗುತ್ತದೆ. ಈ ಬಗೆಯ ಚಿಂತನೆಗಳನ್ನು ನಾಶ ಮಾಡಲು ಫೆಲೋಶಿಪ್ಪುಗಳು, ಗ್ರ್ಯಾಂಟುಗಳು ಬರುತ್ತಿರುವ ಈ ಕಾಲದಲ್ಲಿ ಆ ಮುಲಾಜುಗಳಿಗೆ ಒಳಗಾಗದೆ ಸ್ವತಂತ್ರವಾಗಿ ಸಂಶೋಧನೆ ಮಾಡುವ ಪಡೆಯೇ ತಯಾರಾಗಬೇಕಾಗುತ್ತದೆ.
ಪ್ರತಿ ತಲೆಮಾರೂ ತನ್ನ ಸಾಹಿತ್ಯದ ಸಮರ್ಥ­ನೆ­ಯನ್ನೂ ವಿಮರ್ಶೆಯ ಸೂತ್ರಗಳನ್ನೂ ಪರಿಶ್ರಮ­ದಿಂದ ರೂಪಿಸಿಕೊಳ್ಳಬೇಕಾಗುತ್ತದೆ. ತಾನು ಹಿಂದಿ­ನವರಿಗಿಂತ ಭಿನ್ನವಾಗಿ ಬರೆಯಬೇಕು ಎಂಬ ಹೊಸ ತಲೆಮಾರಿನ ತಹತಹ ಕೇವಲ ಇವತ್ತಿ­ನದಲ್ಲ. ‘ಅನ್ಯರೊರೆದುದನೆ ಬರೆದುದನೆ ನಾ ಬರೆ­ಬರೆದು ಬಿನ್ನಗಾಗಿದೆ ಮನವು; ಬಗೆಯೊಳಗನೇ ತೆರೆದು  ನನ್ನ ನುಡಿಯೊಳೆ ಬಣ್ಣ ಬಣ್ಣದಲಿ ಬಣ್ಣಿ­ಸುವ ಪನ್ನತಿಕೆ ಬರುವನಕ ನನ್ನಬಾಳಿದು ನರಕ’ ಎಂಬ ತಳಮಳ ಹದಿಹರೆಯದ ಕವಿ ಅಡಿಗ­ರಲ್ಲೂ ಇರಬಹುದು; ಇಂಥ ದೊಡ್ಡವರೆದುರು ಬರೆ­ಯು­ತ್ತಿದ್ದ ಶ್ರೀಕೃಷ್ಣ ಆಲನಹಳ್ಳಿಯವರಲ್ಲೂ ಇರಬಹುದು; ಈ ಕಾಲದಲ್ಲಿ ಬರೆವವರಲ್ಲೂ ಇರಬಹುದು.
ಹೆರಾಲ್ಡ್ ಬ್ಲೂಮ್ ಹೇಳುವಂತೆ ಹಿರಿಯರ ಪ್ರಭಾವದ ಬಗೆಗಿನ ಆತಂಕ (ದಿ ಆಂಕ್ಸೈಟಿ ಆಫ್ ಇನ್‌ಫ್ಲುಯೆನ್ಸ್‌) ಎಲ್ಲ ಕಾಲದ ಬರಹಗಾರ­ರಲ್ಲೂಇರುತ್ತದೆ; ಪ್ರತಿ ತಲೆಮಾರಿನ ಬರಹ­ಗಾ­ರರು ಹಿಂದಿನ ತಲೆಮಾರಿನ ಬರಹಗಾರರ ಮೇಲೆ ದಾಳಿ ಮಾಡುವುದರ ಹಿಂದೆ ಈ ಅಪ್ರಜ್ಞಾ­ಪೂರ್ವಕ ಕಾರಣವೂ ಇರುತ್ತದೆ. ಸಾಮಾನ್ಯವಾಗಿ ನಮ್ಮ ಮಾನಸಿಕ ಲೋಕದಲ್ಲಿ  ಎದುರಾಗುವ ಆಳದ ಕಾತರ, ಆತಂಕಗಳನ್ನು ನಾವು ಮುಚ್ಚಿಡಲು ಪ್ರಯತ್ನಿಸುತ್ತೇವೆ. ಹಾಗೆ ಮುಚ್ಚಿ­ಟ್ಟರೆ ಅವು ಮಾಯವಾಗುವುದಿಲ್ಲ; ಬದ­ಲಿಗೆ ಅವು ನಮ್ಮೊಳಗೇ ಉಳಿದು ನಮ್ಮನ್ನು ಇನ್ನಷ್ಟು ಖಿನ್ನರನ್ನಾಗಿಸುತ್ತವೆ. ಆದ್ದರಿಂದಲೇ ಅವನ್ನು ಮುಚ್ಚಿಡುವುದರ ಬದಲಿಗೆ, ಅವನ್ನು ಖಚಿ­ತವಾಗಿ ಗುರುತಿಸಿ ಅವು ಇವೆಯೆಂದು ಒಪ್ಪಿ­ಕೊಳ್ಳುವ, ಸಾಧ್ಯವಾದರೆ ಅವನ್ನು ಮೀರುವ ಪ್ರಯತ್ನ ಮಾಡುವುದೇ ಮುನ್ನಡೆಯುವ ಮಾರ್ಗ.
ಆದ್ದರಿಂದ ಲೇಖಕ, ಲೇಖಕಿಯರು ಕೂಡ ಹಿರಿಯರ ಪ್ರಭಾವದ ಬಗೆಗೆ ತಮ್ಮೊಳಗಿರುವ  ಆತಂಕವನ್ನು ಬಚ್ಚಿಟ್ಟು ಪ್ರಯೋಜನವಿಲ್ಲ. ಅಥವಾ ಉತ್ತರ ಕರ್ನಾಟಕದ ಲೇಖಕನೊಬ್ಬ ಮುಗ್ಧವಾಗಿ ಹೇಳಿದಂತೆ ‘ನಾ ಯಾರ್ ಯಾರದೂ ಪುಸ್ತಕ್ ಓದಂಗಿಲ್ರೀ ಸರ! ಸುಮ್ಮನಾ ಪ್ರಭಾವ ಆಕ್ಕತಿ, ಹಾಂ!’ ಎಂದು ಯಾರನ್ನೂ ಓದದೆ ಬರೆಯುವ ಕಾಲ ನಮ್ಮದಲ್ಲ!
ಹಾಗೆಯೇ ಹಳೆಯ ಲೇಖಕರ ಜೊತೆಗಿನ ಗುದ್ದಾಟಗಳ ಹಿಂದೆ ಆಳವಾದ ಸೃಜನಶೀಲ ಕಾರಣಗಳಿರ­ಬೇಕಾ­ಗುತ್ತದೆ. ಈ ಗುದ್ದಾಟಗಳನ್ನು ಚರಿತ್ರೆ, ಪತ್ರಿಕೋದ್ಯಮ, ಕಲೆ, ಸಮಾಜಶಾಸ್ತ್ರ ಮೊದ­ಲಾದ ವಲಯಗಳ ಹೊಸ ತಲೆಮಾರಿನವರೂ ಮಾಡುತ್ತಿರುತ್ತಾರೆ. ಇಲ್ಲದಿದ್ದರೆ ಹೊಸ ಮಾರ್ಗ­ಗಳು ಹುಟ್ಟುವುದೇ ಇಲ್ಲ. ಆದರೆ ಈ ಮಾರ್ಗ­ಗಳು ಪ್ರಾಮಾಣಿಕವಾದ ಸಂಘರ್ಷ­ದಿಂದ ಹುಟ್ಟು­ತ್ತವೆಯೇ ಹೊರತು ಚಪಲದ ಪ್ರತಿ­ಕ್ರಿಯೆಗಳಿಂದಲ್ಲ.
ಆದ್ದರಿಂದಲೇ ಆಳವಾಗಿ ಯೋಚಿಸುವ ಮುನ್ನವೇ ಹೇಳುವ, ಬರೆದು ಮಾಗುವ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಹೊಸ ತಲೆಮಾರಿನ ಅವಸರ ಅನೇಕರಿಗೆ ಅನೈತಿಕ ಎನ್ನಿಸತೊಡಗುತ್ತದೆ. ಆದರೆ ಈ ಸಮಸ್ಯೆ ಹಳಬರು ಭಾಗವಹಿಸುವ ಟೆಲಿವಿ­ಷನ್ನಿನ ಲೈವ್ ಚರ್ಚೆಗಳಲ್ಲೂ ಇರುತ್ತದೆ!  ಅಲ್ಲಿ ತಕ್ಷಣದ ಪ್ರಶ್ನೆಗೆ ಏನೋ ಒಂದನ್ನು ಬಡಬಡಿಸುವ ತಪ್ಪನ್ನು ಎಲ್ಲರೂ ಮಾಡುತ್ತಿರುತ್ತೇವೆ.
ಮೊನ್ನೆ ತಾನೆ ಅನಂತಮೂರ್ತಿಯವರಿಗೆ ನಮನ ಸಲ್ಲಿ­ಸಲು ಬಂದಿದ್ದ ಸದಾನಂದಗೌಡರ ಬಾಯಿಗೆ  ಟೀವಿ­ಯವರು ಮೈಕು ಹಿಡಿದ ತಕ್ಷಣ ‘ಅನಂತ­ಮೂರ್ತಿಯವರ ನಿಧನ ನಮಗೆಲ್ಲ ನುಂಗಲಾರದ ತುತ್ತು’ ಎಂದುಬಿಟ್ಟರು! ಅವಸರದ ಪ್ರತಿಕ್ರಿಯೆ­ಗಳಲ್ಲಿ ಇಂಥ ತಪ್ಪುಗಳು ನಿರಂತರವಾಗಿ ಆಗು­ತ್ತಲೇ ಇರುತ್ತವೆ. ಆದರೆ ಜಾಲತಾಣಗಳಲ್ಲಿ ತಮ್ಮ ತಕ್ಷಣದ ನಿಲುವು  ಪ್ರಕಟಿಸುವವರಿಗೆ ಈ ಬಗೆಯ ಒತ್ತಡ ಹಾಗೂ ಅವಸರ ಇರಬೇಕಾ­ಗಿಲ್ಲ.
