ಶುಕ್ರವಾರ, ಮಾರ್ಚ್ 7, 2014

ಒಡಲ ದಂಡಿಗೆಯ ಮಾಡಿ


-ಡಾ.ಸಬಿತಾ ಬನ್ನಾಡಿ  


ಹರದೇಶಿ - ನಾಗೇಶಿ ಕಲೆ ಮತ್ತು ಕಲಾವಿದರು
ಲಿಂಗ ಸಂಬಂಧಿ ಅಧ್ಯಯನ
ಡಾ.ಶೈಲಜಾ ಹಿರೇಮಠ
ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ.
೨೦೧೧, ಬೆಲೆ:೨೦೦ ರೂ.


 “ದೇವದಾಸೇರ ಪೆನ್‌ಶನ್ ಕೊಡತೇವ ಅಂದ್ರು, ಅದನ್ನ ಬ್ಯಾಡಾ ಅಂದೆ. ದೇವದಾಸೇರು ಅಂದ್ರ ಸೂಳೆತನ ಮಾಡವ್ರು ಅಂತಾರಲ್ಲ; ಅಂಥಾ ದಗದ ನಾ ಮಾಡಿಲ್ಲ ತಂಗಿ. ನಾನ್ಯಾಕ ದೇವದಾಸಿ ಪೆನ್‌ಶನ್ ತಗೋಬೇಕ್ಹೇಳು? ಎಪ್ಪತ್ತು ವರ್ಷಗಂಟಲೆ ಈ ಕಲಾದಾಗ ದುಡದೇನು. ಸರಸತಿ ನನಗ ಕಲಿಸ್ಯಾಳ; ಸಾಕ್ಯಾಳ; ಸಲುವ್ಯಾಳ, ಸಾಯುವದರಾಗ ಆಕಿ ಹೆಸರಲ್ಲಿ ಪೆನ್‌ಶನ್ ತಗೋಬೇಕಂತ ಆಸಿ.” 
ಇದು ನಾಗೇಶಿ ಹಾಡುಗಾರ್ತಿ ದ್ರೌಪದಿಯ ಮಾತುಗಳು.

     ಕಲೆ ಮತ್ತು ಕಲಾವಿದರ ಅಧ್ಯಯನವೆಂದರೆ ಅವರ ಕಲಾ ಸಾಮರ್ಥ್ಯವನ್ನು ಒರೆಗೆ ಹಚ್ಚುವುದು, ವಿಶ್ಲೇಷಿಸುವುದು ಎಂದೇ ಭಾವಿಸಲಾಗುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಎಂ.ಫಿಲ್, ಪಿಎಚ್.ಡಿ ಆಧ್ಯಯನಗಳಿಗೆ ಇವೆಲ್ಲಾ  ಯಾಂತ್ರಿಕವಾಗಿ ಅಧ್ಯಯನ ಮಾಡಬೇಕಾದ ’ಟಾಪಿಕ್’ಗಳಾಗಿ ಮಾರ್ಪಟ್ಟಿವೆ. ಬಹುಶಃ ಈ ಕಾರಣಕ್ಕೇ ಇರಬಹುದು, ಡಾ. ಶೈಲಜಾ ಹಿರೇಮಠರ ಹರದೇಶಿ - ನಾಗೇಶಿ ಕಲೆ ಮತ್ತು ಕಲಾವಿದರು ಲಿಂಗ ಸಂಬಂಧಿ ಅಧ್ಯಯನ ಎಂಬ ಕೃತಿಯನ್ನು ಓದಿಗೆ ಎತ್ತಿಕೊಳ್ಳಲು ನಾನು ಕೆಲವು ಸಮಯವನ್ನೇ ತೆಗೆದುಕೊಂಡೆ. ಆದರೆ ಒಮ್ಮೆ ಓದಿಗೆ ತೆರೆದುಕೊಂಡಂತೆ ಇದು ಬೇರೆಯೇ ಆವರಣಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಅದಕ್ಕೆ ಕಾರಣ ಅದು ಕಾದಂಬರಿಯಂತೆ ಓದಿಸಿಕೊಂಡು ಹೋಗಬಲ್ಲ ಶೈಲಿಯನ್ನು ಹೊಂದಿರುವುದಷ್ಟೇ ಅಲ್ಲ. ಬದಲಿಗೆ, ನಾವು ಬದುಕುತ್ತಿರುವ ಈ ಜಗತ್ತಿನಲ್ಲಿ ನಮ್ಮ ಸುತ್ತಿನ ಜೀವಿಗಳು ಹೇಗೆಲ್ಲಾ ಬದುಕುತ್ತಿದ್ದಾರೆ ಎಂಬ ಪರಿವೆಯೇ ನಮಗಿಲ್ಲದಿರುವುದನ್ನು ಚುಚ್ಚಿತೋರುತ್ತಿದೆ ಎನ್ನುವುದೂ ಆಗಿದೆ. ಕಲೆ ಎಂಬುದು ಕೇವಲ ಆರಾಧಿಸಬೇಕಾದ ಸಂಗತಿಯಲ್ಲ, ಅನುಭವಿಸಬೇಕಾದ ಸಂಗತಿಯಲ್ಲ, ಆ ಕಲೆ ಪೋಷಿಸುತ್ತಿರುವ ಸಂಸ್ಕೃತಿಯ ನಿಜದ ನೆಲೆ ಯಾವುದು, ಅದರ ಸುಂದರ ಮುಖದ ಹಿಂದಿನ ಕ್ರೌರ್ಯದ ಆಳ ಎಷ್ಟು ಎಂಬುದೆಲ್ಲಾ ತಿಳಿಯ ಬೇಕಾದರೆ ಈ ಪುಸ್ತಕವನ್ನು ತಪ್ಪದೇ ಓದಬೇಕಾಗುತ್ತದೆ.
   ಉತ್ತರ ಕರ್ನಾಟಕದ ಭಾಗದಲ್ಲಿ ಅತ್ಯಂತ ಜನಪ್ರಿಯವಾಗಿರುವ ಹರದೇಶಿ-ನಾಗೇಶಿ ಕಲೆಯ ಕುರಿತು ಕರ್ನಾಟಕದ ಇತರ ಭಾಗದ ಜನರಿಗೆ ಅಷ್ಟೇನೂ ಮಾಹಿತಿಯಿಲ್ಲ. ಇದೊಂದು ಸವಾಲ್ ಜವಾಬ್ ಮಾದರಿಯ ಹಾಡುಗಾರಿಕೆಯಾಗಿದ್ದು ಇದರಲ್ಲಿ ಭಾಗವಹಿಸುವ ಕಲಾವಿದರು ರಾತ್ರಿಯಿಡೀ ನಿಂತುಕೊಂಡೇ ಇದನ್ನು ಹಾಡುತ್ತಾರೆ. ಹರದೇಶಿ ಹಾಡುವವರು ಶಿವನನ್ನು ಪ್ರತಿನಿಧಿಸುತ್ತಾ ಗಂಡ್ಹೆಚ್ಚು ಎಂದು ವಾದಿಸಿದರೆ, ನಾಗೇಶಿ ಕಲಾವಿದರು ಪಾರ್ವತಿಯನ್ನು ಪ್ರತಿನಿಧಿಸುತ್ತಾ ಹೆಣ್ಹೆಚ್ಚು ಎಂದು ವಾದಿಸುತ್ತಾರೆ. ಇದು ಕೇವಲ ಶಿವ ಪಾರ್ವತಿಯರ ಕತೆಗಳಿಗಷ್ಟೇ ಸಂಬಂಧಿಸಿರುವುದಿಲ್ಲ. ಆಧುನಿಕ ಬದುಕಿನ ಜೀವನ ಶೈಲಿಯ ಲೇವಡಿಯಿಂದ ತೊಡಗಿ ಹಲವು ಮಾದರಿಯ ಕಟ್ಟುಕತೆಗಳನ್ನೂ  ಈ ಹಾಡುಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ಆದರೆ ಅಂತಿಮವಾಗಿ ಇದು ಗಂಡ್ಹೆಚ್ಚೋ ಹೆಣ್ಹೆಚ್ಚೋ ಎಂಬ ವಾದಕ್ಕೇ ಮರಳಿ, ಇಬ್ಬರಲ್ಲಿ ಒಬ್ಬರು ಗೆಲ್ಲುತ್ತಾರೆ. ಹೀಗೆ ಗೆಲ್ಲುವುದಕ್ಕಾಗಿ ಎದುರು ಹಾಡುಗಾರರ ವೈಯಕ್ತಿಕ ನಿಂದೆಗೂ, ಅಶ್ಲೀಲ ಮಾತುಗಳಿಗೂ ಕಲಾವಿದರು ಇಳಿಯುವುದಿದೆ. ಇಲ್ಲಿ ಹೆಣ್ಹೆಚ್ಚು ಎಂದು ವಾದಿಸುವ ಹಾಡುಗಾರರು ಹೆಚ್ಚಾಗಿ ಹೆಂಗಸರೇ ಆಗಿರುತ್ತಾರೆ. ಮತ್ತು ಇವರೆಲ್ಲಾ ದೇವದಾಸಿಯರೇ ಆಗಿರುತ್ತಾರೆ. ಈ ಕಲೆಯ ಕುರಿತು ಈಗಾಗಲೇ ಹಲವರು ಅಧ್ಯಯನ ಮಾಡಿದ್ದರೂ ಅದು ಈ ಹಾಡುಗಳ ಸಂಗ್ರಹ ಮತ್ತು ಹಾಡುಗಳ ವಿಶ್ಲೇಷಣೆಗಳಿಗಷ್ಟೇ ಸೀಮಿತವಾಗಿದೆ. ಶೈಲಜಾ ಅವರು ಈ ಕಲಾವಿದರನ್ನು ಮುಖತಃ ಸಂದರ್ಶಿಸಿ ಈ ಕಲೆಯ ಸಾಮಾಜಿಕ ಮುಖವನ್ನು ಅನಾವರಣ ಮಾಡುವೆಡೆಗೆ ಆಸಕ್ತಿತೋರಿದ್ದಾರೆ. ಈ ಸಂದರ್ಭದಲ್ಲಿ ಅವರು ಕಂಡುಕೊಂಡ ಸತ್ಯಗಳ ಅನಾವರಣವನ್ನು ಅಕಾಡೆಮಿಕ್ ಭಾಷೆಯಲ್ಲಿ ನಿರೂಪಿಸದೇ ಕಲಾವಿದರ ಭಾಷೆಯಲ್ಲೇ ಮಾಡಿರುವುದು ಈ ಕೃತಿಯ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ. ಜೊತೆಗೇ ಇಲ್ಲಿ ಅನಾವರಣವಾದ ಸತ್ಯಗಳು ನಮ್ಮನ್ನು ಬೆಚ್ಚಿಬೀಳಿಸುವಂತಿವೆ.

                                ಸೆಮಿನಾರೊಂದರಲ್ಲಿ ಡಾ.ಶೈಲಜಾ ಹಿರೇಮಠ ಮತ್ತು ಸಬಿತಾ ಬನ್ನಾಡಿ.

    ಇದನ್ನೊಂದು ಪಾತಿವ್ರತ್ಯದಲ್ಲಿ ನಂಬಿಕೆ ಇರುವ ದೇವದಾಸಿಯರ ಕಥಾನಕ ಎನ್ನಬಹುದು. ಅಥವಾ ಪತಿವ್ರತೆಯರನ್ನು ದೇವದಾಸಿಯರನ್ನಾಗಿಸುವ ಸಾಮಾಜಿಕ ಕ್ರೌರ್ಯದ ಕಥಾನಕ ಎಂದೂ ಕರೆಯಬಹುದು. ಅಥವಾ ದೇವದಾಸಿಯರಾಗಿದ್ದರೂ ಸೂಳೆಯರಲ್ಲದವರು ತಮ್ಮ ಘನತೆಯನ್ನು ತಮಗೆ ದೊರಕಿಸಿಕೊಡಿ ಎಂದು ಸಮಾಜಕ್ಕೆ ಮಾಡುತ್ತಿರುವ ಆರ್ದ್ರ ಮೊರೆಯ ಕಥಾನಕ ಎಂದೂ ಕರೆಯ ಬಹುದು. ಹೆಣ್ಣನ್ನು ಹಣಿಯುವ ಅಸ್ತ್ರವಾಗಿ ಸ್ತ್ರೀ ನಿರಂತರವಾಗಿ ಬಳಕೆಯಾಗುವುದನ್ನೂ, ಆ ಇರಿತದಿಂದ ಹೆಣ್ಣು ಮಾನಸಿಕವಾಗಿ ಘಾಸಿಗೊಳಗಾಗಿ ನಲುಗುವುದನ್ನೂ ಇನ್ನೂ ಮುಂದುವರಿಸಿದ್ದಾಳೆ. ಅದಕ್ಕಾಗಿ ಹಲವು ರಾಜಿಗಳನ್ನು ಮಾಡಿಕೊಳ್ಳುತ್ತಲೇ ಇದ್ದಾಳೆ. ಅವಳು ಹಾಗೆ ನಲುಗುವುದಕ್ಕೆ ಪುರುಷ ಚಿಂತನೆಯ ಮೂಸೆಯಲ್ಲಿ ಹುಟ್ಟಿದ ಈ ಪಾತಿವ್ರತ್ಯದ ಬಾಣವನ್ನು ಅದೇ ಪುರುಷ ನೆಲೆಯಲ್ಲೇ ಗ್ರಹಿಸಿರುವುದೂ ಕಾರಣವಾಗಿದೆ. ಹೀಗಾಗಿ ಸುಳ್ಳು ಸುಳ್ಳೇ ತನ್ನ ಮೇಲೆ ಇಂತಹ ಆರೋಪಗಳು ಬಂದರೆ ಎಂದು ಹೆದರುವುದೂ, ಸುಳ್ಳೇ ಇಂತಹ ಆರೋಪ ಬಂದಾಗ ಅದನ್ನು ಸುಳ್ಳೆಂದು ಸಾಕ್ಷಿ ಸಮೇತ ನಿರೂಪಿಸಲಾಗದೇ ಒದ್ದಾಡುವುದೂ ನಡೆದು ಕೊಂಡೇ ಬಂದಿದೆ. ಬಹುಶಃ ಈ ಆರೋಪಕ್ಕೆ ಹೆಣ್ಣು ಸೊಪ್ಪು ಹಾಕದೇ ಹೋದ ದಿನ ಈ ಜಗತ್ತಿನ ಎಷ್ಟು ಪುರುಷರು ಮತ್ತು ಪುರುಷ ಚಿಂತನೆಯನ್ನೇ ಹಾಸಿಹೊದ್ದಿರುವ ಮಹಿಳೆಯರು ನಿದ್ದೆಗೆಡುತ್ತಾರೋ ಗೊತ್ತಿಲ್ಲ. ಆದರೆ ದೇವದಾಸಿ ಪಟ್ಟಹೊತ್ತ ಹೆಂಗಸರೂ ಈ ಆರೋಪದೆದುರು ಹೊಟ್ಟೆಯಲ್ಲಿ ಮುಳ್ಳು ಹೊಕ್ಕಂತೆ ರೋದಿಸುವುದು ಮತ್ತು ಇತ್ತೀಚೆಗೆ ಶಿಕ್ಷಣಕ್ಕೆ ತೆರೆದು ಕೊಳ್ಳುತ್ತಿರುವ ಇವರ ಮಕ್ಕಳು ತಾಯಿಯ ಮೇಲೆ ಬರುತ್ತಿರುವ ಇಂತಹ ಅರೋಪದಿಂದ ಕಂಗಾಲಾಗುವುದನ್ನು ನೋಡುವಾಗ ಹೆಣ್ಣು ಈ ಶಾಪದಿಂದ ಬಿಡುಗಡೆ ಹೊಂದಲು ಇನ್ನೂ ಎಷ್ಟು ಕಾಲ ಕಾಯಬೇಕೋ ಎಂಬ ಪ್ರಶ್ನೆ ಹಾಗೇ ಉಳಿಯುತ್ತದೆ.

     ಇದೊಂದು ಲಿಂಗಸಂಬಂಧಿ ಅಧ್ಯಯನವಾಗಿದೆ. ಹಾಡಿಕೆಯ ಕ್ಷೇತ್ರದಲ್ಲಿನ ಪುರುಷ ಮತ್ತು ಮಹಿಳೆಯ ಅನುಭವಗಳನ್ನು ಲಿಂಗಸಂಬಂಧಿ ನೆಲೆಯಲ್ಲಿ ನಿರ್ವಚಿಸುವ ಉದ್ದೇಶದಿಂದ ಹೊರಟ ಈ ಅಧ್ಯಯನ ಹೊರಹಾಕುವ ವಿಚಾರಗಳು ನಾಗರಿಕ ಸಮಾಜಕ್ಕೆ ಕೆಲವು ಪ್ರಶ್ನೆಗಳನ್ನು ಎಸೆಯುತ್ತದೆ. ಇದೇ ಹಾಡಿಕೆಯ ರಂಗದಲ್ಲಿರುವ ಪುರುಷರು ಬಡತನದ ನೋವನ್ನು ಅನುಭವಿಸಿದವರೇ ಆದರೂ ಅವರು ಎದುರಿಸುವ ಅವಮಾನದ ಸ್ವರೂಪ ಮಾತ್ರ ಮಹಿಳೆಯರ ಅನುಭವಕ್ಕಿಂತ ಭಿನ್ನವಾಗಿರುತ್ತವೆ. ಇಲ್ಲಿ ಹೆಂಗಸರು ಹೊಟ್ಟೆಯ ತಾಪಕ್ಕಾಗಿ, ಹಾಡಿಕೆ ಕಲಿಸಲು ಬರುವ ಗುರು ಎನಿಸಿಕೊಂಡವನ ಅತ್ಯಾಚಾರಕ್ಕೆ ಬಲಿಯಾಗ ಬೇಕಾಗುತ್ತದೆ. ಮೈನೆರೆದು ಎರಡು ಮೂರು ತಿಂಗಳಲ್ಲೇ ಇಂತಹ ದಾಳಿಗೆ ಬಲಿಯಾಗುವ ಇವರು ಆ ಕಾರಣಕ್ಕೆ ಅವರೊಂದಿಗೇ ಉಡಿಕೆ ಶಾಸ್ತ್ರವನ್ನೂ  ಮಾಡಿಕೊಳ್ಳಬೇಕಾಗುತ್ತದೆ.(ಈ ಹಾಡಿಕೆಯ ಹೆಂಗಸರು ಮದುವೆ ಮಾಡಿಕೊಳ್ಳುವಂತಿಲ್ಲ. ಉಡಿ ತುಂಬವವನನ್ನೇ ಗಂಡನೆಂದ ಭಾವಿಸಿ ಅವನೊಂದಿಗೇ ಬದುಕುತ್ತಾರೆ. ಮತ್ತು ಅವನಿಗೇ ನಿಯತ್ತು ತೋರುತ್ತಾರೆ.) ಈ ಕೃತಿಯೊಳಗಣ ವಿವರಗಳು ದೇವದಾಸಿಯರ ಕುರಿತಾಗಿ ಇರುವ ಕೆಲವು ಸಾಮಾನ್ಯ ನಂಬಿಕೆಗಳನ್ನು ಮುರಿದು ಹಾಕುತ್ತದೆ. ಸಾಧಾರಣವಾಗಿ ಕೆಳ ವರ್ಗದ ಮಹಿಳೆಯರಿಗೆ ಸ್ವಾತಂತ್ರ್ಯವಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಅವರಿಗೆ ಆರ್ಥಿಕ ಸ್ವಾತಂತ್ರ್ಯದಂತೆ ಉಳಿದ ಸ್ವಾತಂತ್ರ್ಯ ಕೂಡ ಗಗನ ಕುಸುಮವೇ ಎಂಬುದನ್ನು ಈ ಕೃತಿ ಸಾಕ್ಷಿ ಸಮೇತ ಎತ್ತಿ ಹಿಡಿಯುತ್ತದೆ. 

