ಸೋಮವಾರ, ಜುಲೈ 9, 2012

ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ಪ್ರೊ. ಹಿ.ಚಿ. ಬೋರಲಿಂಗಯ್ಯ

 ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ಪ್ರೊ. ಹಿ.ಚಿ. ಬೋರಲಿಂಗಯ್ಯ


-ಅರುಣ್ ಜೋಳದಕೂಡ್ಲಿಗಿ


    ಬಹುದಿನದಿಂದ ಖಾಲಿ ಇದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಇಲ್ಲಿಯ ಬುಡಕಟ್ಟು ಅಧ್ಯಯನ ವಿಭಾಗದ ಪ್ರೊಫೆಸರ್ ಹಿ.ಚಿ. ಬೋರಲಿಂಗಯ್ಯ ಅವರು ಆಯ್ಕೆಯಾಗಿದೆ. ಈ ಆಯ್ಕೆಯ ಬಗೆಗೆ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಭ್ರಮದ ವಾತಾವರಣವಿದೆ. ಇಲ್ಲಿಯರೇ ಅಧ್ಯಾಪಕರು ಕುಲಪತಿಗಳಾದ ಸಂಭ್ರಮವದು. ಜಾನಪದ ಅಧ್ಯಯನ, ಬುಡಕಟ್ಟು ಅಧ್ಯಯನಗಳ ಮೂಲಕ ಗುರುತಿಸಿಕೊಂಡಿರುವ ಪ್ರೊ. ಹಿಚಿಬೋ ಅವರು ದೇಸಿ ಚಿಂತನೆಯ ಆಯಾಮದಲ್ಲಿ ಆಲೋಚಿಸಬಲ್ಲವರು. ಕನ್ನಡ ವಿಶ್ವವಿದ್ಯಾಲಯದ ದೇಸಿ ಚಿಂತನೆಯನ್ನು ಇನ್ನಷ್ಟು ವಿಸ್ತರಿಸಬಲ್ಲ ಪ್ರೊ. ಹಿಚಿಬೋ ಅವರನ್ನು ಕನ್ನಡ ಜಾನಪದ ಬ್ಲಾಗ್ ಅಭಿನಂದಿಸುತ್ತದೆ.
  
   ಪ್ರೊ. ಹಿ.ಚಿ. ಬೋರಲಿಂಗಯ್ಯ ಅವರು ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹಿತ್ತಲಪುರ ಗ್ರಾಮದವರು.
ಬಾಲ್ಯದಿಂದಲೇ ಗ್ರಾಮೀಣ ಸಂಸ್ಕೃತಿ, ಸಂಪ್ರದಾಯಗಳ ಸ್ಫೂರ್ತಿ ಪಡೆದು ಜಾನಪದ ಅಧ್ಯಯನ ಆಸಕ್ತಿ ಬೆಳೆಸಿಕೊಂಡವರು.
ಹಂಪಿಯ ವಿಶ್ವವಿದ್ಯಾನಿಲಯದ ಬುಡಕಟ್ಟು ಅಧ್ಯಯನ ವಿಭಾಗದಲ್ಲೂ ಅವರು ತಮ್ಮ ಸೇವೆಯಿಂದ ವಿಶಿಷ್ಟ ಛಾಪು ಮೂಡಿಸಿದವರು. ಇಳಿ ವಯಸ್ಸಿನಲ್ಲೂ ಜಾನಪದ ಅಧ್ಯಯನ, ಸಂಶೋಧನೆಗೆ ತಮ್ಮ ಯುವ ಚೈತನ್ಯ ವನ್ನೂ ಬಳಸಿ ತಮ್ಮ ಕೊಡುಗೆ ನೀಡಿದವರು.


  ಇಟಲಿ, ಫ್ರಾನ್ಸ್, ಹಾಲೆಂಡ್ ಹಾಗೂ ಇರಾನ್ ದೇಶಗಳಲ್ಲಿ ನಡೆದ ಗೊಂಬೆಯಾಟ ಜಾನಪದ ಉತ್ಸವದಲ್ಲಿ ಭಾರತದ ಪ್ರತಿನಿಧಿಯಾಗಿ ಪಾಲ್ಗೊಂಡವರು. ಬುಡಕಟ್ಟು ಜನರ ಇತಿಹಾಸ ಅಧ್ಯಯನ, ಸಂಶೋಧನೆಗಾಗಿ ಅವರು ತಮ್ಮನ್ನು ಗುರುತಿಸಿಕೊಂಡಿದ್ದಾರೆ.

  ಪ್ರೊ. ಹಿಚಿಬೋ ಅವರು ಕನ್ನಡ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿಗಳಾಗಿ, ಕುಲಸಚಿವರಾಗಿ, ವಿವಿಧ ನಿಕಾಯಗಳ ಡೀನ್ ಆಗಿಯೂ, ಕನ್ನಡ ವಿವಿಯ ಪ್ರಸಾರಾಂಗದ ನಿರ್ಧೇಶಕರಾಗಿಯೂ ಕೆಲಸ ಮಾಡಿ ಕನ್ನಡ ವಿಶ್ವವಿದ್ಯಾಲಯದ ಹೇಳಿಗೆಗೆ ಶ್ರಮಿಸಿದ್ದಾರೆ.  17 ವರ್ಷ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಪ್ರೊ. ಹಿಚಿಬೋ ಅವರು ಈ ತನಕ 23 ಕೃತಿಗಳನ್ನೂ, 82 ಸಂಶೋಧನಾ ಪ್ರಬಂಧಗಳನ್ನೂ ಪ್ರಕಟಿಸಿದ್ದಾರೆ.


  ಮುಖ್ಯವಾಗಿ ಗುರುತಿಸಬಹುದಾದ ಅವರ ಕೃತಿಗಳೆಂದರೆ, ಉಜ್ಜನಿ ಚೌಡಮ್ಮ, ದಾಸಪ್ಪ-ಜೋಗಪ್ಪ, ಗಿರಿಜನ ನಾಡಿಗೆ ಪಯಣ, ನಮ್ಮೊಳಗೊಂದು ಪುಟ್ಟ ಆಫ್ರಿಕಾ, ಸಿದ್ಧಿಯರ ಸಂಸ್ಕೃತಿ, ಕಾಡು ಕಾಂಕ್ರೇಟ್ ಮತ್ತು ಜಾನಪದ, ಗಿರಿಜನರು, ಮಂಟೇಸ್ವಾಮಿ ಮಹಾಕಾವ್ಯ (ಸಂಪಾದನೆ), ಕರ್ನಾಕಟ ಜನಪದ ಕಲೆಗಳ ಕೋಶ (ಸಂಪಾದನೆ), ಗೊಂಡರ ರಾಮಾಯಣ, ವಿಸ್ಮೃತಿ ಮತ್ತು ಸಂಸ್ಕೃತಿ,  ಬುಡಕಟ್ಟು ದೈವಾರಾಧನೆ, ಗಿರಿಜನ ಕಾವ್ಯ(ಸಂಪಾದನೆ) , ಹಾಲಕ್ಕಿ ಒಕ್ಕಲಿಗರ ಜ್ಞಾನಪರಂಪರೆ, ಕಾಗೋಡು ಚಳವಳಿ (ಸಂಪಾದನೆ), ದೇಸಿ ಸಂಸ್ಕೃತಿ ಸಂಕಥನ ಮುಂತಾದವುಗಳನ್ನು ಹೆಸರಿಸಬಹುದು. ಬುಡಕಟ್ಟು ಅಧ್ಯಯನ, ಜಾನಪದ ಗಂಗೋತ್ರಿ, ಚೆಲುವ ಕನ್ನಡ, ಪುಸ್ತಕ ಮಾಹಿತಿ ಮುಂತಾದ ಸಂಶೋಧನ ಪತ್ರಿಕೆಗಳ ಸಂಪಾದಕರಾಗಿಯೂ ದುಡಿದಿದ್ದಾರೆ. ಕರ್ನಾಟಕ ಬುಡಕಟ್ಟು ಮಹಾಕಾವ್ಯ ಮಾಲೆಯ  ಪ್ರಧಾನ ಸಂಪಾದಕರಾಗಿ ಜನಪದ ಮಹಾಕಾವ್ಯಗಳ ಸಂಗ್ರಹದಂತಹ ಚಾರಿತ್ರಿಕ ಮಹತ್ವದ ಕೆಲಸಕ್ಕೆ ಪ್ರೇರಣೆಯಾಗಿದ್ದಾರೆ.

     ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ. ಮುಖ್ಯವಾಗಿ ದೇಸಿ ಆಲೋಚನ ಕ್ರಮ ಇವರ ಚಿಂತನೆಯಲ್ಲಿ ಪ್ರಮುಖವಾಗಿ ಕಾಣಬಹುದಾಗಿದೆ. ಅವರು ಜಾನಪದ ಅಕಾಡೆಮಿಯ ರಿಜಿಷ್ಟ್ರಾರ್ ಆದಾಗಲೂ ಜಾನಪದ ಕ್ಷೇತ್ರಕ್ಕೆ ಬಹಳ ಮುಖ್ಯ ಕೊಡುಗೆಗಳನ್ನು ನೀಡಿದ್ದಾರೆ. ಅಂತೆಯೇ ಜಾನಪದ ವಿದ್ವಾಂಸರಾಗಿ ಕನ್ನಡದಲ್ಲಿ ಲೋಕದೃಷ್ಠಿಯ ಬಗ್ಗೆ ಮೊದಲ ಬಾರಿಗೆ ವಿಸ್ತಾರವಾಗಿ ಶೋಧಿಸಿದರು. ಅದು ಅವರ ವಿಸ್ಮೃತಿ ಸಂಸ್ಕ್ರತಿ ಕೃತಿಯಲ್ಲಿ ನೋಡಬಹುದು. ಕಾಡು ಕಾಂಕ್ರೇಟ್ ಪುಸ್ತಕದಲ್ಲಿ ಆಧುನಿಕ ಅಭಿವೃದ್ಧಿಯ ಮಾದರಿಗಳಿಂದಾಗಿ ಬುಡಕಟ್ಟು ಸಮುದಾಯಗಳು ಎದುರಿಸುತ್ತಿರುವ ಬಿಕ್ಕಟ್ಟುಗಳ ಬಗ್ಗೆ ತುಂಬಾ ಸೂಕ್ಷ್ಮವಾಗಿ ಆಲೋಚಿಸುತ್ತಾರೆ.

  ಹೀಗಿರುವ ಪ್ರೊ. ಹಿಚಿಬೋ ಅವರು ಕನ್ನಡ ವಿಶ್ವವಿದ್ಯಾಲಯವನ್ನು ಸಮರ್ಥವಾಗಿ ಮುನ್ನಡೆಸಲಿ ಎಂದು ಮತ್ತೊಮ್ಮೆ ಶುಭ ಹಾರೈಸುತ್ತೇನೆ.

ಜಾನಪದ ಜಗತ್ತಿನ ಕನಸು

ಗಣೇಶ ಅಮೀನಗಡ 

 ಕೃಪೆ: ಪ್ರಜಾವಾಣಿ

ಜಗತ್ತಿನ ಮೊದಲ ಜಾನಪದ ವಿಶ್ವವಿದ್ಯಾನಿಲಯ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲ್ಲೂಕಿನ ಗೊಟಗೋಡಿಯಲ್ಲಿ ಆರಂಭಗೊಂಡಿದ್ದು, ಇದರ ಮೊದಲ ಕುಲಪತಿ ಡಾ.ಅಂಬಳಿಕೆ ಹಿರಿಯಣ್ಣ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬಳಿಕೆ ಗ್ರಾಮದ ಹಿರಿಯಣ್ಣ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ನಂತರ `ಮಲೆನಾಡಿನ ಒಕ್ಕಲಿಗರು ಮತ್ತು ಅವರ ಜಾನಪದ` ಕುರಿತು ಪಿಎಚ್.ಡಿ ಪದವಿ ಪಡೆದ ನಂತರ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.

ಜೊತೆಗೆ ಬುಡಕಟ್ಟು ಜನರ ಬದುಕನ್ನು ಮತ್ತು ಅವರ ಸಂಸ್ಕೃತಿಯನ್ನು ನಿಕಟವಾಗಿ ನೋಡಿದವರು. ದಕ್ಷಿಣ ಕರ್ನಾಟಕದ ಕಾಡುಗೊಲ್ಲರ ಸಾಹಿತ್ಯ ಹಾಗೂ ಸಂಸ್ಕೃತಿ ಅಧ್ಯಯನದೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಕಚ್ಚೆ ಗೌಳಿಗರ ಕುರಿತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಉಪಸಂಸ್ಕೃತಿ ಮಾಲೆಯಡಿ ಅಧ್ಯಯನ ಹಾಗೂ ತಮಿಳುನಾಡಿನ ನೀಲಗಿರಿ ಬೆಟ್ಟದಲ್ಲಿಯ ತೊದವರು ಕುರಿತು ಅಧ್ಯಯನ ಕೈಗೊಂಡರು.

ಜೊತೆಗೆ ತೊಗಲು ಗೊಂಬೆಯಾಟ, ಯಕ್ಷಗಾನ ಸಾಹಿತ್ಯ, ಸೂರ್ಯ ಜಾನಪದ ಹೀಗೆ ಜಾನಪದದ ವಿವಿಧ ಸಂಪ್ರದಾಯಗಳು, ನಂಬಿಕೆಗಳು ಕುರಿತು ನಿರಂತರ ಅಧ್ಯಯನನಿರತರು. `ಮಲೆನಾಡಿನ ಜನಪದ ಸಂಪ್ರದಾಯಗಳು` ಕುರಿತು ಕೃತಿಯನ್ನು ಪ್ರಕಟಿಸಿದ್ದಾರೆ.

ಜಾಗತಿಕ ಸೈದ್ಧಾಂತಿಕ ವಿಚಾರಗಳನ್ನು ಅರಗಿಸಿಕೊಂಡು ಕನ್ನಡ ಜಾನಪದವನ್ನು ಅವರು ನೋಡಿದ ಪರಿಣಾಮ ಜಾನಪದಕ್ಕೆ ಅಖಂಡವಾದ ನೋಟವನ್ನು ತಂದುಕೊಡಲು ಯತ್ನಿಸಿದರು.

ರಷ್ಯಾದ ಪ್ರಾಪ್ ಎಂಬ ವಿದ್ವಾಂಸನ ಮಾದರಿಯಲ್ಲಿ ಕನ್ನಡ ಜನಪದ ಗದ್ಯ ಕಥನಗಳನ್ನು ಅರ್ಥೈಸುವುದರ ಜೊತೆಗೆ ಪ್ರಾಪ್ ಮಾದರಿಯನ್ನು ಕನ್ನಡದ ಕಥೆ ಹಾಗೂ ಪುರಾಣಗಳಿಗೆ ಅನ್ವಯಿಸಿ ವಿಶ್ಲೇಷಿಸಿದರು.

ಇದುವರೆಗೆ ಅವರ 43 ಕೃತಿಗಳು ಬೆಳಕು ಕಂಡಿದ್ದು, ಹಲವಾರು ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

* ಜಾನಪದ ವಿಶ್ವವಿದ್ಯಾನಿಲಯದ ಸ್ವರೂಪ ಹೇಗೆ?
ಜಾನಪದ ಕುರಿತು ರೂಪುಗೊಂಡ ಮೊದಲ ವಿಶ್ವವಿದ್ಯಾನಿಲಯವಿದು. ಇದು ವಿನೂತನ ಪ್ರಯತ್ನ. ಈಗಿರುವ ವಿಶ್ವವಿದ್ಯಾನಿಲಯಗಳ ಮಾದರಿಯಲ್ಲಿ ಕಲಿಸುವ ಕ್ರಮ ಇರುವುದಿಲ್ಲ. ಇದಕ್ಕೆ ಬದು-ಬಾಂದು (ಗಡಿ ಕಲ್ಲು) ಇಲ್ಲ; ಎಲ್ಲ ಮುಕ್ತ. ಜಾನಪದ ಜ್ಞಾನ ಎಂದರೆ ಅದು ಸಮುದಾಯ ಜ್ಞಾನ. ಬಹುಮಟ್ಟಿಗೆ ಮೌಖಿಕ ಪರಂಪರೆಯಲ್ಲಿ ಉಳಿದು ಬಂದಿರುವ ಜ್ಞಾನ.

ಬರವಣಿಗೆ ಗೊತ್ತಿಲ್ಲದವರು ಅಭಿನಯ ಹಾಗೂ ಮಾತಿನ ಮೂಲಕ ಅಭಿವ್ಯಕ್ತಿಸಿ ಜನಮಾನಸದಲ್ಲಿ ಜಾನಪದವನ್ನು ಉಳಿಸಿದ್ದಾರೆ. ಇಂಥ ಜಾನಪದದತ್ತ ಇಂದಿನ ಯುವಜನತೆಯನ್ನು ಸೆಳೆಯಬೇಕಿದೆ. ಇದಕ್ಕಾಗಿ ಆಸಕ್ತರಿಗೆ ಪ್ರಯೋಗ-ಪ್ರದರ್ಶನ ಮೂಲಕ ಕಲಿಸಲಾಗುತ್ತದೆ.

* ಕಲಿಸುವ ವಿಧಾನ ಹೇಗೆ?
ಮೂಲೆಗುಂಪಾದ ವೃತ್ತಿ ಕಲಾವಿದರನ್ನು ಗುರುತಿಸಿ, ಆಹ್ವಾನಿಸಿ ಅವರಿಂದ ಕಲಿಸುತ್ತೇವೆ. ವಿಶ್ವವಿದ್ಯಾನಿಲಯದ ಅಧಿನಿಯಮದ ಪ್ರಕಾರ ಒಂದು ವರ್ಷಕ್ಕೆ 14 ಕಲಾವಿದರನ್ನು ನೇಮಿಸಿಕೊಳ್ಳಬಹುದು. ಈ ವರ್ಷ ಮೂರು ಕಲಾವಿದರನ್ನು ನೇಮಿಸಿಕೊಳ್ಳಲು ಅವಕಾಶವಿದೆ.