ಯಾಕೆಂದರೆ ನಮ್ಮ ಅಸ್ಪಷ್ಟ ಆಲೋಚನೆ ಮೂರ್ತ­ವಾದ ಐಡಿಯಾ ಆಗಬೇಕು. ಈ ಐಡಿ­ಯಾವನ್ನು ಕೊಂಚವಾದರೂ ನೈತಿಕ ಪರೀಕ್ಷೆಗೆ ಒಳಪಡಿಸಬೇಕು. ಅದು ಸಾರ್ವಜನಿಕ ಲೋಕಕ್ಕೆ ಬರಲು ಅರ್ಹವೇ ಎಂಬ ಬಗ್ಗೆ ಲೇಖಕ, ಲೇಖಕಿ­ಯ­ರಾದರೂ ಚಣ ಯೋಚಿಸಬೇಕು. ನಮ್ಮ ಮನಸ್ಸಿನಲ್ಲಿ ಸುಳಿಯುವುದನ್ನೆಲ್ಲ ಬೇರೆಯವ­ರೆದುರು ಆಡಿಬಿಟ್ಟರೆ ಅಸಂಬದ್ಧವಾಗಿರುತ್ತದೆ; ಹಾಗೆಯೇ, ಅನಿಸಿದ್ದನ್ನೆಲ್ಲ ಪ್ರಕಟಿಸಿದರೂ ಅಸಂಬದ್ಧ­ವಾಗುತ್ತದೆ.
ಮಹತ್ವದ ವಿಷಯಗಳ ಬಗ್ಗೆ ತಕ್ಷಣ ಸಾರ್ವಜನಿಕವಾಗಿ ಪ್ರತಿಕ್ರಿಯಿಸ­ಬೇಕಾದ ಜವಾಬ್ದಾರಿ ಎಲ್ಲರಿಗೂ ಇರಬೇಕಾಗು­ತ್ತದೆ. ಆದರೆ ಬೆರಳು ಒತ್ತಿದ್ದನ್ನು ತಕ್ಷಣ ರವಾನಿ­ಸಿದರೆ ಆಗುವ ಅಪಾಯದ ಬಗ್ಗೆ ಈ ಚುರುಕು ತಲೆಮಾರು ಆಳವಾಗಿ ಯೋಚಿಸಬೇಕಾಗುತ್ತದೆ. ಹಾಗೆಯೇ ಈ ತಲೆಮಾರಿನ ಚುರುಕನ್ನು ನೋಡಿ­ಯಾದರೂ  ‘ನನಗೆ ಎಸ್.ಎಂ.ಎಸ್. ಕಳಿಸಲು ಬರುವುದಿಲ್ಲ’ ಎಂದು ಎಮ್ಮೆಗಳಂತೆ ಆಡುವ ಹಿರಿಯರು ಕ್ಷಿಪ್ರ ಪ್ರತಿಕ್ರಿಯೆಯ ಅಗತ್ಯವನ್ನು ಕಲಿಯಬೇಕಾಗುತ್ತದೆ!
ಆದರೆ ಅದೇ ವೇಳೆಗೆ ಯೋಚಿಸುವ ಕೆಲಸವನ್ನು ಬೆರಳ ತುದಿಗೆ ಕೊಟ್ಟು ಅದು ಒತ್ತಿದ ಶಬ್ದಗಳನ್ನೇ ತಮ್ಮ ಆಲೋಚನೆ­ಯೆಂದು ಭ್ರಮಿಸುವ ಒತ್ತುಚಾಳಿಯಿಂದ ಎಲ್ಲರೂ ಬಿಡಿಸಿಕೊಳ್ಳಬೇಕಾಗುತ್ತದೆ. ನಲವತ್ತು ವರ್ಷಗಳ ಕೆಳಗೆ ಗ್ರಾಮೀಣ ಕರ್ನಾಟಕದಲ್ಲಿ ಕಾಣು­ತ್ತಿದ್ದ ‘ಹೆಬ್ಬೆಟ್ಟೊತ್ತುವ ಪಶುಸದೃಶ ಸಮುದಾಯ’­ವನ್ನು ಕುರಿತು ಪೂರ್ಣಚಂದ್ರ ತೇಜಸ್ವಿ ವ್ಯಗ್ರತೆಯಿಂದ ಬರೆದಿದ್ದರು. ಇದೀಗ ಛಕಛಕ ಹೆಬ್ಬೆರಳಿನ ತುದಿಯನ್ನೋ ತೋರು­ಬೆರಳಿನ ತುದಿಯನ್ನೋ ಒತ್ತುವ ಸುಶಿಕ್ಷಿತ ಪಶುಸದೃಶ ಸಮುದಾಯ ಸೃಷ್ಟಿಯಾಗುವ ಅಪಾಯ ಎದುರಾಗಬಾರದು!
ಈಗ ಇರುವ ಸವಾಲೆಂದರೆ ಈ ಬೇಜವಾ­ಬ್ದಾರಿ ವ್ಯಕ್ತಿಗಳಿಗೆಲ್ಲ ಈ ಜಾಲತಾಣಗಳ ಮೂಲ­ಕವೂ ಹೊಸ ಶಿಕ್ಷಣ ಕೊಡುವುದು. ಕನ್ನಡದ ಕೆಲವೇ ಶ್ರೇಷ್ಠ ಚಿಂತನೆಗಳನ್ನು ಓದಿದರೂ ಸಾಕು, ಈ ಅವಿವೇಕಿಗಳ ಪೂರ್ವಗ್ರಹ ಕಡಿಮೆ­ಯಾಗು­ತ್ತದೆ. ಯಾಕೆಂದರೆ ಇವರು ಎಷ್ಟೇ ಭಂಡ ವಾದ ಹೂಡಿದರೂ ಇವರಲ್ಲಿ ಅನೇಕರು ನಿಜಕ್ಕೂ ಬುದ್ಧಿವಂತರಾಗಿರುವುದರಿಂದ, ಸತ್ಯ ಕಂಡಾಗ ಅದನ್ನು ಗ್ರಹಿಸಬಲ್ಲ ಸೂಕ್ಷ್ಮತೆ ಅವರಲ್ಲಿ ಇನ್ನೂ ಇರುವಂತಿದೆ.
ಆಧುನಿಕೋತ್ತರ ಸಮಾಜದಲ್ಲಿ ಆರೋಗ್ಯವನ್ನು ಬಿತ್ತಲು ಹೊರಟಿರುವ ಕರ್ನಾಟ­ಕದ ಹೊಸ ತಲೆಮಾರು ನವಮಾಧ್ಯಮಗಳ ಮೂಲಕ ಶ್ರೇಷ್ಠ ಚಿಂತನೆಗಳನ್ನು ಹಬ್ಬಿಸುವ ಸವಾಲನ್ನೂ ಕೈಗೆತ್ತಿಕೊಳ್ಳಲೇಬೇಕಾಗುತ್ತದೆ. ಇಲ್ಲದಿದ್ದರೆ ಕಳೆದ ನೂರು ವರ್ಷಗಳಿಂದ ನಮ್ಮ ಹಿರಿಯರು ರೂಪಿಸಿದ ಆರೋಗ್ಯಕರ ಸಂಸ್ಕೃತಿಯ ಕೊಂಡಿಗಳು ಕಳಚಿ ಬೀಳುತ್ತವೆ.
ಕೊನೆ ಟಿಪ್ಪಣಿ: ಸೆಲ್ಫೀ ಮತ್ತು ನಾರ್ಸಿಸಿಸ್
ಹೊಸ ತಲೆಮಾರಿನ ಕವಯಿತ್ರಿ ಟೀನಾ ಶಶಿಕಾಂತ್ ‘ಸೆಲ್ಫೀ’ ಎಂಬ ಪದ್ಯ ಓದುತ್ತಿದ್ದರು. ಮೊಬೈಲುಗಳಲ್ಲಿ ತಮ್ಮ ಫೋಟೊಗಳನ್ನು ತಾವೇ ತೆಗೆದು ಎಲ್ಲೆಡೆ ಪ್ರಕಟಿಸುವ ಚಾಳಿಯನ್ನು ತೀವ್ರವಾಗಿ ವಿಮರ್ಶಿಸುವ ಪದ್ಯವಿದು. ಈ ಪದ್ಯ ಕೇಳುತ್ತಾ ನಾರ್ಸಿಸಿಸ್ ಕತೆ ನೆನಪಾಯಿತು:
ಗ್ರೀಕ­ರಲ್ಲಿ ನಾರ್ಸಿಸಿಸ್ ಎಂಬ ಅತಿಸುಂದರ ತರುಣ­ನಿದ್ದ. ಒಮ್ಮೆ ಆತ ತಿಳಿನೀರಿನ ಕೊಳದಲ್ಲಿ ತನ್ನ ಪ್ರತಿಬಿಂಬ ಕಂಡು ‘ಆಹ! ಈ ಚೆಲುವ­ನಾರು!’ ಎಂದು ಅಚ್ಚರಿಗೊಂಡ. ತನ್ನ ಸುಂದರ ಪ್ರತಿಬಿಂಬ­ವನ್ನು ಅಪ್ಪಿಕೊಳ್ಳಲು ಕೆಳಗೆ ಬಾಗಿದ. ಎಷ್ಟು ಸಲ ಪ್ರಯತ್ನಿಸಿದರೂ ತನ್ನ ಪ್ರತಿಬಿಂಬ­ವನ್ನು ಅಪ್ಪಿ­ಕೊಳ್ಳ­ಲಾಗಲಿಲ್ಲ. ಸ್ವಮೋಹ ಹೆಚ್ಚಾಗಿ, ಕೊರಗಿ ಕೊರಗಿ ಕೊನೆಗೆ ಪ್ರಾಣ ಬಿಟ್ಟ. ಈ ಕತೆಯನ್ನು ಆಳವಾಗಿ ಧ್ಯಾನಿಸಿದವರಿಗೆ ಸ್ವಮೋಹದ ಗೀಳಿ­ನಿಂದ ಮೋಕ್ಷ ಗ್ಯಾರಂಟಿ!

