ಮಂಗಳವಾರ, ಆಗಸ್ಟ್ 12, 2014

ಅಲೆಮಾರಿ ಬುಡಕಟ್ಟು ಮಹಿಳೆಯರ ವರ್ತಮಾನ

- ಡಾ. ಅರುಣ್ ಜೋಳದಕೂಡ್ಲಿಗಿ

ಬಾಲ್ಯದ ನೆನಪುಗಳಲ್ಲಿ ಅಲೆಮಾರಿ ಸಮುದಾಯಗಳ ದಿಟ್ಟ ಮಹಿಳೆಯರ ಚಿತ್ರಗಳು ಗಾಢವಾಗಿವೆ. ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಾರಕನಾಳು ಗ್ರಾಮದಲ್ಲಿ ನಮ್ಮ ಮನೆ ಊರ ಹೊರಗಿನ ಅಂಗನವಾಡಿಯ ಸರಕಾರಿ ಕಟ್ಟಡವಾಗಿತ್ತು. ಆ ಕಾರಣ ಅಲೆಮಾರಿ ಸಮುದಾಯಗಳು ನಮ್ಮ ಮನೆಯ ಸುತ್ತಲೂ ಡೇರಿ ಹಾಕಿ ವಾಸಮಾಡುತ್ತಿದ್ದವು. ಹೀಗೆ ವಾಸ ಮಾಡುವ ಅಲೆಮಾರಿ ಸಮುದಾಯಗಳು ನಮ್ಮ ಮನೆ ಜತೆ ಒಳ್ಳೆಯ ಪರಿಚಯ ಕೂಡ ಆಗುತ್ತಿದ್ದರು. ಇದರಲ್ಲಿ ಹಗಲು ವೇಷಗಾರರು ಪ್ರಮುಖವಾಗಿದ್ದರು. ಹಗಲು ವೇಷಗಾರ ಅಂಜಿನಪ್ಪ ತಾನು ವೇಷ ಹಾಕುವಾಗ ಆ ಗುಂಪಿನಲ್ಲಿ ಆತನ ಮಗಳು ಚಿಕ್ಕ ಹುಡುಗಿ ಡಾನ್ಸ್ ಮಾಡುತ್ತಿದ್ದಳು. ಅಂತೆಯೇ ಅಂಜಿನಪ್ಪನ ಹೆಂಡತಿ ಗಂಗೆ ಗೌರಿ ಮೂರ್ತಿ ಹಿಡಿದು, ಮಗು ಚಿಕ್ಕದಿರುವ ಕಾರಣ ಒಂದು ಜೋಳಿಗೆಯಲ್ಲಿ ಮಗುವನ್ನು ಹಾಕಿಕೊಂಡು ವೇಷದ ಗುಂಪಿಗೆ ಬದಲಾಗಿ ‘ಗಂಗೆ ಗೌರಿ ಜೂಜನಾಡ್ಯಾರೆ ಎಂಬ ಪದ ಹೇಳಿಕೊಂಡು ಒಂಟಿಯಾಗಿ ಊರಾಡಿ ಬರುತ್ತಿದ್ದಳು. Work of Temporary tent for stay.ಮದ್ಹಾನ ಹನ್ನೆರಡಕ್ಕೆ ವೇಷ ಮುಗಿದು ಊಟಮಾಡಿ ಗಂಡಸರು ಬೇಟೆಗೆ ಹೋದರೆ, ಹೆಂಗಸರು ಬಟ್ಟೆ ತೊಳೆಯುವುದು, ಹತ್ತಿರದಲ್ಲೆ ಅಡುಗೆ ಮಾಡಲು ಕಟ್ಟಿಗೆ ಜೋಡಿಸುವುದು, ಗುಡಾರದ ಸುತ್ತಮುತ್ತಣ ಸ್ವಚ್ಚಗೊಳಿಸುವುದು, ಬೇಟೆಗೆ ಬೇಕಾಗುವ ಮಸಾಲೆ ತಯಾರಿಸುವುದು ಮಾಡುತ್ತಿದ್ದರು. ಅಂತೆಯೇ ಬಿಡುವಿನ ವೇಳೆಯಲ್ಲಿ ಕೌದಿ ಎಣೆಯುವುದು, ಊರಲ್ಲಿ ಯಾರಾದರೂ ಪ್ಲಾಸ್ಟಿಕ್ ಚೀಲಗಳನ್ನು ಕೊಟ್ಟರೆ ಪ್ಲಾಸ್ಟಿಕ್ ಪಾಟನ್ನು ಹೆಣೆದುಕೊಡುವುದು ಮಾಡುತ್ತಿದ್ದರು. ನಾನು ಹಗಲುವೇಷದ ಮಕ್ಕಳ ಜತೆ ಆಟವಾಡುತ್ತಿದ್ದೆನು.
ಮತ್ತೊಂದು ಸಮುದಾಯ ಅಲೆಮಾರಿ ಕುರುಬರದು. ಬೆಳಗಾಂ ಕುರೇರು ಎಂದು ಕರೆಯುವ ಈ ಸಮುದಾಯ ಸಾಮೂಹಿಕವಾಗಿ ಅಲೆಮಾರಿತನ ಕೈಗೊಂಡು ಕುರಿಗಳ ಜತೆ ಬಳ್ಳಾರಿ ಜಿಲ್ಲೆಯ ಪ್ರದೇಶಗಳಿಗೆ ಬರುತ್ತಾರೆ. ಇವರುಗಳು ಊರಿಗೆ ಸ್ವಲ್ಪ ದೂರದಲ್ಲಿ ಹೊಲಗಳಲ್ಲಿ ನೆಲೆ ನಿಲ್ಲುತ್ತಾರೆ. ಕಟ್ಟುಮಸ್ತಾದ ಎತ್ತರದ ಈ ಮಹಿಳೆಯರು ಕಚ್ಚೆ ಹಾಕಿಕೊಂಡು ಗಂಡುಗಿತ್ತಿಯರಂತೆ ಕಾಣುತ್ತಿದ್ದರು. ಇವರಲ್ಲಿ ಕೆಲವು ಮಹಿಳೆಯರು ಮಗುವನ್ನು ಜೋಳಿಗೆಯಲ್ಲಿ ಇಳಿಬಿಟ್ಟುಕೊಂಡೆ ಕುರಿ ಕಾಯುತ್ತಾರೆ. ಇನ್ನು ಕೆಲವು ಮಹಿಳೆಯರು ಮಕ್ಕಳನ್ನು, ಕುರಿಮರಿಗಳನ್ನು ನೋಡಿಕೊಂಡು ಗುಡಾರಗಳಲ್ಲಿ ಉಳಿದು ಊಟೋಪಚಾರ ನೋಡಿಕೊಂಡಿರುತ್ತಿದ್ದರು. ಬೈಲು ಪತ್ತಾರ ಅಲೆಮಾರಿ ಸಮುದಾಯವು ಊರ ಮುಂದೆ ಗುಡಾರ ಹಾಕುತ್ತಿದ್ದರು. ಪತ್ತಾರರ ಗಂಡಸರು ಗುದ್ದಲಿ, ಕೊಡಲಿ ಮುಂತಾದವುಗಳನ್ನು ಕುಲುಮೆಯಲ್ಲಿ ಕಾಯಿಸುತ್ತಾರೆ. ಹೀಗೆ ಕಾದ ಕಬ್ಬಿಣವನ್ನು ಬೈಲುಕಮ್ಮಾರರ ಮಹಿಳೆwoman-stonecutter ಕಚ್ಚೆಕಟ್ಟಿ ಸುತ್ತಿಗೆ ಹಿಡಿದು ಎತ್ತಿ ಎತ್ತಿ ಹೊಡೆಯುತ್ತಿದ್ದರೆ ಊರ ಗಂಡಸರು ಅಚ್ಚರಿಯಿಂದ ಈ ಹೆಣ್ಣುಮಗಳನ್ನು ನೋಡುತ್ತಿದ್ದರು.
ಇದನ್ನು ನೋಡಿದರೆ ಅಲೆಮಾರಿ ಸಮುದಾಯಗಳಲ್ಲಿ ಅಲೆಮಾರಿತನದ ಚಾಲಕ ಶಕ್ತಿಯೇ ಮಹಿಳೆಯಂತೆ ಕಾಣುತ್ತದೆ. ಇಂತಹ ಚಾಲಕ ಶಕ್ತಿ ಮಹಿಳೆ ಕರ್ನಾಟಕದ ಅಲೆಮಾರಿ ಸಮುದಾಯಗಳಲ್ಲಿ ಹೇಗಿದ್ದಾಳೆ, ಸಾಂಸ್ಕೃತಿಕವಾಗಿ ಅವಳ ಸ್ಥಾನಮಾನಗಳೇನು? ವರ್ತಮಾನದಲ್ಲಿ ಈ ಮಹಿಳೆಯರ ಬದುಕು ಹೇಗಿದೆ? ಕರ್ನಾಟಕದ ಅಲೆಮಾರಿ ಬುಡಕಟ್ಟುಗಳನ್ನು ಅರ್ಥಮಾಡಿಕೊಳ್ಳಲು ಆಯಾ ಸಮುದಾಯಗಳ ಮಹಿಳೆಯರನ್ನು ಹೇಗೆ ಗ್ರಹಿಸಬೇಕು ಮುಂತಾದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನದ ಭಾಗವೆ ಈ ಲೇಖನ.
ಪ್ರಸ್ತುತ ಭಾರತದಲ್ಲಿ ಬುಡಕಟ್ಟು ಸಮುದಾಯಗಳ ಜನಸಂಖ್ಯೆ 10 ಕೋಟಿಯಷ್ಟಿರುವ ಅಂದಾಜಿದೆ. ಅಂದರೆ ಭಾರತದ ಜನಸಂಖ್ಯೆಯಲ್ಲಿ ಶೇಕಡ 10 ರಷ್ಟು ಬುಡಕಟ್ಟು ಜನರಿದ್ದಾರೆ. ಆದರೆ ಈ ಸಮುದಾಯದ ಜನಸಂಖ್ಯೆಗೂ ಇವರ ಅಭಿವೃದ್ಧಿಗಾಗಿ ಜಾರಿಯಾಗುತ್ತಿರುವ ಸೌಲಭ್ಯಗಳ ಪ್ರಮಾಣಕ್ಕೂ ತುಂಬಾ ಅಂತರವಿದೆ. ಅಷ್ಟಕ್ಕೂ ಈ ಸಮುದಾಯಗಳ ಅಭಿವೃದ್ಧಿಗಾಗಿ ಬಿಡುಗಡೆಯಾದ ಹಣ ಕೂಡ ಸಮರ್ಪಕ ಬಳಕೆಯಾದಂತಿಲ್ಲ. ಕರ್ನಾಟಕದಲ್ಲಿ ಒಟ್ಟು 56 ಬುಡಕಟ್ಟು ಸಮುದಾಯಗಳನ್ನು ಗುರುತಿಸಿ ಅಧ್ಯಯನಗಳನ್ನು ನಡೆಸಲಾಗುತ್ತಿದೆ. ಅದರಲ್ಲಿ 24 ವಿಮುಕ್ತ ಬುಡಕಟ್ಟುಗಳಿದ್ದರೆ, 32 ಅಲೆಮಾರಿ ಬುಡಕಟ್ಟುಗಳಿವೆ. ಈ 32 ಬುಡಕಟ್ಟುಗಳಲ್ಲಿಯೂ ಅರೆ ಅಲೆಮಾರಿತನವೂ ಇದೆ. ಒಂದೆ ಸಮುದಾಯದ ಕೆಲವರು ನೆಲೆನಿಂತರೆ ಮತ್ತೆ ಕೆಲವರು ಅಲೆಮಾರಿತನವನ್ನು ಇನ್ನೂ ಅವಲಂಭಿಸಿದ್ದಾರೆ.
ಕರ್ನಾಟಕದ ಸಂದರ್ಭದಲ್ಲಿ ಅಲೆಮಾರಿ ಬುಡಕಟ್ಟುಗಳ ಅಧ್ಯಯನಕ್ಕೆ ಒಂದು ಚರಿತ್ರೆಯೆ ಇದೆ. ಎಡ್ಗರ್ ಥರಸ್ಟನ್ ಮತ್ತು ಕೆ.ರಂಗಾಚಾರಿ ಅವರು ಸಂಪಾದಿಸಿದ ‘ಕಾಸ್ಟ್ ಅಂಡ್ ಟ್ರೈಬ್ಸ್ ಇನ್ ಸದರ್ನ ಇಂಡಿಯಾ ದ ಏಳು ಸಂಪುಟಗಳು, ಅನಂತ ಕೃಷ್ಣ ಅಯ್ಯರ್ ಅವರು ಸಂಪಾದಿಸಿದ‘ ದಿ ಮೈಸೂರು ಟ್ರೈಬ್ಸ್ ಅಂಡ್ ಕಾಸ್ಟ್ ನ (1930)ನಾಲ್ಕು ಸಂಪುಟಗಳನ್ನು ಒಳಗೊಂಡಂತೆ ಈ ತನಕವೂ ವಿಭಿನ್ನ ನೆಲೆಯ ಅಧ್ಯಯನಗಳು ನಡೆಯುತ್ತಿವೆ. 1993 ರಲ್ಲಿ ಬರಗೂರು ರಾಮಚಂದ್ರ ಅವರು ಅಧ್ಯಕ್ಷರಾಗಿದ್ದಾಗ ಪ್ರಕಟವಾದ ಉಪಸಂಸ್ಕೃತಿ ಮಾಲೆಯು ಈ ನೆಲೆಯಲ್ಲಿ ಒಂದು ಚಾರಿತ್ರಿಕ ಮಹತ್ವದ ಕೆಲಸ. ನಂತರ ಹೀಗೆ ಯೋಜನೆಯ ಭಾಗವಾಗಿ 2007-08 ರಲ್ಲಿ ಕನ್ನಡ ಪುಸ್ತಕ ಪ್ರಾಧೀಕಾರದ ಅಧ್ಯಕ್ಷರಾಗಿದ್ದ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅವರ ಪ್ರಧಾನ ಸಂಪಾದಕತ್ವದಲ್ಲಿ ಕೆ.ಎಂ.ಮೇತ್ರಿ ಅವರ ಸಂಪಾದಕತ್ವದಲ್ಲಿ ಕರ್ನಾಟಕದ 22 ಅಲೆಮಾರಿ ಸಮುದಾಯಗಳ ಅಧ್ಯಯನ ಕೃತಿಗಳು ಪ್ರಕಟವಾಗಿವೆ. ಇದು ಕೂಡ ಕರ್ನಾಟಕದ ಬುಡಕಟ್ಟು ಅಧ್ಯಯನ ಮಾಲೆಯಲ್ಲಿ ಗಮನಾರ್ಹ ಕೆಲಸ. ಈ ಮಾಲೆಯ ಕೆಲವು ಆಯ್ದ ಬುಡಕಟ್ಟುಗಳ ಮಹಿಳೆಯರ ಬಗ್ಗೆ ವಿಶ್ಲೇಷಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಈ ಅಧ್ಯಯನದ ಸಮೀಕ್ಷೆಯನ್ನು ಆಧರಿಸಿದ ಅಂಕಿಸಂಖ್ಯೆಗಳನ್ನು ಈ ಲೇಖನದಲ್ಲಿ ಬಳಸಿಕೊಳ್ಳಲಾಗಿದೆ.

ಸೃಷ್ಟಿಕಥನಗಳಲ್ಲಿ ‘ಮಹಿಳೆ

ಯಾವುದೇ ಬುಡಕಟ್ಟು ಸಮುದಾಯದ ಹುಟ್ಟಿನ ಮೂಲಕವೆ ಈ ಜಗತ್ತು ಸೃಷ್ಟಿಯಾಯಿತು, ನಾವು ಆದಿ ಮನುಜರು ಎಂದುಕೊಳ್ಳುತ್ತಾರೆ. ಹಾಗಾಗಿ ಕರ್ನಾಟಕದ ಎಲ್ಲಾ ಬುಡಕಟ್ಟು ಅಲೆಮಾರಿ ಸಮುದಾಯಗಳು ತಮ್ಮದೇ ಆದ ಲೋಕದ ಹುಟ್ಟಿನ ಕಥೆಗಳನ್ನು ಕಟ್ಟಿಕೊಂಡಿವೆ. ಈ ಕಥೆಗಳು ಜಗತ್ತು ಸೃಷ್ಟಿಯಾದ ಬಗ್ಗೆ ಡಾರ್ವಿನ್ ವಿಕಾಸವಾದಕ್ಕಿಂತ ಬೇರೆಯ ತೆರನಾದವು. ಅಥವಾ ಈ ಸಮುದಾಯಗಳು ಕಟ್ಟಿಕೊಂಡ ಲೋಕದ ಕಲ್ಪನೆ ಡಾರ್ವಿನ್ ವಿಕಾಸವಾದಕ್ಕಿಂತ ಮುಂಚೆಯೆ ಕಟ್ಟಲ್ಪಟ್ಟವುಗಳು. ಇಂತಹ ಸೃಷ್ಟಿ ಕಥೆಗಳು ಬುಡಕಟ್ಟು ಸಮುದಾಯಗಳ ಮೌಖಿಕ ಸಾಹಿತ್ಯದಲ್ಲಿ ಸಿಗುತ್ತದೆ. ಇದರ ಆಶಯಗಳು ಅವರ ಆಚರಣೆ, ಹಬ್ಬ ಮುಂತಾದ ಸಂದರ್ಭಗಳಲ್ಲಿಯೂ ವ್ಯಕ್ತವಾಗುತ್ತವೆ.
ದೊಂಬಿ ದಾಸರ ಕಥನವೊಂದು ಹೀಗಿದೆ: ಭೂಮಿ, ಆಕಾಶ, ಗಾಳಿ, ಬೆಳಕುಗಳಿಲ್ಲದ ಓಂಕಾರದೊಂದಿಗೆ ಒಂದು ಶಂಖ ಹುಟ್ಟಿತು.336_BigBang2ಈ ಶಂಖುವಿನಿಂದ ತಾತ ಆದಿ ಜಾಂಬು ಲಿಂಗಯ್ಯ ಹುಟ್ಟಿದನು. ಇವರು ತಾವರೆ ಎಲೆಯ ಮೇಲೆ ಕೂತು ತಪಸ್ಸನ್ನು ಆಚರಿಸಿದ ಆರು ಗಳಿಗೆಯಲ್ಲಿಯೇ ಅದೇ ಶಂಕದಿಂದ ಆದಿಶಕ್ತಿ ಹುಟ್ಟಿದಳು. ಆಕೆ ತಾತನ ಬಳಿ ಬಂದು ತನ್ನ ಕಾಮವನ್ನು ತೀರಿಸೆಂದು ಕೇಳಿದಳು. ಆಗ ತಾತ ಈ ರೂಪದಲ್ಲಿ ಸಾಧ್ಯವಿಲ್ಲವೆಂದು ನವಿಲುಗಳಾಗಿ ರೂಪಾಂತರ ಹೊಂದಿ ಕೂಡಿದರು.
ಆಗ ಹೆಣ್ಣು ನವಿಲು ನಾಲ್ಕು ಮೊಟ್ಟೆಗಳನ್ನು ಇಟ್ಟಿತು. ಎಷ್ಟು ಕಾವು ಕೊಟ್ಟರೂ ಮೊಟ್ಟೆಯಲ್ಲಿ ಮರಿಯೊಡೆಯಲಿಲ್ಲ. ಆಗ ತಾತ ಒಂದು ಮೊಟ್ಟೆಯನ್ನು ಹೊಡೆದು ಅದರ ಮೇಲಿನ ಭಾಗವನ್ನು ಆಕಾಶ ಮಾಡಿದ, ಕೆಳಗಿನ ಭಾಗವನ್ನು ಭೂಮಿ ಮಾಡಿದ. ಇನ್ನೊಂದು ಮೊಟ್ಟೆಯನ್ನು ಹೊಡೆದು ಒಂದು ಭಾಗ ಸೂರ್ಯ, ಮತ್ತೊಂದನ್ನು ಚಂದ್ರನನ್ನಾಗಿಯೂ, ಮೂರನೆ ಮೊಟ್ಟೆಯಿಂದ ನಕ್ಷತ್ರ ಲೋಕವನ್ನು ಸೃಷ್ಟಿಸುತ್ತಾನೆ. ನಾಲ್ಕನೆ ಮೊಟ್ಟೆಯಿಂದ ಬ್ರಹ್ಮ, ವಿಷ್ಣು, ಈಶ್ವರರನ್ನು ಹುಟ್ಟಿಸುತ್ತಾನೆ. ಇವರು ಬೆಳೆದು ದೊಡ್ಡವರಾದ ಮೇಲೆ ಆದಿಶಕ್ತಿಗೆ ಇವರ ಮೇಲೆ ಕಾಮಾಸಕ್ತಿಯಾಗುತ್ತದೆ. ಮದುವೆಯಾಗಲು ಒತ್ತಾಯಿಸುತ್ತಾಳೆ. ಬ್ರಹ್ಮ,ವಿಷ್ಣು, ಈಶ್ವರರು ಮದುವೆ ನಿರಾಕರಿಸುತ್ತಾರೆ. ಶಿವ ಉಪಾಯದಿಂದ ಆದಿಶಕ್ತಿಯ ಹಣೆಯ ಉರಿಗಣ್ಣು, ಕೈಯಲ್ಲಿನ ಉರಿ ಅಸ್ತ್ರವನ್ನು ಪಡೆದು ಅವಳನ್ನು ದಿಟ್ಟಿಸಿ ನೋಡಿ ಬೂದಿ ಮಾಡುತ್ತಾನೆ. ಈ ಬೂದಿಯಿಂದ ಲಕ್ಷ್ಮಿ, ಸರಸ್ವತಿ, ಮತ್ತು ಪಾರ್ವತಿಯರನ್ನು ಮಾಡಿ ಬ್ರಹ್ಮ, ವಿಷ್ಣು, ಈಶ್ವರರು ಮದುವೆಯಾಗಿ ಜಗತ್ತಿನ ಸೃಷ್ಟಿಗೆ ಕಾರಣರಾಗುತ್ತಾರೆ.
ಇಂತಹ ಭಿನ್ನ ಪಾಠಾಂತರದ ಕಥನಗಳು ಅಲೆಮಾರಿ ಸಮುದಾಯಗಳಲ್ಲಿ ಸಿಗುತ್ತವೆ. ಸಮುದಾಯವು ಆರಂಭದಲ್ಲಿ ಜಲಾವೃತವಾದ ಭೂಮಿಯ ಕಲ್ಪನೆ ಕೊಡುತ್ತಾರೆ. ಇಲ್ಲಿ ಮೊದಲಿಗೆ ಹುಟ್ಟುವ ಹೆಣ್ಣು ಗಂಡು ಅಣ್ಣ ತಂಗಿಯಾಗಿರುವುದು, ತಾತ ಮೊಮ್ಮಗಳಾಗಿರುವುದು, ತಾಯಿ ಮಗ ಆಗಿರುವುದು ಮತ್ತವರು ಕೂಡುವ ಸೃಷ್ಟಿ ಕಥೆಗಳಿವೆ. ನಾವು ಬದುಕುತ್ತಿರುವ ಕಾಲದಲ್ಲಿ ಕಟ್ಟಿಕೊಂಡ ಸಂಬಂಧಗಳ ಕಣ್ಣಿಂದ ಈ ಕಥೆಗಳನ್ನು ನೋಡಿದರೆ ಇವು ಅಶ್ಲೀಲವಾಗಿ ಕಾಣುತ್ತವೆ. ಆದರೆ ಇಂತಹ ಸಂಬಂಧಗಳ ಗೋಜಿಲ್ಲದ ಕೇವಲ ಗಂಡು ಹೆಣ್ಣು ಎನ್ನುವ ದೃಷ್ಟಿಕೋನದಲ್ಲಿ ಈ ಕಥೆಗಳು ಹುಟ್ಟಿದಂತಿದೆ. ಇದನ್ನು ನೋಡಿದರೆ ಸಿಗ್ಮಂಡ್ ಪ್ರಾಯ್ಡ್‌ನ ಸಂಬಂಧಗಳ ಆಚೆಯೂ ವಿರುದ್ಧ ಲಿಂಗಗಳ ಮಧ್ಯೆ ಇರುವ ಆಕರ್ಷಣೆಯ ಥಿಯರಿಯನ್ನು ಈ ಬುಡಕಟ್ಟುಗಳು ತುಂಬಾ ಹಿಂದೆಯೇ ತಮ್ಮ ಕಥೆ ಹಾಡುಗಳಲ್ಲಿ ಕಟ್ಟಿಕೊಂಡಿದ್ದನ್ನು ಗಮನಿಸಬಹುದು.
ಇಂತಹ ಕಥನಗಳಲ್ಲಿ ಹೆಣ್ಣು ಫಲವಂತಿಕೆಯ ಸಂಕೇತವಾಗಿ ಬರುತ್ತಾಳೆ. ಅಥವಾ ಈ ಜಗತ್ತಿನ ಸೃಷ್ಟಿಗೆ ಹೆಣ್ಣೆ ಕಾರಣ ಎನ್ನುವ ನಿರೂಪಣೆಗಳೂ ಇವೆ. ವರ್ತಮಾನದ ಬುಡಕಟ್ಟುಗಳಲ್ಲಿ ಇರುವ ಶಾಕ್ತಪಂಥದ ಆರಾಧನೆಗೂ, ಮಾತೃಪ್ರಧಾನತೆಯ ಲಕ್ಷಣಗಳಿಗೂ ಇಂತಹ ಕಥನಗಳಿಗೂ ಒಂದಕ್ಕೊಂದು ಸಂಬಂಧವಿದ್ದಂತೆ ಕಾಣುತ್ತದೆ. ಇದರ ನೆಲೆಯಲ್ಲಿಯೇ ಅಲೆಮಾರಿ ಬುಡಕಟ್ಟುಗಳ ಮಹಿಳೆಯ ವರ್ತಮಾನದ ಕಥನವೂ ತಳಕು ಹಾಕಿಕೊಂಡಿದೆ.