ತೊಗಲು ಗೊಂಬೆಯಾಟ, ದೊಡ್ಡಾಟ, ಪೂಜಾ ಕುಣಿತ ಹಾಗೂ ಚಿಟ್ ಮೇಳವನ್ನು ಮುನ್ನೆಲೆಗೆ ತರುವ ಸಲುವಾಗಿ ಕಲಿಸುತ್ತೇವೆ ಜೊತೆಗೆ ಬುಡಕಟ್ಟು ಕುಣಿತ ಕಲಿಸುವ ಹಂಬಲವಿದೆ.

ಮುಂದೆ ಡೊಳ್ಳು ಕುಣಿತದ ಕಲಾವಿದರು ಹಾಗೂ ಯಕ್ಷಗಾನ ಕಲಾವಿದರನ್ನು ನೇಮಿಸಿಕೊಂಡು ಅವರ ಮೂಲಕ ಈಗಿನ ತಲೆಮಾರಿನ ಕಲಾವಿದರಿಗೆ ಕಲೆಗಳನ್ನು ಹಸ್ತಾಂತರಿಸುತ್ತೇವೆ. ಒಂದು ವರ್ಷದವರೆಗೆ ಯುಜಿಸಿ ವೇತನ ನೀಡುತ್ತೇವೆ.

ಕಲಿಯುವವರಿಗೆ ವಸತಿಸಹಿತ ಸೌಲಭ್ಯ ಕಲ್ಪಿಸಲಿದ್ದೇವೆ. ಮುಖ್ಯವಾಗಿ ಇದು ನಿವಾಸಿ ಸ್ವರೂಪದ ವಿಶ್ವವಿದ್ಯಾನಿಲಯ. ಜೊತೆಗೆ ಏಕವಿಷಯ ಅವಲಂಬಿತವಾದರೂ ಬಹುಶಾಸ್ತ್ರೀಯ ವಿಷಯಗಳು ಅಳವಡುತ್ತವೆ.

ಮನೋವಿಜ್ಞಾನ, ಸಾಹಿತ್ಯ, ಸಮಾಜವಿಜ್ಞಾನ, ಚರಿತ್ರೆ, ವಿಜ್ಞಾನದ ಹಿನ್ನೆಲೆಯಲ್ಲಿ ಪ್ರಾಣಿವಿಜ್ಞಾನ, ಸಸ್ಯವಿಜ್ಞಾನ, ಖಗೋಳವಿಜ್ಞಾನ ಹಿನ್ನೆಲೆಯಲ್ಲಿ ಈ ಪಾರಂಪರಿಕ ಜ್ಞಾನವನ್ನು ಅಧ್ಯಯನ ಮಾಡಬಹುದು.

* ವಿಶ್ವವಿದ್ಯಾಲಯ ಎಂದರೆ ವಿದ್ವಾಂಸರಿಗೆ ಮಾತ್ರ ಮೀಸಲು ಎನ್ನುವ ಅಭಿಪ್ರಾಯವಿದೆ?
ನಿಜ. ಆದರೆ ನಮ್ಮದು ಜನತಾ ವಿಶ್ವವಿದ್ಯಾನಿಲಯ. ಜನಪದ ಕಲಾವಿದರು, ಕುಶಲಕರ್ಮಿಗಳು, ಕಸುಬುದಾರರು... ಹೀಗೆ ಎಲ್ಲ ಬಗೆಯವರು ಇದು ನಮ್ಮ ವಿಶ್ವವಿದ್ಯಾನಿಲಯವೆಂದು ಬರಬೇಕು.

ಪ್ರತಿ ವೃತ್ತಿಯವರಿಗೆ ಕುಟೀರಗಳನ್ನು ನಿರ್ಮಿಸಿ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುತ್ತೇವೆ. ಇದು ಸ್ವಉದ್ಯೋಗ ಮೂಲಕ ಸ್ವಾವಲಂಬಿಯಾಗಿಸುವ ಗುರಿ.

ಈಗಾಗಲೇ ಗೊಟಗೋಡಿಯಲ್ಲಿ ಉತ್ಸವ ರಾಕ್ ಗಾರ್ಡನ್‌ನಲ್ಲಿ ಗ್ರಾಮ ಸಂಸ್ಕೃತಿ ಕಟ್ಟಿಕೊಟ್ಟಿರುವ ಕಲಾವಿದ ತಿಪ್ಪಣ್ಣ ಸೊಲಬಕ್ಕನವರ ಸುಮಾರು 200 ಜನರಿಗೆ ಉದ್ಯೋಗ ಕಲ್ಪಿಸಿದ್ದಾರೆ. ಇದು ಸ್ವಾವಲಂಬಿ ಬದುಕಿಗೆ ಮಾದರಿ. ಇದನ್ನು ವಿಶ್ವವಿದ್ಯಾಲಯದ ಮೂಲಕ ಮುಂದುವರಿಸುತ್ತೇವೆ.

* ರಾಜ್ಯದಲ್ಲಿ ಜಾನಪದವನ್ನು ಶಾಸ್ತ್ರೀಯವಾಗಿ ಓದಿರುವವರಿಗೆ ಯಾವ ಯೋಜನೆ?
ಜಾನಪದ ಎಂ.ಎ ಪದವಿ ಪಡೆದವರ ಜೊತೆಗೆ ಎಂ.ಫಿಲ್ ಹಾಗೂ ಪಿಎಚ್.ಡಿ ಪಡೆದವರಿಗೆ ಒಂದು ವರ್ಷದ ಕಾಲಮಿತಿಯಲ್ಲಿ ಕಿರು ಸಂಶೋಧನೆ ಕೈಗೊಳ್ಳಬಹುದು. 30 ಜಿಲ್ಲೆಗಳಿಂದ 30 ಸಂಶೋಧಕರನ್ನು ಆಯ್ಕೆ ಮಾಡಲಿದ್ದೇವೆ. ಸಂಶೋಧಕರಿಗೆ ಒಂದು ಲಕ್ಷ ರೂಪಾಯಿ ಅನುದಾನ ಸಿಗಲಿದೆ.

* ಜಾನಪದ ವಿಶ್ವವಿದ್ಯಾನಿಲಯವನ್ನು ವಿಸ್ತರಿಸುವ ಯೋಜನೆ?
ಇದೆ. ಬೀದರ, ಉಡುಪಿ ಅಥವಾ ಮಂಗಳೂರು, ರಾಮನಗರ ಹೀಗೆ ಸ್ಥಳ, ಅನುದಾನ ಹಾಗೂ ಮಾನವ ಸಂಪನ್ಮೂಲ ಲಭ್ಯತೆಯನ್ನು ಗಮನಿಸಿ ಆರು ಕಡೆ ಪ್ರಾದೇಶಿಕ ಕೇಂದ್ರಗಳನ್ನು ಆರಂಭಿಸುವ ಗುರಿಯಿದೆ.

ಇದರಿಂದ ಆಯಾ ಪ್ರದೇಶದ ಕಲೆ, ಸಂಸ್ಕೃತಿ ಹಾಗೂ ಭಾಷೆ ಪುನಶ್ಚೇತನಗೊಳ್ಳಬೇಕು. ಅಲ್ಲಿಯ ಯುವ ಜನತೆಯಲ್ಲಿ ಜಾನಪದ ಕುರಿತು ಸದಭಿರುಚಿ ಹುಟ್ಟಬೇಕು. ಜೊತೆಗೆ ಇಂದಿನ ಪೀಳಿಗೆಗೆ ಸಮುದಾಯ ಜ್ಞಾನ ಹಿರಿಯರಿಂದ ಹಸ್ತಾಂತರಗೊಳ್ಳಬೇಕು.

* ಜಾನಪದಕ್ಕೆ ಸಂಬಂಧಿಸಿ ನಿಘಂಟು ತರುತ್ತೀರಾ?
ಕನ್ನಡ ಜಾನಪದ ನಿಘಂಟು ಎಂಬ ಮೂರು ಸಂಪುಟಗಳನ್ನು ಜಾನಪದ ಅಕಾಡೆಮಿಯು ಗೊ.ರು. ಚನ್ನಬಸಪ್ಪ ನೇತೃತ್ವದಲ್ಲಿ ಈಗಾಗಲೇ ಹೊರತರಲಾಗಿದೆ. ಇನ್ನಷ್ಟು ವೈಜ್ಞಾನಿಕವಾಗಿ, ಸಮಗ್ರವಾಗಿ ಹಾಗೂ ಅಖಂಡ ಕರ್ನಾಟಕ ವ್ಯಾಪ್ತಿಯಲ್ಲಿ ಭಾಷೆಯ ಸೊಗಡನ್ನು ಸಂರಕ್ಷಿಸುವ ರೀತಿಯಲ್ಲಿ 10 ಸಂಪುಟಗಳನ್ನು ತರುತ್ತೇವೆ.