ಭಾನುವಾರ, ಆಗಸ್ಟ್ 24, 2014

ನಮ್ಮ ನಡುವಿನ ಅಪ್ರತಿಮ ಕಥನಕಾರ ಅನಂತಮೂರ್ತಿ

- ಶಿವ ವಿಶ್ವನಾಥನ್


ಸೌಜನ್ಯ: ವಾರ್ತಾ ಭಾರತಿ


   ಸಾವು ಮತ್ತು ದೇವರ ಕುರಿತಾಗಿ ನನಗೆ ಆಗಾಗ ಬಹಳ ಕೋಪ ಬರುತ್ತದೆ. ಅವರು ಈ ಲೋಕದ ಅಮೂಲ್ಯ ರತ್ನಗಳನ್ನು ಕೊಂಡೊಯ್ಯುತ್ತಾರೆ. ಇದು ನನ್ನನ್ನು ಬಹಳ ದುಃಖಿತನನ್ನಾಗಿ ಮಾಡುತ್ತದೆ. ಅವರನ್ನು ಕಳೆದುಕೊಂಡಿದ್ದರಿಂದ ನಾನು ಅಸಹಾಯಕನಾದದ್ದಷ್ಟೇ ಅಲ್ಲ, ನನ್ನ ಜಗತ್ತು ಕಿರಿದಾಗುತ್ತಿದೆ, ನನ್ನ ಸ್ನೇಹಿತರ ಗುಂಪು ಕುಸಿಯುತ್ತಿದೆ ಎಂಬ ಕಾರಣಗಳಿಂದಲೂ ನನಗೆ ದುಃಖ ವಾಗುತ್ತಿದೆ. ನನ್ನ ಸ್ನೇಹಿತ ಮತ್ತು ಹಿತಚಿಂತಕ ರಾಮು ಗಾಂಧಿ ನಿಧನರಾದಾಗಲೂ ಹೀಗೆ ಆಗಿತ್ತು. ಓರ್ವ ಅತ್ಯುತ್ತಮ ರಸಾಯನಶಾಸ್ತ್ರಜ್ಞರಾಗಿದ್ದ ಸಿ.ವಿ.ಶೇಷಾದ್ರಿ ಅವರು ಸಮುದ್ರದಲ್ಲಿ ಕಳೆದು ಹೋದಾಗಲೂ ನನಗೆ ಇಂತಹದೇ ಅನುಭವವಾಗಿದೆ.

  ಕನ್ನಡದ ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿ ಅವರು ಶುಕ್ರವಾರ ಸಂಜೆ ತೀರಿ ಹೋದಾಗ ನಾನು ಸಂಪೂರ್ಣವಾಗಿ ಕುಸಿದು ಹೋದೆ. ಒಂದು ಬ್ರಹ್ಮಾಂಡವೇ ಕುಸಿದ ಅನುಭವವಿದು. ಬದುಕುವ ಒಂದು ರೀತಿಯೇ ಕಳೆದುಹೋದಂತಹ ಅನುಭವ. ಒಬ್ಬ ಲೇಖಕನಾಗಿ, ಒಬ್ಬ ಸಾರ್ವಜನಿಕ ಬುದ್ಧಿಜೀವಿಯಾಗಿ ಮನುಷ್ಯನ ಸಾಧನೆಗಳು ಮುಖ್ಯವಾಗುವುದಿಲ್ಲ. ಆದರೆ ಮನುಷ್ಯನಾಗಿ ಅವನ ಸಾಧನೆಗಳು ಹೆಚ್ಚು ಮಹತ್ವಪೂರ್ಣ ಎನಿಸಿಕೊಳ್ಳುತ್ತವೆ.

  ಅನಂತಮೂರ್ತಿಯವರು ಕೊನೆ ಗಳಿಗೆಯ ತನಕವೂ ಹೋರಾಡುತ್ತಲೇ ಬಾಳಿದರು. ಒಬ್ಬರು ಕನಸು ಕಾಣುವ ಬಹುತೇಕ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು. ಇದೇನೂ ಪಠ್ಯಕ್ರಮದ ಪಟ್ಟಿಯಲ್ಲ, ವೃತ್ತಿ ಎಂಬುದು ಶಾಪಿಂಗ್ ಚೀಟಿಯೇನೂ ಅಲ್ಲ. ಆದರೆ ಅವರ ಆತ್ಮಕಥೆ ಎಂಬುದು ಬುದ್ಧಿಜೀವಿಯೊಬ್ಬನ ಅತ್ಯುತ್ತಮ ಸಮಾಜಶಾಸ್ತ್ರ ಎಂಬುದು ಅಷ್ಟೇ ಸತ್ಯ ಸಂಗತಿ.

 ಮೈಸೂರು ಸಂಸ್ಥಾನದಲ್ಲಿ 1932ರಲ್ಲಿ ಅನಂತಮೂರ್ತಿ ಜನಿಸಿದರು. ಕಾಡಿನ ಪರಿಸರದಲ್ಲಿ ಬದುಕಿದರು. ಒಬ್ಬ ಬ್ರಾಹ್ಮಣ ಬಾಲಕನಾಗಿ ಪ್ರತಿಯೊಂದೂ ಪವಿತ್ರ ಎಂಬ ಜಗತ್ತಿನಲ್ಲಿ ಅವರು ಬಾಳಿದರು. ಅನಂತಮೂರ್ತಿಯವರು ಈ ಎಲ್ಲ ನೆನಪುಗಳ ಕಾವಲುಗಾರ. ಬ್ರಾಹ್ಮಣ ಸಂವೇದನೆಯ ಪಾರುಪತ್ಯಗಾರ. ಈ ನೆನಪುಗಳ ಜೊತೆ ಜೊತೆಗೆ ಅದರ ಅತಿದೊಡ್ಡ ಟೀಕಾಕಾರ. ನೆನಪುಗಳು ಅಂದರೆ, ಅದು ನಶ್ಯದ ವಾಸನೆಯಂತಿರಬಹುದು. ಅದು ಬೇರೆಬೇರೆ ಹಂತಗಳಲ್ಲಿ ಬೆಳೆಯುತ್ತಿರುವ ಹಲಸಿನ ಹಣ್ಣು ಆಗಿರಬಹುದು. ಈ ಹಣ್ಣಿನ ಪರಿಮಳ ಜಾನುವಾರುಗಳನ್ನು ಕೆರಳಿಸುತ್ತದೆ. ಎಳೆಯ ಪ್ರಾಯದಲ್ಲಿ ಅವರು ಬದುಕಿದ್ದ ಮನೆಯ ನೆನಪುಗಳು ಮಾನವಶಾಸ್ತ್ರೀಯ ವರ್ಣನೆಯಂತಿವೆ. ಆದರೂ ಬ್ರಾಹ್ಮಣ್ಯಲೋಕದ ಅತ್ಯುತ್ತಮ ಸಾಹಿತ್ಯ ಅದಾಗಿತ್ತು. ಅದೀಗ ಬಹುತೇಕ ಮಾಸಿ ಹೋಗಿದೆ.