ಶಾಕ್ತಪಂಥ ಮತ್ತು ಮಹಿಳೆ

ಕರ್ನಾಟಕದ ಅಲೆಮಾರಿ ಬುಡಕಟ್ಟುಗಳನ್ನು ಅವಲೋಕಿಸಿದರೆ ಹೆಣ್ಣು ದೇವರ ಆರಾಧನೆ ದೊಡ್ಡಮಟ್ಟದಲ್ಲಿ ಕಂಡು ಬರುತ್ತದೆ. ಈ ಆರಾಧನೆಯಲ್ಲಿ ಶಾಕ್ತಪಂಥದ ಲಕ್ಷಣಗಳಿರುವುದೂ ಇದೆ. ಬೈಲು ಪತ್ತಾರರು ಅಂಬಾಭವಾನಿ, ಕಾಳಮ್ಮ, ಎಲ್ಲಮ್ಮ, ದುರ್‍ಗಮ್ಮ, ಕರಿಲಕ್ಷ್ಮಿ, ಮಸೆಮ್ಮನನ್ನೂ, ಬುಡಗ ಜಂಗಮರಲ್ಲಿ ಸುಂಕಲಮ್ಮ, ಜಂಬಲಮ್ಮ, ಜಮ್ಮಕ್ಕ, ಗಾಳೆಮ್ಮ, ಉಲಗಮ್ಮನನ್ನೂ, ದೊಂಬಿದಾಸರು ಭದ್ರಕಾಳಮ್ಮ, ಉಲ್ಲೂರಮ್ಮ, ಗದ್ದೆ ಕೆಂಪಮ್ಮ,ಮಳೆಯಮ್ಮ, ಕಬ್ಬಾಳಮ್ಮನನ್ನೂ, ಸಿಂಧೊಳ್ಳು ಸಮುದಾಯ ಈರನಾಗಮ್ಮ, ದುರುಗಮ್ಮ, ಮರಗಮ್ಮ,hallaki_woman_uttarakannadaಸವಾರಮ್ಮ, ಅಂಕ್ಲಮ್ಮನನ್ನೂ, ಗೊಂಧಳಿ ಸಮುದಾಯ ಸವದತ್ತಿ ಯಲ್ಲಮ್ಮ, ಅಂಬಾಭವಾನಿ, ತುಳುಜಾ ಭವಾನಿ, ಕೊಲ್ಲಾಪುರದ ಮಹಾಲಕ್ಷ್ಮಿ. ಗುಗ್ಗುಳ ಮಾರಮ್ಮ, ಕಕ್ಕೇರಿ ಭಿಷ್ಟಮ್ಮನನ್ನೂ ಹೀಗೆ ಅಲೆಮಾರಿ ಸಮುದಾಯಗಳು ಪ್ರಧಾನವಾಗಿ ಹೆಣ್ಣು ದೈವಗಳನ್ನು ಆರಾಧನೆ ಮಾಡುತ್ತವೆ.
ಹೀಗೆ ಹೆಣ್ಣು ದೈವಗಳ ಆರಾಧನೆಗೂ ಆಯಾ ಸಮುದಾಯದ ಹೆಣ್ಣುಮಕ್ಕಳಿಗೆ ನಾಗರಿಕ ಜಗತ್ತಿಗಿಂತ ಒಂದಷ್ಟು ಮುಕ್ತವಾದ ವಾತಾವರಣ ಇರುವುದಕ್ಕೂ ಸಂಬಂಧವಿದೆ. ಈ ನೆಲೆಯಲ್ಲಿ ಕರ್ನಾಟಕದ ಅಲೆಮಾರಿ ಬುಡಕಟ್ಟುಗಳ ಆರಾಧನಾ ಪರಂಪರೆಯನ್ನು ಭಿನ್ನವಾಗಿ ಅಧ್ಯಯನ ಮಾಡುವ ಅಗತ್ಯವಿದೆ. ಅಥವಾ ಈ ಆರಾಧನೆಗಳಲ್ಲಿ ಕರ್ನಾಟಕದ ಮೂಲ ದೈವೀ ಪಂಥವಾದ ಶಾಕ್ತ ಪಂಥದ ಅಧ್ಯಯನಕ್ಕೆ ಹೊಸ ನೆಲೆಯೊಂದನ್ನು ಒದಗಿಸುವ ಸಾಧ್ಯತೆಗಳೂ ಇದೆ. ಈ ಬಗೆಯ ಅಧ್ಯಯನದಿಂದಾಗಿ ಒಟ್ಟಾರೆ ಮಹಿಳೆಯ ಸಾಂಸ್ಕೃತಿಕ ಚರಿತ್ರೆ ಕಟ್ಟುವ ಭಿನ್ನ ನೆಲೆಯೊಂದು ಒದಗಬಹುದು.

ಮಹಿಳೆಯರ ಸಂಖ್ಯೆ ಮತ್ತು ಲಿಂಗಾನುಪಾತ

ನಾಗರಿಕ ಸಮುದಾಯಗಳಲ್ಲಿ ಹೆಣ್ಣುಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಲಿಂಗಾನುಪಾತದಲ್ಲೂ ಮಹಿಳೆಯರ ಪ್ರಮಾಣ ಇಳಿಯುತ್ತಿದೆ. ಇದು ಆಧುನಿಕ ಕಾಲವೂ ಕೂಡ ಮಹಿಳೆಯನ್ನು ಕಡೆಗಣಿಸುತ್ತಿರುವುದಕ್ಕೆ ಪೂರಕವಾಗಿದೆ. ಆದರೆ ಅಲೆಮಾರಿ ಬುಡಕಟ್ಟುಗಳ ಸಂಖ್ಯೆಯನ್ನು ನೋಡಿದರೆ ಇದಕ್ಕೆ ವಿರುದ್ಧ ಆಯಾಮವಿದೆ. ಅಂದರೆ ಇಲ್ಲಿ ಹೆಣ್ಣಿನ ಸಂಖ್ಯೆ ತೀರಾ ಕಡಿಮೆಯೇನಿಲ್ಲ. ಬದಲಾಗಿ ಗಂಡಿಗೆ ಸಮನಾಗಿಯೋ, ಅಥವಾ ಗಂಡಿನ ಸಂಖ್ಯೆಯ ಹತ್ತಿರವೋ ಇದೆ. ಉದಾಹರಣೆಗೆ ಕೆಲವು ಸಮುದಾಯಗಳ ಅಂಕಿಅಂಶಗಳನ್ನು ನೋಡಬಹುದು.
ಬೈಲು ಪತ್ತಾರ ಸಮುದಾಯ 18 ಜಿಲ್ಲೆಗಳಲ್ಲಿ ನೆಲೆಸಿದೆ. 4609 ರಷ್ಟು ಜನಸಂಖ್ಯೆಯಲ್ಲಿ 2216 ರಷ್ಟು ಮಹಿಳೆಯರಿದ್ದಾರೆ.orissa-tribeಲಿಂಗಾನುಪಾತ 926 ರಷ್ಟಿದೆ. ಬುಡಗ ಜಂಗಮ ಸಮುದಾಯದಲ್ಲಿ ಒಟ್ಟು ಜನಸಂಖ್ಯೆ 24132 ರಷ್ಟಿದೆ. ಅದರಲ್ಲಿ ಹೆಂಗಸರ ಸಂಖ್ಯೆ 11925 ರಷ್ಟಿದೆ. ದೊಂಬಿದಾಸರ ಸಮುದಾಯದಲ್ಲಿ ಒಟ್ಟು 7923 ರಷ್ಟಿದ್ದಾರೆ. ಅದರಲ್ಲಿ ಹೆಣ್ಣುಮಕ್ಕಳ ಸಂಖ್ಯೆ 3780 ರಷ್ಟಿದೆ. ಲಿಂಗಾನುಪಾತ 912. ಸಿಂದೊಳ್ಳು ಸಮುದಾಯದ ಒಟ್ಟು 1424 ಕುಟುಂಬಗಳ 5726 ಜನರಿದ್ದಾರೆ. ಅದರಲ್ಲಿ ಹೆಂಗಸರು 2587 ರಷ್ಟಿದ್ದಾರೆ. ಗೋಂಧಳಿ ಸಮುದಾಯ 15 ಜಿಲ್ಲೆಗಳ ಸಮೀಕ್ಷೆಯಲ್ಲಿ ಒಟ್ಟು 5407 ರಷ್ಟು ಜನಸಂಖ್ಯೆ ಇದೆ. ಅದರಲ್ಲಿ ಸ್ತ್ರೀಯರು 2620 ರಷ್ಟಿದ್ದಾರೆ. ಲಿಂಗಾನುಪಾತ 940 ರಷ್ಟಿದೆ. ಗೋಸಂಗಿ ಸಮುದಾಯದಲ್ಲಿ 1770 ಜನರಿದ್ದಾರೆ. ಹೆಂಗಸರು 879 ರಷ್ಟಿದ್ದಾರೆ. ಲಿಂಗಾನುಪಾತ 986 ರಷ್ಟಿದೆ. ಹಕ್ಕಿಪಿಕ್ಕಿ ಸಮುದಾಯದಲ್ಲಿ ಒಟ್ಟು ಜನಸಂಖ್ಯೆ 2074 ರಲ್ಲಿ ಮಹಿಳೆಯರ ಪ್ರಮಾಣ 49.51 ರಷ್ಟಿದೆ. ಕಂಜರ ಭಾಟ ಸಮುದಾಯದಲ್ಲಿ 2001 ರಷ್ಟು ಜನಸಂಖ್ಯೆ ಇದೆ. ಹೆಂಗಸರು 1000 ದಷ್ಟಿದ್ದಾರೆ. ಲಿಂಗಾನುಪಾತ 999 ರಷ್ಟಿದೆ. ಅಲೆಮಾರಿ ಕುರುಬರಲ್ಲಿ ಒಟ್ಟು ಜನಸಂಖ್ಯೆ 2310 ರಷ್ಟಿದ್ದರೆ, ಹೆಂಗಸರು 1098 ರಷ್ಟಿದ್ದಾರೆ. ಲಿಂಗಾನುಪಾತ 905 ರಷ್ಟಿದೆ.
ಈ ಅಂಕೆಸಂಖ್ಯೆಗಳನ್ನು ಗಮನಿಸಿದರೆ ಬೆರಳೆಣಿಕೆಯ ಸಮುದಾಯಗಳಲ್ಲಿ ಲಿಂಗಾನುಪಾತ ಭಯ ಹುಟ್ಟಿಸುವಂತಿದ್ದರೆ, ಬಹುಪಾಲು ಸಮುದಾಯಗಳಲ್ಲಿ ಹೆಚ್ಚು ಅಂತರವಿಲ್ಲ. ಇದನ್ನು ನೋಡಿದರೆ ಅಲೆಮಾರಿ ಬುಡಕಟ್ಟು ಸಮುದಾಯಗಳಲ್ಲಿ ಹೆಣ್ಣು ಸಂತಾನವನ್ನು ಕೇಡೆಂದು ಬಯಸುವುದು, ಅಥವಾ ಗಂಡು ಸಂತಾನವನ್ನು ಶ್ರೇಷ್ಠವೆಂದು ಭಾವಿಸುವ ಸನಾತನ ನಂಬಿಕೆ ಅಷ್ಟಾಗಿ ಕಾಡಿಲ್ಲವೆಂದು ಹೇಳಬಹುದು. ಅಂತೆಯೇ ಅಲೆಮಾರಿತನಕ್ಕೆ ಹೆಣ್ಣಿನ ಅಗತ್ಯವಿರುವುದರಿಂದ ಹೀಗೆ ಹೆಣ್ಣು ಅಲೆಮಾರಿತನದ ಬದುಕಿನ ಅನಿವಾರ್ಯ ಸಂಗಾತಿಯಾಗಿ ಪ್ರಾಮುಖ್ಯತೆಯನ್ನು ಪಡೆದಿದ್ದಾಳೆ. ಹಾಗಾಗಿ ಅಲೆಮಾರಿ ಬುಡಕಟ್ಟುಗಳಲ್ಲಿ ಮಹಿಳೆ ಒಂದು ಚೈತನ್ಯದ ಸಂಗತಿಯಾಗಿಯೂ ಕಾಣುತ್ತಾಳೆ.

ನಗರದಂಚಿನ ವಾಸದ ನೆಲೆ ಮತ್ತು ಮಹಿಳೆ

ಇಂದು ಬಹುಪಾಲು ಅಲೆಮಾರಿ ಬುಡಕಟ್ಟುಗಳ ವಾಸದ ನೆಲೆ ನಗರದ ಅಂಚಿಗೆ ಸುತ್ತುವರಿದಿದೆ. ಅಥವಾ ಅಲೆಮಾರಿ ಸಮುದಾಯಗಳು ಗ್ರಾಮೀಣ ಭಾಗದ ವಲಸೆಯನ್ನು ಕೈಬಿಡುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಒಂದಷ್ಟು ಉದಾಹರಣೆಗಳನ್ನು ನೋಡೋಣ. ಗೋಸಂಗಿ ಸಮುದಾಯದಲ್ಲಿ ನಗರ ಪ್ರದೇಶದ ವಾಸದ ನೆಲೆ ಶೇ 70 ರಷ್ಟಿದ್ದರೆ, ಗ್ರಾಮೀಣ ಪ್ರದೇಶದ ವಾಸದ ನೆಲೆ ಶೇ 30 ರಷ್ಟಿದೆ. ಘಿಸಾಡಿ ಸಮುದಾಯದ ವಾಸದ ನೆಲೆ ಗ್ರಾಮೀಣ ಭಾಗದಲ್ಲಿ ಶೇ 22 ರಷ್ಟಿದ್ದರೆ, ನಗರ ಪ್ರದೇಶದಲ್ಲಿ ಶೇ78 ರಷ್ಟಿದೆ. ಗೋಂಧಳಿ ಸಮುದಾಯದ ವಾಸದ ನೆಲೆ ಗ್ರಾಮೀಣ ಭಾಗದಲ್ಲಿ ಶೇ 19.47 ರಷ್ಟಿದ್ದರೆ, ನಗರ ಪ್ರದೇಶದಲ್ಲಿ ಸರಾಸರಿ ಶೇ.80.53 ರಷ್ಟಿದೆ. ಬೈಲ ಪತ್ತಾರ ಸಮುದಾಯ ನಗರ ಭಾಗದಲ್ಲಿ ಶೇ 51.36 ಇದ್ದರೆ ಗ್ರಾಮೀಣ ಭಾಗದಲ್ಲಿ 49.31 ರಷ್ಟಿದೆ.tribe-minesದೊಂಬಿದಾಸ ಸಮುದಾಯ ನಗರ ಭಾಗದಲ್ಲಿ ಶೇ 51.36 ಇದ್ದರೆ ಗ್ರಾಮೀಣ ಭಾಗದಲ್ಲಿ 49.31 ರಷ್ಟಿದೆ. ಕಂಜರ ಭಾಟ ಸಮುದಾಯ ಗ್ರಾಮೀಣ ಭಾಗದಲ್ಲಿ 163 ಜನರು ನೆಲೆಸಿದ್ದರೆ, ನಗರ ಭಾಗದಲ್ಲಿ ಒಟ್ಟು 1834 ರಷ್ಟಿದ್ದಾರೆ.
ಈ ಅಂಕೆಸಂಖ್ಯೆಗಳು ಅಲೆಮಾರಿ ಸಮುದಾಯಗಳ ನಗರ ಕೇಂದ್ರಿತ ವಲಸೆಯನ್ನು ತೋರಿಸುತ್ತಿದೆ. ಹೀಗೆ ಅಲೆಮಾರಿ ಸಮುದಾಯಗಳು ಗ್ರಾಮೀಣ ಭಾಗದ ವಲಸೆಯನ್ನು ಯಾಕೆ ಕೈಬಿಡುತ್ತಿದ್ದಾರೆ, ನಗರಕ್ಕೆ ಅಂಟಿಕೊಂಡಂತೆ ಯಾಕೆ ಬದುಕುತ್ತಾರೆ ಮುಂತಾಗಿ ನೋಡಬಹುದು. ಮುಖ್ಯವಾಗಿ ಗ್ರಾಮಗಳು ಕೃಷಿಯಾಧಾರಿತ ಬದುಕನ್ನು ಆಧರಿಸಿ ಸ್ವತಃ ಹಳ್ಳಿಗಳೆ ಸಂಕಷ್ಟದಲ್ಲಿವೆ. ಇಂತಹ ಸಂಕಷ್ಟದ ಬಹುಪಾಲು ಹಳ್ಳಿಗಳು ಅಲೆಮಾರಿ ಸಮುದಾಯಗಳಿಗೆ ಅನ್ನ ನೀಡುವಲ್ಲಿ ಬದುಕನ್ನು ಕಲ್ಪಿಸುವಲ್ಲಿ ಸೋಲುತ್ತಿರುವಂತೆ ಕಾಣುತ್ತಿವೆ. ಮೊದಲು ಕೃಷಿಯೇತರ ಭೂಮಿಯು ಹೆಚ್ಚಾಗಿತ್ತು. ಈ ಕೃಷಿಯೇತರ ಭೂಮಿಯ ಕಾರಣಕ್ಕೆ ಪಶು ಕುರಿಗಳನ್ನು ಸಾಕುತ್ತಿದ್ದ ಅಲೆಮಾರಿ ಸಮುದಾಯಕ್ಕೂ ಅನುಕೂಲಕರ ವಾತಾವರಣವಿತ್ತು. ಈ ಚಿತ್ರ ಈಚಿನ ಹತ್ತು ವರ್ಷಗಳಲ್ಲಿ ಬದಲಾಗಿದೆ. ಈ ಕಾರಣಕ್ಕೆ ಸಹಜವಾಗಿ ಅಲೆಮಾರಿ ಸಮುದಾಯಗಳು ನಗರಕ್ಕೆ ಹೊಂದಿಕೊಂಡಂತೆ ನೆಲೆಸುತ್ತಿವೆ. ಹೀಗೆ ನಗರದಂಚಿನ ವಲಸೆಯಿಂದಾಗಿ ಅಲೆಮಾರಿ ಸಮುದಾಯಗಳು ನಗರ ಕೇಂದ್ರಿತ ಹೊಸ ಕಸುಬುಗಳಿಗೆ ಒಗ್ಗಿಕೊಳ್ಳುತ್ತಿವೆ. ಇದರಲ್ಲಿ ಮಹಿಳೆಯರ ಕಸುಬುಗಳೂ ಬದಲಾಗುತ್ತಿವೆ. ಅಂತೆಯೇ ನಗರ ಸಂಪರ್ಕದಿಂದಾಗಿ ಅಲೆಮಾರಿ ಮಹಿಳೆಯರಲ್ಲಿ ಕೆಲವು ಮುಖ್ಯ ಬದಲಾವಣೆಗಳು ಘಟಿಸಿವೆ.

ಅಲೆಮಾರಿ ಸಮುದಾಯದ ಮಹಿಳೆಯ ಶಿಕ್ಷಣ

ಅಲೆಮಾರಿತನಕ್ಕೂ, ಶಿಕ್ಷಣಕ್ಕೂ ವಿರುದ್ಧ ಸಂಬಂಧವಿದೆ. ಅಂದರೆ ನಿರಂತರವಾಗಿ ಅಲೆದಾಡಿಕೊಂಡಿರುವ ಕಾರಣ ಒಂದೆಡೆ ನಿಂತು ಶಿಕ್ಷಣ ಪಡೆಯುವುದು ಈ ಸಮುದಾಯಗಳಿಗೆ ಸಾಧ್ಯವಾಗದು. ಸಹಜವಾಗಿ ಅಲೆಮಾರಿ ಸಮುದಾಯಗಳಿಗೆ ಶಿಕ್ಷಣ ಈಗಲೂ ನಿಲುಕದ ನಕ್ಷತ್ರವೆ. ಅಲೆಮಾರಿ ಸಮುದಾಯಗಳು ಈಗ ಕೆಲವೆಡೆ ನೆಲೆ ನಿಲ್ಲುತ್ತಿರುವುದು ಕಂಡು ಬರುತ್ತಿದೆ. ಅಥವಾ ಅರೆ ಅಲೆಮಾರಿತನವಿದೆ. ಮುಖ್ಯವಾಗಿ ನೆಲೆನಿಲ್ಲುವಿಕೆ ಮತ್ತು ಅರೆ ಅಲೆಮಾರಿತನದಿಂದ ಈ ಸಮುದಾಯದ ಮಕ್ಕಳೂ ಶಾಲೆ ಕಲಿಯುತ್ತಿದ್ದಾರೆ. ಅದರಲ್ಲೂ ಅಲೆಮಾರಿ ಸಮುದಾಯಗಳಿಗೆ ಸ್ಥಾಪನೆಯಾಗ ವಸತಿ ಶಾಲೆಗಳೂ ಸ್ವಲ್ಪಮಟ್ಟಿಗೆ ಕಲಿಯಲು ಸಹಕಾರಿಯಾಗಿವೆ. ಇಲ್ಲಿಯೂ ಗಂಡಸರ ಶಿಕ್ಷಣದ ಪ್ರಮಾಣಕ್ಕಿಂತ ಹೆಣ್ಣುಮಕ್ಕಳ ಶಿಕ್ಷಣದ ಪ್ರಮಾಣ ಇನ್ನೂ ಕಡಿಮೆಯೇ ಇದೆ. ಕೆಲವು ಸಮುದಾಯಗಳ ಅಂಕೆ ಸಂಖ್ಯೆಯನ್ನು ನೋಡೋಣ.
ಅಲೆಮಾರಿ ಕುರುಬರಲ್ಲಿ 2001 ರ ಜನಗಣತಿಯ ಪ್ರಕಾರ ಸಾಕ್ಷರತೆ 25.03 ರಷ್ಟಿದೆ. ಪುರುಷರಲ್ಲಿ ಶೇ 18.44 ರಷ್ಟಿದ್ದರೆ, ಮಹಿಳೆಯರು ಶೇ 6.59 ರಷ್ಟಿದೆ. 2007 ರ ಸಮೀಕ್ಷೆ ಪ್ರಕಾರ ಅಲೆಮಾರಿ ಕುರುಬರ ಮಹಿಳೆಯರ ಶಿಕ್ಷಣ ಶೇ 6.59 ರಷ್ಟಿದೆ. ಹಕ್ಕಿಪಿಕ್ಕಿ ಸಮುದಾಯದಲ್ಲಿ ಸರಾಸರಿ ಶೈಕ್ಷಣಿಕ ಪ್ರಮಾಣ ಪುರುಷರು 19.23 ರಷ್ಟಿದ್ದರೆ, ಮಹಿಳೆಯರು 10.31 ರಷ್ಟಿದ್ದಾರೆ. ಒಟ್ಟು 14.74 ರಷ್ಟು ಸಾಕ್ಷರರಿದ್ದಾರೆ. ಗೋಸಂಗಿ ಸಮುದಾಯದಲ್ಲಿ ಶೇ 39.59 ರಷ್ಟು ಗಂಡಸರ ಶಿಕ್ಷಣವಿದ್ದರೆ, 36.08 ರಷ್ಟು ಮಹಿಳೆಯರ ಶಿಕ್ಷಣವಿದೆ.
ಬಹುಪಾಲು ಅಲೆಮಾರಿ ಸಮುದಾಯಗಳ ಶೈಕ್ಷಣಿಕ ಅಂಕೆಸಂಖ್ಯೆಗಳು ಮೇಲಿನಂತೆಯೇ ಇರುತ್ತದೆ. ಇಲ್ಲಿ ಒಟ್ಟಾರೆ ಅಲೆಮಾರಿ ಸಮುದಾಯದ ಶೈಕ್ಷಣಿಕ ಮಟ್ಟ ತುಂಬಾ ಕೆಳಮಟ್ಟದ್ದಾಗಿದೆ. ಅದರಲ್ಲೂ ನಾಗರಿಕ ಸಮುದಾಯಗಳಿಗೆ ಹೋಲಿಸಿದರೆ, ಶಿಕ್ಷಣದ ಮಟ್ಟ ಶೋಚನೀಯವಾಗಿದೆ. ಮಹಿಳೆಯರ ಶೈಕ್ಷಣಿಕ ಮಟ್ಟ ಗಣನೀಯ ಪ್ರಮಾಣದಲ್ಲಿ ಕಡಿಮೆ ಇರುವುದು ಕಾಣುತ್ತದೆ. ಇಲ್ಲಿ ಮಹಿಳೆಯರಿಗೆ ಶಿಕ್ಷಣ ಕಡಿಮೆ ಇರುವುದಕ್ಕೂ ಈ ಸಮುದಾಯಗಳಲ್ಲಿ ಹೆಣ್ಣನ್ನು ಅವಮಾನಕಾರಿಯಾಗಿ ನಡೆಸಿಕೊಳ್ಳುವುದಕ್ಕೂ ಸಂಬಂಧವಿದೆ. ಅಂತೆಯೇ ಮಹಿಳೆಯರಲ್ಲಿ ಮೂಡನಂಬಿಕೆಗಳು ಗಾಢವಾಗಿರುವುದಕ್ಕೂ ನಂಟಿದೆ.