   ದೇವದಾಸಿಯರು ಎಂದೆನಿಸಿಕೊಂಡೂ ಪುರುಷರನ್ನು ಎದುರಿಸಲಾಗದೆ ಮುದುಡಿ ಹೋಗುವ ಇಲ್ಲಿನ ಮಹಿಳೆಯರು ಗರತಿಯರಿಗಿಂತ ಭಿನ್ನರೇನಲ್ಲ. ತಾವು ಕಲಾವಿದೆಯರು, ತಮ್ಮ ಕಲೆಗೆ ಈ ಸಮಾಜದಲ್ಲಿ ಬಹಳ ಬೆಲೆಯಿದೆ ಎಂದು ತಮ್ಮನ್ನು ತಾವೇ ನಂಬಿಸಿಕೊಂಡು ಒಂದು ಹುಸಿ ನಂಬಿಕೆಯಲ್ಲಿ ಬಾಳುವ ಇವರಿಗೆ, ವೇದಿಕೆಯಲ್ಲಿ ನೇರವಾಗಿ ಸಾಹಿತ್ಯದ ಹೆಸರಿನಲ್ಲಿ ಆಗುವ ಅವಮಾನವನ್ನು ಪ್ರತಿಭಟಿಸಲೂ ಆಗುವುದಿಲ್ಲ, ಸಾಹಿತ್ಯವನ್ನೇ ಅಸ್ತ್ರವಾಗಿಸಿಕೊಂಡು ಇದಿರಿನವರನ್ನು ಹಳಿಯಲೂ ಆಗುವುದಿಲ್ಲ. ಇದಕ್ಕೆ ಅವರು ಕೊಡುವ ಕಾರಣ ಪುರುಷರನ್ನು ಹಳಿಯುವುದಕ್ಕೆ ತಮಗೆ ಅವಕಾಶವಿಲ್ಲ ಎಂಬುದು ಒಂದಾದರೆ ಇನ್ನೊಂದು, ಆ ಸಾಹಿತ್ಯವನ್ನು ರಚಿಸುತ್ತಿರುವುದು ಪುರುಷರು ಮಾತ್ರ. ಹೀಗಾಗಿ ಸಹಜವಾಗಿ ಅಲ್ಲಿ ಬೇಕಾಬಿಟ್ಟಿ ಬೈಗುಳಗಳು ಪುರುಷ ಸಂಬಂಧಿತವಾಗಿ ಇಲ್ಲ! ಆದರೆ ಈ ಹೆಂಗಸರು ತಮ್ಮನ್ನು ತಾವು ಬಚಾವು ಮಾಡಿಕೊಳ್ಳಲು ಬಳಸುವ ಅಸ್ತ್ರವೆಂದರೆ ತಾಯ್ತನ. ತಾಯ್ತನದ ಭಾವುಕ ನೆಲೆಯನ್ನು ಉಪಯೋಗಿಸಿಕೊಂಡು ಎದುರಿನವನು ತನ್ನ ಮೇಲೆ ಇನ್ನಷ್ಟು ಅಶ್ಲೀಲ ಹೋಲಿಕೆಯನ್ನು ಮಾಡದಂತೆ ತಡೆಯುವ ಪ್ರಯತ್ನ ಮಾಡುತ್ತಾರೆ.

   ಇಲ್ಲಿ ಸಾಹಿತ್ಯ ರಚಿಸುವವರು ಮಾತ್ರ ಪುರುಷರಲ್ಲ, ಈ ಹಾಡನ್ನು ಕೇಳಲು ಬರುವ ಪ್ರೇಕ್ಷಕರೂ ಪುರುಷರೇ ಆಗಿರುತ್ತಾರೆ ಮತ್ತು ಅವರು ಅಶ್ಲೀಲತೆಯ ಲೇಪ ಇರುವ ಕಥನ ನಿರೂಪಣೆಯನ್ನೇ ಹೆಚ್ಚು ಬಯಸುತ್ತಾರೆ. ಇದರಿಂದಾಗಿ ಯಾರು ಹೆಚ್ಚು ಅಶ್ಲೀಲ ಕತೆ ನಿರೂಪಿಸುತ್ತಾರೋ ಅವರಿಗೇ ಹೆಚ್ಚು ಬಕ್ಷೀಸು ಸಿಗುತ್ತದೆ. ಈ ಬಕ್ಷೀಸಿನ ಆಸೆಗೆ ಸ್ಪರ್ಧೆಗೆ ಬಿದ್ದವರಂತೆ ಇವರು ಹಾಡುತ್ತಾರೆ. ಹೆಂಗಸರಿಗೆ ಹೆಚ್ಚು ಬಕ್ಷೀಸು ಸಿಗುತ್ತಿದ್ದಂತೆ ಗಂಡಸರು ಹೆಂಗಸರ ಶೀಲವನ್ನೇ ಹರಾಜಿಗೆ ಹಾಕತೊಡಗುತ್ತಾರೆ. ಇಲ್ಲೇ ಇರುವುದು ದುರಂತ. ತಮ್ಮ ವೈಯಕ್ತಿಕ ಜೀವನದಲ್ಲಿ ಪಾತಿವ್ರತ್ಯವನ್ನು ಕಾಪಾಡಿಕೊಂಡು ಬಂದರೂ ದೇವದಾಸಿ ಎಂಬ ಪಟ್ಟ ಹೊತ್ತ ಏಕೈಕ ಕಾರಣಕ್ಕೆ ಸಮಾಜ ಇವರ ಮೇಲೆ ಬರುವ ಈ ಸಾರ್ವಜನಿಕ ಅಪವಾದವನ್ನು ನಂಬಿ ಬಿಡುತ್ತದೆ. ಇದೊಂದು ಪ್ರತಿಭಟಿಸ ಬೇಕಾದ ವಿಷಯವೇ ಅಲ್ಲ ಎಂಬ ಒಪ್ಪಿತ ಸ್ಥಿತಿ ನಿರ್ಮಾಣವಾಗಿರುವುದರಿಂದ ಅವರ ಗಂಡಂದಿರೂ ಅಪಮಾನವನ್ನು ನುಂಗಿಕೊಂಡು ಸುಮ್ಮನಿರುತ್ತಾರೆ. ಅವರ ಮಕ್ಕಳೂ ಅಸಹಾಯಕರಂತೆ ನಲುಗುತ್ತಾರೆ. ಅವರ ವಿದ್ಯಾವಂತ ಮಕ್ಕಳು ಅವಮಾನದಿಂದ ದುಮುಗುಡುತ್ತಾರೆ.

   ಈ ಕೃತಿ ಮುಖ್ಯವಾಗುವುದೇ ಇಂತಹ ವಿವರಗಳನ್ನು ಅನಾವರಣಮಾಡುವ ಕಾರಣಕ್ಕೆ. ಹೆಂಗಸರ ಈ ನೋವುಗಳ ಕುರಿತು ಲೇಖಕಿ ಅವರನ್ನು ಕೇಳಿದಾಗ ಹಲವರು ಇದನ್ನು ಹೇಳಲು ತಯಾರೇ ಇರಲಿಲ್ಲ. ಇನ್ನು ಕೆಲವರು ತಮ್ಮ ದುಃಖವನ್ನೂ ಕೇಳುವವರಿದ್ದಾರಲ್ಲ ಎಂದು ಭಾವುಕರಾಗುತ್ತಾರೆ. ಮತ್ತೆ ಕೆಲವರು ತಮ್ಮ ದುಃಖವನ್ನು ಹೇಳಿಕೊಂಡು ಹಗುರಾಗಲು ಆ ದೇವರೇ ಈಕೆಯನ್ನು ಕಳಿಸಿದ್ದಾರೆ ಎಂದು ಭಾವಿಸುತ್ತಾರೆ!  ನಿಜ, ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿ ಮಾಡುತ್ತವೆ.ಆದರೆ ಸಮಸ್ಯೆಯ ನಿಜವಾದ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಮಾತ್ರ ಹೊರಡುವುದಿಲ್ಲ. ಯೋಜನೆಯೊಂದು ಜನರಿಗೆ ಅನುಕೂಲ ಮಾಡಿಕೊಡುವುದಕ್ಕಿಂತಲೂ ಆ ಯೋಜನೆಯು ಅನುಷ್ಟಾನವಾಗಿದೆ ಎಂಬ ದಾಖಲೆಯನನ್ನು ಸೃಷ್ಟಿಸುವುದು ಅವರಿಗೆ ಮುಖ್ಯವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅವರ ಸಮಸ್ಯೆಗಳ ಸ್ವರೂಪವನ್ನು ಅರಿಯುವ ವ್ಯವಧಾನವೇ ಅವರಿಗಿರುವುದಿಲ್ಲ. ಉದಾ: ದೇವದಾಸಿ ಪದ್ಧತಿಯ ನಿರ್ಮೂಲನ ಮಾಡುವ ಯೋಜನೆ ಸರ್ಕಾರಕ್ಕಿದೆ. ಆದರೆ ಪರೋಕ್ಷವಾಗಿ ಸರ್ಕಾರದ ನೀತಿಗಳೇ ದೇವದಾಸಿ ಪದ್ಧತಿಯನ್ನು ಪೋಷಿಸುತ್ತಲೂ ಇದೆ. 

  ದೇವದಾಸಿಯರಿಗೆ ಮತ್ತು ಕಲಾವಿದರಿಗೆ ಸರ್ಕಾರ ಪೆನ್ಷನ್ ನೀಡುತ್ತದೆ. ನಾಗೇಶಿ ಕಲಾವಿದೆಯಾಗಬೇಕು ಎಂದರೆ ಆಕೆ ದಪ್ಪು ನುಡಿಸಬೇಕು. ದಪ್ಪು ನುಡಿಸಿದರೆ ಅವರಲ್ಲಿ ಮದುವೆಯಾಗುವುದು ನಿಷಿದ್ಧ. ಅಂದರೆ ನಾಗೇಶಿ ಕಲಾವಿದೆಯಾಗಬೇಕೆಂದರೆ ಅನಿವಾರ್ಯವಾಗಿ ದೇವದಾಸಿ ಆಗಬೇಕು! ಈಕೆ ಕಲಾವಿದೆಯಾದರೂ ಸರ್ಕಾರ ಈಕೆಗೆ ದೇವದಾಸಿ ಪೆನ್ಷನ್ ನೀಡುತ್ತದೆಯೇ ಹೊರತು ಕಲಾವಿದೆ ಪೆನ್ಷನ್ ಅಲ್ಲ. ಅದಕ್ಕಾಗಿ ಲಂಚ ಕೊಟ್ಟರೂ ತಮಗೆ ಈ ಪೆನ್ಷನ್ ಸಿಗುವುದಿಲ್ಲ ಎಂದು ಈ ಕಲಾವಿದೆಯರು ಅಲವತ್ತು ಕೊಳ್ಳುತ್ತಾರೆ. ಅತ್ತ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸುವಾಗ ಕಡ್ಡಾಯವಾಗಿ ತಂದೆಯ ಹೆಸರನ್ನು ಹಾಕಲು ಹೇಳಲಾಗುತ್ತದೆ. ಹಾಗೆ ತಂದೆಯ ಹೆಸರು ಹಾಕಿದರೆ ಆಕೆಯನ್ನು ದೇವದಾಸಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ದೇವದಾಸಿ ಪೆನ್ಷನ್ ಕೂಡ ನಿರಾಕರಿಸುತ್ತಾರೆ! ಹೋಗಲಿ ಕೂಲಿ ಮಾಡಿಕೊಂಡು ಬದುಕೋಣವೆಂದರೆ ಇವರ ಸಮಾಜದಲ್ಲಿ ಹಾಡಕಿಯವರು ಕೂಲಿಗೆ ಹೋಗುವುದನ್ನು ಕೀಳೆಂದು ಭಾವಿಸಿ ಅಲ್ಲಿಯೂ ಅವಮಾನಿಸಲಾಗುತ್ತದೆ.(ಕೂಲಿಗಿಂತ ಹಾಡಿಕೆಗೆ ಹೋದರೆ ಹಣ ಹೆಚ್ಚು ಸಿಗುತ್ತದೆ.) ಹಸಿವು, ಮಕ್ಕಳನ್ನೂ, ಮನೆಯ ಇತರರನ್ನೂ ಸಾಕಬೇಕಾದ ಜವಾಬ್ದಾರಿ, ಹಾಡಿಕೆಗೆ ಹೋದಾಗ ಆಗುವ ಸಾವಿರ ಅವಮಾನಗಳು, ಅನಾರೋಗ್ಯ, ದುಡಿದ ದುಡ್ಡನ್ನು ಮನೆಗೇ ಸುರಿದರೂ ಸಿಗದ ಮನೆಯ ಯಜಮಾನಿಕೆ ಹೀಗೆ ಈ ಕಲಾವಿದೆಯರದು ಕೊನೆಯಿಲ್ಲದ ಬವಣೆಗಳು. ತುಂಬು ಗರ್ಭಿಣಿಯರಾಗಿದ್ದಾಗಲೂ ರಾತ್ರಿಯಿಡೀ ನಿಂತು ಹಾಡುವ ಇವರು, ಹೆರಿಗೆ ಆದ ಹದಿನೈದು ದಿನಕ್ಕೇ ಮತ್ತೆ ಹಾಡಿಕೆಗೆ ತೊಡಗುತ್ತಾರೆ. ಊರೂರು ಅಲೆಯುತ್ತಾರೆ. ತಮ್ಮ ಮಾನ ಉಳಿಸಿಕೊಳ್ಳುವುದಕ್ಕಾಗಿ ಸದಾ ಆತಂಕಿತರಾಗಿರುತ್ತಾರೆ. ತಾವು ಮಾಡದೇ ಇರುವ ತಪ್ಪುಗಳನ್ನೆಲ್ಲಾ ತಮ್ಮ ಮೇಲೆ ಹೇರಿದಾಗಲೂ ತಾಳ್ಮೆ ಕಳೆದುಕೊಳ್ಳದೆ ಅವುಡುಗಚ್ಚಿ ಸಹಿಸಿಕೊಳ್ಳುತ್ತಾರೆ. 

 ಈ ಕೃತಿಯಲ್ಲಿ ಇಂತಹ ಹತ್ತು ಹಲವು ಪ್ರಸಂಗಗಳು ಮೈತೆರೆದುಕೊಂಡಿವೆ. ತನ್ನ ಸಂಶೋಧನೆಗಾಗಿ ಲೇಖಕಿ ಇವರ ಈ ಬವಣೆಗಳನ್ನು ಆಲಿಸ ಹೊರಟಾಗ ಹಲವರು ತಮ್ಮ ಭೂತಕಾಲವನ್ನು ನೆನಪಿಸಿಕೊಳ್ಳಲೂ ಬಯಸಲಿಲ್ಲ. ಇನ್ನು ಕೆಲವರು ತಮ್ಮ ಅನುಭವವನ್ನು ಹೇಳಿದರೂ ಹಾಗೆ ಹೇಳುತ್ತಲೇ ತೀವ್ರವಾದ ದೈಹಿಕ ನೋವಿಗೆ ಒಳಗಾದರು ಎಂದು ಲೇಖಕಿ ಹೇಳುತ್ತಾರೆ. ಆದರೆ ಯಾವ ಪುರುಷನಲ್ಲೂ ಇಂತಹ ಪ್ರತಿಕ್ರಿಯೆ ಕಾಣಲಿಲ್ಲವಂತೆ. ಬದಲಿಗೆ ಅವರು ಹೆಮ್ಮೆಯಿಂದ ತಮ್ಮ ಅನುಭವವನ್ನು ಹೇಳಿಕೊಂಡರಂತೆ. ನೋವಿನಲ್ಲೂ ಎಷ್ಟು ಸ್ವರೂಪಗಳು. ಕೆಲವು ನೋವುಗಳು ಕಾಲಾಂತರದಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುವ ಸಂಗತಿಗಳಾಗುತ್ತವೆ. ಆದರೆ ಈ ದೇವದಾಸಿಯರಿಗೆ ಅದು ಎಂದೆಂದಿಗೂ ನೆನಪಿಸಿಕೊಳ್ಳಬೇಕಾದ ಸಂಗತಿಗಳಾಗಿರುವುದಿಲ್ಲ.