* ದಾಖಲೀಕರಣ ಕೈಗೊಳ್ಳುವಿರಾ?
ಹೌದು. ಜಾನಪದ ದಾಖಲೀಕರಣ ಕಾರ್ಯ ಸಮಗ್ರವಾಗಿ ಆಗಿಯೇ ಇಲ್ಲ. ರಾಜ್ಯದ ನಾಲ್ಕು ಕಂದಾಯ ವಲಯಗಳಲ್ಲಿ ನಾಲ್ಕು ತಂಡಗಳನ್ನು ಕಟ್ಟಲಾಗುತ್ತದೆ. ವ್ಯಾಪಕವಾಗಿ ಸಂಚರಿಸಿ ಕನ್ನಡದಲ್ಲಿ ಪ್ರಚಲಿತವಿರುವ, ವಿಶಿಷ್ಟ ಅಂಶಗಳುಳ್ಳ ಮಾಹಿತಿಗಳನ್ನು ಶ್ರವ್ಯ ಹಾಗೂ ದೃಶ್ಯ ಮಾಧ್ಯಮದಲ್ಲಿ ದಾಖಲಿಸಲಾಗುತ್ತದೆ.

ಜೊತೆಗೆ ದಾಖಲಾತಿ ಭಂಡಾರವನ್ನು ನಿರ್ಮಿಸುತ್ತೇವೆ. ಹೇಗೆಂದರೆ ಶ್ರವ್ಯ ಹಾಗೂ ದೃಶ್ಯ ಮಾಧ್ಯಮವೆಂದು ಸಿಗುವ ಉದಾಹರಣೆಗೆ ರಂಗ ಪ್ರದರ್ಶನ, ರೇಖಾಚಿತ್ರ, ಫೋಟೋ ಹೀಗೆ ಎಲ್ಲವನ್ನು ಭಂಡಾರದಲ್ಲಿ ಸಂಗ್ರಹಿಸಿಡುತ್ತೇವೆ. ಯುರೋಪ್ ರಾಷ್ಟ್ರಗಳಲ್ಲಿ ದಾಖಲಾತಿ ಭಂಡಾರಗಳಿವೆ.
ಇದೇ ಮಾದರಿಯಲ್ಲಿ ನಮ್ಮ ವಿಶ್ವವಿದ್ಯಾನಿಲಯದಲ್ಲಿ ಭಂಡಾರ ಆಗಲಿದೆ. ಇದರೊಂದಿಗೆ ಗ್ರಾಮ ಕರ್ನಾಟಕ ನಿರ್ಮಾಣ ಆಗಲಿದೆ. ರಾಜ್ಯದ 30 ಜಿಲ್ಲೆಗಳಲ್ಲಿ ಭಿನ್ನ ಸಂಸ್ಕೃತಿಗಳಿವೆ.

ಅದನ್ನು ಬಿಂಬಿಸುವ ಭೌತಿಕ ಪ್ರದರ್ಶನಾಲಯ ಕಟ್ಟಲಿದ್ದೇವೆ. ಅದು ಬಯಲು ವಸ್ತುಸಂಗ್ರಹಾಲಯ. ಇದರಿಂದ ಜಾನಪದ ವಿಶ್ವವಿದ್ಯಾನಿಲಯ ಪ್ರವಾಸಿ ಕೇಂದ್ರವಾಗಿಯೂ ಗಮನ ಸೆಳೆಯಲಿದ್ದು, ಮಾರುಕಟ್ಟೆ ವಿಸ್ತರಣೆಯಾಗಲಿದ್ದು, ಉತ್ತರ ಕರ್ನಾಟಕ ಆರ್ಥಿಕವಾಗಿಯೂ ಅಭಿವೃದ್ಧಿಯಾಗಲಿದೆ.

* ವಿಶ್ವವಿದ್ಯಾನಿಲಯದ ಯೋಜನೆಗಳೇನು?

ಗ್ರಾಮ ಚರಿತ್ರ ಕೋಶ ತರಲಿದ್ದೇವೆ. ಇದು ತ್ರೈವಾರ್ಷಿಕ ಯೋಜನೆ. ರಾಜ್ಯದ 30 ಜಿಲ್ಲೆಗಳ 176 ತಾಲ್ಲೂಕುಗಳ 36 ಸಾವಿರ ಗ್ರಾಮಗಳ ಚರಿತ್ರೆಯನ್ನು ಕಟ್ಟಿಕೊಡುವ ಸುಮಾರು 10 ಕೋಟಿ ರೂಪಾಯಿಯ ಬೃಹತ್ ಯೋಜನೆ ಇದು. ದಕ್ಷಿಣ ಭಾರತೀಯ ದೇಸಿ ಕೃಷಿ ವಿಜ್ಞಾನ ಕೋಶವನ್ನು ತರುತ್ತೇವೆ.

ಇದು ಒಂದು ಸಾವಿರ ಪುಟಗಳ ಮಿತಿಯ ಸಂಪುಟ. ದಕ್ಷಿಣ ಭಾರತದ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳ ಕೃಷಿಗೆ ಸಂಬಂಧಿಸಿದ ಕೋಶವದು. ರಾಜ್ಯದಲ್ಲಿಯ ತುಳು ಹಾಗೂ ಕೊಡವ ಭಾಷೆಗೆ ಸಂಬಂಧಿಸಿದ ಕೃಷಿ ಜ್ಞಾನವನ್ನು ಸಂಪುಟದಲ್ಲಿ ಸೇರಿಸಲಾಗುತ್ತದೆ.

ಸಂದರ್ಶಕರು: ಗಣೇಶ್ ಅಮಿನಗಡ

ಶುಕ್ರವಾರ, ಜೂನ್ 29, 2012

ಜಾನಪದ ಅಕಾಡೆಮಿಯ ಮುಂದಿರುವ ಪ್ರಶ್ನೆಗಳು

ಜಾನಪದ ಅಕಾಡೆಮಿಯ ಮುಂದಿರುವ ಪ್ರಶ್ನೆಗಳು

  • June 28, 2012
  • Share  
  • [-]
  • Text
  • [+]

ಕರ್ನಾಟಕ ಜಾನಪದ ಅಕಾಡಮಿಗೆ ಹೊಸ ಅಧ್ಯಕ್ಷರ ನೇಮಕವಾಗಿದೆ. ಇನ್ನಷ್ಟೇ  ಕೆಲಸ  ಆರಂಭವಾಗಬೇಕಿದೆ. ಈ ಹೊತ್ತಲ್ಲಿ ಅಕಾಡಮಿ ಕೆಲಸಗಳ ಪುನರಾವಲೋಕನ ಮತ್ತು ಮುಂದಿನ ಹೆಜ್ಜೆಗಳ ಸಾಧ್ಯತೆಯ ಬಗ್ಗೆ ಚರ್ಚಿಸುವ ಅಗತ್ಯವಿದೆ. 


ಹಿಂದಿನ ಅಧ್ಯಕ್ಷರಾದ ಗೋ.ರು. ಚನ್ನಬಸಪ್ಪ ಅವರು ಜಾನಪದದ ಸಾಂಪ್ರದಾಯಿಕ ತಿಳುವಳಿಕೆಯ ಚೌಕಟ್ಟಿನಲ್ಲೇ ಕೆಲವು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಜಾನಪದ ಕಲಾವಿದರ ಕ್ಷೇಮಾಭಿವೃದ್ಧಿ ನಿಧಿ ಒಳಗೊಂಡಂತೆ, ಜಾನಪದ ವಿಶ್ವವಿದ್ಯಾಲಯ ಸ್ಥಾಪನೆ, ಅಖಿಲ ಭಾರತ ಜಾನಪದ ಸಮ್ಮೇಳನ, ಜಾನಪದ ನಿಘಂಟು ರಚನೆ ಮುಂತಾದವುಗಳನ್ನು ಹೆಸರಿಸಬಹುದು. ಒಟ್ಟಾರೆ ಜಡವಾಗಿದ್ದ ಅಕಾಡೆಮಿಗೆ ಒಂದು ಚಲನೆಯನ್ನು ಗೊ.ರು.ಚ ತಂದಿದ್ದರು.

ಜಾನಪದದ ಬಗೆಗಿನ ಸಾಂಪ್ರದಾಯಿಕ ತಿಳುವಳಿಕೆಯಲ್ಲೇ ಅಕಾಡೆಮಿಯ ಬಹುಪಾಲು ಕೆಲಸ ಕಾರ್ಯಗಳು ನಡೆದಿವೆ. ಆದರೆ ಇಂದು ಜಾನಪದ ಬಗೆಗಿನ ಸಾಂಪ್ರದಾಯಿಕ ತಿಳುವಳಿಕೆಯಿಂದ ಹೊರಬರುವ ಅಗತ್ಯವಿದೆ. ಜನಸಮುದಾಯಗಳ ಒಡನಾಟದ  ಹೊಸ ವಲಯಗಳ ಒಳಗೂ ಹೊಸ ಜಾನಪದ ಹುಟ್ಟುತ್ತಿದೆ.
 