  ಅನಂತಮೂರ್ತಿಯವರು ಹಳ್ಳಿಯ ಸಾಂಪ್ರದಾಯಿಕ ಸಂಸ್ಕೃತ ಶಾಲೆಯಲ್ಲಿ ಕಲಿತವರು. ಅದೊಂದು ಕಾಸ್ಮೊಪಾಲಿಟನ್ ಮತ್ತು ಸ್ಥಳೀಯ ಲೋಕವೂ ಆಗಿತ್ತು. ಸಮಾಜವಾದ ಎಂಬುದು ಸರಕಾರದಿಂದ ಆರಂಭವಾಗುವುದಿಲ್ಲ, ಬದಲಿಗೆ ಸಾಮಾನ್ಯ ಶಾಲೆಯಿಂದಲೇ ಆರಂಭವಾಗುತ್ತದೆ ಎಂಬುದನ್ನು ಅವರಿಗೆ ಕಲಿಸಿದ ಜಗತ್ತು ಅದಾಗಿತ್ತು. ನಮ್ಮ ಮಕ್ಕಳಿಗೆ ಕನ್ನಡ ಭಾಷೆ ಕಲಿಸುವ ಸಾಂಪ್ರದಾಯಿಕ ಶಾಲೆಗಳು ಕೋಟ್ಯಂತರ ಭ್ರೂಣಬೇರುಗಳನ್ನು ಸೃಷ್ಟಿಸಿದರೆ, ದುಬಾರಿ ಇಂಗ್ಲಿಷ್ ಶಾಲೆಗಳಲ್ಲಿ ಮಗು ತನ್ನ ಮಾತೃಭಾಷೆಯ ಕೊಂಡಿಯನ್ನೇ ಕಳೆದುಕೊಳ್ಳುತ್ತದೆ. ಇದೇ ನಿಜವಾದ ವರ್ಗಭೇದ, ಜೊತೆಗೆ ಸಾಂಸ್ಕೃತಿಕ ಭೇದವೂ ಆಗಿದೆ. ಇದು ಸಮಾಜವನ್ನೂ ಒಡೆಯುತ್ತದೆ ಎಂಬುದನ್ನು ಅವರು ಬಲವಾಗಿ ನಂಬಿದ್ದರು.

 ಇಂಗ್ಲಿಷ್ ಭಾಷೆ ಎಂಬುದು ಕಾಸ್ಮೊಪಾಲಿಟನ್‌ವಾದವನ್ನು ಬೆಂಬಲಿಸುತ್ತದೆ. ಮನುಷ್ಯರನ್ನು ಪರಸ್ಪರ ದೂರೀಕರಿಸುತ್ತದೆ. ನಮ್ಮ ದೇಶದ ಉಚ್ಚ ವರ್ಗವು ಅನಿವಾರ್ಯವಾಗಿ ಆಯ್ಕೆ ಮಾಡಿಕೊಂಡಿರುವ ಕೆಟ್ಟ ನಂಬಿಕೆ , ಆತ್ಮವಿಶ್ವಾಸ ಇದಾಗಿದೆ. ಪಾಶ್ಚಿಮಾತ್ಯ ಜಗತ್ತು ನಾವು ತಿಳಿದಷ್ಟು ಸರಳವಾಗಿಲ್ಲ. ಆದರೆ ಭಾರತದ ನಮ್ಮ ಗ್ರಾಮಗಳಲ್ಲಿ ಗಾಂಧಿ ಮತ್ತು ಗೆಲಿಲಿಯೊ ಬಹುಶಃ ಸಮಕಾಲೀನರಾಗಬಹುದಾಗಿತ್ತು. ಈ ಜೀವಂತ ಜಗತ್ತಿನಲ್ಲಿ ಅನಂತಮೂರ್ತಿಯವರ ಎರಡು ಮಹತ್ವದ ಕೃತಿಗಳಾದ ‘ಸಂಸ್ಕಾರ’ ಮತ್ತು ‘ಭಾರತೀಪುರ’ಗಳು ರೂಪುಗೊಂಡವು. ಇಂಗ್ಲಿಷ್‌ನಲ್ಲಿ ಇಂತಹ ಒಂದು ಜಗತ್ತನ್ನು ಅವರು ಕಲ್ಪನೆ ಮಾಡಿಕೊಳ್ಳುವುದು ಬಹುಶಃ ಬಹಳ ಕಷ್ಟವಾಗಬಹುದು.

‘ಒಂದು ಕಲಾಕೃತಿ ತನ್ನ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಬಹುಶಃ ಒಬ್ಬ ಭಾರತೀಯನಿಗೆ ಭಾರತೀಯ ಭಾಷೆಯೇ ಮಾಧ್ಯಮ ಎಂದು ಕಾಣುತ್ತದೆ’ ಎಂದು ಅವರು ಹೇಳಿಕೊಂಡಿದ್ದರು. ಓರ್ವ ಭಾರತೀಯನಾಗಿ ಹಲವು ಕಾಲಮಾನಗಳಲ್ಲಿ ಜೀವಿಸಿರುವ ಅವರ ಅಂತರಾತ್ಮದಲ್ಲಿರುವ ಕಥೆಗಾರನಿಗೆ ಕಾಲ ಮತ್ತು ನೆನಪು ಬಹಳ ನಿರ್ಣಾಯಕ.
ಮೂವತ್ತರ ದಶಕದಲ್ಲಿ ಐರೋಪ್ಯ ರಾಜಕೀಯದ ಕುರಿತು ಪಿಎಚ್‌ಡಿ ಪೂರೈಸಲು ಅನಂತಮೂರ್ತಿ ಬರ್ಮಿಂಗ್‌ಹ್ಯಾಂಗೆ ಹೋದರು. ಕೊಟ್ಟಾಯಂನಲ್ಲಿ ವಿಶ್ವವಿದ್ಯಾಲಯ ಉಪಕುಲಪತಿಯಾದರು. ಫಿಲಂ ಮತ್ತು ಚಲನಚಿತ್ರ ಸಂಸ್ಥೆಯ ಅಧ್ಯಕ್ಷರಾದರು. ಸಾಹಿತ್ಯ ಅಕಾಡಮಿಯ ಮುಖ್ಯಸ್ಥರಾದರು.

 ಕೇವಲ ಪದವಿಯಿಂದ ಅವರು ಖ್ಯಾತನಾಮರಾಗಲಿಲ್ಲ. ಬದಲಿಗೆ ಸಂಸ್ಕೃತಿಯೊಂದಿಗಿನ ನಿರಂತರ ಸಂವಾದಗಳು ಅವರನ್ನು ನೈಜವಾಗಿ ರೂಪಿಸಿದವು. ಅವರು ಗೆಳೆತನದ ಅಧ್ವರ್ಯು. ಅಶೀಶ್ ನಂದಿ, ಮನು ಚಕ್ರವರ್ತಿ ಮತ್ತು ಗಿರೀಶ್ ಕಾಸರವಳ್ಳಿ ಅವರಂತಹ ಅವರ ಹಲವು ಸ್ನೇಹಿತರ ಬಳಿ ಹೇಳಲು ಇನ್ನಷ್ಟು ಕಥೆಗಳಿರಬಹುದು. ಅವರು ಮನುಷ್ಯರ ಕುರಿತು ಕುತೂಹಲಿಯಾಗಿದ್ದರು. ಜೀವನವನ್ನು ಸಂಭ್ರಮಿಸಿದರು. ಮಧುಪಾನದ ನಡುನಡುವೆ ಲಿಮೆಯೆ, ಲೋಹಿಯಾ, ಮಾರ್ಟಿನ್ ಗ್ರೀನ್ ಇಲ್ಲವೇ ಕುವೆಂಪು ಕುರಿತಾದ ಕಥೆಗಳನ್ನು ಹೇಳುತ್ತಿದ್ದರು. ಭಾಷೆಗಳ ಜಗತ್ತಿನ ಒಗ್ಗಟ್ಟಾಗಿ ಅದು ಕಾಣುತ್ತಿತ್ತು.

  ಮೋದಿ ಕುರಿತಾದ ಅವರ ಟೀಕೆಗಳು ಹಾಗೂ ಮೋದಿ ಆಳ್ವಿಕೆಯ ಜಗತ್ತಿನಲ್ಲಿ ನಾನು ಬದುಕಲಾರೆ ಎಂಬ ಅವರ ಹೇಳಿಕೆಗಳಿಗೆ ಕೆಲವು ಜನರಿಂದ ಅವರು ಬೈಗುಳಗಳನ್ನು ಕೇಳಬೇಕಾಯಿತು. ಆದರೂ ಅವರ ಧೈರ್ಯಕ್ಕೆ ಮೆಚ್ಚಬೇಕು. ಗಿರಿರಾಜ್ ಕಿಶೋರ್‌ನಂತಹ ವ್ಯಕ್ತಿಗಳು ಪಾಕಿಸ್ತಾನಕ್ಕೆ ತೆರಳುವ ರೈಲಿನಲ್ಲಿ ಅವರು ಹೋಗಬೇಕು ಎಂದು ಒತ್ತಾಯಿಸಬಹುದು. ಅದಾಗಿದ್ದರೆ ಅನಂತಮೂರ್ತಿ ಮತ್ತು ಮಾಂಟೊ ಅವರು ಪರಸ್ಪರ ತಮ್ಮ ನಡುವಿನ ಕಥೆಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರೇನೋ. ದೇಶಗಳನ್ನು ಒಗ್ಗೂಡಿಸುವ ಉಪಾಯಗಳ ಕುರಿತು ಮಾತನಾಡುತ್ತಿದ್ದರೋ ಏನೋ. ಅಂತಹ ಒಂದು ರೈಲು ಪ್ರಯಾಣ ವಿಭಿನ್ನವಾಗಿರುತ್ತಿತ್ತು.