   ಹೆಣ್ಣಿನ ಮೇಲೆ ನಡೆಯಬಹುದಾದ ಮಾನಸಿಕ ಮತ್ತು ದೈಹಿಕ ದಾಳಿಗಳೆಲ್ಲದರ ಆತ್ಯಂತಿಕ ಸ್ಥಿತಿಯೊಂದರ ರೂಪಕದಂತೆ ನಾಗೇಶಿ ಹಾಡಿಕೆ ಹಾಡುವ ಈ ಹೆಣ್ಣುಮಕ್ಕಳಿದ್ದಾರೆ. ಅವರ ಕುರಿತ ಈ ಅಧ್ಯಯನ ಕೇವಲ ಅಧ್ಯಯನವಲ್ಲ. ಒಟ್ಟು ಸಮಸ್ಯೆಯ ಆಳ ಅಗಲಗಳನ್ನು ಖಚಿತ ನೆಲೆಗಳಲ್ಲಿ ಗುರುತಿಸಿರುವ ಅಧ್ಯಯನವಾಗಿದೆ. ಇದು ಅನವಶ್ಯಕ ಅಪಮಾನಕ್ಕೆ ಒಳಗಾಗುತ್ತಿರುವ ನಾಗೇಶಿ ಹಾಡುಗಾರ್ತಿಯರಿಗೆ ಮಾತ್ರವಲ್ಲ, ಅವರನ್ನು ಅಪಮಾನಿಸಿಯೇ ಬಕ್ಷೀಸು ಪಡೆಯಬೇಕಾಗಿರುವ ಹರದೇಶಿ ಹಾಡುಗಾರರ ಸ್ಥಿತಿಯನ್ನೂ ಬದಲಿಸಲು ಈ ಸಮಾಜ/ಸರ್ಕಾರ ಮನಸ್ಸು ಮಾಡಬೇಕಾಗಿರುವುದನ್ನು ಒತ್ತಾಯಿಸುವ ಕೃತಿಯೂ ಆಗಿದೆ.
***
ಡಾ.ಸಬಿತಾ ಬನ್ನಾಡಿ                         
ಸಹ ಪ್ರಾಧ್ಯಾಪಕಿ                                  
ಸ್ನಾತಕೋತ್ತರ ಕನ್ನಡ ಅಧ್ಯಯನಾಂಗ                

ಸರ್ ಎಂ.ವಿ.ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು, ನ್ಯೂಟೌನ್, ಭದ್ರಾವತಿ. ಫೊ:೯೪೪೯೨೦೪೯೦೬

ಬುಧವಾರ, ಮಾರ್ಚ್ 5, 2014

ತಲ್ಲಣಗಳ ನಡುವೆ ಮತ್ತೊಂದು ಮಹಿಳಾ ದಿನ



-ಕೆ.ನೀಲಾ






ಸೌಜನ್ಯ: ವಿಜಯ ಕರ್ನಾಟಕ

   ಭಾರತದಲ್ಲಿ ಜಯಂತಿ, ದಿನಾಚರಣೆಗಳು ನಿತ್ಯ ನಿರಂತರ ನಡೆದೇ ಇರುತ್ತವೆ. ಮಹಿಳಾ ದಿನಾಚ ರಣೆಯು ಇವುಗಳಲ್ಲಿದೆ. ಆದರೆ ಅಂತಾರಾ ಷ್ಟ್ರೀಯ ಮಹಿಳಾ ದಿನಾಚರಣೆ ಸಾಂಪ್ರ ದಾ ಯಿ ಕ ಸ್ವರೂಪದಲ್ಲಿ ಆಚರಿಸುವ ದಿನವಲ್ಲ. ಅದು ಹೋರಾಟದ ಗಾಥೆ ಯನ್ನು ಒಡಲೊಳಗಿಟ್ಟು ಕೊ ಂ ಡಿದೆ. ಪಾರ್ಲಿ ಮೆಂಟು ಚುನಾ ವ ಣೆಗಳನ್ನು ಎದುರು ಗೊಳ್ಳು ತ್ತಿರುವ ಈ ಹೊತ್ತಿ ನಲ್ಲಿ ಮಹಿಳಾ ದಿನಾಚರಣೆ ಚರಿತ್ರೆಯನ್ನು ನೆನಪಿಸಿಕೊಳ್ಳ ಬೇಕು. 1908ರ ಮಾರ್ಚ್ 8ರಂದು ಅಮೆರಿಕೆಯ ನ್ಯೂಯಾರ್ಕ್ ಮಹಾ ನಗರದ ಮಹಿಳಾ ಕಸೂತಿ ಕಾರ್ಮಿಕರು ತಮ್ಮ ಯೂನಿ ಯನ್ನಿನ ಇತರ ಬೇಡಿಕೆಗಳೊಂದಿಗೆ ಮಹಿಳೆಯರ ಮತದಾನದ ಹಕ್ಕನ್ನು ಮಂಡಿಸಿ ಹೋರಾಟ ನಡೆಸಿದರು. ಈ ಹೋರಾಟ ಪರಂ ರೆ ಮುಂದುವರೆಸುವ ಉದ್ದೇಶದಿಂದ ಅಂತಾ ರಾಷ್ಟ್ರೀಯ ಮಹಿಳಾ ಸಮ್ಮೇಳನ, ಮಾರ್ಚ್ 8ನ್ನು ಅಂತಾ ರಾಷ್ಟ್ರೀಯ ಮಹಿಳಾ ಕಾರ್ಮಿಕರ ದಿನವನ್ನಾಗಿ ಆಚರಿಸು ವಂತೆ ಘೋಷಿಸಿತು.

ಮರುವರ್ಷವೇ ಅನೇಕ ದೇಶಗಳಲ್ಲಿ ಮಹಿಳಾ ದಿನವನ್ನು ಆಚರಿಸಲಾಯಿತು. ಆಂದೋಲನ ದೊಂ ದಿಗೆ ಬೆಸೆದುಕೊಂಡು ಮಹಿಳಾ ಹಕ್ಕಿನ ಹೋರಾಟವಾಗಿ, ಮಹಿಳಾ ಸಂಕುಲದ ವಿಮೋಚನೆ ಉದ್ದೇಶದೊಂದಿಗೆ, ಸಮಗ್ರ ಸಮಾನತೆಯ ಸಮಾಜ ರಚನೆಯ ಗುರಿಯೊಂದಿಗೆ ದಾಪುಗಾಲಿ ಟ್ಟಿತು. ಈ ಪ್ರೇರಣೆಯಲ್ಲಿ 1917 ಮಾರ್ಚ್ 8ರಂದು ರಷ್ಯಾದ ಕಾರ್ಮಿಕ ಮಹಿಳೆಯರು ಝಾರ್‌ನ ನಿರಂಕುಶ ಪ್ರಭುತ್ವದ ದಬ್ಬಾಳಿಕೆ ವಿರುದ್ಧ ಚಳುವಳಿ ನಡೆಸಿದರು. ಅಂತೆಯೇ 1936ರಲ್ಲಿ 'ಲ್ಯಾಪಾಶನೇರಿಯಾ'ದ 80 ಸಾವಿ ರಕ್ಕೂ ಹೆಚ್ಚು ಮಹಿಳೆಯರು ಫ್ಯಾಸಿಸ್ಟ್ ಫ್ರಾಂಕೋನ ವಿರುದ್ಧ ಬಹುದೊಡ್ಡ ಪ್ರತಿಭಟನೆಯಿಂದ ಪ್ರಭುತ್ವ ನಡುಗಿಸಿದರು. 1950ರ ಮಾರ್ಚ್ 8ರಂದು ಸುಮಾರು 3ಲಕ್ಷ ಮಹಿಳೆಯರು ನಿಶ್ಯಸ್ತ್ರೀಕರಣ ಮತ್ತು ಶಾಂತಿಗಾಗಿ ಪಶ್ಚಿಮ ಜರ್ಮನಿಯ ಚಾನ್ಸ ಲರ್‌ಗೆ ಪೋಸ್ಟ್ ಕಾರ್ಡುಗಳನ್ನು ಕಳಿಸಿದರು. ಇದೇ ದಿನದಂದು ಇರಾನಿನ 50 ಸಾವಿರಕ್ಕೂ ಹೆಚ್ಚು ಟೆಕ್ಸ್‌ಟೈಲ್ ಕಾರ್ಮಿಕ ಮಹಿಳೆಯರು ತೈಲ ಉದ್ಯಮದ ರಾಷ್ಟ್ರೀಕರಣದ ಬೇಡಿಕೆ ಯನ್ನಿ ಟ್ಟು ಚಳುವಳಿ ನಡೆಸಿದರು. 1975ರಿಂದ ಎಲ್ಲ ದೇಶ ಗಳ ಲ್ಲಿಯೂ ಮಹಿಳಾ ದಿನಾಚರಣೆ ಯನ್ನು ಆಚರಿಸಲಾಗುತ್ತಿದೆ.

ಮತದಾನದ ಹಕ್ಕಿಗಾಗಿ ಆರಂಭಗೊಂಡ ಮಹಿಳೆಯರ ಹೋರಾ ಟ ರಾಜಕೀಯ ತಿಳುವಳಿಕೆಯನ್ನು ಮತ್ತು ನೈಜ ಅಭಿ ವದ್ಧಿಯ ಕಣ್ಣೋಟ ಒಳಗೊಂಡಿತ್ತು. ಮಹಿಳೆಯನ್ನು ಬಿಟ್ಟಿ ಚಾಕ ರಿಗೆ ಬಳಸಿಕೊಳ್ಳುವ ದೇಶಗಳಲ್ಲಿ ಅವಳನ್ನು ಮತ ದಾ ನದ ಹಕ್ಕಿ ನಿಂದಲೂ ವಂಚಿಸಲಾಗಿತ್ತು. ರಾಜಕೀಯ ವಿದ್ಯ ಮಾನ ಗಳಲ್ಲಿ ತೊಡ ದಂತೆ ನೋಡಿಕೊಳ್ಳಲಾಗಿತ್ತು. ದಮನದ ವಿರುದ್ಧ ಮಹಿಳಾ ಲೋಕ, ದುಡಿವ ವರ್ಗದ ಚಳವಳಿಯೊಂದಿಗೆ ಕೈಗೂ ಡಿಸಿ ಸಮಗ್ರ ಬದಲಾವಣೆಗಾಗಿ ಹೋರಾಡಿತು. ಅನೇಕ ದೇಶ ಗಳಲ್ಲಿ ರಾಜಶಾಹಿ ಮತ್ತು ನಿರಂಕುಶ ಪ್ರಭುತ್ವವನ್ನು ಕಿತ್ತು ಹಾಕಿದ ಮೇಲೆಯೇ ಮತದಾನದ ಹಕ್ಕು ಪಡೆಯಲು ಸಾಧ್ಯವಾಯಿತು. ಮಾರ್ಚ್ ತಿಂಗಳುದ್ದಕ್ಕೂ ಸರಕಾರದಿಂದಲೂ ಸರಕಾರೇತರ ಸಂಸ್ಥೆ ಗಳಿಂದಲೂ ಮಹಿಳಾ ದಿನಾಚರಣೆ ಅತ್ಯಂತ ವೈಭವೋ ಪೇತ ವಾಗಿ ಆಚರಿಸಲಾಗುತ್ತಿದೆ. ಆದರೆ ಅದರ ಚಾರಿತ್ರಿಕ ಸಂಗತಿಯನ್ನು ಮರೆಮಾಚಲಾಗುತ್ತಿದೆ. ಅದರಲ್ಲೂ ಸರಕಾರದಿಂದ ಮಾರ್ಚ್ 8ರಂದು ಇಂಥದೇ ಹಾರ ತುರಾಯಿ, ಭರ್ಜರಿ ಭಾಷಣಗ ಳೊಂದಿಗೆ, ರೇಷ್ಮೆ ಸೀರೆಗಳ ಸರಬರದೊಂದಿಗೆ ಅದ್ಧೂರಿ ಕಾರ‌್ಯಕ್ರಮ ನಡೆಯುತ್ತಿರುತ್ತದೆ. ಸಾಧಕಿಯರಿಗೆ ಪ್ರಶಸ್ತಿ ಕೊಡಲಾಗುತ್ತದೆ. ಆದರೆ ಮಹಿಳೆ ಇಂದಿಗೂ ಅನುಭವಿಸುತ್ತಿರುವ ಅ ಮಾನ, ದೌರ್ಜನ್ಯ, ಸಂಕಟಗಳ ನಿವಾರಣೆಯ ಕುರಿತು ಅಸಡ್ಡೆ ಇದೆ.

ಅಪೌಷ್ಠಿಕತೆ, ರಕ್ತಹೀನತೆ, ಬಾಲ್ಯ ವಿವಾಹ, ಭ್ರೂಣ ಹತ್ಯೆ, ವರ ದಕ್ಷಿಣೆ ಕಾಟ, ಆಸ್ತಿ ಹಕ್ಕಿನಿಂದ ನಿರಾಕರಣೆ, ಒಂಟಿ ಮಹಿಳೆಯರ ಕೊಲೆ, ದಲಿತ, ಬುಡಕಟ್ಟು, ಆದಿವಾಸಿ ಮಹಿಳೆ ಯರ ಮೇಲಿನ ದಾಳಿ ದಬ್ಬಾಳಿಕೆ ಹೀಗೆ ಪಟ್ಟಿ ಬೆಳೆಯುತ್ತದೆ. ಎಲ್ಲಕ್ಕೂ ಮಿಗಿಲಾಗಿ ಹಾದಿ- ಬೀದಿಯಲ್ಲಿಯೇ ನೈತಿಕ ಪೋಲಿಸ್ ಗಿರಿಯ ಹಲ್ಲೆಯಾ ಗುತ್ತಿವೆ. ಜಾತಿ-ಲಿಂಗ ತಾರ ತಮ್ಯ ವಂತೂ ದಿನಗಳೆದಂತೆ ಹರಿತ ಗೊ ಳ್ಳು ತ್ತಿದೆ. ಮಹಿಳೆಯರನ್ನು ಕೀಳೀಕರಿಸುವ ಏಕಸಂಸ್ಕೃತಿಯ ದಾಳಿ ಯಿಂದ ವೈಧವ್ಯದ ಅಪಮಾನ ಮುಂದುವರೆದಿದೆ.

ಮಹಿಳೆಯರು ಈ ನೋವುಗಳ ಕಡಲನ್ನು ಹೊತ್ತೇ ಮೂರು ಪಟ್ಟು ದುಡಿಮೆಗೆ ಹೆಗಲು ಕೊಡುವುದು ತಪ್ಪಿಲ್ಲ. ಎಲ್ಲ ಹಂತ ದಲ್ಲಿಯೂ ಮಹಿಳೆಯ ರನ್ನು ಎರಡನೇ ದರ್ಜೆ ಪ್ರಜೆಯಾ ಗಿಯೇ ಉಳಿಸುವಂಥ, ಅವಳ ಶ್ರಮವನ್ನು ಪುಕ್ಕಟ್ಟೆಯಾಗಿ ಬಾಚುವಂಥ ಯೋಜನೆಗಳು ಅಸ್ತಿತ್ವ ಪಡೆದುಕೊಳ್ಳತೊಡಗಿವೆ. ಕುಟುಂಬ ದೊ ಳಗಿನ ಕೆಲಸಕ್ಕೆ ಆರ್ಥಿಕ ಮೌಲ್ಯವಿಲ್ಲ. ಕಡೆಪಕ್ಷ ಪ್ರತಿಫಲದಲ್ಲಿ ಆರ್ಥಿಕವಲ್ಲ ದಿದ್ದರೂ ಸಮಾನ ಗೌರವವೂ ನಿರೀಕ್ಷಿಸಬಾರದೇ? ಇಟ್ಟಂಗಿಭಟ್ಟಿ, ಕಟ್ಟಡ ಕೆಲಸ, ಮನೆಗೆಲಸ, ಕಷಿ ಕೆಲಸ, ಗಾರ್ಮೆಂಟ್ ಹೀಗೆ ಎಲ್ಲೆಡೆ ಅತ್ಯಂತ ಕಡಿಮೆ ಕೂಲಿಯಲ್ಲಿ ದುಡಿಸಿ ಕೊಳ್ಳ ಲಾ ಗುತ್ತಿದೆ. ಮಾತ್ರ ವಲ್ಲ ಸಾಧ್ಯವಾದಷ್ಟು ಹೆಚ್ಚು ದುಡಿಮೆ ಪಡೆಯುವ ತಂತ್ರವೂ ಇದರಲ್ಲಡಗಿರುತ್ತದೆ. ಅಂತೆಯೇ ಪ್ರಭುತ್ವ ಸಹ ಮಹಿಳೆಯ ದುಡಿಮೆ ಯನ್ನು ಬಿಟ್ಟಿ ಯಾಗಿ ಪಡೆ ಯು ತ್ತಿದೆ. ಯಾವುದೇ ಸೌಲಭ್ಯ ಕೊಡದೆ ದುಡಿಸಿ ಕೊಳ್ಳುತ್ತಿದೆ. ಅಂಗನ ವಾಡಿ, ಆಶಾ, ಅಕ್ಷರ ದಾಸೋಹ ಮುಂತಾದ ಅಕ್ಕಂದಿರನ್ನು ಸಂಬಂಧಪಟ್ಟ ಕೆಲ ಸಕ್ಕೆ ಮಾತ್ರ ತೊಡಗಿಸುವುದಿಲ್ಲ. ಕಡಿಮೆ ಗೌರವಧನ ಕೊಟ್ಟು ಹೆಚ್ಚುವರಿ ದುಡಿಮೆ ಪಡೆಯ ಲಾಗುತ್ತಿದೆ. ಸ್ತ್ರೀಶಕ್ತಿ ಸಂಘ , ಜನಗಣತಿ, ಸಮೀಕ್ಷೆ ಮುಂತಾದ ಕೆಲಸಗಳು ಇದ್ದೇ ಇರುತ್ತವೆ. ಹೀಗೆ ದುಡಿಸಿ ಕೊಳ್ಳು ವಾಗ ಮಹಿಳೆಯರಿಗೆ ಅತ್ಯವಶ್ಯಕ ವಿರುವ ಸೌಲಭ್ಯಗಳನ್ನಾ ದರೂ ಒದಗಿಸುವುದಿಲ್ಲ. ಅದರಲ್ಲಿಯೂ ಪಲ್ಸ್ ಪೋಲಿಯೋ ದಂಥ ರಾಷ್ಟ್ರೀಯ ಕಾರ‌್ಯಕ್ರಮಗಳಲ್ಲಿ ರಜೆಯನ್ನೂ ತೆಗೆದುಕೊಳ್ಳು ವಂತಿಲ್ಲ. ಚುನಾವಣೆಯ ಕೆಲಸದ ಸಂದರ್ಭದಲ್ಲ
ಿ ನಾಲ್ಕಾರು ಪುರುಷರೊಂದಿಗೆ ಒಬ್ಬೊಬ್ಬ ಮಹಿಳೆ ಯನ್ನೇ ನಿಯೋಜನೆ ಮಾಡ ುವರು. ಮತದಾನ ಕೇಂದ್ರಗಳಿರುವ ಹಳ್ಳಿಗಳಲ್ಲಿ ಮೂಲಭೂತ ಸೌಲಭ್ಯಗಳಿರುವುದಿಲ್ಲ. ಕನಿಷ್ಠ ಶೌಚಾಲ ಯವಿರುವುದಿಲ್ಲ. ಮೂಲ ಭೂತ ಸೌಲಭ್ಯಗಳನ್ನು ಕಲ್ಪಿಸಿ ಯಾದರೂ ಮಹಿಳೆಯನ್ನು ನಿಯೋಜಿಸಬೇಕು ಇಲ್ಲವೆ ಮೂಲ ಭೂತ ಸೌಲಭ್ಯಗಳಿರು ವೆಡೆ ಯಾದರೂ ನಿಯೋಜಿಸಬೇಕು. ಆದರೆ ಚುನಾವಣಾಧಿಕಾರಿ ಗಳಿಗೆ ಕನಿಷ್ಠ ಲಿಂಗಸಂವೇದನಾ ಶೀಲ ತೆ ಯಿಲ್ಲದರ ಪರಿಣಾಮವಿದು.