ತೆರ, ಬಾಲ್ಯವಿವಾಹ ಮತ್ತು ಕೂಡಿಕೆ/ಸೀರುಡಿಕೆ ಪದ್ದತಿ

ಕರ್ನಾಟಕದ ಅಲೆಮಾರಿ ಸಮುದಾಯಗಳಲ್ಲಿ ಮಹಿಳೆ ಕುರಿತಂತೆ ಮಾನವೀಯ ಮತ್ತು ಅಮಾನವೀಯ ಸಂಗತಿಗಳು ಜೊತೆ ಜೊತೆಗೇ ಇವೆ. ಅದರಲ್ಲಿ ತೆರಕೊಟ್ಟು ಮದುವೆಯಾಗುವ ಪದ್ದತಿ ಮಾನವೀಯವಾದುದು. ಈಗಲೂ ಕೆಲವು ಸಮುದಾಯಗಳಲ್ಲಿ ತೆರ ಕೊಟ್ಟು ಮದುವೆಯಾಗುವುದು ಜೀವಂತವಾಗಿದೆ. ಈ ಪದ್ದತಿ ನಾಗರೀಕ ಸಮಾಜದ ವರದಕ್ಷಣೆ ಪದ್ದತಿಗೆ ವಿರುದ್ಧವಾದುದು. ಬೈಲಪತ್ತಾರ ಸಮುದಾಯದಲ್ಲಿ ಇದಕ್ಕೆ ಓಲಿ ಎಂದು ಕರೆಯುತ್ತಾರೆ. ತೆರಕೊಟ್ಟು ಮದುವೆಯಾಗುವುದಕ್ಕೆ ಆಯಾ ಸಮುದಾಯದ ನಿಯಮಗಳು ಭಿನ್ನವಾಗಿವೆ. ಅಂತೆಯೇ ಹೆಣ್ಣು ಹೆತ್ತ ತಂದೆ ತಾಯಿಗಳಿಗೆ ಗೌರವವೂ ಹೆಚ್ಚು. tribal-womanಹೀಗೆ ತೆರ ಪದ್ಧತಿ ಇರುವುದರಿಂದ ಹೆಣ್ಣನ್ನು ಹೆರುವುದು ತಂದೆ ತಾಯಿಯರಿಗೆ ಹೊರೆಯಾಗಿ ಕಾಣುವುದಿಲ್ಲ. ನೆಲೆ ನಿಂತ ಅಲೆಮಾರಿ ಸಮುದಾಯಗಳಲ್ಲಿ ನಿಧಾನಕ್ಕೆ ವರದಕ್ಷಿಣೆ ಪದ್ದತಿಯೂ ಚಾಲ್ತಿಗೆ ಬರುತ್ತಿದೆ. ಇದು ನೆಲಸಿಗರ ಪ್ರಭಾವದಿಂದ ಬಂದದ್ದಾಗಿದೆ.
ಅಲೆಮಾರಿಗಳಲ್ಲಿ ಸಾಮಾನ್ಯವಾಗಿ ಬಾಲ್ಯವಿವಾಹ ಪದ್ದತಿ ಇದೆ. ಬಾಲ್ಯವಿವಾಹ ಪದ್ದತಿಯ ಕಾರಣಕ್ಕೆ ಹೆಣ್ಣುಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವುದು, ಅಕಾಲ ಮರಣಕ್ಕೆ ಬಲಿಯಾಗುವುದೂ ಇದೆ. ಚಿಕ್ಕವಯಸ್ಸಿಗೆ ಮಕ್ಕಳನ್ನು ಪಡೆವುದು, ತಾಯಿ ಮಗು ಅನಾರೋಗ್ಯಕ್ಕೆ ತುತ್ತಾಗುವುದೂ ಇದೆ. ಬಾಲ್ಯ ವಿವಾಹದ ಕಾರಣಕ್ಕೆ ಅಕಾಲಿಕ ಮರಣ ಹೊಂದಿದರೆ, ಚಿಕ್ಕ ವಯಸ್ಸಿಗೆ ವಿಧವೆ, ವಿಧುರರಾಗುತ್ತಾರೆ. ಈ ಕಾರಣಕ್ಕೆ ಇರಬೇಕು ಅಲೆಮಾರಿಗಳಲ್ಲಿ ಪುನರ್ವಿವಾಹವು ತೊಡಕಲ್ಲ. ಹೆಣ್ಣು ಗಂಡು ಮರು ಮದುವೆಯಾಗಲು ಈ ಸಮುದಾಯಗಳಲ್ಲಿ ಅವಕಾಶವಿದೆ. ಗಂಡ ಬಿಟ್ಟರೂ ಬೇರೊಬ್ಬರನ್ನು ಕೂಡಿಕೆಯಲ್ಲಿ ಮದುವೆಯಾಗಬಹುದು. ಗಂಡ ಸತ್ತರೆ ಮೈದುನನ್ನು ಸೀರುಡಿಕೆಯಲ್ಲಿ ವರಿಸಬಹುದು.
ಗೊಂಧಳಿ ಸಮುದಾಯದಲ್ಲಿ ಸ್ತ್ರೀಯು ಮೂರನೆ ಬಾರಿಗೆ ಲಗ್ನವಾಗುವಂತಿಲ್ಲ. ಅಂತೆಯೇ ಪುರುಷರು ನಾಲ್ಕನೆ ಬಾರಿಗೆ ಲಗ್ನವಾಗುವಂತಿಲ್ಲ ಎಂಬ ನಿಯಮವಿದೆ. ದೊಂಬಿದಾಸರ ಸಮುದಾಯದಲ್ಲಿ ಹಿಂದೆ ಮರುವಿವಾಹದಲ್ಲಿ ಗಂಡು ಹೆಣ್ಣಿಗೆ ತಾಳಿಕಟ್ಟುವಂತಿರಲಿಲ್ಲ, ವಿಧವೆಯೊಬ್ಬಳು ಹೆಣ್ಣಿಗೆ ತಾಳಿ ಕಟ್ಟಬೇಕಿತ್ತು. ಘಿಸಾಡಿಗಳ ಹೆಣ್ಣುಮಗಳು ಬೇರೆ ಸಮುದಾಯದ ಪುರುಷನೊಂದಿಗೆ ಓಡಿ ಹೋದರೆ ಈ ಸಮುದಾಯದಿಂದ ಹೊರ ಹಾಕಲಾಗುತ್ತದೆ. ಇದಕ್ಕಾಗಿ ಆ ಹುಡುಗಿಯ ತಂದೆ ತಾಯಿಗಳು ಸಮುದಾಯದ ಪಂಚಾಯ್ತಿಗೆ ಇಂತಿಷ್ಟು ದಂಡ ಕಟ್ಟಬೇಕಾಗುತ್ತದೆ. ಹೀಗೆ ಆಯಾ ಸಮುದಾಯಗಳಲ್ಲಿ ಪ್ರತ್ಯೇಕ ನಿಯಮಗಳಿವೆ.

ಪಂಚಾಯ್ತಿಗಳಲ್ಲಿ ಮಹಿಳೆ ನಗಣ್ಯ

ಬಹುಪಾಲು ಅಲೆಮಾರಿ ಸಮುದಾಯಗಳಲ್ಲಿ ಈಗಲೂ ವ್ಯಾಜ್ಯಗಳು ಆಯಾ ಸಮುದಾಯಗಳ ಪಂಚಾಯ್ತಿಯಲ್ಲಿ ಬಗೆ ಹರಿಯುತ್ತವೆ. ಆಯಾ ಸಮುದಾಯದ ಯಜಮಾನರು ಪಂಚಾಯ್ತಿಯ ಮುಖ್ಯಸ್ಥರಾಗಿರುತ್ತಾರೆ. ಈ ಬಗೆಯ ಮುಖ್ಯಸ್ಥಿಕೆ ಕೆಲವು ಸಮುದಾಯಗಳಲ್ಲಿ ವಂಶಪಾರಂಪರ್ಯವೂ ಆಗಿರುವುದಿದೆ. ಇಂತಹ ನ್ಯಾಯ ಪಂಚಾಯ್ತಿಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ತೀರಾ ವಿರಳವಾಗಿದೆ. ಯಾವುದೇ ನ್ಯಾಯ ತೀರ್ಮಾನ ಪುರುಷ ಮುಖ್ಯಸ್ಥರಿಂದಲೇ ನಿರ್ಧಾರವಾಗುತ್ತವೆ. ಈ ನಿರ್ಧಾರಗಳೂ ಕೂಡ ಬಹುಪಾಲು ಪುರುಷಪರವಾಗಿರುವ ಸಾಧ್ಯತೆಯೂ ಇದೆ. ಇದರಿಂದಾಗಿ ನ್ಯಾಯ ಪಂಚಾಯ್ತಿಗಳಲ್ಲಿ ಮಹಿಳೆಯರ ಸ್ವಾತಂತ್ರ್ಯ ದಮನಗೊಳ್ಳುವುದಿದೆ.

ಕಲಾಪ್ರಕಾರಗಳು ಮತ್ತು ಮಹಿಳೆ

ಅಲೆಮಾರಿ ಸಮುದಾಯಗಳಲ್ಲಿ ಕಲೆಯನ್ನು ಆಧರಿಸಿದ ಸಮುದಾಯಗಳು ಹೆಚ್ಚಿವೆ. ಅಂತಹ ಸಮುದಾಯಗಳಲ್ಲಿ ಮಹಿಳೆಯು ಕಲಾಪರಂಪರೆಯ ಜತೆ ತನ್ನದೇ ಆದ ಅನುಸಂಧಾನವನ್ನು ಮಾಡುತ್ತಿರುತ್ತಾಳೆ. ಹಲವು ಪ್ರದರ್ಶನಾತ್ಮಕ ಕಲೆಗಳಲ್ಲಿ ಮಹಿಳೆ ವಾದ್ಯಗಳನ್ನು ನುಡಿಸುವಲ್ಲಿ ಪರಿಣಿತಿ ಪಡೆದಿರುತ್ತಾಳೆ. ಸಿಂಧೊಳ್ಳು ಸಮುದಾಯದಲ್ಲಿ ಉರುಮೆ ಬಾರಿಸುವ ಮಹಿಳೆ, ಏಕಕಾಲದಲ್ಲಿ ಗಂಡಿನ ನಿರೂಪಣೆಗೆ ತನ್ನದೇ ಆದ ವಿವರಣೆಗಳನ್ನು ಸೇರಿಸುತ್ತಾ ಕಥನವನ್ನು ಪೂರ್ಣಗೊಳಿಸುತ್ತಾಳೆ.
ದೊಂಬಿದಾಸರ ಸಮುದಾಯದಲ್ಲಿ ರಾತ್ರಿ ಬಯಲಾಟದಂತೆ ದಾಸರಾಟವನ್ನು ಆಡುತ್ತಾರೆ. ಇದೊಂದು ರಂಗಪ್ರಕಾರ. ಇದರಲ್ಲಿ ಹಾಸ್ಯಪ್ರಧಾನತೆ ಹೆಚ್ಚಿರುತ್ತದೆ. ಇಂತಹ ಆಟಗಳಲ್ಲಿ ಹೆಣ್ಣುಮಕ್ಕಳು ಹೆಚ್ಚಾಗಿ ಸಂಗೀತ ಪರಿಕರಗಳನ್ನು ಬಾರಿಸುತ್ತಾರೆ, ಹೆಚ್ಚಾಗಿ ಈ ಸಮುದಾಯದ ಗಂಡಸರು ಹೆಣ್ಣು ವೇಷ ಹಾಕಿಯೆ ದಾಸರಾಟವಾಡುತ್ತಾರೆ. ಜಗಲೂರು ತಾಲೂಕು ಬಂಗಾರಕ್ಕನ ಗುಡ್ಡದ ಬಂಗಾರಮ್ಮ ಈ ಸಮುದಾಯದ ದೊಡ್ಡ ಕಲಾವಿದೆ. ತತ್ವಪದ, ಲಾಲಿಪದ ಹೇಳುವುದರಲ್ಲಿ ಪರಿಣಿತಿ ಇದೆ. ಜಾನಪದ ಅಕಾಡೆಮಿಯ ರಾಜ್ಯಪ್ರಶಸ್ತಿಯೂ ಬಂದಿದೆ.
ಬುಡಗ ಜಂಗಮ ಸಮುದಾಯದಲ್ಲಿ ಬುರ್ರಕಥಾ ಹಾಡುಗಾರಿಕೆ ಪ್ರಮುಖ ಕಲೆಯಾಗಿದೆ. ಬುರ್ರಕಥಾ ಈರಮ್ಮ ಈ ಸಮುದಾಯದ ದೊಡ್ಡ ಕಲಾವಿದೆ. ರಾಜ್ಯಪ್ರಶಸ್ತಿ, ನಾಡೋಜ ಒಳಗೊಂಡಂತೆ ಅನೇಕ ಪ್ರಶಸ್ತಿಗಳು ಸಂದಿವೆ. ಈರಮ್ಮನ ಬಗ್ಗೆಯೇ ಒಂದು ಪಿಹೆಚ್.ಡಿ ಸಂಶೋಧನೆಯೂ ಆಗಿದೆ. ಬಾಲನಾಗಮ್ಮ, ಅಕ್ಕ ನಾಗಮ್ಮ, ನ್ಯಾಸಿ ಚಿನ್ನಮ್ಮ, ಕುಮಾರ ರಾಮ, ಮಾರ್‍ವಾಡಿ ಸೇಟ್ ಮುಂತಾದ ಮಹಾಕಾವ್ಯಗಳಲ್ಲಿ ಹೆಣ್ಣುಮಕ್ಕಳ ದಾರುಣ ಜೀವನವನ್ನು ಕಟ್ಟಿಕೊಡಲಾಗಿದೆ. ಈ ಮಹಾಕಾವ್ಯಗಳನ್ನು ಈರಮ್ಮ ಹಾಡಿದ್ದಾಳೆ.
ಮಹಿಳೆಯರ ಕಲೆಯನ್ನೇ ಆದರಿಸಿದ ಅಲೆಮಾರಿ ಸಮುದಾಯವೆಂದರೆ ಡೊಂಬರ ಸಮುದಾಯ. ಲಾಗ ಹಾಕುವುದು, ತಂತಿ ಅಥವಾ karnataka-tribe-danceಹಗ್ಗದ ಮೇಲೆ ನಡೆಯುವುದು, ತಲೆ ಮೇಲೆ ತಂಬಿಗೆ ಇಟ್ಟು ನಡೆಯುವುದು, ಮಂಡಿಗಾಲ ನಡಿಗೆ, ಕಬ್ಬಿಣ ಬಗ್ಗಿಸುವುದು ಮುಂತಾದ ಆಟಗಳನ್ನು ಡೊಂಬರ ಸಣ್ಣ ಸಣ್ಣ ಹುಡುಗಿಯರು ಮಾಡಿ ನೋಡುಗರನ್ನು ಬೆರಗುಗೊಳಿಸುತ್ತಾರೆ. ಇದು ಕಲೆಯಂತೆಯೇ ಅಪಾಯಕಾರಿ ಸಾಹಸ ಕೂಡ. ಈ ಸಮುದಾಯದ ಕೌಜಲಿಗಿ ನಿಂಗಮ್ಮ ರಂಗಭೂಮಿಯಲ್ಲಿ ದೊಡ್ಡ ಕಲಾವಿದೆ. ಒಂದು ನಾಟಕದ ಕಂಪಮಿಯ ಯಜಮಾನಿಯಾಗಿಯೂ ರಂಗಭೂಮಿಯನ್ನು ಬೆಳೆಸಿದ್ದಾರೆ. ಅಂತೆಯೇ ಸಣ್ಣ ತಿಪ್ಪಮ್ಮ, ನಾಟಕದ ಗಂಗಮ್ಮ, ಎಮ್.ಎನ್.ಲಕ್ಷ್ಮಿದೇವಿ, ಗೌರಮ್ಮ ಕೂಡ ಡೊಂಬರ ಸಮುದಾಯದ ರಂಗಭೂಮಿ ಕಲಾವಿದರಾಗಿದ್ದಾರೆ.
ಹಲವು ಅಲೆಮಾರಿ ಬುಡಕಟ್ಟುಗಳಲ್ಲಿ ಹಚ್ಚೆ ಕಲೆ ಈಗಲೂ ಜೀವಂತವಾಗಿದೆ. ಈ ಹಚ್ಚೆ ಕಲೆಯು ಆಯಾ ಸಮುದಾಯದ ಕಲೆ ಪರಂಪರೆಯನ್ನು ಪ್ರತಿನಿಧಿಸುತ್ತಿರುತ್ತದೆ. ಬಹುಪಾಲು ಅಲೆಮಾರಿ ಸಮುದಾಯಗಳ ಹೆಣ್ಣುಮಕ್ಕಳು ಕೌದಿ ಹೊಲೆಯುವುದನ್ನು ಮುಖ್ಯ ಕಸುಬನ್ನಾಗಿಸಿಕೊಂಡಿದ್ದಾರೆ. ಹೀಗೆ ಕೌದಿ ಹೊಲೆಯುವುದೂ ಕೂಡ ತುಂಬಾ ಕಲಾತ್ಮಕವಾಗಿರುತ್ತದೆ. ಕೌದಿ ಹೊಲೆದಂತೆಯೇ ಈಗ ರೈತರಿಗೆ ಪ್ಲಾಷ್ಟಿಕ್ ಪಾಟುಗಳನ್ನು ಹೊಲೆದುಕೊಡುವುದು ಚಾಲ್ತಿಗೆ ಬಂದಿದೆ. ಹೆಳವರು, ಗೊಂದಲಿಗರು, ಮುಂತಾದ ಸಮುದಾಯಗಳಲ್ಲಿ ಕೌದಿ ಹೊಲೆಯುವುದು ಕಲೆಯೂ ಆಗಿದೆ.