ಉದಾ: ಬೆಂಗಳೂರಿನಲ್ಲಿ ಬೇರೆ ಬೇರೆ ಕೆಲಸಗಳಿಗೆ ವಲಸೆ ಬಂದ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದ ಜನರನ್ನು ಮಾತನಾಡಿಸಿದರೆ, ಅವರದೇ ಆದ ಬೆಂಗಳೂರು ಕಥನವನ್ನು ಕಟ್ಟಿಕೊಡುತ್ತಾರೆ. ಇದು ಮಿರಿಮಿರಿ ಮಿಂಚುವ ಬೆಂಗಳೂರಿನ ಅಬ್ಬರದ ಚಿತ್ರಕ್ಕಿಂತ ಬೇರೆಯದೇ ಆದ ಚಿತ್ರವನ್ನು ಕೊಡುತ್ತದೆ. ಇಂತಹದ್ದೇ ಅನೇಕ ಉದಾಹರಣೆಗಳನ್ನು ಕೊಡಬಹುದು.

ಜಾಗತಿಕವಾಗಿಯೂ ಜಾನಪದ ಅಧ್ಯಯನಗಳು ಈ ಬಗೆಯ ಸಾಂಪ್ರದಾಯಿಕ ಸಂಗತಿಗಳಾಚೆಯೂ ಚಲಿಸಿದೆ. ಇಂಟರ್‌ನೆಟ್‌ನಲ್ಲಿ ಹುಟ್ಟುವ ಜಾನಪದ, ಮಾಧ್ಯಮಗಳಲ್ಲಿ ಹುಟ್ಟುವ `ಸುದ್ದಿ ಜಾನಪದ` ಮುಂತಾದ ಹೊಸ ಸಂಗತಿಗಳ ಕಡೆ ಗಮನ ನೆಟ್ಟಿವೆ. `ಫೋಕ್ ಹೈಸ್ಕೂಲ್` ಮೂಲಕ ಒಂದು ಜನಪದ ಶಿಕ್ಷಣ ಪದ್ದತಿಯನ್ನೇ ರೂಪಿಸಿವೆ. ಇಂತಹ ಎಲ್ಲಾ ಬಗೆಯ ಚಲನೆಗಳನ್ನು ಗಮನಿಸುತ್ತಲೇ ಕನ್ನಡ ಜಾನಪದದ ತಿಳುವಳಿಕೆಯನ್ನು ಪುನರ್ ನಿರ್ವಚಿಸಿಕೊಳ್ಳಬೇಕಿದೆ.

ಜಾನಪದ ಕಲಾವಿದರಿಗೂ, ಶಾಸ್ತ್ರೀಯ ಕಲಾವಿದರಿಗೂ ಇರುವ ಸಂಭಾವನೆಯ ನೆಲ ಮುಗಿಲಿನಂತರವನ್ನು ಬದಲಿಸಬೇಕಾಗಿದೆ. ಜನಪದ ಕಲಾವಿದರನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸುವವರಿಗೆ ಒಂದು ಕಲೆಗೆ, ಕಲಾವಿದರಿಗೆ ಈ ಕಾಲಮಾನಕ್ಕೆ ತಕ್ಕ ಹಾಗೆ ಇಂತಿಷ್ಟು ಗೌರವಯುತವಾದ ಸಂಭಾವನೆಯನ್ನು ನಿಗದಿ ಮಾಡಬೇಕಾಗಿದೆ. ಅವರನ್ನು ನಡೆಸಿಕೊಳ್ಳುವ ಬಗ್ಗೆಯೂ ನೀತಿ ಸಂಹಿತೆಯನ್ನು ರೂಪಿಸಬೇಕಿದೆ. 

ಅಂತೆಯೇ ಒಂದು ಕಲೆಯ ಒಂದೇ ತಂಡವನ್ನೇ ಎಲ್ಲಾ ಕಡೆ ಸವಲತ್ತೀಕರಿಸುವ ಬದಲು ಅದೇ ಕಲಾಪ್ರಕಾರದ ಪ್ರಾದೇಶಿಕ ಭಿನ್ನತೆಗಳನ್ನು ಆಯ್ದುಕೊಳ್ಳಬೇಕಾಗಿದೆ. ಮುಖ್ಯವಾಗಿ ಜಾನಪದ ಕಲಾವಿದರಿಗೆ ಮಾಸಾಶನ ದೊರೆಯುವ ವಯಸ್ಸನ್ನು ಕಡಿತಗೊಳಿಸುವ ಅಗತ್ಯವಿದೆ. ಕಾರಣ ಈಗಿರುವ ಅರವತ್ತು ವರ್ಷದ ಅವಧಿಯನ್ನು ಪೂರೈಸುವುದೇ ದೊಡ್ಡ ಸಂಗತಿಯಾಗಿದೆ.

ಕರ್ನಾಟಕದಲ್ಲಿಯೇ ಜಾನಪದ ಭಿನ್ನವಾಗಿ ಹೊಸ ನಡಿಗೆ ಕಂಡಿದೆ. ಮಹಿಳೆಯರು ಜನಪದ ಕಲೆಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ. ಅಂತೆಯೇ ಕೆಲವು ಹಳ್ಳಿಗಳ ಮಹಿಳಾ ಸಂಘಗಳು ಒಂದೊಂದು ಜನಪದ ಕಲೆಯನ್ನು ಕಲಿತು ಬೇರೆ ಬೇರೆ ಕಡೆ ಪ್ರದರ್ಶನ ಮಾಡುತ್ತಿವೆ. ಮುಖ್ಯವಾಗಿ ಗ್ರಾಮೀಣ ಯುವ ಪಡೆ ಜಾನಪದಕ್ಕೆ ಪ್ರವೇಶಿಸುತ್ತಿದೆ.
 
ಈ ಬಗೆಯ ಜಾನಪದದ ಹೊಸ ಚಲನೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ. ಗುಡಿಕೈಗಾರಿಕೆಯನ್ನು ಅಭಿವೃದ್ಧಿಪಡಿಸುವ ಹಾಗೆ ಯುವಕರಿಗೆ ಜನಪದ ಕಸಬುಗಳನ್ನು ಆಧರಿಸಿದ ಸ್ವಉದ್ಯೋಗ ತರಬೇತಿಗಳನ್ನು ಮಾಡಿಸಬಹುದಾಗಿದೆ. 

ನಾಟಕದ ರೆಪರ್ಟರಿಗಳ ಹಾಗೆ ರಾಜ್ಯದಾದ್ಯಂತ ಸಂಚರಿಸುವ ವಿವಿಧ ಜನಪದಕಲೆಗಳ ರೆಪರ್ಟರಿಗಳನ್ನು ಮಾಡುವ ಅಗತ್ಯವಿದೆ. ಮುಖ್ಯವಾಗಿ ಜಾನಪದವನ್ನು ಮೋಹಿಸುವ ಸಂಶೋಧನೆಗಿಂದ ಜಾನಪದವನ್ನು ವಿಮರ್ಶಾತ್ಮಕವಾಗಿ ಮಂಡಿಸುವ ಸಂಶೋಧನೆಗಳಿಗೆ, ಜಾನಪದವನ್ನು ಮ್ಯೂಜಿಯಂ ನ ಐಟಮ್ ಆಗಿ ನೋಡುವ ಚಿಂತನಾ ಕ್ರಮಗಳಿಗಿಂತ ಅದನ್ನೊಂದು ಚಲನಶೀಲ ಸಂಗತಿಯನ್ನಾಗಿ ನೋಡುವ ಸಂಶೋಧನೆಗಳಿಗೆ ಸೆಮಿನಾರುಗಳಲ್ಲಿ ಹೆಚ್ಚಿನ ಆದ್ಯತೆ ಕೊಡಬೇಕಾಗಿದೆ. ಆಯಾ ಜಿಲ್ಲಾ ಸಂಸ್ಕೃತಿ ಇಲಾಖೆಯನ್ನು ಆಯಾ ಭಾಗದ ಜಾನಪದದ ಹೊಸ ಚಲನೆಯನ್ನು ಗುರುತಿಸುವ ಹಾಗೆ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ.

