ಗುರುವಾರ, ಏಪ್ರಿಲ್ 26, 2012

ಆಗಬೇಕಿದೆ ಹೊಸ ಬೆಳಕಿನಲ್ಲಿ ದಲಿತ ಸಂಶೋಧನೆ

-ಅರುಣ್ ಜೋಳದ ಕೂಡ್ಲಿಗಿ

ಇಂದು ಸಂಶೋಧನೆ ಎನ್ನುವ ಸಿದ್ಧತಿಳುವಳಿಕೆಯಲ್ಲಿ ದಲಿತ ಅಧ್ಯಯನಗಳನ್ನು ನೋಡುವಂತಿಲ್ಲ. ದಲಿತ ಬದುಕಿನ ನೆಲೆಯಲ್ಲಿ ಪುನರ್ ವ್ಯಾಖ್ಯಾನ ಮಾಡಿಕೊಂಡು ಪರಿಶೀಲಿಸಬೇಕಾಗಿದೆ. ಕಾರಣ, ದಲಿತ ಬದುಕಿನ ಸಂಶೋಧನೆ, ಸದ್ಯದ ಮತ್ತು ಭವಿಷ್ಯದ ದಲಿತ ಬದುಕನ್ನು ರೂಪಿಸುವಿಕೆಯ ಶಕ್ತ ಆಕರಗಳೂ ಆಗಬೇಕಿದೆ.

  ಕರ್ನಾಟಕದಲ್ಲಿ ಬಹುಪಾಲು ದಲಿತ ಸಂಶೋಧನೆಗಳು ಪದವಿಗಾಗಿ, ಅಕಡೆಮಿಕ್ ಕಾರಣಕ್ಕಾಗಿ ನಡೆಯುತ್ತಿವೆ. ಇವುಗಳಲ್ಲಿ ಹೆಚ್ಚಿನವು ದಲಿತ ಸಾಹಿತ್ಯ ಕೇಂದ್ರಿತ ಅಧ್ಯಯನಗಳು. ಸದ್ಯದ ದಲಿತ ಬದುಕಿನ ಕಡುವಾಸ್ತವಗಳನ್ನು ಹುಡುಕುವ ಅಧ್ಯಯನಗಳ ಸಂಖ್ಯೆ ವಿರಳ. ಇಂತಹ ಅಧ್ಯಯನಗಳು, ಪದವಿಯ ಅಕಡೆಮಿಕ್ ಚೌಕಟ್ಟಿನ ಮಿತಿಯೊಳಗೆ ದಲಿತ ಬದುಕನ್ನು ತುರುಕುತ್ತವೆ. ಹೀಗೆ ಬಲವಂತವಾಗಿ ತುರುಕಿದ ಕಾರಣ, ಸಾಂಪ್ರದಾಯಿಕ ಅಧ್ಯಯನಗಳು ನೀಡುವ ಫಲಿತವನ್ನೇ ದಲಿತ ಸಂಶೋಧನೆಗಳೂ ನೀಡುತ್ತಿವೆ. ಹಾಗಾಗಿ ದಲಿತರ ನಿಜ ಬದುಕನ್ನು ಕಾಣಿಸುವಲ್ಲಿ ಇಂತಹ ಸಂಶೋಧನೆಗಳು ಸೋಲುತ್ತಿವೆ.

   ಗ್ರಾಮೀಣ ಪ್ರದೇಶಗಳು ಬದಲಾಗಿವೆ. ಈ ಬದಲಾವಣೆ ಒಳಗೇ ದಲಿತ ಶೋಷಣೆಯ ಹೊಸ ರೂಪಗಳು ಅಡಗಿಕೊಂಡಿವೆ. ಮೊದಲಿಗಿಂತ ನೇರ ದೌರ್ಜನ್ಯ ಮತ್ತು ಬಹಿಷ್ಕಾರಗಳ ಪ್ರಮಾಣ ಕಡಿಮೆಯಾಗಿದೆ. ಶೋಷಣೆ ಎಂದು ಹಿಡಿದು ತೋರಿಸಲಾಗದ, ದಮನಕಾರಿ ಎಂದು ಕಟ್ಟಿಹಾಕಲು ಕೈಗೆ ಸಿಗದ ಹಾಗೆ ಹೊಸ ಬಗೆಯ ರೂಪಗಳು ಬರುತ್ತಿವೆ. ಇಂತಹ ಹೊಸ ಬಗೆಯ ದಮನಕಾರಿ, ಶೋಷಣೆಗಳ ಒಳಹೊಕ್ಕು ಅದರ ಮುಂದುವರಿಕೆಯ ರೂಪವನ್ನು ತೋರಿಸಬೇಕಾಗಿದೆ. ಹಾಗೆಯೆ ಸ್ಪಷ್ಟ ಮುಖವಿರದ ಶೋಷಕ ಚಿತ್ರಗಳಿಗೆ ಮುಖ ನೀಡಿ, ಶಿಕ್ಷೆಯಾಗುವಷ್ಟು ಶಕ್ತಿಯನ್ನು ಒದಗಿಸುವ ಒಳನೋಟಗಳ ಸಂಶೋಧನೆಗಳು ನಡೆಯಬೇಕಾಗಿದೆ.

    ಸದ್ಯದ ಹಳ್ಳಿಗಳ ದಲಿತ ಕೇರಿಯಲ್ಲಿ ಬೆಳೆದು ಶಿಕ್ಷಣ ಪಡೆದು ನಗರಗಳನ್ನು ಸೇರಿ, ತಾವು ಹತ್ತಿದ ಏಣಿಯನ್ನೇ ಒದೆಯುವ ರೂಪದಲ್ಲಿ ಬಹುಪಾಲು ಶಿಕ್ಷಿತ ದಲಿತ ಯುವಕರು ತಮ್ಮ ಕೇರಿಗಳಿಗೆ ಮರಳುತ್ತಿಲ್ಲ. ಇದು ಇಂದಿನ ಬಹುತೇಕ ಗ್ರಾಮೀಣ ದಲಿತ ಕೇರಿಗಳ ವಾಸ್ತವ. ಹಾಗಾಗಿ ಗ್ರಾಮೀಣ ಕೇರಿಗಳು ಹೆಚ್ಚು ಬದಲಾವಣೆ ಇಲ್ಲದೆ ಮೂಲಕ್ಕೆ ನಿಷ್ಠವಾಗಿವೆ. ಇಂದು ದಲಿತಪರ ಹೋರಾಟಗಳು ನಿಂತಿಲ್ಲ. ಆದರೆ ಹೋರಾಟದ ಆದ್ಯತೆಯು ಸಮಗ್ರ ದಲಿತ ಸಮುದಾಯವನ್ನು ಒಳಗೊಳ್ಳುವ ಹಾಗಿರದೆ, ಸಣ್ಣ ಸಣ್ಣ ಗುಂಪುಗಳ, ವೈಯಕ್ತಿಕ ನೆಲೆಯ ಲಾಭ ನಷ್ಟದ ಆದ್ಯತೆಯನ್ನು ಗಮನದಲ್ಲಿರಿಸಿಕೊಳ್ಳುವ ಮಟ್ಟಕ್ಕೆ ಇಳಿದಿವೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ನೌಕರ ಸಂಘಗಳ ಹೋರಾಟಗಳು ನೌಕರರ ಹಿತ ಕಾಯುವಲ್ಲಿ ತೃಪ್ತವಾಗುತ್ತಿವೆ. ಈ ಕುರಿತ ಅಧ್ಯಯನದ ಅಗತ್ಯವೂ ಇದೆ.

    ದಲಿತ ಸಮುದಾಯದಲ್ಲೂ ನವ ಶ್ರೇಣೀಕರಣವಿದೆ. ದಲಿತರಲ್ಲಿಯೇ ಅಕ್ಷರಸ್ಥ, ಅನಕ್ಷರಸ್ಥರ ಭೇದ ಉಂಟಾಗಿದೆ. ಅಂತೆಯೇ ಕಡಿಮೆ ಕಲಿತವರು, ಹೆಚ್ಚು ಕಲಿತವರು, ಆಧುನಿಕ ತಂತ್ರಜ್ಞಾನವನ್ನು ಕಲಿತವರು, ಸಾಮಾನ್ಯ ಓದು ಬರಹ ಕಲಿತವರು, ನಗರದ ಸ್ಥಿತಿವಂತ ದಲಿತರು, ನಿರ್ಗತಿಕ ದಲಿತರು, ಎಡವಾದಿಗಳು, ಬಲವಾದಿಗಳು, ಸರ್ಕಾರಿ ನೌಕರ ದಲಿತರು, ಕೂಲಿಕಾರ ದಲಿತರು ಹೀಗೆ ಬಹುರೂಪಿ ತರತಮಗಳು ದಲಿತ ಲೋಕದೊಳಗೇ ರೂಪುಗೊಂಡಿವೆ. ಈ ತರತಮಗಳನ್ನು ಒಂದೇ ದಾರದಲ್ಲಿ ಪೋಣಿಸಿಡುವುದೂ ಕೂಡ ಇಂದಿನ ದಲಿತ ಸಂಶೋಧನೆಯ ದೊಡ್ಡ ಸವಾಲಾಗಿದೆ. ಈ ಬಗೆಯ ತರತಮದ ಜನರನ್ನು ಒಡೆಯುವ ಮೂಲಕ, ಶ್ರೇಣೀಕೃತ ದಲಿತರ ಮಧ್ಯೆ ಒಂದಾಗುವ ಅವಕಾಶವನ್ನು ಸೃಷ್ಟಿ ಮಾಡದಿರುವ ರಾಜಕಾರಣದ ಬಗ್ಗೆಯೂ ಇಂದು ಶೋಧಿಸುವ ಅಗತ್ಯವಿದೆ.

    ಕರ್ನಾಟಕದಲ್ಲಿ ಇಂದು ಅರೆ ವಿದ್ಯಾವಂತ ದಲಿತ ಯುವಕರ ಸಂಖ್ಯೆ ಹೆಚ್ಚಿದೆ. ಈ ಅರೆವಿದ್ಯಾವಂತರು ಹುದ್ದೆಗಳನ್ನು ಹಿಡಿಯಲೂ ಆಗದೆ, ಸಾಂಪ್ರದಾಯಿಕ ಕುಲಕಸಬಿನಲ್ಲಿ ತೊಡಗಿಕೊಳ್ಳಲೂ ಆಗದೆ ಹೆಣಗಾಡುತ್ತಿದ್ದಾರೆ. ದಲಿತರಾದ ಕಾರಣಕ್ಕೆ ಪಡಬಹುದಾದ ಅಪಮಾನಗಳ ಅರಿವು ಬಂದು ಮೇಲ್ಜಾತಿಯ ವಿದುದ್ಧದ ಸಿಟ್ಟಿನ ಕಾರಣಕ್ಕೆ ಸಹನೆ ಕಳೆದುಕೊಂಡ ಘಟನೆಗಳಿಗೂ ಈ ವರ್ಗ ತೆರೆದುಕೊಂಡಿದೆ. ಈ ಬಗೆಯ ಅರೆ ವಿದ್ಯಾವಂತ ದಲಿತ ಯುವಕರ ನಡೆ ಏನಾಗಿದೆ? ಇಂತಹ ವಿದ್ಯಾವಂತರನ್ನು ಸಮಾನತೆಯ ನೆಲೆಯಲ್ಲಿ ಒಳಗೊಳ್ಳುವ ಬಗೆ ಹೇಗೆ ಎನ್ನುವುದನ್ನು ಶೋಧಿಸಬೇಕಿದೆ.

   ಕೆಲವು ಅರೆ ವಿದ್ಯಾವಂತ ದಲಿತ ಯುವಕರು ಸ್ಥಳೀಯ ಪತ್ರಿಕೆಗಳನ್ನು ಶುರು ಮಾಡಿದ್ದಾರೆ. ಹಾಗೆ ನೋಡಿದರೆ ಕರ್ನಾಟಕದಲ್ಲಿ ದಲಿತ ವಿದ್ಯಾವಂತರು ಆರಂಭಿಸಿರುವ ಪತ್ರಿಕೆಗಳ ಸಂಖ್ಯೆಯೂ ಹೆಚ್ಚಿದೆ. ಹಾಗಾದರೆ ದಲಿತ ಶೋಷಣೆಯ ಬಗ್ಗೆ ಹೆಚ್ಚು ವರದಿಗಳು ಅಧ್ಯಯನಗಳು ಆಗಬೇಕಿತ್ತಲ್ಲವೇ? ಎನ್ನುವ ಪ್ರಶ್ನೆ ಮೂಡುವುದು ಸಹಜ. ಆದರೆ ಅದು ಹಾಗಾಗದೆ ವಿರುದ್ಧ ದಾರಿಯಲ್ಲಿ ಪಯಣಿಸುತ್ತಿದೆ. ವ್ಯವಸ್ಥೆಯೇ ರೂಪಿಸಿದ ಕೆಲವು ಯುವಕರ ತಪ್ಪು ನಡೆಗಳನ್ನು ಇಡೀ ದಲಿತ ಸಮುದಾಯದ ಗುಣವಾಗಿ ಸಮೀಕರಿಸುವ ಅಪಾಯಗಳೂ ಇವೆ.