ಆಧುನಿಕ ಉಪಕಸಬುಗಳು ಮತ್ತು ಮಹಿಳೆ

ಅಲೆಮಾರಿ ಸಮುದಾಯಗಳು ನಗರಕ್ಕೆ ಅಂಟಿಕೊಂಡಂತಿರುವುದು ಅವುಗಳ ನಂಬಿದ ಕುಲಕಸಬುಗಳನ್ನು ಬದಲಿಸಿದೆ. ಮುಖ್ಯವಾಗಿ ಅಲೆಮಾರಿಗಳ ವಾಸದ ನೆಲೆ ಪಟ್ಟಣವೇ ಆಗಿದ್ದರೂ, ಪಟ್ಟಣದ ಕೆಲವು ವಸ್ತುಗಳನ್ನು ತೆಗೆದುಕೊಂಡು ಅವುಗಳನ್ನು ಮಾರಾಟ ಮಾಡಲು ಮತ್ತೆ ಹಳ್ಳಿಗಳಿಗೆ ಮರಳುವುದಿದೆ. ಅದರಲ್ಲಿ ಆಧುನಿಕ ಬದುಕಿಗೆ ಹೊಂದಿಕೊಂಡಂತಹ ಉಪವಸ್ತುಗಳ ಸಂಖ್ಯೆ ದೊಡ್ಡದಿದೆ. ಪ್ಲಾಸ್ಟಿಕ್ ಮತ್ತು ಫೈಬರಿನ ಕೊಡ, ಚೆಂಬು, ಬುಟ್ಟಿ, ಮುಂತಾದವುಗಳನ್ನು ಮಾರುತ್ತಾರೆ. ಮಹಿಳೆಯರು ಆಧುನಿಕ ಅಲಂಕಾರಿಕ ಸಾಮಗ್ರಿಗಳಾದ ಹೇರಪಿನ್, ಸೂಜಿ, ದಾರ, ಸ್ನೋ ಪೌಡರ್, ರಿಬ್ಬನ್, ಹಣಿಗೆ, ಕನ್ನಡಿ, ಕುಂಕುಮ, ಕರಡಿಗೆ ಬಟ್ಟಲು ಇತ್ಯಾದಿಗಳನ್ನು ಮಾರಾಟ ಮಾಡಿ ಅಲ್ಪ ಆದಾಯ ಪಡೆಯುತ್ತಾರೆ. ಇಂತಹ ಸಾಮಾನುಗಳನ್ನು ಮಾರಾಟ ಮಾಡಲು ಅಲೆಮಾರಿ ಸಮುದಾಯದ ಮಹಿಳೆಯರು ಹಳ್ಳಿಗಳಿಗೆ ತೆರಳುತ್ತಾರೆ.
ಅಲ್ಯುಮೀನಿಯಂ ಪಾತ್ರೆ ಪರಿಕರಗಳು, ಕೂಡಿಟ್ಟ ಕೂದಲನ್ನು ಪಡೆದು ಅದರ ಬದಲಿಗೆ ಸಣ್ಣಪುಟ್ಟ ಸಾಮಾನುಗಳನ್ನು ಕೊಡುವುದು, ಹರಿದ ಬ್ಯಾಗುಗಳನ್ನು ಹೊಲೆಯುವುದು, ಜಿಪ್ಪುಗಳನ್ನು ಜೋಡಿಸುವುದು, ಮುಂತಾದ ಆಧುನಿಕ ಪರಿಕರಗಳನ್ನು ಮಾರಾಟ ಮಾಡುವ ಸಣ್ಣಪುಟ್ಟ ವ್ಯಾಪಾರಗಳಲ್ಲಿ ಮಹಿಳೆಯರು ತೊಡಗಿದ್ದಾರೆ. ಇನ್ನು ಕೆಲವು ಮಹಿಳೆಯರು ನಗರದಲ್ಲಿಯೇ ಚುರಮುರಿ, ಪೇಡಾ, ಶರಬತ್, ಭರಣಿ, ಕಾಟನ್‌ವೇಸ್ಟ್ ಕಾಜಿನ ಕಪ್ಪು, ಸಾಸರ, ಬಳೆ ವ್ಯಾಪಾರ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಹೀಗೆ ಆಧುನಿಕ ಕಾಲದ ಸಂಗತಿಗಳು ವಸ್ತು ಸಂಸ್ಕೃತಿ ಅಲೆಮಾರಿ ಬುಡಕಟ್ಟುಗಳ ಬದುಕಿನ ಕ್ರಮದಲ್ಲಿ ಒಂದಷ್ಟು ಬದಲಾವಣೆಯನ್ನು ತಂದಿವೆ. ಈ ಬದಲಾವಣೆ ಅವರ ಜೀವನವನ್ನು ಉತ್ತಮಗೊಳಿಸುವ ಬದಲು ಒಂದಷ್ಟು ಉಸಿರಾಡುವಂತೆ ಮಾಡಿದೆಯಷ್ಟೆ.
ಮುಗಿಸುವ ಮುನ್ನ ಹುಟ್ಟುವ ಪ್ರಶ್ನೆಗಳು
ನಾವು ಮಹಿಳೆ ಸಮಸ್ಯೆ ಕುರಿತಾಗಿ ದುಂಡಾಗಿ ಗ್ರಹಿಸುತ್ತೇವೆ. ಇದರಲ್ಲಿರುವ ಹತ್ತಾರು ಒಳಪದರುಗಳನ್ನು ಮುಚ್ಚಿ ಹಾಕುತ್ತೇವೆ. ಹೀಗೆ ದುಂಡಾದ ಗ್ರಹಿಕೆಯ ಹಿನ್ನೆಲೆಯನ್ನು ಆಧರಿಸಿದ ಹೋರಾಟ ಅಥವಾ ಯೋಜನೆಯ ಫಲಿತವೂ ಕೂಡ ಹಲವು ಪದರಗಳಲ್ಲಿ ಮುಚ್ಚಿ ಹೋಗಿರುವ ಮಹಿಳೆಯರ ಸಮಸ್ಯೆಗಳನ್ನು ಪ್ರತಿನಿಧಿಸುತ್ತಿರುವುದಿಲ್ಲ. ಉದಾಹರಣೆಗೆ ಅರಣ್ಯವಾಸಿ ಬುಡಕಟ್ಟುಗಳ ಮಹಿಳೆಗೂ, ಅಲೆಮಾರಿ ಬುಡಕಟ್ಟುಗಳ ಮಹಿಳೆಗೂ ಫರಕುಗಳಿವೆ. ಅಥವಾ ಒಂದಷ್ಟು ಸಾಮ್ಯಗಳಿದ್ದಾಗ್ಯೂ ಕೆಲವು ವಿಶಿಷ್ಟ ಲಕ್ಷಣಗಳೂ ಪ್ರತ್ಯೇಕ ಸಮಸ್ಯೆಗಳೂ ಇವೆ. ಹಾಗಾಗಿ ಮಹಿಳೆ ಎಂದು ಅಧ್ಯಯನ ಮಾಡುವಾಗ ಇಂತಹ ಮಹಿಳೆಯ ಒಳಗೇ ಇರಬಹುದಾದ ನೂರಾರು ಒಳಪದರುಗಳ ಅರಿವಿರಬೇಕಾಗುತ್ತದೆ. ಇಂತಹ ಎಚ್ಚರಗಳನ್ನು ಇಟ್ಟುಕೊಂಡೇ ಬರಹ ಮತ್ತು ಮಾತುಗಳನ್ನು ಆಡಬೇಕಾಗುತ್ತದೆ.
ಈ ಲೇಖನದಲ್ಲಿ ಕರ್ನಾಟಕದ ಅಲೆಮಾರಿ ಬುಡಕಟ್ಟುಗಳ ಮಹಿಳೆಯ ಒಂದು ಚಿತ್ರವನ್ನು ಕಟ್ಟಿಕೊಡಲು ಪ್ರಯತ್ನಿಸಲಾಗಿದೆ. ಇಲ್ಲಿ ಸಾಂಸ್ಕೃತಿಕವಾಗಿ ಕೆಲವು ವಿಶಿಷ್ಟ ಚಹರೆಗಳಿದ್ದಾಗ್ಯೂ ಅಲೆಮಾರಿ ಬುಡಕಟ್ಟಿನ ಮಹಿಳೆಯ ಸಾಮಾಜಿಕ ಚಹರೆಯೆ ಇಂದು ಮುಖ್ಯವಾಗಿ ಚರ್ಚೆಯಾಗಬೇಕಿದೆ. ಅಲೆಮಾರಿ ಬುಡಕಟ್ಟುಗಳು ನಿಧಾನಕ್ಕೆ ಒಂದೆಡೆ ನೆಲೆ ನಿಲ್ಲುವ ಪ್ರಕ್ರಿಯೆಗಳು ಇವೆಯಾದರೂ, ಇನ್ನೂ ಪೂರ್ಣ ಪ್ರಮಾಣದಲ್ಲಿ ಅಲೆಮಾರಿತನ ನಿಂತಿಲ್ಲ. ಅಂತೆಯೇ ಒಂದೆಡೆ ವಾಸಕ್ಕೆ ಸ್ಥಿರ ನೆಲೆಯನ್ನು ಹೊಂದಿಯೂ ವರ್ಷದ ಕೆಲವು ತಿಂಗಳುಗಳು ಕುಟುಂಬದ ಕೆಲವು ಸದಸ್ಯರು ಅರೆ ಅಲೆಮಾರಿತನವನ್ನು ಅವಲಂಬಿಸಿದ್ದಾರೆ. ಹಾಗಾಗಿ ಇಂದು ಅಲೆಮಾರಿತನವೂ ಹೊಸ ಆಯಾಮಗಳನ್ನು ಪಡೆದುಕೊಂಡಿದೆ. ಇಲ್ಲಿ ಅಲೆಮಾರಿತನಕ್ಕೂ ಆಯಾ ಅಲೆಮಾರಿ ಸಮುದಾಯದ ಸಾಂಸ್ಕೃತಿಕ ಚಟುವಟಿಕೆಗಳಿಗೂ ಮತ್ತು ಸಾಮಾಜಿಕ ವೃತ್ತಿಗಳಿಗೂ ನಂಟಿದೆ. ಈ ನಂಟು ಸಡಿಲವಾಗುವ ತನಕ ಅಥವಾ ದುರ್ಭಲವಾಗುವ ತನಕ ಈ ಬಗೆಯ ಅಲೆಮಾರಿತನ ನಿಲ್ಲುವುದಿಲ್ಲ.
ಅಲೆಮಾರಿತನದ ಕಾರಣಕ್ಕೆ ಈ ಸಮುದಾಯಗಳ ಹೆಣ್ಣುಮಕ್ಕಳು ತೆರುವ ಬೆಲೆ ದೊಡ್ಡದಾಗಿದೆ. ಬಾಣಂತಿ ಮಹಿಳೆಯರು, ಗರ್ಭಿಣಿ ಮಹಿಳೆಯರೂ ಅಲೆಮಾರಿತನದಲ್ಲಿ ಬಹುಕಷ್ಟಕ್ಕೆ ಸಿಲುಕುತ್ತಾರೆ. ಅಂತೆಯೇ ತೀರಾ ಚಿಕ್ಕಮಕ್ಕಳ ಲಾಲನೆ ಪಾಲನೆ ಕೂಡ ಅಲೆಮಾರಿ ಜೀವನದಲ್ಲಿ ಕಷ್ಟತೆರನಾದದ್ದು. ಮುಖ್ಯವಾಗಿ ಅಲೆಮಾರಿ ಸಮುದಾಯದ ಪುರುಷರು ಡೇರಿಗಳಲ್ಲಿ ಒಬ್ಬೊಬ್ಬ ಮಹಿಳೆಯರನ್ನೇ ಬಿಟ್ಟು ಹೋಗುವುದಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ಕಷ್ಟಕ್ಕೆ ಸಿಲುಕುವ ಸಂಗತಿಗಳೂ ಎದುರಾಗುತ್ತವೆ. ಇಂತಹದ್ದೇ ಹಲವಾರು ಸೂಕ್ಷ್ಮ ಸಂಗತಿಗಳ ಮೂಲಕ ಅಲೆಮಾರಿ ಸಮುದಾಯದ ಮಹಿಳೆಯರ ಸಮಸ್ಯೆಗಳ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕಿದೆ. ಆ ಸಮಸ್ಯೆಗಳನ್ನು ಆಧರಿಸಿ ಪರಿಹಾರದಂತಹ ಕಾರ್ಯಗಳನ್ನು ಸರಕಾರ ಕೈಗೊಳ್ಳಬೇಕಿದೆ. ಇದೊಂದು ಸಂಕೀರ್ಣವಾದ ನಡಿಗೆ. ಸೂಕ್ಷ್ಮಾತಿಸೂಕ್ಷ್ಮ ಅಧ್ಯಯನಗಳು ದಾಖಲೀಕರಣ ಮತ್ತು ಅಲೆಮಾರಿ ಸಮುದಾಯಗಳನ್ನು ತಾಯ್ತನದ ಮಮತೆಯಿಂದ ನೋಡಬಲ್ಲ ಗುಣ ಸರಕಾರಕ್ಕೆ ಮತ್ತು ಜನಸಮುದಾಯಗಳಿಗೆ ಬರಬೇಕಾಗಿದೆ.
ಆಕರ ಗ್ರಂಥಗಳು:
  1. ಬೈಲ ಪತ್ತಾರ, ವಿಶ್ವನಾಥ ಎಲ್. ಜಗನ್ನಾಥ ಎಂ, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  2. ಕಂಜರ ಭಾಟ, ಜೆ.ವ್ಹಿ. ಬಾಗಡೆ, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  3. ಹಕ್ಕಿಪಿಕ್ಕಿ, ಕುಮುದಾ.ಬಿ.ಸುಶೀಲಪ್ಪ, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  4. ಗೋಸಂಗಿ, ಅಪ್ಪಾಜಿ ಎಸ್. ಸಿಂಧೆ, ಕೆ.ಚಾವಡೆ ಲೋಕೇಶ್, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  5. ಘಿಸಾಡಿ, ಡಾ.ಬಸವರಾಜ ಎಸ್.ಹಿರೇಮಠ, ಅಂಜಲಿ ಸಾಳುಂಕಿ, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  6. ಗೋಂಧಳಿ, ಶಿವಾನಂದ ಲ ಪಾಚಂಗಿ, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  7. ಸಿಂಧೊಳ್ಳು, ದೊಡ್ಡಮನಿ ಲೋಕರಾಜ, ಶ್ರೀನಿವಾಸ ರಾವುಲೊಳ್, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  8. ಬುಡಗ ಜಂಗಮ, ಬಾಲ ಗುರುಮೂರ್ತಿ, ಪ್ರತಾಪ ಬಹುರೂಪಿ, ಗುಡ್ಗಜಂಗಮ, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  9. ಬೈಲ ಪತ್ತಾರ, ವಿಶ್ವನಾಥ ಎಲ್. ಜಗನ್ನಾಥ ಎಂ, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  10. ದೊಂಬಿದಾಸರು, ಕುಪ್ಪೆ ನಾಗರಾಜ, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  11. ಅಲೆಮಾರಿ ಕುರುಬರು, ಡಿ.ಯರ್ರಪ್ಪ, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  12. ಡೊಂಬರ ಸಮುದಾಯದ ಸಮಕಾಲೀನ ಅಧ್ಯಯನ, ಡಿ.ಬಿ.ಜ್ಯೋತಿ, 2008, (ಅಪ್ರಕಟಿತ ಸಂಶೋಧನಾ ಪ್ರಬಂಧ) ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಸೋಮವಾರ, ಆಗಸ್ಟ್ 4, 2014