ಅನಂತಮೂರ್ತಿಯವರು ರಾಜಕೀಯವಾಗಿ ಹರಿತವಾದ ನಾಲಗೆಯುಳ್ಳವರು. ಅವರು ತಪ್ಪುಗಳನ್ನೂ ಮಾಡಿದ್ದಾರೆ. ಆದರೆ ಈ ತಪ್ಪುಗಳನ್ನು ಒಳನೋಟಗಳಾಗಿ ಪರಿವರ್ತನೆ ಮಾಡಿದರು. ಅವರು ವಿವಾದಗಳನ್ನು ಹುಟ್ಟು ಹಾಕಿದರು. ಆದರೆ ತಾವು ನೀಡಿದ ಸಹಯೋಗವನ್ನು ಧ್ವಂಸಗೊಳಿಸಲಿಲ್ಲ.‘ಬೆಂಗಳೂರ್’ ಮಹಾನಗರವನ್ನು ‘ಬೆಂಗಳೂರು’ ಎಂದು ಮರುನಾಮಕರಣ ಮಾಡುವುದರ ಬಗ್ಗೆ ಅವರು ಪ್ರಬಲ ಒತ್ತಾಯ ಮಾಡಿದ್ದು ನನಗೆ ನೆನಪಿದೆ. ಆದರೂ ಆಶೀಶ್ ನಂದಿ ಅವರ ಟೀಕೆಗಳನ್ನು ಆಲಿಸಿದರು ಮತ್ತು ಅದಕ್ಕೆ ತಾಳ್ಮೆಯಿಂದ ಉತ್ತರಿಸಿದರು.

ಕೆ.ವಿ.ಸುಬ್ಬಣ್ಣನವರ ಜೊತೆಗೆ ಸೇರಿಕೊಂಡು ಅವರು ಹೆಗ್ಗೋಡುನಂತಹ ಅಭೂತಪೂರ್ವ ಜಗತ್ತನ್ನು ನಿರ್ಮಾಣ ಮಾಡಿದರು. ನಾಟಕ ಮತ್ತು ಕನ್ನಡ ಭಾಷೆಗಳು ಜೀವಂತಗೊಳ್ಳುವ ವೇದಿಕೆಯೊಂದನ್ನು ಸೃಷ್ಟಿಸಿದರು.ಬಹುತೇಕ ಬುದ್ಧಿಜೀವಿಗಳು ಪುಟಸೂಚಿಗಳಾಗಿ, ಅಲ್ಲಿ-ಇಲ್ಲಿ ಉಲ್ಲೇಖಗಳಾಗಿ ಮತ್ತು ನಿಧನ ಸುದ್ದಿಯಾಗಿ ಮರೆಯಾಗುತ್ತಾರೆ. ಆದರೆ ಅನಂತಮೂರ್ತಿಯವರು ಕರ್ನಾಟಕದ ಮನೆಮನೆಗಳಲ್ಲಿ ಜನಪದರಾಗಿ ಬದುಕುತ್ತಾರೆ. ಈ ಭಾಷಾ ಪ್ರತಿಭೆಯ ಕುರಿತಾದ ಸಂವಾದಗಳಲ್ಲಿ, ಕಾಲೇಜಿನ ಚರ್ಚೆಗಳಲ್ಲಿ ಅವರು ನೆನಪಿನಲ್ಲಿ ಉಳಿಯುತ್ತಾರೆ.
 
ಅವರ ನಿಧನದ ಕುರಿತಾದ ಸುದ್ದಿಯೇ ಕಥಾನಕದ ಜಲಪಾತವನ್ನೇ ಸೃಷ್ಟಿಸುತ್ತದೆ. ಅಲ್ಲಿ ಕಥೆಗಳಿವೆ, ದಂತಕಥೆಗಳಿವೆ, ಐತಿಹ್ಯಗಳಿವೆ. ನಮ್ಮ ನಡುವಿನ ಅಪ್ರತಿಮ ಕಥನಕಾರನನ್ನು ಗೌರವಿಸಲು ಅವುಗಳು ಪರಸ್ಪರ ಸ್ಪರ್ಧಿಸುತ್ತವೆ, ಒಗ್ಗೂಡುತ್ತವೆ.

 (ಕೃಪೆ: ದ ಹಿಂದೂ)