ಮಹಿಳೆಯರಿಗೆ ನ್ಯಾಯ ಮಾತ್ರ ಮರೀಚಿಕೆಯಾಗುತ್ತಿದೆ. ಇಂಥ ಹೊತ್ತಿನಲ್ಲಿ ರಾಜ್ಯದಲ್ಲಿ ಮಹಿಳಾ ಆಯೋಗವೂ ಇಲ್ಲ ದಾ ಗಿದೆ. ತಕ್ಷಣ ಆಯೋಗ ರಚಿಸುವ ಹೊಣೆಗಾರಿಕೆ ಪ್ರಭುತ್ವದ್ದಾಗಿದೆ. ಜಿಲ್ಲಾ ಮಟ್ಟದಲ್ಲಿಯೂ ಮಹಿಳಾ ಆಯೋಗಗಳ ಸಮಿತಿ ರಚನೆ ಯಾಗಬೇಕು. ಹೆಚ್ಚುತ್ತಿರುವ ದೌರ್ಜನ್ಯಗಳ ತಡೆಗಾಗಿ ವ್ಯಾಪಕ ಪ್ರಚಾರಾಂದೋಲನ ಕೈಗೊಳ್ಳುವಂಥ ಆಯೋಗ ಬೇಕಿದೆ. ಮಹಿಳಾ ಪರ ಕಾನೂನುಗಳನ್ನು ಪ್ರಚುರಗೊಳಿಸುವ ಜರೂರಿದೆೆ. ದೌರ್ಜನ್ಯ ತಡೆಗಾಗಿ ನ್ಯಾಯಮೂರ್ತಿ ವರ್ಮಾ ಕಮಿಟಿಯ ಶಿಫಾರಸ್ಸುಗಳು ಜಾರಿಯಾಗಬೇಕಿದೆ. ಮಹಿಳೆ- ಮಕ್ಕಳ ಕಾಣೆ ಪ್ರಕರಣಗಳು ಭಯಾನಕ ಸ್ವರೂಪದಲ್ಲಿ ಹೆಚ್ಚುತ್ತಿವೆ. 'ಗುಜ್ಜರ್ ಕೀ ಶ್ಯಾದಿ' ಹೆಸರಿನಲ್ಲಿ ನಡೆಯುವ ಮದುವೆಗಳು ಒಂದರ್ಥದಲ್ಲಿ ಹೆಣ್ಣುಮಕ್ಕಳ ಮಾರಾಟವೇ ಆಗಿವೆ. ಈ ಕುರಿತು ಸಮಗ್ರ ಸಮಿಕ್ಷೆ ನಡೆಸಿ ಸತ್ಯಾಂಶ ಬಯಲು ಮಾಡದಿದ್ದರೆ ಕಾಣೆಯಾಗುತ್ತಿರುವ ಹೆಣ್ಣು ಮಕ್ಕಳ ಪಟ್ಟಿ ಅಪಾಯಕಾರಿಯಾಗಿ ಬೆಳೆಯಬ ಹುದು. ಮಾಧ್ಯಮಗಳ ಮೂಲಕ ಲೈಂಗಿಕ ಅಪ ರಾಧಗಳು ಮತ್ತು ಮಹಿಳಾ ವಿರೋಧಿ ಪಾಳೇಗಾರಿಕೆ ಮೌಲ್ಯಗಳ ಪ್ರಚಾರವನ್ನು ತಕ್ಷಣ ನಿಷೇಧಿಸಲು ಕ್ರಮ ಕೈಗೊಳ್ಳಬೇಕಿದೆ. 

ಬದುಕಿನ ಬಂಡಿಗೆ ಹೆಗಲು ಕೊಟ್ಟು ಹೈರಾಣಾಗುವ ಮಹಿಳೆಗೆ ಗ್ರಾಮೀಣ ಪ್ರದೇಶದಲ್ಲಿ ಕೈಗೊಂದು ಕೆಲಸವೂ ಇಲ್ಲವಾಗಿದೆ. ಹಳ್ಳಿಯಲ್ಲಿರುವ ಉದ್ಯೋಗಖಾತ್ರಿ ಯೋಜನೆಯು ಭ್ರಷ್ಟರ ಕೈವಶವಾಗಿದೆ. ಹೆಚ್ಚುತ್ತಿರುವ ಬೆಲೆಗಳಿಒಂದ ಸಂಸಾರ ನಿಭಾ ಯಿ ಸ ಲಾಗದೆ ಮೈಕ್ರೊ ಫೈನಾನ್ಸ್‌ಗಳಿಂದ ಸಾಲ ಪಡೆದು ದುಪ್ಪಟ್ಟು ಬಡ್ಡಿ ಕಟ್ಟಲಾಗದೆ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ. ಸ್ತ್ರೀಶಕ್ತಿ ಸ್ವ ಸಹಾಯ ಸಂಘಗಳು ಸರಕಾರದ ಯೋಜನಾಬದ್ಧವಾದ ನೆರ ವಿ ಲ್ಲದೆ, ಸೊರಗುತ್ತಿವೆ. ಈ ಗುಂಪು ಗಳನ್ನು ರಾಜಕೀಯ ಉದ್ಧೇಶ ಕ್ಕಾಗಿ ಬಳಸಿಕೊಳ್ಳುವ ಅಪಾಯದಿಂದ ತಪ್ಪಿಸಬೇಕಿದೆ.

ನಮ್ಮ ಮಕ್ಕಳು ಓದುತ್ತಿರುವ ಪಠ್ಯವು ಲಿಂಗಸಂವೇದನಾಶೀಲತೆ ಮತ್ತು ಜಾತ್ಯಾತೀತ ಮೌಲ್ಯಗಳಿಂದ ಕೂಡಿರಬೇಕು. ಇದು ನಮ್ಮ ಸಂವಿಧಾನದ ಆಶಯವೂ ಆಗಿದೆ. ಆದರೆ ಅವೈಜ್ಞಾನಿಕವಾದ ಮತ್ತು ತಿರುಚಿದ ಇತಿಹಾಸವನ್ನು ನಮ್ಮ ಮಕ್ಕಳು ಓದುತ್ತಿದ್ದಾರೆ. ಶಾಲೆಗಳಲ್ಲಿಯೇ ಹುಡುಗಿಯರು (ವಿದ್ಯಾರ್ಥಿಗಳು ಸಹ) ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಈ ದೌರ್ಜನ್ಯ ತಡೆ ಗಟ್ಟಲು ಮಕ್ಕಳ ಹಕ್ಕುಗಳ ರಕ್ಷಿಸಲು ಪ್ರಭುತ್ವದಲ್ಲಿ ಯಾವ ಯೋಜನೆಗಳೂ ಇಲ್ಲ. ಕಡ್ಡಾಯ ಶಿಕ್ಷಣವೆನ್ನುವುದು ಸಮರ್ಪಕ ಜಾರಿ ಯಾಗದೆ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ.

ಕೊನೆಯ ಹಂತದವರೆಗೂ ಮಹಿಳಾ ಮೀಸಲಾತಿ ಮಸೂದೆ ಯನ್ನು ಲೋಕಸಭೆಯಲ್ಲಿ ಮಂಡಿಸುವುದಾಗಿ ಕೇಂದ್ರ ಪ್ರಭುತ್ವ ಹೇಳುತ್ತಲೇ, ಅಂತಿಮವಾಗಿ ಮೂಲೆಗೆ ತಳ್ಳಿ ಈಗ ಚುನಾವಣೆಗೆ ಸಜ್ಜಾಗಿದೆ. ಅರ್ಧಸಂಖ್ಯೆಯ ಮಹಿಳಾ ಸಮುದಾಯವನ್ನು ನಿರ್ಲಕ್ಷಿಸಿಯೇ ರಾಜಕೀಯ ಪಕ್ಷಗಳು ಚುನಾವಣೆ ಎದುರಿಸುವ ದಾರ್ಷ್ಟ್ಯತೆ ತೋರುತ್ತಿವೆ ಎನಿಸುತ್ತದೆ. ಇದು ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವ ಸಂಗತಿ. ಯಾವ ನೈತಿಕತೆಯೊಂದಿಗೆ ಮತ ಗಳನ್ನು ಯಾಚಿಸುವರು? ರಾಜಕೀಯ ಪಕ್ಷಗಳು ತಮ್ಮ ಪಕ್ಷದೊ ಳಗೂ ಮಹಿಳೆಯರಿಗೆ ಟಿಕೇಟು ಕೊಡದೆ, ಮೀಸಲಾತಿ ಯನ್ನೂ ಜಾರಿ ಮಾಡದೆ ಬಹಿರಂಗವಾಗಿಯೇ ಮಹಿಳಾ ವಿರೋಧಿಯಾಗಿ ನಡೆದುಕೊಳ್ಳುವ ತೀರ್ಮಾನ ಮಾಡಿದಂತಿದೆ. ಇದು ಮಹಿಳಾ ಲೋಕದಲ್ಲಿ ಮಾತ್ರವಲ್ಲ ಸಮಸ್ತ ಪ್ರಜ್ಞಾವಂತರಿಗೆ ಸವಾಲಾಗಿಯೇ ಪರಿಣಮಿಸುತ್ತದೆ.

ಆದ್ದರಿಂದಲೇ ಈ ಸಂದರ್ಭದ ಮಹಿಳಾ ದಿನಾಚರಣೆ ಎನ್ನುವುದು ಕೇವಲ ಕಾರ‌್ಯಕ್ರಮವಲ್ಲ, ಇದೊಂದು ಮಹಿಳೆಯರ ಅಸ್ಮಿತೆಯ, ಸ್ವಾಭಿಮಾನದ ಮತ್ತು ವಿಮೋಚನೆಯ ಹಕ್ಕಿಗಾಗಿನ ಹೋರಾಟವಾಗಿ ಎದುರುಗೊಳ್ಳಬೇಕಾಗುತ್ತದೆ.

ರಾಮ್ ಗೋಪಾಲ್ ವರ್ಮ ಸಿನಿಮಾಯಾನ ‘ನನ್ನಿಷ್ಟ’


ಸಿನಿವ್ಯಾಮೋಹಿಯ ಸೃಜನಶೀಲ ಕಥನ

-ಅರುಣ್ ಜೋಳದಕೂಡ್ಲಿಗಿ




   ಭಾರತದ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ ಯುವ ಸಿನಿಮಾ ನಿರ್ದೇಶಕರಲ್ಲಿ ರಾಮ್ ಗೋಪಾಲ್ ವರ್ಮರದು ವಿಶಿಷ್ಟ ಹೆಸರು. ‘ಶಿವ’ ‘ರಂಗೀಲಾ’ ‘ಭೂತ್’ ‘ಸರ್ಕಾರ್’ ‘ಕಂಪೆನಿ’ ಮುಂತಾದ ಸಿನಿಮಾಗಳ ಮೂಲಕ ಆರ್.ಜಿ.ವಿ ಸಿನಿಮಾ ಮಾದರಿಯೊಂದನ್ನು ಸೃಷ್ಟಿಸಿದವರು. ವರ್ಮ ಅವರ ಸಿನೆಮಾ ಜಗತ್ತಿಗೆ ಪ್ರವೇಶ ಪಡೆದಂದಿನಿಂದ ಈಚಿನ ತನಕದ ಬದುಕ ಪಯಣದ ಒಂದಷ್ಟು ನೆನಪುಗಳನ್ನು ಹೆಕ್ಕಿ ಕಟ್ಟಿಕೊಟ್ಟಿರುವ ಅವರ ಅನುಭವ ಜಗತ್ತು ‘ನನ್ನಿಷ್ಟ’ ಕೃತಿರೂಪ.

    ಕನ್ನಡದ ಸಂದರ್ಭದಲ್ಲಿ ಸಿನೆಮಾ ನಿರ್ದೇಶಕರು ತಮ್ಮ ಆತ್ಮಕಥನಗಳನ್ನು ಬರೆದುಕೊಂಡದ್ದು ಕಡಿಮೆ. ಪುಟ್ಟಣ್ಣ ಕಣಗಲ್ ಮೊದಲಾದವರು ತಮ್ಮ ಅನುಭವ ಕಥನಗಳನ್ನು ಬರೆದುಕೊಂಡಿದ್ದರೆ, ಕನ್ನಡ ಸಿನೆಮಾ ಇತಿಹಾಸದ ಭಿನ್ನ ಮಗ್ಗಲುಗಳು ತೆರೆದುಕೊಳ್ಳುತ್ತಿದ್ದವೋ ಏನೋ. ಅಂಥದ್ದೊಂದು ದೊಡ್ಡ ಕೊರತೆ ಕನ್ನಡ ಚಲನಚಿತ್ರ ಇತಿಹಾಸಕ್ಕಿದೆ. ಈಚಿನ ಗುರುಪ್ರಸಾದ್ ಅವರ ‘ಡೈರೆಕ್ಟರ್ ಸ್ಪೆಷಲ್’ ತರಹದ ಕೃತಿಗಳು ಸದ್ಯದ ನಿರ್ದೇಶಕರನ್ನಾದರೂ ಪ್ರಭಾವಿಸಬೇಕಿದೆ. ಕನ್ನಡ ಸಂದರ್ಭದಲ್ಲಿ ಸಾಹಿತಿಗಳ ಆತ್ಮಕಥನಗಳ ಬಾಹುಳ್ಯ ಹೆಚ್ಚಿದೆ. ಹಾಗೆ ನೋಡಿದರೆ, ಬೇರೆ ಬೇರೆ ಕ್ಷೇತ್ರದವರು ಆತ್ಮಕಥೆಗಳನ್ನು ಪ್ರಾಮಾಣಿಕವಾಗಿ ದಾಖಲಿಸಲು ಸಾಧ್ಯವಾದರೆ, ಆಯಾ ಕ್ಷೇತ್ರಗಳ ಬಗೆಗಿದ್ದ ಮೂಡನಂಬಿಕೆ ಮತ್ತು ಭ್ರಮೆಗಳು ಒಡೆಯುತ್ತವೆ. ಸಿನಿಮಾ ತುಂಬಾ ಜನಪ್ರಿಯ ಮತ್ತು ಪ್ರಭಾವಿ ಮಾಧ್ಯಮ. ಇಂತಹ ಮಾಧ್ಯಮದಲ್ಲಿ ಕೆಲಸ ಮಾಡಿದ ಯಶಸ್ವಿ ನಿರ್ದೇಶಕರೊಬ್ಬರ ಬದುಕಿನ ಕಥನ ಯಾವಾಗಲೂ ಕುತೂಹಲ ಮೂಡಿಸುವಂಥದ್ದೆ. ಹಾಗಾಗಿ ವರ್ಮ ಕಥನ ಕೂಡ ಓದುವ ಕುತೂಹಲವನ್ನು ಮೂಡಿಸುತ್ತದೆ.


 ರಾಮ್ ಗೋಪಾಲ್ ವರ್ಮಾ ಸಿನಿಬದುಕಿನಲ್ಲಿ ಇಟ್ಟ ಒಂದೊಂದು ಹೆಜ್ಜೆಗಳನ್ನು ಅದರೆಲ್ಲಾ ಕಾತರ, ಉತ್ಸಾಹ, ಆತಂಕ, ಮುಗ್ಧತೆಗಳು ಮಸುಕಾಗದಂತೆ ನಿರೂಪಿಸಿದ್ದಾರೆ. ಈ ಬಗೆಯ ನಿರೂಪಣೆಯೆ ಓದುವಿಕೆಗೆ ಆಪ್ತತೆಯನ್ನು ತಂದುಕೊಡುತ್ತದೆ. ಸಿನಿಮಾ ಕ್ಷೇತ್ರವೊಂದರಲ್ಲಿ ಹೊಸ ತಲೆಮಾರಿನ ಪ್ರವೇಶಕ್ಕಿರುವ ತೊಡಕುಗಳ ನ್ನು ವಿವರಿಸುತ್ತಾ, ಎಲ್ಲಾ ಕ್ಷೇತ್ರಗಳಲ್ಲೂ ಹೊಸ ತಲೆಮಾರು ಅನುಭವಿಸಬಹುದಾದ ಕಷ್ಟದ ಜತೆ ಲಗತ್ತಿಸುತ್ತಾರೆ. ಪುಸ್ತಕ ಓದಿನಿಂದ ಪುಸ್ತಕವೊಂದು ಹುಟ್ಟುವಂತೆ, ಸಿನಿಮಾಗಳಿಂದಲೇ ಸಿನಿಮಾವೊಂದು ಹುಟ್ಟುವುದನ್ನು, ‘ಶಿವಾ’ ಸಿನೆಮಾಕ್ಕೆ ಇನ್‌ಸ್ಪೈರ್ ಆದ ಸಿನಿಮಾಗಳ ಪಟ್ಟಿಯೊಂದನ್ನು ಕೊಡುತ್ತಾರೆ. ಇಂಹತ ಸಂಗತಿಗಳ ಬಗ್ಗೆ ಹೇಳುವಾಗಲೆಲ್ಲಾ ಹಾಸ್ಯದಲ್ಲಿಯೋ ವ್ಯಂಗ್ಯದಲ್ಲಿಯೋ ತೇಲಿಸುತ್ತಲೇ ವರ್ಮ ತನೇನೋ ಮಹಾನ್ ಸಾಧಿಸಿದ್ದೇನೆಂಬ ಕಾರಣಕ್ಕೆ ಹುಟ್ಟಬಹುದಾದ ಅಹಂ ನಿರಶನ ಮಾಡಿಕೊಳ್ಳುತ್ತಾರೆ.