ಫೇಸ್‌ಬುಕ್‌ ಕಾಲದ ಅತ್ಯಾಚಾರ ಮತ್ತು ಪುರೋಹಿತಶಾಹಿ

ಸೌಜನ್ಯ: ಪ್ರವಾವಾಣಿ



ಕಾರ್ಯ-ಕಾರಣ ಸಂಬಂಧಗಳಲ್ಲದೇ ಇರುವ ಯಾವುದನ್ನೂ ವೈಜ್ಞಾನಿಕ ಚಿಂತನಾ ವಿಧಾನ ಒಪ್ಪುವುದಿಲ್ಲ. ಧಾರ್ಮಿಕ ನಂಬಿಕೆಗಳನ್ನು ಆಧಾರವಾಗಿಟ್ಟುಕೊಂಡ ಅನೇಕ ಆಚರಣೆಗಳನ್ನು ಈ ಕಾರ್ಯ-ಕಾರಣದ ತರ್ಕದ ಮೂಲಕ ನೋಡಿದರೆ ಅವೆಲ್ಲವೂ ಅರ್ಥಹೀನ ಕ್ರಿಯೆಗಳಾಗಿ ಕಾಣಿಸುತ್ತವೆ. ಹಾಗೆಯೇ ಈ ಆಚರಣೆ­ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಹೊರಟರೆ ಅವುಗಳಿಂದ ಆರ್ಥಿಕ ಅಥವಾ ಸಾಮಾಜಿಕ ಲಾಭ ಪಡೆಯುವ ಒಂದು ವರ್ಗ ಕಾಣಬಹುದು. ಇದು ಎಲ್ಲಾ ದೇಶ, ಧರ್ಮಗಳ ವಿಷಯದಲ್ಲೂ ಸತ್ಯವೇ. ವೈಜ್ಞಾನಿಕ ಚಿಂತನಾಕ್ರಮವನ್ನು ಬೆಳೆಸುವುದನ್ನು ಉದ್ದೇಶ­ವಾಗಿಟ್ಟುಕೊಂಡಿರುವ ಭಾರತ ಜ್ಞಾನ ವಿಜ್ಞಾನ ಸಮಿತಿಯ ಪದಾಧಿ­ಕಾರಿಗಳಲ್ಲಿ ಒಬ್ಬರಾದ ಪ್ರಭಾ ಎನ್ ಬೆಳವಂಗಲ ಧಾರ್ಮಿಕ ಆಚರಣೆಗಳ ಲಾಭ ಪಡೆಯುವ ‘ಪುರೋಹಿತಶಾಹಿ’ಯನ್ನು ಖಂಡಿಸುವ ಹೇಳಿಕೆಯೊಂದನ್ನು ಜುಲೈ 27ರಂದು ತಮ್ಮ ಫೇಸ್‌­ಬುಕ್ ಸ್ಟೇಟಸ್ ಆಗಿ ಹಾಕಿಕೊಂಡಿದ್ದರು. ಈ ಸ್ಟೇಟಸ್ ಅನ್ನು ಈ ಲೇಖನ ಬರೆಯುವ ಹೊತ್ತಿನ ತನಕ 83 ಜನ ಮರುಹಂಚಿ­ಕೊಂಡಿದ್ದಾರೆ. ಹಾಗೆಯೇ ಇದರ ಅಡಿಯಲ್ಲಿ 103 ಪ್ರತಿಕ್ರಿಯೆಗಳಿವೆ.
ಪುರೋಹಿತಶಾಹಿಯನ್ನು ಖಂಡಿಸಿ ಮಾತನಾಡುವುದು ಇಂದು ನಿನ್ನೆಯ ಸಂಗತಿ ಏನಲ್ಲ. ವೇದಗಳನ್ನು ಪ್ರಮಾಣ ಎಂದು ಒಪ್ಪದ ಚಾರ್ವಾಕನೂ ಖಂಡಿಸಿದ್ದಾನೆ. ಅಲ್ಲಿಂದೀಚೆಗೆ ಬುದ್ಧ, ಬಸವಾದಿ­ಗಳೆಲ್ಲರೂ ಪುರೋಹಿತಶಾಹಿಯನ್ನು ಗುರಿಯಾಗಿಸಿ­ಕೊಂಡವರೇ. ಹಾಗೆಯೇ ಆಧುನಿಕ ಕಾಲಘಟ್ಟದಲ್ಲಿ ಕೇರಳದ ನಾರಾಯಣ ಗುರು, ಸ್ವಾಮಿ ವಿವೇಕಾನಂದರು ಹೀಗೆ ಅನೇಕರು ಪುರೋಹಿತ ಶಾಹಿಯನ್ನು ತಮ್ಮದೇ ಆದ ರೀತಿಯಲ್ಲಿ ಖಂಡಿಸಿದ್ದಾರೆ, ಟೀಕಿಸಿದ್ದಾರೆ ಮತ್ತು ವಿಮರ್ಶಿಸಿದ್ದಾರೆ. ಆದರೆ ಪ್ರಭಾ ಅವರ ಫೇಸ್‌ಬುಕ್ ಗೆಳೆಯರ ಪಟ್ಟಿಯಲ್ಲಿದ್ದ ಕೆಲವರಿಗೆ ಈ ಪುರೋಹಿತ­ಶಾಹಿಯ ಖಂಡನೆ ನಿರ್ದಿಷ್ಟ ಜಾತಿಯ ಟೀಕೆಯಂತೆ ಕಂಡಿತು. ವಿ.ಆರ್.ಭಟ್ ಎಂಬುವವರಿಗೆ ಇದು ಸನಾತನ ಧರ್ಮದ ಟೀಕೆಯಂತೆ ಕಂಡಿತು. ಅವರು ಮರು ಟೀಕೆಗೆ ಮುಂದಾದರು. ಅವರ ಸಿಟ್ಟು ಎಷ್ಟರ ಮಟ್ಟಿಗೆ ಇತ್ತೆಂದರೆ ‘ಜುಟ್ಟು ಹಿಡಿದು ಅತ್ಯಾಚಾರ ಮಾಡಿದರೆ ನಿಮಗೆ ಗೊತ್ತಾದೀತು’ ಎಂದೂ ಬರೆದುಬಿಟ್ಟರು. ಈಗ ವಿ.ಆರ್.ಭಟ್ ಪೊಲೀಸರ ಅತಿಥಿ. ಭಾರತೀಯ ದಂಡ ಸಂಹಿತೆಯ ಹಲವು ಕಲಮುಗಳ ಜೊತೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ 66ಎ ಪ್ರಕಾರವೂ ಅವರ ಮೇಲೆ ಕೇಸು ದಾಖಲಿಸಲಾಗಿದೆ. ಗೂಂಡಾ ಕಾಯ್ದೆಯನ್ನೂ ಅನ್ವಯಿಸ­ಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ.
ಪ್ರಭಾ ಅವರ ಸ್ಟೇಟಸ್‌ಗೆ ವಿ.ಆರ್.ಭಟ್ ಕೆಟ್ಟದಾಗಿ ಪ್ರತಿಕ್ರಿಯಿಸುವ ಹೊತ್ತಿಗೆ ವಿಬ್ಗಯೊರ್ ಶಾಲೆಯಲ್ಲಿ ಮಗುವೊಂದರ ಮೇಲೆ ಅತ್ಯಾಚಾರ ನಡೆದ ವಿಚಾರ ಸಾರ್ವಜನಿಕ ಚರ್ಚೆಯಲ್ಲಿ ಇಲ್ಲದೇ ಇದ್ದಿದ್ದರೆ ಈ ಪ್ರಕರಣಕ್ಕೆ ಇಂಥದ್ದೊಂದು ತಿರುವು ಬರುತ್ತಿತ್ತೇ? ಬಹುಶಃ ಇಲ್ಲ. ಸಾರ್ವಜನಿಕ ವೇದಿಕೆಯೊಂದರಲ್ಲಿ ಇಂಥ ಮಾತುಗಳನ್ನು ಬರೆಯುವಾತ ಯಾರೋ ಮಾನಸಿಕ ಅಸ್ವಸ್ಥನಿರಬೇಕು ಎಂದು ಎಲ್ಲರೂ ನಿರ್ಲಕ್ಷಿಸಿಬಿಡುತ್ತಿದ್ದರೇನೋ? ಸ್ವತಃ ಪ್ರಭಾ ಅವರು ತಮ್ಮ ಖಾತೆಯಲ್ಲಿ ಕಾಣಿಸಿಕೊಳ್ಳುವ ಈ ಪ್ರತಿಕ್ರಿಯೆಯನ್ನು ತೆಗೆದು ಹಾಕುತ್ತಿದ್ದರೇನೋ?
ಈ ಪ್ರಕರಣದ ಕುರಿತಂತೆ ಫೇಸ್‌ಬುಕ್‌ನಲ್ಲಿ ಇನ್ನೂ ಚರ್ಚೆಗಳು ಮುಂದುವರಿಯುತ್ತಿವೆ. ಇಲ್ಲಿಯೂ ಪ್ರಭಾ ಮತ್ತು ವಿ.ಆರ್.ಭಟ್ ಪರವಾದ ಗುಂಪುಗಳು ರೂಪುಗೊಂಡಿವೆ. ಪ್ರಭಾ ಅವರ ಬೆಂಬಲಕ್ಕೆ ನಿಂತಿರುವವರು ಹೇಳುವಂತೆ ಪ್ರಭಾ ಸೋಷಿಯಲ್ ಮೀಡಿಯಾದ ಕೊಳೆ ತೊಳೆಯುವ ಕೆಲಸ ಆರಂಭಿಸಿದ್ದಾರೆ. ಚಿಂತನೆಯ ಬಹುತ್ವವನ್ನು ಒಪ್ಪದ ಅನೇಕರು ಪ್ರಗತಿಪರವಾದ ಎಲ್ಲವುಗಳ ವಿರುದ್ಧವೂ ಕೆಟ್ಟ ಭಾಷೆಯಲ್ಲಿ ದಾಳಿ ನಡೆಸುತ್ತಾರೆ. ಇಂಥವರಿಗೆಲ್ಲಾ ಪಾಠ ಕಲಿಸುವ ಹೊತ್ತು ಬಂದಿದೆ. ಅದು ವಿ.ಆರ್.ಭಟ್ ಬಂಧನದೊಂದಿಗೆ ಆರಂಭವಾಗಿದೆ. ಇದಕ್ಕೆ ಪ್ರತಿಯಾಗಿ ವಿ.ಆರ್. ಭಟ್ ಅವರನ್ನು ಬೆಂಬಲಿಸುವವರು ಕೆಟ್ಟ ಭಾಷೆ ಬಳಸಿರುವುದು ಸರಿಯಲ್ಲ. ಸಿಟ್ಟಿನಿಂದ ಬೈಯ್ಯುವಾಗ ಹೇಳುವಂತೆ ಈ ಮಾತನ್ನು ಹೇಳಿದ್ದಾರೆಯೇ ಹೊರತು ಅತ್ಯಾಚಾರಕ್ಕೆ ಪ್ರಚೋದನೆ ನೀಡುವುದು ವಿ.ಆರ್.ಭಟ್ ಉದ್ದೇಶವಾಗಿರಲಿಲ್ಲ ಎಂದು ವಾದಿಸುತ್ತಿದ್ದಾರೆ.
ಪ್ರತಿಕ್ರಿಯೆಯಲ್ಲಿ ಕೆಟ್ಟ ಭಾಷೆಯ ಬಳಕೆಯಾಗಿದೆ ಎಂಬುದನ್ನು ಎರಡೂ ಗುಂಪಿನವರು ಒಪ್ಪುತ್ತಿದ್ದಾರೆ. ಇಂಟರ್‌ನೆಟ್ ಬರುವ ತನಕ ಸಮೂಹ ಸಂವಹನ ಎಂಬುದು ಸಂಪಾದಕೀಯ ನಿಯಂತ್ರಣಕ್ಕೆ ಒಳಪಟ್ಟು ನಡೆಯುತ್ತಿತ್ತು. ಸೋಷಿಯಲ್ ಮೀಡಿಯಾಗಳಂತೂ ಸಮೂಹ ಸಂವಹನದ ಸ್ವರೂಪವನ್ನೇ ಬದಲಾಯಿಸಿಬಿಟ್ಟಿವೆ. ಪ್ರತಿಯೊಬ್ಬ ಓದುಗನಲ್ಲೂ ಇರುವ ಬರಹಗಾರನನ್ನು ಶೋಧಿಸಿ ವಿಶ್ವದ ಮುಂದಿಡುತ್ತಿದೆ. ಅಂದರೆ ಯಾರು ಬೇಕಾದರೂ ಏನನ್ನಾದರೂ ಹೇಗೆ ಬೇಕಾದರೂ ಪ್ರಕಟಿಸಬಹುದಾದ ಬಹುದೊಡ್ಡ ಸ್ವಾತಂತ್ರ್ಯವನ್ನು ಈ ಮಾಧ್ಯಮ ಒದಗಿಸಿದೆ. ಈ ಸ್ವಾತಂತ್ರ್ಯ ಇದೆ ಎಂಬ ಕಾರಣಕ್ಕೆ ಸೋಷಿಯಲ್ ಮೀಡಿಯಾ ಒದಗಿಸಿರುವ ಸಾರ್ವಜನಿಕ ವೇದಿಕೆಗಳಲ್ಲಿ ಏನನ್ನು ಬೇಕಾದರೂ ಬರೆಯಬಹುದೇ?
ಸಿಟ್ಟಿನಿಂದ ಬೈಯ್ಯುವಾಗ ಕೆಟ್ಟ ಮಾತು ಬಂದುಬಿಡುತ್ತದೆ ಎಂಬ ವಾದವನ್ನು ಒಪ್ಪಿಕೊಂಡೇ ಯೋಚಿಸಿದರೂ ಸಾರ್ವಜನಿಕವಾಗಿ ಕೆಟ್ಟ ಭಾಷೆ ಬಳಸುವುದು ಬಹಳ ಸುಲಭ ಎನ್ನಲಾಗದು. ಏಕೆಂದರೆ ಫೇಸ್‌ಬುಕ್  ನಂತಹ ವೇದಿಕೆಗಳಿಗೆ ಒಂದು ಔಪಚಾರಿಕ ಸ್ವರೂಪವಿದೆ. ಎದುರಿಗೆ ಇರುವ ವ್ಯಕ್ತಿಯೊಬ್ಬನ ಮೇಲೆ ರೇಗುವಂಥ ವಾತಾವರಣ ಇಲ್ಲಿರುವುದಿಲ್ಲ. ಇದು ಕನಿಷ್ಠ ವ್ಯಕ್ತಿಯೊಬ್ಬರಿಗೆ ಇ–ಮೇಲ್ ಅಥವಾ ವೈಯಕ್ತಿಕ ಸಂದೇಶ ಕಳುಹಿಸುವ ಕ್ರಿಯೆಯಲ್ಲ. ಇಡೀ ಗೆಳೆಯರ ಬಳಗದಲ್ಲಿರುವ ನೂರಾರು ಜನರು ಓದುತ್ತಾರೆಂಬ ಅರಿವಿನೊಂದಿಗೇ ಇಲ್ಲಿ ಪ್ರತಿಕ್ರಿಯಿಸಬೇಕಾಗುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಎಲ್ಲರಿಗೂ ಇದು ತಿಳಿದಿದೆ. ಇಷ್ಟಾಗಿಯೂ ಕೆಟ್ಟ ಭಾಷೆಯನ್ನು ಯಾರಾದರೂ ಬಳಸುತ್ತಾರೆಂದರೆ ಅವರು ಬೀದಿಯಲ್ಲಿ ನಿಂತು ಕೆಟ್ಟ ಮಾತುಗಳಲ್ಲಿ ಬೈಯ್ಯುವ ಧೈರ್ಯವಿರುವರೇ ಆಗಿರಬೇಕು. ಈ ಧೀರರ ಸಂಖ್ಯೆ ಫೇಸ್‌ಬುಕ್, ಟ್ವಿಟ್ಟರ್‌ನಂಥ ವೇದಿಕೆಗಳಲ್ಲಿ ಭಾರೀ ಪ್ರಮಾಣದಲ್ಲಿಯೇ ಇದೆ. ನಿರ್ದಿಷ್ಟ ವೈಚಾರಿಕ ನಿಲುವುಗಳನ್ನು ಹೊಂದಿರುವವರನ್ನು ಹುಡುಕಿ ಬೇಟೆಯಾಡುವಲ್ಲಿ ಇವರು ನಿಸ್ಸೀಮರು. ಇವರಲ್ಲಿರುವ ದೊಡ್ಡ ಅಸ್ತ್ರವೇ ಕೆಟ್ಟ ಭಾಷೆ.
ಅವಾಚ್ಯ ಶಬ್ದಗಳು ಮತ್ತು ಕೆಟ್ಟ ಭಾಷೆಯನ್ನು ಕೆಲವರು ಸಾರ್ವಜನಿಕ ವೇದಿಕೆಗಳಲ್ಲಿ ಏಕೆ ಬಳಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ಈ ತನಕ ನಡೆದಿರುವ ಅಧ್ಯಯನಗಳು ಒಂದು ಅಂಶವನ್ನು ಸ್ಪಷ್ಟಪಡಿಸುತ್ತಿವೆ. ಈ ಬಗೆಯ ನಿಂದನೆಗಳಲ್ಲಿ ತೊಡಗುವವರು ಸಾಮಾನ್ಯವಾಗಿ ತೀವ್ರ ಬಲಪಂಥೀಯ ರಾಜಕಾರಣ ಅಥವಾ ತೀವ್ರ ಎಡಪಂಥೀಯ ರಾಜಕಾರಣಗಳ ಬೆಂಬಲಿಗರಾಗಿರುತ್ತಾರೆ. ಭಾರತದ ಸಂದರ್ಭ­ದಲ್ಲಿಯೂ ಇದು ಬಹುತೇಕ ನಿಜ. ಸದ್ಯದ ಮಟ್ಟಿಗೆ ತೀವ್ರ ಬಲಪಂಥೀಯ ಧೋರಣೆ ಇಲ್ಲಿ ಮೇಲುಗೈ ಪಡೆದಿದೆ. ಪ್ರಭಾ ಅವರ ಮೇಲಿನ ವಾಗ್ದಾಳಿಯಲ್ಲೂ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ವೈಜ್ಞಾನಿಕ ಮನೋಭಾವ, ಅಲ್ಪಸಂಖ್ಯಾತರ ಹಕ್ಕುಗಳು, ಬಹುಸಂಸ್ಕೃತಿ ಇತ್ಯಾದಿಗಳ ಪರವಾಗಿ ಅನಿಸಿಕೆಗಳನ್ನು ಹಂಚಿಕೊಳ್ಳುವ ಎಲ್ಲರೂ ಒಂದಲ್ಲಾ ಒಂದು ಹಂತದಲ್ಲಿ ಇಂಥ ದಾಳಿಗಳನ್ನು ಎದುರಿಸಲೇಬೇಕಾಗುತ್ತದೆ ಎಂಬ ಸ್ಥಿತಿ ಸದ್ಯ ಭಾರತದಲ್ಲಿದೆ. ಈ ಏಕಪಕ್ಷೀಯ ಅಸಹನೆಗೆ ಸಾಮಾಜಿಕ ನಿಯಂತ್ರಣಗಳ್ಯಾವೂ ಸದ್ಯಕ್ಕೆ ಕಾಣಿಸುತ್ತಿಲ್ಲ. ಹಾಗಾಗಿ ಇದರ ನಿಯಂತ್ರಣಕ್ಕೆ ಕಾನೂನು ಸೂಕ್ತ ಎಂದು ಅನೇಕರು ಭಾವಿಸುತ್ತಿದ್ದಾರೆ. ಆದರೆ ಇದು ಎರಡಲಗಿನ ಕತ್ತಿ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ‘66ಎ’ ಸೆಕ್ಷನ್’ ಈ ತನಕ ಬಳಕೆಯಾಗಿರುವುದನ್ನು ನೋಡಿದರೆ ಇದು ಹೆಚ್ಚು ಸರಿಯಾಗಿ ಅರ್ಥವಾಗುತ್ತದೆ. ಬಾಳಾ ಠಾಕ್ರೆಯವರ ನಿಧನಾನಂತರ ಮುಂಬೈ ಬಂದ್ ಆದದ್ದು ಗೌರವಕ್ಕಿಂತ ಹೆಚ್ಚು ಭಯದಲ್ಲಿ ಎಂದು ಫೇಸ್‌ಬುಕ್ ಸ್ಟೇಟಸ್ ಹಾಕಿದ್ದ ಯುವತಿ ಮತ್ತು ಆ ಸ್ಟೇಟಸ್ ಅನ್ನು ಲೈಕ್ ಮಾಡಿದ್ದ ಮತ್ತೊಬ್ಬ ಯುವತಿಯನ್ನು ಬಂಧಿಸಲಾಗಿತ್ತು. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿಯೊಬ್ಬರ ವಿರುದ್ಧ ಪತ್ರಿಕೆಗೆ ಲೇಖನವೊಂದನ್ನು ಬರೆದಿದ್ದ ಪಿಯುಸಿಎಲ್‌ನ ಪದಾಧಿಕಾರಿ­ಯೊಬ್ಬರು ಅದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ತಕ್ಷಣ ಅವರನ್ನು ಬಂಧಿಸಲಾಗಿತ್ತು. ಮಮತಾ ಬ್ಯಾನರ್ಜಿಯವರನ್ನು ಟೀಕಿಸುವ ಕಾರ್ಟೂನ್ ಒಂದನ್ನು ಹಂಚಿಕೊಂಡಿದ್ದ ಅಧ್ಯಾಪಕ­ರೊಬ್ಬರನ್ನೂ ಇದೇ ಕಾಯ್ದೆಯಡಿಯಲ್ಲಿ ಬಂಧಿಸಲಾಗಿತ್ತು. ಕಿರಿಕಿರಿ ಉಂಟುಮಾಡುವುದು, ಮುಜುಗರವನ್ನುಂಟು ಮಾಡುವುದು, ಅಪಾಯವನ್ನುಂಟು ಮಾಡುವುದು, ಅವಮಾನಿಸುವುದು ಹೀಗೆ ‘66ಎ’ ಅನ್ವಯ ಶಿಕ್ಷಿಸಬಹುದಾದ ಅಪರಾಧಗಳನ್ನು ನಿರ್ವಚಿಸಲಾಗಿದೆ. ಆದರೆ ಈ ಅಪಾಯ, ಮುಜುಗರ, ಕಿರಿಕಿರಿ ಮತ್ತು ಅವಮಾನ ಎಂಬುದಕ್ಕೆ ಯಾವುದೇ ಸ್ಪಷ್ಟ ವ್ಯಾಖ್ಯೆಗಳಿಲ್ಲ. ದೂರು ಸ್ವೀಕರಿಸುವ ಪೊಲೀಸ್ ಅಧಿಕಾರಿಗೆ ದೂರಿನಲ್ಲಿರುವುದು ನಿಜ ಅನ್ನಿಸಿದರೆ ಸಾಕಾಗುತ್ತದೆ. ಇದನ್ನು ರಾಜಕಾರಣಿಗಳು ಮತ್ತು ಅಧಿಕಾರಿಗಳು ತಮ್ಮ ಟೀಕಾಕಾರರ ವಿರುದ್ಧವೂ ಬಳಸುವ ಸಾಧ್ಯತೆ ಇದೆ.
ಆಂಧ್ರಪ್ರದೇಶದ ಪ್ರಕರಣ ಇದನ್ನೇ ಹೇಳುತ್ತದೆ. ಅಲ್ಲಿನ ಪ್ರಮುಖ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಲೇಖನವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ತಕ್ಷಣ ಬರೆದಾಕೆಯನ್ನು ಬಂಧಿಸಲಾಯಿತು. ಹಾಗೆಯೇ ಇದಕ್ಕೆ ಮತ್ತೊಂದು ಮುಖವೂ ಇದೆ. ಅತ್ಯಾಚಾರದ ಬೆದರಿಕೆಯನ್ನು ಇನ್ನೂ ಸಾರ್ವಜನಿಕ ಜೀವನ­ದಲ್ಲಿರುವ ಅನೇಕ ಮಹಿಳೆಯರು ಎದುರಿ­ಸಿದ್ದಾರೆ. ಕವಯಿತ್ರಿ ಮೀನಾ ಕಂದಸಾಮಿ ಮತ್ತು ಪತ್ರಕರ್ತೆ ಸಾಗರಿಕಾ ಘೋಷ್ ಅವರು ಈ ಕುರಿತಂತೆ ಬರೆದುಕೊಂಡಿದ್ದರು. ಹೀಗೆ ಬೆದರಿಕೆ ಒಡ್ಡಿದವರನ್ನು ಈ ತನಕ ಬಂಧಿಸಲಾಗಿಲ್ಲ ಎಂಬ ವಾಸ್ತವವೂ ನಮ್ಮ ಮುಂದಿದೆ.
ಮಹಿಳೆಯೊಬ್ಬರಿಗೆ ಅತ್ಯಾಚಾರದ ಬೆದರಿಕೆಯೊಡ್ಡಿದವನನ್ನು ಬಂಧಿಸುವುದಕ್ಕೆ ಈ ಕಾಯ್ದೆ ಬಳಕೆಯಾದ ತಕ್ಷಣ ಅದು ಇದ್ದು ಬಿಡಲಿ ಎಂದುಕೊಳ್ಳುವಂತಿಲ್ಲ. ಒಂದು ವೇಳೆ ಬೆದರಿಕೆ­ಯೊಡ್ಡಿದಾತ ಅಮೆರಿಕದಲ್ಲೋ ಆಸ್ಟ್ರೇಲಿಯಾದಲ್ಲೋ ಅಥವಾ ದುಬೈಯಲ್ಲೋ ಇದ್ದರೆ ಆತ ಭಾರತೀಯ ಪ್ರಜೆಯೇ ಆಗಿದ್ದರೂ ಈ ಕಾನೂನಿಗೆ ಏನನ್ನೂ ಮಾಡಲಾಗುತ್ತಿರಲಿಲ್ಲ. ಅಥವಾ ಪ್ರಭಾ ಅವರ ಸ್ಟೇಟಸ್ ತಮಗೆ ಕಿರಿಕಿರಿ ಉಂಟು ಮಾಡಿದೆ, ಅವಮಾನಿಸಿದೆ ಮುಂತಾಗಿ ಆರೋಪಿಸಿ ದೂರು ನೀಡಿದ್ದರೆ ಪ್ರಕರಣವೇ ಮತ್ತೊಂದು ಸ್ವರೂಪ ಪಡೆಯುವ ಸಾಧ್ಯತೆ ಇತ್ತು. ಈಗಲೂ ಅಂಥದ್ದೊಂದು ಪ್ರಯತ್ನ ಚಾಲನೆಯಲ್ಲಿರುವುದರ ಸೂಚನೆಗಳು ಫೇಸ್‌ಬುಕ್‌ನ ಕೆಲವು ಗುಂಪುಗಳ ಚರ್ಚೆಯಲ್ಲಿ ಕಾಣಸಿಗುತ್ತದೆ. ಪ್ರಭಾ ಅವರು ಮರು ಹಂಚಿಕೊಂಡ ಸ್ಟೇಟಸ್ ಒಂದರಲ್ಲಿ ‘ದಲಿತ ನಿಂದನೆ’ ಇದೆ ಎಂದು ಆರೋಪಿಸಿ ದೂರು ದಾಖಲಿಸಲು ಕೆಲವರು ಮುಂದಾಗಿದ್ದಾರೆ.
ಜನಸಾಮಾನ್ಯರಿಗೆ ಅಭಿವ್ಯಕ್ತಿಗೆ ಅವಕಾಶ ಒದಗಿಸಿಕೊಟ್ಟಿರುವ ಸೋಷಿಯಲ್ ಮೀಡಿಯಾವನ್ನು ಹೇಗಾದರೂ ಮಾಡಿ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಎಲ್ಲಾ ಪ್ರಭುತ್ವಗಳೂ ಪ್ರಯತ್ನಿಸುತ್ತವೆ. ಸರ್ವಾಧಿಕಾರಿ ಪ್ರಭುತ್ವಗಳಾದರೆ ಇಂಥ ಮಾಧ್ಯಮಗಳನ್ನು ಜನರಿಗೆ ತಲುಪದಂತೆ ನೋಡಿಕೊಳ್ಳುತ್ತವೆ. ಪ್ರಜಾಪ್ರಭುತ್ವವಿರುವ ದೇಶಗಳಲ್ಲಿ ವಿವಿಧ ಕಾನೂನುಗಳ ಮೂಲಕ ಅಭಿವ್ಯಕ್ತಿಯನ್ನು ಹತ್ತಿಕ್ಕುವ ಕೆಲಸ ನಡೆಯುತ್ತದೆ. ಇಂಥ ಕಾನೂನುಗಳನ್ನು ತರುವುದಕ್ಕೆ ಎಲ್ಲಾ ಪ್ರಭುತ್ವಗಳೂ ನೆಪಗಳಿಗಾಗಿ ಕಾಯುತ್ತಿರುತ್ತವೆ. ಈಗಾಗಲೇ ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಇಡೀ ದೇಶವನ್ನೇ ‘ಬಿಗ್ ಬಾಸ್ ಮನೆ’ಯನ್ನಾಗಿಸಲಾಗಿದೆ. ನಮ್ಮ ಎಲ್ಲಾ ಅಂತರ್ಜಾಲ ಸಂವಹನದ ಮೇಲೆ ಕಣ್ಣಿಡುವ ‘ನೇತ್ರ’ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಇನ್ನು ಕೆಟ್ಟ ಭಾಷೆ ಬಳಕೆಯ ನೆಪದಲ್ಲಿ ಬೇರೇನಾದರೂ ಜಾರಿಗೆ ಬರಬಹುದು ಎಂಬ ಎಚ್ಚರ ಎಡ–ಬಲಗಳಲ್ಲಿರುವ ಹಂಚಿ ಹೋಗಿರುವ ನಮಗೆ ಬೇಕಾಗಿದೆ.

ಕೊರಗ ಸಮುದಾಯದ ಚಿತ್ರಗಳು ಭಾಗ-6




ಡಾಕ್ಟರೇಟ್ ಪದವಿ ಪಡೆದ ಕೊರಗ ಸಮುದಾಯದ ಪ್ರಪ್ರಥಮ ಸಾಧಕ

ಹುಟ್ಟು ಬಡತನವ ಮೆಟ್ಟಿ ನಿಂತು, ಪದವಿ ತನಕ ಕೂಲಿ ಮಾಡಿ, ಅರೆಕಾಲಿಕ ಉದ್ಯೋಗ ಮಾಡುತ್ತಲೇ ಪಿಹೆಚ್.ಡಿ ಪದವಿ ಗಳಿಸುವ ಮೂಲಕ ನಿರ್ಲ್ಯಕ್ಷಿತ ಕೊರಗ ಸಮುದಾಯಕ್ಕೊಂದು ಹೆಮ್ಮೆ ತಂದವರು ಬಾಬು ಬೆಳ್ತಂಗಡಿ. 

ಬೆಳ್ತಂಗಡಿ ತಾಲೂಕಿನ ಕಲ್ಮಂಜೆ ಎಂಬ ತೀರಾ ಹಿಂದುಳಿದ ಗ್ರಾಮದ, ಕೊರಗರ ಕುಲಕಸುಬನ್ನೇ ಬದುಕಾಗಿಸಿಕೊಂಡ - ಮತ್ತಡಿ ಕೊರಗ ಮತ್ತು ಚೋಮು ದಂಪತಿಯ ಪುತ್ರರಾದ ಬಾಬು ಕೂಲಿ ಮಾಡುತ್ತಲೇ ಕಾಲೇಜು ಕಲಿತವರು. ಆರ್ಥಿಕ ಮುಗ್ಗಟ್ಟಿನ ಮಧ್ಯೆಯೂ ಮಂಗಳೂರು ವಿಶ್ವವಿಧ್ಯಾನಿಲಯದಲ್ಲಿ ಎಂ ಎಸ್ಸಿ ಪ್ರಥಮ ದರ್ಜೆಯಲ್ಲಿ ಪಾಸಾಗುವ ಮೂಲಕ ಕಲಿಯುವ ಛಲಕ್ಕೆ ಬಲ ನೀಡುತ್ತಾ, ಕೊರಗ ಸಮುದಾಯದ ಶೈಕ್ಷಣಿಕ ರಂಗದಲ್ಲಿ ಮತ್ತೊಂದು ಮಿನುಗುವ ನಕ್ಷತ್ರವಾದರು!
Photo: ಡಾಕ್ಟರೇಟ್ ಪದವಿ ಪಡೆದ ಕೊರಗ ಸಮುದಾಯದ ಪ್ರಪ್ರಥಮ ಸಾಧಕ

ಹುಟ್ಟು ಬಡತನವ ಮೆಟ್ಟಿ ನಿಂತು, ಪದವಿ ತನಕ ಕೂಲಿ ಮಾಡಿ, ಅರೆಕಾಲಿಕ ಉದ್ಯೋಗ  ಮಾಡುತ್ತಲೇ ಪಿಹೆಚ್.ಡಿ ಪದವಿ ಗಳಿಸುವ ಮೂಲಕ ನಿರ್ಲ್ಯಕ್ಷಿತ ಕೊರಗ ಸಮುದಾಯಕ್ಕೊಂದು ಹೆಮ್ಮೆ ತಂದವರು ಬಾಬು ಬೆಳ್ತಂಗಡಿ. 

ಬೆಳ್ತಂಗಡಿ ತಾಲೂಕಿನ ಕಲ್ಮಂಜೆ ಎಂಬ ತೀರಾ ಹಿಂದುಳಿದ ಗ್ರಾಮದ, ಕೊರಗರ ಕುಲಕಸುಬನ್ನೇ ಬದುಕಾಗಿಸಿಕೊಂಡ - ಮತ್ತಡಿ ಕೊರಗ ಮತ್ತು ಚೋಮು ದಂಪತಿಯ ಪುತ್ರರಾದ ಬಾಬು ಕೂಲಿ ಮಾಡುತ್ತಲೇ ಕಾಲೇಜು ಕಲಿತವರು. ಆರ್ಥಿಕ ಮುಗ್ಗಟ್ಟಿನ ಮಧ್ಯೆಯೂ ಮಂಗಳೂರು ವಿಶ್ವವಿಧ್ಯಾನಿಲಯದಲ್ಲಿ ಎಂ ಎಸ್ಸಿ ಪ್ರಥಮ ದರ್ಜೆಯಲ್ಲಿ ಪಾಸಾಗುವ ಮೂಲಕ ಕಲಿಯುವ ಛಲಕ್ಕೆ ಬಲ ನೀಡುತ್ತಾ, ಕೊರಗ ಸಮುದಾಯದ ಶೈಕ್ಷಣಿಕ ರಂಗದಲ್ಲಿ ಮತ್ತೊಂದು ಮಿನುಗುವ ನಕ್ಷತ್ರವಾದರು!

ಅತ್ಯಂತ ಕ್ಲಿಷ್ಟ ವಿಷಯಗಳಲ್ಲಿ ಒಂದಾದ ಸಿಂಥಟಿಕ್ ಆಂಡ್ ಬಯಲಾಜಿಕಲ್ ಸ್ಟಡೀಸ್ ಆನ್ ನೈಟ್ರೋಜನ್ ಸಲ್ಫರ್ ಆಂಡ್ ಆಕ್ಸಿಜನ್ ಕಂಟೈನಿಂಗ್ ಹೈಕ್ರೋಪೆರೋ ಸೈಕಲ್ಸ್ ವಿಷಯವಾಗಿ ಮಂಗಳೂರು ವಿವಿಗೆ ಸಲ್ಲಿಸಿದ ಮಹಾಪ್ರಬಂಧಕ್ಕೆ 'ಡಾಕ್ಟರೇಟ್' ಪದವಿ ಪಡೆಯುವ ಮೂಲಕ ಕೊರಗ ಸಮುದಾಯದಲ್ಲಿ ಡಾಕ್ಟರೇಟ್ ಪದವಿ ಪಡೆದ ಮೊದಲಿಗರೆನಿಸಿದರು.

ಅಂತರಾಷ್ಟ್ರೀಯ ಜರ್ನಲ್ನಲ್ಲಿ ಹತ್ತು ಪ್ರಬಂಧ ಹಾಗೂ ರಾಷ್ಟ್ರೀಯ ಜರ್ನಲ್ನಲ್ಲಿ ಬಾಬುರವರ ಮೂರು ಪ್ರಬಂಧಗಳು ಈಗಾಗಲೇ ಪ್ರಕಟವಾಗಿದೆ.

ಪ್ರಸ್ತುತ ಎಂಜಿಎಂ ಕಾಲೇಜು ಉಡುಪಿ ಇಲ್ಲಿ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Best of luck.. Dr. ಬಾಬು
- ಹೃದಯ
ಅತ್ಯಂತ ಕ್ಲಿಷ್ಟ ವಿಷಯಗಳಲ್ಲಿ ಒಂದಾದ ಸಿಂಥಟಿಕ್ ಆಂಡ್ ಬಯಲಾಜಿಕಲ್ ಸ್ಟಡೀಸ್ ಆನ್ ನೈಟ್ರೋಜನ್ ಸಲ್ಫರ್ ಆಂಡ್ ಆಕ್ಸಿಜನ್ ಕಂಟೈನಿಂಗ್ ಹೈಕ್ರೋಪೆರೋ ಸೈಕಲ್ಸ್ ವಿಷಯವಾಗಿ ಮಂಗಳೂರು ವಿವಿಗೆ ಸಲ್ಲಿಸಿದ ಮಹಾಪ್ರಬಂಧಕ್ಕೆ 'ಡಾಕ್ಟರೇಟ್' ಪದವಿ ಪಡೆಯುವ ಮೂಲಕ ಕೊರಗ ಸಮುದಾಯದಲ್ಲಿ ಡಾಕ್ಟರೇಟ್ ಪದವಿ ಪಡೆದ ಮೊದಲಿಗರೆನಿಸಿದರು.

ಅಂತರಾಷ್ಟ್ರೀಯ ಜರ್ನಲ್ನಲ್ಲಿ ಹತ್ತು ಪ್ರಬಂಧ ಹಾಗೂ ರಾಷ್ಟ್ರೀಯ ಜರ್ನಲ್ನಲ್ಲಿ ಬಾಬುರವರ ಮೂರು ಪ್ರಬಂಧಗಳು ಈಗಾಗಲೇ ಪ್ರಕಟವಾಗಿದೆ.

ಪ್ರಸ್ತುತ ಎಂಜಿಎಂ ಕಾಲೇಜು ಉಡುಪಿ ಇಲ್ಲಿ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Best of luck.. Dr. ಬಾಬು
- ಹೃದಯ



ಕೊರಗರ ಮನೆತನಗಳು ಮತ್ತು ಬರಿ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟರು, ಬಿಲ್ಲವರ ಹಾಗೆ ಕೊರಗ ಆದಿವಾಸಿ ಜನಾಂಗದಲ್ಲೂ 'ಬರಿ' ಅಥವಾ 'ಬಳಿ' ಎಂಬ ಸಾಂಸಾರಿಕ ವ್ಯವಹಾರಗಳ ಕೂಟ್ಟುಕಟ್ಟುಗಳಿರುವ ಒಳ ಪಂಗಡಗಳಿವೆ. ಸಂಸ್ಕೃತದಲ್ಲಿ ಇದನ್ನು 'ಗೋತ್ರ' ಎನ್ನುತ್ತಾರೆ. ಈ ಪಂಗಡಗಳು ತಮ್ಮ ತಮ್ಮ ಬರಿ/ಬಳಿಯ ಒಳಗೆ ಮದುವೆಯಾಗುವುದು (ಅಂದರೆ 'ಸಗೋತ್ರ ವಿವಾಹ') ನಿಷಿದ್ಧವಾಗಿದೆ. ಕಾರಣ, ಆ ಬರಿಯವರು ಮೂಲದಲ್ಲಿ ಒಂದೇ ಆಗಿರುವುದರಿಂದ, ಈ ನಿಷೇಧ ಆದಿ ಅನಾದಿ ಕಾಲದಿಂದಲೂ ಜಾರಿಯಲ್ಲಿದೆ.