ಆಗಸ್ಟ್ 18 ಕೊರಗರ ಸ್ವಾತಂತ್ರ್ಯ ದಿನ- ಭೂಮಿ ಹಬ್ಬ

ಆಗಸ್ಟ್ 18 ಕೊರಗರಿಗೆ ಸ್ವಾತಂತ್ರ್ಯದ ದಿನ 
ಕೊರಗರಿಗೆ ಭೂಮಿ ಹಬ್ಬದ ಸಂಭ್ರಮ 



'ಜಲ್ ಜಂಗಲ್ ಜಮೀನ್ ಹಮಾರ ಹೈ' ಎಂದು ಜಾರ್ಖಂಡದ ಆದಿವಾಸಿ ಬುಡಕಟ್ಟು ಪಂಗಡದ ನಾಯಕ 'ಬಿರ್ಸಾ ಮುಂಡಾ' ಘೋಷಿಸಿದ ಮಾತು ನಿಜವಾಗುತ್ತಿದೆ. ಶತಶತಮಾನಗಳಿಂದ ಕಾಡಿನ ಮಕ್ಕಳಾಗಿ, ಕಾಡನ್ನೇ ಬದುಕಾಗಿಸಿದ ಆದಿವಾಸಿಗಳ ಸ್ವಚ್ಛಂದ ಕಾಡಿನ ಹಕ್ಕನ್ನು, ತುಂಡರಸರ ಕಾಲದಲ್ಲಿಯೇ ಕಸಿದುಕೊಳ್ಳಲಾಗಿತ್ತು. ಬ್ರಿಟೀಷ್ ಆಡಳಿತದಲ್ಲಿಯೂ ಇದು ನಿರಂತರವಾಗಿ ಮುಂದುವರಿಯಿತು. ಸ್ವಾತಂತ್ರ್ಯ ಭಾರತದಲ್ಲಿಯೂ ಇದೇ ಶೋಷಣೆ ಎಗ್ಗಿಲ್ಲದೇ ನಡೆಯಿತು. ಇದೀಗ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಆರು ದಶಕಗಳ ನಂತರ, ಈ ನಾಡಿನ ಮೂಲನಿವಾಸಿಗಳಾದ 'ಕೊರಗ'ರಿಗೆ ಸ್ವಾತಂತ್ರ್ಯದ ಸವಿ ಸಿಕ್ಕಿದೆ. ಹೌದು! ಬದುಕಲು ನೆಲೆ ಸಿಕ್ಕಿದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲನಿವಾಸಿಗಳಾದ ಕೊರಗರು - ಅನಾದಿ ಕಾಲದಿಂದಲೂ ಕಾಡಿನಲ್ಲಿಯೇ, ಕಾಡಿನ ತಪ್ಪಲಿನ ಪ್ರದೇಶದಲ್ಲಿಯೇ ವಾಸಿಸುತ್ತಿದ್ದವರು. ಪ್ರಾಚೀನ ಕಾಲದಿಂದಲೂ 'ಊಳಿಗಮಾನ್ಯ ಪದ್ಧತಿ' (ಪ್ರಾದೇಶಿಕವಾಗಿ 'ಅಜಲು ಚಾಕರಿ' ಎನ್ನಲಾಗುತ್ತಿತ್ತು), ಮಡಿ - ಮೈಲಿಗೆ, ಅಸ್ಪ್ರಶ್ಯತೆ, ಜಾತಿ ಪದ್ಧತಿ ಮತ್ತು ಸಾಮಾಜಿಕ ದಬ್ಬಾಳಿಕೆಗಳಿಗೆ ಗುರಿಯಾಗಿದ್ದ ಕೊರಗರನ್ನು, ಮಾನವ ಘನತೆಗೆ ಕುಂದುಂಟುಮಾಡುವ ಹೀನ ಕಸುಬುಗಳಿಗೆ ಉಪಯೋಗಿಸುತ್ತಿದ್ದರು. ಕಸ ಗುಡಿಸುವುದು, ಮಲ ಹೊರುವುದು, ಚರಂಡಿ ಮ್ಯಾನ್ ಹೋಲ್ ಗಿಳಿದು ಸ್ವಚ್ಛಗೊಳಿಸುವುದು ಸತ್ತ ಪ್ರಾಣಿಗಳ ಕಳೇಬರ ಎತ್ತುವುದು ... ಈ ಸಮಾಜ ಕೊರಗರಿಗಾಗಿಯೇ ಮೀಸಲಿಟ್ಟಿದ್ದ ಕಸುಬುಗಳಾಗಿದ್ದವು. ಅಜಲು ಚಾಕರಿ, ರೋಗಿಯ ಕೂದಲು ಮತ್ತು ಉಗುರು ಮಿಶ್ರಿತ ಅನ್ನವನ್ನು ದಾನವಾಗಿ (ಪಂಚಮ ದಾನ ಎನ್ನಲಾಗುತ್ತದೆ) ಪಡೆಯುವುದು, ಊರ ಜಾತ್ರೆಗಳಲ್ಲಿ ವ್ಯಾಪ್ತಿಗಿಂತ ದೂರದಲ್ಲಿ ನಿಂತು ಡೋಲು ಬಾರಿಸುವುದು, ಜಾತ್ರೆಗಳಲ್ಲಿ ಕದನಿ (ಒಂದು ರೀತಿಯ ಸ್ಪೋಟಕ) ಸಿಡಿಸುವುದು, ಕಂಬಳದ ಮುನ್ನಾ ದಿನ ಕಂಬಳ ಕೆರೆ ಕಾಯುವುದು (ಪನಿ ಕುಲ್ಲುನು ಎನ್ನುತ್ತಿದ್ದರು) ಮತ್ತು ಅದರಲ್ಲಿ ಕಲ್ಲು ಗಾಜು ಇದೆಯೇ ಎಂದು ಪರೀಕ್ಷಿಸಲು ಕೊರಗರನ್ನು ಓಡಿಸುವುದು ಹಾಗೂ ಊರ ಧಣಿಗಳ ಬಿಟ್ಟಿ ಚಾಕರಿಯೇ ದೈನಂದಿನ ಬದುಕಾಗಿತ್ತು. ಸುಶ್ರಾವ್ಯವಾಗಿ ಡೋಲು - ಚೆಂಡೆ ಬಾರಿಸುವುದು, ಕೊಳಲು ಊದುವುದು ಕೊರಗರ ಸಾಂಸ್ಕೃತಿಕ ಮತ್ತು ಮನೊರಂಜನಾತ್ಮಕ ಬದುಕಾಗಿತ್ತು. ಬುಟ್ಟಿ ಹೆಣೆಯುವುದು, ಕಾಡುತ್ಪತ್ತಿ ಸಂಗ್ರಹಿಸುವುದು ಕುಲ ಕಸುಬಾಗಿತ್ತು. ಆಮೆ, ಗೋಮಾಂಸ ಪ್ರಿಯವಾದ ಭಕ್ಷಣೆಯಾಗಿತ್ತು. ತಮ್ಮದೇ ಆದ ವಿಶಿಷ್ಟ 'ಕೊರ್ರೆ' ಭಾಷೆ, ವೇಷ - ಭೂಷಣ, ಸಭ್ಯತೆಯನ್ನು ಮೈಗೂಡಿಸಿಕೊಂಡಿದ್ದರು. ಶಿಕ್ಷಣ ಪಡೆಯುವುದನ್ನು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಲಾಗಿತ್ತು. ಆ ಮೂಲಕ ಸಮಾಜದಿಂದಲೇ ಕೊರಗರನ್ನು ದೂರವಿಡಲಾಗಿತ್ತು. ಈಗಲೂ ನಗರದ ಹೊರವಲಯದಲ್ಲೋ, ಕಾಡು ಪ್ರದೇಶದ ತಪ್ಪಲಿನಲ್ಲೋ ಇರುವ ಕೊರಗರ ಕೇರಿಗಳಿಗೆ - 'ಕೊರಗರ ಕಾಲೋನಿಗೆ ಹೋಗುವ ರಸ್ತೆ' ಎಂದು ಸರಕಾರವೇ ಅಧಿಕೃತವಾಗಿ ಬೋರ್ಡುಗಳನ್ನು ನೆಟ್ಟಿರುವುದನ್ನು ಗಮನಿಸಬಹುದು! 



ಶತಮಾನಗಳಿಂದ ಗುಲಾಮ ಸಂಸ್ಕೃತಿಯಲ್ಲಿಯೇ ಬೆಂದು ಬಸವಳಿದಿದ್ದ ಕೊರಗರ ಜೀವನದಲ್ಲಿಯೂ ಪರಿವರ್ತನೆಯ ಹುಮ್ಮಸ್ಸು ಹರಿಯತೊಡಗಿತು. ನಿಧಾನವಾಗಿ ಕೊರಗರು ಸಂಘಟಿತರಾಗ ತೊಡಗಿದರು. 1987 ರಲ್ಲಿ ಕಾಪು ದೇವದಾಸ ಶೆಟ್ಟಿ ಎಂಬ 'ಸಮಾಜ ಪರಿವರ್ತನಕಾರ'ನ ನೇತೃತ್ವದಲ್ಲಿ, ಪಡುಬಿದ್ರಿ ಸಮೀಪದ ಕಾಪು ಎಂಬಲ್ಲಿ ಪ್ರಪ್ರಥಮವಾಗಿ' ಕಾಪು ಕೊರಗರ ಸಂಘ 'ಎಂಬ ಸಂಸ್ಥೆ ಅಸ್ಥಿತ್ವಕ್ಕೆ ಬಂತು. ಅವಿಭಜಿತ ಜಿಲ್ಲೆಯ ಎಲ್ಲಾ ಮೂಲೆಗಳಿಂದಲೂ ಕೊರಗರು ಸಂಘಟನೆಗೆ ಬಲ ತುಂಬಲು ಅವಿರತ ಪ್ರಯತ್ನಿಸಿದರು. ಪ್ರಗತಿ ಹೊಂದುವುದು ನಿಧಾನಗತಿಯ ಪ್ರಕ್ರಿಯೆ, ಅದರೊಂದಿಗೆ ನಾವು ಸಂಘರ್ಷಕ್ಕೆ ಇಳಿಯಬೇಕು ಎಂದು ಮನಗಂಡ ಕೊರಗರು, ಸರಕಾರದೊಂದಿಗೆ ಸೌಮ್ಯ ಸಂಘರ್ಷಕ್ಕೆ ಇಳಿಯತೊಡಗಿದರು. ತಮ್ಮ ಮೂಲಭೂತ ಹಕ್ಕುಗಳಿಗಾಗಿ, ತಮ್ಮ ಅಸ್ಥಿತ್ವದ ಉಳಿವಿಗಾಗಿ ಜೀವನವನ್ನೇ ಹೋರಾಟದ ಪಣಕ್ಕಿಟ್ಟರು.

ಆಗಸ್ಟ್ 18 1993 ಕೊರಗ ಜನಾಂಗದ ಇತಿಹಾಸದಲ್ಲೊಂದು ಮೈಲುಗಲ್ಲಾದ ಸ್ವರ್ಣದಿನ. ಶತಮಾನಗಳಿಂದ ಬದುಕುಪೂರ್ತಿ ಬವಣೆ, ಬೇಗುದಿ, ನೋವು, ಹಸಿವು, ಅವಮಾನಗಳನ್ನೇ ಉಂಡು, ಮೇಲ್ವರ್ಗದವರ ದೌರ್ಜನ್ಯಕ್ಕೆ ಬಲಿಯಾದ ಕೊರಗ ಸಮುದಾಯವು ಸರಕಾರದ ಮುಂದೆ ತಮ್ಮ ಅಳಲನ್ನು ತೋಡಿಕೊಂಡ ದಿನ. ಮಂಗಳೂರು ಬಾವುಟಗುಡ್ಡೆಯಿಂದ ಆರಂಭವಾಗಿ - ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆಯಲ್ಲಿಯೇ ಸಾಗಿ, ಮಳೆಯನ್ನೂ ಲೆಕ್ಕಿಸದೆ, ಕೊರಗ ಜನಾಂಗದ ಮಹಿಳೆಯರು - ಮಕ್ಕಳೂ ಸೇರಿ, ರಾಜ ಬೀದಿಗಿಳಿದು ಪ್ರತಿಭಟಿಸಿದ ದಿನ. 'ನಮ್ಮ ಜನಾಂಗದ ಅಭಿವೃದ್ಧಿಗೆ ಯೋಜನೆಗಳನ್ನು ತಯಾರಿಸುವ ಮೊದಲು, ನಮ್ಮ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ' ಎಂದು ಸರಕಾರದ ಮುಂದೆ ಒಕ್ಕೊರಳ ಬೇಡಿಕೆಯಿಟ್ಟ ದಿನ. ಅಂದಿನ ಆ ಹೋರಾಟದ ಫಲವಾಗಿಯೇ ಜಿಲ್ಲಾಡಳಿತವು, ಆದಿವಾಸಿ ಬುಡಕಟ್ಟು ಪಂಗಡದ ಕೊರಗ ಜನಾಂಗದ ಸಮಗ್ರ ಅಧ್ಯಯನಕ್ಕಾಗಿ - ಡಾ ಮಹಮ್ಮದ್ ಪೀರ್ (ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದವರು) ರವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ಅದೇ ವರ್ಷ ಉಡುಪಿ ಜಿಲ್ಲೆಯ ಕೊಕ್ಕರ್ಣೆ ಸಮೀಪದ 'ಸೂರಾಲ್ ಮೀಸಲು ಅರಣ್ಟ ಪ್ರದೇಶ'ದ 600 ಎಕ್ರೆ ಜಾಗದಲ್ಲಿ ಭೂಮಿಯ ಹಕ್ಕು ಪ್ರತಿಪಾದಿಸಲು 2000 ಕೊರಗ ಬಂಧುಗಳು ಸನ್ನದ್ಧರಾಗಿದ್ದರು. ಆಗಿನ ಶಾಸಕರಾಗಿದ್ದ ಜಯಪ್ರಕಾಶ ಹೆಗ್ಡೆಯವರು ಮಧ್ಯಪ್ರವೇಶಿಸಿ, ಜಿಲ್ಲಾ ಪಂಚಾಯತ್ ವತಿಯಿಂದ ಭೂಮಿ ಕೊಡಿಸುವ ಭರವಸೆ ನೀಡಿದ ನಂತರ ಅಭಿಯಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