 ‘ನನ್ನ ಫ್ಲಾಪ್ ಸಿನೆಮಾಗಳೆಲ್ಲವನ್ನೂ ನಾನು ಉದ್ದೇಶಪೂರ್ವಕವಾಗಿ ತೆಗೆದದ್ದು..ಹಾಗೂ ನನ್ನ ಹಿಟ್ ಸಿನಿಮಾಗಳೆಲ್ಲಾ ಅನಿರೀಕ್ಷಿತವಾಗಿ ಸಂಭವಿಸಿದ್ದು’ ಎನ್ನುವಂತಹ ಮಾತುಗಳು ಕಥನದುದ್ದಕ್ಕೂ ಬರುತ್ತವೆ. ಇವುಗಳ ಮೂಲಕ ನಿಜ ಬದುಕಿನಲ್ಲಿ ಸಿನಿಕತೆಯನ್ನು ಮೀರಲು ವರ್ಮ ಮಾಡುವ ಕಸರತ್ತಿನ ಭಾಗಗಳಂತೆ ಕಾಣುತ್ತವೆ. ಹಾಗಾಗಿಯೇ ಬದುಕಿನ ಆಕಸ್ಮಿಕಗಳನ್ನು, ಅನಿರೀಕ್ಷಿತ ತಿರುವುಗಳನ್ನು, ಈಡೇರದ ಮತ್ತು ಈಡೇರಿದ ಕನಸಿನ ಚಿತ್ರಗಳನ್ನು ನವಿರಾಗಿ ಚಿತ್ರಿಸಿದ್ದಾರೆ. ಹುಟ್ಟುಹಬ್ಬಗಳ ಕುರಿತು ಬರೆಯುತ್ತಾ ‘ಹುಟ್ಟಿದ ನಂತರದ ಸಾಧನೆಗಳಲ್ಲಿ ಸೆಲೆಬ್ರೇಷನ್ ಇರಬೇಕು. ಕೇವಲ ಹುಟ್ಟಿದ್ದಕ್ಕೇ ಸೆಲಬ್ರೇಟ್ ಮಾಡಿಕೊಳ್ಳುವ ಜನ ನನ್ನ ದೃಷ್ಟಿಯಲ್ಲಿ ಅತ್ಯಂತ ಕೈಲಾಗದವರು’ ಎನ್ನುತ್ತಾರೆ. ಇಂತಹ ಕಡೆಯಲ್ಲೆಲ್ಲಾ ಸಿನಿಜಗತ್ತಿನಲ್ಲಿ ಇರಬಹುದಾದ ಭ್ರಮೆಗಳನ್ನು ಕಳಚುವ ಹಾಗೆ ಕುಟುಕುತ್ತಾರೆ. ಇಂತಹ ಕಡೆಗಳಲ್ಲಿ ವರ್ಮ ಅವರ ವೈಚಾರಿಕತೆಯು ಪ್ರಖರವಾಗಿ ಗೋಚರಿಸುತ್ತದೆ. 

  ಬ್ರೂಸ್ ಲೀ ಬಗೆಗಿನ ಹುಚ್ಚು ಮೋಹ, ಶ್ರೀದೇವಿ ಬಗೆಗಿನ ಅದಮ್ಯ ಪ್ರೀತಿ, ಗೆಳೆಯ ಜೀನಿಯಸ್ ಸತ್ಯೇಂದ್ರನ ಬಗೆಗಿನ ಅಚ್ಚರಿ, ಕೋವಿಯಂಥ ಹುಡುಗಿಯ ಬಗೆಗಿನ ಸೆಳೆತ, ಕಾಲೇಜು ದಿನಗಳ ಪುಂಡಾಟಿಕೆಯ ನಿರೂಪಣೆಗಳು ವರ್ಮ ಬದುಕಿನ ಹಲವು ಮಜಲುಗಳನ್ನು ಕಾಣಿಸುತ್ತವೆ. ಸಿನಿಮಾವೊಂದರಲ್ಲಿ ರೂಪಿಸುವ ಘಟನೆ ಸನ್ನಿವೇಶವನ್ನು ನಿಜಬದುಕಿನ ಘಟನೆ ಮತ್ತು ಸನ್ನಿವೇಷದಿಂದ ಪುನರ್ ಸೃಷ್ಟಿಮಾಡುವ ಬಗೆಯನ್ನು ಹೇಳುವಾಗ ವಾಸ್ತವವೊಂದು ಕಲಾಕೃತಿಯಾಗುವಲ್ಲಿನ ರೂಪಾಂತರವನ್ನು ವರ್ಮಾ ಚಿತ್ರವತ್ತಾಗಿ ಕಟ್ಟಿಕೊಡುತ್ತಾರೆ. ಸಿನಿಮಾಕ್ಕಾಗಿ ಮಾಡುವ ಹೊಸ ಪ್ರಯೋಗಗಳು ಕೆಲವೊಮ್ಮೆ ಆಕಸ್ಮಿಕ ಸಂಗತಿಗಳಿಂದಾಗಿರುತ್ತವೆ ಎನ್ನುವಂತಹ ವಾಸ್ತವಗಳನ್ನು ಸಿನಿಕತೆಯಿಲ್ಲದೆ ಹೇಳುತ್ತಾರೆ.

 ವರ್ಮ ಒಬ್ಬ ನಿರ್ದೇಶಕರಾಗಿ ಸಮಾಜವನ್ನು ನೋಡುವ, ಅದನ್ನು ಗ್ರಹಿಸುವ ಮತ್ತು ಸಿನೆಮಾದಲ್ಲಿ ತರುವ ಮೂರು ಆಯಾಮಗಳ ಬಗೆಗೆ ಸೂಕ್ಷ್ಮವಾಗಿ ದಾಖಲಿಸಿದ್ದಾರೆ.  ಅವರು ನಿರೂಪಿಸುವ ಕಥನದಲ್ಲಿ ಸಮಾಜದ ಕಣ್ಣೋಟದಿಂದ ತನ್ನನ್ನು ನೋಡಿಕೊಳ್ಳುವುದಕ್ಕಿಂತ, ತನ್ನ ಬದುಕಿನ ಕಣ್ಣೋಟದಿಂದ ಸಮಾಜವನ್ನು ನೋಡುವ ಗುಣವಿದೆ. ನಿರೂಪಣೆಯ ಮಾದರಿಗೆ ಸಿನೆಮಾ ನಿರ್ದೇಶಕನ ಗುಣ ವರ್ಮರಿಗೆ ಅರಿವಿಲ್ಲದಂತೆಯೇ ನುಗ್ಗಿದಂತಿದೆ. 

 ನನ್ನಿಷ್ಟ ಎನ್ನುವಾಗ, ಬೇರೆಯವರ ಇಷ್ಟಾನಿಷ್ಟಗಳಿಗೆ ಬೆಲೆಕೊಡದಿರುವ ಮತ್ತು ನನ್ನಿಷ್ಟವನ್ನು ಬೇರೆಯವರು ಒಪ್ಪಬೇಕೆಂಬ ಜರೂರೇನೂ ಇಲ್ಲ ಎನ್ನುವ ದಾಷ್ಟ್ಯ ಕೂಡ ಕೆಲಸ ಮಾಡುತ್ತದೆ. ಆಗ ತಾನು ಮಾಡುವುದು, ಹೇಳುವುದೆ ಸರಿ ಎನ್ನುವ ಅಹಂ ನಿಷ್ಟ ಮಾತುಗಳು ಹೊಮ್ಮುವ ಸಾಧ್ಯತೆ ಇರುತ್ತದೆ. ವರ್ಮ ಅವರ ನಿರೂಪಣೆಯಲ್ಲಿಯೂ ಆ ಗುಣ ಕಂಡೂ ಕಾಣದ ಹಾಗೆ ಇಣುಕಿದೆ.

  ರಾಮ್ ಗೋಪಾಲ್ ವರ್ಮ ಅವರ ಸಿನಿಮಾಯಾನ ‘ನನ್ನಿಷ್ಟ’ ಕೃತಿಯನ್ನು ಸೃಜನ್ ಕನ್ನಡದ ಓದಿಗೆ ಆಪ್ತವಾಗುವಂತೆ ಕನ್ನಡೀಕರಿಸಿದ್ದಾರೆ. ಈ ಕೃತಿಯನ್ನು ಗಮನಿಸಿದರೆ ಮಹತ್ವದ ತೆಲುಗು ಕೃತಿಗಳನ್ನು, ತೆಲುಗಿನ ಹೊಸ ತಲೆಮಾರಿನ ಬರಹಗಳನ್ನು ಕನ್ನಡಕ್ಕೆ ತರುವ ಕೆಲಸವನ್ನು ಸೃಜನ್ ಕೈಗೆತ್ತಿಕೊಳ್ಳಲಿಕ್ಕೆ ಕಾಲ ಪಕ್ಕಾಗಿದೆ ಅನ್ನಿಸುತ್ತದೆ. ಮೂಲ ತೆಲುಗು ಕೃತಿಗಿಂತಲೂ ಕನ್ನಡದ ಅನುವಾದಿತ ಕೃತಿ ಗುಣಮಟ್ಟದಲ್ಲಿ ಅದ್ಭುತವಾಗಿದೆ ಎಂದು ಸ್ವತಃ ವರ್ಮ ಈ ಕೃತಿಯನ್ನು ಕೈಲಿಡಿದು ಬೆರಗುಗೊಂಡಿದ್ದಾಗಿ ಸೃಜನ್ ಹೇಳುತ್ತಿದ್ದರು. ಅಷ್ಟರಮಟ್ಟಿಗೆ ಪುಸ್ತಕದ ಗುಣಮಟ್ಟವನ್ನು ಕಾಯ್ದುಕೊಳ್ಳುವ ಹಲವು ಪ್ರಯೋಗಗಳು ನಡೆಯುತ್ತಿರುವುದು  ಕನ್ನಡದ ಮಟ್ಟಿಗೆ ಹೆಮ್ಮೆ ಪಡುವ ಸಂಗತಿ. ಅದರಲ್ಲಿ ಪಲ್ಲವ ಪ್ರಕಾಶನದ್ದು ರಾಜಿ ಇಲ್ಲದ ಕೆಲಸ. ಇಂತಹ ಪುಸ್ತಕ ಪ್ರೀತಿಯ ಕಾರಣಕ್ಕೆ ಕೆ.ವೆಂಕಟೇಶ್ ಕೂಡ ಅಭಿನಂದನಾರ್ಹರು. 

  ಸೃಜನ್ ಈಗಾಗಲೆ ನನ್ನಿಷ್ಟದ ಮುಂದುವರಿದ ಭಾಗದಂತಿರುವ ‘ವೋಡ್ಕಾ ವಿತ್ ವರ್ಮ’ (ತೆಲುಗು ಮೂಲ: ಸಿರಾಶ್ರೀ) ಕೃತಿಯನ್ನೂ ಅನುವಾದಿಸಿದ್ದಾರೆ. ಅದಿನ್ನು ಪ್ರಕಟಣೆಯ ಹಂತದಲ್ಲಿದೆ.

ರಾಮ್ ಗೋಪಾಲ್ ವರ್ಮ
ಸಿನಿಮಾಯಾನ ‘ನನ್ನಿಷ್ಟ’
ಕನ್ನಡಕ್ಕೆ: ಸೃಜನ್
೨೦೧೩, ಪುಟ:೧೯೦, ಬೆಲೆ: ೨೦೦/-
ಪಲ್ಲವ ಪ್ರಕಾಶನ, ಹೊಸಪೇಟೆ.
ಸಂಪರ್ಕ:೯೪೮೦೩೫೩೫೦೭

ಸೋಮವಾರ, ಮಾರ್ಚ್ 3, 2014

ಬಳ್ಳಾರಿ ಮಂಗಳಮುಖಿಯರ ರಂಗಮಾದರಿ


-ಅರುಣ್ ಜೋಳದಕೂಡ್ಲಿಗಿ


  ಭಾರತದಲ್ಲಿ ಯುವ ಸಮುದಾಯವೆಂದರೆ ಕಲಿತು ವಿದೇಶಗಳಿಗೆ ಹಾರಿದ ಯುವತಿ ಯುವಕರನ್ನು, ಎಂಜಿನಿಯರಿಂಗ್‌ನಂತಹ ತಾಂತ್ರಿಕ ಶಿಕ್ಷಣ ಕಲಿತ, ಕಾರ್ಪೋರೇಟ್ ಕಂಪನಿಗಳಲ್ಲಿ ದುಡಿಯುವ ಯುವ ಸಮುದಾವನ್ನು ದೊಡ್ಡಮಟ್ಟದಲ್ಲಿ ಬಿಂಬಿಸಲಾಗುತ್ತದೆ. ಯಂಗ್ ಇಂಡಿಯಾ ಎಂದಾಗ ಇಂತಹದ್ದೇ ಚಿತ್ರಗಳು ಮಿನುಗುತ್ತವೆ. ಇದಕ್ಕೆ ಯಂಗ್ ಕರ್ನಾಟಕವೂ ಹೊರತಲ್ಲ. ಕೃಷಿಯಲ್ಲಿ, ಲೆಟ್ರಿನ್ ಪಿಟ್ ಸ್ವಚ್ಚಗೊಳಿಸುವಲ್ಲಿ, ದಿನಗೂಲಿಯಲ್ಲಿ, ಗಾರ್ಮೆಂಟ್‌ಗಳಲ್ಲಿ, ಸಣ್ಣಪುಟ್ಟ ಕಾರ್ಖಾನೆಗಳಲ್ಲಿ ಕಷ್ಟದ ದುಡಿಮೆ ಮಾಡುವ ನಗರಗಳ ಕೆಳವರ್ಗ ಮತ್ತು ಗ್ರಾಮೀಣ ಯುವ ಸಮುದಾಯ ಯಂಗ್ ಇಂಡಿಯಾದ ಕಣ್ಣಲ್ಲಿ ನಿರಂತರವಾಗಿ ಮಸುಕಾಗಿಯೆ ಉಳಿದಿದೆ.

  ಲಿಂಗದ ನೆಲೆಯಲ್ಲಿಯೂ ಯಂಗ್ ಎಂದಾಕ್ಷಣ ಗಂಡು ಅದರ ಮರೆಯಲ್ಲಿ ಕಾಣುವ ಹೆಣ್ಣಷ್ಟೆ. ಮಂಗಳಮುಖಿ, ಹಿಜಿಡಾಗಳಂತಹ ಲೈಂಗಿಕ ಅಲ್ಪಸಂಖ್ಯಾತರ ಯುವ ಸಮುದಾಯವೊಂದು ಈ ಯಂಗ್ ಇಂಡಿಯಾದ ಹತ್ತಿರವೂ ಸುಳಿಯುವುದಿಲ್ಲ. ಹಾಗಾಗಿ ಇಂತಹ ಸಮುದಾಯಗಳು ತೋರುವ ಪ್ರಯೋಗಶೀಲತೆಯೂ ಹಾಸ್ಯದ ಸಂಗತಿಗಿಂತ ಮೇಲೇರುವುದಿಲ್ಲ. ಈ ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಸುಮಾರು ಏಳುನೂರರಷ್ಟಿರುವ ಯುವ ಮಂಗಳಮುಖಿಯರು ರಂಗಭೂಮಿಯಲ್ಲಿ ಭಿನ್ನ ಪ್ರಯೋಗಕ್ಕೆ ಪ್ರವೇಶ ಪಡೆದ ಕಥಾನಕವೊಂದು ಇಲ್ಲಿದೆ.

 ಈಚೆಗೆ ರಂಗಭೂಮಿಗೆ ಮಂಗಳಮುಖಿಯರ ಬದುಕಿನ ಕಥನಗಳು ಬರುತ್ತಿವೆ. ಹಿಂದೆ ಎನ್.ಎಸ್,ಡಿ ಯ ವಾಮನ ಕೇಂದ್ರೆ ಅವರ ‘ಜಾನೆಮನ್’ ನಾಟಕ ರೂಪಿಸಿದ್ದರು. ಅದು ಹಿಜಿಡಾಗಳ ಬದುಕಿನ ಚದುರಿದ ಚಿತ್ರದಂತಿತ್ತು. ಈಚೆಗೆ ಹೆಚ್ಚು ಚರ್ಚೆಗೆ ಒಳಗಾದ ಮಹರಾಷ್ಟ್ರದ ಸಾಗರ್ ಲೋಧಿ ಅವರು ನಿರ್ಧೇಶಿಸಿದ ‘ಹಿಜಿಡಾ’ ನಾಟಕ ಇವರ ಬದುಕನ್ನು ಸಶಕ್ತವಾಗಿ ತೆರೆದಿಟ್ಟಿದೆ. ಅಂತೆಯೇ ತಮಿಳುನಾಡಿನ ರೇವತಿಯ ಬದುಕನ್ನು ಆಧರಿಸಿ ಹೆಗ್ಗೋಡಿನ ಎಂ.ಗಣೇಶ್ ಅವರು ‘ಬದುಕು ಬಯಲು’ ನಾಟಕ ರೂಪಿಸಿದ್ದರು. 