   ದಲಿತಪರ ಸಂಶೋಧನೆಗಳು ಪುಸ್ತಕದಿಂದ ಹೊರಜಿಗಿಯುವ ಶಕ್ತಿಯನ್ನು ಪಡೆಯಬೇಕಾಗಿದೆ. ಅಂದರೆ ಅದು ದಲಿತ ಬದುಕಿಗೆ ನೆರವಾಗುವ, ಅವರ ಪರವಾದ ರಾಜಕೀಯ ಶಕ್ತಿಯಾಗಬೇಕಿದೆ. ಕೆಲವೊಮ್ಮೆ ದಲಿತ ಶೋಷಿಣೆಯನ್ನು ಅತಿರೇಕದ ವಿವರಣೆಯಿಂದ ಅವುಗಳ ಬಗ್ಗೆ ನಂಬಿಕೆಯನ್ನು ಹುಟ್ಟಿಸುವಲ್ಲಿ ಸೋಲುತ್ತಿವೆ. ಇನ್ನೊಂದೆಡೆ ದಲಿತ ಪರವಾಗಿರುವ ಕಾಳಜಿಯ ಹೊರ ಮುಖಗಳನ್ನು ಜಗತ್ತಿಗೆ ತೋರಿಸಲು ಸವೆದು ನಿತ್ರಾಣವಾದ ಸವಕಲು ಸಂಶೋಧನಾ ಕೃತಿಗಳು ಬರುತ್ತಿವೆ. ಮತ್ತೊಂದೆಡೆ ತೀರಾ ಅಕಡೆಮಿಕ್ ಆಗಿದ್ದ ಕೇರಿಯಿಂದ ಸಾವಿರ ಕಿಲೋಮೀಟರ್ ದೂರ ನಿಂತಿವೆ. ಇಂತಹ ಮಿತಿಗಳನ್ನು ಇಂದಿನ ದಲಿತ ಸಂಶೋಧನೆಗಳು ಮೀರಲೇಬೇಕಾಗಿದೆ.

    ಕೆಲವರು ದಲಿತ ಸಂಶೋಧನೆಯ ಅವಕಾಶಗಳನ್ನು ಬಳಸಿಕೊಂಡೂ ಸವಕಲು ಅಧ್ಯಯನಗಳನ್ನು ಒಂದರ ಮೇಲೊಂದರಂತೆ ಹೊಸೆಯುತ್ತಲೇ ಇರುತ್ತಾರೆ. ಇತ್ತ ದಲಿತ ಸಂಶೋಧನೆಯ ಅವಕಾಶ ಭರ್ತಿಯಾದಂತೆ ಕಂಡರೂ ಅದರ ಪರಿಣಾಮ ಮಾತ್ರ ಶೂನ್ಯ. ದಲಿತ ಬದುಕಿನ ಬಗ್ಗೆ ಇರುವ ಸಾಮಾಜಿಕ ನಂಬಿಕೆಗಳ ಪೂರ್ವಾಗ್ರಹಗಳನ್ನು ಒಡೆಯುವ ಹಾಗೆ, ಸಾಮಾನ್ಯ ಹೇಳಿಕೆಗಳ ಬುಡವನ್ನು ಅಲ್ಲಾಡಿಸುವ ಹಾಗೆ, ಮುಚ್ಚಿಹೋದ ಸತ್ಯಗಳನ್ನು ಅಗೆದು ತೋರಿಸಿ ವ್ಯವಸ್ಥೆಯ ತರತಮದ ಮುಖಗಳನ್ನು ಬಯಲುಗೊಳಿಸುವ ಹಾಗೆ, ಆಧುನಿಕ ವೇಷದ ಹೈಟೆಕ್ ಶೋಷಣೆಯ ಮುಖಗಳನ್ನು ಕಳಚುವ ಹಾಗೆ ದಲಿತ ಸಂಶೋಧನೆಯ ಹೊಸ ತಾತ್ವಿಕತೆ ರೂಪುಗೊಳ್ಳಬೇಕಿದೆ.

    ಪ್ರಾದೇಶಿಕವಾಗಿ ಆಯ್ದ ಕರ್ನಾಟಕದ ಕನಿಷ್ಠ ನೂರು ದಲಿತ ಕೇರಿಗಳನ್ನು ಎರಡು ಮೂರು ವರ್ಷ ಗಂಭೀರವಾಗಿ ಅಧ್ಯಯನ ಮಾಡಿದರೂ ಸದ್ಯದ ದಲಿತ ಬದುಕಿನ ಭಿನ್ನ ಆಯಾಮಗಳು ಗೋಚರಿಸಲಿವೆ. ಆದರೆ ಶಿಕ್ಷಣಕ್ಕೆ ತೆರೆದುಕೊಂಡ, ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರಾಗಿಯೂ ಕೆಲಸ ನಿರ್ವಹಿಸುವ ಎಷ್ಟು ಜನ ದಲಿತ ಪ್ರಜ್ಞಾವಂತರು, ದಲಿತ ಪರ ಕಾಳಜಿಯ ಚಿಂತಕರು ಇಂತಹ ಸಂಶೋಧನೆಗೆ ಸಿದ್ಧರಾಗುತ್ತಾರೆ? ಎನ್ನುವುದು ಮುಂದಿರುವ ಪ್ರಶ್ನೆ.

ಮಂಗಳವಾರ, ಏಪ್ರಿಲ್ 24, 2012

ಜನಭಾಷೆಗಳ ಕೂಡುಸಂಬಂಧದ ಶೋಧ

(22 ಏಪ್ರಿಲ್ ಭಾನುವಾರ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಈ ಬರಹ ಪ್ರಕಟಗೊಂಡಿದೆ. ಹಾಗಾಗಿ ಸಂಪಾದಕರಿಗೆ ಕೃತಜ್ಞತೆಗಳು. ಬ್ಲಾಗ್ ಓದಿಗಾಗಿ ಇಲ್ಲಿ ಪ್ರಕಟಿಸಲಾಗುತ್ತಿದೆ)

ಡಾ.ಅರುಣ್ ಜೋಳದಕೂಡ್ಲಿಗಿ


    ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಲಭಿಸಿ, ಈ ನೆಲೆಯಲ್ಲಿ ಒಂದಷ್ಟು ಕೆಲಸಗಳು ನಡೆಯುತ್ತಿವೆ. ಇದರಲ್ಲಿ ಪುನರಾವರ್ತನೆಯ ಸವಕಲು ಅಧ್ಯಯನಗಳದ್ದು ದೊಡ್ಡ ಪಾಲು. ಪ್ರತಿ ವಿಶ್ವವಿದ್ಯಾಲಯಕ್ಕೆ ಒಂದು ಕೋಟಿ ರೂಗಳನ್ನು ಸಂಶೋಧನೆಯ ಕಾರಣಕ್ಕೆ ನೀಡಲಾಗಿದೆ. ಇದಕ್ಕೆ ಪ್ರತಿಯಾಗಿ ಸಂಶೋಧನೆಗಳು ನಡೆದದ್ದು ಬೆರಳೆಣಿಕೆಯವು. ಈ ಯೋಜನೆಯಲ್ಲಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದ ರಹಮತ್ ತರೀಕೆರೆ ಅವರ ‘ನುಡಿಸಂಕರ ಸಾಹಿತ್ಯ’ ಕೃತಿ ಹಲವು ಕಾರಣಗಳಿಗೆ ಮಹತ್ವದ್ದಾಗಿದೆ.

    ಪ್ರತಿಸಂಸ್ಕೃತಿ, ಸೂಫಿ, ನಾಥಪಂಥಗಳ ಮೂಲಕ ಕರ್ನಾಟಕವನ್ನು ಜನಸಮುದಾಯದ ಮಗ್ಗಲುಗಳಿಂದ ಭಿನ್ನವಾಗಿ ವಿವರಿಸಿದ ತರೀಕೆರೆ ಅವರು, ಜನಭಾಷೆಗಳ ಕೂಡು ಸಂಬಂಧದ ನೆಲೆಯಲ್ಲಿ ಕನ್ನಡವನ್ನು ಕರ್ನಾಟಕವನ್ನು ಎದುರುಗೊಂಡಿದ್ದಾರೆ. ಇದು ಕನ್ನಡ ಶಾಸ್ತ್ರೀಯ ಭಾಷೆಯ ನೆಲೆಯಲ್ಲಿ ಮಾಡಬಹುದಾದ ಅಧ್ಯಯನಗಳಿಗೆ ಒಂದು ವಿಶಿಷ್ಠ ಮಾದರಿ.

     ಹಲವು ಭಾಷೆಗಳು ಒಂದೇ ರಚನೆಯಲ್ಲಿ ಹೊರಳಿಕೊಳ್ಳುತ್ತ ನಿರ್ದಿಷ್ಟ ತಾತ್ವಿಕ ಆಶಯಕ್ಕಾಗಿ ಬಳಕೆಯಾಗುವ ವಿನ್ಯಾಸವನ್ನು ‘ನುಡಿಸಂಕರ’ ಎಂದು ಕರೆಯಬಹುದು. ಇದು ವರ್ತಮಾನದಲ್ಲಿ ಜನರು ಬಹುಭಾಷೆಗಳ ಜತೆ ಒಡನಾಡುವ ಸಂಕೀರ್ಣ ಸಂಬಂಧವನ್ನು ತೋರಿಸುತ್ತದೆ. ಹಾಗಾಗಿ ಭಾಷೆಯನ್ನು ಆಧಾರವಾಗಿಟ್ಟುಕೊಂಡು ಮಾಡಲಾದ ಸಾಂಸ್ಕೃತಿಕ ವಿಶ್ಲೇಷಣೆಯ ಯತ್ನವಿದು.

    ಈ ಕೃತಿಯಲ್ಲಿ ಒಟ್ಟು ನಲವತ್ತು ಸಂಕರ ಪಠ್ಯಗಳು, ಇಪ್ಪತ್ತಕ್ಕೂ ಹೆಚ್ಚು ಪೂರಕ ಪಠ್ಯಗಳನ್ನು ಜೋಡಿಸಿ ಚರ್ಚೆಯನ್ನು ಬೆಳೆಸಲಾಗಿದೆ. ಇಲ್ಲಿನ ಸಂಕರ ಪಠ್ಯಗಳನ್ನು, ಕಥೆ ಕಥನ ಪದ ಹಾಡು ಆಟ ದಾಖಲೆ-ಎಂದು ವಿಂಗಡಿಸಲಾಗಿದೆ. ಪ್ರತಿ ಲೇಖನದಲ್ಲೂ ನಾಲ್ಕು ಭಾಗಗಳಿದ್ದು, ಅವು-ಪಠ್ಯ ಪ್ರವೇಶದ ಮುನ್ನಿನ ಪರಿಚಯಾತ್ಮಕ ಪೀಠಿಕೆ; ಚರ್ಚೆಗೆ ಆರಿಸಿಕೊಂಡ ಪಠ್ಯಭಾಗದ ಉಲ್ಲೇಖ; ಪಠ್ಯದಲ್ಲಿರುವ ಕನ್ನಡೇತರ ಭಾಗದ ತರ್ಜುಮೆ; ಉಲ್ಲೇಖಿತ ಪಠ್ಯದ ವಿಶ್ಲೇಷಣೆ_ ಈ ಅನುಕ್ರಮದಲ್ಲಿ ಕೃತಿಯ ಬರಹದ ಚೌಕಟ್ಟಿದೆ.

   ಕರ್ನಾಟಕದಲ್ಲಿ ಕಳೆದ ೧೧ ಶತಮಾನಗಳಿಂದ ನೂರಾರು ನುಡಿಸಂಕರ ಪಠ್ಯಗಳು ಸೃಷ್ಟಿಯಾಗಿವೆ. ಇವುಗಳಲ್ಲಿ ಶಾಸನ, ವಚನ, ತತ್ವಪದ, ಲಾವಣಿ, ರಿವಾಯತ್ ಪದ, ಕತೆ, ಕಾದಂಬರಿ, ಬಯಲಾಟ, ಸಿನಿಮಾಗೀತೆ, ಲಾಲಿಹಾಡು, ಖಾಸಗಿಪತ್ರ, ಕರಪತ್ರ ಇತ್ಯಾದಿ ಪ್ರಕಾರಗಳಿದ್ದು, ಇವು ಬಹುರೂಪಿಯಾಗಿವೆ. ಇಲ್ಲಿ ವಡ್ಡಾರಾಧನೆಯಿಂದ ಆರಂಭವಾಗಿ ಈಚಿನ ಜನಪ್ರಿಯ ಕೊಲವರಿ ಡಿ ತನಕ ನುಡಿಸಂಕರದ ಭಿನ್ನ ಆಯಾಮಗಳನ್ನು ಚರ್ಚಿಸಲಾಗಿದೆ.