1994 ರಲ್ಲಿ ಹದಿಮೂರು ಪ್ರಮುಖ ಅಂಶಗಳನ್ನೊಳಗೊಂಡ ಅಧ್ಯಯನ ವರದಿಯನ್ನು ಸಮಿತಿ ಸರ್ಕಾರದ ಸುಪರ್ದಿಗೆ ಒಪ್ಪಿಸಿತು. ಈ ವರದಿಯಲ್ಲಿ - '' ಪ್ರತಿಯೊಂದು ಕೊರಗ ಕುಟುಂಬಕ್ಕೂ ಎರಡುವರೆ ಎಕರೆ ಭೂಮಿ ನೀಡಬೇಕು ಹಾಗೂ ಪುನರ್ವಸತಿಗೊಳಿಸಬೇಕು 'ಎಂದು ಶಿಫಾರಸು ಮಾಡಲಾಗಿತ್ತು. ಈ ವರದಿಯ ಸಮಗ್ರ ಅನುಷ್ಟಾನದ ಬೇಡಿಕೆಯನ್ನು ಮುಂದಿಟ್ಟುಕೊಂಡು 'ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ'ವು ನಿರಂತರ ಹೋರಾಟಕ್ಕಿಳಿಯಿತು. ಆದರೆ, ಬೇಡಿಕೆಗಳಿಗೆ ಚಿಕ್ಕಾಸು ಬೆಲೆ ಕೊಡದ ವರಿಷ್ಟ ಅಧಿಕಾರಿಗಳು ಕೆಂಪು ಪಟ್ಟಿಯನ್ನು ಸಡಿಲಿಸದೆ ಮತ್ತಷ್ಟು ಬಿಗು ನಿಲುವಿನಲ್ಲಿಯೇ ಮುಂದುವರಿದರು.

ಕೃಷಿಯನ್ನು ವೃತ್ತಿಯಾಗಿಸಿಕೊಳ್ಳದೆ, ಕುಲಕಸುಬುಗಳಿಗೆ ಜೋತು ಬಿದ್ದ ಕೊರಗ ಕುಟುಂಬಗಳಿಗೆ, ಕೃಷಿ ಭೂಮಿ ಸದುಪಯೋಗಗೊಳ್ಳಬಹುದೆ ಎಂಬ ಅಧಿಕಾರಿಗಳ ಅನುಮಾನದಿಂದ - ದುರ್ಬಲರ ಗಟ್ಟಿ ಧ್ವನಿಯೂ, ಅಧಿಕಾರಿಗಳಿಗೆ ಕೀರಲು ಧ್ವನಿಯಾಗಿ ಪರಿಣಮಿಸಿದ ಹಿನ್ನಲೆಯಲ್ಲಿ ಕೊರಗ ಬಂಧುಗಳ ಬೇಡಿಕೆಗಳಿಗೆ ಅಷ್ಟೊಂದು ಮಹತ್ವ ಲಭಿಸಿರಲಿಲ್ಲ.

ಇದರಿಂದ ವಿಚಲಿತರಾಗದ ಕೊರಗರಲ್ಲಿ - ತಮಗೂ ಕೃಷಿ ಭೂಮಿ ಬೇಕು, ಅದರಲ್ಲೇ ಒಂದಿಷ್ಟು ಉತ್ಪನ್ನ ತೆಗೆದು ಸುಧಾರಣೆ ಮಾಡಿಕೊಳ್ಳಬೇಕೆಂಬ ತುಡಿತ ಹೆಚ್ಚಾಗತೊಡಗಿತು. ಈ ಹಿನ್ನಲೆಯಲ್ಲಿ ಚಳುವಳಿಗಳ ಮೇಲೆ ಚಳುವಳಿ ನಡೆಸುತ್ತಾ, ಸರಕಾರದ ಗಮನ ಸೆಳೆಯಲು ಕೊರಗ ಸಂಘಟನೆಗಳು ಮತ್ತೆ ಮತ್ತೆ ಪ್ರಯತ್ನಿಸಿದವು. ಆ ಪ್ರಯತ್ನಗಳೆಲ್ಲವೂ ಆಳುವ ಸರಕಾರದ ಮುಂದೆ ನಿರುಪಯುಕ್ತವೆನಿಸಿದಾಗ, ಕೊರಗ ಸಮುದಾಯದ ಗೌರವಾಧ್ಯಕ್ಷ ಪಿ. ಗೋಕುಲದಾಸ್ ನೇತೃತ್ವದಲ್ಲಿ 2000 ನೇ ಇಸವಿಯಲ್ಲೇ 'ಭೂಮಿ ಚಳುವಳಿ' ಮತ್ತೆ ಆರಂಭಿಸಲಾಯಿತು.

ಕಳತ್ತೂರು ಚಲೋ: ಪಿ ಗೋಕುಲದಾಸ್ ಸಾರಥ್ಯದಲ್ಲಿ ಜುಲೈ 17 ರಂದು ಕಾಪು ಸಂಘ ವ್ಯಾಪ್ತಿಯಿಂದ ಪಾದಯಾತ್ರೆ ಆರಂಭವಾಗಿ, ಅವಿಭಜಿತ ಜಿಲ್ಲೆಯ ಪ್ರಮುಖ ಕೊರಗರ ಕಾಲೋನಿಗಳಿಗೆ ಸುತ್ತಿ, ಕೊರಗ ಬಂಧುಗಳನ್ನು ಹುರಿದುಂಬಿಸುತ್ತಾ, ತಮ್ಮ ಮೂಲಭೂತ ಹಕ್ಕಿನ ಕುರಿತು ಬಂಧುಗಳನ್ನು ಪ್ರೇರೇಪಿಸುತ್ತಾ, ಭೂಮಿ ಪ್ರತಿಪಾದನೆಯ ಆಧ್ಯತೆಯನ್ನು ಮನಗಾಣಿಸುತ್ತಾ, ಆಗಸ್ಟ್ 18 ರಂದು ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ಕಳತ್ತೂರಿನ ಅರಣ್ಯ ಭೂಮಿ ಆಕ್ರಮಿಸಿ, 'ಭೂಮಿ ಹಕ್ಕು ಪ್ರತಿಪಾದನೆ 'ಚಳುವಳಿ ಹೂಡಿದರು. ಈ ಸಂದರ್ಭದಲ್ಲಿ ಕಠಿಣ ನಿಲುವು ತಳೆದ ಅರಣ್ಯ ಇಲಾಖೆಯವರು, ಪಾರ್ವತಿ ಕೆಂಜೂರು ಎಂಬ ತುಂಬು ಗರ್ಭಿಣಿ ಮಹಿಳೆ ಹಾಗೂ 2 ವರ್ಷದ ಮಗು ಕು. ರಕ್ಷಾ (ಡಿ / ಒ ಗೌರಿ ಕೊಕ್ಕರ್ಣೆ) ಸೇರಿದಂತೆ 28 ಜನರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಯಿತು. 28 ದಿನಗಳ ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡರು. ಆದರೆ, ಇದ್ಯಾವುದಕ್ಕೂ ಜಗ್ಗದ ಕೊರಗರು - ತಮ್ಮ ಬೇಡಿಕೆ ಈಡೇರಿಕೆಗೆ ಕಾನೂನು ಭಂಗವನ್ನು ಮಾಡದೆ ಅಹಿಂಸೆಯ ಹಾದಿಯಲ್ಲಿಯೇ ಧರಣಿ ಮುಂದುವರಿಸಿದರು. ಚಳುವಳಿ ತೀವ್ರ ಸ್ವರೂಪ ಪಡೆದುದನ್ನು ಗಮನಿಸಿದ ಜಿಲ್ಲಾಧಿಕಾರಿ ಹಾಗು ಇತರ ಅಧಿಕಾರಿಗಳು ಕೊರಗ ಮುಖಂಡರೊಂದಿಗೆ ಮಾತುಕತೆ ನಡೆಸಿ, ಸುಮಾರು 300 ಎಕ್ರೆ ಜಾಗವನ್ನು ಗುರುತಿಸಿ, 270 ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಮೂಲಕ 'ಕೊರಗರ ಭೂಮಿ ಹಕ್ಕು ಅಭಿಯಾನ'ದ ಯಶಸ್ಸಿಗೆ ಮೇಲ್ಪಂಕ್ತಿಯನ್ನು ಹಾಕಿದರು.