 ಹಾಗೆ ನೋಡಿದರೆ ಯಲ್ಲಮ್ಮನ ಪರಂಪರೆಯ ಜೋಗತಿಯರು ತಮ್ಮದೇ ಆದ ರಂಗಭೂಮಿಯನ್ನೂ ಹೊಂದಿದ್ದಾರೆ. ಜೋಗತಿ ನೃತ್ಯ ಮತ್ತು ಯಲ್ಲಮ್ಮನ ನಾಟಕಕ್ಕಾಗಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಮಂಜಮ್ಮಜೋಗತಿ ತಂಡ ಯಲ್ಲಮ್ಮನ ನಾಟಕದ ನೂರಾರು ಪ್ರದರ್ಶನಗಳನ್ನು ನೀಡಿದೆ. ಹೀಗೆ ಯಲ್ಲಮ್ಮನ ನಾಟಕಕ್ಕಷ್ಟೆ ಸೀಮಿತವಾದ ಮಂಜಮ್ಮನ ತಂಡ ಈಚೆಗೆ ಮೋಹಿನಿ ಭಸ್ಮಾಸುರ ಎಂಬ ಪೌರಾಣಿಕ ನಾಟಕವನ್ನು, ಅಕ್ಕಮಹಾದೇವಿ ಕುರಿತ ರಂಗ ರೂಪಕವನ್ನೂ ಪ್ರದರ್ಶಿಸಿ ರಂಗಭೂಮಿಯಲ್ಲಿ ಒಂದ್ಹೆಜ್ಜೆ ಮುಂದಿಟ್ಟಿದ್ದಾರೆ. ಅಂತೆಯೇ ಮುಂಬೈನ ಹಿಜಿಡಾ ಸಂಸ್ಕೃತಿಯ ವಕ್ತಾರರಾದ ಬಳ್ಳಾರಿ ನಗರದ ಮಂಗಳಮುಖಿಯರು ಭಿಕ್ಷೆ, ಲೈಂಗಿಕ ಚಟುವಟಿಕೆಯ ಆಚೆಗೂ ರಂಗಭೂಮಿಯಲ್ಲಿ ಭರತನಾಟ್ಯ, ನೃತ್ಯ, ಪ್ಯಾಶನ್ ಶೋ ನಂತರಹ ಪ್ರಯೋಗಕ್ಕೆ ತಮ್ಮನ್ನು ತಾವು ತೆರೆದುಕೊಂಡಿದ್ದಾರೆ

 ಬಳ್ಳಾರಿ ಜಿಲ್ಲೆಯ ಮಂಗಳ ಮುಖಿಯರು ಏಳು ನೂರರಷ್ಟು ದಾಖಲೆಗೆ ಸಿಕ್ಕಿದ್ದಾರೆ. ಇದರಲ್ಲಿ ಐದು ನೂರರಷ್ಟು ಮಂಗಳಮುಖಿಯರು ೧೮ ರಿಂದ ೩೫ ವರ್ಷದ ಒಳಗಿನವರೇ ಆಗಿದ್ದಾರೆ. ಇವರೆಲ್ಲಾ ಗಂಡಾಗಿದ್ದರೆ ಯುವ ಸಮುದಾಯದ ಲೆಕ್ಕದಲ್ಲಿ ಸಿಗುವವರು, ಮಂಗಳಮುಖಿಯರಾದ ಕಾರಣ ಲೆಕ್ಕಕ್ಕಿಲ್ಲದಂತಾಗಿದೆ. ಇಂತಹ ಮಂಗಳಮುಖಿಯರಲ್ಲಿ ಯಲ್ಲಮ್ಮ, ಹುಲಿಗೆಮ್ಮನ ಭಕ್ತೆಯರಿದ್ದಾರೆ. ಮುಂಬೈನ ಹಿಜಿಡಾ ಸಂಸ್ಕೃತಿ ಪಾಲಿಸುವವರಿದ್ದಾರೆ.  ಈ ಎರಡನ್ನೂ ಒಳಗೊಂಡಂತೆ ಬಳ್ಳಾರಿಗೇ ವಿಶಿಷ್ಟವಾದ ಸ್ಥಳೀಯ  ಸಂಸ್ಕೃತಿಯೊಂದನ್ನು ರೂಢಿಸಿಕೊಂಡಿದ್ದಾರೆ.

 ಮಂಜಮ್ಮನ ತಂಡದವರು ಯಲ್ಲಮ್ಮನ ಸಂಪ್ರದಾಯದ ಜೋಗತಿ ನೃತ್ಯ ಹಾಡುಪರಂಪರೆ ಮತ್ತು ನಾಟಕವನ್ನು ಜೀವಂತವಿಟ್ಟಿದ್ದಾರೆ. ಯಲ್ಲಮ್ಮನ ನಾಟಕವನ್ನು ಬೆಂಗಳೂರಿನ ರಂಗಶಂಕರ ಒಳಗೊಂಡಂತೆ ಕರ್ನಾಟಕದಾದ್ಯಾಂತ ಅಭಿನಯಿಸುವ ಮೂಲಕ ಜಾನಪದ ರಂಗಭೂಮಿಯಲ್ಲಿ ಈ ನಾಟಕಕ್ಕೆ ಹೊಸ ಆಯಾಮವನ್ನು ಒದಗಿಸಿದ್ದಾರೆ. ಇದನ್ನು ಗುರುತಿಸಿ ಮಂಜಮ್ಮ ಜೋಗತಿಗೆ ಮಹರಾಷ್ಟ್ರದ ನಾಗಪುರ ದಕ್ಷಿಣ ಮಧ್ಯವಲಯ ಸಾಂಸ್ಕೃತಿಕ ಕೇಂದ್ರ ೨೦೧೦-೧೧ ರಲ್ಲಿ ‘ಗುರುಶಿಷ್ಯ’ ಪರಂಪರೆಯ ಯೋಜನೆ ನೀಡಿತ್ತು. ಈ ಯೋಜನೆಯ ಭಾಗವಾಗಿ ೧೫ ಜನ ಯುವ ಜೋಗತಿಯರಿಗೆ ಜೋಗತಿ ನೃತ್ಯ ಮತ್ತು ನಾಟಕದ ತರಬೇತಿ ನೀಡಿದ್ದಾರೆ. ‘ಜನರು ಕೀಳಾಗಿ ಕಾಣುವ ನಮ್ಮ ಗಂಡುಜೋಗತಿ/ಮಂಗಳಮುಖಿ ಸಮುದಾಯ ಕಲೆಯಿಂದಲೂ ಗೌರವ ಪಡೆಯಲು ಸಾಧ್ಯವಿದೆ’ ಎನ್ನುವುದು ಮಂಜಮ್ಮ ಜೋಗತಿಯವರ ನಿಲುವು.  

   ಬಹುಪಾಲು ಮಂಗಳಮುಖಿಯರನ್ನೊಳಗೊಂಡ ಮೋಹಿನಿ ಭಸ್ಮಾಸುರ ಎಂಬ ಪೌರಾಣಿಕ ನಾಟಕ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಜನರನ್ನು ಅಚ್ಚರಿಗೊಳಿಸಿತ್ತು. ಧಾರ್ಮಿಕ ಆವರಣದ ಸಾಂಪ್ರದಾಯಿಕ ವೃತ್ತಿಯಲ್ಲಿರುವ ಕಾರಣ ಮಂಜಮ್ಮನ ತಂಡದವರು ಮಂಗಳಮುಖಿ ಎನ್ನುವುದಕ್ಕಿಂತ, ಜೋಗತಿ ಎಂತಲೇ ಗುರುತಿಸಿಕೊಳ್ಳುತ್ತಾರೆ. ಮಂಜಮ್ಮ ಜೋಗತಿ ಭಸ್ಮಾಸುರನ ಪಾತ್ರ ಮಾಡಿದರೆ, ಭ್ರಹ್ಮದೇವನಾಗಿ ರಾಮವ್ವ ಜೋಗತಿ, ದೇವೇಂದ್ರನಾಗಿ ಗೌರಿ ಜೋಗತಿ, ಗಣಪನಾಗಿ ಕವಿತಾ, ಷಣ್ಮುಖನಾಗಿ ಗಂಗಮ್ಮ, ಲಕ್ಷ್ಮಿಯಾಗಿ ಯಲ್ಲಮ್ಮ, ಋಷಿಮುನಿಯಾಗಿ ದುರುಗಮ್ಮ ಮತ್ತು ಸಂಗಡಿಗರು. ಏಳು ಜನ ಮಂಗಳಮುಖಿಯರು ಈ ಪೌರಾಣಿಕ ನಾಟಕದಲ್ಲಿ ಸಮರ್ಥವಾಗಿ ಅಭಿನಯಿಸಿದ್ದರು. ಸುರಪುರ ತಾಲೂಕಿನ ಕೊಡೇಕಲ್ಲು ಗ್ರಾಮದ ಬಸವರಾಜ ಪಂಚಗಲ್ ಅವರ ರಚನೆಯ ಈ ನಾಟಕವನ್ನು ಮರಿಯಮ್ಮನ ಹಳ್ಳಿಯ ರಂಗ ಸಾಧಕಿ ಡಾ.ಕೆ.ನಾಗರತ್ನಮ್ಮ ಮತ್ತು ಇಳಕಲ್ ಉಮಾರಾಣಿ ನಿರ್ದೇಶಿಸಿದ್ದರು. ಈ ಇಬ್ಬರು ಹಿರಿಯ ರಂಗಕಲಾವಿದೆಯರ ಒತ್ತಾಸೆಯೆ ಇಂತಹದ್ದೊಂದು ಪ್ರಯೋಗ ನಡೆಯಲಿಕ್ಕೆ ಕಾರಣವಾಗಿತ್ತು.


 ಭಸ್ಮಾಸುರನಂತಹ ರೌದ್ರರಸದ ಪಾತ್ರವನ್ನು ಮಂಜಮ್ಮ ಜೋಗತಿ ಹೇಗೆ ನಿರ್ವಹಿಸುತ್ತಾಳೆ ಎನ್ನುವ ಕೊಂಕು ನುಡಿಗಳೆಲ್ಲಾ ಹೊಮ್ಮಿದ್ದವು. ಅಂತೆಯೇ ಮಂಗಳಮುಖಿಯರು ಯಲ್ಲಮ್ಮನ ನಾಟಕ ಮಾಡಬಲ್ಲರು ಆದರೆ, ಅವರಿಂದ ಭಸ್ಮಾಸುರನಂಥಹ ನಾಟಕ ಮಾಡಿಸಬಹುದೆ? ಎಂದು ಸಾಂಪ್ರದಾಯವಾದಿ ಪುರುಷರು ಈ ನಾಟಕವನ್ನು ವಿರೋಧಿಸಿದ್ದರು. ನಾಟಕದ ಗಂಡುಪಾತ್ರಗಳನ್ನು ಮಂಗಳಮುಖಿಯರನ್ನು ನಿರ್ವಹಿಸುವಾಗ ನಡಿಗೆ ಮತ್ತು ಭಾಷಾ ಬಳಕೆಯಲ್ಲಿ ಹೆಣ್ಣಿನ ಛಾಯೆ ಬಂದರೆ ಗಂಡು ಪಾತ್ರಕ್ಕೆ ಅವಮಾನ ಮಾಡಿದಂತೆ ಎನ್ನುವುದು ಈ ವಿರೋಧದ ಹಿಂದಿದ್ದ ಸೂಕ್ಷ್ಮತೆಯಾಗಿತ್ತು. ಈ ಬಗೆಯ ವಿರೋಧ, ಕೊಂಕು ನುಡಿಗಳಿಗೆ ಉತ್ತರವೆಂಬಂತೆ ಈ ನಾಟಕ ಯಶಸ್ವಿಯಾಯಿತು. ನಾಟಕ ಮುಗಿದಾದ ಮೇಲೆ ಈ ಬಗೆಯ ಎಲ್ಲಾ ಆರೋಪ ಅನುಮಾನಗಳು ಹುರುಳಿಲ್ಲದಂತಾಗಿದ್ದವು. ಮಾ.ಬ.ಸೋಮಣ್ಣ  ಅವರ ರಚನೆಯ ಶರಣರ ಆಯ್ದ ವಚನಗಳನ್ನು ಆಧರಿಸಿದ ‘ಶರಣ ಸಂಪದ’ ಎನ್ನುವ ರೂಪಕದಲ್ಲಿ ಮಂಗಳಮುಖಿ ಗೌರಿ ಅಕ್ಕಮಹಾದೇವಿಯ ಪಾತ್ರವನ್ನು ನಿರ್ವಹಿಸಿದ್ದರು. ಈ ಪಾತ್ರ ಎಷ್ಟು ಯಶಸ್ವಿಯಾಗಿತ್ತೆಂದರೆ ಗೌರಿಯನ್ನು ಕೆಲವರು ಅಕ್ಕಮಹಾದೇವಿ ಅಂತಲೇ ಕರೆಯುತ್ತಾರೆ. 

 ಬಳ್ಳಾರಿ ನಗರದಲ್ಲಿರುವ ಮಂಗಳಮುಖಿಯರು ಮಂಜಮ್ಮನ ತಂಡಕ್ಕಿಂತ ಭಿನ್ನರಾದವರು. ಇವರು ಮುಂಬೈನ ಹಿಜಿಡಾ ಪರಂಪರೆಯಲ್ಲಿ ತರಬೇತಿ ಪಡೆದವರು. ಇವರನ್ನೆಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ರೇಣುಕಾ ರೂರಲ್ ಡೆವಲಪ್‌ಮೆಂಟ್ ಎನ್.ಜಿ.ಓದ  ಪ್ರೇಮಾ. ಎಸ್ ಅವರು ಒಟ್ಟಾಗಿಸಿದ್ದಾರೆ. ಅವರುಗಳಿಗೆ ಐಡೆಂಟಿಟಿ ಕಾರ್ಡ ಮಾಡಿಸಿ ಬೇರೆ ಬೇರೆ ಕೆಲಸಗಳಿಗೆ ತೊಡಗಿಸಬಹುದಾದ ಸಾಧ್ಯತೆಗಳತ್ತ ಪ್ರಯತ್ನಿಸುತ್ತಿದ್ದಾರೆ. ಕೆಲವರು ಡ್ರೈವಿಂಗ್ ಕಲಿಯುತ್ತಿದ್ದರೆ, ಮತ್ತೆ ಕೆಲವರು ಮೇಣದಬತ್ತಿ ತಯಾರಿಕೆಯಲ್ಲಿ ತೊಡಗಿದ್ದಾರೆ. ಉಳಿದಂತೆ ಬಹುಪಾಲು ಮಂಗಳಮುಖಿಯರ ಇಚ್ಚೆಯಂತೆ ಸ್ಥಳೀಯ ಡಾನ್ಸ್ ಮಂಜು ಅವರಿಂದ ಕ್ಲಾಸಿಕಲ್ ಮತ್ತು ಮಾಡ್ರನ್ ನೃತ್ಯ ತರಬೇತಿಯನ್ನು ಕೊಡಿಸಿದ್ದಾರೆ.


  ನೃತ್ಯ ತರಬೇತಿ ಪಡೆದ ಮಂಗಳಮುಖಿಯರ ಮೊದಲ ರಂಗ ಪ್ರವೇಶ ೨೦೧೩ ರ ಗಣೇಶೋತ್ಸವದಲ್ಲಿ ಬಳ್ಳಾರಿಯಲ್ಲಿ ನಡೆಯಿತು. ಈ ನೃತ್ಯಕ್ಕೆ ಸಿಕ್ಕ ಜನರ ಪ್ರೋತ್ಸಾಹವನ್ನು ಗಮನಿಸಿ ಇನ್ನಷ್ಟು ಸಿದ್ಧತೆಯೊಂದಿಗೆ ೨೦೧೪ರ ಜನವರಿ ೨ ರಂದು ‘ಚಿಯರ್‌ಅಪ್’ ಎನ್ನುವ ನೃತ್ಯ ಕಾರ್ಯಕ್ರಮವನ್ನು ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ಆಯೋಜಿಸಲಾಗಿತ್ತು. ಇಡೀ ರಂಗಮಂದಿರವೇ ಜನರಿಂದ ಕಿಕ್ಕಿರಿದಿತ್ತು. ನೂರು ರೂ ಟಿಕೇಟ್ ಮಾಡಿದ್ದರಿಂದ ಇವರಿಗೆ ಒಂದಷ್ಟು ಹಣಕಾಸಿನ ನೆರವೂ ಆಯಿತು. ಇಲ್ಲಿ ಸಾಂಪ್ರದಾಯಿಕ ಭರತ ನಾಟ್ಯ ಒಳಗೊಂಡಂತೆ ಕನ್ನಡ ತೆಲುಗು ಹಿಂದಿ ಸಿನೆಮಾ ಹಾಡುಗಳಿಗೆ ಮಾಡಿದ ನೃತ್ಯ ಜನರನ್ನು ಮಂತ್ರ ಮುಗ್ಧರನ್ನಾಗಿಸಿತ್ತು. ಪ್ಯಾಶನ್ ಶೋನ ತಳಕು ಬಳಕು ಪ್ರದರ್ಶನ ನಡೆಯುತ್ತಿದ್ದಂತೆ ಕಿಕ್ಕಿರಿದ ಜನ ಸಂದಣಿಯು ಕೇಕೆ ಸಿಳ್ಳೆ ಚಪ್ಪಾಳೆಯೊಂದಿಗೆ ತಮ್ಮ ಪ್ರೋತ್ಸಾಹವನ್ನು ಅತ್ಯುತ್ಸಾಹದಿಂದ ತೋರ್ಪಡಿಸುತ್ತಿದ್ದರು. ‘ಇವರ ತಂಡವನ್ನು ಸಾಂಸ್ಕೃತಿಕ ತಂಡವೆಂದು ಗುರುತಿಸಿ ಸರಕಾರಿ ಉತ್ಸವದಂತಹ ಕಾರ್ಯಕ್ರಮಗಳಿಗೆ ಅವಕಾಶ ಒದಗಿಸಿದರೆ, ಪೂರ್ಣಪ್ರಮಾಣದ ಸಾಂಸ್ಕೃತಿಕ ತಂಡವಾಗಿ ಈ ಮಂಗಳಮುಖಿಯರು ರೂಪು ಪಡೆಯುತ್ತಾರೆ. ಇತರರಿಗೂ ಮಾದರಿಯಾಗುತ್ತಾರೆ’ ಎಂದು ಪ್ರೇಮ ಅವರು ಹೇಳುತ್ತಾರೆ.