   ತರೀಕೆರೆ ಅವರು ವಿವರಿಸುವಂತೆ ‘ಇಲ್ಲಿ ಸಂಸ್ಕೃತದಿಂದ ಆರಂಭಗೊಂಡು ಕನ್ನಡದಲ್ಲಿ ಬೆಳೆದು ತೆಲುಗಿನಲ್ಲಿ ಮುಗಿಯುವ ಶಾಸನವಿದೆ; ೧೯ನೇ ಶತಮಾನದಲ್ಲಿ ಹುಬ್ಬಳ್ಳಿಯ ಸಿದ್ದಲಿಂಗಕವಿ ವಿರಚಿತ ಕನ್ನಡ ಉರ್ದು ಮರಾಠಿ ಲಂಬಾಣಿ(?)ಗಳಿಂದ ಕೂಡಿರುವ ‘ಆದಾಯ ತೆರಿಗೆ’ ಲಾವಣಿಯಿದೆ; ಹಲವು ಸಮುದಾಯವರು ತಂತಮ್ಮ ಭಾಷೆಗಳಲ್ಲೇ ಅರ್ಜುನ ಜೋಗಿಯನ್ನು ಕರೆದು ಉಪಚರಿಸುವ ಮೈಸೂರು ಸೀಮೆಯ ‘ಜನಪದ ಮಹಾಭಾರತ’ವಿದೆ; ಕನ್ನಡ ಮತ್ತು ಉರ್ದು ಸಂಕರವಿರುವ ‘ಪಿರಿಯಾಪಟ್ಟಣದ ಕಾಳಗ’ದಂತಹ ಕಾವ್ಯಗಳಿವೆ; ಮರಾಠಿ ಕನ್ನಡ ಹಿಂದಿ ಸಂಕರವುಳ್ಳ ಗೊಂದಲಿಗರ ಹಾಡುಗಳಿವೆ; ಮಹಿಪತಿರಾಯನನ್ನೂ ಒಳಗೊಂಡಂತೆ ಕೈವಾರ ನಾರೇಯಣ, ಗುಡೇಕಲ್ಲಿನ ಅಲ್ಲಿಪೀರಾ ಸಾಹೇಬ, ಚನ್ನೂರ ಜಲಾಲ ಸಾಹೇಬ, ಬೇನೂರ ಹಜರತ್ ಕಾಕಿಪೀರಾ, ಮಂಜರ್ಲಾ ಖಾದರಸಾಹೇಬ, ಕೂಡಲೂರ ಬಸವಲಿಂಗ, ಶಿಶುನಾಳ ಶರೀಫ, ಸಾಲಗುಂದಿಯ ಗುರುಖಾದರಿ ಪೀರಾ ಮುಂತಾದವರು, ಕನ್ನಡ-ತೆಲುಗು-ಉರ್ದು ಮರಾಠಿಗಳನ್ನು ಬೆರೆಸುತ್ತ ರಚಿಸಿರುವ ತತ್ವಪದಗಳಿವೆ, ಎಂದು ವಿವರಿಸುತ್ತಾ ಪ್ರಸ್ತುತ ಕೃತಿಯಲ್ಲಿ, ಮೇಲೆ ನಮೂದಿಸಿದ ವಿವಿಧ ಭಾಷಿಕ ಅಭಿವ್ಯಕ್ತಿಗಳನ್ನು ನುಡಿಸಂಕರ ಎಂಬ ವಿಶಾಲ ಅರ್ಥದಲ್ಲಿ ಪರಿಗ್ರಹಿಸಿ ಸಂಕಲಿಸಲಾಗಿದೆ ಹಾಗೂ ಅವನ್ನು ಸಾಂಸ್ಕೃತಿಕ ದೃಷ್ಟಿಕೋನದಲ್ಲಿ ವಿಶ್ಲೇಷಿಸಲು ಯತ್ನಿಸಲಾಗಿದೆ’ ಎನ್ನುತ್ತಾರೆ.

    ನುಡಿಸಂಕರದ ಮೂಲಕ ಕನ್ನಡ ಸಾಹಿತ್ಯದ ಒಳಗಿನ ಬಹುಭಾಷೆಯ ಒಡನಾಟವನ್ನೂ, ಈ ಒಡನಾಟ ಹುಟ್ಟಿಸಿದ ಕನ್ನಡದ ಭಿನ್ನ ವ್ಯಕ್ತಿತ್ವದ ಚಹರೆಯನ್ನೂ ಗುರುತಿಸಲು ಯತ್ನಿಸಿದ್ದಾರೆ. ಹಲವು ಬಾಷೆಯ ಮೂಲಕ ಕನ್ನಡವನ್ನೂ, ಕನ್ನಡದ ಮೂಲಕ ಬಹುಭಾಷೆಗಳನ್ನೂ ನೋಡುವ ನೋಟಕ್ರಮ ವಿಶಿಷ್ಠವಾಗಿದೆ. ಭಾಷೆಯ ಸಂಕರ, ಬದುಕಿನ ಸಂಕರವಾಗಿಯೂ, ಸಂಸ್ಕೃತಿಯ ಸಂಕರವಾಗಿಯೂ, ಕನ್ನಡತ್ವದ ಸಂಕರವಾಗಿಯೂ ದಾಟುವ ಕಾರಣಕ್ಕೆ ಈ ಕೃತಿ ಮುಖ್ಯವಾಗುತ್ತದೆ.

   ಕನ್ನಡ ಭಾಷೆಯ ಮತ್ತು ಕರ್ನಾಟಕ ಸಂಸ್ಕೃತಿಯ ಬಹುತ್ವವು ದುರಭಿಮಾನಿಯಾದ ಏಕರೂಪಿ ಗ್ರಹಿಕೆಗಳಲ್ಲಿ ಕಳೆದುಹೋಗುವ ಆತಂಕವಿದೆ. ಈ ಆತಂಕ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಭಾವೋದ್ವೇಗವಾದಿ ಕನ್ನಡ ಸಂಘಟನೆಗಳಲ್ಲಿ ಮಾತ್ರವಲ್ಲ, ಕನ್ನಡದ ಅಧ್ಯಯನಗಳಲ್ಲೂ ಕಾಣಬರುತ್ತಿದೆ. ಅದರಲ್ಲೂ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬಂದ ಮೇಲೆ ಬಗೆಬಗೆಯಾಗಿ ಆರಂಭವಾಗುತ್ತಿರುವ ಅಧ್ಯಯನಗಳ ಹೊತ್ತಲ್ಲಿ, ಈ ಆತಂಕ ಸಣ್ಣಗೆ ಗೋಚರವಾಗುತ್ತಿದೆ. ಅಂದರೆ- ಕರ್ನಾಟಕದಲ್ಲಿ ಕನ್ನಡದ ಮೇಲೆ ಹೆಚ್ಚು ಕಾಳಜಿ ವ್ಯಕ್ತವಾಗಿ, ಕನ್ನಡದ ಅಸ್ತಿತ್ವ ಕುರಿತ ಆತಂಕದ ಚರ್ಚೆಗಳೂ ಸಂಭ್ರಮದ ಸಮ್ಮೇಳನಗಳೂ ಜತೆಗೆ ನಡೆಯುತ್ತಿವೆ.

  ಆದರೆ ಕನ್ನಡದ ಜತೆ ಬದುಕುತ್ತಿರುವ ಜನಭಾಷೆಗಳ ಕೂಡುಸಂಬಂಧದ ಚಿಂತನೆ ಅಷ್ಟಾಗಿ ನಡೆಯುತ್ತಿಲ್ಲ; ಕನ್ನಡ ಸಾಹಿತ್ಯದ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಆದರೆ ಸಾಹಿತ್ಯವನ್ನು ಒಳಗೊಂಡಂತೆ ಜನರ ಬದುಕನ್ನೇ ಆಧರಿಸುವ ಕರ್ನಾಟಕ ಸಂಸ್ಕೃತಿಯ ಮೇಲೆ ಕಡಿಮೆ ಚರ್ಚೆಯಾಗುತ್ತಿದೆ; ಗತಕಾಲದ ಗೆರೆ ಕೊರೆದುಕೊಂಡು ಕರ್ನಾಟಕ ಕುರಿತ ಚರ್ಚೆಗಳು ಜಾಸ್ತಿ ಕಾಣುತ್ತಿವೆ. ಆದರೆ ಗತವನ್ನೂ ಒಳಗೊಂಡಂತೆ ವರ್ತಮಾನ ವಿದ್ಯಮಾನಗಳ ಬಗ್ಗೆ ಕಡಿಮೆ ಗಮನ ಹೋಗುತ್ತಿದೆ. ಈ ಬಗೆಯ ಮಿತಿಗಳನ್ನು ಮೀರಲು ಈ ಅಧ್ಯಯನ ಪ್ರಯತ್ನಿಸಿದೆ.

    ಈ ಹಿನ್ನೆಲೆಯಲ್ಲಿ ನುಡಿಸಂಕರ ಸಾಹಿತ್ಯ ಕೃತಿಯ ಆಲೋಚನ ಕ್ರಮ ಕನ್ನಡವನ್ನೂ ಒಳಗೊಂಡಂತೆ ಕರ್ನಾಟಕದ ಹಲವು ಭಾಷೆ ಮತ್ತು ಸಂಸ್ಕೃತಿಗಳತ್ತ ಹೊರಳಿದೆ; ಚರಿತ್ರೆಯ ಪ್ರಜ್ಞೆಯನ್ನು ಬಿಟ್ಟುಕೊಡದೆ ಕರ್ನಾಟಕದ ವರ್ತಮಾನ ಮತ್ತು ಭವಿಷ್ಯದತ್ತ ತನ್ನ ಕಾಳಜಿ ವಹಿಸಿದೆ. ಇಲ್ಲಿನ ಸಂಕರ ಪಠ್ಯಗಳಲ್ಲಿ ಬಳಕೆಯಾಗಿರುವ ವಿಭಿನ್ನ ಭಾಷೆಗಳ ನಡುವಣ ಅಂತರ್ ಸಂಬಂಧವು ಸಮಾನತೆ, ನಿರ್ಲಿಪ್ತತೆ, ಶ್ರೇಣೀಕರಣ, ಸಂಘರ್ಷ, ಕೊಡುಕೊಳೆ, ಸಾಮರಸ್ಯ ಮುಂತಾಗಿ ಹಲವು ನೆಲೆಗಳಲ್ಲಿದೆ. ಈ ಅಂತರ್ ಸಂಬಂಧಗಳ ಸ್ವರೂಪವು ಎಲ್ಲ ಕಾಲದಲ್ಲೂ ಏಕರೂಪಿಯಾಗಿಲ್ಲದಿರುವುದು ತಿಳಿಯುತ್ತದೆ.

     ಹೀಗಾಗಿ, ನುಡಿಸಂಕರ ಪಠ್ಯಗಳು ಯಾಕೆ ಮತ್ತು ಹೇಗೆ ಸೃಷ್ಟಿಯಾಗುತ್ತವೆ ಎನ್ನುವುದು ಕೇವಲ ಭಾಷಾಶಾಸ್ತ್ರೀಯ ಸಂಗತಿಯಾಗದೆ, ಸಾಮಾಜಿಕ ರಾಜಕೀಯ ಸಂಗತಿ ಕೂಡ ಆಗಿರುವುದನ್ನು ನೋಡಬಹುದು. ನುಡಿಸಂಕರ ಪಠ್ಯಕ್ಕೂ ಅದರದ್ದೇ ಆದ ಅರ್ಥ, ಉದ್ದೇಶ ಮತ್ತು ತಾತ್ವಿಕತೆಗಳಿದ್ದು, ಅವನ್ನೆಲ್ಲ ಒಂದು ಸಾಮಾನ್ಯ ಚೌಕಟ್ಟಿನೊಳಗಿಟ್ಟು ಅರ್ಥೈಸುವುದು ಸಾಧ್ಯವಿಲ್ಲ ಎನ್ನುವ ಮಿತಿಯನ್ನು ತರೀಕೆರೆ ಅವರು ಒಪ್ಪುತ್ತಾರೆ. ಅಂತೆಯೇ ಈಗಿನ ಇಂಗ್ಲೀಶ್ ಮಿಶ್ರಣವು ಜಾಗತಿಕ ಮಾರುಕಟ್ಟೆ ಶಕ್ತಿಗಳು ಮಾಡುತ್ತಿರುವ ಸಾಂಸ್ಕೃತಿಕ ಸಂಕರದ ಭಾಗವಾಗಿ ಬರುತ್ತಿರುವ ಬಗ್ಗೆ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

   ಈ ಅಧ್ಯಯನ ಕರ್ನಾಟಕದ ಭಾಷೆ ಸಾಹಿತ್ಯ ಸಂಸ್ಕೃತಿಗಳ ಸಮೃದ್ಧಿ ವೈವಿಧ್ಯಗಳ ವೈಭವೀಕರಣಕ್ಕಿಂತ, ಅದರ ಇಕ್ಕಟ್ಟುಗಳತ್ತ ಗಮನಹರಿಸಿದೆ. ಹಾಗಾಗಿ ಕನ್ನಡದ ಬಗ್ಗೆ ಪ್ರಚಲಿತದಲ್ಲಿರುವ ಜನಪ್ರಿಯ ಗ್ರಹಿಕೆಗಳನ್ನು ಒಡೆಯುವುದಕ್ಕೂ; ಕನ್ನಡವು ಇತರ ಭಾಷೆಗಳ ಜತೆಗೆ ಇಟ್ಟುಕೊಂಡಿರುವ ಕೊಡುಕೊಳು ಸಂಬಂಧದ ಮೇಲೆ ಹೊಸಚಿಂತನೆ ಮಾಡುವುದಕ್ಕೂ ಈ ಕೃತಿ ಪ್ರೇರಣೆಯಾಗಿದೆ. ಗಡಿ ಭಾಷೆ ಧರ್ಮಗಳ ವಿಷಯದಲ್ಲಿ ಇರುವ ಸಂಘರ್ಷಗಳ ಮೇಲೆ ಮರುಚಿಂತನೆ ಮಾಡುವಂತೆ ಈ ಅಧ್ಯಯನ ಒತ್ತಾಯಿಸುತ್ತದೆ. ಮತ್ತಷ್ಟು ನುಡಿಸಂಕರ ಪಠ್ಯಗಳನ್ನು ಹುಡುಕಿ, ಕನ್ನಡ ಭಾಷೆ, ಸಾಹಿತ್ಯ ಮತ್ತು ಕರ್ನಾಟಕ ಸಂಸ್ಕೃತಿಗಳ ಜತೆ ಅವು ಇಟ್ಟುಕೊಂಡಿರುವ ಸಂಗಾತಿ ಸಂಬಂಧವನ್ನು ಶೆಧಿಸುವ ನೆಲೆಯಲ್ಲಿ ಹೊಸ ತಲೆಮಾರಿನ ಸಂಶೋಧಕರನ್ನು ಈ ಕೃತಿ ಪ್ರೇರೇಪಿಸುವಂತಿದೆ.