ಕೊರಗರು ತಮ್ಮ ಮೂಲ ಊರಿನ ಮುಖಾಂತರವೇ ಗುರುತಿಸುವುದು ರೂಢಿಯಾದರೂ, ಆ ಮುಖಾಂತರ ಆತನ 'ಬರಿ'ಯನ್ನು ಸ್ಪಷ್ಟವಾಗಿ ಗುರುತಿಸಬಹುದು. ಆದರೂ ತಮ್ಮ ಬರಿಯನ್ನು ಹೇಳದೆ, ತಮ್ಮ ಮೂಲವನ್ನೇ ಹೇಳುವುದು ಕೊರಗರ ಹಿರಿಮೆ.

ಕೊರಗರಲ್ಲಿರುವ 'ಬರಿ' ಮತ್ತು ಅವರ ಮೂಲ ಊರಿನ ವಿವರ ಇಲ್ಲಿದೆ.
> ಪಾರ್ಡನ್ನರ್/ ಬಂಗೇರನ್ನೆರ್ (ಬಂಗೇರ) = ಕಿನ್ನಿಗೋಳಿ ಹತ್ತಿರದ 'ಐಕಳ' ಎಂಬ ಊರಿನ ಮೂಲದವರು.
> ತಡ್ಪೆನ್ನರ್/ ತಾಲಿಯಾನ (ಸಾಲಿಯಾನ್) = ಕಿನ್ನಿಗೋಳಿ ಕಬತ್ತರ್ ಹತ್ತಿರದ 'ಬಲ್ಕುಂಜೆ' ಮೂಲದವರು.
> ಕುಂದರನ್ನ (ಕುಂದರ್) = ಉಡುಪಿ ಜಿಲ್ಲೆಯ ಅಡ್ವೆ ಹತ್ತಿರದ 'ಮಜಲೊಟ್ಟು' ಮೂಲದವರು.
> ಮೂಂಕೆನ್ನೆರ್ (ಕೋಟ್ಯಾನ್) = ಪಡುಬಿದ್ರಿ ಹತ್ತಿರದ 'ಕಾಪು' ಮೂಲದವರು.
> ತಿರ್ಗೆನಕ್ಲ್/ ಸೆರಿಗೆನ್ನಾರ್ = ಕಾಪು ಹತ್ತಿರದ 'ಮಡುಂಬು' ಮೂಲದವರು.


ಇಲ್ಲಿ ಸ್ಪಷ್ಟವಾಗಿ ಹೇಳುವುದಾದರೆ ಐಕಳ, ಬಳ್ಕುಂಜೆ, ಮಜಲೊಟ್ಟು, ಕಾಪು, ಮಡುಂಬು - ಕೊರಗರ ಮನೆತನದ ಆದಿ ಕಾಲದ ಮೂಲಗಳು. ಆ ಕಾಲದಲ್ಲಿ ಬಿಳಲನ್ನು ಅರಸುತ್ತಾ, ಬೇಟೆಯಾಡುತ್ತಾ ಒಂದು ರೀತಿಯ ಅಲೆಮಾರಿ ಜೀವನ ಸಾಗಿಸುತ್ತಿದುದರಿಂದ ಮೂಲದಿಂದ ಚದುರಿ ಹೋಗಿ ಪ್ರತ್ಯೇಕ ಪ್ರತ್ಯೇಕ ಜೀವನ ಸಾಗಿಸಿದ್ದಾರೆ. ಆದರೂ ತಮ್ಮ ಮೂಲವನ್ನು ಸ್ಪಷ್ಟವಾಗಿ ಗುರುತಿಸುತ್ತಾರೆ. ಇವಿಷ್ಟು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸಾರ್ವತ್ರಿಕವಾಗಿ ಕಂಡು ಬರುವ 'ಬರಿ'ಗಳು.

ಉಡುಪಿ ಉತ್ತರದಲ್ಲಿರುವ ಅಂದರೆ ಬೈಂದೂರು, ಕೆಂಜೂರು, ಕೊಕ್ಕರ್ಣೆ ಪ್ರದೇಶದ ಕೊರಗರ 'ಬರಿ' ಬೇರೆಯೇ ಇದೆ.
ಅವುಗಳೆಂದರೆ... ಬಜೆಲ್ತರ್, ಬಿಜಿತರ್, ಮೂಂಕುತರ್, ಕುರುನಿತರ್, ಎಲ್ಕಡೆತರ್, ಹರ್ಕಜಿತರ್ ಹೀಗೆ. ಇವರ ಮೂಲ ಹುಡುಕುತ್ತಾ ಹೋದರೆ ಗೋಜಲು ಗೋಜಲಾಗಿ ತೋರುತ್ತದೆ ಮತ್ತು ಸ್ಪಷ್ಟ ಚಿತ್ರಣ ಸಿಗುವುದೇ ಇಲ್ಲ! ಇನ್ನು ಕುಂದಾಪುರ, ಉತ್ತರ ಕನ್ನಡ ಮತ್ತು ಶಿವಮೊಗ್ಗದ ಕೊರಗರ 'ಬರಿ'ಯೂ ಬೇರೆಯೇ ಆಗಿದೆ.

ಇನ್ನು ಕಾಸರಗೋಡು ಜಿಲ್ಲೆಯ ಕೊರಗರ 'ಬರಿ' ಅವರ ಮೂಲ ಊರಿನ ಹೆಸರನ್ನೇ ಹೊಂದಿರುವುದು ಬಲುದೊಡ್ಡ ಹಿರಿಮೆ. 'ಒಗಿಲಾ', 'ಇಛ್ರಾಡಿ', 'ಪೆರುವಾಯಿ', 'ಬಾಯಾರ್', 'ಚಿಪ್ಪಾರ್' ಹೀಗೆ ಐದು ಮನೆತನಗಳನ್ನು ಹೊಂದಿದ್ದು ಸುಮಾರು ಐದು ಸಾವಿರ ಜನಸಂಖ್ಯೆಯನ್ನು ಹೊಂದಿದ್ದಾರೆ.
- ಹೃದಯ


ಕೊರಗರ ಶೈಕ್ಷಣಿಕ ರಂಗದಲ್ಲೊಂದು ಉದಯಿಸಿದ ಹೊಸ ಕ್ಷಿತಿಜ!

ತೀರಾ ಇತ್ತೀಚಿನ ವರೆಗೂ, ಶೋಷಿತ ಕೊರಗ ಜನಾಂಗದ ಶೈಕ್ಷಣಿಕ ರಂಗದತ್ತ ದೃಷ್ಠಿ ಹಾಯಿಸಿದರೆ ತೀವ್ರ ನಿರಾಶೆಗೊಳಗಾಗಬೇಕಾಗುವ ಕಾಲವಿತ್ತು. ಬದಲಾವಣೆಯೆಂಬುದು ಕಾಲದ ನಿಯಮವಾದುದರಿಂದ, ಕೊರಗರ ಶೈಕ್ಷಣಿಕ ಪ್ರಗತಿಯೂ ನಿಧಾನವಾಗಿ ಆಶಾಜ್ಯೋತಿಯ ಪಥದಲ್ಲಿ ಸಾಗಲಾರಂಭಿಸಿತು. ಆ ಆಶಾಜ್ಯೋತಿಯ ಪಥದಲ್ಲಿ ಉದಯಿಸಿದ ಹೊಸ ಕ್ಷಿತಿಜವೇ ಕು. ಸ್ನೇಹ.


ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸಮೀಪದ ಉಳ್ತೂರು ಗ್ರಾಮದ ಕೆ ಸ್ನೇಹ, ದ್ವಿತೀಯ ಪಿಯುಸಿಯಲ್ಲಿ ಶೇ 93.5 ಅಂಕ ಗಳಿಸುವ ಮೂಲಕ ಕೀರ್ತಿ ಶಿಖರವೇರಿದ್ದಾಳೆ. ಕಾರ್ಕಳ ತಾಲೂಕಿನ ಚಾರಾದ ನವೋದಯ ಪ್ರೌಢಶಾಲೆಯಲ್ಲಿ ಶೇ 89 ಅಂಕಗಳೊಂದಿಗೆ ಎಸ್ಎಸ್ಎಲ್ಸಿ ತೇರ್ಗಡೆಗೊಂಡ ಸ್ನೇಹ, ಆಳ್ವಾಸ್ ಶಿಕ್ಷಣ ಪ್ರತಿಸ್ಟಾನದ ಉಚಿತ ಶಿಕ್ಷಣ ಯೋಜನೆಯಡಿ - ವಿಜ್ಙಾನ
ವಿಭಾಗಕ್ಕೆ ಪ್ರವೇಶ ಪಡೆದು ಈ ಸಾಧನೆಗೈದಿದ್ದಾಳೆ.

ಕುಂದಾಪುರದ ಕೊರಗ ಸಮುದಾಯದ ಸಂಘಟಕ ವಿ ಗಣೇಶ್ ಕೊರಗ ಮತ್ತು ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಜಯಶ್ರೀ ದಂಪತಿಯ ಪುತ್ರಿಯಾಗಿರುವ ಈಕೆ ಮುಂದೆ ವೈದ್ಯೆಯಾಗುವ ಕನಸು ಕಂಡಿದ್ದಾಳೆ. ಕಂಡ ಕನಸು ನನಸಾಗಲಿ ಎಂಬುದೇ ನಮ್ಮೆಲ್ಲರ ಬಯಕೆ.
Hats up SNEHA..
- ಹೃದಯ




ಮಿಂಚಿ ಮರೆಯಾದ ದೇಹದಾಢ್ಯ ಪಟು...

ಕೊರಗ ಸಮುದಾಯದಲ್ಲಿ ಪ್ರತಿಭೆಗಳಿದ್ದರೂ, ಎಲೆ ಮರೆಯ ಕಾಯಿಯಂತಾದವರೇ ಹೆಚ್ಚು. ಸಿಕ್ಕ ಅವಕಾಶವನ್ನು ಸದ್ಭವಕೆ ಮಾಡಿಕೊಂಡರೆ ಈ ಸಮಾಜದಲ್ಲಿ ತಾವು ಕೂಡ ಮಿಂಚಬಹುದೆಂಬುದಕ್ಕೆ ಉತ್ತಮ ನಿದರ್ಶನವೇ ಕುಮಾರ ಬಜ್ಪೆ.


ಆದಿವಾಸಿಗಳಾದ ಕೊರಗರ ದೇಹಕೃತಿಯ ಬಗ್ಗೆ ಹೇಳುವುದಾದರೆ, ಕೊರಗರು ಮೂಲತಃ ದೇಹದಾಢ್ಯರೆ! ಆದರೆ, ಆ ದೇಹದಾಢ್ಯತೆಯನ್ನು ಸದುಪಯೋಗಪಡಿಸಿಕೊಂಡವರೇ - ನಾಗಪ್ಪ ಮತ್ತು ಸಂಕಿ ದಂಪತಿಯ ಪುತ್ರರಾಗಿರಾಗಿರುವ - ಕೆ. ಕುಮಾರ್ ಗುಂಡಾವು ಪದವು ಬಜ್ಪೆ. ಇವರು ಸಿಂಗಾಪುರದಲ್ಲಿ ನಡೆದ ದೇಹದಾಢ್ಯ ಸ್ಪರ್ಧೆಯಲ್ಲೂ ಕೂಡ ಭಾಗವಹಿಸಿ ಬಂದಿರುವ ಕೊರಗ ಜನಾಂಗದ ಏಕೈಕ ಪಟುವಾಗಿರುತ್ತಾರೆ. ಇವರು ಖ್ಯಾತ ದೇಹದಾಢ್ಯಪಟು ರೈಮನ್ ಡಿಸೋಜರ ಆಪ್ತ ಸ್ನೇಹಿತರಾಗಿದ್ದರು. ದಿನಾಂಕ 16 ಡಿಸೆಂಬರ್ 2007ರಂದು (ತಮ್ಮ 45ನೇ ವಯಸ್ಸಿನಲ್ಲಿ) ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
- ಹೃದಯ

ಆದಿವಾಸಿಗಳಿಗೆ ತಾಯ ಹಾಲಿಗಿಂತಲೂ 'ಇಪ್ಪೆ' ಹಣ್ಣಿನ ರಸವೇ ಶ್ರೇಷ್ಠ!
ನೀವಿದನ್ನು ನಂಬಲೇಬೇಕು! HONEY TREE ಎಂದು ಇಂಗ್ಲೀಷ್ ನಲ್ಲಿ ಕರೆಯಲ್ಪಡುವ ಮಾದಕ ಅಂಶಗಳುಳ್ಳ, ಆದಿವಾಸಿಗಳು ಪೂಜಿಸುವ ಒಂದು ಪವಿತ್ರ ಮರ. BUTTER TREE ಎಂದೂ ಕರೆಯುತ್ತಾರೆ. ಕನ್ನಡದಲ್ಲಿ ಇಪ್ಪೆ ಮರ ಎಂದು, ತಮಿಳಿನಲ್ಲಿ ಇಲ್ಲಿಪ್ಪೆ, ತೆಲುಗಿನಲ್ಲಿ ಇಪ್ಪಿ ಎಂದು, ಹಿಂದಿಯಲ್ಲಿ ಮೊಹ್ವ, ಸಂಸ್ಕ್ರತದಲ್ಲಿ ಮಧೂಕ, ಮಂಗಳೂರು ಮತ್ತು ಉಡುಪಿ ಆಸುಪಾಸಿನಲ್ಲಿ 'ನಾನಿಲ್ ಮರ' ಎಂದೂ ಕರೆಯುತ್ತಾರೆ. ಮೋಹ, ಮಹಲ, ಇಲುಪ, ಪೂನಮ, ಮಹುವಾ ಎಂದೂ ನಾನಾ ಭಾಷೆಗಳಲ್ಲಿ ಕರೆಯುವುದುಂಟು. ಇದರ ವೈಜ್ಙಾನಿಕ ಹೆಸರು 'ಬ್ಯಾಸ್ಸಿಯ ಲ್ಯಾಟಿಫೂಲಿಯಾ'. ಇದು 'ಸಪೋಟೇಸಿ' ಕುಟುಂಬ ವರ್ಗಕ್ಕೆ ಸೇರಿದೆ.

ಇದು ಎಲೆ ಉದುರುವ ಮರದ ಜಾತಿಗೆ ಸೇರಿದೆ. ಸುಮಾರು 12 ರಿಂದ 20 ಮೀ ಎತ್ತರ ಬೆಳೆಯುವ ಇಪ್ಪೆ ಮರ, ಒಣ ಹವೆ ಮತ್ತು ತೇವ ಹವೆಯ ಕಾಡುಗಳಲ್ಲಿ ಬಿಡಿ ಬಿಡಿಯಾಗಿ ಬೆಳೆಯುತ್ತದೆ. ಕರ್ನಾಟಕದಲ್ಲಿ ಪಶ್ಚಮ ಘಟ್ಟದ ಕಾಡು ಹೊಳೆಯ ಸಮೀಪದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ತೊಗಟೆ ತಿಳಿ ಕಪ್ಪು ಅಥವಾ ಬೂದು ಬಣ್ಣದಿಂದ ಕೂಡಿದ್ದು, ಗೆಲ್ಲುಗಳು ಚದುರಿ ಚದುರಿದಂತೆ ಇದ್ದು ನೋಡಲು ತುಂಬಾ ಆಕರ್ಷಕವಾಗಿರುತ್ತದೆ. 


ಚಳಿಗಾಲ ಬಂತೆಂದರೆ ಈ ಮರ ವಿಶಿಷ್ಟವಾದ ಕಟು ಮಧುರ ಹೂವಿನ ಪರಿಮಳವನ್ನು ಸೂಸುತ್ತದೆ. ನೇರವಾದ ಕಾಂಡದ ಮೇಲೆ ಕೊಂಬೆಗಳು ಮತ್ತು ತುದಿ ಚೂಪಾಗಿರುವ ಎಲೆಗಳು - ಛತ್ರಿಗಳು ಬಿಡಿಸಿಟ್ಟಂತೆ ಹರಡಿಕೊಂಡಿರುತ್ತದೆ. ವರ್ಷಕ್ಕೊಮ್ಮೆ ಎಲೆ ಉದಿರುವ ಈ ಮರ, ಹೊಸ ಚಿಗುರು ಬಂದಾಗ ತಾಮ್ರಗೆಂಪು ಬಣ್ಣದಿಂದ ನಳನಳಿಸುತ್ತದೆ. ಈ ಸಮಯದಲ್ಲಿ ಬಸ್ತಾರ್ ನ ಆದಿವಾಸಿಗಳು ಮತ್ತು ಮಧ್ಯಪ್ರದೇಶದ ಗೊಂಡ ಆದಿಮಾಸಿಗಳು ಆ ಮರವನ್ನು ಪೂಜಿಸುತ್ತಾರೆ.

ಹೊಸ ಚಿಗುರು ಮಾಗಿ ಎಲೆ ದಪ್ಪಗಾದ ಕೂಡಲೇ ಮರ ಹೂ ಬಿಡಲು ಆರಂಭಿಸುತ್ತದೆ. ಈ ಹೂಗಳು ಮಾಸಲು ಬಣ್ಣವನ್ನು ಹೊಂದಿದ್ದು, ಕೊಂಬೆಯ ತುದಿಯಲ್ಲಿ ಜೋತು ಬಿದ್ದಿರುತ್ತದೆ. ಈ ಹೂವಿನ ಪುಷ್ಪಪಾತ್ರೆಯ ಭಾಗ ಹಣ್ಣಾಗಿ ತಿನ್ನಲು ರುಚಿಯಾಗಿರುತ್ತದೆ. ಹಕ್ಕಿಗಳು ಮತ್ತು ಕಾಡು ಪ್ರಾಣಿಗಳಿಗೂ ಈ ಹಣ್ಣು ಬಹಳ ಪ್ರಿಯ. ಇಪ್ಪೆ ಹಣ್ಣಿನಿಂದ ಆದಿವಾಸಿಗಳು ಹೆಂಡವನ್ನು ತಯಾರಿಸುತ್ತಾರೆ. ಇದರ ಬೀಜದಿಂದ ಎಣ್ಣೆ ತೆಗೆದು ಅಡುಗೆಗೆ ಉಪಯೋಗಿಸುತ್ತಾರೆ. ಕಾಡಿನಲ್ಲಿ ಆಹಾರಕ್ಷಾಮ ಉಂಟಾದಾಗ ಆದಿವಾಸಿಗಳಿಗೆ ಈ ಮರದ ಹೂವು ಹಣ್ಣುಗಳೇ ಆಹಾರ. ಗೊಂಡ ಆದಿವಾಸಿಗಳಲ್ಲಿ ಚಳಿಗಾಲದಲ್ಲಿ ಮಗು ಜನಿಸಿದರೆ, ತಾಯ ಹಾಲಿಗೂ ಮೊದಲು ಇಪ್ಪೆ ಹಣ್ಣಿನ ರಸವನ್ನು ನೆಕ್ಕಿಸುತ್ತಾರೆ. ಯಾಕೆಂದರೆ ಅದು ಆದಿವಾಸಿಗಳ ಪಾಲಿನ ಪವಿತ್ರ ಮತ್ತು ಆರಾಧನೀಯ ಮರ.
- ಹೃದಯ

ಕೊರ್ರೆ ಭಾಷೆಯಲ್ಲಿ ದಿನಗಳು ಮತ್ತು ವಿಷೇಶಗಳು

ಕೊರಗರಲ್ಲಿ ಪ್ರತಿಯೊಂದು ಭಿನ್ನ ಆಚಾರ ವಿಚಾರಗಳಿದೆ. ಹಾಗೆಯೇ, ಕೊರ್ರೆ (ಕೊರಗ) ಭಾಷೆ ಕೂಡ ವಿಶಿಷ್ಟವೇ. ಭಾಗಶಃ ಅವನತಿಯ ಅಂಚಿನಲ್ಲಿರುವ ಕೊರಗ ಭಾಷೆಯಲ್ಲಿ ದಿನಗಳಿಗು ಕೂಡಾ ಬೇರೆಯದೇ ಆದ ಪದಗಳನ್ನು ಉಚ್ಛರಿಸಲಾಗುತ್ತದೆ. ಆ ಪದಗಳು ಮತ್ತು ಅವುಗಳ ವಿಷೇಶಗಳನ್ನಿಲ್ಲಿ ಪಟ್ಟಿಮಾಡಿದ್ದೇನೆ...

ಆದಿತ್ಯವಾರ = ಪೂಜೆದ ದಿನ
ದಿನ ವಿಷೇಶ : ಕ್ರಿಶ್ಚನ್ನರು ಆದಿತ್ಯವಾರದ ದಿನ ಪೂಜೆಗೆ ಹೋಗುತ್ತಿದುದರಿಂದ ಕೊರಗರು ಆ ದಿನವನ್ನ 'ಪೂಜೆದ ದಿನ' ಎನ್ನುತ್ತಿದ್ದರು!!

ಸೋಮವಾರ = ದೇವೆರ್ ದಿನ
ದಿನ ವಿಷೇಶ : ಪ್ರತೀ ಸೋಮವಾರ ದಿನ ದೇವಸ್ಥಾನಗಳಲ್ಲಿ ಸಮರಾಧನೆ ನಡೆಯುತ್ತಿದ್ದುದರಿಂದ, ಕೊರಗರು ಆ ದಿನವನ್ನು 'ದೇವೆರ್ ದಿನ' ಎನ್ನುತ್ತಿದ್ದರು.

ಮಂಗಳವಾರ = ಗದಿಗೆ ದಿನ
ದಿನ ವಿಷೇಶ : ಈ ದಿನ ಕಾಪು ಮಾರಿಗುಡಿಯಲ್ಲಿ ಗದ್ದಿಗೆ ಇಡುವ ದಿನ. ಹಾಗಾಗಿ ಕೊರಗರು ಮಂಗಳವಾರವನ್ನು 'ಗದಿಗೆ ದಿನ' ಎನ್ನುತ್ತಿದ್ದರು.

ಬುಧವಾರ = ಪಕ್ಕಿ ದಿನ
ದಿನ ವಿಷೇಶ : ಈ ದಿನದ ಗೌರವ ಹಕ್ಕಿಗಳಿಗೆ.

ಗುರುವಾರ = ಕೊದಂಟಿ ದಿನ
ದಿನ ವಿಷೇಶ : ತೆಂಗಿನ ಕಾಯಿಯ ತೊಗಟೆಯಿಂದ ಹಗ್ಗ ತಯಾರಿಸಲು ಕೊರಗರು ಗುರೆಜಿದ ಮರದ ದಂಡನ್ನು ಉಪಯೋಗಿಸುತ್ತಿದ್ದರು. ಹಾಗಾಗಿ, ಗುರುವಾರಕ್ಕೆ 'ಕೊದಂಟಿ ದಿನ' ಎನ್ನುತ್ತಾರೆ. 'ಕೊದಂಟಿ' ಎಂದರೆ ದಂಡು (ದಪ್ಪಗಿನ ಮರದ ತುಂಡು) ಎಂದು ಅರ್ಥ.

ಶುಕ್ರವಾರ = ಸಂತೆ ದಿನ
ದಿನ ವಿಷೇಶ : ಪ್ರತೀ ಶುಕ್ರವಾರ ಕಾಪು ಪೇಟೆ ಮತ್ತು ಮೂಡಬಿದಿರೆ ಪೇಟೆಗಳಲ್ಲಿ ಸಂತೆ ವ್ಯಾಪಾರ ನಡೆಯುತ್ತಿದುದರಿಂದ, ಕೊರಗರ ಆ ದಿನವನ್ನು 'ಸಂತೆ ದಿನ' ಎನ್ನುತ್ತಿದ್ದರು!


ಶನಿವಾರ = ಮರ ಎಲ್ತ ದಿನ
ದಿನ ವಿಷೇಶ : ಅಳಿಲುಗೆ ಕೊರಗರು 'ಮರ ಎಲಿ' ('ಮರದ ಇಲಿ' ಎಂದು ಅರ್ಥ) ಎನ್ನುತ್ತಿದ್ದರು. ಅಷ್ಟೇ ಅಲ್ಲ ಶನಿವಾರದ ದಿನಕ್ಕೆ 'ಮರ ಎಲಿತ ದಿನ / ಮರ ಎಲ್ತ ದಿನ ' ಎನ್ನುತ್ತಿದ್ದರು.