 ಬಳ್ಳಾರಿಯಲ್ಲಿ ಮುಖ್ಯವಾಗಿ ಮಂಗಳಮುಖಿಯರನ್ನು ಚಾಂದಿನಿ ಮತ್ತು ಅಂಬಿಕಾ, ಈರೇಶಮ್ಮ ಅವರ ಎರಡು ಮನೆಗಳ ಮೂಲಕ ಗುರುತಿಸಬಹುದು. ಈ ಎರಡು ಮನೆಗಳಿಗೂ ಸೂಕ್ಷ್ಮವಾದ ಫರಕುಗಳಿವೆ. ಚಾಂದಿನಿ ತಂಡದಲ್ಲಿ ಗುರುತಿಸಿಕೊಳ್ಳುವವರು ಆಧುನಿಕ ಸೌಂದರ್ಯವರ್ಧಕಗಳಿಗೆ ತೆರೆದುಕೊಂಡವರು. ನಗರದ ಕಲಿತ ಮಧ್ಯಮವರ್ಗದ ಮಹಿಳೆಯರ ಹಾಗೆ ತೋರ್ಪಡಿಸಿಕೊಳ್ಳುತ್ತಾರೆ. ಅಂತೆಯೇ ಅಂಬಿಕಾ ಈರೇಶಮ್ಮ ಜತೆ ಗುರುತಿಸಿಕೊಳ್ಳುವವರು ಸಾಮಾನ್ಯವಾಗಿ ಗ್ರಾಮೀಣ ಭಾಗದ ಹಳ್ಳಿ ಹೆಣ್ಣುಮಕ್ಕಳನ್ನು ಅನುಕರಿಸುವ ಮಾದರಿಯವರು. ಹಾಗಾಗಿ ಡಾನ್ಸ್ ಪ್ರೋಗ್ರಾಮಿನಲ್ಲಿ ಹೆಚ್ಚಾಗಿ ಚಾಂದಿನಿ ಮತ್ತು ಜಿಂದಾಲ್ ರಾಣಿ ತಂಡದ ಸದಸ್ಯೆಯರು ತೊಡಗಿಸಿಕೊಂಡಿದ್ದರು. ಉಳಿದಂತೆ ಈ ಕಾರ್ಯಕ್ರಮದ ಉಸ್ತವಾರಿ ಮತ್ತು ಮೇಲ್ವಿಚಾರಣೆಯನ್ನು ಅಂಬಿಕಾ, ಈರೇಶಮ್ಮನ ಮನೆಯವರು ವಹಿಸಿದ್ದರು. ಒಟ್ಟಾರೆ ಮೊದಲ ಬಾರಿಗೆ ರಂಗ ಪ್ರವೇಶ ಮಾಡಿದ ಮಂಗಳಮುಖಿಯರಿಗೆ ಇದೊಂದು ಭಿನ್ನ ಅನುಭವ. ಅಂತೆಯೇ ಬಜಾರುಗಳಲ್ಲಿ ನೋಡಿದ ಜನರಿಗೂ ಇವರನ್ನು ರಂಗದ ಮೇಲೆ ನೋಡುವ ಅನುಭವ  ಕೂಡ ವಿಶಿಷ್ಟವಾಗಿತ್ತು. ಈ ಕಾರ್ಯಕ್ರಮಕ್ಕೆ ಬಂದ ಜನರೂ ಕೂಡ ಶೇ ತೊಂಬತ್ತರಷ್ಟು ಯುವಕರು. ಅವರು ಸಹಜವಾಗಿ ಹೆಣ್ಣಿಗೆ ಸ್ಪಂದಿಸುವ ರೀತಿಯಲ್ಲಿಯೇ ಮಂಗಳ ಮುಖಿಯರಿಗೂ ಸ್ಪಂದಿಸಿದ್ದರು. 

  ಹೀಗೆ ಬಳ್ಳಾರಿ ಭಾಗದ ಯುವ ಮಂಗಳಮುಖಿಯರ ಎರಡು ಭಿನ್ನ ಬಗೆಯ ರಂಗ ಪ್ರವೇಶಗಳು ಸಾಂಪ್ರದಾಯಿಕ ನಡೆಗಿಂತ ಬೇರೆತೆರನಾದವುಗಳು. ಮುಂಬೈ ಬೆಂಗಳೂರಿನಂತಹ ನಗರಗಳಲ್ಲಿ ಮಂಗಳಮುಖಿ/ಹಿಜಿಡಾಗಳಿಗೆ ಇರುವ ಅವಕಾಶಕ್ಕೂ, ಮರಿಯಮ್ಮನಹಳ್ಳಿ, ಬಳ್ಳಾರಿಯಂತಹ ನಗರಗಳಲ್ಲಿರುವ ಅವಕಾಶಗಳಿಗೂ ಭಿನ್ನತೆಗಳಿವೆ. ಅಂತೆಯೇ ಬಜಾರು ಭಿಕ್ಷೆ ಮತ್ತು ಸೆಕ್ಸ್ ವರ್ಕನ ಆಚೆಗೂ ರಂಗಭೂಮಿಯತ್ತ ತನ್ನದೇ ಆದ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಿರುವುದು ಈ ಪ್ರಯೋಗದ ವಿಶೇಷವಾಗಿದೆ. ರೇಣುಕಾ ರೂರಲ್ ಡೆವಲಪ್‌ಮೆಂಟ್‌ನ ಪ್ರೇಮ ಅವರು ಬಹುಪಾಲು ಎನ್.ಜಿ.ಓಗಳ ಹಣಗಳಿಕೆಯನ್ನಾಧರಿಸಿದ ಸಾಮಾಜಿಕ ಕಳಕಳಿಗಿಂತ ಭಿನ್ನವಾದುದು. ಮಂಗಳಮುಖಿಯರಲ್ಲಿ ಬದಲಾವಣೆ ತರಬೇಕೆಂಬ ಪ್ರಾಮಾಣಿಕ ಕಾಳಜಿಯಿಂದ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ನಿರಂತರವಾಗಿ ಈ ಭಾಗದ ಮಂಗಳಮುಖಿಯರು ಸ್ಪಂದಿಸಬೇಕಷ್ಟೆ. ಮಂಗಳಮುಖಿರ ಪ್ರತಿನಿಧಿಯಾಗಿ ಪರ್ವಿನಾ ಭಾನು ಪುರಸೆಭೆಯ ಕಾರ್ಪೋರೇಟ್ ಆಗಿಯೂ ಆಯ್ಕೆಯಾಗಿದ್ದಾರೆ. ಕ್ರಿಯಾಶೀಲವಾಗಿ ಕೆಲಸವನ್ನೂ ಮಾಡುತ್ತಿದ್ದಾರೆ. ಗಂಡು ಹೆಣ್ಣಿನ ಲೋಕದಲ್ಲಿ ಭಿಕ್ಷೆ ಮತ್ತು ಲೈಂಗಿಕ ಚಟುವಟಿಕೆಯನ್ನು ಹೊರತುಪಡಿಸಿದ ಮಂಗಳಮುಖಿಯರಿಗೆ ಅವಕಾಶವೆ ಇಲ್ಲ ಎನ್ನುವ ನಂಬಿಕೆಯ ಆಚೆಗೆ ಬದುಕಿನ ಹೊಸ ಸಾಧ್ಯತೆಗಳನ್ನು ಬಳ್ಳಾರಿ ಭಾಗದ ಯುವ ಮಂಗಳಮುಖಿಯರು ತೋರಿಸಿದ್ದಾರೆ.

  ಜಾಗತಿಕವಾಗಿ ಎಲ್.ಜಿ.ಬಿ.ಟಿ (ಲೆಸ್ಬಿಯನ್, ಗೇ, ಬೈಸೆಕ್ಷುವಲ್ ಮತ್ತು ಟ್ರಾನ್ಸ್ ಜೆಂಡರ್) ಎಂದು ಗುರುತಿಸಿಕೊಂಡವರಲ್ಲಿನ ಯುವ ಸಮುದಾಯ ವಿಭಿನ್ನ ಪ್ರಯೋಗಗಳಿಗೆ ತಮ್ಮನ್ನು ತೊಡಗಿಸಿಕೊಂಡಿದೆ. ಲೈಂಗಿಕ ಅಲ್ಪಸಂಖ್ಯಾತರಾದ ಹಿಜಿಡಾ/ಮಂಗಳಮುಖಿಯರ ಯುವ ಸಮುದಾಯದ ಸಾಧನೆ ಕ್ರಿಯಾಶೀಲತೆಗೆ ಹತ್ತಾರು ಉದಾಹರಣೆಗಳಿವೆ. ಕಳೆದ ಡಿಸೆಂಬರ್‌ನಲ್ಲಿ ಬಿಸಿಎ ಪದವಿಧರೆ ೨೩ ವರ್ಷದ ಸ್ವಪ್ನಾ ಎಂಬ ಮಂಗಳಮುಖಿ ಮೊದಲ ಬಾರಿಗೆ ತಮಿಳುನಾಡು ನಾಗರಿಕ ಸೇವಾ ಪರೀಕ್ಷೆಗೆ ಹಾಜರಾಗಿದ್ದರು. ಕರ್ನಾಟಕದಲ್ಲಿಯೂ ಯುವ ಮಂಗಳಮುಖಿಯರು ಬದುಕಿನ ಹೊಸ ಸಾಧ್ಯತೆಗಳತ್ತ ಚಲಿಸುತ್ತಿದ್ದಾರೆ. ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ, ಚಿತ್ರದುರ್ಗದ ಬಳಿ ಮಂಗಳಮುಖಿಯರೆ ಡಾಬಾ ನಡೆಸುತ್ತಿದ್ದಾರೆ. ಕರ್ನಾಟಕ ಉಚ್ಛ ನ್ಯಾಯಾಲಯವು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಸಿ. ಅನು ರವರನ್ನು ಉದ್ಯೋಗಿಯಾಗಿ ನೇಮಿಸಿಕೊಂಡಿದೆ. ಇಂತಹ ಸಂಗತಿಗಳನ್ನು ನೋಡಿದರೆ ಹಿಜಿಡಾ/ಮಂಗಳಮುಖಿಯರಲ್ಲೂ ಯುವ ಸಮುದಾಯವೊಂದು ಹೊಸ ಅವಕಾಶಗಳಿಗಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದೆ. ತಮ್ಮ ಸಾಂಪ್ರದಾಯಿಕ ವೃತ್ತಿಗಳಿಂದ ಹೊಸ ಚಲನೆಯನ್ನು ಪಡೆಯುತ್ತಿದ್ದಾರೆ.