    ತರೀಕೆರೆ ಅವರ ಆಳವಾದ ಅಧ್ಯಯನ ಮತ್ತು ನಿರಂತರ ತಿರುಗಾಟದ ಅನುಭವಗಳು ಇಲ್ಲಿನ ಆಲೋಚನಕ್ರಮವನ್ನು ರೂಪಿಸಿದೆ. ಹೀಗೆ ಹೊಸ ಆಲೋಚನೆಗಳನ್ನು ಬಿತ್ತುವ ಕಾರಣಕ್ಕೆ, ರಹಮತ್ ತರೀಕೆರೆ ನಮ್ಮ ಕಾಲದಲ್ಲಿ ಮತ್ತೆ ಮತ್ತೆ ಪ್ರಸ್ತುತರಾಗುತ್ತಾರೆ.

ನುಡಿಸಂಕರ ಸಾಹಿತ್ಯ
ರಹಮತ್ ತರೀಕೆರೆ
೨೦೧೨, ಪುಟ ೫೧+೨೧೨, ಬೆಲೆ: ೧೬೦.೦೦,
ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ.

ಶುಕ್ರವಾರ, ಏಪ್ರಿಲ್ 13, 2012

ಅವಸಾನದತ್ತ ಸಾಗುತ್ತಿರುವ ರೇಷ್ಮೆ ಕೈಮಗ್ಗ

ಸಿದ್ದರಾಮ ಹಿರೇಮಠ, ಕೂಡ್ಲಿಗಿ.
(ರೇಷ್ಮೆ ಸೀರೆ ಸಿದ್ಧಪಡಿಸುತ್ತಿರುವ ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮದ ಎಂ.ಟಿ.ನಾಗರಾಜ)

ಯಂತ್ರಗಳ ಭರಾಟೆ ಹೆಚ್ಚಿದಂತೆಲ್ಲ ದೇಸಿ ಉದ್ದಿಮೆಯಾಗಿದ್ದ ಕೈಮಗ್ಗಗಳು ಅವಸಾನದತ್ತ ಸಾಗುತ್ತಿವೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ರೇಷ್ಮೆ ಕೈಮಗ್ಗ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಮೊದಲು ಸಾಕಷ್ಟು ನೇಕಾರಿಕೆಯ ಮನೆಗಳಿದ್ದವು, ಇದೀಗ ಅವುಗಳೆಲ್ಲ ಅವಸಾನದಂಚಿನತ್ತ ಸಾಗಿ ಇದೇ ವೃತ್ತಿಯನ್ನವಲಂಬಿಸಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಮನೆಗಳು ಉಳಿದಿವೆ.
ತಾಲೂಕಿನಲ್ಲಿ ಹೊಸಹಳ್ಳಿ, ರಾಂಪುರ, ಹೂಡೇಂಗಳಲ್ಲಿ ರೇಷ್ಮೆ ಕೈಮಗ್ಗಗಳಿವೆ. ಹೂಡೇಂ ಗ್ರಾಮದಲ್ಲಿಯೇ ಈ ಮೊದಲು ೩೦ ಕೈಮಗ್ಗಗಳಿದ್ದವುಗಳು ಈಗ ಕೇವಲ ೩ ಮಗ್ಗಗಳು ಉಳಿದಿರುವುದು ವಿಪರ್ಯಾಸ. ತಾಲೂಕು ಕೇಂದ್ರದಿಂದ ೩೫ ಕಿ.ಮೀ ದೂರವಿರುವ ಗಡಿಗ್ರಾಮ ಹೂಡೇಂ. ಹಲವಾರು ತಲೆಮಾರುಗಳಿಂದ ಇಲ್ಲಿ ರೇಷ್ಮೆ ಕೈಮಗ್ಗಗಳು ಉಳಿದುಕೊಂಡು ಬಂದಿದ್ದವು. ಆದರೆ ಕಾಲ ಬದಲಾದಂತೆ, ಯಂತ್ರಗಳಿಂದ ಸಿದ್ಧಗೊಂಡ ರೇಷ್ಮೆ ಸೀರೆಗಳಿಗೇ ಜನ ಮಾರುಹೋಗುತ್ತಿರುವುದರಿಂದ ಕೈಮಗ್ಗದ ರೇಷ್ಮೆ ಸೀರೆಗಳು ಹಿಂದುಳಿಯತೊಡಗಿದವು.
(ಕೈಮಗ್ಗದಲ್ಲಿ ಸಿದ್ಧಗೊಳ್ಳುತ್ತಿರುವ ರೇಷ್ಮೆ ಸೀರೆ)

ಇಲ್ಲಿನ ಎಂ.ಟಿ.ನಾಗರಾಜ ಎಂಬವರು ಹಲವಾರು ವರ್ಷಗಳಿಂದ ಇದೇ ವೃತ್ತಿಯನ್ನವಲಂಬಿಸಿದ್ದಾರೆ. ಕೊಂಡ್ಲಹಳ್ಳಿ, ಮೊಳಕಾಲ್ಮೂರು, ರಾಯದುರ್ಗಗಳಿಂದ ತಮಗೆ ಬೇಕಾದ ಬಣ್ಣದ ರೇಷ್ಮೆ ನೂಲನ್ನು ತರುತ್ತಾರೆ. ಮಗ್ಗವನ್ನು ತಾವೇ ಸಿದ್ಧಪಡಿಸಿಕೊಳ್ಳಬೇಕು, ಇವರಿಗೆ ಕೂಲಿ ಹಣ ಕೊಡುವ ಮಾಲಕರು ಯಾವ ಡಿಸೈನ್ ಹೇಳುವರೋ ಆ ಡಿಸೈನ್‌ಗಳನ್ನು ಇವರೇ ಸಿದ್ಧಪಡಿಸಿಕೊಂಡು ನೇಯಬೇಕು. ೬ ರೇಷ್ಮೆ ಸೀರೆ ನೇಯಲು ಕನಿಷ್ಟ ೧೮,೦೦೦ ರೂ.ಗಳಾದರೂ ಬೇಕಾಗುತ್ತದೆ. ತಿಂಗಳಿಗೆ ಹಗಲು ಇರುಳು ದುಡಿದರೆ ೪ ಸೀರೆಗಳನ್ನು ನೇಯಬಹುದೆಂದು ನಾಗರಾಜ್ ಹೇಳುತ್ತಾರೆ. ಮನೆಯ ಸದಸ್ಯರೆಲ್ಲ ನೂಲು ಸಿದ್ಧಪಡಿಸುವುದು, ಮಗ್ಗವನ್ನು ಸಿದ್ಧಪಡಿಸುವುದು, ಎಳೆಗಳನ್ನು ಜೋಡಿಸುವುದು, ಎಲ್ಲ ಕೆಲಸಗಳಲ್ಲೂ ಪಾಲ್ಗೊಳ್ಳಬೇಕು. ಎಲ್ಲ ಸಿದ್ಧಗೊಂಡ ನಂತರ ನಾಗರಾಜ್ ಹಗಲಿರುಳು ಮಗ್ಗದಲ್ಲಿ ಕುಳಿತು ಸೀರೆಯನ್ನು ನೇಯುತ್ತಾರೆ.
(ರೇಷ್ಮೆ ಕೈಮಗ್ಗ)


‘ಇಷ್ಟೆಲ್ಲ ಕಷ್ಟಪಟ್ಟರೂ ದಿನಕ್ಕೆ ಸಿಗುವುದು ಕೇವಲ ೭೫ ರೂ.ಗಳ ಕೂಲಿ. ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ದಿನಕ್ಕೆ ೫೦೦ ರೂ.ಗಳ ಕೂಲಿ ಸಂಪಾದಿಸಬೇಕಾದಲ್ಲಿ ಮಗ್ಗದಲ್ಲಿ ಕುಳಿತು ಯಾರು ಕಷ್ಟಪಡುತ್ತಾರೆ ?’ ಎಂದು ಅವರು ಪ್ರಶ್ನಿಸುತ್ತಾರೆ. ತಮಗಿದ್ದ ಆಸಕ್ತಿ ತಮ್ಮ ಮಕ್ಕಳಿಗೇ ಇಲ್ಲ ಎಂದು ಅವರು ವಿಶಾದ ವ್ಯಕ್ತಪಡಿಸುತ್ತಾರೆ. ‘ಗ್ರಾಮದ ಬಹುತೇಕ ಜನ ಬೆಂಗಳೂರು, ತುಮಕೂರು, ಚಿಕ್ಕಮಗಳೂರಿನೆಡೆ ಕೂಲಿಯನ್ನರಸಿ ಹೋಗಿದ್ದಾರೆ. ನನಗೆ ಕಷ್ಟವಾಗಲಿ, ನಷ್ಟವಾಗಲಿ ಇದನ್ನೇ ದೇವರೆಂದು ನಂಬಿದ್ದೇನೆ ಇದರಲ್ಲಿಯೇ ತೃಪ್ತಿ ಕಾಣುತ್ತೇನೆ’ ಎಂದು ನಾಗರಾಜ್ ಹೇಳುತ್ತಾರೆ. ಅಂದಹಾಗೆ ಇಲ್ಲಿ ಸಿದ್ಧಗೊಂಡ ಡಿಸೈನ್ ಇಲ್ಲದ ರೇಷ್ಮೆ ಸೀರೆ ಬೆಲೆ ೩,೫೦೦ ರೂ.ಗಳು, ಡಿಸೈನ್ ಇದ್ದವುಗಳಾದಲ್ಲಿ ೪,೫೦೦ ರೂ.ಗಳು. ಸಿದ್ಧಗೊಂಡ ರೇಷ್ಮೆ ಸೀರೆಗಳು ಮೊಳಕಾಲ್ಮೂರು, ರಾಯದುರ್ಗಗಳಿಗೆ ಹೋಗುತ್ತವೆ. ಯಂತ್ರದಲ್ಲಿ ಸಿದ್ಧಗೊಂಡ ಸೀರೆಗಳ್ಲಲಿ ನೂಲು ಬಿಗಿಯಾಗಿರುವುದಿಲ್ಲ, ಬಾಳಿಕೆಯೂ ಕಡಿಮೆ, ಕೈಮಗ್ಗದಲ್ಲಿ ಮನಸುಕೊಟ್ಟು ಸಿದ್ಧಪಡಿಸಿದ ಸೀರೆಗಳ ನೂಲು ಬಿಗಿಯಾಗಿರುತ್ತದೆ, ಬಾಳಿಕೆಯೂ ಹೆಚ್ಚು ಎನ್ನುವುದು ನೇಕಾರರ ನಿಲುವು.
(ಕೈಮಗ್ಗದ ಸಲಕರಣೆಗಳು)

ಹೊಸಮಗ್ಗಗಳಿಗೆ ೧೫,೦೦೦ ರೂ.ಗಳಷ್ಟು ಬೆಲೆ ಇದೆ. ಸರ್ಕಾರ ಕೈಮಗ್ಗಗಳನ್ನಾದರೂ ಒದಗಿಸಿದಲ್ಲಿ ನೇಕಾರರಿಗೆ ಪ್ರೋತ್ಸಾಹ ದೊರೆತಂತಾಗುವುದು ಎಂದು ಅವರು ಹೆಳುತ್ತಾರೆ. ೧೯೯೮ರಲ್ಲಿ ಶ್ರಿ ಗುರು ತಿಪ್ಪೇಸ್ವಾಮಿ ರೇಷ್ಮೆ ಕೈಮಗ್ಗ ನೇಕಾರರ ಉತ್ಪಾದನಾ ಮತ್ತು ಮಾರಾಟದ ಸಹಕಾರ ಸಂಘವನ್ನು ರಚಿಸಲಾಗಿತ್ತು. ಆಗ ೩೦-೪೦ ಜನ ನೇಕಾರರಿದ್ದರು. ಆದರೆ ಇದೀಗ ಸಂಖ್ಯೆ ೩ಕ್ಕಿಳಿದಿದೆ. ಇನ್ನು ಸಂಘದ ಗತಿಯೇನು? ಎಂದು ಪದಾಧಿಕಾರಿಗಳು ಕೇಳುತ್ತಾರೆ. ಎಂ.ಟಿ.ತಿಪ್ಪೇಸ್ವಾಮಿ ಅಧ್ಯಕ್ಷರು, ಎನ್.ಆರ್.ರಾಜಣ್ಣ ಕಾರ್ಯದರ್ಶಿಯಾಗಿದ್ದಾರೆ. ಮೂರೇ ಕೈಮಗ್ಗಗಳ ಸಹಕಾರ ಸಂಘದ ಪದಾಧಿಕಾರಿಗಳು ಕೇಳುವ ಪ್ರಶ್ನೆಗೆ ಉತ್ತರಿಸುವವರಾದರೂ ಯಾರು? ಬೇರೆ ಕೈಮಗ್ಗಗಳಿಗೆ ಸಾಲ ಸೌಲಭ್ಯ ಇತರೆ ಅವಕಾಶಗಳಿವೆ, ರೇಷ್ಮೆ ಮಗ್ಗಗಳಿಗೇಕಿಲ್ಲ? ಎಂದು ಅವರು ಕೇಳುತ್ತಾರೆ.
(ಕೈಮಗ್ಗದಲ್ಲಿ ಸಿದ್ಧಗೊಂಡಿರುವ ರೇಷ್ಮೆ ಸೀರೆ)