ಜಾನಪದ ಅಕಾಡೆಮಿಯ ವೆಬ್‌ಸೈಟ್ ಇದೆ. ಇದು ಆರಂಭವಾದದ್ದು ಬಿಟ್ಟರೆ ಈವರೆಗೂ ಅದು ಅಪ್‌ಡೇಟ್ ಆಗಿಲ್ಲ. ಅಕಾಡೆಮಿಯ ಎಲ್ಲಾ ಬಗೆಯ ಕೆಲಸ ಕಾರ್ಯಗಳನ್ನು ಬಿಂಬಿಸುವಂತೆ ವೆಬ್‌ಸೈಟ್‌ನ್ನು ಅಭಿವೃದ್ಧಿಪಡಿಸಬೇಕಿದೆ. ಜಾನಪದ ಅಕಾಡೆಮಿ ಪ್ರಕಟಿಸಿದ ಪುಸ್ತಕಗಳ ಇ ಪ್ರತಿಗಳು ವೆಬ್‌ಸೈಟಿನಲ್ಲಿ  ಸಿಗುವಂತಾಬೇಕು. ಈಗಿರುವ ತಂತ್ರಜ್ಞಾನದ ಎಲ್ಲಾ ಅವಕಾಶಗಳನ್ನು ಅಕಾಡೆಮಿ ಜರೂರಾಗಿ ಬಳಸಿಕೊಳ್ಳುವ ಅಗತ್ಯವಿದೆ. ಜಾನಪದ ಕಲೆಗಳ ವಿಡಿಯೋ ಕ್ಲಿಪಿಂಗ್‌ನ್ನು `ಯೂಟ್ಯೂಬ್` ನಲ್ಲಿ  ಸಿಗುವಂತೆ ಮಾಡಬಹುದಾಗಿದೆ. 

ಅಂತೆಯೇ ಪ್ರತಿ ಕಲೆಯ ಕಲಾವಿದರ ಮಾಹಿತಿಯನ್ನು ನೀಡಬಹುದಾಗಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಆರಂಭವಾಗಿರುವುದರಿಂದ, ಪುನರಾವರ್ತನೆಯಾಗದಂತೆ ಪ್ರತ್ಯೇಕವಾಗಿ ಜಾನಪದ ಅಕಾಡೆಮಿಯ ಕೆಲಸಗಳ ಸ್ವರೂಪದ ಬಗ್ಗೆಯೂ ಖಚಿತಪಡಿಸಿಕೊಳ್ಳಬೇಕಿದೆ.

ಕರ್ನಾಟಕದ ಜನಪದ ಕಲೆಗಳಿಗೆ ಯುನೆಸ್ಕೋ ಮನ್ನಣೆ ದೊರೆಯುವಂತೆ ಮಾಡಬೇಕಾಗಿರುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ. ವಿಶ್ವಸಂಸ್ಥೆಯ ಭಾಗವಾದ ಯುನೆಸ್ಕೋ ಅಳಿದು ಹೋಗುತ್ತಿರುವ ಕಲೆಗಳ ಪುನರುಜ್ಜೀವನಕ್ಕೆ ವಿಶೇಷ ಅನುದಾನ ನೀಡುತ್ತಿದೆ. ಈ ಅನುದಾನವು ಜಗತ್ತಿನ ಅನೇಕ ನತದೃಷ್ಟ ಕಲೆಗಳಿಗೆ ಜೀವದಾನ ಮಾಡಿದೆ. 

ಭಾರತದ ಪೂರ್ವ ಭಾಗದಲ್ಲಿ ವಿಶೇಷವಾಗಿ ಪಶ್ಚಿಮ ಬಂಗಾಳ-ಓಡಿಶಾ ಗಡಿಪ್ರಾಂತದಲ್ಲಿ ಪ್ರಚಲಿತದಲ್ಲಿರುವ ಆಕರ್ಷಕ ಚಾವು ಕುಣಿತ, ಕೇರಳದ ಚಿತ್ತಾಕರ್ಷಕ ಮುಡಿಯೇಟ್ಟು, ಮತ್ತು ರಾಜಸ್ಥಾನದ ಕಲಬೇಲಾ ಜನಪದ ಕಲೆಗಳನ್ನು ಯುನೆಸ್ಕೊ ಈಚೆಗೆ “ಮನುಕುಲ ಸೃಜಿಸಿದ ಅಪೂರ್ವ ಕಲಾಪ್ರಕಾರಗಳು” ಎಂದು ಗುರುತಿಸಿ, ಅವುಗಳ ಪುನರುತ್ಥಾನಕ್ಕೆ ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತಿದೆ. 

ಕೇರಳದ “ಕುಟಿಯಾಟ್ಟಂ` ಎಂಬ ಪ್ರಾಚೀನ ಕಲೆಗೆ 2000ನೇ ಇಸವಿಯಲ್ಲಿ ಯುನೆಸ್ಕೋ ಮನ್ನಣೆ ನೀಡಿ, “ಮನುಕುಲದ ಅತ್ಯಂತ ಪ್ರಶಸ್ತ ಕಲೆ` ಎಂದು ಘೋಷಿಸಿತು.10 ವರ್ಷಗಳಲ್ಲಿ ಕುಟಿಯಾಟ್ಟಂನ ಸಂರಕ್ಷಣೆಗೆ ಸುಮಾರು 90 ಕೋಟಿ ರೂಪಾಯಿಗಳಷ್ಟು ಬಿಡುಗಡೆ ಆಗಿದೆ. 

ಆದರೆ ಕರ್ನಾಟಕದ ಯಾವುದೇ ಕಲೆಗೆ ಇಂಥ ಮನ್ನಣೆ ದೊರೆತಿಲ್ಲ. ಹಾಗೆ ದೊರೆಯುವಂತೆ ಮಾಡುವ ಗಂಭೀರ ಪ್ರಯತ್ನಗಳೂ ನಡೆದಿಲ್ಲ. ಹೀಗೆ ಮಾಡಲು ಯುನೆಸ್ಕೊ ಬಿಡುಗಡೆ ಮಾಡಿದ ನಿಗದಿತ ಅರ್ಜಿ ಫಾರಂ ಒಂದನ್ನು ಬಹಳ ಎಚ್ಚರಿಕೆಯಿಂದ ತುಂಬುವುದು. ಮತ್ತು ಯಾವ ಕಲೆಯ ಬಗ್ಗೆ ಬೇಡಿಕೆ ಸಲ್ಲಿಸಲಾಗುವುದೋ ಆ ಕಲೆಯ ಬಗ್ಗೆ ಐದರಿಂದ ಆರು ನಿಮಿಷಗಳ ಅವಧಿಯ ಒಳ್ಳೆಯ ಸಾಕ್ಷ್ಯಚಿತ್ರವೊಂದನ್ನು ಅರ್ಜಿ ಜೊತೆ ಲಗತ್ತೀಕರಿಸುವುದು. 

ಇದು ಸರಳವಾದ ಕೆಲಸವೇನಲ್ಲ, ಸವಾಲಿನದ್ದು. ಇಂತಹ ಕೆಲಸವನ್ನು ಜಾನಪದ ಅಕಾಡೆಮಿಯು ಮಾಡಬೇಕಾಗಿದೆ. ಈ ಬಗ್ಗೆ ಜಾನಪದ ವಿದ್ವಾಂಸ ಡಾ.ಪುರುಷೋತ್ತಮ ಬಿಳಿಮಲೆ ಅವರು ಕೆಲ ತಿಂಗಳುಗಳ ಹಿಂದೆ ಗಮನ ಸೆಳೆದಿದ್ದರು.

ಹೀಗೆ ಕರ್ನಾಟಕ ಜಾನಪದ ಅಕಾಡೆಮಿಯ ನೂತನ ಅಧ್ಯಕ್ಷರಾದ ಬಾನಂದೂರು ಕೆಂಪಯ್ಯ ಅವರ ಮುಂದೆ ಇಂತಹ ಹತ್ತಾರು ಪ್ರಶ್ನೆಗಳು ಎದುರಾಗುತ್ತವೆ. ಅದನ್ನು ಅವರು ಹೇಗೆ ನಿಭಾಯಿಸುತ್ತಾರೆಂದು ಕಾಯ್ದು ನೋಡಬೇಕಾಗಿದೆ.

ಸೋಮವಾರ, ಜೂನ್ 25, 2012

ನೇಪಾಳದ ಖಟಮಂಡುವಿನಲ್ಲಿ ೪ನೇ ಅಂತರಾಷ್ಟ್ರೀಯ ಜಾನಪದ ಕಾಂಗ್ರೇಸ್




   ೧೯೯೫ ರಲ್ಲಿ ಆರಂಭವಾದ ನೇಪಾಳಿ ಫೋಕ್ ಲೋರ್ ಸೋಸೈಟಿಯು ಜಾನಪದಕ್ಕೆ ಸಂಬಂಧಿಸಿದ ಕೆಲಸಗಳನ್ನು ಕ್ರಿಯಾಶೀಲವಾಗಿ ಮಾಡುತ್ತಾ ಬಂದಿದೆ. ಜಾಗತಿಕವಾಗಿ ನಡೆಯುವ ಜಾನಪದ ಚಿಂತನೆಗಳನ್ನು ಒಂದು ವೇದಿಕೆಯಲ್ಲಿ ತಂದು ಚರ್ಚಿಸುವುದು, ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳುವುದು ಆ ಮೂಲಕ ನೇಪಾಳಿ ಜಾನಪದದ ಆಲೋಚನೆಯನ್ನು ವಿಸ್ತರಿಕೊಳ್ಳುವುದು ಇದರ ಮೂಲ ಉದ್ದೇಶ. ಇದರ ಭಾಗವಾಗಿ ೨೦೦೧ ರಿಂದ ಅಂತರಾಷ್ಟ್ರೀಯ ಜಾನಪದ ಕಾಂಗ್ರೇಸ್ ನ್ನು ಆಯೋಜಿಸುತ್ತಾ ಬಂದಿದೆ. ೨೦೦೧, ೨೦೦೩, ೨೦೦೬ ರಲ್ಲಿ ಈಗಾಗಲೆ ಮೂರು ಅಂತರಾಷ್ಟ್ರೀಯ ಜಾನಪದ ಕಾಂಗ್ರೇಸ್ ನ್ನು ಆಯೋಜಿಸಿ, ಅಂತರಾಷ್ಟ್ರೀಯ ಜಾನಪದ ವಿದ್ವಾಸಂರನ್ನು ಒಂದೆಡೆ ತಂದು ಚರ್ಚಿಸಿ ಜಗತ್ತಿನ ಜಾನಪದ ವಿದ್ವಾಂಸರನ್ನು ಗಮನ ಸೆಳೆದಿದೆ.