ಇವಿಷ್ಟು ವಾರದ ದಿನಗಳು ಮತ್ತು ಆ ದಿನದ ವಿಷೇಶಗಳಾದರೆ, ಇನ್ನು ಮಗು ಸೋಮವಾರ ಜನಿಸಿದರೆ ಗಂಡು ಮಗುವಿಗೆ 'ಚೋಮ, ತೋಮ' ಎಂದು, ಹೆಣ್ಣು ಮಗುವಾದರೆ 'ತೋಮು, ಚೋಮು' ಎಂದು,
ಮಂಗಳವಾರ ಜನಿಸಿದ ಗಂಡು ಮಗುವಿಗೆ 'ಅಂಗರೆ, ಅಂಗರ' ಎಂದು ಹೆಣ್ಣು ಮಗುವಿಗೆ 'ಅಂಗುರಿ' ಎಂದು,
ಬುಧವಾರ ಜನಿಸಿದ ಗಂಡು ಮಗುವಿಗೆ 'ಬೂದೆ' ಎಂದು, ಹೆಣ್ಣು ಮಗುವಿಗೆ 'ಬೂದು' ಎಂದು,
ಗುರುವಾರ ಜನಿಸಿದ ಗಂಡು ಮಗುವಿಗೆ 'ಗುರುವೆ, ಗುರುವ' ಎಂದು, ಹೆಣ್ಣು ಮಗುವಿಗೆ 'ಗುರ್ಬಿ' ಎಂದು,
ಶುಕ್ರವಾರ ಜನಿಸಿದ ಗಂಡು ಮಗುವಿಗೆ 'ತುಕ್ರ, ತುಕ್ರೆ' ಎಂದು, ಹೆಣ್ಣು ಮಗುವಿಗೆ 'ತುಕ್ರು'
ಶನಿವಾರ ಜನಿಸಿದ ಗಂಡು ಮಗುವಿಗೆ 'ತನಿಯ, ಚನಿಯ' ಹೆಣ್ಣುಮಗುವಿಗೆ 'ಚನಿಯಾರು, ತನಿಯಾರು'
ಆದಿತ್ಯವಾರ ಹುಟ್ಟಿದ ಗಂಡು ಮಗುವಿಗೆ 'ಐತೆ', ಹೆಣ್ಣುಮಗುವಿಗೆ 'ಐತು' ಎಂದು ಹೆಸರಿಡುತ್ತಿದ್ದರು. ಇದು ಮತ್ತೊಂದು ದಿನ ವಿಷೇಶವಷ್ಟೆ!
- ಹೃದಯ


ಕೊರಗರು ತಯಾರಿಸುವ ಕಾಡು ಬಿಳಲಿನ ಪರಿಕರಗಳು..
ಕಾಡು ಬಳ್ಳಿಯಲ್ಲಿ ಅದೆಷ್ಟೋ ಪ್ರಭೇದಗಳೋ, ಕೊರಗರು ಅದರಿಂದ ತಯಾರಿಸುವ ಪರಿಕರಗಳು ಕೂಡಾ ಅಷ್ಟೇ ವಿಧಗಳು! ಕಾಡಿನೊಳಗಿನ ಸ್ವಚ್ಛಂದ ಬದುಕೇ, ಆ ಸುಂದರ ಪರಿಕರಗಳನ್ನು ಮಾಡುವ ಪಾಠ ಕಲಿಸಿದೆ. ಬಿಳಲುಗಳನ್ನು ಹದಗೊಳಿಸವ ಕಸುರಿ, ನೇಯುವ ನೈಪುಣ್ಯತೆ ಕಾಡಿನ ಮಕ್ಕಳಿಗೆ ಮಾತ್ರ ಸಾಧ್ಯ. ಅದರ ಗಟ್ಟಿತನಕ್ಕೆ, ಆಕರ್ಷಕ ನೆಯ್ಗೆಗೆ ಮತ್ತು ಬಹುಪಯೋಗಕ್ಕೆ ಮನಸೋಲದವರೇ ಇಲ್ಲ. ತುಳುನಾಡಿನ ಕೃಷಿಕರಿಗಂತೂ ಕೊರಗರು ತಯಾರಿಸಿದ ಬಿಳಲಿನ ಪರಿಕರಗಳು ಬೇಕೇ ಬೇಕು. ಆದರೆ ಈಗ ಅದರ ಬದಲು ಪ್ಲಾಸ್ಟಿಕ್ ಮತ್ತು ರಬ್ಬರ್ ದಾಂಗುಡಿ ಇಟ್ಟಿದ್ದು ಕೊರಗರ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಇಲ್ಲದಂತಾಗಿದೆ.

ಕಾಡಿನಲ್ಲಿ ಹೇರಳವಾಗಿ ದೊರಕುವ ಬಿಳಲುಗಳನ್ನು ಅದರ ಬುಡದಿಂದ ಒಂದು ಕೈ ದೂರ ಅಳತೆ (ಅಂದರೆ ಒಂದು ಅಡಿ) ದೂರದಿಂದ ಕತ್ತರಿಸುವುದು ಕೊರಗರ ಸಂಪ್ರದಾಯ. ಯಾಕೆಂದರೆ ಆ ಬಿಳಲು ಮತ್ತೊಮ್ಮೆ ಚಿಗುರು ಬರಬೇಕುಂಬುದೇ ಅವರ ಬಾಳಿನ ನಿಯಮ. ಅದು ತಮ್ಮಿಂದಾಗಿ ನಿರ್ನಾಮ ಆಗಲೇಬಾರದು ಎಂಬುದೇ ಆಶಾಭಾವ. ಆ ಬಿಳಲುಗಳ ಪ್ರಾದೇಶಿಕ ಹೆಸರು ಮತ್ತು ಅದರಿಂದ ಕೊರಗರು ತಯಾರಿಸುತ್ತಿದ್ದ ಉತ್ಪನ್ನಗಳ ಒಂದು ಪಟ್ಟಿ ನಿಮಗಾಗಿ..

ಇಲ್ಲ ಬೂರು : ತಟ್ಟಿ ಕುಡುಪು (ಅಂದರೆ ಪಾತ್ರೆಯಿಂದ ಅನ್ನ ಸೋಸುವ ಸಾಮಾಗ್ರಿ), ಹಾಲಿನ ಅಳತೆಗೋಲು, ಇಡ್ಲಿ ಮಾಡುವ ಪಾತ್ರೆ, ಹೂ ದಾನಿಗಳು ಮತ್ತು ಅಲಂಕಾರಿಕ ವಸ್ತುಗಳು

ಬಿದಿರು : ಗೆರಸೆ ಮತ್ತು ಬುಟ್ಟಿ

ಪಾಂಡಿಲ್ದ ಬೂರ್ : ಗೊಬ್ಬರ ಹೇರುವ ಬುಟ್ಟಿ

ಎಲಿ ಬೂರು : ಸುಮಾರು ಇಪ್ಪತ್ತಕ್ಕೂ ಹೆಚ್ಚು ಆಕಾರದ ಬುಟ್ಟಿಗಳನ್ನು ತಯಾರಿಸಲಾಗುತ್ತದೆ. ಇದರಿಂದ ಬುಟ್ಟಿಗಳು ತುಂಬಾ ಗಟ್ಟಿ ಮುಟ್ಟಾಗಿದ್ದು, ಬಾಳಿಕೆಬರುವಂತದಾಗಿದೆ.

ನೆಡಿಲ್ : ಮರದಂತೆ ಬೆಳೆಯುವ ಇದನ್ನು ಅಡ್ಡಲಾಗಿ ಸಿಗಿದು, ತಮಗೆ ಬೇಕಾದಂತೆ ಹದಗೊಳಿಸುವುದು ಜಾಣ್ಮೆಯ ಕೆಲಸ. ಇದರಿಂದ ಅನ್ನ ಹಾಕಿಡುವ ಬುಟ್ಟಿಗಳನ್ನು ನೇಯುತ್ತಾರೆ. ಇದರ ಬುಟ್ಟಿ ತಿಳಿ ಗುಲಾಬಿ ಬಣ್ಣದಿಂದಾಗಿ ಆಕರ್ಷಕವಾಗಿ ಕಾಣುತ್ತದೆ ಮತ್ತು ಹೆಚ್ಚು ಬಾಳಿಕೆ ಬರುತ್ತದೆ.

ಬೆತ್ತ : ತೊಟ್ಟಿಲು, ಪಟ್ಟಿಗೆ, ಅಜ ಕುರುವೆ (ಒಂದು ಕಳಹ ಅಕ್ಕಿ ಹಾಕಿಡಬಹುದಾದ - ನಾಲ್ಕು ಮೂಲೆಯಲ್ಲಿ ನಾಲ್ಕು ಕೈಗಳಿರುವ ಹೆಡಿಗೆ.)

ಪರಂಟಲ್ಗೆದ ಬೂರು ಮತ್ತು ಮಾದಿರ್ದ ಬೂರು : ದೊಡ್ಡದಾದ ಆಕಾರದ ಗೃಹಪಯೋಗಿ ಬುಟ್ಟಿಗಳು.

ಮದೊಡಿ : ಹೆಡಿಗೆಗಳನ್ನು ತಯಾರಿಸುತ್ತಿದ್ದರು. ಅತೀ ಹೆಚ್ಚು ಬಾಳಿಕೆ ಬರುವಂತದ್ದು.

ಮಿಟಯ್ದ ಬೂರು : ತೆರಿಯೆ (ಅಡುಗೆ ಮಾಡುವ ಪಾತ್ರೆಗಳನ್ನು ಇಡಲು ಉಪಯೋಗಿಸುವ ಸಣ್ಣದಾದ ವೃತ್ತಾಕಾರದ ವಸ್ತು)

ಕೇದಗೆಯ ಗಿಡದ ಬೇರಿನಿಂದಲೂ ಅಗಲವಾದ ಮತ್ತು ಗಟ್ಟಿ ಮುಟ್ಟಾದ ಹೆಡಿಗೆಗಳನ್ನು ತಯಾರಿಸಲಾಗುತ್ತದೆ. ಸುಮಾರು ನಲ್ವತ್ತು ವಿವಿಧ ಆಕಾರಗಳಲ್ಲಿ ತಯಾರಿಸಲಾಗುತ್ತಾರದರೂ, ಪ್ರತಿಯೊಂದರ ಅಳತೆಗೋಲುಗಳು ಸರಿ ಪ್ರಮಾಣದಲ್ಲಿದ್ದು ಕೊರಗರ ವಿಷೇಶ ಮತ್ತು ಬಾರ್ಕೂರಿನಿಂದ ಮಂಗಳೂರಿನವರೆಗೂ - ಎಲ್ಲಿಯೇ ಯಾರೇ ಮಾಡಿದರೂ ಅದರಲ್ಲಿ ವ್ಯತ್ಯಾಸ ಕಾಣಲಾಗದು!! ದುರದೃಷ್ಟವಶಾತ್ ಈಗ ಅದ್ಯಾವುದೇ ಪರಿಕರಗಳಿಗೂ ಯಾವುದೇ ಬೇಡಿಕೆ ಇಲ್ಲ.
- ಹೃದಯ

ಭಾನುವಾರ, ಆಗಸ್ಟ್ 3, 2014

ಜಾನಪದ ಜ್ಞಾನದಾರಿಯ ಹುಡುಕಾಟ

ಡಾ|| ರಾಜೇಗೌಡ ಹೊಸಹಳ್ಳಿ


ಜಾನಪದವೆಂಬುದು ಕೇವಲ ಜನಪದರ ಬದುಕೆ? ಹೌದಾಗಿದ್ದರೆ ಅದಾದರೂ ಸರಿಯಿದೆಯೆ? ಇಲ್ಲವಾದರೆ ಮಾನವ ಬದುಕುತ್ತಿರುವ ಪರಿಸರವನ್ನಾದರೂ ಅವನಿಗೆ ಸಹಕಾರವೆಂಬಂತೆ ಬಳಸಿಕೊಳ್ಳುತ್ತಿದ್ದಾನೆಯೇ? ಈ ಪ್ರಶ್ನೆಗಳಿಗೆದುರಾಗಿ ನಾವು ಇಂದು ಜಗದ ಜಾನಪದವನ್ನು ಹುಡುಕಬೇಕಾಗಿದೆ. ಇಂದು ಲಿಬಿಯಾದಲ್ಲಿ ಅಂದು ಪ್ಯಾಲೇಸ್ತೇನಿನಲ್ಲಿ ಆಧುನಿಕ ಮಾನವ ಏನು ಮಾಡಿದ್ದಾನೆ. ಮಾಡುತ್ತಿದ್ದಾನೆ. ಯಾತಕ್ಕಾಗಿ ಹೀಗೆ ಮಾಡುತ್ತಿದ್ದಾನೆ. ಪ್ರಕೃತಿ ಮೈಕೊಡವಿದರೆ ಹೊಟ್ಟಿನೋಪಾದಿಯಲ್ಲಿ ಉದುರುವ ಈಗಿನ ಜಪಾನ್ ನಮ್ಮ ಕಣ್ಣ ಮುಂದಿಲ್ಲವೆ! ಹೆನ್ರಿ ಡೇವಿಡ್ ಥೋರೋ ಹತ್ತೊಂಭತ್ತನೇ ಶತಮಾನದ ಅಮೇರಿಕಾದ ಮಹಾ ಮೇಧಾವಿ ಲೇಖಕ. ಮೆಕ್ಸಿಕನ್ನರ ಮೇಲಿನ ದೌರ್ಜನ್ಯದ ವಿರೋಧಕ್ಕಾಗಿ; ಬೇಕಂತಲೇ ತಾನು ಸುಂಕ ಕಟ್ಟದೆ ಒಂದು ದಿನ ಜೈಲನ್ನು ಸೇರಿದ. ಅವನನ್ನು ಪ್ರಿಯ ಮಿತ್ರನೊಬ್ಬ ನೋಡಿ:- Henry why are you here? ಎಂದು ಚಕಿತನಾದ. ಅದಕ್ಕೆ ಥೋರೋ Why are you not here? ಎಂದು ಕೇಳಿದ. ಇಂಥಾವನು ಬರೆದದ್ದು Essay on civil desobedience
ಕೃಷಿ ಮಾಡಿದ ಹೊಲಗಳನ್ನು ತಾನಾಗಿ ಬೆಳೆದ ಹುಲ್ಲುಗಾವಲು ಕಾಡುಗಳನ್ನು ಸೂರ್ಯನು ಭೇದ ಭಾವವಿಲ್ಲದೆ ನೋಡುತ್ತಾನೆ ಎಂಬುದನ್ನು ನಾವು ಮರೆತುಬಿಡುತ್ತೇವೆ.
ತನಗೆ ಹಸಿವಾದಾಗ ಹೋಗಿ ಸ್ವತಂತ್ರವಾಗಿ ಹಣ್ಣು ಕಿತ್ತುಕೊಳ್ಳುತ್ತಿದ್ದವನು ಇಂದು ರೈತನಾಗಿದ್ದಾನೆ. ನೆರಳಿಗಾಗಿ ಮರವನ್ನಾಶ್ರಯಿಸುತ್ತಿದ್ದವನು ಇಂದು ಗೃಹಸ್ಥನಾಗಿದ್ದಾನೆ. ಈ ಮೇಲಿನ ಥೋರೋ ಮಾತುಗಳಲ್ಲಿ ಎರಡು ಸಂಗತಿಗಳಿವೆ. ಮೊದಲನೆಯದು ನಾವು ಹರಿದು ತಿನ್ನುತ್ತಿರುವ ಪರಿಸರ ಜನಪದ. ಎರಡನೆಯದು ಕೃಷಿ ಜಾನಪದದಿಂದ ಯಜಮಾನಿಕೆ ಜಾನಪದದ ಕಡೆಗೆ ಒಲಿದ ಮಾದರಿ. ವಾಲ್ಡನ್ ಎಂಬ ಸರೋವರ ತೀರದಲ್ಲಿ ತಾನೇ ಗುಡಿಸಲು ಕಟ್ಟಿಕೊಂಡು ತನಗಾಗುವಷ್ಟು ಬೆಳೆದುಕೊಂಡು ಥೋರೋ ಸತ್ಯಾನ್ವೇಷಣೆಯಲ್ಲಿ ತೊಡಗಿದ್ದ. ಹೀಗೆಯೇ ಗಾಂಧಿ ಕೂಡ ಮಹಾತ್ಮನಾಗಿದ್ದು ಸಬರೀಮತಿ ತೀರದಲ್ಲಿ ಸತ್ಯಾನ್ವೇಷಣೆಗೆ ಸ್ಥಿರೀಕರಿಸಿಕೊಂಡಿದ್ದು ಇಂದು ಚಾರಿತ್ರಿಕ ಅಂಶಗಳು. ಚರಿತ್ರೆಯು ವರ್ತಮಾನಕ್ಕೆ ತಿಳಿವಳಿಕೆಯಾಗಬೇಕು. ಅದು ಬಿಟ್ಟು ಇಂದು ಆಧುನಿಕ ಆಶ್ರಮ ತೀರದಲ್ಲಿರುವ ಬಾಬಾಗಳು ಡೋಂಗಿಗಳು ಏನೇನು ಮಾಡುತ್ತಿದ್ದಾರೆ! ಶ್ರೀಕೃಷ್ಣನು ಹೆಣ್ಣನ್ನು ಗೌರವದಿಂದ ಕಂಡವನು ಎಂಬುದನ್ನು ಮರೆತು ಲಘುತ್ವಕ್ಕಿಳಿಸಿ ಹಾದರೋತ್ಸಾಹಕ್ಕೆ ಅವನ ಲೀಲೆಯನ್ನು ಬಳಸಿಕೊಳ್ಳುತ್ತಿದ್ದಾರೆ.

  ದಿನ ಬೆಳಗಾದರೆ ನಮ್ಮ ಗೊಂಬೆರಾಮರ ಪವಿತ್ರ ಸ್ಥಾನದಲ್ಲಿ, ದೆವ್ವನಂತಹ ಸಾಧು ಸನ್ಯಾಸಿಗಳು ಖಿ.ಗಿ ಮುಂದೆ ಕುಳಿತು ದೈತ್ಯಪುರಾಣ ಹೇಳುತ್ತಾರೆ. ಇವರೇ ದ್ವೈತ ಹೇಳುವ ನಿಜವಾದ ರಕ್ಕಸರು. ಇಲ್ಲದ ರಾಹುಕೇತು ತಂದು ಗುಮ್ಮನಾಟವಾಡಿಸುತ್ತಾರೆ. ನಿಜದ ನಾಗರ ಕಂಡರೆ ಬೆದರುವ ಇವರು ನಾಗರ ಕಲ್ಲುಗಳ ಮುಂದೆ ಪುಂಗಿ ಊದುತ್ತಾರೆ. ತಾವು ಉಂಡ ಎಲೆಗಳ ಮೇಲೆ ಮೂಢರ ಉರುಳಲು ಬಿಟ್ಟು ಎಣೆಯಾಟ ನೋಡುತ್ತಾರೆ. ಹೆಗ್ಗೋಡಿನ ಅಕ್ಷರನಂತವರೂ ವೈದೇಹಿಯಂತವರೂ ಇಂಥಾದನ್ನು ಮಾಧ್ಯಮದವರೂ ಸೇರಿದಂತೆ ಪೋಷಿಸುವುದು ಅಕ್ಷರಸ್ಥರಿಗೊದಗಿದ ದುರಂತ. ಗ್ರಾವಿಣ-ನಗರ ಸಮಾಜಗಳೆರಡೂ ಇಂಥ ಆಧುನಿಕ ಮನುಗಳಿಂದ ಎಚ್ಚರಿರಬೇಕು. ಯಾವಾಗಲೂ ಚರಿತ್ರೆ ಜನಪದೀಯ ಸಂಸ್ಕೃತಿಯ ಮೇಲೆ ಮನೆಕಟ್ಟಿಕೊಳ್ಳಬೇಕು. ಗವಿಯೊಳಗೆ ಹಕ್ಕಿಗಳು ಹಾಡುವುದಿಲ್ಲ. ಪಾರಿವಾಳಗಳು ಗೂಡುಗಳೊಳಗೆ ಕುಳಿತು ಶಾಂತಿ ಸಾರುವುದಿಲ್ಲ. ತಿಳಿವಳಿಕೆ ನೀಡುವವನು ವ್ಯಾಪಾರೀಕರಣಕ್ಕೆ ಇಳಿದರೆ ಏನು ಮಾಡಬೇಕು! ನಾವಾಗಲೀ ನಮ್ಮ ಪೂರ್ವಜರಾಗಲೀ ಅಸ್ತಿಪಂಜರಗಳಲ್ಲಿ ಬೇರೆ ಬೇರೆಯಲ್ಲ. ಅಂದು ಆರ್ಯಮೂಲದಲ್ಲಿ ಬಂದು ಅವತರಿಸಿ ಸಮಾಜವನ್ನು ಅದೋಗತಿಗಿಳಿಸಿದ ರೀತಿನೀತಿಗಳೇ ಇಂದು ಪುನಾರವತಾರ ತಾಳುತ್ತಿವೆ. ಜ್ಞಾನ ವಿಜ್ಞಾನ ಬೇರೆ ಬೇರೆಯಲ್ಲ. ವಿಜ್ಞಾನವು ಜ್ಞಾನದ ಮೇಲೆ ನಿಂತಿದೆ. ಜಾನಪದ ಜ್ಞಾನದಾರಿಯು ಇದೆಲ್ಲದರ ಮೇಲೆಯೇ ಸಾಗಬೇಕಿದೆ. 

ನಮ್ಮ ಗ್ರಾವಿಣರಾಗಲೀ ನಗರೀಕರಣಗೊಂಡವರಾಗಲೀ ಇಂದು ಸರಸರನೆ ಜಾರುತ್ತಿದ್ದಾರೆ. ಈ ಜಾರುವಿಕೆ ಎತ್ತ ಸಾಗುತ್ತಿದೆ ಎಂಬುದರ ಮೇಲೆ ನಮ್ಮ ಜನಪದರ ಬದುಕು ನಿಂತು ಅವಲೋಕಿಸಬೇಕಿದೆ. ಗಂಗಾಜಲ ಇಂದು ಪನ್ನೀರಲ್ಲ. ಬೆಂಗಳೂರಿನ ವೃಷಭಾವತಿಯಿರಲಿ, ಅರ್ಕಾವತಿಯಿರಲಿ ತಲಕಾವೇರಿಯೇ ಇಂದು ಅಂತಂತರಿಸಿ ಹೋಗುತ್ತಿದ್ದಾಳೆ. ಅಶೋಕನ ಕಾಲದ ಮರಗಳು ಉರುಳುತ್ತಿವೆ. ಬ್ರಿಟಿಷರ ಕಾಲದ ರೈಲುಗಳು ತಾರಾಡುತ್ತಿವೆ. ಪುಷ್ಟಕವಿಮಾನಗಳು ಸ್ವಿಸ್ ದೇಶದ ಕಡೆಗೆಲ್ಲಾ ಹಾರುತ್ತಿವೆ. ಜನಪದರ ಬದುಕು ’ಕದ್ದು ತಂದ ಕುರಿಬಾಡು ಊರಿಗೆಲ್ಲಾ ಪರೇವು’ ಎಂಬಂತಾಗಿದೆ. ಇದೆಲ್ಲದರ ನಡುವೆ ಅನಕ್ಷರಸ್ಥರು ಅಕ್ಷರಸ್ಥರೆಂಬ ಹುಡುಕಾಟದ ಪರಿಸ್ಥಿತಿ ಈಗಿಲ್ಲ. ಗ್ರಾವಿಣ ಕೃಷಿ ನಿಂತು ಹೋಗುತ್ತಿದೆ. ನಗರದ ಸೂರುಗಳು ಗಬ್ಬು ನಾರುತ್ತಿವೆ. ಇದರ ಸಾಮರಸ್ಯಕ್ಕಾಗಿ ಈಗ ಚಿಂತನೆಗಳಾಗಬೇಕಿವೆ.  