ಈ ಕುರಿತು ಸರ್ಕಾರಕ್ಕೆ ಸಾಕಷ್ಟು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಕೊನೆಗೆ ಸಾಲದ ರೂಪದಲ್ಲಿಯಾದರೂ ಕೈಮಗ್ಗಗಳು ಒದಗಿಸಿದ್ಲಲಿ ನಾವು ಹೇಗೋ ಬದುಕುತ್ತೇವೆ ಎಂದು ನೇಕಾರರು ಹೇಳುತ್ತಾರೆ. ಶ್ರಮಕ್ಕೆ ಬೆಲೆ ಕಟ್ಟಲಾಗದು ಎನ್ನುವಂತೆ ಇಲ್ಲಿ ಸಿದ್ಧಗೊಂಡ ಸೀರೆಗಳನ್ನು ಕೊಳ್ಳುವುದೇ ನೇಕಾರರನ್ನು ಪ್ರೋತ್ಸಾಹಿಸಿದಂತೆ, ಸಂಬಂಧಿಸಿದ ಇಲಾಖೆಯೂ ನೇಕಾರರ ಅಳಲನ್ನು ಗಮನಿಸಿ ಸಹಾಯವನ್ನು ಒದಗಿಸಬೇಕಾಗಿದೆ.

ಆಧುನಿಕ ಯಂತ್ರಗಳು ಮತ್ತು ಜಾನಪದ

ವಿಜಯವಾಣಿಯಲ್ಲಿ ಬಂದ ಚರ್ಚೆ

ಸೋಮವಾರ, ಮಾರ್ಚ್ 26, 2012

ಜಾನಪದ ವಿವಿ ಉದ್ಘಾಟನೆಗೆ ಅಡ್ಡಿ ಏನು?

(ಶಿಗ್ಗಾಂವ ಹತ್ತಿರದ ಗೊಟಗೋಡಿಯಲ್ಲಿ ಸಿದ್ದವಾಗಿರುವ ಜಾನಪದ ವಿವಿ ಕ್ಯಾಂಪಸ್ ಚಿತ್ರ)

-ವಿಜಯ್ ಹೂಗಾರ

ಕೃಪೆ:ಪ್ರಜಾವಾಣಿ, March 26, 2012



ದೇಶದ ಪ್ರಥಮ ಜಾನಪದ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಜ್ಯದ ಜಾನಪದ ವಿಶ್ವವಿದ್ಯಾಲಯ `ಅಧಿಕಾರ ರಾಜಕಾರಣ`ದ ಸುಳಿಗೆ ಸಿಲುಕಿದೆ. ವರ್ಷವಾದರೂ ಅದರ ಉದ್ಘಾಟನೆಗೆ ಮುಹೂರ್ತ ಕೂಡಿ ಬಂದಿಲ್ಲ.

2010-11ನೇ ಸಾಲಿನ ಮುಂಗಡಪತ್ರದಲ್ಲಿ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿ ಗ್ರಾಮದ ಬಳಿ ಜಾನಪದ ವಿಶ್ವವಿದ್ಯಾಲಯ ಸ್ಥಾಪಿಸುವ ಘೋಷಣೆ ಮಾಡಿದರು. ಆದರೆ ರಾಜ್ಯ ಸರ್ಕಾರ ಘೋಷಣೆಗೆ ತೋರಿದ ಆಸಕ್ತಿಯನ್ನು ಅದರ ಉದ್ಘಾಟನೆಗೆ ತೋರುತ್ತಿಲ್ಲ. ಬಿಜೆಪಿಯಲ್ಲಿ ಅಧಿಕಾರಕ್ಕಾಗಿ ನಡೆದಿರುವ ಕಿತ್ತಾಟ ವಿವಿ ಉದ್ಘಾಟನೆಗೆ ಅಡ್ಡಿಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ವಿವಿ ಘೋಷಣೆ ಜತೆಗೆ ಅದರ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ 7.5 ಕೋಟಿ ರೂ. ಸೇರಿ 17.5 ಕೋಟಿ ರೂಪಾಯಿ ಅನುದಾನ ದೊರೆತಿದೆ. ಭೂಮಿ ಹಸ್ತಾಂತರ ಹಾಗೂ ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ. ಕುಲಪತಿ, ಕುಲಸಚಿವರು, ಅಗತ್ಯ ಸಿಬ್ಬಂದಿ ನೇಮಕವೂ ಆಗಿದೆ. ಗೊಟಗೋಡಿ ಬಳಿ ರಾಷ್ಟ್ರೀಯ ಹೆದ್ದಾರಿ-4ಕ್ಕೆ ಹೊಂದಿಕೊಂಡಿರುವ ಪ್ರವಾಸೋದ್ಯಮ ಇಲಾಖೆಯ ಯಾತ್ರಿ ನಿವಾಸ ಕಟ್ಟಡವನ್ನು ನವೀಕರಿಸಿ ತಾತ್ಕಾಲಿಕ ಆಡಳಿತ ಕಚೇರಿಯನ್ನಾಗಿ ಪರಿವರ್ತಿಸಲಾಗಿದೆ.

ಅಷ್ಟೇ ಅಲ್ಲದೇ ಕುಲಪತಿಗಳು ಅಧಿಕಾರ ವಹಿಸಿಕೊಂಡ ನಂತರ ವಿವಿ ಲಾಂಛನವನ್ನು ಬಿಡುಗಡೆಗೊಳಿಸಿದ್ದಾರೆ. ಜಾನಪದ ಸಂಪುಟಗಳ ಮುದ್ರಣ ಕಾರ್ಯ ಆರಂಭಿಸಿದ್ದಾರೆ. ಗ್ರಾಮ ಚರಿತ್ರೆ, ಕೋಶ ಅಧ್ಯಯನ ಹಾಗೂ ಜಾನಪದ ವಸ್ತುಗಳ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ವಿಶ್ವವಿದ್ಯಾಲಯ ಇಷ್ಟೊಂದು ಚಟುವಟಿಕೆಗಳು ನಡೆಸುತ್ತಿದ್ದರೂ ಅದರ ಉದ್ಘಾಟನೆ ಯಾವಾಗ ಎನ್ನುವ ಪ್ರಶ್ನೆ ಹಾಗೇ ಉಳಿದಿದೆ.

ಎರಡು ಬಾರಿ ಮುಂದೂಡಿಕೆ: ಈ ಹಿಂದೆ ಎರಡು ಬಾರಿ ಉದ್ಘಾಟನೆಗೆ ದಿನ ನಿಗದಿ ಮಾಡಿ ಯಾವುದಾವುದೋ ಕಾರಣ ನೀಡಿ ಮುಂದೂಡಿದೆ. ವಿಶ್ವವಿದ್ಯಾಲಯ ಉದ್ಘಾಟನೆ ಮುಂದೂಡಲು ಕಾರಣಗಳಿಲ್ಲ. ರಾಜ್ಯಪಾಲರು ದಿನ ನೀಡಬೇಕಾಗಿದೆ. ಅದೇ ಕಾರಣಕ್ಕೆ ಉದ್ಘಾಟನೆ ವಿಳಂಬವಾಗಿದೆ ಎಂದು ವಿವಿ ಕುಲಪತಿ ಡಾ.ಅಂಬಳಿಕೆ ಹಿರಿಯಣ್ಣ ಹಾಗೂ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳುತ್ತಾರೆ.

ಗುರುವಾರ, ಮಾರ್ಚ್ 22, 2012

ಜಾನಪದ ವಿಶ್ವವಿದ್ಯಾಲಯದ ಉತ್ಸಾಹ ಹೆಚ್ಚಿಸಿದ ಬಜೆಟ್

-ಅರುಣ್ ಜೋಳದಕೂಡ್ಲಿಗಿ


ಹಲವು ಆಂತರಿಕ ಬಿಕ್ಕಟ್ಟುಗಳ ಮಧ್ಯೆಯೇ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಕೆಲವು ಮಿತಿಗಳ ನಡುವೆಯೂ ಜನಪ್ರಿಯ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ವಿಶೇಷವಾಗಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ೭.೫ ಕೋಟಿಯನ್ನು ಮೀಸಲಿಟ್ಟದ್ದು ವರದಿಯಾಗಿದೆ. ಜಾನಪದ ವಿವಿ ಈಗಷ್ಟೆ ಉದ್ಘಾಟನೆಯಾಗಬೇಕಿದೆ. ಆರಂಭಿಕ ಕೆಲಸಗಳಿಗೆ ಚಾಲನೆ ನೀಡಬೇಕಿದೆ. ಹಾಗಾಗಿ ಜಾನಪದ ವಿವಿಗೆ ಅಧಿಕ ಹಣದ ಅಗತ್ಯವಿತ್ತು. ಈಗ ತೋರಿದ ಬಜೆಟ್ ಒಲವು, ಜಾನಪದ ವಿವಿಯ ಆರಂಬಿಕ ಕೆಲಸಗಳಿಗೆ ಉತ್ಸಾಹವನ್ನು ಹೆಚ್ಚಿಸಿದೆ.


ಕನ್ನಡ ಜಾನಪದ ಬ್ಲಾಗ್ ಜಾನಪದ ವಿವಿಯ ಕುಲಪತಿಗಳಾದ ಪ್ರೊ. ಅಂಬಳಿಕೆ ಹಿರಿಯಣ್ಣ ಅವರನ್ನು ಮಾತನಾಡಿಸಿದಾಗ, ಬಜೆಟ್‌ನ ಬಗ್ಗೆ ಮತ್ತು ವಿಶ್ವವಿದ್ಯಾಲಯದ ಕೆಲಸಗಳ ಬಗ್ಗೆ ಪ್ರತಿಕ್ರಿಯಿಸಿದ್ದು ಹೀಗೆ:

‘ಅತ್ಯವಾದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು, ಶಿಲಾನ್ಯಾಸ ನೆರವೇರಿಸಿ ಕೆಲಸ ಕಾರ್ಯವನ್ನು ಆರಂಭಿಸಲು ಸರಕಾರದ ಅನುದಾನದ ಅಗತ್ಯವಿತ್ತು. ಗೊಟಗೋಡಿಯಲ್ಲಿ ಈಗಿರುವ ಕಟ್ಟಡ ಬಾಡಿಗೆ ಪಡೆದದ್ದು. ನಾವದನ್ನು ಬಿಟ್ಟುಕೊಡಬೇಕಾಗುತ್ತೆ. ಯುಜಿಸಿ ಮನ್ನಣೆ ಪಡೆಯಲು ವಿಶ್ವವಿದ್ಯಾಲಯದ್ದೇ ಆದ ಜಾಗ, ಸ್ವಂತ ಕಟ್ಟಡ, ಅಧ್ಯಾಪಕ ವರ್ಗ, ಸಿಬ್ಬಂದಿ, ಯೋಜನೆಗಳು, ಸುಸಜ್ಜಿತ ಗ್ರಂಥಾಲಯ ಇರಲೇಬೇಕು. ಇವೆಲ್ಲವನ್ನು ಒದಗಿಸಿಕೊಳ್ಳಲು ನಮಗೆ ಹಣಕಾಸಿನ ನೆರವು ಬೇಕೇ ಬೇಕು. ಈಗ ಕೊಟ್ಟಿರುವ ಹಣದಲ್ಲಿ ಆರಂಭಿಕ ಕೆಲಸಗಳನ್ನು ಕೈಗೊಳ್ಳಲು ಸಹಕಾರಿಯಾಗಿದೆ. ಬಹುಶಃ ಕಟ್ಟಡಗಳಿಗೆ ಶಿಲಾನ್ಯಾಸ ನೆರವೇರಿಸಬಹುದು. ಇದಕ್ಕೆ ಪೂರಕವಾದ ಯೋಜನೆಯನ್ನು ರೂಪಿಸಿದಿವಿ. ಭೂಮಿ ನಮ್ಮ ಹೆಸರಿಗೆ ಬಂದ ಮೇಲೆ ಸ್ವಂತ ಕಟ್ಟಡದ ಕೆಲಸಗಳು ಆರಂಭವಾಗ್ತವೆ. ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕ ಮೇಲೆ ಭೂಮಿ ವಿವಿಯ ಸ್ವಂತಕ್ಕೆ ವರ್ಗವಾಗುತ್ತದೆ. ಈ ಪ್ರಕ್ರಿಯೆ ಕೊನೆ ಹಂತದಲ್ಲಿದೆ.