ಪಾಲಡ್ಕ ಚಲೋ: ಕಳತ್ತೂರು ಚಲೋ ಯಶಸ್ಸಿನ ಹಿನ್ನಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ 600 ಕೊರಗ ಕುಟುಂಬಗಳು 'ಭೂಮಿಯ ಹಕ್ಕು'ಗಾಗಿ ಮನವಿಯನ್ನು ಸಲ್ಲಿಸಿದರು.

ಅಕ್ಟೋಬರ್ 2, 2005 ಗಾಂಧೀ ಜಯಂತಿಯಂದು ಮೂಡಬಿದಿರೆಯ ಸ್ವರಾಜ್ಯ ಮೈದಾನದಿಂದ ಹದಿಮೂರು ಕಿಲೋ ಮೀಟರ್ ದೂರದಲ್ಲಿರುವ, ಕಡಂದಲೆ ಗ್ರಾಮದ ಸರಹದ್ದಿನಲ್ಲಿರುವ 'ಪಾಲಡ್ಕ ಸಾಮಾಜಿಕ ಅರಣ್ಯ ಭೂಮಿ'ಯಲ್ಲಿ, ತಮ್ಮ ಹಕ್ಕು ಪ್ರತಿಪಾದಿಸಲು ಸುಡು ಬಿಸಿಲಿನಲ್ಲಿ ಪಾದಯಾತ್ರೆಯಲ್ಲಿ ಬಂದ ಸುಮಾರು 800 ಕ್ಕೂ ಹೆಚ್ಚು ಕೊರಗ ಬಂಧುಗಳು ಸ್ಥಳದಲ್ಲಿಯೇ ಅನಿದೃಷ್ಟಾವಧಿ ಚಳುವಳಿ ಹೂಡುವ ನಿರ್ಧಾರಕ್ಕೆ ಬಂದರು. ಅಹೋ ರಾತ್ರಿ ಸ್ಥಳಕ್ಕೆ ಭೇಟಿನೀಡಿದ ಪ್ರಭಾರ ಜಿಲ್ಲಾಧಿಕಾರಿ, ತಹಶೀಲ್ದಾರ್, ಜಿಲ್ಲಾ ಪಂಚಾಯತ್ ಅಧಿಕಾರಿಗಳು, ತಾಲೂಕು ಪಂಚಾಯತ್ ಸದಸ್ಯರು - ತಿಂಗಳೊಳಗಾಗಿ ಬೇಡಿಕೆ ಈಡೇರಿಕೆಗೆ ಸರ್ವಸಮ್ಮದ ನಿಲುವು ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಚಳುವಳಿಯನ್ನು ತಾತ್ಕಲಿಕವಾಗಿ ಹಿಂಪಡೆದು ಕೊಳ್ಳಲಾಯಿತು. ತಿಂಗಳೊಳಗಾಗಿ ತಾರ್ಕಿಕ ಅಂತ್ಯ ಕಾಣದಿದ್ದರೆ - 'ಈ ಅರಣ್ಯ ಭೂಮಿಯಲ್ಲಿ ನಮ್ಮ ಬದುಕಿನ ಹಕ್ಕನ್ನು ಪ್ರತಿಪಾದಿಸಿಯೇ ಸಿದ್ಧ' ಎಂಬ ಎಚ್ಚರಿಕೆಯನ್ನು ಆ ಸ್ಥಳದಿಂದಲೇ ಆಳುವ ಸರಕಾರಕ್ಕೆ ಸಲ್ಲಿಸಲಾಯಿತು. ಪ್ರತಿಭಟನೆಯ ತೀವ್ರ ಕಾವಿನಿಂದಾಗಿ 'ಭೂಮಿ ಹಕ್ಕು ಪ್ರತಿಪಾದನಾ ಅಭಿಯಾನ' ಯಶಸ್ವಿಯೂ ಆಯಿತು.

1993 ರಂದು ಆರಂಭಗೊಂಡ 'ಭೂವಿ ಹಕ್ಕು ಪ್ರತಿಪಾದನಾ ಅಭಿಯಾನ'ದ ಫಲವಾಗಿ ಇಂದು ಅವಿಭಜಿತ ಜಿಲ್ಲೆಯಲ್ಲಿಂದು ಸುಮಾರು 450 ಕ್ಕೂ ಹೆಚ್ಚು ಕುಟುಂಬಗಳು 490 ಎಕ್ರೆ ಜಮೀನು ಹಕ್ಕು ಪತ್ರವನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.

ಆಗಸ್ಟ್ 18 ಕೊರಗರ ಸ್ವಾತಂತ್ರ್ಯದ ದಿನ!
2000 ನೇ ಇಸವಿಯ ಆಗಸ್ಟ್ 17 ರ ಸಂಜೆ 3 ಗಂಟೆಗೆ, ಕರ್ನಾಟಕದ ಆಗಿನ ರಾಜ್ಯಪಾಲರಾಗಿದ್ದ ವಿ ಎಸ್ ರಮಾದೇವಿಯವರು 'ಅಜಲು ನಿಷೇದ ಕಾಯಿದೆ'ಗೆ ಅಂತಿಮ ಅಂಕಿತ ಹಾಕಿದ ದಿನ. ಶತಶತಮಾನಗಳ ಬದುಕುವ ಹಕ್ಕನ್ನು ಕಸಿದುಕೊಂಡ, ಬದುಕನ್ನು ಶೋಷಣೆಯ ಅಗ್ನಿಕುಂಡದಲ್ಲಿ ಹಿಂಡಿ ಹಿಪ್ಪೆ ಮಾಡಿದ - ಅವಮಾನವೀಯ 'ಅಜಲು ಪದ್ಧತಿ'ಯನ್ನು ನಿಷೇದಿಸಬೇಕೆಂಬ ಸುಮಾರು ಎಂಟು ವರ್ಷಗಳ ಅವಿರತ ಹೋರಾಟಕ್ಕೆ ಜಯ ಸಿಕ್ಕಿದ ದಿನ. ಆಗಸ್ಟ್ 17 ರ ಮುಸ್ಸಂಜೆ ಸಿಕ್ಕ ಬದುಕಿನ ಸ್ವಾತಂತ್ರ್ಯದ ಸಂಭ್ರಮಾಚರಣೆಯನ್ನೂ, ಸ್ವಾತಂತ್ರ್ಯದ ದಿನವಾಗಿ ಆಗಸ್ಟ್ 18 ರಂದೇ ಆಚರಿಸಲಾಗುತ್ತಿದೆ!

ಶ್ರೇಣೀಕೃತ ಸಮಾಜ ವ್ಯವಸ್ಥೆಯಲ್ಲಿ - ಎಲ್ಲಾ ಸ್ಥರಗಳಲ್ಲೂ ತುಳಿತಕ್ಕೊಳಗಾದ, ಶೋಷಣೆಯ ನಿಕೃಷ್ಠ ಸ್ಥಿತಿಗೆ ದೂಡಲ್ಪಟ್ಟ, ಅಸ್ಪ್ರಶ್ಯರಲ್ಲಿಯೂ ಅಸ್ಯ್ರಶ್ಯರಾದ ಸಮುದಾಯವೊಂದು, ತನ್ನ ಇರುವಿಕೆಯನ್ನು ಜಗತ್ತಿಗೆ ಸಾದರಪಡಿಸಿದ ದಿನ ಆಗಸ್ಟ್ 18.
'ಅಜಲು' ಎಂಬ ಜೀವನದ ಹೀನಾಯ ಸ್ಥರದಿಂದ ಬಂಧಮುಕ್ತಗೊಂಡು, ಜೀವನದ ಹೊಸ ಮಜಲನ್ನು ಮೆಟ್ಟಿದ ದಿನ ಆಗಸ್ಟ್ 18.
ಆದ್ದರಿಂದಲೇ ಈ ದಿನವನ್ನು ಆದಿವಾಸಿ ಬುಡಕಟ್ಟು ಸಮುದಾಯದ ಕೊರಗ ಜನಾಂಗ - ಸ್ವಾತಂತ್ರ್ಯ ಮತ್ತು ಭೂಮಿ ಹಕ್ಕಿನ ಯಶಸ್ಸಿನ ಒಟ್ಟು ಸಂಭ್ರಮದ ಹಿನ್ನಲೆಯೊಂದಿಗೆ 'ಭೂಮಿ ಹಬ್ಬ' ವೆಂದು ಆಚರಿಸುತ್ತಿದೆ. 


- ಬಿ ಎಸ್ ಹೃದಯ