   ೪ ನೇ ಅಂತರಾಷ್ಟ್ರೀಯ ಜಾನಪದ ಕಾಂಗ್ರೇಸ್ ೨೦೧೨ ಆಗಷ್ಟ್ ೧೭ ರಿಂದ ೧೯ ರ ತನಕ ನಡೆಯಲಿದೆ. ಇದಕ್ಕೆ ಜಗತ್ತಿನಾದ್ಯಾಂತ ಜಾನಪದ ವಿದ್ವಾಂಸರು ಆಗಮಿಸುತ್ತಾರೆ. ಈ ಬಾರಿಯ ಜಾನಪದ ಕಾಂಗ್ರೇಸ್ ನ ಥೀಮ್  `folklore and folklife studies: special focus on intangible cultural heritage’  ಇದನ್ನು ಒಳಗೊಂಡಂತೆ ಜಾನಪದ ಮತ್ತು ಅಭಿವೃದ್ಧಿ ಸಂಗತಿಗಳು, ಜಾನಪದ: ಮಹಿಳೆ ಮತ್ತು ಶಕ್ತಿಕೇಂದ್ರಗಳು, ಜಾನಪದ: ಸೃಜನಶೀಲ ಬರಹ ಮತ್ತು ಕಾವ್ಯ, ಜಾನಪದ: ಪ್ರದರ್ಶನಾತ್ಮಕ ಕಲೆಗಳ ಬದಲಾವಣೆ, ಜಾನಪದ: ಸಾಂಸ್ಕೃತಿಕ ಅನನ್ಯತೆ ಮತ್ತು ಪ್ರತ್ಯೇಕತೆ, ಜಾನಪದ: ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವಾಣಿಜ್ಯೀಕರಣ, ಸೃಜನಶೀಲ ಬರವಣಿಗೆಯಲ್ಲಿ ಜಾನಪದದ ಪ್ರಭಾವ, ಜಾನಪದ: ವಿದ್ವಜ್ಜನರ ಸಾಂಸ್ಕೃತಿಕ ಆಸ್ತಿ ಮತ್ತು ಕಾನೂನು ಸಂಬಂದಿ ಸಂಗತಿಗಳು, ಜಾನಪದ: ಶಿಕ್ಷಣ ಮತ್ತು ಸಾಂಸ್ಕೃತಿಕ ಯಾಜಮಾನಿಕೆ, ಜಾನಪದ: ಸೃಜನಶೀಲ ನೆಲೆಗಳು ಮತ್ತು ಆಧುನಿಕ ಸೂಕ್ಷ್ಮ ಸಂವೇದನೆ, ಜಾನಪದ: ಪಾರಂಪರಿಕ ಜ್ಞಾನ ಮತ್ತು ಸಾಂಸ್ಕೃತಿಕ ಹಕ್ಕುದಾರಿಕೆ, ಜಾನಪದ: ಮಾಹಿತಿ ತಂತ್ರಜ್ಞಾನ, ಜಾನಪದ: ಸೈದ್ಧಾಂತಿಕ ಮತ್ತು ತಾತ್ವಿಕ ಸಂಗತಿಗಳು ಈ ವಿಷಯಗಳು ಈ ಸೆಮಿನಾರಿನಲ್ಲಿ ಚರ್ಚೆಗೆ ಒಳಗಾಗುತ್ತವೆ. 

  ಸಂತಸದ ಸಂಗತಿಯೆಂದರೆ, ನನಗೆ ಈ ಸೆಮಿನಾರಿನಲ್ಲಿ ಕರ್ನಾಟಕ ಜನಪದ ಪ್ರದರ್ಶನಾತ್ಮಕ ಕಲೆಗಳ ಸ್ಥಿತ್ಯಂತರಗಳ ಬಗ್ಗೆ ಮಾತನಾಡಲು ಅವಕಾಶ ದೊರೆತಿದೆ. ಈ ನೆಪದಲ್ಲಿ ಕರ್ನಾಟಕದ ಜಾನಪದ ಅಧ್ಯಯನದ ಒಲವು, ಜಾನಪದ ವಿಶ್ವವಿದ್ಯಾಲಯದ ಸ್ಥಾಪನೆ ಕುರಿತಂತೆ ಮಾತನಾಡಲು ತಯಾರಿ ನಡೆಸಿದ್ದೇನೆ.






ಮಂಗಳವಾರ, ಜೂನ್ 19, 2012

ಬಾನಂದೂರು ಕೆಂಪಯ್ಯ ಜಾನಪದ ಅಕಾಡೆಮಿಯ ನೂತನ ಅಧ್ಯಕ್ಷರು




  ಈಚೆಗೆ ಜಾನಪದ ಅಕಾಡೆಮಿಯ ಅಧ್ಯಕ್ಷ ಸ್ಥಾನ ಗೊ.ರು.ಚ ಅವರ ನಂತರ ಕಾಲಿಯಾಗಿಯೇ ಉಳಿದಿತ್ತು. ಈ ಸ್ಥಾನಕ್ಕೆ ಬಾನಂದೂರು ಕೆಂಪಯ್ಯ ಅವರನ್ನು ಸರಕಾರ ಆಯ್ಕೆ ಮಾಡಿದೆ. ಬಾನಂದೂರು ಕೆಂಪಯ್ಯ ಅವರು ಜಾನಪದ ಹಾಡುಗಾರರು. ಅವರು ಕೆಲವು ಜಾನಪದ ಗೀತೆಗಳನ್ನು ಮತ್ತೆ ಮತ್ತೆ ಹಾಡಿ ಜನಪ್ರಿಯ ಗೊಳಿಸಿದ್ದಾರೆ. ಅದರಲ್ಲಿ ಬಿದಿರು ನಾನಾರಿಗಲ್ಲದವಳು ಎನ್ನುವ ಹಾಡು ಪ್ರಸಿದ್ಧಿಯನ್ನು ಹೊಂದಿದೆ.


   ಅಕಾಡೆಮಿಕ್ ಆಗಿ ಅಷ್ಟೇನು ಬರವಣಿಗೆ ಮಾಡದ, ಜಾನಪದ ಕ್ಷೇತ್ರಕಾರ್ಯವನ್ನೂ ಹೆಚ್ಚ  ಮಾಡದ ಕೆಂಪಯ್ಯ ಅವರು ಜಾನಪದ ಅಕಾಡೆಮಿಯನ್ನು ಹೇಗೆ ಮುನ್ನೆಡೆಸುತ್ತಾರೆ ಎನ್ನುವ ಕುತೂಹಲವಂತೂ ಇದ್ದೇಇದೆ. ಜಾನಪದ ವಿದ್ವಾಂಸರ ಜತೆ ಸಂವಾದ ಮಾಡಿ, ಜಾನಪದವನ್ನು ವಿಶೇಷವಾಗಿ ಹೊಸ ಕಾಲಕ್ಕೆ ಅನ್ವಯಿಸುವ ಹಾಗೆ ಮುನ್ನೆಡಸಬೇಕಾದ ಅನಿವಾರ್ಯತೆ ಇಂದು ಜಾನಪದ ಅಕಾಡೆಮಿಗೆ ಇದೆ. ಅದನ್ನು ಕೆಂಪಯ್ಯ ಅವರು ಹೇಗೆ ನಿರ್ವಹಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಷ್ಟೆ.

  ಏನೇ ಇರಲಿ, ಈ ಹೊತ್ತು ಜಾನಪದ ಅಕಾಡೆಮಿಯ ನೂತನ ಅಧ್ಯಕ್ಷರಾದ ಬಾನಂದೂರು ಕೆಂಪಯ್ಯ ಅವರಿಗೆ ಕನ್ನಡ ಜಾನಪದ ಬ್ಲಾಗ್ ಅಭಿನಂದನೆ ಸಲ್ಲಿಸುತ್ತದೆ.