ನಾವು ವಿಶ್ವವಿದ್ಯಾಲಯದಿಂದ ಮೊದಲ ಕೆಲಸಗಳಿಗಾಗಿ ನಲವತ್ತು ಕೋಟಿಗೆ ಪ್ರಸ್ತಾವ ಸಲ್ಲಿಸಿದ್ದೆವು. ಈಗ ಏಳುವರಿ ಕೋಟಿ ಕೊಟ್ಟಿದಾರೆ, ಹಂತ ಹಂತವಾಗಿ ನಮ್ಮ ಯೋಜನೆಗಳ ಕೆಲಸಗಳನ್ನು ಮಾಡಬೇಕಾಗುತ್ತದೆ. ಸರಕಾರದ ಸಹಕಾರ ತುಂಬಾ ಚೆನ್ನಾಗಿದೆ. ಮುಂದಿನ ಯೋಜನೆಗಳಿಗೂ ಹಣ ಕೊಡುತ್ತಾರೆ, ಆದರೆ ಅದಕ್ಕೆ ನಾವು ಅಪ್ರೋಚ್ ಮಾಡಬೇಕು ಅಷ್ಟೆ. ಈಗ ಕೊಟ್ಟಿರುವ ಹಣ ಯೋಜನೆಯ ಭಾಬ್ತೋ, ಯೋಜನೇತರ ಬಾಬ್ತೋ ಇನ್ನು ಸರಿಯಾದ ಮಾಹಿತಿ ಸಿಕ್ಕಿಲ್ಲ. ಬಜೆಟ್‌ನಲ್ಲಿ ಹಣ ನೀಡಿದ ಕಾರಣ ಜಾನಪದ ವಿಶ್ವವಿದ್ಯಾಲಯ ಸರಕಾರವನ್ನು ಅಭಿನಂದಿಸುತ್ತದೆ" ಎನ್ನುತ್ತಾರೆ.


ಈ ವಿಷಯ ಕುರಿತಂತೆ ಜಾನಪದ ಅಕಾಡೆಮಿ ಅಧ್ಯಕ್ಷರಾದ ಗೊ.ರು. ಚನ್ನಬಸಪ್ಪ ಅವರು ಪ್ರತಿಕ್ರಿಯಿಸುತ್ತಾ
" ಈಗ ಬಜೆಟ್‌ನಲ್ಲಿ ನೀಡಿದ ಹಣ ಜಾನಪದ ವಿವಿಯ ಆರಂಭಿಕ ಕೆಲಸಕ್ಕೆ ಒಳ್ಳೆಯದೇ ಆಗಿದೆ. ಇದು ಸರಕಾರದ ಆಶಾದಾಯಕ ಪ್ರತಿಕ್ರಿಯೆ. ಈ ಅನುದಾನದಲ್ಲಿ ಆಧ್ಯತೆಯ ಮೇರೆಗೆ ಕೆಲಸ ಮಾಡುತ್ತಾ ಹೋಗಬೇಕು. ಬೇರೆ ಬೇರೆ ಅಕಾಡೆಮಿಗಳ ಜತೆಯೂ ಸಹಕಾರ ಪಡೆದೂ ಕೆಲಸ ಮಾಡಬಹುದಾಗಿದೆ. ಮುಂದೆ ಪ್ರಾಜೆಕ್ಟ್‌ಗಳ ಪ್ರಸ್ತಾವ ಸಲ್ಲಿಸಿ ಹಣ ಪಡೆಯೋದಕ್ಕೂ ಅವಕಾಶವಿದೆ. ಯುವಕರ ಕುರಿತು ಏನಾದರೂ ಮಾಡುವುದಿದ್ದರೆ, ಯುವಜನಸೇವಾ ಇವರಿಂದ ಹಣ ಪಡೀಬಹುದು.

ಈಗ ಜಾನಪದ ವಿವಿ ಕೆಲಸ ಚೆನ್ನಾಗಿ ನಡೀತಿದೆ, ಕೋರ್ಸ ಆರಂಭಿಸೋಕೆ ಸಿಲಬಸ್ ಮಾಡ್ತಿದಾರೆ, ಮೊನ್ನೆ ನಲವತ್ತು ಜನ ಜಾನಪದ ವಿದ್ವಾಂಸರು ಬಂದು ಈ ಕುರಿತು ಚರ್ಚೆಯನ್ನು ಮಾಡಿದ್ರು. ಈಗ ಸೆನೆಟ್ಟೂ, ಸಿಂಡಿಕೇಟು, ಇಂಥವೆಲ್ಲಾ ಆಗಿಬಿಟ್ರೆ, ಡಿಪಾರ್ಟಮೆಂಟು ಆರಂಭಿಸೋದು, ಮುಂತಾದ ಕೆಲಸಗಳು ಬೇಗ ಆಗ್ತಾವೆ. ಅಧಿಕೃತವಾಗಿ ಒಂದು ಉದ್ಘಾಟನೆ ಅಂತ ಆದ್ರೆ, ಚಟುವಟಿಕೆಗಳು ಇನ್ನಷ್ಟು ಚುರುಕಾಗ್ತಾವೆ. ಗವರ್ನರ್ ಡೇಟು ಸಿಕ್ರೆ ಆದಷ್ಟು ಬೇಗ ಉದ್ಘಾಟನೆ ಆಗುತ್ತೆ ಅಂತ ಕುಲಪತಿಗಳು ಮಾತಾಡಿದ್ರು, ಇದು ಹೊಸ ಯುನಿವರ್ಸಿಟಿ ಆಗಿರೋದ್ರಿಂದ, ತೀವ್ರಗತಿಯಲ್ಲಿ ಕೆಲಸಗಳು ನಡೀಬೇಕಾದ್ರಿಂದ ಸರಕಾರ ಇನ್ನು ಹೆಚ್ಚಿನ ಅನುದಾನವನ್ನು ನೆರವನ್ನು ಕೊಡಬೇಕಾಗುತ್ತೆ" ಎಂದು ಹೇಳಿದರು.

ಬಜೆಟ್‌ನಿಂದ ಜಾನಪದ ವಿಶ್ವವಿದ್ಯಾಲಯಕ್ಕೆ ಆರಂಭಿಕ ಕೆಲಸಕ್ಕೆ ಪ್ರೋತ್ಸಾಹ ಸಿಕ್ಕಂತಾಗಿದೆ. ಈ ನೆಲೆಯಲ್ಲಿ ವಿವಿ ತನ್ನ ಕೆಲಸ ಕಾರ್ಯಗಳನ್ನು ಚುರುಕಿನಿಂದ ಆರಂಭಿಸುವ ಅಗತ್ಯವೂ ಇದೆ. ಜಾನಪದ ವಿವಿಯ ಕೆಲಸಗಳ ಬಗ್ಗೆ ನಾಡಿನ ನಾಡಿನಾಚೆಯ ಜನರ ಅತೀವ ಕತೂಹಲವಂತೂ ಇದ್ದೇ ಇದೆ. ಇದು ಕರ್ನಾಟಕದ ಎಲ್ಲಾ ವಿವಿಗಳಿಗಿಂತಲೂ ಭಿನ್ನವಾಗಿದ್ದರಿಂದ ಇಂತಹ ಕುತೂಹಲ ಸಹಜವೂ ಆಗಿದೆ. ಕನ್ನಡ ಜಾನಪದ ಬ್ಲಾಗ್ ಕೂಡ ಅಂತಹ ವಿಭಿನ್ನ ಕೆಲಸಗಳನ್ನು ಎದುರು ನೋಡುತ್ತದೆ. ಹಾಗೆಯೇ ಜಾನಪದ ವಿವಿಯ ಎಲ್ಲಾ ಒಳ್ಳೆಯ ಕೆಲಸಗಳನ್ನು ಅಂತರ್ಜಾಲದಲ್ಲಿ ವಿವರವಾಗಿ ಪ್ರಕಟಿಸಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಂಗಾತಿಯೂ ಆಗುತ್ತದೆ. ಇದು ಹೊಸ ವಿವಿಯಾಗಿದ್ದರಿಂದ ಸರಕಾರವು ಇದಕ್ಕೆ ಇನ್ನಷ್ಟು ಹೆಚ್ಚಿನ ನೆರವು ಪ್ರೋತ್ಸಾಹ ನೀಡಬೇಕಾಗಿದೆ.

ಮಂಗಳವಾರ, ಮಾರ್ಚ್ 20, 2012

ಜಾನಪದ ಎಂಬುದು ಪ್ರದರ್ಶನದ ವಸ್ತುವೇ?:

ಡಾ. ನಾ.ಡಿಸೋಜ


ಜನವರಿಯಲ್ಲಿ ನವ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡಿನಲ್ಲಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಟ್ಯಾಬ್ಲೋಗೆ ಮೂರನೆ ಬಹುಮಾನ ದೊರೆತಿದೆ ಅನ್ನುವುದು ಸಂತಸದ ಸುದ್ದಿಯೇ. ದಕ್ಷಿಣ ಕನ್ನಡದ ಭೂತಗಳು ದೆಹಲಿಯ ರಾಜಪಥದಲ್ಲಿ ಮೆರೆದವು ಅನ್ನುವುದು, ಬಹುಮಾನವನ್ನೂ ಪಡೆದವು ಅನ್ನುವುದು ಹೆಮ್ಮೆಯ ವಿಷಯ. ಆದರೆ ಇದರ ಹಿಂದೆಯೇ ಮತ್ತೊಂದು ಸುದ್ದಿ ಕೂಡ ಕೇಳಿ ಬಂದಿದೆ. ಈ ಟ್ಯಾಬ್ಲೋದಲ್ಲಿ ಭಾಗವಹಿಸಲು ಮೂಲತಃ ಈ ಭೂತಗಳ ವೇಷಹಾಕುವವರು ಒಪ್ಪಲಿಲ್ಲವೆಂದೂ, ಈ ಕಾರಣಕ್ಕೆ ಬೇರೆ ಕಲಾವಿದರನ್ನ ಬಳಸಿಕೊಂಡು ಈ ಟ್ಯಾಬ್ಲೋಗಳನ್ನ ಸಿದ್ಧಪಡಿಸಲಾಯಿತು ಎಂದು ಹೇಳಲಾಗಿದೆ. ಈ ಭೂತಗಳನ್ನ ಆರಾಧಿಸುವವರು ತಮ್ಮ ಕಲೆಯನ್ನ ಒಂದು ಪ್ರದರ್ಶನದ ವಸ್ತುವನ್ನಾಗಿಸಲು ತಯಾರು ಇರಲಿಲ್ಲ ಅನ್ನುವುದು ಈ ಮಾತಿಗೆ ದೊರೆತ ಸಮಜಾಯಿಶಿ.

ಈ ಸಂದರ್ಭದಲ್ಲಿ ನನಗೆ ಬಹಳ ವರ್ಷಗಳ ಹಿಂದೆ ಆದ ಒಂದು ಅನುಭವ ನೆನಪಿಗೆ ಬರುತ್ತದೆ. ಆಗ ನಾನು ಹೊಸದಾಗಿ ಕ್ಯಾಮೆರಾ ಕೊಂಡಿದ್ದೆ. ಕಣ್ಣಿಗೆ ಬಿದ್ದುದನೆಲ್ಲ ಕ್ಯಾಮರಾದಲ್ಲಿ ಸೆರೆ ಹಿಡಿಯುವ ಚಟ. ಒಂದು ದಿನ ನಮ್ಮ ಮನೆಯ ಮುಂದೆ ದುರಗ ಮುರುಗಿಯವನೊಬ್ಬ ತನ್ನ ಮಾರಮ್ಮನ ಪಡಲಿಗೆಯನ್ನ ಹೊತ್ತು ಬಂದವನು ಎದಿರು ಮನೆಯ ಮುಂದೆ ಮಾರಮ್ಮನನ್ನ ಇರಿಸಿಕೊಂಡು ತನ್ನ ಪೂಜೆ ಪ್ರಾರಂಭಿಸಿದ. ಒಂದು ಸಂದರ್ಭದಲ್ಲಿ ಆತ ಒಂದು ಮುಖವಾಡ ಧರಿಸಿ ವಿಶೇಷ ನೃತ್ಯ ಒಂದನ್ನ ಮಾಡ ತೊಡಗಿದ. ನಾನು ಈ ನೃತ್ಯದಿಂದ ಆಕರ್ಷಿತನಾಗಿ ಕ್ಯಾಮರಾ ಹಿಡಿದು ಹೊರ ಬಂದೆ. ಬಿಸಿಲು ಈ ನರ್ತಕನ ಹಿಂದೆ ಇದ್ದುದರಿಂದ ನಾನು ಅವನನ್ನ ಕೊಂಚ ಈ ದಿಕ್ಕಿಗೆ ತಿರುಗಿಕೊಂಡು ನೃತ್ಯ ಮಾಡಲು ವಿನಂತಿ ಮಾಡಿಕೊಂಡೆ. ಆದರೆ ಆತ ತಟ್ಟನೆ ನನ್ನ ಮೇಲೆ ರೇಗಿ ‘ಇದೆಲ್ಲ ನಿಮಗೆ ಬೇಕಾದಂತೆ ಮಾಡುವುದಲ್ಲ’ ಎಂದ. ಆ ಕ್ಷಣದಲ್ಲಿ ನನಗೆ ಬೇಸರವಾದರೂ ಕೊಂಚ ಯೋಚಿಸಿದ ನಂತರ ಅವನ ಮಾತು ಸರಿ ಅನಿಸಿತು.