ಭಾನುವಾರ, ಮಾರ್ಚ್ 2, 2014

ಜನಪದದಲ್ಲಿರಬಹುದಾದ ಅನುವಾದ ಮತ್ತು ಸ್ವರೂಪ

-ಸಂಯುಕ್ತ ಪುಳಿಗಲ್

ಇತ್ತೀಚೆಗಷ್ಟೇ ಜನಪದ ಅಧ್ಯಯನದಲ್ಲಿ ತೊಡಗಿಕೊಂಡಿರುವ ನಾನು ಕೆಲವು ಕುತೂಹಲಕಾರೀ ಮತ್ತು ವಿಶೇಷ ಅಂಶಗಳನ್ನು ಗಮನಿಸುತ್ತಿದ್ದೇನೆ. ಅವುಗಳಲ್ಲಿ ನನ್ನ ಆಸಕ್ತಿಗೊಲಿದದ್ದು, ಜನಪದದಲ್ಲಿ ಕಂಡು ಬಂದ ಡೈರೆಕ್ಟ್ ಟ್ರಾನ್ಸ್ ಲೇಷನ್ (ಭಾಷಾನುವಾದ) ಮತ್ತೊಂದು ಭಾವಾನುವಾದ. ಅನುವಾದಗೊಂಡದ್ದು ಹೌದೋ ಅಥವಾ ಬೇರೆ ಬೇರೆ ಮೂಲಗಳಿಂದ ಬೆಳೆದುಬಂದದ್ದೋ ಗೊತ್ತಿಲ್ಲ. ಆದರೆ, ಶಿಷ್ಟ ಸಾಹಿತ್ಯ ಮತ್ತು ಜನಪದ ಹಾಡುಗಳಲ್ಲಿ ಕಂಡುಬರುವ ಕೆಲವು ಇಂಟೆರೆಸ್ಟಿಂಗ್ ಸಾಮೀಪ್ಯ/ವ್ಯತ್ಯಾಸಗಳ ಬಗೆಗೆ ಗಮನಹರಿಸುವುದು ನನ್ನ ಇಂದಿನ ಲೇಖನದ ಉದ್ದೇಶ.
ನಾನು ಶಾಲೆ ಕಲಿಯೋ ದಿನಗಳು. ಪ್ರತಿಬಾರಿಯಂತೆ ಬೇಸಿಗೆ ರಜೆಗೆಂದು ನಮ್ಮ ತಾತನೂರು ಪುಲಿಗಲ್ ಗೆ ಹೋಗಿದ್ದೆ. ಅಲ್ಲಿನ ಊರಭಾಷೆ ತೆಲುಗು. ನಮ್ಮ ಹಳ್ಳೀಲಿ ಪ್ರತಿಯೊಬ್ಬರೂ ಕಲೆಗಾರರು. ಅದ್ಬುತವಾಗಿ ಹಾಡೋದು, ಪದ ಹೇಳೋದು, ಕಂಜರ, ತಮಟೆಗೆ ತಕ್ಕ ಹೆಜ್ಜೆ ಹಾಕೋದು. ಯಾವ ಮ್ಯೂಸಿಕ್ ಕ್ಲಾಸುಗಳಿಲ್ಲದೆ ಲಯಬದ್ಧವಾಗಿ, ಮಧುರವಾಗಿ ಹಾಡುವುದು ಅವರಿಗೆ ರಕ್ತಗತ. ಹೊಲ ಉಳುವಾಗ ಹಾಡೊ ಹಾಡುಗಳು, ಬೀಸೊ ಪದ, ಸೊಬಾನೆ ಹಾಡುಗಳು, ಭಕ್ತಿ ಭಜನೆಗಳು ಇತ್ಯಾದಿ ಲೆಕ್ಕವಿಲ್ಲದಷ್ಟು ಹಾಡುಗಳು ಯಾವ ಬರಹಗಳಲ್ಲೂ ದಾಖಲಾಗದೆ ಬಾಯಿಂದ ಬಾಯಿಗೆ ಹಬ್ಬುತ್ತಾ ತಲೆಮಾರುಗಳಿಂದ ಜೀವಂತವಾಗಿರುವ ಸಾಲುಗಳು. ಅವರ ಹಾಡುಗಳಲ್ಲಿನ ಆ ಜಾನಪದ ಸೊಗಡು ಎಷ್ಟೆಂದರೆ ಇತ್ತೀಚೆಗಿನ ಸಿನೆಮಾ ಹಾಡು ಕಲಿಯುವ ತಲೆಮಾರು ಸಹ, ಸಿನೆಮಾ ಹಾಡುಗಳನ್ನೂ ಜನಪದ ಸೊಗಡಿನಲ್ಲೇ ಹಾಡುತ್ತಾರೆ. ಮತ್ತು ನಾವು ಪ್ರಯತ್ನ ಪಟ್ಟರೂ ಆ ಸೊಗಡಿನ ಲಯವನ್ನು ಹಿಡಿದು ಅನುಕರಿಸಲಾರೆವು!
ಇಂತಹ ಮಂದಿ ನಮ್ಮ ಮನೆ ಕೆಲಸಕ್ಕೆ ಬರುವಾಗ ಅವರನ್ನು ಕರೆಸಿ ಮುಂದೆ ಟೇಪ್ ರೆಕಾರ್ಡರ್ ಇಟ್ಟು, ಹಾಡು ಎಂದುಬಿಟ್ಟರೆ ನೋಡಬೇಕು, ಅವರ ಸಂಭ್ರಮ, ಸಿಗ್ಗು, ನಗು ಎಲ್ಲ. ಅವರಿಗೆ ಎಂದಿಗೂ ಸಿಗದ ವಿಶೇಷ ಮನ್ನಣೆಯನ್ನು ಕೊಡುತ್ತಿದ್ದೇವೆ ಎಂದೋ, ಅವರದ್ದೇ ಧ್ವನಿ ಕೇಳಿ ನಾಚಿಕೆಯಾಗಿಯೋ, ಅವರ ಹಾಡು ನಗರದವರೆಗೂ ಹೋಗುತ್ತದೆ ಎಂಬ ಸಂತೋಷದಲ್ಲೊ ಅವರು ಹಿಗ್ಗಿ ಹೋಗುತ್ತಿದ್ದರು. ಹಾಡಿದ ನಂತರ “ಪಾಟ ಪೆಟ್ಟು ಅಮ್ಮಯ್ಯಾ” ಅಂತ ಪುನಃ ಪುನಃ ಕೇಳಿ ರೆಕಾರ್ಡ್ ಆದ ಹಾಡನ್ನು ಕೇಳಿ ನಕ್ಕು ಸಂಭ್ರಮಿಸುತ್ತಿದ್ದರು. ಒಂದು ದಿನ ಒಬ್ಬ ಹೆಂಗಸು ಬಂದಿದ್ದಾಗ ಕೂರಿಸಿ ಹಾಡಲು ಹೇಳಿದ್ದಾಗ ಆಕೆ ಒಂದು ವಿಶೇಷವಾದ ಹಾಡನ್ನು ಹಾಡಿದ್ದಳು. ಪೌರಾಣಿಕ ಜನಪದ ಸಾಲಿಗೆ ಸೇರುವ ಆ ಹಾಡನ್ನು ಅವರು “ಗುಬ್ಬೀಯಾಲ ಪಾಟ” ಎಂದು ಕರೆಯುತ್ತಿದ್ದರು. ಅದರ ಸಾಲುಗಳು ಹೀಗಿವೆ:
(ನಿಖರವಾದ ಪದಗಳನ್ನು ಮರೆತಿದ್ದೇನೆ. ಗೌರಿಗೆ ಮದುವೆ ಮಾಡುವ ಸಮಯ, ತಂದೆ ಮಗಳನ್ನು ಕೇಳುತ್ತಾನೆ. “ಮಗಳೆ ಗೌರಿ ನಿನ್ನನ್ನು ಯಾರಿಗೆ ಕೊಟ್ಟು ಮದುವೆ ಮಾಡಲಿ” ಎಂದು. ಮೊದಲಿಗೆ ಬ್ರಾಹ್ಮಣರಿಂದ ಪ್ರಾರಂಭಿಸುತ್ತಾ, ಅಗಸರು, ಮಾದಿಗರು, ಕೋಮಟಿಗರು ಎಂದೆಲ್ಲ ತಂದೆ ಕೇಳಿದಾಗ ಒಬ್ಬೊಬ್ಬರನ್ನೂ ಒಂದೊಂದು ಕಾರಣ ಕೊಟ್ಟು ಗೌರಿ ವಿರೋಧಿಸುತ್ತಾಳೆ. ಕೊನೆಗೆ ಫಕೀರ, ಭಿಕ್ಷುಕನಾದ ಶಿವನನ್ನು ವರಿಸುವೆ ಎಂದು ಹೇಳುತ್ತಾಳೆ. ಇದು ಸಂದರ್ಭ)
ಗೌರಮ್ಮಾ ನಿನ್ನೆವ್ರಿಕೀತುನೂ ಗುಬ್ಬೀಯಾಲು…
ಬಾಪುನೋಳ್ಳಕೀತಾಮಾ ಬಾಲಾ ಗೌರಮ್ಮಾ…..ಗುಬ್ಬೀಯಾಲು
ಬಾಪುನೋಳ್ಳ ಮೊಡುಗ್ಯಾಲು ನೇ ಪಿಂಡಲೇನು ಗುಬ್ಬೀಯಾಲು
ಚಾಕಲೋಳ್ಳಕೀತಾಮಾ…ಗುಬ್ಬೀಯಾಲು
ಚಾಕಲೋಳ್ಳ ಬಟ್ಟಾಲು ನೇ ಉತಕಾಲೇನು ಗುಬ್ಬಿಯಾಲು….
ಈ ಹಾಡು ಹೀಗೆ ಮುಂದುವರೆಯುತ್ತದೆ. ಬ್ರಾಹ್ಮಣರಾದರೆ ಅವರ ಮಡಿ ಬಟ್ಟೆ ಹಿಂಡಲಾರೆ, ಒಪ್ಪೊತ್ತೂಟ ಮಾಡಲಾರೆ, ಅಗಸರಾದರೆ, ಅವರ ರಾಶಿ ಬಟ್ಟೆ ಒಗೆಯಲಾರೆ, ಕೋಮಟಿಗರಾದರೆ ಕಾಸುಕಾಸನ್ನು ಲೆಕ್ಕ ಹಾಕಲಾರೆ, ಈ ರೀತಿ ತಮಾಷೆಯಾಗಿ ಹಾಡು ಸಾಗುತ್ತದೆ. ಇದು ಅಂದಿನ ಸಮಾಜದ ಪರಿಸ್ಥಿತಿಯನ್ನು ತೋರುವ ಸಾಲುಗಳಾಗಿರಬಹುದು, ಅಥವಾ ಪ್ರತಿ ವರ್ಗದ ಪ್ರತಿಮೆಗಳ ಕುರಿತಾದ ವ್ಯಂಗ್ಯಾಭಿವ್ಯಕ್ತಿಯಾಗಿರಬಹುದು, ಅಥವಾ ಸುಮ್ಮನೆ ಸಾಲು ಹೆಣೆಯಲು ಇವನ್ನು ಬಳಸಿರಬಹುದು. ಆದರೆ ಈ ಹಾಡಿನಲ್ಲಿ ಆ ಜನಪದರ ಸಾಮಾಜಿಕ ಅನುಭವ ಎಷ್ಟಿತ್ತೆಂಬುದು ಅರಿವಾಗುತ್ತದೆ. ಈ ಹಲವಾರು ಕಾರಣಗಳಿಗೆ ಈ ಹಾಡು ನನ್ನನ್ನು ವಿಶೇಷವಾಗಿ ಸೆಳೆದಿತ್ತು. ಇದನ್ನು ಕೇಳಿ ಸಾಕಷ್ಟು ವರ್ಷಗಳೇ ಕಳೆದಿದ್ದವು.
ಇತ್ತೀಚೆಗೆ, ದೇ.ಜ.ಗೌರವರ ’ಜನಪದ ಗೀತಾಂಜಲಿ’ ಪುಸ್ತಕವನ್ನು ಓದುತ್ತಿದ್ದಾಗ ಆಶ್ಚರ್ಯಕರವಾಗಿ ಥೇಟ್ ಇದೇ ಸಾಲುಗಳು ಕನ್ನಡದಲ್ಲಿ ಕಂಡು ಬಂದಿತು! ಅದು ಹೀಗಿದೆ:
ಗೌರಮ್ಮ ಹುಟ್ಟಿದಳಿನ್ ಯಾರಿಗೆ ಕೊಡಲಿ…
ಬ್ರಾಂಬರಿಗೆ ಕೊಡಲೇನೆ ಮಗಳೇ ಶ್ರೀ ಗೌರಿ…
ದಿನಕೊಂದು ಮಡಿಸೀರೆ ನಾ ಉಡಲಾರೆ…
ಒಕ್ಕಲಿಗರಿಗೆ ಕೊಡಲೇನೆ ಅಕ್ಕೈಯ್ಯ
ಒಕ್ಕಲಿಗರ ಹೊಲಗದ್ದೆ ನಾ ಗೆಯ್ಯಲಾರೆ …
ಈ ಹಾಡಿನಲ್ಲೂ ಗೌರಿ ಎಲ್ಲ ವರ್ಗಗಳ ಮದುವೆ ಪ್ರಸ್ತಾಪ ಧಿಕ್ಕರಿಸಿ, ಶಿವನನ್ನು ವರಿಸುತ್ತೇನೆ ಎನ್ನುತ್ತಾಳೆ. ನನಗೆ ತಕ್ಷಣ ಆ ಹಿಂದೆ ಕೇಳಿದ ತೆಲುಗು ಹಾಡು ನೆನಪಾಗಿ ಇದು ಯಥಾವತ್ (ಬಹುಪಾಲು) ತರ್ಜುಮೆಯಾಗಿ ಕಂಡಿತು. ಯಾವ ಬರಹ ಮೂಲಗಳೂ ಇಲ್ಲದೆ (ಆ ಕಾಲದಲ್ಲಿ) ಇಂತಹ ಹಾಡುಗಳು ಬಾಯಿಂದ ಬಾಯಿಗೆ ಹರಡಿಕೊಂಡೇ ಭಾಷಾಂತರಗೊಂಡದ್ದು ಇರಬಹುದೇ ಎನಿಸಿತು!
ಇದು ಭಾಷಾನುವಾದವಾದರೆ, ಭಾವಾನುವಾದಗಳು ಕಂಡುಬಂದದ್ದು ಅನೇಕ. ಮತ್ತು ಆ ಭಾವಾನುವಾದ ಎಷ್ಟು ಸೊಗಸಾಗಿ ಮೂಡಿಬಂದಿದೆ ಎಂದರೆ, ಶಿಷ್ಟ ಭಾಷೆಯ ಹಾಡುಗಳಿಗಿಂತ ಜನಪದವೇ ಹೆಚ್ಚು ಆಪ್ತವೆನಿಸುತ್ತದೆ. ಕೆಲವು ಉದಾಹರಣೆಗಳನ್ನು ನೋಡೋಣ:
೧. ನಾರಾಯಣ ಸ್ವಾಮಿಯ ಹಾಡು:
- “ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವು ಎನ್ನ ನಾಲಗೆಗೆ ಬರಲಿ”
- “ನಾರಾಯಣ ನಿನ್ನ ನಾಮದ ಬೀಜವ ನಾನೆಲ್ಲಿ ಬಿತ್ತಿ ಬೆಳೆಯಲಿ ನಿನ ನಾಮ ನಾಲಗೆ ಮೇಲೆ ಬೆಳೆದೇನ”
೨. ಸರಸ್ವತಿಯ ಹಾಡು:
- “ಶಾರದದೇವಿಯೆ ಕೈಯನು ಮುಗಿಯುವೆ, ಕರುಣವ ತೋರುತ ಸಲಹಮ್ಮ, ಮರೆಯದ ರೀತಿಲಿ ಪಾಠಗಳೆಲ್ಲವ ಕಲಿಯಲು ಜ್ಞಾನವ ನೀಡಮ್ಮ”
- “ಹಟ್ಟೀಯ ಮನೆಯೋಳೆ ಪಟ್ಟೆದುಂಗುರದೋಳೆ ಪಟ್ಟೆಯ ಸೀರೆ ನೆರಿಯೋಳೆ – ಸರಸೋತಿ ಗುಟ್ಟುನಲಿ ಮತಿಯ ಕಲಿಸವ್ವ”
೩. ತಾಯಿಯ ಬಗ್ಗೆ:
- ಮಾತೃ ದೇವೋಭವ
- “ಕಾಸಿಗಿ ಹೋಗುದಕ ಏಸೊಂದು ದಿನಬೇಕು, ತಾಸ್ ಹೊತ್ತಿನ ಹಾದಿ ತೌರೂರು ಮನೆಯಲ್ಲಿ ಕಾಶಿ ಕುಂತವಳೆ ಹಡೆದವ್ವ”
ಇತ್ಯಾದಿ ಎಷ್ಟೊಂದು ಹಾಡುಗಳಲ್ಲಿ, ಮಾತುಗಳಲ್ಲಿ ಭಾವ ಒಂದೇ ಭಾಷೆ ಬೇರೆಯಾಗಿ ಕಾಣುತ್ತದೆ. ಮೊದಲೆರಡು ಉದಾಹರಣೆಗಳಂತೂ ಬಹುಪಾಲು ಒಂದೇ ವ್ಯಾಖ್ಯಾನವನ್ನು ನೀಡುತ್ತದೆ. ಇಲ್ಲಿ ಎರಡರ ಭಾವ ಒಂದಾದ್ದರಿಂದ ಎರಡೂ ಬೇರೆ ಬೇರೆ ಮೂಲಗಳಲ್ಲೇ ಸೃಷ್ಟಿಯಾದವೋ ಅಥವಾ ಯಾವೊಂದರಿಂದ ಮತ್ತೊಂದು ಪ್ರಭಾವಗೊಂಡಿದೆಯೇ ಹೇಳುವುದು ಕಷ್ಟ.
ಆದರೆ ಅದಕ್ಕಿಂತ ಮುಖ್ಯವಾಗಿ ನಾವಿಲ್ಲಿ ಗಮನಿಸಬಹುದಾದ್ದು, ಹಾಡು ಜನಪದದಲ್ಲಿ ಕೇಳಿದಾಗ ಅದು ನಮ್ಮಾಳಕ್ಕೆ ಇಳಿಯುವ, ನಮ್ಮೆದೆ ತಟ್ಟುವ ಭಾವಸ್ಪುರಣೆಯನ್ನು. ಶಿಷ್ಟ ಅಥವಾ ವೈದಿಕ ಸಾಹಿತ್ಯದ ನಾರಾಯಣನ ನಾಮಸ್ಮರಣೆಯ ಸಾರಾಮೃತವು ಹೇಗೆ ನಾಲಗೆ ಮೇಲೆ ಬರುತ್ತದೆಯೊ ಹಾಗೆ ಜನಪದದ ನಾರಾಯಣನ ನಾಮದ ಬೀಜ ನಾಲಗೆಯ ಮೇಲೆ ಬಿತ್ತನೆಗೊಳ್ಳುತ್ತದೆ. ವ್ಯತ್ಯಾಸ ಗಮನಿಸಿ! ಜನಪದದಲ್ಲಿ ಯಾವುದೇ ಹೈ-ಫೈ ಹೋಲಿಕೆಗಳಿಲ್ಲದೆ ತಮ್ಮ ದಿನನಿತ್ಯದ ಬದುಕನ್ನೇ ಬಿಂಬಿಸುವ ಭಕ್ತಿಭಾವ.
ಎರಡನೆಯ ಸರಸ್ವತಿಯ ಹಾಡು, ಶಿಷ್ಟ ಭಾಷೆಯಲ್ಲಿ ಸಾಧಾರಣವಾಗಿ ಕಾಣುತ್ತದೆ. ಅದೇ ಜನಪದವಾದಾಗ, ಆ ಸಾಲುಗಳಲ್ಲಿ ಸಾಕಷ್ಟು ಹೊಳಹುಗಳು ಕಂಡು ಬರುತ್ತವೆ. “ಹಟ್ಟೀಯ ಮನೆಯೋಳೆ” ಎಂಬ ಪದ ಪ್ರಯೋಗವೇ ಸರಸ್ವತಿಯಿಂದ ತಾವು ದೂರಾದ ವಿಷಯವನ್ನು ತಿಳಿಸುತ್ತದೆ. ಉಂಗುರ, ಪಟ್ಟೆ ಸೀರೆ ಇವೆಲ್ಲ ಶ್ರೀಮಂತಿಕೆಯನ್ನು ತೋರುತ್ತಾ, ಸರಸ್ವತಿ ಶ್ರೀಮಂತರ ಪಾಲು ಎಂಬ ಕಹಿಯನ್ನೂ ಬೀರುತ್ತದೆ. ಮೂರನೆಯ ಮತ್ತು ಬಹಳ ಇಂಟೆರೆಸ್ಟಿಂಗ್ ಸಾಲು ಎಂದರೆ, “ಗುಟ್ಟಿನಲಿ ಮತಿಯ ಕಲಿಸವ್ವ”. ಇಲ್ಲಿ ಜನಪದರು, “ಗುಟ್ಟಿನಲಿ” ಎಂಬ ಪದ ಬಳಕೆ ನನ್ನನ್ನು ಬಹಳ ಕಾಡಿತು. ಬಹುಶಃ ಇದರ ಅರ್ಥ, ಸರಸ್ವತಿ, ಆ ಕಾಲದಲ್ಲಿ, ಆ ಜನರಿಗೆ ಸಿಗುವ ಸಂಭವವೇ ಇರಲಿಲ್ಲ. ಸರಸ್ವತಿ ಒಲಿಯುವ ಪ್ರಮೇಯವೇ ಎದುರಾದಲ್ಲಿ ಅವರು ಕಷ್ಟವೆದುರಿಸಬೇಕಾಗಿತ್ತು (ನನಗೆ ಈ ಸಂದರ್ಭದಲ್ಲಿ ನೆನಪಾಗುವುದು, ವೇದಗಳನ್ನು ಕೇಳಿಸಿಕೊಂಡ ಮಾದಿಗರ ಕಿವಿಯಲ್ಲಿ ಕಾದ ಕಬ್ಬಿಣದ ರಸ ಹುಯ್ಯುತ್ತಿದ್ದರು ಎಂಬ ಕೇಳ್ನುಡಿ), ಆದರೂ ಸರಸ್ವತಿಯನ್ನು ಒಲಿಸಿಕೊಳ್ಳುವ ಆಸೆ, ಅದಕ್ಕಾಗಿ “ಸರಸೋತಿ, ಗುಟ್ಟಿನಲಿ ಮತಿಯ ಕಲಿಸವ್ವ” ಎಂದಿರಬಹುದು.
ಮೂರನೆ ಸಾಲುಗಳು ತಾಯಿಯ ಬಗ್ಗೆ. ಯಾವ ಶಿಷ್ಟ ಸಾಹಿತ್ಯಕ್ಕೂ ಮೀರಿ ಜನಪದದಲ್ಲಿ ಭಾವನೆಗಳ ಸ್ಪುರಣೆಯಾಗುತ್ತದೆ. ಅದಕ್ಕೆ ನಾವು ಬಹುಬೇಗ ಕನೆಕ್ಟ್ ಆಗಬಲ್ಲೆವು ಎಂಬುದಕ್ಕೆ ಇದೊಂದು ಉದಾಹರಣೆ. ಮಾತೃ ದೇವೋಭವ ಎಂದು ಹುಟ್ಟಿದಾಗಿನಿಂದಲೂ ಓದುತ್ತಿದ್ದ ನನಗೆ, ಕಾಸೀಗಿ ಹೋಗುದಕ ಏಸೊಂದು ದಿನ ಬೇಕು…..ಕಾಸಿ ಕುಂತವ್ಳೆ ಹಡೆದವ್ವ ಸಾಲುಗಳು ಕೇಳಿದಾಗ ಮನಮುಟ್ಟಿದಂತೆ ಎಂದಿಗೂ ಮುಟ್ಟಿಲ್ಲ. ಜನಪದದ ವಿಶೇಷತೆಯೇ ಇದು. ಅವರು ಬಳಸುವುದು ಜನರ ಭಾಷೆ, ಜನರ ಬದುಕನ್ನು ಹೊರತು ಯಾವ ದೂರಾದೂರದ ಕಲ್ಪನೆಗಳ ಜೋಡಣಿಕೆಯಲ್ಲ. ಮನೆಮಾತನ್ನೇ ಬಳಸಿ ತಮ್ಮ ಮುಗ್ಧತೆಯ ಭಾವದಲ್ಲೇ ಜನಪದವು ಆಧ್ಯಾತ್ಮ ಪರಿಕಲ್ಪನೆಗಳನ್ನೂ ಸರಳವಾಗಿ ಪದವಾಗಿಸಿ ಜನರ ಮನಸಿಗೆ ನಾಟುವಂತೆ ಮಾಡುತ್ತದೆ. ಅನಕ್ಷರಸ್ಥರ ಬಾಯಿಪದವಾಗಿ ಹರಡಿ ಹೊಳೆಯಾದ ಜಾನಪದ ಯಾವ ಶಿಷ್ಟ ಸಾಹಿತ್ಯಕ್ಕೂ ಕಡಿಮೆಯಿಲ್ಲ.