ಭಾನುವಾರ, ಜೂನ್ 17, 2012

ಜಾನಪದ ವಿಶ್ವವಿದ್ಯಾಲಯದ  ಉದ್ಘಾಟನೆಯ ಚಿತ್ರಲೋಕ


ಇಲ್ಲಿನ ಚಿತ್ರಗಳನ್ನು ಶಿಗ್ಗಾಂ ನ ವೇದಾರಾಣಿ ಸೊಲಬಕ್ಕನವರ್ ಕಳಿಸಿಕೊಟ್ಟಿದ್ದಾರೆ. ಅವರಿಗೆ ಕನ್ನಡ ಜಾನಪದ ಬ್ಲಾಗ್ ಧನ್ಯವಾದಗಳನ್ನು ಸಲ್ಲಿಸುತ್ತದೆ.


ಶನಿವಾರ, ಜೂನ್ 16, 2012

ಜಾನಪದ ವಿಶ್ವವಿದ್ಯಾಲಯದ ಆರಂಭದ ಸಂಭ್ರಮ

ಜಾನಪದ ವಿಶ್ವವಿದ್ಯಾಲಯದ ಆರಂಭದ ಸಂಭ್ರಮ




  ಶಿಗ್ಗಾವಿನ ಪರಿಸರದಲ್ಲಿ ಜಾನಪದ ವಿಶ್ವವಿದ್ಯಾಲಯದ ಉದ್ಘಾಟನೆಯ ಸಂಭ್ರಮ ತುಂಬಿ ತುಳುಕುತ್ತಿತ್ತು. ಹಳ್ಳಿಗಳಿಂದ ಜನರು ಗೊಟಗೋಟಿ ಬಳಿ ದಾವಿಸಿದ್ದರು. ಪೋಲೀಸರ ಸರ್ಪಗಾವಲಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳನ್ನೊಳಗೊಂಡು ಮಂತ್ರಿ ಮಹೋದಯರ ದಂಡೇ  ನೆರೆದಿತ್ತು. ಭಾರತದಲ್ಲಿಯೇ ಮೊಟ್ಟಮೊದಲ ಜಾನಪದ ವಿಶ್ವವಿದ್ಯಾಲಯವನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಸಮಾಳ ಬಾರಿಸುವ ಮೂಲಕ ಶನಿವಾರ ನಾಡಿಗೆ ಅರ್ಪಿಸಿದರು.  ಇದಕ್ಕೆ ರಾಜ್ಯದ ಸಚಿವರು, ಜಾನಪದ ತಜ್ಞರು, ವಿದ್ವಾಂಸರು, ಕಲಾವಿದರು ಕನ್ನಡ ಪರ ಹೋರಾಟಗಾರರು, ಸಾಹಿತಿಗಳು ಸಾಕ್ಷಿಯಾದರು. ಜನರು ಜೈಕಾರ ಹಾಕಿದರು.

   ಮುಖ್ಯಮಂತ್ರಿ ಸದಾನಂದ ಗೌಡ ಅವರು ಮಾತನಾಡಿ, `ಜನಪದ ಸಂಸ್ಕೃತಿಯು ಒಂದು ನಾಡು, ದೇಶದ ಹೆಮ್ಮೆಯ ಸಂಗತಿಯಾಗಿದೆ. ಒಂದು ದೇಶದ ಶ್ರೀಮಂತಿಕೆ ಹಾಗೂ ಬಡತನ ಅಲ್ಲಿರುವ ಕಲೆ, ಸಂಸ್ಕೃತಿಯ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಎದುರಾಳಿ ದೇಶವನ್ನು ನಾಶ ಇಲ್ಲವೇ ಅಧಃಪತನಗೊಳಿಸಬೇಕಾದರೆ, ಅದರ ಜತೆಗೆ ಯುದ್ಧವನ್ನೇ ಮಾಡಬೇಕೆಂದೇನಿಲ್ಲ. ಅಲ್ಲಿನ ಕೆಲ, ಸಂಸ್ಕೃತಿ, ಆಚಾರ, ವಿಚಾರಗಳ ಮೇಲೆ ದಾಳಿ ನಡೆಸಿ ಅವುಗಳು ನಶಿಸುವಂತೆ ಮಾಡಿದರೆ, ಆ ದೇಶ ತನ್ನಿಂದ ತಾನೆ ನಾಶವಾಗುತ್ತದೆ` ಎಂದು ನುಡಿದರು.

  ಮುಂದುವರಿದು `ನಮ್ಮ ದೇಶದ ಮೇಲೆ ಹಲವಾರು ದಾಳಿಗಳು ನಡೆದರೂ ದೇಶವನ್ನು ಅಲುಗಾಡಿಸಲು ಸಾಧ್ಯವಾಗಲಿಲ್ಲ.  ನಮ್ಮಲ್ಲಿ ಆಳವಾಗಿ ಬೇರು ಬಿಟ್ಟಿರುವ ಸಂಸ್ಕೃತಿಯೇ ಇದಕ್ಕೆ ಮೂಲ ಕಾರಣ. ದೇಶದ ಸಂಸ್ಕೃತಿ, ಸಂಪ್ರದಾಯಗಳನ್ನು ಇನ್ನಷ್ಟು ಗಟ್ಟಿಗೊಳಿಸುವ ಉದ್ದೇಶದಿಂದಲೇ ಈ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ` ಎಂದು ಹೇಳಿದರು. 





ಯಾಂತ್ರಿಕ ಜೀವನದಿಂದ ಮನುಷ್ಯ ಸಂಸ್ಕೃತಿ ಮತ್ತು ವಿಕೃತಿ ನಡುವಿನ ವ್ಯತ್ಯಾಸವನ್ನು ಕಂಡುಕೊಳ್ಳದೇ ತನ್ನತನವನ್ನು ಕಳೆದುಕೊಳ್ಳುತ್ತಿದ್ದಾನೆ. ಪ್ರತಿಯೊಬ್ಬ ಮನುಷ್ಯನಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದುನ್ನು ತಿಳಿಸಿಕೊಡಲು ಕಲೆ, ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯಗಳ ಅರಿವು ಅಗತ್ಯವಿದೆ ಎಂದರು.

  1970 ರ ದಶಕದಿಂದಲೂ ಜಾನಪದ ವಿಶ್ವವಿದ್ಯಾಲಯದ ಕೂಗು ಜೀ.ಶಂ.ಪರಮಶಿವಯ್ಯ ಅವರಿಂದಲೂ ಇತ್ತು. ಅದು ಗೋ.ರು.ಚ ಅವರು ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ, ಈ ಕನಸಿಗೆ ಜೀವ ತುಂಬಿ, ಅದನ್ನು ಜಪದಂತೆ ಮಾಡಿ,  ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವ ಉದ್ದೇಶದಿಂದ ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ  ಅವರ ನೆರವಿನಿಂದ ಈ ವಿಶ್ವವಿದ್ಯಾಲಯ ಸ್ಥಾಪಿಸುವ ನಿರ್ಧಾರ ಕೈಗೊಂಡರು. ಅದೀಗ ಅರಳಿ ನಿಂತಿದೆ. ವಿಶ್ವವಿದ್ಯಾಲಯವು ನಡೆವ ದಾರಿ ಮಹತ್ವದ್ದಾಗಿದೆ.


  ಜಾನಪದ ವಿವಿಯ ಆರಂಭದಿಂದಲೂ  ವಿವಿಯ ರೂಪುರೇಶೆ, ಅದು ಆರಂಭವಾಗುವ ಬಗ್ಗೆ ಸದಾ ಕನ್ನಡ ಜಾನಪದ ಬ್ಲಾಗ್ ದ್ವನಿಯಾಗುತ್ತಲೇ ಬಂದಿದೆ. ಈಗಲೂ ಜಾನಪದ ವಿವಿಯ  ಆರಂಭವನ್ನು ಸಂಭ್ರಮಿಸುತ್ತದೆ. ಈ ಹೊತ್ತಲ್ಲಿ ಜಾನಪದ ವಿವಿಯ ರಚನೆಗೆ ಕಾರಣವಾದ  ಎಲ್ಲಾ ಕಾಣದ ಕೈಗಳನ್ನೂ ಶಕ್ತಿ ಯುಕ್ತಿಗಳನ್ನೂ ಕನ್ನಡ ಜಾನಪದ ಬ್ಲಾಗ್ ಅಭಿನಂದಿಸುತ್ತದೆ. ಹಾಗೆಯೆ ಜಾನಪದ ವಿವಿಯ ಕನಸನ್ನು ನನಸು ಮಾಡುವಲ್ಲಿ ಶ್ರಮಿಸುತ್ತಿರುವ ಪ್ರೊ. ಅಂಬಳಿಕೆ ಹಿರಿಯಣ್ಣ ಮತ್ತು ಜಾನಪದ ವಿದ್ವಾಂಸರ, ಕನ್ನಡದ ಚಿಂತಕರ ದೊಡ್ಡ ಬಳಗಕ್ಕೆ ಕನ್ನಡ ಜಾನಪದದ ಪರವಾಗಿ ಧನ್ಯವಾಗಳು.