ಇದಕ್ಕೆ ಸಂಬಂಧಪಟ್ಟ ಮತ್ತೂ ಒಂದು ಸಂದರ್ಭ ಇದೆ. ಒಂದು ಕಾಲೇಜಿನವರು ‘ಪ್ರಾದೇಶಿಕ ಉಡುಗೆಯ ಹಬ್ಬ’ ಎಂದೊಂದು ಸ್ಪರ್ದೆ ಏರ್ಪಡಿಸಿದರು. ಇದಕ್ಕೆ ತೀರ್ಪುಗಾರನನ್ನಾಗಿ ನನ್ನನ್ನ ಕರೆಸಿಕೊಂಡಿದ್ದರು. ಅಂದಿನ ದಿನ ಕಾಲೇಜಿನ ಬಹುತೇಕ ತರುಣ ತರುಣಿಯರು ಪ್ರಾದೇಶಿಕವಾದ ಉಡುಗೆ ತೊಡುಗೆ ಧರಿಸಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅದೊಂದು ಸುಂದರ ನೋಟ. ಜರಿ, ರೇಶಿಮೆ ಸೀರೆಗಳು, ಜರಿ ಅಂಚಿನ ಪಂಚೆಗಳು, ಅಂಗಿ, ರುಮಾಲು, ಪೇಟ, ಶಾಲು, ಅಂಗವಸ್ತ್ರ, ಹಾಳೆ ಟೋಪಿ. ತುಂಡು ಪಂಚೆ ಇತ್ಯಾದಿ ಇತ್ಯಾದಿ ಸ್ಥಳೀಯ ಉಡುಪೆಲ್ಲ ಹೊರಬಂದಿತ್ತು. ದಿನ ನಿತ್ಯ ಜೀನ್ಸು ಸ್ಕರ್ಟು, ಪಂಚಾಬಿ ಎಂದು ನೋಡಿ ಬೇಸರವಾಗಿದ್ದ ಕಣ್ಣುಗಳಿಗೆ ಅಂದು ಹಬ್ಬ. ನಾನು ಗಮನಿಸಿದಹಾಗೆ ಆ ಪ್ರದೇಶದ ಹಿನ್ನೆಲೆಗೆ ಈ ಉಡುಗೆ ತುಂಬಾ ಚೆನ್ನಾಗಿ ಹೊಂದುಕೊಂಡದ್ದು. ಈ ಯುವಕ ಯುವತಿಯರು ಅದೇ ಮಣ್ಣಿನಿಂದ ಎದ್ದು ಬಂದವರೇನೋ ಅನ್ನುವ ಹಾಗೆ ನನಗೆ ಕಂಡರು. ಸ್ಪರ್ದೆ ಮುಗಿಯಿತು. ಎಲ್ಲ ಸ್ಪರ್ಧಿಗಳೂ ಒಂದೆರಡು ಕೊಠಡಿಗಳಲ್ಲಿ ಹಂಚಿ ಹೋಗಿ, ತಾವು ಮನೆಯಿಂದ ಬರುವಾಗ ಧರಿಸಿಕೊಂಡು ಬಂದ ಎಂದಿನ ಉಡುಗೆಯನ್ನ ಧರಿಸಿ ಹೊರ ಬಂದಾಗ ನನಗೆ ನಿರಾಶೆ ಆಯಿತು. ‘ಏಕೆ ನೀವೆಲ್ಲ ಅದೇ ಉಡುಪನ್ನ ಧರಿಸಬಹುದಿತ್ತು. ಅದನ್ನೇ ಧರಿಸಿ ಮನೆಯಿಂದ ಬರಬಹುದಿತ್ತು, ಮನೆಗೂ ಹೋಗಬಹುದಿತ್ತು’ ಎಂದೆ. ಅವರೆಲ್ಲ ಗಾಬರಿಯಾದರು. ನಾಚಿದರು. ಛೆ ಛೆ ಎಂದು ತಲೆಯಾಡಿಸಿದರು. ಅದೇನೋ ಅಪರಾಧ ಅನ್ನುವಹಾಗೆ ವರ್ತಿಸಿದರು.

ಇನ್ನು ನಾಲ್ಕನೆಯದಾಗಿ ಮತ್ತೊಂದು ಸಂದರ್ಭ. ಓರ್ವ ಜಾನಪದ ವಿದ್ವಾಂಸ ಎಂದೇ ಹೆಸರು ಮಾಡಿದವರು. ಜಾನಪದ ಗೀತೆಗಳನ್ನ ಹಾಡುವುದರಲ್ಲಿ, ಜಾನಪದ ಸಾಹಿತ್ಯವನ್ನ ಪ್ರಚಾರ ಮಾಡುವುದರಲ್ಲಿ ಮುಂದಿದ್ದವರು. ಇವರ ಮಗನ ಮದುವೆ. ಭಾರೀ ಚಪ್ಪರ. ಭಾರೀಜನ. ನಾಗಸ್ವರದವರಿಗಾಗಿ ವಿಷೇಷ ವೇದಿಕೆ. ಅಲ್ಲಿ ಕುಳಿತು ಆ ವಿದ್ವಾಂಸರು ನಾಗಸ್ಬರ ನುಡಿಸುತ್ತಿದ್ದಾರೆ. ಪುರೋಹಿತರು ಮಂತ್ರ ಘೋಷಗಳ ನಡುವೆ ಮದುವೆಯ ಎಲ್ಲ ಕಾರ್ಯಗಳನ್ನ ಮುಗಿಸುತ್ತಿರುವಾಗ ನಾಗಸ್ವರದವರೂ ಹಿಂದುಳಿಯಲಿಲ್ಲ. ಆದರೆ ಒಂದು ಸಂದರ್ಭದಲ್ಲಿ ಮದುವೆ ಚಪ್ಪರದ ಮೂಲೆಯಲ್ಲಿ ಮೈಮುದುಡಿ ಕೊಂಡು ಕುಳಿತ ಕೆಲ ಹಳ್ಳಿ ಹೆಣ್ಣು ಮಕ್ಕಳು ಒಮ್ಮೆ ಆಸ್ಫೋಟಗೊಂಡರು. ಅವರ ಬಾಯಿಂದ ಮದುವೆ ಹಾಡುಗಳು ಕೇಳಿ ಬಂದು ಜನ ತಿರುಗಿ ನೋಡಿದರು. ಆಗಾಗ್ಗೆ ಆಗಾಗ್ಗೆ ಇವರು ಹಾಡುತ್ತಲೇ ಇದ್ದರು. ಆದರೆ ನಾಗಸ್ವರದವರಿಗೆ ನೀಡಲಾದ ಧ್ವನಿವರ್ಧಕ ಇವರಿಗೆ ಇರಲಿಲ್ಲ.

ಈ ನಾಲ್ಕೂ ಅಂಶಗಳ ಹಿಂದೆ ಇರುವ ಮನೋಭಾವವನ್ನ ಗ್ರಹಿಸಿದರೆ ನಮ್ಮನ್ನ ಈ ಜಾನಪದ ಅನ್ನುವುದು ಎಲ್ಲೋ ಒಂದು ಕಡೆ ಕಾಡುತ್ತಿದೆಯೇನೋ ಎಂದು ನನಗೆ ಅನಿಸುತ್ತದೆ.

ಜಾನಪದದ ಮೇಲೆ ನಮಗಿರುವ ಭಕ್ತಿ ಭಯ ಒಂದು ಕಡೆಯಾದರೆ ಇದನ್ನ ಕಂಡಲ್ಲಿ ಪ್ರದರ್ಶಿಸಬಾರದು ಅನ್ನುವ ಮನೋಭಾವ ಮತ್ತೊಂದು ಕಡೆ. ಹಾಗೆಯೇ ಅದನ್ನ ನಾವು ಉಳಿಸುತ್ತೇವೆ. ಅಭಿವೃದ್ಧಿಪಡಿಸುತ್ತೇವೆ ಅನ್ನುವ ಅನಿಸಿಕೆ. ಇನ್ನು ಜನಪದವನ್ನ ಪ್ರದರ್ಶಿಸುವುದು ಒಂದು ಫ್ಯಾಷನ್. ಅದರ ಪ್ರದರ್ಶನದ ಮೂಲಕ ಹೆಸರು ಬಹುಮಾನ ಪಡೆಯಬೇಕು ಅನ್ನುವ ಹಂಬಲ. ಹಾಗೆಯೇ ಅದನ್ನ ಒಂದು ಅಧ್ಯಯನದ ವಸ್ತುವನ್ನಾಗಿಸಿಕೊಂಡು ಹೆಸರು ಪದವಿ ಪಡೆಯಬಹುದು ಆದರೆ ಅದು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಅರ್ಹವಾದುದಲ್ಲ ಅನ್ನುವ ನಂಬಿಕೆ.

ನಾವು ಜಾನಪದ ಕಲೆ ಎಂದು ಕರೆಯುವ ಕಲೆ ಏನಿದೆ, ಅದರಲ್ಲಿ ಹಲವಾರು ಬಗೆಗಳಿವೆ. ವಿಧಾನಗಳಿವೆ. ನೃತ್ಯ, ಕುಣಿತ, ವಾದ್ಯ, ವೇಷಭೂಷಣ, ಹಾಡುಗಾರಿಕೆ, ವರ್ಣಾಲಂಕಾರ, ಹಿಮ್ಮೇಳ ಇತ್ಯಾದಿ ಇತ್ಯಾದಿ; ಇದೆಲ್ಲ ನೋಡಲು ಚೆಂದ, ಸುಂದರ, ಅರ್ಥಪೂರ್ಣ, ಕಲಾಪೂರ್ಣ, ಎಲ್ಲವೂ ಸರಿ. ಈ ಕಲೆಗಳನ್ನ ಸೃಷ್ಟಿಸಿದವರು ನಮ್ಮ ಅನಕ್ಷರಸ್ಥರು. ಗ್ರಾಮೀಣ ಜನ, ಆಧುನಿಕತೆಯ ಗಂಧಗಾಳಿ ಇಲ್ಲದವರು. ಒಂದು ವೇಳೆ ಆಧುನಿಕತೆಯ ಪ್ರಭಾವಕ್ಕೆ ಇವರು ಒಳಗಾದವರಾಗಿದ್ದರೆ ಇಂತಹಾ ಅಪೂರ್ವ ಕಲೆಯನ್ನ ಇವರು ಖಂಡಿತ ಸೃಷ್ಟಿ ಮಾಡುತ್ತಿರಲಿಲ್ಲ. ಆದರೂ ತಮ್ಮ ಹಂತದಲ್ಲಿಯೇ ತಮ್ಮ ಅನಿಸಿಕೆ, ಕಲ್ಪನೆ, ಅನುಭವ, ಸುತ್ತಲಿನ ಪರಿಕರ, ದೇವರ ಮೇಲಿನ ನಂಬಿಕೆ, ದೈವ ಭೀತಿ ಮೊದಲಾದವನ್ನ ಇರಿಸಿಕೊಂಡು ಇದನ್ನ ಅವರು ಸೃಷ್ಟಿ ಮಾಡಿದರು. ಕೆಲ ಜಾನಪದ ಕಲೆಗಳ ಸೃಷ್ಟಿಗೆ ಮಾನಸಿಕ ನೋವು, ದೇವರಲ್ಲಿ ತಮ್ಮ ಕಷ್ಟವನ್ನ ಅರಿಕೆ ಮಾಡಿಕೊಳ್ಳಬೇಕೆಂಬ ಹಂಬಲ ಇತ್ಯಾದಿ ಕಾರಣಗಳೂ ಇರಬಹುದು. ಇವೆ.