ಜನಪದ ಹಾಡು ಇಂದು ಕೇವಲ ಹಾಡಲ್ಲ. ಹಳ್ಳಿಯ ಹೆಣ್ಣುಮಗಳು ಹೇಳುವಂತೆ ’ಕಣ್ಣೀರ ಹನಿ’. ಹೆಣ ಸುಡಲಿಕ್ಕೆ ಸೌದೆಯಿಲ್ಲದ ಗ್ರಾಮೀಣ ಬದುಕು ಇಂದು ಎಲೆಕ್ಟ್ರಿಕ್ ಸುಡುಗಾಡಲ್ಲಿ ಸುಡುವ ವ್ಯವಸ್ಥೆಗೆ ಒಡ್ಡಿಕೊಳ್ಳುವಾಗ ಎಂಥಾ ಲಾಭ-ಲೋಭದ ಕತೆ ನಮ್ಮ ಮುಂದಿಲ್ಲ! ಇಂಥಾ ಅನುವಂಶೀಯ ಲಾಭ ಲೋಭ ಈ ದೇಶಕ್ಕೆ ಹೇಗೆ ಬಂತು. ಹಿಂದುಕುಶ್ ಪರ್ವತಗಳ ಸಾಲು ಮುಖಾಂತರ ಆರ್ಯತನ ಹಾಯ್ದು ಬಂತು. ನಮ್ಮ ಬಲಿಚಕ್ರವರ್ತಿಯನ್ನು ವಿಪ್ರನಾಯಕ ವಾಮನನೆಂಬ ಬ್ರಾಹ್ಮಣ ಪಾತಾಳಕ್ಕೆ ತುಳಿದುಬಿಡುತ್ತಾನಲ್ಲವೆ! ನಮ್ಮ ಗ್ರಾಮೀಣರು ಇಂದೂ ಸಹಾ ಬಲಿಯ ಆಗಮನಕ್ಕಾಗಿ ಪ್ರತೀ ವರ್ಷ ದೀಪಾವಳಿ ಆಚರಣೆ ಮೂಲಕ ಆಹ್ವಾನಿಸುತ್ತಲೇ ಇದ್ದಾರೆ. ಪರಶುರಾಮ ಎಂಥಾ ಕ್ರೂರಿ, ಅಲ್ಲದೆ ಮಾತೃಹಂತಕನಾಗಿದ್ದ. ಅವನು ಎಂಥಾ ಅಮಾನವೀಯತೆಯನ್ನು ಸ್ಥಳೀಯ ಕ್ಷತ್ರಿಯರ ಮೇಲೆ ತೋರಿದ.

  ಈ ದೇಶದ ಬ್ರಾಹ್ಮಣ್ಯವು ಎಂಥಾ ಹುಸಿ ಪುಸ್ತಕಗಳನ್ನು ಬರೆದು ಹೇಳಬೇಕಾದ್ದನ್ನೆಲ್ಲಾ ಮುಚ್ಚಿಟ್ಟು ಅದು ಹೇಗೆ ವಂಚಿಸಿತು. ಹೇಗೆ ನಂಬಿಕೆ ಮೂಢನಂಬಿಕೆಗಳನ್ನು ಗ್ರಾಮೀಣರ ಮೇಲೆ ಹೇರಿ ಶೂದ್ರರನ್ನು ಅತಿಶೂದ್ರರನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ಆಳಿತು. ಇದು ಬ್ರಿಟಿಷರು ಬಂದು ಇಂಥಾ ಸೆರೆವಾಸ ಬಿಡಿಸದಿದ್ದರೆ ಏನಾಗುತ್ತಿತ್ತು ಎಂಬುದನ್ನೆಲ್ಲಾ ಜ್ಯೋತಿರಾವ್‌ಪುಲೆ ಅವರು ತಮ್ಮ ’ಗುಲಾಂಗಿರಿ’ ಪುಸ್ತಕದಲ್ಲಿ ೧೯ನೇ ಶತಮಾನದಲ್ಲೆ ಹೇಳಿದ್ದಾರೆ. ಪುಲೆ, ಸಾಹುಮಹಾರಾಜನಿಗೆ ಅಂಬೇಡ್ಕರ್‌ಗೆ ತಳಹದಿ ಹಾಕಿಕೊಟ್ಟವರು. ಅಂಥಾ ತಿಳುವಳಿಕೆಯನ್ನು ನಾವು ಈ ಸಮಾಜದಲ್ಲಿ ಅರಿತು ವಿವೇಕಾನಂದ ಮಾದರಿಯಲ್ಲಿ ಕುವೆಂಪು ಮಾದರಿಯಲ್ಲಿ ರಾಮರಾವಣರನ್ನು ಐಕ್ಯಗೊಳಿಸುವ ಕ್ರಿಯಾವಿಧಾನವನ್ನು ಸೂಚಿಸಬೇಕಾಗುತ್ತದೆ. ಇದೇ ನಮ್ಮ ಗ್ರಾಮೀಣರಿಗೂ ನಗರದವರಿಗೂ ಬೇಕಾಗಿರುವ ಜನಪದ ಸಾಮಗ್ರಿ. ಎಂಥಾ ವಿಚಾರಗಳು ಬ್ರಾಹ್ಮಣ ಗ್ರಂಥದಲ್ಲಿ ಸಿಗುತ್ತವೆ!

 ಗರ್ಭಧರಿಸಿದ ಹೆಣ್ಣು ಗಂಡನನ್ನು ಕಳೆದುಕೊಂಡಾಗ ತನ್ನನ್ನು ತನ್ನ ಗರ್ಭವನ್ನು ರಕ್ಷಿಸಿಕೊಳ್ಳಲು ಗುಡ್ಡಗವಿಕಾಡಿಗೆ ಓಡುವ ವಿಚಾರ ಬರುತ್ತದೆ. ನೆರಳು ತಾಗಿಸದ, ನೆಲಕ್ಕೆ ಉಗುಳದ ಶೂದ್ರರ ಮುಟ್ಟುಚಿಟ್ಟು ವಿಚಾರ ಬರುತ್ತದೆ. ತಂದೆ ಮೇಲೆ ಮಗನ ಎತ್ತಿಕಟ್ಟಿದ ಪ್ರಹ್ಲಾದನ ಕತೆಯಾಗಲೀ; ಪರಶುರಾಮನನ್ನು ಬಗ್ಗಿಸಿದ ಶ್ರೀರಾಮನ ಕತೆಯಾಗಲೀ ಇವು ಕೇವಲ ಪುರಾಣಗಳಲ್ಲ. ನಮ್ಮ ವಂಶಪಾರಂಪರ‍್ಯದ ಜನಪದ ಚರಿತ್ರೆಗಳು. ’ವಿಶ್ವಾಮಿತ್ರನ ಥರಾ ನಾಯಿ ಮಾಂಸ ತಿನ್ನೋದು’ ಎಂದರೆ ಅತಿಶೂದ್ರನು ಹೊಟ್ಟೆಗಿಲ್ಲದೆ ಏನನ್ನಾದರೂ ತಿನ್ನುವ ವಿಧಾನ. ಸತ್ತ ಪ್ರಾಣಿಯ ಅಥವ ದನಾ ತಿನ್ನಲೇಬೇಕಾದ ಪ್ರಸಂಗ ಈ ದೇಶಕ್ಕೆ ಬಂದಿದ್ದು ಹೌದು. ಅದು ಆಳುವವರ ಕ್ರೂರ ವಿಧಾನದಿಂದ ಆಗಿದ್ದು. ಯಾರು ಸತ್ತರೇನು! ಯಾರು ಸತ್ತ ದನ ತಿಂದರೇನು! ನಾವು ಯಜ್ಞಯಾಗಾದಿಗಳ ಮೂಲಕ ಜೀವಂತ ರಾಸುಗಳನ್ನು ಕಡಿದು ತಿನ್ನಲು ಮಾತ್ರ ಯೋಗ್ಯರು ಎನ್ನುವ ಕಾಲ ಮತ್ತೊಂದು ರೂಪದಲ್ಲಿ ಪುನಃ ಅವತರಿಸುತ್ತಿದೆ. ಇಂದಿನ ರಾಜ ಐಭೋಗಕ್ಕೂ ಅಂದಿನ ಪರಶುರಾಮ, ವಾಮನ, ನರಸಿಂಹಾದಿಗಳ ಆರ್ಭಟಕ್ಕು ಯಾವ ವ್ಯತ್ಯಾಸವಿಲ್ಲ. ಹೀಗೆ ಬೆಳೆದುಬಂದ; ಅನೇಕ ತಿರುವುಗಳನ್ನು ಪಡೆಯುತ್ತಾ ಬಂದಿರುವ ನಮ್ಮ ಸಮಾಜದ ಅರಿವೇ ಇಂದಿನ ಜನಪದ. ಅಂದು ದೇವತಾ ಅಂತಃಪುರಕ್ಕೂ ಸಹಾ ಹೋಗಿ ಕಲಹ ಸೂಸುವ ಶಿಖಂಡಿ ಮೂಲದ ನಾರದನಿದ್ದ. ಅಂದು ಜ್ಞಾನ ಮಾರ್ಗದೆಡೆಗೆ ಒಯ್ಯುತ್ತಿದ್ದೇನೆಂದು ಬೌದ್ಧಮಂದಿರಗಳನ್ನು ನಿರ್ನಾಮ ಮಾಡಿದ ಶಂಕರ ಮೂಲಗಳಿದ್ದವು. ಇಂದು ಬಾಬ್ರಿ ಮೂಲದ ಶೋಭಾಯಾತ್ರಾ ಆಟಗಳಿವೆ.

  ಚರಿತ್ರೆ ಮರುಹುಟ್ಟು ಪಡೆಯುವಾಗ ಗತ ಇತಿಹಾಸವನ್ನು ವರ್ತಮಾನದಲ್ಲಿ ನಿಲ್ಲಿಸುತ್ತದೆ. ಇದೇ ನಾವು ಅರಿಯಬೇಕಾದ ಜನಪದ ವಸ್ತು. ಅಂದು ಚಾಣಕ್ಯನಂತಹ ತಂತ್ರಗಾರಿಕೆ ಅವನ ಆಸ್ಥಾನದಲ್ಲಿದ್ದ ಸಂಚುಗಾರಿಕೆ ಇಂದು ವಿಧಾನಸೌದದೊಳಗೆ, ಅಟಾರಕಛೇರಿಯೊಳಗೆ, ದಿಲ್ಲಿ ಗದ್ದುಗೆಯೊಳಗೆ ರಾರಾಜಿಸುತ್ತಿದೆ. ಕಪಟವೇಶದಲ್ಲಿ ಗುಲಾಂಗಿರಿಗೆ ನೂಕುತ್ತಿದೆ. ಪ್ರಾಣಿಪಕ್ಷಿಗಳನ್ನು ಕುತ್ತಿಗೆ ಕುಯ್ಯಲು ಮುಲಾನಿಗಳನ್ನು ನೇಮಿಸುವಂತೆ, ಗ್ರಾಮಗಳಲ್ಲಿ pen wieding buchers ಇದ್ದರು. ಅವರೇ ಕುಲಗಳ ಲೆಕ್ಕವಿಡುತ್ತಿದ್ದ ಕುಲಕರ್ಣಿಗಳು. ಕಾಲ ಬದಲಾಗಿದೆ. ದ್ವೈತವು ಅದ್ವೈತವಾಗಿದೆ. ದೈತ್ಯವು ದೇವತ್ವದ ಕಡೆ ಸಾಗಬೇಕಿದೆ. ಬಸವಣ್ಣನಾದಿಯಾಗಿ ಸಮಾಜಕ್ಕೆ ವಿನಾಶಕಾರಿಯಾಗುವ ಬ್ರಾಹ್ಮಣ್ಯವನ್ನು ತೊರೆದವರು. ಇಂತಾ ವಿಚಾರವನ್ನೆ ನಾರಾಯಣಗುರು, ಕುವೆಂಪು ಹೇಳಿರುವುದು. ಶ್ರೀರಾಮಾಯಣ ದರ್ಶನಂ ಎಂಬುದು ಇಂಥ ಮಾರ್ಗದರ್ಶನ ತೋರುವ ರಾಮಾಯಣ. ಇಂಥಾ ರಾಮಾಯಣಗಳು ಮಹಾಭಾರತಗಳು ಜನಪದ ಮೂಲದಲ್ಲಿವೆ. 

  ಶಿಖಂಡಿ ಮೂಲಕ್ಕೂ ಮರುಗುವ ಮನಸ್ಸುಗಳಿವೆ. ಸೀತೆಯು single parent  ಆದಾಗ ಜನಪದರು ಮರುಗುತ್ತಾರೆ. ಲವಕುಶರು ರಾಮನೊಡನೆ ಅಯೋದ್ಯೆಗೆ ಹೊರಟಾಗ ಅವಳು ’ಅಯ್ಯೋ ನನಗೆ ಒಂದು ಹೆಣ್ಣು ಮಗುವಾದರೂ ಇದ್ದಿದ್ದರೆ’ ಎಂದು ಹಾತೊರೆಯುತ್ತಾಳೆ. ಧರೆಗಿಳಿಯುತ್ತಾಳೆ. ಇಂಥಾ ರಾಮಾಯಣವನ್ನು ಜನಪದರು ಜನಪದೀಯ ತಜ್ಞ ಸಾಹಿತಿಗಳು ಮಾತ್ರ ಹೇಳಬಲ್ಲರು. ಈ ರೀತಿಯ ಶಿಷ್ಟ ಹಾಗೂ ಗ್ರಾವಿಣ ತೌಲನಿಕ ಜಾನಪದವನ್ನು ಅರಿಯುವ ಕ್ರಿಯೆ ಇಂದಾಗಬೇಕು. ಕುವೆಂಪು ರಾಮಾಯಣದಲ್ಲಿ ಮಂಥರೆ, ಅನಲೆ, ಹನುಮ, ರಾವಣ-ಕುಂಭಕರ್ಣರ ಶಿಶುತ್ವ, ಸೀತೆಯ ಮಾತೃಮೂಲ ಸರಣಿಗಳು ಇವು ಬೆಳೆದುಬಂದ ಸಮಾಜದ ಮಾತೃಸಮಾಜದ ವಿಚಾರಗಳು. ಶ್ರೀರಾಮನು ಪಿತೃಸಮಾಜದವನು ಹೌದು. ಅದನ್ನು ಕವಿ ಹೇಗೆ ಮಾತೃಮೂಲಕ್ಕೆ ಒಡ್ಡಿ ಕಥನಗೊಳಿಸುತ್ತಾರೆಂಬುದೇ ಶಿಷ್ಟ ಜಾನಪದ. ಕುವೆಂಪು ಕಾದಂಬರಿಗಳೆರಡರಲ್ಲಿ ಜನಪದೀಯ ಅಂಶಗಳನ್ನು ಬೇರೆಯಾಗಿಡುವುದು ಸಾಧ್ಯವೇ ಇಲ್ಲ. ಜನಪದ ಅಂಶಗಳನ್ನು ಬಿಡಿಸಿದರೆ ಅದು ಒಂದು ಸಪ್ಪೆ ಸಾಹಿತ್ಯ. ಸಹ್ಯಾದ್ರಿ ಮೂಲದ ಹಳ್ಳಿಗಳ ಅಂತರಂಗವನ್ನು ಜೋಡಿಸಿ ಹೇಳಿರುವುದರಿಂದಲೇ ಅವರ ಕಾದಂಬರಿ ಸಾಹಿತ್ಯವು ಶಿಷ್ಟನು ಬರೆದ ಜಾನಪದ ವಸ್ತು. ಗೊರೂರು ಸಾಹಿತ್ಯವು ಶಿಷ್ಟನು ಬರೆದ ಜನಪದೀಯ ಮಾದರಿ.

 ಕರೀಂಖಾನರು ಭಾಷಾಂತರಗೊಳಿಸಿ ನೀಡಿದ ’ನಿಹಾರ’ ಪುಸ್ತಕದ ಕಥನಗಳು ಭಾರತೀಯ ಮೂಲದ ಹಿಂದೂ ಮುಸಲ್ಮಾನ ಸಮರಸ ವಿಚಾರಧಾರೆಗಳು. ಇಂಥವೆಲ್ಲಾ ಶಿಷ್ಟಸಾಹಿತ್ಯದ ಜನಪದೀಯ ಅಂಶಗಳು. ಧಾತುಗಳು. ಕೀರಂ. ನಾಗರಾಜು ಅವರು ಶಿಷ್ಟ ವಿದ್ವಾಂಸರು ಹೌದು. ಅವರ ಆಲೋಚನೆಗಳು ಅವಧೂತ ಮಾದರಿಯವು. ನಮ್ಮ ಅಲ್ಲಮ, ಮಾದಪ್ಪ, ಮಂಟೇದಯ್ಯನ ಪರಂಪರೆ ಇಂಥಾ ಆಲೋಚನೆಗಳಲ್ಲಿವೆ. ಶಿಷ್ಠಮೂಲದಲ್ಲಿ ಜನಪದ ವಿಚಾರಗಳನ್ನು ಬೇರ್ಪಡಿಸಿದರೆ ಅದು ಸಪ್ಪೆಯಾಗುತ್ತದಷ್ಟೆ ಅಲ್ಲ, ಜನಪದವನ್ನು ಬಿಟ್ಟು ಶಿಷ್ಟರು ಕೂಡ ಬರೆಯಲು ಆಗುವುದೇ ಇಲ್ಲ. ಇದಕ್ಕೆ ಪಂಪನೇ ಸಾಕ್ಷಿ. ಪಂಪನ ನುಡಿ, ಪದ್ಯ, ಗದ್ಯ ಅಂದರೆ ಅವನ ಚಂಪೂ ಮಾದರಿ ಸಂಪೂರ್ಣ ಜನಪದೀಯ ಗುಣದ್ದು. ’ನಿಚ್ಚಂಪೆಸತು’ ಎಂಬ ಅವನ ಶೈಲಿಯ ಗುಣವು ಅಚ್ಚಗನ್ನಡದ ಜನಪದೀಯ ಮಾದರಿ. ಇಡೀ ಪಂಪನ ಕಾವ್ಯವು ಗಾದೆಗಳ ಒಗಟುಗಳ ಆಚರಣೆಗಳ ವಿವಿಧ ಜನಪದೀಯ ವಿಚಾರಗಳ ವೈಚಾರಿಕ ನೀತಿಗಳ ಕಣಜ. ಅದು ಪಂಪನೇ ಹೇಳುವಂತೆ ಮಾರ್ಗ ಮತ್ತು ದೇಶೀ ಬೆಡಗಿನದು. ಇದನ್ನೆ ಮುಂದಿನ ಕನ್ನಡ ಕವಿಗಳು ಸಹಾ ಮುಂದುವರಿಸಿಕೊಂಡು ಹೋಗಿದ್ದಾರೆ.

  ಕುಮಾರವ್ಯಾಸನಿರಲಿ, ರತ್ನಾಕರವರ್ಣಿಯಿರಲಿ, ದೇವಚಂದ್ರನಿರಲಿ ಎಲ್ಲರೂ ಜನಪದ ಕಣಜಕ್ಕೆ ಕೈಹಾಕಿದವರೇ ಹೌದು. ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯವಂತೂ ಅರೆ ಶಿಷ್ಟ ಹಾಗೂ ಸಂಪೂರ್ಣ ಜನಪದ. ಅಂದರೇನಾಯಿತು! ಶಿಷ್ಟ ಮತ್ತು ಜನಪದ ಎಂಬುದು ಕೇವಲ ಅಧ್ಯಯನಕ್ಕೋಸ್ಕರ ಗೆರೆ ಎಳೆಯುವ ಒಂದು ಮಾದರಿ. ನಾವು ಜಾನಪದವನ್ನು ಬೇರೆ ಮಾಡುತ್ತಾ ಶಿಷ್ಟ ಮೂಲದಿಂದ ದೂರ ಹೋದರೆ ಪ್ರತಿಭೆ ಪಾಂಡಿತ್ಯವಿಲ್ಲದ ಜನಪದವನ್ನು ತಟ್ಟಿದಂತಾಗುತ್ತದೆ. ಶಿಶುನಾಳನ-ಸರ್ವಜ್ಞನ ಜ್ಞಾನ ವಿಜ್ಞಾನವು ಜನಪದರ ಮೂಲದವು. ಮಂಟೇದಯ್ಯ, ಮಾದಯ್ಯ ನಿರ್ವಾಣಯ್ಯನ ಪರಂಪರೆಯು ಅವಧೂತ ಪರಂಪರೆಯ ಜ್ಞಾನ ವಿಜ್ಞಾನದವು. ಅವು ಅಲ್ಲಮ ಅಕ್ಕನ ತೆಕ್ಕೆಯವು. ಕಾಶ್ಮೀರದ ಲಲ್ಲುದೇವಿ, ಕನ್ನಡದ ಅಕ್ಕ, ಜನಪದರ ಸಿರಿ ಇವರೆಲ್ಲವೂ ನಮ್ಮೂರ ನಿಮ್ಮೂರ ದೇವಿ ಮೂಲದವು. ಹೀಗೆ ಅನತಿಕಾಲದ ಆಗುಹೋಗುಗಳನ್ನು ಕನಸುನನಸುಗಳನ್ನು ವಿಧಿವಿಧಾನಗಳನ್ನು ಶಿಷ್ಟ-ಗ್ರಾವಿಣ ಮೂಲಗಳೆಲ್ಲವನ್ನು ತಡಕುತ್ತ ಜ್ಞಾನ ವಿಜ್ಞಾನದ ಕಡೆಗೆ ಸಾಗುವ ಮಾದರಿ ಜಾನಪದ ಅಧ್ಯಯನಕ್ಕೆ ತೆರೆದುಕೊಳ್ಳಬೇಕು.
  ಜನಪದೀಯ ಅಧ್ಯಯನದ ಪ್ರಾರಂಭದ ಹಂತದಲ್ಲಿ ಅನಕ್ಷರಸ್ಥರ ಭಂಡಾರವನ್ನು ಅಕ್ಷರಸ್ಥರಿಂದ ಬೇರ್ಪಡಿಸಿ ನೋಡಲಾಯಿತು. ಪಾಶ್ಚಾತ್ಯ ಥಿಯರಿಗಳನ್ನು ಅಳವಡಿಸಿ ವಿಂಗಡಿಸಲಾಯಿತು. ಸಂಗ್ರಹ ಮತ್ತು ವಿಶ್ಲೇಷಣೆಗಳನ್ನು ಮಾಡುವಾಗ ಈಗಾಗಲೇ ಶಿಷ್ಟಮೂಲದಲ್ಲಿದ್ದ ದೇಶೀ ವಿಧಾನವನ್ನು ತೆಕ್ಕೆಗೆ ಗಕ್ಕನೆ ತೆಗೆದುಕೊಳ್ಳಲಿಲ್ಲ. ಹಾಗಾಗಿ ಜನಪದೀಯ ಅಧ್ಯಯನ ಮಾದರಿ ಚರ್ವಿತಚರ್ವಣವಾಗಲಾರಂಭಿಸಿತು. ಇದೆಲ್ಲವನ್ನು ಮುರಿದು ಕಟ್ಟಿಕೊಳ್ಳುತ್ತಾ ಜನಪದೀಯ ಅಧ್ಯಯನ ಸಾಗಬೇಕು. ಅದು ತುಸು ಸಾಧ್ಯವಾಗುತ್ತಲಿದೆ. ದೇವಿಪ್ರಸಾದ ಚಟ್ಟೋಪಾಧ್ಯಾಯ, ಆ.ಆ.ಕೋಸಂಬಿ, ನಮ್ಮ ಕನ್ನಡದ ಶಂಬಾ.ಜೋಷಿ ಮಾದರಿಗಳೆಲ್ಲವೂ ಜನಪದೀಯ ಅಧ್ಯಯನದ ವಿಧಿವಿಧಾನಗಳು. ಥೋರಾನ ಗಾಂಧಿಯ ಕಾಯಕ, ದೇಶೀಯ ಬದುಕು ವರ‍್ಡ್ಸ್‌ವರ್ತನ ಪರಿಸರ ತತ್ವ ಇಂದು ಸಮಾಜಕ್ಕೆ ಬೇಕಿವೆ. ಇಂಥಾ ಅಧ್ಯಯನಗಳು ಅಕಾಡೆಮಿಗಳ, ವಿಶ್ವವಿದ್ಯಾನಿಲಯಗಳ, ಹಂತಕ್ಕೂ ಹೆಚ್ಚಾಗಿ ಆವರಿಸಬೇಕು. ಪಂಪನ ’ಮಾನವ ಜಾತಿ ವಂದೇವಲಂ’ ನಿಂದ ಹಿಡಿದು ಕುವೆಂಪುವಿನ ’ವಿಶ್ವಮಾನವ ತತ್ವ’ದ ವರೆಗೆ ಒರೆ ಹಚ್ಚುವ ರೀತಿಯೇ ಜಾನಪದೀಯ ತತ್ವವಾಗಬೇಕು. ಜಾನಪದೀಯ School of thoughts  ಬದಲಾಗಿವೆ. ಇಂಥಾ ಬದಲಾವಣೆಯೇ ಜಾನಪದ ಜ್ಞಾನದಾರಿಯ ಅರಿವು.



ಡಾ|| ರಾಜೇಗೌಡ ಹೊಸಹಳ್ಳಿ
 ೪೧೩. ೧ನೇ ತಿರುವು, ಐಸೆಕ್ ರಸ್ತೆ, 
ಟೀಚರ‍್ಸ್ ಕಾಲನಿ, 
ನಾಗರಬಾವಿ, ಬೆಂ-೭೨.
 ( ೯೯೮೦೦೬೬೦೭೦)