ಅಂದರೆ ಈ ಕಲೆಗಳ ಪ್ರದರ್ಶನದ ಹಿಂದೆ, ಒಂದು ಉದ್ದೇಶ ಇರುತ್ತದೆ. ಒಂದು ಗುರಿ ಇರುತ್ತದೆ. ಒಂದು ಹರಕೆಯೋ ಮತ್ತೊಂದೋ ಇರುತ್ತದೆ. ಬಹುತೇಕ ಕಲೆಗಳು ದೇವಾರಾಧನೆಯನ್ನೇ ಗುರಿಯಾಗಿ ಇರಿಸಿಕೊಂಡವುಗಳು. ಗುಡಿಗಳಲ್ಲಿ, ಭೂತಾರಾಧನೆಯ ಸ್ಥಳಗಳಲ್ಲಿ ಮಾಡುವಂತಹವು. ಇವುಗಳು ಇದೀಗ ತಮ್ಮ ಆವರಣದಿಂದ ಹೊರಬಿದ್ದು ಮತ್ತೆಲ್ಲೋ ಪ್ರದರ್ಶನ ಗೊಳ್ಳುತ್ತಿವೆ. ನಾವು ಈ ಕಲೆಗಳನ್ನ ರಾಜ ಬೀದಿಗೆ, ರಸ್ತೆಗಳಿಗೆ, ಮಂತ್ರಿಗಳ ಮೆರವಣಿಗೆಗೆ ಕರೆತಂದಿದ್ದೇವೆ. ಈ ನಮ್ಮ ಕೆಲಸ ಎಷ್ಟು ಸರಿ ನಾವು ವಿಚಾರ ಮಾಡಬೇಕು.
ಈ ಕಲೆಗಳ ಪ್ರದರ್ಶನದ ಉದ್ದೇಶ ಬೇರೆಯಾಗಿ ಈ ಕಲೆಗಳು ಕೇವಲ ಮನರಂಜನೆಯ ಸಾಧನಗಳಾಗಿ ಪರಿವರ್ತನೆ ಹೊಂದಿರುವುದು, ವೀರಗಾಸೆ, ಭೂತಕೋಲ, ಪಟಕುಣಿತ, ಕರಗ ಕುಣಿತ, ಸೋಮನ ಕುಣಿತ ಮೊದಲಾದವು ಮತ್ತೆಲ್ಲೋ ಫಿಟ್ ಆಗಲು ಪರದಾಡುತ್ತಿರುವುದು ನಮ್ಮ ಜಾನಪದ ತಜ್ಞರ ಗಮನಕ್ಕೆ ಬಂದಿಲ್ಲವೆ, ಇಲ್ಲ ಇದರಲ್ಲಿ ಇವರ ಪಿತೂರಿಯೂ ಇದೆಯೆ?
ಜಾನಪದ ಅನ್ನುವುದು ನಮ್ಮ ಗ್ರಾಮೀಣ ಜನರ ಬದುಕಿನ ಒಂದು ಅಂಗವಾಗಿ ಉಳಿದುದಲ್ಲ. ಅದು ಅವರ ಸಮಗ್ರ ಜೀವನದಲ್ಲಿ ಸೇರಿಕೊಂಡದ್ದು. ಅವರ ಸಮಗ್ರ ಬದುಕೇ ಇವತ್ತಿನ ದಿನ ಬದಲಾಗಿ ಹೋಗಿರುವಾಗ ಅವರ ಜೀವನದ ಒಂದು ಅಂಶ ಉಳಿಯಬೇಕು ಅನ್ನುವುದಾಗಲಿ, ಅದು ಹೊರಟು ಹೋಗಿದೆ ಎಂದು ಅಳುವುದೇ ಆಗಲಿ ಎಷ್ಟು ಸರಿ? ನಮ್ಮ ಹಳ್ಳಿಗಳೆಲ್ಲ ಅತ್ಯಾಧುನಿಕವಾದ ವೇಷ ತೊಟ್ಟು ಮೆರೆಯುವಾಗ, ಆಧುನಿಕ ಸೌಲಭ್ಯಗಳು ನಮ್ಮ ಹಳ್ಳಿಗಳನ್ನ ಆಕ್ರಮಿಸಿಕೊಂಡಿರುವಾಗ ಜನಪದವನ್ನ ಉಳಿಸಬೇಕು ಎಂದು ನಮ್ಮ ಹಳ್ಳಿ ಹೆಂಗಸರು ರಾಗಿ ಬೀಸಬೇಕು, ರಾಗಿ ಬೀಸೋ ಪದ ಹೇಳಬೇಕು ಎಂದು ನಾವು ಬಯಸುವುದು ಎಷ್ಟು ಸರಿ? ತಮ್ಮ ಮಕ್ಕಳನ್ನ ಇಂಗ್ಲೀಷ್ ಕಾನ್ವಂಟಿಗೆ ಕಳುಹಿಸಿ ಉಳಿದವರಿಗೆ ಕನ್ನಡ ಅಭಿಮಾನವನ್ನ ಬೋಧಿಸುವ ನಮ್ಮ ಸಾಹಿತಿಗಳ ಹಾಗೆ ಜಾನಪದವನ್ನ ಉಳಿಸಿ ಬೆಳೆಸಿ ಎಂದು ಹೇಳುತ್ತ ತಾವು ಮಾತ್ರ ಅತ್ಯಾಧುನಿಕರಾಗಲು ಹಾತೊರೆಯುವ ಜಾನಪದ ತಜ್ಞರ ಬಗ್ಗೆ ಸಾಮಾನ್ಯ ಜನರಲ್ಲಿ ಒಂದು ಬಗೆಯ ಹೇವರಿಕೆ ಬಂದಿದೆ ಅನ್ನುವುದರಲ್ಲಿ ಅನುಮಾನವಿಲ್ಲ. ಜಾನಪದವನ್ನ ಕೇವಲ ಸ್ಪರ್ದೆಗಳಲ್ಲಿ ಬಹುಮಾನ ಪಡೆಯಲು, ಪ್ರದರ್ಶಿಸಲು ಮಾತ್ರ ಮೀಸಲಿರಿಸಿ ನಾವು ಅತ್ಯಾಧುನಿಕತೆಯ ಆರಾಧಕರಾಗುವುದರಲ್ಲಿ ಜಾನಪದದ ಉದ್ಧಾರ ಇದೆಯೇ? ಜಾನಪದವನ್ನ ಹೀಗೆ ಉಳಿಸಲು ಆಗುತ್ತದೆಯೇ?

ಮೊನ್ನೆ ಉಡುಪಿ ಹತ್ತಿರದ ಮೇರಿ ಐಲ್ಯಾಂಡ್ ದ್ವೀಪದ ರೇವು ಪಾರ್ಟಿಯಲ್ಲಿ ಕೆಲ ಜಾನಪದ ಕಲೆಗಳ ಪ್ರದರ್ಶನ ನಡೆಯಿತು ಎಂದು ಹೇಳಲಾಗಿದೆ. ಅದನ್ನು ಅದೆಷ್ಟು ಜನ ವಿದೇಶೀಯರು ನೋಡಿದರೋ ನನಗೆ ಮಾಹಿತಿ ಇಲ್ಲ, ಆದರೆ ಇದರಿಂದ ನಿಜವಾಗಿಯೂ ಈ ಕಲೆಗೆ ಏನಾದರೂ ಪ್ರಯೋಜನ ದೊರಕೀತೆ ನಾವು ಯೋಚಿಸಬೇಕು. ನಾವು ಜನಪದ ಕಲೆ ಎಂದು ಕರೆಯುವುದರಲ್ಲಿ ಎಷ್ಟೋ ಕಲೆಗಳಲ್ಲಿ ಸತ್ವವಿದೆ ಅನ್ನುವುದರಲ್ಲಿ ಅನುಮಾನ ಇಲ್ಲ. ಜೊತೆಗೆ ಇಂದಿನ ದಿನಕ್ಕೆ ಹೇಳದಂತಹಾ ಮೌಢ್ಯ, ಅಂಧಾನುಕರಣೆ, ಹಿಂಸೆ, ಅಮಾನವೀಯತೆ, ಅವೈಜ್ಙಾನಿಕತೆ, ಇವುಗಳಲ್ಲಿ ಸೇರಿಕೊಂಡಿದೆ. ಇಂತಹ ಅಂಶಗಳನ್ನ ಇದರಿಂದ ತೊಡೆದು ಹಾಕಿ, ಅದರಲ್ಲಿಯ ಶುದ್ಧ ಕಲೆಯನ್ನ ಮಾತ್ರ ಉಳಿಸುವ, ಬೆಳೆಸುವ ಕೆಲಸ ಆಗಬೇಕಾಗಿದೆ. ಇದನ್ನ ಮಾಡಲು ಮುಂದೆ ಬರುವ ಜಾನಪದ ವಿದ್ವಾಂಸರು ನಮ್ಮ ಕಣ್ಣಿಗೆ ಬೀಳುತ್ತಿಲ್ಲ ಅಂದರೆ ನನ್ನ ಮಾತನ್ನ ಎಲ್ಲರೂ ಒಪ್ಪುತ್ತಾರೆ ಅಂದು ಕೊಳ್ಳುತ್ತೇನೆ.

ಉದಾಹರಣೆಗೆ ಮಲೆನಾಡಿನಲ್ಲಿ ಚಿತ್ತಾರ ಎಂದು ಒಂದು ಗೋಡೆ ಕಲೆ ಇದೆ. ಮಲೆನಾಡಿನ ದೀವರು, ಮಡಿವಾಳರು, ಹಿಂದುಳಿದವರು ರೂಢಿಗತ ಮಾಡಿಕೊಂಡಿರುವ, ಮದುವೆ, ಭೂ ಹುಣ್ಣಿಮೆ ಮೊದಲಾದ ಸಂದರ್ಭಗಳಲ್ಲಿ ಬರೆಯುವಂತಹ ಅಪೂರ್ವ ಕಲೆ. ಇದನ್ನ ಹೋಲುವಂತಹ ಮತ್ತೊಂದು ಕಲೆಯೇ ವರ್ಲಿವ ಕಲೆ. ಮುಂಬಯಿಯ ವರ್ಲಿಗ ಜನಾಂಗದವರು ಅಭಿವೃದ್ಧಿಪಡಿಸಿರುವ ಕಲೆ. ಈ ಕಲೆಯ ಏಳಿಗೆಗಾಗಿ ಸರಕಾರ ಒಂದು ಸಂಸ್ಥೆಯನ್ನ ಸ್ಥಾಪಿಸಿದರೆ, ಖಾಸಗಿಯಾಗಿ ಕೆಲ ಸಂಸ್ಥೆಗಳಿವೆ. ಮಹಾರಾಷ್ಟ್ರದ ಕೆಲ ಕಲಾವಿದರು ಇದನ್ನ ತಮ್ಮ ಕಲಾ ಮಾಧ್ಯಮವನ್ನಾಗಿ ಇರಿಸಿಕೊಂಡು ಇದನ್ನ ಬೇರೆ ಬೇರೆ ಮಾಧ್ಯಮಗಳ ಮೂಲಕ ಅಭಿವ್ಯಕ್ತಿಸುತ್ತ ಇದು ಇಡೀ ದೇಶದಲ್ಲಿ, ಹೊರದೇಶಗಳಲ್ಲಿ ಕೂಡ ಜನಪ್ರಿಯಗೊಳ್ಳುವ ಹಾಗೆ ಮಾಡಿದ್ದಾರೆ. ಆದರೆ ಯಾವ ದೃಷ್ಟಿಯಲ್ಲೂ ವರ್ಲಿುಗಿಂತಲೂ ಕಡಿಮೆ ಇಲ್ಲದ ಚಿತ್ತಾರಕ್ಕೆ ಯಾವುದೇ ಸ್ಥಾನಮಾನಗಳು ಈವರೆಗೆ ದೊರೆತಿಲ್ಲ. ಚರಕದ ಪ್ರಸನ್ನ ಈ ಹೆಸೆ ಚಿತ್ತಾರವನ್ನ ಬೇರೆ ಮಾಧ್ಯಮಗಳ ಮೂಲಕ ಜನಪ್ರಿಯಗೊಳಿಸಲು ಯತ್ನಿಸಿದರೂ ಅದಕ್ಕೆ ಸಿಗ ಬೇಕಾದ ಸ್ಥಾನಮಾನ ಈವರೆಗೂ ದೊರೆತಿಲ್ಲ. ಜಾನಪದ ಅನ್ನುವುದು ಉಳಿಯಲು ಬೆಳೆಯಲು ಒಂದು ವಾತಾವರಣ, ಅದರದ್ದೇ ಆದ ಕೆಲ ಕಾರಣಗಳು ಹಿಂದೆ ಇದ್ದವು. ಜನರ ಬದುಕೇ ಜನಪದಕ್ಕೆ ಪೂರಕವಾಗಿತ್ತು. ಆದರೆ ಇಂದು ಅಂತಹ ಪರಿಸರ, ವಾತಾವರಣ ಇಲ್ಲದಿರುವಾಗ ಜಾನಪದವನ್ನ ಉಳಿಸುವುದು ಬೆಳೆಸುವುದು ಕಷ್ಟದ ಕೆಲಸ. ಆದರೂ ಜಾನಪದವನ್ನ ಉಳಿಸಲು ಕೆಲ ಪ್ರಯತ್ನಗಳು ನಡೆದಿರುವುದು ಸುಳ್ಳಲ್ಲ.


ಆದರೆ ಈ ಕೆಲಸದಲ್ಲಿ ಒಂದು ಗೊಂದಲ, ಒಂದು ಅನುಮಾನ, ಸ್ವಾರ್ಥಕ್ಕಾಗಿ ಅದನ್ನು ಆರಾಧಿಸುವುದು, ತಮ್ಮ ಬದುಕಿನಲ್ಲಿ ಅದನ್ನ ಹೊಂದಿಸಿಕೊಳ್ಳಲಾಗದ ಮನೋಭಾವ. ಅದರ ಬಗ್ಗೆ ಇರುವಂತಹ ಅನಾದರ, ಅದರ ಹುಟ್ಟಿಗೆ ದೊರಕದ ಪರಿಸರ, ಈ ಎಲ್ಲ ಈ ಗೊಂದಲಗಳಿಂದ ನಾವು ಹೊರ ಬಂದರೆ ಜಾನಪದ ಅನ್ನುವುದು ಉಳಿದೀತು.

ಇದೀಗ ಹುಟ್ಟಿ ಕೊಂಡಿರುವ ಜಾನಪದ ವಿಶ್ವವಿದ್ಯಾಲಯ ಇಂತಹ ಕೆಲ ಅಂಶಗಳನ್ನ ಗಮನಿಸಬಹುದು ಎಂದು ನನಗೆ ಅನಿಸುತ್ತದೆ.
ಕೃಪೆ: ಕೆಂಡಸಂಪಿಗೆ